Updated News From Kaup

ಸೈಬ್ರಕಟ್ಟೆ ರೋಟರಿ ಕ್ಲಬ್ : ಪೋಲಿಯೋ ಪ್ಲಸ್ ಸೆಮಿನಾರ್

Posted On: 15-02-2022 06:09PM

ಉಡುಪಿ : ಸೈಬ್ರಕಟ್ಟೆ ರೋಟರಿ ಕ್ಲಬ್ ವತಿಯಿಂದ ವಲಯ ಮಟ್ಟದ ಪೋಲಿಯೋ ಪ್ಲಸ್ ಸೆಮಿನಾರ್ ಕಾರ್ಯಕ್ರಮ ಜರಗಿತು.

ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ರೋಟರಿ ಜಿಲ್ಲಾ ಪೊಲೀಯೋ ಪ್ಲಸ್ ಚೇರ್ಮನ್ ಡಾ.ಉಮೇಶ್ ಪುತ್ರನ್ ಮಾತನಾಡಿ, ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಬಹು ಮುಖ್ಯ ಪಾತ್ರ ವಹಿಸಿದೆ. ಪೋಲಿಯೋ ಲಸಿಕೆ ಗಾಗಿ ಹಲವು ಮಿಲಿಯನ್ ಡಾಲರ್ ಕೊಡುಗೆಯಾಗಿ WHO ಗೆ ನೀಡಿದೆ, ಪೋಲಿಯೋ ಅಭಿಯಾನ ಮತ್ತು ಪೋಲಿಯೋ ಮುಕ್ತ ದೇಶ ಮಾಡಲು ಶ್ರಮಿಸಿದ ಹಿರಿಯರನ್ನು ಸ್ಮರಿಸಿದ್ದಲ್ಲದೆ ಈ ಅಭಿಯಾನ ಇನ್ನೂ ಮುಂದೆ ಕೂಡ ಸತತ ನಡೆಸಬೇಕು ಅಂತ ಹೇಳಿದರು.

ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ ಸರಕಾರದ ಯೋಜನೆಯಲ್ಲಿ ರೋಟರಿ ಮಾತ್ರವಲ್ಲದೆ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸಿದರೆ ಯಶಸ್ಸು ನಿಶ್ಚಿತ ಅಂಥ ನುಡಿದರು. ಮಾಜಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಮಾತನಾಡಿ 1995 ರಿಂದ ಭಾರತದಲ್ಲಿ ಪೋಲಿಯೋ ಲಸಿಕೆ ಹಾಕುವ ಅಭಿಯಾನ ಪ್ರಾರಂಭವಾಗಿ 2011ರಲ್ಲಿ WHO ಯಾವುದೇ ಪೋಲಿಯೋ ಕೇಸ್ ರಿಪೋರ್ಟ್ ಆಗದ ಕಾರಣ ಭಾರತವನ್ನು ಪೋಲಿಯೋ ಮುಕ್ತ ದೇಶವಾಗಿ ಘೋಷಿಸಿತು. ಭಾರತ ಪೋಲಿಯೋ ಮುಕ್ತವಾಗಿದ್ದರು 5 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು ಅಲ್ಲದೆ ಆರೋಗ್ಯದ ಬಗ್ಗೆ ಯೋಜನೆಗಳನ್ನು ಹೇಗೆ ರೂಪಿಸಿಕೊಳ್ಳಬೇಕು ಮತ್ತು ಸರಿಯಾಗಿ ಕಾರ್ಯಗತವಾಗಬೇಕು ಲಸಿಕೆ ಮತ್ತು ಚುಚ್ಚುಮದ್ದನ್ನು ಸರಿಯಾಗಿ ಅವಶ್ಯಕತೆ ಇರುವವರಿಗೆ ಸಿಗಬೇಕು,ಅಂತ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಯು.ಪ್ರಸಾದ್ ಭಟ್ ವಹಿಸಿದ್ದು, ರೋಟರಿ ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಸೇನಾನಿಗಳಾದ ವಿಜಯಕುಮಾರ್ ಶೆಟ್ಟಿ ಮತ್ತು ಬ್ರಾನ್ ಡಿ ಸೋಜ, ಜೋನಲ್ ಟ್ರೈನರ್ ದೇವಾನಂದ್ ಉಪಸ್ಥಿತರಿದ್ದರು. ಪೋಲಿಯೋ ಪ್ಲಸ್ ಜೋನಲ್ ಕೋ ಆರ್ಡಿನೇಟರ್ ಡಾ.ಹರೀಶ್ ಕಂದಾವರ ಸ್ವಾಗತಿಸಿ, ಕಾರ್ಯದರ್ಶಿ ಅಣ್ಣಯ್ಯದಾಸ್ ಧನ್ಯವಾದ ಸಮರ್ಪಿಸಿದರು. ವರದರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಗರಡಿಮಜಲು ಅಂಗನವಾಡಿ ಕೇಂದ್ರಕ್ಕೆ ಆಸನಗಳ ಕೊಡುಗೆ

Posted On: 15-02-2022 05:47PM

ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ತನ್ನ ಸಾಮಾಜಿಕ ಸೇವಾ ಚಟುವಟಿಕೆಗಳಡಿ ಕೇಂದ್ರದ ಮಕ್ಕಳ ಉಪಯೋಗಕ್ಕಾಗಿ 25 ಆಸನಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕೇಂದ್ರದ ಕಾರ್ಯಕರ್ತೆ ಭಾರತಿಯವರು ಸಲ್ಲಿಸಿದ ಈ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಿ ಸದಾನಂದ ನಾಯ್ಕ್ ಅವರು ಈ ದೇಣಿಗೆಗೆ ಪ್ರಾಯೋಜಕತ್ವ ನೀಡಿ ಸಹಕರಿಸಿದ್ದರು.

ಕ್ಲಬ್ ನ ಅಧ್ಯಕ್ಷ ಶಂಭುಶಂಕರ್, ರೋಟರಿ ವಲಯ ಸೇನಾನಿ ಬ್ರಯಾನ್ ಡಿಸೋಜ, ಗ್ರಾಮ ಪಂಚಾಯಿತಿ ಸದಸ್ಯರಾದ ಜಯಂತಿ ವಿ ಕೋಟ್ಯಾನ್, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು ಮತ್ತು ಮಕ್ಕಳ ಪೋಷಕರುಗಳ ಉಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಕೊಡುಗೆಯನ್ನು ಹಸ್ತಾಂತರಿಸಿ ಶುಭ ಹಾರೈಕೆಗಳನ್ನು ಸಲ್ಲಿಸಿದರು. ಮಮತಾ ಶೆಟ್ಟಿ ಉಪಸ್ಥಿತರಿದ್ದರು.

ಬೈಂದೂರು : ನಾಡ ಗುಡ್ಡೆಅಂಗಡಿ ಕ್ಲಿನಿಕ್ನಲ್ಲಿ ಅಕ್ರಮ ಔಷಧಿ ದಾಸ್ತಾನು ವಶ

Posted On: 15-02-2022 05:28PM

ಬೈಂದೂರು : ಲೈಸೆನ್ಸ್ ಇಲ್ಲದೆ ತಮ್ಮ ಕ್ಲಿನಿಕ್ಕಿನಲ್ಲಿ ಅಲೋಪತಿ ಔಷಧಿ ದಾಸ್ತಾನು ಮಾಡಿಕೊಂಡಿದ್ದ ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕೆಲವು ಆಯುರ್ವೇದ ವೈದ್ಯರ ಕ್ಲಿನಿಕ್ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಡ್ರಗ್ ಕಂಟ್ರೋಲ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಈ ಹಿಂದೆ ಬೆಂಗಳೂರು ಪತ್ರಿಕೆಯೊಂದು ಕಾಲ್ತೋಡು ಸುಜಾತ ಕ್ಲಿನಿಕ್ ಮತ್ತು ಗೋಳಿಹೊಳಿ ಶ್ರೀ ದುರ್ಗ ಕ್ಲಿನಿಕ್ ಡಾಕ್ಟರ್ ಕ್ರಮಕಾಂಡದ ಸ್ಟಿಂಗ್ ಮಾಡಿ ಡಾಕ್ಟರ್ ಕ್ರಮ ಕೈಗೊಳ್ಳಿ ಎಂದು ಹೇಳಿದರು DHO ಆತನ ಒಂದು ಕ್ಲಿನಿಕ್ ಮುಚ್ಚಿಸಿದ ಹಾಗೆ ನಾಟಕ ಮಾಡಿ ಅವನ ವಿರುದ್ಧ ಕಾನೂನು ತೆಗೆದುಕೊಳ್ಳದೆ, ರಾಜಕೀಯ ಒತ್ತಡಕ್ಕೆ ಮಣಿದು ಆಯುರ್ವೇದ ಡಾಕ್ಟರ್ ಅಲೋಪತಿ ಔಷಧಗಳನ್ನು ಜನರಿಗೆ ನೀಡಿ ಅಲೋಪತಿ ದಾಸ್ತಾನು ಸ್ಟಾಕ್ ಇರಿಸಿದರು ಡಾಕ್ಟರ್ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಗೋಳಿಹೊಳೆ ಮತ್ತು ಕಾಲ್ತೋಡು ಗ್ರಾಮಸ್ಥರ ಆರೋಪ. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬೈಂದೂರು ತಾಲೂಕು ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಷಾ ಕ್ಲಿನಿಕ್ ಡಾ। ಸುರೇಶ್ ಕುಮಾರ್ ಶೆಟ್ಟಿಯವರ ಕ್ಲಿನಿಕ್ಕಿಗೆ ಆಗಮಿಸಿದ ADC ನಾಗರಾಜ್ ಕೆ.ವಿ ಅವರು ತಪಾಸಣೆ ನಡೆಸಿ, ಅಕ್ರಮ ದಾಸ್ತಾನು ಮಾಡಿದ್ದ ಸುಮಾರು 8ಲಕ್ಷಕ್ಕೂ ಮಿಕ್ಕಿದ ಅಲೋಪತಿ ಔಷಧಿಯನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜು ನಾಯ್ಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಉಪಸ್ಥಿತರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಅಕ್ರಮ ಔಷಧಿ ಮಾರಾಟ ಜಾಲ ವ್ಯವಸ್ಥಿತವಾಗಿ ನಡೆದಿತ್ತು. ಇದನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕು ವರದಿಗಾರರು ಬಯಲಿಗೆಳೆದಿದ್ದು ಗಮನಾರ್ಹ. ನಿನ್ನೆ ಸಹ ದಾಳಿಯ ವೇಳೆ ಮಾಧ್ಯಮ ಮಿತ್ರರು ಫೋಟೋ ಮತ್ತು ವಿಡಿಯೋ ಮಾಡುವಾಗ ಡಾಕ್ಟರ್ ಸುರೇಶ್ ಕುಮಾರ್ ಶೆಟ್ಟಿ ಮಾಧ್ಯಮದವರ ವಿಡಿಯೋನೆ ಮಾಡಲು ಹೊರಟಾಗ ADC ನಾಗರಾಜ್ ಕೆವಿಯವರು ಡಾಕ್ಟರ್ ಮೊಬೈಲ್ ತೆಗೆದುಕೊಂಡು ಚಿತ್ರೀಕರಿಸಿ ವಿಡಿಯೋನು ಡಿಲೀಟ್ ಮಾಡಿಸಿ ಖಡಕ್ ವಾರ್ನಿಂಗ್ ಸ್ಥಳದಲ್ಲೇ ನೀಡಿದ್ದಾರೆ. ಆದರೆ ಆ ಮಾಧ್ಯಮಗಳ ವರದಿಗಾರರಿಗೆ ಬೆದರಿಕೆ ಹಾಕಲಾಗುತ್ತಿದ್ದು ಪೊಲೀಸರು ಸೂಕ್ತ ರಕ್ಷಣೆ ನೀಡಬೇಕೆಂದು ಕೋರಲಾಗಿದೆ.

ಮೇ 14 : ಕಾಪು ಪಿಲಿ ಕೋಲ

Posted On: 14-02-2022 07:57PM

ಕಾಪು : ಶ್ರೀ ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನ ಪಡುಗ್ರಾಮ, ಕಾಪು ಇದರ ನೇಮೋತ್ಸವದ ನಿಮಿತ್ತ ಇಂದು ಕಾಪುವಿನಲ್ಲಿ ಸಭೆ ಜರಗಿತು.

ಗುತ್ತು ಮನೆತನದವರು, ಹದಿನಾರು ಕಾಣಿಕೆ ಮನೆಯವರು, ದೈವಸ್ಥಾನದ ಸರ್ವ ಸದಸ್ಯರ ಕೂಡುವಿಕೆಯಲ್ಲಿ ನೇಮೋತ್ಸವವನ್ನು ಮೇ 10ರಿಂದ ಮೇ 14ರವರೆಗೆ ನಡೆಸುವುದೆಂದು ತೀರ್ಮಾನಿಸಲಾಯಿತು.

ಮೇ 14 ಶನಿವಾರದಂದು ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ ನಡೆಯಲಿದೆ.

ಫೆಬ್ರವರಿ 20 : ಗುರ್ಮೆ ಗೋ ವಿಹಾರ ಲೋಕಾರ್ಪಣೆ

Posted On: 13-02-2022 05:44PM

ಕಾಪು : ತಾಲೂಕಿನ ಗುರ್ಮೆ ಫೌಂಡೇಶನ್ ಪದ್ಮಶ್ರೀ, ಕಳತ್ತೂರು ಗುರ್ಮೆ, ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ ನಾಲ್ಕನೇ ಪುಣ್ಯತಿಥಿಯ ಪ್ರಯುಕ್ತ ಗುರ್ಮೆ ಗೋ ವಿಹಾರ ಲೋಕಾರ್ಪಣೆಯು ಫೆಬ್ರವರಿ 20 ರಂದು ಸಂಜೆ 4 ಗಂಟೆಗೆ ಕಳತ್ತೂರು ಗುರ್ಮೆ ಇಲ್ಲಿ ಜರಗಲಿದೆ.

ಕೀರ್ತನ - ಸಾಂತ್ವನ - ಯಕ್ಷಗಾನ ಕಾರ್ಯಕ್ರಮದ ಅಂಗವಾಗಿ ಸಂಜೆ 4ಕ್ಕೆ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ಬಳಗ, ಸಂದೇಶ ಮತ್ತು ಬಳಗ ಮಂಗಳೂರು ಇವರಿಂದ ಭಜನಾ ಸಂಕೀರ್ತನೆ.

ಸಂಜೆ 4:30 ಕ್ಕೆ ಸಭಾಕಾರ್ಯಕ್ರಮ, 6:30 ಕ್ಕೆ ಭಜನಾ ಸಂಕೀರ್ತನೆ, 8 ರಿಂದ ಶ್ರೀಗುರು ನರಸಿಂಹ ದಶಾವತಾರ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ದಕ್ಷಯಜ್ಞ - ರಾಜಾ ರುದ್ರಕೋಪ ಎಂಬ ಕಾಲಮಿತಿ ಯಕ್ಷಗಾನ ಬಯಲಾಟ ಜರಗಲಿದೆ.

ಉದ್ಘಾಟನೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಸ್ವರ್ಣ ಪೀಠಿಕಾಪುರ ಗೌರಿ ಗದ್ದೆಯ ವಿನಯ ಗುರೂಜಿ, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬೆಂಗಳೂರು ಎಂಆರ್ಜಿ ಗ್ರೂಪ್ ಚೆಯರ್ರ್ಮನ್ ಕೆ. ಪ್ರಕಾಶ್ ಶೆಟ್ಟಿ, ಮೂಡಬಿದ್ರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಿಡಿಗೇಡಿಗಳಿಂದ ಸಾವನ್ನಪ್ಪಿದ ಮಂಗಗಳ ಅಂತ್ಯಸಂಸ್ಕಾರ ನೆರವೇರಿಸಿದ ವಿ.ಹಿಂ.ಪ. ಭಜರಂಗದಳ ಮೂಡುಬೆಳ್ಳೆ ಘಟಕ

Posted On: 13-02-2022 04:56PM

ಶಿರ್ವ : ಕಿಡಿಗೇಡಿಗಳು ಮಂಗಗಳಿಗೆ ವಿಷವುಣಿಸಿ ಅವುಗಳು ಸಾವನ್ನಪ್ಪುವಂತೆ ಮಾಡಿದ ಘಟನೆ ಮೂಡುಬೆಳ್ಳೆಯಲ್ಲಿ ನಡೆದಿದೆ.

ಸಾವನ್ನಪ್ಪಿದ ಮಂಗಗಳಿಗೆ ಕ್ರಮಪ್ರಕಾರವಾಗಿ ಅಂತ್ಯಸಂಸ್ಕಾರವನ್ನು ವಿಶ್ವಹಿಂದೂ ಪರಿಷತ್ ಭಜರಂಗದಳ ಮೂಡುಬೆಳ್ಳೆಯ ಕಾರ್ಯಕರ್ತರು ಮಾಡಿದರು.

ಈ ಸಂದರ್ಭದಲ್ಲಿ ವಿ,ಹಿಂ,ಪ ಶಿರ್ವ ವಲಯಾಧ್ಯಕ್ಷರಾದ ವಿಖ್ಯಾತ ಭಟ್, ಭಜರಂಗದಳ ಮೋಕ್ಷಗಿರಿ ಘಟಕದ ಸಂಚಾಲಕ ನಿಶಾಂತ್ ಪೂಜಾರಿ, ನವೀನ್ ಶೆಟ್ಟಿ ನೆಲ್ಲಿಕಟ್ಟೆ, ಮಂಜುನಾಥ ತಿರ್ಲಪಲ್ಕೆ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಉಡುಪಿ : ಫೆಬ್ರವರಿ 14ರ ಬೆಳಿಗ್ಗೆ 6ರಿಂದ 19ರ ಸಂಜೆ 6ರವರೆಗೆ 144 ಸೆಕ್ಷನ್ ಜಾರಿ

Posted On: 13-02-2022 11:14AM

ಉಡುಪಿ : ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಜಾಬ್ - ಕೇಸರಿ ಶಾಲು ವಿವಾದದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಫೆಬ್ರವರಿ 14ರ ಬೆಳಿಗ್ಗೆ 6ರಿಂದ 19ರ ಸಂಜೆ 6ಗಂಟೆಯವರೆಗೆ ಕಲಂ 144 ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶಿಸಿದ್ದಾರೆ.

ಇದರ ಅನ್ವಯ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಸುತ್ತ ಮುತ್ತಲು 200ಮೀ ಪ್ರದೇಶವನ್ನು ದಂಡ ಪ್ರಕ್ರಿಯೆ ಸಂಹಿತೆ ಕಲಂ 144ರ ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಈ ನಿಷೇದಾಜ್ಞೆ ಜಾರಿ ಇರುವ ಅವಧಿಯಲ್ಲಿ ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಭಂಧಿಸಿದೆ. ಯಾವುದೇ ವ್ಯಕ್ತಿಯ ಜಾತಿ/ಧರ್ಮ/ಕೋಮು/ಪಂಥಗಳಿಗೆ ಅಥವಾ ಸಾರ್ವಜನಿಕ ನೈತಿಕತೆಗೆ ಬಾಧಕ ಉಂಟು ಮಾಡಬಹುದಾದಂತಹ ಚಟುವಟಿಕೆಗಳನ್ನು ನಿಷೇಧಿಸಿದೆ. ಸರ್ಕಾರಿ ಸಂಸ್ಥೆಗಳು, ಸಂಘಟನೆಗಳು ಹಾಗೂ ಕಾರ್ಯನಿರತ ಅಧಿಕಾರಿ/ಸಿಬ್ಬಂಧಿಗಳ ವಿರುದ್ಧ ನಿಂಧಿಸುವಂತಹ ಅವಹೇಳನಕಾರಿಯಂತಹ ಯಾವುದೇ ಘೋಷಣೆಗಳು/ಭಾಷಣಗಳು ಪ್ರಕಟಣೆಗಳು/ ಅವಾಚ್ಯ ಶಬ್ದಗಳ ಬಳಕೆ/ಪ್ರಚೋದನಾಕಾರಿ ಭಾಷಣಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ. ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ಕೋಲುಗಳು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯುವುದನ್ನು ನಿಷೇಧಿಸಿದೆ. ಪಟಾಕಿಗಳನ್ನು ಸಿಡಿಸುವುದು, ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯುವುದನ್ನು ನಿಷೇಧಿಸಿದೆ. ಯಾವುದೇ ರೀತಿಯ ಪ್ರತಿಭಟನೆ, ವಿಜಯೋತ್ಸವ ಸಾರ್ವಜನಿಕ ಮೆರವಣಿಗೆ, ರ್ಯಾಲಿ, ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಿದೆ. ಕಲ್ಲುಗಳನ್ನು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುನ್ನು ನಿಷೇಧಿಸಿದೆ. ವ್ಯಕ್ತಿಗಳ ಅಥವಾ ಅವರ ಶವಗಳ ಅಥವಾ ಆಕೃತಿಗಳ ಅಥವಾ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್.ಇ.ಡಿ ಬಳಸಿ ಪ್ರದರ್ಶನ ನಡೆಸುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡುವುದನ್ನು ನಿಷೇಧಿಸಿದೆ. ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಾಧೆಯನ್ನುಂಟು ಮಾಡಬಹುದಾದ ಅಥವಾ ರಾಜ್ಯದ ಭದ್ರತೆಯನ್ನು ಕುಗ್ಗಿಸಬಹುದಾದದ ಅಪರಾಧವನ್ನು ಮಾಡಲು ಪುಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಮಾಡುವುದು ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣೆಗಳನ್ನು ಪ್ರಯೋಗ ಮಾಡುವುದು, ಮತ್ತು ಚಿತ್ರಗಳನ್ನು ಸಂಕೇಗಳನ್ನು ಭಿತ್ತಿ ಪತ್ರಗಳನ್ನು ಅಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.

ಬಸ್ಸು ನಿಲ್ದಾಣದಲ್ಲಿ ಅನಾರೋಗ್ಯದಿಂದ ಮಲಗಿದ್ದ ಅನಾಥ ಮಹಿಳೆಯನ್ನು ರಕ್ಷಿಸಿದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ

Posted On: 12-02-2022 11:27PM

ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ಬಿ.ಸಿ ರೋಡು ಲಯನ್ಸ್ ಬಸ್ಸು ನಿಲ್ದಾಣದಲ್ಲಿ ಅನಾರೋಗ್ಯದಿಂದ ಮಲಗಿದ್ದ 28 ವರುಷದ ರೇಖಾ ಎಂಬ ಮಹಿಳೆಯನ್ನು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮುಂಜಾನೆಯಿಂದ ಬಸ್ಸುನಿಲ್ದಾಣದಲ್ಲಿ ಮಹಿಳೆಯೊರ್ವರು ಮಲಗಿರುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ಹೋಗಿ ಮಹಿಳೆಯನ್ನು ವಿಚಾರಿಸಿದಾಗ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದನ್ನು ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಪಡೆದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆ ವೈಲೆಟ್ ಕಸ್ತಲಿನೊ, ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಉಮೇಶ್ ರಾವ್ ಇವರ ಸಹಕಾರದಿಂದ ನಾಗರಿಕ ಸಮಿತಿಯ ಅಂಬುಲೆನ್ಸ್ ವಾಹನದಲ್ಲಿ ಉಡುಪಿ ಜಿಲ್ಲಾಸ್ಷತ್ರೆಯಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

ಮೂಲತ: ದಾವಣಗೆರೆಯವಳು ಎಂದು ಮಾಹಿತಿ ನೀಡಿದ್ದು ತನ್ನ ಗಂಡ ತನ್ನನ್ನು ಎಲ್ಲೊ ಬಿಟ್ಟು , ತನ್ನ ಮೊಬೈಲ್ ಸಹಿತ ಹೋಗಿರುತ್ತಾನೆ, ತಾನು ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದೆ ಎಂಬ ಮಾಹಿತಿ ನೀಡಿದ್ದಾಳೆ.

ಬಿಜೆಪಿ ಕಾಪು ವಿಧಾನ ಸಭಾ ಕ್ಷೇತ್ರ : ಸಮರ್ಪಣಾ ದಿನ

Posted On: 12-02-2022 08:33PM

ಕಾಪು : ಪಂಡಿತ್ ದೀನ ದಯಾಳ್ ಇವರ ಬಲಿದಾನ ದಿನವಾದ ಇಂದು ಸಮರ್ಪಣಾ ದಿನವನ್ನಾಗಿ ಕಾಪು ಕ್ಷೇತ್ರದ 8 ಮಹಾಶಕ್ತಿಕೇಂದ್ರಗಳಾದ ಪಡುಬಿದ್ರಿ, ಉಚ್ಚಿಲ, ಶಿರ್ವ, ಕಾಪು, ಕುರ್ಕಾಲು, ಉದ್ಯಾವರ, 80 ಬಡಗುಬೆಟ್ಟು ಹಾಗೂ ಪೆರ್ಡೂರಿನಲ್ಲಿ ಆಚರಿಸಲಾಯಿತು.

ಪಂಡಿತ್ ದೀನ್ ದಯಾಳ್ ಇವರ ಕುರಿತು ಉಪನ್ಯಾಸ ನೀಡಲಾಯಿತು. ಪಕ್ಷದ ವಿವಿಧ ಸ್ತರದ ನಾಯಕರುಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ

Posted On: 11-02-2022 11:42PM

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ಕೈಗಾರಿಕೆ ಭದ್ರತಾ ಪಡೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ.

ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಾರ್ಚ್ 3 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

63 ಹುದ್ದೆಗಳ ಪೈಕಿ ಪುರುಷ ಅಭ್ಯರ್ಥಿಗಳಿಗೆ 40, ಮಹಿಳೆಯರಿಗೆ 12, ಸೇವೆಯಲ್ಲಿರುವವರಿಗೆ 9 ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ 2 ಹುದ್ದೆಯನ್ನು ಮೀಸಲಿಡಲಾಗಿದೆ.

ವಯೋಮಿತಿ : ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಹಾಗೂ ಗರಿಷ್ಠ ವಯೋಮಿತ 26 ವರ್ಷ ಎಂದು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 28 ವರ್ಷಗಳಾಗಿವೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ CLICK HERE.. ಗೆ ಭೇಟಿ ನೀಡಬಹುದು.