Updated News From Kaup
ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ಬೆಳಪು : 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Posted On: 15-08-2024 11:16PM
ಕಾಪು : ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ಬೆಳಪು ಇಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿಯವರು ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸೇವಾದಳದ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು ಮತ್ತು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಈ ಕಾರ್ಯಕ್ರಮದಲ್ಲಿ ಶಾಲಾ ಎಸ್ಡಿಎಮ್ಸಿ ಅಧ್ಯಕ್ಷರು, ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರು, ಶಿಕ್ಷಕ ಶಿಕ್ಷಕಿ ವೃಂದ, ಪೋಷಕರು ಉಪಸ್ಥಿತರಿದ್ದರು.
ಪಡುಬಿದ್ರಿಯ ಕಂಚಿನಡ್ಕ ಟೋಲ್ ಗೇಟ್ : ನಾನು ಕೊಟ್ಟ ಮಾತನ್ನು ಎಂದೂ ತಪ್ಪಿದವಳಲ್ಲ - ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

Posted On: 15-08-2024 11:10PM
ಪಡುಬಿದ್ರಿ : ರಾಜ್ಯ ಹೆದ್ದಾರಿಯಲ್ಲಿ ಕಂಚಿನಡ್ಕ ಬಳಿ ನಿರ್ಮಿಸಲು ಮುಂದಾಗಿರುವ ಟೋಲ್ ಗೇಟ್ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಗುರುವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಸ್ಥಳೀಯರ ವಿರೋಧದ ನಡುವೆ ಟೋಲ್ ಗೇಟ್ ನಿರ್ಮಿಸುವುದು ಸರಿಯಲ್ಲ. ದಿನಂಪ್ರತಿ ಓಡಾಡುವ ರಸ್ತೆಗೆ ಎರಡೆರಡು ಬಾರಿ ಟೋಲ್ ಶುಲ್ಕ ಕಟ್ಟಲು ಸಾಧ್ಯವಿಲ್ಲ. ಈ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ನಾನು ಕೊಟ್ಟ ಮಾತನ್ನು ಎಂದೂ ತಪ್ಪಿದವಳಲ್ಲ. ಕಳೆದ ತಿಂಗಳು ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕಾಲೇಜಿನ ರದ್ದತಿ ಆದೇಶವನ್ನು ವಾಪಸ್ ಪಡೆಯಲಾಗಿದೆ. ಕೊಟ್ಟ ಮಾತಿನಂತೆ ನಡೆದ ಫಲವಾಗಿ ಇಂದು ನೌಕರರು ನೆಮ್ಮದಿಯಿಂದ ಇದ್ದಾರೆ. ಈಗ ಟೋಲ್ ಗೇಟ್ ವಿಚಾರದಲ್ಲಿ ಜನರ ಪರ ಇರುವೆ ಎಂದು ಸಚಿವರು ತಿಳಿಸಿದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಆಗಸ್ಟ್ 24ರ ಸಾರ್ವಜನಿಕ ಪ್ರತಿಭಟನೆಯ ಕಾವು ಏರುತ್ತಿದೆ. ಪಡುಬಿದ್ರಿಯಿಂದ ಕಾರ್ಕಳದವರೆಗೂ ಇರುವ ಸುಮಾರು 40 ಗ್ರಾಮಗಳ ಜನತೆಗೆ ಕಬ್ಬಿಣದ ಕಡಲೆಯಾಗಬಲ್ಲ ಕಂಚಿನಡ್ಕ ಟೋಲ್‌ಗೇಟ್ ತಮಗೆ ಬೇಡವೇ ಬೇಡ ಎಂದರು. ಹೋರಾಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಅವರು ಮಾತನಾಡಿ, ನಾವು ಪ್ರಸ್ತಾವಿತ ಟೋಲ್‌ಗೇಟ್‌ಗೆ ಸಂಪೂರ್ಣ ವಿರೋಧ ವ್ಯಕ್ತ ಪಡಿಸುತ್ತೇವೆ ಎಂದರು. ಸಮಿತಿಯು ಸಿದ್ಧಪಡಿಸಿದ ಈ ಕುರಿತಾದ ಮನವಿಯೊಂದನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಸಂದರ್ಭ ಅವರಿಗೆ ನೀಡಲಾಯಿತು
ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಅರುಣ್ ಕುಮಾರ್, ಉಡುಪಿ ಜಿ. ಪಂ. ಸಿಇಒ ಪ್ರತೀಕ್ ಬಾಯಲ್, ನೂರಾರು ಮಂದಿ ಪ್ರತಿಭಟನಾಕಾರು ಉಪಸ್ಥಿತರಿದ್ದರು. ಸರ್ವಜ್ಞ ತಂತ್ರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಪಡುಬಿದ್ರಿ ರೈಲು ನಿಲ್ದಾಣದಲ್ಲಿ ಮತ್ಸ್ಯಗಂಧ ನಿಲುಗಡೆಗೆ ರೈಲ್ವೆ ಸಚಿವರಿಗೆ ಕಾಪು ಶಾಸಕರಿಂದ ಮನವಿ

Posted On: 15-08-2024 10:56PM
ಕಾಪು : ಪಡುಬಿದ್ರಿ - ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ ಲೋಕಮಾನ್ಯ ತಿಲಕ್ ಮತ್ಸ್ಯಗಂಧ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಗುರುವಾರ ಸಂಜೆ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣನವರಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ ಸಲ್ಲಿದರು. ಕಾಪು ಮಂಥನ ಬೀಚ್ ರಿಸಾರ್ಟ್‌ಗೆ ಔಪಚಾರಿಕ ಭೇಟಿ ಸಂದರ್ಭ ಮನವಿ ನೀಡಿದರು.
ಮನವಿಯಲ್ಲಿ, ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಣಿಯೂರು ಗ್ರಾಮದಲ್ಲಿರುವ ಪಡುಬಿದ್ರಿ ರೈಲ್ವೆ ನಿಲ್ದಾಣದಲ್ಲಿ ಮಂಗಳೂರು ಕುರ್ಲಾ ಲೋಕಮಾನ್ಯ ತಿಲಕ್ ಮತ್ಸ್ಯಗಂಧ ರೈಲ್ವೆ ನಿಲುಗಡೆಗೆ ಅವಕಾಶ ನೀಡಬೇಕು.
ಉಚ್ಚಿಲ ಗ್ರಾಮವು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಪಡುಬಿದ್ರಿ, ಹೆಜಮಾಡಿ, ಎರ್ಮಾಳು, ತೆಂಕ, ಬೆಳಪು, ಶಿರ್ವ, ಮುದರಂಗಡಿ ಹಾಗೂ ಕಾರ್ಕಳದ ಕಡೆಯಿಂದ ನೂರಾರು ಜನರು ಮಂಬಯಿಗೆ ಪ್ರವಾಸ ಬೆಳೆಸಲು, ದೂರದ ಉಡುಪಿ ಅಥವಾ ಮೂಲ್ಕಿ ನಿಲ್ದಾಣಕ್ಕೆ ಹೋಗಬೇಕಿದೆ. ಮುಂಬಯಿಯಿಂದ ಪ್ರಯಾಣಿಸುವರಿಗೆ ಪಡುಬಿದ್ರಿ - ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೊಂಡರೆ ಸಹಕಾರಿ ಆಗಲಿದೆ. ತಾವು ಪಡುಬಿದ್ರೆ ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ ಮತ್ಸ್ಯಗಂಧ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವಲ್ಲಿ ಸೂಕ್ತ ಕ್ರಮ ವಹಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾಪು ಪುರಸಭಾ ಸದಸ್ಯರಾದ ಹರಿಣಾಕ್ಷಿ, ಶೈಲೇಶ್, ರತ್ನಾಕರ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ರೈತ ಮೋರ್ಚಾದ ಕೃಷ್ಣ ರಾವ್, ಹರೀಶ್ ಶೆಟ್ಟಿ ಗುರ್ಮೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುಶಲ ಶೇಖರ್ ಶೆಟ್ಟಿ ಇಂಟರ್ ನ್ಯಾಷನಲ್ ಹಾಲ್ ಕಾಪು ಕಳತ್ತೂರು : 78ನೇ ಸ್ವಾತಂತ್ರೋತ್ಸವ ಆಚರಣೆ

Posted On: 15-08-2024 10:45PM
ಕಾಪು : ಕುಶಲ ಶೇಖರ್ ಶೆಟ್ಟಿ ಇಂಟರ್ ನ್ಯಾಷನಲ್ ಹಾಲ್ ಹಾಗೂ ಫ್ರೆಂಡ್ಸ್ ಕ್ಲಬ್ ಕಳತ್ತೂರು ಜಂಟಿಯಾಗಿ ಆಯೋಜಿಸಿದ್ದ 78ನೇ ಸ್ವಾತಂತ್ರೋತ್ಸವದ ನಿಮಿತ್ತ ಕಾರ್ಯಕ್ರಮದಲ್ಲಿ ರಾಜ್ಯ ದತ್ತಿ ನಿಧಿ ಪ್ರಶಸ್ತಿ ಪುರಸ್ಕೃತರಾದ ದಿವಾಕರ ಬಿ. ಶೆಟ್ಟಿ ಕಳತ್ತೂರು ಇವರು ಧ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ಕುಶಲ ಶೇಖರ್ ಶೆಟ್ಟಿ ಅಡಿಟೋರಿಯಂನ ಆಡಳಿತ ನಿರ್ದೇಶಕ ಶೇಖರ್ ಬಿ.ಶೆಟ್ಟಿ ಕಳತ್ತೂರು, ಕುತ್ಯಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಜನಾರ್ಧನ್ ಆಚಾರ್ಯ, ಫ್ರೆಂಡ್ಸ್ ಗ್ರೂಪ್ ನ ಅಧ್ಯಕ್ಷ ರೋಹಿತ್, ರಂಗನಾಥ ಶೆಟ್ಟಿ, ಸುನೀತ ರಂಗನಾಥ ಶೆಟ್ಟಿ, ಅಮರನಾಥ ಶೆಟ್ಟಿ ಪಾಂಗಾಳ, ಸುಂದರ್ ರ ಬಿ. ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಶಶಾಂಕ್ ಮಡಿವಾಳ ವಂದಿಸಿದರು.
ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ : 78ನೇ ಸ್ವಾತಂತ್ರ್ಯ ದಿನಾಚರಣೆ

Posted On: 15-08-2024 05:03PM
ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ನೆರವೇರಿಸಿದರು.
ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕರುಣಾಕರ್ ಎಮ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೆ ಪಿಸಿ ಸಿ ಸಂಯೋಜಕರಾದ ನವೀನ್ ಚಂದ್ರ ಜೆ ಶೆಟ್ಟಿ, ವೈ ಸುಕುಮಾರ್, ನವೀನ್ ಎನ್ ಶೆಟ್ಟಿ, ಅಬ್ದುಲ್ ರೆಹಮಾನ್, ರಮೀಜ್ ಹುಸೇನ್, ನಿಯಾಝ್, ಕೀರ್ತಿ ಕುಮಾರ್, ದಿನೇಶ್ ಕಂಚಿನಡ್ಕ, ಸಂಜೀವಿ ಪೂಜಾರಿ, ಲಿಯಾತತ್, ಮುನ್ನ, ಜ್ಯೋತಿ ಮೆನನ್, ವೈ ಸುಧೀರ್ ಕುಮಾರ್, ಸುಚರಿತ,, ಸುನಂದಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಧಾಕರ್ ಕೆ ನಿರೂಪಿಸಿ, ವಂದಿಸಿದರು.
ಕಾಪು : ದಂಡತೀರ್ಥ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Posted On: 15-08-2024 04:32PM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾಪು ರೋಟರಿ ಕ್ಲಬ್ ನ ಅಧ್ಯಕ್ಷರಾದ ಬಾಲಕೃಷ್ಣ ಆಚಾರ್ಯ ಇವರು ಮಾತನಾಡಿ, ದೇಶದಾದ್ಯಂತ ಇಂದು ಶಾಲಾ-ಕಾಲೇಜು, ಸರಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಹಳ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶಕ್ಕಾಗಿ ತ್ಯಾಗ - ಬಲಿದಾನಗೈದ ವೀರ ನಾಯಕರನ್ನು ಸ್ಮರಿಸುತ್ತಿದ್ದೇವೆ. ವಿದ್ಯಾರ್ಥಿಗಳಾದ ತಾವು ಇಂತಹ ನಾಯಕರ ದೇಶಭಕ್ತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಮೂಡಿಬರಬೇಕು ಹಾಗೂ ಪರಸ್ಪರ ಸಮಾನತೆ, ಪ್ರೀತಿ, ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂಬ ಸಂದೇಶವನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಚಾಲಕರಾದ ಡಾ| ಕೆ. ಪ್ರಶಾಂತ್ ಶೆಟ್ಟಿಯವರು ವಹಿಸಿದ್ದರು.
ಸಮಾರಂಭದಲ್ಲಿ ಪ್ರಾಂಶುಪಾಲರಾದ ನೀಲಾನಂದ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥರುಗಳಾದ ಗೇಬ್ರಿಯಲ್ ಫ್ರೇಂಕಿ ಮಸ್ಕರೇನ್ಹಸ್, ಕೃಪಾ ಅಮ್ಮನ್ನ, ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಶೆಟ್ಟಿ ಹಾಗೂ ಶಿಕ್ಷಕ - ಶಿಕ್ಷಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ರಿತಿಕಾ. ಆರ್. ಶೆಟ್ಟಿ ಕಾರ್ಯಕ್ರಮದ ಕುರಿತು ಮಾತನಾಡಿದರು. ಕುಶಿ. ಆರ್. ಶೆಟ್ಟಿ ಸ್ವಾಗತಿಸಿ, ಶಿಫಾನ ವಂದಿಸಿದರು. ಕಾರ್ಯಕ್ರಮವನ್ನು ಅಮೂಲ್ಯ ರಾವ್ ನಿರೂಪಿಸಿದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು : ಆನ್ ಲೈನ್ ವ್ಯಾಸಂಗ, ಸಮಾಲೋಚನೆ ಕೋರ್ಸ್‌ಗಳ ಆರಂಭ

Posted On: 15-08-2024 04:21PM
ಉಚ್ಚಿಲ : ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು ವತಿಯಿಂದ ಉಡುಪಿ ಜಿಲ್ಲೆಯ 20 ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಐ.ಐ.ಟಿ - ಮದ್ರಾಸ್ ಇವರಿಂದ ಆನ್ ಲೈನ್ ವ್ಯಾಸಂಗ ಹಾಗೂ ಸಮಾಲೋಚನೆ ಕೋರ್ಸ್‌ಗಳ ಆರಂಭ ಸಮಾರಂಭ ಗುರುವಾರ ಉಚ್ಚಿಲ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆಯಿತು.

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಐ.ಐ.ಟಿ - ಮದ್ರಾಸ್ ಇವರಿಂದ ನೀಡುವ ಆನ್ ಲೈನ್ ವ್ಯಾಸಂಗ ಹಾಗೂ ಸಮಾಲೋಚನೆ ಕೋರ್ಸ್‌ಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು ಅಧ್ಯಕ್ಷರಾದ ಡಾ. ಹೆಜ್.ಎಸ್ ಶೆಟ್ಟಿ, ಐ.ಐ.ಟಿ ಮದ್ರಾಸ್ ಪ್ರವರ್ತಕ ಟೆಕ್ನಾಲಜಿ ಚನೈ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಎಂ.ಜೆ ಶಂಕರಮಣ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಹೊಸ ಹೊಸ ದಿಗಂತ ಕನ್ನಡ ದೈನಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಿ.ಎಸ್ ಪ್ರಕಾಶ್, ಶಾಲಾ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಕೆ ಗಣಪತಿ, ಉಡುಪಿ ಜಿಲ್ಲಾ ಪದವಿ ಪೂರ್ವ ವಿಭಾಗದ ಉಪ ನಿರ್ದೇಶಕರಾದ ಮಾರುತಿ, ಐ.ಐ.ಟಿ ಮದ್ರಾಸ್ ಮುಖ್ಯ ನಿರ್ವಹಣಾಧಿಕಾರಿಗಳಾದ ಜಿ. ವೀರರಾಘವನ್ ಉಪಸ್ಥಿತರಿದ್ದರು.
ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಪಲಿಮಾರು : ಶ್ರಮದಾನ ; ಆಶ್ರಮ ಭೇಟಿ

Posted On: 15-08-2024 04:12PM
ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಪಲಿಮಾರು ತಂಡದ ನೇತೃತ್ವದಲ್ಲಿ ಆಗಸ್ಟ್ 15ರಂದು ಅವರಾಲು ಪರಿಸರದ ರಸ್ತೆ ಹಾಗೂ ಅಂಗನವಾಡಿ ಕೇಂದ್ರದ ಬಳಿ ಶ್ರಮದಾನ ಹಾಗೂ ಕಾರುಣ್ಯ ಆಶ್ರಮ ಕಟಪಾಡಿ ಇಲ್ಲಿಗೆ ಭೇಟಿ ನೀಡಿ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

ಶಿರ್ವ : ಫೈಝುಲ್ ಇಸ್ಲಾಂ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ

Posted On: 15-08-2024 03:46PM
ಶಿರ್ವ : ಇಲ್ಲಿನ ಫೈಝುಲ್ ಇಸ್ಲಾಂ ಶಾಲೆಯಲ್ಲಿ ಗುರುವಾರ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಪ್ರಮುಖರಾದ ಉಮರ್ ಇಸ್ಮಾಯಿಲ್ ಧ್ವಜಾರೋಹಣಗೈದು ಸಂದರ್ಭೋಚಿತವಾಗಿ ಮಾತನಾಡಿದರು.

ಸ್ವಾತಂತ್ರ್ಯ ದಿನದ ನಿಮಿತ್ತ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ಪರ್ವೆಜ್ ಸಲೀಮ್, ಯಾಕಿನುಲ್ಲ, ಶಾಲಾ ಮುಖ್ಯ ಶಿಕ್ಷಕಿ ಖೈರುನ್ನೀಸ, ಕಾರ್ಯದರ್ಶಿ ಹಪ್ಸಾ, ವಫಾ, ಉಷಾ, ಶಬನಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ಅಲಕಮಾ ಕಾರ್ಯಕ್ರಮ ನಿರೂಪಿಸಿದರು.
ಕಾಪು ಜೆಸಿಐ : 78 ನೇ ಸ್ವಾತಂತ್ರ್ಯ ದಿನಾಚರಣೆ

Posted On: 15-08-2024 03:33PM
ಕಾಪು : ಇಲ್ಲಿನ ಜೆಸಿಐ ವತಿಯಿಂದ 78 ನೇ ಸ್ವಾತಂತ್ರೋತ್ಸವವನ್ನು ಜೇಸಿ ಸಭಾಭವನದ ಮುಂಭಾಗ ಅಧ್ಯಕ್ಷರಾದ ಸುಖಲಾಕ್ಷಿ ಬಂಗೇರ ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದರು.
ಈ ಸಂದರ್ಭ ಕಾಪು ಜೇಸಿಐ ಸಂಸ್ಥೆಯ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.