Updated News From Kaup
ಕಾಪು : ಅಸಂಖ್ಯ ಭಕ್ತರ ಸಮ್ಮುಖ ನೆರವೇರಿದ ದಿವ್ಯ ಸತ್ಸಂಗ
Posted On: 20-02-2024 09:03PM
ಕಾಪು : ಕರಾವಳಿಯ ಸೊಬಗಿಗೆ ಮನಸೋತವರಿಲ್ಲ. ಕಾಪು ಬೀಚ್ ಅತ್ಯಂತ ಸುಂದರವಾಗಿದೆ. ಭಾರತದ ಆಧ್ಯಾತ್ಮ, ವಸುದೈವ ಕುಟುಂಬಕಂ ಎಂಬ ನುಡಿ, ಭಾರತದ ಐಟಿ ವಲಯ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನಮಗೆ ಹೆಮ್ಮೆ. ಸತ್ಸಂಗದೊಂದಿಗೆ ಸತ್ ಚಿಂತನೆ, ಆತ್ಮ ಚಿಂತನೆಯಾಗಲಿ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲೀವಿಂಗ್ನ ಸಂಸ್ಥಾಪಕ, ಪದ್ಮವಿಭೂಷಣ ಗುರುದೇವ್ ಶ್ರೀ ರವಿಶಂಕರ್ ಗುರೂಜಿ ಹೇಳಿದರು. ಅವರು ಮಂಗಳವಾರ ಕಾಪು ಬೀಚ್ ನ ಮಂಥನ್ ರೆಸಾಟ್೯ ಬಳಿ ಕಡಲ ಕಿನಾರೆಯಲ್ಲಿ ನಡೆದ ಸತ್ಸಂಗದಲ್ಲಿ ಜ್ಞಾನ, ಧ್ಯಾನ ಹಾಗೂ ಭಜನೆಯನ್ನೊಳಗೊಂಡ ದಿವ್ಯ ಸತ್ಸಂಗ ಆನಂದ ಲಹರಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಆಯೋಜಕರಾಗಿರುವ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸನ್ಯಾಸ ಪ್ರದರ್ಶನವಾಗಬಾರದು, ನಿದರ್ಶನವಾಗಬೇಕು ಎನ್ನುವಂತಿರುವ ಮಹನೀಯ ಸಂತ ಶ್ರೀ ರವಿಶಂಕರ್ ಗುರೂಜಿ. ವಿವಿಧ ದೇಶಗಳ ಜನರು ಅನುಯಾಯಿಯಾಗಿರುವ ಅಂತರಾಷ್ಟ್ರೀಯ ಖ್ಯಾತಿಯ ಗುರೂಜಿ ಕಾಪುವಿಗೆ ಆಗಮಿಸಿರುವುದು ಬದುಕಿನ ಅವಿಸ್ಮರಣೀಯ ಘಳಿಗೆ ಎಂದರು.
ಕಿರಿಯರಿಂದ ಹಿರಿಯರಾದಿಯಾಗಿ ಇಳಿ ಸಂಜೆಯಲಿ ಕಡಲ ಕಿನಾರೆಯ ಸೊಬಗಿನ ಜೊತೆಗೆ ಸತ್ಸಂಗ, ಧ್ಯಾನ, ಭಜನೆಯಲಿ ಸಮಯ ಕಳೆದರು.
ಈ ಸಂದರ್ಭ ಗುರ್ಮೆ ಸುರೇಶ್ ಶೆಟ್ಟಿ ಕುಟುಂಬ ವರ್ಗ, ಎಂ. ಆರ್. ಜಿ ಗ್ರೂಪ್ ಮುಖ್ಯಸ್ಥ ಪ್ರಕಾಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು - ಜೀರ್ಣೋದ್ಧಾರದ ಹೊರೆ ಕಾಣಿಕೆಯ ಪೂರ್ವಭಾವಿ ಸಭೆ
Posted On: 19-02-2024 01:25PM
ಕಾಪು : ಶ್ರೀ ಬಬ್ಬರ್ಯ ದೈವಸ್ಥಾನ ಮೂಡು ಮಟ್ಟಾರು ಜೀರ್ಣೋದ್ಧಾರ ಸಮಿತಿಯ ವತಿಯಿಂದ ಮಟ್ಟಾರು ಬಯಲು ರಂಗಮಂದಿರದಲ್ಲಿ ಹೊರೆ ಕಾಣಿಕೆಯ ಪೂರ್ವಭಾವಿ ಸಭೆ ನಡೆಯಿತು. ಶಂಕರ್ ಶೆಟ್ಟಿ ದರ್ಮೆಟ್ಟು ದೀಪ ಬೆಳಗಿಸುವ ಮುಖಾಂತರ ಜೀರ್ಣೋದ್ದಾರದ ಹೊರೆ ಕಾಣಿಕೆಯ ಪೂರ್ವಭಾವಿ ಸಭೆಗೆ ಚಾಲನೆ ನೀಡಿದರು.
ಹೊರೆ ಕಾಣಿಕೆಯ ಉಸ್ತುವಾರಿ ಸಂದೀಪ್ ಪೂಜಾರಿ ಹೊರೆಕಾಣಿಕೆಯ ರೂಪುರೇಷೆಗಳು, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಹಲವಾರು ವಲಯದಲ್ಲಿ ಹೊರೆಕಾಣಿಕೆಯ ಕೇಂದ್ರಗಳನ್ನು ಮಾಡಿ ಆದರ ಜವಾಬ್ದಾರಿಗಳನ್ನು ನೀಡಿದರು.
ಈ ಸಂದರ್ಭ ಶ್ರೀ ಬಬ್ಬರ್ಯ ಆಡಳಿತ ಸಮಿತಿಯ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಉಪಾಧ್ಯಕ್ಷರಾದ ಹರೀಶ್ಚಂದ್ರ ಶೆಟ್ಟಿ, ದಿನರಾಜ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು, ಅಧ್ಯಕ್ಷರು, ಸಂಘ ಸಂಸ್ಥೆಗಳ ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು ಪ್ರಿತೇಶ್ ಶೆಟ್ಟಿ ಸ್ವಾಗತಿಸಿದರು. ಜಯಪ್ರಕಾಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.
ಕಾಪು : ಬಿಜೆಪಿಯ ನೂತನ ಕ್ಷೇತ್ರಾಧ್ಯಕ್ಷರಾಗಿ ಜಿತೇಂದ್ರ ಶೆಟ್ಟಿ ಉದ್ಯಾವರ ಆಯ್ಕೆ
Posted On: 18-02-2024 04:38PM
ಕಾಪು : ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ನೂತನ ಕ್ಷೇತ್ರಾಧ್ಯಕ್ಷರಾಗಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ ಉದ್ಯಾವರ ಆಯ್ಕೆಯಾಗಿದ್ದಾರೆ.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾದ ಕಿಶೋರ್ ಕುಂದಾಪುರ ಅವರು ನೇಮಕ ಮಾಡಿದ್ದಾರೆ.
ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಪದ ಪ್ರಧಾನ ಸಮಾರಂಭ
Posted On: 18-02-2024 03:04PM
ಬ್ರಹ್ಮಾವರ : ನಮ್ಮ ಆದಾಯದ ಒಂದಂಶವನ್ನು ಸಮಾಜಕ್ಕೆ ನೀಡಿದಾಗ ನಮ್ಮ ಜೀವನದಲ್ಲಿ ಸಾಥ೯ಕತೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಜಯಂಟ್ಸ್ ಸಂಸ್ಥೆಯ ಸೇವೆ ಅನುಪಮ ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಹೇಳಿದರು. ಅವರು ಶನಿವಾರ ಸಿಟಿ ಸೆಂಟರ್ ನಲ್ಲಿ ನಡೆದ ಬ್ರಹ್ಮಾವರ ಜಯಂಟ್ಸ್ ಗ್ರೂಪ್ ನ ಪದಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಯಂಟ್ಸ್ ಫೆಡರೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್ ಮಾತನಾಡಿ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ. ಜನ ಔಷಧಿ ಸಂಸ್ಥೆ ಪ್ರಾರಂಭ ಮಾಡಿ ಸಾವಿರಾರು ಜನರಿಗೆ ಸಹಾಯ ಮಾಡಿದೆ ಎಂದರು. ಜಯಂಟ್ಸ್ ಫೆಡರೇಶನ್ ಉಪಾಧ್ಯಕ್ಷ ತೇಜೇಶ್ವರ ರಾವ್, ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು ಶುಭ ಹಾರೈಸಿದರು.
ಈ ಸಂದಭ೯ದಲ್ಲಿ ನೂತನ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಮತ್ತು ಅವರ ತಂಡದ ಪದ ಪ್ರಧಾನ ನಡೆಯಿತು. ಕಾಯ೯ಕ್ರಮದಲ್ಲಿ ಪೋಲಿಸ್ ಉಪ ನಿರೀಕ್ಷಕ ಕೃಷ್ಣಪ್ಪ ಮತ್ತು ಹಿರಿಯ ವಿಭಾಗದ ಕ್ರೀಡಾಪಟು ಗೀತಾ ಎ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸ್ಪಂದನ ವಿಶೇಷ ಚೇತನ ಶಾಲೆಗೆ 2.5 ಲಕ್ಷ ವೆಚ್ಚದ ಸೋಲಾರ್, ಟಿವಿ, ವಿವಿಧ ಪರಿಕರಗಳನ್ನು ನೀಡಲಾಯಿತು. ಬಡ ರೋಗಿಗೆ ಸಹಾಯಧನ ವಿತರಿಸಲಾಯಿತು. ಸಮಾರಂಭದಲ್ಲಿ ನೂತನ ಯೂನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್ ಮತ್ತು ನೂತನ 4 ಜನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು.
ವಿವೇಕ್ ಕಾಮತ್ ಸ್ವಾಗತಿಸಿದರು. ಕಾಯ೯ದಶಿ೯ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ರಾಘವೇಂದ್ರ ಕವಾ೯ಲು ನಿರೂಪಿಸಿದರು.
ಪಡುಬಿದ್ರಿ ಸಿ.ಎ. ಸೊಸೈಟಿಯ ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಲೋಕಾರ್ಪಣೆ
Posted On: 18-02-2024 02:48PM
ಹೆಜಮಾಡಿ : ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ಬ್ಯಾಂಕಿಂಗ್ ಸೊಸೈಟಿಯಾಗಿ ಹೆಗ್ಗಳಿಕೆ ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನವೀಕರಣಗೊಂಡ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಬ್ಯಾಂಕಿಂಗ್ ಕಟ್ಟಡದ ಉದ್ಘಾಟನೆಯನ್ನು ಭಾನುವಾರ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿಗಮದ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಗಮ ಬೆಂಗಳೂರು ಇದರ ನಿರ್ದೇಶಕರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ದೀಪ ಪ್ರಜ್ವಲನೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರಾದ ನವೀನ್ ಚಂದ್ರ ಡಿ. ಸುವರ್ಣ ಮಾಡಿದರು. ನಾಮ ಫಲಕದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿಗಮ ಬೆಂಗಳೂರು ಇದರ ನಿರ್ದೇಶಕರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಪಡಿತರ ವ್ಯವಸ್ಥೆಯ ಗೋದಾಮನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಭದ್ರತಾ ಕೊಠಡಿಯನ್ನು ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಶ್ಮ ಎ. ಮೆಂಡನ್ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಬಂದರಿನ ಮೂಲಕ ಪ್ರಸಿದ್ಧಿ ಪಡೆದ ಹೆಜಮಾಡಿಯಲ್ಲಿ ಪ್ರಥಮ ಹವಾನಿಯಂತ್ರಿತ ಕಟ್ಟಡವಾಗಿ ಪಡುಬಿದ್ರಿ ಸಿ.ಎ ಸೊಸೈಟಿಯ ಹೆಜಮಾಡಿ ಶಾಖೆ ಉದ್ಘಾಟನೆಯಾಗಿದೆ. ಸಹಕಾರಿ ಸೊಸೈಟಿಗಳು ಕಲ್ಪವೃಕ್ಷದಂತೆ ಬಹಳಷ್ಟು ಕೊಡುಗೆ ನೀಡಿದೆ. ಸಾಮಾಜಿಕವಾಗಿ, ಕೃಷಿಕರ, ಊರಿನ ಅಭಿವೃದ್ಧಿ ಬಗ್ಗೆ ಪಡುಬಿದ್ರಿ ಸಿ.ಎ ಸೊಸೈಟಿ ಕೆಲಸ ಮಾಡುತ್ತಿದೆ. ಶೇ.25 ಡಿವಿಡೆಂಟ್ ನೀಡಿ, 125 ಕೋಟಿ ಲಾಭದಾಯಕವಾಗಿದೆ. ಗ್ರಾಹಕರು ನಮ್ಮ ದೇವರು ಎಂಬ ಸೇವಾ ಭಾವನೆಯಿಂದ ದುಡಿಯುವ ಸಂಸ್ಥೆಯ ಉದ್ಯೋಗಿಗಳ ಮೂಲಕ ಈ ಸಾಧನೆ ಸಾಧ್ಯವಾಗಿದೆ ಎಂದರು.
ಸನ್ಮಾನ/ಸ್ವಚ್ಛತಾ ಪರಿಕರ ವಿತರಣೆ : ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಾಪು ದಿವಾಕರ ಶೆಟ್ಟಿ, ಶೈಕ್ಷಣಿಕ ಸಾಧಕಿ ಡಾ. ಹರ್ಷಿತ ಎನ್. ಅಂಚನ್, ಕ್ರೀಡಾ ಸಾಧಕ ಧನುಷ್ ಎಸ್. ಸಾಲ್ಯಾನ್ರನ್ನು ಸನ್ಮಾನಿಸಲಾಯಿತು. ಸೊಸೈಟಿ ವ್ಯಾಪ್ತಿಯ ಕರಾವಳಿಯನ್ನು ನಿರಂತರವಾಗಿ ಸ್ವಚ್ಛಗೊಳಿಸಿ ಉತ್ತಮ ಸಮಾಜ ಸೇವೆಗೈಯ್ಯುತ್ತಿರುವ ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದ ಮತ್ತು ಪಡುಬಿದ್ರಿ ನಡಿಪಟ್ನ ಕರಾವಳಿ ಸ್ಟಾರ್ ಸಂಸ್ಥೆಗಳಿಗೆ ಸ್ವಚ್ಚತಾ ಪರಿಕರಗಳನ್ನು ವಿತರಿಸಲಾಗುವುದು. ಈ ಸಂದರ್ಭ ಫೆ. 5 ರಿಂದ ಮಾರ್ಚ್ ಅಂತ್ಯದವರೆಗೆ ಸೊಸೈಟಿಯಲ್ಲಿ ಠೇವಣಿ ವಿನಿಯೋಗಿಸಿದ ಠೇವಣಿದಾರರಿಗೆ, ಚಿನ್ನಾಭರಣ ಸಾಲ ಪಡೆದ 10 ವಿಜೇತರನ್ನು ಗಣ್ಯರು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಚಿನ್ನದ ನಾಣ್ಯ, ಆಕರ್ಷಕ ಬಹುಮಾನ ವಿತರಿಸಿದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭ ನವೀನಚಂದ್ರ ಡಿ ಸುವರ್ಣ, ಬಿ ಜಯಕರ ಶೆಟ್ಟಿ ಇಂದ್ರಾಳಿ, ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮೋಹನ್ ಸುವರ್ಣ, ಪಾಂಡುರಂಗ ಸಿ ಕರ್ಕೇರ, ಪ್ರಾಣೇಶ್ ಹೆಜಮಾಡಿ, ಸುಧಾಕರ ಕರ್ಕೇರ, ವಾಮನ ಕೋಟ್ಯಾನ್, ದಯಾನಂದ ಹೆಜಮಾಡಿ, ಸತೀಶ್ ನಾಯ್ಕ್, ಸುರೇಶ್ ಶೆಟ್ಟಿ, ಲೋಕೇಶ್ ಕೆ. ಅಮೀನ್, ರಾಜು ಹೆಜಮಾಡಿ, ಮೊಹಮ್ಮದ್ ಇಸ್ಮಾಯಿಲ್, ಎಚ್ ಶೇಷಗಿರಿ, ವಾದಿರಾಜ ಆಚಾರ್ಯ, ಹೆಚ್. ರವಿ ಕುಂದರ್ ಹೆಜಮಾಡಿ, ರಾಲ್ಫಿ ಡಿ'ಕೋಸ್ತ, ಹರೀಶ್ ದೇವಾಡಿಗ, ಜಯಂತ್ ಪುತ್ರನ್, ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ನಿಶ್ಮಿತ ಪಿ.ಎಚ್, ಶಾಖಾ ವ್ಯವಸ್ಥಾಪಕಿ ಶಕುಂತಳ, ನಿರ್ದೇಶಕರುಗಳಾದ ರಸೂಲ್ ವೈ.ಜಿ, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ, ರಾಜಾರಾಮ್ ರಾವ್, ವಾಸುದೇವ ದೇವಾಡಿಗ, ಯಶವಂತ್ ಪಿ.ಬಿ, ಮಾಧವ ಆಚಾರ್ಯ, ಸ್ಟ್ಯಾನಿ ಕ್ವಾಡ್ರಸ್, ಸುಚರಿತ ಎಲ್ ಅಮೀನ್, ಕುಸುಮಾ ಎಮ್. ಕರ್ಕೇರ, ಕಾಂಚನ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲ ಗೋಪಾಲ್ ಬಲ್ಲಾಳ್ ಕೆ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಹೆಜಮಾಡಿ ಪೇಟೆಯಿಂದ ಹೆಜಮಾಡಿ ಶಾಖೆಯವರೆಗೆ ಗಣ್ಯರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸತೀಶ್ಚಂದ್ರ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಗುರುರಾಜ್ ಪೂಜಾರಿ ವಂದಿಸಿದರು.
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ - ಶಿಕ್ಷಕ ರಕ್ಷಕ ಸಭೆ
Posted On: 18-02-2024 09:49AM
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆ, ಕುತ್ಯಾರು ಇಲ್ಲಿ ಶನಿವಾರ ಶಿಕ್ಷಕ ರಕ್ಷಕ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಿರ್ವ ಪೋಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕೃಷ್ಣ ಆಚಾರ್ಯ ಹಾಗೂ ಹೆಡ್ ಕಾನ್ ಸ್ಟೇಬಲ್ ಮಂಜುನಾಥ ಅಡಿಗ ಇವರು ಪೋಷಕರಿಗೆ ಮತ್ತು ಮಕ್ಕಳಿಗೆ ರಸ್ತೆ ಸುರಕ್ಷತೆ, ಸೈಬರ್ ಕ್ರೈಮ್ ಮತ್ತು ಮಾದಕ ವ್ಯಸನಗಳ ಬಗ್ಗೆ ಮಾಹಿತಿ ನೀಡಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯವಾಣಿ ಸಂಚಿಕೆಯ ದ್ವಿತೀಯ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಬುಡೋಕಾನ್ ಕರಾಟೆ ಸ್ಪರ್ಧೆ, ಚಿಂತನ ಗಣಿತ, ಇಂಗ್ಲೀಷ್, ಸಾಮಾನ್ಯ ಜ್ಞಾನ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ರಾಂಕ್ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯದರ್ಶಿ ಗುರುರಾಜ ಆಚಾರ್ಯ ಮತ್ತು ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಮಾತೃ ಮಂಡಳಿಯ ಅಧ್ಯಕ್ಷರಾದ ಲತಾ ಸಂತೋಷ್, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ವಾಣಿ ಸ್ವಾಗತಿಸಿದರು. ಶಿಕ್ಷಕಿ ಅಮಿತಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಶಾಲಾ ಪ್ರಾಂಶುಪಾಲರಾದ ಸಂಗೀತಾ ರಾವ್ ಶಾಲಾ ಶೈಕ್ಷಣಿಕ ವರದಿಯ ಜೊತೆಗೆ ಪರೀಕ್ಷೆಗಳ ಮಾಹಿತಿಯನ್ನು ನೀಡಿದರು. ಉಪ ಪ್ರಾಂಶುಪಾಲರಾದ ಸೌಮ್ಯ ಮತ್ತು ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ವಂದಿಸಿದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಅನುದಾನ ಮತ್ತೆ ನೆನೆಗುದಿಗೆ : ಪ್ರವೀಣ್ ಎಮ್. ಪೂಜಾರಿ
Posted On: 18-02-2024 09:34AM
ಉಡುಪಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವು ತನ್ನ ಪಕ್ಷದ ಚುನಾವಣಾ ಪ್ರಣಾವಳಿಕೆಯಲ್ಲಿ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು ತಮ್ಮ ಸರಕಾರ ಆಡಳಿತಕ್ಕೆ ಬಂದರೆ ನೀಡುವುದಾಗಿ ಭರವಸೆಯನ್ನು ನೀಡಿದ್ದು ಸರಕಾರ ಆಡಳಿತಕ್ಕೆ ಬಂದು 2 ಬಜೆಟನ್ನು ಮಂಡಿಸಿದಾಗ್ಯೂ ಯಾವುದೇ ಅನುದಾನವನ್ನು ನೀಡದೆ ಸಮಸ್ತ ಬಿಲ್ಲವ/ಈಡಿಗ ಸಮಾಜಕ್ಕೆ ವಂಚಿಸಿದೆ.
ಈ ರೀತಿಯ ದೋರಣೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ಶ್ರೀ ನಾರಾಯಣ ಗುರುಗಳ ತತ್ವಾಚಾರಗಳ ಅನುಷ್ಠಾನಗೊಳಿಸಲು ಬುನಾದಿಯೇ ಹಾಕಲಾಗದಂತಾಗಿದೆ. ಬಿಲ್ಲವ/ಈಡಿಗ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಅನುದಾನದ ಭರವಸೆಯನ್ನು ನೀಡಿದ ಸರಕಾರ ಕೇವಲ ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ ಎಂದು ನಿರೂಪಿಸಿದೆ.
ಹಿಂದಿನ ಮತ್ತು ಈಗಿನ ಸರಕಾರ ಬಿಲ್ಲವ/ಈಡಿಗ ಸಮುದಾಯದ ಸಮಾಜಕ್ಕೆ ಕೇವಲ ಚುನಾವಣಾ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಪ್ರತಿ ಬಜೆಟ್ ನಲ್ಲೂ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನವನ್ನು ನೀಡದೆ ಪಂಗನಾಮ ಹಾಕುವುದು ಸಾಮಾನ್ಯವಾಗಿದೆ. ಈಗಿನ ಆಡಳಿತ ವಿರೋಧ ಪಕ್ಷದವರು ತಮ್ಮ ಸರಕಾರ ಆಡಳಿತದಲ್ಲಿದ್ದಾಗ ಅನುದಾನ ನೀಡದೆ ಈಗ ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಆಡಳಿತ ಸರಕಾರವು ಅನುದಾನ ನೀಡಿಲ್ಲ ಎಂದು ದೂಷಿಸುವುದು. ಹಾಗೆಯೇ ಇವರಿಬ್ಬರ ಕೆಸರಾಟದಲ್ಲಿ ಹಿಂದುಳಿದ ವರ್ಗವಾದ ಬಿಲ್ಲವ/ಈಡಿಗರ ಅಭಿವೃದ್ಧಿಯ ಕನಸು ಕನಸಾಗಿಯೇ ಉಳಿಯಿತು. ಬಿಲ್ಲವ/ಈಡಿಗ ಸಮುದಾಯ ಇದಕ್ಕೆ ಸರಿಯಾದ ಉತ್ತರವನ್ನು ಚುನಾವಣಾ ಸಮಯದಲ್ಲಿ ನೀಡಿ ಎಚ್ಚರ ತಪ್ಪಿದ ರಾಜಕೀಯ ನಾಯಕರಿಗೆ ಎಚ್ಚರಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ ಅಧ್ಯಕ್ಷರಾದ ಪ್ರವೀಣ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ತಹಶಿಲ್ದಾರ್ ಕಚೇರಿಯಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ
Posted On: 18-02-2024 09:29AM
ಕಾಪು : ತಾಲೂಕು ತಹಶಿಲ್ದಾರ್ ಕಚೇರಿಯಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಭಾವಚಿತ್ರವನ್ನು ಕಾಪು ತಾಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್ ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸರ್ಕಾರ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಈ ಎಲ್ಲ ಮಹನೀಯರು ಆರೋಗ್ಯಕರ, ಮನುಷ್ಯತ್ವದಿಂದ ಕೂಡಿದ ಸಮಾಜಿಕ ವ್ಯವಸ್ಥೆಯನ್ನು ಬಯಸಿದವರು. ಜಾತೀಯತೆ, ಮೌಢ್ಯ ಕಂದಾಚಾರಗಳನ್ನು ಸಮಾಜದಲ್ಲಿ ಪ್ರಚಲಿತವಾಗಿದೆ. ಅಸಮಾನತೆ ತೊಲಗಿ ಎಲ್ಲರೂ ಗೌರವದಿಂದ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ದಿಸೆಯಲ್ಲಿ ಬಸವಣ್ಣನವರು ಶ್ರಮಿಸಿದರು.
ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದರು. ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೂ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ ಎಂದರು.
ಈ ಸಂದರ್ಭ ತಹಶಿಲ್ದಾರ್ ಕಚೇರಿಯ ಉಪತಹಶೀಲ್ದಾರರಾದ ದೇವಕಿ, ಅಶೋಕ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಗ್ಯಾರಂಟಿ ನಷ್ಟ ಸರಿದೂಗಿಸಲು ರಾಜ್ಯದ ಜನರ ಮೇಲೆ ತೆರಿಗೆಯ ಬರೆ : ಗುರ್ಮೆ ಸುರೇಶ್ ಶೆಟ್ಟಿ
Posted On: 16-02-2024 05:36PM
ಕಾಪು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಸವಾದ ಬಜೆಟ್ ಮಂಡಿಸಿದ್ದಾರೆ. ಜನರ ಆಶಾಭಾವನೆಗಳಿಗೆ ವಿರುದ್ಧವಾದ ಬಜೆಟ್ ಇದಾಗಿದೆ. ಸಂಪತ್ತಿನ ಸಮಾನ ಹಂಚಿಕೆ ಎಂಬುದು ಸಿದ್ದರಾಮಯ್ಯ ಸರ್ಕಾರದಲ್ಲಿ ಮರೀಚಿಕೆಯಾಗಿದೆ.
ಅಲ್ಪಸಂಖ್ಯಾತರನ್ನು ಓಲೈಸಲೆಂದೇ ಈ ಬಜೆಟ್ ತಯಾರಿಗೊಳಿಸಲಾಗಿದೆ. ನನ್ನ ತೆರಿಗೆ ನನ್ನ ಹಕ್ಕು ಎಂದು ಕೇಂದ್ರ ಸರ್ಕಾರದೆದುರು ವಾದ ಮಂಡಿಸಿದವರು ಇಂದು ಉಡುಪಿ ಜಿಲ್ಲೆಯ ತೆರಿಗೆಯ ಪಾಲನ್ನು ಸರಿಯಾದ ಕ್ರಮದಲ್ಲಿ ನಮ್ಮ ಜಿಲ್ಲೆಗೆ ಹಿಂತಿರುಗಿಸಿಲ್ಲ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಗೆ ಯಾವುದೇ ರೀತಿಯ ಉತ್ತೇಜನ ನೀಡಿಲ್ಲ.
ಚುನಾವಣೆಯು ಹತ್ತಿರದಲ್ಲಿರುವಾಗ ಮೋದಿ ಸರ್ಕಾರವನ್ನು ದೂಷಿಸಿ ಮಂಡಿಸಿದ ಬಜೆಟ್ ಇದಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ರಾಜ್ಯದ ಜನರ ಮೇಲೆ ಸಿದ್ದರಾಮಯ್ಯ ತೆರಿಗೆಯ ಬರೆ ಹಾಕಿದ್ದಾರೆ. ಈ ಸರ್ಕಾರದಲ್ಲಿ ಎಲ್ಲವೂ ಏರುತ್ತಿದೆ. ಜನಸಾಮಾನ್ಯರ ಬದುಕಿಗೆ ಯಾವುದೇ ರೀತಿಯಲ್ಲೂ ಸಹಕಾರಿಯಾಗಿಲ್ಲ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಮಟ್ಟಿಗೆ ನಿರಾಶದಾಯಕ ಬಜೆಟ್ : ಯೋಗೀಶ್ ಶೆಟ್ಟಿ ಬಾಲಾಜಿ
Posted On: 16-02-2024 05:24PM
ಉಡುಪಿ : ಇಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ಇದ್ದ ಬಜೆಟ್ ಅನ್ನೇ ಅಲ್ಪ ಸ್ವಲ್ಪ ಬದಲಾಯಿಸಿ ಮಾಡಿದ ಬಜೆಟ್ ಆಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕೊಡುತ್ತೇವೆ ಅಂತ ಎಲ್ಲೂ ಹೇಳಿಲ್ಲ. ಅಬಕಾರಿ, ನೋಂದಣಿ ಶುಲ್ಕವನ್ನು ಹೆಚ್ಚಿಸಿ ಗ್ಯಾರಂಟಿಗೆ ಹಣ ಕ್ರೋಢೀಕರಿಸಿದ್ದಾರೆ. ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಯತ್ನ . ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗು ಇನ್ನಿತರ ಆರೋಗ್ಯ ಕ್ಷೇತ್ರಗಳ ನಿರೀಕ್ಷೆ ಹುಸಿಯಾಗಿದೆ. ಉಡುಪಿ ಜಿಲ್ಲೆಯ ಮಟ್ಟಿಗೆ ನಿರಾಶದಾಯಕ ಬಜೆಟ್ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.