Updated News From Kaup

ಕಾಪು : ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನ - ವ್ಯಸನ‌ ಮುಕ್ತ ದಿನಾಚರಣೆ

Posted On: 01-08-2024 07:54PM

ಕಾಪು : ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ವ್ಯಸನ‌ ಮುಕ್ತ ದಿನಾಚರಣೆಯಾಗಿ ಕಾಪು ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ಆಚರಿಸಲಾಯಿತು.

ಈ ಸಂದರ್ಭ ಮಾತನಾಡಿದ ತಹಶಿಲ್ದಾರ್ ಡಾ. ಪ್ರತಿಭಾ ಆರ್ ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು, ಅವರ ಬದುಕೇ ನಮಗೆ ಪ್ರೇರಣೆ . ನಿರಂತರ ಅನ್ನದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್‌ ಸ್ಥಾಪನೆ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ ಸ್ಥಾಪನೆ, ನಿಸರ್ಗ ಚಿಕಿತ್ಸೆ, ಯೋಗ ಕೇಂದ್ರ ಸ್ಥಾಪನೆ, ಶಾಖಾ ಮಠಗಳಿಗೆ ಪ.ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಪಟ್ಟಾಭಿಷೇಕ ಮಾಡಿದ್ದು, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ಮಾಡಿದ್ದು, ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿ ಬದುಕಲು ನೀಡಿದ್ದು ಮುಂತಾದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಡಿ ಡಿ ಎಲ್ ಆರ್ ರವೀಂದ್ರ, ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಮಾತನಾಡಿದರು. ಈ ಸಂದರ್ಭ ವ್ಯಸನದಿಂದ ದೂರ ಇರುತ್ತೇವೆಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಈ ಸಂದರ್ಭ ಡಿ ಡಿ ಎಲ್ ಆರ್ ರವೀಂದ್ರ, ಪುರಸಭಾ ಮುಖ್ಯಾಧಿಕಾರಿ ನಾಗರಾಜ್, ಉಪ ತಹಶಿಲ್ದಾರ್ ಗಳಾದ ದೇವಕಿ, ರವಿಕಿರಣ್, ಅಶೋಕ್, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ತಾಲ್ಲೂಕು ಆಡಳಿತ ಸೌಧದ ಸಿಬ್ಬಂದಿ ಉಪಸ್ಥಿತರಿದ್ದರು. ಉಪ ತಹಶಿಲ್ದಾರ್ ದೇವಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಂಟಕಲ್ಲು ಬಸ್ ನಿಲ್ದಾಣದಲ್ಲಿ ಕಸಾಪ "ಮನೆಯೇ ಗ್ರಂಥಾಲಯ" ಅಭಿಯಾನ

Posted On: 01-08-2024 07:42PM

ಬಂಟಕಲ್ಲು : ನಾಗರಿಕ ಸಮಿತಿ ಬಂಟಕಲ್ಲು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹಾಗೂ ಕಾಪು ತಾಲೂಕು ಘಟಕದ ವತಿಯಿಂದ ಆಯೋಜಿಸಿರುವ ಮನೆಯೇ ಗ್ರಂಥಾಲಯ ಅಭಿಯಾನದ ಅಂಗವಾಗಿ ಬಂಟಕಲ್ಲಿನ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಅವರಿಗೆ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ ಅವರು ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಉಡುಪಿ ತಾಲೂಕಿನಲ್ಲಿ ಈಗಾಗಲೇ 65 ಗ್ರಂಥಾಲಯಗಳು ಮನೆ, ಅಂಗಡಿ, ಆಸ್ಪತ್ರೆ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣಗೊಂಡಿದೆ. 100 ದಿನಗಳಲ್ಲಿ ನೂರು ಗ್ರಂಥಾಲಯ ನಿರ್ಮಾಣಗೊಳ್ಳುವ ಆಶಯವನ್ನು ಹೊಂದಿದ್ದು, ಕಸಾಪ ಕಾಪು ತಾಲೂಕು ಘಟಕ ಈ ಅಭಿಯಾನ ದಲ್ಲಿ ನಮ್ಮೊಂದಿಗೆ ಸಹಕರಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಮಾಧವ ಕಾಮತ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೊಶಾಧಿಕಾರಿ ಜಗದೀಶ ಆಚಾರ್ಯ, ಸದಸ್ಯರಾದ ವೈಲೆಟ್ ಕಾಸ್ತಲಿನೂ, ಉಮೇಶ್ ರಾವ್, ಡೆನೀಸ್ ಡಿ ಸೋಜ, ವಿನ್ಸಂಟ್ ಕಾಸ್ತಲಿನೂ, ಅಶೋಕ, ಹರೀಶ್, ವಿರೇಂದ್ರ ಪಾಟ್ಕರ್, ವಿಶ್ವನಾಥ್ ಬಾಂದೇಲ್ಕರ್, ಸುನೀಲ್, ಕಸಾಪ ಉಡುಪಿ ತಾಲೂಕು ಕಾಯ೯ದಶಿ೯ಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಮನೆಯೇ ಗ್ರಂಥಾಲಯ ಇದರ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು, ದೀಪಾ ಚಂದ್ರಕಾಂತ್ ಉಪಸ್ಥಿತರಿದ್ದರು.

ನಾಳೆ (ಆಗಸ್ಟ್ 2) : ಮಳೆ ಹಿನ್ನೆಲೆ - ಉಡುಪಿ ಜಿಲ್ಲೆಯ ಪಿಯುಸಿವರೆಗಿನ ಮಕ್ಕಳಿಗೆ ರಜೆ

Posted On: 01-08-2024 07:17PM

ಉಡುಪಿ : ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಗಸ್ಟ್ 2ರಂದು (ನಾಳೆ) ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ.

ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.

ಇಂದು (ಆಗಸ್ಟ್ 1) ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆ

Posted On: 01-08-2024 12:55PM

ಪಡುಬಿದ್ರಿ : ಕಾನನದ ನಡುವಿನ ದೈವಿಕ ತಾಣ, ಮರಳೇ ಪ್ರಸಾದವಾಗಿ ಬಡವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರೂ ನೆಲದ ಮೇಲೆಯೇ ಕುಳಿತುಕೊಂಡು ಭಕ್ತಿ ಪರವಶವಾಗುವ ಕ್ಷೇತ್ರವೇ ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನ. ಎರಡು ವರ್ಷಕ್ಕೊಮ್ಮೆ ನಡೆಯುವ ಢಕ್ಕೆಬಲಿ ಸೇವೆ ವಿಶೇಷವಾಗಿದೆ. ಶ್ರೀ ಕ್ಷೇತ್ರದಲ್ಲಿ ಭಕ್ತ ಜನರು ಪಂಚಾಮೃತ ಸೇವೆ, ಹಗಲು ತಂಬಿಲ,ರಾತ್ರಿ ತಂಬಿಲ ಸೇವೆ ಸಲ್ಲಿಸಲು ಅವಕಾಶವಿದೆ. ಕರ್ಕಾಟಕ (ಆಟಿ) ಮಾಸದಲ್ಲಿ ಈ ಸೇವೆಗಳು ನಡೆಯದಿದ್ದರೂ, ಈ ತಿಂಗಳ 16 ನೇ ದಿನದಂದು ನಡೆಯುವ ಅಜಕಾಯಿ ಸೇವೆ ಪ್ರಮುಖವಾಗಿದೆ.

ಅಜಕಾಯಿ ಸೇವೆಯ ಮುನ್ನ ಕ್ಷೇತ್ರದಲ್ಲಿಯ ಮರಳನ್ನು ಬದಲಾಯಿಸಲಾಗುತ್ತದೆ. ಕ್ಷೇತ್ರದ ದೇವರ ಸೇವಕರು ಸಮುದ್ರದೆಡೆಗೆ ಸಾಗಿ ಅಲ್ಲಿ ಮಿಂದು, ಸೊಂಟಮಟ್ಟದ ಸಮುದ್ರದ ನೀರಿನಿಂದ ತೆಗೆಯಲಾಗುವ ಮರಳನ್ನು ಶ್ರೀ ಖಡೇಶ್ವರೀ ಬ್ರಹ್ಮಸ್ಥಾನಕ್ಕೆ ತಂದು ಸಾನಿಧ್ಯದಲ್ಲಿ ಹರಡುತ್ತಾರೆ. ನಂತರ ನಾಗ ದೇವರಿಗೆ ಎಳನೀರಿನ ಅಭಿಷೇಕ, ಅಲಂಕಾರ ನಡೆಯುತ್ತದೆ.

ನಂತರ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ದೇವರಲ್ಲಿ ಪ್ರಾರ್ಥಿಸಿ ತೆಂಗಿನಕಾಯಿಯನ್ನು ಸಮರ್ಪಿಸಿದ ಬಳಿಕ ಭಕ್ತ ಜನರಿಂದ ಬಂದ ಸಾವಿರಾರು ಕಾಯಿಗಳನ್ನು ಅಜಕಾಯಿ ಕಲ್ಲಿಗೆ ಕ್ಷೇತ್ರದ ಪಾತ್ರಿಗಳು ಒಡೆಯುತ್ತಾರೆ. ನಂತರ ಭಕ್ತರಿಗೆ ಪ್ರಸಾದ ರೂಪವಾಗಿ‌ ಹಂಚಲಾಗುತ್ತದೆ.

ಈ ದಿನ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಯ ಭಕ್ತರು ಸುಮಾರು 10 ಸಾವಿರಕ್ಕೂ ಅಧಿಕ ತೆಂಗಿನಕಾಯಿ, ಎಳನೀರು ಸಮರ್ಪಿಸುತ್ತಾರೆ.

ಕುಂದಾಪುರ : ಬೃಹತ್ ಗಾತ್ರದ ಹೆಬ್ಬಾವು - ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಟ್ಟ ತಂಡ

Posted On: 31-07-2024 10:01PM

ಕುಂದಾಪುರ : ತಾಲೂಕಿನ ಗಂಗೊಳ್ಳಿ ಗ್ರಾಮದ ಲ್ಯೆಟ್ ಹೌಸ್ ಸಮೀಪ ಗದ್ದೆಮನೆ ನರಸಿಂಹ ಪೂಜಾರಿಯವರ ವಾಸ್ತವ್ಯದ ಮನೆಯ ಸಮೀಪ ಬಂದ 16 ಕೆ.ಜಿ. ತೂಕದ 11 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಒಂದನ್ನು ಸುರಕ್ಷಿತವಾಗಿ ಹಿಡಿದು, ರಕ್ಷಿತಾರಣ್ಯದಲ್ಲಿ ಬಿಡಲಾಯಿತು.

ಸದ್ರಿ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಗಣೇಶ ಖಾರ್ವಿ, ವಿಶ್ವನಾಥ ಗಂಗೊಳ್ಳಿ, ಸುಂದರ ಪಿ, ನಾಗೇಂದ್ರ, ನಾಗರಾಜ ಖಾರ್ವಿ, ವಿಶ್ವನಾಥ ಪೂಜಾರಿ, ರತ್ನಾಕರ ಪೂಜಾರಿ, ಸಂದೀಪ ಪೂಜಾರಿ, ರಾಜು ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.

ವಯನಾಡ್ ಭೂಕುಸಿತ : ಸರ್ವ ಸಹಕಾರಕ್ಕೂ ಸಿದ್ಧ - ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ

Posted On: 31-07-2024 09:45PM

ಉಡುಪಿ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತೀವ್ರ ಕಳವಳ ವ್ಯಕ್ತಪಡಿಸಿದ್ದು, ದುರಂತದಲ್ಲಿ ನಿರಾಶ್ರಿತರಾದವರ ನೆರವಿಗೆ ಧರ್ಮಪ್ರಾಂತ್ಯ ಎಲ್ಲಾ ರೀತಿಯ ಸಹಕಾರ ನೀಡಲು ಬಯಸಿದೆ ಎಂದು ಹೇಳಿದ್ದಾರೆ.

ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದಿಂದ ಮಾಹಿತಿಗಳ ಪ್ರಕಾರ ಈಗಾಗಲೇ 150ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದು ಅವರುಗಳ ಹುಡುಕಾಟ ಕಾರ್ಯ ನಡೆಯುತ್ತಿದೆ. ಅಲ್ಲದೆ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕತ್ಸೆ ಪಡೆಯುತ್ತಿದ್ದು, ಎಲ್ಲಾ ಸಂತ್ರಸ್ತರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ಕಾರ್ಯಾದಲ್ಲಿ ಸೇನೆ, ಸರಕಾರದೊಂದಿಗೆ ಎಲ್ಲಾ ಸ್ವಯಂ ಸೇವಾ ಸಂಘಟನೆಗಳು ಕೈ ಜೋಡಿಸಿವೆ.

ಭೂಕುಸಿತ, ಜಲಸ್ಫೋಟ ಹಾಗೂ ಕರ್ನಾಟಕದ ಹಲವೆಡೆ ಕೂಡ ಭಾರೀ ಮಳೆಯಿಂದ ಅಪಾರ ಹಾನಿಯಾಗುತ್ತಿದೆ. ಇವೆಲ್ಲವುಗಳಿಂದ ರಕ್ಷಣೆ ಪಡೆಯಲು ಹಾಗೂ ಮೃತರ ಆತ್ಮಗಳ ಸದ್ಗತಿಗಾಗಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ಸೂಚಿಸಲಾಗಿದೆ. ಅಲ್ಲದೆ ನಿರಾಶ್ರಿತರು ಮತ್ತೆ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ನೆರವನ್ನು ಧರ್ಮಪ್ರಾಂತ್ಯದ ವತಿಯಿಂದ ಸಂಗ್ರಹಿಸಿ ನೀಡಲು ಈಗಾಗಲೇ ನಿರ್ಧರಿಸಲಾಗಿದ್ದು ಸಹೃದಯ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವು ನೀಡಲು ಧರ್ಮಾಧ್ಯಕ್ಷರು ಮನವಿ ಮಾಡಿದ್ದಾರೆ.

ಆಗಸ್ಟ್ 1 (ನಾಳೆ) : ಮಳೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ

Posted On: 31-07-2024 08:46PM

ಉಡುಪಿ : ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜ್‌ಗಳಿಗೆ ಗುರುವಾರ(ಆಗಸ್ಟ್-01) ರಂದು ಜಿಲ್ಲಾಡಳಿತ ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಕಾಪು : ಇನ್ನಂಜೆ ಮಹಿಳಾ ಮಂಡಳಿ - ಆಟಿಡೊಂಜಿ ದಿನ ಕಾರ್ಯಕ್ರಮ

Posted On: 31-07-2024 07:43PM

ಕಾಪು : ಇನ್ನಂಜೆ ಮಹಿಳಾ ಮಂಡಳಿ (ರಿ.) ಇದರ ವತಿಯಿಂದ ನಡೆದ "ಆಟಿಡೊಂಜಿ ದಿನ" ಕಾರ್ಯಕ್ರಮವು ಜುಲೈ 28ರಂದು ಇನ್ನಂಜೆ ಯುವಕ ಮಂಡಲದ ಸುವರ್ಣ ಸಭಾಭವನದಲ್ಲಿ ನಡೆಯಿತು. ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಸಖುನಂದನ್ ಕುಮಾರ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿವೃತ್ತ ಅಧಿಕಾರಿ ಮೀರಾರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹಿಂದಿನ ಕಾಲದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಭಾಷೆ, ಹಬ್ಬಗಳು, ಆಹಾರಗಳ ಬಗ್ಗೆ ತಿಳಿಸುತ್ತಾ ಇದು ನಾಶವಾಗದಂತೆ ಉಳಿಸಿ ಆಚರಿಸಿ ಮುಂದಿನ ಜನಾಂಗಕ್ಕೆ ತಿಳಿಸಿ ಉಳಿಸುವ ಜವಾಬ್ದಾರಿ ನಮ್ಮ ಮಹಿಳೆಯರಿಗಿದೆ. ತುಳು ಸಾಂಸ್ಕೃತಿಯ ಚಿಂತನೆ ಕಾಲಮಾನದ ಬಗ್ಗೆ ಆಟಿಯ ತಿನಿಸುಗಳಲ್ಲಿರುವ ಪೌಷ್ಟಿಕಾಂಶ , ಔಷಧೀಯ ಗುಣಗಳ ಬಗ್ಗೆ ತಿಳಿಸಿದರು. ಗ್ರಾಮದ ಹಿರಿಯ ನಾಟಿ ವೈದ್ಯರಾದ ನಾಗಿ ಮಡಿವಾಳ ಹಾಗೂ ಕಮಲ ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮಹಿಳಾ ಮಂಡಲದ ಅಧ್ಯಕ್ಷೆ ಶ್ವೇತಾ ಲಕ್ಷ್ಮಣ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು.

ವೇದಿಕೆಯಲ್ಲಿ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿ, ಮಂಡಳಿಯ ಉಪಾಧ್ಯಕ್ಷರಾದ ವಸಂತಿ ಆಚಾರ್ಯ, ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮಂಜುಳಾ ನಾಯ್ಕ್, ಮಂಡಳಿಯ ಗೌರವ ಆಹ್ವಾನಿತರಾದ ಪರಿಮಳಾ ರಮೇಶ್ ಮಿತ್ತಂತಾಯ, ಕಾರ್ಯದರ್ಶಿ ಸಿಲ್ವಿಯಾ ವಿನಿಫೈಡ್ ಕ್ಯಾಸ್ತಲಿನೋ ಉಪಸ್ಥಿತರಿದ್ದರು. ಅಧ್ಯಕ್ಷೆ ಶ್ವೇತಾ ಲಕ್ಷ್ಮಣ್ ಶೆಟ್ಟಿ ಸ್ವಾಗತಿಸಿದರು. ಟ್ರೀಜಾ ಮೆಚಾಡೋರವರು ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಸಿಲ್ವಿಯಾ ವಿನಿಫೈಡ್ ಕ್ಯಾಸ್ತಲಿನೋ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಂಡಳಿಯ ಸದಸ್ಯರಿಗೆ ವಿಶೇಷ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಯಿತು. ಸುಮಾರು 30 ಬಗೆಯ ಆಟಿ ಖಾದ್ಯಗಳನ್ನು ಉಣ ಬಡಿಸಲಾಯಿತು.

ಬೆಳಪು ಹಾಲು ಉತ್ಪಾದಕರ ಸಂಘದ ಮಹಾಸಭೆ ; 25% ಡಿವಿಡೆಂಡ್ ಘೋಷಣೆ

Posted On: 31-07-2024 07:32PM

ಬೆಳಪು : ಬೆಳಪು ಹಾಲು ಉತ್ಪದಕರ ಸಂಘ ಕಳೆದ 25 ವರ್ಷಗಳಿಂದ ನಿರಂತರ ಲಾಭ ಗಳಿಸುತ್ತಿದ್ದು, ಪ್ರತಿದಿನ 89೦ ರಿಂದ 1,000 ಲೀಟರ್ ಹಾಲು ಸ್ಥಳೀಯ ಸದಸ್ಯರಿಂದ ಒಕ್ಕೂಟಕ್ಕೆ ನೀಡುತ್ತಿದ್ದು, 2023- 24ನೇ ಸಾಲಿನಲ್ಲಿ ಸದಸ್ಯರಿಗೆ 25% ಡಿವಿಡೆಂಡ್ ನೀಡಿ ದಾಖಲೆ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಬೆಳಪು ಹಾಲು ಉತ್ಪದಕರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಬೆಳಪು ಹಾಲು ಉತ್ಪಾದಕರ ಸಂಘ ಇನ್ನೂ ಪ್ರಗತಿಯತ್ತ ಸಾಗಬೇಕಿದೆ. ಪ್ರತಿ ಮನೆಯಲ್ಲಿಯೂ ಹಸು ಸಾಕಣೆ ಮಾಡಬೇಕು. ಮಾನವನಿಗೆ ಕೇಳಿದ್ದನ್ನು ಕೊಡುವ ಕಾಮಧೇನು ಹಸುವಾಗಿದ್ದು, ಇದರಿಂದ ಕುಟುಂಬ ನಿರ್ವಹಣೆ, ಮನಸಿಗೆ ನೆಮ್ಮದಿ ಸಾಧ್ಯ. ಹಸು ಸಾಕಲು ಮುಂದೆ ಬಂದರೆ ಕಡಿಮೆ ಬಡ್ಡಿಯಲ್ಲಿ ಬೆಳಪು ಸಹಕಾರಿ ಸಂಘದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದರು.

ಸಂಘದ ಅಭಿವೃದ್ಧಿ ಮತ್ತು ಪಶುಗಳಲ್ಲಿ ಸಲಹೆ ವಿಧಾನವನ್ನು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಅನಿಲ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಸದ್ರಿ ವರ್ಷ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಪ್ರಥಮ, ಸಂದೀಪ್‌ ಶೆಟ್ಟಿ ದ್ವಿತೀಯ ಬಹುಮಾನ, ಗಣೇಶ್‌ ದೇವಾಡಿಗ ತೃತೀಯ ಬಹುಮಾನ ಪಡೆದರು.

ಸಂಘದ ಸದಸ್ಯರಿಗೆ ೨ ಲಕ್ಷ ೪೨ ಸಾವಿರ ಬೋನಸ್‌ ವಿತರಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್‌ ಶೆಟ್ಟಿ, ನಿರ್ದೇಶಕರುಗಳಾದ ರಮಾನಂದ ಮೂಲ್ಯ, ಚಂದ್ರಕಾಂತ್‌ ಶೆಟ್ಟಿ, ಗಣೇಶ್‌ ದೇವಾಡಿಗ, ದಿನೇಶ್‌ ಪೂಜಾರಿ, ಜೆನ್ನಿ ನರಸಿಂಹ ಭಟ್, ಗುರುರಾಜ ಆಚಾರ್ಯ, ಅಣ್ಣು ಮುಖಾರಿ, ದಿವಾಕರ ಶೆಟ್ಟಿ, ಗೌರಿ ಶೆಟ್ಟಿ, ಶ್ರೀದೇವಿ ಎಸ್‌ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾದವ್‌ ರಾವ್‌ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜುಲೈ 31 : ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ನಾಲ್ಕು ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted On: 31-07-2024 08:45AM

ಕಾಪು‌ : ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಹೆಬ್ರಿ ತಾಲೂಕುಗಳ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 31ರಂದು ರಜೆ ಘೋಷಿಸಿ ಆಯಾ ತಾಲೂಕಿನ ತಹಶೀಲ್ದಾರ್ ಗಳು ಆದೇಶ ನೀಡಿದ್ದಾರೆ.