Updated News From Kaup

ಕಾಪು : ರಕ್ತದಾನ ಶಿಬಿರ ಹಾಗೂ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ

Thumbnail
Posted On: 28 Mar 2021, 02:46 PM

ಜೆಸಿಐ ಕಾಪು, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘ (ರಿ.), ರಕ್ತನಿಧಿ ವಿಭಾಗ ಉಡುಪಿ ಜಿಲ್ಲಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಯುವವಾಹಿನಿ (ರಿ.) ಕಾಪು ಘಟಕ, ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು, ಹಿಯಾ ಮೆಡಿಕಲ್ಸ್ ಕಾಪು ಇವರ ಸಹಯೋಗದೊಂದಿಗೆ ವೀರಭದ್ರ ಸಭಾಭವನ ಕಾಪು ಇಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಉದ್ಘಾಟಿಸಿದರು. ಸನ್ಮಾನ : 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಪ್ರವೀಣ್ ಬಂಗೇರರಿಗೆ ಸಾಧಕ ರತ್ನ ಗೌರವ ನೀಡಿ ಪುರಸ್ಕರಿಸಲಾಯಿತು. ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು ಗೌರವಾಧ್ಯಕ್ಷರಾದ ಶ್ರೀಮತಿ ಗೀತಾಂಜಲಿ ಸುವರ್ಣ, ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ| ವೀಣಾ ಕುಮಾರಿ, ಕಾಪು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಾಯ ಕಾಮತ್, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷರಾದ ವಿನಯ್ ಬಲ್ಲಾಳ್, ಜೆಸಿಐ ರಕ್ತದಾನ ವಿಭಾಗ ವಲಯ XV, ವಲಯ ಸಂಯೋಜಕರಾದ ಜೆಸಿ ಹರೀಶ್ ಕುಲಾಲ್, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಶೇಖ್ ನಜೀರ್, ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು ಅಧ್ಯಕ್ಷರಾದ ಪ್ರವೀಣ್ ಬಂಗೇರ, ಕಾಪುವಿನ ಹಿಯಾ ಮೆಡಿಕಲ್ಸ್ ಮಾಲಕರಾದ ಜೇಸಿ ಯೋಗೀಶ್ ರೈ, ಯುವವಾಹಿನಿ (ರಿ.) ಕಾಪು ಘಟಕದ ಅಧ್ಯಕ್ಷರಾದ ಸೌಮ್ಯ ರಾಕೇಶ್, ಕಾಪು ಠಾಣೆಯ ಎಎಸ್ಐ ರಾಜೇಂದ್ರ ಮನಿಯಾಣಿ, ಜೆಸಿಐ ಮತ್ತು ಇತರ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಪು ಜೆಸಿಐ ಅಧ್ಯಕ್ಷರಾದ ಅರುಣಾ ಐತಾಳ್ ಸ್ವಾಗತಿಸಿ, ನೀಲಾನಂದ ನಾಯಕ್ ನಿರೂಪಿಸಿದರು.

ಇನ್ನಂಜೆ : ವಾಲಿಬಾಲ್ ಕ್ರೀಡಾಂಗಣದಲ್ಲಿ ಯುವಕನೋರ್ವ ಹೃದಯಾಘಾತದಿಂದ ಸಾವು

Thumbnail
Posted On: 28 Mar 2021, 11:41 AM

ಕಾಪು ಸಮೀಪದ ಇನ್ನಂಜೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಆಡಿದ ಬಳಿಕ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಕಟಪಾಡಿ ಬಳಿಯ ಕುರ್ಕಾಲಿನ ಯುವಕ ದೇವು ಅಂಚನ್ (35) ಎಂದು ತಿಳಿದು ಬಂದಿದೆ. ರಾಜ್ಯಮಟ್ಟದ ವಾಲಿಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದ ದೇವು ಅಂಚನ್ ಉತ್ತಮ ಆಟಗಾರರಾಗಿದ್ದರು.

ಸ್ವಾಮಿ ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ, ಉಡುಪಿ : ಕೊರಗಜ್ಜನ ನೇಮೋತ್ಸವ

Thumbnail
Posted On: 27 Mar 2021, 05:37 PM

ಉಡುಪಿ : ಉಡುಪಿಯ ಕುಕ್ಕೆಹಳ್ಳಿ ಸ್ವಾಮಿ ಕೊರಗಜ್ಜ ದೇವಸ್ಥಾನದಲ್ಲಿ ಸ್ವಾಮಿ ಕೊರಗಜ್ಜನ ನೇಮೋತ್ಸವವು ಮಾರ್ಚ್ 27, ಶನಿವಾರದಂದು ರಾತ್ರಿ 9ಕ್ಕೆ ಸರಿಯಾಗಿ ನಡೆಯಲಿದೆ. ಸಂಜೆ 6 ರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಸ್ವರ ನಿನಾದ ಬಿರುದಾಂಕಿತ ಪಾಂಡುರಂಗ ಎಸ್. ಪಡ್ಡಾಂ ಮತ್ತು ಕಲರ್ಸ್ ಕನ್ನಡದ ಮಜಾ ಟಾಕಿಸಿನ ವಿಭಿನ್ನ ಶೈಲಿಯ ಖ್ಯಾತ ಗಾಯಕ ಚಂದ್ರಕಾಂತ ಭಟ್, ಪಡುಬಿದ್ರಿ ಭಾಗವಹಿಸಲಿದ್ದಾರೆ. ಸಂಜೆ 6ರಿಂದ 9ರವರೆಗೆ ಅನ್ನಸಂತರ್ಪಣೆಯೂ ನಡೆಯಲಿದೆ. ಮಾರ್ಚ್ 30, ಮಂಗಳವಾರದಂದು ಸಂಜೆ 7 ಕ್ಕೆ ಹರಕೆಯ ಅಗೇಲು ಸೇವೆಯು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟೋಲ್ ವಿನಾಯಿತಿ ಮನವಿಗೆ ಸ್ಪಂದಿಸುವ ಭರವಸೆ ನೀಡಿ ಸ್ಪಂದಿಸದ ಟೋಲ್ ಪ್ಲಾಜಾದ ಅಧಿಕಾರಿಗಳು

Thumbnail
Posted On: 26 Mar 2021, 10:46 PM

ಹೆಜಮಾಡಿ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯ ನಿರ್ಣಯದಂತೆ ಹೆಜಮಾಡಿ ಕೋಡಿ ಭಾಗಕ್ಕೆ ಸಂಚರಿಸುವ ಸರ್ವಿಸ್ ಬಸ್ಸುಗಳಿಗೆ ಮತ್ತು ಶಾಲಾ ಬಸ್ಸುಗಳಿಗೆ ಟೋಲ್ ಪಡೆಯುವುದನ್ನು ಖಂಡಿಸಿ ಹೆಜಮಾಡಿ ಗ್ರಾಮಪಂಚಾಯತ್ ನಿಂದ ಹೆಜಮಾಡಿಯ ನವಯುಗ ಟೋಲ್ ಪ್ಲಾಜಾದ ಪ್ರಬಂಧಕರಿಗೆ ಮಾಚ್೯ 25, ಗುರುವಾರ ಮನವಿ ಸಲ್ಲಿಸಲಾಗಿತ್ತು. ಮಾಚ್೯ 26, ಶುಕ್ರವಾರ ಬೆಳಿಗ್ಗೆ 9 ಗಂಟೆಯೊಳಗೆ ಸ್ಪಂದಿಸುವ ಭರವಸೆ ನೀಡಿದ ಟೋಲ್ ಪ್ಲಾಜಾದ ಪ್ರಬಂಧಕರು ಇದೀಗ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೋಲಿಸ್ ಠಾಣೆಗೆ ಸೂಕ್ತ ಕ್ರಮಕ್ಕಾಗಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಮನವಿ ನೀಡಲಾಯಿತು. ಹೆಜಮಾಡಿ ಗ್ರಾಮವು ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಗಡಿ ಭಾಗವಾಗಿದ್ದು, ಹೆಜಮಾಡಿ ಕೋಡಿಯ ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚಾಗಿ ಮಂಗಳೂರನ್ನು ಅವಲಂಬಿಸಿರುತ್ತಾರೆ. ಬಸ್ಸುಗಳಿಗೆ ಟೋಲ್ ಪಾವತಿಸಬೇಕಾದ ಕಾರಣ ಬಸ್ಸುಗಳು ಈ ಭಾಗಕ್ಕೆ ಬಾರದೆ ಜನರಿಗೆ ತೊಂದರೆ ಆಗಿದೆ. ಆದ್ದರಿಂದ ಹೆಜಮಾಡಿ ಕೋಡಿಗೆ ಬರುವ ಸರ್ವಿಸ್ ಬಸ್ಸು ಹಾಗೂ ಶಾಲಾ ಬಸ್ಸುಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಸದಸ್ಯರು, ಉಪಸ್ಥಿತರಿದ್ದರು.

ಟೀನ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡ ದಿಶಾಲಿ ಪೂಜಾರಿ

Thumbnail
Posted On: 26 Mar 2021, 09:12 PM

ಕಾಪು : ಮೂಡಬಿದ್ರಿಯಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಯೂನಿಕ್ ಫ್ಯಾಶನ್ - 2021 ಅಲ್ಲಿ ದಿಶಾಲಿ ಪೂಜಾರಿ ಇವರು ಟೀನ್ ಕರ್ನಾಟಕ ಪ್ರಶಸ್ತಿ ಪಡೆದಿರುತ್ತಾರೆ. ಉಚ್ಚಿಲ ಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಇವರು ನೃತ್ಯದಲ್ಲಿ ಆಸಕ್ತಿ ಹೊಂದಿದವರಾಗಿ ಹಲವು ಕಡೆ ನೃತ್ಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಪಡುಬಿದ್ರಿಯ ಸ್ಟೆಪ್ ರೈಡರ್ಸ್ ನೃತ್ಯ ಕಲಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ. ಕಿರುತೆರೆಯ ಪ್ರಸಿದ್ಧ ಧಾರಾವಾಹಿ ಯಶೋಧ ಇದರಲ್ಲಿಯೂ ನಟಿಸಿರುತ್ತಾರೆ.

ಶ್ರೀ ಗುರು ರಾಘವೇಂದ್ರ ಮಹಿಳಾ ಭಜನಾ ಮಂಡಳಿ 92 ಹೇರೂರು : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

Thumbnail
Posted On: 26 Mar 2021, 04:59 PM

ಕಾಪು : ಶ್ರೀ ಗುರು ರಾಘವೇಂದ್ರ ಮಹಿಳಾ ಭಜನಾ ಮಂಡಳಿ 92 ಹೇರೂರು ಇದರ ಮಹಾಸಭೆಯು ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸಭಾಂಗಣದಲ್ಲಿ ನಡೆಯಿತು. 2019 - 20ನೆಯ ವರ್ಷದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸುಕನ್ಯಾ ಜೋಗಿಯವರು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಅಧ್ಯಕ್ಷರಾದ ಶ್ರೀಮತಿ ವಸಂತಿ ಆಚಾರ್ಯರವರು ಸರ್ವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಸಮಾಜ ಸೇವಾ ಮಂಡಳಿಯ ಅಧ್ಯಕ್ಷರಾದ ಸುಜಿತ್ ಕುಮಾರ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ನಿಯೋಜಿತ ಅಧ್ಯಕ್ಷರಾದ ಶ್ರೀನಿವಾಸ ದೇವಾಡಿಗ, ಕಾರ್ಯದರ್ಶಿ ನಿತ್ಯಾನಂದ ಆಚಾರ್ಯ, ಶಂಕರ್ ದೇವಾಡಿಗ ಉಪಸ್ಥಿತರಿದ್ದರು. 2021- 22ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಶಶಿಕಲಾ ದಿನೇಶ್ ದೇವಾಡಿಗ, ಉಪಾಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಶ್ರೀಧರ ಕಾಮತ್, ಕಾರ್ಯದರ್ಶಿಯಾಗಿ ಪವಿತ್ರ ಪ್ರಕಾಶ್ ರಾವ್, ಕೋಶಾಧಿಕಾರಿಯಾಗಿ ಆಶಾ ವಿಶ್ವನಾಥರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶ್ರೀಮತಿ ಸುಕನ್ಯಾ ಜೋಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾಪು ಬೀಚ್ : ಮಾಸ್ಕ್ ಹಾಕದವರಿಗೆ ದಂಡ

Thumbnail
Posted On: 26 Mar 2021, 04:47 PM

ಕಾಪು ಬೀಚ್ ನ ಲೈಟ್ ಹೌಸ್ ಬಳಿ ಪ್ರವಾಸಿಗರು ಮಾಸ್ಕ್ ಹಾಕದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಅಧಿಕಾರಿಗಳು ದಂಡ ವಿಧಿಸಿದರು. ಮಾಸ್ಕ್ ಹಾಕದವರಿಗೆ ಕೊರೊನದ ಬಗ್ಗೆ ಜಾಗೃತಿಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.

ಜಲ್ಲಿಕಲ್ಲು ಹಾಗೂ ಶಿಲೆಗಳ ಸಾಗಾಟಕ್ಕೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಯಿಂದ ಅಧಿಕಾರಿಗಳಿಗೆ ಸೂಚನೆ

Thumbnail
Posted On: 25 Mar 2021, 04:03 PM

ಇಂದು ಉಡುಪಿ ಶಾಸಕರಾದ ರಘುಪತಿ ಭಟ್ ಹಾಗೂ ದಕ್ಷಿಣ ಕನ್ನಡ ಶಾಸಕರಾದ ವೇದವ್ಯಾಸ ಕಾಮತ್ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಲಾರಿ ಮಾಲಕರು, ಕ್ರಷರ್ ಮಾಲಕರು, ಕಟ್ಟಡ‌ ಸಾಮಾಗ್ರಿ ಲಾರಿ ಟೆಂಪೋ ಮಾಲಕರ ಸಂಘದ ಪದಾಧಿಕಾರಿಗಳ ನಿಯೋಗ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜಲ್ಲಿಕಲ್ಲು ಹಾಗೂ ಶಿಲೆಕಲ್ಲುಗಳ ಸಾಗಾಟಕ್ಕೆ ನಿರ್ಬಂಧ ಹೇರಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿರುವ ಕುರಿತು ಚರ್ಚೆ ನಡೆಯಿತು. ಜಲ್ಲಿಕಲ್ಲು ಸಿಗದೆ ಅನೇಕ ಕಾಮಗಾರಿಗಳು ಸ್ಥಗಿತವಾಗಿದೆ. ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಇದರಿಂದ ವಿಪರೀತ ಸಮಸ್ಯೆಯಾಗುತ್ತಿದೆ. ಹಾಗಾಗಿ ನಿರ್ಬಂಧ ತೆರವುಗೊಳಿಸುವಂತೆ ನಿಯೋಗವು ಗಣಿ ಹಾಗೂ ಭೂ ವಿಜ್ಞಾನ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಮಸ್ಯೆ ಆಲಿಸಿದ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿ ಸಮಸ್ಯೆಯ ಕುರಿತು ಗಮನ ಸೆಳೆದರು. ಸಮಸ್ಯೆಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜಲ್ಲಿಕಲ್ಲು ಹಾಗೂ ಶಿಲೆಕಲ್ಲು ಸಾಗಾಟಕ್ಕೆ ಅವಕಾಶ ನೀಡುವ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿರ್ವ ಸಂತ ಮೇರಿ ಕಾಲೇಜಿನ ಸತ್ಯಸುಬ್ರಹ್ಮಣ್ಯ ವಿ.ಎಸ್ ಗೆ ಗಣಕ ವಿಜ್ಞಾನ ವಿಭಾಗದಲ್ಲಿ ನಾಲ್ಕನೇ ರ‍್ಯಾಂಕ್

Thumbnail
Posted On: 25 Mar 2021, 03:57 PM

ಶಿರ್ವ: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆ, ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸತ್ಯಸುಬ್ರಹ್ಮಣ್ಯ ವಿ.ಎಸ್. ರವರು ಮಂಗಳೂರು ವಿಶ್ವವಿದ್ಯಾನಿಲಯ 2020 ರ ಸಪ್ಟೆಂಬರ್‍ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಗಣಕ ವಿಜ್ಞಾನ ವಿಭಾಗ ಬಿ.ಸಿ.ಎ. ದಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಕಾಸರಗೋಡಿನ ಶ್ರೀ ವೆಂಕಟೇಶ್ವರ ಭಟ್ ಮತ್ತು ಶ್ರೀಮತಿ ಗೌರಿ ಅವರ ಪುತ್ರರಾದ ಅವರು ಶೇಕಡಾ 95.72% ಅಂಕಗಳೊಂದಿಗೆ ನಾಲ್ಕನೇ ರ‍್ಯಾಂಕ್ ಗಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ರಾಘವೇಂದ್ರ ಶೆಟ್ಟಿ ಮಂಡೇಡಿ ನಿಧನ

Thumbnail
Posted On: 24 Mar 2021, 10:46 PM

ಕಾಪು : ಮಂಡೇಡಿ ದಿವಂಗತ ಮೋನಪ್ಪ ಶೆಟ್ಟಿಯವರ ಪುತ್ರ ರಾಘವೇಂದ್ರ ಶೆಟ್ಟಿ ಮಂಡೇಡಿ ಇವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸಂಜೆ 5 ಗಂಟೆಗೆ ನಿಧನರಾಗಿದ್ದಾರೆ.