Updated News From Kaup

ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲ್ಪೆ ರಾಘವೇಂದ್ರ

Posted On: 05-09-2020 03:13PM

ರೋಟರಿ ಕಲ್ಯಾಣಪುರ ಮತ್ತು ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರು ವಂದನೆ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲ್ಪೆ ರಾಘವೇಂದ್ರ ಹಾಗೂ ಅವರ ಪತ್ನಿ ಕೆ ರತ್ನ ಎಮ್ ಆರ್ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಅಧ್ಯಕ್ಷ ಡೆಸ್ಮನ್ಡ್ ವಾಜ್, ಕಾರ್ಯದರ್ಶಿ ಲಿಯೋ ಅಂದ್ರಾದೆ, ವಿಘ್ನೇಶ್ವರ ಪ್ರಿಂಟರ್ಸ್ ಮಾಲಕರಾದ ಎಮ್ ಮಹೇಶ್ ಕುಮಾರ್, ನಿವೃತ್ತ ತರಂಗ ಸಂಪಾದಕರಾದ ಚೆಲುವ ರಾಜ್ ಪೆರಂಪಳ್ಳಿ, ನಿವೃತ್ತ ಪೋಸ್ಟ್ ಮಾಸ್ಟರ್ ಶೇಖರ್ ಪೂಜಾರಿ ಕಲ್ಮಾಡಿ, ಪ್ರಮೋದ್ ಸುವರ್ಣ, ಮನೀಶ್ ಕೃಷ್ಣ, ಮಧು ಕಿರಣ್, ಮಧುಸ್ಮಿತಾ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅರಿವು ಸಾಲದ ಮೊತ್ತ ವಿಳಂಬ ಬಿಡುಗಡೆಗೆ ಒತ್ತಾಯಿಸಿ ಮನವಿ

Posted On: 05-09-2020 01:12PM

ಕರ್ನಾಟಕ ಸರ್ಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಅರಿವು ಸಾಲದ ಮೊತ್ತ ಜೂನ್ ತಿಂಗಳಲ್ಲಿ ಮಂಜೂರು ಆಗುತ್ತಿದ್ದು ಆದರೆ ಈ ಬಾರಿ ಬಹಳ ವಿಳಂಬವಾಗಿದ್ದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಬಹಳ ಕಷ್ಟಕರವಾಗುತ್ತಿದೆ ಎಂದು ಎಸ್ ಐ ಓ ಜಿಲ್ಲಾದ್ಯಕ್ಷ ನಾಸೀರ್ ಹೂಡೆ ತಿಳಿಸಿದ್ದಾರೆ.

ಇವರು ಇಂದು ಮುಖ್ಯಮಂತ್ರಿ ಮತ್ತು ರಾಜ್ಯ ಅಲ್ಪಸಂಖ್ಯಾತ ಇಲಾಖೆಯಗೆ ಮನವಿಯನ್ನು ಸಲ್ಲಿಸುತ್ತಾ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಧರ್ಮಧ ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ರೀತಿಯ ಸಾಲದ ಮೊತ್ತವನ್ನು ಆಯಾ ಕಾಲೇಜುಗಳಿಗೆ ಲಭಿಸಲಿಲ್ಲ. ಮತ್ತು ಕೆ. ಎಂ. ಡಿ. ಸಿ ಯವರು ಜೂನ್ ತಿಂಗಳಿಂದ ಹಣ ಬಿಡುಗಡೆ ಆಗುತ್ತದೆ ಎಂಬ ಸುಳ್ಳು ಭರವಸೆಯನ್ನು ನೀಡುತ್ತಲೇ ಇದ್ದು. ಸಾಲದ ಮೊತ್ತವನ್ನೇ ನಂಬಿದ ವಿದ್ಯಾರ್ಥಿಗಳಿಗೆ ಇದೀಗ ದಿಕ್ಕಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಂಬಂಧ ಪಟ್ಟವರು ಇದರ ಬಗ್ಗೆ ಪ್ರಶ್ನಿಸಿ ವಿದ್ಯಾಥಿಗಳ ಜೀವನಕ್ಕೆ ಆಸರೆಯಾಗಬೇಕಿದೆ. ಅದರ ಜೊತೆಯಲ್ಲೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಲಭಿಸುತ್ತಿದ್ದು ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭಿಸದೆ ವಿಳಂಬವಾಗುತ್ತಿದೆ ಈ ಬಗ್ಗೆ ತಾವುಗಳು ಸಂಬಂಧಪಟ್ಟ ಇಲಾಖೆಯ ಜೊತೆ ಚರ್ಚಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಲಿ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಶಾರೂಕ್, ಸದಸ್ಯರಾದ ಅಫ್ವಾನ್, ವಸೀಮ್, ಸಲಾವುದ್ದೀನ್, ಅಯಾನ್ ಮತ್ತು ರಿಝಾನ್ ಉಪಸ್ಥಿತರಿದ್ದರು.

ಮನದ ಕತ್ತಲೆ ತೊಲಗಿಸಿ ಭರವಸೆಯ ದೀಪ ಬೆಳಗಿದ ಗುರುವನ್ನು ನೆನೆಯೋಣ

Posted On: 04-09-2020 01:42PM

ಗುರುವಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಅದಕ್ಕಾಗಿ ನಾವು ಗುರುವಿನ ಸಮಾನ ನಾಗುವ ವರೆಗೆ ಕೆಲಸ ಮಾಡಿದರೆ ಅದುವೇ ಗುರುವಿಗೆ ನೀಡುವ ದೊಡ್ಡ ಕೊಡುಗೆ. ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ತಮ್ಮ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ "ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು " ಉತ್ತಮ ಗುರುಗಳು ಅದೇ ರೀತಿ ಉತ್ತಮ ಶಿಷ್ಯರಿದ್ದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗಬಹುದು.

ಹಳಸಿದ ಗುರು-ಶಿಷ್ಯರ ಸಂಬಂಧ: ದಿನ ಬೆಳಗಾದರೆ ಸಾಕು ಕೆಲವು ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರದ ವಿರುದ್ಧ ಧರಣಿ. ಶಿಕ್ಷಕರಿಂದಲೂ ನಾನಾ ಹಕ್ಕುಗಳಿಗಾಗಿ ಪ್ರತಿಭಟನೆಗಳನ್ನು ನಾವು ಸಮಾಜದಲ್ಲಿ ನೋಡುತ್ತಿದ್ದೇವೆ. ಸೇವೆಯ ಮುಖ್ಯ ಭಾಗವಾಗಿದ್ದ ಶಿಕ್ಷಣವು ಇಂದು ವ್ಯಾಪರೀಕರಣವಾಗಿ ಮಾರ್ಪಟ್ಟಿರುವುದು ಸರಿಯಲ್ಲ. ಶ್ರೀಮಂತರಿಗೆ ಅತ್ಯಂತ ಸುಲಭವಾಗಿ ಸಿಗುವ ಉನ್ನತ ವ್ಯಾಸಂಗದ ಸೀಟುಗಳು, ಓದಿನಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗೆ ಸಿಗದಂತಾಗಿದೆ. ಮೀಸಲಾತಿಯಲ್ಲಿ ಬದಲಾವಣೆಯಾಗಬೇಕಾದ ಅಗತ್ಯ ಇದೆ ಕೇವಲ ಜಾತಿಯ ದೃಷ್ಟಿಯಲ್ಲಿ ಮೀಸಲಾತಿ ನೀಡದೆ ಆಥಿ೯ಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿ ಅವರಿಗೂ ಉತ್ತಮ ಅವಕಾಶ ನೀಡಬೇಕು.
ಹಿಂದೆ ಗುರು-ಶಿಷ್ಯರ ಸಂಬಂಧ ಉತ್ತಮವಿತ್ತು. ವಿಶ್ವದಲ್ಲೇ ಭಾರತದ ಶಿಕ್ಷಣ ವ್ಯವಸ್ಥೆ ಶ್ರೇಷ್ಠಮಟ್ಟದಲ್ಲಿತ್ತು. ಬಂಗಾಳ, ನಲಂದಾ, ಕಂಚಿಯಲ್ಲಿ ಅಷ್ಟೇ ಏಕೆ ಧಾರವಾಡ, ಬಿಜಾಪುರ ಹಾಗೂ ಅರಸೀಕೆರೆಯೂ ಕೂಡ ಪ್ರಮುಖ ವಿದ್ಯಾಕೇಂದ್ರವಾಗಿತ್ತು ಎಂಬುದಾಗಿ ಚರಿತ್ರೆ ಹೇಳುತ್ತದೆ.

ಗುರುಕುಲ ಪದ್ಧತಿ ಪುನರುತ್ಥಾನವಾಗಬೇಕಾಗಿದೆ
:ನಾನಾ ವಿಷಯಗಳಲ್ಲಿ ವಿಶ್ವಮಟ್ಟದಲ್ಲಿ ಬೆಳಗಬಲ್ಲ ಅತ್ಯಂತ ಶ್ರೇಷ್ಠ ವಿದ್ವಾಂಸರು ನಮ್ಮಲ್ಲಿದ್ದರು. ಅವರೆಲ್ಲರ ಸಾಧನೆ ಹಿಂದೆ ಗುರುಗಳ ಮಾರ್ಗದರ್ಶನವಿರುದನ್ನು ನಾವು ಕಾಣಬಹುದು. ಆದರೆ ದುರದೃಷ್ಟವೆಂದರೆ ಅವರ ಹೆಚ್ಚಿನ ಸಂಶೋಧನೆಗಳು ಬರೀ ಕಡತದಲ್ಲಿ ಕೊಳೆಯುವಂತಾಗಿದೆ ವಿಪರ್ಯಾಸ.
ಈ ಹಿಂದೆ ಗುರುಕುಲ ಶಿಕ್ಷಣಪದ್ಧತಿಯಲ್ಲಿ ಗುರುಶಿಷ್ಯರು ಒಂದೆಡೆ ನೆಲೆಸಿ, ಒಂದೇ ಬಗೆಯ ಆಹಾರ ಸೇವಿಸಿ, ಸಮವಸ್ತ್ರ ಧರಿಸಿಕೊಳ್ಳುತ್ತಿದ್ದರು. ಮುಂಜಾನೆಯಿಂದ ಮುಸ್ಸಂಜೆಯವರೆಗೂ ಕಟ್ಟುನಿಟ್ಟಿನ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಬಗೆಯ ವಿದ್ಯೆಯನ್ನು ಕಲಿಯುವ ಅವಕಾಶವಿತ್ತು.
ಜಾತಿ ಭೇದವಿಲ್ಲದ ವಾತಾವರಣದಲ್ಲಿ, ಪ್ರಕೃತಿಯ ಮಡಿಲಲ್ಲಿ ಸದ್ವಿದ್ಯೆಯನ್ನು ಪಡೆಯಬಹುದಾಗಿತ್ತು. ಈಗ ಈ ರೀತಿಯ ವಾತಾವರಣ ಕಲ್ಪಿಸಲು ಅಸಾದ್ಯವಾಗಿದೆ .ಆದರೆ ಸಂತೋಷದ ವಿಷಯವೆಂದರೆ ಕೆಲವು ಕಡೆಗಳಲ್ಲಿ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆಗಳು ಕಾಯ೯ ನಿವ೯ಹಿಸುತ್ತಿವೆ.
"ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರುವೆ ನಮ: "
-ಜ್ಞಾನವೆಂಬ ಸಲಾಕೆಯಿಂದ, ಶಿಷ್ಯರ ಅಜ್ಞಾನವೆಂಬ ಅಹಂಕಾರವನ್ನೂ ತೊಡೆದು ಜ್ಞಾನಚಕ್ಷುವನ್ನು ತೆರೆಸಿ ಕಾಪಾಡುವ ಗುರುವಿಗೆ ನಮಸ್ಕಾರ ನಮ್ಮಲ್ಲಿಡಗಿರಬಹುದಾದ ಜ್ಞಾನವೆಂಬ ಬೆಳಕನ್ನು ಹೊರಜಗತ್ತಿಗೆ ತೋರುವ ಕೆಲಸವಾಗಬೇಕಾಗಿದೆ. ನಮ್ಮಲ್ಲಿರುವ ಅಂತ :ಶಕ್ತಿಯನ್ನು ನಮಗರಿವಾಗುವಂತೆ ಮಾಡುವುದೇ ಗುರುವಿನ ಕಾಯಕ.
'ವಿದ್ಯೆಯಂ ಕಲಿಸಿದಾತಂ ಗುರು' ಎನ್ನುವಾಗ ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು. ಇಂದು ನಮ್ಮಲ್ಲಿ ಕಮ್ಮಿಯಾಗಿರುವುದು ವಿನಯ . *ಗುರುಗಳ ಮಹತ್ವ ಕಡಿಮೆ?:* ಇಂದಿನ ವೇಗದ ಯುಗದ ವ್ಯವಸ್ಥೆಯಿಂದ ಗುರುಗಳ ಮಹತ್ವ ಕಡಿಮೆಯಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚ್ಯುಯಲ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಗಳನ್ನು ರಚನಾತ್ಮಕ ಕೆಲಸಗಳಿಗೆ ಉಪಯೋಗಿಸದೇ ವಿಧ್ವಂಸಕ ಕೃತ್ಯಗಳಿಗೆ ಪ್ರಯೋಗಿಸುತ್ತಿರುವುದು ಆತಂಕಕಾರಿ ವಿಷಯ. ಅನೇಕ ಪಿ.ಎಚ್.ಡಿ ಸಂಶೋಧನಾ ಪ್ರಬಂಧಗಳು ಕಪಾಟಿನ ಮೂಲೆಯಲ್ಲಿದೆ ಅದನ್ನು ಎಲ್ಲಾ ಕಾಲೇಜಿನ ಗ್ರಂಥಾಲಯದಲ್ಲಿಡುವ ಕಾಯ೯ ನಡೆಯಬೇಕು .ವಿದ್ಯಾಥಿ೯ಗಳು ಅದರ ಮೂಲಕ ಪ್ರೇರಣೆ ಪಡೆಯಬೇಕು. ವಿದ್ಯೆ ನೀಡಿದ ಗುರುವಿಗೆ ಪ್ರತಿಯಾಗಿ ಗುರುದಕ್ಷಿಣೆ ನೀಡುವ ಕಾಯಕ ಹಿಂದಿನಿಂದ ಬಂದಿದೆ. ಆದರೆ ಹಿಂದೆಲ್ಲಾ ಗುರುವಿಗೆ ಗೌರವಪೂರ್ವಕವಾಗಿ ಗುರುದಕ್ಷಿಣೆ ಸಲ್ಲುತ್ತಿತ್ತು. ಕಾಣದ ಗುರುವು ತನ್ನೆಡೆಗೆ ಬಂದು ಗುರುದಕ್ಷಿಣೆ ಕೇಳಿದಾಗ ಕೈಬೆರಳನಿತ್ತ ಏಕಲವ್ಯನ ಕತೆ ಜನಜನಿತ. ಗುರುಗಳಲ್ಲಿ ಹೇಗೆ ಅರ್ಪಣಾ ಮನೋಭಾವ ಅಗತ್ಯವೋ ಹಾಗೆ ಶಿಷ್ಯರಲ್ಲಿ ಗುರುವನ್ನು ಸತ್ಕರಿಸುವ ಮನಸ್ಸಿರಬೇಕು. ಸತ್ಕಾರವೆಂದರೆ ದ್ರವ್ಯರೂಪದಲ್ಲಿ ಸಂತೋಷಪಡಿಸುವುದಷ್ಟೇ ಅಲ್ಲ. ಕನಿಷ್ಠ ವರ್ಷಕ್ಕೊಂದು ದಿನವಾದರೂ (ಗುರುವಿನ ಹುಟ್ಟುಹಬ್ಬದ ದಿನವಾದರೆ ಇನ್ನು ಚೆನ್ನ) ಗುರುವಿಗೆ ನಮ್ಮ ನಮನ ಸಲ್ಲಿಸುವ ಕಾಯ೯ ನಡೆದರೆ ಉತ್ತಮ.

ಗುರುವಿಗೆ ಸಮಾನನಾದ ವ್ಯಕ್ತಿ ಇಲ್ಲ:
ಗುರುಗಳಿಗೆ ಶಿಷ್ಯರು ಅನೇಕರಿರಬಹುದು ಆದರೆ ಗುರು ಒಬ್ಬರೆ ಹೀಗಾಗಿ ಈ ಗುರುವಿನ ಬಗ್ಗೆ ಭಾರತದಲ್ಲಿ ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತಮ್ಮ ಶಿಷ್ಯ ವೃಂದಕ್ಕೆ ಕರೆಯನ್ನಿತ್ತರು.
ಹೆಚ್ಚಿನ ಟಿ.ವಿ ಮಾಧ್ಯಮಗಳಲ್ಲಿ ಶಿಕ್ಷಕರ ಮಹತ್ವವನ್ನು ತೋರಿಸುವ ಕಾರ್ಯಕ್ರಮಗಳು ಕಾಣೆಯಾಗಿವೆ. ಜೊತೆಗೆ ಚಲನಚಿತ್ರಗಳಲ್ಲಿ ಶಿಕ್ಷಕರನ್ನು ಸರ್ಕಸ್‌ನ ಬಫೂನ್‌ಗಳಂತೆ ಚಿತ್ರಿಸುತ್ತಿರುವುದು ವಿಷಾದನೀಯ ಸಂಗತಿ. ಗುರು ಶಿಷ್ಯರ ನಡುವಿನ ಅಂತರವನ್ನು ಹೆಚ್ಚಿಸುವಲ್ಲಿ ಇಂತಹ ಕೆಟ್ಟ ಅಭಿರುಚಿಯ ಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆಂದರೆ ತಪ್ಪಾಗಲಾರದು.
ತಾಯಿಯೇ ಮೊದಲ ಗುರು :
ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆ ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. 'ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಪೋಷಿಸಿದವರನ್ನು ಒಮ್ಮೆ ಹಿಂದುರಿಗಿ ನೋಡಿದಾಗಲೇ ತೃಪ್ತಿ ದೊರೆಯುವುದು.'
ನೂತನ ಶಿಕ್ಷಣ ನೀತಿ ಶಿಕ್ಷಣಕ್ಕೆ ಹೊಸ ದಿಕ್ಕು ತೋರಿಸಲಿದೆ ಸಕಾ೯ರ ಜಾರಿಗೆ ಉದ್ದೇಶಿಸಿರುವ ಈ ನೀತಿಯಿಂದ ಖಂಡಿತವಾಗಿಯೂ ಬದಲಾವಣೆ ತರಲು ಸಾಧ್ಯ ಬ್ರಿಟಿಷರು ತಂದ ಶಿಕ್ಷಣವನ್ನು ಕಲಿತು ಯಾವುದೇ ರೀತಿಯ ಸಾಧನೆ ಅಸಾದ್ಯ.ಈ ನೀತಿಯಿಂದ ವಿದ್ಯಾಥಿ೯ಗಳ ಇತರ ಪ್ರತಿಭೆಗೆ ಕೂಡ ಗೌರವ ಸಿಗಬಹುದು.
ಒಟ್ಟಾಗಿ ಶಿಕ್ಷಕರ ದಿನದಂದು ಅವರಿಗೆ ಧನ್ಯವಾದ ತಿಳಿಸಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಗುರುಗಳ ಪ್ರೇರಣೆ ಪಡೆಯೋಣ. ಗುರುವೇ ನಮ:
ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ

ಹೆಜಮಾಡಿಯ ಗಜಷೃಷ್ಠಾಕಾರದ ಗರ್ಭಗುಡಿಯ ಗ್ರೀವದಲ್ಲಿ ಶಿಲ್ಪಗಳ ಕುಸುರಿ

Posted On: 01-09-2020 08:20PM

ದೇವಾಲಯ ರಚನೆಯಲ್ಲಿ ಶಿಲ್ಪದ ಸೊಗಸು ಸೊಗಯಿಸುವುದು ಸಹಜ‌ ಮತ್ತು ಅನಿವಾರ್ಯ. ಇಂತಹ ಒಂದು ಅಪೂರ್ವ ಕುಶಲ ಕುಸುರಿಯ ರಚನಾಕಾರ್ಯವು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮರುನಿರ್ಮಾಣದಲ್ಲಿ ನಡೆಯತ್ತಿದೆ .
ಗಜಪೃಷ್ಠಾಕಾರದ ಗರ್ಭಗುಡಿಯ ನಿರ್ಮಾಣ ನಡೆಯುತ್ತಿದ್ದು ಪ್ರತಿಬಂಧ ಕ್ರಮದ ಅಧಿಷ್ಠಾನ , ಭಿತ್ತಿ ಸ್ತಂಭ - ಪಂಜರ - ಘನದ್ವಾರ - ಉತ್ತರವಲ್ಲಭೀಕಪೋತ ಮುಂತಾದ ಶಾಸ್ತ್ರೀಯ ನಿರ್ಮಿತಿಗಳಿಂದ ಭಿತ್ತಿಯು ಸ್ದಿದ್ಧಗೊಂಡಿದೆ .‌ಈಗ ಗ್ರೀವದಲ್ಲಿ‌ ( ಪ್ರಸ್ತರ ಮತ್ತು ಸ್ತೂಪಿಯ ಎರಡು ಛಾವಣಿಯ ಮಧ್ಯದ ಸ್ಥಳಾವಕಾಶ) ಇಟ್ಟಿಗೆ , ಸಿಮೆಂಟ್ ಬಳಸಿ‌ ಅಸಾಧಾರಣ ಕುಸುರಿನ ಕಲೆಯ ಕೌಶಲ್ಯ ಪಡಿಮೂಡುತ್ತಿವೆ. ಗ್ರೀವದಲ್ಲಿ ಕೂಟಗಳ( ಪುಟ್ಟ ಸ್ತಂಭಗಳ‌ ಚೌಕಟ್ಟಿನಿಂದಾದ ಗೂಡು) ರಚನೆ . ಇಲ್ಲಿ ಭಿತ್ತಿ ಸ್ತಂಭವನ್ನು ವಿಸ್ತರಿಸಿ ಕೂಟವಾಗಿ ಮಾಡುವ , ಘನದ್ವಾರವನ್ನು ಹಿಗ್ಗಿಸಿ 'ಶಾಲಾ' (ಇಳಿಜಾರಾಗಿರುವಂತಹ ಮಾಡನ್ನು ಹೊಂದಿರುವ ಆಯತಾಕಾರದ ಗೂಡು) ನಿರ್ಮಾಣ. ಪಂಜರಗಳನ್ನು ನಾಸಿಕಗಳಾಗಿ ಪರಿವರ್ತಿಸಿ ಅಂತಸ್ತವಾಗಿ ಪಂಜರ , ಕುಂಭಲತೆಗಳಿಂದ ಅಲಂಕೃತವಾಗಿದೆ .ಕೂಟ ಮತ್ತು ನಾಸಿಕಗಳ ಮಧ್ಯೆ ಒದಗುವ ಅವಕಾಶದಲ್ಲಿ ಸ್ತಂಭ ಗೋಪುರಗಳನ್ನು‌ ಅಳವಡಿಸಲಾಗಿದೆ .ಈ ರಚನೆಯು ಶಿಲ್ಪದ ಶ್ರೀಮಂತಿಕೆಯ ಅಭಿವ್ಯಕ್ತಿಯಾಗಿದೆ .

ಶಾಲಾ ರಚನೆಯು ಉಭಯ ಪಾರ್ಶ್ವಗಳಲ್ಲಿ ಪಂಜರಗಳನ್ನು‌ ಒಳಗೊಂಡಿದೆ .ಒಟ್ಟು ರಚನೆಯು ಹತ್ತು ಅಂಶದ ಪಡಿ,ವೇದಿಕೆ , ಭಿತ್ತಿ ಅಲಂಕಾರ, ಉತ್ತರವಲಭಿಕಪೋತ , ಪಿಂಡಿ ಹೀಗೆ ಹಂತಹಂತವಾಗಿ ಸೃಷ್ಟಿ ಯಾಗುತ್ತಿದೆ . ಗಜಪೃಷ್ಠಾಕಾರದ ವೃತ್ತಭಾಗದ ಪಂಜರದಲ್ಲಿ ಹೆಚ್ಚಿನ ಔನ್ನತ್ಯದಲ್ಲಿ ವೃತ್ತ ಸ್ಪುಟಿತಕಗಳಿವೆ .
ಚತುರಸ್ರದಿಂದ ವೃತ್ತಕ್ಕೆ ತಿರುಗುವ ಭಾಗದಲ್ಲಿ
ಅರ್ಧ ಶಾಲಾ ವಿಭಜಿಸಲ್ಪಟ್ಟಿದೆ .ಇಂತಹ ರಚನೆಗಳಿಂದ ಗ್ರೀವದ ಕೆಲಸ ನಡೆಯುತ್ತಿದೆ.

ಹೆಜಮಾಡಿಯ ಬಸ್ತಿಪಡ್ಪುವಿನಲ್ಲಿರುವ ಸುಮಾರು ಹತ್ತನೇ ಶತಮಾನದ ಗಜಪೃಷ್ಠಾಕಾರದ ಗರ್ಭಗುಡಿಯ ಮರು ನಿರ್ಮಾಣದ ವೇಳೆ ಗ್ರೀವದಲ್ಲಿ ಮೇಲೆ ವಿವರಿಸಿದ ವಿನ್ಯಾಸಗಳು ನಿರ್ಮಾಣವಾಗುತ್ತಿದೆ .
ಗರ್ಭಗುಡಿಯ ಒಳಸುತ್ತಿನಲ್ಲಿ‌ ( ಮೂರು ಪದರಗಳಲ್ಲಿ ಒಳಗಿನದ್ದು) ಕರ್ಣ ಮುಚ್ಚಿಕೆಯ ಬದಲಿಗೆ ಕೆಂಪುಕಲ್ಲಿನ‌ 'ತೊರವು' ಗಮನಸೆಳೆಯುತ್ತದೆ . ಗರ್ಭಗುಡಿಯ ಚತುರಸ್ರ ಆಕಾರದ ( ಗಜಪೃಷ್ಠಕ್ಕೆ ತಿರುಗುವ ಮೊದಲಿನ ಆಕಾರ) ಮೇಲೆ ಅದೇ ಆಕಾರದಲ್ಲಿ ಆರಂಭಗೊಂಡು ಅಷ್ಟಪಟ್ಟಿಯಾಗಿ ವಿಸ್ತರಿಸಲ್ಪಟ್ಟು ಮುಂದೆ ವೃತ್ತವಾಗಿ ಮೇಲೆ ಗೋಲಾಕಾರವಾಗಿ ನಿರ್ಮಿಸಲ್ಪಟ್ಟ ಪುರಾತನ ಕರ್ಣಮುಚ್ಚಿಕೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ .ಇಂತಹ ರಚನೆಗಳು ವಿರಳ ಲಭ್ಯ .

ದೇವಾಲಯದ ಸ್ಥಪತಿ ಅವದಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರ ನಿರ್ದೇಶನದಂತೆ ನಿರ್ಮಾಣಕಾರ್ಯ ನಡೆಯುತ್ತಿದೆ .ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಪುಣೆ , ಆಡಳಿತೆ ಮೊಕ್ತೇಸರ ದಯಾನಂದ ಹೆಜಮಾಡಿಯವರ ಮುತುವರ್ಜಿಯಿಂದ ಕಾಮಗಾರಿ ನಡೆಯುತ್ತಿದೆ.

ನೋಂಪು, ಅನಂತವ್ರತ, ಅನಂತಾನಂತ ದೇವೇಶ - ಕೆ ಎಲ್ ಕುಂಡಂತಾಯ

Posted On: 01-09-2020 11:57AM

' ಕ್ಷೀರಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣ' ಈ ಸನ್ನಿವೇಶದ‌ ಯಥಾವತ್ತಾದ ಪರಿಕಲ್ಪನೆಯೊಂದಿಗೆ ನೆರವೇರುವ ಉಪಾಸನೆಯ ಅಲೌಕಿಕ ಅನುಸಂಧಾನವೇ 'ಶ್ರೀಮದನಂತವ್ರತ' , 'ಅನಂತವ್ರತ, ಅಥವಾ 'ನೋಂಪು'. ಭಾದ್ರಪದ ಶುದ್ಧ ಚತುರ್ದಶಿ ತಿಥಿಯಲ್ಲಿ 'ಅನಂತ ಚತುರ್ದಶಿ' ಆಚರಣೆ . ಇದು ವ್ರತವಾಗಿ ನೆರವೇರುತ್ತದೆ .
ಕ್ಷೀರ ಸಾಗರವನ್ನು ಸಾಂಕೇತಿಸುವ ಜಲ ಪೂರಿತ ಕಲಶ . ಅದರ ಮೇಲೆ ದರ್ಭೆಯಿಂದ ನಿರ್ಮಿಸಿರುವ ಏಳು ಹೆಡೆಯುಳ್ಳ ಶೇಷಾಕೃತಿ . ಈ ಶೇಷಾಕೃತಿಯ ಮೇಲೆ ಶಾಲಗ್ರಾಮ .ಈ ಪರಿಕಲ್ಪನೆಯಲ್ಲಿ ಅನಂತನಾಮಕನಾದ ಶೇಷನ ಮೇಲೆ ಶಯನ ಮಾಡಿದ ಅನಂತಪದ್ಮನಾಭನ ಚಿಂತನೆಯೊಂದಿಗೆ ಆರಾಧನೆ ನೆರವೇರುವುದು .ವೈಕುಂಠವನ್ನೆ ಸಾಕಾರ ಗೊಳಿಸುವ , ವಾಸ್ತವದ ಸ್ಥಾಪನೆಯಾಗಿ ವ್ರತ ನಡೆಯುವುದು . ಲೌಕಿಕದಲ್ಲಿ ಅಲೌಕಿಕವನ್ನು ನಿರ್ಮಿಸುವ ವೈದಿಕದ ಉಪಾಸನಾ ವಿಧಾನ ಅದ್ಭುತ .
ಹದಿನಾಲ್ಕು ಗಂಟುಗಳುಳ್ಳ ಕೆಂಪು ಬಣ್ಣದ "ದಾರ ಅಥವಾ ದೋರ"ವನ್ನು ಪ್ರತಿಷ್ಠಾಪಿತ ಕಲಶದಲ್ಲಿ ಪ್ರಧಾನ ಪೂಜಾಕಾಲದಲ್ಲಿ ಇರಿಸಿ ಪೂಜಾನಂತರದಲ್ಲಿ ಧರಿಸಿಕೊಳ್ಳುವುದು ಅನಂತವ್ರತದ ಮುಖ್ಯ ಅಂಗ .ಪುರುಷರಾದರೆ ಬಲಕೈಯ ತೋಳಿನಲ್ಲಿ , ಸ್ತ್ರೀಯರಾದರೆ ಎಡಕೈಯ ತೋಳಿನಲ್ಲಿ ಕಟ್ಟಿಕೊಳ್ಳುವುದು ಸಂಪ್ರದಾಯ .

ಪೂಜೆ - ದೋರ ಬಂಧನ‌
ಶ್ರೀಮದನಂತವ್ರತ ಕಲ್ಪೋಕ್ತ ಪೂಜಾವಿಧಿಯು ಹಂತಹಂತವಾಗಿ ಸಂಪನ್ನಗೊಳ್ಳುತ್ತದೆ. ‌‌ ಯಮುನಾ ಪೂಜೆ , ಅಂಗಪೂಜೆ , ಪತ್ರಪೂಜೆ , ಪುಷ್ಪಪೂಜೆ ,ನಾಮಪೂಜೆ , ಧೂಪದೀಪಾದಿ ಸಮರ್ಪಣೆ .ಕಲಶಸ್ಥಾಪನೆ , ಶೇಷ ಪೂಜೆ , ಧ್ಯಾನಾವಾಹನಾದಿ , ಅಭಿಷೇಕ ,ವಸ್ತ್ರಯುಗ್ಮ ಸಮರ್ಪಣೆ , ಅಂಗಪೂಜೆ , ಅನಂತಪೂಜೆ ,ಧ್ಯಾನಮ್ , ಮಂಟಪ ಧ್ಯಾನಮ್ ,ಪೀಠಪೂಜೆ , ನವಶಕ್ತಿಪೂಜೆ , ಆವಾಹನಮ್ , ನವದೋರ ಸ್ಥಾಪನೆ ,ಷೋಡಶೋಪಚಾರ ಪೂಜೆ , ಅಂಗಪೂಜೆ ,ಷೋಡಶಾವರಣ ಪೂಜೆ ,ಶಕ್ತಿಪೂಜೆ ,ದೋರಪೂಜೆ ,ಪತ್ರಪೂಜೆ, ಪುಷ್ಪಪೂಜೆ ,ಅಷ್ಟೋತ್ತರನಪೂಜೆ , ಧೂಪದೀಪನೈವೇದ್ಯ, ಫಲನಿವೇದನೆ , ನೀರಾಜನ ,ಪ್ರಸನ್ನಾರ್ಘ್ಯ, ಪ್ರದಕ್ಷಿಣ ನಮಸ್ಕಾರ, ಪ್ರಾರ್ಥನೆ, ದೋರಪ್ರಾರ್ಥನೆ , ದೋರನಮಸ್ಕಾರ - ಬಂಧನ ,ಜೀರ್ಣದೋರ ವಿಸರ್ಜನೆ ,ಉಪಾಯನದಾನಮ್ , ಉದ್ವಾಸನ ,ಕ್ಷಮಾಪಣ ,ಸಮಾಪನ .ಹೀಗೆ ವಿವಿಧ ಹಂತಗಳಲ್ಲಿ ಪೂಜೆ ನೆರವೇರಿ ಒಂದು ಭಕ್ತಿ ಭಾವದ ವ್ರತಾಚಾರಣೆಯ ಸಾರ್ಥಕತೆ ಸನ್ನಿಹಿತವಾಗುತ್ತದೆ .
ಜಲಸಂಗ್ರಹ - ಯಮುನಾಪೂಜೆಯಿಂದ‌ ಕಲಶ ಪ್ರತಿಷ್ಠೆ , ಶೇಷ ಕಲ್ಪನೆ , ಮತ್ತೆ ಶಾಲಗ್ರಾಮ ಸ್ಥಾಪನೆಯ ಚಿಂತನೆ ಬಳಿಕ ದೋರದ ಮಹತ್ವ - ಧಾರಣೆ . ಇವು ಅನಂತವ್ರತದಲ್ಲಿ ವ್ಯಕ್ತವಾಗುವ ಮುಖ್ಯ ಅಂಶಗಳು .

ಸಂಕ್ಷಿಪ್ತ ಅನಂತ ವ್ರತಕಥಾ
ಅನಂತವ್ರತಕಥೆಯು ಯಾರಿಂದ ಯಾರಿಗೆ ಹೇಳಲ್ಪಟ್ಟಿತು ,ಕಲ್ಪೋಕ್ತ ಪೂಜಾವಿಧಾನದೊಂದಿಗೆ ದೋರ (ದಾರ) ಬಂಧನದ ಮಹತ್ವ. ಇತ್ಯಾದಿ.
ಕಪಟ ದ್ಯೂತದ ಪರಿಣಾಮವಾಗಿ ವನವಾಸಕ್ಕೆ ದ್ರೌಪದಿ ಸಹಿತ ಪಂಡವರು ಹೊರಡುತ್ತಾರೆ . ವಿಷಯ ತಿಳಿದ ಕೃಷ್ಣ ಕಾಡಿಗೆ ಬರುತ್ತಾನೆ .ಒದಗಿದ ಕಷ್ಟ ಪರಂಪರೆಗೆ ನಿವೃತ್ತಿ ಹೇಗೆ ಎಂದು ಧರ್ಮರಾಯನು ಕೇಳಲು , ಶ್ರೀಕೃಷ್ಣನು 'ಅನಂತವ್ರತ'ವನ್ನು ಮಾಡುವಂತೆ ಸೂಚಿಸುತ್ತಾನೆ . "ಅನಂತನೆಂದರೆ" ನಾನೆ ಆಗಿದ್ದೇನೆ ,ಆ ಅನಂತ ಸ್ವರೂಪವು ನನ್ನದೇ ಆಗಿದೆ ಎಂದು ತಿಳಿ" ಎಂದು ಅವತಾರದ ಸೂಕ್ಷ್ಮವನ್ನು ತಿಳಿಸುತ್ತಾನೆ .ಇಂತಹ ಅನಂತಸ್ವರೂಪವೇ ತಾನು ಎಂದು ಹೇಳುತ್ತಾನೆ ಕೃಷ್ಣ.
ಕೃತಯುಗದಲ್ಲಿದ್ದ ಸುಮಂತನೆಂಬ ಬ್ರಾಹ್ಮಣನ ಕತೆಯನ್ನು ಹೇಳುವ ಮೂಲಕ ಅನಂತ ವ್ರತದ ಫಲಪ್ರಾಪ್ತಿಯ ವಿವರಣೆಯನ್ನು ನೀಡುತ್ತಾನೆ ಶ್ರೀಕೃಷ್ಣ. ಸುಮಂತನು ತನ್ನ ಮಗಳನ್ನು ಕೌಂಡಿನ್ಯನೆಂಬ ಮಹರ್ಷಿಗೆ ಗೃಹ್ಯಸೂತ್ರದ ಕ್ರಮದಲ್ಲಿ ಮದುವೆಮಾಡಿ ಕೊಡುತ್ತಾನೆ . ನವವಧೂವರರಿಗೆ ಬಳುವಳಿಯಾಗಿ ಉತ್ತಮ ವಸ್ತುವನ್ನು ಕೊಡಬೇಕೆಂದು ಬಯಸಿ ಪತ್ನಿಯಲ್ಲಿ ಹೇಳಲು ,ಆಕೆ ಕೋಪಗೊಂಡು ಮನೆಯಲ್ಲಿದ್ದ ಸುವಸ್ತುಗಳನ್ನೆಲ್ಲ ಪೆಟ್ಟಿಗೆಯಲ್ಲಿ ಹಾಕಿ ಬಚ್ಚಿಡುತ್ತಾಳೆ . ಕೌಂಡಿನ್ಯನು‌ ತನ್ನ ಶಿಷ್ಯರ ಸಹಿತ ನವ ವಧುವಿನೊಂದಿಗೆ ಹೊರಡುತ್ತಾನೆ. ಬರಬರುತ್ತಾ ಯಮುನಾ ನದಿಯ ದಡದಲ್ಲಿ ಮಧ್ಯಾಹ್ನದ ಆಹ್ನಿಕಕ್ಕಾಗಿ‌ ಪ್ರಯಾಣವನ್ನು ನಿಲ್ಲಿಸಿ ಅನುಷ್ಠಾನ ಪೂರೈಸಲು ನದಿ ಬದಿಗೆ ಹೋಗುತ್ತಾನೆ .
ನವ ವಧು ಶೀಲೆಯು ಹೊಳೆ ಬದಿ ಹೋಗುತ್ತಾ ಕೆಂಪುಬಟ್ಟೆಯನ್ನು ಧರಿಸಿದ ಹೆಂಗಸರ ಗುಂಪು ಅನಂತ ವ್ರತದಲ್ಲಿ ತೊಡಗಿರುವುದನ್ನು ಕಾಣುತ್ತಾಳೆ . ವ್ರತದ ವಿವರವನ್ನು ತಿಳಿದುಕೊಂಡ ಶೀಲೆ ತಾನು ವ್ರತ ಮಾಡಲು ಸಿದ್ಧಳಾಗುತ್ತಾಳೆ . ಆಗ ಹೆಂಗಸರು ವ್ರತವಿಧಿಯನ್ನು ಹೇಳುತ್ತಾರೆ. ಈ ವ್ರತ ವಿಧಿಯಲ್ಲಿ ಅನಂತನು ಪೂಜಿಸಲ್ಪಡುತ್ತಾನೆ .
‌‌ ಒಂದು ಸೇರು ಅಕ್ಕಿಯಿಂದ ಪುರುಷನಾಮಕನಾದ ಪರಮಾತ್ಮನ ನಿಮಿತ್ತದಿಂದ ಪಾಕಮಾಡಿ ಅನಂತನಿಗರ್ಪಿಸಿ‌ ಅರ್ಧವನ್ನು ಬ್ರಾಹ್ಮಣನಿಗೆ ದಾನಮಾಡಿ ಉಳಿದರ್ಧವನ್ನು‌ ತಾನು ಭೋಜನಮಾಡಬೇಕು .ದ್ರವ್ಯದಲ್ಲಿ‌ ವಂಚನೆಮಾಡದೆ ತನ್ನ ಶಕ್ತಿಯಿದ್ದಷ್ಟು ದಕ್ಷಿಣೆ ಕೊಡಬೇಕು .ನದಿಯ ದಡದಲ್ಲಿ‌‌ ಅನಂತನನ್ನು‌ ಪೂಜಿಸಬೇಕು .ದರ್ಭೆಯಿಂದ ಶೇಷನ ಪ್ರತಿಮೆಯನ್ನುಮಾಡಿ ಬಿದಿರಿನ ಪಾತ್ರದಲ್ಲಿಟ್ಟು ಸ್ನಾನಮಾಡಿ‌ ಮಂಡಲದ ಮೇಲೆ ಗಂಧ ,ಪುಷ್ಪ‌, ,ಧೂಪ‌,ದೀಪ‌ಗಳಿಂದ ಅನೇಕ‌ವಿಧಿ ಪಕ್ವಾನ್ನಗಳಿಂದೊಡಗೂಡಿದ ನೈವೇದ್ಯಗಳಿಂದ ದೇವರ ಮುಂಭಾಗದಲ್ಲಿ‌ ಕುಂಕುಮದಿಂದ ಕೆಂಪಾದ ದೃಢವಾದ ಹದಿನಾಲ್ಕು ಗಂಟುಗಳುಳ್ಳ‌ ದೋರವನ್ನಿಟ್ಟು‌ ಪೂಜಿಸಬೇಕು .ಅನಂತರ ದೋರವನ್ನು ಮೇಲೆಹೇಳಿದಂತೆ ಕಟ್ಟಿಕೊಳ್ಳಬೇಕು . " ಸಂಸಾರವೆಂಬ ಮಹಾಸಮುದ್ರದಲ್ಲಿ‌ ಮುಳುಗಿದ್ದ ನನ್ನನ್ನು ,ಎಲೈ ,ಅನಂತನೆ‌, ವಾಸುದೇವನೆ ಉದ್ಧರಿಸು ,ನಾಶವಿಲ್ಲದ ನಿನ್ನ ರೂಪದಲ್ಲಿ ನನ್ನನ್ನು ವಿನಿಯೋಗಿಸು , ಸಾರೂಪ್ಯವೆಂಬ ಮೋಕ್ಷವನ್ನು ಕೊಡು .ಅನಂತರೂಪಿಯಾದ ನೀನು‌ ಈ ಸೂತ್ರದಲ್ಲಿ ಸನ್ನಿಹಿತನಾಗಿರುವೆ ,ನಿನಗೆ ನಮಸ್ಕಾರ " ಎಂಬ ಮಂತ್ರದಿಂದ ದೋರವನ್ನು ಕಟ್ಟಿಕೊಳ್ಳಬೇಕು . ಹೀಗೆ ದೋರವನ್ನು ಕಟ್ಟಿಕೊಂಡ ಶೀಲೆಯು ಮನೆಗೆ ಬರಲಾಗಿ ಮನೆಯು ಧನ ದಾನ್ಯಗಳಿಂದ ತುಂಬಿತ್ತು, . ಒಂದು ದಿನ ಕೌಂಡಿನ್ಯನು ಶೀಲೆಯ ತೋಳಿನಲ್ಲಿದ್ದ ದೋರವನ್ನು‌ ಕಂಡು ಕುಪಿತನಾಗಿ "ನನ್ನನ್ನು ವಶೀಕರಿಸಿಕೊಳ್ಳಲು‌ ಇದನ್ನು ಕಟ್ಟಿಕೊಂಡಿರುವೆಯಾ" ಎಂದು ಮೂದಲಿಸುತ್ತಾ ದೋರವನ್ನು ಕಿತ್ತು ಬೆಂಕಿಗೆ ಹಾಕುತ್ತಾನೆ .‌ ಆಕ್ಷಣ ಶೀಲೆಯು ದೋರವನ್ನು ಬೆಂಕಿಯಿಂದ ತೆಗೆದು ಹಾಲಿಗೆ ಹಾಕುತ್ತಾಳೆ .

[ಪ್ರಸ್ತುತ ವ್ರತಾಚರಣೆಯಲ್ಲಿ ತೊಡಗುವವರು , ಕಳೆದ ವರ್ಷ ಆರಾಧಿಸಿ ಕಟ್ಟಿಕೊಂಡ ದೋರವನ್ನು ಮತ್ತೆ ಕಟ್ಟಿಕೊಂಡು ,ಕಲ್ಪೋಕ್ತಪೂಜೆಯನ್ನು ನೆರವೇರಿಸಿ ಬಳಿಕ‌ ನೂತನವಾಗಿ ಪೂಜಿಸಲ್ಪಟ್ಟ ದೋರವನ್ನು‌ ಕಟ್ಟಿಕೊಂಡು ಹಳೆದೋರವನ್ನು‌ ಬಿಚ್ಚಿ ಹಾಲಿಗೆ ಹಾಕುವ ವಿಧಿ ಪೂಜಾಕ್ರಮದ ಅವಿಭಾಜ್ಯ ಅಂಗವಾಗಿದೆ.] ಇಂತಹ ಘಟನೆಯಿಂದ ಸಕಲ‌ಸಂಪತ್ತನ್ನು ಕೌಂಡಿನ್ಯನು‌ ಕಳೆದುಕೊಂಡು ನಿರ್ಗತಿಕನಾದನು . ಎಂದು ಶ್ರೀಕೃಷ್ಣನು ಧರ್ಮರಾಯನಿಗೆ ವಿಸ್ತಾರವಾದ ಕಥೆಯನ್ನು ಹೇಳುತ್ತಾ ಕೌಂಡಿನ್ಯನು ಅನಂತನನ್ನು ಹುಡುಕಿ ಹೊರಟು ಕೊನೆಗೆ ಹೇಗೆ ಮರಳಿ ವ್ರತವನ್ನು ಮಾಡಿ ಅನಂತನ ಅನುಗ್ರಹದಿಂದ ಕಳಕೊಂಡ ಸಂಪತ್ತನ್ನು ಪಡೆದು ಬಾಳಿ ಬದುಕಿ ವೈಕುಂಠವನ್ನು ಸಿದ್ಧಿಸಿಕೊಂಡ ಎಂಬ ವಿವರವನ್ನು ಹೇಳುತ್ತಾನೆ .
ಯಾರು ಸಂಸಾರಿಯಾಗಿ ಸುಖಿಗಳಾಗಿ ಋಜುಮಾರ್ಗಿಗಳಾಗಿ ಬದುಕಲು ಬಯಸುವರೋ ಅವರು ಮೂರುಲೋಕಕ್ಕೂ ಸ್ವಾಮಿಯಾದ ಅನಂತದೇವನ್ನು ಭಕ್ತಿಯಿಂದ ಪೂಜಿಸಿ ಉತ್ತಮ ದೋರವನ್ನು ಬಲತೋಳಿನಲ್ಲಿ ಕಟ್ಟಿಕೊಳ್ಳುತ್ತಾರೆ.
ಬಹಳಷ್ಟು ಮನೆಗಳಲ್ಲಿ ನೋಂಪು ವ್ರತಾಚರಣೆ ಶತಮಾನಗಳಿಂದ ನಡೆದುಬಂದಿದೆ ,ಶ್ದಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಪರ್ವ ವ್ರತವಾಗಿ ನೆರವೇರುತ್ತದೆ .ಪ್ರಸಿದ್ಧ ವಿಷ್ಣು ದೇವಾಲಯಗಳಲ್ಲಿ ,ಅನಂತ ಪದ್ಮನಾಭ ದೇವಳಗಳಲ್ಲಿ ಅನಂತವ್ರತ ಸಂಭ್ತಮದಿಂದ ನಡೆಯುತ್ತದೆ.
ಲೇಖನ : ಕೆ .ಎಲ್ .ಕುಂಡಂತಾಯ

ಎಲ್ಲರಿಗೂ ಮಾದರಿಯಾದ ವಿಶೇಷ ಅಭಿಯಾನ ಗೋವಿಗಾಗಿ ಮೇವು

Posted On: 29-08-2020 09:12PM

ಗೋವನ್ನು ಹಿಂದೂ ಧಮ೯ದಲ್ಲಿ ಪ್ರಾಮುಖ್ಯವಾದ ಸ್ಥಾನದಲ್ಲಿ ನೋಡಲಾಗುತ್ತದೆ ಆದರೆ ದೇಶದಲ್ಲಿ ಇಂದು ಗಣನೀಯ ಪ್ರಮಾಣದಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ದು:ಖದ ವಿಚಾರ. ಸ್ವಾತಂತ್ರ್ಯ ಪೂವ೯ದಲ್ಲಿ ದೇಶದಲ್ಲಿ ಜನರ ಸಂಖ್ಯೆಗಿಂತ ಜಾನುವಾರುಗಳ ಸಂಖ್ಯೆ ಹೆಚ್ಚಾಗಿತ್ತು ಆದರೆ ಇಂದು ತದ್ವಿರುದ್ಧವಾಗಿದೆ. ಕೃಷಿಯು ಕಡಿಮೆಯಾದ ಪರಿಣಾಮ ಗೋವನ್ನು ಸಾಕಣೆಕೆ ಮಾಡುವವರು ಕಡಿಮೆಯಾಗಿದ್ದಾರೆ.

ಗೋ ವನ್ನು ವದೆ ಮಾಡುವ ಸಲುವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡುವಾಗ ಅರಕ್ಷರ ರು ತಡೆಹಿಡಿದ ಜಾನುವಾರುಗಳು ಅದೇ ರೀತಿ ಗೋವನ್ನು ಸಾಕಲಾರದೆ ಕಷ್ಟದಲ್ಲಿರುವ ಕುಟುಂಬದ ಗೋವನ್ನು ಸಾಕಿ ಸಲಹುವ ದೃಷ್ಠಿಯಿಂದ ಅಪ್ಪಟ್ಟ ಗೋ ಪ್ರೇಮಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀಥ೯ ಶ್ರೀಪಾದರು ನೀಲಾವರ ಗೋ ಶಾಲೆಯನ್ನು ಸ್ಥಾಪನೆ ಮಾಡಿದ್ದಾರೆ.

ಶಾಖಾ ಗೋಶಾಲೆ ಕೊಡವೂರು ಮತ್ತು ಹೆಬ್ರಿ ಯಲ್ಲಿದೆ ದಿನಂಪ್ರತಿ ಲಕ್ಷಾoತರ ರೂಪಾಯಿ ಖಚು೯ ಮಾಡಿ ಅದನ್ನು ಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಕರೋನಾ ಎಂಬ ಮಹಾಮಾರಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತೊಂದರೆ ನೀಡಿದೆ. ಲಾಕ್ ಡೌನ್ ನಿಂದಾಗಿ ಜಾನುವಾರುಗಳಿಗೆ ಹಸಿರು ಹುಲ್ಲಿನ ಕೊರತೆ ಕಾಡಿತ್ತು.ಈ ಸಂದಭ೯ದಲ್ಲಿ ಮಂದಾತಿ೯ಯ ಯುವಕರು ಒಂದೆಡೆ ಸೇರಿ ಯುವ ಮುಂದಾಳು ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಯವರ ಸಂಚಾಲಕತ್ವದಲ್ಲಿ ಕಾಮಧೇನು ಗೋ ಸೇವಾ ಸಮಿತಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಆ ಮೂಲಕ " ಗೋವಿಗಾಗಿ ಮೇವು " ಎಂಬ ಅಭಿಯಾನವನ್ನು ಪ್ರಾರಂಭಿಸಿದರು.ಇದೀಗ ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಈ ಜಾನುರಾರುಗಳಿಗೆ ಮೇವು ನೀಡುವ ಕಾಯಕದಲ್ಲಿ ತೊಡಗಿವೆ. ಒಂದು ಅಭಿಯಾನ ಈ ರೀತಿಯಲ್ಲಿ ಕೂಡ ಮಾಡ ಬಹುದು ಎಂಬುದಾಗಿ ಕಾಮಧೇನು ಗೋ ಸೇವಾ ಸಮಿತಿ ಸಮಾಜಕ್ಕೆ ತೋರಿಸಿದೆ.ಈ ಸಂಸ್ಥೆಗೆ ಎಷ್ಟು ಅಭಿನಂದನೆ ಹೇಳಿದರೂ ಕಡಿಮೆಯೇ ಯುವಕರಿಗೆ ಮಾದರಿಯಾದ ಈ ಕಾಯ೯ ಮಾಡಿದ ಈ ಸಂಸ್ಥೆಗೆ ಶ್ರೀಗಳು ಸಹಿತ ನಾಡಿನ ಹಲವಾರು ಗಣ್ಯರು ಅಭಿನಂದಿಸಿದ್ದಾರೆ. ತಾವು ಕೂಡ ಈ ಗೋ ಸೇವೆ ಮಾಡಬಹುದು ಈ ಮೂಲಕ ದೇವರ ಸೇವೆ ಮಾಡಲು ಅವಕಾಶವಿದೆ.

ಬರಹ : ರಾಘವೇಂದ್ರ ಪ್ರಭು,ಕವಾ೯ಲು

ಡ್ರಗ್ಸ್ ವ್ಯಸನದಿಂದ ಯುವ ಜನಾಂಗವನ್ನು ಬಂಧಮುಕ್ತಗೊಳಿಸಬೇಕಾಗಿದೆ

Posted On: 29-08-2020 09:06PM

ಇತ್ತಿಚೆಗೆ ಮಾದಕ ಡ್ರಗ್ಸ್ ವ್ಯಸನದ ಬಗ್ಗೆ ಬಹಳಷ್ಟು ಚಚೆ೯ ಯಾಗುತ್ತಿದೆ.ಬೆಂಗಳೂರು ಸೇರಿದಂತೆ ಹಲವಾರು ನಗರದಲ್ಲಿ ಇದರ ಜಾಲದ ಬಗ್ಗೆ ಹಾಗೂ ಚಿತ್ರರಂಗದಲ್ಲಿ ಇದರ ವ್ಯಾಪಕತೆಯ ಕುರಿತು ಮಾಧ್ಯಮಗಳಲ್ಲಿ ಬಹಳಷ್ಟು ವಿಸ್ತ್ರತ ಚಚೆ೯ ಯಾಗುತ್ತಿರುವುದನ್ನು ನಾವು ನೋಡುತ್ತಿದ್ದೆವೆ. ಮಾದಕತೆಯ ಹೆಸರಿನಲ್ಲಿ ನಡೆಯುವ ಈ ವ್ಯವಸ್ಥಿತ ಜಾಲದ ಬಗ್ಗೆ ತನಿಖೆ ನಡೆಯಬೇಕಾಗಿದೆ. ಈ ಜಾಲದ ಕಪಿ ಮುಷ್ಠಿಗೆ ದಾಸರಾಗುತ್ತಿರುವವಲ್ಲಿ ಹೆಚ್ಚಿನವರು ಯುವ ಜನಾಂಗದವರು ಎಂಬುದು ದುರದೃಷ್ಟಕರ. ಅದೇ ರೀತಿ ಮಕ್ಕಳು ಕೂಡ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವುದು ಬೇಸರದ ವಿಚಾರ. ಗೆಳೆಯ ಅಥವಾ ಗೆಳತಿಯೊಂದಿಗೆ ಸೇರಿ ಮಕ್ಕಳು ಏನೇನು ಮಾಡುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಪಾಠ ಚನ್ನಾಗಿ ಕಲಿಯುತ್ತಿದ್ದಾರೆಯೇ? ಹೆತ್ತವರಲ್ಲಿ ಮಾತನಾಡುವ ಶೈಲಿಯಲ್ಲಿ ವ್ಯತ್ಯಾಸವಾಗಿದೆಯೇ? ಸಂಬಂಧಿಕರೊಳಗಿನ ಬಾಂಧವ್ಯ ಚೆನ್ನಾಗಿದೆಯೇ? ಮುಂತಾದವುಗಳಿಂದ ವ್ಯಸನಿಗಳನ್ನು ತಿಳಿದುಕೊಳ್ಳಬಹುದು. ಮಾರುಹೋದರೆ ಮತ್ತೆ ವಾಸ್ತವಕ್ಕೆ ಮರಳುವುದು ಕಷ್ಟಕರ. ಇಂತಹ ಮಾದಕ ವಸ್ತುಗಳು ತುಂಬಾ ಕಡೆಗಳಲ್ಲಿ ಕಳ್ಳಸಾಗಾಣಿಕೆಯಾಗುತ್ತಿವೆ. ಪೋಲಿಸರು ಕಂಡು ಹಿಡಿದು ವಶಕ್ಕೆ ತೆಗೆದುಕೊಂಡರೂ ಸಹ ಕೆಲವೊಮ್ಮೆ ಕೈಗೆ ಸಿಗದೆ ಉಳಿದು ಬಿಡುತ್ತದೆ.

ಗಾಂಜಾ, ಅಫೀಮು ಚರಸ್ ನಂತಹ ಮಾದಕ ವಸ್ತುಗಳ ಶೇಖರಣೆ, ಬಳಕೆ, ಸಾಗಾಣಿಕೆ ಹಾಗೂ ಉತ್ಪಾದನೆ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಯುವ ಜನತೆ ಮನದಟ್ಟು ಮಾಡಿಕೊಳ್ಳಬೇಕು. ಇಂತಹ ಅಪರಾದಕ್ಕೆ ಗರಿಷ್ಠ 10 ವರ್ಷಗಳ ಸೆರೆವಾಸ ಹಾಗೂ ಭಾರೀ ದಂಡ ವಿಧಿಸಲಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವ ಜನಾಂಗ ಮುಂದಾಗಬೇಕಾಗಿದೆ.
ಇಂದಿನ ಯುವ ಜನಾಂಗ ಆರಂಭದಲ್ಲಿ ಸಂತೋಷ ವಿನೋದಕ್ಕಾಗಿ ಮಾದಕ ದ್ರವ್ಯ ಸೇವನೆ ಆರಂಭಿಸುತ್ತಾರೆ. ಅದು ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಹಾಗಾಗಿ ಯುವಜನತೆ ಜಾಗೃತರಾಗಿರಬೇಕು .ಇಲ್ಲವಾದಲ್ಲಿ ಇದಕ್ಕೆ ದಾಸರಾಗಿ ಬದುಕನ್ನು ಅಂತ್ಯಗೊಳಿಸುವಲ್ಲಿಗೆ ಬರುವ ಸ್ಥಿತಿ ನಿಮಾ೯ಣವಾಗಬಹುದು. ಈ ಬಗ್ಗೆ ವೈದ್ಯರ ಅಭಿಪ್ರಾಯದಂತೆ ಹೇಳುದಾದರೆ,
ಡ್ರಗ್ ಅಡಿಷನ್ ಎಂದರೇನು?
ವ್ಯಕ್ತಿಯೊಬ್ಬ ಪ್ರತಿ ನಿತ್ಯ ಮಾದಕ ವಸ್ತುಗಳನ್ನು ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಮಾದಕ ದ್ರವ್ಯ ವ್ಯಸನ (ಡ್ರಗ್ ಅಡಿಷನ್) ಅಥವಾ ಮಾದಕ ವಸ್ತುಗಳ ದುರುಪಯೋಗ ಎನ್ನಬಹುದು. ಈ ರೀತಿಯ ಮಾದಕ ವ್ಯಸನವು ಗಂಭೀರವಾದ, ಭಾವನಾತ್ಮಕ ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಾದಕ ದ್ರವ್ಯ ವ್ಯಸನ ಪ್ರಾರಂಭ ಜೀವನದ ಅಂತ್ಯದ ಸಂಕೇತ
ಮೊದ ಮೊದಲು ಮದ್ಯವನ್ನು ಅಥವಾ ಡ್ರಗ್ಸ್ ನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ, ಸಮಸ್ಯೆಗಳನ್ನು ಮರೆಯಲೆಂದೋ ಮಾದಕ ದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಡ್ರಗ್ಸ್ ಬಳಕೆಯಿಂದ ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಮಾಡುತ್ತದೆ. ಅಂತವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೇ ಹೋಗುತ್ತಾರೆ.
ಮಾದಕ ದ್ರವ್ಯಗಳಿಂದ ಮನುಷ್ಯನ ಮಿದುಳಿನ ಮೇಲೆ ಪರಿಣಾಮ: ವೈದ್ಯರ ಪ್ರಕಾರ ಹೇಳುದಾದರೆ ಡ್ರಗ್ಸ್ ಸೇವನೆಯಿಂದ ಮನುಷ್ಯನ ಮಿದುಳಿನ ನರಗಳಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಯಾವಾಗ ನೀವು ಮಾದಕ ವಸ್ತುಗಳನ್ನು ಬಳಸುತ್ತಿರೋ ಇದು ಮಿದುಳಿನ ಸಂದೇಶದ ವ್ಯವಸ್ಥೆಯನ್ನು ಪುನರಾವರ್ತಿಸುತ್ತದೆ ಹೀಗೆ ಡೋಪಮೈನ್ ಬಿಡುಗಡೆಯಾಗಿ ಮಿದುಳಿನಲ್ಲಿ ಸಂತೋಷ ಉಂಟಾಗುತ್ತದೆ. ಮಿದುಳು ಮತ್ತೆ ಮತ್ತೆ ಸಂತೋಷಪಡಲು ಬಯಸಿ ಮಾದಕ ದ್ರವ್ಯವನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ.
ದೀರ್ಘಕಾಲದ ಡ್ರಗ್ಸ್ ಸೇವೆನೆಯು ಮಿದುಳಿನ ಅರಿವಿನ ಕಾರ್ಯಕ್ಷಮತೆಯನ್ನು ಹಾನಿಗೊಳಿಸಬಹುದು. ಅಧ್ಯಯನಗಳು ತಿಳಿಸುವಂತೆ ದೀರ್ಘಕಾಲದ ಡ್ರಗ್ಸ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆಗೆ ಒಳಗಾಗಬಹುದು. ಅದೇ ರೀತಿ ಇತರ ಸಮಸ್ಯೆಗಳಾದ
* ನಡುಗುವಿಕೆ * ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು * ಮೂರ್ಛೆ ಹೋಗುವುದು * ತೂಕದಲ್ಲಿ ಏರಿಳಿತ * ಸಾಮಾಜಿಕವಾಗಿ ಕಡೆಗಣಿಸಲ್ಪಡುವುದು * ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು * ಹೆದರಿಕೆ ಮತ್ತು ತಳಮಳ * ಆತಂಕ ಮತ್ತು ಮತಿ ವಿಕಲ್ಪ.ಉoಟಾಗುತ್ತವೆ.

ಹೆಚ್ಚಿನ ವಿದ್ಯಾಥಿ೯ಗಳು ಸೇರಿದಂತೆ ಯುವ ಜನಾಂಗ ಕ್ಷಣಿಕ ಸುಖ, ಮಾದಕತೆಗಾಗಿ ತಪ್ಪು ದಾರಿ ಹಿಡಿದು ಸಮಾಜ ಘಾತುಕ ಕಾಯ೯ದಲ್ಲಿ ತೊಡಗಿಕೊಳ್ಳುತ್ತಿರುದನ್ನು ತಡೆ ಹಿಡಿಯಬೇಕಾಗಿದೆ. ಸಕಾ೯ರ ಈ ಡ್ರಗ್ಸ್ ಜಾಲವನ್ನು ಭೇಧಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.ಸುಲಭ ರೀತಿಯ ಹಣ ಸಂಪಾದಿಸಲು ಈ ರೀತಿಯ ಕರಾಳ ದಂದೆಗೆ ಇಳಿಯುವವರ ಬಗ್ಗೆ ಕಠಿಣ ಶಿಕ್ಷೆ ನೀಡಬೇಕು.ಈಗಾಗಲೇ ಪಂಜಾಬ್ ರಾಜ್ಯದಲ್ಲಿರುವ ಅತೀ ಹೆಚ್ಚಿನ ಯುವ ಜನಾಂಗ ಈ ರೀತಿಯ ಡ್ರಗ್ಸ್ ಜಾಲಕ್ಕೆ ಒಳಪಟ್ಟಿರುವುದು ನಮ್ಮ ಮುಂದೆ ದೊಡ್ಡ ಉದಾಹರಣೆಯಾಗಿದೆ. ಭಾರತವು ಪ್ರಪಂಚದಲ್ಲಿ ಅತೀ ಹೆಚ್ಚಿನ ಯುವ ಜನಾಂಗವನ್ನು ಹೊಂದಿದೆ .ದೇಶದ ಅಭಿವೃದ್ಧಿ ಯುವ ಜನಾಂಗದಿಂದ ಮಾತ್ರ ಸಾಧ್ಯ ಹೀಗಾಗಿ ಕೇಂದ್ರ ಸಕಾ೯ರ ಇದರ ಬಗ್ಗೆ ಕಠಿಣ ಕಾನೂನು ಜಾರಿಗೆ ತಂದು ಇದರ ಅಂತ್ಯಮಾಡಬೇಕಾಗಿದೆ.
ರಾಘವೇಂದ್ರ ಪ್ರಭು, ಕವಾ೯ಲು, ಯುವ ಲೇಖಕ

ಮತ್ತೆ ಕೃಷಿಯತ್ತ ಆಸಕ್ತಿ : ಲೇಖನ - ಕೆ.ಎಲ್. ಕುಂಡಂತಾಯ

Posted On: 29-08-2020 08:38PM

'ನಿಸರ್ಗ' ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ. 'ಅನ್ನ' ಮನುಕುಲಕ್ಕೆ "ಜೀವ - ಜೀವನ" ಕೊಡುತ್ತದೆ. ಹೌದು.‌... ನಿಸರ್ಗ, ತಾನು ಮೊದಲು ಸೌಭಾಗ್ಯವತಿ - ಫಲವತಿಯಾಗಬೇಕು.‌ಆಗ ದೇಶಕ್ಕೆ ಸೌಭಾಗ್ಯದ ಕೊಡುಗೆಯನ್ನು ಕೊಡಲಾದೀತು . ಸದಾ ಸಂಪದ್ಭರಿತ ನಿಸರ್ಗ "ಸೌಮಾಂಗಲ್ಯ"ವನ್ನು ಪಡೆದು ಹಸಿರು 'ಹೊದ್ದು' ಫಲ ಸಮೃದ್ಧಿಯನ್ನು 'ಹೊತ್ತು' ಸಂಭ್ರಮಿಸುವ ಕಾಲವೇ ವರ್ಷಾಕಾಲ - ಮಳೆಗಾಲ . ನಿಸರ್ಗ - ಪ್ರಕೃತಿ 'ಸ್ತ್ರೀ' . ಆಕಾಶ 'ಪುರುಷ'. ಸುರಿಯುವ 'ಮಳೆ' ; ಭೂಮಿ - ಆಕಾಶಕ್ಕೆ ಸಂಬಂಧವನ್ನು ಬೆಸೆಯುತ್ತದೆ . ರೈತ ಸಕಾಲವೆಂದು ಗದ್ದೆಗಿಳಿಯುತ್ತಾನೆ. ನಿಸರ್ಗ ನೀರೆ ಅರಳಿ ಸಿರಿವಂತಳಾಗುತ್ತಾಳೆ ಅಂದರೆ ಸಮೃದ್ಧಿಯ ಫಲವನ್ನು ಕೊಡುವುದಕ್ಕೆ ಸನ್ನದ್ಧಳಾಗುತ್ತಾಳೆ .‌ ಭೂಮಿಯ ಫಲವಂತಿಕೆಯನ್ನು ಕಂಡು ಹೆಣ್ಣು ಫಲವತಿಯಾಗುವುದಕ್ಕೆ ಸಮೀಕರಿಸಿ ಒಬ್ಬಳನ್ನು "ಹೆತ್ತ ತಾಯಿ' ಎಂದು , ಮತ್ತೊಬ್ಬಳನ್ನು "ಹೊತ್ತ ತಾಯಿ" ಎಂದು‌ ಮಾನವ ಕಂಡುಕೊಂಡುದುದು ಪ್ರಕೃತಿಯ ಅಂತರ್ಗತವಾಗಿರುವ ಪರಮ ಸತ್ಯ . ಈ ಸತ್ಯದ ಅರಿವು ಮೂಡಲು ಸಹಸ್ರಾರು ವರ್ಷಗಳ ಬದುಕಿನ‌‌ ಅನುಭವ ಕಾರಣ. ಇದೇ 'ಮಾತೃ ಆರಾಧನೆಯ' ಮೂಲ . ಮಣ್ಣು - ಭೂಮಿಯನ್ನು ನಂಬುವುದು . ಅದರೊಂದಿಗೆ ಹೋರಾಡುವುದು , ಕೃಷಿಕನ ಕಾಯಕ . ಈ ಸಂಬಂಧ 'ಕೃಷಿ ಸಂಸ್ಕೃತಿ'ಯ ಪ್ರಾರಂಭದಿಂದ ಸಾಗಿ ಬಂದಿದೆ . ಮಣ್ಣಿನೊಂದಿಗೆ ನಡೆಸುವ ಹೋರಾಟ - ಕೃಷಿಕಾರ್ಯ , ಫಲ - ಬೆಳೆಯನ್ನು ಕೊಡಬಲ್ಲುದೇ ಹೊರತು , ಅಮ್ಮ ಮುನಿಯಲಾರಳು , ಏಕೆಂದರೆ ಅಮ್ಮನ ಅಂದರೆ ಮಣ್ಣಿನ ಮಗನಲ್ಲವೇ . ಆದರೆ ತುಳು ಗಾದೆಯೊಂದು ಎಚ್ಚರಿಸುತ್ತದೆ " ಮರಿ ತುಚಿಂಡ ಮರ್ದ್ ಉಂಡು , ಮಣ್ಣ್ ತುಚಿಂಡ ಮರ್ದ್ ಇಜ್ಜಿ" ಎಂದು .ಅಂದರೆ ವಿಷತುಂಬಿದ ಹಾವು ಕಚ್ಚಿದರೆ ಮದ್ದುಇದೆ ,ಆದರೆ ಮಣ್ಣು ಕಚ್ಚಿದರೆ - ಮುನಿದರೆ ಅದಕ್ಕೆ ಮದ್ದಿಲ್ಲ - ಪರಿಹಾರವಿಲ್ಲ . ಜನ್ಮ ಭೂಮಿಯನ್ನು ಜನನಿಗೆ ಹೋಲಿಸಿದರು . ಜನ್ಮ ಭೂಮಿಯ ರಕ್ಷಣೆ ಮೌಲ್ಯಯುತ ಕಾಯಕವಾಯಿತು . ಮಣ್ಣನ್ನು ನಂಬಿದಹಾಗೆ ಮಣ್ಣನ್ನು ಸಾಕ್ಷಿಯಾಗಿರಿಸಿಕೊಂಡರು . ಜನಪದ ಕತೆಗಳಲ್ಲಿ , ಪುರಾಣಗಳಲ್ಲಿ ಮಣ್ಣಿನ ಸತ್ಯಗಳು ಪ್ರಕಟಗೊಳ್ಳುತ್ತಿರುತ್ತವೆ . ಮಣ್ಣು ,ದಿಕ್ಕುಗಳು , ಆಕಾಶ ,ಸೂರ್ಯ - ಚಂದ್ರ ಮುಂತಾದ ಕಣ್ಣಿಗೆ ಕಾಣುವ ಸತ್ಯಗಳನ್ನು ಮಣ್ಣಿನಷ್ಟೇ‌ ಮುಖ್ಯವಾಗಿ ಮನುಕುಲ‌ ಸ್ವೀಕರಿಸಲ್ಪಟ್ಟಿದೆ . ಮುನಿಯಲು , ಶಾಪಕೊಡಲು‌ ಮಣ್ಣು ಸಾಕ್ಷಿಯಾಗುವ ಪರಿಕಲ್ಪನೆ ಅದ್ಭುತ . 'ನೆಲಕಾಯಿ ದರ್ತೆರ್' , "ಮಣ್ಣ್ ಮುಟುದು ಪೊಣ್ಣ ಶಾಪ ಕೊರಿಯೊಲು ಸಿರಿ". ಸತ್ಯವನ್ನು ದೃಢೀಕರಿಸಲು ಅಥವಾ ಮತ್ತಷ್ಟು ಪರಿಣಾಮಕಾರಿಯಾಗಿಸಲು 'ತಾಯಿ ಸಾಕ್ಷಿ' , "ಭೂಮಿ ಸಾಕ್ಷಿ" ('ಅಪ್ಪೆ ಕಂಟಲ್ದೆ' , 'ಭೂಮಿ ಸಾಕ್ಷಿ' ಇವು ಜನಪದರಲ್ಲಿ ಸಾಮಾನ್ಯ) ಎಂದು ಹೇಳುವುದು ಜನಪದರ ಮುಗ್ಧ ; ಸರಳ ; ವಿಮರ್ಶೆಗಳಿಲ್ಲದ ಜೀವನ ವಿಧಾನದಲ್ಲಿದೆ.

ಜನಪದ - ವೈದಿಕ ವಿಧಿಗಳಲ್ಲಿರುವ ಭೂಮಿ ಪ್ರಧಾನವಾದ ಆಚರಣೆಗಳು ಭೂಮಿಯನ್ನು ಮನುಕುಲ ಒಪ್ಪಿದ ಭಾವವನ್ನು ಪ್ರಕಟಿಸುತ್ತದೆ . ಅನುಷ್ಠಾನದಲ್ಲಿರುವ 'ಭೂಮಿಪೂಜೆ' ಒಂದು ಪ್ರತ್ಯಕ್ಷ ಉದಾಹರಣೆ . ಬೂತ - ದೈವಗಳನ್ನು ಮಣ್ಣಿನ ಸತ್ಯಗಳೆಂದೇ ಸ್ವೀಕಾರ.ಅಬ್ಬರದ ಅಭಯ ಕೊಡಲು ಮಣ್ಣಿನ ಸತ್ಯವೇ ಭರವಸೆ - ಪ್ರೇರಣೆ . ನಾಗ ಭೂಮಿಪುತ್ರ . ವೈದಿಕದ ಹೆಚ್ಚಿನ ದೇವರು ಅವತರಿಸಿದ್ದು , ಲೀಲಾನಾಟಕ ಪ್ರದರ್ಶಿಸುವುದು ಭೂಮಿಯಲ್ಲಿ , ಶಾಪ ವಿಮೋಚನೆಗೆ ಆರಿಸಿಕೊಳ್ಳುವುದು ಧರಿತ್ರಿಯನ್ನೆ . ಇದು ಸನಾತನವಾದುದು , ಎಂದರೆ 'ಬಾಲ ಪ್ರಾಕ್ ದ ನಂಬಿಕೆಲು'. ಈ ಭೂಮಿ ; ವಾಸಕ್ಕೆ , ಕಾಯಕಕ್ಕೆ , ಹುಟ್ಟಿನಿಂದ ಮರಣ ಪರ್ಯಂತದ ಕರ್ಮಗಳಿಗೆ ವೇದಿಕೆ . ಜೀವನಾಧಾರವಾದ ಅನ್ನವನ್ನು ಪಡೆಯಲು ಭೂಮಿ ಸಮೃದ್ಧಿಯ ನೆಲೆ . ಇಂತಹ ಹತ್ತಾರು ಅನುಸಂಧಾನಗಳೊಂದಿಗೆ ಭೂಮಿಯನ್ನು ಒಪ್ಪಿರುವ ಮಾನವ ಭೂಮಿ ಸಸ್ಯ ಶ್ಯಾಮಲೆಯಾಗಿರಬೇಕು‌ ,ಅದಕ್ಕೆ ಕಾಲಕ್ಕೆ ಸರಿಯಾಗಿ ಮಳೆಬರಬೇಕು‌. ಅದರಿಂದ ಕ್ಷೋಭೆಗಳಿಲ್ಲದ ದೇಶ ,ಸಜ್ಜನರು ನಿರ್ಭಯದಿಂದ ಬದುಕುವಂತಹ ಸ್ಥಿತಿ ಸ್ಥಾಯಿಯಾಗ ಬೇಕು ಎಂಬುದೆ ಸಮಸ್ತರ ಪ್ರಾರ್ಥನೆಯಾಗುವುದು ಅರ್ಥಪೂರ್ಣ .

"ಭೂಮಿ - ಮಳೆ - ಕಾಯಕ - ಬೆಳೆ" ಇವು ಶತಮಾನ ಶತಮಾನಗಳ‌ ಅನುಬಂಧ . ಇಲ್ಲಿ ಪ್ರಾಪ್ತಿಯಾಗುವ ಸಮೃದ್ಧಿಯಿಂದ ದೇಶ ಕಟ್ಟಬಹುದು , ನೂತನ ,ಅತಿನೂತನ ಯುಗದಲ್ಲಿ ಪ್ರಸ್ತುತವಾಗಿ ಬದುಕಬಹುದು . ಅನ್ನ ಇಲ್ಲದೆ ಜೀವವಿಲ್ಲ , ಜೀವನವೂ ಇಲ್ಲ . ಭೂಮಿ ಇರುತ್ತದೆ , ಮಳೆ ಬರುತ್ತದೆ , ಆದರೆ ಕಾಯಕ ಬೇಕು ; ಆಗ ಬೆಳೆ - ಫಲ ಸಿದ್ಧಿ‌. ಇದೇ ನಮ್ಮ ಆಧಾರ - ಸಿದ್ಧಾಂತ . ಇದರಿಂದಲೇ ಮತ್ತೆಲ್ಲ ಅಭಿವೃದ್ಧಿ .ಲೋಕಕ್ಕೆ ಸುಭಿಕ್ಷೆ . ಕೃಷಿ ಇದ್ದಲ್ಲಿ ದುರ್ಭಿಕ್ಷೆ ಇಲ್ಲ ; ಹೌದಲ್ಲ. ಮಳೆ ಬರುತ್ತಿದೆ ಕೃಷಿ ಕಾಯಕ ಆರಂಭವಾಗಿದೆ .ಆದರೆ ಪ್ರಮಾಣ ಏಕೆ ಕುಸಿದಿದೆ . ಕೃಷಿ ಭೂಮಿ ಹಡೀಲು ಬಿದ್ದಿವೆ . ಮಣ್ಣು ,ಮಳೆ ಎರಡೂ ಇವೆ ಆದರೆ ಕೃಷಿಕಾಯಕವಿಲ್ಲ . ಮುನಿಯಲಿಕ್ಕಿಲ್ಲವೇ ನಿಸರ್ಗ ಎಂಬ ದಿನಗಳಿದ್ದುವು , ಆದರೆ ಈ ಮಳೆಗಾಲ ಬಹುತೇಕ ಸಮೃದ್ಧ ಗದ್ದೆಗಳು ಸಾಗುವಳಿಯ ಭಾಗ್ಯವನ್ನು ಪಡೆದಿವೆ . ಹಲವು ವರ್ಷಗಳಿಂದ ಹಡೀಲು ( ಪಡೀಲ್ ) ಬಿದ್ದಿದ್ದನ್ನು ಗಮನಿಸಿ ಕೃಷಿ ಕೃಶವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ವರ್ಷ ಅಂತಹ ಗೊಂದಲ ಸ್ವಲ್ಪಮಟ್ಟಿಗೆ ಪರಿಹಾರವಾದಂತೆ ಅನ್ನಿಸುತ್ತಿದೆ .. ನಮಗೆ ಸೌಭಾಗ್ಯವನ್ನು ಕೊಡಬಲ್ಲ ಭೂಮಿ ಮತ್ತು ಸುರಿಯುವ ಮಳೆ ,ಇವೇ ತಾನೆ "ನಿಸರ್ಗ"ಅಲ್ಲವೆ?

ಉಳುವವ ಹೊಲದೊಡೆಯನಾದ ಉಳುವವ ಹೊಲದೊಡೆಯನಾದ , ಆದರೆ ನಿರೀಕ್ಷೆಯಷ್ಟು ಫಲಕೊಡಲಿಲ್ಲ ಕಾಯಿದೆ . ಹಿಂದಿನ ಭೂಸುಧಾರಣಾ ಕಾಯಿದೆಯ ಪರಿಣಾಮ ಕಾಣಲು ನೀವೊಮ್ಮೆ ಉಡುಪಿ - ದಕ್ಷಿಣಕನ್ನಡ ಜಿಲ್ಲೆಗೆ ಬನ್ನಿ . ಕಾಯಿದೆ ಮೂಲಕ ಅಧಿಭೋಗದ ಹಕ್ಕು ದೊರೆತ ಕೃಷಿ ಭೂಮಿಗಳು: ‌‌• ಹಡೀಲು (ಕೃಷಿ ನಡಯದೆ ಬಂಜರು) ಬಿದ್ದಿವೆ. • ಹೆಚ್ಚಿನ ಭೂಮಿಗಳು ಮಾರಾಟವಾಗಿವೆ . • ರಸ್ತೆ ಬದಿಯಲ್ಲಿರುವ ಗದ್ದೆಗಳಿಗೆ ಮಣ್ಣು ತುಂಬಿಸಿ ಕಟ್ಟಡ ಕಟ್ಟಲಾಗುತ್ತಿದೆ . • ಮೂರು ಬೆಳೆ ಬೆಳೆಯ ಬಲ್ಲ ಫಲವತ್ತಾದ ಗದ್ದೆಗಳು .ನೀರಿನ ಸಹಜ ಸೌಲಭ್ಯವಿರುವ ಗದ್ದೆಗಳ ಸ್ಥಿತಿ ಒಮ್ಮೆ ನೋಡಿ .ಹುಲ್ಲು ,ಕಳೆಗಿಡ ,ಮುಟ್ಟಿದರೆ ಮುನಿಯಂತಹ ಮುಳ್ಳು ಬೆಳೆದು ನಿಂತಿವೆ . • ಗ್ತಾಮಾಂತರಗಳಲ್ಲಿ ಬಯಲಿನ ನಡುವೆ ಅಥವಾ ಬದಿಯಲ್ಲಿ ಸಣ್ಣ ತೊರೆಗಳು , ನದಿಗಳು , ದೊಡ್ಡ ನದಿಗಳ ಉಪತೊರೆಗಳು ಹರಿಯುತ್ತಿರುತ್ತವೆ . ಈ ನದಿಗಳಿಗೆ - ತೊರೆಗಳಿಗೆ ಅಡ್ಡ 'ಕಟ್ಟ' ಕಟ್ಟಿ ಇದರಿಂದ ಹರಿಯುವ ನೀರಿನಿಂದ ಎರಡನೇಯ ಬೆಳೆಯನ್ನು ಸುಲಭವಾಗಿ ಮಾಡುತ್ತಿದ್ದರು ನಮ್ಮ ಹಿರಿಯರು. ಇದರಿಂದ ಪರಿಸರದ ಬಾವಿಗಳಲ್ಲಿ ಬೇಸಗೆಯ ಕಾಲಕ್ಕೆ ನೀರಿನ ಬರವೇ ಇರುತ್ತಿರಲಿಲ್ಲ .ಆರೀತಿಯಲ್ಲಿ ಸಹಜವಾಗಿ ಪರಿಸರದಲ್ಲಿ ಅಂತರ್ಜಲ‌ ವೃದ್ಧಿಯಾಗುತ್ತಿತ್ತು. ರೈತ ಕಷ್ಟಪಟ್ಟು ಪ್ರತಿವರ್ಷ ತೊರೆಗಳಲ್ಲಿ ಹರಿಯುತ್ತಿದ್ದ ನೀರಿಗೆ ಅಡ್ಡನೆ ಕಟ್ಡವನ್ನು‌ ಕಟ್ಟುತ್ತಿದ್ದು ಆ ನೀರಿನ ಫಲಾನುಭವಿಗಳೆಲ್ಲ ಸೇರಲೇ ಬೇಕಿತ್ತು . ಬೇಸಾಯದ ಸಹಕಾರ - ಸೌಹಾರ್ದ ಪದ್ಧತಿಯಂತೆ ಈ‌ ಕಾಯಕ ನಡೆಯುತ್ತಿತ್ತು . ಕೆಲವು ಕಟ್ಟಗಳು ಊರಿನ ದೇವರ ಹೆಸರಿನಲ್ಲಿ - ಬೂತಗಳ ಹೆಸರಿನಲ್ಲಿರುತ್ತಿದ್ದುವು . ಕಟ್ಟ ದೃಢವಾಗಿ ನಿಲ್ಲಲು ಊರ ದೈವ - ದೇವರಿಗೆ ಮಾಮೂಲು ಹರಕೆಗಳನ್ಮು ಹೇಳಲಾಗುತ್ತಿತ್ತು . ಬಳಿಕ ನಿರ್ದಿಷ್ಟ ದಿನದಂದು ಹರಕೆ ಸಲ್ಲಿಸಲಾಗುತ್ತಿತ್ತು ( ಪಡುಬಿದ್ರಿಯ ಕಟ್ಟದಪ್ಪ , ಬೇರೆ ಊರುಗಳಲ್ಲಿ ದೇವರಿಗೆ , ದೈವಗಳಿಗೆ ಹೂವಿನಪೂಜೆ ಮುಂತಾದ ಹರಕೆ ಸಮರ್ಪಿಸಲಾಗುತ್ತಿತ್ತು) . ಆದರೆ ಸರಕಾರದ ಕಿರುನೀರಾವರಿ ಯೋಜನೆಯ ವತಿಯಲ್ಲಿ ಸಣ್ಣ ಅಣೆಕಟ್ಡು(ಕಿಂಡಿ ಅಣೆಕಟ್ಟು)ಗಳನ್ನು ಕಟ್ಟುತ್ತಾರೆ , ಇದಕ್ಕೆ ಹಲಗೆ ಹಾಕಿದರೆ ಅಣೆಕಟ್ಟು ಅಥವಾ 'ಕಟ್ಟ' ಸಿದ್ಧ. ಹರಿದು ಹೋಗುವ ನೀರಿಗೆ ತಡೆಯಾಗಿ ನೀರು ಶೇಖರಣೆಯಾಗುತ್ತದೆ . ಈ ನೀರನ್ನು ಗದ್ದೆಯಿಂದ ಗದ್ದೆಗೆ ಹಾಯಿಸಿ ಬೆಳೆ ಬೆಳೆಯ ಬಹುದು ,ಆದರೆ ಈಗ ಸರಕಾರವು ಗ್ರಾಮಪಂಚಾಯತ್ ಮೂಲಕ ಒದಗಿಸಿದ ಅಣೆಕಟ್ಟುಗಳು ಬಹುತೇಕ ಉಪಯೋಗವಾಗುವುದೇ ಇಲ್ಲ .ಅಲ್ಲೊಂದು ಇಲ್ಲೊಂದು ಒಂದಷ್ಟು ಗದ್ದೆಗಳಿಗೆ ಉಪಯೋಗವಾಗತ್ತಿರಬಹುದು .‌ ಇದು ನಾವು ಕೃಷಿಭೂಮಿಗಳಲ್ಲಿ ಬೆಳೆಬೆಳೆಯುವ ವಿಧಾನ . ಅಂದರೆ ಒಂದು ವಿಶಾಲವಾದ ಬಯಲಿನಲ್ಲಿ ಅಲ್ಲಲ್ಲಿ ನಾಲ್ಕೈದು ಗದ್ದೆಗಳು ನಾಟಿಯಾಗಿ , ಉಳಿದವುಗಳು ಹುಲ್ಲು ,ಕಳೆಗಿಡಗಳಿಂದ ತುಂಬಿರುವುದನ್ನು ಕಾಣುತ್ತೇವೆ . ಇದು ಭೂಸುಧಾರಣಾ ಕಾಯಿದೆಯ ಫಲಶ್ರುತಿ . ಯಾವುದೋ ಒಂದು ಕ್ಷೇತ್ರಕಾರ್ಯ ನಿಮಿತ್ತ ಬಯಲಿನ ನಡುವೆ ಹುಣಿಯಲ್ಲಿ ನಡೆದು ಹೋಗುವ ಸಂದರ್ಭ ಬಂತು .ಆಗ ನಾನು ಗಮನಿಸಿದ್ದು ಗದ್ದೆಗಳಲ್ಲಿ ನೀರು ತುಂಬಿದೆ ,ಆದರೆ ಬೆಳೆ ಬೆಳೆದಿಲ್ಲ . ಯಾಕೆಂದು ಕೇಳಿದಾಗ ಅಣೆಕಟ್ಟು ಕಾರಣವಾಗಿ ಗದ್ದೆಗಳಿಗೆ ನೀರು ಹರಿಯುತ್ತದೆ , ಆದರೆ ಬೆಳೆ ಬೆಳೆಯುವವರಿಲ್ಲ . ಮತ್ತೊಂದು ಊರಿನಲ್ಲಿ ನೀರಿನ ಸೌಲಭ್ಯವಿದ್ದೂ ಬೆಳೆಬೆಳೆದಿಲ್ಲ ಏಕೆ ಎಂಬ ಪ್ರಶ್ನೆ ಕೇಳುತ್ತಾರೆ ಎಂದೇ ಆ ಊರಿನಲ್ಲಿ ಸಕಾಲದಲ್ಲಿ ಅಣೆಕಟ್ಟಿಗೆ ಹಲಗೆ ಹಾಕುವುದೇ ಇಲ್ಲ . ಹಲಗೆ ಹಾಕಿದರೆ ತಾನೆ ನೀರು ಹರಿದು ಗದ್ದೆಗೆ ಬರುವುದು . ನೀರು ತೊರೆಯಲ್ಲಿಯೇ ಸರಾಗವಾಗಿ ಹರಿದು ಹೋದರೆ ಯಾರು ಕೇಳುತ್ತಾರೆ ? ಅಂದರೆ ಕೃಷಿ - ಬೇಸಾಯ ಅಷ್ಟು ಅವಗಣಿಸಲ್ಪಟ್ಟಿದೆ . ಆದರೆ ಬಹಳ ಶ್ರದ್ಧೆಯಿಂದ ಕೃಷಿಕಾಯಕದಲ್ಲಿ ತೊಡಗುವವರಿದ್ದಾರೆ , ಅವರ ಸಂಖ್ಯೆ ವಿರಳ .ಕೃಷಿ ಲಾಭದಾಯಕವಲ್ಲ ,ಅವಿಭಕ್ತ ಕುಟುಂಬ ವಿಭಕ್ತ ಕುಟುಂಬಗಳಾಗಿವೆ . ಕಾರ್ಮಿಕರಲ್ಲ . ಒಪ್ಪ ಬಹುದು ಆದರೆ ಹಡೀಲು ಭೂಮಿಗೆ ಉತ್ತರವಿಲ್ಲ‌,ಕಾಯಿದೆಗೆ ಅರ್ಥವಿಲ್ಲದಾಗಿದೆ .ಇವತ್ತಿಗೂ ಬೆಳೆ ಬೆಳೆಯುವುದು ಪ್ರತಿಷ್ಠೆ ಎಂದು ಗೌರವದಿಂದ ಬೆಳೆ ಬೆಳೆಯುವವರಿದ್ದಾರೆ ,ಅವರು ಕೃಷಿ ಕಾಯಕವನ್ನು ನಿಲ್ಲಿಸಲೇ ಇಲ್ಲ . • ಕಾಯಿದೆಯ ಮೂಲಕ ದೊರೆತ ಕೃಷಿ ಭೂಮಿಗಳ ಮಾರಾಟ ಈಗಾಗಲೇ ಆರಂಭವಾಗಿ ವರ್ಷ ಕೆಲವು ಕಳೆಯಿತು . ಭೂಸುಧಾರಣಾ ಕಾಯಿದೆಯಂತೆ ಡಿಕ್ಲರೇಶನ್ ಕೊಟ್ಟು ಟ್ರಿಬ್ಯೂನಲ್ ಗಳಲ್ಲಿ ಅಧಿಭೋಗದ ಹಕ್ಕನ್ನು ಕೊಡುವಾಗ ಕುಟುಂಬದ ಪರವಾಗಿ ಎಂದು ತೀರ್ಪು ನೀಡಿರುವ ಭೂಮಿಗಳು ಮಾರಾಟಕ್ಕೆ ಕಷ್ಟವಾಗುತ್ತದೆ . ಆದರೆ ಒಬ್ಬ ವ್ಯಕ್ತಿಯ ಹೆಸರಲ್ಲಿ ತೀರ್ಪು ಇದ್ದಾಗ ಭೂಮಿ ಮಾರಾಟ ಸುಲಭ . ಒಟ್ಟಿನಲ್ಲಿ ಶೇ.ನೂರಕ್ಕೆ ನೂರು ಭೂಸುಧಾರಣಾ ಕಾನೂನು ರೈತನಿಗೆ ಮತ್ತು ಕೃಷಿಗೆ ಪೂರಕವಾಗಲೇ ಇಲ್ಲ . ಒಮ್ಮೆ ಉಡುಪಿಯಿಂದ ಮಂಗಳೂರಿಗೆ ಹೆದ್ದಾರಿಗುಂಟ ಸಾಗಿದರೆ ದೇವರಾಜ ಅರಸರ ಕನಸು "ಉಳುವವನೆ ಹೊಲದೊಡೆಯ" ಹೇಗೆ ನನಸಾಗಿದೆ ಎಷ್ಟು ಕೃಷಿ ಭೂಮಿ ಹಡೀಲು ಬಿದ್ದಿವೆ , ಎಷ್ಟು ಫಲವತ್ತಾದ ಗದ್ದೆಗಳು ಅನ್ಯ ಕಾರ್ಯ ನಿಮಿತ್ತ ಬಳಕೆಯಾಗುತ್ತಿವೆ ಎಂದು ತಿಳಿಯುತ್ತದೆ . ಉಭಯ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕವಿರುವಲ್ಲಿ ಸಂಚರಿಸಿ ,ಕೃಷಿ ಭೂಮಿ ಹೇಗೆ ಪರಿವರ್ತನೆಯಾಗಿದೆ ಎಂದು ಮನಗಾಣ ಬಹುದು . ‌‌‌‌ ‌ "ಈ ರೀತಿ ಕೃಷಿ ಅವಗಣಿಸಲ್ಪಡ ಬೇಕಿದ್ದರೆ ಕಾರಣ ಕೃಷಿ ಲಾಭದಾಯಕವಾಗಿಲ್ಲ , ಕಾರ್ಮಿಕರ ಸಮಸ್ಯೆ ಮುಂತಾದ ಸಾರ್ವತ್ರಿಕ ,‌‌ ಸಿದ್ಧ ಉತ್ತರಗಳಿವೆ " ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಬದಲಾಗಿದೆ ಕೃಷಿ ಕಾಯಕ ಹೆಚ್ಚಿದಂತೆ ಕಾಣುತ್ತದೆ .ಫಲವತ್ತಾದ ಗದ್ದೆಗಳಲ್ಲಿ ಉಳುವ ಯಂತ್ರಗಳು ಓಡಾಡುತ್ತಿವೆ. ಹಲವು ವರ್ಷಗಳ ಬಳಿಕ‌ ಪೂರ್ಣ ಪ್ರಮಾಣದಲ್ಲಿ ಬೇಸಾಯ ಆರಂಭವಾಗಿದೆ . ಈ ಪ್ರಮಾಣ ಇನ್ನೂ ಹೆಚ್ಚಾಗಲಿ. ಮತ್ತೆ ಮಣ್ಣು ಆಕರ್ಷಿಸಲಿ . "ಪೃಥ್ವೀ ಗಂಧವತೀ" ತಾನೆ ? ಈ ಗಂಧ ಮಣ್ಣಿನ ಮಕ್ಕಳನ್ನು ಆಕರ್ಷಿಸಲಿ . ಇನ್ನೇನು ಎರಡು ತಿಂಗಳಲ್ಲಿ "ಬೆಳೆ" ಎಂಬ 'ಭಾಗ್ಯ - ಸಮೃದ್ಧಿ' ಮನೆಯಂಗಳಕ್ಕೆ ಬರುತ್ತದೆ , ಮನೆಯ ಚಾವಡಿಯಲ್ಲಿ ರಾಶಿಯಾಗಲಿದೆ .ಆಗ ನೋಡಿ ರೈತನ ಧನ್ಯತೆಯ ಸಂಭ್ರಮವನ್ನು. ಬರಹ : ಕೆ .ಎಲ್. ಕುಂಡಂತಾಯ

ತಿಂಗಳು ಕಳೆದರು ಉಡುಪಿ ಜಿಲ್ಲಾ ದೈವಾರಾಧಕರ ಮನವಿಗೆ ಶಾಸಕರ ಪ್ರತಿಕ್ರಿಯೆಯಿಲ್ಲ

Posted On: 27-08-2020 02:43PM

ತುಳುನಾಡ ಧೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಇಂದು ಮಾಜಿ ಉಸ್ತುವಾರಿ ಸಚಿವರು ಹಾಗೂ ಮಾಜಿ ಶಾಸಕರಾದಂತಹ ಪ್ರಮೋದ್ ಮಧ್ವರಾಜ್ ಅವರಿಗೆ ಅವರ ನಿವಾಸದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮನವಿಯನ್ನು ಕೊಡಲಾಯಿತು.

ಕೋರನ ತುರ್ತು ಸಂದರ್ಭದಲ್ಲಿ ಸರ್ಕಾರದಿಂದ ದೈವ ಚಾಕ್ರಿ ವರ್ಗದವರಿಗೆ ಯಾವುದೇ ವಿಶೇಷ ಪ್ಯಾಕೇಜನ್ನು ಬಿಡುಗಡೆ ಮಾಡಲಿಲ್ಲ. ಹಾಗೂ ತಕ್ಕಮಟ್ಟಿಗೆ ಕರಾವಳಿಯಲ್ಲಿ ನಡೆಯುವ 150 ಜನ ಸೀಮಿತಕ್ಕೆ ದೈವಾರಾಧನೆಗೆ ಸರ್ಕಾರದಿಂದ ಅನುಮತಿ ಬರಲಿಲ್ಲ. ಉಡುಪಿ ಜಿಲ್ಲಾಧಿಕಾರಿಯವರಿಗೆ ಹಾಗೂ ಎಷ್ಟೇ ರಾಜಕೀಯ ವ್ಯಕ್ತಿಗಳಿಗೆ ಮನವಿ ನೀಡಿದರೂ ಕೂಡ ಸ್ಪಂದನೆ ದೊರಕದಿರುವುದರಿಂದ ಪ್ರಮೋದ್ ಮದ್ವರಾಜ್ ಮುಖಾಂತರ ವಿರೋಧ ಪಕ್ಷದ ವತಿಯಿಂದ ದೈವಾರಾಧಕರ ಸಮಸ್ಯೆಗಳನ್ನು ಮನವರಿಕೆ ಮಾಡಿ ಎಂದು ಮನವಿಯಲ್ಲಿ ಒಕ್ಕೂಟದ ಪರವಾಗಿ ವಿನಂತಿಸಿಕೊಂಡಿದ್ದಾರೆ.

ಮನವಿಯನ್ನು ಪಡೆದುಕೊಂಡ ಮಾಜಿ ಶಾಸಕರು ಪ್ರಮೋದ್ ಮಧ್ವರಾಜ್ ದೈವಾರಾಧಕರ ಸಮಸ್ಯೆಯನ್ನು ಈ ದಿನ ಮುಖ್ಯಮಂತ್ರಿ ಹಾಗೂ ಇದಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಮಾತಾಡುತ್ತೇನೆ. ಯಾವುದೇ ಸಮಸ್ಯೆಗೆ ನಿಮ್ಮೊಂದಿಗೆ ಬೆಂಬಲವಾಗಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಧಿಕಾರಿ ಶ್ರೀಧರ್ ಪೂಜಾರಿ, ಉಪಾಧ್ಯಕ್ಷರಾದ ರವಿ ಶೆಟ್ಟಿ, ಯೋಗೀಶ್ ಪೂಜಾರಿ, ಕಾಪು ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ ಹಾಗೂ ದಯೆಶಾ ಕೊಟ್ಯಾನ್, ಸುನಿಲ್ ಕುಮಾರ್, ಸಂತೋಷ್ ದೇವಾಡಿಗ, ನಿತ್ಯಾನಂದ, ಸೂರ್ಯಕಾಂತ್ ದೇವಾಡಿಗ ಮತ್ತು ರಕ್ಷಿತ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪಿತ್ರೋಡಿ,ಜಾರುಕುದ್ರು ಸೇತುವೆ ಪೂರ್ಣಗೊಳಿಸದಿದ್ದಲ್ಲಿ ಧರಣಿ ಮಾಜಿ ಸಚಿವ ಸೊರಕೆ ಎಚ್ಚರಿಕೆ

Posted On: 27-08-2020 01:56PM

ಕಟಪಾಡಿ: ಜಾರುಕುದ್ರು ಸಂಪರ್ಕ ಸೇತುವೆ ಕಾಮಗಾರಿ ಪೂರೈಸಿ ಅಕ್ಟೋಬರ್ ಒಳಗಾಗಿ ಜನರ ಉಪಯೋಗಕ್ಕೆ ಲಭ್ಯವಾಗದಲ್ಲಿ ಧರಣಿ ನಡೆಸುವ ಎಚ್ಚರಿಕೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೀಡಿರುತ್ತಾರೆ.
ಅವರು ಆ.26ರಂದು ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಮಾರು 7 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಾರುಕುದ್ರು ಸೇತುವೆಯ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಕಳೆದ 3 ವರ್ಷಗಳ ಹಿಂದೆ ತಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರುಗೊಳಿಸಿರುವ ಈ ಸೇತುವೆಯ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ವೇಗವನ್ನು ಹೆಚ್ಚಿಸಿ ಶೀಘ್ರದಲ್ಲಿ ಜನೋಪಯೋಗಕ್ಕೆ ಒದಗಿಸಬೇಕೆಂದು ಒತ್ತಾಯಿಸಿದ್ದು, ಇಲ್ಲವಾದಲ್ಲಿ ಇಲ್ಲಿನ ಸಮಸ್ಯೆಯ ಬಗ್ಗೆ ಸರಕಾರದ ಗಮನಕ್ಕೆ ತರಲು ಸರಕಾರಿ ಕಚೇರಿಯ ಮುಂದೆ ಧರಣಿ ನಡೆಸುವ ಮೂಲಕ ಸರಕಾರಕ್ಕೆ ಒತ್ತಡ ಹಾಕಲು ಸಿದ್ಧ ಎಂದರು.
ಕಾಪು ಕ್ಷೇತ್ರದ ವಿವಿಧೆಡೆ ಒಟ್ಟು 7 ಸಂಪರ್ಕ ಸೇತುವೆ ಕಾಮಗಾರಿಗಳನ್ನು ಶಾಸಕತ್ವದ ಅವಧಿಯಲ್ಲಿ ಮಂಜೂರುಗೊಳಿಸಲಾಗಿದ್ದು, ಭೇಟಿ ನೀಡಿ ವೀಕ್ಷಿಸಲಾಗುತ್ತದೆ. ಈ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಲ್ಲಿ ಈ ಭಾಗಗಳ ಜನರ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮದಲ್ಲೂ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ಸೇತುವೆಯನ್ನು ಮಂಜೂರು ಗೊಳಿಸಿದ್ದಕ್ಕಾಗಿ ಸ್ಥಳೀಯ ಜಾರುಕುದ್ರು ನಿವಾಸಿಗಳು ಮಾಜಿ ಸಚಿವ ವಿನಯ ಕುಮಾರ್ ಸೊರಕೆಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಮಾಜಿ ತಾ.ಪಂ. ಸದಸ್ಯ, ಉದ್ಯಾವರ ಗಿರೀಶ್ ಕುಮಾರ್, ಉದ್ಯಾವರ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಚಂದ್ರಾವತಿ ಎಸ್ ಭಂಡಾರಿ, ಸರಳಾ ಎಸ್ ಕೋಟ್ಯಾನ್, ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಮಾಜಿ ಗ್ರಾ.ಪಂ ಸದಸ್ಯರುಗಳಾದ ಲಾರೆನ್ಸ್ ಡೇಸಾ, ರಾಜೀವಿ, ಲಕ್ಷ್ಮಣ್ ಸನಿಲ್, ಗ್ಲಾಡಿಸ್ ಮೆಂಡೋನ್ಸಾ, ಪ್ರಮುಖರಾದ ಉದ್ಯಾವರ ನಾಗೇಶ್ ಕುಮಾರ್, ಅಬಿದ್ ಆಲಿ, ಗಿರೀಶ್ ಗುಡ್ಡೆಯಂಗಡಿ, ಶೇಖರ್ ಕೋಟ್ಯಾನ್, ಶ್ರೀಧರ್ ಕಲಾೈ, ರಾಯ್ಸ್ ಫೆರ್ನಾಂಡೀಸ್, ಅಶೋಕ್ ನಾೈರಿ, ನಾಗೇಶ್ ಕಾಪು, ಇಲಾಖೆಯ ಎ.ಡಬ್ಲೂ ್ಯ .ಇ. ಚೆನ್ನಪ್ಪ ಮೊಯ್ಲಿ, ಸಹಾಯಕ ಎಂಜಿನಿಯರ್ ತ್ರಿನೇಶ್, ಜಾರುಕುದ್ರು ನಿವಾಸಿಗಳು, ಮತ್ತಿತರರು ಉಪಸ್ಥಿತರಿದ್ದರು.