Updated News From Kaup

ಹೆಜಮಾಡಿ ಮೀನುಗಾರಿಕಾ ಬಂದರು ಕಾಮಗಾರಿ ಪೂರ್ಣಗೊಳಿಸಲು ಕಾಪು ಶಾಸಕರಿಂದ ಮನವಿ

Thumbnail
Posted On: 05 Nov 2024, 07:38 PM

ಕಾಪು : ತಾಲೂಕಿನ ಹೆಜಮಾಡಿ ಬಂದರಿಗೆ 2021-22 ಸಾಲಿನಲ್ಲಿ 180 ಕೋಟಿ ಮಂಜುರಾಗಿದ್ದು ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಮತ್ತು ಸುತ್ತಮುತ್ತಲಿನ ಮೀನುಗಾರರಿಗೆ ತೊಂದರೆ ಆಗುತ್ತಿದ್ದು ಮೀನುಗಾರಿಕಾ ದೋಣಿ ತಂಗುದಾಣಕ್ಕೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿ ಹೆಜಮಾಡಿ ಬಂದರಿನ ಕಾಮಗಾರಿಯನ್ನು ಕೂಡಲೆ ಕೈಗೊಳ್ಳಬೇಕೆಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮೀನುಗಾರಿಕಾ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭ ಮನವಿ‌ ಸ್ವೀಕರಿಸಿದ ಮೀನುಗಾರಿಕಾ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರು ಕೂಡಲೇ ಕಾಮಗಾರಿಗೆಯನ್ನು ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ನವೆಂಬರ್ 24 : ಉದ್ಯಾವರದಲ್ಲಿ ಎಚ್ ಪಿ ಆರ್ ಫಿಲಂಸ್ ಆದರ್ಶ ದಂಪತಿ ಸ್ಪರ್ಧೆ

Thumbnail
Posted On: 05 Nov 2024, 07:22 PM

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಲಯನ್ಸ್ ಜಿಲ್ಲೆ 317Cಯ ಲಯನ್ ದಂಪತಿಗಳಿಗೆ ವಿನೂತನ ರೀತಿಯ ಆದರ್ಶ ದಂಪತಿ ಸ್ಪರ್ಧೆ ಉದ್ಯಾವರ ಚರ್ಚ್ ವಠಾರದಲ್ಲಿ ನವಂಬರ್ 24 ಆದಿತ್ಯವಾರದಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಎಚ್'ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯ ಪೋಸ್ಟರ್ ಅನ್ನು ಎಚ್'ಪಿಆರ್ ಫಿಲಂಸ್ ಮುಖ್ಯಸ್ಥ ಮತ್ತು ಎಲ್'ಸಿಯಫ್ ಕೋಆರ್ಡಿನೇಟರ್ ಲಯನ್ ಹರಿಪ್ರಸಾದ್ ರೈ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉದ್ಯಮಿ ಡಾ. ಶೇಕ್ ವಹಿದ್ ಉಡುಪಿ, ಕಾಪು ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಮತ್ತು ಪತ್ರಕರ್ತ ರಾಕೇಶ್ ಕುಂಜೂರು, ಪ್ರಾಂತೀಯ ಅಧ್ಯಕ್ಷ ಲಯನ್ ಮೆಲ್ವಿನ್ ಆರನ್ನ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ ಜಿಲ್ಲೆ 317Cಯಲ್ಲಿ 115 ಕ್ಲಬ್ ಗಳಿದ್ದು, ಆದರ್ಶ ದಂಪತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇದೆ. ವಾರ್ಷಿಕ ವಿವಿಧ ಸೇವಾ ಮತ್ತು ಸಾಮಾಜಿಕ ಚಟುವಟಿಕೆಗಳ ಸಹಾಯಾರ್ಥವಾಗಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಈ ಸ್ಪರ್ಧೆಯನ್ನು ವಿನೂತನ ರೀತಿಯಲ್ಲಿ ಹಮ್ಮಿಕೊಂಡಿದ್ದು, ಮೊದಲು ನೋಂದಾಯಿಸಿದ 25 ಲಯನ್ಸ್ ದಂಪತಿಗಳಿಗೆ ಮಾತ್ರ ಅವಕಾಶ ಇದೆ. ಮೂರು ಸುತ್ತುಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯು ಕ್ಷಣ ಕ್ಷಣಕ್ಕೂ ಕುತೂಹಲದೊಂದಿಗೆ ಸಂಗೀತ ಸುದೆ, ಹಾಸ್ಯ ಲಹರಿ, ಸಾಂಸ್ಕೃತಿಕ ವೈಭವದೊoದಿಗೆ ನಡೆಯಲಿದೆ. ಶಿಕ್ಷಕರು ಮತ್ತು ರಾಷ್ಟ್ರೀಯ ಜೆಸಿ ತರಬೇತುದಾರರಾಗಿರುವ ಜೆ ಸಿ ರಾಜೇಂದ್ರ ಭಟ್ ಕಾರ್ಯಕ್ರಮದ ನಿರೂಪಣೆ ನಡೆಸಲಿದ್ದು, ವಿಶೇಷ ಆಕರ್ಷಣೆಯಾಗಿ ತುಳುರಂಗಭೂಮಿಯ ಪ್ರಬುದ್ಧ ಹಾಸ್ಯ ಮತ್ತು ಚಲನಚಿತ್ರ ನಟರಾದ ಅರವಿಂದ ಬೋಳಾರ್, ದಾಯ್ಜಿ ವರ್ಲ್ಡ್ ಸ್ಥಾಪಕ ವಾಲ್ಟರ್ ನಂದಳಿಕೆ, ಗಿನ್ನೆಸ್ ದಾಖಲೆ ಖ್ಯಾತಿಯ ಯೋಗರತ್ನ ತನುಶ್ರೀ ಪಿತ್ರೋಡಿ ಮತ್ತು ಮಿಡಲ್ ಕ್ಲಾಸ್ ಫ್ಯಾಮಿಲಿ ಚಲನಚಿತ್ರ ತಂಡ ಆಗಮಿಸಲಿದ್ದಾರೆ. ಪ್ರತಿಷ್ಠಿತ ಎಚ್'ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯು ಉಚಿತ ಪ್ರವೇಶವಾಗಿದ್ದು, ಪ್ರಥಮ ಬಹುಮಾನ ರೂ. 15,000 ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ತೃತೀಯ ಬಹುಮಾನ 7.5 ಸಾವಿರ ರೂ. ವೆಚ್ಚದ ಗಿಫ್ಟ್ ವೋಚರ್ ಮತ್ತು ಟ್ರೋಫಿ, ಫೈನಲ್ ಸ್ಪರ್ಧಿಗಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರತಿಷ್ಠಿತ ಕಂಪನಿಗಳ ಗಿಫ್ಟ್ ವೋಚರ್ ಲಭಿಸಲಿದೆ. ಒಂದು ಕ್ಲಬ್ ನಿಂದ ಒಂದು ದಂಪತಿಗೆ ಮಾತ್ರ ಅವಕಾಶವಿದ್ದು, ನವೆಂಬರ್ 10 ಹೆಸರು ನೋಂದಾಯಿಸಲು ಕೊನೆಯ ದಿನಾಂಕ. ಕಾರ್ಯಕ್ರಮದ ಸಂಚಾಲಕ ಲಯನ್ ಸ್ಟೀವನ್ ಕುಲಾಸೊ ಇವರ ಮೊಬೈಲ್ ಸಂಖ್ಯೆ 9901701381 ಗೆ ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಬಹುದಾಗಿದೆ.

ಕಾಪು ಪ್ರೆಸ್ ಕ್ಲಬ್‌ನಲ್ಲಿ ದೀಪಾವಳಿ ಸಂಭ್ರಮ

Thumbnail
Posted On: 05 Nov 2024, 07:09 PM

ಕಾಪು : ದೀಪದ ಬೆಳಕು ಎಲ್ಲೆಡೆ ಪಸರಿಸುವಂತೆ ಪತ್ರಕರ್ತರು ಸುದ್ದಿಯ ಮೂಲಕ ಜ್ಞಾನದ ಅರಿವನ್ನು ಸಮಾಜಕ್ಕೆ ಪಸರಿಸುತ್ತಾರೆ. ಸುದ್ದಿ ಸಮಾಚಾರಗಳು ಜನರನ್ನು ಜಾಗೃತರನ್ನಾಗಿಸಿದೆ ಎಂದು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ ಮಡುಂಬು ಹೇಳಿದರು. ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ಕಾಪು ತಾಲೂಕಿನ ಪತ್ರಕರ್ತರು ಒಗ್ಗಟ್ಟಾಗಿ ನಡೆಸುವ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗುವಂತದ್ದಾಗಿದೆ ಎಂದರು. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಮತ್ತು ಬಿಕ್ಕೋ ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀಧರ ಶೇಣವ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಉದ್ಯಮಿಗಳಾದ ದೀಪಕ್ ಕುಮಾರ್ ಎರ್ಮಾಳು, ನವೀನ್ ಎನ್. ಶೆಟ್ಟಿ, ಡಾ. ಮನೋಜ್ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಕೋಶಾಧಿಕಾರಿ ಹೇಮನಾಥ ಪಡುಬಿದ್ರಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಸಂತೋಷ್ ನಾಯ್ಕ್ ವಂದಿಸಿದರು. ಮಾಜಿ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

ನ. 8 : ಕಾಪು ದಂಡತೀರ್ಥ ಪಿಯು ಕಾಲೇಜಿನ ರಜತ ಮಹೋತ್ಸವ

Thumbnail
Posted On: 05 Nov 2024, 06:49 PM

ಕಾಪು : ಕಾಪು ಉಳಿಯಾರಗೋಳಿ ದಂಡತೀರ್ಥ ವಿದ್ಯಾ ಸಂಸ್ಥೆ ಸಂಚಾಲಿತ ದಂಡತೀರ್ಥ ಪಿಯು ಕಾಲೇಜಿನ  ರಜತ ಮಹೋತ್ಸವ ನವಂಬರ್ 8 ರಂದು ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕರಾದ ಡಾ. ಕೆ ಪ್ರಶಾಂತ್ ಶೆಟ್ಟಿ ಹೇಳಿದರು. ಅವರು ಮಂಗಳವಾರ ಉಳಿಯಾರಗೋಳಿ ದಂಡ ತೀರ್ಥ ವಿದ್ಯಾ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದರು. 1999ರಲ್ಲಿ ದಂಡತೀರ್ಥ ಪಿಯು ಕಾಲೇಜು ಪ್ರಾರಂಭಗೊಂಡಿದ್ದು, ನ.8 ರಂದು ರಜತ ಮಹೋತ್ಸವ ಆಚರಿಸುತ್ತಿದೆ. ಬೆಳ್ಳಿ ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಹಿಸಲಿದ್ದು, ಎಮ್ ಆರ್ ಜಿ ಗ್ರೂಪ್ ನ ಅಧ್ಯಕ್ಷರಾಗಿರುವ ಡಾ. ಕೆ ಪ್ರಕಾಶ್ ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡಲಿದ್ದು, ಡಾ. ಎಮ್ ಶಾಂತಾರಾಮ್ ಶೆಟ್ಟಿ- ಪ್ರೊ ಚಾನ್ಸಲರ್ ನಿಟ್ಟೆ ಯುನಿವರ್ಸಿಟಿ, ಮಣಿಪಾಲ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಡಾ. ಎಚ್‌ ಎಸ್ ಬಲ್ಲಾಳ್ ಪುತ್ಥಳಿ ಅನಾವರಣ ಮಾಡಲಿದ್ದು, ಎಂಡಿ ಮಲ್ಟಿಟೆಕ್ ಗ್ರೂಪ್ ಮಸ್ಕತ್ ನ ಸಂಸ್ಥಾಪಕ ದಿವಾಕರ ಶೆಟ್ಟಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಹಮ್ಮದ್ ಅಸ್ಲಾಂ ಖಾಝಿ, ಚಂದ್ರಶೇಖರ ಶೆಟ್ಟಿ,ಅಶೋಕ್‌ ಹೆಗ್ಡೆ, ಮಾರುತಿ, ಕಾಪು ದಿವಾಕರ ಶೆಟ್ಟಿ, ಕೆ ವಾಸುದೇವ ಶೆಟ್ಟಿ, ಮನೋಹರ ಎಸ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ದಿವಂಗತ ಡಾ .ಪ್ರಭಾಕರ್ ಶೆಟ್ಟಿ ಅವರ ಪುತ್ಥಲಿ ಅನಾವರಣ, ಸಭಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿ ವಿದ್ಯಾರ್ಥಿವೇತನ ಸಂಗ್ರಹದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ಸಂಸ್ಥೆಯ ಗೌರವ ಸಲಹೆಗಾರ ಅಲ್ಬನ್‌ ರಾಡ್ರಿಗಸ್‌, ಪ್ರಾಂಶುಪಾಲ ನೀಲಾನಂದ ನಾಯ್ಕ್‌, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗ್ಯಾಬ್ರಿಯಲ್ ಮಸ್ಕರೇನಸ್‌,  ಶಿವಣ್ಣ ಬಾಯರಿ ಉಪಸ್ಥಿತರಿದ್ದರು.

ಅಖಿಲ ಭಾರತ ದೈವರಾಧಾಕರ ಒಕ್ಕೂಟ ಉಡುಪಿ : ಸಭೆ ; ಆಮಂತ್ರಣ ಪತ್ರಿಕೆ ಬಿಡುಗಡೆ

Thumbnail
Posted On: 05 Nov 2024, 11:56 AM

ಉಡುಪಿ : ಅಖಿಲ ಭಾರತ ದೈವರಾಧಾಕರ ಒಕ್ಕೂಟ ಉಡುಪಿ (ರಿ.) ಇದರ ಸಭೆ ನ.4ರಂದು ಉಡುಪಿ ತೆಂಕುಪೇಟೆ ಉಡುಪಿ ವುಡ್ ಲಾಂಡ್ಸ್ ಹೋಟೆಲ್ ಹತ್ತಿರ ಇರುವ ಶ್ರೀ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಜರಗಿತು. ಈ ಸಂದರ್ಭ ಡಿಸೆಂಬರ್ 1 ರಂದು ನಡೆಯಲಿರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಒಕ್ಕೂಟ ಸದಸ್ಯರ ಸಮ್ಮುಖದಲ್ಲಿ ದೈವಗಳಿಗೆ ಪ್ರಾರ್ಥನೆ ಮಾಡಿ ಬಿಡುಗಡೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ದಿನೇಶ್ ಪೂಜಾರಿ, ಒಕ್ಕೂಟದ ಕೋಶಾಧಿಕಾರಿಯಾದ ಭಾಸ್ಕರ್, ಉಪಾಧ್ಯಕ್ಷರಾದ ಸುಧಾಕರ್ ಪಾಣರ, ಜಯ ಮಡಿವಾಳ, ನವೀನ್ ಪಾತ್ರಿ ಕುಂಜಿಬೆಟ್ಟು, ಉದಯ ಮೆಂಡನ್, ವಾಸು ಶೇರಿಗಾರ, ಉಡುಪಿ ಜಿಲ್ಲಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ಗೋಪಾಲ್ ಮಡಿವಾಳ, ಕೃಷ್ಣ ಮಡಿವಾಳ, ವಿಜಯ ಮಡಿವಾಳ ಹಾಗೂ ತಾಲೂಕು ಅಧ್ಯಕ್ಷರಾದ ರಂಜಿತ್ ಶೇರಿಗಾರ, ಕಾರ್ಯದರ್ಶಿಯಾದ ಶಾಮ್ ರವಿ, ಸುಂದರ, ಸಂದೇಶ್ ಪೂಜಾರಿ, ಆಕಾಶ್, ಒಕ್ಕೂಟದ ಸಂಘಟನೆ ಕಾರ್ಯದರ್ಶಿಯಾದ ರಮೇಶ್ ಪೂಜಾರಿ ಹಾಗೂ ದಿನೇಶ್ ಪಾಣರ ಹಾಗೂ ಸದಸ್ಯರು ಉಪಸ್ಥಿತಿಯಿದ್ದರು.

ಪಡುಬಿದ್ರಿ ದೇವಳದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಲೇಖನ ಯಜ್ಞದ ಕುರಿತು ಸಭೆ

Thumbnail
Posted On: 04 Nov 2024, 06:59 PM

ಪಡುಬಿದ್ರಿ : ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪಡುಬಿದ್ರಿ ವ್ಯಾಪ್ತಿಯ ಎಲ್ಲಾ ಸಮುದಾಯದ ವತಿಯಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಆದಿತ್ಯವಾರ ಜರಗಿದ ಪೂರ್ವಭಾವಿ ಸಭೆಯನ್ನು 9 ಸಮುದಾಯದ 9 ಜನ ಮಹಿಳೆಯರಿಂದ 9 ನವದುರ್ಗ ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಮಾಜಿ ಶಾಸಕ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷರಾದ ಕೆ. ರಘುಪತಿ ಭಟ್ ಅವರು ನವದುರ್ಗಾ ಲೇಖನ ಯಜ್ಞದ ಕುರಿತು ಸಂಪೂರ್ಣ ವಿವರಣೆ ನೀಡಿ ಈ ಯಜ್ಞದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ ದೇವಳದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ‌ನೀಡಿದರು. ಈ ಸಂದರ್ಭ ವೈ. ಶಶಿಧರ್ ಶೆಟ್ಟಿ, ವಿಶು ಕುಮಾರ್ ಶೆಟ್ಟಿಬಾಲ್, ವೈ ಸುಧೀರ್ ಕುಮಾರ್, ವಿಷ್ಣುಮೂರ್ತಿ, ಶಶಿಕಾಂತ್ ಪಡುಬಿದ್ರಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಸಂಪತ್ ಕುಮಾರ್, ಸುಕುಮಾರ್ ಶ್ರೀಯಾನ್ ಸುಧಾಕರ್ ಮಡಿವಾಳ, ಭರತ್ ದೇವಾಡಿಗ, ಮುಂಡಾಳ ಗೊಡ್ಡ ಸಮಾಜದ ಪ್ರಮುಖರು, ಅರುಣ್ ಶೆಟ್ಟಿ ಪಾದೂರು, ಶೇಖರ ಶೆಟ್ಟಿ ಕಲ್ಯ, ಪ್ರಭಾಸ್ ಶೆಟ್ಟಿ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ವಿಶ್ವನಾಥ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಅನಿತಾ ವಿಶು ಕುಮಾರ್ ಪ್ರಾರ್ಥಿಸಿದರು. ಹೊಸಮಾರಿಗುಡಿ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ ಬ್ರಹ್ಮಕಲಶೋತ್ಸವದ ಬಗ್ಗೆ ವಿವರಿಸಿದರು. ಯೋಗಿಶ್ ಶೆಟ್ಟಿ ಬಾಲಾಜಿ ಪ್ರಸ್ತಾವಿಸಿದರು. ಮುರಳಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.

ತುಳುಕೂಟ ಪುಣೆ ರಾಷ್ಟೀಯ ತುಳು ಪ್ರಶಸ್ತಿಗೆ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಆಯ್ಕೆ

Thumbnail
Posted On: 03 Nov 2024, 03:13 PM

ಕಾಪು : ಮಹಾರಾಷ್ಟ್ರ ತುಳುಕೂಟ ಪುಣೆ (ರಿ.) 2024 ತುಳುನಾಡ ಜಾತ್ರೆ ಬೊಳ್ಳಿ ಪರ್ಬ ಕಾರ್ಯಕ್ರಮ ನ.10, ರವಿವಾರ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನ ಸಭಾಂಗಣದಲ್ಲಿ ಹಲವಾರು ಗಣ್ಯತಿಗಣ್ಯರ ಸಮ್ಮುಖದಲ್ಲಿ ಸಮಾಜ ಸೇವೆಗಾಗಿ ಕೊಡಲ್ಪಡುವ 2024 ರ ರಾಷ್ಟ್ರೀಯ ತುಳು ಪ್ರಶಸ್ತಿಗೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹತ್ತಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿ ನೂರಾರು ಪ್ರಶಸ್ತಿ ಪಡೆದ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಆಯ್ಕೆಯಾಗಿದ್ದಾರೆಂದು ತುಳುಕೂಟ ಇದರ ಅಧ್ಯಕ್ಷರು ದಿನೇಶ್ ಶೆಟ್ಟಿ ಕಳತ್ತೂರು ಉಪಾಧ್ಯಕ್ಷರಾದ ಉದಯ ಶೆಟ್ಟಿ ಕಳತ್ತೂರು ಪ್ರ.ಕಾರ್ಯದರ್ಶಿ ರೋಹಿತ್ ಡಿ ಶೆಟ್ಟಿ ನಗ್ರಿಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಕರ್ನಾಟಕ ರಾಜ್ಯೋತ್ಸವ -2024 ಬಾಲಪ್ರಶಸ್ತಿಗೆ ಅರ್ಜಿ ಆಹ್ವಾನ

Thumbnail
Posted On: 03 Nov 2024, 02:26 PM

ಕಟಪಾಡಿ : ಇನ್ವೆಂಜರ್ ಫೌಂಡೇಷನ್ ಮಂಗಳೂರು, ಸೃಷ್ಠಿ ಫೌಂಡೇಶನ್ ಕಟಪಾಡಿ, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ, ಮಾನ್ಯ ಎಜ್ಯುಕೇಷನಲ್ ಆಂಡ್ ಕಲ್ಚರಲ್ ಫೌಂಡೇಶನ್ ಮಸ್ಕತ್ ವತಿಯಿಂದ ನೀಡಲಾಗುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ-2024 ಬಾಲಪ್ರಶಸ್ತಿಗೆ ಅರ್ಹ ಪ್ರತಿಭಾವಂತ ಮಕ್ಕಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 5ರಿಂದ 15 ವರ್ಷದೊಳಗಿನ ಮಕ್ಕಳು ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಬಹುಮುಖ ಪ್ರತಿಭೆಗಳನ್ನು ಬಾಲಪ್ರಶಸ್ತಿಗೆ ಪರಿಗಣಿಸಲಾಗುವುದು. ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರು ಅರ್ಜಿ ಸಲ್ಲಿಸಬಹುದು. ಆಸಕ್ತರು ತಮ್ಮ ಸಾಧನೆಗಳ ಕುರಿತ ಸವಿವರ ಮಾಹಿತಿಯನ್ನು ಸೂಕ್ತ ಸ್ವಯಂ ದೃಢೀಕರಣ ಮಾಡಿ ಅರ್ಜಿಯನ್ನು ನ.15 ರೊಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು. ಕಾಮತ್ ಸರ್ವಿಸಸ್, ಎಸ್.ವಿ.ಎಸ್ ಹಿರಿಯ ಪ್ರಾಥಮಿಕ ಶಾಲೆ ಎದುರು, ಹಳೇ ರಸ್ತೆ ಕಟಪಾಡಿ ಅಂಚೆ ಉಡುಪಿ ಜಿಲ್ಲೆ-574105. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕೆ.ನಾಗೇಶ್ ಕಾಮತ್ - 9886432197, ಪ್ರಕಾಶ ಸುವರ್ಣ ಕಟಪಾಡಿ - 9964019229 ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ನೀಡಿ ಸೂಕ್ತ ವೇದಿಕೆ ಕಲ್ಪಿಸುವ ವಿನೂತನ ಕಾರ್ಯಕ್ರಮವನ್ನು ನವೆಂಬರ್ ತಿಂಗಳಾಂತ್ಯಕ್ಕೆ ಆಯೋಜಿಸಲಾಗಿದೆ. ಇದೇ ವೇಳೆ ಗಾನಗಂಧರ್ವ ಎಸ್‌ಪಿಬಿ ಸಂಗೀತೋತ್ಸವ ಹಾಗೂ ಪ್ರಶಸ್ತಿ ವಿಜೇತ ಮಕ್ಕಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಳತ್ತೂರು ದಿವಾಕರ ಡಿ. ಶೆಟ್ಟಿಯವರ ಮನೆಯಲ್ಲಿ ಸೌಹಾರ್ದ ದೀಪಾವಳಿ ಆಚರಣೆ

Thumbnail
Posted On: 02 Nov 2024, 10:35 PM

ಕಾಪು : ಸಮಾಜ ಸೇವಕ ಕೃಷಿಕ ಕಳತ್ತೂರು ದಿವಾಕರ ಡಿ. ಶೆಟ್ಟಿಯವರ ಮನೆಯಲ್ಲಿ ಕ್ರಿಶ್ಚಿಯನ್ ಬಾಂಧವರೊಂದಿಗೆ ಹಾಗೂ ಊರಿನವರೊಂದಿಗೆ ದೀಪಾವಳಿ ಹಬ್ಬ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಲಿಯೋ ಮೆಂಡೋನ್ಸರವರು ಮಾತನಾಡಿ, ನಾವು ಪ್ರತಿ ವರ್ಷವು ದೀಪಾವಳಿ ಹಬ್ಬವನ್ನು ಸೌಹಾರ್ದಯುತವಾಗಿ ನಮ್ಮ ಗ್ರಾಮದ ಬೇರೆ ಬೇರೆ ಮನೆಗಳಲ್ಲಿ ಆಚರಿಸುತ್ತ ಬಂದಿದ್ದೇವೆ. ಈ ವರ್ಷ ದಿವಂಗತ ದೇಜು ಶೆಟ್ಟಿ ಮತ್ತು ಜಲಜ ಶೆಟ್ಟಿಯವರ ಮಗನಾದ ದಿವಾಕರ ಡಿ. ಶೆಟ್ಟಿ ಯವರ ಮನೆಯಲ್ಲಿ ದೀಪಾವಳಿ ಆಚರಣೆ ಮಾಡಿದ್ದು ನಮ್ಮ ಸೌಭಾಗ್ಯವಾಗಿದೆ. ದಿವಾಕರ ಡಿ. ಶೆಟ್ಟಿಯವರ ಕುಟುಂಬ ಊರಿನವರೊಂದಿಗೆ ಎಲ್ಲಾ ಜಾತಿ, ಧರ್ಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ ಎಂದು ತಿಳಿಸಿ ದೀಪಾವಳಿ ಹಬ್ಬಕ್ಕೆ ಶುಭ ಕೋರಿದರು. ಕಳತ್ತೂರು ಚರ್ಚ್ ನ ಅಧ್ಯಕ್ಷೆಯಾದ ಗ್ಲಾಡಿಸ್ ಅಲ್ಮೆಡರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಂಟಕಲ್ಲು ಸಾಮೂಹಿಕ ವಾಹನ ಪೂಜೆ

Thumbnail
Posted On: 02 Nov 2024, 06:56 PM

ಬಂಟಕಲ್ಲು : ವಾಹನಗಳನ್ನು ಚಲಾಯಿಸುವಾಗ ಸಾರಿಗೆ ನಿಯಮವನ್ನು ಪಾಲಿಸುವುದರೊಂದಿಗೆ ಶ್ರಧ್ಧಾ ಭಕ್ತಿಯಿಂದ ವಾಹನ ಚಲಾಯಿಸಿದರೆ ಅಫಘಾತರಹಿತವಾಗಿ ಸುರಕ್ಷಿತ ಚಾಲನೆ ಸಾಧ್ಯವಾಗುವುದು ಎಂದು ಶಿರ್ವ ಪೊಲೀಸ್ ಠಾಣಾಧಿಕಾರಿ ಶಕ್ತೀವೇಲುರವರು ತಿಳಿಸಿದರು. ಅವರು ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ 9 ನೇ ವರ್ಷದ ಸಾಮೂಹಿಕ ವಾಹನ ಪೂಜೆಗೆ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ ಮಾತನಾಡಿದರು. ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುವ ವಾಹನ ಪೂಜೆಯು ವಾಹನಗಳ ಮೇಲಿನ ಶ್ರದ್ಧೆ, ಭಕ್ತಿಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತ ಮೋಕ್ತೇಸರರಾದ ಜಯರಾಮ ಪ್ರಭು, ಬೆಳ್ಳೆ ಗ್ರಾ. ಪಂ. ಉಪಾಧ್ಯಕ್ಷರಾದ ಶಶಿಧರ ವಾಗ್ಲೆಯವರು ಶುಭಹಾರೈಸಿದರು. ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಉಮೇಶ್ ಪ್ರಭು, ಹಿರಿಯ ಶಿಕ್ಷಕ ಪುಂಡಲೀಕ ಮರಾಠೆ, ನಿವೃತ್ತ ಶಿಕ್ಷಕ ದಯಾನಂದ ಕಾಮತ್, ಬಂಟಕಲ್ಲು ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ಉಮೇಶ್ ರಾವ್, ಆಡಳಿತ ಮಂಡಳಿಯ ದೇವದಾಸ ಪಾಟ್ಕರ್, ರಾಮದಾಸ ಪ್ರಭು, ನಿವೃತ್ತ ಯೋಧ ರಾಜೇಂದ್ರ ಪಾಟ್ಕರ್, ಅಂಗನವಾಡಿ ಶಿಕ್ಷಕಿ ವಿನಯಾ ಕುಂದರ್, ಉದ್ಯಮಿ ರಾಘವೇಂದ್, ನಾಯಕ್, ಅನಂತರಾಮ ವಾಗ್ಲೆ, ಆಶಿಷ್ ಪಾಟ್ಕರ್, ವಿರೇಂದ್ರ ಪಾಟ್ಕರ್ ಉಪಸ್ಥಿತರಿದ್ದರು. ಅರ್ಚಕ ಶ್ರೀಕಾಂತ ಭಟ್ ಗೋವು ಪೂಜೆಯ ಬಳಿಕ ಧಾರ್ಮಿಕ ಪೂಜಾವಿಧಾನಗಳನ್ನು ನಡೆಸಿಕೊಟ್ಟರು. ರಾ.ಸಾ ಸೇವಾ ವೃಂದದ ಅಧ್ಯಕ್ಷ ಕೆ ಆರ್ ಪಾಟ್ಕರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್ ವಂದಿಸಿದರು. ನೂರಕ್ಕೂ ಮಿಕ್ಕಿದ ವಿವಿಧ ವಾಹನಗಳು ಪೂಜಿಸಲ್ಪಟ್ಟವು.