Updated News From Kaup

ಶರನ್ನವರಾತ್ರಿ ರಮೋತ್ಸವ, ದಶಾಹರ್ = ದಸರ

Thumbnail
Posted On: 09 Oct 2021, 05:09 PM

ಶರದೃತು ಆರಂಭ ಎಂದರೆ ಮಳೆಗಾಲದ ಅಂತ್ಯ. ಗದ್ದೆಗಳಲ್ಲಿ ಪೈರು ಬೆಳೆದು ತೆನೆಗಳು ತೊನೆದಾಡುವ ಸಂಭ್ರಮ . ಅನ್ನದಾತನ ದುಡಿಮೆಗೆ ಭೂಮಿ ತಾಯಿ ನೀಡಿದ ಸತ್ಫಲ , ಜೀವನಾಧಾರವಾದ 'ಅನ್ನಬ್ರಹ್ಮ' ಮನೆಯಂಗಳಕ್ಕೆ ಬರುವ ಸಮೃದ್ಧಿಯ ಸಮುಲ್ಲಾಸದ ಸಂದರ್ಭ. 'ನವರಾತ್ರಿ ರಮೋತ್ಸವ'ವೂ ಹೌದು. 'ರಮಾ' ಎಂದರೆ ಲಕ್ಷ್ಮೀ,ಶೋಭೆ,ಸಮೃದ್ಧಿ ಎಂಬುದು ಅರ್ಥ. ಪ್ರಕೃತಿಯು ಬೆಳೆದ ಬೆಳೆಯಿಂದ ತುಂಬಿ ಅತಿಶಯತೆಯನ್ನು ಸಾಂಕೇತೀಸುವ ಪರ್ವಕಾಲ.ಇದು ಲಕ್ಷ್ಮೀ ,ಸಂಪತ್ತಿಗೆ ಹೇತುವಾದ ಪರಿಸರವಲ್ಲವೇ ? ಈ ಒಂಬತ್ತು ದಿನಗಳ ಉತ್ಸವ ,ಹತ್ತನೇ ದಿನದ ಸಮಾರೋಪ ಅವಭೃತ .ಇದರಿಂದ ಈ ಕಾಲ ದಶಾಹರ್= ದಸರ( ಹತ್ತು ದಿವಸಗಳ ಉತ್ಸವ, ಹತ್ತು ಹಗಲುಗಳು)ಶಕ್ತಿ ಪೂಜೆಯ ಸುಸಂದರ್ಭ. ‌‌‌‌ ಶರತ್ಕಾಲವು ಭೂಮಿ ತಾಯಿ ಹಸಿರು ಹೊದ್ದು ,ಆ ಹಸಿರಲ್ಲಿ ಬಂಗಾರದ ಬಣ್ಣದ ತೆನೆಗಳನ್ನು ಪ್ರದರ್ಶಿಸುತ್ತಾ ತನ್ನ ಸಹಜ ಸೊಬಗಿನಿಂದ ಶೋಭಿಸುವ ಕಾಲ. ಹವಾಮಾನದಲ್ಲಿ‌ ಬದಲಾವಣೆಯಾಗುವ ಈ ವೇಳೆ ಪ್ರಕೃತಿಮಾತೆಯ ಮೂಲಕ ಲೋಕಮಾತೆಯ ಆರಾಧನೆ. ಮಾನವ ನಿಸರ್ಗದೊಂದಿಗೆ ಕೈ ಜೋಡಿಸುತ್ತಾ ಬದುಕು‌ ರೂಪಿಸಿಕೊಂಡ. ಈ ಮೂಲದ ಮಾನವ - ಪ್ರಕೃತಿ ಸಂಬಂಧವೇ ಈ ವರೆಗೂ ಸಾಗಿಬಂತು‌.ನಮ್ಮ ವಾರ್ಷಿಕ ಆಚರಣೆಗಳೆಲ್ಲ ಅದಕ್ಕೆ ಹೊಂದಿಕೊಂಡವು. ಹುಟ್ಟು - ಬೆಳವಣಿಗೆ - ಸಾವು ಈ ಮೂರರ ನೈರಂತರ್ಯದ ಪ್ರತ್ಯಕ್ಷ ದರ್ಶನವೇ ಮಹಾಕಾಳಿ - ಮಹಾಲಕ್ಷ್ಮೀ - ಮಹಾಸರಸ್ವತೀ ಕಲ್ಪನೆಗೆ ಆಧಾರವಾಗುತ್ತದೆ.ಹುಟ್ಟು ಎಂದೊಡನೆ ನಮಗೆ ಜನ್ಮ ನೀಡಿದ ತಾಯಿಯೇ ಸಾಕ್ಷಿ ತಾನೆ ? ಈಗ ತಾಯಿ ಎಂದ ಮೇಲೆ ತಂದೆ ಮುಂದಿನ ಎಲ್ಲ ಸಂಬಂಧಗಳು ಸಂಭವಿಸುವುದು ಸಹಜ ಪ್ರಕ್ರಿಯೆ. ನಮ್ಮ ಅಮ್ಮನೊಂದಿಗಿನ ಭಾವನಾತ್ಮಕ ಹೊಂದುಗೆಯ ಸಾಕ್ಷಾತ್ಕಾರವೇ ಭೂಮಿತಾಯಿಯೊಂದಿಗಿನ‌ ನಂಟಿನ ಗ್ರಹಿಕೆಗೆ ಸುಲಭ ಸಾಧನ .ನಮ್ಮಮ್ಮನೊಂದಿಗಿನ‌ ಪ್ರೀತಿಯೇ ಬಳಿಕ ಒದಗುವ ಬಾಂಧವ್ಯಗಳಿಗೆ ಮೂಲ. ಆದುದರಿಂದಲೇ ನಾವು ಚಿಂತಿಸ ಹೊರಟ ಮಹಾಮಾತೆಯ ತಿಳಿವಳಿಕೆಗೆ ನಮ್ಮ ತಾಯಿ ,ನಮ್ಮ ತಾಯಿಯಿಂದ ಭೂಮಿತಾಯಿ. ಏಕೆಂದರೆ ಅಮ್ಮನ ಮಡಿಲಿನಿಂದ ಮುಂದಿನ ನಮ್ಮ ಹೆಜ್ಜೆ ಭೂಮಿಗೆ ತಾನೆ ? ಹಾಗಾಗಿ ತಾಯಿ , ಭೂಮಿತಾಯಿ . ಈ ಎರಡು ಅಮ್ಮಂದಿರ ಬಳಿಕ ಸಮಸ್ತ ಸೃಷ್ಟಿಯನ್ನೊಳಗೊಂಡ ಜಗನ್ಮಾತೆಯ ದರ್ಶನ ಸಾಧ್ಯವಾಗುವುದು. ಇದು ಲಲಿತೆಯಾದ ಜಗನ್ಮಾತೆಯ ದಿವ್ಯ ದರ್ಶನ. ಲಾಲಿತ್ಯಪೂರ್ಣವಾದುದು ಮಾತ್ರ ಆತ್ಮೀಯವಾಗುತ್ತದೆ. ಲೌಕಿಕ ಅಮ್ಮನಲ್ಲಿರುವ ಅಲೌಕಿಕ ಜಗನ್ಮಾತೆಯನ್ಮು ಅರಿತು ಆರಾಧಿಸುವುದು ಶರನ್ನವರಾತ್ರಿಯ ಆಶಯ.ಆದುದರಿಂದಲೇ ನವರಾತ್ರಿ ಆಚರಣೆಯಲ್ಲಿ ವ್ರತದ ಶ್ರದ್ಧೆ , ನಿಯಮ ಪಾಲನೆ ,ಒಂಬತ್ತು ದಿನಗಳ ಅವಧಿಯ ನಿರ್ಧಾರದಿಂದ ಆರಾಧನೆಗೊಂದು ಶಿಸ್ತು , ಬದ್ಧತೆ ಒದಗುತ್ತದೆ. ನವರಾತ್ರಿಯ ವ್ರತನಿಷ್ಠೆಯಲ್ಲಿ ಅಮ್ಮನೆಂಬ ಆತ್ಮೀಯತೆ - ಪ್ರೀತಿಯ ಅಪೂರ್ವವಾದುದು ಸಂಭವಿಸಿದರೆ ಅದೇ ಸಿದ್ಧಿ. ನಡವಳಿಕೆ ಸಾರ್ಥಕ. ಲಲಿತೆಯಾದ ಜಗನ್ಮಾತೆಯನ್ನು ಮಹಾಕಾಳಿ ,ಮಹಾಲಕ್ಷ್ಮೀ, ಮಹಾಸರಸ್ವತೀ ಎಂಬ ಅನುಸಂಧಾನದೊಂದಿಗೆ ಪೂಜಿಸಲಾಗುತ್ತದೆ.ಮಾರ್ಕಾಂಡೇಯ ಪುರಾಣದ 'ಸಪ್ತಶತೀ'ಯಲ್ಲಿ ಪ್ರಥಮ ಚರಿತೆ ,ಮಧ್ಯಮ ಚರಿತೆ,ಉತ್ತಮ ಚರಿತೆಗಳೆಂದು ಮೂರು ವಿಭಾಗ. ಈ ಮೂರು ವಿಭಾಗಗಳಿಗೆ ಮಹಾಕಾಳಿ ,ಮಹಾಲಕ್ಷ್ಮೀ, ಮಹಾಸರಸ್ವತೀಯರು ಅನುಕ್ರಮವಾಗಿ ದೇವರುಗಳೆಂದು ಅನುಸಂಧಾನವಿದೆ. ಮಹಾಕಾಳಿ(ಮಹಾಕಾಲಿ) ಒಂದು ಭೀಕರ ದೇವತೆ .ಈ ಶಬ್ದವೇ ದುರ್ಗಾ, ಪಾರ್ವತೀ ಎಂಬ ಅರ್ಥವನ್ನು ಧ್ವನಿಸುತ್ತದೆ. ಮಹಾಲಕ್ಷ್ಮೀ ಎಂದರೆ ಸಂಪತ್ತಿನ ಅಧಿದೇವತೆ : ಕಾಂತಿ ,ಸೌಂದರ್ಯ, ಶೋಭೆ, ಲಕ್ಷಣ ಎಂದು ತಿಳಿವಳಿಕೆ. ಮಹಾಸರಸ್ವತೀಯು ವಿದ್ಯಾಧಿದೇವತೆಯಾಗಿ, ಶಾರದೆಯಾಗಿ 'ಮಾತು' ಎಂಬ ಅರ್ಥವನ್ನು ಬಿಂಬಿಸುತ್ತದೆ. ಈ ಮೂರು ಸ್ವರೂಪಗಳಿಗೆ ತಾಮಸ, ರಾಜಸ,ಸಾತ್ವಿಕ ಗುಣಗಳೆಂದು‌ ಮನಗಂಡು ಆರಾಧನೆಗೆ ಸ್ವೀಕಾರ. ಮೊದಲು 'ತಮಸ್ಸು' ಬಳಿಕ 'ಸಮೃದ್ಧಿ' ಬಳಿಕ ಪರಿಪೂರ್ಣವಾದ 'ಜ್ಞಾನ'ವೆಂದು ಒಪ್ಪಿಗೆ. ದುರ್ಗಮ ದುರಿತಗಳಿಗೆ ಕಾರಣವಾಗಿ , ಜಡತ್ವ ಹಾಗೂ ಅಹಂಕಾರದ ವಿಜೃಂಭಣೆ ಎಂದರೆ ಪೂರ್ಣ ಪ್ರಮಾಣದ ತಮಸ್ಸು .ಈ ತಮಸ್ಸನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಹರಿಸುವುದು ಮಹಾಕಾಳಿಯ ಕೆಲಸ. 'ನಾನೇ' ಎಂಬ ಅಹಂಕಾರ ,ಅದರೊಂದಿಗೆ ಸರ್ವಸಮೃದ್ಧಿ , ಸಂಪತ್ತು ಪ್ರಾಪ್ತಿ .ದಕ್ಕಿದ ಸಂಪತ್ತನ್ನು ಉಳಿಸಿಕೊಳ್ಳಲು ರಾಜಸದ ವಿಜೃಂಭಣೆ.ಉದಾಹರಣೆಗೆ ಮಹಿಷ : ವರಗಳನ್ನು ಪಡೆಯುವ, ಸರ್ವಾಧಿಕಾರ ಸ್ಥಾಪಿಸುವ , ಧನಕನಕಾದಿಗಳನ್ನು ಹೊಂದುವ , ಅಪೂರ್ವವಾದುವುಗಳನ್ನು ಪಡೆಯುವ , ಆದರೆ ಸಾಧನೆಗಳೆಲ್ಲವೂ ಲೋಕ ಒಪ್ಪಿದ ಧರ್ಮದ ಚೌಕಟ್ಟನ್ನು ಮೀರಿ ದಾಷ್ಟ್ಯವಾಗಿ ನಿಗಿನಿಗಿಸಿದರೆ ಅಂತಹ ರಾಜಸದ ನಿಯಂತ್ರಣಕ್ಕೆ ಅಥವಾ ವಧೆಗೆ ಮಹಾಲಕ್ಷ್ಮೀಯಾಗಿ ಲೋಕ ಒಪ್ಪುವ ರಾಜಸವನ್ನು - ಧರ್ಮವನ್ನು ರಕ್ಷಿಸುವ ಕಾರ್ಯವೇ ಮಹಾಲಕ್ಷ್ಮೀಯ ಸಾಕ್ಷಾತ್ಕಾರ. ಮುಂದಿನ ಹಂತದಲ್ಲಿ ಜ್ಞಾನ - ಅನುಭವವು ವಿದ್ಯೆಯಾಗಿ , ವಿದ್ಯೆಯ ಸುಭಗತೆಯಲ್ಲಿ ಸತ್ಯಜ್ಞಾನ - ಸಂಸ್ಕೃತಿಯ ಪ್ರತಿಷ್ಠೆಯೇ ಮಹಾಸರಸ್ವತೀಯ ಅನುಗ್ರಹ . ಮಾರ್ಕಾಂಡೇಯ ಪುರಾಣದ "ಸಪ್ತಶತೀ". ಇದರಲ್ಲಿ ಹದಿಮೂರು ಅಧ್ಯಾಯ + ಏಳುನೂರು ಶ್ಲೋಕಗಳು. ಮೇದಿನಿ ನಿರ್ಮಾಣ - ಎಂಬತ್ತನಾಲ್ಕು ಲಕ್ಷ ಜೀವಕೋಟಿಯ ಸೃಷ್ಟಿ - ಸ್ಥಿತಿ - ಲಯದ ಕ್ರಿಯೆಗೆ ಚಾಲನೆ, ಪ್ರಥಮ ಚರಿತೆ. ಮಹಿಷಾದಿ ದಾನವರ ವಧೆ ,ಶಕ್ರಾದಿ ಸ್ತುತಿ ; ಇದು ಮಧ್ಯಮ ಚರಿತೆ . ಮುಂದಿನ ಚಂಡ - ಮುಂಡರು , ಧೂಮ್ರಾಕ್ಷ , ರಕ್ತಬೀಜ, ಶುಂಭ - ನಿಶುಂಭರೇ ಮೊದಲಾದ ರಾಕ್ಷಸ ವಂಶದ ನಾಶ ಕಾರ್ಯದ ಬಳಿಕ ನೆಲೆಯಾಗುವ ಧರ್ಮ, ಶಾಂತಿ. ಇಂತಹ ಪ್ರಶಾಂತ ಸ್ಥಿತಿಯಲ್ಲಿ ಮಹಾಸರಸ್ವತೀಯ ಅನುಗ್ರಹ ಈ ವಿವರಣೆವುಳ್ಳ ವಿಸ್ತಾರವಾದ ಭಾಗವೇ ಉತ್ತಮ ಚರಿತೆ .ಇದು ಸ್ಥೂಲವಾದ 'ಸಪ್ತಶತೀ'ಯ ಅವಲೋಕನ. ದುರ್ಗಾ ದೇವಾಲಯ - ಸನ್ನಿಧಿಗಳಲ್ಲಿ , ಮಂದಿರಗಳಲ್ಲಿ , ಮನೆಗಳಲ್ಲಿ ಕಲ್ಪೋಕ್ತ ಪೂಜೆ , ಯಾಗ, ಯಜ್ಞ , ಕನ್ನಿಕಾ ಪೂಜೆ , ಸುಮಂಗಲಿಯರ ಪೂಜೆಗಳು‌ ಸಾಮಾನ್ಯ.ಸಂಭ್ರಮದ ಆಚರಣೆಯಂತೆ ಕಂಡರೂ ವೈಭವೀಕರಣವಿಲ್ಲ. ಪೂಜೆ - ಯಾಗಗಳ ವಿಧಿವಿಧಾನಗಳಿಗೆ ಹೆಚ್ಚು ಮಹತ್ವ. ಭವ್ಯ ಅಲಂಕರಣಗಳಿವೆಯಾದರೂ ಆರಾಧನೆಯ ಮೂಲ ಆಶಯ ಮರೆತ ವಿಧಿಗಳಿಲ್ಲ.ಒಂಬತ್ತು ದಿನಗಳ ಪೂಜೆಯ ಬಳಿಕ ವಿಜಯ ದಶಮಿ ಸಂಭ್ರಮೋಲ್ಲಾಸದಿಂದ ನೆರವೇರುತ್ತದೆ. ಅದು ಸಾಂಸ್ಕೃತಿಕ ಸಂಭ್ರಮವಾಗಿರುತ್ತದೆ. ಕಲೆ ,ನೃತ್ಯ ,ಗೀತೆಗಳ ಗೋಷ್ಠಿಯಾಗಿಯೂ ಇರುತ್ತದೆ‌. ಒಂಬತ್ತು ದಿನ ಮೂರ್ತಿಯಲ್ಲಿ, ಕಲಶದಲ್ಲಿ , ಸ್ವಸ್ತಿಕೆಯಲ್ಲಿ , ಮಂಡಲ ಮಧ್ಯದಲ್ಲಿ , ಅಗ್ನಿಮಧ್ಯದಲ್ಲಿ , ಸನ್ನಿಹಿತಳಾಗಿ ವಿವಿಧರೀತಿಯಲ್ಲಿ ಪೂಜೆಗೊಳ್ಳುವ ಅಮ್ಮಾ...ಮನುಕುಲಕ್ಕೆ ಸರ್ವಮಂಗಲವನ್ನು , ರಕ್ಷಣೆಯನ್ನು‌ ಅನುಗ್ರಹಿಸು ಎಂಬುದು ಪ್ರಾರ್ಥನೆ. |ಕೊಪ್ಪರಿಗೆ ಏರ್ನು| • ಹೆಚ್ಚಿನ ದುರ್ಗಾ - ದೇವಿ ಕ್ಷೇತ್ರಗಳಲ್ಲಿ ನವರಾತ್ರಿಯ ಆರಂಭವೇ 'ಕೊಪ್ಪರಿಗೆ ಏರಿಸುವ' ( ಕೊಪ್ಪರಿಗೆ ಏರ್ನು) ವಿಧಿಯೊಂದಿಗೆ. ಅನ್ನದಾನ ನಿರಂತರ ನಡೆಯಲಿ ಎನ್ನುವ ಆಶಯ.ಅಮ್ಮನ ಸನ್ನಿಧಿಯಲ್ಲಿ, ಆಕೆ ಹಸಿದ ಹೊಟ್ಟೆಯ ಮಕ್ಕಳನ್ನು ಜಗಜ್ಜನನಿ ನೋಡ ಬಯಸಲಾರಳು.ಆದುದರಿಂದ ಅನ್ನ ಸಂತರ್ಪಣೆ ಪ್ರಧಾನ. • ಕನ್ನಿಕಾ ಪೂಜೆ : ಆರು - ಏಳು ವರ್ಷ ಹರೆಯದ ಕನ್ನಿಕಾ ರೂಪಿ ಸಣ್ಣ ಅಮ್ಮನವರನ್ನು ಪೂಜಿಸುವ ಕ್ರಮ ರೂಢಿಯಲ್ಲಿದೆ .ನವರಾತ್ರಿ ಕಾಲದಲ್ಲಿ ಕನ್ನಿಕಾ ಪೂಜೆ ಹೆಚ್ಚು ವಿಶೇಷ. • ಸುಮಂಗಲಿ ಪೂಜೆ : ಮುತ್ತೈದೆ ಸುಮಂಗಲಿಯರಿಗೆ ಬಾಗಿನ ನೀಡುವ ಕ್ರಮವಿದೆ .ಪ್ರತಿ ಚಂಡಿಕಾಯಾಗ ಅಥವಾ ದುರ್ಗಾ ಸಂಬಂಧಿ ಯಾಗಗಳಲ್ಲಿ ಮೂರು ಮಂದಿ ಸುಮಂಗಲಿಯರಿಗೆ ಬಾಗಿನ. ಅಂದರೆ ಮಹಾಕಾಳಿ ,ಮಹಾಲಕ್ಷ್ಮೀ, ಮಹಾಸರಸ್ವತೀ ಎಂಬ ಒಪ್ಪಿಗೆಯಂತೆ. • ಸೀರೆ ,ರವಕೆ ಕಣ ,ಅರಸಿನ ಕುಂಕುಮ , ಬಳೆಗಳು,ಕರಿಮಣಿ ಮುಂತಾದ ಮಂಗಲ ದ್ರವ್ಯಗಳನ್ನು ಮುತ್ತೈದೆಯರಿಗೆ , ಹೆಣ್ಣುಮಕ್ಕಳಿಗೆ( ಕನ್ನಿಕೆಯರು)ಹಂಚುವುದು, ದಾನ ನೀಡುವುದು ನವರಾತ್ರಿ ಪರ್ವದಲ್ಲಿ ಶ್ರದ್ಧೆಯಿಂದ ನಡೆಯುತ್ತವೆ. ------------------- ‌‌‌ ಬರಹ : ಕೆ.ಎಲ್.ಕುಂಡಂತಾಯ

ಬಂಟಕಲ್ಲು : ಗುರುವಂದನಾ ಕಾರ್ಯಕ್ರಮ

Thumbnail
Posted On: 09 Oct 2021, 04:59 PM

ಕಾಪು‌ : ವಿಕಾಸ ಸೇವಾ ಸಮಿತಿ ಮತ್ತು ಮಹಿಳಾ ಬಳಗ 92ನೇ ಹೇರೂರು ಇದರ ವತಿಯಿಂದ ಚಂಡೆ ತರಬೇತುಗೊಂಡ ಸದಸ್ಯರ ಗುರುವಂದನಾ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಮಾಧವ ಆಚಾರ್ಯರು ತಮ್ಮನ್ನು ಹೀಯಾಳಿಸುವವರನ್ನು ಬದಿಗಿಟ್ಟು ನಮ್ಮತನವನ್ನು ನಾವು ಬೆಳೆಸಿಕೊಂಡಲ್ಲಿ ಆತ್ಮಶಕ್ತಿ ಜಾಗ್ರತವಾಗುವುದರೊಂದಿಗೆ ನಾವು ನಿಶ್ಚಿತ ಗುರಿಯನ್ನು ಸಾಧಿಸಬಹುದು ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಸಭಾಂಗಣದಲ್ಲಿ ನಡೆದ ಗುರುಗಳಾದ ಪಂಜಿಮಾರು ಶ್ರೀ ರಾಘವೇಂದ್ರ ಭಟ್ ರವರ ಗುರುವಂದನಾ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಪು ವಿಶ್ವಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷರಾದ ಬಿಳಿಯಾರು ಸುಧಾಕರ ಆಚಾರ್ಯರು ದೀಪ ಪ್ರಜ್ವಲನಗೊಳಿಸುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟಕಲ್ಲು ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರಳೀಧರ ಆಚಾರ್ಯರು ಸಾಂಘಿಕ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಬಹುದು ಮೊದಲಾಗಿ ನಾವು ಒಗ್ಗಟ್ಟನ್ನು ಪ್ರತಿಪಾದಿಸಬೇಕು ಎಂದು ಶುಭಹಾರೈಸಿದರು. ಗುರುವಂದನೆ ಸ್ವೀಕರಿಸಿದ ರಾಘವೇಂದ್ರ ಭಟ್ ರವರು ಆಶೀರ್ವದಿಸಿದರು. ಮಹಿಳಾ ಬಳಗದ ಗೌರವ ಅಧ್ಯಕ್ಷೆ ಪ್ರತಿಭಾ ಆಚಾರ್ಯ, ಅಧ್ಯಕ್ಷೆ ವಿಜಯ ವಿಘ್ನೇಶ್ವರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿ, ಪೂರ್ಣಿಮಾ ರಮೇಶ್ ಆಚಾರ್ಯ ಪರಿಚಯಿಸಿ, ವಿಶಾಲ ಗಣಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಮಂಜುಳಾ ಗಣೇಶ್ ಆಚಾರ್ಯ ವಂದಿಸಿದರು.

ಇನ್ನಂಜೆ ಯುವಕ ಮಂಡಲದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಸ್ವಂತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Thumbnail
Posted On: 09 Oct 2021, 04:51 PM

ಕಾಪು : ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆ ಇದರ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಇನ್ನಂಜೆ ಶಾಲಾ ದಾಸಭವನದ ಸಮೀಪ ಇನ್ನಂಜೆ ಯುವಕ ಮಂಡಲದ ಸ್ವಂತ ಕಟ್ಟಡದ ಶಿಲಾನ್ಯಾಸವು ಬಾಲವನದ ವಠಾರದಲ್ಲಿ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತದಲ್ಲಿ ನೆರವೇರಿತು. ಶ್ರೀಗಳು ಶಿಲಾಫಲಕವನ್ನು ಅನಾವರಣಗೊಳಿಸಿ 50 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಇನ್ನಂಜೆ ಯುವಕ ಮಂಡಲದ ಯುವಕರ ಉಂಡಾರು ದೇವಳದ ಜೀರ್ಣೋದ್ಧಾರ ಸಂದರ್ಭದಲ್ಲಿನ ಕರ ಸೇವೆಯನ್ನು ಸ್ಮರಿಸಿದರು. ಇವರ ಕಟ್ಟಡದ ಕನಸು ಒಂದು ವರ್ಷದ ಒಳಗಾಗಿ ನೆರವೇರಲಿ ಎಂದು ಆರ್ಶಿವಚನ ನೀಡಿದರು. ವೇದಿಕೆಯಲ್ಲಿ ಮುಖ್ಶ ಅಥಿತಿಯಾಗಿ ಎಸ್.ವಿ.ಎಸ್ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್, ಯುವಕ ಮಂಡಲದ ಗೌರವ ಸಲಹೆಗಾರರಾದ ನವೀನ್ ಅಮೀನ್, ಸಲಹಾ ಸಮಿತಿಯ ಸದಸ್ಯರುಗಳಾದ ರವಿವರ್ಮ ಶೆಟ್ಟಿ ˌ ನಂದನ್ ಕುಮಾರ್ ಮತ್ತು ಸುರೇಶ್ ಎನ್ ಪೂಜಾರಿಯವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ಉಮೇಶ್ ಆಚಾರ್ಯ ವಹಿಸಿದ್ದರು. ಶಿಲಾನ್ಯಾಸ ಧಾರ್ಮಿಕ ವಿಧಿವಿಧಾನ ವನ್ನು ಉಂಡಾರು ದೇವಳದ ಅರ್ಚಕರಾದ ವಿಷ್ಣುಮೂರ್ತಿ ಮಂಜಿತ್ತಾಯರವರು ನೆರವೇರಿಸಿದರು. ಎಸ್.ವಿ.ಎಚ್ ಕಾಲೇಜು ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚರವರು ಹಾಗೂ ಎಸ್ .ವಿ. ಎಸ್ ಹೈಸ್ಕೂಲು ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯಾಯ ಮತ್ತು ಎಸ್.ವಿ.ಎಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯರಾದ ಕೀರ್ತಿ ಪೈ ರವರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಮದುಸೂಧನ್ ಆಚಾರ್ಯ ಪ್ರಾಸ್ತಾವಿಕ ಮಾತನಾಡಿ, ನಿವೃತ್ತ ಅಧ್ಯಾಪಕರಾದ ನಂದನ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಹರಿಶ್ ಪೂಜಾರಿಯವರು ವಂದಿಸಿದರು. ಸ್ಥಳೀಯ ಸಂಘ ಸಂಸ್ಧೆಯ ಅಧ್ಶಕ್ಷರುಗಳುˌ ಯುವಕ ಮಂಡಲದ ಮಾಜಿ ಅಧ್ಶಕ್ಷರುಗಳು, ಸದಸ್ಯರುಗಳು, ಸ್ಥಳೀಯರು ಉಪಸ್ಥಿತರಿದ್ದರು.

ಕಲ್ಯಾಣಪುರ ರೋಟರಿ ಕ್ಲಬ್ ಪ್ರಾಯೋಜಿತ ರೊಟರಾಕ್ಟ್ ಮತ್ತು ಇಂಟರಾಕ್ಟ್ ಕ್ಲಬ್ ಗಳ ಪದಗ್ರಹಣ ಸಮಾರಂಭ

Thumbnail
Posted On: 09 Oct 2021, 03:44 PM

ಉಡುಪಿ : ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಸರ್ಕಾರಿ ಹೈಸ್ಕೂಲು ಕೆಮ್ಮಣ್ಣು ಇಲ್ಲಿ ನ ರೊಟರಾಕ್ಟ್ ಹಾಗೂ ಇಂಟರಾಕ್ಟ್ ಕ್ಲಬ್ ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಡೆಯಿತು. ಈ ಎರಡು ಸಂಸ್ಥೆಗಳ ನೂತನ ಅಧ್ಯಕ್ಷರುಗಳಾದ ಆಕಾಶ್ ಕೋಟ್ಯಾನ್, ತಸ್ರೀನ್ ಹಾಗೂ ಕಾರ್ಯದರ್ಶಿಗಳಾದ ಶಾಂತ, ಪ್ರಜ್ಞಾ ರವರುಗಳಿಗೆ ರೋಟರಿ ಕ್ಲಬ್ಬಿನ ಅಧ್ಯಕರಾದ ಶಂಭು ಶಂಕರ್ ರವರು ಪದಪ್ರದಾನ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿಯವರಾದ ಅಲೆನ್ ಲೂವಿಸ್ ರವರು ರೋಟರಿ ಸಂಸ್ಥೆಯ ಸೇವೆ ಮತ್ತು ಯೋಜನೆಗಳ ಕುರಿತು ಮಾತನಾಡಿ, ರೊಟರಾಕ್ಟ್ ಮತ್ತು ಇಂಟರಾಕ್ಟ್ ಸಂಸ್ಥೆಯ ಧ್ಯೇಯ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಸದಸ್ಯರ ಸಕ್ರೀಯ ಪಾಲ್ಗೊಳ್ಳುವಿಕೆಯ ಅವಕಾಶ ಮತ್ತು ಪ್ರಯೋಜನಗಳ ಬಗ್ಗೆ ತಿಳಿ ಹೇಳಿ ನೂತನ ಪದಾಧಿಕಾರಿಗಳನ್ನು ಹಾಗು ಅವರ ತಂಡವನ್ನು ಅಭಿನಂದಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಜೇವಿಯರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸಂಸ್ಥೆಯ ಸಹಕಾರವನ್ನು ಸ್ಮರಿಸಿದರು. ಮತ್ತು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಪ್ರಾಮುಖ್ಯತೆ ಕುರಿತು ತಿಳಿಸಿದರು. ಕಾರ್ಯದರ್ಶಿಗಳಾದ ಪ್ರಕಾಶ್, ರೊಟರಾಕ್ಟ್ ಸಭಾಪತಿ ವಿಜಯ್ ಮಯ್ಯಾಡಿ, ರಾಮ ಪೂಜಾರಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕರು ರೊಟರಾಕ್ಟ್ ಸಂಯೋಜಕರೂ ಆದ ವಿನಯ ದೇವಾಡಿಗ ಅವರು ಸಭಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ರೋಟರಿ ಕ್ಲಬ್ ಸೈಬ್ರಕಟ್ಟೆ ವತಿಯಿಂದ ಕಾವಡಿ ಸರಕಾರಿ ಪ್ರೌಢಶಾಲೆಗೆ ಶಾಲಾ ಪರಿಕರಗಳ ಕೊಡುಗೆ

Thumbnail
Posted On: 09 Oct 2021, 03:34 PM

ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಇವರಿಂದ ಸರಕಾರಿ ಪ್ರೌಢಶಾಲೆ ಕಾವಡಿ ಇಲ್ಲಿ ಸೀಲಿಂಗ್ ಫ್ಯಾನ್ ಗಳ ಹಸ್ತಾಂತರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮನಾಭ ಕಾಂಚನ್ ಆಗಮಿಸಿದ್ದರು. ಪ್ರಸಾದ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಬುಕ್, ಪೆನ್ನು ಹಾಗೂ ಮಾಸ್ಕ್ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮನಾಭ ಕಾಂಚನ್ ಅವರು ಶೈಕ್ಷಣಿಕವಾಗಿ ಶಾಲೆಯ ಕೊಡುಗೆಗಳನ್ನು ಶ್ಲಾಘಿಸಿದರು. ಶಾಲೆಯ ಅಭಿವೃದ್ಧಿಗೆ ಸದಾ ಸಿದ್ದ ಎಂದರು. ನೀಲಕಂಠ ರಾವ್ ಇವರು ಶಾಲೆಗೆ ಕೊಡಮಾಡಿದ ನಾಲ್ಕು ಫ್ಯಾನ್ ಗಳನ್ನು ಶಾಲೆಗೆ ರೋಟರಿ ಕ್ಲಬ್ ವಲಯ 3 ರ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್ ಮೂಲಕ ಶಾಲಾ ಮುಖ್ಯಗುರುಗಳಾದ ಜಯಶ್ರೀಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ನೀಲಕಂಠ ರಾವ್ ರವರು ತಮ್ಮ ಊರಶಾಲೆಯ ಬಗೆಗಿನ ತಮ್ಮ ಅಭಿಮಾನವನ್ನು ತಮ್ಮ ಮಾತುಗಳ ಮೂಲಕ ತೋರಿಸಿಕೊಟ್ಟರು. ರೋಟರಿ ಕ್ಲಬ್ ಸೈಬ್ರಕಟ್ಟೆ ಇದರ ಅಧ್ಯಕ್ಷರಾದ ಪ್ರಸಾದ್ ಭಟ್ ಇವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ರೊಟರಿ ಕ್ಲಬ್ ನ ಶೈಕ್ಷಣಿಕ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು. ಅಣ್ಣಯ್ಯ ದಾಸ್, ನೀಲಕಂಠ ರಾವ್, ವಿಜಯಕುಮಾರ್ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಜಯಶ್ರೀ , ಶಾಲಾ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಕುಮಾರ್ ಶೋಧನ್, ಶಾಲಾ ವಿದ್ಯಾರ್ಥಿ ನಾಯಕ ಕುಮಾರ್ ಪ್ರಸನ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಮುಖ್ಯಶಿಕ್ಷಕಿ ಜಯಶ್ರೀ ಅತಿಥಿಗಳನ್ನು ಸ್ವಾಗತಿಸಿ, ಕುಮಾರಿ ಕೀರ್ತಿ ಹಾಗೂ ಕುಮಾರಿ ಸಾಕ್ಷಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲಾ ಶಿಕ್ಷಕಿ ನಾಗವೇಣಿ ವಂದಿಸಿದರು.

ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಯುವಮೋರ್ಚಾ ಕಾಪು ಮಂಡಲ ವತಿಯಿಂದ ಪೋಸ್ಟ್ ಕಾರ್ಡ್ ಅಭಿಯಾನ

Thumbnail
Posted On: 08 Oct 2021, 06:20 PM

ಕಾಪು : ಬಿಜೆಪಿ ಯುವ ಮೋರ್ಚಾ ಕಾಪು ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಪೋಸ್ಟ್ ಕಾರ್ಡ್ ಅಭಿಯಾನ ಕಟಪಾಡಿ ಎಸ್ ವಿ ಎಸ್ ಕಾಲೇಜಿನ ಬಳಿ ನಡೆಯಿತು. ಈ ಸಂದರ್ಭ ನೂರಾರು‌ ವಿದ್ಯಾರ್ಥಿಗಳು ಸಂತೋಷದಿಂದ ಪತ್ರ ಬರೆದರು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸಂತೋಷ ಕುಮಾರ್ ಮೂಡುಬೆಳ್ಳೆ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕೃಷ್ಣ ರಾವ್, ಮಂಡಲ ಉಪಾಧ್ಯಕ್ಷರಾದ ಪವಿತ್ರ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್, ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ಉದ್ಯಾವರ, ಅಭಿರಾಜ್ ಸುವರ್ಣ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡ್ವೆ, ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಶಕ್ತಿಕೇಂದ್ರ ಪ್ರಮುಖ್ ಸಂತೋಷ್ ಕುಮಾರ್, ಅರುಣ್ ಆಚಾರ್ಯ ಉಪಸ್ಥಿತರಿದ್ದರು.

ಬಿಜೆಪಿ ಯುವಮೋರ್ಚಾ ಕಾಪು ಮಂಡಲ ವತಿಯಿಂದ ಕಾಪು ಸಂತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಜಾಗೃತಿ ಮತ್ತು ಬಟ್ಟೆ ಚೀಲಗಳ ವಿತರಣೆ

Thumbnail
Posted On: 08 Oct 2021, 05:15 PM

ಕಾಪು‌: ಬಿಜೆಪಿ ಯುವಮೋರ್ಚಾ ಕಾಪು ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಜಿ ಯವರ 71ನೇ ಜನ್ಮದಿನದ ಪ್ರಯುಕ್ತ "ಸೇವೆ ಮತ್ತು ಸಮರ್ಪಣೆ" ಅಭಿಯಾನದ ಅಂಗವಾಗಿ ಕಾಪು ಸಂತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಜಾಗೃತಿ ಮತ್ತು ಬಟ್ಟೆ ಚೀಲ ಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಕಾಂತ್ ನಾಯಕ್, ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಸಂತೋಷ ಕುಮಾರ್ ಮೂಡುಬೆಳ್ಳೆ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕೃಷ್ಣರಾವ್, ನಿಕಟ ಪೂರ್ವ ಪುರಸಭಾ ಅಧ್ಯಕ್ಷರಾದ ಅನಿಲ್ ಕುಮಾರ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್, ಕಾರ್ಯದರ್ಶಿ ಸತೀಶ್ ಪೂಜಾರಿ ಉದ್ಯಾವರ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡ್ವೆ, ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

ಉಪ್ಪುಂದ : ಕನಸಿನ ಮನೆಯ ನಿರ್ಮಾಣವನ್ನು ನನಸು ಮಾಡಿದ ಡಾ. ಗೋವಿಂದ ಬಾಬು ಪೂಜಾರಿ

Thumbnail
Posted On: 08 Oct 2021, 04:50 PM

ಉಡುಪಿ : ಉಪ್ಪುಂದ ಕಾಳವರದ ನರಿ ಕೋಡ್ಲು ಮನೆ ಸತೀಶ್ ಪೂಜಾರಿಯವರು ನೂತನ ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದರು, ಆದರೆ ವಿಧಿ ಆಟವೇ ಬೇರೆಯಾಗಿತ್ತು, ಮನೆ ಪೂರ್ಣವಾಗುವ ಮೊದಲೇ ಅಕಾಲಿಕ ಮರಣಕ್ಕೆ ತುತ್ತಾದರೂ, ಇದರಿಂದ ಮನೆಯವರು ಮನೆ ನಿರ್ಮಾಣ ಮಾಡಲು ಸಾಧ್ಯವಾಗದೆ ತೀವ್ರ ಕಷ್ಟದಲ್ಲಿ ಇರುವುದು ಡಾ. ಗೋವಿಂದ ಬಾಬು ಇವರ ಗಮನಕ್ಕೆ ಬಂದು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ.) ಮೂಲಕ ಮನೆಯನ್ನು ಪೂರ್ಣಗೊಳಿಸಿ ಕೊಡುವ ಭರವಸೆಯನ್ನು ನೀಡಿದ್ದರು. ಇದೀಗ ಸುಸಜ್ಜಿತ ಮನೆ ನಿರ್ಮಾಣಗೊಂಡಿದ್ದು ಈ ಮನೆ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿ ಕೊಡುತ್ತಿರುವ 5ನೇ ಮನೆ ಇದಾಗಿದೆ. "ವರಲಕ್ಷ್ಮಿ ನಿಲಯ" ಇದರ ಗ್ರಹಪ್ರವೇಶ ಮತ್ತು ಫಲಾನುಭವಿಗಳಿಗೆ ಮನೆಯ ಕೀ ಹಸ್ತಾಂತರ ಕಾರ್ಯಕ್ರಮಕ್ಕೆ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಭಾಗವಹಿಸಿ ಡಾ.ಗೋವಿಂದ ಬಾಬು ಪೂಜಾರಿಯವರಿಗೆ ದೇವರು ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕಾಳವರ ಗ್ರಾ. ಪಂ. ಅಧ್ಯಕ್ಷೆ ಆಶಾಲತಾ ಶೆಟ್ಟಿ, ಅಶೋಕ್ ಪೂಜಾರಿ, ಕುಂದಾಪುರ ಬಿಲ್ಲವ ಸಂಘ ಅಧ್ಯಕ್ಷರು ಹಾಗೂ ಬಿಲ್ಲವ ಹಿರಿಯ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

ಅಕ್ಟೋಬರ್ 12 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದೇವಿಗೆ ಹರಕೆಯಾಗಿ ಬಂದ ಸೀರೆಗಳ ಬಹಿರಂಗ ಹರಾಜು ಪ್ರಕ್ರಿಯೆ

Thumbnail
Posted On: 07 Oct 2021, 10:43 PM

ಕಾಪು : ನವರಾತ್ರಿ ಮಹೋತ್ಸವದ ಪರ್ವ ಕಾಲದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದೇವಿಗೆ ಹರಕೆಯಾಗಿ ಬಂದಿರುವ ಸೀರೆಗಳನ್ನು ಬಹಿರಂಗವಾಗಿ ಹರಾಜು ಹಾಕುವ ಪ್ರಕ್ರಿಯೆಯು ವರ್ಷಂಪ್ರತೀ ನಡೆಯುತ್ತದೆ. 12/10/2021ನೇ ಮಂಗಳವಾರ ಚಂಡಿಕಾಯಾಗ ನಡೆಯಲಿದ್ದು, ವರ್ಷಂಪ್ರತಿಯಂತೆ ಹರಾಜು ಪ್ರಕ್ರಿಯೆ ಈ ಬಾರಿಯೂ ಜರುಗಲಿದೆ. ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಗೌರವಯುತವಾಗಿ ಕೆಲಸ ಮಾಡುವುದು ಮಹಿಳೆಯ ಮೂಲಭೂತ ಹಕ್ಕು : ನ್ಯಾ.ಶರ್ಮಿಳಾ

Thumbnail
Posted On: 07 Oct 2021, 09:16 PM

ಉಡುಪಿ : ಮಹಿಳೆಯರು ತಾವು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಪುರುಷರ ಯಾವುದೇ ಕಿರುಕುಳಕ್ಕೆ ಒಳಗಾಗದೇ ಗೌರವಯುತವಾಗಿ ಕೆಲಸ ಮಾಡುವುದು ಮಹಿಳೆಯ ಮೂಲಭೂತ ಹಕ್ಕು ಎಂದು ವಿಶಾಖಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಶ್ರಾಯದಲ್ಲಿ ಸ್ವಾತಂತ್ರ್ಯೋತ್ಸವದ 75 ನೇ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಡೆದ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ವಲಯಗಳಲ್ಲಿ ಪುರುಷರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ಮಹಿಳೆಯರು ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದಿಂದ, ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ತೀವ್ರ ಒಳಗಾಗುತ್ತಾರೆ. ಇಂತಹ ದೌರ್ಜನ್ಯಗಳ ವಿರುದ್ಧ ಮಹಿಳೆಯರ ರಕ್ಷಣೆಗಾಗಿ ಸರ್ಕಾರವು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ,ನಿವಾರಣೆ) ಅಧಿನಿಯಮ 2013 ನ್ನು ಜಾರಿಗೆ ತಂದಿದ್ದು, ಈ ಕುರಿತು ಎಲ್ಲಾ ಮಹಿಳೆಯರು ಸೂಕ್ತ ಅರಿವು ಹೊಂದಿರುವಂತೆ ಮತ್ತು ದೌರ್ಜನ್ಯಕ್ಕೆ ಒಳಗಾದಲ್ಲಿ ಸೂಕ್ತ ಕಾನೂನು ನೆರವು ಪಡೆಯುವಂತೆ ನ್ಯಾ.ಶರ್ಮಿಳಾ ಹೇಳಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ವಿಜಯ್ ವಾಸು ಪೂಜಾರಿ ಮಾತನಾಡಿ, ಮಹಿಳೆ ಕೆಲಸ ನಿರ್ವಹಿಸುವ ಸ್ಥಳ ಎಂದರೆ ಸರ್ಕಾರಿ ಕಚೇರಿ ಮಾತ್ರವಲ್ಲದೇ ಎಲ್ಲಾ ಖಾಸಗಿ ಸಂಸ್ಥೆಗಳ ಮತ್ತು ಖಾಯಂ, ಗುತ್ತಿಗೆ, ಅರೆಕಾಲಿಕ, ಹೊರಗುತ್ತಿಗೆ , ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಸಹ ಈ ವ್ಯಾಪಿಗೆ ಬರಲಿದ್ದು, ಇವರ ಮೇಲೆ ಕೆಲಸ ಮಾಡುವ ಸ್ಥಳದಲ್ಲಿ ಒಂದಲ್ಲ ಒಂದು ಕಾರಣದಿಂದ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದೆ. ಬಲಿಷ್ಠವಾದ ಕಾನೂನಿನ ಬೆಂಬಲ ಹೊಂದಿದ್ದರೂ ಪ್ರಸುತ್ತ ಕಾಲದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿವೆ ಎಂದ ಅವರು, ಮಹಿಳೆಯರು ಕೆಲಸ ನಿರ್ವಹಿಸುವ ಎಲ್ಲಾ ವಲಯಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯವಾಗಿದ್ದು, ಸಮಿತಿಯನ್ನು ರಚಿಸದೇ ಇರುವ ಸಂಸ್ಥೆಗಳಿಗೆ 50,000 ದಿಂದ 1 ಲಕ್ಷದ ವರೆಗೆ ದಂಡ ವಿಧಿಸುವುದು ಸೇರಿದಂತೆ, ಪರವಾನಗಿಯನ್ನು ರದ್ದುಪಡಿಸುವ ಅವಕಾಶ ಕೂಡಾ ಕಾನೂನಿನಲ್ಲಿ ಇದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆ 90 ದಿನಗಳ ಒಳಗೆ ಸಮಿತಿಗೆ ದೂರು ನೀಡಬಹುದು ಎಂದರು. ದೌರ್ಜನ್ಯಕ್ಕೆ ಒಳಗಾದ ಮಹಿಳೆ ದೂರು ನೀಡುವ ಸ್ಥಿತಿಯಲ್ಲಿರದೇ ಆಘಾತದಲ್ಲಿದ್ದಲ್ಲಿ ಅವಳ ಕಾನೂನುಬದ್ದ ವಾರೀಸುದಾರರು ಮಹಿಳೆಯ ಪರವಾಗಿ ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಹ ಅವಕಾಶವಿದೆ, ನೊಂದ ಮಹಿಳೆಗೆ ಮಧ್ಯಂತರ ಪರಿಹಾರ ಸೇರಿದಂತೆ ಸೂಕ್ತ ನ್ಯಾಯ ದೊರೆಯಲಿದೆ. ಜಿಲ್ಲಾವ್ಯಾಪ್ತಿಯಲ್ಲಿ ರಚನೆಯಾಗುವ ಆಂತರಿಕ ದೂರು ಸಮಿತಿಗೆ ಜಿಲ್ಲಾಧಿಕಾರಿಗಳು ಆಧ್ಯಕ್ಷರಾಗಿದ್ದು, ಪ್ರತೀ 6 ತಿಂಗಳಿಗೊಮ್ಮೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಕುರಿತು ಮಾಹಿತಿಯನ್ನು ರಾಜ್ಯಕ್ಕೆ ಸಲ್ಲಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ಶೇಷಪ್ಪ ಉಪಸ್ಥಿತರಿದ್ದರು. ಮಹಿಳಾ ಅಭಿವೃದ್ದಿ ನಿಗಮದ ನಿರೀಕ್ಷಕಿ ಚಂದ್ರಿಕಾ ಎಸ್ ನಾಯಕ್ ಸ್ವಾಗತಿಸಿ, ಶಾರದಾ ವಂದಿಸಿದರು.