Updated News From Kaup
ನೈರುತ್ಯ ಪದವೀಧರರ ಕ್ಷೇತ್ರ : ರಘುಪತಿ ಭಟ್ ನಾಮಪತ್ರ ಸಲ್ಲಿಕೆ
Posted On: 16 May 2024, 08:54 PM
ಉಡುಪಿ : ಕರ್ನಾಟಕ ವಿಧಾನ ಪರಿಷತ್ ಚುನಾವಣೆ -2024 ಇದರ ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ. ಶಿವಚರಣ್ ಶೆಟ್ಟಿ, ವಿಶ್ವನಾಥ್ ಭಟ್, ಚೇತನ್ ಮಂದಣ್ಣ, ಎಂ. ಶಂಕರ್ ಉಪಸ್ಥಿತರಿದ್ದರು.
ಮೇ 18 : ಶ್ರೀ ಪಲಿಮಾರು ಮೂಲ ಮಠದಲ್ಲಿ ವಿಹಿತಮ್ ಕಾರ್ಯಕ್ರಮ
Posted On: 16 May 2024, 09:54 AM
ಪಲಿಮಾರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18 ರಿಂದ 40 ರ ವಯೋಮಿತಿಯ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ ವಿಹಿತಮ್ ಮತ್ತು ಪೇಜಾವರ ಶ್ರೀಗಳ ಅಭಿನಂದನ ಸಮಾರಂಭವು ಮೇ 18, ಶನಿವಾರ ಪಲಿಮಾರು ಮೂಲ ಮಠದಲ್ಲಿ ನಡೆಯಲಿದೆ ಎಂದು ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು. ಅವರು ಬುಧವಾರ ಪಲಿಮಾರು ಮೂಲ ಮಠದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ವಿಹಿತಮ್ ಸಮಾವೇಶವು ಹಿಂದೂ ಸಮಾಜದ ಭಾಗವಾದ ಬ್ರಾಹ್ಮಣ ಸಮಾಜದಲ್ಲಿಯ ಯುವಕರನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಅತಿಥಿಗಳಾಗಿದ್ದು, ವಿಚಾರಗೋಷ್ಠಿಗಳ ಮೂಲಕ ಚಿಂತನ ಮಂಥನ ನಡೆಯಲಿದೆ ಎಂದರು. ಪಲಿಮಾರು ಮಠದ ದಿವಾನರಾದ ಜಿ.ವಾಸುದೇವ ಭಟ್ ಪೆರಂಪಳ್ಳಿ ಮಾತನಾಡಿ ಬ್ರಾಹ್ಮಣ ಸಮಾಜದ ಜೀವನಕ್ರಮ, ಅದರ ಸಂರಕ್ಷಣೆ, ವರ್ತಮಾನದ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜ ಆಂತರಿಕ ಮತ್ತು ಬಾಹ್ಯವಾಗಿ ಎದುರಿಸುತ್ತಿರುವ ಗಂಭೀರ ಸವಾಲುಗಳ ಬಗ್ಗೆ ಯುವ ಮನಸ್ಸುಗಳ ನಡುವೆ ಚಿಂತನ ಮಂಥನ ಹಾಗೂ ಬ್ರಾಹ್ಮಣರ ಸಂಘಟನಾತ್ಮಕ ಪ್ರಕ್ರಿಯೆಗಳಿಗೆ ಒಂದು ಶಕ್ತಿ ಮತ್ತು ಪ್ರೇರಣೆಯನ್ನು ನೀಡಬೇಕೆಂಬ ಉದ್ದೇಶದಿಂದ ವಿಹಿತಮ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಉಭಯ ಜಿಲ್ಲೆಗಳ 18-40 ವಯಸ್ಸಿನ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಮತ್ತುಉದ್ಯೋಗ ವ್ಯವಹಾರಗಳನ್ನು ನಡೆಸುತ್ತಿರುವ ಯುವಕರನ್ನು ಹಾಗೂ ಬೆಂಗಳೂರು, ಮೈಸೂರು ಹಾಗೂ ಇತರೆಡೆ ನೆಲೆಸಿರು ಕರಾವಳಿ ಮೂಲದ ತ್ರಿಮತಸ್ಥ ಯುವಕರನ್ನು ಆಹ್ವಾನಿಸಲಾಗಿದೆ. ಸುಮಾರು 600 ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಜೊತೆಗೆ ಅವರನ್ನು ಅಭಿನಂದಿಸಲಾಗುವುದು. ವಿವಿಧ ಮಠಗಳ ಮಠಾಧಿಪತಿಗಳಿಂದ ಮಾರ್ಗದರ್ಶನ, ವಿವಿಧ ಕ್ಷೇತ್ರದ ಸಾಧಕರು ಉಪಸ್ಥಿತರಿರುವರು. ಬ್ರಾಹ್ಮಣರ ಅನನ್ಯ ಜೀವನ ಕ್ರಮ ಮತ್ತು ಸಂರಕ್ಷಣೆಯ ಅಗತ್ಯತೆ, ಬ್ರಾಹ್ಮಣ ಸಮಾಜದ ಆಂತರಿಕ ಮತ್ತು ಬಾಹ್ಯ ಸವಾಲುಗಳು ಮತ್ತು ಪರಿಹಾರೋಪಾಯಗಳ ವಿಚಾರದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ವಿಷ್ಣು ಆಚಾರ್ಯ, ಪ್ರಣವ್ ಆಚಾರ್ಯ, ರಾಹುಲ್ ಬಾರಿತ್ತಾಯ, ಶಶಾಂಕ್ ಶಿವತ್ತಾಯ ಮತ್ತಿತರರು ಉಪಸ್ಥಿತರಿದ್ದರು.
ನೈಋತ್ಯ ಶಿಕ್ಷಕರ ಕ್ಷೇತ್ರ - ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ
Posted On: 15 May 2024, 10:37 PM
ಮಂಗಳೂರು : ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಎಸ್.ಆರ್.ಹರೀಶ್ ಆಚಾರ್ಯ ಬುಧವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಾ.ಎಸ್.ಆರ್.ಹರೀಶ್ ಆಚಾರ್ಯ, ರಾಜಕೀಯ ಪಕ್ಷಗಳು ಕರಾವಳಿ ಜಿಲ್ಲೆಗಳ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಲ್ಲಿ ಯಾವುದೇ ಪ್ರಾತಿನಿಧ್ಯ ನೀಡದೇ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದರಿಂದ ಕರಾವಳಿ ಭಾಗದ ಇರುವಿಕೆಯ ಅಸ್ತಿತ್ವವನ್ನೇ ನಿರಾಕರಿಸಿದಂತಾಗಿದೆ. ಆದುದರಿಂದ ಶಿಕ್ಷಕರ ಮತ್ತು ಪದವೀಧರರ ಸ್ವಾಭಿಮಾನದ ಪ್ರತೀಕವಾಗಿ ಈ ಬಾರಿಯ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು. ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಪ್ಪ ಕಲ್ಮನಿ, ಪ್ರಮುಖರಾದ ಮನಮೋಹನ್ ಬಳ್ಳಡ್ಕ, ರಂಜಿತ್ ಪಿ.ಜೆ., ಡಾ.ಅರುಣ್ ಕುಮಾರ್ ಮತ್ತು ನಿತೇಶ್ ಸಾಲಿಯಾನ್ ಈ ಸಂದರ್ಭ ಉಪಸ್ಥಿತರಿದ್ದರು.
ಶಿರ್ವ : ನಾಲ್ಕು ವಿದ್ಯಾರ್ಥಿಗಳು ನಾಪತ್ತೆ
Posted On: 15 May 2024, 01:34 PM
ಶಿರ್ವ : ಇಲ್ಲಿನ ಇಸ್ಲಾಂ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ಮಂಗಳವಾರ ನಡೆದಿದೆ. ಮಧ್ಯಾಹ್ನ 2:30 ಗಂಟೆಯಿಂದ ಮಧ್ಯಾಹ್ನ 3:30 ಗಂಟೆಯ ನಡುವಿನ ಅವಧಿಯಲ್ಲಿ ಬಿಹಾರ ರಾಜ್ಯದ ವಿದ್ಯಾರ್ಥಿಗಳಾದ ತಬಾರಕ್, ಜಮ್ ಶೇಡ್, ತಂಜೀರ್ ಆಲ್‌ಮ್, ಶಾಹಿಲ್ ಇವರುಗಳು ಸಂಸ್ಥೆಯಿಂದ ಹೊರಗಡೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪರ್ವೇಜ್ ಸಲೀಂ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಡುಪಿ : ಮತಗಟ್ಟೆಗಳಲ್ಲಿ ಮಾಧ್ಯಮದವರಿಗಾದ ತೊಂದರೆ ಕುರಿತು ಎಸ್ಪಿಗೆ ಮನವಿ
Posted On: 14 May 2024, 04:01 PM
ಉಡುಪಿ : ಲೋಕ ಸಭಾ ಚುನಾವಣೆಯ ಸಂದರ್ಭ ಮತಗಟ್ಟೆಗಳಲ್ಲಿ ಮಾಧ್ಯಮದವರಿಗಾದ ತೊಂದರೆ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಇಂದು ಮನವಿ ಸಲ್ಲಿಸಲಾಯಿತು. ಈ ಬಾರಿಯ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಸಂದರ್ಭ ಮತಗಟ್ಟೆಗೆ ತೆರಳಿ ವಿಡಿಯೋ ಚಿತ್ರೀಕರಣ ಹಾಗೂ ಫೋಟೋಗ್ರಫಿ ಮಾಡಲು ಮಾಧ್ಯಮದವರಿಗೆ ಚುನಾವಣಾ ಆಯೋಗ ಪಾಸ್ ನೀಡಿತ್ತು. ಅದರಂತೆ ಸೀಮಿತ ಮತಗಟ್ಟೆಗಳಲ್ಲಿ ಸಲಬ್ರೆಟಿಗಳು ಮತದಾನ ಮಾಡುವ ಸಂದರ್ಭ ಕ್ಯಾಮೆರಾಮೆನ್‌ಗಳು ಹಾಗೂ ಫೋಟೋಗ್ರಾಫರ್‌ಗಳು ಚಿತ್ರೀಕರಣ/ ಫೋಟೋ ತೆಗೆಯಲು ಮುಂದಾಗಿದ್ದು, ಈ ವೇಳೆ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮಾಧ್ಯಮದವರಿಗೆ ಅಡ್ಡಿ ಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳ ಪತ್ರಕರ್ತರಿಗೆ ಸರತಿ ಸಾಲಿನಲ್ಲಿ ನಿಂತ ಮತದಾರರ ಫೋಟೋ ತೆಗೆಯಲು ಕೂಡ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಈ ಬಗ್ಗೆ ಪರಿಶೀಲಿಸಿ ಮುಂದೆ ಈ ರೀತಿ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಜೂ.4ರಂದು ನಡೆಯುವ ಮತ ಎಣಿಕೆಗೆ ಸಂಬಂಧಿಸಿ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ.ಕೆ.ಅರುಣ್, ಈ ವಿಚಾರವನ್ನು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಮಾಹಿತಿ ನೀಡಬೇಕಾಗಿದ್ದು, ಮುಂದೆ ಈ ರೀತಿಯಾಗದಂತೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಿಯೋಗದಲ್ಲಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಉಮೇಶ್ ಮಾರ್ಪಳ್ಳಿ, ರಹೀಂ ಉಜಿರೆ, ಪ್ರಮೋದ್ ಸುವರ್ಣ, ಜಯಕರ ಸುವರ್ಣ, ಮೈಕಲ್ ರೋಡ್ರಿಗಸ್, ಹರೀಶ್ ಕುಂದರ್, ಅಜಿತ್ ಆರಾಡಿ, ಪತ್ರಕರ್ತರಾದ ಶಶಿಧರ್ ಮಾಸ್ತಿಬೈಲು, ದೀಪಕ್ ಜೈನ್, ಪುಂಡಲೀಕ ಮರಾಠ, ಹರೀಶ್ ಪಾಲೇಚಾರ್, ಚೇತನ್ ಮಟಪಾಡಿ, ಪರೀಕ್ಷಿತ್ ಶೇಟ್, ಜಸ್ಟಿನ್ ಡಿಸಿಲ್ವ, ರಕ್ಷಿತ್ ಬೆಳಪು, ನಾಗರಾಜ್ ರಾವ್, ಅವಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾಪು : ನಿಖಿತಾ ಕುಲಾಲ್ ಸ್ಮರಣಾರ್ಥ ಉಚಿತ ನೋಟ್ ಬುಕ್ ವಿತರಣೆ
Posted On: 14 May 2024, 02:49 PM
ಕಾಪು : ನಿಖಿತಾ ಕುಲಾಲ್ ನೆನಪಿನಲ್ಲಿ ಅವರ ಮನೆಯವರು ಕೊಡಮಾಡುವ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಮೇ 12 ರಂದು ಕುತ್ಯಾರು ರಾಮೋಟ್ಟು ಬನತೋಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಕುಲಾಲ ಸಂಘದ ಅಧ್ಯಕ್ಷರಾದ ಸಂದೀಪ್ ಬಂಗೇರ ವಹಿಸಿದ್ದರು. ವೇದಿಕೆಯಲ್ಲಿ ಸಂತೋಷ್ ಕುಲಾಲ್ ಪಕ್ಕಾಲು, ಪ್ರಭಾಕರ್ ಇನ್ನ, ನಿಖಿತಾ ಕುಲಾಲ್ ತಂದೆ ತಾಯಿ ಉಪಸ್ಥಿತರಿದ್ದರು. ಸಿಂಚನ ಕುಲಾಲ್ ಪ್ರಾರ್ಥಿಸಿದರು. ಸಂದೀಪ್ ಬಂಗೇರ ಸ್ವಾಗತಿಸಿ, ದೀರಾಜ್ ಕುಲಾಲ್ ವಂದಿಸಿದರು. ಸುಮಾರು 90 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ -ಕೆ.ಕೆ. ಪೇಜಾವರ
Posted On: 13 May 2024, 06:44 PM
ಮಂಗಳೂರು : ಶಿಕ್ಷಣವು ಯಾವತ್ತಿಗೂ ಮೌಲ್ಯಾಧಾರಿತ ಶಿಕ್ಷಣ ಆಗಿರಬೇಕು.ಇಂದಿನ ಸಮಾಜವು ಮನುಷ್ಯ ಪ್ರೀತಿಯನ್ನು ಮರೆತಿದೆ ಮಾನವೀಯ ಮೌಲ್ಯಗಳ ಕೊರತೆಯು ಆಧುನಿಕ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಮಕ್ಕಳು ಹಲವು ಸನ್ನಿವೇಶಗಳಲ್ಲಿ ತಪ್ಪಿತಸ್ಥರಂತೆ ಕಂಡರೂ ಅದು ಮಕ್ಕಳ ತಪ್ಪಾಗಿರದೆ ಹೆತ್ತವರೇ ಅದಕ್ಕೆ ಹೊಣೆಯಾಗಿರುತ್ತಾರೆ. ಈ ಸಮಾಜವು ಅಸ್ವಸ್ಥಗೊಂಡ ಪರಿಣಾಮ ಪ್ರೀತಿಯ ಕುಸುಮಗಳಂತಿರುವ ಮಕ್ಕಳು ಕೂಡ ಬದಲಾಗುತ್ತಾರೆ. ಹಾಗಾಗಿ ಮರೆತ ಮಾನವೀಯ ಗುಣಗಳನ್ನು ಮರು ನೆನಪಿಸುವುದು ಈಗಿನ ಶಿಕ್ಷಣದ ಪ್ರಮುಖ ಕೆಲಸವಾಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ ಎಂದು ಹಿರಿಯ ಜನಪದ ವಿದ್ವಾಂಸರೂ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಕೆ ಪೇಜಾವರರವರು ಹೇಳಿದರು. ಅವರು ಚಿಣ್ಣರ ಚಾವಡಿ ಮಂಗಳೂರು ಮತ್ತು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ 5 ದಿನಗಳ ಕಾಲ ನಡೆಯಲಿರುವ ಚಿಣ್ಣರ ಕಲರವ-2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು. ಸೈಂಟ್ ಜೆರೋಸಾ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅರ್ಪಿತಾರವರು ಮಾತನಾಡುತ್ತಾ, ಮಕ್ಕಳು ಸಾಧನೆಯ ಗುರಿಯನ್ನು ಇಟ್ಟುಕೊಂಡಿರಬೇಕು. ಆಸಕ್ತಿ ಇರುವ ವಲಯಗಳ ಕುರಿತು ಗಮನ ಹರಿಸಿ ನಿರಂತರ ಬೆನ್ನು ಬಿದ್ದು ಅಭ್ಯಾಸಿಸಿ ಆ ಗುರಿಯತ್ತ ಮುನ್ನಡೆಯಬೇಕು ನಿರಂತರ ಅಭ್ಯಾಸ ಮಾತ್ರ ಮಕ್ಕಳನ್ನು ಬೆಳೆಸಬಲ್ಲದು ಎಂದು ಹೇಳಿದರು. ಪ್ರಗತಿಪರ ಚಿಂತಕರಾದ ಮಾಕ್ಸಿಂ ಡಿ'ಸೋಜ ಬೋಂದೆಲ್ ಮಾತನಾಡುತ್ತಾ ವಿಜ್ಞಾನವು ಮಕ್ಕಳ ನಿತ್ಯದ ಪಾಠವಾಗಬೇಕು. ಸಂವಿಧಾನದ ಅರಿವು ಮಕ್ಕಳಿಗಿರಬೇಕು. ಭಾರತದ ಸಂವಿಧಾನದ ಘನತೆಯು ಮಕ್ಕಳಿಗೆ ತಿಳಿದಿರಬೇಕು ಎಂದರು. ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಮನೋಜ್ ವಾಮಂಜೂರು ಮಾತನಾಡುತ್ತಾ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಮಕ್ಕಳಿಗೆ ಪುಸ್ತಕದ ಪ್ರೀತಿಯನ್ನು ಹೆಚ್ಚಿಸಿ,ಓದುವ ಹವ್ಯಾಸ ಮಕ್ಕಳಿಗೆ ಹೊಸ ಜಗತ್ತನ್ನು ನೀಡಬಲ್ಲದು ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕೋಶಾಧಿಕಾರಿಯಾದ ಡೊಲ್ಫಿ ಡಿ'ಸೋಜ ವಹಿಸಿದ್ದರು. ವೇದಿಕೆಯಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ, ಮಾಜಿ ಜಿಲ್ಲಾ ವಿಧ್ಯಾರ್ಥಿ ನಾಯಕರಾದ ಮೆಲ್ವಿನ್ ಪಾಯಸ್ ,ಪ್ರಗತಿಪರ ಚಿಂತಕರಾದ ಬಿ.ಎನ್ ದೇವಾಡಿಗ,ವಸಂತ ಕುಮಾರ್, ಜಿಲ್ಲಾ ಯುವ ನಾಯಕರಾದ ಸ್ಟ್ಯಾನಿ ಲೋಬೋ,ಸಾಮಾಜಿಕ ಚಿಂತಕರಾದ ಮರ್ಲಿನ್ ರೇಗೋ ಮೊದಲಾದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಒಟ್ಟು 150 ವಿದ್ಯಾರ್ಥಿಗಳು ಭಾಗಿಗಳಾಗಿ ಮುಂದಿನ ಐದು ದಿನಗಳ ಕಾಲ ವಿವಿಧ ತರಬೇತಿಯನ್ನು ಪಡೆಯಲಿದ್ದಾರೆ ಎಂದು ಶಿಬಿರದ ನಿರ್ದೇಶಕರಾದ ಪ್ರವೀಣ್ ವಿಸ್ಮಯ ಬಜಾಲ್ ರವರು ತಿಳಿಸಿದರು. ಚಿಣ್ಣರ ಚಾವಡಿ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಚಿಣ್ಣರ ಚಾವಡಿಯ ಯೋಗಿತಾ ಉಳ್ಳಾಲರವರು ವಂದಿಸಿದರು.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
Posted On: 13 May 2024, 05:59 PM
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ ವರ್ಷದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಶನಿವಾರ ಕಾಲೇಜಿನಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗಳು ಸಂಸ್ಥೆಗೆ ಒಂದು ಉತ್ತಮ ಜಾಹೀರಾತುಗಳಾಗಿವೆ. ವಿದ್ಯಾರ್ಥಿಗಳ ಉತ್ತಮ ನಡವಳಿಕೆ ಸಂಸ್ಥೆಯ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಪದವೀಧರರು ಸಮಾಜದ ಎಲ್ಲಾ ಸವಾಲುಗಳನ್ನು ಎದುರಿಸಲು ಬೇಕಾಗುವಂತಹ ಕೌಶಲ್ಯವನ್ನು ಹೊಂದಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರತೀ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಎರಡು ಉತ್ತಮ ಪ್ರಾಜೆಕ್ಟ್‌ಗಳಿಗೆ ಬಹುಮಾನ ನೀಡಿಲಾಯಿತು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಡೀನ್‌ಗಳು ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಪು : ಸನಾತನ ಧರ್ಮವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ - ಹಿರಿಯ ನಟ ದೊಡ್ಡಣ್ಣ
Posted On: 13 May 2024, 05:35 PM
ಕಾಪು : ಇಲ್ಲಿನ ಲಕ್ಷ್ಮಿಜನಾರ್ಧನ ದೇವಸ್ಥಾನಕ್ಕೆ ಸೋಮವಾರ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಜನಾರ್ಧನ್ ಭಟ್ ದೇವಸ್ಥಾನದ ವತಿಯಿಂದ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಅವರು ಸೂರ್ಯ ಚಂದ್ರ ಯಾವತ್ತು ಸ್ಥಾಪಿತರಾದರೋ ಆವತ್ತಿನಿಂದಲೇ ಸನಾತನ ಧರ್ಮ ಉಳಿದುಕೊಂಡಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಹಿರಿಯರಿಗೆ 90 ವರ್ಷವಾದರೂ ಯಾವುದೇ ಆರೋಗ್ಯ ಸಮಸ್ಯೆ ಇರುತ್ತಿರಲಿಲ್ಲ. ಅವರು ಇನ್ನೊಬ್ಬರ ಖುಷಿಗೋಸ್ಕರ ಜೀವನ ಮಾಡಿ ತಮ್ಮ ತೃಪ್ತಿಯನ್ನು ಅದರಲ್ಲಿ ಕಾಣುತ್ತಿದ್ದರು. ನಮ್ಮ ದೇಸಿಯ ಅಡುಗೆಗಳನ್ನು ತಿನ್ನುತ್ತಿದ್ದರು. ಇವತ್ತಿನ ವಿದ್ಯಾವಂತರು ಪಿಜ್ಜಾ, ಬರ್ಗರ್ ತಿಂದು 30 ವರ್ಷಕ್ಕೆ ಸಕ್ಕರೆ ಕಾಯಿಲೆ, 45ಕ್ಕೆ ಕ್ಯಾನ್ಸರ್ ಬರುತ್ತಿದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ನಮ್ಮಲ್ಲಿರುವ ಗ್ರಂಥ ಭಂಡಾರವನ್ನು ಓದಿ ಜೊತೆಗೆ ದೇವರ ಸ್ಮರಣೆಯನ್ನು ಮಾಡಿ ಎಂದರು. ಈ ಸಂದರ್ಭ ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಮೂಲಕ ವೃಕ್ಷ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದರು. ಜೋತಿಷ್ಯ ವಿದ್ವಾನ್ ಪ್ರಕಾಶ್ ಅಮ್ಮಣ್ಣಾಯ, ಗಿರೀಶ್ ಪಾತ್ರಿ, ಸಂದೀಪ್ ಶೆಟ್ಟಿ, ಲಕ್ಷ್ಮಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ : ಮಂಗಳೂರು ಹರ್ ಕ್ಯುಲರ್ಸ್ ತಂಡಕ್ಕೆ ಇನ್ನರ್ ವೀಲ್ ಟ್ರೋಫಿ -2024
Posted On: 13 May 2024, 04:40 PM
ಪಡುಬಿದ್ರಿ : ಇಲ್ಲಿನ ಇನ್ನರ್ ವೀಲ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಇನ್ನರ್ ವೀಲ್ ಕ್ಲಬ್ ನ ಶತಮಾನೋತ್ಸವದ ಅಂಗವಾಗಿ ಪಡುಬಿದ್ರಿ ಬೋರ್ಡ್ ಶಾಲಾ ಮೃೆದಾನದಲ್ಲಿ ನಡೆದ ಇನ್ನರ್ ವೀಲ್ ಕ್ಲಬ್ ನ ಇನ್ನರ್ ವೀಲ್ ಟ್ರೋಫಿ -2024 ಪಂದ್ಯಕೂಟವನ್ನು ಇನ್ನರ್ ವೀಲ್ ಜಿಲ್ಲಾ ಕಾರ್ಯದರ್ಶಿ ರಜನಿ ಭಟ್ ಉದ್ಘಾಟಿಸಿದರು. ಈ ಸಂದರ್ಭ ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ , ಹಿರಿಯ ತ್ರೋಬಾಲ್, ಬಾಡ್ಮಿಂಟನ್ ಆಟಗಾರ್ತಿ ಮಮತಾ ರವಿಕಿರಣ್, ಅಂತಾರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ಮಮತಾ ನವೀನ್, ಕಾರ್ಯದರ್ಶಿ ಮನೋರಮಾ ಸುವರ್ಣ ಉಪಸ್ಥಿತರಿದ್ದರು. ಸಮಾರೋಪ : ಇನ್ನರ್ ವೀಲ್ ಟ್ರೋಫಿ -2024 ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತಾಡಿದ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಚಿ ಗುರ್ಮೆ, ನಿರಂತರ ಅಭ್ಯಾಸ ಮಾಡಿದರೆ ರಾಷ್ಟ್ರಮಟ್ಟದ ಆಟಗಾರರಾಗಿ ಮೂಡಿಬರಲು ಸಾಧ್ಯ. ಆಟಗಾರರು ಶಿಸ್ತನ್ನು ಅಳವಡಿಸಿಕೊಂಡು ಅಟದ ನಿಯಮಗಳಿಗೆ ಬದ್ದರಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ಪಂದ್ಯಕೂಟದ ಸೋಲು ಮುಂದಿನ ಗೆಲುವಿಗೆ ಕಾರಣವಾಗಿರುತ್ತದೆ ಎಂದರು. ಉಭಯ ಜಿಲ್ಲೆಗಳಿಂದ ಬಲಿಷ್ಠ 16 ಮಹಿಳಾ ತ್ರೋಬಾಲ್ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಮಂಗಳೂರಿನ ತುಳುನಾಡು ಯುನೃೆಟೆಡ್ ತಂಡವನ್ನು ಸೋಲಿಸುವ ಮೂಲಕ ಮಂಗಳೂರು ಹರ್ ಕ್ಯುಲರ್ಸ್ "ಬಿ" ತಂಡ ಇನ್ನರ್ ವೀಲ್ ಟ್ರೋಫಿ 2024ರ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ತುಳುನಾಡ್ ಯುನೈಟೆಡ್, ತೃತೀಯ ಸ್ಥಾನವನ್ನು ಮಂಗಳೂರ್ ಸ್ಪೋರ್ಟ್ಸಿಂಗ್ ತಂಡ ಪಡೆದು ಕೊಂಡಿತು. ಉತ್ತಮ ಎಸೆತಗಾರ್ತಿಯಾಗಿ ಮಂಗಳೂರು ಹರ್ ಕ್ಯುಲರ್ಸ ತಂಡದ ಶ್ರೇಯಾ, ಉತ್ತಮ ಹಿಡಿತಗಾರ್ತಿ ತುಳುನಾಡ್ ಯುನೈಟೆಡ್ ತಂಡದ ನಮೃತಾ, ಮತ್ತು ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಮಂಗಳೂರು ಹರ್ ಕ್ಯುಲರ್ಸ್ ತಂಡದ ವೃೆಷ್ಣವಿ ಪಡೆದು ಕೊಂಡರು. ಇನ್ನರ್ ವೀಲ್ ಅಧ್ಯಕ್ಷೆ ನಮೃತಾ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಡುಬಿದ್ರಿ ವ್ಯವಸಾಯ ಸಹಕಾರಿ ಸೊಸೈಟಿ ಅಧ್ಯಕ್ಷ ವೃೆ.ಸುಧೀರ್ ಕುಮಾರ್, ಮಾಜಿ ಜಿ.ಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಜೆಸಿಐ ಇಂಡಿಯಾ ನಿರ್ದೇಶಕ ವೃೆ.ಸುಕುಮಾರ್ ಉಪಸ್ಥಿತರಿದ್ದರು. ನಮೃತಾ ಮಹೇಶ್ ಸ್ವಾಗತಿಸಿ, ಕೀರ್ತೀನ್ ಸಾಲ್ಯಾನ್ ಹಾಗು ಶುಭ ದಿನೇಶ್ ನಿರೂಪಿಸಿದರು. ಕಾರ್ಯದರ್ಶಿ ಮನೋರಮಾ ಸುವರ್ಣ ವಂದಿಸಿದರು.
