Updated News From Kaup

ಕಾಪು ಫ್ಲೈ ಓವರ್ ಅಂಡರ್ ಪಾಸ್ನಲ್ಲಿ ಕೊನೆಗೂ ಬೆಳಕು ಕಂಡ ಕಾಪು ಜನತೆ : ನಮ್ಮ ಕಾಪು ವರದಿ ಫಲಶ್ರುತಿ

Thumbnail
Posted On: 05 Mar 2024, 08:07 PM

ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನ ಮುಂಭಾಗದ ಫ್ಲೈ ಓವರ್ ಅಂಡರ್ ಪಾಸ್ ನಲ್ಲಿ ಬೆಳಕು ಕಾಣದೇ ಒಂದುವರೆ ವರುಷ ಕಳೆದಿರುವ ಕಾಪು ಜನತೆ ಇದೀಗ ನಮ್ಮ ಕಾಪು ನ್ಯೂಸ್ ವರದಿ ಬಿತ್ತರಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಿರುತ್ತಾರೆ. ಸಾಮಾಜಿಕ ಕಾರ್ಯಕರ್ತ ಜಯರಾಮ್ ಆಚಾರ್ಯ ಈ ಬಗ್ಗೆ ಮಾಧ್ಯಮದ ಗಮನಕ್ಕೆ ತಂದಿದ್ದು, ಅಧಿಕಾರಿಗಳಿಗೆ ನಿರಂತರವಾಗಿ ಮೇಲ್ ಮೂಲಕ ಮನವಿಯನ್ನು ಸಲ್ಲಿಸುತ್ತಿದ್ದರು. ನಮ್ಮ ಕಾಪು ವರದಿಯ ನಂತರ ಟೋಲ್ ಮ್ಯಾನೇಜರ್ ತಿಮ್ಮಯ್ಯ ಎ. ಎಸ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಹಲೋಜೇನ್ ಲೈಟ್ ಅಳವಡಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಟೋಲ್ ಸಿಬ್ಬಂದಿಗಳು, ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರು ಸೂಕ್ತ ಸ್ಪಂದನೆ ನೀಡಿರುವುದಕ್ಕೆ ಕಾಪು ಜನತೆಯ ಪರವಾಗಿ ಜಯರಾಮ್ ಆಚಾರ್ಯ ಅವರು ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸಿರುತ್ತಾರೆ.

ಉಡುಪಿ : ಅಧಿಕಾರಿಗಳ ವೈಫಲ್ಯದಿಂದ ಕಾಪುವಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಆಸಾಮಿ

Thumbnail
Posted On: 04 Mar 2024, 08:09 PM

ಉಡುಪಿ : ಕಾಪು ಹೊಸ ಮಾರಿಗುಡಿ ಮುಂಭಾಗದ ಫ್ಲೈ ಓವರ್ ಅಂಡರ್ ಪಾಸ್ ನಲ್ಲಿ 3 ಹಲೊಜೆನ್ ಲೈಟ್ಗಳನ್ನು ಅಳವಡಿಸಿದ್ದರೂ, ಕಳೆದ 18 ತಿಂಗಳಿನಿಂದ ಬೆಳಕಿಲ್ಲದೆ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಸ್ಥಳೀಯ ನಿವಾಸಿ ಜಯರಾಮ್ ಆಚಾರ್ಯ ಅವರು ಅಧಿಕಾರಿಗಳಿಗೆ Email ಮೂಲಕ ಮನವಿ ಕಳುಹಿಸಿದ್ದರೂ ಕೂಡಾ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ, ನಮ್ಮ ಕಾಪು ನ್ಯೂಸ್ ಮೂಲಕ ಈ ವರದಿಯನ್ನು ಮಾಚ್೯ 1, ಶುಕ್ರವಾರದಂದು ಬಿತ್ತರಿಸಿದ್ದು, ಮರುದಿನ ಜಯರಾಮ್ ಆಚಾರ್ಯ ಅವರು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರನ್ನು ಮುಖತಃ ಭೇಟಿ ಮಾಡಿ ಮನವಿ ನೀಡಿದ್ದರು. ಮಾಚ್೯ 2, ಶನಿವಾರ ರಾತ್ರಿ 08:30 ರ ಅಸುಪಾಸಿಗೆ ಈ ಭಾಗದಲ್ಲಿ ಸೇಲ್ಸ್ ಮ್ಯಾನ್ ಓರ್ವರು ನಡೆದುಕೊಂಡು ಹೋಗುತ್ತಿದ್ದಾಗ ಅವರ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಇದ್ದ ಪರ್ಸನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಅಧಿಕಾರಿಗಳು ಇನ್ನಾದರೂ ಬೆಳಕಿನ ವ್ಯವಸ್ಥೆಯನ್ನು ಮಾಡುವರೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಯರಾಮ್ ಆಚಾರ್ಯ ನಮ್ಮ ಕಾಪು ನ್ಯೂಸ್ ಮೂಲಕ ಅಗ್ರಹಿಸಿದ್ದಾರೆ.

ಮಾರ್ಚ್ 10 : ಸಮಾಜರತ್ನ. ಕೆ. ಲೀಲಾಧರ ಶೆಟ್ಟಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Thumbnail
Posted On: 04 Mar 2024, 04:42 PM

ಕಾಪು : ಸಮಾಜರತ್ನ ಕೆ ಲೀಲಾಧರ ಶೆಟ್ಟಿ ಸ್ಮರಣಾರ್ಥ ಅವರ ಅಭಿಮಾನಿ ಬಳಗದ ವತಿಯಿಂದ, ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಇವರ ನೇತೃತ್ವದಲ್ಲಿ, ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಮಾರ್ಚ್ 10, ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30 ರವರೆಗೆ ಶಿರ್ವ ಕೊಲ್ಲಬೆಟ್ಟು ಸಂಘ ಮಿತ್ರ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮವು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು ,ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಶೈಲೇಶ್ ಹಾಗೂ ಬಳಗ ಉದ್ಯಾವರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅಂದು ನಡೆಯುವ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಮ್ಮೆಯ ಕನ್ನಡಿಗ ಯುವ ಪುರಸ್ಕಾರಕ್ಕೆ ಉಡುಪಿಯ ರಾಘವೇಂದ್ರ ಪ್ರಭು,ಕವಾ೯ಲು ಆಯ್ಕೆ

Thumbnail
Posted On: 03 Mar 2024, 03:24 PM

ಉಡುಪಿ : ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಬಾಗಲಕೋಟೆ ಇದರ ವತಿಯಿಂದ ಮಾರ್ಚ್ 17ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆಯಲಿರುವ ಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡು ನುಡಿ ಅದೇ ರೀತಿ ಸಮಾಜ ಸೇವಾ ವಿಭಾಗದಲ್ಲಿ ಕೊಡ ಮಾಡುವ ಹೆಮ್ಮೆಯ ಕನ್ನಡಿಗ ಯುವ ಪುರಸ್ಕಾರಕ್ಕೆ ಉಡುಪಿಯ ರಾಘವೇಂದ್ರ ಪ್ರಭು,ಕವಾ೯ಲು ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ರಮೇಶ್ ಕಮತಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು : ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ - ಬೋಳ ಸದಾಶಿವ ಶೆಟ್ಟಿ

Thumbnail
Posted On: 03 Mar 2024, 02:28 PM

ಕಾಪು : ಕಳೆದ 45 ವರ್ಷಗಳಿಂದ ಸಹಕಾರ ಭಾರತಿ ದೇಶಾದ್ಯಂತ ಸಂಘಟನಾತ್ಮಕವಾಗಿ 28 ರಾಜ್ಯಗಳ 650 ಕ್ಕಿಂತಲೂ ಹೆಚ್ಚಿನ ಜಿಲ್ಲೆಗಳಲ್ಲಿ ನಿರಂತರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸಕ್ರಿಯವಾದ ತಾಲೂಕು ಘಟಕಗಳ ಮೂಲಕ ಗ್ರಾಮೀಣ ಭಾಗದ ಎಲ್ಲಾ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ನಿರಂತರ ಸಂಪರ್ಕದ ಮೂಲಕ, ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಕಾಯೋನ್ಮುಖವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿ ತಿಳಿಸಿದರು. ಅವರು ಕಾಪು ಕೆವನ್ ಹೋಟೆಲ್ ಸಭಾಂಗಣದಲ್ಲಿ ಜರುಗಿದ ತಾಲೂಕು ಅಭ್ಯಾಸ ವರ್ಗದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ, ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಮಾತನಾಡಿ ಹೈನುಗಾರರು ಸೊಸೈಟಿಗಳಿಗೆ ಪೂರೈಸುವ ಹಾಲಿಗೆ ವೈಜ್ಞಾನಿಕ ದರ ನಿಗದಿ, ದುಬಾರಿಯಾಗುತ್ತಿರುವ ನಂದಿನಿ ಪಶು ಆಹಾರಕ್ಕೆ ಸಬ್ಸಿಡಿ, ಆರು ತಿಂಗಳಿನಿಂದ ಬಾಕಿ ಇರುವ ಹೈನುಗಾರರ ಸಬ್ಸಿಡಿ ಹಣದ ಬಿಡುಗಡೆ, ಪಶು ವೈದ್ಯರ ಕೊರತೆ ನೀಗಿಸಲು ಖಾಲಿ ಇರುವ ಹುದ್ದೆಗಳ ಭರ್ತಿ, ಹಾಲು ಉತ್ಪಾದಕ ಸಂಘಗಳನ್ನು ವಿವಿಧೋದ್ದೇಶ ಸಂಘಗಳಾಗಿ ಕಾರ್ಯನಿರ್ವಹಿಸಲು ಯೋಜನೆ, ಯಶಸ್ವಿ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಪ್ರಮುಖ ಖಾಸಗಿ ಆಸ್ಪತ್ರೆಗಳ ಸೇರ್ಪಡೆ ಮೊದಲಾದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಹೈನುಗಾರರ ಪರವಾಗಿ ಮುಂದಿನ ದಿನಗಳಲ್ಲಿ ಆಂದೋಲನ, ಚಳವಳಿ ಹಾಗೂ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ಕಾಪು ತಾಲೂಕು ಸಹಕಾರ ಭಾರತೀಯ ಕೋಶಾಧ್ಯಕ್ಷರಾದ ಸುಧಾಮ ಶೆಟ್ಟಿ, ಮಲ್ಲಾರು ಅಧ್ಯಕ್ಷತೆ ‌ವಹಿಸಿದ್ದರು. ಕಾಪು ತಾಲೂಕಿನ ಪ್ಯಾಕ್ಸ್, ಹಾಲು, ಸೌಹಾರ್ದ ಮತ್ತು ಮೀನುಗಾರಿಕಾ ಸೊಸೈಟಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ಪ್ಯಾಕ್ಸ್ ಪ್ರಕೋಷ್ಠದ ಸಂಚಾಲಕರಾದ ಕುತ್ಯಾರು ಪ್ರಸಾದ್ ಶೆಟ್ಟಿಯವರು ಸ್ವಾಗತಿಸಿದರು. ಅವರಾಲು ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರ ಭಾರತಿ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಕೇಶವ ಮೋಯ್ಲಿ ವಂದಿಸಿದರು‌. ಸಭಾ ಕಾರ್ಯಕ್ರಮದ ಬಳಿಕ ಮೂಡಬಿದ್ರೆಯ ಸಹಕಾರಿ ಆಡಳಿತ ಕಾಲೇಜಿನ ಉಪನ್ಯಾಸಕಿ ಬಿಂದು ಬಿ. ನಾಯರ್ ಸಹಕಾರಿ ವ್ಯವಸ್ಥಾಪನೆ ಎನ್ನುವ ವಿಚಾರದ ಬಗ್ಗೆ, ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖ ಮೋಹನ್ ಕುಮಾರ್ ಕುಂಬಳೇಕರ್ ಸಹಕಾರ ಭಾರತಿ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು.

ಉಚ್ಚಿಲ : ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಉದ್ಘಾಟನೆ

Thumbnail
Posted On: 03 Mar 2024, 02:06 PM

ಉಚ್ಚಿಲ : ನಮ್ಮ ದೇಶ, ರಾಜ್ಯಕ್ಕೆ ಹೋಲಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸಹಕಾರಿ ಚಳುವಳಿ ಯಶಸ್ವಿಯಾಗಿ ಮನ್ನಡೆಯುತ್ತಿದೆ. ಖಾಸಗಿ, ವಾಣಿಜ್ಯ ಬ್ಯಾಂಕುಗಳಲ್ಲಿ ವ್ಯವಹಾರ ತಪ್ಪಲ್ಲ. ನಮ್ಮ ಸಮಾಜ, ಗ್ರಾಹಕರ ಆರೋಗ್ಯದ ಬಗ್ಗೆ ಇವರು ಚಿಂತಿಸಿಲ್ಲ. ಇದು ಸಹಕಾರಿ ಕ್ಷೇತ್ರದ ಮೂಲಕ ಮಾತ್ರ ಸಾಧ್ಯವಾಗಿದೆ. ಸಹಕಾರಿ ಕ್ಷೇತ್ರ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕಾರ್ಯಗಳ ಜೊತೆಗೆ ಉಳಿತಾಯದ ಬಗ್ಗೆಯೂ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಬೆಳಪು ವ್ಯವಸಾಯ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಅವರು ಬೆಳಪು ವ್ಯವಸಾಯ ಸಹಕಾರಿ ಸಂಘ (ನಿ.) ಪಣಿಯೂರು, ನವೋದಯ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ರೋಟರಿ ಕ್ಲಬ್ ಉಚ್ಚಿಲ, ನೇತ್ರಜ್ಯೋತಿ ಚಾರಿಟೇಬಲ್‌ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ರವಿವಾರ ಬೆಳಪು ವ್ಯವಸಾಯ ಸಹಕಾರಿ ಸಂಘದ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಿದ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಚ್ಚಿಲದ ಸೈಯ್ಯದ್ ಅರಬಿ ಜುಮ್ಮಾ ಮಸೀದಿ ಖತೀಬರಾದ ಜನಾಬ್| ಇಸ್ಹಾಕ್ ಫೈಝಿ ಹಾಗೂ ಉಚ್ಚಿಲ ಚರ್ಚ್ ಧರ್ಮಗುರುಗಳಾದ ರೆ|ಫಾ। ಜೋಸ್ವಿ ಫೆರ್ನಾಂಡೀಸ್ ಆಶೀರ್ವಚನ ನೀಡಿದರು. ಈ ಸಂದರ್ಭ ಪಡುಬಿದ್ರಿ ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಉಚ್ಚಿಲ ರೋಟರಿ ಕ್ಲಬ್‌ ಅಧ್ಯಕ್ಷರಾದ ಯು.ಸಿ. ಶೇಖಬ್ಬ ಸಂದರ್ಭೋಚಿತವಾಗಿ ಮಾತನಾಡಿದರು. ಶಿಬಿರದ ಮುಖ್ಯ ವೈದ್ಯೆ ಡಾ. ಶ್ರೀಕೀರ್ತಿ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿದ್ದರು. ಬೆಳಪು ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನ, ಪ್ರಸಾದ್ ನೇತ್ರಾಲಯದ ಸಂಪರ್ಕಾಧಿಕಾರಿ ಹರ್ಷ, ಬೆಳಪು ಸಿ.ಎ. ಬ್ಯಾಂಕ್ ನಿರ್ದೇಶಕರುಗಳು, ನವೋದಯ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ರೋಟರಿ ಕ್ಲಬ್ ಉಚ್ಚಿಲ, ನೇತ್ರಜ್ಯೋತಿ ಚಾರಿಟೇಬಲ್‌ ಟ್ರಸ್ಟ್ ಉಡುಪಿ ಪದಾಧಿಕಾರಿಗಳು, ಸಿಬ್ಬಂದಿ, ಪ್ರಸಾದ್ ನೇತ್ರಾಲಯದ ವೈದ್ಯರು ಉಪಸ್ಥಿತರಿದ್ದರು. ಸುಮಾರು ನೂರಕ್ಕೂ ಮಿಕ್ಕಿ ಸಾರ್ವಜನಿಕರು ಶಿಬಿರದ ಪ್ರಯೋಜನ ‌ಪಡೆದರು. ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಪ್ರಸ್ತಾವನೆಗೈದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮಾರ್ಚ್ 3: ಎಲ್ಲೂರು ಶ್ರೀ ವಿಶ್ವೇಶ್ವರ ಸನ್ನಿಧಿಯಲ್ಲಿ ಭಾಗೀರಥಿ ದೇವರ ಗುಡಿಯ ಶಂಕು ಸ್ಥಾಪನೆ

Thumbnail
Posted On: 02 Mar 2024, 08:41 AM

ಕಾಪು : ಇತಿಹಾಸ ಪ್ರಸಿದ್ಧ ಎಲ್ಲೂರು ಶ್ರೀ ವಿಶ್ವೇಶ್ವರ ಸನ್ನಿಧಿಯಲ್ಲಿ ಕ್ಷೇತ್ರದ ಉಪ ಸಾನಿಧ್ಯವಾದ ಶ್ರೀ ಭಾಗೀರಥಿ ದೇವರ ಗುಡಿಯ ಶಂಕು ಸ್ಥಾಪನೆ ಮಾರ್ಚ್ 3, ಭಾನುವರ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಲುಕಿಕೊಂಡು ಮೃತ್ಯು

Thumbnail
Posted On: 01 Mar 2024, 06:59 PM

ಕಾಪು : ಇಲ್ಲಿನ ಪೊಲಿಪುವಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಬಲೆಗೆ ಸಿಲುಕಿಕೊಂಡು ಸಾವನ್ನಪಿದ ಘಟನೆ ಇಂದು ಸಂಭವಿಸಿದೆ. ಪೊಲಿಪು‌ ನಿವಾಸಿ ಕಿಶೋರ್ (29) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಇವರು ದಿನನಿತ್ಯ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಇಂದು ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ ಬೇರೆ ಮೀನುಗಾರಿಕಾ ಬೋಟಿನವರಿಗೆ ಮೃತದೇಹ ಪತ್ತೆಯಾಗಿದೆ. ನಂತರ ದಡಕ್ಕೆ ಮೃತದೇಹವನ್ನು ತಂದಿದ್ದಾರೆ. ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭಾ ಸದಸ್ಯ ಕಿರಣ್ ಆಳ್ವ, ಕಾಪು ಪೊಲೀಸರು ಭೇಟಿ ನೀಡಿದ್ದಾರೆ.

ಮಾಚ್೯ 3 : ಯುವವಾಹಿನಿ ಉಡುಪಿ ಘಟಕ - ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ

Thumbnail
Posted On: 01 Mar 2024, 06:46 PM

ಉಡುಪಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ಮಾಚ್೯ 03, ರವಿವಾರ ಬೆಳಿಗ್ಗೆ 10 ಗಂಟೆ ಲಕ್ಷ್ಮೀ ಸಭಾಭವನ ಲಕ್ಷ್ಮೀ ಟ್ರೇಡ್ ಸೆಂಟರ್ ಚಿಟ್ಪಾಡಿ, ಉಡುಪಿ ಇಲ್ಲಿ ಜರಗಲಿದೆ. ಜಾನಪದ ವಿದ್ವಾಂಸರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಕನರಾಡಿ ವಾದಿರಾಜ ಭಟ್ ಇವರಿಗೆ ಜಾನಪದ ವಿದ್ವಾಂಸ ಪ್ರಶಸ್ತಿ, ಹಿರಿಯ ಬೈದೇರುಗಳ ದರುಶನ ಪಾತ್ರಿ ಕೋಟಿ ಪೂಜಾರಿಯವರಿಗೆ ಜಾನಪದ ಕಲಾವಿದ ಪ್ರಶಸ್ತಿ, ಖ್ಯಾತ ಮುಳುಗು ತಜ್ಞರು, ಸಮಾಜ ಸೇವಕ ಈಶ್ವರ ಮಲ್ಪೆ ಇವರು ಗೌರವ ಪುರಸ್ಕಾರ ಪಡೆಯಲಿದ್ದಾರೆ. ಮುಕ್ಕ ಶ್ರೀನಿವಾಸ್ ಕಾಲೇಜಿನ ಪ್ರೊಫೆಸರ್ ಪ್ರೊ. ಎಂ.ಎಸ್. ಕೋಟ್ಯಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಎಂಎಸ್‌ಡಬ್ಲ್ಯು ವಿಭಾಗ ಮುಖ್ಯಸ್ಥರಾದ ಡಾ। ದುಗ್ಗಪ್ಪ ಕಜೆಕಾರ್ ಅಭಿನಂದನಾ ನುಡಿಗಳನ್ನೀಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು‌ ಇದರ ಒಂದನೇ ಉಪಾಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಭಾಗವಹಿಸಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿರಲಿದ್ದಾರೆ. ಯುವವಾಹಿನಿ (ರಿ.) ಉಡುಪಿ ಘಟಕದ ಅಧ್ಯಕ್ಷರಾದ ಅಮಿತಾಂಜಲಿ ಕಿರಣ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಹ್ಯಾಕ್-ಟೆಕ್ 2.0 ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Thumbnail
Posted On: 01 Mar 2024, 06:09 PM

ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಹ್ಯಾಕ್-ಟೆಕ್ 2.0 ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಗಣಕಯಂತ್ರ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿಗಳಾದ ಗಣೇಶ್ ಕಾಮತ್, ಮೆಕ್ವಿನ್ ಹರ್ಶೆಲ್ ಡಿಸೋಜಾ, ಡಿವೋನಾ ಥೆಲ್ಮಾ ಪಿಂಟೋ ಮತ್ತು ದಿನೇಶ್ ಶೆಟ್ಟಿ ಇವರು ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಗಣಕಯಂತ್ರ ವಿಭಾಗದ ರಾಘವೇಂದ್ರ ಜಿ ಎಸ್ ಇವರ ಮಾರ್ಗದರ್ಶನದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಗ್ಲೂಕೋಮ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಒಟ್ಟು ಹನ್ನೆರಡು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.