Updated News From Kaup

ಕಾಪು ರಾಷ್ಟ್ರೀಯ ಹೆದ್ದಾರಿ ವಿಭಾಜಕದಲ್ಲಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ

Posted On: 11-09-2020 04:34PM

ರಾ.ಹೆ. 66ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿ ಡಿವೈಡರ್ ಮೇಲಿನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಯುವತಿಯೋರ್ವಳು ಮೃತಪಟ್ಟ ಘಟನೆ ಶುಕ್ರವಾರ ಕಾಪುವಿನಲ್ಲಿ ನಡೆದಿದೆ.

ಅಪಘಾತದಲ್ಲಿ ಆಶ್ರಿತಾ (24) ಎಂಬ ಯುವತಿ ಮೃತಪಟ್ಟಿದ್ದು, ನಿಹಾಲ್, ಅನೀಷ್, ನಿನಾದ್ ಮತ್ತು ಅಥರ್ವ ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಕಾಪು ಹಳೇ ಮೆಸ್ಕಾಂ ಕಛೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ವಿದ್ಯುತ್ ಕಂಬ ಉರುಳಿ ಬಿದ್ದಿದೆ.
ಮುಂಬಯಿಯಿಂದ ಆಗಮಿಸಿದ್ದ ಯುವಕರ ತಂಡ ಕಾರಿನಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಎಸ್ಸೈ ರಾಜಶೇಖರ ಬಿ. ಸಾಗನೂರು, ಕ್ರೈಂ ಎಸ್ಸೈ ಐ.ಆರ್. ಗಡ್ಡೇಕರ್ ಮೊದಲಾದವರು ಭೇಟಿ ನೀಡಿದ್ದಾರೆ.

ಕಾಪುವಿನ ಮಜೂರಿನಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಮೂರು ಕರುಗಳಿಗೆ ಜನ್ಮ ನೀಡಿದ ಹಸು

Posted On: 10-09-2020 02:06PM

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಅಂದರೆ ರೋಹಿಣಿ ನಕ್ಷತ್ರ ವೃಷಭ ರಾಶಿಯ ಪವಿತ್ರವಾದ ಅಷ್ಪಮಿಯ ದಿನದಂದು ಶ್ರೀ ಕೃಷ್ಣನ ಜನನವಾಗಿತ್ತು. ಕೃಷ್ಣನಿಗೆ ಗೋವುಗಳೆಂದರೆ ಅಚ್ಚು ಮೆಚ್ಚು.. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರಿನ ಸಾನದ ಮನೆಯಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ್ದು. ಮಜೂರು ಗ್ರಾಮಸ್ಥರು ಕರುಗಳನ್ನು ನೋಡಲು ಮುಗಿಬಿದ್ದಿದ್ದಾರೆ.

ಬೆಳ್ಮಣ್ಣು ರೋಟರಿಯಿಂದ ನಂದಳಿಕೆ ಚಂದ್ರಶೇಖರ್ ರಾವ್ ಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Posted On: 10-09-2020 01:12PM

ಬೆಳ್ಮಣ್ಣು: ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್ ಬೆಳ್ಮಣ್ಣು , ಶಿಕ್ಷಕರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಶಿಕ್ಷಕ ಪುರಸ್ಕೃತರಾಗಿರುವ ನಂದಳಿಕೆ ಪಡುಬೆಟ್ಟು ಶಾಲೆಯ ಮುಖ್ಯಶಿಕ್ಷಕ ರಾಗಿರುವ ನಂದಳಿಕೆ ಚಂದ್ರಶೇಖರ್ ರಾವ್ ಇವರನ್ನು ರೋಟರಿ ಸಂಸ್ಥೆ ಈ ವರ್ಷದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿರುವ ರೋ. ಸುಭಾಷ್ ಕುಮಾರ್ ನಂದಳಿಕೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ಜಿಲ್ಲಾ ಉಪ ಗವರ್ನರ್ ಆಗಿರುವ ರೋ ಸೂರ್ಯಕಾಂತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ರೋಟೇರಿಯನ್ ಸತ್ಯಪ್ರಸಾದ್ ಶೆಟ್ಟಿ, ರೋ ರಾಜೇಶ್ ಸಾಲಿಯನ್ ಉಪಸ್ಥರಿದ್ದರು, ಕಾರ್ಯದರ್ಶಿ ರೋ ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು

ಜನರು ಸ್ವಯಂ ಪ್ರೇರಿತವಾಗಿ ಕರೋನಾ ಪರೀಕ್ಷೆ ಮಾಡಲು ಮುಂದೆ ಬರಬೇಕಾಗಿದೆ

Posted On: 09-09-2020 06:12PM

ಕೋವಿಡ್ ಸೋoಕು ಜನರ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಆದರೆ ಇತ್ತಿಚಿಗೆ ಈ ಸೋಂಕು ಸಮುದಾಯಕ್ಕೆ ಹಬ್ಬಿರುವ ಕಾರಣ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ, ಆದರೆ ಈ ಸೋಂಕಿನ ಬಗ್ಗೆ ಜನರು ನಿಲ೯ಕ್ಷ ವಹಿಸುದನ್ನು ನಾವು ಕಾಣಬಹುದು.ಮುಖ್ಯವಾಗಿ ಸಾವ೯ಜನಿಕ ಸಮೂಹದಲ್ಲಿ ಮಾಸ್ಕ್ ಇಲ್ಲದೆ ಓಡಾಟ, ಕಾಯ೯ಕ್ರಮ ಅಯೋಜನೆ ಜೊತೆಗೆ ಯಾವುದೇ ರೀತಿಯ ಕರೋನಾ ನಿಯಮಗಳನ್ನು ಪಾಲನೆ ಮಾಡದಿರುವುದು. ಕರೋನಾದ ಲಕ್ಷಣ ಇದ್ದರೂ ಅದನ್ನು ಮರೆ ಮಾಚಿ ಸಾವ೯ಜನಿಕವಾಗಿ ಓಡಾಟ ಇದನ್ನು ನಾವು ಕಾಣುತ್ತಿದ್ದೇವೆ ಇದು ಸರಿಯಲ್ಲ ಕರೋನಾದ ಕುರಿತು ನಾವು ನಿಲ೯ಕ್ಷ ವಹಿಸಿದರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ.

ಜಿಲ್ಲಾಧಿಕಾರಿಯವರು ಈಗಾಗಲೇ ತಿಳಿಸಿದಂತೆ ಕರೋನಾ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಲು ಮುಂದೆ ಬರದೆ ಆರೋಗ್ಯಕ್ಕೆ ಹೆಚ್ಚಿನ ತೊಂದರೆಯಾದಾಗ ಆಸ್ಪತ್ರೆಗೆ ಐಸಿಯು ಗೆ ದಾಖಲಾಗುವುದು ಹೆಚ್ಚಾಗಿರುತ್ತಿದೆ. ಇದರಿಂದ ಈಗಾಗಲೇ ಐಸಿಯು ಬೆಡ್ ಗಳ ಕೊರತೆ ಕಂಡು ಬರಲು ಸಾಧ್ಯ .ಹೀಗಾಗಿ ಕರೋನಾ ದ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಬೇಕಾಗಿದೆ.

ಜನರು ಸ್ವಯಂ ಪ್ರೇರಿತರಾಗಿ ಪರೀಕ್ಷೆ ಗೆಗೆ ಒಳಗಾಗಬೇಕಾಗಿದೆ.
ಸಕಾ೯ರ ಕರೋನಾದ ಬಗ್ಗೆ ಪರೀಕ್ಷೆ ಮಾಡಲು ಉಚಿತವಾಗಿ ಪರೀಕ್ಷೆ ಕಿಟ್ ಒದಗಿಸುತ್ತಿದೆ. ಆದರೆ ಜನರು ಸ್ವಯಂ ಪ್ರೇರಿತವಾಗಿ ಈ ಕರೋನಾ ಪರೀಕ್ಷೆ ಮಾಡಲು ಹಿಂಜರಿಯುತ್ತಿದ್ದಾರೆ ಇದು ಸರಿಯಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ನಾವು ಪರೀಕ್ಷೆ ಮಾಡಿದರೆ ನಮಗೆ ಒಳ್ಳೆಯದು ಇದನ್ನು ಎಲ್ಲರೂ ಮನಗಾಣಬೇಕು. ಕರೋನಾವನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಪಣ ತೊಡಬೇಕು.
ಕರೋನಾದ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಬೇಕಾಗಿದೆ
ಜನರು ಕರೋನಾಕ್ಕಿಂತ ಹೆಚ್ಚು ಭಯಪಡುತ್ತಿರುವುದು ಮನೆ ಸೀಲ್ ಡೌನ್ ಗೆ. ಅದೇ ರೀತಿ ಇವರನ್ನು ನೋಡಿದಾಗ ಪಕ್ಕದ ಮನೆಯವರು ನೋಡುವ ರೀತಿ, ಮನೆಗೆ ನೋಟಿಸ್ ಅಂಟಿಸುವುದು ಇದರಿಂದ ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ಈ ಬಗ್ಗೆ ತಜ್ಞರ ತಂಡ ಸಕಾ೯ರಕ್ಕೆ ವರದಿ ನೀಡಿದೆ.ಸಕಾ೯ರ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಕರೋನಾ ದೂರವಾಗಲು ಪರೀಕ್ಷೆ ಅತ್ಯಂತ ಮುಖ್ಯ ಎಂದು ವೈದ್ಯರ ಮಾತಿನಂತೆ ಹೆಚ್ಚು ಪರೀಕ್ಷೆ ನಡೆದರೆ ಸೋಂಕಿತರ ಸಂಖ್ಯೆ ಹೆಚ್ಚಾದರೂ ಮುಂದಿನ ದಿನಗಳಲ್ಲಿ ಕರೋನಾ ಕಡಿಮೆಯಾಗಲು ಸಾಧ್ಯ.

ಜಿಲ್ಲಾಡಳಿತ ಹಾಗೂ ಕರೋನಾ ವಾರಿಯರ್ಸ್ ಗಳಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ
ಕಳೆದ 6 ತಿಂಗಳಿನಿಂದ ನಿರಂತರವಾಗಿ ಜಿಲ್ಲಾಡಳಿತ ಮತ್ತು ಸಮಸ್ತ ವೈದ್ಯರ ತಂಡ ಶ್ರಮಿಸುತ್ತಿದೆ ಇವರೊಂದಿಗೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ. ಆದಷ್ಟು ಬೇಗ ಕರೋನಾ ಮುಕ್ತ ದೇಶವಾಗಲಿ ಮತ್ತೊoಮ್ಮೆ ಭಾರತ ಎದ್ದು ನಿಲ್ಲಲಿ.
ರಾಘವೇಂದ್ರ ಪ್ರಭು, ಕವಾ೯ಲು, ಯುವ ಲೇಖಕ

ಭಗವಂತನ ಧರ್ಮಾವತಾರ ಅದು ಕೃಷ್ಣನೆಂಬ ಬೆರಗು

Posted On: 09-09-2020 06:01PM

ಭಗವಂತ . ಭಗವಂತನೇ ಧರ್ಮ. ಧರ್ಮ ಭಗವಂತನಾಗುವುದು . ಧರ್ಮದಲ್ಲಿ ಭಗವಂತ ಸಂಭವಿಸುವುದು.
ಭಗವಂತನಲ್ಲಿ ಅವಿನಾಭಾವವಾಗಿ ಧರ್ಮವಿರುವುದು . ಅದು ಪ್ರಕಟಗೊಳ್ಳುವುದು - ದರ್ಶನ ಸಾಧ್ಯವಾಗುವುದು . ಈ ನಿರೂಪಣೆಯ ಸಾಕಾರವಾಗಿ ಮೂಡಿ ಬರುತ್ತದೆ ಒಂದು 'ಬೆರಗು' ....ಅದೇ ಕೃಷ್ಣ . ಲಾಲಿತ್ಯ - ಲಾವಣ್ಯಗಳ ಆಕರ್ಷಕ‌ ರೂಪದಿಂದ ಜಗತ್ತನ್ನು‌ ಗೆಲಿದವನಾಗಿ , ಮನುಕುಲದ ಪ್ರಿಯಬಂಧುವಾಗಿ ,ಚಾಣಾಕ್ಷ ಸೂತ್ರಧಾರನಾಗಿ , ಮಲ್ಲಯುದ್ಧ ಪ್ರವೀಣನಾಗಿ , ರಾಜಕೀಯ ಮುತ್ಸದ್ಧಿಯಾಗಿ , ಗೀತಾಚಾರ್ಯನಾಗಿ ಭಾರತೀಯರ ಆರಾಧ್ಯನಾದ ಕೃಷ್ಣನ ಜನನ ಭೀತಿಯ ಪರಿಸರದಲ್ಲಿ , ಕಾಲದ ಅಗತ್ಯವಾಗಿ , ಸಜ್ಜನರ ನಿರೀಕ್ಷೆಯಾಗಿ ನೆರವೇರುತ್ತದೆ . ಋಷಿಮುನಿಗಳ ಪ್ರಾರ್ಥನೆ , ಶುಭ ಪ್ರತೀಕ್ಷೆ ಹುಸಿಯಾಗದೇ 'ಧರ್ಮ'ವಾಗಿ ಆವಿರ್ಭವಿಸುತ್ತಾನೆ ಕೃಷ್ಣ.
ಮತ್ಸ್ಯ , ಕೂರ್ಮ , ವರಾಹ , ನರಸಿಂಹ ಅವತಾರಗಳು ಕ್ಷಣದಲ್ಲಿ ನಡೆದು ಧರ್ಮವನ್ನು ಉದ್ಧರಿಸಿ ಮೂಲದಲ್ಲಿ‌ ಸೇರಿಹೋಗುತ್ತದೆ .ವಾಮನಾವತಾರ ಏಕೋದ್ದೇಶದಿಂದ ನಡೆದು‌ ಪಾತಾಳ ಸೇರಿಹೋಗುತ್ತದೆ .ಭಾರ್ಗವರಾಮನಾಗಿ‌ ಆಯುಧ ಗ್ರಹಣ ನಿಷಿದ್ಧವಾಗಿದ್ದರೂ ಸಂದರ್ಭದ ಅನಿವಾರ್ಯವಾಗಿ ಕ್ಷತ್ರಿಯ ಸಂಹಾರವಾಗುತ್ತದೆ .ಇಲ್ಲಿ ಧರ್ಮ ಸ್ಥಾಪನೆಯೇ ಪರಮಲಕ್ಷ್ಯವಾಗಿ ನಿರ್ವಹಿಸಲ್ಪಡುತ್ತದೆ . ಬಹುಶಃ ಆಕಾಲಕ್ಕೆ ಅದೇ ಮಾನ್ಯತೆಯ‌ ಮೌಲ್ಯವಾಗಿದ್ದಿರಬೇಕು.
ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮಚಂದ್ರ ಮೆರೆದ ಆದರ್ಶ ,ಪಾಲಿಸಿದ ಮಾನವ ಧರ್ಮ‌,ಬದುಕಿನ ವಿಧಾನಗಳೆಲ್ಲ ಮಾನವ ಜೀವನ ಶೈಲಿಯ ಅಪೂರ್ವ ಸಾಧ್ಯತೆಗಳನ್ನೆಲ್ಲ ಸಾಧಿಸಿದುದು ,ಹೀಗೂ ಬದುಕಬಹುದೇ ? ಎಂದು ಉದ್ಗರಿಸುವುದು ಬಿಟ್ಟರೆ ಆ ವ್ಯಕ್ತಿತ್ವ ಕಷ್ಟಸಾಧ್ಯವೆಂದು ನೆಲ ನೋಟಕರಾಗಬೇಕಾಗುತ್ತದೆ .
ಕೃಷ್ಣಾವತಾರ ಪರಿಪೂರ್ಣವಾಗುತ್ತದೆ

ಆದರೆ ಕೃಷ್ಣಾವತಾರದ ಸಂದರ್ಭ ಮಾತ್ರ ವಿಶಿಷ್ಟ , ವಿಭಿನ್ನ . ಲೋಕೋತ್ತರ ಹಿತ ಸಾಧನೆ ,ಯಾರದ್ದು ಯಾರಿಗೆ ಸಲ್ಲಬೇಕು ಎಂಬ ಲೋಕಧರ್ಮೀ ನ್ಯಾಯದ ಅನುಷ್ಠಾನ ,ದುರ್ಬಲರಿಗೆ ,ಸಜ್ಜನರಿಗೆ ಬಲವಾಗುವ ,ಅಶಕ್ತರಿಗೆ ಶಕ್ತಿಯಾಗುವ , ಸರ್ವರಿಗೂ ಸಾಮಾಜಿಕ‌‌ ನ್ಯಾಯ ಒದಗಿಸುವ ಸದುದ್ದೇಶದೊಂದಿಗೆ ಕಾರ್ಯಪ್ರವೃತ್ತನಾಗುವ ಸಂಕಲ್ಪ ಸ್ವೀಕರಿಸಿದವ 'ವಾಸುದೇವ - ಕೃಷ್ಣ' . ಸಂದರ್ಭದ ಅನಿವಾರ್ಯತೆಯನ್ನು ಬಳಸಿಕೊಂಡು ಕುಬ್ಜೆಯ ವಕ್ರತೆಯನ್ನು ತಿದ್ದಿ ಸೃಷ್ಟಿಯನ್ನೆ ಸರಿಪಡಿಸಬಲ್ಲೆ ಎಂಬ ಸಂದೇಶವನ್ನು ಕೊಡುತ್ತಾನೆ .
‌ ಯಾರು ಹೇಳಿದರು‌ ಕೃಷ್ಣನಿಗೆ ನೀನು ಮನುಕುಲದ ಉದ್ಧಾರಕನಾಗು ,ಯುಗ ಪ್ರವರ್ತಕನಾಗು ,ಧರ್ಮಸಂಸ್ಥಾಪಕನಾಗು ಎಂದು . ಆದರೆ ಕೃಷ್ಣ , ಆ ಕರ್ತವ್ಯ ತನ್ನದೆಂದು ,ತನ್ನ ಜವಾಬ್ದಾರಿ ಎಂದು ಪರಿಭಾವಿಸಿಕೊಂಡು ದ್ವಾಪರದ ಅಂತ್ಯದಲ್ಲಿ‌ ಮಹತ್ಕಾರ್ಯ ಸಾಧಸಿಯೇಬಿಟ್ಟ , ಅಗತ್ಯವಿದ್ದವರಿಗೆ 'ಹೀಗೆಯೇ' ಮಾಡು ಎಂದು ನಿರ್ದೇಶಿಸಿದ .ಧರ್ಮವನ್ನು ಸ್ಥಾಪಿಸಿ‌ ಧರ್ಮಸಂಸ್ಥಾಪನಾಚಾರ್ಯನಾದ .ಶ್ರುತಿ - ಸ್ಮೃತಿಗಳು ಹೇಳುವಂತೆ ಅವನೇ ಭಗವಂತ .
ತಾನು ವಿಶ್ವವ್ಯಾಪಕನಿದ್ದೇನೆ . ಪರಿಪೂರ್ಣನಿದ್ದೇನೆ ಎಲ್ಲವೂ ನಾನೇ ,ಎಲ್ಲ ಶ್ರೇಷ್ಠ ವಾದುವುಗಳಲ್ಲಿ‌ ನಾನಿದ್ದೇನೆ ಅಥವಾ ಅದು‌ ನಾನೇ‌ ಆಗಿರುತ್ತೇನೆ . ಯಾವುದು ಯಾರಿಗೆ ಯಾವ ಕಾಲದಲ್ಲಿ ಧರ್ಮವೋ ಅದನ್ನು ಮಾಡು ,ಅದೇ ನಿನಗೆ ಧರ್ಮ ಮುಂತಾದ ವ್ಯಾಖ್ಯಾನವನ್ನು ಬೋಧಿಸುತ್ತಾ ಮಾನವ ಬದುಕಿನ ಸುಂದರ ಅನುಕರಣೀಯ ಸಿದ್ಧಾಂತವು ವಾಚ್ಯವಾಗುವಂತೆ "ವಿರಾಡ್ - ದರ್ಶನ"ದ ಮೂಲಕ ಪ್ರಕಟಗೊಳ್ಳುತ್ತಾನೆ . ವಿಜಯವನ್ನು ನೆಲೆಗೊಳಿಸುತ್ತಾನೆ . ಈ ನಿರೂಪಣೆ ಅಥವಾ ಉಪದೇಶ "ಭಗವದ್ಗೀತೆ" ಯಾಗಿ ಬಹುಮಾನ್ಯವಾಗುತ್ತದೆ .ಇದು ಮನುಕುಲಕ್ಕೆ ನೀಡಿದ ಅದ್ಭುತ ಕೊಡುಗೆ ,ಈ‌ ಉಪದೇಶದಿಂದ ವಾಸುದೇವ ಭಗವಾನ್ ವಾಸುದೇವನಾಗುತ್ತಾನೆ , ಗೀತಾಚಾರ್ಯನೇ ಆಗುತ್ತಾನೆ .ಮನುಷ್ಯ ಭಾವಕ್ಕಿಂತ ದೂರ , ಎತ್ತರಕ್ಕೆ ಏರುತ್ತಾನೆ ,ತತ್ ಕ್ಷಣ ನಮ್ಮ ಹತ್ತಿರಕ್ಕೆ ಬಂದು ಆತ್ಮೀಯನಾಗುತ್ತಾನೆ.
ಗೋಪಿಗೀತ ,ಉದ್ಧವಗೀತೆಗಳು ಭಗವದ್ಗೀತೆಯಷ್ಟು ಲೋಕಧರ್ಮಿಯಲ್ಲ .
ಅವು ಹೆಸರೇ ಸೂಚಿಸುವಂತೆ ಅವರವರಿಗೆ ಸೀಮಿತವಾಗಿವೆ .

ಯುವಸಮುದಾಯದ ಆಕರ್ಷಣೆ
ಜರಾಸಂಧ ಅಥವಾ ಮಾಗಧ ತಾನು ಭರತವರ್ಷದ ಚಕ್ರವರ್ತಿಯಾಗಬೇಕೆಂಬ ಸಂಚು ರೂಪಿಸಿದ್ದ .ರಾಜಕುಮಾರರನ್ನು ಸೆರೆಯಲ್ಲಿರಿಸಿಕೊಂಡಿದ್ದ . ಮಾಗಧನನ್ನು ಭೀಮನಿಂದ ಕೊಲ್ಲಿಸಿ ರಾಜಕುಮಾರರನ್ನು ಬಂಧಮುಕ್ತಗೊಳಿಸಿದ , ಯುವ ಸಂದೋಹ ಕೃಷ್ಣನಿಗೆ ಆತ್ಮೀಯವಾಗುತ್ತದೆ .ನರಕಾಸುರನ ಸೆರೆಯಲ್ಲಿದ್ದ ಸಾವಿರಾರು ಸ್ತ್ರೀಯರ ಸೆರೆಬಿಡಿಸುತ್ತಾನೆ ,ಮಾತ್ರವಲ್ಲ ಅವರ ಬದುಕಿಗೆ ಭದ್ರತೆಯನ್ನು ಒದಗಿಸುತ್ತಾನೆ .ಇದು ಕೃಷ್ಣ ಪ್ರದರ್ಶಿಸಿದ ಜೀವಪ್ರೀತಿ ,ಮಾನವ ಪ್ರೇಮ . ಈ ಎಲ್ಲಾ ಸಾಧನೆಗೆ ಪ್ರಾರಂಭದ ವೇದಿಕೆಯಾದದ್ದು ಗೋಕುಲ , ಗೋಪಾಲಕರು ಮತ್ತು ಗೋವುಗಳು . ಹಸ್ತಿನಾವತಿಯ ಚಕ್ರವರ್ತಿ ಪೀಠ ಪ್ರಶ್ನಾರ್ಹವಾಗಬಾರದು , ಅದು ಚಂದ್ರವಂಶೀಯರಿಗೆ ಸಲ್ಲತಕ್ಕದು ಎಂಬ ಕಾಲಧರ್ಮವನ್ನು ಪ್ರತಿಪಾದಿಸಿದ . ಆದರೆ ಹಸ್ತಿನೆಯಲ್ಲಿ ದಾಯಾದ್ಯ ಕಲಹವೇರ್ಪಟ್ಟಾಗ ಧರ್ಮ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸಿ ಸರ್ವಪ್ರಯತ್ನೇನ ಧರ್ಮರಾಯಾದಿ ಪಾಂಡವರಿಗೆ ಹಸ್ತಿನಾವತಿಯ ಚಕ್ರವರ್ತಿ ಪೀಠ ದೊರೆಯುವಂತೆ ಮಾಡುತ್ತಾನೆ ಕೃಷ್ಣ . ಕೊನೆಗೂ ತಾನು ನಿರ್ಲಿಪ್ತನಾಗಿಯೇ ಅರಸೊತ್ತಿಗೆ ,ಚಕ್ರವರ್ತಿಪೀಠವನ್ನು ತಿರಸ್ಕರಿಸುತ್ತಾನೆ . ಬಹಳ ಹಿಂದೆ ನೂತನವಾಗಿ ಭರತವರ್ಷದ ಐವತ್ತಾರಕ್ಕೆ ಹೊರತಾಗಿ ಐವತ್ತೇಳನೇದ್ದಾಗಿ‌ ಕಟ್ಟಿದ ದ್ವಾರಾವತಿಗೆ ಅಣ್ಣ ಬಲರಾಮನಲ್ಲವೇ ಅರಸ .ಯಾದವರಿಗೆ ರಾಜತ್ವ ಇದೆ ಎಂಬುದನ್ನು ಸ್ಥಾಪಿಸಿದ ....ಇದು ಕೃಷ್ಣ .
ಲಾಲಿತ್ಯದಿಂದ ಅರಳುತ್ತದೆ
ಭಾರತೀಯ "ಧರ್ಮ - ತತ್ತ್ವಜ್ಞಾನ"ವು ಲಾಲಿತ್ಯದಿಂದ ಅರಳುವುದು ಬಹಳ ವಿರಳ . ಆದರೆ ಕೃಷ್ಣನ ಸಂದರ್ಭದಲ್ಲಿ ಮಾತ್ರ ಅರಳಿ ಘಮಘಮಿಸುತ್ತದೆ .ಇದು ಪ್ರೀತಿಯ ಕಣ್ಣು ಕುಕ್ಕುವ ಸೊಬಗಿನಿಂದ ಸಂಭ್ರಮಿಸುತ್ತದೆ . ಪ್ರೇಮ ಕತೆಗಳಿಗೆ ಹೊಸತೊಂದು ಕೋಮಲತೆ ಬರುತ್ತದೆ .ಕೃಷ್ಣನ ಬಾಲ್ಯ ಮರೆಯಲಾಗದ ಸಂಗತಿ ಇವತ್ತಿಗೂ ಪ್ರತಿಯೊಂದು ಭಾರತೀಯನ‌ ಮನೆಯಲ್ಲಿ ಈ ಬಾಲ್ಯ ಕುಣಿಯುತ್ತಲೇ ಇದೆ .ಆಡಿದ ರಾಸಕ್ರೀಡೆ ಕೃಷ್ಣ - ಗೋಪಿಕೆಯರ ವಿನೋದ ನೃತ್ಯ ಶ್ರೇಷ್ಠವಾಗಿಯೇ ನಿಲ್ಲುತ್ತದೆ , ಆಕ್ಷೇಪಾರ್ಹವಾಗುವುದೇ ಇಲ್ಲ , ರಂಜನೀಯ ಸಂದರ್ಭವಾಗುತ್ತದೆ .
ಸೀರೆಕದ್ದ - ಅಕ್ಷಯಾಂಬರ ಕೊಟ್ಟ
ಬಾಲ್ಯದಲ್ಲೊಮ್ಮೆ ತುಂಟಕೃಷ್ಣ ಗೋಪಿಕೆಯರ ಸೀರೆ ಕದ್ದು ಮರ ಏರಿ ಕುಳಿತು ಒಂದು ಅಪಕೀರ್ತಿಗೆ ಪಾತ್ರನಾಗುತ್ತಾನೆ . ವಾಸುದೇವನಾಗಿ ಬೆಳೆದಾಗ ದ್ರೌಪದಿಗೆ ಅಕ್ಷಯಾಂಬರವಿತ್ತು ಮಾನ - ಪ್ರಾಣ ಉಳಿಸಿ ಆಪತ್ಬಂಧುವಾಗಿ ಮೆರೆಯುತ್ತಾನೆ .ಸೀರೆಕದ್ದ ದೋಷದಿಂದ ಮುಕ್ತನಾಗುತ್ತಾನೆ ‌.ಬಹುಶಃ ಅಕ್ಷಯಾಂಬರದ ಕೊಡುಗೆಯಲ್ಲಿ‌ ಈ ಭಾವವಿರಬಹುದು .ಹೀಗೆ ಬಾಲ್ಯದ ಪ್ರತಿಯೊಂದು ಬಾಲ್ಯ ಸಹಜವಾದ ಪ್ರಮಾದಗಳಿಗೂ ಬದುಕಿನುದ್ದಕ್ಕೂ ತಕ್ಕುದಾಗಿ ವರ್ತಿಸಿ , ಉತ್ತರಿಸುತ್ತಾ ಮನುಕುಲದ ಪ್ರಿಯ ಬಂಧುವಾಗುತ್ತಾನೆ .
ಕೃಷ್ಣ ಜನ್ಮಾಷ್ಟಮಿಯ ವೇಳೆ ಹೀಗೊಂದು ಓದಿದ ,ಕೇಳಿದ ವಿವರಗಳನ್ನು ಹಂಚಿಕೊಂಡದ್ದು .

ಅಷ್ಟಮಿ - ಅಟ್ಟೆಮಿ ಪೇರರ್ಘ್ಯೆ
ಅಷ್ಟಮಿ ದಿನದಂದು ಉಪವಾಸವಿದ್ದು ರಾತ್ರಿ ಚಂದ್ರೋದಯವಾಗುವ ( ತಿಂಗೊಲು ಮೂಡ್ನಗ) ಮುಹೂರ್ತದಲ್ಲಿ ಸ್ನಾನಮಾಡಿ ಮನೆ ತುಳಸಿಕಟ್ಟೆಯ ಎದುರು ತೆಂಗಿನಕಾಯಿ ಒಡೆದಿಟ್ಟು ಹಾಲು ಎರೆಯುವ ,ಬಿಲ್ವಪತ್ರೆ ಅರ್ಪಿಸುವ 'ಪೇರರ್ಘ್ಯೆ' ಬಿಡುವ ಕ್ರಮವಿದೆ .ಅರ್ಘ್ಯೆ ಪ್ರದಾನ ಎಂದರೆ "ಅಡಿಗೆ ಬುಡ್ಪುನು".ಅಷ್ಟಮಿದ 'ಉಡಾರಿಗೆ' ಎಂಬುದು ಅಷ್ಟಮಿಯ ವಿಶೇಷ ತಿಂಡಿ .
ಅರ್ಘ್ಯ ಪ್ರದಾನ
ಕೃಷ್ಣಜನ್ಮಾಷ್ಟಮಿ/ ಕೃಷ್ಣ ಜಯಂತಿಯ ದಿನ‌ಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರೋದಯಕ್ಕೆ ಸರಿಯಾಗಿ ವಿವಿಧ ಭಕ್ಷ್ಯ ,ಉಂಡೆ , ಚಕ್ಕುಲಿ,ಕಡುಬು ಮುಂತಾದುವುಗಳನ್ನು ಮನೆ ದೇವರಿಗೆ ಸಮರ್ಪಿಸಿ ಪೂಜೆಮಾಡುವುದು . ಕೃಷ್ಣ ,ಬಲರಾಮ,ವಸುದೇವ ,ದೇವಕಿ‌, ನಂದಗೋಪ , ಯಶೋದಾ,ಸುಭದ್ರೆಯರನ್ನು ಸ್ಮರಿಸಿಕೊಂಡು ಬಿಲ್ವಪತ್ರೆ ಅರ್ಪಿಸಿ ಶಂಖದಲ್ಲಿ ನೀರು ತುಂಬಿ ದೇವರಿಗೆ ( ಶಾಲಗ್ರಾಮ ಒಂದಕ್ಕೆ) ಅರ್ಘ್ಯ ಸಮರ್ಪಿಸುವುದು . ಬಳಿಕ ತುಳಸಿಕಟ್ಟೆಯ ಮುಂಭಾಗ ಒಡೆದ ತೆಂಗಿನಕಾಯಿಯನ್ನು ( ತೆಂಗಿನ ಗಂಡು ಭಾಗದಲ್ಲಿ ಸುಲಿದ ಬಾಳೆಹಣ್ಣು ಇರಿಸಿ ಅರ್ಘ್ಯ ಅರ್ಪಿಸುವ ಕ್ರಮವೂ ಇದೆ) ಇರಿಸಿ ಬಿಲ್ವಪತ್ರೆ ಅರ್ಪಿಸಿ ಶಂಖದಲ್ಲಿ ಹಾಲು ತುಂಬಿಸಿ ರೋಹಿಣೀ ಸಹಿತ ಚಂದ್ರನಿಗೆ ಅರ್ಘ್ಯವನ್ನು ಸಮರ್ಪಿಸುವುದು . ಸೌರಮಾನ , ಚಂದ್ರಮಾನ ಪದ್ಧತಿಗಳಿಗನುಗುಣವಾಗಿ ಅರ್ಘ್ಯ ಪ್ರದಾನ ನೆರವೇರುತ್ತದೆ . ಈ ಆಚರಣೆಯಲ್ಲಿ ಪಾಠಾಂತರಗಳಿವೆ .
ವಿಟ್ಲ ಪಿಂಡಿ ; ಮಸುರ್ಡಿಕೆ - ಮೊಸರು ಕುಡಿಕೆ
ವಿಠಲನ ಪಿಂಡಿ 'ವಿಟ್ಲಪಿಂಡಿ' . ಪಿಂಡಿ ಎಂದರೆ 'ಗಂಟು'. ವಿಠಲನಲ್ಲಿ ಇದ್ದುದು ಅಥವಾ ವಿಠಲನಿಗಾಗಿ ತಂದದ್ದು - ಬಂದದ್ದು .ಉಂಡೆ ,ಚಕ್ಕುಲಿಗಳಂತಹ ತಿಂಡಿಗಳುಳ್ಳ ಗಂಟು .ಈ ಗಂಟನ್ನು ಇಟ್ಟುಕೊಂಡು ಅದನ್ನು ನನಗೆ ,ನನಗೆ ಎಂದು ಪಡೆಯಲು ಆಡುವ ಮಕ್ಕಳಾಟವೇ ವಿಟ್ಲಪಿಂಡಿ .
'ವಿಠಲ' ಎಂಬ ಹೆಸರಿನ ಕೃಷ್ಣನು ಗೋಪಾಲರೊಂದಿಗೆ - ಗೋಪಿಯರೊಂದಿಗೆ ಆಡಿದ ಆಟಗಳೇ "ಕೃಷ್ಣ ಲೀಲೆ" . ಅದನ್ನು ಉತ್ಸವೆಂದು ಸುಂದರ ಸ್ಮರಣೆಯಾಗಿ ಆಚರಿಸುವುದರಿಂದ ಅದುವೇ ಲೀಲೋತ್ಸವ ಕೃಷ್ಣ ಲೀಲೋತ್ಸವ . ಗೋಪಿಯರ ಕಣ್ಣುತಪ್ಪಿಸಿ ಗೋಪರ ಮನೆ ಹೊಕ್ಕು ಹಾಲು , ಮೊಸರುಗಳನ್ನು ಕದ್ದು ತಿಂದದ್ದು ಮತ್ತು ತಿನ್ನುವಾಗ ಕೈತಪ್ಪಿ ಕೆಳಗೆಬಿದ್ದು ಮಡಕೆಗಳು ಪುಡಿಯಾದಾಗ ಮೊಸರಿನ ಕುಡಿಕೆ ಪುಡಿಯಾಗುತ್ತದೆ . ಎತ್ತರದಲ್ಲಿ ತೂಗಿಸಿಡುವ ಹಾಲು - ಮೊಸರಿನ ಕುಡಿಕೆಗಳಿಗೆ ಕಲ್ಲಿನಿಂದ ಹೊಡೆದು ಅಥವಾ ಕೋಲಿನಿಂದ ರಂಧ್ರಮಾಡಿ ಅದರಿಂದ ಇಳಿಯುವ ಹಾಲಿಗೊ ಮೊಸರಿಗೊ ಬಾಯಿಕೊಟ್ಟು ಕುಡಿಯುವ ಕೃಷ್ಣ ಚೇಷ್ಟೆಗಳ 'ಮೊಸರುಕುಡಿಕೆ'ಯ ಅಣಕನ್ನು ಅಥವಾ ಮರುಪ್ರದರ್ಶನವೇ ನಾವಿಂದು ಕಾಣುವ 'ಕೃಷ್ಣಲೀಲೋತ್ಸವ' . ಬಹುಶಃ ಯಾವ ಮಹನೀಯರ ಬಾಲ್ಯದ ತುಂಟಾಟವೇ ಪ್ರಧಾನವಾಗುವ , ರೂಪಕವಾಗುವ ಪುರಾಣವಾಗುವುದನ್ನು ಕಾಣುವುದೇ ಇಲ್ಲ‌.
ಬರಹ : ಕೆ.ಎಲ್ .ಕುಂಡಂತಾಯ

ಶಿರ್ವ ಗ್ರಾ.ಪಂ SLRM ಘಟಕಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ಭೇಟಿ

Posted On: 09-09-2020 05:43PM

ಜಿಲ್ಲಾ ಲಯನ್ಸ್ ನ "ಸ್ವಚ್ಚನಾಡು - ನಮ್ಮ ನಾಡು" ಕಾರ್ಯಕ್ರಮದಡಿ ಲಯನ್ಸ್ ಕ್ಲಬ್ ಬಂಟಕಲ್ಲು - ಬಿ.ಸಿ ರೋಡು ಇವರ ಆಶ್ರಯದಲ್ಲಿ ಶಿರ್ವ ಗ್ರಾಮ ಪಂಚಾಯತ್ ನ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ, ಸ್ವಚ್ಚತಾ ವಾರಿಯರ್ಸ್ ರವರಿಗೆ ಗೌರವ ಸಲ್ಲಿಸುವ ವಿನೂತನ ಕಾರ್ಯಕ್ರಮವು ಲಯನ್ಸ್ ಜಿಲ್ಲಾ ಗವರ್ನರ್ ಲ.ಎನ್.ಎಮ್ ಹೆಗಡೆಯವರ ಉಪಸ್ಥಿತಿಯಲ್ಲಿ ಇಂದು ನಡೆಯಿತು.

ಲಯನ್ಸ್ ಜಿಲ್ಲಾ ಕಾರ್ಯಕ್ರಮ ನಮ್ಮ ನಾಡು ಸ್ವಚ್ಚ ನಾಡು ಕಾರ್ಯಕ್ರಮದಡಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದಲ್ಲಿ ಸ್ವಚ್ಚತ ಸಿಬ್ಬಂಧಿಯವರು ನಿರ್ವಹಿಸುವ ಕಾರ್ಯ ವಿಧಾನದ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಕಸ ವಿಂಗಡಣೆ, ತ್ಯಾಜ್ಯದಿಂದ ಗೊಬ್ಬರ ತಯಾರಿ, ಪ್ಲಾಸ್ಟಿಕ್ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ಪಡಕೊಳ್ಳಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ 11 ಮಂದಿ ಸ್ವಚ್ಚತಾ ವಾರಿಯರ್ಸ್ ರವರನ್ನು ಲಯನ್ಸ್ ಜಿಲ್ಲಾ ಗವರ್ನರ್ ರವರು ಶಾಲು ಹೊದಿಸಿ ಗೌರವಿಸಿ ಎಲ್ಲರಿಗೂ ಮೈಗವಸನ್ನು ವಿತರಿಸಿದರು.
ಬಂಟಕಲ್ಲು ಲಯನ್ಸ್ ಕ್ಲಬ್ ನ ಈ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿ ಈ ಘಟಕಕ್ಕೆ ಮುಂದಿನ ದಿನಗಳಲ್ಲಿ ಸಹಕರಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿ ಸ್ವಚ್ಚತಾಗಾರರ ಈ ಕಾರ್ಯವು ಸೈನಿಕರ ಸೇವೆಯಷ್ಟೇ ಪ್ರಾಮುಖ್ಯತೆ ಪಡೆದಿದೆ , ಇವರನ್ನು ಗೌರವಿಸುವ ಕೆಲಸ ನಿರಂತರವಾಗಿರಲಿ ಎಂದರು.
ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀ ಅನಂತಪದ್ಮನಾಭ ನಾಯಕ್ ರವರು ಘಟಕದ ಕಾರ್ಯನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಲಯನ್ಸ್ ಸಂಸ್ಥೆಯ ಸಹಕಾರವನ್ನು ಕೋರಿದರು. ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ರೀಮತಿ ವಾರಿಜಾ ಪೂಜಾರ್ತಿಯವರು ಶುಭಹಾರೈಸಿದರು.
ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ವಿಜಯ್ ಧೀರಜ್ ರವರು ಅಧ್ಯಕ್ಷತೆ ವಹಿಸಿದ್ದರು. ನಮ್ಮ ನಾಡು ಸ್ವಚ್ಟ ನಾಡು ಯೋಜನೆಯ ಲಯನ್ಸ್ ಪ್ರಾಂತೀಯ ಸಂಯೋಜಕ ಲ.ಕೆ ಆರ್ ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಂಟಕಲ್ಲು ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಲ.ದಿನೇಶ್, ಲಯನ್ಸ್ ಸದಸ್ಯರಾದ ಲ.ವೈಲೇಟ್ ಕಸ್ತಲಿನೊ, ಲ.ಅರುಣ್ ಬರ್ಬೋಜಾ, ಲ ಸದಾನಂದ ಪೂಜಾರಿ , ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಾಲೆಟ್ ದೀಪಿಕಾ ಡಿ'ಸೋಜಾ, ಘಟಕದ ಮೇಲ್ವಿಚರಕರಾದ ಕಿಶೋರ್, ರಕ್ಷಿತ್ ಉಪಸ್ಥಿತರಿದ್ದರು.
ಲಯನ್ಸ್ ಕಾರ್ಯದರ್ಶಿ ಲ.ಅರುಂಧತಿ ಜಿ ಪ್ರಭುರವರು ಧನ್ಯವಾದವಿತ್ತರು.

ಲಯನ್ಸ್ ಸದಸ್ಯರಾದ ಲ.ವೈಲೇಟ್ ಕಸ್ತಲಿನೊ, ಲ.ಅರುಣ್ ಬರ್ಬೋಜಾ, ಲ ಸದಾನಂದ ಪೂಜಾರಿ , ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಾಲೆಟ್ ದೀಪಿಕಾ ಡಿ'ಸೋಜಾ, ಘಟಕದ ಮೇಲ್ವಿಚರಕರಾದ ಕಿಶೋರ್, ರಕ್ಷಿತ್ ಉಪಸ್ಥಿತರಿದ್ದರು. ಲಯನ್ಸ್ ಕಾರ್ಯದರ್ಶಿ ಲ.ಅರುಂಧತಿ ಜಿ ಪ್ರಭುರವರು ಧನ್ಯವಾದವಿತ್ತರು.

34 ವರ್ಷಗಳ ಹಿಂದೆ ವಿದ್ಯೆ ಕಲಿಸಿದ ಗುರುಗಳನ್ನು ಸಮ್ಮಾನಿಸಿದ ಉಡುಪಿಯ ತಂಡ

Posted On: 08-09-2020 12:49PM

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮತ್ತು ಹತ್ತನೇ ತರಗತಿ (1986.87 ) ವಿದ್ಯಾರ್ಥಿ ಗಳು ಸರಕಾರಿ ಪ. ಪೂ. ಕಾಲೇಜ್ ಫಿಶರೀಸ್ ಮಲ್ಪೆ ಇವರ ವತಿಯಿಂದ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯೆ ಕಲಿಸಿದ ಗುರುಗಳಾದ ಲೀಲಾ ಟೀಚರ್ ಮತ್ತು ಭಾಸ್ಕರ್ ಶೆಟ್ಟಿಯವರನ್ನು ಗೌರವಿಸಲಾಯಿತು.

ಕಾರ್ಯಕ್ರಮ ದಲ್ಲಿ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ ಎಮ್ ಮಹೇಶ್ ಕುಮಾರ್, ಉದ್ಯಮಿ ಚಿತ್ರ ಕುಮಾರ್, ಸಿವಿಲ್ ಇಂಜಿನಿಯರ್ ಜಯರಾಮ್, ಉದ್ಯಮಿ ಲಕ್ಷ್ಮೀಶ್ ಬಂಗೇರ, ಉದ್ಯಮಿ ಸುಧಾಕರ್, ಜಿಲ್ಲಾ ಪಂಚಾಯತ್ ಉದ್ಯೋಗಿ ರೋಹಿಣಿ, ಉದ್ಯಮಿ ವಸಂತಿ ಉಪಸ್ಥಿತರಿದ್ದರು ಗುರು ಗಳ ಸ್ವಗೃಹ ಕ್ಕೆ ಹೋಗಿ ಗುರುವಂದನೆ ಮಾಡಿರುವುದು ನಮ್ಮೆಲ್ಲರ ಭಾಗ್ಯ ಎಂದು ಸದಸ್ಯರು ಸಂತೋಷ ವ್ಯಕ್ತಪಡಿಸಿದರು, ಅದೇ ರೀತಿ ಭಾಸ್ಕರ್ ಶೆಟ್ಟಿ ಹಾಗೂ ಲೀಲಾವತಿ ಟೀಚರ್ ದಂಪತಿಗಳು ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿದರು.

ಹರಿದಾಸ ಬಿ. ಸಿ. ರಾವ್ ದಂಪತಿಗಳಿಗೆ ಕಲ್ಯಾಣಪುರ ರೋಟರಿ ವತಿಯಿಂದ ಸಮ್ಮಾನ

Posted On: 07-09-2020 01:16PM

ಉಡುಪಿ ಕಲ್ಯಾಣಪುರ ರೋಟರಿ ಕ್ಲಬ್ ಮತ್ತು ಶ್ರೀ ವಿಘ್ನೇಶ್ವರ ಪ್ರಿಂಟರ್ಸ್, ಮಲ್ಪೆ ಇವರ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ನಡೆಸಲಾಯ್ತು. ಈ ಸಲುವಾಗಿ ಹೆಬ್ರಿ ಸಮೀಪದ ಶಿವಪುರದ ವಿಶ್ರಾಂತ ಶಿಕ್ಷಕ, ಹರಿದಾಸ ಬಿ. ಸಿ. ರಾವ್, ಶಿವಪುರ ದಂಪತಿಗಳನ್ನು ಅವರ ಶಿವಪುರದ ಪಾಂಡುಕಲ್ಲಿನ ಸ್ವಗೃಹ ‘ಗುರುಪದ’ ದಲ್ಲಿ ಯಥೋಚಿತ ಗೌರವಿಸಿ ಸಂಮಾನಿಸಲಾಯ್ತು. ರೋಟರಿ ಅಧ್ಯಕ್ಷ ಡೆಸ್ಮಂಡ್ ವಾಸ್ ಸ್ವಾಗತಿಸಿದರು, ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ, ರೋಟರಿ ಸದಸ್ಯ ಎಂ. ಮಹೇಶ್ ಕುಮಾರ್ ಮಲ್ಪೆ ಪ್ರಸ್ತಾವನೆಗೈದು, ಅಭಿನಂದನ ಪತ್ರ ವಾಚಿಸಿ, ಸನ್ಮಾನಿತರನ್ನು ಕುರಿತು ಮಾತನಾಡಿದರು. ಸಭೆಯಲ್ಲಿ ರೋಟರಿ ಕಾರ್ಯದರ್ಶಿ, ಲಿಯೋ ವಿಲಿಯಂ ಅಂದ್ರಾದೆ, ಶ್ರೀಮತಿ ಅಹಲ್ಯಾ ಸಿ. ರಾವ್ ಟಿಸಿಎಸ್ ಉದ್ಯೋಗಿ, ಬಿ. ಆದರ್ಶ ರಾವ್ ಉಪಸ್ಥಿತರಿದ್ದರು. ಸನ್ಮಾನಿತರು ಈ ಗೌರವ ಮುದ ನೀಡಿದೆ ಎಂದು ಹೇಳಿ ಕೃತಜ್ಞತೆ ಸೂಚಿಸಿದರು. ಚೆಲುವರಾಜ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು, ಶೇಖರ ಪೂಜಾರಿ ವಂದಿಸಿದರು.

ಬರಹ : ಬಿ.ಸಿ. ರಾವ್ ಶಿವಪುರ (ಹೆಬ್ರಿ) ಹವ್ಯಾಸಿ ಪತ್ರಕರ್ತರು

ಕುಲಾಲ ಸಮಾಜ ಕಳತ್ತೂರು ನೂತನ ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಪೈಯಾರು ಆಯ್ಕೆ

Posted On: 06-09-2020 06:12PM

ಕುಲಾಲ ಸಮಾಜ ಕಳತ್ತೂರು ಇದರ ನೂತನ ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಪೈಯಾರು ಹಾಗೂ ಕಾರ್ಯದರ್ಶಿಯಾಗಿ ಶಕ್ತಿ.ಆರ್. ಕುಲಾಲ್ ಮತ್ತು ಕೋಶಾಧಿಕಾರಿಯಾಗಿ ಹರೀಶ್ ಕೆ ಮೂಲ್ಯ ಇವರುಗಳು ಅಯ್ಕೆಯಾಗಿರುತ್ತಾರೆ. ತಮ್ಮ ಅವಧಿಯಲ್ಲಿ ಕುಲಾಲ ಸಂಘಟನೆಯು ಇನ್ನಷ್ಟು ಸುಘಟಿತವಾಗಲಿ, ಉತ್ತಮ ಸಮಾಜಮುಖಿ ಕಾರ್ಯಕ್ರಮದೊಂದಿಗೆ ಸಾಗಲಿ ತಮಗಿದೋ ಹಾರ್ದಿಕ ಅಭಿನಂದನೆಗಳು.

ಶಿರ್ವ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರಿಂದ ರಸ್ತೆ ಸ್ವಚ್ಛತಾ ಕಾರ್ಯ

Posted On: 06-09-2020 03:01PM

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಶಿರ್ವ ವಿಷ್ಣುಮೂರ್ತಿ ಘಟಕ ದ ನೇತೃತ್ವದಲ್ಲಿ ಸತತ 3 ಭಾನುವಾರ ಭೂತಬೆಟ್ಟುನಿಂದ ಶಿರ್ವ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಕೊಪ್ಪದಿಂದ ನಡಿಬೆಟ್ಟು ತನಕ ರಸ್ತೆ ಸ್ವಚ್ಛತಾ ಕಾರ್ಯ ನಡೆಯಿತು.ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು,ಶಿರ್ವ ವಲಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ,ಬಜರಂಗದಳ ವಲಯ ಸಂಯೋಜಕ ಪ್ರಕಾಶ್ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಅಭಿನಂದಿಸಿ ಶುಭಹಾರೈಸಿದರು.ಕಾಪು ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ ಕೊಪ್ಪ,ವಿಷ್ಣುಮೂರ್ತಿ ಘಟಕದ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಆನಂದ ಶೆಟ್ಟಿ,ಬಜರಂಗದಳ ಸಂಯೋಜಕ ರಾಕೇಶ್ ಶೆಟ್ಟಿ,ಸೇವಾ ಪ್ರಮುಖ್ ಅವಿನಾಶ್ ಶೆಟ್ಟಿ,ಗೋರಕ್ಷಾ ಪ್ರಮುಖ್ ಸುಕೇಶ್ ಶೆಟ್ಟಿ,ಮಾತೃಶಕ್ತಿ ಸಂಯೋಜಕಿ ಚಂದ್ರಾವತಿ,ದುರ್ಗಾವಾಹಿನಿ ಸಂಯೋಜಕಿ ಸುಮಲತಾ,ಘಟಕದ ಜವಾಬ್ದಾರಿಯುತರು ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.