Updated News From Kaup

ಕಾಪು ಮಾರಿಯಮ್ಮನ ಆದಿಸ್ಥಳದಲ್ಲಿ ರಾಜಮನೆತನದವರು ಬಳಸಿದ ಖಡ್ಗಕ್ಕೆ ಆಯುಧ ಪೂಜೆ

Posted On: 25-10-2020 10:14PM

ಕಾಪು ಮಾರಿಯಮ್ಮ ದೇವಸ್ಥಾನದ ಆಧಿಸ್ಥಳವಾಗಿರುವ ಶ್ರೀ ತ್ರಿಶಕ್ತಿ ಸನ್ನಿಧಾನ ಕೋಟೆಮನೆ. ಇಂದಿನ ನವರಾತ್ರಿ ಅಲಂಕಾರ, ಹಾಗೂ ನೂರಾರು ವರ್ಷದ ಹಿಂದೆ ಇಲ್ಲಿನ ರಾಜ ಮನೆತನದವರು ಉಪಯೋಗಿಸಿದ ಖಡ್ಗಕ್ಕೆ ಆಯುಧ ಪೂಜೆ ಪ್ರಯುಕ್ತ ಖಡುಬು ಬಡಿಸುವ ಸಂಪ್ರದಾಯ ನೆರವೇರಿತು.

ನಿರಾಶ್ರಿತ ಹಿರಿಯ ಮಹಿಳೆಗೆ ಮನೆ ಹಸ್ತಾಂತರ

Posted On: 25-10-2020 09:46PM

ಉಡುಪಿ : ಮಳೆಗಾಲದಲ್ಲಿ ಇದ್ದ ಸಣ್ಣ ಮನೆಯನ್ನು.ಕಳೆದುಕೊಂಡಿದ್ದ ಸಾವಿರಾರು ಮಹಿಳೆಯರಿಗೆ ಹೆರಿಗೆ ಶೂಶ್ರುಶೆ ನಡೆಸಿಕೊಂಡು ಬಂದಿರುವ ಸೂಲಗಿತ್ತಿ ಹಿರಿಯರಾದ ಸುಂದರಿ ಸುವಣ೯ ಯವರಿಗೆ ಹೋಂ ಡಾಕ್ಟರ್ ಫೌಂಡೇಶನ್ ಮತ್ತು ದಾನಿಗಳ ನೆರವಿನಿಂದ ಕಟ್ಟಿಸಿರುವ ಮನೆ ಹಸ್ತಾಂತರ ಕಾಯ೯ಕ್ರಮ ಅ.25 ರಂದು ರಂದು ನಡೆಯಿತು.ಕಾಯ೯ಕ್ರಮಕ್ಕೆ ಸ್ವಾಮಿ ಕೊರಗಜ್ಜ ದೈವಸ್ಥಾನದ ಮುಖ್ಯಸ್ಥರಾದ ಕೃಷ್ಣ ಕುಲಾಲ್ ಮತ್ತು ಕುಕ್ಕೆಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹೆಗ್ಡೆ ಚಾಲನೆ ನೀಡಿ ಶುಭ ಹಾರೈಸಿದರು.

ಫೌಂಡೇಶನ್ ಪ್ರಮುಖರಾದ ಡಾ" ಶಶಿಕಿರಣ್ ಶೆಟ್ಟಿ ಮಾತನಾಡಿ ನಮ್ಮ ಸಂಸ್ಥೆಯು ಕಳೆದ 6 ವಷ೯ದಿಂದ ಹಲವಾರು ಜನಪರ ಕಾಯ೯ಕ್ರಮವನ್ನು ದಾನಿಗಳ ಸಹಕಾರದಿಂದ ನಡೆಸಿರುತ್ತೇವೆ. ಈ ಸುಂದರಿ ಅಜ್ಜಿಯ ವರ ಮನೆಯು ತೀರಾ ದುರಸ್ತಿಯಲ್ಲಿತ್ತು ದಾನಿಗಳ ಸಹಕಾರ ಮತ್ತು ನಮ್ಮ ಸದಸ್ಯ ಸಹಕಾರದಿಂದ ಉತ್ತಮವಾದ ಮನೆ ನಿಮಾ೯ಣವಾಗಿದೆ ಎಂದರು.ಸಂಸ್ಥೆಯ ಪ್ರಮುಖ ಮುಂದಿನ ಯೋಜನೆಗಳ ಮಾಹಿತಿ ನೀಡಿದರು. ಡಾII ಸುಮಾ ಎಸ್.ಶೆಟ್ಟಿ ಶುಭ ಹಾರೈಸಿದರು.ಈ ಸಂದಭ೯ದಲ್ಲಿ ಸುಂದರಿ ಯವರನ್ನು ಧನ ಸಹಾಯದೊಂದಿಗೆ ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಬಂಗಾರಪ್ಪ, ರಾಘವೇಂದ್ರ ಪೂಜಾರಿ,ಸುಜಯ ಶೆಟ್ಟಿ ಸವಿತಾ ಶೆಟ್ಟಿ, ಗಣೇಶ್, ಶಶಿ , ನಯನಾ ಸದಸ್ಯರು ಭಾಗವಹಿಸಿದ್ದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ ವಂದಿಸಿದರು.

ಊಟ - ಆಟ - ಪಾಠ ಕ್ಷೇತ್ರಕ್ಕೆ ಭೂಷಣ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು

Posted On: 25-10-2020 09:26PM

ಶ್ರೀ ದುರ್ಗಾ ಪರಮೇಶ್ವರಿಯು "ಭ್ರಾಮರಿ"ಯಾಗಿ ಆವಿರ್ಭವಿಸಿದ 'ಪುಣ್ಯ ಭೂಮಿ' ಕಟೀಲು .ವಿಸ್ತೃತ ನಿತ್ಯಪೂಜಾ ವಿಧಾನ , ವಿಶೇಷ ಪರ್ವಗಳ ವಿಶಿಷ್ಟ ಆಚರಣೆ , ಆಗಮ ಬದ್ಧತೆ , ಸಂಪ್ರದಾಯ - ಶಿಷ್ಟಾಚಾರ , ಶಿಕ್ಷಣ - ಕಲೆಗಳಿಗೆ ಆಶ್ರಯಸ್ಥಾನ, ನಿರಂತರ ಮೂರುಹೊತ್ತು ಅನ್ನ ದಾಸೋಹ ನೆರವೇರುವ ದೇವಾಲಯ ಪರಿಕಲ್ಪನೆಯ ಪರಿಪೂರ್ಣ ಅನಾವರಣವಾಗಿ ಕಟೀಲು ಕ್ಷೇತ್ರ ಆದೃತವಾಗಿದೆ . ‌‌‌ ನಿಗೂಢ ರಹಸ್ಯವನ್ನು ,ಅಭೇದ ಸತ್ಯವನ್ನು , ಭವ್ಯದ ಅಂತರ್ಗತ ದಿವ್ಯ ಸಂಕಲ್ಪದ ವ್ಯಾಖ್ಯಾನವನ್ನು ನೀಡುವಂತೆ ಕಟೀಲು ಕ್ಷೇತ್ರ ನಿಸರ್ಗದ ಅಚ್ಚರಿಯಾಗಿದೆ ; ಆದರೆ ಅಷ್ಟೆ ಸಹಜವಾಗಿ‌ ಭಾಸವಾಗುತ್ತದೆ . ಗೊಂದಲಗಳಿಲ್ಲದ ಕಟೀಲಮ್ಮನ ಸನ್ನಿಧಾನ ನಂಬಿಕೆಯ ನೆಲೆಯಾಗಿ ರೋಚಕ ಅನುಭವಗಳನ್ನು‌ ನೀಡುತ್ತದೆ . ದರ್ಶನ ಸಾರ್ಥಕವಾಗುತ್ತದೆ .ಬನ್ನಿ........ಇಲ್ಲಿ ನಿಗೂಢ ರಹಸ್ಯಗಳಿದ್ದರೂ , ವಿಲಕ್ಷಣತೆಗಳಿದ್ದರೂ ಶ್ರೀ ಕ್ಷೇತ್ರ ಕಟೀಲು 'ಕ್ಲಿಷ್ಟ' ಅನ್ನಿಸುವುದಿಲ್ಲ .ಆದರೆ ಸರಳ ಸುಂದರ ಸಾಕ್ಷಾತ್ಕಾರದ ಅನುಭವವಾಗುತ್ತದೆ. ಈ ದರ್ಶನ ; ಮುಗ್ಧ ಭಾವ ಮತ್ತು ಶ್ರದ್ಧೆಯೇ ಪ್ರಧಾನವಾಗಿ ನಿಚ್ಚಳ‌ ಹಾಗೂ ದಿವ್ಯ ಅನುಭವದಿಂದ ಭಕ್ತನ ಮನಸ್ಸು ಪ್ರಸನ್ನವಾಗುತ್ತದೆ . ಕಾರಣ ಇಲ್ಲಿ ನೆಲೆಯಾದವಳು "ಕಟ್ಲಪ್ಪೆ" ಅಥವಾ "ಕಟೀಲಪ್ಪೆ" ,ಆಕೆಯೇ 'ಜಗಜ್ಜನನಿ‌', ದುರ್ಗಾಪರಮೆಶ್ವರೀ .ಸ್ಥೂಲವಾಗಿ ಹೇಳುವುದಾದರೆ ಒಬ್ಬಳು 'ಅಮ್ಮ" ...ಸ್ವತಃ ತಾನೇ ಆವಿರ್ಭವಿಸಿದ ಸತ್ಯದ ಸಂಕಲ್ಪ‌. ಈ ಅಮ್ಮನ ಸನ್ನಿಧಾನ ಯಾಕಿಷ್ಟು‌ ಆತ್ಮೀಯವಾಗುತ್ತದೆ ? .......'ಅಮ್ಮಾ'...ಎರಡಕ್ಷರದ ಅಕ್ಷರಕ್ಕಿರುವ ಅಮೇಯವಾದ ಅಮಿತ ಭಾವನೆಗಳನ್ನು ಉದ್ದೀಪಿಸಬಲ್ಲ ಅಮೂಲ್ಯ ,ಅಮಲ ಸಂಬಂಧವನ್ನು‌ ನೆನಪಿಸಿ ಸ್ಥಾಯಿಗೊಳಿಸಬಲ್ಲ ಅನನ್ಯತೆ ಅನ್ಯ ಸಂಬಂಧ ವಾಚಕಗಳಿಲ್ಲ .ಅಂದರೆ ಒಬ್ಬಳು 'ಅಮ್ಮ'ನೊಂದಿಗೆ ಹೇಗೆ ಬೆಸೆದು ಕೊಳ್ಳಬಲ್ಲೆವೋ‌ ಅಷ್ಟೆ‌ ಸಲುಗೆಯಿಂದ ಗಾಢವಾಗಿ ಕಟೀಲಮ್ಮನೊಂದಿಗೆ‌ 'ತಾದಾತ್ಮ್ಯ' ಸಾಧಿಸಬಹುದು .ಆದರೆ ಶ್ರದ್ಧೆ , ನಂಬಿಕೆ ಪ್ರಧಾನವಾಗುತ್ತದೆ . ಇದು ಇಲ್ಲಿಯ ಸಾನ್ನಿಧ್ಯ ವಿಶೇಷ . ಅಮ್ಮ - ಮಗು ಸಂಬಂಧ ಲೌಕಿಕದಲ್ಲಿ‌ ಸಂಭವಿಸಿದ ಬಾಂಧವ್ಯ .ಇದು ಅಪ್ಪಟ ಸತ್ಯ .ವಾತ್ಸಲ್ಯ , ಕರುಣೆಯನಿಧಿ‌ , ಅಮೂರ್ತಭಾವ - ಬಂಧನ‌ ಆದುದರಿಂದ ಶ್ರೇಷ್ಠ , ಜ್ಯೇಷ್ಠ , ಸರ್ವಮಾನ್ಯ ,ಪ್ರೀತಿಯ ಉಗಮಸ್ಥಾನ. ಈ ಪ್ರೀತಿ ,ಬಾಂಧವ್ಯವೇ, ಕಾರಣವಾಗುವ ಕಟೀಲಮ್ಮನ ದರ್ಶನಕ್ಕೆ ಭಕ್ತಸಂದೋಹ ಆಗಮಿಸುತ್ತದೆ. ಅಮ್ಮನಲ್ಲಿ‌ ನಿವೇದಿಸಿಕೊಳ್ಳಲು ಅಂಜಿಕೆ ಇಲ್ಲ , ಕಷ್ಟ ವಿವರಿಸಲು ಸಂದೇಹಗಳಿಲ್ಲ , ಆದುದರಿಂದ ಕೃಪಾಕಟಾಕ್ಷ ಪ್ರಾಪ್ತಿ .ಇಷ್ಟಾರ್ಥ ಸಿದ್ಧಿ ಸುಲಭಸಾಧ್ಯ . ಭ್ರಾಮರೀ ದುರ್ಗಾಪರಮೇಶ್ವರಿಯೊಂದಿಗೆ ಏರ್ಪಡುವ ಬಾಂಧವ್ಯ ... ಆಮೂಲಕ‌ ದೊರೆಯುವ ಆನಂದ ,ಧನ್ಯತೆ ಕಟೀಲಮ್ಮನನ್ನು ದರ್ಶಿಸಿದವರಿಗೆ ಮಾತ್ರ ಸ್ವಯಂವೇದ್ಯ. ಅಂತಹ ಆಕರ್ಷಣೆ ಈ ಉದ್ಭವ ಸನ್ನಿಧಿಯಲ್ಲಿದೆ .

ನಂದಿನಿ ನದಿಯಾದಳು: ಭೂಮಿಗೆ ಮಳೆಬಾರದೆ , ಬೆಳೆ ಬೆಳೆಯದೆ ಘನಘೋರ ಕ್ಷಾಮ ಉಂಟಾಗುತ್ತದೆ . ಕ್ಷೋಭೆಯಿಂದ ಸಜ್ಜನರ ಬದುಕು ದಯನೀಯವಾಗುತ್ತದೆ . ಧರ್ಮ ಸಂಪೂರ್ಣ ನಾಶವಾಗುತ್ತದೆ ,ದುಷ್ಟ ಶಕ್ತಿಗಳು ವಿಜೃಂಭಿಸಲಾರಂಭಿಸುತ್ತವೆ ಆಗ ಮಹರ್ಷಿ ಜಾಬಾಲಿ ತಪಸ್ಸಿನಿಂದ ಎದ್ದು ವಸುಂಧರೆಯ ಕ್ಷಾಮ ಪರಿಹರಿಸಲು ಏನು ಮಾಡೋಣ ? ಎಂದು ಯೋಚಿಸಿ ; ಸ್ವರ್ಗಕ್ಕೆ ಹೋಗುತ್ತಾನೆ ಇಂದ್ರನ ಸೂಚನೆಯಂತೆ ಕಾಮಧೇನುವಿನ‌ ಮಗಳಾದ ನಂದಿನಿಯಲ್ಲಿ‌ ಧರೆಗಿಳಿದು ಬಂದು ಯಜ್ಞಕಾರ್ಯಕ್ಕೆ ಸುವಸ್ತುಗಳನ್ನು ಅನುಗ್ರಹಿಸು ಎಂದು ವಿಂತಿಸಿಕೊಳ್ಳುತ್ತಾನೆ. ಆದರೆ ನಂದಿನಿ ಬರಲೊಲ್ಲೆ ಎನ್ನಲು ಶಪಿಸುತ್ತಾನೆ . ಅನಿರೀಕ್ಷಿತ ಶಾಪದಿಂದ ತಲ್ಲಣಗೊಂಡ ನಂದಿನಿ ಜಗನ್ಮಾತೆಯನ್ನು ಪ್ರಾರ್ಥಿಸಿ ಆಕೆಯ ನಿರ್ದೇಶನದಂತೆ ಭೂಮಿಯಲ್ಲಿ ನದಿಯಾಗಿ ಹರಿಯುತ್ತಾಳೆ .ತುಂಬಿ ಹರಿಯುವ ನಂದಿನಿ ನದಿಯ ಕಟಿ ಭಾಗದಲ್ಲಿ ಭ್ರಾಮರಿ ದುರ್ಗಾಪರಮೇಶ್ವರಿಯಾಗಿ ಹುಟ್ಟಿಬರುವ ಕಾಲದ ನಿರೀಕ್ಷೆಯಲ್ಲಿರುತ್ತಾಳೆ ನಂದಿನಿ . ಮಳೆಯಿಂದ ಬೆಳೆಯು ಭಾಗ್ಯವಾಗುತ್ತಾ ಸಮೃದ್ಧಿ ನೆಲೆಯಾಗುತ್ತದೆ . ಮಹರ್ಷಿ ಜಾಬಾಲಿ ಧನ್ಯನಾಗುತ್ತಾನೆ .ಆಗ ಕೇಳಿ ಬರುವುದು ಅರುಣ ದೈತ್ಯನ ಅಟ್ಟಹಾಸ . ಧರ್ಮ ಸಂಪೂರ್ಣ ವ್ಯತ್ಯಸ್ಥಗೊಳ್ಳುತ್ತದೆ . ಈ ದೈತ್ಯನ ವಧೆಗಾಗಿ ಜಗಜ್ಜನನಿ ನಂದಿನಿ ನದಿಯ ಕಟಿ ಭಾಗದಿಂದ ಭ್ರಾಮರಿಯಾಗಿ ಉದ್ಭವಿಸಿ ಅರುಣ ದೈತ್ಯನನ್ನು ವಧಿಸುತ್ತಾಳೆ .ಧರ್ಮದ ಮರು ಸ್ಥಾಪನೆಯಾಗುತ್ತದೆ . ಇಂತಹ ಕಥೆಯೊಂದು ಇಲ್ಲಿ ನಡೆಯಿತು , ಲೋಕ ಕಲ್ಯಾಣವಾಯಿತು .ನೋಡಿ....‌ಗರ್ಭಗುಡಿಯ ಒಳಗೆ ಅಲಂಕೃತ ಕಟೀಲಮ್ಮನನ್ನು ಕಾಣುತ್ತಿದ್ದೇವೆ . ಈ ಸುಂದರ ಬಿಂಬದ ಮೂಲದಲ್ಲಿ 'ಸ್ವಯಂಭೂ ಭ್ರಾಮರಿ' ಸನ್ನಿಹಿತಳಾಗಿರುವಳು .ಆ ಅಮ್ಮನ ಮೂರ್ತಸ್ವರೂಪವೇ ನಾವು ಕಾಣುವ 'ದಿವ್ಯ ರೂಪ' .ಆದರೆ ಇದು ಭವ್ಯದಲ್ಲಿ ಅಲಂಕೃತವಾಗಿದೆ ,ಆಕರ್ಷಣೀಯವಾಗಿದೆ. ಸಕಲ ಇಚ್ಛಾಭೋಗಗಳನ್ನು ಅನುಗ್ರಹಿಸುವ ,ಸರ್ವ ಲೌಕಿಕ ಸಂಪತ್ತನ್ನು , ಅಲೌಕಿಕ ಕಾಮನೆಗಳನ್ನು‌ ಈಡೇರಿಸುವ ಭ್ರಮರಾಂಬೆಯನ್ನು‌ "ಮಹಾಲಕ್ಷ್ಮೀ" ಎಂಬ ಅನುಸಂಧಾನದೊಂದಿಗೆ ಪೂಜಿಸುವ ವಿಧಾನವು ಇಲ್ಲಿ ರೂಢಿಯಲ್ಲಿದೆ .ಪುರಾತನ ತಾಳೆಗರಿಯಲ್ಲಿ ದೊರೆತ ನಿರ್ಜರಾರಣ್ಯ ಮಹಾತ್ಮೆಯಲ್ಲಿ‌ ...ಹರಿಯುವ ನಂದಿನಿ ಇಬ್ಬಾಗವಾಗಿ ಹರಿಯುವ ಪ್ರದೇಶದಲ್ಲಿ 'ಲಕ್ಷ್ಮೀನಾರಾಯಣರ ಸನ್ಮಿಧಾನವಿದೆ ಎಂಬ ಉಲ್ಲೇಖವಿದೆ ಎನ್ನುತ್ತಾರೆ ಆಸ್ರಣ್ಣರು. ಸಂಪತ್ತಿನ ಅಧಿದೇವತೆ ; ಶೋಭೆ , ಕಾಂತಿ , ಲಕ್ಷಣ ಮುಂತಾದುವುಗಳನ್ಪೇನು ಅಪೇಕ್ಷಿಸಿ ಆಗಮಿಸುವ ಭಕ್ತರಿಗೆ ಕರುಣಿಸುವಂತೆ ಪ್ರಾರ್ಥಿಸಿ ಪೂಜಿಸುವ ಈ ಅನುಸಂಧಾನದ ಕಲ್ಪನೆ ವೈಚಾರಿಕ ವೈಶಾಲ್ಯತೆಯನ್ನು ಒಳಗೊಂಡಿದೆ .ದುರ್ಗೆಯನ್ನು ಮಹಾಕಾಳಿ ,ಮಹಾಲಕ್ಷ್ಮೀ , ಮಹಾಸರಸ್ವತಿಯಾಗಿ ಪೂಜಿಸುವ ಅವಕಾಶವಿದೆ .ಈ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿಯನ್ನು "ಮಹಾಲಕ್ಷ್ಮೀ" ಎಂದು ಪೂಜಿಸಲಾಗುತ್ತಿದೆ. ಈ ಮಹಾತಾಯಿ ಸಂಪತ್ತನ್ನು ಮಾತ್ರವಲ್ಲ ಭಕ್ತ ಸಂದೋಹಕ್ಕೆ ಲೌಕಿಕ ಸಂಪತ್ತನ್ನು ಅಲೌಕಿಕ ಆನಂದವನ್ನು ಒದಗಿಸುವವಳು ಎಂಬುದು ಸಂಕಲ್ಪ . ನಂದಿನಿ ಧರೆಗಿಳಿದಳು ,ಜಗಜ್ಜನನಿ ಆವಿರ್ಭವಿಸಲು ವೇದಿಕೆ ಸೃಷ್ಟಿಯಾಯಿತು .ಇದರೊಂದಿಗೆ ಕ್ಷಾಮ ಪರಿಹಾರವಾಯಿತು .ಮನುಜರ ಹಸಿವು ಶಾಂತವಾಯಿತು .ಭ್ರಾಮರಿಯು ಗೋಚರಳಾಗಿ ಅರುಣ ದೈತ್ಯನನ್ನು ವಧಿಸಿದ ಪುಣ್ಯ ಭೂಮಿ ಶ್ರೀಕ್ಷೇತ್ರವಾಯಿತು .ಮನುಕುಲದ ಹಸಿವು ನಿವಾರಣೆಯಾದ ನೆನಪಲ್ಲಿ ಕಟೀಲಮ್ಮನ ಸನ್ನಿಧಿ "ಅನ್ನದಾನ"ಕ್ಕೆ ಹೆಸರಾಯಿತು .ಮೂರು ಹೊತ್ತು ಅನ್ನದಾನ ನಿತ್ಯನಿರಂತರವಾಯಿತು . ಕಟೀಲಮ್ಮ ಅನ್ನಪೂರ್ಣೆಯಾಗಿ ಅನುಗ್ರಹಿಸಿದಳು‌. ಅನ್ನದಾನ 'ಅನ್ನಪ್ರಸಾದ"ವಾಗಿ ಅಲ್ಲ ಮೃಷ್ಟಾನ್ನ ಭೋಜನದ ವ್ಯವಸ್ಥೆ . ಕಟೀಲಿಗೆ ಬರುವವರು ,ಹಸಿದುಬರುವವರು "ಉಂಡು ದಣಿ"ಯುವುದು ಖಂಡಿತ . ಏಕೆಂದರೆ ಇದು ಅಮ್ಮ , ಮಕ್ಕಳಿಗೆ‌ ಬಡಿಸುವ ಮಮತೆಯ ಪಕ್ವಾನ್ನ . ಕ್ಷಾಮದ ತೀವ್ರತೆಯಿಂದ 'ಅಶನ'ದಂತೆ 'ವಸನ'ವೂ ದುರ್ಲಭ ವಾಗಿತ್ತು .ಅದರ ನೆನಪಿಗೆ ..ಅಮ್ಮನಿಗೆ ಭಕ್ತರಿಂದ ಸೀರೆಯ ಸಮರ್ಪಣೆ .ಅಮ್ಮನಿಂದ ಭಕ್ತರಿಗೆ ಶೇಷವಸ್ತ್ರ ವಿತರಣೆ. ಇಂತಹ 'ತವರು ಮನೆ'ಯನ್ನು ಬೇರೆಲ್ಲೂ ಕಾಣುವುದು ವಿರಳ . ಜಗಜ್ಜನನಿಯ ಆರಾಧನೆಯಲ್ಲಿ ಅವರ್ಣನೀಯ ಆನಂದವಿದೆ .ಎಲ್ಲಿ ಆನಂದವಿರುತ್ತದೋ ಅಲ್ಲಿ ನೈಜವಾದ ಸಂಭ್ರಮ ,ವೈಭವಗಳಿರುತ್ತವೆ .ಇದೇ ಮಂಗಲಕರವಾದುದು . ಇದು ಸೌಮಾಂಗಲ್ಯದ ಪರಿಣಾಮವಾದುದರಿಂದ ಮನಸ್ಸು ,ಭಾವಗಳು ಅರಳುವ ಅನಿರ್ವಚನೀಯ ಅನುಭವದ ಕ್ಷಣಗಳು .

ಯಕ್ಷಗಾನ - ಆಟ :ಈ ಸಂದರ್ಭದ ಸಂತೋಷದ ‌ಅಭಿವ್ಯಕ್ತಿಯಾಗಿ ಆರಾಧನಾ ಶ್ರದ್ಧೆಗೆ ಸಹಜವಾಗಿ ಜೋಡಿಸಲ್ಪಡುವುದು. ಗಾಯನ - ನರ್ತನಗಳು ಷೊಡಷೋಪಚಾರ ಪೂಜೆಯ ಅಂಗವಾಗಿದೆ ತಾನೆ ...? ನಮ್ಮ ಮಣ್ಣಿನ ಕಲೆಯಾದ ಯಕ್ಷಗಾನವು ಸರ್ವಾಂಗ ಸುಂದರ ಕಲೆ .ಇದರಲ್ಲಿ ಸಂಗೀತವಿದೆ , ವಾದನವಿದೆ , ನರ್ತನವಿದೆ , ಬಣ್ಣದ ಲೋಕವೇ ತೆರೆದುಕೊಳ್ಳುತ್ತದೆ .ತುಳು ಮಣ್ಣಿನಲ್ಲಿ ಈ ಮಣ್ಣಿನ ಸತ್ಯವಾಗಿ ಆವಿರ್ಭವಿಸಿದ ಕಟೀಲಮ್ಮನಿಗೆ ಯಕ್ಷಗಾನವೆಂದರೆ ಪ್ರೀತಿ .ಆದುದರಿಂದಲೇ ಯಕ್ಷಗಾನ ಸೇವೆಯಾಗಿ ನೆರವೇರುತ್ತವೆ. ಒಮ್ಮೆ ಭಾರೀ ಮಳೆಯಿಂದ ನಂದಿನಿ ನದಿ ಉಕ್ಕೇರಿ ಹರಿಯುತ್ತಾಳೆ . ದೇವಸ್ಥಾನ ಜಲಾವೃತವಾಗುತ್ತದೆ .ಈಗ ಇರುವಂತಹ ಸಂಪರ್ಕ ವ್ಯವಸ್ಥೆ ಇರಲಿಲ್ಲ . ನೆರೆ ಏರುತ್ತಿರುವಂತೆ ದೇವಳದ ವಸ್ತುಗಳೆಲ್ಲ ನೆರೆ ನೀರಿನಲ್ಲಿ ತೇಲಿ ಹೋಯಿತು .ಆಸ್ರಣ್ಣರು ಅಮ್ಮನ ಲಿಂಗವನ್ನು ಅಪ್ಪಿಹಿಡಿದು ಕುಳಿತರು ."ತೇಲುವುದಿದ್ದರೆ ಅಮ್ಮನೊಂದಿಗೆ" ಎಂಬ ಸಂಕಲ್ಪವಿತ್ತು . ನೆರೆ ಇಳಿದಾಗ ದೇವಳದಲ್ಲಿ ಉಳಿದದ್ದು ಆಟದ ಗಣಪತಿ ಪೆಟ್ಟಿಗೆ ಮತ್ತು ಅಕ್ಕಿ ಹಾಕುವ ಕಲೆಂಬಿ ಮಾತ್ರ . ಯಕ್ಷಗಾನದಂತೆಯೇ ಅನ್ನದಾನ ಪ್ರಿಯಳು ದುರ್ಗಾಪರಮೇಶ್ವರೀ .ಅದು ಇಂದಿಗೂ ಸತ್ಯವೇ ಅಲ್ಲವೆ.. 'ಆಟ ಗೊಬ್ಬಾವೆ' - ಆಟ ಆಡಿಸುತ್ತೇನೆ ಎಂಬುದೇ ಅತಿ ಜನಪ್ರಿಯವಾದ ಸೇವೆ . ಆರು ಮೇಳಗಳು ಪ್ರತಿವರ್ಷ ತಿರುಗಾಟ ಮಾಡುತ್ತವೆ .ಆದರೂ ಮುಂದಿನ ಹಲವು ವರ್ಷಗಳ ತಿರುಗಾಟಕ್ಕೆ ನೋಂದಣಿಯಾದ ಆಟಗಳಿವೆ . ಇದೇ ಕಟೀಲಿನ ಬೀದಿಯಲ್ಲಿ‌ ನಡೆಯುವ ಯಕ್ಷಗಾನ ಬಯಲಾಟ ಸೇವೆಗಳನ್ನು ರಕ್ತೇಶ್ವರೀ ಕಲ್ಲಿನಲ್ಲಿ ಕುಳಿತು ‌ಕಟೀಲಮ್ನನೇ ವೀಕ್ಷಿಸುತ್ತಾಳೆ ಎಂಬುದು ನಂಬಿಕೆ . ಕುದುರು ಪ್ರದೇಶ :ಇದು ಅರುಣ ದೈತ್ಯನ ವಧಾ ಸ್ಥಳವೇ ಕುದುರು ಪ್ರದೇಶ . ದುರ್ಗಾಪರಮೇಶ್ವರೀ ಭ್ರಮರ ರೂಪ ತಾಳಿ ಅರುಣನನ್ನು ಸಂಹರಿಸಿದ ಪ್ರದೇಶ . ಸುತ್ತಲೂ ನಂದಿನಿ ನದಿ .ಆದುದರಿಂದ ಇದು ಕುದುರು . ಇದೇ ಮೂಲಸ್ಥಾನ . ಆದರೆ....ರಕ್ತಪಾತವಾದ ಅಪವಿತ್ರ ಭೂಮಿ ಆರಾಧನೆಗೆ ಯೋಗ್ಯ ಅಲ್ಲವಾದುದರಿಂದ ಈಗ ದೇವಳ ಇರುವಲ್ಲಿ ಲಿಂಗ ರೂಪದಲ್ಲಿ ಭ್ರಮರಾಂಬೆ ಉದ್ಭವಿಸುತ್ತಾಳೆ . ಊಟ ಆಯಿತು , ಆಟವನ್ನೂ ನೋಡಿ ಆಯಿತು .‌ಕ್ಷಾಮದ ದಿನಗಳನ್ನೊಮ್ಮೆ ನೆನಪಿಸಿಕೊಳ್ಳೋಣ ಹೊಟ್ಟೆಗೆ ಅನ್ನವಿಲ್ಲದೆ ಇರುವಾಗ ವಿದ್ಯೆಯು ಕನಸಿನ ಮಾತು . ಆದರೆ ಎಲ್ಲವೂ ಸುವ್ಯವಸ್ಥೆಗೆ ಬಂದಾಗ ಸಹಜವಾಗಿ , ಅನಿವಾರ್ಯ ಅಗತ್ಯಗಳಲ್ಲಿ ಒಂದಾದ ವಿದ್ಯೆಗೆ ಪ್ರಾಶಸ್ತ್ಯ ದೊರೆಯಿತು .ಅಂಗನವಾಡಿಯಿಂದ ಎಲ್ಲಾ ಹಂತದಲ್ಲಿ‌ ಪದವಿಯವರೆಗೆ ಶಿಕ್ಷಣ ಸಂಸ್ಥೆಗಳು ನಿರ್ಮಾಣವಾದುವು . ಅಮ್ಮನು ಜ್ಞಾನ ಪ್ರತಿಪಾದ್ಯಳು ಅಲ್ಲವೆ ? [ ವಿವಾಹ ,ಸಂತಾನಗಳ ಅನುಗ್ರಹ , ಬಡತನ ,ಕಷ್ಟ ಪರಂಪರೆಗಳ ಪರಿಹಾರ . ಮಹಾವ್ಯಾಧಿಗಳ ನಿವಾರಣೆ ಇವು ಕಟೀಲಮ್ಮನ ವಿಶೇಷ ಅನುಗ್ರಹಗಳು ಹೂವಿನಪೂಜೆ , ರಂಗ ಪೂಜೆ , ದುರ್ಗಾ ಪ್ರೀತ್ಯರ್ಥ ಯಾಗ - ಯಜ್ಞಗಳು ನಿತ್ಯ ನೆರವೇರುತ್ತವೆ .ಭಕ್ತರು ಧನ್ಯತೆಯಿಂದ ಯಥಾನುಶಕ್ತಿ ಸೇವೆ ಸಲ್ಲಿಸುತ್ತಾರೆ . ]

ನವರಾತ್ರಿ ವಿಶೇಷ ಪೂಜೆ, ವೇಷಗಳು ,ಹುಲಿವೇಷಗಳು : ಬೆಳಗ್ಗೆ ಅಭಿಷೇಕ ,ಅಲಂಕಾರ .ಮಧ್ಯಾಹ್ನ ಮಹಾಪೂಜೆ . ಸಂಜೆ ಮತ್ತೆ ಅಭಿಷೇಕ ,ಅಲಂಕಾರ.ರಾತ್ರಿ ಒಂದು‌ ದೇವರ(ಭಂಡಾರದ ವತಿಯಲ್ಲಿ) ರಂಗಪೂಜೆ .ಮೂರು ಭಕ್ತರ ಸೇವೆ ರಂಗಪೂಜೆ .ಲಲಿತಾಪಂಚಮಿ : ದೇವರ(ಭಂಡಾರದ ವತಿಯಲ್ಲಿ) ಚಂಡಿಕಾ ಹೋಮ .ಸುವಾಸಿನಿಯರಿಗೆ ಶೇಷ ವಸ್ತ್ರ ಪ್ರಸಾದ ವಿತರಣೆ . ಮೂಲಾನಕ್ಷತ್ರ: ಧ್ವಜಸ್ತಂಭದ ಬಳಿ ರಂಗೋಲಿ ಹಾಕಿ ದೀಪಹಚ್ಚಿಟ್ಟು ಸಂಕೀರ್ತನೆ .ನವರಾತ್ರಿ ಸಂದರ್ಭದಲ್ಲಿ ದಿನವೂ ತಾಳದ ಮನೆಯವರಿಂದ ಮಾಮೂಲು ಸಂಕೀರ್ತನೆ . ಮೂಲಾನಕ್ಷತ್ರದಂದು ಗೌಡ ಸಾರಸ್ವತ ಸಮಾಜದವರಿಂದ ಭಜನಾ ಸಂಕೀರ್ತನೆ . ದುರ್ಗಾಷ್ಟಮಿ : ರಾತ್ರಿ ಮರುದಿನದ ಕಡುಬು ತಯಾರಿಗೆ ದೋಣಿಗೆ ಅಕ್ಕಿ ಅಳೆದು ಹಾಕುವುದು ,ತಯಾರಿಸುವವರಿಗೆ ಪ್ರಸಾದ ಕೊಡುವುದು . ಮಹಾನವಮಿ‌: ಶ್ರೀದೇವರ ಒಂದೇ ಮಹಾರಂಗಪೂಜೆ . ಮೂರು ಗಂಟೆ ಸತತ ಆರತಿ‌ ಬೆಳಗುವ ವಿಶೇಷ ಆರತಿ ಸೇವೆ . ರಾತ್ರಿ ಆಗಮಿಸುವ ಭಕ್ತರೆಲ್ಲರಿಗೆ ಕಡುಬು ಪ್ರಸಾದ, ಗೋಧಿ ಪಾಯಸ ಬಡಿಸಲಾಗುವುದು . ವಿಜಯದಶಮಿ: ಬೆಳಗ್ಗೆ ನವರಾತ್ರಿ ವಿಸರ್ಜನೆ ಪೂಜೆ .ಅಭಿಷೇಕ - ಅಲಂಕಾರ .ಮಕ್ಕಳಿಗೆ ಅಕ್ಷರಾಭ್ಯಾಸ . ಮೂರು ದಿನ ವೇಷಗಳ ವಿಜೃಂಭಣೆ : ಕಟೀಲಿಗೆ ವೇಷಗಳ ಮೆರವಣಿಗೆ . ಹುಲಿವೇಷಗಳ ತಂಡದಿಂದ ಕುಣಿತದ ಸೇವೆ . ಲಲಿತಾಪಂಚಮಿ : ಕೊಡೆತ್ತೂರಿನ ಹುಲಿಗಳು . ಮೂಲಾನಕ್ಷತ್ರಕ್ಕೆ ಎಕ್ಕಾರಿನ ಹುಲಿಗಳು .ಸೇವೆ ಸಲ್ಲಿಸುತ್ತಾರೆ. ಕಟೀಲಿನ‌‌ ನವರಾತ್ರಿ ಆಚರಣೆಯಲ್ಲಿ ಹುಲಿವೇಷಗಳದ್ದು‌ ಒಂದು ಪ್ರತ್ಯೇಕ ವೈಭವ . ಎಲ್ಲೊ ವೇಷಹಾಕಿ ಕಟೀಲಿಗೆ ಬಂದು ವೇಷ ಬಿಚ್ಚುವ ಹರಕೆಯ ವೇಷಗಳು ಇರುತ್ತವೆ .ನವರಾತ್ರಿ ಕಾಲದಲ್ಲಿ ಕನಿಷ್ಠ ಒಂದು ಸಾವಿರ ಹುಲಿ ವೇಷಗಳು‌ ಕಟೀಲಿಗೆ ಬಂದು ಸೇವೆ ಸಲ್ಲಿಸುತ್ತಾರೆ . ನವರಾತ್ರಿ ಕಾಲದಲ್ಲಿ ಪ್ರತಿದಿನ ಯಕ್ಷಗಾನ ನಡೆಯುತ್ತದೆ .ಕಟೀಲಿನಲ್ಲಿ ವೇಷಹಾಕುತ್ತೇವೆ ಎಂದು ಹರಕೆ ಹೊತ್ತ ಯಕ್ಷಗಾನ ಕಲಾವಿದರಿಗೆ ಈ ಅವಕಾಶ .ಈ ವರ್ಷ ಪ್ರತಿದಿನದ ಯಕ್ಷಗಾನ ಕಾರ್ಯಕ್ರಮ ಕೊರೊನ ಕಾರಣಕ್ಕೆ ರದ್ದುಗೊಳಿಸಲಾಗಿದೆ. ಲೇಖನ : ಕೆ.ಎಲ್ .ಕುಂಡಂತಾಯ

ಮಡುಂಬು ಬೆರ್ಮೊಟ್ಟುವಿನಲ್ಲಿ ವಿಜೃಂಭಣೆಯ ನವರಾತ್ರಿ

Posted On: 25-10-2020 09:11PM

ಇತಿಹಾಸ ಪ್ರಸಿದ್ಧ ಮಡುಂಬು ಬೆರ್ಮೊಟ್ಟು ಶ್ರೀ ಭದ್ರಕಾಳಿ ಮತ್ತು ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ಒಂಬತ್ತು ದಿನಗಳ ನವರಾತ್ರಿ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದಿದ್ದು. ವಿಜಯ ದಶಮಿಯ ದಿನವಾದ ಇಂದು ಕೂಡಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ..

ಮರಿಗೆಯಲ್ಲಿ ಮರೆಯಾದರೂ, ಮನೋರಥ ಸಿದ್ಧಿಯ ಕ್ಷೇತ್ರ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪುತ್ತೂರು, ಉಡುಪಿ

Posted On: 24-10-2020 11:20PM

ಜಗಜ್ಜನನಿಯಲ್ಲಿ ಹೆತ್ತ ತಾಯಿಯನ್ನು , ಭೂಮಿತಾಯಿಯನ್ನು‌ ಸಾಕ್ಷಾತ್ಕರಿಸಿಕೊಂಡ ಮುಗ್ಧ ಮನಸ್ಸುಗಳು ಪರಿಭಾವಿಸಿ‌ , ಕಲ್ಪಿಸಿ ಮೂರ್ತಸ್ವರೂಪ ನೀಡಿದ ದುರ್ಗೆ ,ಪಾರ್ವತಿದೇವಿ ಹಾಗೂ ಐಶ್ವರ್ಯವಂತಳಾದ ಮಹಾಲಕ್ಷ್ಮೀಯ 'ಭಗವತಿ'ಯ ಚಿಂತನೆ ಭವ್ಯವಾದುದು .ಅಂತರ್ಯಾಮಿಯಾಗಿರುವ ಅಮ್ಮನ ಸಾನ್ನಿಧ್ಯ ದಿವ್ಯವಾದುದು .ಇಂತಹ ಅಲೌಕಿಕವಾದುದನ್ನು ಲೌಕಿಕದಲ್ಲಿ‌ ಗುರುತಿಸಿದ ನೆಲೆಗಳಲ್ಲಿ‌ "ಪುತ್ತೂರಮ್ಮ"ನ ಸನ್ನಿಧಿ ಒಂದು .ಈಕೆ "ಪುತ್ತೂರಪ್ಪೆ"ಯಾಗಿ‌ ಪ್ರಸಿದ್ಧಳು - ಬಹುಮಾನ್ಯಳು‌. ದುಃಖ ದುಮ್ಮಾನಗಳಲ್ಲಿ 'ಅಪ್ಪೆ ತೂಪೆರ್' ಎಂಬಲ್ಲಿಯವರೆಗೆ ಗಟ್ಟಿಯಾದ ಅಥವಾ ಗಾಢವಾದ ಅವಿಚ್ಛಿನ್ನ ಸಂಬಂಧ . ನಂಬಿಕೆ - ಭರವಸೆಯೇ ಪ್ರಧಾನವಾಗಿರುವ ವಿಶ್ವಾಸದ ಸೆಲೆ . ಉಡುಪಿ ಸಮೀಪದ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಪುರಾಣ ,ಇತಿಹಾಸ , ದಂತಕತೆ ಸಹಿತ ಸಾಂದ್ರವಾದ ಜನಪದ ಹಿನ್ನೆಲೆಯನ್ನು‌ ಹೊಂದಿದೆ .ಮೂಲಸ್ಥಾನ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರಿಯು ಉಪಸ್ಥಾನ ಗಣಪತಿ‌, ವೀರಭದ್ರರೊಂದಿಗೆ ಪರಿವಾರ ಶಕ್ತಿಗಳಾದ ರಕ್ತೇಶ್ವರೀ , ನಂದಿಗೋಣ , ಧೂಮಾವತಿ , ವಾರಾಹಿ, ವ್ಯಾಘ್ರಚಾಮುಂಡಿ ,ಕ್ಷೇತ್ರಪಾಲ ,ಬೊಬ್ಬರ್ಯ ಹಾಗೂ ನಾಗ ದೇವರಿಂದ ಪರಿವೇಷ್ಟಿತಳಾಗಿ ಭಕ್ತಾಭೀಷ್ಟ ಫಲಪ್ರದಾಯಿಕಿಯಾಗಿ‌ದ್ದಾಳೆ .ಆದರೆ ಈ ಅಮ್ಮ ಮರೆಯಾಗಿದ್ದು ಮನೋರಥ ಈಡೇರಿಸುತ್ತಾಳೆ . ಜಾಗೃತ‌ ಸನ್ನಿಧಾನವಾಗಿದೆ .

ಮರಿಗೆಯಲ್ಲಿ ಮರೆಯಾದಳು :ಅಮೂರ್ತವಾಗಿರುವುದೇ ಅಲಂಕರಿಸಲ್ಪಟ್ಟು ಮೂರ್ತಸ್ವರೂಪದಿಂದ ಜನಪ್ರಿಯ ಮೂರ್ತಿಯಾಗಿ ಭಕ್ತರ ಮನಸ್ಸಿನಲ್ಲಿ ಸ್ಥಾಯೀಯಾಗಿ ಉಳಿಯುವಂತಹ ಸಂದರ್ಭಗಳು ಸಾಮಾನ್ಯ .ಆದರೆ ಪುತ್ತೂರಿನ ಭಗವತಿ ಶ್ರೀ ದುರ್ಗಾಪರಮೇಶ್ವರೀ‌ಯು ಸುಂದರ ಬಿಂಬವನ್ನು ಹೊಂದಿ ಆಕರ್ಷಕಳಾಗಿದ್ದಳು . ಅಘಟಿತ ಘಟನೆಯೊಂದು ನಡೆದು ಆಕೆ ತನ್ನ ಸರ್ವಾಭರಣ ಅಲಂಕೃತ ಸ್ವರೂಪವನ್ನು ಮರೆಮಾಚಿಕೊಂಡು "ಸ್ವಯಂಭೂ" ಸ್ವರೂಪದಂತೆ ವ್ಯಕ್ತಗೊಂಡಳು ಎಂಬುದು ಜನಜನಿತ ದಂತಕತೆ . ಒಂದು ಕಾಲಕ್ಕೆ ಬಡ ಭಕ್ತರ ನೆರವಿಗೆ ಶುಭಕಾರ್ಯಗಳು ಮನೆಯಲ್ಲಿ ನಡೆಯುವ ವೇಳೆ ಬೇಕಾಗುವ ಚಿನ್ನದ ಆಭರಣಗಳನ್ನು ಅನುಗ್ರಹಿಸುವ ವಿಶೇಷ ಕಾರಣಿಕದ ಕ್ಷೇತ್ರ ಇದಾಗಿತ್ತು .ನಾಳೆಯ ಶುಭಕಾರ್ಯಕ್ಕೆ , ಇಂದಿನ‌ರಾತ್ರಿ ಪ್ರಾರ್ಥಿಸಿ ದೇವಿಯ ಮುಂದೆ ಹರಿವಾಣ ಇಡುವುದು .ಮರುದಿನ ಈ ಹರಿವಾಣದಲ್ಲಿ ಅಗತ್ಯ ಆಭರಣಗಳು ಇರುತ್ತಿದ್ದುವು .ಶುಭ ಸಮಾರಂಭದಲ್ಲಿ ಆಭರಣಗಳನ್ನು ಉಪಯೋಗಿಸಿಕೊಂಡು ಬಳಿಕ ಅವುಗಳನ್ನು ತೊಳೆದು ಶುದ್ಧೀಕರಿಸಿ ರಾತ್ರಿ‌ ವೇಳೆ ಶ್ರೀ ದೇವಿ ಸನ್ನಿಧಾನಕ್ಕೆ ಮರಳಿಸುವ ಸಂಪ್ರದಾಯವಿತ್ತು . ಇಂತಹ ವಿಶೇಷ ಅನುಗ್ರಹ ನಿರಂತರ ನಡೆಯುತ್ತಿತ್ತು ಎಂದು ದಂತಕತೆ ಹೇಳುತ್ತದೆ .ಒಂದು ಬಾರಿ ಒಬ್ಬಾಕೆ ಭಕ್ತೆ ಮೂಗುತಿಯೊಂದನ್ನು ಬದಲಾಯಿಸಿ ಇಡುತ್ತಾಳೆ .ಆ ದಿನ ರಾತ್ರಿ ಆಭರಣಗಳನ್ನು ದೇವಿಗೆ ಹಿಂದಿರುಗಿಸಿ ,ಅರ್ಚಕರು ಗರ್ಭಗುಡಿಯ ಬಾಗಿಲುಹಾಕಿ‌ ಬೀಗಹಾಕುತ್ತಾರೆ , ಮರುದಿನ ಪ್ರಾತಃಕಾಲಕ್ಕೆ ಆಗಮಿಸಿದ ಅರ್ಚಕರು ಸ್ನಾನ ಪೂರೈಸಿ ದೇಗುಲದ ಗರ್ಭಗುಡಿಯ ಬಾಗಿಲು ತೆರೆದಾಗ ಅಚ್ಚರಿಯೊಂದು ಕಾದಿತ್ತು .ಅಭಿಷೇಕಕ್ಕಾಗಿ ನೀರು ತುಂಬಿಸಿ ಇಟ್ಟುಕೊಳ್ಳುವ (ಗರ್ಭಗುಡಿಯಲ್ಲಿ)ಕಲ್ಲಿನ ಮರಿಗೆ ಕವುಚಿ ಬಿದ್ದಿತ್ತು ,ಅದು ದೇವಿಯ ಮೂರ್ತಿಯನ್ನು ಸಂಪೂರ್ಣ ಆವರಿಸಿತ್ತು . ವಿಸ್ಮಯದಿಂದ ಅರ್ಚಕರು ಕಲ್ಲುಮರಿಗೆಯನ್ನು ಎತ್ತಿಡಲು ಪ್ರಯತ್ನಿಸುತ್ತಾರೆ ,ಅದು ಸಫಲವಾಗೇ ಹೋಯಿತು ,ಮರಿಗೆಗೆ ಪೂಜೆಮಾಡಿದರು , ಮನೆಗೆ ಬಂದರು .ರಾತ್ರಿ‌ ನಿದ್ದೆಯಲ್ಲಿ ದೇವಿ ದರ್ಶನವಿತ್ತು ದುರಾಸೆಯಿಂದ ವಂಚನೆಯಾಗಿದೆ ಆದುದರಿಂದ ನನ್ನ ಮೂಗುತಿ ಇಲ್ಲದ ಮುಖವನ್ನು ತೋರಿಸಲಾರೆನೆಂದು ನಿರ್ಧರಿಸಿದ್ದೇನೆ . ಕಲ್ಲುಮರಿಗೆಯೊಳಗೆ ಮರೆಯಾಗಿದ್ದೇನೆ . ಮುಂದೆ ಮರಿಗೆಗೆ ಪೂಜೆಸಲ್ಲಲಿ‌ ಎಂದು ಸೂಚಿಸುತ್ತಾಳೆ . ಒಂದು ಕತೆಯು ,ಮುಲತಃ ಲಿಂಗರೂಪದಲ್ಲೆ ಸಾನ್ನಿಧ್ಯವಿತ್ತು ,ಅದಕ್ಕೆ ಸ್ತ್ರೀ ಅಲಂಕಾರ ಮಾಡಲಾಗುತ್ತಿತ್ತು , ಪೂಜೆ ನಡೆಯುತ್ತಿತ್ತು ಎಂಬ ಮಾಹಿತಿ ನೀಡಿದರೆ ಮತ್ತೊಂದು ಕತೆಯು ಸುಂದರ ಬಿಂಬರೂಪದಲ್ಲಿದ್ದ ಮಾತೆಯು ಈ ದುರಾಸೆಯ ಪ್ರಕರಣದ ಬಳಿಕ ತನ್ನ ಮೂಗುತಿ ರಹಿತ ಮುಖವನ್ನು ತೋರಿಸಲಾರೆನೆಂದು ಮರಿಗೆಯಲ್ಲಿ‌ ಮರೆಯಾದದ್ದು ಎನ್ನುತ್ತದೆ . ಈ ಎರಡು ಕತೆಗಳನ್ನು ಸಮನ್ವಯಗೊಳಿಸಿದಾಗ ಮೂಲತಃ ಈ ಸನ್ನಿದಾನವು "ಸ್ವಯಂಭೂ" ಆಗಿದ್ದು ಪ್ರಾಚೀನ ಶಕ್ತಿ ಆರಾಧನಾ ಕೇಂದ್ರವಾಗಿತ್ತು ಎಂದು ಹೇಳಬಹುದಾಗುತ್ತದೆ .ಈಗ ಪೂಜೆಗೊಳ್ಳುವ ಮರಿಗೆಯಂತಿರುವ ಅನಿಯಮಿತಾಕಾರದ ಶಿಲೆಯು 'ಸ್ವಯಂಭೂ' ಸ್ವರೂಪದಲ್ಲೆ ಕಾಣುತ್ತದೆ . ಪರಶುರಾಮರಿಂದ ಪೂಜೆಗೊಂಡ ಅಥವಾ ಪರಶುರಾಮ ಕರಾರ್ಚಿತ ಭಗವತಿ ಶ್ರೀ ದುರ್ಗಾಪರಮೇಶ್ವರಿ ಎನ್ನುವುದು ನಂಬಿಕೆ .ಪರಶುರಾಮ ಸೃಷ್ಟಿಗೆ ಪರಶುರಾಮರೋ ಅಥವಾ ಆ ಗೋತ್ರಜರಾದ ಭಾರ್ಗವರೆಂಬ ಮಹನೀಯರು ನಿರಂತರ ಬರುತ್ತಿದ್ದರು ಎಂಬುದಕ್ಕೆ ಜಿಲ್ಲೆಯಲ್ಲಿ ವಿಫುಲ ಆಧಾರಗಳು ದೊರೆಯುತ್ತವೆ .

ಇತಿಹಾಸ :ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ಲಿಂಗರೂಪದಲ್ಲಿ ಸ್ವಯಂಭೂ ಸನ್ನಿಧಾನಗಳಿವೆಯಾದರೂ ಪುತ್ತೂರಿನಲ್ಲಿ ಮರಿಗೆಯಾಕಾರದಲ್ಲಿರುವುದು ಒಂದು ವಿಶೇಷ ಎಂದು ವಿವರಿಸಿದ್ದಾರೆ . ಬಲಿಮೂರ್ತಿಯ ಪ್ರತಿಮಾ ಲಕ್ಷಣವನ್ನು ಗಮನಿಸಿ ,ಈ ಮೂರ್ತಿಯು ಅರ್ವಾಚೀನವಾದುದು .ಆದರೆ ಪ್ರಾಚೀನ ಮೂರ್ತಿಯು ಪ್ರತಿಮಾ ಲಕ್ಷಣದಲ್ಲೆ ಈಗ ಇರುವ ಮೂರ್ತಿಯನ್ನು ನಿರ್ಮಿಸಿದುದ್ದಾಗಿದ್ದರೆ ದೇವಳಕ್ಕೆ ಕ್ರಿ.ಶ. 12-13 ಶತಮಾನದಷ್ಟು ಪ್ರಾಚೀನತೆಯನ್ನು ಹೇಳಬಹುದು . ಕ್ರಿ.ಶ. 7-8 ನೇ ಶತಮಾನದ ಬಳಿಕ ಶಕ್ತಿ ಆರಾಧನೆ ನಮ್ಮ ಉಭಯ ಜಿಲ್ಲೆಗಳಲ್ಲಿತ್ತು‌ ಎಂದು ಭಟ್ಟರು ಅಭಿಪ್ರಾಯಪಟ್ಟಿದ್ದರು. ಉಪಸ್ಥಾನ - ಪರಿವಾರ : ಪುತ್ತೂರಮ್ಮನ ಉಪಸ್ಥಾನ ಸನ್ನಿಧಾನಗಳಲ್ಲೊಂದಾದ ವೀರಭದ್ರ ಸಂಕಲ್ಪವು ಪುರಾತನವಾದುದು .ಅದರೆ ಗಣಪತಿ ಕಳೆದ ಶತಮಾನದಲ್ಲಿ ಪ್ರತಿಷ್ಠಾಪಿಸಿದ್ದು ಎನ್ನುತ್ರಾರೆ ಹಿರಿಯ ಅರ್ಚಕರು .ಪರಿವಾರವಾಗಿ ಆದಿಮ ಸಂಸ್ಕೃತಿಯ ಅಥವಾ ಜಾನಪದ ಹಿನ್ನೆಲೆ ಇರುವ ಶಕ್ತಿಗಳನ್ನು ಸ್ವೀಕರಿಸಲಾಗಿದೆ . ದೇವಳವು ಪೂರ್ವಾಭಿಮುಖವಾಗಿದ್ದು ಹೊರಾಂಗಣದ ದಕ್ಷಿಣ‌ ಬದಿಯಲ್ಲಿ ಪರಿವಾರ ದೈವಗಳಿಗೆ ಸ್ಥಾನ ಕಲ್ಪಿಸಲಾಗಿದೆ .ನಾಗ ಸಾನ್ನಿಧ್ಯ ಪ್ರತ್ಯೇಕ ಸಂಕಲ್ಪವಿದೆ .ಮೂಲತಃ ಇದ್ದ ನಂಬಿಕೆ - ಆರಾಧನಾ ಸ್ಥಾನಗಳಲ್ಲೆ ಮತ್ತೆ ಬಂದ ವೈದಿಕದ ದೇವಸ್ಥಾನಗಳು ಸ್ಥಾಪನೆಯಾದುವು ಎಂಬ ಒಂದು ಒಪ್ಪಿಗೆಗೆ ಪುತ್ತೂರು ಸಹಾ ಒಂದು ಆಧಾರವಾಗುತ್ತದೆ . ‌‌‌‌‌ ಅನುಗ್ರಹ :ದೇವಸ್ಥಾನಗಳಲ್ಲಿ ಮದುವೆಗಳು ನೆರವೇರುವ ಕ್ರಮವೊಂದು ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದಲೇ ಆರಂಭವಾಯಿತು ಎಂಬ ಒಡಂಬಡಿಕೆಯೊಂದಿದೆ .ಇದರೊಂದಿಗೆ ವಡಭಾಂಡೇಶ್ವರ ದೇವಸ್ಥಾನದ ಹೆಸರೂ ಸೇರಿಕೊಳ್ಳುತ್ತದೆ . ಇದಕ್ಕೆ ಪೂರ್ವಭಾವಿಯಾಗಿ ಯೋಚಿಸಿದರೆ ಇದೊಂದು ಮಂಗಲ ಕಾರ್ಯಗಳಿಗೆ ಅನುಗ್ರಹಿಸುತ್ತಿದ್ದ ಮಂಗಲ ಸಾನ್ನಿಧ್ಯ ಇದ್ದಿರಬೇಕು ಎಂದು ಗ್ರಹಿಸಬಹುದು . ಸಂತಾನ ಫಲಪ್ರಾಪ್ತಿಯ ಸಿದ್ಧಿಕ್ಷೇತ್ರ ಎಂಬುದು ಇನ್ನೊಂದು ಹೆಗ್ಗಳಿಕೆ ಇದೆ .ವಾರ್ಷಿಕ ಮಹೋತ್ಸವ ಕಾಲದಲ್ಲಿ ಶಯನೋತ್ಸವದ ವೇಳೆ ಬಲಿಮೂರ್ತಿಯ ಬಲಕೈಗೆ ಕಟ್ಟುವ 'ಅಡಿಕೆ ಮತ್ತು ಅರಸಿನದ ಕೋಡ'ನ್ನು ಅವಭೃತದ ವೇಳೆ ಬಿಚ್ಚಿ ತೆಗೆಯುವಾಗ ಅಥವಾ ಬಳಿಕ ಮಂತ್ರಾಕ್ಷತೆಯ ಸಂದರ್ಭದಲ್ಲಿ ಸಂತಾನ ಅಪೇಕ್ಷೆಯ ಸತಿ - ಪತಿಯರು ತಂತ್ರಿಯವರಿಂದ ಪಡೆಯಬೇಕು . ಸತಿಯು ಪುಷ್ಪವತಿಯಾಗಿ ನಾಲ್ಕನೇ ದಿನದಿಂದ ಹದಿನಾರನೇ ದಿನದವರೆಗಿನ ಅವಧಿಯಲ್ಲಿ‌ ಪ್ರತಿದಿನ ರಾತ್ರಿ ಅಡಿಕೆಯನ್ನು ತುಂಡರಿಸಿ ತಿನ್ನುವುದು , ಇದರೊಂದಿಗೆ ಅರಸಿನ ಕೋಡನ್ನು ತೇದು ತೆಗೆದು ಕೊಳ್ಳವುದು . ಇದರಿಂದ ಶರೀರ ಶುದ್ಧಿಯಾಗಿ ಸತ್ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುದು ಭಗವತಿ ಶ್ರೀ ದುರ್ಗಾಪರಮೇಶ್ವರಿಯ ಅನುಗ್ರಹ ಎನ್ನುತ್ತಾರೆ ದೇವಳದ ತಂತ್ರಿಗಳು . ದುರ್ಗಮ ದುರಿತಗಳು ನಿವಾರಣೆಯಾಗುತ್ತವೆ , ಆಪತ್ತುಗಳು ಪರಿಹಾರವಾಗುತ್ತದೆ ಎಂಬುದು ನಂಬಿ ಬರುವ ಭಕ್ತರ ಅಭಿಪ್ರಾಯ .

ನವರಾತ್ರಿ : ಬೆಳಗ್ಗೆ ಪ್ರತಿದಿನ ನಿರ್ಮಾಲ್ಯ ವಿಸರ್ಜನೆ ,ಪೂಜೆ .ಪಂಚಾಮೃತ ಅಭಿಷೇಕ . ಮಧ್ಯಾಹ್ನ ಮಹಾಪೂಜೆ . ಭಕ್ತರ ವತಿಯಿಂದ ಚಂಡಿಕಾಯಾಗ , ಮುತ್ತೈದೆಯರಿಗೆ ಬಾಗಿನಿ ,ಕನ್ನಿಕಾಪೂಜೆ . ಅನ್ನಸಂತರ್ಪಣೆ ( ಈ ವರ್ಷ ಕೊರೊನ ಕಾರಣವಾಗಿ ಅನ್ನಸಂತರ್ಪಣೆ ನಡೆಸಲಾಗುವುದಿಲ್ಲ) .ರಾತ್ರಿ ಕಲ್ಪೋಕ್ತಪೂಜೆ , ಹೂವಿನ ಪೂಜೆ . ನವರಾತ್ರಿಯ ಏಳನೇ ದಿನ ಊರಿನ ಭಕ್ತಾದಿಗಳಿಂದ ಚಂಡಿಕಾಯಾಗ ಮತ್ತು ಅನ್ನಸಂತರ್ಪಣೆ .ಕೊರೊನ ಕಾರಣವಾಗಿ ಸರಕಾರದ ಸೂಚನೆಯಂತೆ ನವರಾತ್ರಿ ಆಚರಣೆ ನಡೆಯುತ್ತಿದೆ. ಕೆ.ಎಲ್.ಕುಂಡಂತಾಯ

ನವರಾತ್ರಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಪ್ರಯುಕ್ತ ವನಮಹೋತ್ಸವ

Posted On: 24-10-2020 11:07PM

ಉಡುಪಿ: ನವ್ಯಚೇತನ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್ ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ನವ್ಯಚೇತನ ಟ್ರಸ್ಟಿನ ಶಾಲೆಗೆರಡು ಗಿಡ ಅಭಿಯಾನದ ಅಂಗವಾಗಿ ನವರಾತ್ರಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಪ್ರಯುಕ್ತ ಅ.23 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿನಗರ ಇಲ್ಲಿಯ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು .

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸಸಿಯನ್ನು ನೆಟ್ಟು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸುವ ಕಾರ್ಯಗಳು ಹೆಚ್ಚಾದಲ್ಲಿ ಯುವಸಮೂಹ ಸರ್ಕಾರದ ಜೊತೆಗೆ ಸೇರಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ಬದಲಾವಣೆಯನ್ನು ತರಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಬೇಕು ಎಂದರು.

ನವ್ಯಚೇತನ ಟ್ರಸ್ಟ್ ಅಧ್ಯಕ್ಷ ಡಾ. ಶಿವಾನಂದ ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಗಣೇಶ್ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

ಕರೋನಾ ದೂರವಾಗುವತ್ತ ಹೆಜ್ಜೆ, ಎಲ್ಲರೂ ಕೋವಿಡ್ ನಿಯಮ ಪಾಲಿಸೋಣ

Posted On: 24-10-2020 11:00PM

ಕಳೆದ 8 ತಿಂಗಳಿಂದ ನಿರಂತರವಾಗಿ ದೇಶದ ಚಿತ್ರಣ ಬದಲು ಮಾಡಿದ ಜನರ ಜೀವನಕ್ಕೆ ಸಂಕಷ್ಟದ ಹೊಸ ಅಥ೯ ನೀಡಿದ ಕರೋನಾ ಕಳೆದ 2ವಾರದಿಂದ ದೇಶದಲ್ಲಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಇಳಿಮುಖವಾಗುತ್ತಿರುವುದು ಸಂತೋಷದ ವಿಷಯ ದೇಶದಲ್ಲಿ ಗುಣಮುಖ ಪ್ರಮಾಣ ಶೇ.83 ಕ್ಕೆ ಏರಿದೆ ಅದೇ ರೀತಿ ಮರಣ ಪ್ರಮಾಣ ಶೇ.1.5 ರಷ್ಟು ಇಳಿದಿರುವುದು ಶುಭ ಸಂದೇಶ.ಉಡುಪಿ ಜಿಲ್ಲೆಯಲ್ಲಿ 1300 ರಷ್ಟು ಸಕ್ರೀಯ ಕೇಸಗಳಿದ್ದು, ಮರಣ ಪ್ರಮಾಣ ಅದೇ ರೀತಿ ಹೊಸ ಪ್ರಕರಣಗಳು ಕೂಡ ಕಡಿಮೆಯಾಗುತ್ತಿರುವುದು ಜನತೆ ನಿಟ್ಟುಸಿರು ಬಿಡುವಂತಾಗಿದೆ.ಇದೇ ರೀತಿ ಮುಂದುವರೆದರೆ ಜನವರಿ ಒಳಗೆ ಸಂಪೂಣ೯ ನಿಯಂತ್ರಣಕ್ಕೆ ಬರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮತ್ತಷ್ಟು ಜಾಗೃತರಾಗೋಣ: ಕರೋನಾ ಕಡಿಮೆಯಾಗಿದೆ ಎಂದು ಮೈಮರೆಯದೆ ಮತ್ತಷ್ಟು ಜಾಗ್ರತರಾಗಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕಾಗಿದೆ. ಸಕಾ೯ರದ ದಂಡವನ್ನು ತಪ್ಪಿಸುವ ಸಲುವಾಗಿ ಮಾಸ್ಕ್ ಹಾಕದೆ, ನಮ್ಮ ಆರೋಗ್ಯ ಕಾಪಾಡಲು ಮಾಸ್ಕ್ ಹಾಕಿ ಕೊಳ್ಳಬೇಕು.ಈ ಕೋವಿಡ್ ನಿಯಮಗಳು ನಮ್ಮ ಜೀವನದ ಭಾಗವಾಗಬೇಕಾಗಿದೆ.ಸಕಾ೯ರ ಈಗಾಗಲೇ ಕಾಲೇಜುಗಳನ್ನು ನ.17 ರಿಂದ ಪ್ರಾರಂಭಿಸುವ ಚಿಂತನೆ ಮಾಡಿರುವುದು ಉತ್ತಮವಾದರೂ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಕರೋನಾದೊಂದಿಗೆ ಬದುಕು ಸಾಗಿಸುವಾಗ ನಮ್ಮ ಆರೋಗ್ಯದ ಜವಾಬ್ದಾರಿ ನಮ್ಮದಾಗಬೇಕೇ ಹೊರತು ಸಕಾ೯ರದ್ದಲ್ಲ. ಹೀಗಾಗಿ ಕರೋನಾ ಸಂಪೂಣ೯ ದೇಶ ಬಿಟ್ಟು ಹೋಗುವರೆಗೂ ಈ ನಿಯಮಗಳು ನಮ್ಮ ಜೀವನದ ಭಾಗವಾಗಿರಲಿ.

ಹೊಸ ಬದುಕು ರೂಪಿಸಿ: ಕರೋನಾದಿಂದ ನಮ್ಮೆಲ್ಲರ ಜೀವನ ಸ್ಥಾನ ಪಲ್ಲಟಗೊಂಡಿರುವುದು ನಿಜವಾದರೂ , ಹೊಸ ಬದುಕು ನಮ್ಮದಾಗಬೇಕಾದರೆ ಜೀವನದಲ್ಲಿ ಆಥಿ೯ಕ ಶಿಸ್ತು ಮೂಡಿಸಬೇಕು. ಆಧಾಯ ಗಳಿಸುವ ವಿನೂತನ ಯೋಜನೆ ಹಾಕಿಕೊಂಡು ಉತ್ತಮವಾಗಿ ಜೀವನ ಸಾಗಿಸಬೇಕು.ಒಟ್ಟಾಗಿ ಈ ಕರೋನಾದಿಂದ ಕಲಿತ ಪಾಠ ಜೀವನ ಪಯ೯oತದ ಪಾಠವಾಗಲಿ ಕರೋನಾ ದೂರವಾಗಲಿ. ✍️ ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ

ಜಿಲ್ಲೆಯ ದಶಕದ ಕನಸು ನನಸಾಗುವ ಸಮಯ

Posted On: 24-10-2020 10:51PM

ಉಡುಪಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಬ್ರಹತ್ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದು ಉಡುಪಿ ಜಿಲ್ಲೆಗೆ ವರವಾಗಿ ಪರಿಣಮಿಸಿದೆ. ಜಿಲ್ಲೆ ಯ ಜನರ ಬೇಡಿಕೆಯನ್ನು ಸಕಾ೯ರ ಈ ಮೂಲಕ ಈಡೇರಿಸಿರುವುದು ಅಭಿನಂದನೀಯವಾಗಿದೆ.ಉಡುಪಿ ಜಿಲ್ಲೆಯಾಗಿ 23 ವರ್ಷಗಳು ಕಳೆದಿದ್ದರೂ ಉಡುಪಿ ಜನತೆಯ ಬಹು ಬೇಡಿಕೆಯ ಈ ಯೋಜನೆ ಹಲವಾರು ವರ್ಷಗಳ ಕಾಲ ಕನಸಾಗಿಯೇ ಉಳಿದಿತ್ತು. ಜೆ.ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಉದ್ಘಾಟನೆಗೊಂಡ ಈ ಜಿಲ್ಲೆಯು, ಸರಿಯಾದ ಜಿಲ್ಲಾಸ್ಪತ್ರೆಯನ್ನು ಹೊಂದಿರಲಿಲ್ಲ ಕೇವಲ ತಾಲೂಕು ಆಸ್ಪತ್ರೆಯಾಗಿತ್ತು. ಈ ಬಗ್ಗೆ ಹಲವಾರು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೆ ಹಲವಾರು ಬಾರಿ ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಈ ಕುರಿತು ಧ್ವನಿ ಎತ್ತಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇವಲ ಭರವಸೆಯನ್ನು ನೀಡಿದ್ದು ಬಿಟ್ಟರೆ ಯಾವುದೇ ಕಾಯ೯ ನಡೆದಿರಲಿಲ್ಲ.ಆದರೆ ಈ ಬಾರಿ ಅದು ಕಾಯ೯ ಗತಗೊಂಡಿರುವುದು ಅತ್ಯಂತ ಸಂತೋಷದ ವಿಷಯ.

ಉಡುಪಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಉಡುಪಿಯ ಶಾಸಕ ಕೆ. ರಘುಪತಿ ಭಟ್ ಸದನದಲ್ಲಿ ಉಲ್ಲೇಖಿಸಿದ ಸಂದರ್ಭದಲ್ಲಿ ಈ ಯೋಜನೆಗೆ ಆರ್ಥಿಕ ಇಲಾಖೆ ಅನುಮತಿ ನೀಡಿರಲಿಲ್ಲ. ಕಳೆದವಷ೯ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2020-21ನೇ ಸಾಲಿನ ಬಜೆಟ್ ಮಂಡನೆಯ ಸಂದಭ೯ ನಡೆದ ಅಧಿವೇಶನದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವ ಸಂಬಂಧ ಶಾಸಕ ಕೆ. ರಘುಪತಿ ಭಟ್ ಎಲ್ಲರಿಗೂ ಮನದಟ್ಟಾಗುವಂತೆ ವಿಷಯವನ್ನು ಮಂಡಿಸಿ ದ ಸಂದಭ೯ ಮುಖ್ಯಮಂತ್ರಿಯವರು ಉಡುಪಿ ಜಿಲ್ಲಾಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಭರವಸೆಯನ್ನು ಸದನದಲ್ಲಿನೀಡಿದರು.

ಇದೀಗ 115 ಕೋಟಿ ರೂ ವೆಚ್ಚದ ಆಸ್ಪತ್ರೆಯ ಕಟ್ಟಡ ನಿಮಾ೯ಣ ಮತ್ತು ಸಲಕರಣೆಗೆ ಸಚಿವ ಸಂಪುಟ ಅನುಮೋದನೆಯೊಂದಿಗೆ ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಈ ಯೋಜನೆಯನ್ನು ಕೋವಿಡ್ ನಡುವೆ ಆಥಿ೯ಕ ಪರಿಸ್ಥಿತಿಯಲ್ಲಿಯೂ ಕೈಗೆತ್ತಿಕೊಂಡಿರುವುದು ಉತ್ತಮ ಕೆಲಸ .ಅದಷ್ಟು ಬೇಗ ಈ ಆಸ್ಪತ್ರೆ ರಾಜ್ಯದಲ್ಲಿ ಮಾದರಿ ಆಸ್ಪತ್ರೆಯಾಗಿ ಪರಿಣಮಿಸಲಿ . ಇದಕ್ಕೆ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆಗಳು. ✍️ ರಾಘವೇಂದ್ರ ಪ್ರಭು,ಕವಾ೯ಲು

ಮಾದರಿಯಾದ ಪುಸ್ತಕ ಬಿಡುಗಡೆ ಕಾಯ೯ಕ್ರಮ

Posted On: 24-10-2020 10:45PM

ಉಡುಪಿ : ನ್ಯಾಯವಾದಿ, ಯುವ ಲೇಖಕ ಮೊಹಮ್ಮದ್ ಸುಹಾನ್ ಸಾಸ್ತಾನ ಅವರ 8ನೇ ಕೃತಿ “ಸುಹಾನ ಸೋಪಾನ” ಇಂದು ಅರ್ಥಪೂರ್ಣ ರೀತಿಯಲ್ಲಿ ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದ ಬಳಿ ಬಿಡುಗಡೆಯಾಯಿತು. ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ಮತ್ತು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ರವರು, ಬರೆಯುವ ಆಸಕ್ತಿ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನ್ಯಾಯವಾದಿಯೊಬ್ಬರು ಬಿಡುವು ಮಾಡಿಕೊಂಡು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪ ಆಗುವಂತಹ ಪುಸ್ತಕ ಬರೆದಿರುವ ವಿಚಾರ ಶ್ಲಾಘನೀಯ. ಯುವಜನತೆ ಸನ್ಮಾರ್ಗದಲ್ಲಿ ನಡೆಯಲು ವಿಶೇಷವಾಗಿ ಶ್ರಮ ವಹಿಸುತ್ತಿರುವ ಸುಹಾನ್ ಸಾಸ್ತಾನ್ ಅವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.

ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಸುಹಾನ್ ಸಾಸ್ತಾನ್ ಹೊರತಂದಿರುವ ಈ ಕೃತಿಯು ಬಲಿಷ್ಠ ಸಮಾಜದ ಪರಿಕಲ್ಪನೆ ಸಾಕಾರಗೊಳಿಸಲು ಮತ್ತು ಯುವಜನತೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಲು ಬಹಳ ಉಪಯುಕ್ತವಾಗಿದೆ. ಮಾದರಿಯಾದ ರೀತಿಯಲ್ಲಿ ಅರ್ಥಪೂರ್ಣವಾಗಿ ಪುಸ್ತಕ ಬಿಡುಗಡೆ ಆಗುತ್ತಿರುವ ವಿಚಾರ ಶ್ಲಾಘನೀಯ ಎಂದರು.

ರಂಗಭೂಮಿ ನಿರ್ದೇಶಕ ಬಾಸುಮ ಕೊಡಗು ಪುಸ್ತಕ ಪರಿಚಯ ನಡೆಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ರವರು ಕೋವಿಡ್ ಜಾಗೃತಿ ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ “ಎಚ್ಚರಿಕೆ ವಹಿಸಿ ಕೋವಿಡ್ ಸೋಲಿಸಿ” ಎಂಬ ವಿಡಿಯೋ ಸಂದೇಶ ಅಭಿಯಾನಕ್ಕೆ ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಲೇಖಕ ಸುಹಾನ್ ಸಾಸ್ತಾನ್ ರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿ ಹಮ್ಜದ್ ಹೆಜಮಾಡಿ, ಜೇಸಿಐ ಉಡುಪಿ ಸಿಟಿ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ, ಮಲಬಾರ್ ಗೋಲ್ಡ್ ಡೈಮಂಡ್ಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್, ಜೇಸಿಐ ಉಡುಪಿ ಸಿಟಿ ಕಾರ್ಯದರ್ಶಿ ಉದಯ ನಾಯ್ಕ್, ವಿಜಯ ಭಟ್, ಮಾಜಿ ಯೋಧ ವಾದಿರಾಜ್ ಹೆಗ್ಡೆ, ನವೀನ್ ಶೆಟ್ಟಿಬೆಟ್ಟು, ಸಂತೋಷ್ ಹಿರಿಯಡ್ಕ, ಸುಧೀರ್, ತಿಲಕ್ ಮುಂತಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಮೊಹಮ್ಮದ್ ಸುಹಾನ್ ಸ್ವಾಗತಿಸಿ ವಂದಿಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

ಗತದಲ್ಲಿ ಕೋಟೆ ಮಾರಿಯಾಗಿ, ಪ್ರಚಲಿತ ಕಾಪುದ ಅಪ್ಪೆ ಮಾರಿಯಮ್ಮಳಾಗಿ ಭಕುತ ಜನರ ಕಾಪಾಡುವ ಶಕ್ತಿ

Posted On: 24-10-2020 05:18PM

ಆದಿಮ - ಶಿಷ್ಟ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು "ಜಾನಪದ ಮನೋಧರ್ಮ".ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ, ಪೂಜೆ ನಡೆಯುತ್ತಿರುವಂತೆಯೇ ಸಾನ್ನಿಧ್ಯ ಸನ್ನಿಹಿತವಾಗುವ ನಂಬಿಕೆ ಹಾಗೂ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಿ ಸಾನ್ನಿಧ್ಯ ಇದೆ ಎಂಬ ನಂಬಿಕೆಯೊಂದಿಗೆ ಪೂಜೆ ಮಾಡುವುದು . ಕಟ್ಟಳೆಗಳೇ ಪ್ರಧಾನವಾಗುವ ಕಟ್ಟಡಗಳಿಗೆ ಮಹತ್ವ ಇಲ್ಲದ ಚಿಂತನೆಯಿಂದ ಕಟ್ಟಳೆ ಹಾಗೂ ಕಟ್ಟಡಗಳೆರಡೂ ಮುಖ್ಯ ಎಂಬ ಶ್ರದ್ಧೆಯಿಂದ ಆರಾಧನೆ ನೆರವೇರಿಸುವ ಹಂತ ತಲುಪಿದರೂ ಮೂಲವನ್ನು ಸುಪ್ತವಾಗಿ ಹೊಂದಿರುವುದು ನಮ್ಮ ಉಪಾಸನಾ ವಿಧಾನದಲ್ಲಿ ನಿಚ್ಚಳ . ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ‌ ಕಾಪುವಿನ ಮಾರಿ , ಮಾರಿಯಮ್ಮಳಾಗಿ, ಮಾರಿಯಮ್ಮ ದೇವರಾಗಿ ವಿವಿಧ ಸ್ವರೂಪದ ನಿಷ್ಠಾಂತರಗೊಂಡು ಗದ್ದುಗೆ - ಗುಡಿ - ದೇವಸ್ಥಾನ ಸಂಕಲ್ಪಗಳಲ್ಲಿ ವ್ಯಕ್ತಗೊಂಡುದುದನ್ನು ಗಮನಿಸ ಬಹುದು . ಸಮೂಹ ಪೂಜೆ ಹಾಗೂ ಬಹುದೇವತಾ ಆರಾಧನೆಗಳನ್ನು ಸ್ವೀಕರಿಸಿರುವ ನಮ್ಮ ತುಳುನಾಡಿನ ಉಪಾಸನಾ ಪ್ರಕಾರಗಳಲ್ಲಿ‌ 'ಮಾರಿ'ಯಕಲ್ಪನೆ ಮತ್ತು ಅನುಸಂಧಾನ ಸಾಮೂಹಿಕವಾಗಿ ಮಾತ್ರ ರೂಢಿಯಲ್ಲಿವೆ .ಮಾರಿಗೆ ನೆರವೇರುವ ಪೂಜೆಯಲ್ಲಿ ಪಾಲ್ಗೊಂಡು ಮುಂದುವರಿದ ಆಚರಣೆಗಳು ಮನೆಗಳಲ್ಲಿ ನಡೆಯುವುದಿದೆ .

ದಂಡಿನಮಾರಿ: ರಾಜಕೀಯ ಸ್ಥಿತ್ಯಂತರಗಳಾಗಿ ವಿಜಯನಗರದ ಆಳ್ವಿಕೆಯ ಬಳಿಕ‌ ಕೆಳದಿಯ ನಾಯಕರು ತುಳುನಾಡಿನ ಅಧಿಕಾರ ಸೂತ್ರವನ್ನು ಹಿಡಿದ ಕಾಲಘಟ್ಟವನ್ನು ಮಾರಿಯ ಪ್ರವೇಶಕಾಲವೆಂದು ಅಂದಾಜಿಸ ಬಹುದು. ಲಿಂಗಣ್ಣ ಕವಿಯ "ಕೆಳದಿನೃಪ ವಿಜಯ" ಗ್ರಂಥದ ಆಧಾರದಲ್ಲಿ‌ ಕ್ರಿ.ಶ. 1743ರಲ್ಲಿ ಬಸಪ್ಪನಾಯಕನು ಕಾಪುವಿನ ಸಮುದ್ರತೀರದಲ್ಲಿ "ಮನೋಹರಗಡ" ಎಂಬ ಸಣ್ಣಕೋಟೆಯನ್ನೂ ( ಲೈಟ್ ಹೌಸ್ ಪಕ್ಕದ ಹೆಬ್ಬಂಡೆ ಮೇಲೆ ಕಟ್ಟಡದ ಕೆಂಪುಕಲ್ಲಿನ ಅವಶೇಷವಿದೆ ) ಮಲ್ಲಾರಿನಲ್ಲಿ ಸೈನ್ಯನಿಲ್ಲುವುದಕ್ಕೆ ದೊಡ್ಡ ಕೋಟೆಯೊಂದನ್ನು ನಿರ್ಮಿಸಿದನೆಂಬ ಐತಿಹಾಸಿಕ ವಿವರಗಳ ಆಧಾರದಲ್ಲಿ ಕಾಪುವಿಗೆ ಸೇನೆಯೊಂದಿಗೆ ಬಂದ "ದಂಡಿನಮಾರಿ" ಎಂದು "ಮಾರಿ"ಯ ಆಗಮನವನ್ನು ಉಲ್ಲೇಖಿಸಬಹುದು . ವಿಜಯನಗರದ ಕಾಲದಲ್ಲೆ ಕೋಟೆ ಇತ್ತು ,ಅದು ಸಂಪೂರ್ಣ ಜೀರ್ಣಗೊಂಡಿತ್ತು ,ಆ ಕೋಟೆಯನ್ನು ಸಂಪೂರ್ಣವಾಗಿ ಬಸಪ್ಪನಾಯಕ ಪುನಾರಚಿಸಿದ ಎಂಬ ಮಾಹಿತಿಯೂ ಇದೆ . ಮಾರಿ ಗುಡಿಗಳಲ್ಲಿ 'ದಂಡಿನಮಾರಿ' ಎಂಬ ಸಂಬೋಧನೆ ಚಾಲ್ತಿಯಲ್ಲಿದೆ . ಕೋಟೆಮನೆ , ರಾಣ್ಯದವರು (ರಣವೀರರು ಎಂದು ಹೇಳಿಕೊಳ್ಳುತ್ತಾರೆ) ಮುಂತಾದ ಪಂಗಡದವರು ಇಂದಿಗೂ ಮಲ್ಲಾರು ಕೋಟೆಯ ( ಕೋಟೆ ಸಂಪೂರ್ಣ ನಾಶವಾಗಿದೆ) ಪಕ್ಕದಲ್ಲಿ ನೆಲೆಯಾಗಿರುವುದನ್ನು ಮತ್ತು ಇವರ ಭಾಗವಹಿಸುವಿಕೆಯಲ್ಲೆ "ಮಾರಿಪೂಜೆ" ನೆರವೇರುತ್ತಿರುವುದನ್ನು ಆಧರಿಸಿ ಮಾರಿ ಆರಾಧನೆಯ ಮೂಲದ ಕಡೆಗೆ ಗಮನಹರಿಸಿದಂತಾಗುತ್ತದೆ .ಇವರೆಲ್ಲ ಕನ್ನಡ ಭಾಷಿಕರೆನ್ನುವುದು ಮುಖ್ಯ ಅಂಶವಾಗಿದೆ . ಇದರಿಂದ 'ಕಾಪುವಿನ ಮಾರಿ'ಸೇನೆಯೊಂದಿಗೆ ಬಂದ ಶಕ್ತಿ ಎಂದು ಪುಷ್ಟೀಕರಿಸಬಹುದು. ಕೋಟೆ ಮನೆಯಲ್ಲಿ 'ಮಾರಿ'ಯು ಮನೆ ದೇವರಾಗಿ ಪೂಜೆಗೊಳ್ಳುತ್ತದೆ . ಮಾರಿಗುಡಿಗಳಲ್ಲಿ ದರ್ಶನ ಆರಂಭಕ್ಕೆ ಮುನ್ನ ಹವಾಲ್ದಾರ್ ಪ್ರಾರ್ಥನೆ ನಡೆಸುತ್ತಾರೆ . ಮಂಗಳವಾರದ ಆಚರಣೆ ಮತ್ತು ಮಾರಿಪೂಜಾ ವಿಧಿಗಳನ್ನು ಸಂಪೂರ್ಣ ನಿರ್ವಹಿಸುವುದು ಸೇರ್ವೇಗಾರರು ಮತ್ತು ರಾಣ್ಯದವರು ( ಕ್ರಮ ಹೀಗಿತ್ತು). ಈ ವಿವರಗಳು ಮಾರಿ - ಈ ಪಂಗಡಗಳವರ ಸಂಬಂಧವನ್ನು ದೃಢೀಕರಿಸುತ್ತಾ ಕಾಪುವಿನಲ್ಲಿ ಮಾರಿ ಆರಾಧನೆ ಮೊದಲಿಟ್ಟಿರಬಹುದಾದ ಸಂದರ್ಭವನ್ನು ನೆನಪಿಸಿಕೊಳ್ಳಬಹುದು. ಕೋಟೆಗೆ ಮಾತ್ರ ಸಂಬಂಧಪಟ್ಟ 'ಮಾರಿ' ಸರ್ವರ ದೇವರಾಗಿ ಸಾರ್ವಜನಿಕ ಉಪಾಸನಾ ಶಕ್ತಿಯಾಗಿ ಪರಿವರ್ತನೆಗೊಂಡು ಪ್ರಸ್ತುತ ನಾವು ಕಾಣುವ "ಕಾಪುದ ಅಪ್ಪೆ" ಮಾರಿಯಮ್ಮದೇವರಾಗಿ ಅನಾವರಣಗೊಂಡ ಕುರಿತ ಪ್ರಚಲಿತವಿರುವ ದಂತಕತೆಗಳಲ್ಲಿ‌ ಇತಿಹಾಸದ ಅಂಶವನ್ನು ಮತ್ತು ಹೆಚ್ಚು ಸರಿಯಾಗಿದೆ ಎಂದು ಪರಿಗ್ರಹಿಸಬಹುದಾದ ಒಂದನ್ನು‌‌ ಇಲ್ಲಿ ನಿರೂಪಿಸುತ್ತೇನೆ .

ನಂದಿಕೆರೆ: 1799 ರಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಬ್ರಿಟಿಷರ ವಶಕ್ಕೆ ಕೋಟೆ ಸೇರಿಹೋಯಿತು , ಅರಾಜಕವಾಯಿತು .ಆದರೆ ಟಿಪ್ಪುಸುಲ್ತಾನನ ಉಗ್ರಾಣಿಯೊಬ್ಬರು ತಮ್ಮ ಹುದ್ದೆಯಲ್ಲಿ ಮುಂದುವರಿದು ಬ್ರಿಟಿಷರ ಕೈಕೆಳಗೆ ಕಾರ್ಯನಿರ್ವಹಿಸುತ್ತಿದ್ದರು . ಮಂಗಳವಾರ ,ಶುಕ್ರವಾರ ಕೋಟೆ‌ ಪರಿಸರದಲ್ಲಿ ಬರುತ್ತಿದ್ದ ಮಲ್ಲಿಗೆ ಹೂವಿನ ಪರಿಮಳ ಬರುವುದು ,ಕೋಟೆಯೊಳಗಿನ ನಂದಿಕೆರೆಯಲ್ಲಿ ಸ್ನಾನ ಮಾಡುವ ಸದ್ದು ಕೇಳಿ ಬರುವುದನ್ನು ಪರೀಕ್ಷಿಸಲು ಉಗ್ರಾಣಿ ಒಂದು ದಿನ ರಾತ್ರಿವೇಳೆ ಕೋಟೆಯ ನಂದಿಕೆರೆಯ ಬಳಿ ಬರುತ್ತಾರೆ .ಆಗ ಕೆರೆಯಲ್ಲಿ ಸ್ತ್ರೀಯ ತಲೆ ಕೂದಲು ಮಾತ್ರ ಕಾಣಿಸುತ್ತದೆ ."ಯಾರಮ್ಮ ನೀವು" ಎಂದು ಕೇಳುತ್ತಾರೆ ."ನಾನು ಕೋಟೆಮಾರಿ" ಎಂಬ ಉತ್ತರ ಬರುತ್ತದೆ .ಕೋಟೆ ಈಗ ನಮ್ಮದಾಗಿದೆ ಎಂದು ಉಗ್ರಾಣಿ ಹೇಳುತ್ತಾರೆ . ಆಗ ಕೆರೆಯಿಂದ "ನನಗೆ ಬೇರೆ ನೆಲೆಯನ್ನು ತೋರಿಸಿಕೊಡು ಹೋಗುತ್ತೇನೆ" ಎಂಬ ಧ್ವನಿ ಕೇಳಿಸುತ್ತದೆ . 'ನಾನು ಮುಸ್ಲಿಮನಿದ್ದೇನೆ ಅಮ್ಮಾ..ಹೇಗೆ ನಿಮಗೆ ನೆಲೆ ತೋರಿಸಲಿ' ಎಂದು‌ ಉಗ್ರಾಣಿ ವಿನಂತಿಸಿಕೊಂಡಾಗ, 'ನಾಲ್ಕು ಜಾತಿಯ ಜನರನ್ನು ಸೇರಿಸು ,ಇಲ್ಲಿಂದ ತೆಂಗಿನಕಾಯಿಯನ್ನು ಬಿಸಾಡು‌ ಅದು ಎಲ್ಲಿ ಬೀಳುತ್ತದೊ ಅಲ್ಲಿ ನನಗೆ ನೆಲೆಯನ್ನು ಸಾರ್ವಜನಿಕರು ರೂಪಿಸುತ್ತಾರೆ' ಎಂದು ಸೂಚನೆ ಕೊಡುತ್ತಾಳೆ 'ಕೋಟೆ ಮಾರಿ'. ಈಗ ಐತಿಹಾಸಿಕ ಮಹತ್ವದ ಕೋಟೆಯೂ ಇಲ್ಲ ,ನಂದಿಕೆರೆಯೂ ಕಾಣಸಿಗುವುದಿಲ್ಲ - ಕಾಲ ಗರ್ಭ ಸೇರಿಹೋಗಿವೆ . ಮಾರಿಯ ಆದೇಶದಂತೆ ನಾಲ್ಕು ಜಾತಿಯ ಹತ್ತು ಸಮಸ್ತರ ಸಮಕ್ಷಮ ತೆಂಗಿಕಾಯಿಯನ್ನು ಹಾರಿಸಿದಾಗ ಅದು "ಪಲ್ಲ ಪಡ್ಪು" ಎಂಬಲ್ಲಿ ಬಿತ್ತು.ಅಲ್ಲಿ ಮಾರಿ ನೆಲೆಗೊಂಡು ಸೀಮಿತ ಜನರಿಂದ ಆರಾಧನೆಗೊಳ್ಳುತ್ತಿದ್ದಳು .ಮುಂದೆ ಸಮಷ್ಟಿಯ ಆರಾಧನಾ ಶಕ್ತಿಯಾಗಿ ತನ್ನ ಭಕ್ತರ ವಾಸ್ತವ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಳು. ಪಲ್ಲಪಡ್ಪು > ಪಳ್ಳಪಡ್ಪು > ಪಳ್ಳಿಪಡ್ಪು ಎಂದಾಯಿತು‌.ನೀರು ನಿಲ್ಲವ ತಗ್ಗುಪ್ರದೇಶವೇ ಪಲ್ಲ . ಪಡ್ಪು ಎಂದರೆ ಗಿಡ , ಪೊದೆಗಳಿಂದ ಆವೃತವಾದ ಸ್ಥಳ .ಹೀಗೆ 'ಪಲ್ಲ ಪಡ್ಪು'.
ಗದ್ದುಗೆಯೇ ಮೂಲ ಸನ್ನಿಧಾನ: ಪ್ರತಿ ಮಂಗಳವಾರ ಮಾತ್ರ ಪೂಜೆ. ಕೋಟೆಯವಳಾದ್ದರಿಂದ ಕೋಟೆಗೆ ಸಂಬಂಧ ಪಟ್ಟವರಿಂದ ಗದ್ದುಗೆ ತಂದು ಪೂಜೆ . ಕೇವಲ ಗದ್ದುಗೆ ಪೂಜೆ ನಡೆಯುತ್ತಿತ್ತು. ವರ್ಷಕ್ಕೊಮ್ಮೆ ತಾತ್ಕಾಲಿಕ ಚಪ್ಪರಹಾಕಿ ಮಾರಿಪೂಜೆ ನಡೆಯುತ್ತಿತ್ತು .ಮಾರಿಪೂಜೆ ಬಳಿಕ ಚಪ್ಪರಕ್ಜೆ ಬೆಂಕಿ ಕೊಡಲಾಗುತ್ತಿತ್ತು . ಗದ್ದುಗೆಯೇ ಮಾರಿಯ ಆರಾಧನೆಯ ಮೂಲ ಸನ್ನಿಧಾನ ಎನ್ನಬಹುದು. ಕಾಲಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಳವಾಯಿತು . ಮಾರಿಗುಡಿಯಾಯಿತು‌. ಮಾರಿ > ಮಾರಿಯಮ್ಮನಾದಳು . ಗುಡಿ ದೇವಸ್ಥಾನ ಸದೃಶವಾದಾಗ ಮಾರಿಯಮ್ಮ ದೇವರಾದಳು . ಕಾಲ ಕಾರಣವಾಗಿ ಒಂದು ಗುಡಿ ಮೂರು ಗುಡಿಯಾಯಿತು .ಅವು ದೇವಸ್ಥಾನಗಳೆಂದೇ ಒಪ್ಪಲಾಯಿತು . ಎಷ್ಟೇ ವೈದಿಕೀಕರಣಗೊಂಡರೂ "ಗದ್ದುಗೆ ಪೂಜೆ" , "ಮಾರಿಪೂಜೆ"ಗಳು ನಿರಾತಂಕವಾಗಿ ನಡೆಯುತ್ತಲೇ ಇವೆ .ಇದು ಆದಿಮ ಅಥವಾ ಜನಪದರ‌ ಆಚರಣೆಯ ಸಾಮರ್ಥ್ಯ ಹಾಗೂ ವೈದಿಕದ ವೈಚಾರಿಕ ವೈಶಾಲ್ಯತೆ. ಜನಪದರ ಭಾಗವಹಿಸುವಿಕೆಯಲ್ಲಿ ಜಾನಪದ ವಿಧಾನದಲ್ಲಿ ನೆರವೇರುತ್ತಿದ್ದ ಆಚರಣೆಗಳೆಲ್ಲ ವೈದಿಕದ ಪ್ರಭಾವ ಮತ್ತು ಸ್ವೀಕಾರದಿಂದ ಮಾರಿ 'ಶಕ್ತಿದೇವತೆ'ಯಾಗಿ‌ ರೂಪಾಂತರಗೊಂಡು ದುರ್ಗಾ ಸಂಬಂಧಿಯಾದ ಆರಾಧನಾ ವಿಧಿಗಳು ಸ್ವೀಕಾರವಾದುವು .ಮಾರ್ಕಾಂಡೇಯ ಪುರಾಣದ ಶ್ರೀದೇವೀಮಹಾತ್ಮ್ಯೆ-'ಸಪ್ತಶತೀ'ಯ ಹಲವು ಶ್ಲೋಕಗಳು ಆಧಾರವಾದಾಗ ದುರ್ಗಾ ಸಂಬಂಧಿ ಪೂಜೆಗಳು , ದುರ್ಗಾನಮಸ್ಕಾರ, ಚಂಡಿಕಾಯಾಗ ,ಶಕ್ತಿ ಯಾಗಾದಿಗಳು , ಕಲ್ಪೋಕ್ತ ಪೂಜೆಗಳು ಸೇರಿಕೊಂಡುವು .ಶರನ್ನವರಾತ್ರಿ ಆರಾಧನಾ ಪರ್ವವಾಗಿ ವೈಭವದ ಆಚರಣೆಗಳು ನಡೆಯಲಾರಂಭವಾಯಿತು . (ಪ್ರಸಿದ್ಧ ಪತ್ರಿಕೆಯಲ್ಲಿ ಬರೆದ ಮತ್ತು 2005ರಲ್ಲಿ ಅಭಯ ಪ್ರಸಾದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಮೂರು ಗುಡಿಗಳಲ್ಲಿ ನವರಾತ್ರಿ: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ: ಪ್ರತಿ ದಿನ ಬೆಳಗ್ಗೆ : ಶ್ರೀ ದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆ , ಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ. ಶಾರದಾ ಪೂಜೆ. ಶುಕ್ರವಾರ : ದುರ್ಗಾಷ್ಟಮಿ,ದುರ್ಗಾ ನಮಸ್ಕಾರ ಪೂಜೆ. ಸೋಮವಾರ : ವಿಜಯ ದಶಮಿ , ಕಲಶ ವಿಸರ್ಜನೆ. ಅ.27ಮಂಗಳವಾರ : ಚಂಡಿಕಾಯಾಗ . (ಕೊರೊನಾ ಕಾರಣವಾಗಿ ಧಾರ್ಮಿಕ ವಿಧಿ ವಿಧಾನಗಳು ಸರಳವಾಗಿ ಜರಗುವುದು) ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಗುಡಿ ದೇವಸ್ಥಾನಗಳಲ್ಲಿ ಬಹುತೇಕ ಒಂದೆ ಕ್ರಮದಲ್ಲಿ ನವರಾತ್ರಿ ಆಚರಣೆ ನೆರವೇರುತ್ತವೆ : ಇಲ್ಲಿ ನೆರವೇರುವ ನವರಾತ್ರಿ ಆಚರಣೆ ಕಲಶ ಪ್ರತಿಷ್ಠಾ ಕ್ರಮದಲ್ಲಿ. ಪ್ರತಿದಿನ ಬೆಳಗ್ಗೆ ಮಂಗಳ ಧ್ವನಿ, ಹಿಂದಿನ ದಿನದ ಕಲಶ , ಅಲಂಕಾರ ವಿಸರ್ಜನೆ.ಉಷಃಕಾಲ ಪೂಜೆ , ಹೊಸ ಕಲಶ ಪ್ರತಿಷ್ಠೆ . ಗಣಯಾಗ , ಶಕ್ತಿಯಾಗ . ಮಧ್ಯಾಹ್ನ ಕಲ್ಪೋಕ್ತ ಪೂಜೆ ,ದೇವಿಮಹಾತ್ಮ್ಯೆ ಪಾರಾಯಣ , ಪೂಜೆ ,ಸುವಾಸಿನಿ ಆರಾಧನೆ . ರಾತ್ರಿ - ದುರ್ಗಾನಮಸ್ಕಾರ ,ಕಲ್ಪೋಕ್ತ ಪೂಜೆ ,ಏಕಾಂತ ಸೇವೆ .ನವರಾತ್ರಿ ಕಾಲದಲ್ಲಿ ಎರಡು ಮಂಗಳವಾರಗಳು ಬಂದರೆ ಒಂದನೇ ಮಂಗಳವಾರ ಕದಿರುಕಟ್ಟುವುದು. ಎರಡನೇ ಮಂಗಳವಾರ ಚಂಡಿಕಾಯಾಗ ಮತ್ತು ಅನ್ನಸಂತರ್ಪಣೆ ‌. ಒಂದೇ ಮಂಗಳವಾರವಾದರೆ ಬೆಳಗ್ಗೆ ಕದಿರು ಕಟ್ಟುವುದು ,ಮಧ್ಯಾಹ್ನ ಚಂಡಿಕಾಯಾಗ - ಅನ್ನಸಂತರ್ಪಣೆ . ನವರಾತ್ರಿ ಕಾಲದಲ್ಲಿ ದುರ್ಗಾದೇವಿ , ಆರ್ಯಾದೇವಿ , ಭಗವತೀದೇವಿ , ಕುಮಾರೀದೇವಿ , ಅಂಬಿಕಾದೇವಿ , ಮಹಿಷಮರ್ದಿನಿ ‌, ಚಂಡಿಕಾದೇವಿ , ಸರಸ್ವತೀದೇವಿ ,ವಾಗೀಶ್ವರೀದೇವಿ , ಮೂಲದೇವಿಯಾಗಿ ಕಲ್ಪಿಸಿ ಪೂಜಿಸುವ ಅನುಸಂಧಾನ ಎರಡೂ ಸನ್ನಿಧಾನಗಳಲ್ಲಿವೆ . ( ಈ ವರ್ಷಕೊರೊನಾ ಕಾರಣವಾಗಿ ಅನ್ನಸಂತರ್ಪಣೆ ನಡೆಸಲಾಗಿಲ್ಲ .ಉಳಿದಂತೆ ನವರಾತ್ರಿಕಾಲದ ಸರ್ವಸೇವೆ , ಪೂಜೆಗಳು ಯಥಾಸಾಂಗವಾಗಿ ನೆರವೇರುತ್ತಿವೆ) ಮನುಕುಲವನ್ನು ಬಾಧಿಸುತ್ತಿರುವ ಮಹಾವ್ಯಾಧಿಯನ್ನು ಪರಿಹರಿಸಿ ಪ್ರಜಾವರ್ಗಕ್ಕೆಆಯುರಾರೋಗ್ಯವನ್ನು , ರಕ್ಷಣೆಯನ್ನು ಅನುಗ್ರಹಿಸುವಂತೆ ಮಾರಿಯಮ್ಮನಲ್ಲಿ ಪ್ರಾರ್ಥಿಸೋಣ . ಲೇಖನ: ಕೆ.ಎಲ್.ಕುಂಡಂತಾಯ