Updated News From Kaup

ಪಡು ಕುತ್ಯಾರು ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಮಹೋತ್ಸವ

Thumbnail
Posted On: 30 Nov 2024, 07:24 AM

ಕಾಪು : ತಾಲೂಕಿನ ಪಡು ಕುತ್ಯಾರು ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಮಹೋತ್ಸವವು ಆನೆಗುಂದಿ ಮಠದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ಶುಕ್ರವಾರ ಜರಗಿತು. ಈ ಸಂದರ್ಭ ಕ್ಷೇತ್ರದ ದೇವರಿಗೆ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯು ನಡೆಯಿತು. ರಾತ್ರಿ ನಡೆದ ಶ್ರೀದೇವಿಯ ಪೂಜೆ ಮತ್ತು ಕಾರ್ಯಕ್ರಮವು ಆನೆಗುಂದಿ ಮಠದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಜರಗಿ ಆಶೀರ್ವಚನ ನೀಡಿದರು. ಮೊಕ್ತೇಸರ ಪ್ರಕಾಶ ಎಸ್ ಆಚಾರ್ಯ, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಆರ್ ಆಚಾರ್ಯ, ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಕಟಪಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ನಿಕಟಪೂರ್ವಆಡಳಿತ ಮೊಕ್ತೇಸರರರಾದ ಸದಾಶಿವ ಆಚಾರ್ಯ, ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ, ಕೋಶಾಧಿಕಾರಿ ಗಂಗಾಧರ ಆಚಾರ್ಯ, ಪದಾಧಿಕಾರಿಗಳು, ಕೂಡುವಳಿಕೆಯ ಸಮಸ್ತರು, ಸಮಾಜ ಬಾಂಧವರು, ಭಕ್ತಾದಿಗಳು ಉಪಸ್ಥಿತರಿದ್ದರು.

ಪಡುಬಿದ್ರಿ ಸಿಎ ಸೊಸೈಟಿಗೆ ನಬಾಡ್೯ ದ.ಕದ ಡಿ.ಡಿ.ಎಮ್ ಭೇಟಿ

Thumbnail
Posted On: 28 Nov 2024, 07:00 PM

ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ), ಪಡುಬಿದ್ರಿ ಇಲ್ಲಿಗೆ ನಬಾರ್ಡ್ನ ದಕ್ಷಿಣ ಕನ್ನಡ ಜಿಲ್ಲೆಯ ಡಿ.ಡಿ.ಎಮ್ ಸಂಗೀತ ಕರ್ತ ಭೇಟಿ ನೀಡಿ ಏಕರೂಪ ತಂತ್ರಾಂಶದ ಪ್ರಗತಿಯ ಬಗ್ಗೆ ಪರಿಶೀಲಿಸಿದರು. ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಸೊಸೈಟಿಯಲ್ಲಿ ಲಭ್ಯವಿರುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ನಿರ್ದೇಶಕ ವೃಂದ ಹಾಗೂ ಸಿಬ್ಬಂದಿ ವೃಂದ ಉಪಸ್ಥಿತರಿದ್ದರು.

ಡಿ. 20 - 23 : ಕಳತ್ತೂರು ಶ್ರೀ ಬ್ರಹ್ಮ ಬೈದೇರುಗಳ ವರ್ಷಾವಧಿ ನೇಮೋತ್ಸವ

Thumbnail
Posted On: 28 Nov 2024, 10:40 AM

ಕಳತ್ತೂರು : ಇಲ್ಲಿನ ಶ್ರೀ ಬ್ರಹ್ಮ ಬೈದೇರುಗಳ ವರ್ಷಾವಧಿ ನೇಮೋತ್ಸವವು ಡಿ.20 ರಂದು ಮೊದಲ್ಗೊಂಡು ಡಿ.23 ರ ವರೆಗೆ ನಡೆಯಲಿದೆ. ಡಿ.20, ಶುಕ್ರವಾರ ಬೆಳಿಗ್ಗೆ ನವಕ ಪ್ರಧಾನ ಹೋಮ, ರಾತ್ರಿ ಗರಡಿ ಪ್ರವೇಶ, ಡಿ.21, ಶನಿವಾರ ರಾತ್ರಿ ನೈವೇದ್ಯ ಸೇವೆ, ಡಿ.22, ಆದಿತ್ಯವಾರ ಮಧ್ಯಾಹ್ನ ಗಂಟೆ 12 ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 6-30ರಿಂದ ಶ್ರೀ ಬ್ರಹ್ಮ ಬೈದೇರುಗಳ ಜಾತ್ರೆ (ನೇಮೋತ್ಸವ), ರಾತ್ರಿ ಗಂಟೆ 7-30ಕ್ಕೆ ಅನ್ನಸಂತರ್ಪಣೆ ನೆರವೇರಲಿದೆ. ಡಿ.23, ಸೋಮವಾರ ಬೆಳಿಗ್ಗೆ ಗಂಟೆ 9 ಕ್ಕೆ ಮಾಯಾಂದಾಲ್ ದೇವಿಯ ನೇಮ, ಶುದ್ಧ ಕಲಶ, ನೈವೇದ್ಯ ಸೇವೆ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳ ಪ್ರವಾಸ ಮುಗಿಸಿದ ಕಾಪುವಿನ ಯುವಕರಿಗೆ ಕಾಪು ಹೊಸ ಮಾರಿಗುಡಿಯಲ್ಲಿ ಅಭಿನಂದನೆ

Thumbnail
Posted On: 28 Nov 2024, 10:34 AM

ಕಾಪು : ಶಟರ್ ಬಾಕ್ಸ್ ಖ್ಯಾತಿಯ ಯೂ ಟ್ಯೂಬರ್ ಕಾಪುವಿನ ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ತಂಡ ಕರಾವಳಿಯ ಪ್ರವಾಸೋದ್ಯಮ, ಧಾರ್ಮಿಕ ಮತ್ತು ವಿಶೇಷವಾಗಿ ಉತ್ತರ ಭಾರತದ ಮೇಘಾಲಯ, ಮಿಝೋರಾಂ, ಒಡಿಶಾ ಸಹಿತ 7 ರಾಜ್ಯಗಳ ಪ್ರವಾಸ ಕೈಗೊಂಡು ಕಲೆ ಸಂಸ್ಕೃತಿ ಆಹಾರದ ಅಧ್ಯಯನ ನಡೆಸಿ ಪರಂಪರೆಯನ್ನು ಎಲ್ಲೆಡೆ ಪ್ರಚುರಗೊಳಿಸುವ ಉದ್ದೇಶದೊಂದಿಗೆ ಸುಜುಕಿ ಜಿಮ್ಮಿ ವಾಹನದಲ್ಲಿ ಈಶಾನ್ಯ ರಾಜ್ಯಗಳಿಗೆ ಕಳೆದ ಅ.5ರಂದು ಪ್ರವಾಸ ಹೊರಟಿದ್ದು, ಬುಧವಾರ 53 ದಿನಗಳ ಪ್ರವಾಸ ಮುಗಿಸಿ ಕಾಪುವಿಗೆ ಆಗಮಿಸಿದ್ದರು. ಕಾಪುವಿಗೆ ಆಗಮಿಸಿದ ಸಚಿನ್ ಶೆಟ್ಟಿ ಮತ್ತು ಅವರ ತಂಡವನ್ನು ಕಾಪು ಹೊಸ ಮಾರಿಗುಡಿ ದೇಗುಲದ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ಶ್ರೀ ದೇವಿಗೆ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿದರು. ಇದೇ ಸಂದರ್ಭ ಆಡಳಿತ ಮಂಡಳಿಯ ವತಿಯಿಂದ ಸಚಿನ್ ಮತ್ತು ತಂಡವನ್ನು ಸನ್ಮಾನಿಸಲಾಯಿತು. ಮಾಧ್ಯಮದೊಂದಿಗೆ ಸಚಿನ್ ಶೆಟ್ಟಿ ಮಾತನಾಡಿ, ನಾವು ಅಕ್ಟೋಬರ್ 5ರಂದು ಕಾಪು ಶ್ರೀ ಹೊಸಮಾರಿ ಗುಡಿಯಿಂದ ಕರ್ನಾಟಕ, ಆಂಧ್ಯಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ, ಮೇಘಾಲಯ, ತ್ರಿಪುರ, ಮಿಝೊರಾಮ್, ಮಣಿಪುರ, ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಿ ಈಶಾನ್ಯ ರಾಜ್ಯಗಳ ಅಧ್ಯಯನ ಪ್ರವಾಸ ಮಾಡಿ 53 ದಿನಗಳ ನಂತರ ಕಾಪುವಿಗೆ ಆಗಮಿಸಿದ್ದೇವೆ. ನಾವು ಪ್ರವಾಸದ ವೇಳೆ ವಿಡಿಯೋ ತುಣುಕನ್ನು ನನ್ನ ಶಟರ್ಬಾಕ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡುವ ಮೂಲಕ ಜನರಿಗೆ ವಿವಿಧ ರಾಜ್ಯಗಳ ಮಾಹಿತಿ ನೀಡಿದ್ದೇನೆ. ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರದ ಬಗ್ಗೆ, ನವದುರ್ಗಾ ಲೇಖನ ಯಜ್ಞದ ಬಗ್ಗೆ ಎಲ್ಲಾ ಕಡೆ ಮಾಹಿತಿ ನೀಡಿದ್ದೇನೆ. ನಮ್ಮ ತಂಡದಲ್ಲಿ ಅಭಿಷೇಕ್, ಸಾಯಿ ಸಹಿತ ನಾಲ್ವರೊಂದಿಗೆ ಪ್ರವಾಸ ಕೈಗೊಂಡಿದ್ದೆವು. ನಮ್ಮ ಪ್ರವಾಸಕ್ಕೆ 8 ಜನರು ಪ್ರಾಯೋಜಕತ್ವ ನೀಡಿದ್ದರು ಎಂದೂ ಸಚಿನ್ ಶೆಟ್ಟಿ ಹೇಳಿದರು. ಈ ಸಂದರ್ಭ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷರಾದ ಮಾಧವ ಆರ್ ಪಾಲನ್, ನವದುರ್ಗ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಟ್ಟು ಗುಳ್ಳ, ಶಂಕರಪುರ ಮಲ್ಲಿಗೆ ಚಿತ್ರದ ಅಂಚೆ ಮೊಹರು ಅನಾವರಣ

Thumbnail
Posted On: 27 Nov 2024, 08:12 PM

ಉಡುಪಿ : ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ಭಾರತೀಯ ಸಂವಿಧಾನದ ಅಮೃತೋತ್ಸವದ ಅಂಗವಾಗಿ ಕಟಪಾಡಿ ಮತ್ತು ಶಂಕರಪುರ ಉಪ ಅಂಚೆ ಕಚೇರಿಗಳಲ್ಲಿ ಕ್ರಮವಾಗಿ ತುಳುನಾಡಿನ ಜನಪ್ರಿಯ ವಸ್ತು ಗಳಾದ ಮಟ್ಟು ಗುಳ್ಳ ಮತ್ತು ಶಂಕರಪುರ ಮಲ್ಲಿಗೆಗಳ ಶಾಶ್ವತ ಚಿತ್ರಾತ್ಮಕ ಅಂಚೆ ಮೊಹರನ್ನು ಅನಾವರಣಗೊಳಿಸಲಾಯಿತು. ಸಮಾರಂಭದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು ತಾವು ರವಾನಿಸುವ ಕಾಗದ ಪತ್ರ ಮೇಲೆ ಈ ಮೊಹರನ್ನು ಮೇಲಿನ ಅಂಚೆ ಕಛೇರಿಗಳಲ್ಲಿ ಮುದ್ರಿಸಿ, ತುಳುನಾಡಿನ ಈ ಸಂಪತ್ತುಗಳ ಕಂಪನ್ನು ಎಲ್ಲೆಡೆ ಪಸರಿಸಬಹುದಾಗಿದೆ ಎಂದು ಅಂಚೆ ಪ್ರಕಟಣೆ ತಿಳಿಸಿದೆ.

ಎರ್ಮಾಳು ಮಾಧವ ಎಸ್. ಸುವರ್ಣ ನಿಧನ

Thumbnail
Posted On: 27 Nov 2024, 07:03 PM

ಪಡುಬಿದ್ರಿ : ಸುವರ್ಣ ಸಂಭ್ರಮದ ಜೇಸಿಐ ಪಡುಬಿದ್ರಿಯ ಸ್ಥಾಪಕ ಸದಸ್ಯರಾಗಿದ್ದ ಎರ್ಮಾಳು ಮಾಧವ ಎಸ್. ಸುವರ್ಣ(72) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತೆಂಕ ಎರ್ಮಾಳು ಸ್ವಗೃಹ "ಸುರಕ್ಷಾ"ದಲ್ಲಿ ನಿಧನರಾದರು. ಅವರು ತೆಂಕ ಎರ್ಮಾಳು ಮೊಗವೀರ ಮಹಾಸಭಾದ ಅಧ್ಯಕ್ಷರಾಗಿ, ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ತೆಂಕ ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ, ತೆಂಕ ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ತೆಂಕ ಸರಕಾರಿ ಪ್ರೌಢ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಜನನುರಾಗಿಯಾಗಿದ್ದರು. ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾಗಿ ಹಲವು ಬಾರಿ ಭಜನಾ ಕಮ್ಮಟಗಳನ್ನು ಯಶಸ್ವಿಯಗಿ ನಡೆಸಿದ್ದರು. ಹಲವು ವರ್ಷಗಳಿಂದ ತೆಂಕ ಗ್ರಾಮದಲ್ಲಿ ನೀಟ್ ಪ್ರಿಂಟ್ ಉದ್ಯಮದ ಮೂಲಕ ಪ್ರಮುಖ ಪ್ರಿಂಟಿಂಗ್ ಪ್ರೆಸ್ ಉದ್ಯಮ ನಡೆಸುತ್ತಿದ್ದರು. ಜೇಸಿಐ ಪಡುಬಿದ್ರಿಯ ಸ್ಥಾಪಕ ಸದಸ್ಯರಾಗಿದ್ದ ಅವರು 1981ಲ್ಲಿ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ಜೆಸಿಐ ರಾಜ್ಯ ತರಬೇತುದಾರರಾಗಿದ್ದ ಅವರು, ಎರಡು ಸಾವಿರಕ್ಕೂ ಅಧಿಕ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ನಡೆಸಿ ಪ್ರಸಿದ್ಧರಾಗಿದ್ದರು. 20ಕ್ಕೂ ಅಧಿಕ ಜೆಸಿಐ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಗರಿಮೆ ಹೊಂದಿದ್ದರು. ಪಡುಬಿದ್ರಿ ರೋಟರಿ ಕ್ಲಬ್ ಸ್ಥಾಪಕ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷರಾಗಿ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಕಾಪು ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಬಳಿಕ ಜಿಪಂ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಅವರ ನಿಧನಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬಂಟಕಲ್ಲು ಶಾಲೆಗೆ ನಾಸಾ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಭೇಟಿ ; ಮಕ್ಕಳೊಂದಿಗೆ ಸಂವಾದ

Thumbnail
Posted On: 27 Nov 2024, 05:49 PM

ಶಿರ್ವ : ಅಮೇರಿಕದ ನಾಸಾ (ಬಾಹ್ಯಾಕಾಶ ಸಂಶೋಧನ ಕೇಂದ್ರ)ಸಂಸ್ಥೆಯ ಹಿರಿಯ ವಿಜ್ಞಾನಿ ಬಿಳಿಯಾರು ಡಾ. ನರಸಿಂಹ ಭಟ್ ರವರು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾರ್ಥಮಿಕ ಶಾಲೆ ಗೆ ಭೇಟಿ ನೀಡಿದರು. ಇವರು ಈ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು, ಮಕ್ಕಳೊಂದಿಗೆ ಸಂವಾದ ನಡೆಸಿದ ಇವರು ಮುಂದಿನ ವರ್ಷ ನಡೆಯುವ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಚೆ ವ್ಯಕ್ತಪಡಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ, ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರೊಂದಿಗೆ ಅವರ ಸಹೋದರ ಈ ಶಾಲಾ ಹಳೇ ವಿದ್ಯಾರ್ಥಿ ಪದ್ಮನಾಭ ಭಟ್ ಜೊತೆಗಿದ್ದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶಶಿಧರ ವಾಗ್ಲೆಯವರು ಸ್ವಾಗತಿಸಿ ಶಾಲೆಯ ಅಭಿವೃದ್ದಿಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಸದಸ್ಯ ಕೆ ಆರ್ ಪಾಟ್ಕರ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

ಕಾಪು : ಮೂರು ಮಾರಿಗುಡಿಗಳಲ್ಲಿ ಜಾರ್ದೆ  ಮಾರಿಪೂಜೆ ಸಂಪನ್ನ

Thumbnail
Posted On: 27 Nov 2024, 05:40 PM

ಕಾಪು : ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆಮಾರಿ ಗುಡಿ, ಹೊಸ ಮಾರಿ ಗುಡಿ ಹಾಗೂ ಕಲ್ಯ ಮಾರಿ ಗುಡಿಗಳಲ್ಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು. ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್‌ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್‌ ತಿಂಗಳಾಂತ್ಯದಲ್ಲಿ ಜಾರ್ದೆ ಮಾರಿ ಪೂಜೆ ನಡೆಯುತ್ತದೆ.

ಕಾಪು ಶಾಸಕರ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ

Thumbnail
Posted On: 26 Nov 2024, 10:21 PM

ಕಾಪು : ಶಾಸಕರ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರತಿಜ್ಞಾ ವಿಧಿ ಕೈಗೊಂಡು, ಸಂವಿಧಾನಕ್ಕೆ ನಮಸ್ಕರಿಸಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಕುಮಾರ್ ಮಟ್ಟು, ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ಕಾಪು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಮೂಡುಬೆಳ್ಳೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆ

Thumbnail
Posted On: 26 Nov 2024, 10:12 PM

ಕಾಪು : ಸಂವಿಧಾನ ಅಪಾಯದಲ್ಲಿದೆ. ಹಿಂದಿನ ಮನು ಆಡಳಿತ ಕೊನೆಗೊಳಿಸಿ ಪ್ರಸ್ತುತ ನಾವು ಬದುಕುತ್ತಿರುವುದು ನಮ್ಮ ಸಂವಿಧಾನದ ಶಕ್ತಿಯಿಂದ. ಸಂವಿಧಾನದಿಂದ ಆಡಳಿತದ ಚುಕ್ಕಾಣಿ ಹಿಡಿವರೇ ಸಂವಿಧಾನ ಬದಲಾವಣೆ ಬಯಸುತ್ತಿದ್ದಾರೆ. ಕನಸನ್ನು ಕೊಟ್ಟ ಗ್ರಂಥ ಸಂವಿಧಾನ ಎಂದು ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು. ಅವರು ಕಾಪು ಪೇಟೆಯಲ್ಲಿ ರಕ್ಷಣಾಪುರ ಜವನೆರ್ ಕಾಪು ಇದರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡ ಸುಧೀರ್ ಮರೋಳಿ ಮಾತನಾಡಿ, ಕೆಲವರಿಗೆ ಗೌರವ ಕೊಡುವ ಸಂವಿಧಾನ ಬೇಡ ಎಲ್ಲರಿಗೂ ಗೌರವ ನೀಡುವ ಸಂವಿಧಾನ ಬೇಕಾಗಿದೆ ಎಂದರು. ಪೋಲಿಸ್ ವರಿಷ್ಠಾಧಿಕಾರಿಯ ವಿರುದ್ಧ ಉಡುಪಿಯ ಶಾಸಕರುಗಳು ಸಾಮಾನ್ಯ ಜನರ ಎದುರು ಯಾಕೆ ಪ್ರತಿಭಟಿಸುವಿರಿ ? ವಿಧಾನ ಸೌಧದಲ್ಲಿ ಪ್ರಶ್ನಿಸಿ ನಿಮಗೆ ಸಂವಿಧಾನ ಆ ಹಕ್ಕನ್ನು ನೀಡಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಸಮಾನತೆ ಬೋಧಿಸಿದ ಸಂವಿಧಾನದ ಮೌಲ್ಯವನ್ನು ಮರೆತಿದ್ದೇವೆ. ಇಂದಿನ ಸಭೆ ಅದಕ್ಕೆ ಪುನರ್ ಚಾಲನೆ ದೊರೆತಂತಾಗಿದೆ. ನಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುವ ಎಂದರು. ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಯಪ್ರಕಾಶ್ ಹೆಗ್ಡೆ, ರಕ್ಷಣಾಪುರ ಜವನೆರ್ ಅಧ್ಯಕ್ಷರಾದ ನವೀನ್ ಎನ್ ಶೆಟ್ಟಿ, ಧರ್ಮಗುರುಗಳಾದ ವಿಲಿಯಂ ಮಾರ್ಟಿಸ್‌, ಶ್ರೀನಿವಾಸ ತಂತ್ರಿ ಮತ್ತು ಇರ್ಶಾದ್‌ ಸಅದಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸುಂದರ ಮಾಸ್ತರ್, ಆನಂದ ಬ್ರಹ್ಮಾವರ, ಪ್ರಮುಖರಾದ ಕಿಶನ್ ಹೆಗ್ಢೆ ಕೊಳ್ಕೆಬೈಲು, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲು, ಶಾಂತಲತಾ ಶೆಟ್ಟಿ, ಶೇಖರ್ ಹೆಜಮಾಡಿ, ಗೀತಾ ವಾಗ್ಲೆ, ವೆರೋನಿಕಾ ಕರ್ನೆಲಿಯೋ, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್,  ಶಿವಾಜಿ ಸುವರ್ಣ, ಹರೀಶ್ ಕಿಣಿ, ರಮೇಶ್ ಕಾಂಚನ್, ಕಾಪು ದಿವಾಕರ ಶೆಟ್ಟಿ, ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು.  ಸಭೆಗು ಮುನ್ನ ಕಾಪು ಜನಾರ್ಧನ ದೇಗುಲದ ಆವರಣದಿಂದ ಕಾಪು ಪೇಟೆಯವರೆಗೆ ಸಾವಿರಾರು ಜನರಿಂದ ಜಾಥವು ನಡೆಯಿತು. ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಂಕರ್ ಮಲ್ಪೆ ತಂಡ ಸಂವಿಧಾನದ ಗೀತೆ ಹಾಡಿದರು. ಸುಮಾರು ಮೂರು ಸಾವಿರ ಮಹಿಳೆಯರಿಗೆ ಕೊಡುಗೆಯಾಗಿ ಸೀರೆಯನ್ನು ನೀಡಲಾಯಿತು.