Updated News From Kaup

ಮಂಡೇಡಿ, ಇನ್ನಂಜೆ : ಶ್ರೀ ದೇವಿ ಭಜನಾ ಮಂಡಳಿಯ 43ನೇ ಭಜನಾ ಮಂಗಲೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾ ಅನ್ನಸಂತರ್ಪಣೆ

Thumbnail
Posted On: 20 Apr 2021, 10:41 AM

ಕಾಪು : ಕಾಪು ತಾಲೂಕಿನ ಮಂಡೇಡಿ, ಇನ್ನಂಜೆಯ ಶ್ರೀ ದೇವಿ ಭಜನಾ ಮಂಡಳಿಯ ವಾರ್ಷಿಕೋತ್ಸವದ ಪ್ರಯುಕ್ತ 43ನೇ ಭಜನಾ ಮಂಗಲೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾ ಅನ್ನಸಂತರ್ಪಣೆಯು ಏಪ್ರಿಲ್ 22, ಗುರುವಾರ ನಡೆಯಲಿದೆ. ಏಪ್ರಿಲ್ 22, ಗುರುವಾರ ಬೆಳಿಗ್ಗೆ ಗಂಟೆ 10 ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 12 ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 6ರಿಂದ ದೀಪ ಪ್ರತಿಷ್ಠೆಯೊಂದಿಗೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಆರಂಭ, ಪ್ರಾತಃ ಕಾಲ ರಾತ್ರಿ ಗಂಟೆ 12-30ಕ್ಕೆ ಭಜನಾ ಮಂಗಳೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪುತ್ತಿಗೆ ಶ್ರೀಗಳಿಗೆ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ

Thumbnail
Posted On: 18 Apr 2021, 04:17 PM

ಮಂಗಳೂರು : ಜಗತ್ತಿನೆಲ್ಲೆಡೆ ಕೃಷ್ಣ ಮಂದಿರಗಳನ್ನು ಸ್ಥಾಪಿಸಿ ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರ ಭಕ್ತಿ ಸಿದ್ದಾಂತವನ್ನು ಜಗತ್ತಿನೆಲ್ಲೆಡೆ ಪ್ರಚಾರ ನಡೆಸಿದ ಹಾಗೆಯೇ ವಿಶ್ವ ಧಾರ್ಮಿಕ ನಾಯಕರ ಒಕ್ಕೂಟದ ಅಧ್ಯಕ್ಷರಾಗಿ ಎಲ್ಲಾ ಮತಗಳ ಸಮನ್ವಯತೆಯನ್ನು ಸಾಧಿಸಿದ ಹಿರಿಮೆಯ ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರೂಪುಗೊಳ್ಳುವ ಶಿಕ್ಷಣದಿಂದ ವ್ಯಕ್ತಿ ಯಶಸ್ಸಿ ಬದುಕು ಕಟ್ಟಲು ಸಾಧ್ಯ ಮತ್ತು ಸಚ್ಚಾರಿತ್ಯದಿಂದ ಕೂಡಿದ ಸಮಾಜ ಸಾಕಾರಗೊಳ್ಳುತ್ತದೆ. ಶಿಕ್ಷಣ ಆಧ್ಯಾತ್ಮಿಕ ತಳಹದಿ ಹೊಂದದಿರುವುದು ಇಂದಿನ ಅನೇಕ ಅವಾಂತರಗಳಿಗೆ ಕಾರಣ ಎನ್ನುತ್ತಾ ಶ್ರೀನಿವಾಸನ ಹೆಸರಿನಿಂದ ಬೆಳಗುತ್ತಿರುವ ವಿಶ್ವವಿದ್ಯಾಲಯವು ಮಹತ್ತರ ಸಾಧನೆಯನ್ನು ನಡೆಸುವಂತಾಗಲಿ ಎಂದು ಹರಸಿದರು. ಇನ್ನೋರ್ವ ಗೌರವ ಡಾಕ್ಟರೇಟ್ ಪುರಸ್ಕೃತ ಬೆಂಗಳೂರಿನ ಆಚಾರ್ಯ ಧನ್ವಂತ್ ಸಿಂಗ ಮಾತನಾಡಿ ವಿದ್ಯಾರ್ಥಿಗಳು ಉನ್ನತ ಮೌಲ್ಯಗಳನ್ನು ಮೈಗೂಡಿಸಿ ಪ್ರಾಮಾಣಿಕ ಮತ್ತು ಸಮಗ್ರತೆಯ ಆಧಾರದಲ್ಲಿ ಬದುಕು ಕಟ್ಟಬೇಕು ಎಂದರು. ಶ್ರೀನಿವಾಸ ವಿ. ವಿ. ಯ ಉಪಕುಲಪತಿ ಡಾ. ಸಿ.ಎ. ರಾಘವೇಂದ್ರ ರಾವ್ ಪ್ರತಿಜ್ಞಾವಿಧಿ ಭೋಧಿಸಿದರು. ಸಹಕುಲಪತಿ ಡಾ.ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ಕುಲಪತಿ ಡಾ. ಪಿ.ಎಸ್. ಐತಾಳ ವಿ.ವಿ. ಯ ವಾರ್ಷಿಕ ವರದಿ ಮಂಡಿಸಿದರು. ಡಾ. ಶ್ರೀನಿವಾಸ ಮಯ್ಯ ಗೌರವ ಡಾಕ್ಟರೇಟ್ ಪತ್ರ ವಾಚಿಸಿದರು. ಆಡಳಿತ ಮಂಡಳಿಯ ಟ್ರಷ್ಟಿ ವಿಜಯಲಕ್ಷೀ ರಾವ್, ಪ್ರಾ. ಮಿತ್ರಾ ರಾವ್, ಡಾ. ಅಜಯ ಕುಮಾರ್, ಅದಿತ್ಯ ಕುಮಾರ್ ಉಪಸ್ಥಿತರಿದ್ದರು. ಕುಲಸಚಿವ ಡಾ. ಅನಿಲ್ ಕುಮಾರ್ ವಂದಿಸಿದರು. ಶ್ರೀನಿವಾಸ ವಿ. ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ರೋಹನ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

ಕಾಪು ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿಯವರಿಗೆ ಬಂಟಕಲ್ಲು ನಾಗರಿಕ ಸೇವಾ ಸಮಿತಿಯಿಂದ ಅಭಿನಂದನೆ

Thumbnail
Posted On: 18 Apr 2021, 12:00 PM

ಕಾಪು : ಕಳೆದ ನವೆಂಬರ್ ತಿಂಗಳಲ್ಲಿ ಬಂಟಕಲ್ಲು ದೇವಸ್ಥಾನ ಸಮೀಪದ ಶ್ರೀಮತಿ ವಸಂತಿ ಎಂಬವರಲ್ಲಿ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದರೋಡೆಗೈದ ಪ್ರಕರಣವನ್ನು ಬೇಧಿಸಿ, ದರೋಡೆಕೋರನನ್ನು ಬಂಧಿಸಿ ಚಿನ್ನದ ಸರವನ್ನು ವಶಪಡಿಸಿ ಮರಳಿ ಮಹಿಳೆಗೆ ಹಿಂತಿರುಗಿಸುವಲ್ಲಿ ಕರ್ತವ್ಯ ನಿರ್ವಹಿಸಿ , ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಕಾಪು ವೃತ್ತನಿರೀಕ್ಷರಾದ ಪ್ರಕಾಶ್, ಕ್ರೈಮ್ ಸಿಬ್ಬಂದಿಗಳಾದ ಪ್ರವೀಣ್, ರಾಜೇಶ್ ಹಾಗೂ ಸಿಬ್ಬಂದಿಯವರನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ವತಿಯಿಂದ ವೃತ್ತನಿರೀಕ್ಷಕರ ಕಛೇರಿಯಲ್ಲಿ ಶಾಲು ಹೊದಿಸಿ ಅಭಿನಂದಿಸಲಾಯಿತು. ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್. ಪಾಟ್ಕರ್, ಉಪಾಧ್ಯಕ್ಷ ಪುಂಡಲೀಕ ಮರಾಠೆ, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೊಶಾಧಿಕಾರಿ ಜಗದೀಶ್ ಆಚಾರ್ಯ, ಉಮೇಶ್ ರಾವ್, ವೃತ್ತ ನಿರೀಕ್ಷಕರ ಕಛೇರಿ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಪೆರ್ಡೂರು ಟು ಗೋವಾ : ದಾರಿ ಮಧ್ಯೆ ಹಣ್ಣಿನ ಗಿಡಗಳ ನೆಟ್ಟು ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ ಮಾಡಿದ ಯುವಕರು

Thumbnail
Posted On: 18 Apr 2021, 11:32 AM

ಕಾಪು : ಕಾಡಿನ ನಾಶ, ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಪರಿಸರ ಜಾಗೃತಿಗಾಗಿ ಫೆಡಲ್ ಫಾರ್ ಗ್ರೀನ್ ಎಂಬ ಘೋಷವಾಕ್ಯದೊಂದಿಗೆ ಪೆರ್ಡೂರಿಂದ ಗೋವಾದ ಪೊಂಡಕ್ಕೆ ಸುಮಾರು 320 ಕಿಲೋಮೀಟರ್ ಸೈಕಲ್ ಜಾಥಾದ ಮೂಲಕ ಕೃಷ್ಣಾನಂದ ನಾಯಕ್, ವಿಜ್ಞೇಶ್ ನಾಯಕ್, ವಿಜೇತ ನಾಯಕ್ ಆದಿತ್ಯವಾರದಿಂದ ಬುಧವಾರದವರೆಗೆ ಜಾಗೃತಿ ಮೂಡಿಸಿದರು. ದಾರಿ ಮಧ್ಯೆ ಸಿಗುವ ನರ್ಸರಿಯಲ್ಲಿ ಸುಮಾರು 15 ಬಗೆಯ ಹಣ್ಣುಗಳನ್ನು ನೀಡುವ ಗಿಡಗಳನ್ನು ಅಲ್ಲಲ್ಲಿ ನೆಡುವ ಮೂಲಕ ಸ್ಥಳೀಯರಿಗೂ ಇದರ ಬಗ್ಗೆ ತಿಳಿಸಿ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಯಿತು. ಕೃಷ್ಣಾನಂದ ನಾಯಕ್ ರೆಗಲಿಕ್ಸ್ ನಲ್ಲಿ ಡಿಸೈನರ್ ಆಗಿ, ವಿಜ್ಞೇಶ್ ನಾಯಕ್ ಕೊಕ್ ಇಂಡಸ್ಟ್ರಿಯಲ್ಲಿ ಅಕೌಂಟೆಂಟ್ ಆಗಿ, ವಿಜೇತ್ ನಾಯಕ್ ಉಡುಪಿ ಪ್ರವಾಸೋದ್ಯಮ ಇಲಾಖೆಯಲ್ಲಿ ಇಂಟನ್೯ಶಿಪ್ ಮಾಡುತ್ತಿದ್ದಾರೆ. ಇವರ ಪರಿಸರ ಜಾಗೃತಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಸಂಪೂರ್ಣ ಪ್ರೋತ್ಸಾಹ : ಜಿ. ಜಗದೀಶ್

Thumbnail
Posted On: 18 Apr 2021, 11:07 AM

ಪ್ರಾದೇಶಿಕ ಭಾಷೆಗಳ ಬೆಳವಣಿಗೆಯು ಈ ಮಣ್ಣಿನ ಸಂಸ್ಕೃತಿ,ಆಚಾರ, ವಿಚಾರಗಳನ್ನು ಉಳಿಸಿ,ಬೆಳೆಸಲು ಪೂರಕವಾಗಬಲ್ಲದು. ಸಾವಿರಾರು ವರ್ಷಗಳ ಇತಿಹಾಸವಿರುವ,ಪಂಚದ್ರಾವಿಡಭಾಷೆಗಳಲ್ಲೇ ಅತ್ಯಂತ ಶ್ರೇಷ್ಠಭಾಷೆಯೆಂದು ಪರಿಗಣಿಸಲ್ಪಟ್ಟಿರುವ ತುಳು ಭಾಷೆಯ ಬೆಳವಣಿಗೆಗೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಆಕಾಶರಾಜ್ ಜೈನ್ ಇವರು ಜಿಲ್ಲಾಧಿಕಾರಿ ಜಿ ಜಗದೀಶ್ ರವರಿಗೆ ತುಳುಲಿಪಿ ಹೊಂದಿರುವ ನಾಮಫಲಕವನ್ನು ಕೊಟ್ಟು, ತುಳು ಭಾಷೆ ಮತ್ತು ತುಳು ಲಿಪಿಯ ಬಗ್ಗೆ ತಿಳುವಳಿಕೆ ಮೂಡಿಸಿದರು ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾದ ತಾರಾ ಉಮೇಶ್ ಆಚಾರ್ಯ ಇವರು ಉಡುಪಿ ಜಿಲ್ಲೆಯಲ್ಲಿ ಕನ್ನಡ ನಾಮಫಲಕದ ಜೊತೆಗೆ ತುಳುಲಿಪಿಯ ನಾಮಫಲಕ ಬಳಕೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿರುವುದರಿಂದ ತುಳುವರಿಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಬೇಕು ಮತ್ತು ಉಡುಪಿ ಜಿಲ್ಲೆಯಲ್ಲಿ ತುಳುಭಾಷೆಗೆ ಮಾನ್ಯತೆ ಕೊಡಬೇಕು ಎಂದು ಜೈ ತುಳುನಾಡ್(ರಿ) ಸಂಘಟನೆಯ ಪರವಾಗಿ ತುಳು ಲಿಪಿ ಶಿಕ್ಷಕಿಯಾದ ಅಕ್ಷತಾ ಕುಲಾಲ್ ಇವರು ಮನವಿ ಸಲ್ಲಿಸಿದರು ಮತ್ತು ಜೈ ತುಳುನಾಡ್(ರಿ) ಸಂಘಟನೆಯ ತುಳುಲಿಪಿ ಮೇಲ್ವಿಚಾರಕರಾದ ಶರತ್ ಕೊಡವೂರು ಇವರು ತುಳು ಲಿಪಿ ಕಲಿಕಾ ತರಬೇತಿಯ ಬಗ್ಗೆ ಮತ್ತು ಆನ್ಲೈನ್ ನಲ್ಲಿ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರದಿಂದ ಸುಮಾರು 8000ಕ್ಕೂ ಅಧಿಕ ತುಳುವರು ತುಳು ಲಿಪಿ ಕಲಿತಿರುವ ಬಗ್ಗೆ ಮಾಹಿತಿ ನೀಡಿದರು. ಹಳೆ ವಿದ್ಯಾರ್ಥಿ ಸಂಘ , ಕೊಡವೂರು ಅಧ್ಯಕ್ಷರಾದ ಸತೀಶ್ ಕೊಡವೂರು ಇವರು ತುಳು ಲಿಪಿ ಕಲಿತ ಕಾರ್ಯಗಾರದಲ್ಲಿ ತುಳುವರ ಉತ್ತಮ ಸ್ಪಂದನೆ ಇರುವುದಾಗಿ ತಿಳಿಸಿದರು. ತುಳುಕೂಟ ಉಡುಪಿ (ರಿ) ಇದರ ಕಾರ್ಯದರ್ಶಿ,ಶ್ರೀಯುತ ಗಂಗಾಧರ್ ಕಿದಿಯೂರು,ತುಳುಕೂಟ ಉಡುಪಿ ಯ ಸ್ಥಾಪಕ ಸದಸ್ಯರಾದ ಶ್ರೀಯುತ ಯು.ಜಿ. ದೇವಾಡಿಗ ಇವರು ತುಳುಕೂಟ ಉಡುಪಿ (ರಿ) ನ ಪರವಾಗಿ ಮನವಿಯನ್ನು ಸಲ್ಲಿಸಿದರು.ಮತ್ತು ಶ್ರೀಯುತ ಗಂಗಾಧರ ಕಿದಿಯೂರು ರವರು ತಾವು ಬರೆದು ತುಳುಲಿಪಿಯಲ್ಲೇ ಪ್ರಕಟಿಸಿದ "ಪಿಂಗಾರದ ಬಾಲೆ ಸಿರಿ" ಪುಸ್ತಕವನ್ನು ಜಿಲ್ಲಾಧಿಕಾರಿಗಳಿಗೆ ಗೌರವ ಪ್ರತಿಯಾಗಿ ನೀಡಿದರು. ಈ ಸಂದರ್ಭದಲ್ಲಿ ಜೈ ತುಳುನಾಡ್(ರಿ) ತುಳು ಲಿಪಿ ಶಿಕ್ಷಕರಾದ ಕಿನ್ನು ಭಂಡಾರಿ ಮತ್ತು ಸ್ವಾತಿ ಸುವರ್ಣ ಉಪಸ್ಥಿತರಿದ್ದರು.

ಕುಂಜ, ಕಲ್ಲುಗುಡ್ಡೆ : ಸಾರ್ವಜನಿಕ ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನದಲ್ಲಿ ಸಪ್ತಮ ವರ್ಷದ ಪ್ರತಿಷ್ಠಾ ವರ್ಧಂತಿ, ಭಜನಾ ಮಂಗಳೋತ್ಸವ

Thumbnail
Posted On: 17 Apr 2021, 09:09 PM

ಕಾಪು : ಏಪ್ರಿಲ್ 18 ಆದಿತ್ಯವಾರದಂದು ಕಾಪು ಸಮೀಪದ ಕುಂಜ, ಕಲ್ಲುಗುಡ್ಡೆಯ ಬ್ರಹ್ಮಸ್ಥಾನದಲ್ಲಿ ಸಪ್ತಮ ವರ್ಷದ ಪ್ರತಿಷ್ಠ ವರ್ಧಂತಿ , ನಾಗಬ್ರಹ್ಮ ಹಾಗೂ ಸಪರಿವಾರ ಶಕ್ತಿಗಳಿಗೆ ತನುತಂಬಿಲಾದಿ ಸೇವೆಗಳು , ಭಜನಾ ಮಂಗಳೋತ್ಸವವು ನೆರವೇರಲಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ಜರುಗಲಿದೆ. ಈ ಎಲ್ಲಾ ದೇವತಾ ಕಾರ್ಯಗಳು ಸರಕಾರದ ಕೋವಿಡ್ ನಿಯಂತ್ರಣ ನಿಬಂಧನೆಗೊಳಪಟ್ಟು ಆಯೋಜಿಸಲಾಗಿದೆ. ಆದ್ದರಿಂದ ಭಕ್ತಾಧಿಗಳ ಸ್ವಯಂ ಸುರಕ್ಷತೆ ಹಾಗೂ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ನಾಗಬನದ ಮೇಲೆ ಅಶ್ವಥ ಮರ ಬಿದ್ದು ಅಪಾರ ಹಾನಿ

Thumbnail
Posted On: 15 Apr 2021, 04:21 PM

ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲಿರುವ ನಾಗಬನವೊಂದರ ಮೇಲೆ ಬೃಹತ್ ಅಶ್ವಥ ಮರವೊಂದು ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ. ಪೊಲಿಪು ಕೇಸಪ್ಪು ಕುಟುಂಬಸ್ಥರ ನಾಗಬನದಲ್ಲಿದ್ದ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ನಾಗಬನ ಸಂಪೂರ್ಣ ಹಾನಿಗೊಳಗಾಗಿದ್ದು, ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ನಾಗ ದೇವರ ಕಟ್ಟೆ ಮತ್ತು ಕಲ್ಲುಗಳಿಗೂ ಹಾನಿಯುಂಟಾಗಿದೆ. ಮರ ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿಯಿಂಟಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಪೂರೈಕೆಯಲ್ಲೂ ವೃತ್ಯಯ ಉಂಟಾಗಿದೆ. ಮೆಸ್ಕಾಂ ಸಿಬಂದಿಗಳು ಬೆಳಗ್ಗಿನಿಂದಲೂ ಮರ ತೆರವುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದು, ಸ್ಥಳೀಯರೂ ಕೂಡಾ ಕೈ ಜೋಡಿಸಿದ್ದಾರೆ.

ಕುತ್ಯಾರು : ಎಸ್. ಟಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮ ರಾವ್ ಅಂಬೇಡ್ಕರ್ ಜಯಂತಿ ಆಚರಣೆ

Thumbnail
Posted On: 14 Apr 2021, 10:32 PM

ಕಾಪು: ಕುತ್ಯಾರು ಗ್ರಾಮ ವ್ಯಾಪ್ತಿ ಯ ಎಸ್. ಟಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಭೀಮ ರಾವ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಉಡುಪಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರು ಲತಾ ಆಚಾರ್ಯ, ಉಪ ಅಧ್ಯಕ್ಷರು ರಾಜ ಶೆಟ್ಟಿ, ಪಂಚಾಯತ್ ಸದಸ್ಯರಾದ ಸಂಪತ್ ಪೂಜಾರಿ,ಅಗ್ನೇಸ್ ಮತಾಯಸ್, ಆರ್ ಎಸ್ ಎಸ್ ಪ್ರಮುಖ ಸತೀಶ್ ಕುತ್ಯಾರು,ವಾರ್ಡ್ ಕಾರ್ಯದರ್ಶಿ ರೂಪ ಆಚಾರ್ಯ ಕುತ್ಯಾರು, ಸ್ಥಾನಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ಕುತ್ಯಾರು ಉಪಸ್ಥಿತಿ ಇದ್ದರು. ನಂತರ ಕಾಲೋನಿ ಯ ಜನರೊಂದಿಗೆ ಲಘು ಉಪಹಾರ ಸೇವಿಸಲಾಯಿತು.

ಹೆಜಮಾಡಿ ಗ್ರಾಮಪಂಚಾಯತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Thumbnail
Posted On: 14 Apr 2021, 08:58 PM

ಕಾಪು : ನಾವೆಲ್ಲ ಇಂದು ರಾಜಕೀಯದ ಜ್ಞಾನವನ್ನು ಪಡೆಯಲು, ನಮ್ಮ ಹಕ್ಕು ಗಳ ಬಗ್ಗೆ ಕೂಲಂಕುಷವಾಗಿ ತಿಳಿಯಲು ಸಂವಿಧಾನ ಅತಿ ಮುಖ್ಯವಾಗಿದೆ .ಇದರ ನಿರ್ಮಾತೃ ಅಂಬೇಡ್ಕರ್. ಹೆಜ್ಜೆ ಹೆಜ್ಜೆಗೂ ಸವಾಲು, ಅವಮಾನಗಳನ್ನು ಮೆಟ್ಟಿನಿಂತ ಮಹಾನೀಯ. ಸಂವಿಧಾನವನ್ನು ತಿಳಿಯುವ ಮೊದಲು ಅಂಬೇಡ್ಕರರ ಜೀವನ ಚರಿತ್ರೆಯನ್ನು ತಿಳಿಯಬೇಕಾಗಿದೆ. ಆಗ ಮಾತ್ರ ಸಂವಿಧಾನದ ಮೂಲ ಆಶಯವನ್ನು ತಿಳಿಯಬಹುದು ಎಂದು ಮಂಗಳೂರಿನ ಬೆಸೆಂಟ್ ಎಂಬಿಎ ಕಾಲೇಜಿನ ಪ್ರಾಧ್ಯಾಪಕ ಸುರೇಶ್ ಹೆಜಮಾಡಿ ತಿಳಿಸಿದರು. ಹೆಜಮಾಡಿ ಗ್ರಾಮಪಂಚಾಯತ್ ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪೌರ ಕಾರ್ಮಿಕರಾದ ರವಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ ವಹಿಸಿದ್ದರು. ಈ ಸಂದರ್ಭ ಹೆಜಮಾಡಿ ಪಂಚಾಯತ್ನ ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಪಂಚಾಯತ್ ನ‌ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಕ್ಸ್ ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿದ ಮಹೇಶ್ ಮರ್ಣೆ

Thumbnail
Posted On: 13 Apr 2021, 06:40 AM

2015ರಲ್ಲಿ 3500 ಐಸ್ ಕ್ರೀಮ್ ಕಡ್ಡಿ ಮತ್ತು 750 ಬೆಂಕಿಕಡ್ಡಿ ಯಿಂದ ರಚಿಸಿದ ಗಣಪತಿಯ ಕಲಾಕೃತಿ ಯ ಮೂಲಕ 'ಇಂಡಿಯಾ ಬುಕ್ ಆಫ್ ರೆಕಾರ್ಡ್ 'ಗೆ ಸೇರ್ಪಡೆ ಯಾಗಿ ಸುದ್ದಿಯಾಗಿದ್ದ ಉಡುಪಿ ಯ ಮರ್ಣೆ ಗ್ರಾಮದ ಯುವ ಕಲಾವಿದ ಮಹೇಶ್ ಮರ್ಣೆಯವರು ಇದೀಗ ದೇವಾಲಯಗಳ ಮುಂದೆ ಪೂಜನೀಯವಾಗಿ ಗುರುತಿಸಲ್ಪಡುವ ಅಶ್ವಥ ಎಲೆಯಲ್ಲಿ ಅತ್ಯಂತ ಸೂಕ್ಷ್ಮ ವಾಗಿ ಬ್ಲೇಡ್ ಸಹಾಯದಿಂದ ಕ್ರಿಕೆಟ್ ನ ದಂತಕತೆ ಕತೆ ಎಂದೇ ಖ್ಯಾತಿ ಪಡೆದ ಸಚಿನ್ ತೆಂಡುಲ್ಕರ್ ರವರ ಭಾವ ಚಿತ್ರವನ್ನು ಕೇವಲ 7ನಿಮಿಷದಲ್ಲಿ ರಚಿಸಿ ಉತ್ತರ ಪ್ರದೇಶದ ಬರೇಲಿಯ ಲಾಟಾ ಪ್ರತಿಷ್ಠಾನಕ್ಕೆ ಈ ತಿಂಗಳ 24 ರಂದು ವೀಡಿಯೋ ಚಿತ್ರೀಕರಿಸಿ ಪಟ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ಪ್ರಭು ,ವಕೀಲರು ಗಳಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ,ಅರೂರು ಸುಕೇಶ್ ಶೆಟ್ಟಿ ಇವರ ಸಾಕ್ಷಿಗಳೊಂದಿಗೆ ಕಳುಹಿಸಿದ್ದರು .ಅದನ್ನು ವೀಕ್ಷಿಸಿ ಸೂಕ್ಷ್ಮ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಕ್ಸ್ ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಗೆ ಮಹೇಶ್ ರವರ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.