Updated News From Kaup
ಕಾಪು : ರೋಟರಿ ಸಂಭ್ರಮದಲ್ಲಿ ರೋಟರಾಕ್ಟ್ ಕ್ಲಬ್ ಸುಭಾಸ್ ನಗರಕ್ಕೆ 11 ಪ್ರಶಸ್ತಿಗಳು

Posted On: 16-06-2025 05:35PM
ಕಾಪು : ರೋಟರಿ ಸಂಸ್ಥೆಯಿಂದ ಕಾರ್ಕಳದಲ್ಲಿ ನಡೆದ ಸಂಭ್ರಮ 2024-25 ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಾಕ್ಟ್ ಕ್ಲಬ್ ಸುಭಾಸ್ ನಗರ ಕ್ಕೆ ಒಟ್ಟು 11 ಪ್ರಶಸ್ತಿಗಳು ಲಭಿಸಿವೆ.
ಅತ್ಯುತ್ತಮ ಕ್ಲಬ್ ಪ್ರಥಮ ಸ್ಥಾನ, ಜಿಲ್ಲಾ ಕ್ರೀಡಾಕೂಟದ ಆತಿಥ್ಯ ಪ್ರಥಮ ಸ್ಥಾನ, ಉಭಯ ಸದಸ್ಯತ್ವ, ಸಮುದಾಯ ಸೇವೆ ಪ್ರಥಮ ಸ್ಥಾನ, ವರ್ಷದ ಅತ್ಯುತ್ತಮ ಗೃಹಪತ್ರಿಕೆ ಪ್ರಶಸ್ತಿ, ಅತ್ಯುತ್ತಮ ಕ್ಲಬ್ ಸೇವೆ ಪ್ರಥಮ, ವರ್ಷದ ಅತ್ಯುತ್ತಮ ಪುರುಷ ರೋಟರಾಕ್ಟರ್ ಪ್ರವೀಣ್ ಪೂಜಾರಿ, ಅತ್ಯುತ್ತಮ ಛೇರ್ಮನ್ ರೋ. ಗ್ಲಾಡ್ಸನ್ ಕುಂದರ್, ನವರತ್ನ ರೋ. ಅವಿನಾಶ್ ಆಚಾರ್ಯ, ಅತ್ಯುತ್ತಮ ಕಾರ್ಯದರ್ಶಿ ರೋ. ಚಿದಾನಂದ ಪೂಜಾರಿ, ಜಿಲ್ಲಾ ಯೋಜನೆಯಡಿ ಉತ್ತಮ ಆರೋಗ್ಯ ಕ್ಲಬ್ ಸೇವೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಸಂದರ್ಭ ರೋಟರಾಕ್ಟ್ ಕ್ಲಬ್ ಸುಭಾಸ್ ನಗರದ ಅಧ್ಯಕ್ಷರು, ಪದಾಧಿಕಾರಿಗಳು, ಪೂರ್ವ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಉದ್ಯಾವರ : ನಿರಂತರ್ - ಆಂಕ್ರಿಯಿಂದ ಕವಿತಾ ವಾಚನ, ಸಂವಾದ, ತರಬೇತಿ

Posted On: 16-06-2025 05:22PM
ಉದ್ಯಾವರ : ಸಮಾಜದಲ್ಲಿ ಬದಲಾವಣೆ ಪ್ರಾಕೃತಿಕ ನಿಯಮ. ಸಾಹಿತ್ಯದಿಂದ ಸಾಕಷ್ಟು ಸಮಾಜಿಕ ಚಳವಳಿಗಳು ರೂಪುಗೊಂಡು, ಕವಿ ಮತ್ತು ಸಾಹಿತಿಗಳು ಸಾಮಾಜಿಕ ಬದಲಾವಣೆಗೆ ಕಾರಣೀಭೂತರಾಗಿದ್ದಾರೆ. ತಮ್ಮ ಬಗ್ಗೆಯೇ ಯೋಚಿಸಲು ಸಮಯವಿಲ್ಲದ ಇಂದಿನ ಒಂದು ನಿಮಿಷದ ರೀಲ್ ಕಾಲದಲ್ಲಿ, ಸಾಹಿತಿ, ಕವಿಗಳು ಸಮಾಜದ ಬಗ್ಗೆ ಯೋಚಿಸಿ, ಕವಿತೆ - ಲೇಖನಗಳ ಮೂಲಕ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಗುರು ವಂ| ಅನಿಲ್ ಡಿ ಸೊಜಾ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಅಹರ್ನಿಶಿ ಶ್ರಮಿಸುತ್ತಿರುವ ನಿರಂತರ್ ಉದ್ಯಾವರ್ ಸಾಂಸ್ಕೃತಿಕ ಸಂಘಟನೆಯ ಸ್ಥಾಪನಾ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾಹಿತ್ಯ ಶಿಬಿರ ಮತ್ತು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

’ಆಂಕ್ರಿ’ ಕೊಂಕಣಿ ಜಾಲತಾಣ ಮತ್ತು ’ಆರ್ಸೊ’ ಕೊಂಕಣಿ ಪತ್ರಿಕೆಯ ಸಹಯೋಗದಲ್ಲಿ ಯುವಜನ ಮತ್ತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಸಾಹಿತ್ಯ ಶಿಬಿರದಲ್ಲಿ ಸಾಹಿತ್ಯ ಅಕಾಡೆಮಿ, ಹೊಸ ದೆಹಲಿ, ಕೊಂಕಣಿ ಸಲಹಾ ಮಂಡಳಿಯ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಕವಿತೆ ಬಗ್ಗೆ, ಕಿಟಾಳ್ ಅಂತರ್ಜಾಲ ಪತ್ರಿಕೆಯ ಸಂಪಾದಕ, ವಿಮರ್ಶಕ ಎಚ್. ಎಮ್. ಪೆರ್ನಾಲ್ ಲೇಖನ ಬರಹದ ಬಗ್ಗೆ ತರಬೇತಿ ನೀಡಿದರು. ಖ್ಯಾತ ಕವಿ ಅರ್ಸೊ ಪತ್ರಿಕೆ ಸಂಪಾದಕ ವಿಲ್ಸನ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕಾವ್ಯ ವಾಚನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕವಿಗಳಾದ ಕ್ಯಾಥರಿನ್ ರೊಡ್ರಿಗಸ್, ಕಟಪಾಡಿ, ಸನ್ನು ಮೋನಿಸ್, ಬೆಳ್ಳೆ, ಪೀಯುಸ್ ಜೇಮ್ಸ್, ಕರಗುಳ್ನಡೆ, ಜೀತಾ ಗೊನ್ಸಾಲ್ವಿಸ್, ಬಾರ್ಕೂರ್, ಪ್ರಮೀಳಾ ಫ್ಲಾವಿಯಾ, ಕಾರ್ಕಳ ಮತ್ತು ಸ್ಟ್ಯಾನಿ ಬೆಳಾ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪಾಲನ ಮಂಡಳಿ ಉಪಾಧ್ಯಕ್ಷರಾದ ವಿಲ್ಪ್ರೆಡ್ ಡಿಸೋಜಾ ಹಾಜರಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸ್ನೇಹಾಲಯ, ಪಾಲೊಟ್ಟಿ ಕನ್ಯಾಮಠದ ಮುಖ್ಯಸ್ಥೆ ಭ| ಲೀನಾ, ಸಹಾಯಕ ಗುರು ವಂ| ಸ್ಟೀಫನ್ ರೊಡ್ರಿಗಸ್, ಐಸಿವೈಎಂ ಉಡುಪಿ ವಲಯ ಅಧ್ಯಕ್ಷ ರೋವಿನ್ ಪಿರೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರಂತರ್ ಉದ್ಯಾವರ ಅಧ್ಯಕ್ಷ. ರೋಶನ್ ಕ್ರಾಸ್ತಾ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಸ್ಟೀವನ್ ಕುಲಾಸೊ ನಿರೂಪಿಸಿ, ಅಂಕ್ರಿ ಸಂಚಾಲಕ ಸನ್ನು ಮೋನಿಸ್ ವಂದಿಸಿದರು.
ಕಾಪು ರೋಟರಿ ಕ್ಲಬ್ ರಜತೋತ್ಸವದಲ್ಲಿ ದಂಡತೀರ್ಥ ಪ್ರಾಂಶುಪಾಲ ನೀಲಾನಂದ ನಾಯ್ಕ್‌ರವರಿಗೆ ಅಭಿನಂದನೆ

Posted On: 16-06-2025 11:55AM
ಕಾಪು : ಇಲ್ಲಿನ ರೋಟರಿ ಕ್ಲಬ್ ಇದರ ರಜತೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಳೆದ 37 ವರ್ಷಗಳಿಂದ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರಾಗಿ, ಉಪಪ್ರಾಂಶುಪಾಲರಾಗಿ, ಪ್ರಸ್ತುತ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ನೀಲಾನಂದ ನಾಯ್ಕ್‌ರವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅಭಿನಂದಿಸಲಾಯಿತು.

ಕಾಪುವಿನ K1 ಹೋಟೆಲ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಕಾರ್ಯದರ್ಶಿ ರಾಜೇಂದ್ರನಾಥ್, ರೋಟರಿ ಜಿಲ್ಲಾ ಗವರ್ನರ್ ರೊ. ಸಿಎ ದೇವಾನಂದ್, ಸಹಾಯಕ ಗವರ್ನರ್ ರೊ. ಅನಿಲ್ ಡೇಸಾ, ವಲಯ ಸಹಾಯಕ ರೊ. ಜಾನ್ ಸಿಕ್ಟೇರಾ ಹಾಗೂ ಕಾಪು ರೋಟರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಪು ಪರಿಸರದ 25 ಮಂದಿ ಸಾಧಕರನ್ನು ಅಭಿನಂದಿಸಲಾಯಿತು.
ಬಂಟಕಲ್ಲು : 8ನೇ ವರ್ಷದ "ಗಾದಂತ್ ಕ್ಹೇಳ್ ಮೇಳ್" - ಕೆಸರು ಗದ್ದೆ ಕ್ರೀಡೋತ್ಸವ ಸಂಪನ್ನ

Posted On: 16-06-2025 11:44AM
ಶಿರ್ವ : ಪ್ರಕೃತಿಯ ಜೊತೆಗಿನ ಬಾಂಧವ್ಯದೊಂದಿಗೆ ಜೊತೆಯಾದ ಹಿರಿಯರ ಅನುಭವಗಳು, ಕಷ್ಟದ ಶ್ರಮ ಜೀವನ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಇಂದು ಮರೆಯಾಗುತ್ತಿದೆ. ಅವರ ಬದುಕು ನಮಗೆ ಆದರ್ಶವಾಗಿರಬೇಕು. ಹಿರಿಯರ ಕೃಷಿ ಸಂಸ್ಕೃತಿ, ಪ್ರಕೃತಿಯ ನಂಟು ನವಪೀಳಿಗೆಗೆ ಪರಿಚಯಿಸುವ "ಗಾದಂತ್ ಕ್ಹೇಳ್ ಮೇಳ್" ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ಇದರ ನಿರ್ದೇಶಕರಾದ ಎಳ್ಳಾರೆ ಸದಾಶಿವ ಪ್ರಭು ನುಡಿದರು. ಅವರು ರವಿವಾರ ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಹಾಗೂ ಶ್ರೀದುರ್ಗಾ ಮಹಿಳಾ ವೃಂದದ ಸಹಭಾಗಿತ್ವದಲ್ಲಿ ಸಡಂಬೈಲು ಅನಂತರಾಮ ವಾಗ್ಲೆಯವರ ದೊಡ್ಡಗದ್ದೆಯಲ್ಲಿ ಸಮಾಜದ ಸಂಘಟನೆ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಮನೋರಂಜನೆಯ ಸದುದ್ದೇಶದಿಂದ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ 8ನೇ ವರ್ಷದ "ಗಾದಂತ್ ಕ್ಹೇಳ್ ಮೇಳ್" - ಕೆಸರು ಗದ್ದೆ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಗತಿಪರ ಕೃಷಿಕೆ ಸಡಂಬೈಲು ಹೆಬ್ಬಾಗಿಲು ಸುನೀತಾ ಕೃಷ್ಣ ವಾಗ್ಲೆ ಮತ್ತು ಮೂಲತ: ಕೃಷಿಕರಾಗಿದ್ದು ಪ್ರಸ್ತುತ ಇನ್ನಂಜೆ ಎಸ್‌ವಿಎಚ್ ಪ.ಪೂ.ಕಾಲೇಜಿನ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ ಕುಂಜರ್ಗ ರಾಜೇಂದ್ರ ಪ್ರಭು, ಕಂಬಳ ಕೋಣಗಳ ಯಜಮಾನ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್ ರವರನ್ನು ಸನ್ಮಾನಿಸಲಾಯಿತು. ಜೊತೆಗೆ ಕಂಬಳ ಕೋಣಗಳನ್ನು ಗದ್ದೆಗೆ ಇಳಿಸಿ ಸಹಕರಿಸಿದ ಸಹಪಾಠಿಗಳನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಾರಸ್ವತ ಸೌಹಾರ್ದ ಸಹಕಾರಿ ಸಂಘ (ನಿ.) ಮಣಿಪಾಲ ಇದರ ಅಧ್ಯಕ್ಷ ವಾಸುದೇವ ಕೃಷ್ಣ ನಾಯಕ್ ಸ್ಪರ್ಧಾ ವಿಜೇಜೇತರಿಗೆ ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು. ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದ ಬೈಲು, ಸ್ಥಳೀಯ ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಗದ್ದೆಯ ಯಜಮಾನ ಅನಂತರಾಮ ವಾಗ್ಲೆ, ಆರ್‌ಎಸ್‌ಬಿ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್, ಶ್ರೀದುರ್ಗಾ ಮಹಿಳಾ ಮಹಿಳಾ ವೃಂದದ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್, ಬೆಳ್ಳೆ ಗ್ರಾ,ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶೇಷ ಆಕರ್ಷಣೆಯಾಗಿ ಕೆಸರುಗದ್ದೆಯಲ್ಲಿ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್‌ರವರ ಕಂಬಳದ ಕೋಣಗಳ ಓಟವನ್ನು ಪ್ರದರ್ಶಿಸಲಾಯಿತು.
ಕೆಸರು ಗದ್ದೆಯಲ್ಲಿ ನಿಧಿ ಶೋಧ, ಮಕ್ಕಳಿಗೆ ಕೆಸರುಗದ್ದೆ ಓಟ, ಅಡಿಕೆ ಹಾಳೆ ಓಟ, ಚೆಂಡು ಹೆಕ್ಕುವುದು, ಹಲಸಿನ ಬೀಜ ಹೆಕ್ಕುವುದು, ಪ್ರೌಢರಿಗೆ ತಂಡಗಳಲ್ಲಿ ಕಂಬಳ ಓಟ, ರಿಲೇ, ಗೂಟಕ್ಕೆ ಸುತ್ತುಹಾಕಿ ಓಟ, ಬಲೂನ್ ಓಟ, ಹಿರಿಯರಿಗೆ ದಂಪತಿ ಉಪ್ಪುಮೂಟೆ ಓಟ, ಕಂಬಳ ಓಟ, ರಿಲೇ ಓಟ, ಮಡಲು ಹೆಣೆಯುವುದು, ಬೈಹುಲ್ಲಿನಿಂದ ಹಗ್ಗ ತಯಾರಿ, ಬಲೂನ್ ಓಟ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಆಟಗಳನ್ನು ಏರ್ಪಡಿಸಲಾಗಿತ್ತು. ಪ್ರಧಾನ ಸಂಘಟಕ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್ ಪ್ರಾಸ್ತಾವನೆಗೈದು, ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ಸ್ಫರ್ಧಾ ವಿಜೇತರನ್ನು ಪರಿಚಯಿಸಿದರು. ದೇವದಾಸ್ ಪಾಟ್ಕರ್ ನಿರೂಪಿಸಿದರು.
ಜೂ. 17 (ನಾಳೆ) : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಶ್ರೀಮಾತಾ ಸು-ವರ್ಣ ಪುಷ್ಪಾಂಜಲಿ ಸೇವೆ

Posted On: 16-06-2025 11:20AM
ಕಾಪು : ಇಲ್ಲಿನ ಶ್ರೀಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ಶ್ರೀಮಾತಾ ಸಭಾಭವನ ಉದ್ಘಾಟನೆ ಮತ್ತು ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಮತ್ತು ತಂಡದವರು ರಚಿಸಿರುವ ಮಹಾಮಾತೆ ಮಾರಿಯಮ್ಮ ಗ್ರಂಥ ಬಿಡುಗಡೆ ಹಾಗೂ ಘಂಟಾನಾದ ಸೇವೆಗೆ ಚಾಲನೆಯು ಜೂನ್ 17, ಮಂಗಳವಾರ ನಡೆಯಲಿದೆ.
ಕ್ಷೇತ್ರದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ.ಪಿ.ಕುಮಾರಗುರು ಅವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕ ಕಲ್ಯ ಶ್ರೀನಿವಾಸ ತಂತ್ರಿಗಳ ಸಹಯೋಗದೊಂದಿಗೆ ಶ್ರೀಮಾತಾ ಸು-ವರ್ಣ ಪುಷ್ಪಾಂಜಲಿ ಸೇವೆ ಆಯೋಜಿಸಲಾಗಿದೆ.
ಬೆಳಗ್ಗೆ 9ಕ್ಕೆ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯಲ್ಲಿ ಪ್ರಾರ್ಥನೆ, 9.9ಕ್ಕೆ ಶ್ರೀಮಾತಾ ಸಭಾಭವನ ಉದ್ಘಾಟನೆ, 9.18ರಿಂದ ಶ್ರೀಮಾತಾ ಸು-ವರ್ಣ ಪುಷ್ಪಾಂಜಲಿ ಸೇವೆಯ ಪೂಜಾ ಪ್ರಕ್ರಿಯೆ ಆರಂಭ ಮತ್ತು ಭಕ್ತರಿಂದ ಸಂಕಲ್ಪ ಸ್ವೀಕಾರ, 10ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, 11.30 ಕ್ಕೆ ಉತ್ತರ ಪೂಜೆ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನೆರವೇರಲಿದೆ.
ಘಂಟಾನಾದ ಸೇವೆ ಚಾಲನೆ ಪ್ರಯುಕ್ತ ಸಂಜೆ 6ರಿಂದ ಘಂಟಾನಾದ ಸೇವೆ ಜರುಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ.ಕ. ಮೊಗವೀರ ಮಹಾಜನ ಸಂಘದಿಂದ ಮೊಗವೀರ ಗ್ರಾಮಸಭೆಗಳಿಗೆ ಭೇಟಿ

Posted On: 16-06-2025 11:12AM
ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಸಭಾ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಮಹಾಜನ ಸಂಘದ ಆಡಳಿತ ಪದಾಧಿಕಾರಿಗಳು ಭಾನುವಾರ ನಾನಾ ಮೊಗವೀರ ಮಹಾಸಭೆಗಳಿಗೆ ಭೇಟಿ ನೀಡಿದರು.
ಹೆಜಮಾಡಿಯ ಗುಂಡಿ ಮೊಗವೀರ ಮಹಾಸಭಾದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ ಮಹಾಸಭಾದ ಅಧ್ಯಕ್ಷ ಜಯ ಸಿ.ಕೋಟ್ಯನ್ ಬೆಳ್ಳಂಪಳ್ಳಿ ಮಾತನಾಡಿ, ಶ್ರೀ ಕ್ಷೇತ್ರ ಉಚ್ಚಿಲಕ್ಕೆ ನಿತ್ಯ ಸಹಸ್ರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಇದೇ ರೀತಿ ಜಗತ್‌ಪ್ರಸಿದ್ಧ ಉಚ್ಚಿಲ ದಸರಾ ಮಹೋತ್ಸವದಲ್ಲಿ ಲಕ್ಷಾತರ ಭಕ್ತರು ಭಾಗವಹಿಸುತ್ತಾರೆ. ಜತೆಗೆ ಧಾರ್ಮಿಕ, ಸಾಮಾಜಿಕ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ನಿರಂತರ ಸೇವೆಗಳು ನಡೆಯುತ್ತಾ ಬಂದಿದೆ. ಈ ಬಾರಿ ಹಲವು ಶಾಶ್ವತ ಯೋಜನೆಗಳನ್ನು ಕಾರ್ಯಗತಗೊಳಿಸಲು ಮಹಾಜನ ಸಂಘ ನಿರ್ಧರಿಸಿದ್ದು, ಗ್ರಾಮಸಭೆಗಳು ಸಹಕಾರ ನೀಡಲು ಮುಂದೆ ಬರಬೇಕು ಎಂದರು.
ಗುಂಡಿ ಮೊಗವೀರ ಮಹಾಸಭಾದ ಅಧ್ಯಕ್ಷ ದಿವಾಕರ ಹೆಜ್ಮಾಡಿ ಪ್ರತಿಕ್ರಿಯಿಸಿ, ಮಹಾಜನ ಸಂಘದ ಮನವಿಯಂತೆ ನಮ್ಮ ಗ್ರಾಮ ಸಭಾ ವತಿಯಿಂದ ಸರ್ವರ ಅಭಿಪ್ರಾಯದಂತೆ ಸಹಕಾರ ನೀಡಲು ಬದ್ಧರಿದ್ದೇವೆ ಎಂದರು. ಈ ಸಂದರ್ಭ ಜಯ ಸಿ.ಕೋಟ್ಯಾನ್‌ರವರು ದಿವಾಕರ ಹೆಜ್ಮಾಡಿಯವರಿಗೆ ಮಹಾಜನ ಸಂಘದ ಮನವಿಯನ್ನು ಹಸ್ತಾಂತರಿಸಿದರು.
ಮೊಗವೀರ ಮಹಾಜನ ಸಂಘದ ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಸಮಿತಿ ಸದಸ್ಯರಾದ ಯಾದವ ವಿ.ಕೆ., ಕಿರಣ್ ಕುಮಾರ್ ಉದ್ಯಾವರ ಮತ್ತು ದಿನೇಶ್ ಎರ್ಮಾಳ್, ಶ್ರೀ ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ, ಗುಂಡಿ ಮೊಗವೀರ ಮಹಾಸಭಾದ ಗುರಿಕಾರ ಲೋಕನಾಥ ಗುರಿಕಾರ, ಪ್ರಧಾನ ಕಾರ್ಯದರ್ಶಿ ದಿನೇಶ್ ಸುವರ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಶುಭ ದಿನೇಶ್, ಮಹಾಸಭಾದ ಜತೆ ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಕೋಶಾಧಿಕಾರಿ ಮೋಹಿತ್ ಸಾಲ್ಯಾನ್ ಉಪಸ್ಥಿತರಿದ್ದರು. ಭಾನುವಾರ 10ಕ್ಕೂ ಅಧಿಕ ಗ್ರಾಮಸಭೆಗಳಿಗೆ ಮಹಾಜನ ಸಂಘದ ಪದಾಧಿಕಾರಿಗಳು ಭೇಟಿ ನೀಡಿದ್ದು, ಮಹಾಜನ ಸಂಘ ಅಧೀನದ 169 ಗ್ರಾಮ ಸಭೆಗಳಿಗೂ ಭೇಟಿ ನೀಡಲಿದ್ದಾರೆ.
ಕುಂದಾಪುರ : ವಿದ್ಯಾಪೋಷಕ್ 76ನೇ ಮನೆ ಹಸ್ತಾಂತರ

Posted On: 16-06-2025 11:07AM
ಉಡುಪಿ : ಇಂಡಿ ವಿಲೇಜ್ ನ ಸಂಸ್ಥಾಪಕರಾದ ಶ್ರೀಕಾಂತ್ ಕೆ. ಅರಿಮಣಿತ್ತಾಯ ಮತ್ತು ಭಾರತಿ ಶ್ರಿಕಾಂತ್ ದಂಪತಿಗಳು ತಮ್ಮ ಮೂವತ್ತನೇ ವರ್ಷದ ವಿವಾಹ ಮಹೋತ್ಸವದ ಸವಿನೆನಪಿಗಾಗಿ 6.50 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂದಾಪುರ ತಾಲೂಕಿನ ಮೂಡುಮುಂದದ ಮೋರ್ಟುವಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸುಶ್ಮಿತಾ ಇವಳಿಗೆ ನೂತನವಾಗಿ ನಿರ್ಮಿಸಿಕೊಟ್ಟ ‘ವಜ್ರಮ್’ ಮನೆಯನ್ನು ಹಸ್ತಾಂತರಿಸಿದರು.
ಶ್ರೀಕಾಂತ್ ಕೆ. ಅರಿಮಣಿತ್ತಾಯ ಮತ್ತು ಭಾರತಿ ಶ್ರಿಕಾಂತ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶ್ರೀಕಾಂತರವರು, ತನ್ನ ಅಜ್ಜ, ತಂದೆ,ತಾಯಿ, ಗುರುಗಳು ತನಗೆ ಪ್ರೇರಕರಾಗಿದ್ದು, ಮುಂದಿನ ದಿನಗಳಲ್ಲಿ ಕಲಾರಂಗದ ಎಲ್ಲ ಚಟುವಟಿಕೆಗಳಿಗೆ ನೆರವಾಗಲು ಸಿದ್ದನಾಗಿದ್ದೇನೆ. ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿ, ಭವಿಷ್ಯದ ತನ್ನ ಯೋಜನೆಗಳನ್ನು ಪ್ರಕಟಿಸಿದರು. ಅಭ್ಯಾಗತರಾಗಿ ಆಗಮಿಸಿದ ಹಿರಿಯ ಬರಹಗಾರರು, ಶಿಕ್ಷಣತಜ್ಞರು ಆದ ಡಾ.ಬಿ.ಭಾಸ್ಕರ್ ರಾವ್, ಜಾಗತಿಕ ಮಟ್ಟದ ವಾಣಿಜ್ಯೋದ್ಯಮಿ ಶ್ರೀಕಾಂತರನ್ನು ತುಂಬು ಹೃದಯದಿಂದ ಅಭಿನಂದಿಸಿ, ಅವರ ಅಗಾಧ ಸಾಮರ್ಥ್ಯವನ್ನು ಪ್ರಶಂಸಿದರು. ಭೀಮ ಗೋಲ್ಡ್ಸ್ ಪ್ರೈ.ಲಿ.ಬೆಂಗಳೂರು ಇದರ ಪ್ರಮುಖರಾದ ಶ್ರೀಪತಿ ಭಟ್ ಅಭಿನಂದನೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಅರಿಮಣಿತ್ತಾಯರ ಮಾತೃಶ್ರೀ ಪುಷ್ಕಳಾ ಕೃಷ್ಣನ್, ಪುತ್ರ ವಿಶಾಲ್ ಅರಿಮಣಿತ್ತಾಯ, ಅಳಿಯ ನಚಿಕೇತ, ನಾಗರಾಜ ಆಚಾರ್ಯ, ಬಾಲಕೃಷ್ಣ ಕೋರ್ನಾಯ, ಸುಬ್ರಮಣ್ಯ ಭಟ್, ಹಯವದನ ಭಟ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ. ಜಿ. ಶೆಟ್ಟಿ, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಶೋಕ ಎಂ., ನಟರಾಜ ಉಪಾಧ್ಯ, ಗಣರಾಜ ಭಟ್, ವಿದ್ಯಾಪ್ರಸಾದ್, ಮಂಜುನಾಥ ಹೆಬ್ಬಾರ್, ಕಿಶೋರ್ ಸಿ. ಉದ್ಯಾವರ, ಗಣೇಶ ಬ್ರಹ್ಮಾವರ, ಗಣಪತಿ ಭಟ್ ಭಾಗವಹಿಸಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ರಾಘವೇಂದ್ರ ಸೋಮಯಾಜಿ ಸಂಸ್ಥೆಗೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಎಚ್.ಎನ್.ವೆಂಕಟೇಶ್ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು : ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

Posted On: 12-06-2025 04:16PM
ಕಾಪು : ಶ್ರೀದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು ಇವರ ನೇತೃತ್ವದಲ್ಲಿ ದಿ.ಕಾಪು ಲೀಲಾಧರ ಶೆಟ್ಟಿ ಇವರ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಕೋಟೆ ಶ್ರೀ ಹಳೇ ಮಾರಿಯಮ್ಮ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಗುರಿಕಾರ ಜಯ ರಾಣ್ಯ ಉದ್ಘಾಟಿಸಿದರು.
ಮಲ್ಲಾರು ಜನರಲ್ ವಾರ್ಡಿನ ಸದಸ್ಯೆ ಮೋಹಿನಿ ಶೆಟ್ಟಿ, ಸಮಾಜದ ಪ್ರಮುಖರಾದ ಶೇಖರ ಗೌಡ್ರು, ರವೀಂದ್ರ ಮಲ್ಲಾರು, ರಾಣೆಯರ್ ಸಮಾಜ ಸೇವಾ ಸಂಘ ಕಾಪು ಇದರ ಅಧ್ಯಕ್ಷರಾದ ನಾಗಾರ್ಜುನ ಕಾಪು, ಹಳೇ ಮಾರಿಯಮ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾದ ಕು.ಜ್ಞಾನೇಶ್ವರಿ, ಶ್ರೀದೇವಿ ಫ್ರೆಂಡ್ಸ್ ಅಧ್ಯಕ್ಷರಾದ ಅಖಿಲೇಶ್, ಉಪಾಧ್ಯಕ್ಷರಾದ ನೀತಾ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಆಯ್ಕೆ

Posted On: 12-06-2025 04:01PM
ಉಡುಪಿ : ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುತ್ಯಾರ್ ನವೀನ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ದೇಶದಾದ್ಯಂತ ಪಕ್ಷ ಸಂಘಟನಾ ಪರ್ವ ನಡೆಯುತ್ತಿದ್ದು ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತ ದಲ್ಲಿ ಉಳಿದಿರುವ 10 ಜಿಲ್ಲೆಗಳ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ.
ಕುತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕುತ್ಯಾರ್ ನವೀನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನಾ ಪರ್ವ 2024-25 ರಾಜ್ಯ ಚುನಾವಣಾಧಿಕಾರಿ ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ : 2025 -26 ನೇ ಸಾಲಿನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆ

Posted On: 12-06-2025 03:55PM
ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪುವಿನಲ್ಲಿ 2025 -26 ನೇ ಸಾಲಿನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯು ಜರಗಿತು. ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ ಇವರು ಅಧ್ಯಕ್ಷತೆ ವಹಿಸಿದ್ದರು.

ಹೊಸದಾಗಿ ನೇಮಕಗೊಂಡ ಸದಸ್ಯರನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಲಾಯಿತು. ಆಸ್ಪತ್ರೆಯ ವಿವಿಧ ಕಾರ್ಯಕ್ರಮಗಳು, ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರುವ ಬಗ್ಗೆ ರೂಪರೇಷೆಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಆಡಳಿತ ವೈದ್ಯಾಧಿಕಾರಿ ಡಾ. ರಾಜಶ್ರೀ ಕಿಣಿ, ಸ್ಥಳೀಯ ಪ್ರತಿನಿಧಿಗಳಾದ ಹರೀಶ್ ನಾಯಕ್ ಕಾಪು, ಹಮೀದ್ ಯೂಸುಬ್, ಆಸಿಫ್, ಕಾರ್ತಿಕ್, ಯೋಗೇಶ್, ಆಶಾ ಶಂಕರ್, ಶಾಲಾ ಮುಖ್ಯ ಶಿಕ್ಷಕಿ ಆಶಾಲತಾ, ವೈದ್ಯಾಧಿಕಾರಿ ಡಾ.ಧೃತಿ ಆಳ್ವ, ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸಿಸ್ಟರ್ ಚಂದ್ರಕಲಾರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.