Updated News From Kaup

ಕಾಪು : ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ವೃದ್ಧಿ, ಉತ್ತಮ ಆಯುಷ್ಯಕ್ಕಾಗಿ ವಿಶೇಷ ಪೂಜೆ

Posted On: 24-03-2024 07:46PM

ಕಾಪು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ಚೆನ್ನೈ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು ಅವರ ಆರೋಗ್ಯ ವೃದ್ಧಿ ಹಾಗೂ ಉತ್ತಮ ಆಯುಷ್ಯಕ್ಕಾಗಿ ಕಾಪು ಮಹತೋಭಾರ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿದಾನದಲ್ಲಿ ದೇವರಿಗೆ ವಿಶೇಷ ಪೂಜೆಯು ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಜರಗಿತು. ಈ ಸಂದರ್ಭ ಬಿಜೆಪಿ ಮುಖಂಡರೂ ಭಾಗಿಯಾಗಿದ್ದರು.

ನಂತರ ಉಡುಪಿ ಶ್ರೀ ಕೃಷ್ಣ ದೇವರಿಗೆ ಮತ್ತು ಶ್ರೀ ಅನಂತೇಶ್ವರ ದೇವರಿಗೆ ಹಾಗೂ ಶ್ರೀ ಮುಖ್ಯಪ್ರಾಣದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಯಿತು.

ನಂತರ ಪರ್ಯಾಯ ಪುತ್ತಿಗೆ ಸ್ವಾಮಿಗಳಾದ ಶ್ರೀ ಶ್ರೀ ಸುಗುಣೆಂದ್ರ ತೀರ್ಥ ಶ್ರೀಪಾದಂಗಳವರನ್ನು ಯೋಗೀಶ್ ವಿ. ಶೆಟ್ಟಿ ಮತ್ತು ನಿಯೋಗ ಭೇಟಿಯಾಗಿ ಎಚ್. ಡಿ. ಕುಮಾರಸ್ವಾಮಿಯವರ ಆರೋಗ್ಯ ವೃದ್ದಿಗೆ ಆಶೀರ್ವಾದವನ್ನು ಪಡೆಯಲಾಯಿತು. ಶ್ರೀಗಳು ಕೃಷ್ಣದೇವರು ಮುಖ್ಯ ಪ್ರಾಣದೇವರಲ್ಲಿ ಪ್ರಾರ್ಥಿಸಿ ಅನುಗ್ರಹ ಪ್ರಸಾದ ನೀಡಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಪುರಸಭಾ ಸದಸ್ಯ ಉಮೇಶ್ ಕರ್ಕೇರ, ಕಾಪು ಪುರಸಭಾ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಪ್ರವೀಣ್ ಕುಮಾರ್ ಗುರ್ಮೆ, ನವೀನ್ ಎಸ್ ಕೆ,ಉದಯ ಆರ್. ಶೆಟ್ಟಿ, ದೇವರಾಜ್ ತೊಟ್ಟಮ್, ವೆಂಕಟೇಶ್ ಎಂ ಟಿ, ಕೀರ್ತಿರಾಜ್, ಆಶ್ರಫ್ ಪಡುಬಿದ್ರೆ, ಸರ್ಫ್ರಾಜ್, ಪ್ರವೀಣ್, ಪ್ರಶಾಂತ್ ಭಂಡಾರಿ, ಸುರೇಂದ್ರ, ವಿಶಾಲಾಕ್ಷಿ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಸುರೇಶ್ ಪುತ್ರನ್ ಮತ್ತು ಪಕ್ಷದ ಕಾರ್ಯಕರ್ತರು ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.

ಕಾರ್ಕಳ : ಅರುಣ್ ಕುಮಾರ್ ನಿಟ್ಟೆ, ಅನುಷ್ ಅರುಣ್ ಕೆ., ಆಯುಷ್ ಅರುಣ್ ಕೆ. ಯವರಿಗೆ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್

Posted On: 24-03-2024 07:42PM

ಕಾರ್ಕಳ : ಶೊರೀನ್ ರಿಯೋ ಕರಾಟೆ ಅಸೋಷಿಯೇಷನ್ (ರಿ.) ಸ್ವಾಮಿ ಸ್ಟ್ರೆಂಥ್ ಟ್ರೈನಿಂಗ್ ಸೆಂಟರ್ ಮೂಡುಬಿದ್ರಿ SHORIN-RYU KARATE ASSOCIATION (R.) ಇದರ ಆಶ್ರಯದಲ್ಲಿ ಶೊರೀನ್ ರಿಯೂ ಕರಾಟೆಯಲ್ಲಿ ನಿಟ್ಟೆಯ ಅರುಣ್ ಕುಮಾರ್ ರವರು 'ಸದನ್' ಥರ್ಡ್ ಡಿಗ್ರಿ ಬ್ಲಾಕ್ ಬೆಲ್ಟ್ ('SADAN' THIRD DIGREE BLACK BELT) ಹಾಗೂ ಅವರ ಅವಳಿ ಪುತ್ರರಾದ ಅನುಷ್ ಅರುಣ್ ಕೆ. ಹಾಗೂ ಆಯುಷ್ ಅರುಣ್ ಕೆ. 'ಶೋಧನ್' ಫರ್ಸ್ಟ್ ಡಿಗ್ರಿ ಬ್ಲಾಕ್ ಬೆಲ್ಟ್ (SHODHAN FIRST DEGREE BLACK BELT) ಪಡೆದುಕೊಂಡಿದ್ದಾರೆ.

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ - ಧ್ವಜಾರೋಹಣ

Posted On: 24-03-2024 07:39PM

ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಭಾನುವಾರ ಬೆಳಿಗ್ಗೆ ದೇವಸ್ಥಾನದ ತಂತ್ರಿವರ್ಯರಾದ ವೇದಮೂರ್ತಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಯವರ ಪೌರೋಹಿತ್ಯದಲ್ಲಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ಕೆವಿ ವಿಷ್ಣುಮೂರ್ತಿ ಉಪಾಧ್ಯಾಯರವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು.

ಬೆಳಗ್ಗೆ 5 ರಿಂದ ಪೂಜೆ, ನವಗ್ರಹ ಹೋಮ, ಸಾಮೂಹಿಕ ಪ್ರಾರ್ಥನೆ, ಸಂಕಲ್ಪ ಬಲಿ, ಬೆಳಗ್ಗೆ ಧ್ವಜಾರೋಹಣ, ಪುಣ್ಯಾಹ, ಅಗ್ನಿ ಜನನ, ಪ್ರಧಾನ ಯಾಗ, ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ 12ರಿಂದ ಅಲಂಕಾರ ಪೂಜೆ, ಮಹಾಪೂಜೆ ನಡೆಯಿತು. ಸಂಜೆ 7ರಿಂದ ಆರಾಧನಾ ಪೂಜೆ, ಆರಾಧನಾ ಬಲಿ, ರಜತ ಪಾಲಕಿ ಉತ್ಸವ, ವಿಮಾನೋತ್ಸವ, ರಾತ್ರಿ 8ಕ್ಕೆ ರಾತ್ರಿ ಪೂಜೆ, ನಿತ್ಯ ಬಲಿ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 11.30ಕ್ಕೆ ಮಹಾರಂಗ ಪೂಜೆ, ಭೂತ ಬಲಿ, ಆಯನೋತ್ಸವ, ಏಕಾಂತ ಸೇವೆ ನಡೆಯಲಿದೆ.

ಈ ಸಂದರ್ಭ ಮೊಗವೀರ ಮುಂದಾಳು ಡಾ. ಜಿ ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲಿಯಾನ್‌, ಉಪಾಧ್ಯಕ್ಷ ಸುಭಾಷ್ ಚಂದ್ರ ಕಾಂಚನ್, ಕಾರ್ಯದರ್ಶಿ ಸುಧಾಕರ್ ಕುಂದರ್, ಕಾಪು ನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಮನೋಜ್‌ ಕಾಂಚನ್‌, ಆನಂದ ಸಿ ಕುಂದರ್‌, ಗಂಗಾಧರ ಸುವರ್ಣ ಎರ್ಮಾಳು, ದಿನೇಶ್‌ ಎರ್ಮಾಳು, ಮೊಗವೀರ ಮಹಾಜನ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಉಷಾರಾಣಿ ಬೋಳೂರು, ಕಾಪು ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಶ್ರೀಮತಿ ಸುಗುಣ ಸುಕುಮಾರ್, ದೇವಸ್ಥಾನದ ವ್ಯವಸ್ಥಾಪಕ ಸತೀಶ್ ಅಮೀನ್, ಸಮಿತಿಯ ಸದಸ್ಯರು, ಮೊಗವೀರ ಮಹಾಜನ ಸಂಘದ ಸದಸ್ಯರು, ಸಹಿತ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು.

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ - 'ಚೆಂಡು'ಗೆ ಚಾಲನೆ

Posted On: 22-03-2024 05:05PM

ಪಡುಬಿದ್ರಿ : ಇತಿಹಾಸ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಾಚ್೯ 22ರಂದು ಚೆಂಡುಗೆ ಚಾಲನೆ ನೀಡಲಾಯಿತು.

ದೇವಳದ ತಂತ್ರಿವರ್ಯರ ಪ್ರಾರ್ಥನೆಯೊಂದಿಗೆ ಚೆಂಡಿನ ಸೇವಾಕರ್ತರಾದ ಶರತ್ ಪೂಜಾರಿಯವರು ಬಗ್ಗೆಡಿ ಗುತ್ತಿನಾರ್ ಮತ್ತು ನಡ್ಸಾಲು ಗುತ್ತಿನಾರುಗಳಿಗೆ ಹಸ್ತಾಂತರಿಸಿ ಅವರು ಚೆಂಡನ್ನು ದೇವಳದ ಮುಂಭಾಗದ ವಠಾರಕ್ಕೆ ಎಸೆಯುವ ಮೂಲಕ ಚಾಲನೆ ನೀಡಲಾಯಿತು.

ಪಾದೆಬೆಟ್ಟುವಿನ ಮಾಗಂದಡಿ ಯುವಕರು ಮತ್ತು ನಡ್ಸಾಲು ಗ್ರಾಮದ ಯುವಕರು ರಥೋತ್ಸವದ ಮರುದಿನ ಚೆಂಡಾಟ ಆಡುವ ಪ್ರತೀತಿ ಇತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಊರಿನ ಹಿರಿಯರು, ಕಿರಿಯರು ಚೆಂಡು ಆಡುವ ಮೂಲಕ ಸಂಭ್ರಮಿಸಿದರು.

ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳ್ ಮತ್ತು ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಬಗ್ಗೆಡಿ ಗುತ್ತಿನಾರ್ ಶೇಖರ ಶೆಟ್ಟಿ, ನಡ್ಸಾಲು ಗುತ್ತಿನಾರ್ ಶ್ರೀನಾಥ ಹೆಗ್ಗಡೆ, ಅನಿಲ್ ಶೆಟ್ಟಿ, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಕೋಟೆಕಾರ್, ಭಕ್ತರು ಉಪಸ್ಥಿತರಿದ್ದರು.

ಮಾಚ್೯ 26-27 : ಕಾಪು ಸುಗ್ಗಿ ಮಾರಿಪೂಜೆ

Posted On: 21-03-2024 03:39PM

ಕಾಪು : ಶ್ರೀಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ಜರಗುವ ಇತಿಹಾಸ ಪ್ರಸಿದ್ದ ಕಾಲಾವಧಿ ಸುಗ್ಗಿ ಮಾರಿಪೂಜೆಯು ಮಾಚ್೯ 26 ಮತ್ತು 27ರಂದು ಜರಗಲಿದೆ.

2 ದಿನಗಳ ಕಾಲ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ವಿವಿಧ ಕಡೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹರಕೆ, ಸೇವೆಗಳನ್ನು ಸಲ್ಲಿಸುತ್ತಾರೆ.

ಮಾಚ್೯ 26ರಂದು ರಾತ್ರಿ ಹಳೇ ಮಾರಿಗುಡಿಗೆ ವೆಂಕಟರಮಣ ದೇವಸ್ಥಾನದಿಂದ ಹಾಗೂ ಹೊಸ ಮಾರಿಗುಡಿ ಮತ್ತು 3ಮೂರನೇ ಮಾರಿಗುಡಿಗೆ ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಬಿಂಬ ಮತ್ತು ಚಿನ್ನಾಭರಣಗಳನ್ನು ಮೆರವಣಿಗೆ ಮೂಲಕ ತಂದು ಗದ್ದೆಗೆಯೇರಿಸಿ ಮಾರಿಪೂಜೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಮಾಚ್೯ 27ರಂದು ಸಂಜೆ ದರ್ಶನ ಸೇವೆ ನಡೆದು ಬಳಿಕ ಮಾರಿಯಮ್ಮ ದೇವಿಯ ಬಿಂಬ ವಿಸರ್ಜಿಸಲಾಗುತ್ತದೆ.

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ - ರಥಾರೋಹಣ ಸಂಪನ್ನ

Posted On: 21-03-2024 03:31PM

ಪಡುಬಿದ್ರಿ : ಇಲ್ಲಿನ ನಡ್ಸಾಲು ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಇಂದು ಮಧ್ಯಾಹ್ನ ರಥಾರೋಹಣ ಜರಗಿತು.

ರಥಾರೋಹಣದ ಬಳಿಕ ಮಹಾ ಅನ್ನ ಸಂತರ್ಪಣೆ ನೆರವೇರಿತು.

ಈ ಸಂದರ್ಭ ದೇವಳದ ಅನುವಂಶಿಕ ಮೊಕ್ತೇಸರರುಗಳು, ದೇವಳದ ಆಡಳಿತಾಧಿಕಾರಿ, ದೇವಳದ ತಂತ್ರಿವರ್ಯರು, ಅರ್ಚಕರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

ಉಡುಪಿ : ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಶರ್ಫುದ್ದೀನ್ ಶೇಖ್ ನೇಮಕ

Posted On: 21-03-2024 10:50AM

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನೂತನ ಅಧ್ಯಕ್ಷರಾಗಿ ಕಾಪುವಿನ ಶರ್ಫುದ್ದೀನ್ ಶೇಖ್ ಅವರನ್ನು ನೇಮಕಗೊಳಿಸಲಾಗಿದೆ.

ಎಐಸಿಸಿ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಇಮ್ರಾನ್ ಪ್ರತಾಪಗಢಿ ಅವರು ರಾಜ್ಯದ ವಿವಿಧ ಜಿಲ್ಲೆಗಳ ಅಲ್ಪಸಂಖ್ಯಾತ ಘಟಕಗಳಿಗೆ ಅಧ್ಯಕ್ಷರ ನೇಮಕವನ್ನು ಮಾಡಿದ್ದು ಉಡುಪಿ ಜಿಲ್ಲೆಗೆ ಶರ್ಫುದ್ದೀನ್ ಶೇಖ್ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಆತ್ರಾಡಿ ಅವರನ್ನು ನೇಮಿಸಲಾಗಿದೆ ಎಂದು ರಾಜ್ಯ ಸಂಯೋಜಕರಾದ ಝೀನಲ್ ಗಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾನಪದ ವಿಭೂಷಣ ಪ್ರಶಸ್ತಿಗೆ ಕರುಣಾಕರ ಕೆ. ಕಾಪು ಆಯ್ಕೆ

Posted On: 21-03-2024 10:35AM

ಕಾಪು : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮಹಾರಾಷ್ಟ್ರ ಘಟಕದ ವಾರ್ಷಿಕ ಜಾನಪದ ವಿಭೂಷಣ ಪ್ರಶಸ್ತಿಗೆ ಮೂಲತಃ ಕಾಪುವಿನ ಪ್ರಸ್ತುತ ಉದ್ಯೋಗ ನಿಮಿತ್ತ ಮುಂಬಯಿಯಲ್ಲಿ ವಾಸ್ತವ್ಯವಿರುವ ನಾಟಕಕಾರ, ಜಾನಪದ ರಂಗ ನಿರ್ದೇಶಕ ಕರುಣಾಕರ ಕೆ. ಕಾಪು ಆಯ್ಕೆಯಾಗಿದ್ದಾರೆ.

ಮಾ. 24ರಂದು ಅಪರಾಹ್ನ 2ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಲಿರುವ ಸಂಸ್ಥೆಯ 'ಸಾಂಸ್ಕೃತಿಕ ಜಾನಪದ ಸಿರಿ ಸಿಂಚನ' ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇವರು ಕಾಪುವಿನ ಕೃಷ್ಣಪ್ಪ ಸಾಲ್ಯಾನ್ ಮತ್ತು ಗಿರಿಜಾ ಸಾಲ್ಯಾನ್ ದಂಪತಿ ಪುತ್ರರಾಗಿದ್ದು, ಹುಟ್ಟೂರಿ ನಲ್ಲಿಪ್ರಾಥಮಿಕ ಶಿಕ್ಷಣ ಪೂರೈಸಿ, ಮುಂಬಯಿಗೆ ಬಂದು ಹಗಲಿನಲ್ಲಿ ದುಡಿದು ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯಲ್ಲಿ ಮುಂದಿನ ಶಿಕ್ಷಣ ಪಡೆದರು. ಶಾಲಾ ಜೀವನದಲ್ಲೇ ರಂಗಕಲೆಯ ವೈವಿಧ್ಯತೆಗೆ ಮಾರು ಹೋಗಿ ಕಲೆಯನ್ನು ಮೈಗೂಡಿಸಿಕೊಂಡು ಮುಂಬಯಿಯಲ್ಲಿ ಸಮಾನ ಮನಸ್ಕರೊಂದಿಗೆ ಅಭಿನಯ ಮಂಟಪ ಸಂಸ್ಥೆ ಸ್ಥಾಪಿಸಿದ ಶ್ರೇಯಸ್ಸು ಇವರದ್ದಾಗಿದೆ. ಉತ್ತಮ ಲೇಖಕ, ರಂಗನಿರ್ದೇಶಕರಾಗಿ ಮುಂಬಯಿ ರಂಗಭೂಮಿಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದ್ದಾರೆ. ಸಮರ್ಥ ಸಂಘಟಕರೂ ಆದ ಅವರು ಜನತಾ ಎಜುಕೇಶನ್ ಸೊಸೈಟಿ ಮುಂಬಯಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗಭೂಮಿಗೆ ಕಲಾ ಕಾಣಿಕೆಯಾಗಿ ಹಲವಾರು ನಾಟಕಗಳನ್ನು ಬರೆದು, ನಿರ್ದೇಶಿಸಿದ್ದಾರೆ.

ಇವರ ಸಾಧನೆಯನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.

ಪಡುಬಿದ್ರಿ ಕಡಲ ಕಿನಾರೆಯಲ್ಲಿ ತಿಮಿಂಗಲದ ಪಳೆಯುಳಿಕೆ ಪತ್ತೆ

Posted On: 20-03-2024 10:05PM

ಪಡುಬಿದ್ರಿ : ಇಲ್ಲಿನ ಮುಖ್ಯ ಬೀಚ್‌ನ ಮುಂಭಾಗ 100 ವರ್ಷಕ್ಕಿಂತಲೂ ಹಳೆಯದಾದ400 ಕೆ.ಜಿ. ತೂಕದ ತಿಮಿಂಗಲದ ಮುಖಭಾಗದ ಎಲುಬಿನ ಪಳೆಯುಳಿಕೆ ಕಂಡುಬಂದಿದೆ.

ಅದನ್ನು ಮುಖ್ಯ ಬೀಚ್‌ನ ಸಿಬಂದಿ, ಬ್ಲೂ ಫ್ಲ್ಯಾಗ್ ಬೀಚ್‌ನ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಮೇಲಕ್ಕೆತ್ತಿ ತಂದು ಸ್ವಚ್ಛಗೊಳಿಸಿ ಬ್ಲೂಪ್ಲಾಗ್ ಬೀಚಿನಲ್ಲಿ ಪ್ರವಾಸಿಗರ ಶಾಶ್ವತ ವೀಕ್ಷಣೆಗಾಗಿ ಇಟ್ಟಿದ್ದಾರೆ.

ಈ ಬಗ್ಗೆ ಬ್ಲೂ ಫ್ಲ್ಯಾಗ್ ಬೀಚ್‌ನ ಪ್ರಬಂಧಕ ವಿಜಯ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.

ಉಡುಪಿ : ಹೋಳಿ ಆಚರಣೆಯಲ್ಲಿ ಹಿಂದೂ ಸಂಸ್ಕೃತಿಗೆ ಧಕ್ಕೆ ವಿರೋಧಿಸಿ ವಿಶ್ವ ಹಿಂದು ಪರಿಷದ್ ಬಜರಂಗದಳದಿಂದ ಮನವಿ

Posted On: 19-03-2024 02:35PM

ಉಡುಪಿ : ಹೋಳಿ ಹಬ್ಬದ ಆಚರಣೆಯ ಹೆಸರಿನಲ್ಲಿ ಹಿಂದೂ ಸಂಸ್ಕೃತಿಗೆ ಧಕ್ಕೆ ತರುವುದನ್ನು ವಿರೋಧಿಸಿ ಉಡುಪಿಯಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಯವರಿಗೆ ವಿಶ್ವ ಹಿಂದು ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ವಿಶ್ವ ಹಿಂದು ಪರಿಷದ್ ಪ್ರಾಂತೀಯ ಪ್ರಮುಖ್ ಸುನಿಲ್ ಕೆ. ಆರ್, ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಬಜರಂಗದಳ ಉಡುಪಿ ಜಿಲ್ಲಾ ಸಂಯೋಜಕ್ ಚೇತನ್ ಪೇರಲ್ಕೆ, ಬಜರಂಗದಳ ಉಡುಪಿ ಜಿಲ್ಲಾ ಸಹ ಸಂಯೋಜಕ್ ಮನೋಜ್ ಮಲ್ಪೆ, ಬಜರಂಗದಳ ಉಡುಪಿ ಜಿಲ್ಲಾ ಸುರಕ್ಷಾ ಪ್ರಮುಖ ರಾಜೇಶ್ ಕೋಟ್ಯಾನ್, ಜಿಲ್ಲಾ ಸೇವಾ ಪ್ರಮುಖ್ ವಿಖ್ಯಾತ್ ಭಟ್, ವಿಶ್ವ ಹಿಂದು ಪರಿಷದ್ ವಿದ್ಯಾರ್ಥಿ ಪ್ರಮುಖ್ ಕಿರಣ್ ಮಲ್ಪೆ ಮತ್ತಿತರರು ಉಪಸ್ಥಿತರಿದ್ದರು.