Updated News From Kaup

ಮಾಚ್೯ 12 : ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ರಾಜ್ಯಮಟ್ಟದ ಕಥಾಲಾಪ ಮತ್ತು ಚಿಣ್ಣರ ಚಿಲಿಪಿಲಿ

Posted On: 11-03-2023 05:29PM

ಮಂಗಳೂರು : ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ. ಸಾರಥ್ಯದ ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ASSAP) ಆಶ್ರಯದಲ್ಲಿ ರಾಜ್ಯಮಟ್ಟದ ಕಥಾಲಾಪ ಮತ್ತು ಚಿಣ್ಣರ ಚಿಲಿಪಿಲಿ ಮಾಚ್೯ 12, ರವಿವಾರದಂದು ಮಂಗಳೂರು ನಗರದ ಕದ್ರಿ ಬಾಲಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು NSCDF ಅಧ್ಯಕ್ಷ ಗಂಗಾಧರ್ ಗಾಂಧಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ASSAP) ದ ಅಧ್ಯಕ್ಷೆ ಹಾಗೂ ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ.ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಭಾಗವಹಿಸಲಿದ್ದು , ರಾಜ್ಯ ಮಟ್ಟದ ಕಥಾಲಾಪದ ಅಧ್ಯಕ್ಷರಾಗಿ ಜನಪ್ರಿಯ ಮುಕ್ತಕ ಕವಿ ಡಾ. ಸುರೇಶ್ ನೆಗಳಗುಲಿ ವಹಿಸಲಿದ್ದು, ಕಾರ್ಯಕ್ರಮದ ಸಂಚಾಲಕಿ ಕವಯತ್ರಿ ಗೀತಾ ಲಕ್ಷ್ಮೀಶ ಮತ್ತಿತರರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ನಡೆಯುವ ಕಥಾಲಾಪದಲ್ಲಿ ವೀಣಾ ಆರ್ ಕಾರಂತ್, ವ. ಉಮೇಶ್ ಕಾರಂತ್, ಅಶ್ವಿಜ ಶ್ರೀಧರ್, ಕೊಳಚಪ್ಪೆ ಗೋವಿಂದ ಭಟ್, ಜಯರಾಮ ಪಡ್ರೆ, ಉಮೇಶ್ ಶಿರಿಯ, ರಾಮಾಂಜಿ ನಮ್ಮ ಭೂಮಿ, ಗೋಪಾಲಕೃಷ್ಣ ಶಾಸ್ತ್ರಿ, ರೇಖಾ ಸುದೇಶ್ ರಾವ್‌, ಶ್ಯಾಮಪ್ರಸಾದ್ ಭಟ್, ದೀಪಾ ಸದಾನಂದ್, ನವೀನ್ ಕುಮಾರ್ ಪೆರಾರ, ಮಾನ್ವಿ ಮಂಗಳೂರು, ಹಿತೇಶ್ ಕುಮಾರ್ ಎ, ಸುಗಂಧಿ ಶ್ಯಾಮ್, ಪದ್ಮನಾಭ ಮಿಜಾರು, ಎಡ್ವರ್ಡ್ ಲೊಬೊ, ಮಲ್ಲೇಶ್ ಜಿ. ಹಾಸನ್, ದೇವರಾಜ್ ಕುಂಬ್ಳೆ, ಚಿತ್ರಕಲಾ ದೇವರಾಜ್, ಸಿಹಾನ ಬಿ.ಎಂ, ರೇಮಂಡ್ ಡಿಕೂನ ತಾಕೊಡೆ, ಅನುರಾಧಾ ರಾಜೀವ್, ಹರೀಶ್ ಮೆಲ್ಕಾರ್, ದಯಮಣಿ ಎಕ್ಕಾರ್, ವಾಣಿ ಲೋಕಯ್ಯ, ಸೌಮ್ಯ ಆರ್ ಶೆಟ್ಟಿ, ರಶ್ಮಿತಾ, ಎ. ಕೆ. ಕುಕ್ಕಿಲಾ ಭಾಗವಹಿಸಲಿದ್ದಾರೆ.

ಬಳಿಕ ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ASSAP)ದ ಕಾರ್ಯದರ್ಶಿ ಮಾಲಿನಿ ರಾವ್ ಕೆ. ಉಪಾಧ್ಯಕ್ಷ ಮಹೇಶ್ ಕೆ. ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆಯವರ ಜಾತಿವ್ಯಾಧಿ ಚಿಕಿತ್ಸಕ ಡಾ.ಪದ್ಮನಾಭನ್ ಪಲ್ಪು ಪುಸ್ತಕ ಬಿಡುಗಡೆ

Posted On: 11-03-2023 04:44PM

ಕಾಪು : ಬ್ರಹ್ಮರ್ಷಿ ನಾರಾಯಣ ಗುರುಗಳ ಒಡನಾಡಿಯಾಗಿದ್ದು , ಕ್ರಾಂತಿಕಾರಿ ಸಮಾಜ ಸುಧಾರಣೆಯಲ್ಲಿ ಸುಧೀರ್ಘ ಕಾಲ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಮಹತ್ತರ ಸುಧಾರಣೆಗಳನ್ನು ಯಶಸ್ವಿಯಾಗಿ ಸಾಧಿಸಿದ ಡಾ. ಪದ್ಮನಾಭನ್ ಪಲ್ಪು ಅವರ ಸಾಧನೆಗಳ ಕುರಿತು ಪತ್ರಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಬರೆದು ಪ್ರಕಟಿಸಿದ "ಜಾತಿವ್ಯಾಧಿ ಚಿಕಿತ್ಸಕ ಡಾ. ಪದ್ಮನಾಭನ್ ಪಲ್ಪು" ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಾರ್ಚ್ 9ರಂದು ಮೂಡುಬೆಳ್ಳೆಯ "ಧುನಿ" ಬಯಲು ರಂಗಮಂಟಪದಲ್ಲಿ ನಡೆಯಿತು.

ಸುರತ್ಕಲ್ ಎನ್ ಐ ಟಿ ಕೆಯ ಪ್ರಾಧ್ಯಾಪಕರೂ, ಲೇಖಕರೂ ಆದ ಡಾ‌ ಶಶಿಕಾಂತ ಕೌಡೂರು ಪುಸ್ತಕ ಬಿಡುಗಡೆಗೊಳಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಲೇಖಕ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಹಿರಿಯ ಬರಹಗಾರರೂ, ಸಂಶೋಧಕರೂ, ಕೇರಳ - ಕರ್ನಾಟಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮುಖಂಡರೂ ಆದ ಪಾಂಗಾಳ ಬಾಬು ಕೊರಗ, ಪಾಣ ಯಾನೆ ನಲಿಕೆ ಸಮಾಜಸೇವಾ ಸಂಘದ ಗೌರವಾಧ್ಯಕ್ಷರೂ, ಹಿರಿಯ ದೈವ ನರ್ತಕರೂ ಆದ ಸುಧಾಕರ ಪಾಣಾರ, ಕಾಸರಗೋಡಿನ ಕವಿ, ಕಥೆಗಾರ, ಲೇಖಕ, ಸಂಘಟಕ, ಕನ್ನಡಪರ ಹೋರಾಟಗಾರ ಸುಂದರ ಬಾರಡ್ಕ, ಕವಿ, ಲೇಖಕ, ಇತಿಹಾಸ ಸಂಶೋಧಕರಾದ ರಿಚರ್ಡ್ ದಾಂತಿ ಪಾಂಬೂರು ಮೊದಲಾದವರು ಉಪಸ್ಥಿತರಿದ್ದರು. ಶ್ರೀರಾಮ ದಿವಾಣ ಕಾರ್ಯಕ್ರಮ ನಿರ್ವಹಿಸಿದರು.

ಮಾಚ್೯ 12 : ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ವರ್ಧಂತಿ ಉತ್ಸವ

Posted On: 11-03-2023 04:34PM

ಕಾಪು : ತಾಲೂಕಿನ ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಸನ್ನಿಧಿಯಲ್ಲಿ ಮಾಚ್೯ 12, ಭಾನುವಾರ ಬ್ರಹ್ಮಕಲಶೋತ್ಸವ ವರ್ಧಂತಿ ಉತ್ಸವವು ಜರಗಲಿದೆ

ಆಗಮೋಕ್ತ ಕಾರ್ಯಕ್ರಮಗಳ ನೇತೃತ್ವವನ್ನು ವೇದಮೂರ್ತಿ ಪಾದೂರು ಶ್ರೀ ಲಕ್ಷ್ಮೀನಾರಾಯಣ ತಂತ್ರಿಗಳು ವಹಿಸಲಿರುವರು.

ಬೆಳಿಗ್ಗೆ ಗಂಟೆ 10ಕ್ಕೆ ವಿಶ್ವೇಶ್ವರ ದೇವರಿಗೆ, ಗಣಪತಿ ಮತ್ತು ಅನ್ನಪೂರ್ಣೇಶ್ವರಿ ದೇವರಿಗೆ ಕಲಶಾಭಿಷೇಕ, ಗಂಟೆ 11 ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ಮಹಾರಂಗಪೂಜೆ, ರಾತ್ರಿ ಗಂಟೆ 8.30 ಕ್ಕೆ ಉತ್ಸವ ಬಲಿ ನಡೆಯಲಿದೆ.

ಧ್ರುವ ನಾರಾಯಣ್ ನಿಧನ : ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ರಾಜ್ಯಕಾರ್ಯದರ್ಶಿ ಫಾರೂಕ್ ಚಂದ್ರನಗರ ಸಂತಾಪ

Posted On: 11-03-2023 04:00PM

ಉಡುಪಿ : ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ , ಮಾಜಿ ಸಂಸದ,ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಹಿರಿಯ ಕಾಂಗ್ರೆಸ್ ಮುಖಂಡರಾದ ಆರ್ ಧ್ರುವ ನಾರಾಯಣ್ ನಿಧನರಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಶ್ರೀಯುತರು ಉತ್ತಮ ಸಜ್ಜನ ರಾಜಕಾರಣಿಯಾಗಿದ್ದು ಪ್ರತಿಯೊಬ್ಬರಲ್ಲಿ ಸ್ನೇಹ ಮನೋಭಾವನೆ ಹೊಂದಿದ್ದರು.

ಅವರ ಅಕಾಲಿಕ ನಿಧನ ಅವರ ಅಭಿಮಾನಿಗಳಿಗೆ ಆಘಾತವಾಗಿದೆ ಭಗವಂತ ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಸಂತಾಪ ಸೂಚಿಸಿದ್ದಾರೆ.

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನ : ಕಾಪು ಬ್ಲಾಕ್ ಕಾಂಗ್ರೆಸ್ ಸಂತಾಪ

Posted On: 11-03-2023 02:31PM

ಕಾಪು : ಮಾಜಿ ಶಾಸಕರು ಹಾಗೂ ಮಾಜಿ ಸಂಸದರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಆರ್. ಧ್ರುವ ನಾರಾಯಣ್ ರವರ ಆಕಸ್ಮಿಕ ನಿಧನಕ್ಕೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯು ತೀವ್ರ ಸಂತಾಪ ಸೂಚಿಸಿದೆ.

ಈ ಬಗ್ಗೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಪತ್ರಿಕಾ ಹೇಳಿಕೆ ನೀಡಿ, ವಿದ್ಯಾರ್ಥಿ ಕಾಂಗ್ರೆಸ್ ನಿಂದ ಇವತ್ತಿನವರೆಗೂ ತನ್ನ ಒಡನಾಡಿಯಾಗಿ ಕೆಲಸ ಕಾರ್ಯ ಮಾಡಿದ್ದ ಒಬ್ಬ ಕ್ರಿಯಾಶೀಲ, ಪ್ರಾಮಾಣಿಕ, ನಿಷ್ಠಾವಂತ ರಾಜಕೀಯ ನಾಯಕನನ್ನು ನಾವು ಕಳೆದು ಕೊಂಡಿದ್ದು, ಅವರ ಅಗಲುವಿಕೆಯು ವೈಯುಕ್ತಿಕವಾಗಿ ನನಗೆ ಅಪಾರ ದುಃಖವನ್ನು ತರಿಸಿದೆ. ಜೊತೆಗೆ ಒಬ್ಬ ಕ್ರಿಯಾಶೀಲ, ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕುಟುಂಬ ವರ್ಗಕ್ಕೆ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಸಹನೆ, ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ದೇವಿಪ್ರಸಾದ್ ಶೆಟ್ಟಿ ಬೆಳಪು, ನವೀನ್ ಚಂದ್ರ ಜೆ. ಶೆಟ್ಟಿ, ಶಿವಾಜಿ ಸುವರ್ಣ ಬೆಳ್ಳೆ, ಅಮೀರ್ ಮೊಹಮ್ಮದ್ ಕಾಪು, ಶಾಂತಲತಾ ಎಸ್. ಶೆಟ್ಟಿ, ಶರ್ಫುದ್ದೀನ್ ಶೇಖ್, ವಿಕ್ರಮ್ ಕಾಪು, ವಿನಯ್ ಬಲ್ಲಾಳ್, ಮೋಹಮ್ಮದ್ ಸಾದಿಕ್ ಹಾಗೂ ಬ್ಲಾಕ್ ಪದಾಧಿಕಾರಿಗಳು, ಪುರಸಭಾ ಸದಸ್ಯರು, ವಿವಿಧ ಘಟಕ/ಸಮಿತಿಗಳ ಅಧ್ಯಕ್ಷರು ಮತ್ತು ಪಕ್ಷದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಪು : ಶಾಲೆಗೆ ತೆರಳುವ ವೇಳೆ ಬಸ್ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು

Posted On: 11-03-2023 02:18PM

ಕಾಪು : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಎಕ್ಸ್ ಪ್ರೆಸ್ ಬಸ್ ಡಿಕ್ಕಿ ಹೊಡೆದು ಶಾಲಾ ಬಾಲಕಿಯೋರ್ವಳು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಕಾಪು ಮಹಾದೇವಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ವರ್ಷಿತಾ(13) ಮೃತಪಟ್ಟ ವಿದ್ಯಾರ್ಥಿನಿ. ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವರ್ಷಿತಾ ರಾಷ್ಟ್ರೀಯ ಹೆದ್ದಾರಿ 66ರ ಮಂದಾರ ಹೊಟೇಲ್ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಅತೀ ವೇಗದಿಂದ ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ ವರ್ಷಿತಾಳಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿತ್ತು. ಈ ವೇಳೆ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಮಧ್ಯೆ ಆಕೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆ : ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಕಡೇ ಢಕ್ಕೆಬಲಿ ಮತ್ತು ಮಂಡಲ ವಿಸರ್ಜನೆ ಸೇವೆ

Posted On: 10-03-2023 09:35PM

ಪಡುಬಿದ್ರಿ : ಇಲ್ಲಿನ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕವಾಗಿ ಜರಗುವ ಢಕ್ಕೆ ಬಲಿ ಸೇವೆ ಮತ್ತು ಮಂಡಲ ವಿಸರ್ಜನೆಯು ನಾಳೆ (ಮಾಚ್೯ 11, ಶನಿವಾರ) ಸಂಪನ್ನಗೊಳ್ಳಲಿದೆ.

ಈ ಪ್ರಯುಕ್ತ ಮಧ್ಯಾಹ್ನ ಗಂಟೆ 12ಕ್ಕೆ ಸರಿಯಾಗಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಂಜೆ ಗಂಟೆ 4:30ಕ್ಕೆ ಫಲಪುಷ್ಪ ತಾಂಬೂಲ ಪರಿಕರ ಹೊರೆ ಕಾಣಿಕೆ ಮೆರವಣಿಗೆ, ರಾತ್ರಿ ಸನ್ನಿಧಾನದಲ್ಲಿ ತಂಬಿಲ‌ ಸೇವೆ ನಂತರ ಢಕ್ಕೆಬಲಿ ಸೇವೆ ಬಳಿಕ ಮಂಡಲ ವಿಸರ್ಜನೆ ಸೇವೆಯು ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಡಿ.ಎಂ. ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಗುಡ್ಡೆಯಂಗಡಿ : ರುಡಾಲ್ಫ್ ಮಚಾದೊ ಅಧ್ಯಕ್ಷರಾಗಿ ಆಯ್ಕೆ

Posted On: 10-03-2023 05:21PM

ಉದ್ಯಾವರ : ಎಸ್.ಡಿ.ಎಂ. ಆಟೋರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಗುಡ್ಡೆಯಂಗಡಿ ಉದ್ಯಾವರ ಇದರ 2023 - 24ನೇ ಸಾಲಿನ ಅಧ್ಯಕ್ಷರಾಗಿ ರುಡಾಲ್ಫ್ ಮಚಾದೊ ಸಂಪಿಗೆನಗರ ಆಯ್ಕೆಯಾಗಿದ್ದಾರೆ.

ನೂತನ ಸಾಲಿನ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಉಪಾಧ್ಯಕ್ಷರಾಗಿ ಸಿರಾಜುದ್ದೀನ್ ಗುಡ್ಡೆಯಂಗಡಿ, ಕಾರ್ಯದರ್ಶಿಯಾಗಿ ಅಪ್ಪು ಸಂಪಿಗೆನಗರ, ಜೊತೆ ಕಾರ್ಯದರ್ಶಿಯಾಗಿ ಚಂದ್ರ ಕಂಪನಬೆಟ್ಟು, ಕೋಶಾಧಿಕಾರಿಯಾಗಿ ಭರತ್ ಸನಿಲ್ ಸಂಪಿಗೆನಗರ, ಗೌರವ ಸಲಹೆಗಾರರಾಗಿ ಸುಧಾಕರ್ ಸನಿಲ್ ಸಂಪಿಗೆನಗರ, ಸಲಹಾ ಸಮಿತಿಯ ಸದಸ್ಯರಾಗಿ ರಾಮ ಪೂಜಾರಿ, ಪ್ರಕಾಶ್ ಪೂಜಾರಿ, ಆರಿಫ್, ರವಿರಾಜ್, ವಿನಯ ಎಸ್ಎನ್ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಪು : ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಬಗ್ಗೆ ಸೇರಿಸಲು ಎಸ್‌ಐಓ ಆಗ್ರಹ

Posted On: 10-03-2023 05:17PM

ಕಾಪು : ವಿಧಾನಸಭಾ ಕ್ಷೇತ್ರದಲ್ಲಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಮೌಲಾನಾ ಆಝಾದ್ ವಸತಿ ಶಾಲೆಗೆ ಹೊಸ ಕಟ್ಟಡ ರಚನೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಂಬರುವ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಧ ಪಕ್ಷಗಳು ಸೇರಿಸಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಒತ್ತಾಯಿಸಿದೆ.

ಕಾಪು ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಓ ಜಿಲ್ಲಾಧ್ಯಕ್ಷ ಅಯಾನ್ ಮಲ್ಪೆ ಮಾತನಾಡಿ 2023ರ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಕೆಯಲ್ಲಿ ವಿದ್ಯಾರ್ಥಿ-ಯುವಜನರ ಬೇಡಿಕೆಯ ವಿಚಾರಗಳನ್ನು ಸೇರಿಸಬೇಕು. ಯುವಜನರ ಮತಗಳನ್ನು ನಿರ್ಣಯಿಸುವಂತೆ ಜನಾಭಿಪ್ರಾಯ ಜನಾಭಿಪ್ರಾಯ ಮೂಡಿಸಲು ಎಸ್‌ಈಐ ಶಿಕ್ಷಣದ ಮೂಲಭಾಗದಾರರೊಂದಿಗೆ ಸಮಾಲೋಚಿಸಿ ವಿದ್ಯಾರ್ಥಿ ಪ್ರಣಾಳಿಕೆಯನ್ನು ತಯಾರುಗೊಳಿಸಿದ್ದು, ಪಕ್ಷಗಳು ಬೇಡಿಕೆಗಳನ್ನು ಈಡೀರಿಸಲು ಪ್ರಾಮಾಣಿಕ ಪ್ರಯತ್ನ ಬದ್ಧತೆಯನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದೆ.

ಜಿಲ್ಲೆಗೊಂಡು ಸರ್ಕಾರಿ ಮೆಡಿಕಲ್ ಕಾಲೇಜಿನ ಅವಶ್ಯಕತೆ ಇದ್ದು, ವೈದ್ಯಕೀಯ ಶಿಕ್ಷಣ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದೂ ಅಯಾನ್ ಮಲ್ಪೆ ಹೇಳಿದ್ದಾರೆ.

ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ನಿಫಾಲ್ ಹೂಡೆ, ಪರ್ಹಾನ್, ಸದಸ್ಯರಾದ ನೋಮಾನ್, ನಿಹಾಲ್, ಅಯಾನ್ ಕಾಪು, ಅಹದ್ ಕಾಪು, ಅವೇಝ್ ಉಪಸ್ಥಿತರಿದ್ದರು.

ಪಡುಬಿದ್ರಿ : ವಿಶ್ವ ಮಹಿಳಾ ದಿನಾಚರಣೆ - ಮಹಿಳೆಯರ ಗರ್ಭಕೋಶ ಸಂಬಂಧಿ ತೊಂದರೆಗಳ ಮಾಹಿತಿ, ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ

Posted On: 09-03-2023 08:37PM

ಪಡುಬಿದ್ರಿ : ಇಂದಿನ ಆಹಾರ ಪದ್ಧತಿಗಳಿಂದ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳ ದೇಹದಲ್ಲಿ ಬದಲಾವಣೆಗಳು ಕಾಣುತ್ತಿದೆ. ಜಿಮ್ ಮೊರೆಹೋಗಿ ದೇಹದಾಢ್ಯತೆಗಾಗಿ ಶ್ರಮ ವಹಿಸುವ ಯುವ ಜನಾಂಗ ಇಂದು ಒಂದೆಡೆಯಾದರೆ, ತಮ್ಮ ಜೀವನೋಪಾಯಕ್ಕಾಗಿ ಶ್ರಮದ ಮೂಲಕ ಆರೋಗ್ಯವಂತ ಜೀವನ ನಡೆಸುತ್ತಿದ್ದವರನ್ನು ಅಂದು ಕಾಣುತ್ತಿದ್ದೆವು ಎಂದು ಎಸ್.ಡಿ.ಎಂ.ಸಿ.ಎ ಉಡುಪಿಯ ಪ್ರಾಂಶುಪಾಲರು ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಮಮತಾ ನವೀನ್ ಹೇಳಿದರು.

ಅವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.), ಶ್ರೀ ನಾರಾಯಣಗುರು ಬಿಲ್ಲವ ಮಹಿಳಾ ಮಂಡಳಿ ಪಡುಬಿದ್ರಿ, ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗ ಕುತ್ಪಾಡಿ, ಉಡುಪಿ ಇದರ ತಜ್ಞ ವೈದ್ಯರಿಂದ ಮಾಚ್೯ 9ರಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಸಭಾಂಗಣದಲ್ಲಿ ಮಹಿಳೆಯರ ಗರ್ಭಕೋಶ ಸಂಬಂಧಿ ತೊಂದರೆಗಳ ಬಗ್ಗೆ ಮಾಹಿತಿ, ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮಗಳನ್ನು ಮಾಡುವ ಹವ್ಯಾಸ ರೂಢಿಸಿಕೊಳ್ಳಿ ಎಂದರು. ಕಾರ್ಯಕ್ರಮವನ್ನು ನಿವೃತ್ತ ಪ್ರಸೂತಿ ತಜ್ಞೆ ನಳಿನಿ ಸದಾಶಿವ ಉದ್ಘಾಟಿಸಿದರು.

ಸನ್ಮಾನ : ಎಸ್.ಡಿ.ಎಂ.ಸಿ.ಎ ಉಡುಪಿಯ ಪ್ರಾಂಶುಪಾಲರು ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಮಮತಾ ನವೀನ್ ಮತ್ತು ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ‌ಮಂಗಳೂರು ಇವರಿಂದ ರಾಜ್ಯಮಟ್ಟದ ಕವಿ ಕಾವ್ಯ ಸನ್ಮಾನ ಪುರಸ್ಕೃತರಾದ ಸುಗಂಧಿ ಶ್ಯಾಮ್ ರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎರ್ಮಾಳು ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ನಿರ್ದೇಶಕರು, ಪಡುಬಿದ್ರಿ ನಾರಾಯಣಗುರು ಬಿಲ್ಲವ ಮಹಿಳಾ ಮಂಡಳಿ ಅಧ್ಯಕ್ಷೆ ಸುಚರಿತಾ ಎಲ್ ಅಮೀನ್, ಕಾರ್ಯದರ್ಶಿ ರೋಹಿಣಿ ಆನಂದ್, ಯುವವಾಹಿನಿ ಪಡುಬಿದ್ರಿ ಘಟಕದ ಉಪಾಧ್ಯಕ್ಷರುಗಳಾದ ಶಶಿಕಲಾ ಯಶೋಧರ ಪೂಜಾರಿ ಮತ್ತು ಅಶ್ವಥ್ ಎಸ್.,ಯುವವಾಹಿನಿ ಪಡುಬಿದ್ರಿ ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ತುಳಸಿ ಕರುಣಾಕರ್, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಯುವವಾಹಿನಿ ಪಡುಬಿದ್ರಿ ಘಟಕದ ಕಾರ್ಯದರ್ಶಿ ಡಾ| ಐಶ್ವರ್ಯ ಸಿ. ಅಂಚನ್ ನಿರೂಪಿಸಿದರು. ಘಟಕದ ಉಪಾಧ್ಯಕ್ಷೆ ಶಶಿಕಲಾ ಯಶೋಧರ ಪೂಜಾರಿ ವಂದಿಸಿದರು.