Updated News From Kaup
ಇನ್ನಂಜೆ : ಕ್ಯಾನ್ಸರ್ ಅರಿವು ಕಾರ್ಯಕ್ರಮ ಮತ್ತು ತಪಾಸಣಾ ಶಿಬಿರ

Posted On: 12-11-2021 02:12PM
ಕಾಪು : ಜಿಲ್ಲಾ ಪಂಚಾಯತ್ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಛೇರಿ ಎನ್.ಪಿ.ಡಿ.ಘಟಕ ಉಡುಪಿ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಮಾಹೆ, ಮಣಿಪಾಲ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಪು, ರೋಟರಿ ಕ್ಲಬ್ ಶಂಕರಪುರ ಮತ್ತು ರೋಟರಿ ಸಮುದಾಯ ದಳ ಇನ್ನಂಜೆ ಇವರ ಸಹಭಾಗಿತ್ವದಲ್ಲಿ ಕ್ಯಾನ್ಸರ್ ಅರಿವು ಕಾರ್ಯಕ್ರಮ ಮತ್ತು ತಪಾಸಣಾ ಶಿಬಿರ ಇಂದು ಇನ್ನಂಜೆ ಪಂಚಾಯತ್ ಬಳಿಯ ದಾಸಭವನದಲ್ಲಿ ಜರಗಿತು.

ರೋಟರಿ ಶಂಕರಪುರ ಅಧ್ಯಕ್ಷೆ ಫ್ಲೇವಿಯ ಮೆನೆಝಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನಂಜೆ ಗ್ರಾ. ಪಂ ಅಧ್ಯಕ್ಷೆ ಮಲ್ಲಿಕಾ ಆಚಾರ್ಯ, ಜಿಲ್ಲಾ ಸರ್ವೇಕ್ಷಣಧಿಕಾರಿ ಡಾ| ನಾಗರತ್ನ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಮಾಹೇ, ಮಣಿಪಾಲ ಡಾ| ಆರತಿ ರಾವ್, ಕೆ ಎಂ ಸಿ ಮುಖ್ಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ| ಶ್ಯಾಮಲಾ, ರೋಟರಿ ಸಮುದಾಯ ದಳ ಇನ್ನಂಜೆ ಇದರ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಎಸ್.ವಿ. ಎಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ, ಮಾಲಿನಿ ಇನ್ನಂಜೆ, ಜಿಲ್ಲಾ ಆಸ್ಪತ್ರೆ ಉಡುಪಿ ಎನ್ ಸಿ ಡಿ ಘಟಕದ ವೈದ್ಯ ಡಾ| ರಾಯಚಂದ್ರ, ಡಾ| ಅಂಜಲಿ, ಕಾಪು ಪ್ರಾಥಮಿಕ ಅರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ನಿರ್ಮಲ, ಆಶಾ ಕಾರ್ಯಕರ್ತೆಯರು, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಮತ್ತು ಎಸ್ ವಿ ಎಸ್ ಇನ್ನಂಜೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತುಲಸಿ ಪರ್ಬ - ಮನೆ ಅಂಗಳದ ಪವಿತ್ರ ಸನ್ನಿಧಿ ತುಳಸಿಕಟ್ಟೆ

Posted On: 11-11-2021 03:06PM
ಮನೆಯ ಮುಂಭಾಗ ವಾಸ್ತವ್ಯಕ್ಕೆ ಶೋಭೆ - ಪಾವಿತ್ರ್ಯವನ್ನು ಒದಗಿಸುವ ತುಳಸಿಕಟ್ಟೆ ವಾಸಸ್ಥಾನದ ಕಲ್ಪನೆ - ವಿನ್ಯಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ .ಭೂಮಿ, ನೀರು,ಸಮುದ್ರ , ನದಿ ,ಸರೋವರ , ಗಿಡ ,ಮರ, ಬಳ್ಳಿ ,ಗುಡ್ಡ , ಬೆಟ್ಟಗಳನ್ನು ಆರಾಧಿಸುವ ನಮ್ಮ ಮನೋಧರ್ಮ ಅಥವಾ ಜಾಯಮಾನ ತುಳಸಿ ಗಿಡದ ಸ್ವೀಕಾರದಲ್ಲಿ , ಪೂಜೆಯಲ್ಲಿ ಸ್ಪಷ್ಟವಾಗುತ್ತದೆ .ದಿನಚರಿಯ ಅನಿವಾರ್ಯ ಭಾಗವಾಗಿ ಪೂಜೆಗೊಳ್ಳುವ ತುಳಸಿ ನಮ್ಮನ್ನು ಪೂರ್ಣವಾಗಿ ಆವರಿಸಿದೆ ,ಮನೆಯಂಗಳದ ಕಟ್ಟೆಯಲ್ಲಿ ಸ್ಥಾನಪಡೆದಿದೆ . ಮನೆಯ ಸುಖ - ದುಃಖಗಳಲ್ಲಿ ; ಸಂಭ್ರಮ - ಉಲ್ಲಾಸಗಳಲ್ಲಿ , ನಿರ್ದಿಷ್ಟ ಆಚರಣೆಗಳಲ್ಲಿ ,ವಿಧಿ ನಿರ್ವಹಣೆಗಳಲ್ಲಿ ತುಳಸಿಕಟ್ಟೆ ಪ್ರಧಾನ ಪಾತ್ರವಹಿಸುತ್ತದೆ .ಸಮೀಕರಣ ಸಂಸ್ಕೃತಿಯ ದ್ಯೋತಕವಾಗಿ ಇಂದು ತುಳಸಿ ಪೂಜೆ ವ್ಯಾಪಕವಾಗಿ ರೂಢಿಯಲ್ಲಿದೆ .ಕೃಷಿ ಪ್ರಧಾನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ನಾವು ಗದ್ದೆ , ದನ - ಕರು , ಜಾನುವಾರು , ಧಾನ್ಯರಾಶಿ ,ಮನೆಗೆ ನೀಡುವ ಪ್ರಾಶಸ್ತ್ಯದೊಂದಿಗೆ ದೈವಸನ್ನಿಧಾನ,ನಾಗಬನಗಳಂತೆ 'ತುಳಸಿಕಟ್ಟೆ'ಯನ್ನು ಸ್ವೀಕರಿಸಿದ್ದೇವೆ . ಸೊಡರಹಬ್ಬ ( ದೀಪಾವಳಿ ) ಮುಗಿದು ಹನ್ನೆರಡು ದಿನ ತುಳಸಿ ಸನ್ನಿಧಾನದಲ್ಲಿ ಕಾರ್ತಿಕ ದಾಮೋದರ ರೂಪಿ ಪರಮಾತ್ಮನಿಗೆ ವೈದಿಕರು ಪೂಜೆಸಲ್ಲಿಸುತ್ತಾರೆ .ನಾಮ ಸಂಕೀರ್ತನೆಯೊಂದಿಗೆ ಹಾಡುತ್ತಾ ತುಳಸಿಗೆ ಸುತ್ತು ಬರುತ್ತಾರೆ. ಹನ್ನೆರಡನೇ ದಿನ ಉತ್ಥಾನದ್ವಾದಶಿ . ಅಂದು ಸೂರ್ಯಾಸ್ತದ ವೇಳೆ ತುಳಸಿ ವೃಂದಾವನಕ್ಕೆ ಹಾಲೆರೆದು ಗೋವಿಂದನನ್ನು ಎಬ್ಬಿಸುವ ಪೂಜೆ ನಡೆಯುತ್ತದೆ.
ನರಕಚತುರ್ದಶಿಯಂದು ಎಣ್ಣೆ ಸ್ನಾನಮಾಡಿ ಮಲಗಿದ ಭಗವಂತನನ್ನು ಉತ್ಥಾನ ದ್ವಾದಶಿಯಂದು ಎಬ್ಬಿಸುವುದೆಂದು ಒಂದು ಒಡಂಬಡಿಕೆ . ಪುರಾಣಗಳು ನಮ್ಮ ಆದಿಮ ಆರಾಧನಾ ವಿಧಾನಗಳಿಗೆ ,ಆಚರಣೆಗಳಿಗೆ ವೈಭವವನ್ನು ಒದಗಿಸುತ್ತಾ ಸ್ವೀಕರಿಸಲ್ಪಟ್ಟುವು .ಅದು ಸಹಜವೆಂಬಂತೆ ರೂಢಿಗೆ ಬಂದುವು . "ತುಲಸಿಗ್ ಬಜಿಲ್ ಪಾಡ್ದ್ ತೊಲಸಿಕಟ್ಟೆಗ್ ಒಂಜಿ ಸುತ್ತು ಬತ್ತ್ ದ್ ಉಂತುನಗ......." ಹೌದು ,ತುಳಸಿಕಟ್ಟೆ ದೀಪಾವಳಿಯಂದು ಬಲೀಂದ್ರ ಕಂಬ ನೆಟ್ಟು ಬಲಿಯೇಂದ್ರನನ್ನು ಕರೆದು ಪೊಲಿ ಎಂಬ ಸಮೃದ್ಧಿಯನ್ನು ಯಾಚಿಸುವ ಮುಖ್ಯ ಸ್ಥಳವಾಗಿ ಮಾತ್ರವಲ್ಲ ,ಹೊಸ ಭತ್ತದ ಅವಲಕ್ಕಿ ಸಮರ್ಪಿಸಿ ಪಾನಕ ಪೂಜೆ ಮಾಡಿಸುವ ಅಥವಾ ಪೂಜೆಮಾಡುವ , 'ಮುಡಿಪುಕಟ್ಟುವ' ಸನ್ನಿಧಾನವಾಗಿಯೂ ನಮ್ಮಲ್ಲಿ ರೂಢಿಯಲ್ಲಿದೆ . ಪ್ರತಿನಿತ್ಯ ನಮ್ಮ ಬದುಕಿನಲ್ಲಿ ಒಂದಿಲ್ಲ ಒಂದು ವಿಧದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ತುಳಸಿಕಟ್ಟೆ.
ತುಳಸಿ ಪೂಜಾರ್ಹವಾಯಿತು • ಜನಪದರ ಬದುಕಿಗೆ ತುಳಸಿಯ ಪ್ರವೇಶ ಯಾವಾಗ ಆಯಿತೆಂದು ನಿಖರವಾಗಿ ಹೇಳಲಾಗದು . ಆದರೆ ವಿಶೇಷ ಔಷಧೀಯ ಗುಣಗಳುಳ್ಳ ಗಿಡ,ಮರ ,ಬಳ್ಳಿಗಳು ಗುರುತಿಸಲ್ಪಟ್ಟು ಪ್ರಾಣಾಧಾರ ,ಬದುಕಿಗೆ ಆಧಾರವೆಂದು ಅಂಗೀಕರಿಸಲ್ಪಟ್ಟಂದಿನಿಂದ ತುಳಸಿ ನಮಗೆ ಹತ್ತಿರವಾಗಿದ್ದಿರ ಬೇಕು . • ಕ್ರಿ.ಶ. ಏಳನೇ ಶತಮಾನದ್ದೆಂದು ಹೇಳಲಾಗುವ ಬ್ರಹ್ಮವೈವಸ್ವತ ಪುರಾಣದಲ್ಲಿ ಮೊದಲಬಾರಿಗೆ ತುಳಸಿಯ ಉಲ್ಲೇಖವಿದೆ .ಸಮುದ್ರಮಥನ ಕಾಲದಲ್ಲಿ ತುಳಸಿ ಹುಟ್ಟಿಕೊಂಡಿತೆಂಬ ಕತೆಯೂ ಇದೆ . • ಸಿರಿಪಾಡ್ದನದಲ್ಲಿ ಸತ್ಯನಾಪುರದ ಎರಮನೆಗೆ( ಅರಮನೆಗೆ) ಬಂದ ಬ್ರಾಹ್ಮಣ ವೇಷಧಾರಿ 'ಬೆರ್ಮೆರ್' ಕಾಣಿಸಿಕೊಂಡದ್ದು 'ತೊಲಚಿ ಮಂಟಮೆನ ಎದುರುಡುಗೆನ.......' ಎಂಬ ಸಾಲೊಂದು ಗಮನ ಸೆಳೆಯುತ್ತದೆ . • 'ಉಡಲ್ ಗ್ ತುಲಸಿ ನೀರ್ ಗೆತೊಂಡೆರ್' ಎಂಬುದು ಪ್ರಾತರ್ವಿಧಿಯನ್ನು ಹೇಳುವಂತಹುದು . 'ತುಲಸಿ ನೀರ್ ಬುಡಿಯೆರ್' ಎಂಬ ಕ್ರಮ ನಿಧನ ಕಾಲದ ವಿಧಿಯಾಚರಣೆಯಾಗಿದೆ . • ಬೆಳಗ್ಗೆ ಎದ್ದು ಸ್ನಾನ ತೀರಿಸಿ ತುಳಸಿಕಟ್ಟೆಯ ತುಳಸಿಯ ಬುಡಕ್ಕೆ ನೀರೆರೆದು ತುಳಸಿ ದಳಕ್ಕೆ ನೀರು ಹಾಕಿ ತೀರ್ಥದಂತೆ ಸೇವಿಸುವ ಎಂದರೆ "ಭಕ್ತಿಗ್ ಬುಕುತಿ ಪಾಡೊಂಡೆರ್ ,ತುಲಸಿನೀರ್ ಉಡಲ್ ಗ್ ಗೆತೊಂಡೆರ್" ಹೀಗೆ ನಿತ್ಯವಿಧಿ ತೀರಿಸಿದರು ಎಂಬ ವಿವರ ತುಳು ಜನಪದದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಪ್ರತಿಯೊಬ್ಬ ಹಿಂದೂವಿನ ಮನೆಯ ಅಂಗಳದಲ್ಲಿ ಪಶ್ಚಿಮಾಭಿಮುಖವಾಗಿದೆ ತುಳಸಿಕಟ್ಟೆ ,ತುಳಸಿಗೆ ನೀರೆರೆದು ನಮಸ್ಕರಿಸಿ ಎದ್ದು ನಿಂತು ಕತ್ತೆತ್ತಿ ನೋಡಿದಾಗ ಕಾಣುವುದು ಮಾರು ಮೇಲೇರಿ ಬಂದ ಸೂರ್ಯ .ತುಳಸಿ ಕಟ್ಟೆ ಮತ್ತು ಮನೆಯ ವಾಸ್ತು ಅಷ್ಟು ಪ್ರಧಾನವಾಗಿ ,ಅಚ್ವುಕಟ್ಟಾಗಿ ನೇರ್ಪುಗೊಂಡಿದೆ. ಜೀವನಾಧಾರವಾಗಿ ಔಷಧೀಯ ಗುಣಗಳುಳ್ಳ ,ಪ್ರಾಣವಾಯು ಆಮ್ಲಜನಕವನ್ನು ಕೊಡುವ ತುಳಸಿ ಮನೆಗೆ ,ಮನೆಯಂಗಳಕ್ಕೆ ಶೋಭೆ .ಸತ್ಯ ಶೋಧನೆಗೆ ಭಾಷೆಯ ಮೂಲಕ ಪ್ರಯೋಗವಾಗುವ ಪ್ರಮಾಣ , ವರ ,ಶಾಪಗಳಂತಹ ನ್ಯಾಯ ,ಸತ್ಯ ಪ್ರತಿಪಾದನೆಯ ಸ್ಥಾನವೂ ಹೌದು.
ವೃದ್ಧಿ - ಕ್ಷಯ(ಅಮೆ - ಕರ) ಅಶೌಚ ನಿವಾರಣೆಗೆ ಪ್ರಕ್ರಿಯೆಗಳು ತುಳಸಿಕಟ್ಟೆಯ ಮುಂಭಾಗವೇ ನೆರವೇರುತ್ತವೆ . ಮದುವೆ ಮುಂತಾದ ಶುಭ ಸಂದರ್ಭಗಳ 'ಸುದ್ಧದ' ಶಾಸ್ತ್ರವು ತುಳಸಿ ಸನ್ನಿಧಿಯಲ್ಲೆ ನಡೆಯುತ್ತವೆ . ತುಳಸಿ ,ತುಳಸಿಕಟ್ಟೆ ಪ್ರತಿಯೊಬ್ಬ ಸಂಪ್ರದಾಯಪ್ರಿಯ ,ಸಂಸ್ಕೃತಿ ಪ್ರೀತಿಯರಲ್ಲಿ ಬಹುಮಾನ್ಯತೆಯಿಂದ ಒಪ್ಪಲ್ಪಟ್ಟ ಗಿಡ , ಅಥವಾ ಸನ್ನಿಧಾನ . ದೀಪಾವಳಿಯಂದು ತುಳಸಿಗೆ ಅವಲಕ್ಕಿ ಸಮರ್ಪಿಸದ ಮಂದಿ ಉತ್ಥಾನ ದ್ವಾದಶಿಯವರೆಗಿನ ಅನುಕೂಲವಾದ ಒಂದು ದಿನ ಸಮರ್ಪಿಸುವ ಕ್ರಮವೂ ಇದೆ . "ತುಲಸಿಗ್ ಬಜಿಲ್ ಪಾಡ್ಗ , ಬುಲೆಭಾಗ್ಯ ಉರ್ಕರಡ್ ಪಂಡ್ದ್ ಮಣ್ಣ್ , ತುಲಸಿದ ಸತ್ಯೊನು ಕೇಂಡೊಂದು ಪುಡಾಡ್ ಗ್ . ಲೇಖನ : ಕೆ.ಎಲ್.ಕುಂಡಂತಾಯ.
ಉಡುಪಿ : ರಸ್ತೆ ಸುರಕ್ಷತಾ ಸಮಿತಿ ಸಭೆ

Posted On: 10-11-2021 09:57PM
ಉಡುಪಿ : ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವಾಗ ಎಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸುವುದರಿಂದ ಅಪಘಾತಗಳಾಗುವುದನ್ನು ತಪ್ಪಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಸ್ತೆಯಲ್ಲಿ ವಾಹನ ಚಾಲನಾ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸುವುದು, ಹೆಲ್ಮೆಟ್ ಧರಿಸುವುದರಿಂದ ಅಪಘಾತಗಳಾದರೂ ಸುರಕ್ಷಿತವಾಗಿರಬಹುದು, ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳಿಂದ ಮುಕ್ತವಾಗಬಹುದು ಎಂದರು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಗುರುತಿಸಲಾಗಿರುವ 34 ಬ್ಲಾಕ್ ಸ್ಪಾಟ್ಗಳನ್ನು , 2 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಸಂಚಾರಕ್ಕೆ ಸುರಕ್ಷಿತ ಸ್ಥಳಗಳನ್ನಾಗಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರಾದೇಶಿಕ ಸಾರಿಗೆ ಅಧಿಕಾರಿ,ಪೊಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ಈ ಎಲ್ಲಾ ಬ್ಲಾಕ್ ಸ್ಪಾಟ್ ಸ್ಥಳಗಳನ್ನು ಪರಿಶೀಲಿಸಿ, ಅಲ್ಲಿನ ಸ್ಥಿತಿಗತಿ ಮತ್ತು ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ವಿವರವಾದ ವರದಿಯನ್ನು ನೀಡಬೇಕು, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯ ಸೂಚನಾ ಫಲಕಗಳು , ಎಚ್ಚರಿಕೆ ಫಲಕಗಳು ಸೇರಿದಂತೆ ವಾಹನಗಳ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ರಸ್ತೆ ಸುರಕ್ಷತೆ , ಸಂಚಾರಿ ನಿಯಮಗಳ ಕುರಿತಂತೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿನ ಒಬ್ಬರು ಶಿಕ್ಷಕರಿಗೆ ಪೊಲೀಸ್ ಮತ್ತು ಸಾರಿಗೆ ಇಲಾಖೆ ವತಿಯಿಂದ ಸೂಕ್ತ ತರಬೇತಿ ನೀಡಿ ಅವರ ಮೂಲಕ ಮಕ್ಕಳಿಗೆ ಅರಿವು ಮೂಡಿಸುವಂತೆ ಸೂಚಿಸಿದ ಅವರು, ಪ್ರಾಥಮಿಕ ಹಂತದಲ್ಲಿ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ 10 ದಿನಗಳ ಒಳಗೆ ತರಬೇತಿ ಆಯೋಜಿಸಿ ಎಂದರು. ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಎಲ್ಲಾ ಇಲಾಖೆಗಳು , ರಸ್ತೆ ನಿರ್ಮಾಣದ ಸಂದರ್ಭದಲ್ಲಿಯೇ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ತಪ್ಪದೇ ಅಳವಡಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಕಾಮಗಾರಿ ಮುಕ್ತಾಯಗೊಂಡಿದ್ದರೂ ಸಹ ರಸ್ತೆ ಬದಿಯಲ್ಲಿ ,ರಸ್ತೆ ನಿರ್ಮಾಣ ಸಾಮಗ್ರಿಗಳನ್ನು ತೆರವುಗೊಳಿಸಿದೇ ಇರುವುದರಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ,ಕೂಡಲೇ ಅಂತಹ ಎಲ್ಲಾ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ತಿಳಿಸಿದ ಎಸ್ಪಿ ವಿಷ್ಣುವರ್ಧನ್, ಜಿಲ್ಲೆಯಲ್ಲಿ ಜನವರಿ 2021 ರಿಂದ ಸೆಪ್ಟಂಬರ್ ವರೆಗೆ ಸಂಚಾರಿ ನಿಯಮ ಉಲ್ಲಂಘಿಸಿರುವ ಕುರಿತಂತೆ ಪೊಲೀಸ್ ಇಲಾಖೆವತಿಯಿಂದ 48000 ಪ್ರಕರಣಗಳನ್ನು ದಾಖಲಿಸಿ 2.26 ಕೋಟಿ ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ರಸ್ತೆ ಸುರಕ್ಷತಾ ಸಭೆಗೆ ನೋಟೀಸ್ ನೀಡಿದ್ದರೂ ಸಹ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ 66 ರ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಸಾರಿಗೆ ಸಮಸ್ಯೆ ಕುರಿತ ಸಾರ್ವಜನಿಕ ದೂರುಗಳಿಗೆ ಶೀಘ್ರ ಪರಿಹಾರ : ಜಿಲ್ಲಾಧಿಕಾರಿ ಕೂರ್ಮಾರಾಮ್ ಎಂ.

Posted On: 10-11-2021 07:56PM
ಉಡುಪಿ : ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸುವ ಸಾರ್ವಜನಿಕರ ದೂರುಗಳ ಕುರಿತಂತೆ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸುಧೀರ್ ಕಾಂಚನ್ ಶಿರಿಯಾರ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಸರ್ಕಾರಿ ಬಸ್ ಗಳನ್ನು ಓಡಿಸಬೇಕು, ಹಳ್ಳಿಗಳಿಗೆ ಸಂಚರಿಸಲು ಪರವಾನಗಿ ಪಡೆದು , ಸಂಚರಿಸಿದೇ ಇರುವ ಖಾಸಗಿ ಬಸ್ ಗಳ ಪರವಾನಗಿ ರದ್ದುಗೊಳಿಸಬೇಕು, ಖಾಸಗಿ ಬಸ್ ಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯತಿ ದರ ನೀಡಬೇಕು, ಪರವಾನಗಿ ಇಲ್ಲದೇ ಸಂಚರಿಸುತ್ತಿರುವ ಬಸ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ಶಶಿಧರ್ ಮಾತನಾಡಿ, ಬಸ್ ಗಳಲ್ಲಿ ದರ ಹೆಚ್ಚಳ ಹಿಂಪಡೆಯಬೇಕು, ಮಣಿಪಾಲ-ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಸೇವೆಯನ್ನು ಪುನರಾರಂಭಿಸಬೇಕು, ಸರ್ಕಾರಿ ಬಸ್ ಗಳ ರೂಟ್ ಸಂಖ್ಯೆಯನ್ನು ಹೆಚ್ಚಿಸಬೇಕು, ಖಾಸಗಿ ಬಸ್ ಗಳಲ್ಲಿ ಹಿರಿಯ ನಾಗರೀಕರಿಗೆ ನಿಗಧಿತ ಸೀಟುಗಳನ್ನು ಬಿಟ್ಟು ಕೊಡುವ ಕುರಿತಂತೆ ಮನವಿ ಮಾಡಿದರು.
ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್, ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಹಾಗೂ ಖಾಸಗಿ ಬಸ್ ಗಳ ಮಾಲೀಕರು ಮತ್ತಿತರರು ಉಪಸ್ಥಿತರಿದ್ದರು.
ಶಿರ್ವ ಪಂಚಾಯತ್ ವತಿಯಿಂದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಕುಲಾಲ್ ಪಂಜಿಮಾರ್ ಗೆ ಸನ್ಮಾನ

Posted On: 09-11-2021 09:41PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ವತಿಯಿಂದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗ್ರಾಮದ ವಿಕಲ ಚೇತನ ಪ್ರತಿಭೆ ಗಣೇಶ್ ಕುಲಾಲ್ ಪಂಜಿಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮುದರಂಗಡಿ : ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ವತಿಯಿಂದ ಕೊರೊನ ವ್ಯಾಕ್ಸಿನೇಶನ್ ಅಭಿಯಾನದ ಕಾರ್ಯಕರ್ತರಿಗೆ ಗೌರವಾರ್ಪಣೆ

Posted On: 09-11-2021 09:07PM
ಕಾಪು : ಭಾರತೀಯ ಜನತಾ ಪಾರ್ಟಿ ಮುದರಂಗಡಿ ಶಕ್ತಿ ಕೇಂದ್ರ ವತಿಯಿಂದ ಕೊರೊನ ವ್ಯಾಕ್ಸಿನೇಶನ್ ಅಭಿಯಾನದ ಯಶಸ್ಸಿನ ಕಾರಣಕರ್ತರಾದ ಆಶಾ ಕಾರ್ಯಕರ್ತರು, ದಾದಿಯರು ಹಾಗೂ ವೈದ್ಯಾಧಿಕಾರಿಗಳಿಗೆ ಗೌರವಾರ್ಪಣೆ ಜರಗಿತು.
ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯುವ ಮತದಾರರ ಸೇರ್ಪಡೆಗೆ ಅಭಿಯಾನ: ಕೂರ್ಮಾರಾವ್ ಎಂ.

Posted On: 09-11-2021 08:53PM
ಉಡುಪಿ : ಜನವರಿ 1, 2022 ನ್ನು ಅರ್ಹತಾ ದಿನವನ್ನಾಗಿಟ್ಟುಕೊಂಡು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಜಿಲ್ಲೆಯ ಎಲ್ಲಾ ಕಾಲೇಜುಗಳ ಮೂಲಕ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲೆಯ ಪ್ರಸಕ್ತ ಜನಸಂಖ್ಯೆಗೆ ಅನುಗುಣವಾಗಿ 27,000 ಯುವ ಮತದಾರರ ನೋಂದಣಿ ಆಗಬೇಕಿದ್ದು, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ 18 ವರ್ಷ ತುಂಬಿದ ಯುವಕ/ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಾರ್ಯಕ್ರಮ ರೂಪಿಸಲಾಗುವುದು. ಯುವ ಜನತೆ ತಾವು ವಾಸವಿರುವ ವಿಳಾಸದ ವ್ಯಾಪ್ತಿಗೆ ಬರುವ ಬಿ.ಎಲ್.ಓ ಗಳನ್ನು ಭೇಟಿ ಮಾಡಿ ಅರ್ಜಿಗಳನ್ನು ಸಲ್ಲಿಸಬಹುದು ಅಥವಾ ಆನ್ಲೈನ್ ವೆಬ್ ಪೋರ್ಟಲ್ ಮೂಲಕ ಸಹ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಳನ್ನು ಮಾಡಲು ಅವಕಾಶಗಳಿದ್ದು, ಈ ಸೌಲಭ್ಯದ ಸದುಪಯೋಗ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ನವೆಂಬರ್ 8 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನವೆಂಬರ್ 8 ರಿಂದ ಡಿಸೆಂಬರ್ 8 ರ ವರೆಗೆ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ನವೆಂಬರ್ 7, 14, 21 ಮತ್ತು 28 ರಂದು ವಿಶೇಷ ನೊಂದಣಿ ಕಾರ್ಯಕ್ರಮ ನಡೆಯಲಿದ್ದು, ಈ ಅವಧಿಯಲ್ಲಿ ಎಲ್ಲಾ ಬಿ.ಎಲ್.ಓ ಗಳು ಬೆ. 10 ರಿಂದ 5 ಗಂಟೆಯವರೆಗೆ ಮತಗಟ್ಟೆಯಲ್ಲಿ ಹಾಜರಿರುತ್ತಾರೆ. ಡಿಸೆಂಬರ್ 27 ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ 13-1-2022 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು. ನಮೂನೆ- 6 ರಲ್ಲಿ 18 ವರ್ಷ ಪೂರೈಸಿದ ಹೊಸ ಮತದಾರರು ಹಾಗೂ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದೆಡೆ ವಾಸಸ್ಥಳ ಬದಲಾಯಿಸುವವರು, ವಿದೇಶದಲ್ಲಿ ವಾಸಿಸುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು, ನಮೂನೆ – 6ಂ ರಲ್ಲಿ ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು, ನಮೂನೆ – 7 ರಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು, ನಮೂನೆ–8 ರಲ್ಲಿ ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದಂತೆ ದೋಷಗಳಿದ್ದರೆ ಹಾಗೂ ನಮೂನೆ–8ಂ ರಲ್ಲಿ ಒಂದು ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಬೇಕು. ಅಲ್ಲದೇ ಸಾರ್ವಜನಿಕರು ತಾಲೂಕು ಕಛೇರಿ ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ಇಲ್ಲಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು ಎಂದರು.
ಪ್ರಸ್ತುತ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ, 4,92,400 ಪುರುಷ, 5,28,777 ಮಹಿಳೆ, 11 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 10,21,188 ಮತದಾರರರಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.
ಹಿಂದು ಜಾಗರಣ ವೇದಿಕೆ ಬೆಳಪು ಪಯ್ಯಾರು ಘಟಕದಿಂದ ಪ್ರಥಮ ವರ್ಷದ ಗೋಪೂಜೆ, ವಾಹನ ಪೂಜೆ

Posted On: 09-11-2021 08:43PM
ಕಾಪು : ಹಿಂದು ಜಾಗರಣ ವೇದಿಕೆ ಕಾಪು ತಾಲ್ಲೂಕಿನ ಬೆಳಪು-ಪಯ್ಯಾರ್ ಘಟಕದ ವತಿಯಿಂದ ಇಂದು ಪಯ್ಯಾರು ಮೈದಾನದಲ್ಲಿ ಸಾರ್ವಜನಿಕ ಗೋಪೂಜೆ ಮತ್ತು ವಾಹನ ಪೂಜೆ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ಸಾಮಾಜಿಕ ಮುಖಂಡರಾದ ಗಣೇಶ್ ಶೆಟ್ಟಿಯವರು ವಹಿಸಿದ್ದರು. ಈ ಸಂಧರ್ಭದಲ್ಲಿ ಹಿಂಜಾವೇ ತಾಲೂಕು ಅಧ್ಯಕ್ಷರಾದ ಶಶಿಧರ್ ಹೆಗ್ದೆ , ಹಿಂಜಾವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಗುರುಪ್ರಸಾದ್ ಸೂಡ , ತಾಲೂಕು ಕಾರ್ಯದರ್ಶಿ ಮೋಹನ್ ದಾಸ್ , ತಾಲೂಕು ಪ್ರಮುಖರಾದ ರಾಜೇಶ್ ಕುಲಾಲ್ ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪುಟಾಣಿ ಮಕ್ಕಳಿಗೆ ಚಾಕೋಲೇಟ್, ಬಲೂನು ನೀಡಿ ಸ್ವಾಗತಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 08-11-2021 06:38PM
ಉಡುಪಿ : ಸುಮಾರು ಒಂದೂವರೆ ವರ್ಷಗಳ ನಂತರ ಜಿಲ್ಲೆಯಾದ್ಯಂತ ಇಂದು ಆರಂಭವಾದ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ, ಪುಟಾಣಿ ಮಕ್ಕಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಚಾಕೋಲೇಟ್, ಬಲೂನ್, ಗುಲಾಬಿ ಹೂ ನೀಡಿ ಪ್ರೀತಿಯಿಂದ ಸ್ವಾಗತಿಸಿದರು. ಉಡುಪಿ ನಗರಸಭಾ ವ್ಯಾಪ್ತಿಯ ಕಡಿಯಾಳಿ ಅಂಗನವಾಡಿ ಕೇಂದ್ರದಲ್ಲಿ ಬಲೂನು, ತಳಿರು ತೋರಣಗಳಿಂದ ಸಿದ್ಧಪಡಿಸಿದ್ದ ಅಂಗನವಾಡಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಭಾಗವಹಿಸಿದರು.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಆಗಮನಕ್ಕೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳು, ಸಿದ್ಧತೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮಕ್ಕಳು ಮತ್ತು ಪೋಷಕರು ಕೇಂದ್ರಕ್ಕೆ ಉತ್ಸಾಹದಿಂದ ಆಗಮಿಸುತ್ತಿದ್ದು, ಸ್ಥಳೀಯರಿಂದ ಉತ್ತಮ ಸಹಕಾರ ದೊರೆತಿದ್ದು, ಇಂದು ಜಿಲ್ಲೆಯ ಎಲ್ಲಾ 1191 ಅಂಗನವಾಡಿಗಳು ಆರಂಭಗೊಂಡಿದ್ದು, ಎಲ್ಲಾ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆಗೆ ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೋಷಕರು ಯಾವುದೇ ಆತಂಕವಿಲ್ಲದೇ ಪ್ರತಿದಿನ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಗೀತಾ ಶೇಟ್, ಬಾಲ ವಿಕಾಸ ಸಮಿತಿಯ ಸದಸ್ಯರು, ಪೋಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತಿತರರು ಭಾಗವಹಿಸಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಸುಮಲತಾ ವಂದಿಸಿದರು.
ಮೂಡಬೆಟ್ಟು ಸರ್ಕಾರಿಗುಡ್ಡೆ ಅಂಗನವಾಡಿ ಕೇಂದ್ರ ಪುನರಾರಂಭ - ಪುಟಾಣಿಗಳಿಗೆ ಸ್ವಾಗತ ಕೋರಿದ ಪಂಚಾಯತ್ ಸದಸ್ಯರು

Posted On: 08-11-2021 06:15PM
ಕಟಪಾಡಿ : ಕೋವಿಡ್ ನಿಂದ ನಿಂತು ಹೋಗಿದ್ದ ಅಂಗನವಾಡಿ ಕೇಂದ್ರಗಳು ಮತ್ತೆ ಪುನರಾಂಭ ಗೊಂಡಿದ್ದು ವಿಶೇಷ ರೀತಿಯಲ್ಲಿ ಮೂಡಬೆಟ್ಟು ಸರ್ಕಾರಿಗುಡ್ಡೆಯ ಅಂಗನವಾಡಿ ಕೇಂದ್ರವನ್ನು ಸ್ಯಾನಿಟೈಸ್ ಮಾಡಿ ಶಾಲೆಯನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ ಮಕ್ಕಳಿಗೆ ಆರತಿ ಬೆಳಗಿಸಿ ಗುಲಾಬಿ ಹೂವು ಕೊಟ್ಟು ಹೂಗಳಿಂದ ವಿಶೇಷ ರೀತಿಯಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ನ ವಾರ್ಡಿನ ಸದಸ್ಯರು ಸ್ವಾಗತಿಸಿದರು.
ಈ ಸಂದರ್ಭ ವಾರ್ಡಿನ ಪಂಚಾಯತ್ ಸದಸ್ಯರಾದ ಪ್ರಭಾಕರ ಆಚಾರ್ಯ ಅವರ ಮುತುವರ್ಜಿಯಿಂದ ಸಮಾಜ ಸೇವಕ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ಅವರು ಕೊಡಲ್ಪಟ ಮಕ್ಕಳ ಚೇರ್ ಗಳನ್ನು ಪ್ರಭಾಕರ ಆಚಾರ್ಯ ಅವರು ಅಂಗನವಾಡಿ ಕಾರ್ಯಕರ್ತೆ ಕಾಂತಿ ಟೀಚರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ವಾರ್ಡಿನ ಪಂಚಾಯತ್ ಸದಸ್ಯರಾದ ಆಗ್ನೇಸ್ ಡೇಸಾ, ಪ್ರಭಾಕರ ಆಚಾರ್ಯ, ಶಾಲಿನಿ ಚಂದ್ರ ಪೂಜಾರಿ , ಆಶಾ ಕಾರ್ಯಕರ್ತೆ ಜಯಶ್ರೀ ಆಚಾರ್ಯ, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯರಾದ ಆಗ್ನೇಸ್ ಡೇಸಾ ಕಾರ್ಯಕ್ರಮ ನಿರ್ವಹಿಸಿ, ಬಾಲವಿಕಾಸ ಸಮಿತಿ ಅಧ್ಯಕ್ಷರು ಪೂರ್ಣಿಮಾ ಆಚಾರ್ಯ ಪ್ರಾರ್ಥನೆ ಮಾಡಿದರು, ಮಕ್ಕಳ ಪೋಷಕರ ಪರವಾಗಿ ಸುದರ್ಶನ್ ಹಾಗೂ ಸಮಿನ ಮಾತನಾಡಿದರು. ಕಾಂತಿ ಟೀಚರ್ ವಂದಿಸಿದರು.