Updated News From Kaup
ಶಿರ್ವ : ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚಂಡೆ ಬಳಗ - ಶ್ರಾವಣ ಸಂಭ್ರಮ ಸಂಪನ್ನ
Posted On: 27-08-2023 07:42PM
ಶಿರ್ವ : ಶ್ರೀದುರ್ಗಾ ಮಹಿಳಾ ಚಂಡೆ ಬಳಗ ಬಂಟಕಲ್ಲು ಇದರ ವತಿಯಿಂದ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಸಭಾಂಗಣದಲ್ಲಿ ರವಿವಾರ ಜರುಗಿದ "ಶ್ರಾವಣ ಸಂಭ್ರಮ" ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಬೇಬಿ ಪ್ರಭು ಬೆಳಂಜಾಲೆ ಇವರು ಜ್ಯೋತಿ ಪ್ರಜ್ವಲನದ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ನಮ್ಮ ಹಿರಿಯರು ಆಚರಣೆ ಮಾಡಿಕೊಂಡು ಬರುತ್ತಿದ್ದ ಸತ್ಸಂಪ್ರದಾಯಗಳನ್ನು ಉಳಿಸಿ ನವಪೀಳಿಗೆಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಮಹಿಳಾ ಚಂಡೆ ಬಳಗದವರು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಅಭಿವೃದ್ಧಿ ನಿಗಮದ ಅಧೀಕ್ಷಕರಾದ ಸಂಗೀತಾ ದಯಾನಂದ ನಾಯಕ್ ಮಾತನಾಡಿ ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿಯೇ ವಿವಿಧ ಕಲಾಪ್ರಕಾರಗಳಾದ ಭಜನೆ, ಸಂಗೀತ, ನಾಟ್ಯ, ಉಪಕರಣಗಳ ನುಡಿಸುವಿಕೆ, ಕಲಿಸುವುದರಿಂದ ಉತ್ತಮ ಸಂಸ್ಕಾರ ಬೆಳೆಯುತ್ತದೆ. ಈ ಬಗ್ಗೆ ತಾಯಂದಿರು ಗಮನ ಹರಿಸುವಂತೆ ಕರೆ ನೀಡಿ, ತಮ್ಮ ಇಲಾಖೆಯಿಂದ ಮಹಿಳೆಯರಿಗೆ ಸಿಗುವ ಸೌಲಭ್ಯಗಳಾದ ಉದ್ಯೋಗಿನಿ, ಧನಶ್ರೀ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಈ ವಿಷಯವನ್ನು ಪ್ರಚಾರ ಮಾಡಿ ಸಮಾಜದ ಅರ್ಹ ಮಹಿಳೆಯರಿಗೂ ಸಿಗುವಂತೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ರಘುರಾಮ ನಾಯಕ್ ಸಡಂಬೈಲು ತೊಟ್ಟಿಲುಮನೆ, ಯುನಿವರ್ಸಿಟಿ ಚಿನ್ನದ ಪದಕ ವಿಜೇತ ಪುನೀತ್ ತೆಂಡುಲ್ಕರ್, ಯಕ್ಷಗಾನ ಯುವ ಪ್ರತಿಭೆ ಸಂಧ್ಯಾ ನಾಯಕ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಲೆ, ಆರ್ಎಸ್ಬಿ ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಹಿಳಾ ಚಂಡೆ ಬಳಗದ ನೇತೃತ್ವದಲ್ಲಿ ನಿರಂತರವಾಗಿ ನಡೆಯುತ್ತಿರುವ ಧಾರ್ಮಿಕ, ಸಾಸ್ಕೃತಿಕ, ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚಂಡೆಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಭವಾನಿ ನಾಯಕ್ ವರದಿ ಓದಿದರು. ಶೈಲಜಾ ಪಾಟ್ಕರ್, ಸಂಗೀತಾ ಪಾಟ್ಕರ್, ನಾಗವೇಣಿ ಪ್ರಭು, ಆಶಾ ನಾಯಕ್, ವಿದ್ಯಾ ಪರಿಚಯಿಸಿದರು. ಕುಸುಮಾ ಕಾಮತ್ ಕರ್ವಾಲು ಧನ್ಯವಾದವಿತ್ತರು. ಭವಾನಿ ನಾಯಕ್ ನಿರೂಪಿಸಿದರು. ಖ್ಯಾತ ಗಾಯಕರಾದ ರವೀಂದ್ರ ಪ್ರಭು ಮುಲ್ಕಿ ಇವರಿಂದ "ಭಕ್ತಿ ಸಿಂಚನ" ಕಾರ್ಯಕ್ರಮ ಜರುಗಿತು.
33 ನೇ ವರ್ಷದ ಕಳತ್ತೂರು ಗಣೇಶೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 27-08-2023 12:46PM
ಕಾಪು : ಇಲ್ಲಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜ್ಯೋತಿನಗರ ಕಳತ್ತೂರು ವತಿಯಿಂದ ಸೆಪ್ಟೆಂಬರ್ ತಿಂಗಳ 19 ರಂದು ನಡೆಯುವ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು.
ಈ ಸಂದರ್ಭ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಹಿರಿಯ ಸಂಶೋಧಕ ಬಾಬು ಶಿವಪೂಜಾರಿ ಪ್ರಧಾನ ಸಂಪಾದಕತ್ವದ 'ಬಿಲ್ಲವರ ಗುತ್ತು ಬರ್ಕೆಗಳು' ಸಂಶೋಧನಾ ಗ್ರಂಥ ಲೋಕಾರ್ಪಣೆ
Posted On: 27-08-2023 11:14AM
ಮಂಗಳೂರು : ಹಿರಿಯ ಸಂಶೋಧಕ ಬಾಬು ಶಿವಪೂಜಾರಿ ಪ್ರಧಾನ ಸಂಪಾದಕತ್ವದ 'ಬಿಲ್ಲವರ ಗುತ್ತು ಬರ್ಕೆಗಳು' ಸಂಶೋಧನಾ ಗ್ರಂಥವನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಕುದ್ರೋಳಿ ಕ್ಷೇತ್ರದಲ್ಲಿ ಲೋಕಾರ್ಪಣೆಗೊಳಿಸಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಶ್ರೀ ವಿಖ್ಯಾತನಂದ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಊರ್ಮಿಳಾ ರಮೇಶ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಚಿತ್ತರಂಜನ್ ಬೋಳಾರ್, ಗಣೇಶ್ ಅಮೀನ್ ಸಂಕಮಾರ್, ಸಾಹಿತಿ ಬಿ.ಎಂ.ರೋಹಿಣಿ, ಪಿತಾಂಬರ ಹೆರಾಜೆ, ಕಟಪಾಡಿ ಶಂಕರ ಪೂಜಾರಿ, ನವೀನ್ಚಂದ್ರ ಸುವರ್ಣ, ವೇದಕುಮಾರ್, ಹರೀಶ್ ಪೂಜಾರಿ, ಸುನೀಲ್ ಪೂಜಾರಿ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಪೊಲಿಪುವಿನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟನೆ
Posted On: 27-08-2023 10:34AM
ಕಾಪು : ಗುರ್ಮೆ ಫೌಂಡೇಶನ್ ಗುರ್ಮೆ, ಕಳತ್ತೂರು, ಶತ ವಜ್ರ ಸ್ವರ್ಣ ಸಂಭ್ರಮ ಸಮಿತಿ ಪೊಲಿಪು, ಮುಂಬೈ ಇವರ ಆಶ್ರಯದಲ್ಲಿ ಪೊಲಿಪು ಮೊಗವೀರ ಮಹಾಸಭಾ, ಪೊಲಿಪು, ಮುಂಬೈ ಪೊಲಿಪು ಹಳೆ ವಿದ್ಯಾರ್ಥಿ ಸಂಘ, ಪೊಲಿಪು, ಮುಂಬೈ, ಶ್ರೀ ಗಣೇಶೋತ್ಸವ ಸಮಿತಿ, ಪೊಲಿಪು ಇವರ ಸಹಭಾಗಿತ್ವದಲ್ಲಿ ಶ್ರೀನಿವಾಸ ವೈದ್ಯಕೀಯ ಕಾಲೇಜು ಮುಕ್ಕ, ಸುರತ್ಕಲ್, ಮಂಗಳೂರು ಇವರಿಂದ ಇಂದು ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶತ ವಜ್ರ ಸ್ವರ್ಣ ಸಂಭ್ರಮ ಸಮಿತಿ ಅಧ್ಯಕ್ಷರಾದ ಸರ್ವೊತ್ತಮ್ ಕುಂದರ್, ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜು ಉಪಾಧ್ಯಕ್ಷರಾದ ಡಾl ಎ. ಶ್ರೀನಿವಾಸ್ ರಾವ್, ಜಿಲ್ಲಾ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭು, ಪೊಲಿಪು ಮೊಗವೀರ ಮಹಾಸಭಾದ ಅಧ್ಯಕ್ಷರಾದ ಶ್ರೀಧರ್ ಕಾಂಚನ್, ಮುಂಬೈ ಶತ ವಜ್ರ ಸ್ವರ್ಣ ಸಂಭ್ರಮ ಸಮಿತಿ ಅಧ್ಯಕ್ಷರಾದ ಸುರೇಂದ್ರ ಎಸ್, ಸುವರ್ಣ, ಪೊಲಿಪು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಧನಂಜಯ್ ಸಾಲ್ಯಾನ್, ಪೊಲಿಪು ಮೊಗವೀರ ಮಹಿಳಾ ಮಂಡಳಿ ಅಧ್ಯಕ್ಷರಾದ ಕವಿತಾ ಸುವರ್ಣ, ಪುರಸಭಾ ಸದಸ್ಯರಾದ ರಾಧಿಕಾ ಸುವರ್ಣ, ಕಿರಣ್ ಆಳ್ವ, ಲತಾ ದೇವಾಡಿಗ, ಅನಿಲ್ ಕುಮಾರ್, ಡಾl ಶಶಿರಾಜ್ ಶೆಟ್ಟಿ, ಡಾl ಡಿ. ಬಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸಂಘದ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ
Posted On: 27-08-2023 10:25AM
ಕಾಪು : ಬ್ರಹ್ಮಶ್ರೀ ನಾರಾಯಣಗುರು ಸಂಘ ಮೂಳೂರು ಇದರ ಮಹಿಳಾ ಮಂಡಲದ ನೂತನ ಅಧ್ಯಕ್ಷರನ್ನಾಗಿ ದೀಪಾ ಆರ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸುಲೋಚನ ಆರ್ ಬಂಗೇರ, ಉಪಾಧ್ಯಕ್ಷರಾಗಿ ಸವಿತಾ ವೈ ಅಮೀನ್, ಕಾರ್ಯದರ್ಶಿಯಾಗಿ ಸ್ವರ್ಣಜಾ ಭೋಜರಾಜ್, ಜೊತೆ ಕಾರ್ಯದರ್ಶಿಯಾಗಿ ಮಮತಾ ವಾಸು, ಕೋಶಾಧಿಕಾರಿಯಾಗಿ ದಿವ್ಯ ಅಭಿಷೇಕ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರೇವತಿ ಸುವರ್ಣ, ಮಾಲಾಶ್ರೀ ಮಹೇಶ್, ಅನುಪಮಾ ಜಗದೀಶ್, ಸುಜಾತ ವಿಠಲ, ರತ್ನಾವತಿ, ಜಯಲಕ್ಷ್ಮಿ ಪ್ರಭಾಕರ, ಜಯಂತಿ ಶೇಖರ, ವಿಮಲ ಸಂಜೀವ, ಮಾಲತಿ ಸತೀಶ್, ಕುಸುಮ ಆಯ್ಕೆಯಾಗಿದ್ದಾರೆ.
ಶಿರ್ವ : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ - 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಸಂಪನ್ನ
Posted On: 26-08-2023 10:51PM
ಶಿರ್ವ : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ ವತಿಯಿಂದ ಶುಕ್ರವಾರ ಗಾಂಧಿನಗರ ಕಲಾವೃಂದದ ವೇದಿಕೆಯಲ್ಲಿ 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಸಂಪನ್ನಗೊಂಡಿತು.
ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರು ವರಮಹಾಲಕ್ಷ್ಮೀ ಪೂಜೆಯನ್ನು ನೆರವೇರಿಸಿದರು
ಈ ನಿಮಿತ್ತ ಸಾಮೂಹಿಕ ಪ್ರಾರ್ಥನೆ, ಕಲಶ ಪ್ರತಿಷ್ಠೆ, ಚೂಡಿ ಪೂಜೆ, ಕುಂಕುಮಾರ್ಚನೆ, ಭಜನಾ ಕಾರ್ಯಕ್ರಮ, ಮಂಗಳಾರತಿ ಮಹಾಪೂಜೆ ತದನಂತರ ಅನ್ನಸಂತರ್ಪಣೆ ಜರಗಿತು.
ಈ ಸಂದರ್ಭ ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಶಿರ್ವ : ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ
Posted On: 26-08-2023 08:39PM
ಶಿರ್ವ : ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 26ರಂದು ಶಿರ್ವದ ಮೋನಿಶ್ ಕಾಂಪ್ಲೆಕ್ಸ್ ನ ರಿಯೋನ ಹಾಲ್ ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿ ಸಂಫವು 2022-23 ಸಾಲಿನಲ್ಲಿ ವ್ಯವಹಾರ ನಡೆಸಿ ರೂ.44,70,853.15 ಲಾಭ ಗಳಿಸಿ, ಸದಸ್ಯರಿಗೆ 10% ಲಾಭಾಂಶ ವಿತರಿಸಲು ಶಕ್ತವಾಗಿದೆ. O% ಬಡ್ಡಿದರದಲ್ಲಿ ಕೃಷಿಕರಿಗೆ ಸುಮಾರು ಮೂರು ಕೋ.ರೂ.ಗಳಿಗೂ ಮಿಕ್ಕಿಸಾಲ ವಿತರಣೆ ನಡೆಸಿದ್ದು, ಸಿಬಂದಿಗಳ ಸಹಕಾರದಿಂದ ಶೇ.90% ಸಾಲಗಳನ್ನು ವಸೂಲಾತಿ ಮಾಡುವ ಪ್ರಯತ್ನ ನಡೆಸಲಾಗಿದೆ,ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಕೃಷಿ ತರಬೇತಿ ಶಿಬಿರಗಳನ್ನು ಆಯೋಜಿಸಿ, ಸಂಘದ ಕಾರ್ಯವ್ಯಾಪ್ತಿಯಲ್ಲಿ ಕೃಷಿ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಂಡು ರೈತರ ಆದಾಯ ಹೆಚ್ಚಿಸಲು ಪ್ರಯತ್ನಿಸಲಾಗುತಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಸಂಘದ 2022-23 ನೇ ಸಾಲಿನ ಪರಿಶೋಧಿತ ಲೆಕ್ಕ ಪತ್ರಗಳ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ವಾರಿಜ ಪೂಜಾರ್ತಿ, ನಿರ್ದೇಶಕರಾದ ನಾರಾಯಣ ನಾಯ್ಕ್, ಕೃಷ್ಣ ವಿಜಯ ಪೂಜಾರಿ, ರಮೇಶ್ ಪ್ರಭು, ಕೆ ವೀರೇಂದ್ರ ಪಾಟ್ಕರ್, ಅಶೋಕ್ ರಾವ್, ಉಮೇಶ್ ಆಚಾರ್ಯ, ರೀಟಾ ಮತಾಯಸ್, ವಿಲಿಯಂ ಬ್ಯಾಪಿಸ್ಟ್ ಮಚಾದೋ, ಸಂಜೀವ ಕುಲಾಲ್, ಹರಿಣಾಕ್ಷ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣ ಭಟ್ ವೇದಿಕೆಯಲ್ಲಿದ್ದರು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಸ್ವಾಗತಿಸಿದರು. ಲೆಕ್ಕಿಗ ಹರೀಶ್ ಪೂಜಾರಿ ನಿರೂಪಿಸಿ, ಸಿಬ್ಬಂದಿ ಪ್ರದೀಪ್ ಪಾಟ್ಕರ್ ವಂದಿಸಿದರು.
ಬಂಟಕಲ್ಲು : ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
Posted On: 26-08-2023 08:10PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 10ನೇ ಪದವಿ ಪ್ರದಾನ ಸಮಾರಂಭವು ಶನಿವಾರ ಕಾಲೇಜಿನ ಆವರಣದಲ್ಲಿ ನಡೆಯಿತು. ಉಡುಪಿ ಕಾಣಿಯೂರು ಮಠದ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿಯವರು ತಮ್ಮ ಆಶೀರ್ವಚನದಲ್ಲಿ ಸದ್ಗುಣವಂತ ಪದವೀಧರರು ಸಮಾಜದ ನಿಜವಾದ ಆಸ್ತಿ. ಜೀವನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಳಿ ನೈತಿಕತೆ ಮತ್ತು ಉತ್ತಮ ಚಾರಿತ್ರ್ಯ ವನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಯಾನ -3ರ ಸಫಲತೆಯನ್ನು ಉಲ್ಲೇಖಿಸಿ ಈ ಸಂಸ್ಥೆಯ ಪದವೀಧರರು ಇಸ್ರೋದ ವಿಜ್ಞಾನಿಗಳಂತೆ ಆವಿಷ್ಕಾರ ಹಾಗೂ ಸಾಧನೆಗಳನ್ನು ಮಾಡಲಿ ಎಂದು ಆಶೀರ್ವದಿಸಿದರು. ಮಂಗಳೂರಿನ ಪ್ರತಿಷ್ಠಿತ ಎಸ್. ಎಲ್. ಶೇಟ್ ಜ್ಯುವೆಲರ್ಸ್ ಪ್ರಶಾಂತ್ ಶೇಟ್ ಇವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅನ್ವಿತಾ, ಗಣಕಯಂತ್ರ ವಿಭಾಗದ ವೈಷ್ಣವಿ ಡಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಕ್ಷತಾ ಅನಿಲ್ ಕುಮಾರ್ ರೆಂಜಾಲ್ ಮತ್ತು ಮೆಕ್ಯಾನಿಕಲ್ ವಿಭಾಗದ ರತನ್ ಪಾಟ್ಕರ್ ಇವರ ಶೈಕ್ಷಣಿಕ ಸಾಧನೆಗಾಗಿ ನೀಡಿ ಆಶೀರ್ವದಿಸಿದರು.
ಈ ಸಮಾರಂಭದಲ್ಲಿ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷರಾದ ಡಾ. ಗೋಪಾಲ್ ಮುಗೆರಾಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಸಮಾರಂಭದ ವಿಶೇಷ ಉಪನ್ಯಾಸ ನೀಡಿದರು. ಮಂಗಳೂರಿನ ಕಂಬಳ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸೋಮನಾಥ ಜೋಗಿ ಇವರು ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀರತ್ನಕುಮಾರ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರಿಯಾ ಕ್ಯಾಸ್ತೆಲಿನೊ ಮತ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಇವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸುಧೀರ್ ಅವರು ಸ್ವಾಮಿಜಿಯವರನ್ನು ಪರಿಚಯಿಸಿದರು. ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಅವರು ಪದವೀಧರರಿಗೆ ಪ್ರಮಾಣವಚನ ಭೋದಿಸಿದರು.
ಡಾ. ಸುದರ್ಶನ್ ರಾವ್ ನಾಲ್ಕು ವಿಭಾಗಗಳಲ್ಲಿ ಚಿನ್ನದ ಪದಕ ಪಡೆದವರ ಹೆಸರನ್ನು ಹಾಗೂ ವಿಭಾಗ ಮುಖ್ಯಸ್ಥರು ಪದವೀಧರರ ಹೆಸರನ್ನು ಘೋಷಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಹೆಚ್ ಜೆ ವಂದಿಸಿದರು. ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಲಹರಿ ವೈದ್ಯ ಮತ್ತು ಪೂಜಶ್ರೀ ನಿರೂಪಿಸಿದರು.
ಸೆಪ್ಟೆಂಬರ್ 2 : ಬೆಳಪು ಸಹಕಾರಿ ಸಂಘದ ಅಮೃತ ಮಹೋತ್ಸವ ; ಸಹಕಾರಿ ಮಹಲ್ ಉದ್ಘಾಟನೆ
Posted On: 26-08-2023 05:38PM
ಉಚ್ಚಿಲ : ಬಡಾ, ಎಲ್ಲೂರು, ಬೆಳಪು ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ದೇಶ ಹೊಂದಿ 1948ರಲ್ಲಿ ಸ್ಥಾಪಿತವಾದ ಬೆಳಪು ವ್ಯವಸಾಯ ಸಹಕಾರಿ ಸಂಘವು ಈಗಾಗಲೇ 5 ಶಾಖೆಗಳನ್ನು ಹೊಂದಿದ್ದು ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ನಿಮಿತ್ತ ಸೆಪ್ಟೆಂಬರ್ 2, ಶನಿವಾರದಂದು ಬಡಾ ಗ್ರಾಮ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಲಿರುವ ಅಮೃತ ಮಹೋತ್ಸವ ಸಂಭ್ರಮಾಚರಣೆ, ನವೀಕೃತ ಶಾಖೆ ಹಾಗೂ ಸಹಕಾರಿ ಮಹಲ್ ಉದ್ಘಾಟನಾ ಸಮಾರಂಭ ಮತ್ತು ಸಹಕಾರಿ ರಂಗದ ಅಗ್ರಗಣ್ಯ ನಾಯಕ ಡಾ| ಎಂ.ಎನ್. ಆರ್ ರವರಿಗೆ ಸಹಕಾರಿ ಧ್ರುವ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅವರು ಬೆಳಪು ಪಣಿಯೂರು ಸಹಕಾರಿ ಸಂಘದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಘದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಉಚಿಲದಲ್ಲಿ, ನಿರ್ಮಿಸಲಾಗಿರುವ ಸಂಘದ ನವೀಕೃತ ಶಾಖೆ ಮತ್ತು ನೂತನ ಸಹಕಾರಿ ಮಹಲ್ ಕಟ್ಟಡ ಹಾಗೂ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಕಾನ್ಫರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹವಾನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್ - ಭದ್ರತಾ ಕೊಠಡಿಯು ಸೆ. 2ರಂದು, ಬೆಳಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಉಚ್ಚಿಲ ಸಹಕಾರಿ ಮಹಲ್ವರೆಗೆ ಸಹಕಾರಿ ಮೆರವಣಿಗೆ ನಡೆಯಲಿದೆ.
ಮಹೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ನೂತನ ಸಹಕಾರಿ ಮಹಲ್ನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸಹಕಾರಿ ಸಭಾಂಗಣವನ್ನು ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ. ರಮೇಶ್, ನವೋದಯ ಸಭಾಂಗಣವನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಡಾ|ಎಂ.ಎನ್.ಆರ್ ಕಾನ್ಫರೆನ್ಸ್ ಹಾಲ್ನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಮೃತ ದರ್ಪಣ ಸ್ಮರಣ ಸಂಚಿಕೆಯನ್ನು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಇಂದ್ರಾಳಿ, ನಬಾರ್ಡ್ ಡಿಡಿಎಂ ಸಂಗೀತಾ ಎಸ್ ಕರ್ತ, ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್, ದ.ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಬಡಾ ಗ್ರಾ. ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ನಬಾರ್ಡ್ ಸಹಭಾಗಿತ್ವದಲ್ಲಿ ಸುಮಾರು 3.70 ಕೋಟಿ ವೆಚ್ಚದಲ್ಲಿ, ನಿರ್ಮಾಣಗೊಂಡಿರುವ ಸಹಕಾರಿ ಮಹಲ್ ಬೆಳಪು ವ್ಯವಸಾಯ ಸಹಕಾರಿ ಸಂಘದ ಕೀರ್ತಿಯನ್ನು ಹೆಚ್ಚಿಸಲಿದೆ. ಸದ್ರಿ ಮಹಲ್ನಲ್ಲಿ ಶಾಪಿಂಗ್ ಮಹಲ್, ಸಹಕಾರಿ ಸಭಾಂಗಣ, ರೈತರ ದಾಸ್ತಾನು ಕೊಠಡಿ ಮತ್ತು ವಿವಿಧ ರೈತ ಸಲಕರಣೆಗಳ ಮಾರಾಟ ಮಳಿಗೆ ಹಾಗೂ ಗ್ರಹೋಪಯೋಗಿ ವಸ್ತುಗಳ ಮಳಿಗೆ ಸ್ಥಾಪನೆಗೊಳ್ಳಲಿದ್ದು ಸಾರ್ವಜನಿಕ ಸೇವಾ ಮನೋಭಾವನೆಯೊಂದಿಗೆ ಪ್ರಧಾನ ಮಂತ್ರಿ ಜನೌಷಧಾಲಯ ಪ್ರಾರಂಭಗೊಳ್ಳಲಿದೆ ಎಂದರು.
ಈ ಸಂದರ್ಭ ಆಡಳಿತ ಮಂಡಳಿಯ ನಿರ್ದೇಶಕರಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿ ಸೋಜ, ಪಾಂಡು ಎಂ. ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್. ಭಟ್, ಬಾಲಕೃಷ್ಣ, ಎಸ್. ಆಚಾರ್ಯ, ಶೋಭಾ ಬಿ, ಭಟ್, ಮೀನಾ ಪೂಜಾರ್ತಿ, ವಿಮಲ ಅಂಚನ್, ಅನಿತಾ ಆನಂದ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾಪು : ಕೊಪ್ಪಲಂಗಡಿಯಲ್ಲಿ ನೈಟ್ರೋಜನ್ ಟ್ಯಾಂಕರ್ ನಲ್ಲಿ ಒತ್ತಡ ಹೆಚ್ಚಳ ; ಸಾರ್ವಜನಿಕರಲ್ಲಿ ಆತಂಕ
Posted On: 26-08-2023 11:18AM
ಕಾಪು : ಇಲ್ಲಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಳ್ಳಾರಿಯ ಹೊಸಪೇಟೆಯಿಂದ ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಗೆ ಸಾಗಿಸುತ್ತಿದ್ದ ನೈಟ್ರೋಜನ್ ಅನಿಲ ಟ್ಯಾಂಕರ್ ನಲ್ಲಿ ಒತ್ತಡ ಹೆಚ್ಚಾದ ಪರಿಣಾಮ ಅದರ ಚಾಲಕರು ನೈಟ್ರೋಜನ್ ಬಿಡುಗಡೆಗೊಳಿಸಿದ ಘಟನೆ ಶನಿವಾರ ಬೆಳಗ್ಗೆ ಘಟಿಸಿದೆ.
ಈ ಸಂದರ್ಭ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಆತಂಕಿತರಾಗಿದ್ದು ಕಂಡು ಬಂದಿದೆ.
ಈ ಮಧ್ಯೆ ಪತ್ರಕರ್ತರು ಟ್ಯಾಂಕರ್ ಚಾಲಕರಲ್ಲಿ ವಿಚಾರಿಸಿದಾಗ ಜನರು ಆತಂಕ ಪಡುವ ವಿಷಯ ಏನಿಲ್ಲ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ನೈಟ್ರೋಜನ್ ನ ಒತ್ತಡ ಹೆಚ್ಚಾದ ಪರಿಣಾಮ ನಾವು ಅದನ್ನು ಸ್ವಲ್ಪ ಮಟ್ಟಿಗೆ ಬಿಡುಗಡೆಗೊಳಿಸುತ್ತಿದ್ದೇವೆ ಎಂದರು.