Updated News From Kaup

ಪಡುಬಿದ್ರಿ : 1 ಕೋಟಿ 10 ಲಕ್ಷ ರೂ.ಗಳ ಕಾಮಗಾರಿ ; 3 ರಸ್ತೆಗಳ ಲೋಕಾರ್ಪಣೆ

Posted On: 11-09-2022 03:09PM

ಪಡುಬಿದ್ರಿ : ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಪಡುಬಿದ್ರೆ ಪಂಚಾಯತ್ ವ್ಯಾಪ್ತಿಯ 5 ನೇ ವಾರ್ಡಿನ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿ ಸುಮಾರು 1 ಕೋಟಿ 10 ಲಕ್ಷ ರೂಪಾಯಿಗಳ ಅಭಿವೃದ್ಧಿಗೊಂಡ 3 ರಸ್ತೆಗಳನ್ನು ಲೋಕಾರ್ಪಣೆಗೊಳಿಸಿದರು.

ಸ್ಥಳೀಯರ ರಸ್ತೆ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು 1 ಕೋಟಿ ಅನುದಾನದಿಂದ, ಅಪ್ಪು ಪೂಜಾರಿ ಮನೆ ಸಮೀಪ ರಸ್ತೆ ಅಭಿವೃದ್ಧಿ 5 ಲಕ್ಷ, ರಘುಪತಿ ಭಟ್ ಮನೆ ಬಳಿ ರಸ್ತೆ ಅಭಿವೃದ್ಧಿಗೆ 5 ಲಕ್ಷ ಅನುದಾನದಿಂದ ರಸ್ತೆ ಅಭಿವೃದ್ಧಿಗೊಂಡು ಭರವಸೆಯಂತೆ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಲಾಗಿದೆ.

ಪಂಚಾಯತ್ ವ್ಯಾಪ್ತಿಯ  ಉಳಿದ ವಾರ್ಡ್ಗಳಲ್ಲಿ ಕೋಟಿ ರೂಗಳ ಅನುದಾನ ಮಂಜೂರುಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಗುದ್ದಲಿ ಪೂಜೆ ನೆರವೇರಿಸಲಾಗುವುದು ಹಾಗೂ ಬಿಜೆಪಿ ಆಡಳಿತವಿರುವ ಗ್ರಾಮ ಪಂಚಾಯತ್ ಈ ಭಾಗದ ಜನರ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿತ್ತಿದ್ದು ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದು. ಹಾಗೂ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷೆ ಯಶೋದ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಹೇಂದ್ರ ಪೂಜಾರಿ, ವಿನಾಯಕ್ ಪುತ್ರನ್ , ಅಶೋಕ್ ಪೂಜಾರಿ ಹಾಗೂ ಸ್ಥಳೀಯರು, ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.

ಘರ್ ಘರ್ ತಿರಂಗಾ - ತಿರಂಗಾ ಸೆಲ್ಫಿ : ರಾಘವೇಂದ್ರ ಪ್ರಭು ಕವಾ೯ಲುಗೆ ಪ್ರಥಮ ಬಹುಮಾನ

Posted On: 11-09-2022 02:22PM

ಉಡುಪಿ : ಇಂಡಿಯಾ ಬುಕ್ ಆಫ್ ವಲ್ಡ್೯ ರೆಕಾಡ್೯ ಸಂಸ್ಥೆ ಮತ್ತು ಆಯುಷ್ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಘರ್ ಘರ್ ತಿರಂಗಾ ಕುರಿತು ನಡೆದ ತಿರಂಗಾ ಸೆಲ್ಫಿ ಸ್ಪಧೆ೯ಯಲ್ಲಿ ಕ.ಸಾ.ಪ ತಾಲೂಕು ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು,ಕವಾ೯ಲು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ನಂದಿಕೂರಿನ ಮಹಿಳೆಗೆ ವೀಲ್ ಚೇರ್ ಹಸ್ತಾಂತರ

Posted On: 11-09-2022 01:52PM

ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಪಲಿಮಾರು ಇದರ ನೇತೃತ್ವದಲ್ಲಿ ನಂದಿಕೂರಿನ ಕಲ್ಯಾಣಿ ಪೂಜಾರ್ತಿಯವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.

ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇವರ ಮನವಿ ಮೇರೆಗೆ ಬೆಂಗಳೂರಿನ ಉದ್ಯಮಿ ಗಣೇಶ್ ಗುಜರನ್ ಪಡುಬಿದ್ರಿ ಕೂಡಲೇ ಸ್ಪಂದಿಸಿ ವೀಲ್ ಚೇರ್ ಕೊಡುಗೆ ನೀಡಿದ್ದರು.

ಈ ಸಂದರ್ಭ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಅಧ್ಯಕ್ಷರಾದ ಹರೀಶ್ ಪೂಜಾರಿ, ಸದಸ್ಯರಾದ ಪ್ರಕಾಶ್ ಪೂಜಾರಿ, ಉದ್ಯಮಿ ಗಣೇಶ್ ಗುಜರನ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.

ಪಂಚ ಪವಿತ್ರ ಗಿಡ ವಿತರಣಾ ಅಭಿಯಾನ

Posted On: 11-09-2022 09:29AM

ಉಡುಪಿ : ನಮ್ಮ ಹಿರಿಯರು ಗಿಡಗಳ ಮೂಲಕ ಧಾಮಿ೯ಕ ಭಾವನೆಗಳನ್ನು ಮೂಡಿಸಿದರ ಫಲವಾಗಿ ಇಂದು ಹಲವಾರು ಗಿಡ ಮರಗಳು ಉಳಿಯಲು ಕಾರಣವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಸೆಪ್ಟೆಂಬರ್ 10 ರಂದು ಭಾರತೀಯ ಜನೌಷಧಿ ಕೇಂದ್ರ ಅಜ್ಜರಕಾಡು ಮತ್ತು ಜಯಂಟ್ಸ್ ಗ್ರೂಫ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ನಡೆದ ಧಾಮಿ೯ಕ ಕೇಂದ್ರಗಳು, ದೇವಾಲಯಗಳಿಗೆ ವಿತರಿಸುವ ಪಂಚ ಪವಿತ್ರ ಗಿಡ ವಿತರಣಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದಭ೯ದಲ್ಲಿ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕೇಂದ್ರ ಸದಸ್ಯ ದಿನಕರ ಅಮೀನ್, ಲಕ್ಮೀಕಾಂತ್ ಬೆಸ್ಕೂರು, ಅಣ್ಣಯ್ಯದಾಸ್, ಶ್ರೀನಾಥ್ ಕೋಟ, ಇಕ್ಬಾಲ್ ಮನ್ನಾ, ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.

ಮಣಿಪಾಲ : ಜೇಸಿ ಸಪ್ತಾಹ - ರಕ್ತದಾನ ಶಿಬಿರ

Posted On: 11-09-2022 09:24AM

ಮಣಿಪಾಲ : ಕೆ.ಎಂ.ಸಿ ಮಣಿಪಾಲ ರಕ್ತನಿಧಿ ಕೇಂದ್ರ ಮತ್ತು ಜೇಸಿಐ ಕಲ್ಯಾಣಪುರ ಇದರ ವತಿಯಿಂದ ಜೇಸಿ ಸಪ್ತಾಹ ವತಿಯಿಂದ ಸೆಪ್ಟಂಬರ್ 10 ರಂದು ರಕ್ತದಾನ ಶಿಬಿರ ನಡೆಯಿತು.

ಈ ಸಂದಭ೯ ರಾಷ್ಟ್ರಮಟ್ಟದಲ್ಲಿ ಉತ್ತಮ ರಕ್ತನಿಧಿ ಕೇಂದ್ರ ಪ್ರಶಸ್ತಿ ಪಡೆದ ಕೇಂದ್ರದ ಮುಖ್ಯಸ್ಥರಾದ ಡಾII ಶಮ್ಮಿ ಶಾಸ್ರಿಯವರನ್ನು ಸನ್ಮಾನಿಸಲಾಯಿತು.

ಈ ಸಂದಭ೯ ವಲಯ ನಿದೇ೯ಶಕ ರಾಘವೇಂದ್ರ ಪ್ರಭು ಕವಾ೯ಲು, ಉಮೇಶ್ ಅಮೀನ್ , ಅರುಣ್ ಕುಮಾರ್ , ಅದ್ಯಕ್ಷೆ ಜಯಶ್ರೀ, ಮಿತ್ರ ಕುಮಾರ್, ಚಿತ್ರ ಕುಮಾರ್ , ನಿತ್ಯಾನಂದ ಮತ್ತಿತರರು ಉಪಸ್ಥಿತರಿದ್ದರು.

ಪಡುಬಿದ್ರಿ : ಬ್ರಹ್ಮಶ್ರೀ ನಾರಾಯಣಗುರುವರ್ಯರ ಜನ್ಮದಿನೋತ್ಸವ ಆಚರಣೆ ; ಶೋಭಾಯಾತ್ರೆ ; ವಿದ್ಯಾರ್ಥಿವೇತನ ವಿತರಣೆ

Posted On: 10-09-2022 10:48PM

ಪಡುಬಿದ್ರಿ : ವಿದ್ಯೆಗೆ ಮಹತ್ವ ನೀಡುವುದರ ಜೊತೆಗೆ ಪ್ರತಿಭೆಗಳನ್ನು ಬೆಳೆಸಬೇಕಾಗಿದೆ. ಹೆತ್ತವರು ಮಕ್ಕಳಿಗೆ ಸಂಸ್ಕೃತಿಯನ್ನು ತಿಳಿಸಬೇಕಿದೆ. ನಾವು ಉತ್ತಮ ಸಂಸ್ಕೃತಿವಂತರಾಗಿ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿಯನ್ನು ತಿಳಿಸುವ ಎಂದು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಇಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮ ದಿನೋತ್ಸವದ ಶೋಭಾಯಾತ್ರೆಯ ನಂತರ ಜರಗಿದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಿಲ್ಲವ ಸಮಾಜ ಇಂದು ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮುಂದೆಯು ನಿಮ್ಮ ಪ್ರಗತಿ ಹೀಗೆಯೇ ಇರಲಿ. ಬ್ರಹ್ಮಶ್ರೀ ನಾರಾಯಣಗುರುಗಳು ಸರ್ವರಿಗೂ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಎರ್ಮಾಳು ಮಾತನಾಡಿ ನಾರಾಯಣಗುರುಗಳ ಆದರ್ಶವನ್ನು ಪಾಲಿಸುವ. ಅವರು ಸಮಸ್ತ ಹಿಂದುಳಿದ ವರ್ಗದ ಗುರುಗಳು. ಅವರ ತತ್ವಗಳನ್ನು ಜೀವನದಲ್ಲಿಯೂ ಅಳವಡಿಸುವ. ಇಂತಹ ಆಚರಣೆಗಳ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ ಎಂದರು.

ವಿದ್ಯಾರ್ಥಿವೇತನ, ಬಹುಮಾನ ವಿತರಣೆ, ಸನ್ಮಾನ : ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಪ್ರಸ್ತುತ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಂಘದ ವ್ಯಾಪ್ತಿಯ ಸಮಾಜ ಬಾಂಧವರಿಗಾಗಿ ಜರಗಿದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬ್ರಹ್ಮಶ್ರೀ ನಾರಾಯಣಗುರು ಮೂರ್ತಿ ಮೆರವಣಿಗೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯ ಸೇವಾಕರ್ತರಾದ ಸುಧೀರ್ ಎಸ್ ಕಲ್ಮಾಡಿ ಮತ್ತು ಗೀತಾ ದಂಪತಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ವಹಿಸಿದ್ದರು. ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷಣ್ ಡಿ ಪೂಜಾರಿ, ಸೇವಾದಳದ ದಳಪತಿ ಯೋಗೀಶ್ ಪೂಜಾರಿ ಮಾದುಮನೆ, ಮಹಿಳಾ ವಿಭಾಗದ ಅಧ್ಯಕ್ಷರಾದ ಸುಚರಿತ ಎಲ್ ಅಮೀನ್, ಬಿಲ್ಲವ ಸಂಘ, ಮಹಿಳಾ ವಿಭಾಗ, ಬ್ರಹ್ಮಶ್ರೀ ನಾರಾಯಣಗುರು ಸೇವಾದಳದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಸುಜಿತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಲಕ್ಷ್ಮಣ ಡಿ ಪೂಜಾರಿ ವಂದಿಸಿದರು. ನಾರಾಯಣಗುರುಗಳ ಜನ್ಮದಿನೋತ್ಸವದ ಪ್ರಯುಕ್ತ ಬೆಳಗ್ಗೆ ಪೂಜಾ ಕೈಂಕರ್ಯ ಮತ್ತು ಬಿಲ್ಲವ ಸಂಘದ ಮಹಿಳಾ ವಿಭಾಗದವರಿಂದ ಭಜನಾ ಸೇವೆಯು ಜರಗಿತು. ಸಂಜೆ ಶೋಭಾಯಾತ್ರೆ, ಮಹಾಪೂಜೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

ಕಾಪು : ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

Posted On: 10-09-2022 11:46AM

ಕಾಪು : ಇಲ್ಲಿನ ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 168 ನೇ ಜಯಂತಿಯನ್ನು ಆಚರಿಸಲಾಯಿತು.

ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಶುಭ ಹಾರೈಸಿದರು.

ಈ ಸಂದರ್ಭ ಕಾಪು ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕಾಪು ಪುರಸಭಾ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು, ಕಾಪು ಬಿಲ್ಲವರ ಸಹಾಯಕ ಸಂಘದ ಮಾಜಿ ಅಧ್ಯಕ್ಷ ಮಾಧವ ಆರ್ ಪಾಲನ್, ಮೂಳೂರು ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರಕಾಶ್ ಪೂಜಾರಿ, ಮೋಹನ್ ಕಲ್ಯಾ, ಮೂಳೂರು ಬಿಲ್ಲವ ಸಂಘದ ಸದಸ್ಯರು, ಕಾಪು ತಾಲೂಕು ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ ಸೆಪ್ಟಂಬರ್ 17 ರಂದು ಯೋಗಾಥಾನ್ ಕಾರ್ಯಕ್ರಮ

Posted On: 09-09-2022 11:06PM

ಉಡುಪಿ : ಜಿಲ್ಲೆಯಲ್ಲಿ ಸೆಪ್ಟಂಬರ್ 17 ರಂದು 15000 ಮಂದಿಯಿಂದ ಏಕಕಾಲದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸೂಚಿಸಿದರು. ಅವರು ಇಂದು ಉಡುಪಿ ತಾಲೂಕು ಕಚೇರಿ ಸಭಾಂಗಣದಲ್ಲಿ, ಯೋಗಾಥಾನ್ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರವು ಈಗಾಗಲೇ ಯೋಗವನ್ನು ಶಾಲಾ ಮತ್ತು ಕಾಲೇಜು ಶಿಕ್ಷಣದಲ್ಲಿ ಪಠ್ಯವನ್ನಾಗಿ ಸೇರ್ಪಡೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಸೆಪ್ಟಂಬರ್ 17 ರಂದು ಏಕಕಾಲದಲ್ಲಿ 5 ಲಕ್ಷ ಜನರಿಂದ ಯೋಗಾಸನವನ್ನು ಆಯೋಜಿಸಿದ್ದು, ಉಡುಪಿ ಜಿಲ್ಲೆಯಿಂದ 15000 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರಿ ನೀಡಲಾಗಿದೆ ಎಂದರು. ಮಣಿಪಾಲದ ಮಾಹೆ ಕ್ರೀಡಾಂಗಣದಲ್ಲಿ ಯೋಗಾಥಾನ್ ಆಯೋಜಿಸಲು ಈಗಾಗಲೇ ಸ್ಥಳ ನಿಗದಿಪಡಿಸಿದ್ದು, ಜಿಲ್ಲೆಯ 20 ಪ್ರೌಢಶಾಲೆ, 14 ಪದವಿ ಪೂರ್ವ ಕಾಲೇಜು, 11 ಪದವಿ ಕಾಲೇಜು, 5 ಐಟಿಐ, 5 ಪ್ಯಾರಾ ಮೆಡಿಕಲ್ ಕಾಲೇಜುಗಳಿಂದ ಕನಿಷ್ಠ 300 ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಶಾಲಾ-ಕಾಲೇಜುಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ 45 ನಿಮಿಷಗಳ ಕಾಲ ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಲಿದ್ದು, 150 ಕ್ಕೂ ಹೆಚ್ಚು ಯೋಗ ಶಿಕ್ಷಕರು ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಯೋಗಾಸನಗಳ ತರಬೇತಿ ನೀಡಲಿದ್ದು, ಯೋಗಾಥಾನ್ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಆನ್ಲೈನ್ನಲ್ಲಿ ನೊಂದಣಿ ಮಾಡುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿಗಳು, ಎಲ್ಲಾ ಸರ್ಕಾರಿ ಕಚೇರಿಗಳ ಸಿಬ್ಬಂದಿಗಳು ಹಾಗೂ ಶಿಕ್ಷಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಉಡುಪಿ ತಹಸೀಲ್ದಾರ್ ಶ್ರೀನಿವಾಸ ಮೂರ್ತಿ, ಡಿಡಿಪಿಐ ಶಿವರಾಜ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಲೀಡ್ ಕಾಲೇಜು ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಸೆಪ್ಟೆಂಬರ್ 11 : ರೋಟರಿ ಸಮುದಾಯ ದಳ ಇನ್ನಂಜೆ - ಪದಪ್ರಧಾನ ಸಮಾರಂಭ

Posted On: 09-09-2022 10:51PM

ಇನ್ನಂಜೆ : ರೋಟರಿ ಸಮುದಾಯ ದಳ ಇನ್ನಂಜೆ ಮಾತೃಸಂಸ್ಥೆ ರೋಟರಿ ಕ್ಲಬ್ ಶಂಕರಪುರ (ವಲಯ - 5 ರೋಟರಿ ಜಿಲ್ಲೆ 3182) ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಸೆಪ್ಟೆಂಬರ್ 11, ಆದಿತ್ಯವಾರ ಸಂಜೆ 6.30ಕ್ಕೆ ಇನ್ನಂಜೆಯ ದಾಸ ಭವನದಲ್ಲಿ ಜರಗಲಿದೆ.

ರೋಟರಿ ಕ್ಲಬ್, ಶಂಕರಪುರ ಅಧ್ಯಕ್ಷರಾದ ಗ್ಲ್ಯಾಡ್ಸನ್ ಕುಂದರ್ ಪದಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ‌ ಇನ್ನಂಜೆ ಸಿ.ಎ. ಬ್ಯಾಂಕ್‌ ಅಧ್ಯಕ್ಷರಾದ ರಾಜೇಶ್ ರಾವ್‌, ಆರ್.ಸಿ.ಸಿ. ಜಿಲ್ಲಾ ಪ್ರತಿನಿಧಿ ರೊ. ಜಿ. 3182 ನಾಗರಾಜ್ ಎಂ., ಝೋನಲ್ ಕೋ-ಆರ್ಡಿನೇಟರ್ ರೋನ್ - 5 ಗುರುರಾಜ್ ಭಟ್, ರೋಟರಿ ಶಂಕರಪುರ ಪೂರ್ವಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್, ರೋಟರಿ ಶಂಕರಪುರ ಪೂರ್ವ ಕಾರ್ಯದರ್ಶಿ ಜೆರಾಮ್ ರೊಡ್ರಿಗೆಸ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿರ್ವ : ಆರೋಗ್ಯ ಮಾತಾ ದೇವಾಲಯದಲ್ಲಿ ಮೊಂತಿ ಫೆಸ್ಟ್ ಆಚರಣೆ

Posted On: 09-09-2022 06:58PM

ಶಿರ್ವ : ಉಡುಪಿ ಪ್ರಾಂತ್ಯದಲ್ಲಿಯೇ ಅತಿ ದೊಡ್ಡದಾದ ಚರ್ಚ್ ಎಂಬ ಹೆಗ್ಗಳಿಕೆಯ ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಗುರುವಾರ ಕನ್ಯಾಮರಿಯಮ್ಮನ ಜನ್ಮದಿನ ಮೋಂತಿ ಪೇಸ್ಟ್ ಅನ್ನು ಕ್ರೈಸ್ತ ಬಾಂಧವರು ಭಯ ಭಕ್ತಿಯಿಂದ ಆಚರಿಸಿದರು.

ಪುಟ್ಟ ಮಕ್ಕಳು ಕನ್ಯಾಮರಿಯಮ್ಮನ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಆಯಾ ಗ್ರಾಮದ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ಚರ್ಚು ಒಳಗೆ ಕೊಂಡೊಯ್ದು ಬಳಿಕ ಪವಿತ್ರ ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

ಪವಿತ್ರ ಬಲಿ ಪೂಜೆಯ ಬಳಿಕ ಪ್ರತಿ ಕುಟುಂಬಕ್ಕೆ ತೆನೆ, ಕಬ್ಬು ಹಾಗೂ ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭ ಪ್ರಧಾನ ಗುರುಗಳಾದ ರೆ. ಫಾ ಡಾ. ಲೆಸ್ಲಿ ಡಿಸೋಜಾ ರವರು ಬಲಿ ಪೂಜೆ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭ ಫಾದರ್ ರೋಲ್ವಿನ್ ಅರ್ಹಾನಾ, ಫಾದರ್ ನೆಲ್ಸನ್ ಪೆರಿಸ್, ಡೆಕೋನ್ ಜಾನ್ಸನ್ ಪಿಂಟೊ, ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ೧೫೦೦ ಅಧಿಕ ಕ್ರೈಸ್ತ ಬಾಂಧವರು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದರು.