Updated News From Kaup

ಆನ್ ಲೈನ್‌ ಜೂಜಿಗೆ ತೀಲಾಂಜಲಿ ಹಾಕಬೇಕಾಗಿದೆ

Posted On: 18-08-2020 08:51AM

ದಿನ ಬೆಳಗಾದರೆ ಸಾಕು ಮೊಬೈಲ್ನಲ್ಲಿ ಸಾಮಾಜಿಕ ಜಾಲತಾಣ ನೋಡಿದಾಗ ನಮಗೆ ನೋಡಲು ಸಿಗುವುದು ರಮ್ಮಿ ಆಡಿ ಕ್ಯಾಶ್ ಗೆಲ್ಲಿ ಇಂತಹ ಹಾದಿ ತಪ್ಪಿಸುವಂತಹ ಮೆಸೇಜ್ ಗಳು ಮತ್ತು ಜಾಹೀರಾತುಗಳು,ಇದನ್ನು ನೋಡಿದವರು ತಪ್ಪಿಯೂ ಹಣ ಕೊಟ್ಟು ಆಡಿದರೆ ನಿಮ್ಮ ಕಥೆ ಮುಗಿಯಿತು ಕಾರಣ ಈ ಜೂಜು ನಿಮ್ಮ ಮನೆಹಾಳು ಮಾಡುವುದು ಖಂಡಿತ.ಈ ರಮ್ಮಿ ರೀತಿಯ ಆನ್ ಲೈನ್ ಗೇಮ್ಸ್ ಗಳು ಇಂದು ದೇಶದೆಲ್ಲೆಡೆ ವ್ಯಾಪಕವಾಗಿ ಹರಡಿದೆ,ಇದರಿಂದ ಬಹಳಷ್ಟು ಜನರು ಸಂಕಷ್ಟ ಅನುಭವಿಸಿದ್ದಾರೆ. ಅನೇಕರು ತಾವು ಉಳಿತಾಯ ಮಾಡಿದ ಹಣವನ್ನು ಕಳೆದುಕೊಂಡು, ಈ ಜೂಜು ಆಡಲು ಬೇರೆಯವರ ಬಳಿ ಸಾಲ ಮಾಡಿಕೊಂಡು ಆ ಸಾಲ ತೀರಿಸಲು ಸಾಧ್ಯವಾಗದೆ ಕೊನೆಗೆ ನೇಣಿಗೆ ಶರಣಾಗುತ್ತಿದ್ದಾರೆ.ಅದೇ ರೀತಿ ಅನೇಕ ಮಂದಿ ತಮ್ಮ ಮನೆ, ಆಸ್ತಿ-ಪಾಸ್ತಿ ಮಾರುತ್ತಿರುವುದು ನಮಗೆ ಕಾಣಸಿಗುತ್ತದೆ. ಅಂದಾಜು ಸುಮಾರು 2 ಸಾವಿರಕ್ಕೂ ಅಧಿಕ ವೆಬ್ಸೈಟ್ಗಳು ಭಾರತದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ಪ್ರೋತ್ಸಾಹ ನೀಡುತ್ತಿವೆ. ಈ ರೀತಿಯ ಜೂಜು ಆಡಲು ಜಾಹೀರಾತು ನೀಡುವ ವವರು ಪ್ರಖ್ಯಾತ ಚಲನಚಿತ್ರ ನಟರು ಅದೇ ರೀತಿ ಕ್ರಿಕೇಟ್ ಆಟಗಾರರಾಗಿರುವುದು ದುರಂತದ ವಿಷಯ. ಈ ರೀತಿಯ ಜೂಜು ಯುವ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಈ ಘಟನೆಯೇ ಸಾಕ್ಷಿಯಾಗಿದೆ. ಚೈನ್ನೈ ನಗರದಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಒನ್ಲೈನ್ ಜೂಜಿನ ಮಾಯಾಜಾಲಕ್ಕೆ ಬಿದ್ದು,ಯಾರೋ ಕಸ್ಟಮರ್ ಕೊಟ್ಟಿದ್ದ ಬಂಗಾರವನ್ನು ಬೇರೆ ಅಂಗಡಿಯಲ್ಲಿ ಮಾರಿ ಅದನ್ನು ಒನ್ಲೈನ್ ಜೂಜಿಗೆ ಕಟ್ಟಿ ಅದರಲ್ಲಿ ತನ್ನೆಲ್ಲಾ ಹಣವನ್ನು ಕಳೆದುಕೊಂಡು ಕೊನೆಗೆ ಸಮಾಜದದಲ್ಲಿ ಮಯಾ೯ದೆಗೆ ಹೆದರಿ ರೈಲಿಗೆ ತಲೆ ಕೊಟ್ಟು ತನ್ನ ಜೀವನ ತ್ಯಜಿಸಿರುತ್ತಾನೆ. ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅನೇಕರು ಆನ್ಲೈನ್ ಜೂಜಿಗೆ ಸಿಲುಕಿ ನೇಣು ಬಿಗಿದುಕೊಂಡವರ ಕಥೆಯನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ಈ ಜೂಜಿನ ವಿಷಯದ ಕುರಿತು ಇದರ ಆಳಕ್ಕೆ ಹೋದರೆ ಅನೇಕ ರೀತಿಯ ದಂತ ಕಥೆಗಳನ್ನು ನಾವು ನೋಡಬಹುದು. ಈ ಜೂಜಿಗೆ ಇನ್ನೆಷ್ಟು ಯುವಕರು ಬಲಿ ತೆಗೆದುಕೊಳ್ಳಬೇಕೋ ತಿಳಿಯದು. ನಾವು ನಮ್ಮ ಮಕ್ಕಳಿಗೆ ಮೊಬೈಲ್ ಕೊಡುವಾಗ ಎಷ್ಟು ಎಚ್ಚರವಹಿಸಬೇಕಾಗಿದೆ.,ಆಗಾಗ ಮಕ್ಕಳ ಮೊಬೈಲ್ ಅನ್ನು ನೋಡುತ್ತಾ ಇರಬೇಕಾದ ಪರಿಸ್ಥಿತಿ ಇದೆ.ಈಗ ಎಲ್ಲ ಕಡೆ ಆನ್ ಲೈನ್ ತರಗತಿ ನಡೆಯುವ ಸಂದಭ೯ದಲ್ಲಿ ಮಕ್ಕಳು ಈ ರೀತಿಯ ಅನ್ ಲೈನ್ ಜೂಜಿನ ಖೆಡ್ಡಕ್ಕೆ ಬೀಳುವ ಸಂದಭ೯ವಿದೆ ಹೀಗಾಗಿ ಪೋಷಕರು ಈ ಬಗ್ಗೆ ಗಮನ ಹರಿಸಬೇಕಾದ ಸ್ಥಿತಿಯಿದೆ.

ಈ ಒನ್ಲೈನ್ ಗ್ಯಾಬ್ಲಿಂಗ್ ಎನ್ನುವುದು ವಯಸ್ಕರು, ಮುಖ್ಯವಾಗಿ ಯುವ ಜನಾಂಗ ಮತ್ತು ಓದುತ್ತಿರುವ ಮಕ್ಕಳಲ್ಲಿ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದೆ, ಇದರಿಂದ ಅನೇಕ ಮಕ್ಕಳು ಯುವಕರು ಹಣದ ಆಸೆಗಾಗಿ ಅಡ್ಡ ದಾರಿಯನ್ನು ತುಳಿಯುತ್ತಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಈ ರೀತಿಯ ಒನ್ಲೈನ್ ಗ್ಯಾಂಬ್ಲಿಂಗ್ ದೊಡ್ಡ ಮಾರಕವಾಗಿ ಮಾರ್ಪಾಡಾಗಿದೆ.ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿಯಲ್ಲಿವೆ. ನಮ್ಮ ಅನೇಕ ಮಕ್ಕಳು ಮನೆಯಲ್ಲಿ ಪೋಷಕರ ಜೊತೆಗೆ ಕುಳಿತು ತಮ್ಮ ಸಂತೋಷದ ಸಮಯವನ್ನು ಸವಿಯುವುದನ್ನ ಬಿಟ್ಟು ಮೊಬೈಲ್ ನಲ್ಲಿ ಒನ್ಲೈನ್ ಗ್ಯಾಬ್ಲಿಂಗ್ ಆಡುತ್ತಾ ತಮ್ಮ ಉತ್ತಮ ಸಮಯವನ್ನು ಹಾಳು ಮಾಡುದನ್ನು ನೋಡಿದಾಗ ಮನ ಕರಗುತ್ತದೆ.ಅಪ್ಪ- ಅಮ್ಮಾ ಕಷ್ಟ ಪಟ್ಟು ಕೂಲಿ-ನಾಲಿ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ನೀರಲ್ಲಿ ಹೋಮಮಾಡಿದಂತೆ ಖಚು೯ ಮಾಡುತ್ತಿದ್ದಾರೆ.

ತಮ್ಮ ಪಾಲಕರಿಗೆ ಸಮಾಜದಲ್ಲಿ ಇರುವ ಗೌರವ,ಘನತೆ ಮತ್ತು ಮರ್ಯಾದೆಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ಸಮಾಜಕ್ಕೂ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದಾರೆ. ನಮ್ಮ ಯುವ ಸಮೂಹಕ್ಕೆ ಚಲನಚಿತ್ರದಲ್ಲಿ ಅಥವಾ ಆಟದಲ್ಲಿ ಹೀರೋಗಳಾಗಿರುವವರು ಜನರಿಗೆ ಬುದ್ದಿ ಹೇಳುವುದನ್ನು ಬಿಟ್ಟು,ಸೆಲೆಬ್ರಿಟಿಗಳೇ ಒನ್ಲೈನ್ ಗ್ಯಾಂಬಿಂಗ್ ಗೆ ಪ್ರಚೋದನೆಯನ್ನು ನೀಡುತ್ತಿದ್ದಾರೆ,ಮತ್ತು ಅನೇಕರು ಅಡ್ಡ ದಾರಿಯನ್ನು ತುಳಿಯುವುದಕ್ಕೆ ಇವರುಗಳೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣೀಕರ್ತರಾಗಿದ್ದಾರೆ.

ಸಕಾ೯ರದ ಮಧ್ಯಪ್ರದೇಶ ಬೇಕಾಗಿದೆ: ಸರ್ಕಾರವು ಇದರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ನಮ್ಮ ಹಳ್ಳಿಯಲ್ಲಿ ಕೇಳಿ ಅಂಕ ಅದೇ ರೀತಿ ಎಕ್ಕ ರಾಜ ಆಟ ಆಡಿದರೆ ಪೋಲಿಸರು ನಿದಾ೯ಕ್ಷಿಣ್ಯವಾಗಿ ಕೇಸು ದಾಖಲಿಸಿ ಜೈಲಿಗೆ ಹಾಕುತ್ತಾರೆ. ಆದರೆ ಈ ರೀತಿಯ ಆನ್ ಲೈನ್ ಜೂಜಿಗೆ ಯಾವ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ಸಾವಿರಾರು ವೈಬ್ ಸೈಟ್ ಗಳು ಈ ರೀತಿಯ ಆನ್ ಲೈನ್ ಜೂಜಿನಿಂದ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುತ್ತಿದ್ದಾರೆ. ನಮ್ಮಯುವ ಪೀಳಿಗೆ ಇದಕ್ಕೆ ದಾಸರಾಗಿ ಬಿಟ್ಟಿದ್ದಾರೆ ಮತ್ತು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಸಕಾ೯ರ ಬೇಗನೇ ಈ ಪಿಡುಗಿನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರ ನಿಷೇಧಕ್ಕೆ ಶೀಘ್ರ ಕಾನೂನು ರೂಪಿಸಬೇಕು. ಸರ್ಕಾರ,ಸೆಲೆಬ್ರೆಟಿಗಳು, ಸಂಘ ಸಂಸ್ಥೆಗಳು ಎಲ್ಲರೂ ಕೈಜೋಡಿಸಿ ಒನ್ಲೈನ್ ಗ್ಯಾಂಬ್ಲಿಂಗ್ ಅನ್ನು ಸಮಾಜದಿಂದ ಬೇರು ಸಮೇತ ಕಿತ್ತೆಸೆಯಬೇಕಾಗಿದೆ. ಈ ಆನ್ಲೈನ್ ಗ್ಯಾoಬ್ ಲಿಂಗ್ ಬಗ್ಗೆ ಜನರು ಎಚ್ಚರವಹಿಸಬೇಕು ಹಣದ ಆಸೆಗೆ ಬಲಿಯಾಗಿ ಜೀವನ ಹಾಳು ಮಾಡಬಾರದು. ಈ ರೀತಿಯ ಅನ್ ಲೈನ್ ಗೇಮ್ಸ್ ಪ್ರಾರಂಭಿಸುವ ಮೊದಲು ಜನರನ್ನು ಸೇರಿಸಲು ವಾಟ್ಸ್ ಗ್ರೂಪ್ ರಚಿಸಿ ಗೂಗಲ್ ಪೇ ಮೂಲಕ ಪ್ರಾರಂಭಿಕ ಶುಲ್ಕ ಕಟ್ಟಲು ತಿಳಿಸಲಾಗುತ್ತದೆ ನಂತರ ಆಟ ಪ್ರಾರಂಭವಾದ ಬಳಿಕ ನೇರ ವಾಗಿ ಬ್ಯಾಂಕಿನ ಖಾತೆಯ ಮೂಲಕ ಹಣ ಹೋಗುತ್ತದೆ. ಒಂದು ಬಾರಿ ಆಟಕ್ಕೆ ಹೋದರೆ ಮತ್ತೆ ವಾಪಾಸು ಬರಲು ಕಷ್ಟ ಹೀಗಾಗಿ ತನ್ನ ಜೀವನವನ್ನು ಈ ಆಟದಲ್ಲಿ ಕಳೆದು ಹೋಗುತ್ತಾರೆ. ಈ ರೀತಿಯ ಜೂಜಿನ ಬಗ್ಗೆ ಜನಜಾಗೃತಿ ಮೂಡಿಸಲು ಯುವ ಜನಾಂಗದವರು ಮುಂದೆ ಬರುತ್ತಿರುವುದು ಅಭಿನಂದನೀಯ ವಿಷಯ. ಈಗಾಗಲೇ ಜನಪ್ರತಿನಿಧಿಗಳಿಗೆ ಈ ವಿಷಯ ತಿಳಿದಿದೆ ಎಲ್ಲರೂ ಪಕ್ಷ ಭೇಧ ಮರೆತು ಸಕಾ೯ರದ ಮೇಲೆ ಒತ್ತಡ ತರಬೇಕು. ಒಟ್ಟಾಗಿ ಈ ಆನ್ ಲೈನ್ ಜೂಜಿಗೆ ಪೂಣ೯ ವಿರಾಮ ಹಾಕಬೇಕಾಗಿದೆ. ರಾಘವೇಂದ್ರ ಪ್ರಭು, ಕವಾ೯ಲು, ಯುವ ಲೇಖಕ

ಮೂಕ ಪ್ರಾಣಿಗಳ ನೋವಿಗೆ ಮಿಡಿಯುತ್ತಿರುವ ಕಾಪು ತುಳುನಾಡ ಹಿಂದೂ ಸೇನೆ

Posted On: 17-08-2020 07:20PM

ಕಳೆದ ಸ್ವಲ್ಪ ದಿನಗಳ ಹಿಂದೆಯಷ್ಟೇ ಸ್ಥಾಪನೆಯಾದ ತುಳುನಾಡ ಹಿಂದೂ ಸೇನೆ ಮೂಕ ಪ್ರಾಣಿಗಳ ನೋವಿಗೆ ಮಿಡಿಯುತ್ತಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ..

ಇಂದು ಬೆಳಿಗ್ಗೆ ಕೊಪ್ಪಲಂಗಡಿ ಹೈವೇ ಸಮೀಪ ವಾಹನಕ್ಕೆ ಸಿಲುಕಿ ಗಾಯಾಳುವಾಗಿ ಬಿದ್ದಿದ್ದ ಗಿಡುಗವನ್ನು ತುಳುನಾಡ ಹಿಂದೂ ಸೇನೆಯ ಕಾರ್ಯಕರ್ತರಾದ ಶಿವಾನಂದ ಪೂಜಾರಿ (ಮುನ್ನ) ಪ್ರಶಾಂತ್ ಪೂಜಾರಿ ಕಾಪು, ಜೀವನ್ ಶೆಟ್ಟಿ ಮತ್ತು ಪ್ರಜ್ವಲ್ ಶೆಟ್ಟಿ ಪ್ರಥಮ ಚಿಕಿತ್ಸೆ ನೀಡಿ ಕಾಪು ಉಪವಿಭಾಗ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು

ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಹೋಗುತ್ತಿರುವ ಹಿಂದೂ ಸೇನೆಯ ಕಾರ್ಯಕರ್ತರು

ಕಾಜಾರಗುತ್ತು ಶ್ರೀ ಸಾಯಿ ನೂತನ ಸ್ವಸಹಾಯ ಸಂಘ ಉದ್ಘಾಟನೆ

Posted On: 16-08-2020 10:15PM

ಉಡುಪಿ :- ಶ್ರೀ ಕ್ಷೇ.ಧ.ಗ್ರಾ ಯೋಜನೆ ಉಡುಪಿ ಇದರ ಕಾಜಾರ ಗುತ್ತು ಒಕ್ಕೂಟ ಇದರ ನೂತನ ಸ್ವ.ಸಹಾಯ ಸಂಘದ ಉದ್ಘಾಟನೆ ಆ.16 ರಂದು ನಡೆಯಿತು. ಶ್ರೀ ಸಾಯಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳಿಗೆ ದಾಖಲಾತಿ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಅದ್ಯಕ್ಷ ನಿತೀಶ್ ನಾಯಕ್, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿಗಳಾದ ಶ್ಯಾಮಲ, ಮೀರಾ ನಾಯಕ್ , ಒಕ್ಕೂಟದ ಅಧ್ಯಕ್ಷೆ ಸೌಮ್ಯ, ಶಿವಶಕ್ತಿ ಸಂಘದ ಸದಸ್ಯೆಯರು ಭಾಗವಹಿಸಿದ್ದರು.

ನೀಲಾವರ ಗೋಶಾಲೆಗೆ ಹುಲ್ಲು ನೀಡುವ ಮೂಲಕ ಗೋವಿಗಾಗಿ ಮೇವು ಅಭಿಯಾನ

Posted On: 16-08-2020 08:18PM

ಉಡುಪಿ :- "ಸಕ್ಷಮಾ ಉಡುಪಿ " ಇದರ ವತಿಯಿಂದ ಸ್ಪoದನ ವಿಶೇಷ ಮಕ್ಕಳ ಪ್ರನರ್ವಸತಿ ಕೇಂದ್ರ ಮತ್ತು ಯುವ ವಿಚಾರ ವೇದಿಕೆ ಇದರ ಸಹಕಾರದಲ್ಲಿ ನೀಲಾವರ ಶ್ರೀ ಪೇಜಾವರ ಮಠದ ಗೋ ಶಾಲೆಗೆ " ಗೋವಿಗಾಗಿ ಮೇವು " ಹಸಿರು ಹುಲ್ಲು ನೀಡುವ ಕಾಯ೯ಕ್ರಮ ಆ.16 ಆದಿತ್ಯವಾರ ನಡೆಯಿತು. ಸುರಿಯುವ ಮಳೆಯನ್ನು ಲೆಕ್ಕಿಸದೆ ವಿಶೇಷ ಮಕ್ಕಳು ಮತ್ತು ಸದಸ್ಯರು ಸಂತೆಕಟ್ಟೆ ಕಲ್ಯಾಣಪುರ ರಸ್ತೆಯ ಬದಿಯಲ್ಲಿರುವ ಹುಲ್ಲನ್ನು ಕಟಾವು ಮಾಡಿ ನೀಡಲಾಯಿತು. ಈ ಸಂದಭ೯ದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು ತಂಡದ ಸದಸ್ಯರನ್ನು ಗೌರವಿಸಿದರು. ಕಾಯ೯ಕ್ರಮದಲ್ಲಿ ಮೂಡಬಿದ್ರೆ ಆಳ್ವಾಸ್ ಎಜುಕೇಶನ್ ನ ಡಾ|| ಮೋಹನ್ ಆಳ್ವ ,ಬಿಲ್ಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಗೋವಿಗಾಗಿ ಮೇವು ಅಭಿಯಾನದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸ್ಪoದನ ಸಂಸ್ಥೆಯ ಉಮೇಶ್, ಜನಾಧ೯ನ್,ಸಕ್ಷಮಾ ಅಧ್ಯಕ್ಷೆ ಲತಾ ಭಟ್,ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು, ಸುಬ್ರಮಣ್ಯ ಆಚಾಯ೯, ಯೋಗೀಶ್, ಉದಯ ನಾಯ್ಕ ಮುಂತಾದವರಿದ್ದರು.

ಉಡುಪಿ ತಾಲೂಕು ಪಂಚಾಯತ್ ನೂತನ ಪದಾಧಿಕಾರಿಗಳ ಆಯ್ಕೆ

Posted On: 15-08-2020 08:37PM

ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆಯಾಗಿ ಸಂಧ್ಯಾ ಕಾಮತ್ ಹಾಗು ಉಪಾಧ್ಯಕ್ಷರಾಗಿ ಶರತ್ ಬೈಲಕೆರೆ ಇವರು ಆಯ್ಕೆಯಾಗಿದ್ದಾರೆ ಅಭಿನಂದನೆಗಳು : ಕೋಟಿ ಚೆನ್ನಯ ಫ್ರೆಂಡ್ಸ್, ಉಡುಪಿ

ಬಂಟಕಲ್ಲು ಪರಿಸರದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

Posted On: 15-08-2020 07:45PM

ನಾಗರಿಕ ಸೇವಾ ಸಮಿತಿ (ರಿ) ಬಂಟಕಲ್ಲು ಹಾಗೂ ಕಾರು ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇವರ ಜಂಟಿ ಆಶ್ರಯದಲ್ಲಿ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮವು ಇಂದು ಬಂಟಕಲ್ಲು ಪೇಟೆಯಲ್ಲಿ ನಡೆಯಿತು. ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾದ ಶ್ರಿ ಮಾದವ ಕಾಮತ್ ರವರು ಧ್ವಜಾರೋಹಣಗೈದು ಮತ್ತು ಶುಭಾಶಯ ಕೋರಿದರು.

ಈ ಸಂಧರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಬಂಟಕಲ್ಲು ಪರಿಸರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಶ್ರಿ ಕೆ.ಆರ್ ಪಾಟ್ಕರ್ ರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಕಮಲ, ಸವಿತಾ, ವಿನೋದ ಆಚಾರ್ಯ, ಶ್ರೀಮತಿ ವಿಜಯ, ಶ್ರೀಮತಿ ಶಕುಂತಳ ಉಪಸ್ಥಿತರಿದ್ದರು. ಕಾರು ಚಾಲಕರ & ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ವಿನ್ಸಂಟ್ ಪಲ್ಕೆ, ನಾಗರಿಕ ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ, ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ರಿಕ್ಷಾ ಚಾಲಕರ ಮಾಲಕರ ಸಂಘದ ಪದಾಧಿಕಾರಿಗಳು; ಸದಸ್ಯರು, ಬಂಟಕಲ್ಲು ಪರಿಸರದ ಸಾರ್ವಜನಿಕರು ಭಾಗವಹಿಸಿದ್ದರು.

ಬಂಟಕಲ್ಲು ಪರಿಸರದ ನಾಗರಿಕರಿಗೆ ಪೊಲೀಸ್ ಮಾಹಿತಿ ಕಾರ್ಯಕ್ರಮ

Posted On: 13-08-2020 10:13PM

ನಾಗರಿಕ ಸೇವಾ ಸಮಿತಿ ರಿ ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಪರಿಸರದ ನಾಗರಿಕರಿಗೆ ಪೊಲೀಸ್ ಮಾಹಿತಿ ಕಾರ್ಯಕ್ರಮ ಇಂದು ಬಂಟಕಲ್ಲು ದೇವಸ್ಥಾನದ ವಠಾರದಲ್ಲಿ ನಡೆಯಿತು ಸಮಿತಿಯ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು ಶಿರ್ವ ಠಾಣಾಧಿಕಾರಿ ಶ್ರೀ ಶೈಲ ಮುರುಗೋಡು ಇವರು ಪೊಲೀಸ್ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು ಬಂಟಕಲ್ಲು ನಾಗರಿಕ ಸಮಿತಿಯ ಉಚಿತ ಆಂಬುಲೆನ್ಸ್ ಯೋಜನೆ ಹಾಗೂ ಕೊರೋನಾ ಜಾಗೃತಿಯ ಬಗ್ಗೆ ಸ್ಟಿಕ್ಕರ್ ಬಿಡುಗಡೆಗೊಳಿಸಿದರು ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಶ್ರೀ ಸುರೇಂದ್ರ ನಾಯಕ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು ಬಂಟಕಲ್ಲು ಪರಿಸರದ ನಾಗರಿಕರು ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಕಾರು ಚಾಲಕ ಮತ್ತು ಮಾಲಕರ ಸಂಘದ ಪದಾಧಿಕಾರಿಗಳು ಯುವ ವೃಂದ ಬಂಟಕಲ್ಲು ಪದಾಧಿಕಾರಿಗಳು ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು

ಕೊರೊನ ಜಾಗೃತಿ ಸ್ಟಿಕ್ಕರ್ ಬಿಡುಗಡೆಯ ಕ್ಷಣ

ಪೊಲೀಸ್ ಮಾಹಿತಿ ಕಾರ್ಯಕ್ರಮ

ಭಾರತ ಮತ್ತೆ ಎದ್ದು ನಿಲ್ಲಲು ಸ್ವಾತಂತ್ರ್ಯ ದಿನ ದಾರಿ ದೀಪವಾಗಲಿ

Posted On: 13-08-2020 09:27PM

ಬ್ರಿಟೀಷರ ಆಡಳಿತದಿಂದ ಭಾರತ ಸ್ವತಂತ್ರವಾದ ದಿನವನ್ನು ನಾವೆಲ್ಲರೂ ಪ್ರತಿ ವರ್ಷ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾ 1ಗಿ ಆಚರಿಸಲಾಗುತ್ತದೆ. ಎಲ್ಲಾ ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ "ಜನ ಗಣ ಮನ"ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ. ಅವರೆಲ್ಲರ ತ್ಯಾಗ ಮತ್ತು ಬಲಿದಾನದ ಮೂಲಕ ನಾವೆಲ್ಲರೂ ಇಂದು ಖುಷಿಯಾಗಿ ಜೀವಿಸುತ್ತಿದ್ದೇವೆ. ದೇಶದ ಪ್ರಥಮ ಪ್ರಧಾನಿ ಜವಾಹರ್ ‌ಲಾಲ್ ನೆಹರು ರವರ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ಜೂನ್ 3,1947 ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿ‍ಷ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ 1947 ರ ಅನ್ವಯ ಆಗಸ್ಟ್ 15, 1947 ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ, ನೆಹರು ರವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( 'ಭಾಗ್ಯದೊಡನೆ ಒಪ್ಪಂದ' ಭಾಷಣ) ಮಾಡಿದರು. ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಬಹಳ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ..... ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಹೊಸತನ ಕಂಡುಕೊಳ್ಳುತ್ತಿದೆ . ಭಾರತದ ಸ್ವಾತಂತ್ರ್ಯ ದಿನಾಚರಣೆ ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆಯಲು ಕೋರಿದರು. ಆದರೆ ಜೂನ್ 1948 ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅಧಿಕಾರ ಸ್ವೀಕರಿಸಿದರು. ಪಟೇಲರು 565 ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ನಂತರ ಕಾಯ೯ ಪ್ರವೃತ್ತರಾದ ಅವರು ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ "ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ" ತಂತ್ರವನ್ನು ಉಪಯೋಗಿಸಿದರು.ಈ ಮೂಲಕ ಭಾರತದ ಏಕೀಕರಣದ ಯುಗ ಪುರುಷರಾದರು.ನಂತರ ಭಾರತವು ಸಂವಿಧಾನ ರಚನೆ ಮಾಡುವ ಸಲುವಾಗಿ, ಸಂವಿಧಾನ ರಚನಾಸಭೆಯು ಸಂವಿಧಾನದ ಕರಡು ಸಭೆಯನ್ನು 26 ನವೆಂಬರ್ 1949; ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿ ಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು ಪಟೇಲರ ಸಾಧನೆಯ ಮೂಲಕ ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು 1954ರಲ್ಲಿ ಒಪ್ಪಿಸಿದ ಪಾಂಡಿಚೇರಿ ಯನ್ನು ದೇಶದಲ್ಲಿ ಸೇರಿಸಲಾಯಿತು. 1952 ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. 62ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಯಿತು.ಈ ಚುನಾವಣೆಯು ದೇಶದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯಲು ನೆರವಾಯಿತು.

ಸ್ವಾತಂತ್ರ್ಯ ಪಡೆದ ನಂತರದ ಭಾರತದ ಸ್ಥಿತಿ ಪ್ರಸ್ತುತ ನಾವು ಸ್ವತಂತ್ರ ಭಾರತದಲ್ಲಿ ವಾಸಿಸುತ್ತಿದ್ದೇವೆ. ಇಂದು ನಮ್ಮ ದೇಶದಲ್ಲಿ ನಮಗೆ ಯಾವ ರೀತಿಯ ಚಿತ್ರಣ ಕಾಣಿಸುತ್ತಿದೆ ? ಇಂದು ಎಲ್ಲೆಡೆ ಭಯೋತ್ಪಾದನೆ ಹಬ್ಬಿಕೊಂಡಿದೆ. ಭಾರತದಲ್ಲಿನ ಕಾಶ್ಮೀರ, ಪಂಜಾಬ, ಗುಜಾರಾತ, ಸಿಕ್ಕಿಂ ಮುಂತಾದ ರಾಜ್ಯಗಳ ಮೇಲೆ ಗಡಿಯಲ್ಲಿರುವ ದೇಶಗಳಿಂದ ಆಕ್ರಮಣಗಳಾಗುತ್ತಿವೆ. ಪ್ರತಿದಿನ ಬಹುದೊಡ್ಡ ಪ್ರಮಾಣದಲ್ಲಿ ಅತಿಕ್ರಮಣಕಾರರು ದೇಶದೊಳಗೆ ನುಸುಳಿ ದೊಡ್ಡ ದೊಡ್ಡ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುತ್ತಿದ್ದಾರೆ. ಭಯೋತ್ಪಾದಕರು ನೀಡುತ್ತಿರುವ ಬೆದರಿಕೆಯಿಂದಾಗಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ಸಹ ಪೊಲೀಸು ಬಂದೋಬಸ್ತಿನಲ್ಲಿ ಆಚರಿಸಬೇಕಾಗುತ್ತದೆ. ಹಾಗಾದರೆ ನಮ್ಮ ಭಾರತ ದೇಶವು ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿದೆಯೇನು ? ರಕ್ಷಣೆಯು ನಮಗೆ ಲಭಿಸುತ್ತಿದೆಯೇ?ನಿಮಗೆಲ್ಲ ಏನನಿಸುತ್ತದೆ ? ಇಲ್ಲವಲ್ಲ ! ಇದಕ್ಕಾಗಿ ನಾವೆಲ್ಲರೂ ರಾಷ್ಟ್ರಾಭಿಮಾನ ಬೆಳೆಸುವುದು ಅತ್ಯಗತ್ಯವಾಗಿದೆ. ನಮಗೆ ದೇಶದ ಸಂವಿಧಾನ ಮೊದಲು ಧಮ೯ ನಂತರ ವಾಗಬೇಕಾಗಿದೆ.

ಇದಕ್ಕಾಗಿ ನಾವು ಏನು ಮಾಡಬಹುದು ? 1 ರಾಷ್ಟ್ರಧ್ವಜದ ಗೌರವವನ್ನು ಕಾಪಾಡೋಣ ಆಗಸ್ಟ್ 15 ಮತ್ತು ಜನವರಿ 26 ಈ ರಾಷ್ಟ್ರೀಯ ದಿನಗಳಂದು ಚಿಕ್ಕ ಆಕಾರದ ಕಾಗದದ ರಾಷ್ಟ್ರ ಧ್ವಜಗಳನ್ನು ವ್ಯಾಪಕ ಸ್ತರದಲ್ಲಿ ಮಾರಾಟ ಮಾಡುತ್ತಾರೆ. ಚಿಕ್ಕ ಮಕ್ಕಳ ಸಹಿತ ಅನೇಕ ಜನರು ರಾಷ್ಟ್ರಭಕ್ತಿ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಲು ಈ ರಾಷ್ಟ್ರಧ್ವಜಗಳನ್ನು ಖರೀದಿಸುತ್ತಾರೆ (ಪ್ಯಾಸ್ಟಿಕ್ ನಿಂದ ತಯಾರಿಸಲಾದ) ಮತ್ತು ಅವುಗಳನ್ನು ಹೇಗೇಗೋ ಇಡುತ್ತಾರೆ. ಕೆಲವು ದಿನಗಳ ನಂತರ ಇದೇ ಧ್ವಜಗಳನ್ನು ಹರಿದು ರಸ್ತೆಯ ಮೇಲೆ, ಕಸದ ತೊಟ್ಟಿಯಲ್ಲಿ ಮತ್ತು ಇತರ ಕಡೆಗಳಲ್ಲಿ ಬಿಸಾಡುತ್ತಾರೆ. ಹೀಗೆ ಮಾಡಿ ನಾವು ರಾಷ್ಟ್ರಧ್ವಜವನ್ನು ಅಂದರೆ ರಾಷ್ಟ್ರವನ್ನೇ ಅವಮಾನ ಮಾಡುತ್ತೇವೆ. ಅಲ್ಲದೆ ಕರೋನಾದ ಈ ಸಂದಭ೯ದಲ್ಲಿ ದೇಶದ ಧ್ವಜವನ್ನು ಹೋಲುವ ಮಾಸ್ಕ್ ಹಾಕಲಾಗುತ್ತಿದೆ. ಇದು ಸರಿಯಲ್ಲ ಈ ಬಗ್ಗೆ ಸಕಾ೯ರ ಸ್ಪಷ್ಟವಾದ ನಿಣ೯ ಯ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ನಮ್ಮ ದೇಶದ ಧ್ವಜ ನಮಗೆ ಪವಿತ್ರವಸ್ತುವಾಗಿದೆ. ನಾವೆಲ್ಲರೂ ನಮ್ಮ ಧ್ವಜದ ಗೌರವವನ್ನು ಕಾಪಾಡಬೇಕು. ಇತರ ಯಾರಾದರೂ ಧ್ವಜದ ಅಪಮಾನ ಮಾಡುತ್ತಿದ್ದಲ್ಲಿ ಅವರಿಗೆಲ್ಲ ನಾವು ತಿಳಿಸಿ ಹೇಳಬೇಕು.ಮತ್ತು ನಮ್ಮ ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಆಗಸ್ಟ್ 15ಮತ್ತು ಜನವರಿ 26 ರ ನಂತರ ಇತರೆಡೆಗಳಲ್ಲಿ ಬಿದ್ದಿರುವ ಧ್ವಜಗಳನ್ನು ನಾವು ಎತ್ತಿಡೋಣ. ಇದರ ಕುರಿತು ನಾವು ನಮ್ಮ ಮಿತ್ರರಿಗೂ, ನೆರೆಹೊರೆಯವರಿಗೂ ತಿಳಿಸುವ ಕಾಯ೯ ಮಾಡಬೇಕು ಇದು ಕೂಡ ದೇಶ ಸೇವೆ ಮಾಡಿದ ಹಾಗೆ. ರಾಷ್ಟ್ರೀಯ ಹಬ್ಬಗಳಂದು ಸ್ವಾತಂತ್ರ್ಯವೀರರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ನೆನಪಿಸಿಕೊಂಡು ಅವರ ಆದಶ೯ ವನ್ನು ಜೀವನದಲ್ಲಿ ರೂಡಿಸಿಕೊಳ್ಳಲು ಪ್ರಯತ್ನಿಸೋಣ.

ವಿದ್ಯಾಥಿ೯ಗಳೇ ನೆನಪಿಡಿ; ಆಗಸ್ಟ್ 15 ರಂದು ಬೆಳಗ್ಗೆ ಧ್ವಜವಂದನೆಗಾಗಿ ನಾವೆಲ್ಲರೂ ಒಟ್ಟಾಗೋಣ ( ಕರೋನಾದ ನಿಯಮ ಪಾಲಿಸಿ) ವಿದ್ಯಾಥಿ೯ಗಳು ಧ್ವಜವಂದನೆಯಾದ ಬಳಿಕ ಶಾಲೆಗೆ ರಜೆ ಇರುವುದು ಎಲ್ಲರಿಗೂ ಗೊತ್ತಿರುವುದರಿಂದ ಹೆಚ್ಚಿನ ಮಕ್ಕಳು ಶಾಲೆಗೆ ಹೋಗದೇ ಮನೆಯಲ್ಲಿಯೇ ತುಂಬಾ ಹೊತ್ತಿನ ತನಕ ಮಲಗುವುದು, ಮನೆಯಲ್ಲಿ ಟಿ.ವಿ ಮೊಬೈಲ್ ನೋಡುತ್ತಾ ಕುಳಿತುಕೊಳ್ಳುವುದು, ಊರಿಗೆ ಹೋಗುವುದು ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ಅದರ ಬದಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯವೀರರನ್ನು ಮತ್ತು ಕ್ರಾಂತಿಕಾರರನ್ನು ನೆನಪಿಸಿಕೊಂಡು ಅವರಲ್ಲಿರುವ ಯಾವ ಗುಣದಿಂದಾಗಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ, ಆ ಗುಣಗಳನ್ನು ನಾವು ನಮ್ಮಲ್ಲಿ ಪಾಲಿಸಿಅವರಂತೆ ಆದರ್ಶರಾಗಿ ವರ್ತಿಸಲು ಪ್ರಯತ್ನಿಸೋಣ. ಲೋಕಮಾನ್ಯ ತಿಲಕರು, ಸ್ವಾತಂತ್ರ ವೀರ ಸಾವರಕರರು ಮುಂತಾದ ದೇಶಭಕ್ತರು ತಮ್ಮ ಶರೀರ ಮತ್ತು ಮನಸ್ಸುಗಳನ್ನು ಸುದೃಢವಾಗಿಟ್ಟುಕೊಳ್ಳಲು ಸಹ ಪ್ರಯತ್ನ ಮಾಡುತ್ತಿದ್ದರು. ನಮ್ಮ ಮನಸ್ಸು ಸುದೃಢವಾಗಿದ್ದರೆ ನಾವು ಯಾವುದೇ ಪ್ರಸಂಗವನ್ನು ಧೈರ್ಯದಿಂದ ಎದುರಿಸಬಲ್ಲೆವು. ಮನಸ್ಸು ಸುದೃಢವಾಗಲು ನಮ್ಮಲ್ಲಿ ಆತ್ಮವಿಶ್ವಾಸ ಬರುವುದು ಅತ್ಯಗತ್ಯವಾಗಿದೆ. ನಮ್ಮಲ್ಲಿ ಅಮಿತವಾದ ಆತ್ಮವಿಶ್ವಾಸವಿದ್ದರೆ ಯಾವುದೇ ಕೆಲಸಗಳನ್ನು ಮಾಡಲು ಕಷ್ಟವಾಗುವುದಿಲ್ಲ. ಅದಕ್ಕಾಗಿ ಪ್ರತಿಯೊಂದು ಕೆಲಸ ಮಾಡುವಾಗ ಶ್ರದ್ದೆಯಿಂದ ಮಾಡಬೇಕು ರಾಷ್ಟ್ರದ ಕೆಲಸ ದೇವರ ಸೇವೆಯಾಗಿದೆ. ವಿದ್ಯಾಥಿ೯ಗಳು ಸೇರಿದಂತೆ ಯುವ ಜನಾಂಗವು ತನ್ನ ಶರೀರವು ಸುದೃಢವಾಗಲು ವ್ಯಾಯಾಮ ಮಾಡುವುದು ಈಗಿನ ಕಾಲದಲ್ಲಿ ಮನಸ್ಸನ್ನು ಸುದೃಢಗೊಳಿಸುವಂತೆ ನಮ್ಮ ಶರೀರವನ್ನು ಸಹ ಸುದೃಢವನ್ನಾಗಿಡುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ನಾವು ಪ್ರತಿದಿನ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ. ನಮ್ಮಲ್ಲಿ ನೈತಿಕಮೌಲ್ಯಗಳನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುವುದು ಪ್ರತಿಯೊಂದು ವಿಷಯವನ್ನು ಸಮಯಕ್ಕೆ ಸರಿಯಾಗಿ ಮಾಡುವುದು, ಪ್ರಾಮಾಣಿಕವಾಗಿ ಮಾಡುವುದು ಹಿರಿಯರನ್ನು ಗೌರವಿಸುವುದು, . ಮುಂತಾದ ವಿಷಯಗಳನ್ನು ಅಂದರೆ ನೈತಿಕ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು ಆವಶ್ಯಕವಾಗಿದೆ. ಆದುದರಿಂದ ಇಂದಿನಿಂದಲೇ ನಾವು ನಮ್ಮ ದೇಶದ ಉತ್ತಮ ಪ್ರಜೆಗಳಾಗಲು ಪ್ರಯತ್ನ ಮಾಡಬೇಕು. ನಮ್ಮ ಪುಸ್ತಕದಲ್ಲಿ ನೀಡಿದ ಪ್ರತಿಜ್ಞೆಯಂತೆ ನಾವು ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸೋಣ ಮತ್ತು ಇಡೀ ಜಗತ್ತಿನಲ್ಲಿ ನಮ್ಮ ರಾಷ್ಟ್ರದ ಹೆಸರನ್ನು ಉಜ್ವಲಗೊಳಿಸಲು ಸನ್ನದ್ಧರಾಗಬೇಕು. ಇಂದಿನ ದಿನದಂದು ಭಾರತಮಾತೆಯನ್ನು ಆನಂದದಲ್ಲಿಡುವ ಪ್ರತಿಜ್ಞೆಯನ್ನು ಮಾಡೋಣ. ನಾವು ಇಂದು ರಾಜಕೀಯ ಸ್ವಾತಂತ್ರ ಮಾತ್ರ ಪಡೆದಿಲ್ಲ ಬದಲಾಗಿ ವಿವಿಧ ರೀತಿಯ ಸ್ವಾತಂತ್ರ್ಯ ಪಡೆದಿದ್ದೇವೆ. ನಮ್ಮ ಸಂವಿಧಾನ ನಮಗೆ ಮೂಲಭೂತ ಹಕ್ಕುಗಳೊಂದಿಗೆ ಕತ೯ವ್ಯವನ್ನು ನೀಡಿದೆ ಇದನ್ನು ನಾವು ಮನಗಾಣಬೇಕು ಸಮಾಜದಲ್ಲಿ ಇಂದು ನಡೆಯುತ್ತಿರುವ ಗಲಭೆಗಳು ಸಾವ೯ಜನಿಕ ಆಸ್ತಿಪಾಸ್ತಿಯನ್ನು ಹಾನಿ ಮಾಡುವುದು ಇದನ್ನು ಕಂಡಾಗ ನಾವು ನಮ್ಮ ಕತ೯ವ್ಯದಲ್ಲಿ ಎಲ್ಲಿಯೋ ಒಂದು ಕಡೆ ಸೋತಿದ್ದೇವೆ - ದೇಶದ ಭದ್ರತೆಗೆ ಕುಂದು ತರುವ ದೇಶ ವಿರೋಧಿಗಳನ್ನು ಶಿಕ್ಷಿಸಬೇಕು. ಸ್ವಾತಂತ್ರ್ಯ ಕೇವಲ ಒಂದು ದಿನದ ಆಚರಣೆಯಲ್ಲ ಬದಲಾಗಿ ಅದು ತ್ಯಾಗದ ಸಂಕೇತವಾಗಿದೆ ಎಂಬುದನ್ನು ನಾವು ಮರೆಯಬಾರದು. *ದೇಶ ಮೊದಲು..* ನಮಗೆ ಜಾತಿ ಮತ ಧಮ೯ ಮನೆಯ ಆಚರಣೆಗೆ ಮಾತ್ರ ಸೀಮಿತವಾಗಬೇಕು ದೇಶವು ಎಲ್ಲಕ್ಕಿಂತ ಮೊದಲು ' ಎಂಬುದನ್ನು ಮರೆಯಬಾರದು ನಮ್ಮ ಸೈನಿಕರು ಗಡಿಯಲ್ಲಿ ಬಿಸಿಲು ಚಳಿಯನ್ನು ಲೆಕ್ಕಿಸದೆ ಎಚ್ಚರವಾಗಿ ಕತ೯ವ್ಯ ನಿವ೯ಹಿಸುತ್ತಿರುವ ಕಾರಣ ನಾವು ಆರಾಮವಾಗಿ ಮಲಗಲು ಸಾಧ್ಯವಾಗಿದೆ ಹೀಗಾಗಿ ನಾವೆಲ್ಲರೂ ಅವರನ್ನು ಅಭಿನಂದಿಸಬೇಕಾಗಿದೆ."ಜನನಿ ಜನ್ಮ ಭೂಮಿಶ್ಚ ಸ್ವಗ೯ದಪಿ ಗರಿಯಸಿ " ಎಂಬಂತೆ ತಾಯಿ ಮತ್ತು ಭೂಮಿ ಸ್ವಗ೯ ಕ್ಕಿಂತ ಮೇಲು .ದೇಶ ಉಳಿದರೆ ಮಾತ್ರ ನಾವು ಉಳಿಯುವುದು ಎಂಬ ಸತ್ಯ ನಮಗೆ ತಿಳಿದಿರಬೇಕು.ನಮ್ಮ ದೇಶ ಮತ್ತೆ ಜಗತ್ತಿಗೆ ಗುರುವಾಗ ಬೇಕಾದರೆ ಪ್ರತಿಯೊಬ್ಬರ ಕೊಡುಗೆ ಅಗತ್ಯವಿದೆ.ಈ ಸ್ವಾತಂತ್ರ ನಮಗೆ ದಾರಿದೀಪವಾಗಲಿ. ಲೇಖನ : ರಾಘವೇ೦ದ್ರ ಪ್ರಭು,ಕವಾ೯ಲು, ಯುವ ಲೇಖಕ

ಇನ್ನಂಜೆ ವಿಷ್ಣುವಲ್ಲಭ ಘಟಕದಿಂದ ವಿ.ಎಚ್.ಪಿ ಸಂಸ್ಥಾಪನಾ ದಿನಾಚರಣೆ

Posted On: 11-08-2020 10:28PM

ಇನ್ನಂಜೆ, 11.ಆಗಸ್ಟ್ : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಇನ್ನಂಜೆಯ "ವಿಷ್ಣು ವಲ್ಲಭ" ಘಟಕದಲ್ಲಿ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕರ್ತರು ಭಾರತಮಾತೆಗೆ ಪುಷ್ಪರ್ಚಾನೆ ಮಾಡಿದ ನಂತರ ಅಧ್ಯಕ್ಷರಾದ ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಯವರು ದೀಪ ಪ್ರಜ್ವಲಿಸುವ ಮೂಲಕ ಮಾತನಾಡಿ ಹಿಂದೂ ಧರ್ಮದ ಬಗ್ಗೆ ಅಪಹಾಸ್ಯ ಅಥವಾ ಅವಹೇಳನ ಮಾಡಿದ್ದಲ್ಲಿಅವರು ಯಾರೇ ಆಗಿರಲಿ ಅವರ ವಿರುದ್ಧ ನಾವು ಹೋರಾಡಬೇಕು, ಹಿಂದೂ ಧರ್ಮದ ಐಕ್ಯತೆ, ಒಗ್ಗಟ್ಟನ್ನು ಇಡೀ ವಿಶ್ವಕ್ಕೆ ತೋರಿಸಬೇಕು ಎಂದರು. ಕಾಪು ಪ್ರಖಂಡ ಕಾರ್ಯದರ್ಶಿ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಇವರು ಮಾತನಾಡಿ ವಿಶ್ವ ಹಿಂದೂ ಪರಿಷತ್ 56 ವರ್ಷಗಳನ್ನು ಪೂರೈಸಿದೆ . ಈ ಸಂದರ್ಭದಲ್ಲಿ 55 ವರ್ಷ ವಿಶ್ವ ಹಿಂದೂ ಪರಿಷದ್ಗೆ ಮಾರ್ಗದರ್ಶನ ನೀಡಿದ ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿಗಳನ್ನು ಸ್ಮರಿಸಿದರು. ಗೋಹತ್ಯೆ, ಲವ್ ಜಿಹಾದ್ ನಂತಹ ಧರ್ಮ ವಿರೋಧಿ ಕಾರ್ಯಗಳನ್ನು ನಿಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು, ವಿದ್ಯಾರ್ಥಿ ಪ್ರಮುಖ್ ಸ್ವಸ್ತಿಕ್ ಮಡುಂಬು ಇವರು ಹಿಂದೂ ಸಮಾಜದ ಬಗ್ಗೆ ಒಂದೆರಡು ಮಾತುಗಳನಾಡಿದರು.. ಈ ಸಂದರ್ಭದಲ್ಲಿ ಭಜರಂಗ ದಳದ ಸಂಚಾಲಕರು ರಾಜೇಶ್ ನಿಸರ್ಗ, ವಿ ಹಿಂ ಪ ಉಪಾಧ್ಯಕ್ಷರು ಆದ ರಾಘುವೇಂದ್ರ ಶೆಟ್ಟಿ, ಮಾಲಿನಿ ಇನ್ನಂಜೆ, ದಿವೇಶ್ ಕಲ್ಯಾಲು, ವರುಣ್ ಮಡುಂಬು, ವಿ ಹಿಂ ಪ ಪದಾಧಿಕಾರಿಗಳು ಭಜರಂಗದಳ ಕಾರ್ಯಕರ್ತರು , ಮತ್ತಿತರು ಉಪಸ್ಥಿತರಿದ್ದರು. ಕಾರ್ಯದರ್ಶಿಯಾದ ನಿತೀಶ್ ಕಲ್ಯಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಕೇಶ್ ಮಡುಂಬು ಇವರು ಧನ್ಯವಾದಗೈದರು.

ದೀಪ ಪ್ರಜ್ವಲನೆ ಯ ಕ್ಷಣ

ಸಂಕಷ್ಟದಲ್ಲಿರುವ ಕಾರ್ಕಳದ ಇನ್ನಾ ನಿವಾಸಿ ಪ್ರವೀಣ್ ಕುಟುಂಬಕ್ಕೆ ನೆರವಾಗುವಿರಾ?

Posted On: 11-08-2020 03:48PM

ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಈ ಮಹಾಮಾರಿ ಕೊರೋನಾ ಈಗಾಗಲೇ ಸ್ಥಿತಿವಂತರ ಜಂಘಾಬಲವನ್ನೇ ಉಡುಗಿಸಿ ಜನಸಾಮಾನ್ಯರ ಪಾಡಂತೂ ದೇವರೂ ಕೇಳದಂತಹಾ ಈ ಕೆಟ್ಟ ದಿನಗಳಲ್ಲಿ ಸಣ್ಣ ಅನಾರೋಗ್ಯ ಕಾಡಿದರೂ ಕೇಳುವವರಿಲ್ಲ.ಕೊರೋನಾ ನಿಯಮಗಳ ಹೆಸರಲ್ಲಿ ,ಇನ್ನಿಲ್ಲದಷ್ಟು ಕಾಟ ನೀಡುವ ನಮ್ಮ ವ್ಯವಸ್ಥೆಯ ನಡುವೆ ದೊಡ್ಡ ಆರೋಗ್ಯ ಸಮಸ್ಯೆ ಬಂದರೆ ಹೇಗಾದೀತು ಯೋಚಿಸಿ.

ಹೌದು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಪ್ರವೀಣ್ ಕುಲಾಲ್ ಇವರು ತಾನು ಬಾರ್ ಮ್ಯಾನೇಜರ್ ವೃತ್ತಿ ನಿರ್ವಹಿಸುತ್ತಿದ್ದು ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿ ತನ್ನ ಮಡದಿ ಹಾಗೂ ಪ್ರಾಯದ ತನ್ನ ತಾಯಿಯ ಜತೆ ಬದುಕು ಸಾಗಿಸುತ್ತಿದ್ದರು.

ಇದ್ದಕಿದ್ದಂತೆ ತೀವ್ರ ತರದ ಜ್ವರ ಕಾಣಿಸಿಕೊಂಡಿದ್ದು ಕಿನ್ನಿಗೋಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.ಜಾಂಡೀಸ್ ನ ಲಕ್ಷಣಗಳು ಕಂಡಿದ್ದು ಈಗ ಮೂತ್ರಕೋಶ ಹಾಗೂ ಪಿತ್ತ ಕೋಶದ ಸಮಸ್ಯೆ ಕಾಡುತ್ತಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ.

ಇದೀಗ ವಾರ ಒಂದು ಕಳೆದರೂ ಆರೋಗ್ಯದಲ್ಲಿ ಚೇತರಿಕೆ‌ ಕಾಣದೆ ತೀವೃನಿಗಾ ಘಟಕದಲ್ಲಿ ‌ಮಲಗಿದ್ದಾರೆ.ದಿನಕ್ಕೆ ₹20000 ಖರ್ಚಾಗುತ್ತಿದ್ದು ಕುಟುಂಬಕ್ಕೆ ಬೇರೆ ಆದಾಯವಿಲ್ಲದೆ ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟು ಬಿಲ್ಲು ಪಾವತಿಸುವ ಸ್ಥಿತಿ ತಲುಪಿದ್ದಾರೆ.ಇತ್ತ ICU ಒಳಗೆ ಅವರನ್ನು ಕಾಣಲೂ ಆಗದೆ ,ಅತ್ತ ದಿನದಿಂದ ದಿನಕ್ಕೆ ಹಣ ಪಾವತಿಸಿದರೂ ಪ್ರವೀಣ್ ಕುಲಾಲರು ಮಾತನಾಡಲೂ ಆಗದೆ ತನ್ನವರ ಗುರುತು ಹಿಡಿಯಲು ಅಶಕ್ತರಾಗಿದ್ದಾರೆ. ಸಂಕಷ್ಟದಲ್ಲಿರುವ ಈ‌ ಕುಟುಂಬಕ್ಕೆ ದಾನಿಗಳ‌ ಸಹಾಯದ ಅಗತ್ಯವಿದೆ.ತೀರಾ ಸಂಕಷ್ಟದಲ್ಲಿರುವ ಇವರಿಗೆ ಸಹಾಯ ಮಾಡಿ ಒಂದಿಷ್ಟು ದೈರ್ಯ ತುಂಬೋಣ. ಸಹಾಯ ಮಾಡಲಿಚ್ಛಿಸುವ ದಾನಿಗಳು‌ ಈ‌ಕೆಳಗಿನ‌ ಬ್ಯಾಂಕ್ ಖಾತೆಗೆ ಜಮ ಮಾಡಬಹುದು. Name - mohini, Branch - moodumarnadu, Account no - 520101267800222, IFSC CODE - CORP0001601