Updated News From Kaup
ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ “ಕೆಸರ್ಡೊಂಜಿ ದಿನ” : ಮಣ್ಣಿನೊಂದಿಗೆ ಕಲಿಕಾ ಅನುಭವ ಕಾರ್ಯಕ್ರಮ
Posted On: 26-08-2023 07:26AM
ಕಾರ್ಕಳ : ಇಲ್ಲಿನ ಹಿರ್ಗಾನ ಗ್ರಾಮದಲ್ಲಿರುವ ʼಬೆಂಗಾಲ್ʼ ಕೃಷಿ ಭೂಮಿಯಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನದೊಂದಿಗೆ ಕೆಸರಿನಲ್ಲಿ ಜೀವನದ ಕಲಿಕೆ ಮತ್ತು ವಿವಿಧ ಆಟೋಟ ಕಾರ್ಯಕ್ರಮಗಳು ನಡೆದವು. ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ನೇಜಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಿರ್ಗಾನ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಇಂದು ನಮಗೆ ಧನ ಸಂಪಾದನೆಗೆ ಅನೇಕ ಮಾರ್ಗಗಳಿವೆ. ಆದರೆ ಹೊಟ್ಟೆ ತುಂಬಿಸಲು ರೈತ ಬೆಳೆದ ಬೆಳೆಯೇ ಬೇಕಾಗುತ್ತದೆ. ಆಹಾರದ ಉತ್ಪಾದನೆ ಇಲ್ಲದೇ ಹೋದರೆ ಎಷ್ಟೇ ಹಣವಿದ್ದರೂ ಬದುಕಲು ಅಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಕೃಷಿಯನ್ನು ತುಚ್ಛವಾಗಿ ಕಾಣದೇ ಭೂಮಿತಾಯಿಯ ಸೇವೆ ಎಂದು ಭಾವಿಸುವಂತಾಗಿ, ಭಾರತವು ಎಲ್ಲಾ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತಾಗಲಿ, ಹಾಳು ಬಿದ್ದಿರುವ ಕೃಷಿ ಜಮೀನು ಬೆಳೆ ಬೆಳೆಯುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿ ʼಕೈಕೆಸರಾದರೆ ಬಾಯಿ ಮೊಸರುʼ ಎಂಬ ಮಾತಿನಂತೆ ಇಂದು ಎಲ್ಲರೂ ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದೇವೆ. ಒಬ್ಬ ಕೃಷಿಕ ಪಡುವ ಕಷ್ಟ, ಬೆಳೆ ಬೆಳೆದು ರೈತನ ಕೈ ಸೇರಬೇಕಾದರೆ ತುಂಬಾ ದಿನಗಳು ಬೇಕಾಗುತ್ತದೆ. ಆಧುನಿಕತೆಯ ಭರಾಟೆಯ ಮಧ್ಯೆ ನಾವು ನಮ್ಮ ಮೂಲ ಕಸುಬಾದ ಕೃಷಿ, ಉಳುಮೆಯನ್ನೇ ಮರೆಯುತ್ತಿದ್ದೇವೆ. ಮುಂದೊಂದು ದಿನ ಆಹಾರದ ಕೊರತೆ ಉಂಟಾಗುವ ಸಂದರ್ಭ ಎದುರಾಗಬಹುದು ಅದಕ್ಕಾಗಿ ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ. ಕೆಸರಿನಿಂದ ಅನೇಕ ರೋಗ ರುಜಿನಗಳು ದೂರವಾಗುತ್ತದೆ ಎಂದು ನುಡಿದರು. ಸಂಸ್ಥಾಪಕರಲ್ಲಿ ಒಬ್ಬರಾದ ಅಮೃತ್ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಗತಿಪರ ಕೃಷಿಕ ಜಗದೀಶ್ ಕಡಂಬ, ಉದ್ಯಮಿ ಶ್ರೀಧರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದದರು.
ಕುಮಾರಿ ತ್ರಿಶಾ ಶೆಟ್ಟಿ ಸ್ವಾಗತಿಸಿದರು. ಕುಮಾರಿ ಸಾನ್ವಿ ರಾವ್ ನಿರೂಪಿಸಿ ವಂದಿಸಿದರು. ನಂತರ ತುಳುನಾಡಿನ 50ಕ್ಕೂ ಅಧಿಕ ವಿಶೇಷ ತಿಂಡಿ ತಿನಿಸುಗಳ ವಿತರಣೆ ನಡೆಯಿತು. ಹಳೆಯ ಕಾಲದ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ವಿಠ್ಠಲ್ ಕುಲಾಲ್, ಗೋಕುಲ್ ದಾಸ್ ವಾಗ್ಳೆಯವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭ : ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ ಯೋಗೀಶ್ ಕಿಣಿಯವರು ಕೃಷಿ ಸಂಸ್ಕೃತಿಯೇ ಭಾರತದ ಜೀವಾಳ ಇದನ್ನು ನಾವು ಅರಿತು ಬದುಕಬೇಕಾಗಿದೆ ಎಂದರು ಹಾಗೂ ಪತ್ರಕರ್ತ ರಾಮ್ ಅಜೆಕಾರ್ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ರವರು ವೈಜ್ಞಾನಿಕ ಪ್ರಗತಿಯಷ್ಟೇ, ಕೃಷಿ ಕ್ಷೇತ್ರದಲ್ಲೂ ಆವಿಷ್ಕಾರ ನಡೆದು ಆರೋಗ್ಯಯುತವಾದ ಸಂಮೃದ್ಧ ಬದುಕು ಎಲ್ಲರಿಗೂ ದೊರೆಯುವಂಯತಾಗಲಿ ಎಂದು ಹಾರೈಸಿದರು. ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡುತ್ತಾ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಬಡತನವಿಲ್ಲ, ಪ್ರತಿ ಅನ್ನದ ಅಗುಳಿನ ಮೇಲೆ ಅತೀವ ಗೌರವವಿರಲಿ ಎಂದು ಕಿವಿಮಾತು ಹೇಳಿದರು. ಸಂಸ್ಥಾಪಕರಾದ ಆದರ್ಶ ಎಂ.ಕೆ, ಅಮೃತ್ ರೈ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ವಿನಾಯಕ ಜೋಗ್ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು, ರಾಘವೇಂದ್ರ ರಾವ್ ಸ್ವಾಗತಿಸಿದರು, ಉಮೇಶ್ ಕಾರ್ಯಕ್ರಮ ನಿರೂಪಿಸಿದರು, ಚಂದ್ರಕಾಂತ ಆಚಾರ್ಯ ವಂದಿಸಿದರು.
ಮುದರಂಗಡಿ ಅಂಗನವಾಡಿ ಎದುರು ಅಪಾಯಕಾರಿ ಸ್ಥಿತಿಯಲ್ಲಿ ಮರಗಳು ; ಅರಣ್ಯ ಇಲಾಖೆಯ ವಿಳಂಬ ನೀತಿ ; ಶೀಘ್ರ ತೆರವಿಗೆ ಆಗ್ರಹ
Posted On: 26-08-2023 07:02AM
ಕಾಪು : ತಾಲೂಕಿನ ಮದರಂಗಡಿ ಗ್ರಾಮ ಪಂಚಾಯಿತಿಯ ಸಾಂತೂರು ಗ್ರಾಮದ ಚರ್ಚ್ ಎದುರಿರುವ ಅಂಗನವಾಡಿಯ ಎದುರು ನಾಲ್ಕು ಬೃಹತ್ ಮರಗಳಿದ್ದು, ಮರ ತೆರವುಗೊಳಿಸಲು ಅರಣ್ಯ ಇಲಾಖೆ ವಿಳಂಬವಹಿಸುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಇಪ್ಪತ್ತಕ್ಕೂ ಅಧಿಕ ಮಕ್ಕಳಿದ್ದ ಅಂಗನವಾಡಿಯಲ್ಲಿ ಈಗ ಕೇವಲ 10 ಮಕ್ಕಳು ಮಾತ್ರ ಇದ್ದಾರೆ. ಮುದರಂಗಡಿ ಗ್ರಾಮ ಪಂಚಾಯತ್ ಹಲವಾರು ಬಾರಿ ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಅರಣ್ಯ ಇಲಾಖಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೆಲಸ ಬಾಕಿ ಉಳಿದಿದೆ. ಗಾಳಿ, ಮಳೆಗೆ ಯಾವ ಹೊತ್ತಿನಲ್ಲೂ ಮರ ಅಂಗನವಾಡಿ ಕೇಂದ್ರದ ಮೇಲೆ ಉರುಳಿ ಬೀಳುವ ಸಾಧ್ಯತೆ ಇದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಶರತ್ ಶೆಟ್ಟಿ ಹಾಗೂ ಶಿವರಾಮ್ ಭಂಡಾರಿ ಅವರು ಆಕ್ರೋಶಿತರಾಗಿ ಮಾತನಾಡಿದ್ದಾರೆ. ಮುದರಂಗಡಿ ಗ್ರಾಮ ಪಂಚಾಯತ್ ಪಿಡಿಓ ಮುತ್ತುರವರು ಪ್ರತಿಕ್ರಿಯಿಸಿ, ಈಗಾಗಲೇ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಅವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು. ಅಂಗನವಾಡಿಯಲ್ಲಿರುವ ಮಕ್ಕಳ ಪಾಲಕರು ಶೀಘ್ರ ಮರ ತೆರವಿಗೆ ಆಗ್ರಹಿಸಿದ್ದಾರೆ.
ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಶಿರ್ವ ಶಾಖೆಯಿಂದ ವಿಶೇಷ ಶಾಲೆಗೆ ಅಗತ್ಯ ವಸ್ತುಗಳ ವಿತರಣೆ
Posted On: 25-08-2023 09:51PM
ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಮಾನಸ ವಿಶೇಷ ಶಾಲೆ ಪಾಂಬೂರು ಇಲ್ಲಿನ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕ್ರೈಸ್ತ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ನ್ಯಾಯವಾದಿ ಮೆಲ್ವಿನ್ ಡಿಸೋಜ, ಸಮಾಜ ಸೇವಕರಾದ ಹಸನ್ ಇಬ್ರಾಹಿಂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪ್ರಶಾಂತ್ ಜತ್ತನ್ನ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಮುಗ್ಧ ಮಕ್ಕಳಿಗೆ ಉಡುಗೊರೆ ನೀಡುವ ಮೂಲಕ ದೇವರ ಮೆಚ್ಚುಗೆಗೆ ಪಾತ್ರವೆಂದು ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಮೆಲ್ವಿನ್ ಡಿಸೋಜ ಮಾತನಾಡಿ ಶಿರ್ವ ಶಾಖೆಯ ಜನಸ್ನೇಹಿ ಸೇವೆಯನ್ನು ಸ್ಮರಿಸುತ್ತಾ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ಸಂಸ್ಥೆಯಿಂದ ನಡೆಯಲಿ ಎಂದು ಆಶಿಸಿದರು.
ಈ ವೇಳೆ ಶಾಲಾ ಪ್ರಾಂಶುಪಾಲೆ ಸಿ| ಅನ್ಸಿಲ್ಲಾ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಶಿರ್ವ ಶಾಖೆಯ ತೃಪ್ತಿ, ಹರ್ಷಿತಾ, ಬೆಸ್ಸಿ, ಮನೀಶ್ ರವರು ಸಹಕರಿಸಿದರು. ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮೆನೆಜಸ್ ಸ್ವಾಗತಿಸಿದರು. ಶಾಖಾ ಪ್ರಬಂಧಕಿ ಪ್ರಮೀಳಾ ಲೋಬೋ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾನಸ ಸಂಸ್ಥೆಯ ಶಿಕ್ಷಕಿ ಶಶಿಕಲ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಸಹಾಯಕ ವ್ಯವಸ್ಥಾಪಕರಾದ ವಿಲ್ಸನ್ ಪ್ರಿತೇಶ್ ವಂದಿಸಿದರು.
ಆಗಸ್ಟ್ 27: ಪೆರ್ಡೂರು ಕುಲಾಲ ಸಂಘದಲ್ಲಿ ಮಹಾಸಭೆ, ವಿದ್ಯಾರ್ಥಿ ವೇತನ ವಿತರಣೆ, ಕುಂಭ ಕಲಾ ಸಂಭ್ರಮ
Posted On: 25-08-2023 09:32PM
ಪೆರ್ಡೂರು : ತಾಲೂಕಿನ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಮುದಾಯ ಭವನದಲ್ಲಿ ಆಗಸ್ಟ್ ತಿಂಗಳ 27 ರಂದು 15 ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ, ಕುಂಭ ಕಲಾ ಸಂಭ್ರಮ -2023 ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವರು.
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಪನ್ನ
Posted On: 25-08-2023 04:36PM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ದೇವಳದ ಸಭಾಭವನದಲ್ಲಿ ವರಮಹಾಲಕ್ಷ್ಮಿ ಪೂಜೆ ಶುಕ್ರವಾರ ಸಂಪನ್ನಗೊಂಡಿತು.
ವೇದಮೂರ್ತಿ ಶ್ರೀ ಕೆ ವಿ ರಾಘವೇಂದ್ರ ಉಪಾಧ್ಯಾಯ, ಕೆ ವಿ ವಿಷ್ಣುಮೂರ್ತಿ ಉಪಾಧ್ಯಾಯರವರ ನೇತೃತ್ವದಲ್ಲಿ, ವೇದ ಮೂರ್ತಿ ಶ್ರೀಶ ಭಟ್ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭ ಮೊಗವೀರ ಮುಂದಾಳು ಡಾ. ಜಿ ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಾಜನ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಉಷಾರಾಣಿ ಬೋಳೂರು, ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.
ಚಂದಮಾಮನ ಬಳಿ ಭಾರತ - ಚಂದ್ರಯಾನ
Posted On: 25-08-2023 07:21AM
ಚಂದ್ರನ ದಕ್ಷಿಣ ದ್ರುವಕ್ಕೆ ಕಾಲಿಟ್ಟ ಜಗತ್ತಿನ ಏಕೈಕ ದೇಶ ನಮ್ಮ ಭಾರತ 'ಚಂದ್ರಯಾನ 3 ಅತ್ಯಂತ ಯಶಸ್ವಿಯಾಗಿದೆ. ಬಹು ನಿರೀಕ್ಷಿತ ವಿಕ್ರಂ ಲ್ಯಾoಡರ್ ಚಂದ್ರನ ನೆಲದಲ್ಲಿ ಲ್ಯಾಂಡ್ ಆಗುದ ರೊಂದಿಗೆ ಈ ಸಾಧನೆ ಮಾಡಿದೆ. 2008ರ ಪ್ರಥಮ ಚಂದ್ರಯಾನ ಮಿಶನ್ನಲ್ಲಿ ಭಾರತ ಸೋತರೂ ಚಂದ್ರನಲ್ಲಿ ನೀರಿದೆ ಎನ್ನುವುದನ್ನು ಪತ್ತೆ ಹಚ್ಚಿ ಅದನ್ನು ಜಗತ್ತಿಗೆ ಸಾರಿದೆ. ಅಲ್ಲಿಂದೀಚೆಗೆ ಭಾರತ ಸದ್ದಿಲ್ಲದೇ ಮಾತು ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಅಮೇರಿಕಾ ದೇಶವು ಭಾರತ ಇನ್ನು ಕಣ್ಣು ಬಿಡುವ ಮುಂಚೆಯೇ ಚಂದ್ರನ ಮೇಲೆ ಕಾಲಿಟ್ಟ ದೇಶವಾಗಿತ್ತು. ಐವತ್ತು ವರ್ಷಗಳ ನಂತರ ಭಾರತ ಅಮೇರಿಕಾ ದೇಶವನ್ನೂ ಹಿಂದಿಕ್ಕುವ ಪ್ರಮುಖ ಪ್ರತಿ ಸ್ಪರ್ಧಿಯಾಗಿ ಹೊರಹೊಮ್ಮಿದೆ.
ಪ್ರಯತ್ನ ಗೆದ್ದಿತು : ಚಂದ್ರಯಾನ 2 ರಲ್ಲಿ ಸೋಲು ಉಂಟಾದರೂ ಎದೆಗುಂದದೆ ರಾತ್ರಿ ಹಗಲೆನ್ನದೆ ಸತತ ಪ್ರಯತ್ನದ ಕಾಯ೯ ಮಾಡಿದ ನಮ್ಮ ವಿಜ್ಞಾನಿಗಳು ಅಭಿನಂದನಾಹ೯ರು. ಅಮೇರಿಕಾ 50 ವರ್ಷದ ನಂತರ ಮತ್ತೆ ಚಂದ್ರನ ಮೇಲೆ ತನ್ನ ಜನರನ್ನು ಕಳಿಸಲು ಹವಣಿಸುತ್ತಿದೆ. ಚೀನಾ ಮತ್ತು ರಷ್ಯಾ ಕೂಡ ಸ್ಪರ್ಧೆಗೆ ಬಿದ್ದವರಂತೆ ಪ್ರಯತ್ನವನ್ನು ಪಡುತ್ತಿದ್ದಾರೆ. ಇಲ್ಲಿಯವರೆಗೆ 11 ದೇಶಗಳು ಚಂದ್ರನ ಮೇಲೆ ತಮ್ಮ ನೌಕೆಗಳನ್ನು ಕಳುಹಿಸಿದ್ದಾರೆ. ರಷ್ಯಾ ಇಲ್ಲಿಯವರೆಗೆ 23 ಮಿಷನ್ ಮುಗಿಸಿದೆ. ಮೊನ್ನೆ ವಿಫಲವಾದದ್ದು ದೊಡ್ಡ ಸುದ್ದಿಯಾಯ್ತು . ಆದರೆ ಈಗಾಗಲೇ ಅಮೇರಿಕಾ 32, ರಷ್ಯಾ 23 ಮತ್ತು ಚೀನಾ 7 ಬಾರಿ ತಮ್ಮ ಮಿಷನ್ ಗಳಲ್ಲಿ ಯಶಸ್ಸನ್ನು ಕಂಡಿದೆ. ಆದರೆ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ. ಅವೆಲ್ಲವೂ ಚಂದ್ರನ ಇತರ ಭಾಗಗಳಲ್ಲಿ ಇಳಿದಿವೆ. ಭಾರತದ ಈ ಸಾಧನೆಯಲ್ಲಿ ನಮ್ಮ ಕೇಂದ್ರ ಸಕಾ೯ರದ ಉತ್ತಮ ಬೆಂಬಲ ವಿಜ್ಞಾನಿಗಳ ಅವಿರತ ಶ್ರಮ ಮುಖ್ಯವಾದದ್ದು, ಕೆಲವರು ಈ ಸಾಧನೆಯನ್ನು ಟೀಕಿಸಿ ಗೇಲಿ ಮಾಡಿದರೂ ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಈ ಮೂಲಕ ಇಸ್ರೋ ಸಂಸ್ಥೆ ಜಗತ್ತಿನಲ್ಲಿ ಗುರುತಿಸಿಕೊಂಡಿದೆ.
ಚಂದ್ರಯಾನದಿಂದ ನಮಗೆ ಸಿಗುವ ಸೌಲಭ್ಯ : ಚಂದ್ರನ ಮೇಲೆ ಯಥೇಚ್ಛವಾಗಿ ಬಿಲ್ಡಿಂಗ್ ಮೆಟೀರಿಯಲ್ಸ್, ನೀರು, ಆಮ್ಲಜನಕಳು ಸಿಗುತ್ತವೆ. ಅವುಗಳಲ್ಲಿ ಬಹಳಷ್ಟು ಬಳಸುವುದಕ್ಕೆ ಮುಂಚೆ ಪ್ರೋಸೆಸ್ ಮಾಡುವ ಅವಶ್ಯಕತೆಯಿದೆ. ಚಂದ್ರನ ಮೇಲಿರುವ ಹಿಮವು ಚಂದ್ರನ ಮೇಲೆ ಜೀವರಾಶಿಯನ್ನು ಬೆಳೆಸಲು , ಅಲ್ಲೊಂದು ವಸಹಾತು ಕಟ್ಟಲು, ಲಾಭದಾಯಕ ಲೂನಾರ್ ಎಕಾನಮಿ ಕಟ್ಟಲು ಬಹಳಷ್ಟು ಸಹಾಯವನ್ನು ಮಾಡಲಿದೆ. ಹೀಲಿಯಂ-3 ಚಂದ್ರನಲ್ಲಿ ಹೇರಳವಾಗಿ ಸಿಗುತ್ತದೆ. ಆದರೆ ಇದು ಭೂಮಿಯ ಮೇಲೆ ಅಷ್ಟಾಗಿ ಸಿಗುವುದಿಲ್ಲ. ಮುಂಬರುವ ದಿನಗಳಲ್ಲಿ ನ್ಯೂಕ್ಲಿಯರ್ ಫ್ಯೂಶನ್ ರಿಯಾಕ್ಟರ್ ಗೆ ಬೇಕಾಗುವ ಇಂಧನವನ್ನು ತಯಾರು ಮಾಡಲು ಈ ಹೀಲಿಯಂ ಅತ್ಯಂತ ಅವಶ್ಯಕವಾಗಿ ಬೇಕಾಗುತ್ತದೆ. ಜಗತ್ತಿಗೆ ಮುಂದಿನ ದಿನದಲ್ಲಿ ಬೇಕಾಗುವ ಎನರ್ಜಿ ಉತ್ಪತ್ತಿಯಾಗುವುದು ನ್ಯೂಕ್ಲಿಯರ್ ಎನರ್ಜಿಯಿಂದ ಎನ್ನುವುದು ಇಂದಿಗೆ ಎಲ್ಲರಿಗೂ ಗೊತ್ತಿರುವ ವಿಷಯ. ಹೀಲಿಯಂ ಸಹಿತ ಇನ್ನಿತರ ಸಂಪನ್ಮೂಲಗಳನ್ನು ಚಂದ್ರನ ಮೇಲೆ ಗಣಿಗಾರಿಕೆ ಮಾಡುವುದರ ಮೂಲಕ ನಾವು ಪಡೆದುಕೊಳ್ಳಬಹುದು. ಇದರಿಂದ ಭೂಮಿಯ ಮೇಲಿನ ಜನರ ಜೀವನ ಮಟ್ಟವನ್ನು ಇನ್ನಷ್ಟು ಸುಧಾರಿಸಬಹುದು. ಹೊಸ ತಂತ್ರಜ್ಞಾನದ ಸಹಾಯದಿಂದ ಚಂದ್ರನ ಮೇಲಿನ ಗಣಿಗಾರಿಕೆ ಅತಿ ಶೀಘ್ರದಲ್ಲಿ ಶುರುವಾಗುತ್ತದೆ. ಒಂದು ಕೇಜಿ ಹೀಲಿಯಂ ಉತ್ಪಾದನೆ ಮಾಡಿದರೆ ಭೂಮಿಯ ಮೇಲೆ ಸಂಪತ್ತು 3 ಮಿಲಿಯನ್ ಡಾಲರ್ ಹೆಚ್ಚಾದಂತೆ ! ರೇರ್ ಅರ್ಥ್ ಮೆಟಲ್ಸ್ ಗಳು ಇಂದಿನ ಎಲ್ಲಾ ಎಲೆಕ್ಟ್ರಾನಿಕ್ಸ್ , ಬ್ಯಾಟರಿಗಳು , ಎಲೆಕ್ಟ್ರಿಕ್ ಮೋಟರ್ಸ್ ಒಟ್ಟಾರೆ ಇಂದಿನ ಜೀವನಕ್ಕೆ ಬೇಕಾದ ಮುಕ್ಕಾಲು ಪಾಲು ಎಲ್ಲಾ ಪದಾರ್ಥಗಳಲ್ಲಿ ಬಳಕೆಯಾಗುತ್ತದೆ. ಚಂದ್ರನಲ್ಲಿ ದೊರೆಯಬಹುದಾದ ಸಂಭಾವ್ಯ ಸಂಪನ್ಮೂಲಗಳನ್ನು , ಭೂಮಿಯ ಮೇಲಿನ ಗಣಿಗಾರಿಕೆಗಿಂತ ಕಡಿಮೆ ವೆಚ್ಚದಲ್ಲಿ ಮಾಡಬಹುದು ಎನ್ನುವ ಅಂದಾಜು , ಅಮೇರಿಕಾ , ರಷ್ಯಾ , ಚೀನಾ ಮತ್ತು ಭಾರತಕ್ಕೆ ಆಗಲೇ ಸಿಕ್ಕಿದೆ. ಈ ನಿಟ್ಟಿನಲ್ಲಿ ಸಹ ಚಂದ್ರಯಾನ ಭಾರತಕ್ಕೆ ಭಾಗ್ಯದ ಬಾಗಿಲಾಗುವ ಸಾಧ್ಯತೆಯಿದೆ.
ಡೇಟಾ ಮೈನಿಂಗ್ : ಇವತ್ತು ಮಾಹಿತಿ ಹಣಕ್ಕಿಂತ ದೊಡ್ಡ ಸ್ಥಾನವನ್ನು ಪಡೆದುಕೊಂಡಿದೆ. ಭಾರತ , ಚಂದ್ರನ ಮೇಲೆ ನೀರಿದೆ ಎಂದು ಹೇಳಿದ ಪ್ರಥಮ ರಾಷ್ಟ್ರ , ಇಂದಿಗೆ ಭಾರತ , ಜಗತ್ತಿನ ಅತಿರಥ ಮಹಾರಥ ದೇಶಗಳಿಗೆ ಸೆಡ್ಡು ಹೊಡೆದು ನಿಲ್ಲುವ ಮಟ್ಟಕ್ಕೆ ಬೆಳದಿದೆ. ನಾವು ಮೊದಲಿಗರಾದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಬಳಿ ಹೆಚ್ಚಿನ ಮಾಹಿತಿ ದೊರಕುತ್ತದೆ. ಇವತ್ತು ಡೇಟಾ ಇದ್ದವರೆ ಅಧಿಪತಿಗಳು. ಅಲ್ಲಿ ನೆಲೆ ನಿಲ್ಲಲು ಬೇಕಾಗುವ ಕಟ್ಟಡಗಳನ್ನು ಕಟ್ಟಲು , ಮೂನ್ ಕ್ವೆಕ್ , ನೆಲದ ಸ್ಟಬಿಲಿಟಿ , ರೇಡಿಯೇಷನ್ ಬ್ಲಾಸ್ಟ್ಸ್ , ಎಲೆಕ್ಟ್ರೋಮ್ಯಾಗ್ನಟಿಕ್ ಇಂಟರ್ಫೆರೆನ್ಸ್ , ಹೀಗೆ ಇವುಗಳಲ್ಲೆವೂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ನಮಗಿನ್ನೂ ಗೊತ್ತಿಲ್ಲ. ಇವುಗಳೆಲ್ಲವನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕಾದ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಯಾರು ಮೊದಲು ಟಾಲಾ ಊರುತ್ತಾರೆ , ಅವರಿಗೆ ಹೆಚ್ಚಿನ ಶಕ್ತಿ , ಅಡ್ವಾಂಟೇಜ್ ಸಿಗುತ್ತದೆ. ಈ ಅರ್ಥದಲ್ಲಿ ಭಾರತದ ಇಂದಿನ ಚಂದ್ರಯಾನದ ಫಲಿತಾಂಶ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಲೂನಾರ್ ರಿಯಲ್ ಎಸ್ಟೇಟ್ ಬಿಸಿನೆಸ್ : ನಾವಿರುವ ಭೂಮಿ ಬಿಟ್ಟರೆ ನಾವು ಸದ್ಯಕ್ಕೆ ಚಂದ್ರನ ಮೇಲೆ ಸೈಟ್ ಮಾಡಿ ಮಾರಬಹುದು ನೋಡಿ ! ಮುಂದಿನ ಹತ್ತು ವರ್ಷದಲ್ಲಿ ಇಂದೊಂದು ಸಾಧ್ಯವಾಗಬಲ್ಲ ಕನಸು. 2025ರ ವೇಳೆಗೆ ಜನರನ್ನು ಚಂದ್ರಯಾನ ಮಾಡಿಸಿ ವಾಪಸ್ಸು ಕರೆದುಕೊಂಡು ಬರಲು ಸಿದ್ಧತೆ ನಡೆಸಲಾಗುತ್ತಿದೆ. ಭೂಮಿಯ ಮೇಲಿನ ಅತ್ಯುತ್ತಮ ಜನ , ಮನೆತನೆಗಳು ಅಲ್ಲಿ ಮನೆ ಮಾಡಿ , ಭೂಮಿಗೆ ಬಂದು ಹೋಗಿ ಮಾಡುವ ದಿನಗಳು ಬರಬಹುದು. ಹಾಗೊಮ್ಮೆ ಆದರೆ , ಭಾರತ ಆ ಆಟದಲ್ಲಿ ಖಂಡಿತ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಂದಿನ ಫಲಿತಾಂಶ ಹಲವು ಕಾರಣಗಳಿಂದ ಮುಖ್ಯವಾಗಿದೆ. ಕೊನೆಮಾತು : ಅಮೇರಿಕಾದ ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ ಏಜನ್ಸಿ (DARPA ) ಎನ್ನುವ ಸಂಸ್ಥೆ ಅಮೆರಿಕಾದ ಮಿಲಿಟರಿಗೆ ಬೇಕಾದ ಅತ್ಯುತ್ತಮ ತಂತ್ರಜ್ಞಾನವನ್ನು ಒದಗಿಸಲು ಶ್ರಮಿಸುತ್ತದೆ. ಇದು ಮುಂದಿನ ಹತ್ತು ವರ್ಷದಲ್ಲಿ ಚಂದ್ರನ ಮೇಲೆ ಒಂದು ಹೊಸ ಎಕಾನಮಿ ಸೃಷ್ಟಿಸುವ ಕೆಲಸವನ್ನು ಹೊತ್ತಿದೆ. ಅದಕ್ಕೆ ಲೂನಾರ್ ಎಕಾನಮಿ ಎನ್ನುವ ನಾಮಕರಣವನ್ನು ಸಹ ಮಾಡಿದೆ. ಇಂದಿಗೆ ಜಗತ್ತಿನ ನಾಲ್ಕು ದೇಶಗಳು ಚಂದ್ರನ ಮೇಲಿನ ಹಿಡಿತಕ್ಕೆ ಸ್ಪರ್ಧೆಗೆ ಇಳಿದಿವೆ. ಐವತ್ತು ವರ್ಷದ ಹಿಂದೆ ಈ ಸ್ಪರ್ಧೆಯಲ್ಲಿ ಭಾರತವೂ ಇರುತ್ತದೆ ಎನ್ನುವ ಮಾತನ್ನು ಕೇಳಿದ್ದರೆ ಸಾಕು ಜಗತ್ತು ನಕ್ಕಿರುತ್ತಿತ್ತು , ಭಾರತವೂ ನಂಬುತ್ತಿರಲಿಲ್ಲ. ಐದು ದಶಕದಲ್ಲಿ ಭಾರತ ಸಂಪೂರ್ಣ ಬದಲಾಗಿ ಹೋಗಿದೆ. ಅಮೃತ ಕಾಲದಲ್ಲಿ ನಮಗೆ ಸಿಕ್ಕ ದೊಡ್ದ ಗಿಫ್ಟ್ ಅಭಿನಂದನೆಗಳು ಇಸ್ರೋ ' ಲೇಖನ : ರಾಘವೇಂದ್ರ ಪ್ರಭು, ಕವಾ೯ಲು ಸಹಕಾರ: ರಂಗಸ್ವಾಮಿ
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ 2022-23ನೇ ಸಾಲಿನ ಜಿಲ್ಲಾ ಬ್ಯಾಂಕಿನ ವಿಶೇಷ ಪ್ರೋತ್ಸಾಹಕ ಬಹುಮಾನ
Posted On: 25-08-2023 07:17AM
ಪಡುಬಿದ್ರಿ : ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2022-23ನೇ ಸಾಲಿನ ಮಹಾಸಭೆಯಲ್ಲಿ, ಉಡುಪಿ ಜಿಲ್ಲೆಯಲ್ಲಿಯೇ 13 ವರ್ಷಗಳಿಂದ ಸತತವಾಗಿ 25% ಡಿವಿಡೆಂಡ್ ನೀಡುತ್ತಿರುವ ಏಕೈಕ ಸಂಸ್ಥೆಯಾಗಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.)ಗೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಗಳಿಸಿದ ಪ್ರಗತಿಯನ್ನು ಗುರುತಿಸಿ 2022-23ನೇ ಸಾಲಿನ ಜಿಲ್ಲಾ ಬ್ಯಾಂಕಿನ ವಿಶೇಷ ಪ್ರೋತ್ಸಾಹಕ ಬಹುಮಾನವನ್ನು ಮಂಗಳೂರು ಕೊಡಿಯಾಲ್ ಬೈಲ್ನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ (ಪ್ರಭಾರ) ದೀಪಕ್ಸಾಲ್ಯಾನ್ ರವರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಉಭಯ ಜಿಲ್ಲೆಗಳ ಸಹಕಾರಿಸಂಘಗಳ ಉಪನಿಬಂಧಕ ರಮೇಶ್ ಎಚ್. ಎನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರಾದ ಜಯಕರಶೆಟ್ಟಿ ಇಂದ್ರಾಳಿ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಆಡಳಿತ ಮಂಡಳಿ ಸದಸ್ಯರು ಹಾಗೂ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ನಿರ್ದೇಶಕರುಗಳಾದ ಗಿರೀಶ್ ಪಲಿಮಾರು, ಶಿವರಾಮ ಎನ್ ಶೆಟ್ಟಿ, ವಾಸುದೇವ, ಮಾಧವಆಚಾರ್ಯ, ಯಶವಂತ, ಸುಚರಿತ ಉಪಸ್ಥಿತರಿದ್ದರು.
ಕಟಪಾಡಿ :ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ - ಧರ್ಮ ದಂಡ ಸಮರ್ಪಣೆ, ಧರ್ಮ ದಂಡ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮ
Posted On: 25-08-2023 07:14AM
ಕಟಪಾಡಿ : ನಾವು ನಡೆಸುವ ಧರ್ಮ ಕಾರ್ಯಗಳೇ ನಮ್ಮನ್ನು ರಕ್ಷಿಸುತ್ತವೆ ಮತ್ತು ಆಧರಿಸುತ್ತವೆ. ನಮ್ಮ ಮನಸ್ಥಿತಿ ನಡೆಯನ್ನು ನಿರ್ಧರಿಸುತ್ತದೆ. ಧರ್ಮ ಕಾರ್ಯ ನಡೆಸುವಾಗ ಪ್ರತಿಫಲಾಪೇಕ್ಷೆ ಬಯಸಬಾರದು ಎಂದು ಕಟಪಾಡಿ ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ಪಡುಕುತ್ಯಾರು ಆನೆಗುಂದಿ ಮೂಲಮಠದಲ್ಲಿ ಗುರುವಾರ ನಡೆದ ಧರ್ಮ ದಂಡ ಸಮರ್ಪಣೆ ಹಾಗೂ ಧರ್ಮ ದಂಡ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮದಲ್ಲಿ ಧರ್ಮ ದಂಡವನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು. ಆಸೆ ಆಕಾಂಕ್ಷೆಗಳ ಲಾಲಸೆಯಿಲ್ಲದೇ ನಡೆಯಂತೆ ನುಡಿದು, ಅದರಂತೆ ಜೀವನ ನಡೆಸಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಶಿಷ್ಯ ವೃಂದವನ್ನು ಧರ್ಮದ ಹಾದಿಯಲ್ಲಿ ನಡೆಯುವಂತೆ ಆಶೀರ್ವದಿಸಲು ಮತ್ತು ಪರಂಪರೆಯನ್ನು ರಕ್ಷಣೆ ಮಾಡುವ ಪ್ರತೀಕವಾಗಿ ಧರ್ಮ ದಂಡ ಬಳಕೆಯಾಗಲಿದೆ ಎಂದರು.
ಧರ್ಮ ದಂಡ ತಯಾರಿಗೆ 1.08 ಕೆಜಿ ಬೆಳ್ಳಿ, 23 ಗ್ರಾಂ ಚಿನ್ನ ಬಳಕೆಯಾಗಿದ್ದು, ಸಂಪೂರ್ಣ ಬೆಳ್ಳಿಯಿಂದ ತಯಾರು ಮಾಡಿರುವ ಧರ್ಮ ದಂಡವು 1.5 ಮೀ ಎತ್ತರವಿದೆ. 1.08 ಕಿ. ಗ್ರಾಂ. ಶುದ್ಧ ಬೆಳ್ಳಿಯಲ್ಲಿ ತಯಾರಿಸಿದ ದಂಡದ ಮೇಲ್ಬಾಗದಲ್ಲಿ 23 ಗ್ರಾಂ. ಅಪ್ಪಟ ಚಿನ್ನ ಬಳಸಿದ ನಂದೀಶ್ವರನ ಪ್ರತಿಮೆಯಿದ್ದು ಅಭಯ, ಪರಿಶುದ್ಧ ಜ್ಞಾನ ಮಾರ್ಗದ ಧರ್ಮದ ಪ್ರತಿರೂಪವಾಗಿ ಬಳಕೆಯಾಗಲಿದೆ. ಶ್ರೀಗಳ 19ನೇ ವರುಷದ ಚಾತುರ್ಮಾಸ್ಯ ವೃತಾಚರಣೆಯ ಸವಿನೆನಪಿಗಾಗಿ ಅವರ ಶಿಷ್ಯಂದಿರಾದ ಮಂಚಕಲ್ಲು ದಿ| ಚಂದ್ರಾವತಿ ವಾಸುದೇವ ಆಚಾರ್ಯ ಅವರ ಪುತ್ರರಾದ ಉಡುಪಿ ತಿರುಮಲ ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಶ್ರೀಧರ ವಿ. ಆಚಾರ್ಯ ಮುಂಬಯಿ, ಪಿ.ವಿ. ಅಚ್ಯುತ ಆಚಾರ್ಯ ಉಡುಪಿ ಮತ್ತು ಕುಟುಂಬಸ್ಥರು ಧರ್ಮ ದಂಡವನ್ನು ಕೊಡುಗೆ ರೂಪದಲ್ಲಿ ಸಮರ್ಪಿಸಿದ್ದು ಪೃಥ್ವಿರಾಜ್ ಆಚಾರ್ಯ ಕಿನ್ನಿಗೋಳಿ ಇದನ್ನು ತಯಾರಿಸಿದ್ದಾರೆ.
ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವೇ.ಬ್ರ. ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ ಅವರ ಮಾರ್ಗದರ್ಶನದಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ಅಕ್ಷಯ ಶರ್ಮಾ ಕಟಪಾಡಿ ಅವರ ನೇತೃತ್ವದಲ್ಲಿ ಮಹಾಸಂಸ್ಥಾನದ ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪೂರ್ವ ಮತ್ತು ಪ್ರಸ್ತುತ ವಿದ್ಯಾರ್ಥಿಗಳ ಸಹಕಾರದೊಂದಿಗೆ ವೈದಿಕ ಕಾರ್ಯಕ್ರಮಗಳು ಜರಗಿದವು. ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಮುಖಂಡ ಜಿ. ಟಿ. ಆಚಾರ್ಯ ಮುಂಬೈ ಶುಭಾಶಂಸನೆಗೈದರು.
ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರಮುಖರಾದ ತ್ರಾಸಿ ಸುಧಾಕರ ಆಚಾರ್ಯ, ರೂಪೇಶ್ ಆಚಾರ್ಯ ಶಿರ್ವ, ಗುರುರಾಜ್ ಕೆ.ಜೆ. ಮಂಗಳೂರು, ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು, ಕೆ. ಪ್ರಭಾಕರ ಆಚಾರ್ಯ ಕೋಟೆಕಾರು, ದಿನೇಶ್ ಆಚಾರ್ಯ ಪಡುಬಿದ್ರಿ, ಕೆ. ನಾಗರಾಜ ಆಚಾರ್ಯ ಉಡುಪಿ, ಬಿ. ಸುಂದರ ಆಚಾರ್ಯ ಮಂಗಳೂರು, ಆನೆಗುಂದಿ ಗುರು ಸೇವಾ ಪರಿಷತ್ ಅಧ್ಯಕ್ಷ ಕೆಮ್ಮಣ್ಣು ಗಣೇಶ ಆಚಾರ್ಯ, ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ಹರ್ಷ ಆಚಾರ್ಯ ಮಂಚಕಲ್, ಅಚ್ಯುತ ಆಚಾರ್ಯ ಉಡುಪಿ, ಎಂ.ಪಿ. ಮೋಹನ ಆಚಾರ್ಯ ಉಡುಪಿ, ರಾಘವೇಂದ್ರ ಆಚಾರ್ಯ ಉಡುಪಿ, ರತ್ನಾಕರ ಆಚಾರ್ಯ ಉದ್ಯಾವರ, ಜನಾರ್ದನ ಆಚಾರ್ಯ ಕನ್ಯಾನ, ವಾದಿರಾಜ ಆಚಾರ್ಯ ಮಂಗಳೂರು, ಉಮೇಶ್ ಆಚಾರ್ಯ ಮುಂಬೈ, ಲೋಲಾಕ್ಷ ಶರ್ಮ ಪಡುಕುತ್ಯಾರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರು.
ವರಮಹಾಲಕ್ಷ್ಮಿ ವ್ರತ : ’ಸಂಪತ್ತಿನ ರಾಣಿಯ ಆರಾಧನೆ’
Posted On: 25-08-2023 07:08AM
"ಲಕ್ಷಯತಿ ಪಶ್ಯತಿ ಭಕ್ತಜನಾನ್ ಇತಿ ಲಕ್ಷ್ಮೀ" ಇದು ’ಲಕ್ಷ್ಮೀ’ ಶಬ್ದದ ವ್ಯುತ್ಪತ್ತಿ. ಉಪಾಸಕರನ್ನು ಕೃಪಾಕಟಾಕ್ಷದಿಂದ ವೀಕ್ಷಿಸುವವಳೇ ’ಲಕ್ಷ್ಮೀ’. ಶ್ರೀ ಎಂಬುದು ’ಲಕ್ಷ್ಮೀ’ಯ ನಾಮಾಂತರ. ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯ, ಕಮಲ, ಬಿಲ್ವವೃಕ್ಷ ಮುಂತಾದುವು ’ಶ್ರೀ’ ಶಬ್ದಕ್ಕಿರುವ ಹಲವು ಅರ್ಥಗಳು. ಸಂಪತ್ತು ಎಂಬುದು ಸಾಮಾನ್ಯ ಅರ್ಥವಾದರೂ ’ಐಶ್ವರ್ಯವೆಂಬುದು ಪ್ರಧಾನವಾದ ಅರ್ಥ ಅಥವಾ ಸಾಮಾನ್ಯ ಒಪ್ಪಿಗೆ - ತಿಳಿವಳಿಕೆ. "ಈಶ್ಚರಸ್ಯ ಭಾವಃ ಐಶ್ವರ್ಯಂ". ಪರಮಾತ್ಮನ ಅನುಗ್ರಹಕಾರಕವಾದ ಗುಣ ವಿಶೇಷವೇ ’ಶ್ರೀ’. ’ಲಕ್ಷ್ಮೀ’ ಸಮುದ್ರ ಮಥನದಲ್ಲಿ ಹುಟ್ಟಿದಳು. ನಾರಾಯಣನನ್ನು ವರಿಸಿ ತಾನು ’ಮಹಾಲಕ್ಷ್ಮೀ’ಯಾದಳು. ನಾರಾಯಣನು ’ಲಕ್ಷ್ಮೀನಾರಾಯಣ’ನಾದ, ಶ್ರೀಮನ್ನಾರಾಯಣನಾದ. ಸ್ಥಿತಿಕರ್ತನಾದ-ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ, ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ ’ಲಕ್ಷ್ಮೀ’ ಬಹುಮಾನ್ಯಳಾದಳು.
ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ.ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು, ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ. ಆ ದಿನದಂದು ಲಕ್ಷ್ಮೀಯನ್ನು ವರಗಳನ್ನು ಕೊಡುವವಳು ಅಥವಾ ಅನುಗ್ರಹಿಸುವವಳು ಎಂಬ ಅನುಸಂಧಾನದಿಂದ "ವರಮಹಾಲಕ್ಷ್ಮೀ"ಯನ್ನಾಗಿ ಪರಿಕಲ್ಪಿಸಿಕೊಂಡು ಆರಾಧಿಸುವುದು. ಕಟ್ಟು-ಕಟ್ಟಳೆ, ನಿಯಮ, ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ, ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ : ವರಮಹಾಲಕ್ಷ್ಮೀವ್ರತ’. ನಾರಾಯಣ-ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು. ಪರಶುರಾಮನಾದಾಗ ಈಕೆ ಭೂದೇವಿ. ರಾಮಾವತಾರದಲ್ಲಿ ಸೀತಾದೇವಿ. ಕೃಷ್ಣಾವತಾರದಲ್ಲಿ ರುಕ್ಮಿಣಿ. ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ. ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ. ಈ ಲಕ್ಷ್ಮೀಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ ’ತಿರುಪತಿ’- ಶ್ರೀಪತಿ, ಭೂವೈಕುಂಠ.
ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ ’ಶ್ರೀಸೂಕ್ತದ’ ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ, ಜೊತೆಯಲ್ಲೇ ಇರುವ ಶ್ರೀ ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು, ರೂಪಗಳನ್ನು ವರ್ಣಿಸುತ್ತದೆ. ಲಕ್ಷ್ಮೀಯು ಚತುರ್ಭಾಹುವುಳ್ಳವಳ್ಳವಳು ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು. ಕೆಳಗಿನ ಕೈಗಳಿಂದ ’ವರದ’ ಮತ್ತು ’ಅಭಯ’ ಮುದ್ರೆಗಳನ್ನು ತೋರಿಸುತ್ತಿರುವವಳು. ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು. ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯಗಳನ್ನು ದಯಪಾಲಿಸುವವಳು. ಆದುದರಿಂದ ಜನಪ್ರಿಯಳು, ಅದೇ ತಾನೇ ಬಹುಮಾನ್ಯತೆ.
ದೇವರುಗಳೆಷ್ಟು ? : ಭಾರತೀಯರಿಗೆ ದೇವರುಗಳು ಎಷ್ಟು? ನಂಬಿಕೆ, ಉಪಾಸನೆ ಗೊಂದಲವಿಲ್ಲವೇ? ಹೀಗೆಂದು ವಿದೇಶಿಯೊಬ್ಬ ಕೇಳುತ್ತಾನೆ. ಹೌದಲ್ಲ.... ನಮ್ಮ ದೇವತೆಗಳು, ದೇವರುಗಳನ್ನು ಲೆಕ್ಕ ಹಾಕಿದಾಗ ಅದು ಮೂವತ್ತಮೂರು ಕೋಟಿಗೂ ಹೆಚ್ಚು. ಆದರೆ ನಮಗೆ ಆರಾಧನೆಯಲ್ಲಿ ಗೊಂದಲವೇ ಇಲ್ಲ.ಒಂದೊಂದು ಉದ್ದೇಶಕ್ಕೆ, ಇಷ್ಟಾರ್ಥ ಸಿದ್ಧಿಗೆ ಒಂದೊಂದು ದೇವರು. ಮೊನ್ನೆ ನಾಗನನ್ನು ಪೂಜಿಸಿದೆವು, ಈಗ ಲಕ್ಷ್ಮೀಯನ್ನು ಆರಾಧಿಸುತ್ತೇವೆ, ಮುಂದೆ ಕೃಷ್ಣನನ್ನು ಬಳಿಕ ಗಣಪತಿಯನ್ನು, ನವದುರ್ಗೆಯರನ್ನು, ಬಲೀಂದ್ರನನ್ನು, ಶಿವನನ್ನು ಪೂಜಿಸುತ್ತೇವೆ. ವರ್ಷಪೂರ್ತಿ ಪೂಜೆ, ವ್ರತಗಳು ನಮ್ಮ ಶ್ರಮದ ಬದುಕಿನ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಸಾಗಿಬಂದಿವೆ. ತುಳುವರಿಗೆ ಮೇಲಿನ ದೇವತೆ - ದೇವರುಗಳೊಂದಿಗೆ ಸಾವಿರಮಾನಿ ದೈವಗಳು, ನೂರೆಂಟು ಗಂಡಗಣಗಳನ್ನು ವಿಧಿಯಂತೆ ಪೂಜಿಸುವ ಸಹಜ ನಂಬಿಕೆ. ಇವುಗಳಲ್ಲದೆ ಕೃಷಿ ಸಂಸ್ಕೃತಿಯೊಂದಿಗೆ ಆಚರಿಸಲ್ಪಡುವ ಆಚರಣೆಗಳು. ಇತ್ತೀಚೆಗೆ ನಮ್ಮದಲ್ಲದ ಹತ್ತಾರು ಆರಾಧನೆಗಳು ಸೇರಿ ಕೊಂಡಿವೆ. ಆದರೆ ಗೊಂದಲವಿಲ್ಲ, ಮನಃಪೂರ್ವಕವಾದ ಒಪ್ಪಿಗೆಗಳಿವೆ. ಇದು ಈ ದೇಶದ, ತುಳುನಾಡಿನ, ಮಣ್ಣಿನ ಆಸ್ತಿಕತೆ. ಇದು ನಮ್ಮ ಪರಂಪರೆಯಾಗಿ ವಂಶವಾಹಿನಿಯಲ್ಲಿದೆ. ಬಹುತೇಕ ಆರಾಧನೆ, ನಂಬಿಕೆಗಳೆಲ್ಲ ಏನನ್ನೊ ಪ್ರಾಪ್ತಿಸಿಕೊಳ್ಳಲೇ ಆಗಿದೆ. ಸಮೃದ್ಧಿಯನ್ನು ಬಯಸಿಯೇ ಇರುತ್ತದೆ. ಲಕ್ಷ್ಮೀ ಶಬ್ದದ ಅರ್ಥಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡಾಗ ನಾವು ಬದುಕಿನಲ್ಲಿ ಬಯಸುವುದು ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯಗಳನ್ನೇ ತಾನೆ? ಇದೇ "ಲಕ್ಷ್ಮೀಯ ಆರಾಧನೆ". ಲೇಖನ : ಕೆ.ಎಲ್.ಕುಂಡಂತಾಯ
ಉದ್ಯಾವರ : ಕಳುವುಗೈದ ಲಕ್ಷಾಂತರ ಮೌಲ್ಯದ ಸೊತ್ತು ಸಹಿತ ಕಳ್ಳನ ಬಂಧನ
Posted On: 24-08-2023 12:10PM
ಉದ್ಯಾವರ : ಇಲ್ಲಿನ ಬೊಳ್ಜೆ ನಿವಾಸಿ ಅನಿತಾ ಡಿ. ಸಿಲ್ವಾ ಅವರ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾಪು ಪೊಲೀಸರು ಬಂಧಸಿದ್ದು ಚಿನ್ನಾಭರಣ, ನಗದು, ಸ್ಕೂಟಿ ಸಹಿತ 8,02,083 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಟಪಾಡಿ ಏಣಗುಡ್ಡೆ ಗ್ರಾಮದ ಅಚ್ಚಡ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ (32) ಬಂಧಿತ ಆರೋಪಿ.
ಬಂಧಿತನಿಂದ 6,90,713 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, ಮೋಟಾರು ಸೈಕಲ್ ಸಹಿತ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.