Updated News From Kaup
ಗೃಹ ರಕ್ಷಕರ ನೇಮಕಾತಿ : ಅರ್ಜಿ ಆಹ್ವಾನ

Posted On: 13-03-2023 06:27PM
ಉಡುಪಿ : ಜಿಲ್ಲಾ ಗೃಹರಕ್ಷಕದಳ ಇಲಾಖೆಯಲ್ಲಿ ಗೃಹರಕ್ಷಕರಾಗಿ ಸೇವೆ ಸಲ್ಲಿಸಲು ಇಚ್ಛಿಸುವ ಎಸ್.ಎಸ್.ಎಲ್.ಸಿ ಉತ್ತೀರ್ಣ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ, 19 ರಿಂದ 45 ವರ್ಷದೊಳಗಿನ ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಗ್ನಿಶಾಮಕ ಕಚೇರಿ ಆವರಣದಲ್ಲಿರುವ ಜಿಲ್ಲಾ ಗೃಹರಕ್ಷಕದಳ ಕಚೇರಿ ದೂ.ಸಂಖ್ಯೆ: 0820-2533650, ಬೈಂದೂರು ಘಟಕಾಧಿಕಾರಿ ರಾಘವೇಂದ್ರ ಮೊ.ನಂ: 9449469838, ಕುಂದಾಪುರ ಘಟಕಾಧಿಕಾರಿ ಕೆ. ಭಾಸ್ಕರ್ ಮೊ.ನಂ: 9242126368, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಮೊ.ನಂ: 9731897356, ಕಾರ್ಕಳ ಘಟಕಾಧಿಕಾರಿ ಪ್ರಭಾಕರ ಸುವರ್ಣ ಮೊ.ನಂ: 9632002170, ಕಾಪು ಘಟಕಾಧಿಕಾರಿ ಕುಮಾರ್ ವಿ ಕೋಟ್ಯಾನ್ ಮೊ.ನಂ: 9901930467, ಪಡುಬಿದ್ರೆ ಘಟಕಾಧಿಕಾರಿ ನವೀನ್ ಮೊ.ನಂ: 9880343236, ಮಣಿಪಾಲ ಘಟಕಾಧಿಕಾರಿ ಶೇಖರ್ ಮೊ.ನಂ: 6360895883 ಹಾಗೂ ಉಡುಪಿ ಘಟಕಾಧಿಕಾರಿ ಕುಮಾರ್ ಮೊ.ನಂ: 8971682721 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಮಾಂಡೆಂಟ್ ಡಾ. ಕೆ.ಪ್ರಶಾಂತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿಯಿಂದ ಪರಿಪೂರ್ಣತೆ: ಎಸ್.ಟಿ ಸಿದ್ದಲಿಂಗಪ್ಪ

Posted On: 13-03-2023 06:13PM
ಉಡುಪಿ : ತರಬೇತಿಯು ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲಿ ಜ್ಞಾನ, ಕೌಶಲ್ಯತೆ ಹಾಗೂ ಅತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಯಾವುದೇ ಉದ್ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸುವಲ್ಲಿ ತರಬೇತಿಯು ಅತೀ ಅಗತ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ಧಲಿಂಗಪ್ಪ ಹೇಳಿದರು. ಅವರು ಗುರುವಾರ, ಮಲ್ಪೆಯ ಸಿ.ಎಸ್.ಪಿ ಕೇಂದ್ರ ಕಚೇರಿಯಲ್ಲಿ, ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 2 ನೇ ತಂಡದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಹಮ್ಮಿಕೊಂಡಿರುವ ಈಜು ತರಬೇತಿ, ಪ್ರಥಮ ಚಿಕಿತ್ಸೆ, ಸಮುದ್ರ ಈಜು ತರಬೇತಿ ಮತ್ತು ಒಳಾಂಗಣ ತರಬೇತಿಯು ಸಿ.ಎಸ್.ಪಿ ಘಟಕದ ಕರ್ತವ್ಯ ನಿರ್ವಹಣೆಗೆ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಲ್ಪೆ ಟೆಗ್ಮಾ ಕೊಚ್ಚಿನ್ ಶಿಫ್ಯಾರ್ಡ್ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹರಿಕುಮಾರ್ ಮಾತನಾಡಿ, ಯಾವುದೇ ಉದ್ಯೋಗದಲ್ಲಿ ತರಬೇತಿಯು ಅತೀ ಅಗತ್ಯವಾಗಿದ್ದು, ತರಬೇತಿಯು ತುರ್ತು ಸಮಯದಲ್ಲಿ ಸಾರ್ವಜನಿಕರ ಜೀವ ಮತ್ತು ಸ್ವತ್ತು ರಕ್ಷಣೆಗೆ ಅನುಕೂಲವಾಗಲಿದೆ ಎಂದರು.
ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲ ಸಿ.ಎಸ್.ಪಿ ಕೇಂದ್ರ ಕಚೇರಿಯ ಡಿವೈಎಸ್ಪಿ ಟಿ.ಎಸ್ ಸುಲ್ಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್.ಪಿ ಕೇಂದ್ರ ಕಚೇರಿಯ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಸ್ವಾಗತಿಸಿ, ನಿಸ್ತಂತು ವಿಭಾಗದ ಪಿ.ಎಸ್.ಐ ಮನಮೋಹನ ರಾವ್ ನಿರೂಪಿಸಿ, ಪಿ.ಐ ಕರುಣಾಸಾಗರ ವಂದಿಸಿದರು. 25 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದು, ಇವರಿಗೆ 2 ವಾರಗಳ ಕಾಲ ತರಬೇತಿ ನಡೆಯಲಿದೆ.
ಪಡುಬಿದ್ರಿ : ಟೈಮಿಂಗ್ ವಿಚಾರ - ಬಸ್ ನಿರ್ವಾಹಕ, ಟೈಂ ಕೀಪರ್ ಹೊಡೆದಾಟ ; ದೂರು -ಪ್ರತಿದೂರು ದಾಖಲು

Posted On: 13-03-2023 06:05PM
ಪಡುಬಿದ್ರಿ : ಬಸ್ ನ ಟೈಮಿಂಗ್ ವಿಚಾರವಾಗಿ ಬಸ್ ನಿರ್ವಾಹಕ ಮತ್ತು ಬಸ್ ಟೈಮ್ ಕೀಪರ್ ನಡುವಿನ ಹೊಡೆದಾಟದ ಘಟನೆ ರವಿವಾರ ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರು - ಕುಂದಾಪುರ ಮಾರ್ಗದ ವೇಗದೂತ ಬಸ್ ನಿರ್ವಾಹಕ ಕಾಪು ಮಲ್ಲಾರುವಿನ ಶಮೀಯುಲ್ಲಾ ನೀಡಿದ ದೂರಿನಲ್ಲಿ ಬಸ್ಸು ಹೊರಡುವ ಸಮಯ ಪಡುಬಿದ್ರಿ ಟೈಂ ಕೀಪರ್ ಮಹೇಶ್ ಎಂಬಾತನು ಬಸ್ಸಿನ ಮುಂದೆ ಬಂದು, ಮುಂದೆ ಹೋಗದಂತೆ ತಡೆದಿದ್ದು, ಆತನನ್ನು ಕೇಳುತ್ತಿದ್ದಾಗ, ಮಹೇಶನು ಹಲ್ಲೆಮಾಡಿ ಅವ್ಯಾಚ್ಯವಾಗಿ ಬೈದು ಬಸ್ಸಿನ ಚಾಲಕನಿಗೂ ಮುಂದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಇತ್ತ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ನಿವಾಸಿ ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ಟೈಂ ಕೀಪರ್ ಆಗಿರುವ ಮಹೇಶ್ ಮಂಗಳೂರು - ಕುಂದಾಪುರದ ಎಕ್ಸ್‌ಪ್ರೆಸ್ ಬಸ್ಸು ಪಡುಬಿದ್ರಿಯ ಬಸ್ಸು ನಿಲ್ದಾಣಕ್ಕೆ ಬಂದಿತ್ತು. ಹೊರಡುವ ಸಮಯವಾದ್ದರಿಂದ ಹೊರಡುವಂತೆ ಚಾಲಕನಿಗೆ ಸೂಚಿಸಿದರೂ ಕೂಡಾ ಹೊರಡದೇ ಇದ್ದುದರಿಂದ, ಬಸ್ಸಿನ ಎದುರು ಬಂದು, ಹಿಂದಿನಿಂದ ಬರುವ ಬಸ್ಸಿಗೆ ಕೆಲಸ ಮಾಡುತ್ತಿರುವಾಗ, ಸದ್ರಿ ಬಸ್ಸಿನ ಕಂಡಕ್ಟರ್ ಶಮೀಯುಲ್ಲಾ ಎಂಬುವರು ಹಲ್ಲೆ ಮಾಡಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರು ನೀಡಿರುತ್ತಾರೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು - ಪ್ರತಿದೂರು ದಾಖಲಾಗಿದೆ.
ಶಿರ್ವ : ಮಾಣಿಬೆಟ್ಟುವಿನಲ್ಲಿ ಕಾಪುವಿಗಾಗಿ ಕಾಂಗ್ರೆಸ್ ಬ್ಯಾನರ್ ಹರಿದ ಕಿಡಿಗೇಡಿಗಳು ; ಕ್ರಮಕ್ಕಾಗಿ ಆಗ್ರಹ

Posted On: 13-03-2023 04:48PM
ಶಿರ್ವ : ಇಲ್ಲಿನ ಮಾಣಿಬೆಟ್ಟುವಿನಲ್ಲಿ ಕಾಪುವಿಗಾಗಿ ಕಾಂಗ್ರೆಸ್ ಎಂದು ಕಾಂಗ್ರೆಸ್ ಪಕ್ಷದಿಂದ ಮುಂಬರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಹಾಕಲಾಗಿದ್ದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಬ್ಯಾನರ್ ಹರಿಯುವ ಮೂಲಕ ದುಷ್ಕೃತ್ಯವೆಸಗಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಾ.31 ರಿಂದ ಏ.2 : ಕಾಪು ಬಿಲ್ಲವರ ಸಹಾಯಕ ಸಂಘದ ನೂತನ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ

Posted On: 13-03-2023 07:12AM
ಕಾಪು : ಇಲ್ಲಿನ ಬಿಲ್ಲವರ ಸಹಾಯಕ ಸಂಘ(ರಿ.) ಕಾಪು ಇಲ್ಲಿ ಮಾಚ್೯ 31ರಿಂದ ಏಪ್ರಿಲ್ 2 ರವರೆಗೆ ಖ್ಯಾತ ವಾಸ್ತು ತಜ್ಞರಾದ ತ್ರಿವಿಕ್ರಂ ಭಟ್‌ರವರ ಮಾರ್ಗದರ್ಶನದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳು ಜರಗಲಿದೆ.

ಆಗಮೋಕ್ತ ವೈದಿಕ ವಿಧಿಗಳು ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠ, ಸೋಲೂರು ಇಲ್ಲಿನ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶಿವಗಿರಿಮಠದ ಮಠಾಧೀಶರಾದ ಶ್ರೀ ಪ್ರಭೋದ ತೀರ್ಥ ಸ್ವಾಮೀಜಿ ಇವರುಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ಅರ್ಚಕರಾದ ಕಟಪಾಡಿ ಅರವಿಪುರಂ ಮಠದ ಚರಣ್ ಶಾಂತಿ ಪೌರೋಹಿತ್ಯದಲ್ಲಿ ನೆರವೇರಲಿದೆ.
ಮಾಚ್೯ 31, ಶುಕ್ರವಾರ ಧಾರ್ಮಿಕ ಕಾರ್ಯಕ್ರಮ, ಸಂಜೆ ಗಂಟೆ 3ಕ್ಕೆ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಿಂದ ಮಂದಿರಕ್ಕೆ ಹೊರಡಲಿರುವ ಶ್ರೀ ವಿಠೋಭ ರುಕುಮಾಯಿ ದೇವರ ರಜತ ಕವಚ ಮತ್ತು ಪ್ರಭಾವಳಿ, ಶ್ರೀ ಗುರುದೇವರ ರಜತ ಪಾದುಕೆ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ, ಕರದಾಳ ಕಲಬುರ್ಗಿಯ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಇವರು ಚಾಲನೆ ನೀಡುವರು. ಸಂಜೆ ಗಂಟೆ 6ಕ್ಕೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಸಲಿದ್ದು, ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ, ಕರದಾಳ ಕಲಬುರ್ಗಿಯ ಶ್ರೀ ಪಣವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸತ್ಯಜಿತ್ ಸುರತ್ಕಲ್, ಪ್ರವೀಣ್ ಎಂ. ಪೂಜಾರಿ, ರಮೇಶ್ ಹೆಗ್ಡೆ, ಕಲ್ಯ, ಪ್ರಸಾದ್ ಗೋಕುಲ್‌ದಾಸ್ ಶೆಣೈ, ಉಮೇಶ್ ಕಾಪು, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಚಲನಚಿತ್ರ ನಟರಾದ ಪೃಥ್ವಿ ಅಂಬಾರ್, ಚಿರಶ್ರೀ ಅಂಚನ್ ಹಾಗೂ ಗೌರವ ಉಪಸ್ಥಿತಿಯಲ್ಲಿ ಪ್ರಭಾಕರ ಎಸ್. ಪೂಜಾರಿ, ಚರಣ್ ಶಾಂತಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರುಗಳಿಗೆ, ಹೆಜಮಾಡಿಯಿಂದ ಉದ್ಯಾವರದವರೆಗೆ ಕಾಪು ವ್ಯಾಪ್ತಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಮತ್ತು ದೈವಸ್ಥಾನಗಳ ಅರ್ಚಕರಿಗೆ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ದರ್ಶನ ಪೂಜಾರಿಗಳಿಗೆ, ಬಿಲ್ಲವ ಸಂಘಗಳ ಅಧ್ಯಕ್ಷರುಗಳಿಗೆ ಹಾಗೂ ರೂ.10 ಸಾವಿರದಿಂದ ಮೇಲ್ಪಟ್ಟು ರೂ.25 ಸಾವಿರದವರೆಗೆ ಆರ್ಥಿಕ ಸಹಾಯ ಮಾಡಿದ ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಏಪ್ರಿಲ್ 1, ಶನಿವಾರ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಏಪ್ರಿಲ್ 2, ರವಿವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 3ರಿಂದ 5:30ರ ತನಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾದಳ, ಕಾಪು ಹಾಗೂ ಗುರುಶ್ರೀ ಮಹಿಳಾ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂಟೆ 6 ರಿಂದ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ, ರೇಣುಕಾ ಪೀಠ, ಸೋಲೂರು ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ರಾಜಶೇಖರ ಕೋಟ್ಯಾನ್, ಹರೀಶ್ ಜಿ. ಅಮೀನ್, ಸೂರ್ಯಕಾಂತ್ ಜೆ. ಪೂಜಾರಿ, ಬಿ.ಎನ್. ಶಂಕರ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಯೋಗೀಶ್ ಶೆಟ್ಟಿ, ಬಾಲಾಜಿ, ಪದ್ಮರಾಜ್ ಮಂಗಳೂರು, ಎನ್. ಟಿ. ಪೂಜಾರಿ, ಬಹುಭಾಷಾ ನಟ ಸುಮನ್ ತಲ್ವಾರ್, ಸತೀಶ್ ಪೂಜಾರಿ ಬೆಳಪು, ಉಮೇಶ್ ಕಾಪು, ಸರಿತ ಪೂಜಾರಿ ಹಾಗೂ ಗೌರವ ಉಪಸ್ಥಿತಿಯಲ್ಲಿ ಪ್ರಭಾಕರ ಎಸ್. ಪೂಜಾರಿ, ಚರಣ್ ಶಾಂತಿ, ಮಹೇಶ್ ಶಾಂತಿ ಭಾಗವಹಿಸಲಿದ್ದಾರೆ. ಈ ಸಂದರ್ಭ ರೂ. 25,000 ದಿಂದ ಮೇಲ್ಪಟ್ಟು ಧನಸಹಾಯ ನೀಡಿದ ಎಲ್ಲಾ ದಾನಿಗಳಿಗೆ ಹಾಗೂ ಮಂದಿರದ ವಿವಿಧ ಕಾಮಗಾರಿಗಳ ವೆಚ್ಚವನ್ನು ಭರಿಸಿದ ದಾನಿಗಳನ್ನು ಗೌರವಿಸಲಾಗುವುದು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷರಾದ ವಿಕ್ರಂ ಕಾಪು ವಹಿಸಲಿದ್ದಾರೆ. ರಾತ್ರಿ ಗಂಟೆ 9:30ರಿಂದ ರುದ್ರ ಥಿಯೇಟರ್ ಮಂಗಳೂರು ಅಭಿನಯಿಸುವ ವಿದ್ದು ಉಚ್ಚಿಲ್ ನಿರ್ದೇಶನದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತದ ಪರಿಕಲ್ಪನೆಯಲ್ಲಿ “ಶೂದ್ರ ಶಿವ” ಕನ್ನಡ ನಾಟಕ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸರಕಾರ ತಲುಪಲು ಸಾಧ್ಯವಾಗದ ಪ್ರದೇಶದಲ್ಲಿಯೂ ಸ್ವಯಂ ಸೇವಾ ಸಂಸ್ಥೆಗಳ ಕರ್ತವ್ಯ ಶ್ಲಾಘನೀಯ : ಗಂಗಾಧರ ಗಾಂಧಿ

Posted On: 13-03-2023 07:07AM
ಮಂಗಳೂರು : ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ. ಸಾರಥ್ಯದ ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಉದ್ಘಾಟನೆ ಅಂಗವಾಗಿ ಕಥಾಲಾಪ ಮತ್ತು ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಮಂಗಳೂರಿನ ಕದ್ರಿ ಬಾಲಭವನದಲ್ಲಿ ಮಾಚ್೯ 12ರಂದು ನೆರವೇರಿತು. ಕಾರ್ಯಕ್ರಮವನ್ನು NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ. ದೇಶದಲ್ಲಿ ಲಕ್ಷಾಂತರ ಸ್ವಯಂ ಸೇವಾ ಸಂಸ್ಥೆಗಳು ಕರ್ತವ್ಯ ನಿರ್ವಹಿಸುತ್ತಿದೆ, ಸರಕಾರ ತಲುಪಲು ಸಾಧ್ಯವಾಗದ ಪ್ರದೇಶದಲ್ಲಿಯೂ ತನ್ನ ಕಾರ್ಯಚಟುವಟಿಕೆ ನಡೆಸುತ್ತಿದೆ. ಈ ಕಾರಣದಿಂದಾಗಿ ಭಾರತದ ಅನೇಕ ಹಳ್ಳಿ ಪ್ರದೇಶಗಳು ಅಭಿವೃದ್ಧಿಗೊಂಡಿವೆ. ಇದು ಸ್ವಯಂ ಸೇವಾ ಸಂಸ್ಥೆಯ ಕಾರ್ಯವೈಖರಿ ಎಂದ ಅವರು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಪಾರದರ್ಶಕತ್ವವನ್ನು ಅನಾವರಣ ಗೊಳಿಸುತ್ತಾ ಸಮಾಜದ ಎಲ್ಲಾ ಸಮುದಾಯದ ಆಶಯಗಳಿಗೆ ಸ್ಪಂದಿಸುವಂತಾಗಬೇಕು. ಆಗಲೇ ಅನಾವರಣದ ಸಮಾಜಮುಖಿ ಕಾರ್ಯಗಳು ಈಡೇರಲು ಸಾಧ್ಯವೆಂದು ಮಾರ್ಮಿಕವಾಗಿ ಹೇಳಿದರು.

ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ ಅಧ್ಯಕ್ಷೆ , ನ್ಯಾಯವಾದಿ ಪರಿಮಳ ರಾವ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. KSSAP ಅಧ್ಯೆಕ್ಷೆ ರಾಣಿಪುಷ್ಪಲತಾದೇವಿ , ಕಥಾಲಾಪ ಅಧ್ಯಕ್ಷ ಮುಕ್ತಕ, ಗಜಲ್ ಕವಿ ಡಾ. ಸುರೇಶ್ ನೆಗಳಗುಲಿ , ಕಥಾಲಾಪ ಸಂಚಾಲಕಿ ಗೀತಾ ಲಕ್ಷ್ಮೀಶ ಉಪಸ್ಥಿತರಿದ್ದರು.

ಆಶ್ವಿಜ ಶ್ರೀಧರ್ ಪ್ರಾರ್ಥನೆಗೈದರು, ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ಪರಿಮಳ ರಾವ್ ಕೆ. ಸ್ವಾಗತಿಸಿ, ಪ್ರಾಸ್ತಾವನೆ ಗೈದರು. ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು.

ಕಥಾಲಾಪದಲ್ಲಿ ವ. ಉಮೇಶ್ ಕಾರಂತ್, ಅಶ್ವಿಜ ಶ್ರೀಧರ್, ಜಯರಾಮ ಪಡ್ರೆ, ರಾಮಾಂಜಿ ನಮ್ಮ ಭೂಮಿ, ಗೋಪಾಲಕೃಷ್ಣ ಶಾಸ್ತ್ರಿ, ರೇಖಾ ಸುದೇಶ್ ರಾವ್, ಶ್ಯಾಮಪ್ರಸಾದ್ ಭಟ್, ದೀಪಾ ಸದಾನಂದ್, ನವೀನ್ ಕುಮಾರ್ ಪೆರಾರ, ಮಾನ್ವಿ ಮಂಗಳೂರು, ಹಿತೇಶ್ ಕುಮಾರ್ ಎ, ಸುಗಂಧಿ ಶ್ಯಾಮ್, ಪದ್ಮನಾಭ ಮಿಜಾರು, ದೇವರಾಜ್ ಕುಂಬ್ಳೆ, ಚಿತ್ರಕಲಾ ದೇವರಾಜ್, ರೇಮಂಡ್ ಡಿಕೂನ ತಾಕೊಡೆ, ಅನುರಾಧಾ ರಾಜೀವ್, ಹರೀಶ್ ಮೆಲ್ಕಾರ್, ದಯಮಣಿ ಎಕ್ಕಾರ್, ವಾಣಿ ಲೋಕಯ್ಯ, ಸೌಮ್ಯ ಆರ್ ಶೆಟ್ಟಿ, ಎ. ಕೆ. ಕುಕ್ಕಿಲ ತಮ್ಮ ಸ್ವರಚಿತ ಕತೆಗಳನ್ನು ವಾಚಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾಪು : ಬೈಕ್ - ಆಂಬುಲೆನ್ಸ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಮೃತ್ಯು

Posted On: 12-03-2023 05:55PM
ಕಾಪು : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಲ್ಲಿ ಬೈಕ್ ಮತ್ತು ಆಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಗಂಭೀರ ಗಾಯಗೊಂಡು ಜೀವನ್ಮರಣದ ಸ್ಥಿತಿಯಲ್ಲಿದ್ದ ಬೈಕ್ ಸವಾರ ಉಚ್ಚಿಲದ ರಿತೇಶ್ ದೇವಾಡಿಗರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಸಾವನ್ನಪ್ಪಿದ್ದಾರೆ. ಉಚ್ಚಿಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಆಂಬುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಈ ಬಗ್ಗೆ ಕಾಪು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ನೀಡಿದ್ದಾರೆ.
ಶನಿವಾರ ಇದೇ ಸ್ಥಳದ ಪಕ್ಕದಲ್ಲಿ ರಸ್ತೆ ದಾಟಲು ನಿಂತಿದ್ದ ಶಾಲಾ ಬಾಲಕಿಗೆ ಬಸ್ಸೊಂದು ಗುದ್ದಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಮಾಸುವ ಮುನ್ನ ಇನ್ನೊಂದು ಘಟನೆ ನಡೆದಿದೆ. ಆಮೆಗತಿಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಯಿಂದ ಅಪಘಾತಗಳು ಸಂಭವಿಸುತ್ತಿವೆ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಾಳೆ : ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಮೇ14 ರಿಂದ 24ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ನಿಮಿತ್ತ ಪೂರ್ವಭಾವಿ ಸಭೆ

Posted On: 11-03-2023 09:37PM
ಮಂಗಳೂರು : ಕುಲಾಲ ಸಮುದಾಯಕ್ಕೆ ಮುಕುಟಪ್ರಾಯವಾಗಿ ಕಂಗೊಳಿಸಲಿರುವ ಸಮುದಾಯದ ಸ್ವಾಭಿಮಾನ ಮತ್ತು ಹೆಮ್ಮೆಯ ಪ್ರತೀಕವಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಶುಭವಸರದಲ್ಲಿದೆ.
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವವು ಮೇ14 ರಿಂದ ಮೇ 24ರವರೆಗೆ ವೈಭವದಿಂದ ನೆರವೇರಲಿದೆ. ಈ 10 ದಿನಗಳ ಉತ್ಸವ ಕುಲಾಲ ಸಮುದಾಯದ ಉತ್ಸವವಾಗುವ ದಿಸೆಯಲ್ಲಿ ಯೋಚನೆ, ಯೋಜನೆ, ಅನುಷ್ಠಾನಗಳ ಆಯೋಜನೆಗಾಗಿ ಮಾಚ್೯ 12,ಆದಿತ್ಯವಾರ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಪ್ರತೀ ಕಾರ್ಯದಲ್ಲಿಯೂ ಸಕ್ರಿಯವಾಗಿದ್ದ ಪ್ರತಿಯೊಬ್ಬರೂ ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸಹಕಾರಗಳನ್ನಿತ್ತು ಈ ಸಭೆಯನ್ನು ಯಶಸ್ವಿಗೊಳಿಸಲು ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಾಳೆ : ಪೆರ್ಡೂರು ಬೈರಂಪಳ್ಳಿ ಶ್ರಮಿಕ ತರುಣ ತಂಡದಿಂದ ಶ್ರಮಿಕೋತ್ಸವ 2023

Posted On: 11-03-2023 09:18PM
ಪೆರ್ಡೂರು : ಇಲ್ಲಿಯ ಬೈರಂಪಳ್ಳಿಯ ಶ್ರಮಿಕ ತರುಣರ ಯುವಕರ ತಂಡ ಸದಾ ಅಶಕ್ತರ ಪಾಲಿಗೆ ಸದಾ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತ, ಬಡವರ ಕಣ್ಣೀರು ಒರೆಸುವ ಕಾಯಕದಲ್ಲಿ ನಿರತವಾಗಿದೆ.
ನಾಳೆ ಹಾಲಕ್ಕಿಯಲ್ಲಿ ಊರಿನ ಗ್ರಾಮಸ್ಥರ ಶ್ರೇಯೋಭಿವೃದ್ಧಿ ಹಾಗೂ ಸರ್ವರ ಸುಬಿಕ್ಷೆಗಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ 9 ಗಂಟೆಯಿಂದ ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡ್ಕ ವತಿಯಿಂದ ಶ್ರೀ ಶನೀಶ್ವರ ಮಹಾತ್ಮೆ ತುಳು ಯಕ್ಷಗಾನ ಬಯಲಾಟ ನಡೆಯಲಿದ್ದು,ಎಲ್ಲರೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿ ಎಂದು ಶ್ರಮಿಕ ತರುಣರ ತಂಡ ಇದರ ಸಂಸ್ಥಾಪಕರಾದ ಸಂತೋಷ್ ಕುಮಾರ್ ಬೈರಂಪಳ್ಳಿ ಪ್ರಕಟಣೆಯಲ್ಲಿ ತಿಳಿಸಿರುವರು.
ಮಾಚ್೯ 11 ರಿಂದ 14 : ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ; ಕಾಲಾವಧಿ ಜಾತ್ರೆ

Posted On: 11-03-2023 06:44PM
ಕಟಪಾಡಿ : ಇಲ್ಲಿನ ಏಣಗುಡ್ಡೆ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ ನಡೆಯುವ ಕಾಲಾವಧಿ ಜಾತ್ರೆ ಹಾಗೂ ದೃಢಕಲಶ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಮಾಚ್೯ 11ರಿಂದ ಮಾಚ್೯ 14 ರವರೆಗೆ ಜರಗಲಿದೆ.
ಮಾರ್ಚ್ 11 ಸಂಜೆ 4 ಗಂಟೆಗೆ ಮೂಲ ಗುಪ್ಫೆಯಿಂದ ಮಣ್ಣು ತರುವುದು. ಸಂಜೆ 6 ಗಂಟೆಗೆ ಗರಡಿ ಪ್ರವೇಶ. ರಾತ್ರಿ ಗಂಟೆ 7.05 ರಿಂದ ಪುಣ್ಯಾಹ, ವಾಸ್ತು ಹೋಮ ಇತ್ಯಾದಿ ನೆರವೇರಲಿದೆ. ಮಾರ್ಚ್ 12ರಂದು ಪೂರ್ವಾಹ್ನ ಗಂಟೆ 9.05 ರಿಂದ ದೃಢಕಲಶ, ಪೂರ್ವಾಹ್ನ ಗಂಟೆ 11.43ಕ್ಕೆ ಧ್ವಜಾರೋಹಣ, ಹಸಿರುವಾಣಿ ಸಮರ್ಪಣೆ, ರಾತ್ರಿ ಗಂಟೆ 7ಕ್ಕೆ ಅಗೆಲು ಸೇವೆ ನಡೆಯಲಿದೆ.
ಮಾರ್ಚ್ 13 ಸಂಜೆ ಗಂಟೆ 6.30 ಕ್ಕೆ ಬೈದೆರುಗಳ ನೇಮೋತ್ಸವ ಜರಗಲಿದೆ. ಮಾರ್ಚ್ 14 ಸಂಜೆ ಗಂಟೆ 3 ಕ್ಕೆ ಮಾಯಂದಾಲ್ ನೇಮ, ಸಂಜೆ ಗಂಟೆ 8 ಕ್ಕೆ ಪರಿವಾರ ದೈವದ ನೇಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.