Updated News From Kaup

ಪಡುಬಿದ್ರಿ : ಕಂಚಿನಡ್ಕ ಟೋಲ್ ತಡೆ ಆದೇಶ - ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

Posted On: 23-08-2024 08:13PM

ಪಡುಬಿದ್ರಿ : ಇಲ್ಲಿನ ಕಂಚಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಟೋಲ್ ಗೇಟ್ ಗೆ ಸರಕಾರದಿಂದ ತಾತ್ಕಾಲಿಕ ತಡೆ ನೀಡಿದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೇಟೆಯಲ್ಲಿ ಶುಕ್ರವಾರ ಸಂಜೆ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಾಚರಿಸಲಾಯಿತು.

ಕಳೆದ ಬುಧವಾರ ಪಡುಬಿದ್ರಿಯ ಕಂಚಿನಡ್ಕದಲ್ಲಿ ಟೋಲ್ ರದ್ಧತಿ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಆಯೋಜನೆಯಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಗುರುವಾರ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗ ಲೋಕೋಪಯೋಗಿ ಸಚಿವ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಟೋಲ್ ರದ್ದತಿಗೆ ಮನವಿ ಸಲ್ಲಿಸಿ ಇಲ್ಲಿಯ ವಸ್ತುಸ್ಥಿತಿಯನ್ನು ಸಚಿವರಿಗೆ ಮನವರಿಕೆ ಮಾಡಿದ್ದರು.

ಅದರಂತೆ ಶುಕ್ರವಾರ ಲೋಕೋಪಯೋಗಿ ಸಚಿವರು ಕಂಚಿನಡ್ಕದಲ್ಲಿ ಟೋಲ್ ಗೇಟ್ ನಿರ್ಮಾಣವನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಬಗ್ಗೆ ಆದೇಶ ಹೊರಡಿಸಿದ್ದು ಕಾಂಗ್ರೆಸ್ ನಿಯೋಗಕ್ಕೆ ಮೊದಲ ಹಂತದಲ್ಲಿ ಜಯ ಸಿಕ್ಕಿದಂತಾಗಿದೆ.

ಈ ಸಂದರ್ಭ ಕಾಂಗ್ರೆಸ್ ಮುಖಂಡರುಗಳಾದ ಗೀತಾ ವಾಗ್ಳೆ, ಶಾಂತಲತಾ ಶೆಟ್ಟಿ, ನವೀನ್ ಚಂದ್ರ ಜೆ ಶೆಟ್ಟಿ, ನವೀನ್ ಎನ್ ಶೆಟ್ಟಿ, ಶೇಖರ್ ಹೆಜಮಾಡಿ, ರಮೀಝ್ ಹುಸೇನ್, ಶರ್ಫುದ್ದೀನ್ ಶೇಖ್, ಅಝೀಝ್ ಕಣ್ಣಂಗಾರು, ವೈ ಸುಕುಮಾರ್, ಕರುಣಾಕರ ಪೂಜಾರಿ, ಅಶೋಕ್ ಸಾಲ್ಯಾನ್, ದೀಪಕ್ ಎರ್ಮಾಳು, ದಿವಾಕರ ಶೆಟ್ಟಿ, ವಿಶ್ವಾಸ್ ಅಮೀನ್, ಜ್ಯೋತಿ ಮೆನನ್, ಅಶೋಕ್ ನಾಯರಿ, ವೈ ಸುಧೀರ್ ಕುಮಾರ್, ಸುನಿಲ್ ಬಂಗೇರ, ಶಫಿ ಪಡುಬಿದ್ರಿ, ರಾಜೇಶ್ ಶೇರಿಗಾರ್, ಸಂತೋಷ್ ಪಡುಬಿದ್ರಿ, ಕೀರ್ತಿ ಪಡುಬಿದ್ರಿ, ಫಾರೂಕ್ ಚಂದ್ರನಗರ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಮಲಂಕಾರು ಪ್ರಕಾಶ್ ಶೆಟ್ಟಿ ನಿಧನ

Posted On: 23-08-2024 05:11PM

ಕಾಪು : ತಾಲೂಕಿನ ಮಂಡೇಡಿ ಮುಕ್ಕಾಲಿ ಕುಟುಂಬಸ್ಥರಾದ ಮಲಂಕಾರು ಪ್ರಕಾಶ್ ಶೆಟ್ಟಿಯವರು ಶುಕ್ರವಾರ ನಿಧಾನರಾದರು.

ಪಡುಬಿದ್ರಿ : ಕಂಚಿನಡ್ಕ ಟೋಲಿಗೆ ತಾತ್ಕಾಲಿಕ ತಡೆ ಆದೇಶ

Posted On: 23-08-2024 05:07PM

ಪಡುಬಿದ್ರಿ : ಕಂಚನಡ್ಕದಲ್ಲಿ ಟೋಲ್ ಗೇಟ್ ರದ್ದು ಮಾಡಬೇಕೆಂದು ಆಗ್ರಹಿಸಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಿದ್ದು, ಶುಕ್ರವಾರ ಕಾಂಗ್ರೆಸ್ ನಿಯೋಗ ಬೆಂಗಳೂರಿಗೆ ತೆರಳಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ ಸ್ಥಳೀಯ ಸಮಸ್ಯೆಗಳು, ಟೋಲ್ ರದ್ಧತಿ ಬಗ್ಗೆ ಸಚಿವರ ಗಮನಸೆಳೆದಿದ್ದು ಆ ಪ್ರಯುಕ್ತ ಕಂಚಿನಡ್ಕ ಟೋಲ್‌ಗೇಟ್‌ ತಾತ್ಕಾಲಿಕ ರದ್ಧತಿಯ ಆದೇಶ ಹೊರಡಿಸಿದ್ದಾರೆ.

ಆದೇಶದಲ್ಲಿ, ಪಡುಬಿದ್ರಿ- ಬೆಳ್ಳಣ್ಣು-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಪ್ರದೇಶದಲ್ಲಿ ಉದ್ದೇಶಿಸಿರುವಂತಹ  ಸುಂಕ ವಸೂಲಾತಿ ಕೇಂದ್ರದಿಂದ ಉದ್ಭವಿಸಿರುವಂತಹ ಸಮಸ್ಯೆಗಳು, ಕಂಚಿನಡ್ಕ ಪ್ರದೇಶವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ದಟ್ಟಣೆ ಇರುವ ರಸ್ತೆಯನ್ನು ಹೊಂದಿದ್ದು, ಈವರೆಗೂ ಡಿವೈಡರ್‌ಗಳ ನಿರ್ಮಾಣವಾಗಲಿ, ಸರ್ವಿಸ್ ರಸ್ತೆ, ಶೌಚಾಲಯ ನಿರ್ಮಾಣ, ವಿಶ್ರಾಂತಿ ಗೃಹವಾಗಲಿ ನಿರ್ಮಾಣವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.

ಮುಂದುವರೆದಂತೆ, ಈಗಾಗಲೇ ಪಡುಬಿದ್ರಿ ಜಂಕ್ಷನ್‌ನಿಂದ ರಾಜ್ಯ ಹೆದ್ದಾರಿ-66 ರಲ್ಲಿನ ಪಡುಬಿದ್ರಿ ಜಂಕ್ಷನ್‌ನಿಂದ ಮಂಗಳೂರು ಕಡೆಗೆ 5 ಕಿ.ಮೀ. ನಲ್ಲಿರುವ ಹೆಜಮಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಟೋಲ್ ನಿರ್ಮಿಸಿ ಶುಲ್ಕ ಸಂಗ್ರಹಣೆ ಮಾಡಲಾಗುತ್ತಿದ್ದು, ಉದ್ದೇಶಿತ ಕಂಚಿನಡ್ಕ ಪ್ರದೇಶವು ಕೇವಲ 7.50 ಕಿ.ಮೀ. ದೂರದಲ್ಲಿರುವುದರಿಂದ, ಈ ಟೋಲ್ ಪ್ಲಾಜಾ ನಿರ್ಮಾಣ ಕಾರ್ಯವು ಆತುರದ ನಿರ್ಧಾರವಾಗಿರುವುದಲ್ಲದೇ, ಪ್ರತಿನಿತ್ಯ ಈ ರಸ್ತೆಯನ್ನೆ ಅವಲಿಂಬಿಸಿರುವ, ಸದರಿ ರಸ್ತೆಯಲ್ಲಿ ಓಡಾಡುವಂತಹ ಸುತ್ತಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು, ಕ್ಯಾಬ್ ಮತ್ತು ಆಟೋ ಚಾಲಕರುಗಳು ಎರಡು ಬಾರಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿ ತೊಂದರೆಗೊಳಗಾಗುತ್ತಾರೆಂದು ಸಭೆಯಲ್ಲಿದ್ದ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿ, ಸುಂಕ ವಸೂಲಾತಿ ಕೇಂದ್ರವನ್ನು ರದ್ದುಪಡಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಅಲ್ಲದೇ ಇಲಾಖೆಯ ಈ ಕ್ರಮದ ಬಗ್ಗೆ ಆಗಸ್ಟ್ 24, ಶನಿವಾರದಂದು ಸ್ಥಳೀಯ ಹೋರಾಟ ಸಮಿತಿಗಳೊಂದಿಗೆ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದು, ಪ್ರತಿಭಟನಾ ಸಭೆಯನ್ನೂ  ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ.

ಈ ವಿಷಯವು ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಸೂಕ್ಷ್ಮತೆಯಿಂದ ಕೂಡಿರುವುದರಿಂದ, ಮೇಲ್ಕಂಡಂತೆ ಕಂಚಿನಡ್ಕ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲು ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರದ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವರೆಗೆ ಸದರಿ ಸಂಸ್ಥೆಗೆ ನೀಡಲಾಗಿರುವ ಕಾರ್ಯಾದೇಶ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದು, ಕಂಚಿನಡ್ಕ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಮನೆಗೆ ಧಾಳಿ ತಪ್ಪು : ಡೇವಿಡ್ ಡಿಸೋಜ ಮುದರಂಗಡಿ

Posted On: 22-08-2024 07:03PM

ಮುದರಂಗಡಿ : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಮನೆ ಮೇಲಿನ ಧಾಳಿಗೆ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ‌‌ ಅಧ್ಯಕ್ಷ, ಮುದರಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಡೇವಿಡ್ ಡಿಸೋಜ ಪ್ರಿನ್ಸ್ ಪಾಯಿಂಟ್ ‌ರವರು‌ ಖೇದ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ‌ಹಕ್ಕು ಸಹಜ ಆದರೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣವು ಅತ್ಯಂತ ಹೇಯ ಕೃತ್ಯವಾಗಿದೆ. ಈ ಕೃತ್ಯದ ಹಿಂದಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ‌ ಸೂಕ್ತ ವಿಚಾರಣೆ ನಡೆಸಿ‌ ಕ್ರಮ ಕೈಗೊಳ್ಳುವಂತೆ ಡೇವಿಡ್ ಡಿಸೋಜ ಪೋಲಿಸ್ ಇಲಾಖೆಯನ್ನು ‌ಒತ್ತಾಯಿಸಿದ್ದಾರೆ.

ರಾಜ್ಯಪಾಲರ ವಿರುದ್ಧ ಎಂಎಲ್‌ಸಿ ಐವನ್ ಡಿಸೋಜ ಹೇಳಿಕೆ ಆರೋಪ : ಕಾಪು ಠಾಣೆಯಲ್ಲಿ ದೂರು ದಾಖಲು

Posted On: 22-08-2024 06:57PM

ಕಾಪು : ಕರ್ನಾಟಕ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್‌ರವರ ಬಗ್ಗೆ ವಿಧಾನ ಪರಿಷತ್‌ ಸದಸ್ಯ   ಐವನ್ ಡಿಸೋಜರವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಕಾಪು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಕಾಪು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕಾಪು ಮಂಡಲ ಹಿಂದುಳಿದ ಮೋರ್ಚಾದ ಅಧ್ಯಕ್ಷ ಸಂತೋಷ್ ಮೂಡುಬೆಳ್ಳೆಯವರ ನೇತೃತ್ವದಲ್ಲಿ ಕಾಪು ಠಾಣಾಧಿಕಾರಿ ಅಬ್ದುಲ್‌ ಖಾದರ್‌ ಅವರಿಗೆ ದೂರು ನೀಡಿ, ಐವನ್‌ ಡಿಸೋಜರವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಈ ಸಂದರ್ಭ ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯಕ್, ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ್ ಕೊಡವೂರು,  ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್ ಉದ್ಯಾವರ, ಸುರೇಖಾ ಶೈಲೇಶ್, ಯುವ ಮೋರ್ಚಾ ಅಧ್ಯಕ್ಷ  ಸೋನು ಪಾಂಗಾಳ ಮತ್ತು ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಂಟಕಲ್ಲು ಆಟೋ ರಿಕ್ಷಾ ಚಾಲಕ, ಮಾಲಕರ ಸಂಘದಿಂದ ಕ್ರೀಡಾ ಪರಿಕರಗಳ ವಿತರಣೆ

Posted On: 22-08-2024 06:24PM

ಶಿರ್ವ : ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ.) ಬಂಟಕಲ್ಲು ಇದರ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ಪ್ರಾಥಮಿಕ ಶಾಲೆ ಬಂಟಕಲ್ಲು ಇದರ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳ ವಿತರಣೆ ಕಾರ್ಯಕ್ರಮ ನಡೆಯಿತು.

ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಗೌರವಾಧ್ಯಕ್ಷರಾದ ಮಾಧವ ಕಾಮತ್ ರವರು ಶಾಲೆಯ ಮುಖ್ಯಸ್ಥರಾದ ಜಯರಾಮ ಪ್ರಭು ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ, ಕಾರ್ಯದರ್ಶಿ ಡೆನಿಸ್ ಡಿಸೋಜ, ಸದಸ್ಯರಾದ ಸುರೇಶ್ ಕಲ್ಲು ಗುಡ್ಡೆ, ಹರೀಶ್, ರಮೇಶ್ ಹಾಗು ಶಾಲೆಯ ಶಿಕ್ಷಕ ವೃಂದದವರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತ ಪಾಟ್ಕರ್ ರವರು ಕಾರ್ಯಕ್ರಮ ನಿರೂಪಿದರು.

ಕಾಪು ಜೇಸಿಐ ಸಂಸ್ಥೆಗೆ ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ ಭೇಟಿ

Posted On: 22-08-2024 06:14PM

ಕಾಪು : ಜಾಗತಿಕವಾಗಿ 115 ದೇಶದಲ್ಲಿ ಯುವ ನಾಯಕರು, ಉದ್ಯಮಿಗಳ ಜೊತೆಗೆ 5 ಲಕ್ಷ ಸಕ್ರಿಯ ಸದಸ್ಯರನ್ನು ಹೊಂದಿರುವ ಜೇಸಿಐ ಸಂಸ್ಥೆಯು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ವಿವಿಧ ಝೋನ್ ಗಳ ಘಟಕಗಳ ಭೇಟಿಯ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಚಾಲನೆ ಕಾರ್ಯ ನೀಡಲಾಗುತ್ತಿದೆ ಎಂದು ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ ಹೇಳಿದರು. ಅವರು ಜೇಸಿಐ‌ ಕಾಪು ಭೇಟಿಯ ಸಂದರ್ಭ ಕಾಪುವಿನ ಮಂದಾರ ಹೊಟೇಲ್ ಸಭಾಂಗಣದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದ.ಕ, ಉಡುಪಿ, ಉ.ಕ ದ ವಿವಿಧ ಘಟಕಗಳು ಝೋನ್ 15 ರಲ್ಲಿದೆ. ಜೆಸಿಐ ಸಂಸ್ಥೆ ಯುವಕರನ್ನು ಗಮನದಲ್ಲಿರಿಸಿಕೊಂಡು ವಾಯ್ಸ್ ಆಫ್ ಯುತ್ ಕಾರ್ಯಕ್ರಮದ ಮೂಲಕ ಯುವಕರನ್ನು ಭೇಟಿಯಾಗಿ ಅವರ ಮುಂದಿನ ಸವಾಲು, ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಗ್ರಾಮೀಣ ಭಾಗದ ಆಯ್ದ ವಿದ್ಯಾರ್ಥಿಗಳಿಗೆ ರೂ.3 ಕೋಟಿ ಮೌಲ್ಯದ ವಿದ್ಯಾರ್ಥಿವೇತನ, ನಾಯಕತ್ವ ‌ಶಿಬಿರಗಳ ಆಯೋಜನೆ ಮಾಡಲಾಗುತ್ತಿದೆ. ಜೆಸಿಐ ಸಂಸ್ಥೆಯಿಂದ ವಯನಾಡು ದುರಂತಕ್ಕೆ 1 ಕೋಟಿ ಸಹಾಯಧನ ನೀಡಲಾಗಿದೆ ಎಂದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ರಾಕೇಶ್ ಕುಂಜೂರು, ಜೆಸಿಐ ವಲಯ 15ರ ವಲಯಾಧ್ಯಕ್ಷ ಗಿರೀಶ್ ಎಸ್ ಪಿ, ಸುಖಲಾಕ್ಷಿ ಬಂಗೇರ, ಸನತ್ ಕುಮಾರ್, ಸೌಮ್ಯ ರಾಕೇಶ್, ಸತೀಶ್ ಪೂಜಾರಿ, ಅಭಿಲಾಷ್ ಮತ್ತಿತರರು ಉಪಸ್ಥಿತರಿದ್ದರು.

ಐವನ್ ಡಿಸೋಜ ಮನೆ ಮೇಲಿನ ದಾಳಿ ಖಂಡನೀಯ : ಗುಲಾಂ ಮೊಹಮ್ಮದ್

Posted On: 22-08-2024 05:41PM

ಪಡುಬಿದ್ರಿ : ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜರ ಮಂಗಳೂರಿನ ಮನೆಯ ಮೇಲೆ ದಾಳಿ ನಡೆಸಿರುವುದು ಖಂಡನೀಯ ಇದೊಂದು ಮೃಗೀಯ ವರ್ತನೆಯಾಗಿದ್ದು ಈ ಕೃತ್ಯವನ್ನು ಖಂಡಿಸುವುದಾಗಿ ಕಾಂಗ್ರೆಸ್ ಮುಖಂಡ ಗುಲಾಂ ಮೊಹಮ್ಮದ್ ಹೇಳಿದ್ದಾರೆ.

ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ, ಅದನ್ನೇ ತಪ್ಪು ಎಂಬುದಾಗಿ ಬಿಂಬಿಸಿ ಅವರ ಮನೆಯ ಮೇಲೆ ದಾಳಿ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ಈ ಕೃತ್ಯದ ಹಿಂದಿರುವ ಎಲ್ಲಾ ಪುಢಾರಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗುಲಾಂ ಮೊಹಮ್ಮದ್ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಪಡುಬಿದ್ರಿ : ಮುಂಡಾಲ ಯುವ ವೇದಿಕೆ ಮತ್ತು ಗಜಾನನ ಭಜನಾ ಮಂದಿರ - ರಕ್ಷಾಬಂಧನ ಕಾರ್ಯಕ್ರಮ

Posted On: 21-08-2024 09:44PM

ಪಡುಬಿದ್ರಿ : ಬೊಗ್ಗರಿಲಚ್ಚಿಲ್ ನ ಗಜಾನನ ಭಜನಾ ಮಂದಿರ ಮತ್ತು ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ವತಿಯಿಂದ ಮಂಗಳವಾರ ರಕ್ಷಾಬಂಧನ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮವನ್ನು ಮಾಜಿ ತಾ.ಪಂ ಸದಸ್ಯರು, ಗಜಾನನ ಭಜನಾ ಮಂದಿರದ ಅಧ್ಯಕ್ಷರಾದ ಭಾಸ್ಕರ್ ಪಡುಬಿದ್ರಿ ದೀಪ ಪ್ರಜ್ವಲಿಸಿ ಶುಭಹಾರೈಸಿದರು.

ಏಳು ಮಾಗಣೆಯ ಅಧ್ಯಕ್ಷರಾದ ಸದಾನಂದ ಬೊಗ್ಗರಿಲಚ್ಚಿಲ್, ಸಂತೋಷ್ ನಂಬಿಯಾರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ಪ ಸಾಲ್ಯಾನ್ ವಹಿಸಿದ್ದರು. ರಮೇಶ್, ಮನೋಹರ್, ಸವಿತಾ, ಮಂಜುಳಾ ಅಶೋಕ್, ದೀಪಾ, ನಿತೀನ್ ಸಾಲ್ಯಾನ್, ಮಂಜುನಾಥ್ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು. ಪ್ರಸನ್ನ ಪಡುಬಿದ್ರಿ ಪ್ರಸ್ತಾವನೆಗೈದರು. ಸುರೇಶ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

ಕಾಪು : ದಂಡತೀರ್ಥ ಕನ್ನಡ ಮಾಧ್ಯಮ ಶಾಲೆ - ಸಮವಸ್ತ್ರ ವಿತರಣೆ

Posted On: 21-08-2024 09:30PM

ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘದ ಸಹಕಾರದಲ್ಲಿ ಸಮವಸ್ತ್ರ ವಿತರಿಸಲಾಯಿತು.

ಕೆ. ಎಂ. ಎಫ್ ರಾಜ್ಯ ಸಂಘದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಸಮವಸ್ತ್ರ ವಿತರಿಸಿ ಮಾತನಾಡಿ, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೂ ಎಲ್ಲಾ ಸೌಲಭ್ಯಗಳು ದೊರಕಬೇಕು. ಸಂಘ ಸಂಸ್ಥೆಗಳು ಇಂತಹ ಮಾನವೀಯ ಕಳಕಳಿಯ ಸಹಕಾರವನ್ನು ನೀಡಿದಾಗ ಬಡ ಮಕ್ಕಳ ಕಲಿಕೆಗೆ ಪ್ರೇರಣೆ ದೊರಕಿದಂತಾಗುತ್ತದೆ ಎಂಬ ಸಂದೇಶವನ್ನು ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ಡಾ.ಕೆ. ಪ್ರಶಾಂತ್ ಶೆಟ್ಟಿಯವರು ವಹಿಸಿದ್ದರು.

ಸಮಾರಂಭದಲ್ಲಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರಾದ ಐತ್ತಪ್ಪ ಎಸ್. ಕೋಟ್ಯಾನ್, ಪ್ರಾಂಶುಪಾಲರಾದ ನೀಲಾನಂದ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಫ್ರೇಂಕಿ ಮಸ್ಕರೇನ್ಹಸ್, ಎಸ್. ಡಿ. ಎಂ. ಸಿ. ಅಧ್ಯಕ್ಷೆ ಸುಮಲತಾ, ರಾಘು ಕೋಟ್ಯಾನ್ ಉಪಸ್ಥಿತರಿದ್ದರು.