Updated News From Kaup
ವಿಶ್ವ ಪ್ರವಾಸೋದ್ಯಮ ದಿನ ಅಭಿವೃದ್ಧಿಯ ಹೊಸ ಹೆಜ್ಜೆಯಾಗಿ ಪರಿಣಮಿಸಲಿ

Posted On: 27-09-2020 03:21AM
ಸೆ.27 ವಿಶ್ವ ಪ್ರವಾಸೋದ್ಯಮ ದಿನ, ದೇಶಾದ್ಯಂತ ಈ ದಿನವನ್ನು ವಿಶೇಷ ಕಾಯ೯ಕ್ರಮದ ಮೂಲಕ ಆಚರಿಸಲಾಗುತ್ತದೆ. ಪ್ರವಾಸ ಎಂದರೆ ನಮ್ಮೆಲ್ಲರೂ ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನೀಡುತ್ತದೆ. ಮೈಮನಸ್ಸನ್ನು ಉಲ್ಲಾಸಗೊಳಿಸುವಲ್ಲಿ ಪ್ರವಾಸದ ಪಾತ್ರ ಬಹಳ ಮಹತ್ತರವಾದದ್ದು. ದೇಶ ಸುತ್ತು-ಕೋಶ ಓದು ಎನ್ನುವ ಮಾತು ಎಲ್ಲರಿಗೂ ಸದಾ ನೆನಪಿಸುತ್ತಲೇ ಇರುತ್ತದೆ. ಏಕೆಂದರೆ ಒಂದು ಪ್ರವಾಸದಲ್ಲಿ ಸಿಗುವ ಅನುಭವ ದೊಡ್ಡ ಗ್ರಂಥ ಓದುವುದಕ್ಕಿಂತಲು ಹೆಚ್ಚಿನದು ಎಂದರೆ ತಪ್ಪಾಗಲಾರುದು.
ವ್ರತ್ತಿಪರ ಪ್ರವಾಸೋದ್ಯಮಿಗಳನ್ನು ಸೃಷ್ಟಿಸುತ್ತಿರುವ ಪ್ರವಾಸೋದ್ಯಮ ಕೋರ್ಸ್ :-
ಇಂದಿನ ದಿನಗಳಲ್ಲಿ ಈ ಪ್ರವಾಸ ಉದ್ಯಮವಾಗಿ ಪ್ರವಾಸೋದ್ಯಮವಾಗಿದೆ, ಕಾರಣ ಅದರಲ್ಲಿನ ಅನೇಕ ಅನುಕೂಲಗಳು. ಇಂದು ಭಾರತದಲ್ಲಿ ಪ್ರವಾಸೋದ್ಯಮವು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ.ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇಂದಿನ ದಿನಗಳಲ್ಲಿ ಈ ಉದ್ಯಮ ಯುವ ಜನಾಂಗವನ್ನು ಸೆಳೆಯತ್ತಿದೆ.
ಪ್ರವಾಸೋದ್ಯಮದಿಂದ ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭ ತರುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಅಲ್ಲದೇ ದೇಶಕ್ಕೆ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ.
ಪ್ರವಾಸ ಎಂದರೆ ಅದು ಕೇವಲ ಸುತ್ತಾಟವಲ್ಲ :
ಪ್ರವಾಸದಲ್ಲಿ ಒಂದು ಕಲಿಕೆ ಇರುತ್ತದೆ. ಇದರಲ್ಲಿ ಹಲವಾರು ವಿಭಾಗದ ಮೂಲಕ ನಾವು ಗುರುತಿಸಬಹುದು. ನಾವು ಪ್ರವಾಸಕ್ಕೆ ತೆರಳುವಾಗ ನಮ್ಮ ಆಸಕ್ತಿ ಯ ಮೇಲೆ ನಾವು ಅಲ್ಲಿ ನೋಡುವ ಸ್ಥಳಗಳನ್ನು ನಿಧ೯ರಿಸುತ್ತೇವೆ.
ಇದರಲ್ಲಿರುವ ಪ್ರಮುಖ ವಿಭಾಗಗಳು ಕೃಷಿ ಪ್ರವಾಸೋದ್ಯಮ, ಅಡುಗೆ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹೀಗೆ ಹಲವು ಬಗೆಯ ಪ್ರವಾಸಗಳಿವೆ.
ಪ್ರವಾಸೋದ್ಯಮ ದಿನದ ಹಿನ್ನಲೆ :
ಇದರ ಹಿನ್ನಲೆಯ ಬಗ್ಗೆ ತಿಳಿಯುದಾದರೆ, 1997 ರಿಂದ ಅಚರಣೆಯಲ್ಲಿರುವ ಈ ದಿನವನ್ನು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟಂಬರ್ 27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಿತು.
ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ.
1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು.
ಭಾರತದಲ್ಲಿ ಪ್ರವಾಸೋದ್ಯಮ ಸ್ಥಿತಿ :-
ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಸಂಸ್ಕೃತಿಗೆ ಮಾರುಹೋಗಿರುವ ವಿದೇಶಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹಾಗೆಯೇ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ಸರಾಸರಿ ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಪ್ರವಾಸೋದ್ಯಮ ಸೇವಾ ವಲಯವು 2008ರಲ್ಲಿ ಸುಮಾರು ಶತಕೋಟಿ ಡಾಲರ್ ಆದಾಯ ಗಳಿಸಿದೆ.
ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಭಾರತ ಉಪಖಂಡಕ್ಕೆ ಮುಂದಿನ ಹತ್ತು ವರ್ಷಗಳ ವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮರ್ಥ್ಯವಿದೆ. ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸೀ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ. ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ.
ಕರೋನಾ ಮತ್ತು ಪ್ರವಾಸೋದ್ಯಮ :-
ಈ ಕರೋನಾದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಹಳ ತೊಂದರೆಯಾಗಿದೆ. ಈ ಕ್ಷೇತ್ರದಲ್ಲಿ ದುಡಿಯುವ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ.ಆದರೆ ಇತ್ತಿಚಿಗೆ ನ ದಿನಗಳಲ್ಲಿ ಈ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.ಸಕಾ೯ರ ಕೂಡ ಪೂರಕವಾಗಿ ಸ್ಪಂದಿಸಿದ ಕಾರಣ ಇದು ಸಾಧ್ಯವಾಗಿದೆ.ದೇಶದ ಅಭಿವೃದ್ಧಿಯ ದಾರಿಯಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ.

ಉಡುಪಿ ಜಿಲ್ಲೆ ಮತ್ತು ಪ್ರವಾಸೋದ್ಯಮ :-
ಈ ಜಿಲ್ಲೆಯಲ್ಲಿರುವ ಕಡಲ ತೀರಗಳು, ಧಾಮಿ೯ಕ , ಇತಿಹಾಸ ಕೇಂದ್ರಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಕಾ೯ರ ಹೆಚ್ಚಿನ ರೀತಿಯಲ್ಲಿ ಅನುದಾನ ನೀಡಿದರೆ ಉಡುಪಿಯನ್ನು ಮಾದರಿ ಪ್ರವಾಸಿ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ.ಕೇವಲ ವಷ೯ಕ್ಕೆ ಒಂದು ಬಾರಿ ಆಚರಣಿ ಮಾಡದೆ ದಿನ ಪ್ರತಿ ಈ ದಿನವನ್ನು ಆಚರಣಿ ಮಾಡಬೇಕು.
ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು.
ಬರಹ : ರಾಘವೇಂದ್ರ ಪ್ರಭು,ಕವಾ೯ಲು, ಯುವ ಲೇಖಕ
ಕಡಲಕಿನಾರೆ ಬಿಡದ ಪ್ರವಾಸೋದ್ಯಮ ಪ್ರವಾಸಿಗೆ ಪ್ರದರ್ಶಿಸಬೇಕಿದೆ ಸಾಂಸ್ಕೃತಿಕ ಸಂಪತ್ತು

Posted On: 27-09-2020 03:06AM
ಆನಂದ , ಆಶ್ಚರ್ಯ , ಆಮೋದಗಳನ್ನು ಏಕಕಾಲದಲ್ಲಿ ಪ್ರವಾಸಿಗೆ ನೀಡಬಲ್ಲ ಸೊಗಸಾದ ತಾಣಗಳಲ್ಲಿ ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಪ್ರಮುಖವಾಗಿ ಗುರುತಿಸಲ್ಪಡುತ್ತದೆ .
ವಿಫುಲವಾದ ಅವಕಾಶಗಳಿದ್ದರೂ ಪ್ರವಾಸೋದ್ಯಮ ಎಷ್ಟು ಅಭಿವೃದ್ಧಿಯಾಗಿದೆ , ಇಲ್ಲಿರುವ ಪ್ರವಾಸಿ ಆಕರ್ಷಣೆಯ ಎಷ್ಟು ವಿಷಯಗಳು ತೆರೆದುಕೊಂಡಿವೆ ಅಥವಾ ಅನಾವರಣಗೊಳಿಸಲಾಗಿದೆ ! ಗೊತ್ತಿಲ್ಲ . ಆದರೆ ಬಹುತೇಕ ನಮ್ಮ ಪ್ರವಾಸೋದ್ಯಮ ಕಡಲ ಕಿನಾರೆಯನ್ನು ಬಿಟ್ಟು ಪೂರ್ವಾಭಿಮುಖವಾಗಿ ನೋಡಿದ ಹಾಗೆ ಅನಿಸುವುದೇ ಇಲ್ಲ . ಹಾಗಾದರೆ ಕಡಲು - ಘಟ್ಟದ ನಡುವೆ ಏನಿದೆ .
ನಮ್ಮ ಉಭಯ ಜಿಲ್ಲೆಗಳಲ್ಲಿ
ಸಮೃದ್ಧವಾಗಿ ಬೆಳೆದಿರುವ ಸಂಸ್ಕೃತಿಯು ವೈಶಿಷ್ಟ್ಯ ಪೂರ್ಣವಾದುದು . ಇಲ್ಲಿ ಜಾನಪದ ಮೂಲದ ಆಚರಣೆ , ನಂಬಿಕೆಗಳಿವೆ . ಆರಾಧನಾ ಕಲೆಗಳು ,ಪ್ರದರ್ಶನ ರಂಗ ಕಲೆಗಳಿವೆ .
ಪರ್ವತ , ಗುಡ್ಡ , ಬೆಟ್ಟ , ಜಲಪಾತ , ಝರಿ , ನದಿ , ಹೊಳೆ , ಸಮುದ್ರ ಎಲ್ಲವೂಇದೆ . ಆಹಾರ ಪದಾರ್ಥಗಳ ವೈವಿಧ್ಯತೆ ಇದೆ . ಆಕರ್ಷಕ ಉತ್ಪನ್ನಗಳಿವೆ .ಇತಿಹಾಸ ಹೇಳುವ ಪುರಾತನ ನಿರ್ಮಿತಿಗಳಿವೆ . ವೀರರ , ಪ್ರತಿಭಾವಂತರ , ಸಾಧಕರ , ದೈವೀಪುರುಷರ ಆಡುಂಬೊಲವಿದೆ . ಭವ್ಯವಾಗಿ ಬೆಳೆದ ದೇವಾಲಯ ಸಂಸ್ಕೃತಿಯಿದೆ . ಒಟ್ಟಿನಲ್ಲಿ ಮನಮೋಹಕ ಪರಿಸರದಲ್ಲಿ ವಾದನ - ನರ್ತನ - ಗಾಯನ - ರಂಗಿನ ಹಿನ್ನೆಲೆಯೊಂದಿಗೆ ಪ್ರತಿದಿನ ದೈವ - ದೇವಲೋಕಗಳು , ನಾಗ - ಬ್ರಹ್ಮ ಸನ್ನಿಧಾನಗಳು ಸನ್ನಿಹಿತವಾಗುತ್ತವೆ ,ಪುರಾಣ ಪ್ರಪಂಚ ತೆರೆದುಕೊಳ್ಳುತ್ತದೆ.
ಇದನ್ನೆಲ್ಲ ನಮ್ಮ ಸಂಸ್ಕೃತಿ ಎಂಬ ಗೌರವದೊಂದಿಗೆ ಪ್ರವಾಸಿಗೆ ತೋರಿಸಬೇಕು . ವಿವಿಧ ಸೌಲಭ್ಯಗಳೊಂದಿಗೆ ಈ ಸಾಂಸ್ಕೃತಿಕ ಸಂಪತ್ತಿನ ಖಜಾನೆಯ ಬಾಗಿಲು ತೆರೆಯಬೇಕು . ಆಗ ನಮ್ಮ ಸಂಸ್ಕೃತಿ ಜಗಜ್ಜಾಹೀರಾಗುತ್ತದೆ . ಬಹುತ್ವದ , ಬಹು ಆಯಾಮಗಳುಳ್ಳ ಒಂದು ಸಂಸ್ಕೃತಿ ಗೌರವಯುತವಾಗಿ ಪ್ರಸ್ತುತಪಡುವುದು ಹೆಮ್ಮೆಯಲ್ಲವೆ . ಆದರೆ ಪ್ರಸ್ತುತಿ ಹೇಗಾಗುತ್ತಿದೆ ಗೊತ್ತಿಲ್ಲ . ಅಂತಹ ಯಾವುದೇ ಮಾಹಿತಿ ಇಲ್ಲ . ನದಿಯಲ್ಲಿ ಸಾಹಸದ , ರೋಚಕ ದೋಣಿಪ್ರವಾಸದ ಬಗ್ಗೆ ಕೇಳಿ ಬರುತ್ತದೆ , ಸಮುದ್ರದಲ್ಲಿ ಬೋಟಿಂಗ್ ನೋಡ ಸಿಗುತ್ತದೆ . ರೆಸಾರ್ಟ್ಗಗಳೂ ಇವೆ , ಅಷ್ಟಕ್ಕೆ ಸೀಮಿತವೇ ? ಗೊತ್ತಿಲ್ಲ .
ಸಮುದ್ರ ಕಿನಾರೆ
ಸಮುದ್ರ ಎಂದರೆ ಭಯ ಭವ್ಯತೆಯನ್ನು ಹೊಂದಿ ಮನೆಸೂರೆಗೊಳ್ಳುವ ಒಂದು ವಿಸ್ಮಯ . ನದಿಗಳು ಸಾಗರ ಸಂಗಮಿಸುವ ಅಳಿವೆಗಳು ಪ್ರಕೃತಿ ನಿರ್ಮಿಸಿದ ಸುಂದರ ಪ್ರದೇಶವ . ನಿಸರ್ಗ ಸಹಜ ದ್ವೀಪಗಳು (ಕುದುರು) ಪ್ರವಾಸಿ ತಾಣಗಳು . ಹಿನ್ನೀರಿನ ನೋಟವು ಅಗಾಧ ಜಲರಾಶಿ . ಇಂತಹ ಆಕರ್ಷಣೀಯ ಪರಿಸರ ಪ್ರವಾಸಿ ತಾಣಗಳಾಗಿವೆ.
ಧಾರ್ಮಿಕ ಕ್ಷೇತ್ರಗಳು
ಪ್ರಸಿದ್ಧ ದೇವಾಲಯಗಳು , ಪವಿತ್ರ ನದಿ ಸ್ನಾನ - ತೀರ್ಥಸ್ನಾನದ ನದಿ ದಡಗಳು , ನಾಗ ಸನ್ನಿಧಾನಗಳು , ಮಾರಿಗುಡಿಗಳು , ಬ್ರಹ್ಮಸ್ಥಾನಗಳು , ದೈವಸ್ಥಾನಗಳು , ಸಿರಿ ಕ್ಷೇತ್ರಗಳು (ಆಲಡೆಗಳು) ಧಾರ್ಮಿಕ ಮಹತ್ವಗಳೊಂದಿಗೆ ಯಾತ್ರಿಕರನ್ನು ಸೆಳೆಯುತ್ತವೆ . ಧಾರ್ಮಿಕ ಪ್ರವಾಸೋದ್ಯಮವನ್ನು ವಿಸ್ತರಿಸುವ ಸಾಧ್ಯತೆ ಇದೆ .
ಇಂತಹ ದೇವಾಲಯ , ದೈವಸ್ಥಾನಗಳಲ್ಲಿ ಶಿಲ್ಪಕಲೆಯ ಬೆಡಗುಇದೆ .ಮೂರ್ತಿಗಳು - ಕಲ್ಲಿನ ಲೋಹಗಳ ವಿಶಿಷ್ಟ ಕಲಾಕೃತಿಗಳು - ಕುಸುರಿ ಕೆಲಸದ ಮಣೆ ಮಂಚವುಗಳಿವೆ ,ದೈವಗಳ ಭಂಡಾರದಲ್ಲಿ ಅಪೂರ್ವ - ಪವಿತ್ರ ವಸ್ತುಗಳಿರುತ್ತವೆ . ಇವೆಲ್ಲದರ ಪ್ರದರ್ಶನಾವಕಾಶ ಒದಗಬೇಕು . ವಾರ್ಷಿಕ ಉತ್ಸವ ಸಂದರ್ಭಗಳಲ್ಲಿ ಇದು ಸಾಧ್ಯ.
ಪ್ರಾಚೀನ ಚರ್ಚ್ , ಮಸೀದಿಗಳು ಉಭಯ ಜಿಲ್ಲೆಗಳಲ್ಲಿವೆ .ಇಲ್ಲಿ ನಡೆಯುವ ಉರೂಸ್ , ಚರ್ಚ್ ನ ವಾರ್ಷಿಕ ಹಬ್ಬಗಳು ಹಾಗೂ ವಿಶಿಷ್ಟ ಆಚರಣೆ ಗಳು ಪ್ರವಾಸಿಗೆ ಆಕರ್ಷಣೀಯವಾಗಬಹುದು . ಪುರಾತನ ಚರ್ಚ್ ,ಮಸೀದಿಗಳ ಐತಿಹಾಸಿಕ ಮಹತ್ವ , ರಚನಾ ಶೈಲಿಗಳು ಮಹತ್ವಪೂರ್ಣವಾದುವೇ.
ಐತಿಹಾಸಿಕ ಸ್ಥಳಗಳು
ಚರಿತ್ರೆಗೆ ಸಾಕ್ಷಿಯಾಗಿ ಉಳಿದಿರುವ ಅರಮನೆಗಳು , ಕೋಟೆಗಳ ಅವಶೇಷಗಳು , ಅಪೂರ್ವ ದಾರುಶಿಲ್ಪಗಳಿರುವ ಪ್ರಾಚೀನ ಮಠ ಮತ್ತು ಗುತ್ತಿನಮನೆಗಳು , ಚೌಕಿಮನೆಗಳು ,ಜಾನಪದ ವೀರರು ಹುಟ್ಟಿದ ಸ್ಥಳ - ನಡೆದಾಡಿದ ಪರಿಸರ - ಸಾಧಕ ವಿದ್ಯೆಕಲಿತ ಐಗಳಮಠ - ಗರಡಿಗಳು , ಪಾರ್ದನ - ಜಾನಪದಗಳಿಗೆ ಸಂಬಂಧಿಸಿದ ಸ್ಥಳಗಳು ಇತಿಹಾಸ , ಸಂಸ್ಕೃತಿ ಪ್ರೀತಿಯ ಪ್ರವಾಸಿಗಳ ಗಮನ ಸೆಳೆಯದಿದ್ದೀತೆ.
ಆಚರಣೆ - ಆರಾಧನೆ - ಕ್ರೀಡೆ
ಪ್ರಖ್ಯಾತ ದೈವಸ್ಥಾನಗಳ ವಿಶಿಷ್ಟ ಕೋಲ- ನೇಮ - ಮೆಚ್ಚಿ - ಗೆಂಡ , ನಾಗಮಂಡಲ - ಡಕ್ಕೆಬಲಿ - ಪಾಣರಾಟಗಳು ನಡೆಯುವಲ್ಲಿಗೆ ಆಸಕ್ತ ಯಾತ್ರಿಗಳನ್ನು ಕರೆದೊಯ್ದು ತೋರಿಸುವ ಅವಕಾಶವಿದೆ.
ದೇವಾಲಯಗಳ ವಾರ್ಷಿಕ ಜಾತ್ರೆ , ಕೋಲ - ನೇಮದ ಬಳಿಕ ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕ , ಕಂಬಳಗಳನ್ನೂ ಪ್ರವಾಸಿಗಳಿಗೆ ತೋರಿಸುವ ಸಾಧ್ಯತೆಇದೆ . ತೆಂಗಿನಕಾಯಿ ಕಟ್ಟುವ, ಬೇಟೆಯಾಡುವ (ಕೆಡ್ಡಸ ಬೋಂಟೆ) ಮುಂತಾದ ಜಾನಪದ ಕ್ರೀಡೆಗಳನ್ನೂ ಏರ್ಪಡಿಸಿ ಪ್ರದರ್ಶಿಸಬಹುದು .
ವಾದನ - ನರ್ತನ ವೈಭವ
ವಾದನ - ನರ್ತನಗಳು ಸಂತೋಷ , ಸಂಭ್ರಮದ ಸಂಕೇತಗಳಾಗಿ , ದೈವ - ದೇವರ ಸೇವೆಯ ಪ್ರಧಾನ ಅಂಗವಾಗಿ ರೂಢಿಯಲ್ಲಿವೆ . ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೈಭವವನ್ನು ಒದಗಿಸಲು ವಾದನ - ನರ್ತನ ಪ್ರಮುಖವಾದುದು.
ಜಾನಪದ ನಾಗಸ್ವರ , ಕೊಳಲು ಸಹಿತ ಬಾಯಿಯಿಂದ ಊದಿ ನುಡಿಸುವ ವಾದ್ಯಗಳು ,ಸಮ್ಮೇಳ ,ತಾಸ್ ಮಾರ್ , ದುಡಿ ತೆಂಬರೆ, ಡಕ್ಕೆ ,ದಿಡ್ಂಬು , ನಗರಿ , ದೋಲು ಮತ್ತು ಬ್ಯಾಂಡ್ ಸೆಟ್ ಮುಂತಾದ ಸಾಂಪ್ರದಾಯಿಕ ಜಾನಪದ ಚರ್ಮವಾದ್ಯಗಳು ನಮ್ಮ ಆಚರಣೆಗಳಲ್ಲಿದ್ದು ಆಕರ್ಷಣೀಯವಾಗಿವೆ , ಇವು ಪ್ರವಾಸಿಗರ ಮುಂದೆ ಪ್ರದರ್ಶಿಸುವಂತಹದ್ದು.
ಕರಾವಳಿಯ ಗಂಡುಕಲೆ ಯಕ್ಷಗಾನದ ವರ್ಣ - ವಾದನ - ನರ್ತನ - ಸಾಹಿತ್ಯ ವೈಭವ,ಬೂತಾರಾಧನೆ ರಮ್ಯಾದ್ಭುತ ಸೊಗಸು , ನಂಬಿಕೆ ಆಧರಿಸಿದ ಉಪಾಸನಾ ಪದ್ಧತಿ ,ನಾಗಮಡಲ - ಡಕ್ಕೆಬಲಿಗಳಲ್ಲಿರುವ ನಾಟ್ಯ ,ವಾದನ ಮತ್ತು ಬಣ್ಣ ಹೀಗೆ ಬಣ್ಣದದ ಬಣ್ಣನೆಗೆ ಬದಲಿಲ್ಲದ ಗಮನ ಸೆಳೆಯುವ ಆರಾಧನಾ ರಂಗಕಲೆಗಳು ,ರಂಗಕಲೆಗಳು ನಮ್ಮಲಿವೇ.
ಆಹಾರದ ವಿವಿಧತೆ ನಮ್ಮಲಿವೆ ,
ಅವುಗಳು ಅದರದ್ದೆ ಆದ ರುಚಿಯಿಂದ ವಿಶೇಷ ಖ್ಯಾತಿಯನ್ನು ಪಡೆದಿವೆ . ಕಡಲಿನಿಂದ ದೊರೆಯುವ ಫ್ರೆಶ್ ,ಶುದ್ದ ಮೀನು ಕರಾವಳಿಯ ವಿಶೇಷ .ಈ ಆಹಾರ ವೈವಿಧ್ಯ ವನ್ನು ಪ್ರವಾಸಿಗಳನ್ನು ಕರೆದೊಯ್ಯುವಲ್ಲಿ ಸುಲಭ ಲಭ್ಯವಾಗುವಂತೆ ಒದಗಿಸಬಹುದು .
ಕರಾವಳಿಯ ಉತ್ಪನ್ನಗಳು
ನಮ್ಮ ಕರಾವಳಿ ಸೀಮೆಯ ಉತ್ಪನ್ನಗಳನ್ನು ಸಂದರ್ಭಗಳಲ್ಲಿ ಪ್ರದರ್ಶಿಸಿ ವ್ಯವಹಾರವನ್ನು ನಡೆಸುವ ಸಾಧ್ಯತೆಗಳಿವೆ . ಕೈಮಗ್ಗದ ಬಟ್ಟೆಗಳು , ಜಾನಪದ ಸೊಗಸುಳ್ಳ ಚಿನ್ನ - ಬೆಳ್ಳಿಯ ಆಭರಣಗಳು , ದೈವ ದೇವರ ಮುಖ , ಮೂರ್ತಿ , ಆಭರಣಗಳು , ಪಂಚಲೋಹ - ಕಂಚಿನ ಮೂರ್ತಿಗಳು,
ಪಾತ್ರೆಗಳು ಕಬ್ಬಿಣದ ಚೂರಿ ,ಕತ್ತಿ ,ಕೊಡಲಿ , ಬೀಗಗಳು ಮತ್ತು ಮರದ ನಿತ್ಯೋಪಯೋಗಿ ವಸ್ತಗಳಾದ ಸಂಬಾರದ ಮರಿಗೆ , ಸೇರು , ಪಾವು , ಕಳಸೆ ,ಕಡೆಗೋಲು , ಮಣೆ ,ಮೆಟ್ಟುಕತ್ತಿ ,ಹೆರೆಮಣೆ ಹಾಗೂ ಕರಾವಳಿಯ ಸೊಗಡಿನ ಪೀಠೋಪಕರಣ ಗಳನ್ನು ಪ್ರದರ್ಶಿಸಿ ಪ್ರವಾಸಿಗಳು ಖರೀದಿಸುವಂತೆ ಮಾಡ ಬಹುದು .
ಪ್ರಕೃತಿ ಜನ್ಯ ಮೂಲವಸ್ತುಗಳಿಂದ ಸಿದ್ಧಗೊಳಿಸುವ ಹೆಡಿಗೆ ,ಗೆರಸೆ , ಬುಟ್ಟಿ ಹುರಿಹಗ್ಗ , ನಾರಿನಹಗ್ಗ , ಬೀಳಿನ ಸಣ್ಣ ಹೆಡಿಗೆ ಮುಂತಾದುವುಗಳನ್ನು ಪ್ರವಾಸಿಗರು ನೆರೆಯುವ ಕಡಲಕಿನಾರೆಯಲ್ಲಿ , ಜಾತ್ರೆಗಳಲ್ಲಿ ,ಕೋಲ- ನೇಮಗಳಲ್ಲಿ ಸುಲಭವಾಗಿ ಲಭಿಸುವಂತೆ ಮಾಡಬಹುದು . ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವಂತಾಗುವುದಿಲ್ಲವೇ?.
ಸಾಂಸ್ಕೃತಿಕ ಭವ್ಯತೆ
ಹೀಗೆ ವಿವಿಧ ಲಭ್ಯ ಆಕರಗಳನ್ನು ಬಳಸಿಕೊಂಡು ಪ್ರವಾಸಿಗಳನ್ನು ಆಕರ್ಷಿಸಬಹುದು .ನಮ್ಮದೆನ್ನುವ ಸಾಂಸ್ಕೃತಿಕ ಭವ್ಯತೆ ನಮ್ಮಲ್ಲಿವೆ. ಅವುಗಳನ್ನು ಪ್ರದರ್ಶಿಸಬೇಕು , ವಿವರಿಸಬೇಕು , ಯಾತ್ರಿಗಳನ್ನು ಸೆಳೆಯುವ ಕೆಲಸವಾಗಬೇಕು.
ಇಂತಹ ಪ್ರದರ್ಶನಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ನೋವಾಗಬಾರದು .ಇತಿಹಾಸವನ್ನು ತಿರುಚಬಾರದು .ಈ ಧಾರ್ಮಿಕ ,ಐತಿಹಾಸಿಕ , ಜಾನಪದ ಸಂಪತ್ತನ್ನು ಗೌರವದಿಂದ ನಮ್ಮ ಪೂರ್ವಸೂರಿಗಳ ಸಾಂಸ್ಕೃತಿಕ ಕೊಡುಗೆ ಎಂದು ಪ್ರವಾಸಿಯ ಮುಂದೆ ಪ್ರದರ್ಶಿಸಬೇಕು.
ವರ್ಣ , ವರ್ಗ ತಾರತಮ್ಯ ಪರಿಗಣಿಸದೆ ಪ್ರಶಸ್ತವಾದುದನ್ನು ಸ್ವೀಕರಿಸುವ , ಪ್ರಚುರಪಡಿಸುವ , ಅಳವಡಿಸಿಕೊಳ್ಳುವ ವಿಶಾಲಮನೋಭಾವ ಅಗತ್ಯ .
ಬರಹ : ಕೆ. ಎಲ್.ಕುಂಡಂತಾಯ
ಕಾಪುವಿನ ಪಕೀರ್ನಕಟ್ಟೆಯಲ್ಲಿ ಕತ್ತಲ ಮನೆಗೆ ಬೆಳಕು ನೀಡಿದ ಸೇವ್ ಲೈಫ್

Posted On: 26-09-2020 04:45PM
ಕಾಪು ಪುರಸಭಾ ವ್ಯಾಪ್ತಿಯ ಪಕೀರ್ನಕಟ್ಟೆ ಅಪ್ಪಿಯವರು ಕಳೆದ ಹತ್ತು ವರ್ಷಗಳಿಂದ ಹುಲ್ಲಿನ ಮನೆಯಲ್ಲಿ ಚಿಮಿಣಿ ದೀಪದ ಬೆಳಕಿನಲ್ಲೇ ದಿನ ಕಳೆಯುತ್ತಿದ್ದು,ವಿದ್ಯುತ್ ಸಂಪರ್ಕ ಇಲ್ಲದೆ ವಾಸಿಸುತ್ತಿದ್ದರು.

ಇದನ್ನು ಗಮನಿಸಿದ ಸ್ಥಳೀಯ ಸಮಾಜ ಸೇವಕರಾದ ಪ್ರಶಾಂತ್ ಪೂಜಾರಿ ಕಾಪು ಮತ್ತು ನೀತಾ ಪ್ರಭು ಕಾಪು ಇವರು "ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್" ನ ಸದಸ್ಯರಾದ ಅರ್ಜುನ್ ಬಂಡಾರ್ಕರ್ ಇವರಿಗೆ ತಿಳಿಸಿದರು.

"ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್" ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯಾಗಿದ್ದು ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿ. ಅಪ್ಪಿಯವರ ಮನೆಗೆ ಸುಮಾರು 20,000 ವೆಚ್ಚದ ಸೋಲಾರ್ ಕನೆಕ್ಷನ್, ಹಾಗೂ ನಾಲ್ಕು ಬಲ್ಬ್ ಗಳನ್ನು ಹಸ್ತಾಂತರಿಸಿದರು.

ಅಪ್ಪಿಯವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ಕಂಡು ಸದಸ್ಯರಾದ ಅರ್ಜುನ್ ಬಂಡಾರ್ಕರ್ ಅವರು 10,000 ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಪ್ಪಿಯವರ ಸಹೋದರಿ ಉಪಸ್ಥಿತರಿದ್ದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ವರದಿ : ವಿಕ್ಕಿ ಪೂಜಾರಿ ಮಡುಂಬು
ಬೆಳ್ಮಣ್ ನಲ್ಲಿ ಅಂತರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ

Posted On: 25-09-2020 10:50PM
ರೋಟರಿ ಕ್ಲಬ್ ಬೆಳ್ಮಣ್, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ಹಾಗೂ ವಿವಿಧ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪೌಷ್ಟಿಕಾಆಹಾರ ಸಪ್ತಾಹ ಕಾರ್ಯಕ್ರಮವನ್ನು ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಬಿ. ಬಾಲಕೃಷ್ಣ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪೌಷ್ಟಿಕ ಆಹಾರದ ಮಹತ್ವ ಹಾಗೂ ಪೌಷ್ಟಿಕ ಆಹಾರದ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಶ್ರೀಮತಿ ಸೌಭಾಗ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸುದರೊಂದಿಗೆ ರೋಟರಿ ಬೆಳ್ಮಣ್ ನ ಕಾಯಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಮಣ್ ನ ಅಧ್ಯಕ್ಷರಾದ ರೋ| ಶುಭಾಷ್ ಕುಮಾರ್ ವಹಿಸಿದ್ದು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ರೋ| ರಾಜೇಶ್ ಸಾಲ್ಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋ| ಮೋಹನ್ ದಾಸ್ ಶೆಟ್ಟಿ ನಿರೂಪಿಸಿ ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು, ರೋಟರಿ ಸದಸ್ಯರು , ಆಶಾ ಕಾರ್ಯಕರ್ತೆಯರ ತಂಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು

Posted On: 25-09-2020 05:12PM
ಶಾರ್ವರಿ ನಾಮ ಸಂವತ್ಸರದ ಆಶ್ವಯುಜ ಮಾಸವು ಈ ಬಾರಿ ಅಧಿಕ ಪುರುಷೋತ್ತಮ ಮಾಸವಾಗಿದ್ದು , ದೇವತಾ ಕಾರ್ಯಗಳಿಗೆ ಅತ್ಯಂತ ಸೂಕ್ತ ಪರ್ವ ಕಾಲ. ಈ ಪ್ರಯುಕ್ತ ತಾ. 29/09/20 ಮಂಗಳವಾರ ಅಧಿಕ ಆಶ್ವೀಜ ಶುದ್ಧ ತ್ರಯೋದಶಿ , ಶ್ರೀ ದೇವಳದಲ್ಲಿ ಚಂಡಿಕಾ ಯಾಗ ಜರಗಲಿದೆ. ಬೆಳಿಗ್ಗೆ 8.00 ಗಂಟೆಗೆ *ಪ್ರಾರ್ಥನೆ* ಮಧ್ಯಾಹ್ನ 12.00 ಗಂಟೆಗೆ ಚಂಡಿಕಾ ಯಾಗ ಪೂರ್ಣಾಹುತಿ ಮತ್ತು ಅನ್ನಸಂತರ್ಪಣೆ, ಈ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಸರ್ವ ಸಮಸ್ತ ಭಕ್ತರು ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗ ಬೇಕೆಂದು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ,ಕಾಪು ಆಡಳಿತ ಮಂಡಳಿ ವಿನಂತಿಸಿದ್ದಾರೆ.
ಶ್ರಾವ್ಯ ಆರ್. ಅಂಚನ್ "ಸರಸ್ವತಿ ಪುರಸ್ಕಾರ" ರಾಜ್ಯ ಪ್ರಶಸ್ತಿಗೆ ಆಯ್ಕೆ

Posted On: 24-09-2020 02:14PM
ಪಡುಬಿದ್ರಿಯ ರವಿರಾಜ್ ಕೋಟ್ಯಾನ್ ಮತ್ತು ಶ್ಯಾಮಲಾ ದಂಪತಿಯ ಪುತ್ರಿಯಾದ ಶ್ರಾವ್ಯ ಆರ್. ಅಂಚನ್ ಸಾಂಸ್ಕೃತಿಕ, ಕ್ರೀಡಾ, ಶೈಕ್ಷಣಿಕ ರಂಗದಲ್ಲಿ ಮುಂದಿದ್ದು, ಪಡುಬಿದ್ರಿ ಸಾಗರ್ ವಿದ್ಯಾ ಮಂದಿರ ಶಾಲೆಯ ವಿದ್ಯಾರ್ಥಿಯಾಗಿ ಕಬಡ್ಡಿ ಕ್ರೀಡೆಯಲ್ಲಿ 2 ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೂ ಆಯ್ಕೆಯಾದವರು. 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 613 (98.08%)ಅಂಕ ಪಡೆದಿರುವ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ದಾವಣಗೆರೆ-ಸಾಲಿಗ್ರಾಮ ಇವರು ನೀಡಲ್ಪಡುವ "ಸರಸ್ವತಿ ಪುರಸ್ಕಾರ" ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಈ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ವರದಿ : ದೀಪಕ್ ಬೀರ ಪಡುಬಿದ್ರಿ
ಪಡುಬಿದ್ರಿಯಲ್ಲಿ ನಾರಾಯಣಗುರುಗಳ 92ನೇ ಪುಣ್ಯತಿಥಿ ಅಂಗವಾಗಿ ಉಪನ್ಯಾಸ

Posted On: 23-09-2020 09:01AM
ನಾರಾಯಣಗುರುಗಳ ಸಂದೇಶವನ್ನು ಅರಿತು, ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ಅವರ ಸಂದೇಶಗಳು ಬದುಕಿಗೆ ಸಮರ್ಪಕವಾಗುವಂತಹ ಗಳು. ಅಂದಿನ ಅವರ ಚಿಂತನೆಯಿಂದ ಇಂದು ಬದಲಾವಣೆಯತ್ತ ನಾವು ಸಾಗುತ್ತಿದ್ದೇವೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಹೇಳಿದರು. ಬ್ರಹ್ಮಶ್ರೀ ನಾರಾಯಣಗುರುಗಳ 92 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಮತ್ತು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಸಮಾಜದಲ್ಲಿ ಸಮಾನತೆಯನ್ನು ಸಾರುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಸರಕಾರಿ ಕಾಲೇಜು ತೆಂಕನಿಡಿಯೂರಿನ ಉಪನ್ಯಾಸಕರಾದ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಮಾತನಾಡಿ ಜಾತಿ-ವರ್ಗಗಳ ಬೇಧವನ್ನು ಮರೆತು ಮಾನವೀಯತೆ, ಸಮಾನತೆಯ ಮನಸ್ಥಿತಿ ನಮ್ಮಲ್ಲಿ ಇದ್ದಾಗ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ. ಗುರುಗಳ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶ ಇಡೀ ಸಮಾಜವೇ ಒಪ್ಪಿಕೊಂಡಿದೆ. ಸಂಘಟನೆಗಳು ನೈತಿಕ ಬಲ ತುಂಬುವ ಮೂಲಕ ಸಮಾಜದ ತಪ್ಪುಗಳನ್ನು ಪ್ರಶ್ನಿಸುವ ಗುಣವು ನಮ್ಮಲ್ಲಿ ಬರಬೇಕಾಗಿದೆ. ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಸಂದೇಶ ಸಮಾನತೆ ತರುವಲ್ಲಿ ಸಹಕಾರಿಯಾಗಿದೆ ಎಂದರು.
ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ ನಾರಾಯಣಗುರುಗಳು ಸಾಮಾಜಿಕ ಕ್ರಾಂತಿ ಮಾಡಿ ಹಿಂದುಳಿದ ವರ್ಗಗಳಿಗೆ ಶಕ್ತಿಯಾದರು. ಸತ್ಯದ ಹೋರಾಟದ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿ ಬದಲಾವಣೆಯ ತಂದರು. ಅವರ ಅಂದಿನ ಸಂದೇಶ ಸಾರ್ವಕಾಲಿಕವಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ವಹಿಸಿದ್ದರು. ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರಾದ ಜಗದೀಶ್ ಸುವರ್ಣ, ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಬಿ. ಅಮೀನ್, ಘಟಕದ ಕಾರ್ಯದರ್ಶಿ ಶಾಶ್ವತ್ ಎಸ್. ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ಸ್ವಾಗತಿಸಿ, ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ಪ್ರಸ್ತಾವಿಸಿ, ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಜಯ ಎನ್. ಪೂಜಾರಿ ವಂದಿಸಿ, ಯಶೋಧ ಕಾರ್ಯಕ್ರಮ ನಿರ್ವಹಿಸಿದರು.
ಹೋಂ ಡಾಕ್ಟರ್ ಫೌಂಡೇಶನ್ ನಿಂದ ಬೆಳಕು ಯೋಜನೆಯಡಿ ಸಹಾಯಧನ ವಿತರಣೆ

Posted On: 21-09-2020 10:34PM
ಉಡುಪಿ :- ಹೋಂ ಡಾಕ್ಟರ್ ಫೌಂಡೇಶನ್ ಇದರ ಬೆಳಕು ಯೋಜನೆಯಡಿ ನಿಟ್ಟೂರಿನ ಅಂತಿಮ ಬಿ.ಎಸ್.ಸಿ ವಿದ್ಯಾರ್ಥಿ ಕಾರ್ತಿಕ್ ಗೆ ಕಾಲೇಜು ಶುಲ್ಕ ರೂ.10 ಸಾವಿರ ಹಾಗು ಆನ್ಲೈನ್ ಕ್ಲಾಸ್ ಗಾಗಿ ಒಂದು ಆಂಡ್ರಾಯ್ಡ್ ಮೊಬೈಲ್ ಕೊಡಲಾಯಿತು.
ಅದೇ ರೀತಿ ಇಂದಿರಾ ನಗರದ ಬಡ ಪ್ಯಾರಾಲಿಸಿಸ್ ರೋಗಿ ಗೆ ಅವರ ಪತ್ನಿ ಸುನಂದಾ ರವರಿಗೆ ರೂ.10 ಸಾವಿರ ಚೆಕ್ ವಿತರಿಸಲಾಯಿತು.
ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾದ ಸದಾಶಿವ್ ಶೆಟ್ಟಿ ಕುಕ್ಕಿಹಳ್ಳಿ ಇವರ ಯೋಗಕ್ಷೇಮ ವಿಚಾರಿಸಿ ಮುಂದಿನ ದಿನದಲ್ಲಿ ರೂ 10 ಸಾವಿರ ನೀಡಲಾಗುವುದು ಎಂದು ಭರವಸೆ ನೀಡಲಾಯಿತು.
ಗುಂಪಿನ ಸದಸ್ಯೆ ನಯನಾ ಅವರ ಕೋರಿಕೆ ಮೇಲೆ ರಕ್ತದ ಕ್ಯಾನ್ಸರ್ ನಿಂದ ಬಳಳುತ್ತಿರುವ ಕುಟುಂಬದ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಿ ಬಂದು ಮುಂದಿನ ದಿನಗಳಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸದಲ್ಲಿ ನೆರವಾಗುವ ನಿರ್ಣಯಕ್ಕೆ ಬರಲಾಯಿತು .
ಕಾಯ೯ಕ್ರಮದಲ್ಲಿ ಸದಸ್ಯರಾದ ಡಾ"ಶಶಿ ಕಿರಣ್ ಶೆಟ್ಟಿ, ಡಾ.ಸುಮಾ ಎಸ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ನಯನ
ಮತ್ತು ಕೃಷ್ಣ ಮಾಸ್ಟರ್ ಭಾಗವಹಿಸಿದ್ದರು.
ವರದಿ : ರಾಘವೇಂದ್ರ ಪ್ರಭು ಕರ್ವಾಲು
ಉಡುಪಿಯಲ್ಲಿರುವ ಅಣ್ಣಪ್ಪ ಪಂಜುರ್ಲಿ ದೈವದ ಪಾದದ ಗುರುತು

Posted On: 21-09-2020 10:55AM
ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳ ಇತಿಹಾಸ ಇರುವ ಕೊಡವೂರು ಕಂಗಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ. ಧರ್ಮಸ್ಥಳದ ನಂತರ ದೊಡ್ಡದಾದ ಅಣ್ಣಪ್ಪ ಪಂಜುರ್ಲಿ ಕ್ಷೇತ್ರವಿದ್ದರೆ. ಅದುವೇ ಕೊಡವೂರು ಕಂಗಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ.

ಈ ದೈವಸ್ಥಾನದ ಹಿಂದಿನ ಕಾಲದ ವೈಶಿಷ್ಟತೆ ಏನೆಂದರೆ ಯಾವುದೇ ಸಂದರ್ಭದಲ್ಲಿ ಊರಿನ ಭಕ್ತರ ನ್ಯಾಯತೀರ್ಮಾನ ಈ ದೈವಸ್ಥಾನದಲ್ಲಿ ಕೊನೆಗೊಂಡರೆ ನಂತರ ಜನರು ಉಡುಪಿಯ ಕೋರ್ಟ್ ಮುಖಾಂತರ ಹೋದರು ಅಲ್ಲಿ ದೈವಸ್ಥಾನದಲ್ಲಿ ನಡೆದ ನ್ಯಾಯ ತೀರ್ಮಾನವನ್ನು ಯಾವುದೇ ವಾದ ವಿಮರ್ಶೆ ವಿಚಾರಗಳನ್ನು ಮಾಡುತ್ತಿರಲಿಲ್ಲ ಅದು ಅಲ್ಲಿಗೆ ಕೊನೆಗೊಳ್ಳುತ್ತಿತ್ತು.

ಈ ದೈವಸ್ಥಾನದಲ್ಲಿ ವಿಶೇಷ ಸೇವೆ ಎಂದರೆ ಮುದ್ರೆ ಸೇವೆ.
ಊರಿನ ಹಾಗೂ ಪರವೂರಿನ ಭಕ್ತರು ಯಾವುದೇ ಕಷ್ಟ ಸಂದರ್ಭದಲ್ಲಿ ಮಂಗಳ ಕಾರ್ಯ ಆಗದವರು ಹಾಗೂ ಉದ್ಯೋಗ ಸಮಸ್ಯೆ, ಆರೋಗ್ಯದ ಸಮಸ್ಯೆ, ವ್ಯವಹಾರದ ಸಮಸ್ಯೆ, ಸಂತಾನ ಭಾಗ್ಯದ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆ ಹೊಂದಿರುವ ಭಕ್ತರು ಅಣ್ಣಪ್ಪ ಪಂಜುರ್ಲಿಗೆ ತಮ್ಮ ಸಮಸ್ಯೆ ಎಲ್ಲಾ ನಿವಾರಣೆಯಾದರೆ ಮುದ್ರೆ ಕೊಡುವುದಾಗಿ ಹರಕೆ ಹೇಳುತ್ತಾರೆ.
ಈ ಸೇವೆ ವಾರದಲ್ಲಿ ನಾಲ್ಕು ಬಾರಿ ನಡೆಯುತ್ತದೆ.
ವಾರ್ಷಿಕವಾಗಿ ನೇಮೋತ್ಸವ, ಮಹಾ ಅನ್ನಸಂತರ್ಪಣೆ, ದೈವಸ್ಥಾನದಿಂದ ಭಂಡಾರದ ಮೆರವಣಿಗೆ ಹೊರಟು ರಾತ್ರಿ ನೇಮೋತ್ಸವ ನಡೆಯುತ್ತದೆ.
ಹಾಗೂ ವರ್ಷದಲ್ಲಿ ಭಕ್ತರ ಮೂರರಿಂದ ನಾಲ್ಕು ಹರಕೆಯ ನೇಮೋತ್ಸವ ಕೂಡ ನಡೆಯುತ್ತದೆ. ಈ ದೈವಸ್ಥಾನದಲ್ಲಿ ಪಂಬದ ವರ್ಗದವರು ಅಣ್ಣಪ್ಪ ಪಂಜುರ್ಲಿ ದೈವದ ನೇಮ ಕಟ್ಟುತ್ತಾರೆ. ಹಾಗೂ ದರ್ಶನ ಪಾತ್ರಿಯಾಗಿ ಮೊಯ್ಲಿ, ಮಡಿವಾಳ ವರ್ಗದವರು ಸೇವೆ ಸಲ್ಲಿಸುತ್ತಾರೆ.
ಈ ದೈವಸ್ಥಾನದಲ್ಲಿ ನಡೆಯುವ ದೊಂದಿ ಕೋಲ ಅತಿ ಹೆಚ್ಚು ಜನಪ್ರಿಯವಾಗಿದೆ..
ನೇಮೋತ್ಸವದ ಸಂದರ್ಭದಲ್ಲಿ ಬಹಳ ಜನಸಂಖ್ಯೆ ಸೇರುವ ಮೂಲಕ ಬಹಳ ಹಿಂದಿನ ಕಾಲದ ಪದ್ಧತಿಯಂತೆ ವಿಶಿಷ್ಟರೀತಿಯಲ್ಲಿ ಮೂಡಿ ಬರುತ್ತದೆ.
ಈ ದೈವಸ್ಥಾನದಲ್ಲಿ ದೈವದ ದರ್ಶನದ ಸಮಯದಲ್ಲಿ ದೈವ ನುಡಿಯುವ ಲೇಪಿಗೆ ತುಂಬಾ ಗೌರವಪೂರ್ಣವಾದ ಪ್ರಾಮುಖ್ಯತೆ ಇದೆ.
ಹತ್ತು ಹದಿಮೂರಕ್ಕೂ ಹೆಚ್ಚು ಗುತ್ತು ಮನೆತನ ಗ್ರಾಮದ ಮನೆತನದವರಿಗೆ ಲೆಪ್ಪು ಇದೆ..
ಈ ದೈವಸ್ಥಾನದಲ್ಲಿ ಇನ್ನೊಂದು ವಿಶೇಷವೇನೆಂದರೆ ಅಣ್ಣಪ್ಪ ಪಂಜುರ್ಲಿ ದೈವದ ಪಾದದ ಗುರುತು ಬಂಡೆ ಕಲ್ಲಿನ ಮೇಲಿದೆ.
ಹಾಗೂ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಮುಂಭಾಗದಲ್ಲಿ ಮರದ ಕೆತ್ತನೆಯಲ್ಲಿ ಪಂಜುರ್ಲಿಯ ಮುಖದ ಪೂರ್ಣ ಪರಿಚಯ ಆಗುವಂತಹ ಸನ್ನಿವೇಶ ಆಕಸ್ಮಿಕವಾಗಿ ಮರದ ಕೆತ್ತನೆಯಲ್ಲಿ ಮೂಡಿಬಂದಿದೆ.
ನಿಜಕ್ಕೂ ಈ ಸ್ಥಳದ ಮಹಿಮೆ ಅದ್ಭುತ. ದೈವಸ್ಥಾನದಲ್ಲಿ ಹಲವಾರು ವರ್ಷಗಳ ಹಿಂದೆ ಉಪಯೋಗಿಸಿದ್ದ ದೈವದ ಪರಿಕರಗಳು ಹಿಂದಿನ ಕಾಲದ ದೈವದ ಮುಖ, ಆಯುಧಗಳು, ದೀಪಗಳು ಇಲ್ಲಿ ನೋಡಲು ಸಿಗುತ್ತದೆ. ಇಲ್ಲಿಯ ಆಚಾರ-ವಿಚಾರ ಸಂಸ್ಕೃತಿಗಳು ಹಿಂದಿನ ಕಾಲದಂತೆ ಕ್ರಮಪ್ರಕಾರ ಯಾವುದೇ ಬದಲಾವಣೆ ಮಾಡದೆ ಪೂಜೆ ಪುರಸ್ಕಾರ ನೇಮೋತ್ಸವಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ ನಡೆಸಿಕೊಂಡುಬರುತ್ತಿದ್ದಾರೆ.
ಇದು ನಿಜಕ್ಕೂ ಹೆಮ್ಮೆಯ ಸಂಗತಿ ಈ ದೈವಸ್ಥಾನದಲ್ಲಿ ಯುವಕ-ಯುವತಿಯರು ದೈವಸ್ಥಾನದ ಯಾವುದೇ ಒಂದು ಕಾರ್ಯಕ್ರಮದಲ್ಲಿ ಹಾಗೂ ನೇಮೋತ್ಸವ ದಲ್ಲಿ ದೈವಸ್ಥಾನಕ್ಕೆ ಸಂಬಂಧಪಟ್ಟ ಜೀರ್ಣೋದ್ದಾರ ಸಮಿತಿಯಲ್ಲಿ, ಕೆಲಸಕಾರ್ಯಗಳಲ್ಲಿ ರಾತ್ರಿ-ಹಗಲು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು.. ದೈವಸ್ಥಾನದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.
ದೈವಸ್ಥಾನದ ಮಹಿಮೆಗಳನ್ನು ಕಂಡು ಊರ ಪರವೂರಿನ ಭಕ್ತದಿಗಳು ಸ್ಥಳಕ್ಕೆ ಭೇಟಿಕೊಟ್ಟು ತಮ್ಮ ಸಮಸ್ಯೆಯನ್ನು ದೈವಕ್ಕೆ ಪ್ರಾರ್ಥನೆಯೊಂದಿಗೆ ಹೇಳಿಕೊಂಡು. ನಂತರ ದೈವದ ಅನುಗ್ರಹದಿಂದ ತಮ್ಮ ಸಮಸ್ಯೆ ನಿವಾರಣೆ ಮಾಡಿಕೊಂಡು. ದೈವದ ಕೃಪೆಗೆ ಪಾತ್ರರಾಗಿದ್ದಾರೆ.
ಬರಹ ✍ ವಿನೋದ್ ಶೆಟ್ಟಿ
ಕಾಪುವಿನ ನೆರೆಪೀಡಿತ ಪ್ರದೇಶಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ

Posted On: 20-09-2020 11:42PM
ಉಡುಪಿ :- ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಾದ ಬೆಳ್ಳoಪಳ್ಳಿ, ಪೆಡೂ೯ರು, ಹಿರಿಯಡಕ,ಬಜೆ ಮುಂತಾದ ಪ್ರದೇಶಗಳಿಗೆ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂಧಭ೯ದಲ್ಲಿ ಮಾತನಾಡಿದ ಅವರು ನೆರೆ ಪೀಡಿತರಿಗೆ ಮನೆ ಕಳೆದುಕೊಂಡವರಿಗೆ ಈಗಾಗಲೇ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಚಚೆ೯ ನಡೆಸಿದ್ದು ಅತೀ ಶೀಘ್ರದಲ್ಲಿ ಪರಿಹಾರ ಧನ ನೀಡಲಾಗುವುದು ಎಂದರು.ಉಡುಪಿ ತಾ.ಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಮೊಗವೀರ ಮಹಾಜನ ಸಭಾ ಅಧ್ಯಕ್ಷ ಜಯ ಕೋಟ್ಯಾನ್, ಯುವ ನಾಯಕ ಸುಬೋದ್, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.
ವರದಿ : ರಾಘವೇಂದ್ರ ಪ್ರಭು ಕರ್ವಾಲು