Updated News From Kaup
ಪಡುಬಿದ್ರಿ : ಎಸ್.ಪಿ. ಉಮರ್ ಫಾರೂಕ್ ನಿಧನ

Posted On: 22-09-2022 10:51AM
ಪಡುಬಿದ್ರಿ : ಇಲ್ಲಿಯ ಮಾಜಿ ಗ್ರಾಪಂ ಸದಸ್ಯ, ರಾಜಕೀಯ ಧುರೀಣ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಎಸ್.ಪಿ. ಉಮರ್ ಫಾರೂಕ್ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನ ಹೊಂದಿದರು.
ಪಡುಬಿದ್ರಿ ಪರಿಸರದ ಹಿರಿಯ ಸಾಮಾಜಿಕ ಕಾರ್ಯಕರ್ತ ಪಡುಬಿದ್ರಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕಂಚಿನಡ್ಕ ಎಸ್.ಪಿ. ಕಂಪೌಂಡ್ ನಿವಾಸಿ ಹಾಜಿ ಎಸ್.ಪಿ. ಉಮರ್ ಫಾರೂಕ್‌ರವರು (60) ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದ ಉಮ್ಮರ್ ಫಾರೂಖ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಪಡುಬಿದ್ರಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾಗಿ, ಉಡುಪಿ ಜಿಲ್ಲಾ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಜಿಲ್ಲಾಧ್ಯಕ್ಷರಾಗಿ, ಎಸ್ ವೈಎಸ್ ಪಡುಬಿದ್ರಿ ಘಟಕದ ಮಾಜಿ ಅಧ್ಯಕ್ಷರಾಗಿ, ಪಡುಬಿದ್ರಿ ಜುಮಾ ಮಸೀದಿ ಸದಸ್ಯರಾಗಿ, ಇ ಅನತುಲ್ ಮಸಾಕೀನ್ ಸಂಸ್ಥೆಯಮಾಜಿ ಅಧ್ಯಕ್ಷರಾಗಿದ್ದರು. ಜನತಾದಳದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದ ಇವರು ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.
ಪತ್ನಿ, ಮೂರು ಹೆಣ್ಣು, ಒಂದು ಗಂಡು ಮಗನನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.
ಪಡುಬಿದ್ರಿ : ದೈವಾರಾಧನೆಯಲ್ಲಿ ವೈದಿಕ ಪದ್ಧತಿ ಇಲ್ಲ - ತಮ್ಮಣ್ಣ ಶೆಟ್ಟಿ

Posted On: 22-09-2022 08:42AM
ಪಡುಬಿದ್ರಿ : ಮೇಲ್ಜಾತಿ, ಕೆಳಜಾತಿ, ಅಸ್ಪೃಶ್ಯತೆ ಅತಿಯಾಗಿದ್ದ ಕೇರಳವನ್ನು ಬದಲಾಯಿಸಿದ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳು ಪ್ರಾತ: ಸ್ಮರಣೀಯರು. ಪ್ರಯೋಗ, ಪ್ರತಿಷ್ಟೆ, ಪ್ರವೇಶ ವಿಶೇಷ ತತ್ವವನ್ನು ಪ್ರತಿಪಾದಿಸಿದವರು. ಜಗತ್ತಿನ ಎರಡನೇ ಮತ್ತು ಏಷ್ಯದ ಪ್ರಥಮ ಸರ್ವಧರ್ಮ ಸಮ್ಮೇಳನದ ಆಯೋಜನೆಯ ಖ್ಯಾತಿ ಇವರದ್ದಾಗಿದೆ ಎಂದು ಶಂಭುಗ ಮಾಣಿಕ್ಯ ಬೀಡು, ಕನ್ನಡ ಚಿತ್ರೋದ್ಯಮದ ನಟ ನಿರ್ಮಾಪಕ ತಮ್ಮಣ್ಣ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಪಡುಬಿದ್ರಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕ ಇವರ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 94 ನೇ ಪುಣ್ಯ ತಿಥಿಯಂದು ತುಳುನಾಡಿನ ದೈವಾರಾಧನೆಯಲ್ಲಿ ಬಿಲ್ಲವರು ಎಂಬ ವಿಷಯದ ಉಪನ್ಯಾಸ ನೀಡಿದರು.

ಹಿಂದುವಿನ ಜ್ಞಾನ, ಬುದ್ಧನ ಕರುಣೆ, ಜೀಸಸ್ ನ ಪ್ರೀತಿ, ಮಹಮ್ಮದರ ಸಹೋದರತೆ ಇದು ವಿಶ್ವಧರ್ಮ ಎಂದು ಸರ್ವಧರ್ಮ ಸಮ್ಮೇಳನದಲ್ಲಿ ಹೇಳಿದರು. ಅಸ್ಪೃಶ್ಯತೆ ಬದಿಗಿರಿಸಿ ಜಗತ್ತಿಗೆ ಬೆಳಕನ್ನು ನೀಡಿದ ಮಹಾನ್ ದಾರ್ಶನಿಕರು ಶಿವಗಿರಿಯಲ್ಲಿ ನಂದಾದೀಪವಾಗಿ ಬೆಳಗಿ ಜಗತ್ತಿಗೆ ಬೆಳಕಾಗಿದ್ದಾರೆ. ನಾರಾಯಣಗುರು ಮತ್ತು ಭೂ ಮಸೂದೆ ಕಾನೂನು ಬರದಿದ್ದರೆ ನಾವೆಲ್ಲರೂ ಪ್ರಾಣಿಗಿಂತ ಕಡೆಯಾಗಿರುತ್ತಿದ್ದೆವು. ಮತಾಂತರವನ್ನು ತಡೆಗಟ್ಟಲು ಶ್ರಮಿಸಿದರು. ನಾರಾಯಣಗುರುಗಳನ್ನು ನಂಬುವ ಬಿಲ್ಲವ ಸಮಾಜ ರಾಜಕೀಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತಿದೆ. ಕೇವಲ ಸಣ್ಣ ವೃತ್ತಕ್ಕೆ ಅವರ ಹೆಸರನ್ನು ಸೀಮಿತವಾಗದೆ ಕೇಂದ್ರ, ರಾಜ್ಯಗಳ ವ್ಯವಸ್ಥೆಯ ಭಾಗವಾಗಿ ಅವರ ಹೆಸರು ಶಾಶ್ವತವಾಗಬೇಕು. ಬಿಲ್ಲವ ಸಮಾಜ ಶ್ರೀಮಂತ ವ್ಯವಸ್ಥೆ ಹೊಂದಿದ್ದು, ದೈವಾರಾಧನೆ, ಸಂಧಿ ಪಾಡ್ದನ, ನಾಥ ಪಂಥದಲ್ಲಿಯೂ ಬಿಲ್ಲವರ ಇತಿಹಾಸವಿದೆ. ತುಳುನಾಡಿನ ದೈವಾರಾಧನೆಯಲ್ಲಿ ಪ್ರಮುಖ ಪಾತ್ರ ಬಿಲ್ಲವರದ್ದು, ದೈವಾರಾಧನೆಯಲ್ಲಿ ವೈದಿಕ ಪದ್ಧತಿ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಉದ್ಘಾಟಿಸಿದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು. ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅರ್ಚಕರಾದ ಚಂದ್ರಶೇಖರ ಶಾಂತಿ, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಕಾರ್ಯದರ್ಶಿ ಲಕ್ಷ್ಮಣ್ ಡಿ ಪೂಜಾರಿ, ಯುವವಾಹಿನಿ ಘಟಕದ ಕಾರ್ಯದರ್ಶಿ ಡಾ| ಐಶ್ವರ್ಯ, ಬಿಲ್ಲವ ಸಂಘದ ಪದಾಧಿಕಾರಿಗಳು, ದೈವಾರಾಧನೆಯ ಚಾಕರಿಯವರು, ಯುವವಾಹಿನಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಬ್ರಹ್ಮಶ್ರೀ ನಾರಾಯಣಗುರುಗಳ 94 ನೇ ಪುಣ್ಯ ತಿಥಿಯ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಭಜನೆ ಮತ್ತು ಮಹಾಮಂಗಳಾರತಿ ಸೇವೆಯೂ ಜರಗಿತು.
ನಾರಾಯಣಗುರು ಮಹಿಳಾ ಮಂಡಳಿಯ ಸದಸ್ಯೆಯರು ಪ್ರಾರ್ಥಿಸಿದರು. ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ಶಾಶ್ವತ್ ಪೂಜಾರಿ ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಯಶೋದ ಪ್ರಸ್ತಾವನೆಗೈದರು. ರವಿರಾಜ್ ಎನ್ ಕೋಟ್ಯಾನ್ ಮತ್ತು ಪೂರ್ಣಿಮ ವಿಧಿತ್ ಕಾರ್ಯಕ್ರಮ ನಿರೂಪಿಸಿದರು. ಪಡುಬಿದ್ರಿ ಘಟಕದ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರಾದ ಸಂತೋಷ್ ಕರ್ನಿರೆ ವಂದಿಸಿದರು.
ನಿರರ್ಗಳ ವಾಕ್ಚಾತುರ್ಯದ ಮೂಲಕ ಗಮನ ಸೆಳೆಯುವ ಬಾಲ ಪ್ರತಿಭೆ ಜೀವಿಕಾ ವಿಶ್ವನಾಥ್ ಶೆಟ್ಟಿ, ಪೇತ್ರಿ

Posted On: 21-09-2022 11:59PM
ನಾವು ಏನು ಮಾಡಬೇಕೆಂದಿರುತ್ತೇವೆಯೋ ಅದನ್ನು ಕ್ರಮಬದ್ಧವಾಗಿ, ವಿಶಿಷ್ಟವಾಗಿ, ಶಿಸ್ತಿನಿಂದ, ಕ್ರಿಯಾಶೀಲತೆಯಿಂದ ಯಶಸ್ವಿಯಾಗಿ ಮಾಡಿದಾಗಲೇ ಅದು ಸಾಧನೆ ಎನ್ನಿಸಿಕೊಳ್ಳುತ್ತದೆ. ಪ್ರತಿಭೆ ಮತ್ತು ಪ್ರಯತ್ನಗಳು ನಿರಂತರವಾಗಿ ಏಕಮುಖವಾಗಿ ಸಾಗಿದರೆ ಸಾಧನೆ ಸಾಧಿತವಾಗುತ್ತದೆ. ಬದುಕಿಗೆ ಅತ್ಯುಕೃಷ್ಟ ಸಂಸ್ಕಾರ ನೀಡಿ ಸಮಾಜದಲ್ಲಿ ಗೌರವವನ್ನು ತಂದುಕೊಡಬಲ್ಲ ಕಲೆಗಳು ನಮ್ಮ ಬದುಕಿನಲ್ಲಿ ಬೆರೆತಾಗ ಬದುಕಿಗೆ ಮಾನ್ಯತೆ ದೊರಕುತ್ತದೆ. "ಕಲೆಯನ್ನು ಮನುಷ್ಯರ ಆಲೋಚನೆಯ ವಿಶೇಷ ಸಾಮರ್ಥ್ಯವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಕಲೆಯನ್ನು ಯೋಚನೆ ಮತ್ತು ಭಾವನೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸೃಜಿಸಲಾಗುತ್ತದೆ" ಎಂದು ದಾರ್ಶನಿಕರು ಅಭಿಪ್ರಾಯ ಪಡುತ್ತಾರೆ. ಯಾವುದೇ ಕಲೆಯು ಕುತೂಹಲದಿಂದ ಆರಂಭವಾಗಿ ಪರಿಣತಿ, ಮತ್ತು ಪರಿಪೂರ್ಣತೆಯೆಡೆಗೆ ಸಾಗುತ್ತದೆ. ಸಂಪೂರ್ಣ ಪರಿಪೂರ್ಣತೆ ಎಂಬುದು ಸಾಧ್ಯವಾಗದಿದ್ದರೂ ಪರಿಪೂರ್ಣತೆಯೆಡೆಗೆ ಸಾಗುವ ಪ್ರಕ್ರಿಯೆಯು ಅಭಿವ್ಯಕ್ತಿಸುವ ಕಲಾವಿದರಿಗೂ ಅನುಭವಿಸುವ ಕಲಾಭಿಮಾನಿಗಳಿಗೂ ಭಾವನ್ಮಾತಕ ಅನುಭೂತಿಯನ್ನೂ, ಭಾವಪರವಶತೆಯನ್ನೂ ತಂದೊಡ್ಡುತ್ತದೆ. ಪ್ರತಿಭೆಗಳು ಅನಾವರಣಗೊಳ್ಳಲು ಅವಕಾಶಗಳು ಲಭಿಸಬೇಕು. ಲಭಿಸಿದ ಅವಕಾಶವನ್ನು ಜಾಣ್ಮೆ, ಪ್ರೌಢಿಮೆ, ನೈಪುಣ್ಯತೆ, ಚಾಕಚಕ್ಯತೆ, ಕಲಾತ್ಮಕತೆ, ಪ್ರತ್ಯುತ್ಪನ್ನಮತಿತ್ವ, ವಾಕ್ಚಾತುರ್ಯದಿಂದ ಬಳಸಿಕೊಳ್ಳಬೇಕು. ಮುಂಬಯಿಯ ಬಾಲಕಿ ಜೀವಿಕಾ ವಿಶ್ವನಾಥ್ ಶೆಟ್ಟಿ ಅವರು ಹೀಗೆ ಸಿಕ್ಕಿದ ಅವಕಾಶಗಳನ್ನು ಚೆನ್ನಾಗಿ, ಸೊಗಸಾಗಿ ಬಳಸಿಕೊಂಡವರು . ಜೀವಿಕಾ ಅವರು ಭಾಷಣ, ಏಕಪಾತ್ರಾಭಿನಯ, ಭಗವದ್ಗೀತಾ ಶ್ಲೋಕ ಪಠಣ, ನಾಟಕಾಭಿನಯ, ಭಾಷಾ ಪರೀಕ್ಷೆ, ನಿರೂಪಣೆ ಇತ್ಯಾದಿಗಳಲ್ಲಿ ಪರಿಣತರು.

ಜೀವಿಕಾ ಅವರು ತಮ್ಮ ಬಾಲ್ಯದಿಂದಲೂ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ತುಳುಕನ್ನಡಿಗರ ಚಿಣ್ಣರ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಅಹೋರಾತ್ರಿ ಶ್ರಮಿಸುತ್ತಿರುವ ಏಕೈಕ ಕಾರ್ಯಪ್ರವೃತ್ತ ಬೃಹತ್ ಸಂಸ್ಥೆ ’ಚಿಣ್ಣರ ಬಿಂಬ’ ಮುಂಬಯಿ. ಜೀವಿಕಾ ಚಿಣ್ಣರ ಬಿಂಬದ ಪ್ರತಿಭಾವಂತ ವಿದ್ಯಾರ್ಥಿ. ಭಾಷಣ ಸ್ಪರ್ಧೆಯಲ್ಲಿ ಏಳು ಸಲ ಪ್ರಥಮ ಮತ್ತು ಎರಡು ಸಾರಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಏಕ ಪಾತ್ರಾಭಿನಯದಲ್ಲಿ ನಾಲ್ಕು ಸಲ ಮೊದಲ ಮತ್ತು ಎರಡು ಸಾರಿ ಎರಡನೆಯ ಬಹುಮಾನ ಗಳಿಸಿದವರು. ಭಗವದ್ಗೀತಾ ವಾಚನದಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡವರು. ಕಿರು ನಾಟಕ ಅಭಿನಯದಲ್ಲಿ ಎರಡು ಸಾರಿ ಪ್ರಥಮ ಹಾಗೂ ಎರಡು ಸಾರಿ ದ್ವಿತೀಯ ಸ್ಥಾನವನ್ನು ಗಳಿಸಿದವರು. ಬೃಹನ್ಮುಂಬಯಿ ಮಹಾನಗರ ಪಾಲಿಕೆ ಆಯೋಜಿತ ಮರಾಠಿ ಭಾಷಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದವರು. ಚಿಣ್ಣರ ಬಿಂಬದ ಪ್ರಥಮ ತರಗತಿಯಲ್ಲಿರುವಾಗಲೇ ದೇಶಭಕ್ತಿಯನ್ನು ಸಾರುವ ’ಅಮರ ವೀರರು’ ನಾಟಕದಲ್ಲಿ ರೊಚ್ಚುಕೆಚ್ಚುಗಳ ಸ್ವಾತಂತ್ಯ ವೀರ, ಆಂಗ್ಲರಿಗೆ ಸಿಂಹಸಪ್ನವಾಗಿದ್ದ ತಾಯಿ ಭಾರತಿಯ ವೀರಗುವರ ಎಂಟೆದೆಯ ಬಂಟ ’ಭಗತ್ ಸಿಂಗ’ರ ಪಾತ್ರದಲ್ಲಿ ಪರಕಾಯ ಪ್ರವೇಶಮಾಡಿದ ಅಭಿನಯವು ನಾಟಕ ರಸಿಕರನ್ನೂ, ಕಿಕ್ಕಿರಿದ ಸಭಿಕರನ್ನು ಮಂತ್ರಮುಗ್ಧಗೊಳಿಸಿತ್ತು. ಈ ಅಭಿನಯನಕ್ಕೆ ಪ್ರಥಮ ಸ್ಥಾನ ದಕ್ಕಿಸಿಕೊಂಡವರು.
ತನ್ನ ಏಳನೆ ವರ್ಷ ಪ್ರಾಯದಲ್ಲಿ ಬಂಟರ ಸಂಘ ಮುಂಬಯಿ ಪ್ರಾಯೋಜಿತ ಮಾಸಿಕ ’ಬಂಟರವಾಣಿ’ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದವರು. ಈ ಭಾಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಮುಕ್ಕಾಲು ಲಕ್ಷ ವೀಕ್ಷಕರು ವೀಕ್ಷಿಸಿ ಪ್ರಶಂಸಿದ್ದಾರೆ. ವಸಾಯಿ ಕರ್ನಾಟಕ ಸಂಘದವರು ಅಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಬಂಟರ ಸಂಘದ ಜೋಗೇಶ್ವರಿ ದಹಿಸರ್ ವಿಭಾಗದವರು ಏರ್ಪಡಿಸಿದ್ದ ಏಕಪಾತ್ರಾಭಿನಯದಲ್ಲಿ ಪ್ರಥಮ. ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ವಿಶ್ವಬಂಟರ ಸಮ್ಮೇಳನದ ನಾಟಕ ಸ್ಪರ್ಧೆಯಲ್ಲಿ ನಟಿಸಿರುವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೋನ್ಸೆ ವಿಜಯಕುಮಾರ್ ಶೆಟ್ಟಿಯವರು ಬರೆದು ನಿರ್ದೇಶಿಸಿರುವ ’ಈ ಬಾಲೆ ನಮ್ಮವು’ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಮುಂಬಯಿ ತುಳುಕನ್ನಡಿಗ ನಾಟಕ ಪ್ರಿಯರ ಮನಸ್ಸು ಗೆದ್ದವರು. ಖ್ಯಾತ ಅರ್ಥಧಾರಿ, ಮೃದು ಮಧುರ, ಮಾತುಗಳ ಸರದಾರ ಕೀರ್ತಿಶೇಷ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರ ಸಂಧಾನದ ಕೃಷ್ಣನ ಪಾತ್ರವನ್ನು ಮರುಸೃಜಿಸಿ ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಹಳೆಗನ್ನಡದ ಪದ್ಯಗಳೊಂದಿಗೆ ನಿರರ್ಗಳವಾಗಿ ಅರ್ಧ ಗಂಟೆ ಮಾತಿನ ಮಂಟಪ ಅನಾವರಣಗೊಳಿಸಬಲ್ಲರು ಜೀವಿಕಾ. ನವೋದಯ ಕನ್ನಡ ಸೇವಾ ಸಂಘ ಥಾಣೆ ಇವರು ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.
ಜೀವಿಕಾ ಅವರು ಶ್ರೀಮತಿ ಚಿತ್ರಾ ಶೆಟ್ಟಿ ಹಾಗೂ ಪೇತ್ರಿ ವಿಶ್ವನಾಥ ಶೆಟ್ಟಿಯವರ ದ್ವಿತೀಯ ಸುಪುತ್ರಿ. ಇವರ ಅಕ್ಕ ಇಶಿಕಾ ಶೆಟ್ಟಿ. ಪೇತ್ರಿ ವಿಶ್ವನಾಥ ಶೆಟ್ಟಿಯವರು ಮುಂಬಯಿ ಸಾಹಿತ್ಯ ವಲಯದಲ್ಲಿ ಕವಿಯಾಗಿ, ಕತೆಗಾರರಾಗಿ, ಸಂಘಟಕರಾಗಿ, ವಾಗ್ಮಿಯಾಗಿ ಚಿರಪರಿಚಿತರು. ಸಾಹಿತಿ ತಂದೆ, ಕಲಾಭಿಮಾನಿ ತಾಯಿಯವರ ಸ್ಪೂರ್ತಿ, ಪ್ರೇರಣೆ, ಪ್ರೋತ್ಸಾಹ, ಮಾರ್ಗದರ್ಶನಗಳು ಜೀವಿಕಾ ಅವರಿಗೆ ಬಾಲ್ಯದಿಂದ ನಿರಂತರ ದೊರೆಯುತ್ತ ಬಂದಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಜೀವಿಕಾ ಅವರು ಶಾಲಾ ವಿದ್ಯಾಭ್ಯಾಸದಲ್ಲೂ ತಮ್ಮ ಸ್ಥಾನವನ್ನು ಕಾಯ್ದುಕೊಂಡವರು. ಹತ್ತನೆ ತರಗತಿಯಲ್ಲಿ 87% ಅಂಕಗಳನ್ನು ಗಳಿಸಿದ್ದಾರೆ. ತುಳು, ಕನ್ನಡ, ಮರಾಠಿ, ಹಿಂದಿ, ಆಂಗ್ಲ ಭಾಷೆಗಳನ್ನು ನಿರರ್ಗಳವಾಗಿ, ಅರಳು ಹುರಿದಂತೆ ಮಾತನಾಡಬಲ್ಲರು. ಜೀವಿಕಾ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೆ ಸಾಲಿನ ವಿಶೇಷ "ಬಾಲ ಪ್ರತಿಭಾ ಪುರಸ್ಕಾರ" ಲಭಿಸಿದೆ. ಕನ್ನಡ ಕಲಾ ಕೇಂದ್ರ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರಿಂದ ಸುವರ್ಣಶ್ರೀ ಪ್ರಶಸ್ತಿ ಪಡೆದಿದ್ದಾರೆ. ಬಂಟರ ಸಂಘದ ಗೌರವ ಸನ್ಮಾನಕ್ಕೆ ಪಾತ್ರರಾಗಿರುವ ಜೀವಿಕಾ ಅವರ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಸಾಧನೆಗಳ ಹಾದಿಯಲ್ಲಿ ಉಲ್ಲಾಸದ ಹೂಮಳೆ ಸುರಿಯಲಿ. ಭವಿತವ್ಯದ ಬದುಕು ಸರಳ, ಸುಂದರ, ಸುಲಲಿತ, ಸುಮಧುರವಾಗಲಿ. ಲೇಖನ: ಉದಯ ಶೆಟ್ಟಿ, ಪಂಜಿಮಾರು
ರೋಟರಿ ಶಂಕರಪುರ : ಇಂಟರಾಕ್ಟ್ ಕ್ಲಬ್ ಪದ ಪ್ರದಾನ

Posted On: 21-09-2022 11:54PM
ಕಾಪು : ರೋಟರಿ ಶಂಕರಪುರದ ಅಂಗ ಸಂಸ್ಥೆಗಳಾದ ಎಸ್ ವಿ ಎಚ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಹಾಗೂ ಎಸ್ ವಿ ಎಚ್ ಕನ್ನಡ ಮೀಡಿಯಂ ಇಂಟರಾಕ್ಟ್ ಕ್ಲಬ್ ಪದ ಪ್ರದಾನ ಸಮಾರಂಭವನ್ನು ವಲಯ 5 ರ ಇಂಟರಾಕ್ಟ್ ವಲಯ ಸಂಯೋಜಕರಾದ ಜಯಕೃಷ್ಣ ಆಳ್ವಾರವರು ಇಂಟರಾಕ್ಟ್ ಅಧ್ಯಕ್ಷರುಗಳಾದ ಪಾವನ, ಪ್ರಜ್ಞಾ ಹಾಗೂ ಕಾರ್ಯದರ್ಶಿಗಳಾದ ಕಾರ್ತಿಕ್, ಶ್ರೇಯ ರವರಿಗೆ ಪದಪ್ರದಾನವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಇಂಟರಾಕ್ಟ್ ಟೀಚರ್ ಕೋ ಆರ್ಡಿನೇಟರ್ ಗಳಾದ ದೀಪ್ತಿ, ಅನಿತಾ ಹಾಗೂ ಶಾಲೆಯ ಆಡಳಿತ ಅಧಿಕಾರಿಯಾದ ಅನಂತಮುಡಿತಾಯ ಎಸ್ ವಿ ಎಚ್ ಇಂಗ್ಲಿಷ್ ಮೀಡಿಯಂ ಮುಖ್ಯೋಪಾಧ್ಯಾಯರಾದ ಸುಷ್ಮಾ, ರೋಟರಿಯ ಅಧ್ಯಕ್ಷರಾದ ಗ್ಲಾಡಸನ್ ಕುಂದರ್, ಕಾರ್ಯದರ್ಶಿಯಾದ ಸಿಲ್ವಿಯಾ ಕಸ್ಟಲೀನೋ , ಜೊತೆ ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಶಾಲಾ ಶಿಕ್ಷಕಿಯರು, ಇಂಟರಾಕ್ಟ್ ಮಕ್ಕಳು ಉಪಸ್ಥಿತರಿದ್ದರು.
ಶಿರ್ವ : ದಶದಿಕ್ಕುಗಳಿಂದ ಸಂಪತ್ತು ಹರಿದು ಬರಲಿ - ಉಮೇಶ್ ಆಚಾರ್ಯ

Posted On: 21-09-2022 03:04PM
ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು ಶ್ರೀಮಠದ ಗೋವುಗಳಿಗೆ ಸುಮಾರು ಇನ್ನೂರು ಕಿಲೋ ಗಿಂತಲೂ ಹೆಚ್ಚು ಹಿಂಡಿ ಮತ್ತು ಹಸಿರು ಆಹಾರವನ್ನು ಅಧ್ಯಕ್ಷರಾದ ಉಮೇಶ್ ಆಚಾರ್ಯರು ಗೋಮಾತೆಗೆ ಸಮರ್ಪಿಸಿ ದಶದಿಕ್ಕುಗಳಿಂದ ನಮ್ಮ ಸಂಸ್ಥೆಗೆ ಸಂಪತ್ತು ಹರಿದುಬರಲಿ ಇನ್ನೂ ಮುಂದಕ್ಕೂ ಗೋಸೇವೆ ಸೇವೆ ಮಾಡುವ ಅವಕಾಶ ದೊರೆಯಲಿ ಎಂದು ಮಠಕ್ಕೆ ಗೋವಿಗಾಗಿ ಮೇವು ಸಮರ್ಪಣ ಸಮಾರಂಭದಲ್ಲಿ ನುಡಿದರು ಶ್ರೀಮಠದ ಗುರುಗಳು ಸದಸ್ಯರಿಗೆ ಫಲಮಂತ್ರಾಕ್ಷತೆ ಯನ್ನು ನೀಡಿ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯಾಗಲಿ, ಗುರು ಆಶೀರ್ವಾದದೊಂದಿಗೆ ಗೋಮಾತೆಯ ಆಶೀರ್ವಾದ ಎಲ್ಲರಿಗೂ ಲಭಿಸಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಠದ ಪರಿಯಾವರಣ ಅಧ್ಯಕ್ಷರಾದ ಸುಂದರ್ ಆಚಾರ್ಯ ಬೆಳುವಾಯಿ, ಕಾರ್ಯದರ್ಶಿ ಸುರೇಶ್ ಉಡುಪಿ, ಶ್ರೀಮಠದ ಲೋಲಾಕ್ಷ ಆಚಾರ್ಯ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಶಮಾನೋತ್ಸವದ ಸಂಚಾಲಕ ಪ್ರಶಾಂತ ಆಚಾರ್ಯ ಮತ್ತು ಪ್ರಿತಮ್ ಆಚಾರ್ಯ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಸುರೇಶಾಚಾರ್ಯ ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರಾಚಾರ್ಯ ಕಾರ್ಯದರ್ಶಿ ಪ್ರೀತಿ ಉಮೇಶ್ ಆಚಾರ್ಯ ಮತ್ತು ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಮಾಧವಾಚಾರ್ಯ ವಂದಿಸಿದರು.
ಪಡುಬಿದ್ರಿ : ಅನ್ನಭಾಗ್ಯ ಯೋಜನೆಯ ಅಕ್ರಮ ದಾಸ್ತಾನಿನ ಅಕ್ಕಿ ವಶ

Posted On: 21-09-2022 02:59PM
ಪಡುಬಿದ್ರಿ : ನಡ್ಸಾಲು ಗ್ರಾಮದ ಕನ್ನಂಗಾರ್ ಎಂಬಲ್ಲಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ಕಾಪು ತಾಲೂಕು ಆಹಾರ ನಿರೀಕ್ಷಕ ಟಿ. ಲೀಲಾನಂದ, ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಕೆ.ಸಿ. ಪೂವಯ್ಯ ಮತ್ತು ಪಡುಬಿದ್ರಿ ಪೋಲೀಸರು ದಾಳಿ ನಡೆಸಿ 2,87,606 ರೂಪಾಯಿ ಮೌಲ್ಯದ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಕನ್ನಂಗಾರ್‌ನ ಮೊಹಮದ್ ಶಫೀಕ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿ, ಆಪಾದಿತರ ಮನೆಯ ಹೊರಾಂಗಣ ಮತ್ತು ಎದುರು ಇರುವ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿಯಾಗಿದ್ದು, 50 ಕೆ.ಜಿ ತೂಕದ 33 ಚೀಲ ಬೆಳ್ತಿಗೆ ಅಕ್ಕಿ (ಒಟ್ಟು ತೂಕ 1650 ಕೆ.ಜಿ), 50 ಕೆ ಜಿ ತೂಕದ 192 ಚೀಲ ಕುಚಲಕ್ಕಿ (ಒಟ್ಟು ತೂಕ 9600 ಕೆ.ಜಿ), 20 ಕೆ ಜಿ ತೂಕದ 31 ಚೀಲ ಕುಚಲಕ್ಕಿ (ಒಟ್ಟು ತೂಕ 620 ಕೆ.ಜಿ), 30 ಕೆ.ಜಿ. ತೂಕದ 02 ಚೀಲ ಕುಚಲಕ್ಕಿ (ಒಟ್ಟು ತೂಕ 60 ಕೆ.ಜಿ), ಮತ್ತು ಹೊಲಿಗೆ ಹಾಕದೇ ಇರುವ 10 ಚೀಲ ಕುಚಲಕ್ಕಿ (ಒಟ್ಟು ತೂಕ 303 ಕೆ.ಜಿ) ಸೇರಿದಂತೆ ಒಟ್ಟು 2,87,606/- ರೂಪಾಯಿ ಮೌಲ್ಯದ 13,073 ಕೆ.ಜಿ. ಅಕ್ಕಿ, ರೂಪಾಯಿ 4,000/- ಮೌಲ್ಯದ ತೂಕದಯಂತ್ರ-01, ರೂಪಾಯಿ 5,000/- ಮೌಲ್ಯದ ಚೀಲ ಹೊಲಿಯುವ ಯಂತ್ರ-01 ನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
ಶಿರ್ವ ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಕೋಡು ಹರಿಪ್ರಸಾದ್ ಸಾಲಿಯಾನ್ ಆಯ್ಕೆ

Posted On: 20-09-2022 11:20PM
ಶಿರ್ವ : ಇಲ್ಲಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಕೋಡು ಹರಿಪ್ರಸಾದ್ ಸಾಲಿಯಾನ್ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಕುತ್ಯಾರು, ಗೀತಾ ವಾಗ್ಲೆ, ಪ್ರವೀಣ್ ಪೂಜಾರಿ, ಮಿತ್ರಬೆಟ್ಟು ಕಾರ್ಯದರ್ಶಿಯಾಗಿ ರವೀಂದ್ರ ಪಾಟ್ಕರ್ ಕೋಡುಗುಡ್ಡೆ, ಜತೆ ಕಾರ್ಯದರ್ಶಿಯಾಗಿ ಜಯಶ್ರೀ ಶೆಟ್ಟಿ ಶಿರ್ವ, ರಾಜೇಶ್ ಶೆಟ್ಟಿ ಪಂಜಿಮಾರು, ಸುಮತಿ ಜೆ ಸುವರ್ಣ ಕೋಶಾಧಿಕಾರಿ ಪ್ರಕಾಶ್ ಕೋಟ್ಯಾನ್ ನ್ಯಾರ್ಮ ಹಾಗೂ 40 ಮಂದಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಮಾದಕ ಪದಾರ್ಥ ಬಳಕೆಯ ವಿರುದ್ಧ ಜನಜಾಗೃತಿ ಅಭಿಯಾನ ಕಾರ್ಯಕ್ರಮ

Posted On: 20-09-2022 09:10PM
ಕಾಪು : ಮೂಳೂರ್ ಜುಮಾ ಮಸೀದಿ ಹಾಗು ಸಿರಾಜುಲ್ ಇಸ್ಲಾಂ ಅರಬಿ ಮದ್ರಸ ಮೂಳೂರ್ ಇದರ ಜಂಟಿ ಆಶ್ರಯದಲ್ಲಿ ಇಂಲೈಟ್ ವೆಲ್ನೆಸ್ ಸೆಂಟರ್ ಕುತ್ತಾರ್ ಮಂಗಳೂರು ಇದರ ಸಹಯೋಗದೊಂದಿಗೆ ಮಾದಕ ಪದಾರ್ಥ ಬಳಕೆಯ ವಿರುದ್ಧ ಜನ ಜಾಗೃತಿ ಅಭಿಯಾನ ಕಾರ್ಯಕ್ರಮವು ಜುಮಾ ಮಸೀದಿ ಕ್ಯಾಂಪಸ್ ನಲ್ಲಿ ಜರುಗಿತು.
ಮಸೀದಿ ಅಧ್ಯಕ್ಷ ಸೈಯದ್ ಮುರಾದ್ ಅಲಿ ಅಧ್ಯಕ್ಷತೆಯನ್ನು ವಹಿಸಿದ್ದರು. ಖತೀಬರಾದ ಹಫೀಳ್ ಅಶ್ರಫ್ ಸಖಾಫಿ ದುವಾ ನೆರವೇರಿಸಿದರು. ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ ಪೂವಯ್ಯರವರು ಮಾದಕ ಪದಾರ್ಥ ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ವಿವರಿಸಿ ಇಂದಿನ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಕಾರ್ಯಕ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ತರಬೇತುದಾರ ಬಹುಮಾನ್ಯ ಇಬ್ರಾಹಿಂ ಖಲೀಲ್ ರವರು ಲಹರಿಪದಾರ್ಥಗಳ ದಾಸರಾಗುವುದರಿಂದಾಗುವ ಅನಾಹುತಗಳ ಬಗ್ಗೆ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಅದರಿಂದ ತಡೆಯಲು ಪೋಷಕರು ತೆಗೆದುಕೊಳ್ಳಬಹುದಾದ ಉಪಾಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮದ್ರಸ ಅಧ್ಯಕ್ಷ ಅಹ್ಮದ್ ಬಾವ ವೈ.ಬಿ.ಸಿ, ಸದ್ರ್ ಉಸ್ತಾದ್ ಅಬ್ದುಲ್ ಲತೀಫ್ ಸಅದಿ , ಎಂ.ಎ. ಗಫೂರ್ ಉಪಸ್ಥಿತರಿದ್ದರು. ವೈ.ಬಿ.ಸಿ. ಬಷೀರ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಸ್ ಆರ್ ರಫೀಕ್ ವಂದಿಸಿದರು.
ಲೋಕಾಯುಕ್ತ ಕಾಯ್ದೆಯಡಿ ದೂರು ಸಲ್ಲಿಕೆಗೆ ಅವಕಾಶ

Posted On: 20-09-2022 10:36AM
ಉಡುಪಿ : ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವಿಚಾರಣೆ ಬಯಸುವ ಜಿಲ್ಲೆಯ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ದೃಷ್ಠಿಯಿಂದ ದೂರು ಅರ್ಜಿಗಳ ಪ್ರಪತ್ರಗಳನ್ನು ಸೆಪ್ಟಂಬರ್ 21 ರಂದು ಬೈಂದೂರು ಪ್ರವಾಸಿ ಮಂದಿರ, ಸೆ. 22 ರಂದು ಕುಂದಾಪುರ ಪ್ರವಾಸಿ ಮಂದಿರ, ಸೆ. 23 ರಂದು ಹೆಬ್ರಿ ಪ್ರವಾಸಿ ಮಂದಿರ, ಸೆ. 26 ರಂದು ಕಾರ್ಕಳ ಪ್ರವಾಸಿ ಮಂದಿರ, ಸೆ. 27 ರಂದು ಬ್ರಹ್ಮಾವರ ತಾಲೂಕು ಕಚೇರಿ ಆವರಣ ಹಾಗೂ ಸೆ. 28 ರಂದು ಕಾಪು ತಾಲೂಕು ಕಚೇರಿ ಆವರಣದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ವರೆಗೆ ಸ್ವೀಕರಿಸಲಾಗುವುದು.
ಉಡುಪಿ ತಾಲೂಕಿಗೆ ಸಂಬಂಧಪಟ್ಟ ದೂರು ಅರ್ಜಿಗಳನ್ನು ನೇರವಾಗಿ ಉಡುಪಿ ಲೋಕಾಯುಕ್ತ ಕಛೇರಿಗೆ ನೀಡಬಹುದಾಗಿದೆ. ಕಾರ್ಯಕ್ರಮದಲ್ಲಿ ಉಡುಪಿ ಘಟಕದ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಭಾಗವಹಿಸಲಿದ್ದು, ಸಾರ್ವಜನಿಕರು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ತೊಂದರೆ ಅನುಭವಿಸಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 0820-2958881 ಹಾಗೂ ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 0820-2536661 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಟರಿ ಶಂಕರಪುರ : ಇಂಜಿನಿಯರ್ಸ್ ದಿನಾಚರಣೆ

Posted On: 20-09-2022 10:29AM
ಕಾಪು : ರೋಟರಿ ಕ್ಲಬ್ ಶಂಕರಪುರದ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಇಂಜಿನೀಯರ್ ಗಳಾದ ಅಬ್ದುಲ್ ಖಾದರ್ ಹಾಗೂ ಕ್ಯಾರಲ್ ಡಿಸಿಲ್ವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಅನಿತಾ ಡಿಸೋಜರವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್, ವೆಲೇರಿಯನ್ ನೊರೋಹ್ನ, ಮಾಲಿನಿ ಶೆಟ್ಟಿ, ಸಿಲ್ವಿಯ ಕಸ್ಟಲೀನೋ, ಅಂತೋನಿ ಡೇಸಾ, ಜಾರ್ಜ್ ಡಿಸಿಲ್ವ, ಪ್ಯಾಟ್ರಿಕ್ ಡಿಸೋಜಾ, ಫ್ಲಾವಿಯ ಮ್ಯಾನೇಜಸ್, ಫ್ರಾನ್ಸಿಸ್ ಡೇಸಾ, ಲಕ್ಷ್ಮಣ್ ಪೂಜಾರಿ, ರೋಟರಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.