Updated News From Kaup
ಕಾರ್ಕಳ : ನಾನಿಲ್ತಾರು ಕುಲಾಲ ಸಂಘದ 35ನೇ ವರ್ಷದ ಮಹಾಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 18-09-2023 04:45PM
ಕಾರ್ಕಳ : ಇಲ್ಲಿಯ ಕುಲಾಲ ಸಂಘ ನಾನಿಲ್ತಾರು ಮುಲ್ಲಡ್ಕ ಮುಂಡ್ಕೂರು ಇದರ ಅಕ್ಟೋಬರ್ 1, ಆದಿತ್ಯವಾರದಂದು ನಡೆಯುವ 35ನೇ ವರ್ಷದ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಧ್ವನಿವರ್ಧಕ ಕೊಡುಗೆ, ಅಭಿನಂದನಾ ಕಾರ್ಯಕ್ರಮ, ವೈದ್ಯಕೀಯ ನೆರವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಬಿಡುಗಡೆ ಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ದಿನೇಶ್ ಕುಲಾಲ್, ಮಾಜಿ ತಾ.ಪ.ಉಪಾಧ್ಯಕ್ಷರು ಗೋಪಾಲ್ ಮೂಲ್ಯ, ಆಶಾ ವರದರಾಜ್, ಹರ್ಷಿತ, ಲೋಕೇಶ್, ಅನೀಶ್ ಉಪಸ್ಥಿತರಿದ್ದರು.
ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಕಾಪು ಮಂಡಲ ಬಿಜೆಪಿ ವತಿಯಿಂದ ಬೃಹತ್ ರಕ್ತದಾನ ಶಿಬಿರ

Posted On: 17-09-2023 01:11PM
ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ, ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ರವಿವಾರ ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭ ಶಾಸಕರು ಮಾತನಾಡಿ ಭಾರತದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಇತ್ತೀಚಿಗೆ ನಡೆದ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿ ಸಮರ್ಥ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನರೇಂದ್ರ ಮೋದಿಯವರು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಯನ್ನು ಪ್ರಪಂಚದಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯದರಲ್ಲಿ ಸಂಶಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ನವೀನ್ ಎಸ್.ಕೆ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕೃಷ್ಣ ರಾವ್, ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಡಾ. ವೀಣಾ ಹಾಗೂ ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷದ ಹಿರಿಯರು, ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೌರಿ-ಗಣೇಶ : ವಿಲಕ್ಷಣ ತಾಯಿ-ಮಗ

Posted On: 17-09-2023 12:19PM
ಸ್ತ್ರೀ ತನ್ನ ಬಯಕೆಯನ್ನು ಪುರುಷ ಸಂಬಂಧವಿಲ್ಲದೆ ನೆರವೇರಿಸಿಕೊಳ್ಳುತ್ತಾಳೆ, ಮಗುವನ್ನು ಪಡೆಯುತ್ತಾಳೆ. ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ,ಅಸೂಯೆಗೊಳ್ಳುತ್ತಾನೆ, ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ. ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ. ಪ್ರಕರಣ ಸುಖಾಂತ್ಯವಾಗುತ್ತದೆ. ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ. ಇದು ಅನಿವಾರ್ಯವಾಗಿಯಲ್ಲ, ಪ್ರೀತಿಪೂರ್ವಕವಾಗಿ. ಗೌರಿ-ಗಣೇಶ ಇವರ ತಾಯಿ-ಮಗ ಸಂಬಂಧ ಇದು ಸ್ವಾರಸ್ಯಕರವಾದುದು, ಅಪ್ರಾಕೃತವಾದುದು. ಅಂತೂ ದಂಪತಿಗಳ ಸಹಜ ಸಂಬಂಧದಿಂದ ಒದಗಿ ಬಂದವನಲ್ಲ 'ಗಣೇಶ'. ಪ್ರಕೃತಿ - ಪುರುಷ ಸಮಾಗಮವಿಲ್ಲದೆಯೂ ಪ್ರಕೃತಿಯೊಂದಿಗೆ ಎಷ್ಟು ಆಳವಾದ ದೇಹ ಸಂಬಂಧದ ಅವಿನಾಭಾವವಿರುತ್ತದೊ ಅಷ್ಟೇ ಪ್ರಮಾಣದ ಭಾವ ತೀವ್ರತೆಯನ್ನು ಅಥವಾ ಅನುರಾಗವನ್ನು ಪುರುಷನೊಂದಿಗೆ ಹೊಂದಿ 'ಗಣನಾಥ'ನಾದದ್ದು, ವಿಘ್ನೇಶನಾದದ್ದು ಆದಿಪೂಜಿತನಾದದ್ದು. ನಿಗ್ರಹಿಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ, ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು.ಎಷ್ಟು ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ. ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ. ಈ ಪ್ರಪಂಚ ನಿಯಮ ಗಣೇಶನ ಜನನದಲ್ಲಿ ಸಹಜವಾಗಿ ಪಡಿಮೂಡಿದೆ.
ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆಯ ಸಂಕೇತವಾಗಿ ಗೌರಿಯ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ. ಪುರುಷ ಪ್ರವೇಶ ಪ್ರಕೃತಿಯ ನಿರೀಕ್ಷೆಯಂತೆಯೇ ಆದರೂ ಕಾಲವಲ್ಲದ ಕಾಲದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು ಪಡೆದು ತಡೆಯುತ್ತದೆ. ಈ ಘಟನೆ ಭೂಮಿ-ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ. ಪ್ರಕೃತಿ-ಮಣ್ಣಿನೊಂದಿಗೆ ಗಾಢವಾದ ಸ್ನೇಹ ಮಣ್ಣಿನಮಗ ಮಹಾಕಾಯನಾದ ಮಹಾಗಣಪತಿಯ ಬಿಂಬ ಕಲ್ಪನೆಯಲ್ಲಿ ಸ್ಪಷ್ಟವಾಗುತ್ತದೆ. ಗೌರಿಗೆ ಮಗನಾದರೂ ರುದ್ರ ಪುತ್ರನಾದರೂ ಗಣಪ 'ಮಣ್ಣಿನ ಮಗನೆ'. ಅದು ಅಂದಿಗೂ ಸರಿ,ಇಂದಿಗೂ ಪ್ರಸ್ತುತ. ಆದುದರಿಂದ ಈ ಮಣ್ಣಿನ ಮಕ್ಕಳಿಗೆ ಆತ ಪ್ರಿಯನಾಗುತ್ತಾನೆ, ಬಂಧುವಾಗುತ್ತಾನೆ.
ಮನುಷ್ಯ ಬೇಟೆಯಾಡಿ ಬದುಕುತ್ತಿದ್ದ ಕಾಲದಿಂದಲೂ ಅಡ್ಡಿ ಆತಂಕಗಳ, ಕಾರ್ಯಭಂಗಗಳ ಕುರಿತು ಆಲೋಚನೆ ಇತ್ತು. ಮುಂದೆ ಕೃಷಿ ಸಂಸ್ಕೃತಿ ತೊಡಗಿದಾಗ ಎಲ್ಲವೂ ನಿರಾತಂಕವಾಗಿ ನಡೆಯಬೇಕು. ಕೃಷಿ ಸಮೃದ್ಧಿ ಪರಿಪೂರ್ಣವಾಗಿ ಒದಗಬೇಕು ಎಂಬ ಆಸೆ ಇತ್ತು. ಎಲ್ಲಿ ಕೈಗೂಡುವುದಿಲ್ಲವೊ ಎಂಬ ಆತಂಕವಿತ್ತು. ಮುಂದೆ ನಾಗರಿಕತೆ ಬೆಳೆದಂತೆ ತನ್ನ ಬದುಕು ವಿಸ್ತೃತವಾಗಿ ಅನಾವರಣಗೊಂಡಾಗ ಬಾಳು ಸುಂದರ, ನಿರರ್ಗಳವಾಗಿರಬೇಕೆಂದು ಬಯಸಿದ ಮನುಷ್ಯ ವಿಘ್ನ ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನಹರಿಸಿದ ,ವಿಘ್ನ ನಿವಾರಕ ದೇವರೊಂದು ಅನಿವಾರ್ಯವಾಯಿತು. ಈಗ ಪ್ರಾಚೀನ - ಅರ್ವಾಚೀನಗಳನ್ನು ಬೆಸೆಯುತ್ತಾ ಗಣಪತಿ ಮತ್ತೆ ಸಾಕಾರಗೊಂಡ. ವಿಘ್ನ ನಿವಾರಕ (ಮೊದಲೇ ಶಿವನಿಂದ ಅನುಗ್ರಹಿತನಾದ)ಎಂದೆನಿಸಿಕೊಂಡ. ಜಾತಿ - ಮತ-ಪಂಥ-ಆಸ್ತಿಕ-ನಾಸ್ತಿಕ ಬೇಧವಿಲ್ಲದೆ ಬಹುಮಾನ್ಯನಾದ. ಏಕೆಂದರೆ ವಿಘ್ನ ಬರುವುದು ಸಹಜ ತಾನೆ? ವೈದಿಕವು ವಿನಾಯಕನ ಮೂಲವನ್ನು ಋಗ್ವೇದದಷ್ಟು ಪ್ರಾಚೀನತೆಗೆ ಒಯ್ಯುತ್ತದೆ. ವೈದಿಕ ವಿದ್ವಾಂಸರು 'ಗಣಾನಾಮ್ ಗಣಪತಿಮ್ ಹವಾಮಹೇ...'ಎಂಬ ಮಂತ್ರವನ್ನೂ ಆಧಾರವಾಗಿ ನೀಡುತ್ತಾರೆ.ಮುಂದಿನ ಪುರಾಣ ಮತ್ತು ಮಹಾಕಾವ್ಯಗಳು ಪ್ರಸ್ತುತ ನಾವು ಕಾಣುವ ಸ್ವರೂಪವನ್ನು ಗಜಾನನಿಗೆ ನೀಡಿದುವು. ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಅಂಶಗಳಿಗನುಸಾರವಾಗಿ ಗಣಪತಿಯ ಪರಿಕಲ್ಪನೆಗಳು, ರಹಸ್ಯ ಅರ್ಥಗಳು ರೂಪಾಂತರಗೊಂಡು ಋಗ್ವೇದದ ಗಣಪತಿ-ಬ್ರಹ್ಮಣಸ್ಪತಿಯು ಗಜವದನ, ಗಣೇಶ, ವಿಘ್ನೇಶ್ವರ ರೂಪವನ್ನು ಪಡೆದವು. ಋಗ್ವೇದದ ಗಣಪತಿ-ಬ್ರಹ್ಮಣಸ್ಪತಿಯು ವಾಚಸ್ಪತಿ-ಬ್ರಹ್ಮಸ್ಪತಿ ಆಗುವುದು. ಜ್ಞಾನದ ಸಂಕೇತವಾಗಿ ಸ್ಪಷ್ಟಗೊಂಡಿದ್ದು ಮೂರ್ತಿ ಲಕ್ಷಣಗಳನ್ನು ಹೊಂದಿ ಬಂಗಾರ, ಕೆಂಪು ಬಣ್ಣ ಹಾಗೂ ಆಯುಧಗಳನ್ನು ಪಡೆದನು. ಗಣ = ಗುಂಪು, ಇಂತಹ ಹಾಡುವವರ, ನರ್ತಿಸುವವರ ಗುಂಪಿನಲ್ಲಿ ಇರುವವನು ಎಂಬುದು ಸೇರಿಕೊಂಡ ಕಲ್ಪನೆ. ಋಗ್ವೇದದ ಇನ್ನೊಂದು ವಿಭಾಗದಲ್ಲಿ ಮರುತರು ಅಥವಾ 'ಮರುದ್ಗಣ'ಗಳೆಂದು ಉಲ್ಲೇಖಿಸಲ್ಪಡುವ ಶಕ್ತಿಗಳನ್ನು ರುದ್ರನ ಮಕ್ಕಳೆಂದು ಹೆಸರಿಸಲಾಗಿದ್ದು, ಮೇಲಿನ ಗುಣಧರ್ಮವನ್ನೇ ಆರೋಪಿಸಲಾಗಿದೆ. ಸಿದ್ಧಿ ಮತ್ತು ಬುದ್ಧಿಯರನ್ನು ಹೊಂದಿರುವ ಗಣಪತಿ ಪರಿಕಲ್ಪನೆಯು ಸಿದ್ಧಿ ಮತ್ತು ಬುದ್ಧಿಗಳಿಗೆ ಈತನು ಕಾರಕನೆಂಬುದನ್ನು ಪ್ರತಿಪಾದಿಸುತ್ತದೆ. ಜನಪ್ರಿಯವಾಗಿರುವ ಕತೆಗಳು ಗಜಮುಖ ರೂಪದ ಹಿನ್ನೆಲೆಯಲ್ಲಿವೆ. ಆನೆಮುಖವನ್ನು ಹೊಂದಿರುವ ಗಜಮುಖ ಶಬ್ದವನ್ನು (ಗಜಮುಖ = ಜಾನಪದ ಮೂಲದ್ದು, ಬೇಟೆ ಸಂಸ್ಕೃತಿಯಿಂದ ಬಂದದ್ದು) ತತ್ತ್ವಜ್ಞಾನಿಗಳು ವಿಶ್ವದ ಆದಿ, ಗತಿ, ಐಕ್ಯವನ್ನು ಸಾಂಕೇತಿಸುವ ವಿರಾಟ್ ಸ್ವರೂಪವನ್ನು ವ್ಯಾಖ್ಯಾನಿಸುತ್ತಾರೆ.
ಗಣಪತಿಯ ಆಯುಧಗಳಾದ ಪಾಶವನ್ನು ರಾಗ, ಅಂಕುಶವನ್ನು ಕ್ರೋಧವೆಂದು ಅರ್ಥೈಸಿರುವ ವಿದ್ವಾಂಸರು ರಾಗ ಮತ್ತು ಕ್ರೋಧಗಳ ನಿರಂಕುಶ ನಿಯಂತ್ರಣದಿಂದ ಹೊರಬರಲು ಅವುಗಳನ್ನು ಧರಿಸಿರುವ ದೇವರೇ ಅನುಗ್ರಹಿಸಬೇಕೆಂದು ಅಭಿಪ್ರಾಯಪಡುತ್ತಾರೆ. ಈ ನಂಬಿಕೆ, ಶ್ರದ್ಧೆ ಭಗವದ್ಭಕ್ತರಲ್ಲಿದೆ. ಬೇಟೆ ಸಂಸ್ಕೃತಿಯಿಂದ ತೊಡಗಿದ ಮಾನವ ಬದುಕಿನ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ. ಈ ನಡುವೆ ಇತಿಹಾಸಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ. ಬಳಿಕ ಇಲಿಯ ಸಾಂಗತ್ಯ ಸಿಗುತ್ತದೆ. ಕೃಷಿ ಸಂಸ್ಕೃತಿ ಬಹುವಾಗಿ ಪೂಜಿಸುತ್ತದೆ. ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ-ದಾರುಶಿಲ್ಪಗಳಲ್ಲಿ ಲಭ್ಯ. ಸರ್ವಮಾನ್ಯ ಸುಮುಖ ಸರ್ವ ವಿಘ್ನಗಳನ್ನು ನಿವಾರಿಸಿ ಲೋಕಕ್ಕೆ ಮಂಗಳವನ್ನು ಅನುಗ್ರಹಿಸಲಿ. ಆಶಯ ಮರೆಯದೆ ಗಣಪತಿಯ ಆರಾಧನೆ ನಡೆಯಲಿ. ವೈಭವೀಕರಣ ಮಿತಿಮೀರಿ ಉಪಾಸನಾ ಸತ್ಯ ಮರೆಯದಿರೋಣ. ಲೇಖನ : ಕೆ.ಎಲ್.ಕುಂಡಂತಾಯ
ಭಾರತದ ನವ ನಿಮಾ೯ಣದ ಕೆಲಸ ಮಾಡುವ ಕನಸುಗಾರ ಮೋದಿ

Posted On: 17-09-2023 07:05AM
ಮೋದಿ ಅವರು ಪ್ರಧಾನಿಯಾಗಿ ಸಾಥ೯ಕ ಒಂಬತ್ತು ವರ್ಷ ಪೂರ್ಣಗೊಳಿಸಿದ್ದಾರೆ. ಅವರಿಗೆ ಸಿಕ್ಕಿರುವ ಪ್ರಶಂಸೆಯ ಮಾತುಗಳು, ಅವರ ಮಾತುಗಳಿಗೆ ಇರುವ ವಿಶೇಷ ಮನ್ನಣೆ ಜಗತ್ತಿನ ವಿವಿಧ ದೇಶಗಳೊಂದಿಗೆ ಇರುವ ರಾಜತಾಂತ್ರಿಕ ಸಂಬಂಧಗಳು ರಾಷ್ಟ್ರನಾಯಕರಾಗಿದ್ದ ಅವರನ್ನು ವಿಶ್ವನಾಯಕ ಆಗಿ ಪರಿವರ್ತನೆ ಮಾಡಿವೆ. ಮೋದಿ ಅವರ ಜನಪ್ರಿಯತೆ ಎಷ್ಟಿದೆಯೆಂದರೆ, ತಮಗೆ ಮೋದಿ ಅವರ ಹಸ್ತಾಕ್ಷರ ಕೇಳಬೇಕು ಅನ್ನಿಸುತ್ತಿದೆ ಎಂದು ಅಮೇರಿಕಾ ಅಧ್ಯಕ್ಷ ಬೈಡನ್ ಇತ್ತಿಚೆಗೆ ಸಭೆಯಲ್ಲಿ ಹೇಳಿದ್ದರು ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅಮೆರಿಕದ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರಿಗೂ ಸಿಡ್ನಿ ಕ್ರೀಡಾಂಗಣದಲ್ಲಿ ಮೋದಿ ಅವರಿಗೆ ಸಿಕ್ಕಂತಹ ಸ್ವಾಗತ ದೊರೆತಿರಲಿಲ್ಲ ಎಂದು ಆಸ್ಟೇಲೀಯಾ ಪ್ರಧಾನಿ ಆಲ್ಬನೀಸ್ ಹೇಳಿದರು. ಕ್ರೀಡಾಂಗಣದಲ್ಲಿ ಸೇರಿದ್ದ 20 ಸಾವಿರ ಜನರ ಎದುರು ಆಲ್ಬನೀಸ್ ಅವರು ಮೋದಿ ಅವರನ್ನು ‘ದಿ ಬಾಸ್’ ಎಂದು ಕರೆದಿದ್ದರು ಇದು ಮೋದಿಯವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ ಯಾಗಿದೆ.
ಇವರಿಬ್ಬರ ಮಾತುಗಳಿಗಿಂತ ಹೆಚ್ಚು ಆಶ್ಚರ್ಯ ಉಂಟುಮಾಡಿದ್ದು ಜಿ.20 ಸಭೆಯಲ್ಲಿ ಅಪ್ರಿಕಾದ ಮರಪೆ ಅವರ ನಡೆ. ಅವರು ಮೋದಿ ಅವರ ಕಾಲು ಮುಟ್ಟಿ ಗೌರವ ಸಮರ್ಪಿಸಿದರು. ಈ ನಡೆಯು ಭಾರತೀಯರನ್ನು ಬೆರಗಾಗಿಸಿತು. ಏಕೆಂದರೆ ಭಾರತದ ಪ್ರಧಾನಿಗೆ ಬೇರೆ ದೇಶಗಳ ನಾಯಕರು ಯಾವತ್ತೂ ಈ ರೀತಿಯಲ್ಲಿ ಗೌರವ ಸಮರ್ಪಿಸಿದ್ದನ್ನು ಕಂಡಿರಲಿಲ್ಲ. ಭಾರತದ ಹಿಂದಿನ ಯಾವ ಪ್ರಧಾನಿಯ ಬಗ್ಗೆಯೂ ಜಾಗತಿಕ ನಾಯಕರು ಈ ರೀತಿಯಲ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ ನಿದರ್ಶನವಿಲ್ಲ. ಭಾರತದ ವಿದೇಶಾಂಗ ನೀತಿಗೆ ಸ್ಪಷ್ಟ ದಿಕ್ಕು ತೋರಿಸಿದ್ದಕ್ಕೆ ಹಾಗೂ ಜಾಗತಿಕ ವೇದಿಕೆಗಳಲ್ಲಿ ತಾವು ನಡೆದುಕೊಂಡ ಬಗೆಗೆ ಮೋದಿ ಅವರಿಗೆ ಶ್ರೇಯಸ್ಸು ಸಲ್ಲಬೇಕು. ಅನಿವಾಸಿ ಭಾರತೀಯರ ಪಾಲಿಗೆ ಹಿರೋ : ನ್ಯೂಯಾರ್ಕ್, ಟೆಕ್ಸಾಸ್, ಸಿಡ್ನಿ... ಹೀಗೆ ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಹಾಗೂ ಭಾರತ ಮೂಲದವರು ಭಾರತದ ಯಾವ ಪ್ರಧಾನಿಯನ್ನೂ ಇಷ್ಟೊಂದು ಉತ್ಸಾಹದಿಂದ ಸ್ವಾಗತಿಸಿದ ಉದಾಹರಣೆ ಇಲ್ಲ. ಈಗ ಆಗುತ್ತಿರುವುದು ನಿಜಕ್ಕೂ ಅಭೂತಪೂರ್ವ. ಆರು ವರ್ಷಗಳ ಹಿಂದೆ ಅಮೆರಿಕದ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಹೋಗಿದ್ದಾಗ ಮೋದಿ ಅವರನ್ನು ಅಲ್ಲಿನ ಸದಸ್ಯರು ಎದ್ದು ನಿಂತು ಆರು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು. ಈ ಘಟನೆಗೆ ಜನತೆ ಮರೆಯಲು ಅಸಾಧ್ಯ. ಮೋದಿ ಅವರಿಗೆ ಸಿಕ್ಕ ಗೌರವವನ್ನು ನೋಡಿಯೇ ನಂಬಬೇಕಿತ್ತು. ಇವೆಲ್ಲವುಗಳ ಅರ್ಥವೇನು? ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಅವರು ಜನಪ್ರಿಯತೆಯ ಏಣಿಯನ್ನು ನಿಧಾನವಾಗಿ ಹಾಗೂ ದೃಢವಾಗಿ ಏರಿದ್ದಾರೆ.
ಮಾದರಿಯಾದ ವಿದೇಶಾಂಗ ನೀತಿ : ಮೋದಿ ಅವರು ಭಾರತದ ವಿದೇಶಾಂಗ ನೀತಿಯನ್ನು ‘ಭಾರತಕ್ಕೆ ಹೆಚ್ಚು ಸೂಕ್ತವಾಗುವ’ ರೀತಿಯಲ್ಲಿ ಬದಲಾಯಿಸಿರುವುದು; ರಷ್ಯಾ ಮತ್ತು ಅಮೆರಿಕದ ಜೊತೆ ಭಾರತದ ಸಂಬಂಧವನ್ನು ತೂಗಿಸಿಕೊಂಡು ಹೋಗುತ್ತಿರುವುದು; ಚೀನಾವನ್ನು ಅವರು ನಿಭಾಯಿಸುತ್ತಿರುವ ಬಗೆ; ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಹಿತಾಸಕ್ತಿಯನ್ನು ಕಾಯುವ ಉದ್ದೇಶದಿಂದ ಕ್ವಾಡ್ ಒಕ್ಕೂಟಕ್ಕೆ ತೋರಿರುವ ಬದ್ಧತೆ, ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ಹಾಗೂ ರಕ್ಷಣಾ ಉಪಕರಣಗಳ ತಯಾರಿಕೆಯು ಭಾರತದಲ್ಲಿಯೇ ಆಗಬೇಕು ಎಂಬ ಗುರಿ... ಇವೆಲ್ಲ ನಿಜಕ್ಕೂ ಅಸಾಮಾನ್ಯ ಹಾಗೂ ಅಭೂತಪೂರ್ವ. ರಕ್ಷಣಾ ವಲಯದಲ್ಲಿ ಬೇರೆ ಬೇರೆ ದೇಶಗಳಿಂದ‘ ರಕ್ಷಣಾ ಸಾಮಾಗ್ರಿ ಗಳನ್ನು ತರಿಸಿಕೊಳ್ಳಲಾಗುತ್ತಿತ್ತು ಆದರೆ ಇಂದು ಆ ಸ್ಥಿತಿ ಇಲ್ಲ ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮವು ಈ ಹಿಂದೆ ಇಷ್ಟೊಂದು ಆದ್ಯತೆಯನ್ನು ಪಡೆದಿರಲೇ ಇಲ್ಲ. ಉಕ್ರೇನ್ ಬಿಕ್ಕಟ್ಟನ್ನು ಮೋದಿ ಅವರು ನಿಭಾಯಿಸಿದ ರೀತಿಯು ನಿಜಕ್ಕೂ ಗುರುತಿಸಬೇಕಾದಂಥದ್ದು. ಅಮೆರಿಕವು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿದ್ದರೂ, ರಷ್ಯಾದ ಜೊತೆಗಿನ ಸ್ನೇಹವನ್ನು ಕಾಪಾಡಿಕೊಂಡು, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯು ಸ್ಥಿರವಾಗಿ ಇರುವಂತೆ ಮೋದಿ ನೋಡಿಕೊಂಡಿದ್ದಾರೆ. ಇದು ತಂತಿಯ ಮೇಲಿನ ನಡಿಗೆಯೇ ಸೈ. ಅಲ್ಲದೆ, ಮೋದಿ ಅವರು ಉಕ್ರೇನ್‌ಗೆ ಮಾನವೀಯ ನೆರವು ಒದಗಿಸುವ ವಿಚಾರದಲ್ಲಿ ಬದ್ಧತೆ ತೋರಿದ್ದಾರೆ. ನೆರವಿನ ಹಸ್ತಕ್ಕೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮೋದಿ ಅವರಿಗೆ ಧನ್ಯವಾದ ಹೇಳಿದ್ದನ್ನು ಮರೆಯುವಂತಿಲ್ಲ.
ದೆಹಲಿ ಜಿ.20 ಸಭೆ ಹೊಸ ಮೈಲಿಗಲ್ಲು : ದೆಹಲಿ ಯಲ್ಲಿ ನಡೆದ ಜಿ.20 ಸಭೆ ಮೋದಿಯವರ ಇವೆಂಟ್ ಮ್ಯಾನೆಜ್ ಮೆಂಟ್ ಗೆ ಹಿಡಿದ ಕನ್ನಡಿಯಾಗಿದೆ.ದೆಹಲಿ ಸೂಚಿಗೆ ಎಲ್ಲರ. ಒಪ್ಪಿಗೆ ಪಡೆದಿದ್ದು, ದಾಖಲೆಯೇ ಸರಿ ಅದೇ ರೀತಿ ಭಾರತದ ಗತ ವೈಭವದ ಇತಿಹಾಸ ಸಾರುವ ವಿವಿಧ ಮಾದರಿಗಳ ಎದುರು ಸಭೆ ಎಲ್ಲವೂ ಅದ್ಬುತ. ಕಾಶ್ಮೀರ 370 ವಿಧಿ ತೆಗೆದಿರುವುದು, ಒಂದೇ ಭಾರತ ರೈಲು ಸೇವೆ, ದೇಶದಲ್ಲಿ ರೈಲು, ರಸ್ತೆ, ವಿಮಾನ ನಿಲ್ದಾಣ ನಿಮಾ೯ಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಯ೯ಕ್ರಮಗಳು ಅವರ ಕಾಯ೯ ಶೈಲಿಗೆ ಉತ್ತಮ ಉದಾಹರಣೆ. ಸಾಧನೆ ಮಾತಾಗಿದೆ : ನೆಹರೂ ಚಿಂತನೆಗಳ ನೆಲೆಯಲ್ಲಿ ದಶಕಗಳಿಂದ ಬೆಳೆದುಬಂದಿರುವ ಭಾರತೀಯ ವಿದೇಶಾಂಗ ಸೇವೆಯಲ್ಲಿನ ಆಲೋಚನಾ ಕ್ರಮವನ್ನು ಕೂಡ ಮೋದಿ ಅವರು ಬದಲಾಯಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಮಾತು ಹಾಗೂ ಅವರ ನಡೆಯಲ್ಲಿ ಈ ಹೊಸ ಆಲೋಚನಾ ಕ್ರಮವು ಸ್ಪಷ್ಟವಾಗಿ ಕಾಣಿಸುತ್ತಿದೆ. ಜೈಶಂಕರ್ ಅವರು ಪಾಕಿಸ್ತಾನ ಹಾಗೂ ಚೀನಾದ ಸ್ವೀಕಾರಾರ್ಹವಲ್ಲದ ನಡೆಗಳ ಬಗ್ಗೆ ಹಲವು ವೇದಿಕೆಗಳಲ್ಲಿ, ಹಲವು ಸಂದರ್ಭಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಮೋದಿ ಅವರನ್ನು ವಿರೋಧಿಸುವವರ ಮನಃಸ್ಥಿತಿ ಅದೆಷ್ಟು ಕೆಟ್ಟದ್ದಾಗಿ ಇದೆಯೆಂದರೆ, ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಯಶವಂತ ಸಿನ್ಹಾ ಅವರು ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಪುವಾ ನ್ಯೂ ಗಿನಿಯಿಂದ ಬಿಜೆಪಿ ಟಿಕೆಟ್ ಕೇಳುವುದಾಗಿ ವ್ಯಂಗ್ಯವಾಡಿದ್ದಾರೆ. ಮೋದಿ ಅವರು ಪ್ರಧಾನಿಯಾದ ಹೊತ್ತಿನಿಂದ ವಿರೋಧ ಪಕ್ಷಗಳ ಟೀಕೆಗಳಲ್ಲಿ ನಕಾರಾತ್ಮಕತೆ ತುಂಬಿಕೊಂಡಿದೆ. 2014ರಲ್ಲಿ ಮೋದಿ ಅವರು ಮ್ಯಾನ್ಮಾರ್‌ಗೆ ಭೇಟಿ ನೀಡಿ, ಅಲ್ಲಿ 20 ಸಾವಿರ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾಗ ವಿರೋಧ ಪಕ್ಷದ ನಾಯಕರೊಬ್ಬರು, ‘ಮೋದಿ ಅವರು ಚಪ್ಪಾಳೆ ತಟ್ಟಲು ಭಾರತದಿಂದ ಜನರನ್ನು ಕರೆದೊಯ್ದಿದ್ದಾರೆ’ ಎಂದು ಹೇಳಿದ್ದರು. ಕೈಗೆಟುಕದ ದ್ರಾಕ್ಷಿ ಹುಳಿ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಮೋದಿ ಅವರ ಅವಧಿಯಲ್ಲಿನ ಭಾರತವು ಆತ್ಮನಿರ್ಭರವಾಗಿದೆ. ಭಾರತ ಇದೀಗ ಚಂದ್ರಲೋಕಕ್ಕೂ ಕಾಲಿಟ್ಟಿದೆ.ಜಗತ್ತಿನ ಯಾವುದೇ ದೇಶಗಳಿಗೂ ಪೈಪೋಟಿ ನೀಡುವಂತಹ ಸಾಧನೆ ಅವರಿಂದಾಗಿದೆ. ಒಟ್ಟಾಗಿ ಮೋದಿಯವರಿಗೆ ಸಾಟಿ ಯಾಗುವ ನಾಯಕ ಯಾರೂ ಇಲ್ಲ. ಸೆ.17 ಅವರ ಜನ್ಮದಿನ ಈ ದಿನ ಅವರಿಗೆ ಅಭಿನಂದನೆ ಸಲ್ಲಿಸುತ್ತಾ , ಮೋದಿಯವರ ವ್ಯಕ್ತಿತ್ವ ನಮಗೆ ಮಾದರಿಯಾಗಲಿ ಜೈ ಹೋ' ✍ ಲೇಖನ : ರಾಘವೇಂದ್ರ ಪ್ರಭು, ಕವಾ೯ಲು ಸಂ.ಕಾಯ೯ದಶಿ೯ ಕ .ಸಾ.ಪ ಉಡುಪಿ
ಗಣೇಶ ಚತುರ್ಥಿ : ಉಡುಪಿ, ದ.ಕ ಜಿಲ್ಲೆಯಲ್ಲಿ ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ

Posted On: 16-09-2023 04:25PM
ಗಣೇಶ ಚತುರ್ಥಿ : ಉಡುಪಿ, ದ.ಕ ಜಿಲ್ಲೆಯಲ್ಲಿ ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ
ಮೊದಲು ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಾಗಿತ್ತು. ರಾಜ್ಯದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿವೆ.
ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಕೂಗು ಕೇಳಿಬಂದಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆಪ್ಟೆಂಬರ್ 19ರಂದು ರಜೆ ನೀಡಲು ಪತ್ರ ಮೂಲಕ ತಿಳಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದೆ.
ಪಡುಬಿದ್ರಿ : ಹಕ್ಕುಪತ್ರ ಸಮಸ್ಯೆ - ಜಿಲ್ಲಾಧಿಕಾರಿ, ಶಾಸಕರ ಭೇಟಿ

Posted On: 16-09-2023 04:02PM
ಪಡುಬಿದ್ರಿ : ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ್ಸಾಲು ಭಾಗದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಜನರಿಗೆ ಹಕ್ಕುಪತ್ರ ನೀಡುವಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ಈ ಸಂಬಂಧ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯವಿದ್ದು ಪಹಣಿಯಲ್ಲಿ ನದಿ ಪರಂಬೋಕು ಎಂದು ಉಲ್ಲೇಖಿಸಿರುವುದರಿಂದ ಇದನ್ನು ವಿರಹಿತಗೊಳಿಸಲು ಸರಕಾರ ಮಟ್ಟದಲ್ಲಿ ಪರಿಹರಿಸುವಂತೆ ಪ್ರಸ್ತಾವನೆ ಸಲ್ಲಿಸಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷರಾದ ಹೇಮಚಂದ್ರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಬಿಜೆಪಿ ಮುಖಂಡರಾದ ಮಿಥುನ್ ಹೆಗ್ಡೆ ಹಾಗೂ ಸಹಾಯಕ ಆಯುಕ್ತರಾದ ರಶ್ಮಿ, ಕಾಪು ತಹಶೀಲ್ದಾರರಾದ ನಾಗರಾಜ್ ನಾಯ್ಕಡ ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪಿ.ಎಂ ವಿಶ್ವಕರ್ಮ ಯೋಜನೆ : ವಿಶ್ವಕರ್ಮ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಆನೆಗುಂದಿ ಪ್ರತಿಷ್ಠಾನದಿಂದ ಪ್ರಧಾನ ಮಂತ್ರಿಗೆ ಮನವಿ

Posted On: 16-09-2023 03:57PM
ಪಡುಕುತ್ಯಾರು : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಪಂಚ ಕುಲವೃತ್ತಿ ನಡೆಸುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಸೂಕ್ತ ಪರಿಗಣನೆಯೊಂದಿಗೆ ಅರ್ಹ ಪ್ರಾತಿನಿಧ್ಯ ನೀಡಬೇಕೆಂದು ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದೆ. ಪ್ರಧಾನ ಮಂತ್ರಿಯವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಘೋಷಿಸಿದ ಪಿ.ಎಂ ವಿಶ್ವಕರ್ಮ ಯೋಜನೆಯು ಸೆ.೧೭ರ ವಿಶ್ವಕರ್ಮ ಜಯಂತಿಯಂದು ದೇಶದ ೭೦ ಕೇಂದ್ರಗಳಲ್ಲಿ ಉದ್ಘಾಟನೆಗೊಳ್ಳುತ್ತಿದೆ.
ಈ ಸಂದರ್ಭದಲ್ಲಿ ವಿಶ್ವಕರ್ಮರ ಕುಲಗುರುಗಳಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆಶಯದಂತೆ ಪರಂಪರಾಗತ ಸಮಾಜದ ಪಂಚಕುಲಸುಬುಗಳಿಗೆ ಯೋಜನೆಯ ಜ್ಯಾರಿಯಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಮಹಾಸಂಸ್ಥಾನದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಬೇಕೆಂದು ಪ್ರಧಾನ ಮಂತ್ರಿಯವರಿಗೆ ಮನವಿ ನೀಡಲಾಗಿದೆ. ವಿಶ್ವಕರ್ಮ ಮಹೋತ್ಸವದ ದಿನ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ವಿಶೇಷವಾಗಿ ಹಿಂದುಳಿದ ಸಮುದಾಯಗಳಿಗೆ ಪ್ರಯೋಜನವಾಗುವ ಪಿ.ಎಂ ವಿಶ್ವಕರ್ಮ ಯೋಜನೆಯನ್ನು ಜ್ಯಾರಿಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಮಸ್ತ ವಿಶ್ವಕರ್ಮ ಸಮಾಜದ ಅಭಿನಂದನೆಯನ್ನು ಹಾಗೂ ಕೃತಜ್ಞತೆಯನ್ನು ಅನೆಗುಂದಿಶ್ರೀಗಳವರು ಸಲ್ಲಿಸಿದ್ದಾರೆ.
ಪ್ರಸ್ತುತ ಯೋಜನೆಯಲ್ಲಿ ವಿಶ್ವಕರ್ಮ ಪಂಚಕುಲ ವೃತ್ತಿಗಳಾದ ಬಡಗಿ, ಕಮ್ಮಾರ, ಅಕ್ಕಸಾಲಿಗ, ಶಿಲಾ ಶಿಲ್ಪಿ, ಎರಕಶಿಲ್ಪಗಳು ಹಾಗೂ ಇತರ ೧೩ ಕರಕುಶಲ ವೃತ್ತಿಗಳಾದ ದೋಣಿ ತಯಾರಕ, ರಕ್ಷ ಕವಚ ತಯಾರಕ, ಸುತ್ತಿಗೆ ಇತರೆ ಸಾಮಾಗ್ರಿ ತಯಾರಕ,ಚಮ್ಮಾರ, ಗಾರೆ ಮೇಸ್ತ್ರಿ, ಬುಟ್ಟಿ, ಚಾಪೆ, ಹಿಡಿಸೂಡಿ ತಯಾರಕ, ಸೆಣಬು ನೇಕಾರರು, ಗೊಂಬೆ ಮತ್ತು ಆಟಿಕೆ ತಯಾರಕ, ಕ್ಷೌರಿಕ, ಮಾಲೆ ತಯಾರಕ, ದೋಬಿ ಮತ್ತು ಮಡಿವಾಳ,ಟೈಲರ್, ಮೀನಿನ ಬಲೆ ತಯಾರಕ ಹೀಗೆ ಒಟ್ಟು ೧೮ ವಿಭಾಗಗಳಿಗೆ ಒಟ್ಟು ರೂ ೧೩,೦೦೦ ಕೋಟಿಯ ಬೃಹತ್ ಯೋಜನೆ ಯನ್ನು ಪಿ.ಎಂ.ವಿಶ್ವಕರ್ಮ ಎಂಬ ಯೋಜನೆಯಲ್ಲೇ ಅಳವಡಿಸಲಾಗಿದೆ. ವೇದ ಪುರಾಣಗಳಲ್ಲಿರುವ ಸಕಲ ವಸ್ತುಗಳ ನಿರ್ಮಾತೃ ವಿಶ್ವಕರ್ಮ, ವಿಶ್ವದಲ್ಲಿರುವ ಎಲ್ಲಾ ನಿರ್ಮಾಣಗಳ ಮೂಲಕರ್ತೃ ವಿಶ್ವಕರ್ಮ, ಹಾಗೆಯೇ ಸಮಾಜದ ದೇವರು ಪಂಚ ವೃತ್ತಿಗಳು, ಕುಲ ಗುರು ಪರಂಪರೆ ಸೇರಿದಂತೆ ವಿವಿಧ ವಿಷಯಗಳನ್ನು ಮನವಿಯಲ್ಲಿ ವಿವರಿಸಲಾಗಿದೆ. ಹಾಗೆಯೇ ಭಾರತದಲ್ಲಿರುವ ಸುಪ್ರಸಿದ್ಧ ಪ್ರವಾಸಿ ತಾಣಗಳ ವಿಶ್ವಕರ್ಮರ ನಿರ್ಮಾಣಗಳು ಪ್ರಮುಖವಾಗಿ ಹಂಪಿ ವಿಜಯನಗರ, ಮಧುರೆ ಮೀನಾಕ್ಷಿ, ದ್ವಾರಕ, ಪುರಿ ಜಗನ್ನಾಥ ದೇವಳ, ಬೇಲೂರು, ಹಳೆಬೀಡು, ಕೈಲಾಸನಾಥ, ದೇವಾಲಯಗಳು . ಬೇಲೂರು, ಹಳೆಬೀಡು ಸೇರಿದಂತೆ ಹಲವು ದೇವಾಲಯ ನಿರ್ಮಾಣ ಮಾಡಿದ ಜಕ್ಕಣಾಚಾರ್ಯ, ಕೊನಾರ್ಕ ದೇವಸ್ಥಾನದ ಶಿಲ್ಪಿ ಮೊಹಾಪಾತ್ರ ಕುಟುಂಬದವರು, ಸೋಮನಾಥ ದೇವಸ್ಥಾನದ ಅಕ್ಷರಧಾಮ ನಿರ್ಮಾಣದ ಸೋಂಪುರ ಕುಟುಂಬ, ಅಯೋಧ್ಯಾ ರಾಮಮಂದಿರ ಶಿಲ್ಪಿ ಚಂದ್ರಕಾಂತ ಬಾಯಿ ಸೋಂಪುರ, ಆಯೋಧ್ಯಾ ರಥ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ, ಸರ್ದಾರ್ ಪಟೇಲ್ ರ ಮೂರ್ತಿ ಶಿಲ್ಪಿ ರಾಮ್ ವಿ ಸುತಾರ್, ಅಹಿಂಸಾ ಸ್ಥಲ್ ನ ಮಹಾವೀರ ಮೂರ್ತಿ ಶಿಲ್ಪಿ ಶಾಮರಾಯ ಆಚಾರ್ಯ ಕಾರ್ಕಳ, ವಿವೇಕಾನಂದ ರಾಕ್ ಶಿಲ್ಪಿ ಸ್ಥಪತಿ ಎಸ್ ಕೆ ಆಚಾರ್ಯ, ಕರ್ನಾಟಕ ಮತ್ತು ತಮಿಳ್ನಾಡು ದೇವಳಗಳ ಸ್ಥಪತಿ ದಕ್ಷಿಣಾ ಮೂರ್ತಿ ಮುಂತಾದ ಪ್ರಸಿದ್ಧ ಶಿಲ್ಪಿಗಳ ಪಟ್ಟಿ ಬೆಳೆಯುತ್ತದೆ, ಇವರೆಲ್ಲರೂ ವಿಶ್ವಕರ್ಮ ಸಮಾಜದವರೇ ಆಗಿದ್ದಾರೆ. ಭಾರತದ ಕೇಂದ್ರ ಮತ್ತು ರಾಜ್ಯ ಪ್ರವಾಸೋಧ್ಯಮ ಇಲಾಖೆಗೆ ದೇಶ ವಿದೇಶಗಳಿಂದ ಸಂದಾಯವಾಗುತ್ತಿರುವ ಪ್ರಮುಖ ಆರ್ಥಿಕ ಸಂಪನ್ಮೂಲಕ್ಕೆ ಕಾರಣ ಇಲ್ಲಿನ ಅದ್ಭುತ ಶಿಲ್ಪದೇವಾಲಯಗಳು, ವಿವಿಧ ನಿರ್ಮಾಣಗಳು. ಇವುಗಳ ಸೌಂದರ್ಯ ವೀಕ್ಷಿಸಿ ಆಸ್ವಾದಿಸಲು ಬರುವ ದೇಶ ಮತ್ತು ವಿದೇಶಗಳ ದೊಡ್ಡ ಮಟ್ಟದ ಪ್ರವಾಸಿಗರಿದ್ದಾರೆ.
ಈ ಮೂಲಕ ದೇಶದ ಖಜಾನೆಗೆ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಾರ್ಷಿಕ ವರದಿ ಪ್ರಕಾರ ಭಾರತ ದೇಶದ ಸಂರಕ್ಷಿತ ಸ್ಮಾರಕಗಳನ್ನು ವೀಕ್ಷಿಸುವುದಕ್ಕೆ 2022 - 2023 ರ ಕಾಲಘಟ್ಟದಲ್ಲಿ 6.19 ಮಿಲಿಯನ್ ವಿದೇಶಿ ಪ್ರವಾಸಿಗರು ಬಂದಿದ್ದು, ಇವರಿಂದ ಒಟ್ಟಾರೆ 252. 82 ಕೋಟಿ ರೂಪಾಯಿ ಹಣವನ್ನು ಪ್ರವೇಶ ಟಿಕೆಟ್ ಮೂಲಕ ಸಂಗ್ರಹಿಸಲಾಗಿದೆ. ಇಂಡಿಯಾ ಟೂರಿಸಂ ಅಟ್ ಎ ಗ್ಲಾನ್ಸ್ ಅಂಕಿ ಅಂಶಗಳ ಪ್ರಕಾರ ಅಂದಾಜು 2022-23ರ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವಾಲಯ 1, 34, 543 ಕೋಟಿ ರೂಪಾಯಿ ವಿದೇಶಿ ವಿನಿಮಯ ಗಳಿಸಿದೆ. ಹೀಗೆ ಒಟ್ಟಿನಲ್ಲಿ ಎಲ್ಲ ಬಗೆಯ ಶಿಲ್ಪಗಳು ಅವುಗಳ ಪಾರಂಪರಿಕ ಹಿನ್ನೆಲೆ, ವಿಶ್ವಕರ್ಮ ಕುಲವೃತ್ತಿ ಅವುಗಳ ಮಹತ್ವವನ್ನು ಸೇರಿದ ಎಲ್ಲಾ ವಿವರಗಳನ್ನು ಪ್ರಧಾನ ಮಂತ್ರಿಗಳವರು ಗಮನಹರಿಸಿ ಪ್ರಸ್ತುತ ಪಿ.ಎಂ. ವಿಶ್ವಕರ್ಮ ಯೋಜನೆಯಲ್ಲಿ ವಿಶ್ವಕರ್ಮ ಸಮಾಜದ ಪಂಚವೃತ್ತಿಗಳಾದ ಬಡಗಿ , ಕಮ್ಮಾರ, ಅಕ್ಕಸಾಲಿಗ, ಶಿಲಾ ಶಿಲ್ಪಿ, ಎರಕಶಿಲ್ಪ ವೃತ್ತಿದಾರರಿಗೆ ಅನುಪಾತಿಕವಾಗಿ ಇಲ್ಲವೇ ಜನಸಂಖ್ಯಾ ಪ್ರಣಾಮವನ್ನು ಅನುಸರಿಸಿ ಅರ್ಹ ಪಾಲಿನ ವಿಶೇಷ ವಿಭಾಗದ ಪರಿಗಣನೆ ನೀಡಬೇಕೆಂದು ಪ್ರಸ್ತುತ ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿಶ್ವಕರ್ಮ ಸಮಾಜದ ಕುಲಗುರು ಪೀಠವಾದ ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠವು ಸಮಾಜದ ಅಭಿವೃದ್ದಿಗೆ ನಡೆಸಲಾಗುವ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರತಿಕ ಮತ್ತು ಆರ್ಥಿಕ ಸೇರಿದ ಸಮಗ್ರ ಅಭಿವೃದ್ಧಿ ಯೋಜನೆಗಗಳ ಬಗ್ಗೆ ಹಾಗೂ ಮುಂದಿನ ನಿರ್ಮಾಣ ಯೋಜನೆಗಳ ವಿವರಣೆಗಳನ್ನು ನೀಡಿದಲ್ಲದೆ ಮುಂದಿನ ಬಜೆಟ್ ನಲ್ಲಿ ವಿಶೇಷ ನೆರವಿಗಾಗಿಯೂ ಮನವಿಯಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಆನೆಗುಂದಿ ಪ್ರತಿಷ್ಠಾನದ ನೇತೃತ್ವದಲ್ಲಿ ಸಮಾಜದ ಮುಖಂಡರುಗಳು ಸನ್ಮಾನ್ಯ ಪ್ರಧಾನ ಮಂತ್ರಿ ಗಳವರನ್ನು ಸಂದರ್ಶಿಸಿ ವಿಶ್ವಕರ್ಮ ಸಮಾಜದ ಸ್ಥಿತಿಗತಿ ಮತ್ತು ಅಭಿವೃದ್ಧಿ ಯೋಜನೆಗಳನ್ನು ವಿವರಿಸಲು ತೀರ್ಮಾನಿಸಲಾಗಿದೆ ಎಂದು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಹಾಗೂ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಕನ್ನಡ ಬಳಕೆ, ಅಭಿರುಚಿಯನ್ನು ಬೆಳೆಸುವ ಕಾರ್ಯ ಕನ್ನಡ ಭಾಷೆ ಕಲಿಸುವ ಶಿಕ್ಷಕರಿಂದ ಆಗಲಿ - ನೀಲಾವರ ಸುರೇಂದ್ರ ಅಡಿಗ

Posted On: 16-09-2023 12:31PM
ಕಾಪು : ಬೋಧಿಸುವ ಭಾಷೆಗೆ ನ್ಯಾಯ ಒದಗಿಸುವ ಕಾರ್ಯ ಶಿಕ್ಷಕರು ಮಾಡಬೇಕಾಗಿದೆ. ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆಯ ಪ್ರಭಾವ ಅಷ್ಟೇನು ಪ್ರಭಾವ ಬೀರದು. ಕನ್ನಡ ಎಲ್ಲೆಲ್ಲೂ ಅದರದೇ ಆದ ಮಹತ್ವ ಹೊಂದಿದೆ. ಪದವಿಯಲ್ಲಿ ಕಲಾ ವಿಷಯದಲ್ಲಿ ಕನ್ನಡ ಭಾಷೆಯಲ್ಲಿ ಅಭ್ಯಸಿಸುವವರ ಸಂಖ್ಯೆಗೆ ಕೊರತೆಯಿಲ್ಲ. ಕನ್ನಡ ಬಳಕೆ ಮತ್ತು ಅಭಿರುಚಿಯನ್ನು ಬೆಳೆಸುವ ಕಾರ್ಯ ಕನ್ನಡ ಭಾಷೆ ಕಲಿಸುವ ಶಿಕ್ಷಕರಿಂದ ಆಗಲಿ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ವತಿಯಿಂದ ಕಾಪು ತಾಲೂಕು ವ್ಯಾಪ್ತಿಯ ಪಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಭಾಷಾ ಶಿಕ್ಷಕರು, ಉಪನ್ಯಾಸಕರಿಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆ, ಶುದ್ಧ ಕನ್ನಡದ ಬಳಕೆ ಮತ್ತು ಕನ್ನಡ ನಾಡಿನ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸುವ ಕುರಿತು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಜರಗಿದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಗಾವ್ಕಂಕರ್ ಮಾತನಾಡಿ ಹೆಚ್ಚು ಭಾಷೆ ಕಲಿತಾಗ ತಿಳುವಳಿಕೆ ಮಟ್ಟ ಹೆಚ್ಚು ಎಂದು ಕಲಿತು ಅದರ ಪರಿಣಾಮ ಭಾಷೆ ಸಂಮಿಶ್ರವಾಗುತ್ತಿದೆ. ಕಾರ್ಯಾಗಾರದ ಮೂಲಕ ಮತ್ತಷ್ಟು ಜ್ಞಾನ ತಿಳಿಯಲು ಸಾಧ್ಯ ಎಂದರು.

ಉಪನ್ಯಾಸಕಿ ಪಜ್ಞಾ ಮಾರ್ಪಳ್ಳಿ ದಿಕ್ಸೂಚಿ ಭಾಷಣ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ರಾಂತ ಪತ್ರಕರ್ತ ಎಸ್.ನಿತ್ಯಾನಂದ ಪಡ್ರೆ ಹಾಗೂ ಶಿಕ್ಷಕ ರಾಘವೇಂದ್ರ ರಾವ್ ಕಟಪಾಡಿ ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆ, ಶುದ್ಧ ಕನ್ನಡದ ಬಳಕೆ ಮತ್ತು ಕನ್ನಡ ನಾಡಿನ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸುವ ಕುರಿತು ತರಬೇತಿ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಘಟಕದ ಪುಂಡಲೀಕ ಮರಾಠೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಶಂಕರ್, ಕಾಪು ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಸಂಘದ ಸಂಯೋಜಕರಾದ ದೀಪಿಕಾ ಸುವರ್ಣ, ಕಾರ್ಯದರ್ಶಿಗಳಾದ ಅಶ್ವಿನ್ ಲಾರೆನ್ಸ್, ನೀಲಾನಂದ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಕಾರ್ಯದರ್ಶಿ ನೀಲಾನಂದ ನಾಯಕ್ ನಿರೂಪಿಸಿದರು. ಅಶ್ವಿನ್ ಲಾರೆನ್ಸ್ ವಂದಿಸಿದರು.
ಉಡುಪಿ : ಮಲ್ಪೆಯ ತೊಟ್ಟಂ ನಲ್ಲಿ ಗ್ರಾನೈಟ್ ಬಿದ್ದು ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡಲು SDTU ಆಗ್ರಹ

Posted On: 16-09-2023 07:21AM
ಉಡುಪಿ : ಮಲ್ಪೆಯ ತೊಟ್ಟಂನಲ್ಲಿ ಕಂಟೈನರ್ ನಿಂದ ಗ್ರಾನೈಟ್ ಇಳಿಸುವಾಗ ಆಕಸ್ಮಿಕ ಕಾರ್ಮಿಕರಿಬ್ಬರ ಮೇಲೆ ಬಿದ್ದು ಒರಿಸ್ಸಾದ ಇಬ್ಬರು ದಾರುಣವಾಗಿ ಮೃತಪಟ್ಟ ದುರ್ಘಟನೆ ನಡೆದಿದೆ. ಈ ದುರ್ಘಟನೆಗೆ SDTU ಉಡುಪಿ ಜಿಲ್ಲೆ ತೀವ್ರವಾಗಿ ಖಂಡನೆ ವ್ಯಕ್ತಪಡಿಸುತ್ತಿದೆ. ಕುಟುಂಬದ ಜೀವನ ನಿರ್ವಹಣೆಗಾಗಿ ಜವಾಬ್ದಾರಿಯನ್ನು ಹೊತ್ತು ಹೊರರಾಜ್ಯದಿಂದ ಕೆಲಸವನ್ನು ಹರಸಿ ಬರುವ ಕಾರ್ಮಿಕರು ಸೂಕ್ತ ಸುರಕ್ಷಾ ಕ್ರಮ ಇಲ್ಲದೆ ವಿವಿಧ ಅಪಾಯಗಳನ್ನು ಎದುರಿಸುತ್ತಿದ್ದಾರೆ.
ದುಡಿಸುವವರು ಅನುಕೂಲಕ್ಕೆ ತಕ್ಕ ಹೊರರಾಜ್ಯದ ಕಾರ್ಮಿಕರನ್ನು ಯಾವುದೇ ಸುರಕ್ಷಾ ಕ್ರಮ ವಹಿಸದೆ ಕಾರ್ಮಿಕರನ್ನು ವಿವಿಧ ರೀತಿಯಲ್ಲಿ ಬಳಸುತ್ತಿರುವ ಕಾರಣದಿಂದ ಸಾವು ನೋವುಗಳು ಸಂಭವಿಸುವ ಘಟನೆಗಳು ನಡೆಯುತ್ತಿದೆ. ಕಾರ್ಮಿಕರ ಶ್ರಮವನ್ನು ನಮ್ಮ ಅನುಕೂಲಕ್ಕೆ ತಕ್ಕ ಬಳಸುವಾಗ ಅವರ ಕ್ಷೇಮಾಭಿವೃದ್ಧಿ ಮತ್ತು ಸುರಕ್ಷತೆಯನ್ನು ಖಾತ್ರಿ ಪಡಿಸುವೂದಕ್ಕಾಗಿ ಅಧಿಕೃತರು ವಿಶೇಷ ಕ್ರಮ ವಹಿಸಬೇಕು ಮಾತ್ರವಲ್ಲ ದುಡಿಮೆಗಾಗಿ ಹೊರ ರಾಜ್ಯದಿಂದ ಬರುವ ಹೊರರಾಜ್ಯಕ್ಕೆ ತೆರಳುವ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಸರಕಾರ ವಿಶೇಷ ಕ್ರಮವಹಿಸಲು ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಉಡುಪಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಉಚ್ಚಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ ಸಂತಮೇರಿ ಕಾಲೇಜು - ಕೊಂಕಣಿ ಅಧ್ಯಯನ ಪೀಠದಿಂದ ವಿಶೇಷ ಉಪನ್ಯಾಸ

Posted On: 15-09-2023 09:49PM
ಶಿರ್ವ : ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ವತಿಯಿಂದ ಸಂತ ಮೇರಿ ಕಾಲೇಜಿನ ಸಹಯೋಗದಲ್ಲಿ " ಕೊಂಕಣಿ ಮಾತೃಭಾಷೆ -ಒಂದು ಚಿಂತನೆ" ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತರು ಹಾಗೂ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆಯವರು ಕೊಂಕಣಿ ಭಾಷೆಯ ಪರಂಪರೆ, ಬೆಳವಣಿಗೆ ಹಾಗೂ ಅದರ ಪ್ರಸ್ತುತ ವೈಭವವನ್ನು ವಿವರಿಸಿದರು. ಕೊಂಕಣಿ ಒಂದು ರಾಷ್ಟ್ರಭಾಷೆಯಾಗಿದ್ದು, ಶಾಲೆಗಳಲ್ಲಿಯೂ ತೃತೀಯ ಭಾಷೆಯಾಗಿ ಕಲಿಯುವ ಅವಕಾಶ ಇದೆ. ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಕೊಂಕಣಿ ಭಾಷೆಯಲ್ಲೂ ಅವಕಾಶಗಳು ಉಜ್ವಲವಾಗಿದ್ದು, ಕೊಂಕಣಿ ಭಾಷಿಕರು ಹಾಗೂ ಆಸಕ್ತರು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯವಂತ ನಾಯಕ್‌ರವರು ಮಾತನಾಡಿ ಕೊಂಕಣಿ ಭಾಷೆಯು ರಾಜ್ಯಭಾಷೆಯಾಗಿ ಬೆಳೆದು ಬಂದ ದಾರಿಯನ್ನು ವಿವರಿಸಿದರು. ಸಂವಿಧಾನದ ಎಂಟನೇ ಪರಚ್ಛೇದದಲ್ಲಿ ಸೇರ್ಪಡೆಗೊಂಡ ನಂತರ ಕೊಂಕಣಿ ಭಾಷೆಯ ಕ್ಷಿಪ್ರ ಬೆಳವಣಿಗೆಯನ್ನು ವಿವರಿಸಿದರು. ಭಾಷೆಯು ಜನರನ್ನು ಒಗ್ಗೂಡಿಸುವ ಜೊತೆಗೆ ಅನೇಕ ಸಂಬಂಧಗಳನ್ನು ಬೆಸೆಯುತ್ತದೆ. ಕೊಂಕಣಿ ಭಾಷೆಯು ತನ್ನದೇ ಆದ ಅಸ್ಮಿತತೆಯನ್ನು ಹೊಂದಿದ್ದು ಜಾತಿ, ಧರ್ಮ ಹಾಗೂ ಪ್ರಾಂತ್ಯಗಳ ಬೇಧವಿಲ್ಲದೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಅಪೂರ್ವ ಕೊಡುಗೆಗಳನ್ನು ನೀಡಿದೆ ಅಲ್ಲದೆ ಎರಡು ಜ್ಞಾನಪೀಠ ಗೌರವವನ್ನು ಪಡೆದಿದೆ ಎಂದು ನುಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೊನಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸಿ ಅದನ್ನು ಬಳಸಿದಾಗ ಭಾಷೆಯ ಉಳಿವು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕರಾದ ಪೂರ್ಣಿಮಾ ಜಿ.ಎ., ಶರ್ಮಿಳಾ, ಪ್ರೇಮನಾಥ, ರಾಘವೇಂದ್ರ ಹೆಗ್ಡೆ ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಮೆಲ್ವಿನ್ ಕ್ಯಾಸ್ತೆಲಿನೊ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕರಾದ ಜಗದೀಶ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೇಯಾ ನಾಯಕ್ ಕಾರ್ಯಕ್ರಮ ನಿರೂಪಿಸಿ, ಶಾನಿಯಾ ತಂಡದವರು ಪ್ರಾರ್ಥಿಸಿದರು. ವೆನೆಸಿಯಾ ಕ್ವಾಡ್ರಸ್ ವಂದಿಸಿದರು.