Updated News From Kaup
ಯುವವಾಹಿನಿ ಕಾಪು ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ
Posted On: 12 Jul 2022, 07:10 PM
ಕಾಪು : ಪರಿಸರದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಯುವವಾಹಿನಿ ಕಾಪು ಘಟಕದ ವತಿಯಿಂದ ಕಾಪು ಬಿಲ್ಲವರ ಸಹಾಯಕ ಸಂಘದ ಸಭಾಭವನದಲ್ಲಿ ಸನ್ಮಾನಿಸಲಾಯಿತು. ಕಾಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡ 90% ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ. ಕಾಪು ಯುವವಾಹಿನಿ ಘಟಕದ ಅಧ್ಯಕ್ಷ ಸಚಿನ್ ಉಚ್ಚಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ದೀಪಕ್ ಕುಮಾರ್ ಎರ್ಮಾಳು ಅಭಿನಂದನಾ ಭಾಷಣ ಮಾಡಿದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ನೇಹ ಜೆ. ಎರ್ಮಾಳ್, ಆಶಿಕಾ ಕಾಪು, ನಿಷ್ಮಾ ಆರ್. ಕಾಪು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಕ್ಷತಾ ಕಾಪು, ಅನುಷ್ಕಾ ಕಾಪು, ಚೇತನ್ ಕಾಪು, ಭಾವಿಕ್ ಕಾಪು, ಸಮೀಕ್ಷಾ ಎರ್ಮಾಳ್ ಅವರನ್ನು ಸಮ್ಮಾನಿಸಲಾಯಿತು. ಕಾಪು ಬಿಲ್ಲವರ ಸಹಾಯಕ ಸಂಘದ ಉಪಾಧ್ಯಕ್ಷರುಗಳಾದ ಮಧು ಪಾಲನ್, ಸಕೇಂದ್ರ ಸುವರ್ಣ, ಐತಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಸಾಲಿಯಾನ್, ಯುವವಾಹಿನಿ ಕಾಪು ಘಟಕದ ಉಪಾಧ್ಯಕ್ಷರಾದ ಶಶಿಧರ್ ಸುವರ್ಣ, ಭವಾನಿ ಶೇಖರ್, ಕೋಶಾಧಿಕಾರಿ ಸೂರ್ಯ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು. ಯುವವಾಹಿನಿ ಕಾಪು ಘಟಕದ ನಿಕಟ ಪೂರ್ವ ಅಧ್ಯಕ್ಷೆ ಸೌಮ್ಯ ರಾಕೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬೋಳ : ದೇವಳದ ಮೂರ್ತಿ, ನಗದು ಕಳವು
Posted On: 11 Jul 2022, 07:25 PM
ಕಾರ್ಕಳ : ತಾಲೂಕು ಬೋಳ ಗ್ರಾಮದ ಬೋಳ ಕೋಡಿಯಲ್ಲಿರುವ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೂರ್ತಿ, ನಗದು, ಡಿವಿಆರ್ ನ್ನು ಕಳವುಗೈದ ಪ್ರಕರಣ ನಡೆದಿದೆ. ಕಳ್ಳರು ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳ ಕೋಡಿಯಲ್ಲಿರುವ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಮರದ ಮತ್ತು ಕಬ್ಬಿಣದ ಬಾಗಿಲುಗಳಿಗೆ ಹಾಕಿದ ಬೀಗಗಳನ್ನು ಯಾವುದೋ ಸಲಕರಣೆಯಿಂದ ಮುರಿದು ಒಳ ಪ್ರವೇಶಿಸಿ, ದೇವಸ್ಥಾನದ ಗರ್ಭಗುಡಿಯ ಬಾಗಿಲಗೆ ಹಾಕಿದ ಬೀಗವನ್ನು ಯಾವುದೇ ಸಲಕರಣೆಯಿಂದ ಮುರಿದು ದೇವರ ಪೀಠದಲ್ಲಿ ಇರಿಸಿದ್ದ ಪುರಾತನ ಪಂಚಲೋಹದ ಬಲಿ ಮೂರ್ತಿ, ಗಣಪತಿ ಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಅದರೊಳಗೆ ಇರಿಸಿದ್ದ ಸುಮಾರು 5,000/- ರೂಪಾಯಿ ಮೌಲ್ಯದ ಗಣಪತಿಯ ಬೆಳ್ಳಿಯ ಮುಖವಾಡ, ತೀರ್ಥ ಮಂಟಪದ ಬಳಿ ಇರಿಸಿದ್ದ ಕಬ್ಬಿಣದ ಕಾಣಿಕೆ ಡಬ್ಬಿಯ ಬಾಗಿಲನ್ನು ಯಾವುದೋ ಸಲಕರಣೆಯಿಂದ ಮೀಟಿ ತೆರೆದು, ಅದರೊಳಗೆ ಇದ್ದ ನಗದು ಅಂದಾಜು 45,000-50,000 ರೂಪಾಯಿಗಳನ್ನು (ನೋಟುಗಳು ಮಾತ್ರ) ಹಾಗೂ ದೇವಸ್ಥಾನ ಕಛೇರಿಯ ಒಳಗೆ ಅಳವಡಿಸಿದ್ದ ಸುಮಾರು 9000/- ರೂಪಾಯಿ ಮೌಲ್ಯದ HIK VISION ಕಂಪೆನಿಯ DVR ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶ್ರೀನಿವಾಸ ಭಟ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆಯಿಂದ ಹಾನಿಗೊಳಗಾದ ಭತ್ತದ ಬೆಳೆಗೆ ಶೀಘ್ರ ಪರಿಹಾರ ಒದಗಿಸಿ : ಸಚಿವೆ ಶೋಭಾ ಕರಂದ್ಲಾಜೆ
Posted On: 11 Jul 2022, 06:37 PM
ಉಡುಪಿ : ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಭಿತ್ತನೆ ಮಾಡಿದ ಭತ್ತದ ಬೆಳೆಯು ಹಾನಿಯಾಗಿದ್ದು, ರೈತರಿಗೆ ಹಾನಿಯ ಮೊತ್ತವನ್ನು ಶೀಘ್ರದಲ್ಲಿಯೇ ಒದಗಿಸಬೇಕು. ಅವರು ಮತ್ತೊಮ್ಮೆ ಭಿತ್ತನೆ ಮಾಡಲು ಅಗತ್ಯಕ್ಕನುಗುಣವಾಗಿ ಭಿತ್ತನೆ ಬೀಜವನ್ನು ಸಮರ್ಪಕವಾಗಿ ವಿತರಣೆ ಮಾಡಲು ಮುಂದಾಗಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂಬಂಧಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಜೂನ್ ನಲ್ಲಿ ವಾಡಿಕೆ ಮಳೆಗಿಂತ ಶೇ.31 ರಷ್ಟು ಕಡಿಮೆ ಮಳೆಯಾಗಿ ಜುಲೈ 1 ರಿಂದ ಈವರೆಗೆ ವಾಡಿಕೆ ಮಳೆಗಿಂತ ಶೇ.136 ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಳೆದ ವರ್ಷದಲ್ಲಿ ಕುಂಠಿತ ಮಳೆಯಿಂದಾಗಿ ಭಿತ್ತನೆ ಕಾರ್ಯಗಳು ನಿಗದಿತ ಪ್ರಮಾಣದಲ್ಲಿ ಆಗದೇ ಜೂನ್ ಕೊನೆಯ ವಾರದಲ್ಲಿ ಹಾಗೂ ಜುಲೈ ಮೊದಲ ವಾರದಲ್ಲಿ ಭಿತ್ತನೆ ಕಾರ್ಯಗಳು ಚುರುಕುಗೊಂಡಿದ್ದು, ಇದುವರೆಗೆ 13526 ಹೆಕ್ಟೇರ್ ಭಿತ್ತನೆ ಆಗಿದ್ದು, ಕಳೆದ 4-5 ದಿನಗಳಿಂದ ಸುರಿದ ಹೆಚ್ಚಿನ ಮಳೆಯಿಂದಾಗಿ ಅಂದಾಜು 1300 ಹೆಕ್ಟೇರ್ಗೂ ಅಧಿಕ ಬೆಳೆಹಾನಿ ಉಂಟಾಗಿದೆ ಎಂದರು. ಮಳೆಯ ಪ್ರಮಾಣ ತಗ್ಗಿದ ನಂತರ ಬೆಳೆಹಾನಿಯನ್ನು ನಿಖರವಾಗಿ ಗುರುತಿಸಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಒದಗಿಸುವುದರ ಜೊತೆಗೆ ಸ್ಥಳೀಯವಾಗಿ ಬೇಡಿಕೆಯಿರುವ ಎಂ.ಓ.4 ಭಿತ್ತನೆ ಬೀಜವನ್ನು ರೈತರಿಗೆ ಸಹಾಯಧನದ ಅಡಿಯಲ್ಲಿ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮಳೆಯಿಂದಾಗಿ ಕಡಲಕೊರೆತ ಉಂಟಾಗಿ ಸಮುದ್ರ ತೀರದಲ್ಲಿರುವ ಮೀನುಗಾರರಲ್ಲಿ ಆತಂಕ ಉಂಟಾಗಿದೆ. ಕಡಲ ಕೊರೆತ ಉಂಟಾಗದಂತೆ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಬೇಕು. ಪ್ರಸ್ತುತ ಎನ್.ಡಿ.ಆರ್.ಎಫ್ ನಿಯಮಾವಳಿಯಲ್ಲಿ ಕಡಲ ಕೊರೆತ ಕಾಮಗಾರಿಗಳಿಗೆ ಅವಕಾಶವಿರುವುದಿಲ್ಲ. ಇದನ್ನು ಈ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಮಾಹಿತಿ ನೀಡಿದಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು. ಅತಿಯಾದ ಮಳೆಯಿಂದಾಗಿ ರಸ್ತೆಗಳು, ಶಾಲೆಗಳು, ಅಂಗನವಾಡಿ, ಸರ್ಕಾರಿ ಕಟ್ಟಡಗಳು, ಸೇತುವೆಗಳು ಸೇರಿದಂತೆ ಮತ್ತಿತರ ಶಾಶ್ವತ ಕಾಮಗಾರಿಗಳಿಗೆ ಹಾನಿ ಉಂಟಾಗಿದ್ದು, ಇದರ ಹಾನಿಯ ಮೊತ್ತವನ್ನು ನಿಖರವಾಗಿ ಗುರುತಿಸಿ ಸರ್ಕಾರಕ್ಕೆ ವರದಿ ನೀಡಬೇಕಂದು ಸೂಚನೆ ನೀಡಿದ ಅವರು, ಗ್ರಾಮೀಣ ಭಾಗದ ರಸ್ತೆಗಳನ್ನು ಜಿಲ್ಲಾ ಪಂಚಾಯತ್ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿದಲ್ಲಿ ಶೀಘ್ರದಲ್ಲಿ ದುರಸ್ತಿಗೆ ಅನುಕೂಲವಾಗಲಿದೆ ಎಂದರು. ಗ್ರಾಮೀಣ ಭಾಗದಲ್ಲಿ ಮೊಬೈಲ್ ಸಿಗ್ನಲ್ಗಳು ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಟವರ್ಗಳಿಗೆ ವಿದ್ಯುಚ್ಛಕ್ತಿ ಸರಬರಾಜಿನ ಕೊರತೆಯಿಂದಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯ ಬಾಕಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಜಿಲ್ಲಾಡಳಿತದಿಂದ ಗುರುತಿಸಲಾಗಿರುವ ಅಪಘಾತ ಸ್ಥಳಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಂಡು ವಾಹನಗಳು ಸುರಕ್ಷಿತವಾಗಿ ಚಾಲನೆ ಆಗುವಂತೆ ನೋಡಿಕೊಳ್ಳಬೇಕು. ಕಾಲ ಕಾಲಕ್ಕೆ ರಸ್ತೆ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯ ಸೇರ್ಪಡೆಗೆ ಶಿಕ್ಷಣ ಸಚಿವರಿಂದ ಅಧಿಕಾರಿಗಳಿಗೆ ಸೂಚನೆ
Posted On: 11 Jul 2022, 06:15 PM
ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಿದ್ದು ಅದರ ಬದಲು ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸುವಂತೆ ಹಲವು ಪ್ರತಿಭಟನೆಗಳು ನಡೆದಿತ್ತು. ಇಂದು ಸಚಿವರಾದ ವಿ ಸುನಿಲ್ ಕುಮಾರ್ ಮತ್ತು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದು ಅಧಿಕಾರಿಗಳಿಗೆ ಕನ್ನಡ ಭಾಷೆಯಲ್ಲಿ ಅಳವಡಿಸಿದ್ದನ್ನು ಕೈ ಬಿಟ್ಟು ತಕ್ಷಣ ಸಮಾಜ-ವಿಜ್ಞಾನ ವಿಷಯದ ಪಠ್ಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ವಿಷಯ ಅಳವಡಿಸುವಂತೆ ಸರ್ಕಾರಿ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮೂಳೂರು : ಕಡಲ್ಕೊರೆತ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ
Posted On: 11 Jul 2022, 04:08 PM
ಕಾಪು : ಇಲ್ಲಿನ ಮೂಳೂರು ಭಾಗದ ಕಡಲ್ಕೊರೆತ ಸ್ಥಳಕ್ಕೆ ಕೇಂದ್ರ ಸಚಿವೆ ಮತ್ತು ಉಡುಪಿ ಜಿಲ್ಲಾ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ , ಇಲಾಖಾ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.
ಕಾಪು : ಅಕ್ರಮ ಗೋ ಮಾಂಸ ಮಾರಾಟ : ಇಬ್ಬರು ಪೋಲಿಸ್ ವಶಕ್ಕೆ
Posted On: 11 Jul 2022, 03:23 PM
ಕಾಪು : ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಮಲ್ಲಾರು ಗ್ರಾಮದ ಕೋಟೆ ರಸ್ತೆಯ ರೈಲ್ವೆ ಸೇತುವೆ ಬಳಿ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀಶೈಲ ಡಿ. ಎಮ್ ಇವರು ಕರ್ತವ್ಯದಲ್ಲಿರುವ ಸಮಯ ಮಲ್ಲಾರು ಗ್ರಾಮದ ಪಕೀರ್ಣ ಕಟ್ಟೆಯಿಂದ ಮೂಳೂರು ಕಡೆಗೆ ಕಪ್ಪು ಬಣ್ಣದ ಹೊಂಡಾ ಆಕ್ಟಿವಾ ಸ್ಕೂಟರ್ ನಲ್ಲಿ 2 ಜನ ವ್ಯಕ್ತಿಗಳು ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಮಲ್ಲಾರು ಗ್ರಾಮದ ಕೋಟೆ ರಸ್ತೆಯ ರೈಲ್ವೆ ಸೇತುವೆ ಬಳಿ ಹೋಗಿ ನಿಂತು ವಾಹನಗಳನ್ನು ಪರಿಶೀಲಿಸುತ್ತಿರುವಾಗ ಸ್ಕೂಟರ್ ನ್ನು ನಿಲ್ಲಿಸುವಂತೆ ಸೂಚನೆ ನೀಡಿ ತಡೆದು ನಿಲ್ಲಿಸಿ ಸ್ಕೂಟರ್ ನ್ನು ಪರಿಶೀಲಿಸಿದಾಗ ಸ್ಕೂಟರ್ ನ ಮುಂಭಾಗದಲ್ಲಿ ಹಳದಿ ಮತ್ತು ಹಸಿರು ಬಣ್ಣದ ಪಾಲಿಥಿನ್ ಚೀಲದಲ್ಲಿ ಸುಮಾರು 15 ಕೆ.ಜಿಯಷ್ಟು ಮಾಂಸವಿದ್ದು, ಸ್ಕೂಟರ್ ಸವಾರ ಹಾಗೂ ಸಹ ಸವಾರನಲ್ಲಿ ಯಾವ ಮಾಂಸ ಎಂಬ ಬಗ್ಗೆ ವಿಚಾರಿಸಿದಾಗ ದನದ ಮಾಂಸ ಎಂದು ತಿಳಿದು ಬಂದಿದೆ. ಹುಸೇನಬ್ಬ ಮತ್ತು ಶಂಶುದ್ಧೀನ್ ಪೋಲಿಸರು ವಶಪಡಿಸಿಕೊಂಡ ಆರೋಪಿಗಳು. ಇವರುಗಳು ಮಾಂಸ ಮಾರಾಟ ಮಾಡಲು ಯಾವುದೇ ಪರವಾನಗಿ ಹೊಂದಿಲ್ಲ ಹಾಗೂ ತಾವುಗಳು ಬೀದಿ ಬದಿಯಲ್ಲಿನ ದನವನ್ನು ಕಳವು ಮಾಡಿ, ಹಾಡಿಯಲ್ಲಿ ಮಾಂಸ ಮಾಡಿ ಮನೆ ಮನೆಗೆ ಮಾರಾಟ ಮಾಡುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಂದಿಕೂರು : ರಸ್ತೆ ಹೊಂಡ - ಬಾಳೆಗಿಡ ನೆಟ್ಟು ಪ್ರತಿಭಟನೆ
Posted On: 11 Jul 2022, 02:41 PM
ಪಡುಬಿದ್ರಿ : ಇಲ್ಲಿನ ರಾಜ್ಯ ಹೆದ್ದಾರಿಯಾದ ಕಾರ್ಕಳ ರಸ್ತೆಯ ನಂದಿಕೂರು ರೈಲ್ವೆ ಮೇಲ್ಸೇತುವೆಯಲ್ಲಿ ಹೊಂಡಮಯವಾಗಿದ್ದು ಸಂಚಾರಕ್ಕೆ ತೊಂದರೆಯಾಗಿ ಸಂಬಂಧಪಟ್ಟ ಇಲಾಖೆಗಳ ಮೌನದಿಂದ ಬೇಸತ್ತ ಸ್ಥಳೀಯರು ಬಾಳೆಗಿಡನೆಟ್ಟು ಜುಲೈ 10 ರಂದು ಪ್ರತಿಭಟಿಸಿದ್ದಾರೆ. ಇಲ್ಲಿಯ ಹೊಂಡದಿಂದ ತೊಂದರೆಯಾಗಿದ್ದು ಮಳೆಗಾಲ ಆರಂಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹೊಂಡ ಮುಚ್ಚುವ ಕಾರ್ಯ ನಡೆಸಲಾಗಿದ್ದು, ಇದೀಗ ಮತ್ತೆ ಬೃಹತ್ ಗಾತ್ರದ ಹೊಂಡ ಬಿದ್ದು ಸಂಚಾರಕ್ಕೆ ತೊಡಕಾಗಿದೆ. ಮಳೆಯಿಂದ ಸೇತುವೆಯಲ್ಲಿ ನೀರು ಕೂಡಾ ಸಮರ್ಪಕವಾಗಿ ಹರಿಯದೆ ಹೊಂಡ ದಲ್ಲಿ ನಿಂತು ಜನ ಹಾಗೂ ವಾಹನ ಸಂಚಾರಿಗಳಿಗೆ ಅಪಾಯ ತಂದೊಡ್ಡು ತ್ತಿದೆ. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಬಾಳೆಗಿಡ ನೆಟ್ಟು ಅಸಮಾಧಾನ ಹೊರಹಾಕಿದ್ದಾರೆ.
ಹೆಜಮಾಡಿ : ತೆಂಗಿನಮರ ಬಿದ್ದು ಮನೆಗೆ ಹಾನಿ
Posted On: 11 Jul 2022, 02:29 PM
ಹೆಜಮಾಡಿ : ಇಲ್ಲಿನ ಪಂಚಾಯತ್ ವ್ಯಾಪ್ತಿಯ ಹೆಜಮಾಡಿ ಕೋಡಿ 7ನೇ ವಾರ್ಡಿನಲ್ಲಿ ಪಾರ್ವತಿ ಪುತ್ರನ್ ಅವರ ಮನೆಗೆ ಜುಲೈ 10ರಂದು ತೆಂಗಿನ ಮರ ಬಿದ್ದು ಸುಮಾರು ರೂ.50,000 ಅಂದಾಜು ನಷ್ಟವಾಗಿರುತ್ತದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಕರ್ಕೇರ, ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಗ್ರಾಮ ಕರಣಿಕರಾದ ಶ್ರೀಕಾಂತ್, ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಸದಸ್ಯರಾದ ಸುಜಾತಾ, ನಳಿನಾಕ್ಷಿ, ಶರಣ್ ಕುಮಾರ್ ಮಟ್ಟು, ಮತ್ತಿತರರು ಭೇಟಿ ನೀಡಿದರು.
ಶಂಕರಪುರ : ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ - ಕಂಡಡೊಂಜಿ ದಿನ
Posted On: 10 Jul 2022, 10:05 PM
ಕಾಪು : ಜೆಸಿಐ ಶಂಕರಪುರ ಜಾಸ್ಮಿನ್, ಬಿಲ್ಲವ ಸಂಘ ಇನ್ನಂಜೆ, ಯುವತಿ ಮಂಡಲ (ರಿ.) ಇನ್ನಂಜೆ, ಯುವಕ ಮಂಡಲ (ರಿ.) ಇನ್ನಂಜೆ, ಇಂಡಿಯನ್ ಸೀನಿಯರ್ ಜೆಸಿಐ ಉಡುಪಿ ಟೆಂಪಲ್ ಸಿಟಿ ರಿಜನ್, ರೋಟರಿ ಸಮುದಾಯ ದಳ ಇನ್ನಂಜೆ, ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘ ಶಂಕರಪುರ, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ, ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ ಕಂಡಡೊಂಜಿ ದಿನವು ಶಂಕರಪುರ ಮಾರ್ಕೆಟ್ ರೋಡ್ ತೆಂಡೆಮನೆ ಕೆಸರುಗದ್ದೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಯಸ್.ವಿ.ಎಚ್ ಕನ್ನಡ ಮಾಧ್ಯಮ ಪ್ರೌಢಶಾಲೆ ಇನ್ನಂಜೆಯ 85 %ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಎಸ್.ಎಸ್.ಎಲ್.ಸಿಯ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಾರ್ವಜನಿಕರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ , ಮುಖ್ಯ ಅತಿಥಿಗಳಾಗಿ ದಿನೇಶ್ ಶೆಟ್ಟಿ ಕಲ್ಯಾ, ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ಉಮೇಶ್ ಆಚಾರ್ಯ, ಇನ್ನಂಜೆ ಯುವತಿ ಮಂಡಲದ ಅಧ್ಯಕ್ಷರಾದ ಆಶಾ ನಾಯಕ್, ಕಾರ್ಯದರ್ಶಿ ಲಕ್ಷ್ಮಿ.ವೈ. ನಾಯಕ್ , ಸ್ಥಾಪಕ ಅಧ್ಯಕ್ಷರಾದ ಸುಮಲತಾ, ಇತರೆ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.
ನಂದಳಿಕೆ : ಅಪಘಾತ - ಸಹೋದರರಿಬ್ಬರ ದುರ್ಮರಣ
Posted On: 10 Jul 2022, 07:08 PM
ಕಾರ್ಕಳ : ದ್ವಿಚಕ್ರ ವಾಹನವು ಕಾರಿಗೆ ಢಿಕ್ಕಿಯಾಗಿ ಸಹೋದರರಿಬ್ಬರು ಸಾವನ್ನಪ್ಪಿದ ಘಟನೆ ನಂದಳಿಕೆಯಲ್ಲಿ ನಡೆದಿದೆ. ಸಹೋದರರಿಬ್ಬರು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಸಂದೀಪ್ ಸ್ಥಳದಲ್ಲಿಯೇ ಮೃತ ಪಟ್ಟರೆ, ಸತೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತ ಸಂದೀಪ್ ಕುಲಾಲ್ ಜೇಸಿ ಸಂಸ್ಥೆಯಲ್ಲಿ ಕೋಶಾಧಿಕಾರಿ ಆಗಿದ್ದು, ಹಿಂದೆ ಜ್ಯೂನಿಯರ್ ಜೇಸಿ ಅಧ್ಯಕ್ಷ ಆಗಿ ಉತ್ತಮ ಸಾಧನೆ ಮಾಡಿದ್ದರು.
