Updated News From Kaup
ಕರೋನಾ ವಾರಿಯರ್ಸ್ಗಳನ್ನು ಟೀಕಿಸುವ ಮೊದಲು ಅವರ ಸೇವೆಯ ಬಗ್ಗೆ ಕೃತಜ್ಞತೆಯಿರಲಿ

Posted On: 26-08-2020 11:18PM
ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿ ಇರುವುದು "ಕೊರೊನಾ ದಂದೆ" ಎಂಬ ಒಂದು ಪದ ಈ ಪದವನ್ನ ಉಪಯೊಗಿಸಿಕೊಂಡು ಮನಬಂದಂತೆ ನಮ್ಮ ವೈದ್ಯರು , ವೈದ್ಯಕೀಯ ಸಿಬ್ಬಂದಿ, ಅಂಬ್ಯುಲೆನ್ಸ್ ಚಾಲಕರು ಪೊಲೀಸ್ ಅದೇ ರೀತಿ , ಜನಪ್ರತಿನಿದಿಗಳ ಮೇಲೆ ಮನಬಂದಂತೆ ಬೈಯುದನ್ನು ಕಾಣುತ್ತಿದ್ದೇವೆ ಕೆಲವರಂತು ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಬಲಿಪಶು ಮಾಡುವ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ. ಟೀಕೆ ಟಿಪ್ಪಣಿ ಮಾಡುವುದು ಸುಲಭ ಆದರೆ ಆ ಕೆಲಸ ಮಾಡಿದಾಗ ಮಾತ್ರ ಅದರ ನೈಜತೆ ತಿಳಿಯಲು ಸಾಧ್ಯ ಅಲ್ಲವೆ?
ಕೊರೊನಾ ದಿಂದ ಪ್ರಜೆಗಳನ್ನ ರಕ್ಷಣೆ ಮಾಡಲು ಕೊರೊನಾ ಉಡುಪಿಗೆ ಕಾಲಿಟ್ಟ ದಿನದಿಂದ ಇಲ್ಲಿಯವರೆಗೆ ರಾತ್ರಿ ಹಗಲೆನ್ನದೆ ತನ್ನ ಪ್ರಾಣವನ್ನ ಒತ್ತೆಯಾಗಿಟ್ಟು ತನ್ನ ಕುಟುಂಬದ ಬಗ್ಗೆ ಚಿಂತನೆ ಮಾಡದೆ ರೋಗಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸೇವೆ ಸಲ್ಲಿಸುತ್ತಿರುವ ಕೊರೊನಾ...ಚಿಕಿತ್ಸೆ ನೀಡುತ್ತಿರುವ ಪ್ರಾಮಾಣಿಕ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಅಧಿಕಾರಿಗಳು ಸೇರಿದಂತೆ ಆಯಾಗಳು , ಅಂಬ್ಯುಲೆನ್ಸ್ ಚಾಲಕರು ಇವರ ಈ ಒಂದು ನಿಸ್ವಾರ್ಥ ಸೇವೆಗೆ ಬೆಲೆ ಇಲ್ಲದಂತೆ ಮಾಡುತ್ತಿರುವ ಈ ರೀತಿಯ ಮನಸ್ಥಿತಿಯ ಜನರಿಗೆ ಏನು ಹೇಳುವುದು. ವೈದ್ಯರು ಸಿಬಂದಿಗಳು ಜನರ ಈ ಟೀಕೆಗಳಿಗೆ ಬೇಸತ್ತು ತನ್ನ ಕರ್ತವ್ಯದಿಂದ ಹಿಂದೆ ಸರಿದರೆ ಆಗುವ ಪರಿಣಾಮದ ಬಗ್ಗೆ ಅರಿವಿದೆಯೇ ?ಆಗ ಎನು ಗತಿ? ಇದರ ಬಗ್ಗೆ ಯಾಕೆ ಜನರು ಚಿಂತನೆ ಮಾಡುತ್ತಾ ಇಲ್ಲ ?ಎಂಬ ಬೇಸರವಿದೆ.
ಆಸ್ಪತ್ರೆ ಅಥವಾ ವೈದ್ಯರು ಅದೇ ರೀತಿ ವೈದ್ಯಕೀಯ ಸಿಬ್ಬoದಿಗಳು ಮಾಡಿದ ಒಂದು ತಪ್ಪನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಿ ಅವರ ಬಗ್ಗೆ ಟೀಕೆ ಮಾಡುವ ಮೂಲಕ ಅವರ ಮಾನಸಿಕ ಸ್ಥಯ೯ ಕಡಿಮೆ ಮಾಡುತ್ತಿರುವ ಈ ರೀತಿ ಮನಸ್ಸಿನ ಜನರು ಅವರ ಒಳ್ಳೆಯ ಕೆಲಸವನ್ನು ಒಂದು ಬಾರಿಯೂ ಪ್ರಶಂಸಿಸುವ ಕಾಯ೯ ಮಾಡದಿರುವುದು ಸರಿಯೇ ? ಕೊರೊನಾದಿಂದ ಸತ್ತ ವ್ಯಕ್ತಿಗಳ ದೇಹವನ್ನ ಸ್ವಂತ ಕುಟುಂಬಿಕರೆ ಮುಟ್ಟಲು ತಯಾರಿಲ್ಲದ ಈ ಸಮಯದಲ್ಲಿ ನಮ್ಮ ವೈದ್ಯಕೀಯ ಸಿಬ್ಬಂದಿಗಳು ಇದುವರೆಗೆ 70 ಕ್ಕಿಂತ ಹೆಚ್ಚು ಮಂದಿ ಕೊರೊನಾ ದಿಂದ ಮೃತ ವ್ಯಕ್ತಿಗಳ ದೇಹಗಳನ್ನು ಅವರವರ ಸಂಬಂದಿಕರಿಗೆ ತಾವೇ ಖುದ್ದಾಗಿ ಅವರ ಅಂತಿಮ ವಿಧಿ ವಿದಾನಗಳನ್ನ ಮಾಡಲು ಸಹಕರಿಸಿದ್ದಾರೆ.ಈ ಬಗ್ಗೆ ಜನರು ಮಾತನಾಡುದಿಲ್ಲ. ಕೇವಲ ತಪ್ಪುಗಳನ್ನು ವೈಭವಿಕರಿಸದೆ ಅವರ ಉತ್ತಮ ಮಾನವೀಯ ಕಾಯ೯ ದ ಬಗ್ಗೆ ಕೂಡ ವೈಭವೀಕರಣ ಮಾಡಬೇಕಾಗಿದೆ. ಅಂದ ಮಾತ್ರಕ್ಕೆ ಅಸ್ಪತ್ರೆಯವರು ಅಧಿಕಾರಿಗಳು ತಪ್ಪೆ ಮಾಡುದಿಲ್ಲ ಎಂದು ಹೇಳಿದರೆ ತಪ್ಪಾಗಬಹುದು ಒತ್ತಡದಲ್ಲಿ ಕೆಲಸ ನಿವ೯ಹಿಸುವಾಗ ಅರಿವಿಗೆ ಬಾರದೆ ತಪ್ಪಾಗಬಹುದು ಅದನ್ನು ಅವರಿಗೆ ಮನದಟ್ಟು ಮಾಡಿ ಮುಂದೆ ತಪ್ಪಾಗದಂತೆ ಮನವರಿಕೆ ಮಾಡಬೇಕು. ನಾವೆಲ್ಲರೂ ಕರೋನಾ ವಾರಿಯರ್ಸ್ ಗಳ ಬಗ್ಗೆ ಸಹನುಭೂತಿ ತೋರಿಸಬೇಕು. ಇತ್ತಿಚಿಗೆ ಕರೋನಾ ಸೈನಿಕರಿಗೆ ಗೌರವಾಪ೯ಣಿ ಸಂದಭ೯ ಕರೋನಾ ಲ್ಯಾಬ್ ಸಿಬ್ಬಂದಿ ಹೇಳಿದ ಮಾತು ಮನಮಿಡಿಯುವಂತೆ ಮಾಡಿತ್ತು "ನಾವು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸತತವಾಗಿ ಪಿ.ಪಿ ಕಿಟ್ ಧರಿಸಿ ಕೆಲಸ ಮಾಡುತ್ತೆವೆ ಮನೆಯಲ್ಲಿರುವ ಮಕ್ಕಳು ಮತ್ತು ಹಿರಿಯರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಬೇರೆ ರೂಂ ಮಾಡಿ ವಾಸ ಮಾಡುತ್ತೆನೆ ಒತ್ತಡದಲ್ಲಿ ಕಾಯ೯ ನಿವ೯ಹಣೆಯಲ್ಲಿ ಕೆಲವೊಮ್ಮೆ ಊಟ ಉಪಹಾರವನ್ನು ಬಿಟ್ಟ ಪ್ರಸಂಗ ಕೂಡ ಇದೆ" ಅವರ ಈ ಮಾತೇ ಸಾಕು ಅವರ ಸೇವಾ ತತ್ಪರತೆ ತಿಳಿಯಲು. ಸಕಾ೯ರ ದಿಂದ ಪ್ರಮುಖವಾಗಿ ಆಗಬೇಕಾದ ನಿಧಾ೯ರ : ಮುಖ್ಯವಾಗಿ ಸಕಾ೯ರ ಸೋ೦ಕಿತರ ಮನೆ ಸೀಲ್ಡೌನ್ ಮತ್ತು ಮನೆಗೆ ನೋಟಿಸ್ ಅಂಟಿಸುವ ಸಂಪ್ರದಾಯವನ್ನು ಬದಲಾವಣೆ ಮಾಡಬೇಕಾದ ಅಗತ್ಯಯಿದೆ. ವೈದ್ಯ ಸಲಹೆಗಾರರು ಕೂಡ ಇದೇ ಸಲಹೆಯನ್ನು ಸಕಾ೯ರಕ್ಕೆ ನೀಡಿದೆ. ಕಾರಣ ಮನೆ ಸೀಲ್ ಡೌನ್ ನಿ೦ದ ಬೇರೆ ಜನರು ಇವರನ್ನು ನೋಡುವ ದೃಷ್ಟಿಯೇ ಬೇರೆ ಅವರನ್ನು ಭಯೋತ್ಪಾದಕರಂತೆ ಕಾಣುವಾಗ ಮನಸ್ಸಿಗೆ ಆಗುವ ನೋವು ಅವರಿಗೇ ಗೊತ್ತು ಅದೇ ರೀತಿ ದಿನಾಲೂ ಬಂದು ಸೋಂಕಿತ ಕುಟುಂಬದ ಭಾವಚಿತ್ರ ತೆಗೆಯುವಾಗ ಇತರೆ ಜನರು ಇಲ್ಲ ಸಲ್ಲದ ಮಾತು ಕೇಳುವಾಗ ಆಗುವ ಮಾನ ಆಘಾತದಿಂದ ತಪ್ಪಿಸಿಕೊಳ್ಳಲು ಜನರು ಸ್ವಪ್ರೇರಿತರಾಗಿ ಪರೀಕ್ಷೆ ಮಾಡಲು ಮುಂದೆ ಬರುತ್ತಿಲ್ಲ ಅವರಿಗೆ ಕರೋನಾ ಕ್ಕಿoತ ಸೀಲ್ಡೌನ್ ಭಯವೇ ಹೆಚ್ಚು. ಹೀಗಾಗಿ ಅವರಿಗೆ ಮನವರಿಕೆ ಮಾಡಿ ಮನೆಯಿಂದ ಹೊರಬರದಂತೆ ನೋಡಬೇಕೆ ಹೊರತು ಈ ರೀತಿಯ ಆಚರಣೆಯಿಂದ ಮುಕ್ತಗೊಳಿಸಬೇಕು.ಅಧಿಕಾರಿಗಳಿಗೆ ಕರೋನಾ ಪರೀಕ್ಷೆ ಟಾಗೆ೯ಟ್ ಕೊಡದಿರುವುದು ಒಳಿತು.ವೈದ್ಯರು ಮುಖ್ಯವಾಗಿ ಕ್ಲಿನಿಕ್ ನಲ್ಲಿ ಪ್ರಾಕ್ಟಿಸ್ ಮಾಡುವವರಿಗೆ ಫಿವರ್ ಟೆಸ್ಟ್ ಮಾಡಲು ಅವಕಾಶ ನೀಡಿದರೆ ಉತ್ತಮ ಹಾಗೂ ಅವರಿಗೆ ಯಾವುದೇ ಒತ್ತಡವಿಲ್ಲದೆ ಸೇವೆ ಸಲ್ಲಿಸಲು ಅವಕಾಶ ನೀಡಿದರೆ ಮಾತ್ರ ಇತರೆ ರೋಗಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕರೋನಾಕ್ಕಿಂತ ಹೆಚ್ಚು ಜನರು ಸರಿಯಾಗಿ ಚಿಕಿತ್ಸೆ ಸಿಗದೆ ಸಾಯಬಹುದು. ಹೀಗೆ ಸಕಾ೯ರ ಸ್ಪಷ್ಟವಾದ ನಿಧಾ೯ರ ಕೈಗೊಳ್ಳಬೇಕಾಗಿದೆ.
ಯಾವುದೇ ಕಾರಣಕ್ಕೆ ಆಸ್ಪತ್ರೆ ಅಥವಾ ವೈದ್ಯರ ಹೆಸರನ್ನು ಕೆಡಿಸುವ ಭರದಲ್ಲಿ ನಮ್ಮತನವನ್ನು ಮರೆಯದಿರೋಣ. ಕೊನೆಯದಾಗಿ ಕೊರೊನಾ ದಂದೆಕೊರರಿಗೆ ಬೈಯ್ಯವ ಬರದಲ್ಲಿ ನೈಜ ಕೊರೊನಾ ವಾರಿಯರ್ಸ್ ಬೆಸರಿಸದೇ ಇರೋಣ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕಾಯ೯ ಬೇಡ, ಸರಕಾರಿ ಆಸ್ಪತ್ರೆಗಳಲ್ಲಿ ಕಳೆದ 3-4 ತಿಂಗಳುಗಳಿಂದ ಒಂದೇ ಒಂದು ದಿನದ ರಜೆ ಪಡೆಯದೆ ನಮಗಾಗಿ ಸೇವೆ ನೀಡುತ್ತಿರುವ ಅದೆಷ್ಟೋ ವೈದ್ಯರುಗಳಿಗೆ ಇತರ ವೈದ್ಯಕೀಯ ಸಿಬಂದಿ ಅಂಬ್ಯುಲೆನ್ಸ್ ಚಾಲಕರಿಗೆ ಹೆಚ್ಚಿನ ಗೌರವವನ್ನ ನೀಡಿ ಅವರ ಆತ್ಮಸ್ಥೈರ್ಯ ವನ್ನು ಹೆಚ್ಚಿಸೋಣ.. ಆದಷ್ಟು ಬೇಗ ಕರೋನಾ ದೂರವಾಗಲಿ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ
ಕೋಸ್ಟಲ್ ಗಾರ್ಡ್ ಪೊಲೀಸ್ ವತಿಯಿಂದ ಮಲ್ಪೆ ಮೀನುಗಾರ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮ

Posted On: 25-08-2020 08:11PM
ಆಂತರಿಕ ಭದ್ರತೆಗೆ ಆಧುನಿಕ ತಂತ್ರ್ರಜ್ಞಾನ ಬಳಕೆ: ಭಾಸ್ಕರ್ ರಾವ್
ಉಡುಪಿ ಆಗಸ್ಟ್ 25 : ರಾಜ್ಯದ ಆಂತರಿಕ ಭದ್ರತೆಗೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಅವರು ಮಂಗಳವಾರ, ಮಲ್ಪೆ ಯ ಕರಾವಳಿ ಕವಲು ಪಡೆಯ ಕಚೇರಿಯಲ್ಲಿ ಮೀನುಗಾರ ಮುಖಂಡರೋಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ರಾಜ್ಯದ ಅಂತರಿಕ ಭದ್ರೆತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕರಾವಳಿ ಕಾವಲು ಪಡೆಗೆ ಅಗತ್ಯ ಉಪಕರಣಗಳ ಖರೀದಿ, ಪ್ರತ್ಯೇಕ ಸಿಬ್ಬಂದಿ ನೇಮಕ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಿಬ್ಬಂದಿಗಳಲ್ಲಿ ದೈಹಿಕ , ತಾಂತ್ರಿಕ, ಎಮೋಷನಲ್ ದೃಡತೆ ಹೆಚ್ಚಿಸುವ ಮೂಲಕ , ಅವರ ಕಾರ್ಯ ಕ್ಷಮತೆ ಹೆಚ್ಚಿಸಲು ಸಹ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಕರಾವಳಿಯ ರಕ್ಷಣೆಗೆ 3 ಹೊಸ ಜೆಟ್ ಸ್ಕೀ ಗಳನ್ನು ಶೀಘ್ರದಲ್ಲಿ ಸರಬರಾಜು ಮಾಡಲಾಗುವುದು ಎಂದು ಭಾಸ್ಕರ್ ರಾವ್ ಹೇಳಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಆಂತರಿಕ ಭದ್ರತೆಗೆ ಅಡ್ಡಿಪಡಿಸುವವರನ್ನು, ಇಲಾಖೆಯ ಸೋಷಿಯಲ್ ಮೀಡಿಯಾ ಸೆಲ್ ಮೂಲಕ ಪತ್ತೆ ಮಾಡಿ, ಕ್ರಮ ಕೈಗೊಳ್ಳಲಾಗುವುದು , ದೇಶವಿರೋದಿ ಚಟುವಟಿಕೆ ನಡೆಸುವವರನ್ನು ಪತ್ತೆ ಹಚ್ಚಿ, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮುದ್ರದಲ್ಲಿ ಮೀನುಗಾರಿಕಗೆ ಹೋಗುವವರು ಮತ್ತು ಬರುವವರ ಖಚಿತ ಮಾಹಿತರಿಗಾಗಿ ಚಿಪ್ ಆಧಾರಿತ ತಂತ್ರಜ್ಞಾನ ಬಳಕೆ ಮಾಡಲಾಗುವುದು, ಮೀನುಗಾರರ ರಕ್ಷಣೆಗೆ ಜೊತೆಗೆ ಸಮುದ್ರದದಲ್ಲಿನ ಜೀವ ವೈವಿದ್ಯ ರಕ್ಷಣೆಗೆ ಸಹ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ರಾಜ್ಯದಲ್ಲಿನ 43 ಬೀಚ್ ಗಳಿಗೆ ಸೂಕ್ತ ಭದ್ರತೆ ನೀಡುವುದರ ಮೂಲಕ ರಾಜ್ಯದ 322 ಕಿಮೀ ವ್ಯಾಪ್ತಿಯ ಕರಾವಳಿಯಲ್ಲಿ ಆಂತರಿಕ ಭದ್ರತೆ ಮಾಡಲಾಗುವುದು, ಈಗಾಗಲೇ ಕರಾವಳಿ ಕಾವಲು ಪಡೆಯ ಜೊತೆಗೆ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಒಳಗೊಂಡ ಕರಾವಳಿ ನಿಯಂತ್ರಣ ದಳ ಹಾಗೂ ಸ್ಥಳಿಯ ಮೀನುಗಾರರನ್ನು ಒಳಗೊಂಡ ಸಾಗರ ರಕ್ಷಕ ದಳ ವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಉಪಸ್ಥಿತರಿದ್ದರು
ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ನೂತನ ರಜತ ಉಯ್ಯಾಲೆ ಸಮರ್ಪಣೆ

Posted On: 24-08-2020 04:11PM
ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಇಲ್ಲಿ ವಾರ್ಷಿಕ ಸುಗ್ಗಿ ಮಾರಿಪೂಜೆ ಸಂದರ್ಭದಲ್ಲಿ ವಿಶೇಷವಾಗಿ ನಡೆಯಲ್ಪಡುವ ಶ್ರೀ ದೇವಿಯ ಗೊಪುರೋತ್ಸವ ಹಾಗೂ ಚಂಡಿಕಾ ಹೋಮ ಸಂದರ್ಭ ವಿನಿಯೋಗಕ್ಕೆ .ನೂತನ ರಜತ ಉಯ್ಯಾಲೆ ಯನ್ನು ದಿ.ಕಾಪು ಬಾಲಕೃಷ್ಣ ಭಟ್ ಸ್ಮರಣಾರ್ಥ ಇವರ ಮಕ್ಕಳು ಸೇವಾರ್ಥವಾಗಿ ಸಮರ್ಪಿಸಿದರು.


ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾಪು ಪ್ರಖಂಡದ ನೂತನ ಜವಾಬ್ದಾರಿಗಳ ಆಯ್ಕೆ

Posted On: 24-08-2020 02:01PM
ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾಪು ಪ್ರಖಂಡದ ನೂತನ ಹಲವು ಜವಾಬ್ದಾರಿ ಗಳನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಘೋಷಣೆ ಮಾಡಲಾಯಿತು.

ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್,ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಪ್ರವೀಣ್ ಹಿರಿಯಡ್ಕ,ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ನೂತನ ಜವಾಬ್ದಾರಿಗಳನ್ನು ಘೋಷಿಸಲಾಯಿತು.
ಉಪಾಧ್ಯಕ್ಷರಾಗಿ ಗೋವರ್ಧನ ಭಟ್ ಮಜೂರು ಮತ್ತು ಶರತ್ ಕಟಪಾಡಿ
ಸಹ ಕಾರ್ಯದರ್ಶಿಯಾಗಿ ನಿತೇಶ್ ಸುವರ್ಣ ಎರ್ಮಾಳ್, ಕೋಶಾಧಿಕಾರಿಯಾಗಿ ಮಹೇಶ್ ಉಚ್ಚಿಲ, ಮಠಮಂದಿರ ಸಂಪರ್ಕ ಪ್ರಮುಖ್ ಸದಾಶಿವ ಕುಲಾಲ್ ಶಿರ್ವ, ಸಾಮರಸ್ಯ ಪ್ರಮುಖ್ ಭಾಸ್ಕರ ಭಂಡಾರಿ ಪಡುಬಿದ್ರಿ,
ಧರ್ಮ ಪ್ರಸಾರ ಪ್ರಮುಖ್ ರಾಘವೇಂದ್ರ ಶೆಟ್ಟಿ ಪಡುಬೆಳ್ಳೆ
ಬಜರಂಗದಳ ಸಂಯೋಜಕರಾಗಿ ಸುಧೀರ್ ಕಾಪು, ಸಹ ಸಂಯೋಜಕರಾಗಿ ಶರಣ್ ಸಾಲಿಯಾನ್ ಹೆಜಮಾಡಿ, ಸೇವಾ ಪ್ರಮುಖ್ ಸುಭಾಷ್ ಶೆಟ್ಟಿ ಹೇರೂರು, ಗೋರಕ್ಷಾ ಪ್ರಮುಖ್ ನಾಗೇಶ್ ಕೋಟ್ಯಾನ್ ಪಾಂಗಾಳ, ಸುರಕ್ಷಾ ಪ್ರಮುಖ್ ಆನಂದ ಶಿರ್ವ,
ಅಖಾಡ ಪ್ರಮುಖ್ ಅಭಿಜಿತ್ ಶೆಟ್ಟಿ ಪಾಂಗಾಳ ಆಯ್ಕೆಯಾದರು.
ಬೊಲ್ಜೆ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಮಲ್ಲಾರ್ ನಿವಾಸಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

Posted On: 24-08-2020 11:07AM
ಕಾಪು.24,ಆಗಸ್ಟ್ : ಉಬೇದುಲ್ಲಾ (54), ಮಲ್ಲಾರ್ ನಿವಾಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಮನೆ. ಉದ್ಯಾವರ ಬೊಲ್ಜೆ ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ.. ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದ್ದು, ಬ್ರಿಡ್ಜ್ ಪಕ್ಕದಲ್ಲೇ ಬೈಕ್, ಮೊಬೈಲ್ ವಾಚ್ ಪತ್ತೆಯಾಗಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶವವನ್ನು ಮಣಿಪಾಲ ಶವಾಗಾರಕ್ಕೆ ಸಮಾಜ ಸೇವಕ ಸೂರಿ ಶೆಟ್ಟಿಯವರು ಸಾಗಿಸಿದರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.



ಕಾಪುವಿನಲ್ಲಿ ಮನೆಯೂಟಕ್ಕೆ ಹೆಸರುವಾಸಿಯಾದ ಶೆಣೈ ರೆಸ್ಟೋರೆಂಟ್ ಮಾಲಕ ಭಾಸ್ಕರ್ ಶೆಣೈ ಇನ್ನಿಲ್ಲ

Posted On: 24-08-2020 09:04AM
ಕಾಪುವಿನ ಭಾರತ್ ನಗರದಲ್ಲಿ ಮನೆಯೂಟಕ್ಕೆ ಹೆಸರುವಾಸಿಯಾದ ಶೆಣೈ ರೆಸ್ಟೋರೆಂಟ್ ನ ಮಾಲಕರಾದ ಭಾಸ್ಕರ್ ಶೆಣೈಯವರು ಇಂದು ಮುಂಜಾನೆ ದೈವಾಧೀನರಾದರು. ಬ್ಯಾಂಕ್ ಉದ್ಯೋಗಿಗಳು ಮತ್ತಿತರ ನೌಕರರಿಗೆ ಮನೆಯೂಟದ ಸವಿ ಬಡಿಸುತ್ತಿದ್ದ ಇವರ ಹೋಟೆಲಿಗೆ ಹಲವಾರು ಗಣ್ಯರೂ ಊಟಕ್ಕೆ ಬರುತ್ತಿದ್ದರು. ಪ್ರಸ್ತುತ ಹೋಟೆಲ್ ನ್ನು ಅವರ ಪುತ್ರ ಮೋಹನದಾಸ ಶೆಣೈಯವರು ನಡೆಸಿಕೊಂಡು ಬರುತ್ತಿದ್ದಾರೆ. ಮೃತರು ಎರಡು ಗಂಡು ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಬ್ರಹ್ಮಾವರದ ಆಶ್ರಮವಾಸಿಗಳ ಸಮ್ಮುಖದಲ್ಲಿ ಗಣೇಶ ಹಬ್ಬ ಆಚರಣೆ

Posted On: 23-08-2020 09:21AM
ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ. ಅಪ್ಪ-ಅಮ್ಮ ಅನಾಥಾಲಯ ಬ್ರಹ್ಮಾವರ ಮೊದಲ ವಷ೯ದ ಗಣೇಶೋತ್ಸವ ಬ್ರಹ್ಮಾವರ: - ಅಪ್ಪ ಅಮ್ಮ"ಅನಾಥಾಲಯ (ಉಚಿತ ಸೇವೆ ) ಪ್ರಥಮ ವರ್ಷದ ಗಣೇಶೋತ್ಸವವನ್ನು ಆಶ್ರಮವಾಸಿಗಳಿಗಾಗಿ ಆಚರಿಸಲಾಯಿತು.ಈ ಸಂದಭ೯ದಲ್ಲಿ ಗಣಹೋಮ, ವಿಶೇಷ ಪೂಜೆ ಮತ್ತು ಸಹಭೋಜನ ನೆರವೇರಿತು. ಈ ಸಂದಭ೯ದಲ್ಲಿ ಉದ್ಯಮಿಗಳಾದ ಶ್ರೀಕಾಂತ್ ಶೆಣೈ, ಮೋಹನ್ ಶೆಟ್ಟಿ, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು, ಉದಯ ನಾಯ್ಕ್, ಟ್ರಸ್ಟ್ ನ ಪ್ರಮುಖರಾದ ಗಿರಿಜಾ ಕೃಷ್ಣ ಪೂಜಾರಿ,ಆಶ್ರಮದ ಮುಖ್ಯಸ್ಥರಾದ ಪ್ರಶಾಂತ್ ಪೂಜಾರಿ ಕೂರಾಡಿ ಮುಂತಾದವರಿದ್ದರು.
ಚೌತಿಗೊಂದು ಚಿಂತನೆ ಬಂದು ಹೋಗುವ ಗಣಪತಿ

Posted On: 22-08-2020 08:25AM
| ಆರಾಧನೆಯ ಪೂರ್ವಾಪರ | ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ ಅಥವಾ ಆಹ್ವಾನಿಸಿ , ಆವಾಹಿಸಿ , ಪೂಜಿಸಿ ವಿಸರ್ಜಿಸುವ ದೇವರುಗಳಲ್ಲಿ "ಗಣಪತಿ" ಒಬ್ಬ . ಋತುಮಾನಕ್ಕೆ ಅನುಗುಣವಾಗಿ ನಿರ್ದಿಷ್ಟ ದಿನಗಳಲ್ಲಿ ಬಂದು ಹೋಗುವ ಈ ದೇವರುಗಳ ಆರಾಧನಾ ವಿಧಾನವು ಎಷ್ಟು ವೈಭವದಿಂದ ನಡೆದರೂ ತಾತ್ಕಾಲಿಕ ಕಲ್ಪನೆ ಮತ್ತು ಅನುಸಂಧಾನ ಆಧರಿತವಾಗಿರುವುದು ಗಮನಾರ್ಹ .ವರ್ಷಪೂರ್ತಿ ಬೇರೆಬೇರೆ ಸಂದರ್ಭಗಳಲ್ಲಿ ಇಂತಹ ದೇವರುಗಳ ಆಗಮನವಾಗುತ್ತಿರುತ್ತದೆ .ಶ್ರದ್ದೆಯ ಆರಾಧನೆ ನಡೆದು ಆ ದೇವರುಗಳನ್ನು ಬೀಳ್ಕೊಡಲಾಗುತ್ತದೆ . ಜನಪದರ ಆಟಿಯಅಜ್ಜಿ , ಸೋಣದ ಬಲೀಂದ್ರನತಾಯಿ , ಹೊಸ್ತಿಲಿನ ದೇವರು, ತೆನೆಕಟ್ಟುವ ಆಚರಣೆ , ತುಳುವರ ಪರ್ಬದ ಬಲೀಂದ್ರ , ಕೆಡ್ಡಸದ ಭೂಮಿತಾಯಿ , ಬಿಸುಕಣಿ ಹಾಗೂ ಶಿಷ್ಟದ ಗೌರಿ - ಗಣೇಶ , ನವರಾತ್ರಿಯ ಶಕ್ತಿಪೂಜೆ ,ದೀಪಾವಳಿಯ ಬಲೀಂದ್ರ ಮುಂತಾದ ದೇವರುಗಳು ತಾತ್ಕಾಲಿಕವಾಗಿ ನೆಲೆಗೊಂಡು , ಪೂಜೆಗೊಂಡು ನಿರ್ಗಮಿಸುವಂತವರು .ಈ ಸ್ಥಿರವಲ್ಲದ ಉಪಾಸನೆಗೆ ಮಣ್ಣಿನಮೂರ್ತಿ, ಕಲಶ ,ದೀಪ , ಸ್ವಸ್ತಿಕೆ(ಸುತ್ತೆ) ಮುಂತಾದ ಸಂಕೇತಗಳು ಮಾಧ್ಯಮಗಳಾಗುತ್ತವೆ . ಗೌರಿ - ಗಣೇಶರಿಗೆ ಮಣ್ಣಿನ ಮೂರ್ತಿಯಲ್ಲಿ ಪೂಜೆ .ಗಣೇಶನ ಎಷ್ಟೇ ಭೀಮಗಾತ್ರದ ಪ್ರತಿಮೆಯನ್ನಾದರೂ ಮಣ್ಣಿನಲ್ಲೆ ರಚಿಸುವುದು ,ಪೂಜೆಯ ಬಳಿಕ ನೀರಿನಲ್ಲಿ ವಿಸರ್ಜಿಸುವುದು . ನವರಾತ್ರಿಯ ಸಂದರ್ಭ ಕಲಶದಲ್ಲಿ ಆವಾಹನೆ - ಪೂಜೆ , ಸ್ವಸ್ತಿಕೆಯಲ್ಲಿ ಆರಾಧನೆ ಮತ್ತು ಶಾರದೆಯ ಮಣ್ಣಿನ ಮೂರ್ತಿಯ ಪೂಜೆ - ವಿಸರ್ಜನೆ ಇತ್ಯಾದಿ ವಿಶಿಷ್ಟ ವಿಧಾನದಲ್ಲಿ ಉಪಾಸನೆಗಳು ನಡೆದು ಬಂದಿದೆ . ಪೊಲಿ ( ಸಮೃದ್ಧಿ)ಯನ್ನು ತೆನೆಯ ರೂಪದಲ್ಲಿ ಮನೆ ತುಂಬಿಸಿಕೊಳ್ಳುವ ಆಚರಣೆ , ಬಲೀಂದ್ರನನ್ನು ದೀಪದಲ್ಲಿ - ಬೆಳೆಯ ಸಮೃದ್ಧಿಯಲ್ಲಿ ಕಾಣುವುದು , ಮನೆಯಂಗಳದಲ್ಲಿ ಬೂದಿಯಲ್ಲಿ ಬರೆಯುವ ರಂಗವಲ್ಲಿ ಹಾಗೂ ಅದರಲ್ಲಿರಿಸುವ ಮಂಗಳ ದ್ರವ್ಯಗಳಲ್ಲಿ ಕೆಡ್ಡಸದ ಆಚರಣೆಯ ಭೂಮಿತಾಯಿಯನ್ನು ಪೂಜಿಸುವುದು , ಮಂಗಳದ್ರವ್ಯಗಳೊಳಗೊಂಡ 'ವಿಷುಕಣಿ'ಯಲ್ಲಿ ಯುಗಾದಿಯ ಅಥವಾ ಹೊಸ ವರ್ಷದ ಭವಿಷ್ಯದ ದೇವರನ್ನು ಗುರುತಿಸುವುದು ಮುಂತಾದ ಕ್ರಮಗಳೆಲ್ಲ ತಾತ್ಕಾಲಿಕ ನೆಲೆಯಲ್ಲಿ ನೆರವೇರುತ್ತಿವೆ . ಅಂದರೆ ಈ ಸಂದರ್ಭಗಳಲ್ಲಿ ಪೂಜೆಗೊಳ್ಳುವ ನಂಬಿಕೆಗಳೆಲ್ಲ ಬಂದುಹೋಗುವ ಶ್ರದ್ಧೆಗಳಾಗಿವೆ .ಅಂತೆಯೇ ನಮ್ಮ ಗಣಪತಿ ಬಂದು ಹೋಗುವ ದೇವರುಗಳಲ್ಲಿ ಒಬ್ಬ . • ತಾಯಿ ಗೌರಿಯೊಂದಿಗೆ ಪ್ರತಿವರ್ಷ ಆಗಮಿಸಿ ಪೂಜೆಗೊಂಡು ನಿರ್ಗಮಿಸುವ ಗಣಪನ ಆರಾಧನೆಯಲ್ಲಿ ತಾಯಿ ಗೌರಿಗೂ ಪ್ರಾಧಾನ್ಯವಿದೆ .ಮೊದಲು "ಗೌರಿ ತೃತೀಯ , ಬಳಿಕ ಗಣೇಶ ಚತುರ್ಥಿ" ಇದರಿಂದ ಆದಿಪೂಜಿತನಾದರೂ ಮೊದಲು ತಾಯಿಗೆ ಪೂಜೆ . ಇಂದಿನ ಆಡಂಬರದ ವೈಭವೋಪೇತ ಗಣಪತಿ ,ದುರ್ಗೆಯರ ,ಬಲೀಂದ್ರನ ಉಪಾಸನಾ ವಿಧಾನಗಳ ಬಹು ವಿಸ್ತ್ರತ ಅಲಂಕಾರದ ಮರೆಯಲ್ಲಿ ಜನಸಾಮನ್ಯರ ಚಿಂತನೆಗೆ ಆಧಾರಗಳು ದೊರೆಯುತ್ತವೆ. ಸರಳ - ಸುಂದರ ಜನಪದೀಯ ಅನುಸಂಧಾನವು ಅಲ್ಲೆ ನಿಚ್ಚಳವಾಗಿರುತ್ತವೆ. ಏಕೆಂದರೆ ಜನಪದರ ಮನಸ್ಸುಗಳು ಕಲ್ಪಸಿದ ,ಆ ಆಲೋಚನೆಗಳನ್ನೆ ಮೂರ್ತಸ್ವರೂಪಕ್ಕೆ ಇಳಿಸಿದ ಪೂಜಾವಿಧಾನ - ಪ್ರತೀಕಗಳ ಚಿಂತನೆಗಳು ಸುಪ್ತವಾಗಿ ಗಮನ ಸೆಳೆಯುತ್ತಿರುತ್ತವೆ . ಸಹಜ ,ಮುಗ್ಧ ಚಿಂತನೆಯಿಂದ ವೈದಿಕದ ವೈಭವೋಪೇತ ಸೃಷ್ಟಿಯವರೆಗೆ ; ಬೇಟೆ ಸಂಸ್ಕೃತಿಯಿಂದ ಆರಂಭಿಸಿ ಆಧುನಿಕ ಜೀವನ ಶೈಲಿಯ ಹರವಿನಲ್ಲಿ ಮಣ್ಣಿನ ಮಗ ಮಹಾಕಾಯ ಮಹಾಗಣಪತಿಯ ಸ್ವೀಕಾರ ಮತ್ತು ಪೂಜಾವಿಧಾನಗಳಿಗೆ ರೋಚಕ ಇತಿಹಾಸವಿದೆ. ವಿಶ್ವದಾದ್ಯಂತ ಮಾನ್ಯತೆ ಇದೆ . ಒಂದು ಸಂಸ್ಕೃತಿಯ ಸಂಕೇತವಾಗಿ , ಒಬ್ಬ ಗಣವಾಗಿ , ಬ್ರಹ್ಮಣಸ್ಪತಿಯಾಗಿ , ಗಣಾಧ್ಯಕ್ಷನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಊಹಿಸಲಸಾಧ್ಯ .ಆಸ್ತಿಕ ,ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದ ದೇವರು ಗಣಪತಿ .ಜಾತಿ - ಮತ - ಪಂಥಗಳ ಕಟ್ಟುಪಾಡುಗಳನ್ನು ಮೀರಿ ವಿಶ್ವವ್ಯಾಪಿಯಾಗಿ ತನ್ನ ಆಕರ್ಷಕ ವರ್ಚಸ್ಸಿನ ಮೂಲಕ ವಿಶ್ವವಂದ್ಯನಾದ ದೇವರು ವಿಶ್ವಂಬರ ಮೂರ್ತಿಯಾಗಿ ಬೆಳೆದದ್ದು ,ಜನಮಾನಸದಲ್ಲಿ ಸ್ಥಾಯೀ ಸ್ಥಾನವನ್ನು ಪಡೆದದ್ದು ಮಾತ್ರ ಸತ್ಯ .
ವಿಘ್ನ ವಿಡ್ಡೂರಗಳು
ಮಾನವ ಬಯಸಿದ್ದೆಲ್ಲ ನಿರಾಯಾಸವಾಗಿ ಪ್ರಾಪ್ತಿಯಾಗಬೇಕು ,ಜೀವನ ಸುಂದರ ಹಾಗೂ ನಿರಾಳವಾಗಬೇಕು , ಬದುಕಿನ ನಿರಂತರತೆಗೆ ಭಂಗ ಬರಬಾರದು , ನಿರ್ವಿಘ್ನವಾಗಿ ಬಾಳಬೇಕು ಎಂದು ಬಯಸಿದಾಗ ಸಹಜವಾಗಿ ವಿಘ್ನಗಳು ಬರುತ್ತವೆ , ಆಗ ಆತಂಕಕ್ಕೊಳಗಾಗುತ್ತೇವೆ. ಕಾರ್ಯಾರಂಭಗಳಿಗೆ ವಿಘ್ನ - ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನಹರಿದಿರಬೇಕು . ವಿಘ್ನನಿವಾರಕ ದೇವರೊಬ್ಬನ ಚಿಂತನೆ ಬಂದಿರಬಹುದು .ಈ ತಲ್ಲಣ ,ಗೊಂದಲಗಳ ನಿವೃತ್ತಿಗಾಗಿ ವಿಘ್ನನಿವಾರಕ ದೇವರೊಬ್ಬ ಸಾಕಾರಗೊಂಡಿರಬೇಕು . ನಮ್ಮ ವಿಶಾಲ ಮನೋಭಾವದ ಆಧ್ಯಾತ್ಮಿಕ ಬದುಕು , ಸಾಂಸ್ಕೃತಿಕ ವೈಚಾರಿಕ ವೈಶಾಲ್ಯತೆಯಲ್ಲಿ ಗಜಮುಖನಾದರೂ ಸುಮುಖನಾಗಿ ಆದಿಪೂಜಿತನು ಪ್ರಥಮ ಪೂಜೆಗೊಳ್ಳುತ್ತಾನೆ .
ಅಮೂರ್ತವಾದರೂ ಮೂರ್ತ ಚಿಂತನೆ ,ಅಲೌಕಿಕದ ಲೌಕಿಕ ದರ್ಶನ , ಪ್ರತಿಕೃತಿ ಆರಾಧನೆಗಳೆಲ್ಲ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿದಾಗಲೂ ನಮ್ಮ ಗಣಪ ಹಲವು ಸ್ಥಿತ್ಯಂತರ - ರೂಪಾಂತರಗಳಿಗೆ ಒಳಗಾದರೂ ಬೆಳೆದದ್ದು ಭವ್ಯವಾಗಿ .ಸಂಸ್ಕೃತಿಯ ಮೂಲದಲ್ಲೆ ಇದ್ದ ಅಥವಾ ಆವಿರ್ಭವಿಸಿದ ಒಂದು ಚಿಂತನೆ ಇದಾದುರಿಂದ ಇದರ ಪರಿಣಾಮ ಇಷ್ಟು ತೀವ್ರವಾಗಿದೆ .ಗಾಢವಾಗಿ ಬೇರೂರಿದೆ .
ಅಸಂಗತ ,ಅಸಂಬದ್ದ ಪ್ರತಿಮಾಲಕ್ಷಣ , ಧಾರಣೆ - ವಾಹನಗಳಲ್ಲೂ ವೈರುಧ್ಯ , ಆಯುಧಗಳಲ್ಲೂ ಏನೋ ಒಂದು ಮೂಲದ ನೆನಪು , ಪ್ರತ್ಯಕ್ಷ ವಿರೋಧ - ಪರಸ್ಪರ ವಿರೋಧದ ಗಣಪನ ಭವ್ಯ ಬಿಂಬದಲ್ಲಿ ಪರಿಪೂರ್ಣತೆಯನ್ನು ,ಸುಮುಖತೆಯನ್ನು ,
ಪ್ರಕೃತಿ - ವಿಕೃತಿಗಳನ್ನು ದಿವ್ಯಸಾನ್ನಿಧ್ಯವನ್ನು ಗುರುತಿಸಿರುವುದು ಅಚ್ಚರಿಯ ಸಂಗತಿ .
ಹೊಟ್ಟೆಗೆ ಬಿಗಿದುಕೊಂಡದ್ದು ಸರ್ಪ . ವಾಹನವಾಗಿ ಇಲಿ . ಇಲಿಯನ್ನು ಕಂಡ ಸರ್ಪ ಬೆನ್ನಟ್ಟಿ ಬೇಟೆಯಾಡುವುದು ಲೋಕರೂಢಿ. ಆದರೆ ಅಸಂಬದ್ಧ ಎನಿಸಿದರೂ ಈ ವಿನಾಯಕನ ಪ್ರತಿಮೆಯಲ್ಲಿ ಜಾತಿವೈರಗಳೇ ಇಲ್ಲ .ಅಸಂಗತಗಳೇ ಸುಸಂಗತಗಳಾಗುವ ಪರಿಷ್ಕಾರ ಗಣಪತಿಯ ಬಿಂಬದಲ್ಲಿ ಸ್ಪಷ್ಟ.
ಮಾನವ ದೇಹ ,ಆನೆಯ ತಲೆ ಇದು ಒಂದು ರೀತಿಯ ಅಸಂಭವ . ಇಂತಹ ಬೇರೆ ದೇವರುಗಳೂ ನಮ್ಮಲ್ಲಿದ್ದಾರೆ .ಬೇಟೆ ಸಂಸ್ಕೃತಿಯ ಪ್ರತೀಕವಾಗಿ ಆನೆ ಎನ್ನುತ್ತಾ ಆದಿಮದ ಕಲ್ಪನೆಯಿಂದ ಗಜಾನನ ರೂಪವನ್ನು ಸಮರ್ಥಿಸಿದರೆ ಆತ ಬೇಟೆಯಿಂದ ಕೃಷಿ ಸಂಸ್ಕೃತಿಯವರೆಗೂ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಾನೆ .
ಜನಪದರೊಂದಿಗೆ ಸ್ಥಾನ ಪಡೆಯುತ್ತಾನೆ .ಮಕ್ಕಳಿಂದ ವೃದ್ಧರವರೆಗೆ ಹೇಗೆ ತನ್ನ ಛಾಪನ್ನು ಒತ್ತಿ ಪ್ರಿಯನಾಗುತ್ತಾನೆಯೋ ಅಂತೆಯೇ ಸಮಷ್ಟಿಯಲ್ಲಿ ಅದ್ಭುತ ಜನಪ್ರಿಯತೆವುಳ್ಳ ದೇವರಾಗುತ್ತಾನೆ . ಈ ಮಂಗಳಮೂರ್ತಿಯ ಪೂಜೆಯ ಅಥವಾ ಉಪಾಸನಾ ಅವಧಿಯಲ್ಲಿ ಆತ್ಮೀಯನಾಗುತ್ತಾ ಗಾಢವಾಗಿ ನಮ್ಮನ್ನು ಅಂದರೆ ಆರಾಧಕರನ್ನು ಆವರಿಸುತ್ತಾನೆ .ಈಗ ಹೇಳಿ ,ಈ ಮೂರ್ತಿ ನಿರ್ಣಯದಲ್ಲಿ ಅಸಂಗತವಿದೆಯೇ ?
ಎಂತಹ ದುಷ್ಟ ಮರ್ದನದಲ್ಲೂ ಬಳಸಬಹುದಾದ ಪ್ರಖರವಾದ ಆಯುಧ ಧರಿಸಿದ್ದರೂ ಗಣಪತಿ ಮೂರ್ತಿ ಪರಿಪೂರ್ಣವಾಗಬೇಕಿದ್ದರೆ ಒಂದು ಕೈಯಲ್ಲಿ ಮೋದಕ ಇರಲೇ ಬೇಕು .ಇಲ್ಲಿಯೂ ಆಯುಧ - ಆಹಾರದ ಸಾಂಗತ್ಯ ಅಚ್ಚರಿ ಮೂಡಿಸುವಂತಹದ್ದೆ .
ಗಾಣಪತೇಯರು ,ಆಧ್ಯಾತ್ಮಿಕ ಚಿಂತಕರು ,
ವೈದಿಕ ವಿದ್ವಾಂಸರು ಗಣಪನನ್ನು ಪ್ರಣವ ಸ್ವರೂಪನೆಂದೇ ಕೊಂಡಾಡಿದರು .
ಮಣ್ಣಿನಿಂದ ತೊಡಗಿ ಬಾನೆತ್ತರಕ್ಕೆ ಹರಡಿಕೊಳ್ಳಬಲ್ಲ ವಿಸ್ತೃತ ವ್ಯಾಖ್ಯಾನ ನೀಡುತ್ತಾ ವಿರಾಟ್ ಗಣಪನನ್ನು ನಮ್ಮ ಮುಂದಿರಿಸಿದರು. ಹೀಗೆ ಗಣಪತಿ ಬಹುಪ್ರೀತ , ಬಹುಮಾನ್ಯ .ಕಿವಿ , ಹೊಟ್ಟೆಗಳ ವೈಶಾಲ್ಯದಲ್ಲಿ ಪ್ರಪಂಚ ವಿಶಾಲತೆಯನ್ನು ಪ್ರಕಟಿಸುತ್ತಾ ಈ ಕಾಲದ ದ್ವಂದ್ವ ಹಾಗೂ ವಿರೋಧಾಭಾಸದ ಪ್ರಾಪಂಚಿಕ ವ್ಯವಹಾರಗಳಿಗೆ ಉತ್ತರ ನೀಡುತ್ತಾನೆ.
ವಿಲಕ್ಷಣ ತಾಯಿ - ಮಗ
ಸ್ತ್ರೀ ತನ್ನ ಬಯಕೆಯನ್ನು ಪುರುಷಾವಲಂಬನೆ ಇಲ್ಲದೆ ನೆರವೇರಿಸಿಕೊಳ್ಳುತ್ತಾಳೆ , ಮಗುವನ್ನು ಪಡೆಯುತ್ತಾಳೆ .ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ .ಅಸೂಯೆಗೊಳ್ಳುತ್ತಾನೆ .
ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ .ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ .
ಆದರೆ ಪ್ರಕರಣ ಸುಖಾಂತ್ಯವಾಗುತ್ತದೆ .
ಕತ್ತರಿಸಲ್ಪಟ್ಟ ತಲೆಗೆ ಆನೆಯ ಮುಖ ಜೋಡಿಸಿ ಮಗು ಗಜಾನನನಾಗುತ್ತಾನೆ.
ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ .ಇದು ಅನಿವಾರ್ಯವಾಗಿ ಅಲ್ಲ , ಪ್ರೀತಿಪೂರ್ವಕವಾಗಿ .
ನಿಗ್ರಹಿಸಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ ,ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು .
ಎಷ್ಟೇ ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ ,ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ .ಈ ಪ್ರಪಂಚ ನಿಯಮ ಗಣೇಶನ ಜನನದಲ್ಲಿ ಸಹಜವಾಗಿ ಅನಾವರಣಗೊಳ್ಳುತ್ತದೆ .
ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆಯ ಸಂಕೇತವಾಗಿ ಗೌರಿ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ .
ಪುರುಷ ಪ್ರವೇಶ ಪ್ರಕೃತಿಯ
ನಿರೀಕ್ಷೆಯಂತೆಯೇ ಆದರೆ 'ಅಕಾಲ'ದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು
ಪಡೆದು ತಡೆಯುತ್ತದೆ .ಈ ಘಟನೆ ಭೂಮಿ - ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು-ಬೆಳವಣಿಗೆಯನ್ನು
ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ .
ಬೇಟೆಯೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಾನವ ಬದುಕಿನ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ .ಇತಿಹಾಸ ಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ .ಅನಂತರ ಇಲಿಯ ಸಾಂಗತ್ಯ ಸಿಗುತ್ತದೆ . ಆದರೆ ಕೃಷಿಯೇ ಪ್ರಧಾನವಾದಾಗ ಗಣಪ ಬಹುವಾಗಿ ಪೂಜಿಸಲ್ಪಡುತ್ತಾನೆ .ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ - ದಾರುಶಿಲ್ಪಗಳಲ್ಲಿ ಲಭ್ಯ.
"ಸಾರ್ಪತ್ಯ ಆವೊಂದಿಪ್ಪೊಡು"
• ಜನಪದರ ಹೆಣ್ಣು ಮೈಸಗೆಯನ್ನು ಶಿವ ಪ್ರೀತಿಸುವುದು .ತಾವರೆ ಹೂವಾಗುವುದು .
ಗುಟ್ಟಿನಲ್ಲಿ ಜೊತೆಯಾಗುವುದು .
ಮುಂದುವರಿಯುವ ಕತೆಯಲ್ಲಿ ಭಾಮಕುಮಾರನ ಜನನ .ಈತ ಗಜಮುಖನಾಗುವುದು ಪಾರ್ವತಿ ಮಗುವನ್ನು ಸಾಕುವುದು . ಪಾರ್ವತಿ ಸಹಜವಾಗಿ ಮೈಸಗೆಯನ್ನು ಸ್ವೀಕರಿಸುವುದು .ಪ್ರತಿ ಮನೆಯಲ್ಲೂ ಗಣಪತಿ ಪೂಜೆ ನಡೆಯಬೇಕು . ಅಲ್ಲೆಲ್ಲ ಗಣಪತಿ "ಸಾರ್ಪತ್ಯ ಆವೊಂದಿಪ್ಪೊಡು" ಎಂಬುದು ಶಿವನ ವರ . ಇದು ಭಾಮಕುಮಾರ ಸಂಧಿಯಲ್ಲಿ ಬರುವ ಕತೆ .
ಗಣಪನ ಹೊಟ್ಟೆ
• ಕಣಜ , ಕಣಜಕ್ಕೆ ಸುತ್ತುವ ಹಗ್ಗ ( ಪೆರ್ಮರಿ) ಇವು ಗಣಪತಿಯ ಹೊಟ್ಟೆ ಮತ್ತು ಹೊಟ್ಟೆಗೆ ಸುತ್ತಿದ ಸರ್ಪವನ್ನು ಸಾಂಕೇತಿಸುತ್ತವೆ .
ಅಕ್ಕಿ - ಭತ್ತಕ್ಕೆ ಹಾಗೂ ಇತರ ಬೆಳೆಗಳಿಗೆ
ಇಲಿಕಾಟ ಸಹಜ ( ಅರಿಬಾರ್ ಇತ್ತಿನಲ್ಪ ಎಲಿ ಪೆರ್ಗುಡೆ ಕಡಮೆನಾ ) . ಇಂತಹ ಆಹಾರದ ರಕ್ಷಣೆಗಾಗಿ ಸರ್ಪ(ಹಗ್ಗ). ಗಣಪನ ಹೊಟ್ಟೆ ಕೃಷಿ ಸಮೃದ್ಧಿಯ ದಾಸ್ತಾನು . ಹೇಗಿದೆ ಜನಪದರ ಕಲ್ಪನೆ .
ಬೆಣಚುಕಲ್ಲಿನ 'ಬೆನಕ'
• ಗಣಪತಿ ಬೇಟೆ ಸಂಸ್ಕೃತಿಯ ಪ್ರತಿನಿಧಿ :
ಗಣಪನ ಮೂರ್ತಿ ಶಿಲ್ಪದಲ್ಲೆ ಪಾಚೀನತೆಯನ್ನು ಗುರುತಿಸುವ ಸಂಶೋಧಕರು ಇವನ ಅಸ್ತಿತ್ವಕ್ಕೆ ಅಥವಾ ಕಲ್ಪನೆಗೆ ಬೇಟೆ ಸಂಸ್ಕೃತಿಯಷ್ಟು ಪಾಚೀನತೆಯನ್ನು ಅಥವಾ ಅದಕ್ಕಿಂತಲೂ ಪೂರ್ವದ ಜನಜೀವನದ ಕಾಲದವರೆಗೆ ಒಯ್ಯುತ್ತಾರೆ .ಬೇಟೆ , ಬೇಟೆಗೆ ಬಳಸುತ್ತಿದ್ದ ಬೆಣಚುಕಲ್ಲು ಪ್ರಧಾನ ಆಯುಧ . ಇಲ್ಲಿಂದಲೇ ಬೆಣಚುಕಲ್ಲಿನಿಂದ "ಬೆನಕ" ಎಂದು ಪೂಜಿಸುವ ವಿಧಾನ ರೂಢಿಗೆ ಬಂದಿರಬಹುದು . ಈ ಶೈಲಿಯ ಪೂಜೆ
ಈಗಲೂ ರೂಢಿಯಲ್ಲಿವೆ .ವೈಭವದ ಮೂರ್ತಿಗಳ ಭವ್ಯತೆಯ ನೇಪಥ್ಯದಲ್ಲಿ ಈ ಬೆನಕನಿದ್ದಾನೆ . ಬೇಟೆಯ ಕಾಲಘಟ್ಟದಲ್ಲಿ ಆನೆಯ ಕಲ್ಪನೆ ಬಂದಿರಬಹುದು .
ಶ್ರಮ ಸಂಸ್ಕೃತಿ
• ಶ್ರಮ ಸಂಸ್ಕೃತಿಯ ಸಂಕೇತವಾಗಿ ಗಣಪತಿ ಗುರುತಿಸಲ್ಪಡುವುದಿದೆ .ಶ್ರಮದಿಂದ ಮೈಬೆವರುತ್ತೆ , ಇದೇ ಮೈಯ ಮಣ್ಣಿಗೆ ಕಾರಣವಾಗುತ್ತದೆ .ಪಾರ್ವತಿಯ ಮೈಯ ಮಣ್ಣಿನಿಂದ ಗಣಪನ ಸೃಷ್ಟಿ .ಮಣ್ಣಿನ ಮಗನ ಕಲ್ಪನೆ ಎಷ್ಟು ಸುಂದರ .ಕಪಿಲ ವರ್ಣ , ಕಾವಿಬಣ್ಣ , ಮಣ್ಣಿನ ಬಣ್ಣ ,ಧೂಮ್ರವರ್ಣ , ಕಪ್ಪು - ಕೆಂಪು ಬಣ್ಣಗಳ ಸಂಯುಕ್ತ ಇದೂ ಮಣ್ಣಿನ ಬಣ್ಣವೆ .ಇದು ವಿಘ್ನೇಶನ ಮೈ ಬಣ್ಣ .
ಕೃಷಿ ಸಂಸ್ಕೃತಿ: "ಸೆಗಣಿಯ ಗಣಪಂಗೆ ಸಂಪಗೆಯರಳಲ್ಲಿ ಪೂಜಿಸಿದರೆ" ಭೂಮಿಯ ಫಲವತ್ತತೆಗಾಗಿ ಸೆಗಣಿ - ಕೃಷಿಗೆ ಪೂರಕವಾಗಿ ಒದಗಿದ ಪಶುಪಾಲನೆ. ಸೆಗಣಿಗೆ ಹಸಿರು ಗರಿಕೆಯನ್ನು ಇಟ್ಟು ಪೂಜಿಸುವ ಗಣಪತಿಯ ಕಲ್ಪನೆಯೊಂದಿದೆ .
ಕಬ್ಬು ಪ್ರಧಾನವಾಗಿ ಆನೆಮುಖ ಹೊಂದಿರುವ ಸ್ವರೂಪದ ಆರಾಧನೆ . ಇವು ಜನಪದರ ಚಿಂತನೆಗಳು .
(ಓದಿದ್ದು)
ಬರಹ :ಕೆ.ಎಲ್.ಕುಂಡಂತಾಯ
ಬಂಟಕಲ್ಲು - ಕೊಂಕಣಿ ಮಾನ್ಯತಾ ದಿನಾಚರಣೆ

Posted On: 20-08-2020 08:09PM
ಕೊಂಕಣಿ ಬಾಷೆಯನ್ನು 1992 ರ ಅಗೋಷ್ಟ್ 20 ರಂದು ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸಲಾಯಿತು. ಕೊಂಕಣಿ ಬಾಷೆಗೆ ಸಂವಿಧಾನಿಕ ಸ್ಥಾನ ಮಾನ ಸಿಕ್ಕಿದ ಈ ದಿನವನ್ನು ಕೊಂಕಣಿ ಮಾನ್ಯತಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಬಂಟಕಲ್ಲು ದೇವಸ್ಥಾನದ ವಠಾರದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಶೈಕ್ಷಣಿಕ, ತಾಂತ್ರಿಕ, ಸಮಾಜಿಕವಾಗಿ ಸೇವೆ ನೀಡುತ್ತಿರುವ ಕಟಪಾಡಿ ಶ್ರೀ ಸತ್ಯೇಂದ್ರ ಪೈ ಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೊಂಕಣಿ ಬಾಷೆಯ ವಿಶೇಷತೆ ಬಗ್ಗೆ ತಿಳಿಸಿ ನಮ್ಮ ಬಾಷೆಯ ಬಗ್ಗೆ ಅಭಿಮಾನ ಹೊಂದಿ ಬಾಷೆಯ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು, ಕೊಂಕಣಿ ಬಾಷೆಯ ಇತಿಹಾಸವನ್ನು ಎಲ್ಲರೂ ತಿಳಿಯುವಂತಾಗಬೇಕು.ಇದರ ಇತಿಹಾಸವನ್ನು ದಾಖಲಿಸಿಕೊಳ್ಳುವ ಕಾರ್ಯ ಆಗಲಿ ಎಂದರು. ಚಲನ ಚಿತ್ರ, ಅಥವಾ ಧಾರವಾಹಿಯ ಮೂಲಕ ಇತಿಹಾಸ ದಾಖಲಿಸುವಂತಾಗಲಿ ಎಂದರು ...
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಪ್ರೀತಿ ನಾವೆಲ್ಕರ್ ಬಂಟಕಲ್ಲು ಇವರಿಗೆ ಕೊಂಕಣಿ ಮಾನ್ಯತಾ ದಿವಸ್ನ ಗೌರವ ಪ್ರಧಾನ ಮಾಡಲಾಯಿತು. ಇವರನ್ನು ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಜಯರಾಮ ಪ್ರಭು ಗಂಪದಬೈಲು ಇವರು ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಈ ಕಾರ್ಯಕ್ರಮವು ಪ್ರತೀವರ್ಷ ನಡೆಯುವಂತಾಗಲಿ ಎಂದು ಹಾರೈಸಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರೂ , ಮಂಗಳೂರು ವಿ.ವಿಯ ಕೊಂಕಣಿ ಅಧ್ಯಾಯನ ಪೀಠದ ದ ಸದಸ್ಯರು ಆಗಿರುವ ಶ್ರೀ ಪುಂಡಲೀಕ ಮರಾಠೆಯವರು ಪ್ರದಾನ ಬಾಷಣ ಮಾಡಿದರು. ಕೊಂಕಣಿ ಮಾನ್ಯತಾ ದಿವಸದ ಮಹತ್ವ, ಅಕಾಡಮಿಯಿಂದ ಸಿಗುವ ಸಹಾಯಗಳು, ಬಾಷೆ ನಡೆದು ಬಂದ ದಾರಿ ಹಾಗೂ ಅಕಾಡಮಿ ಯ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಬರಹಗಾರ ಶ್ರೀ ರಾಘವೇಂದ್ರ ಪ್ರಭು ಕರ್ವಾಲು, ಶಿರ್ವ ಸಂತ ಮೇರಿ ಕಾಲೇಜಿನ ಉಪನ್ಯಾಸಕ ಶ್ರೀ ವಿಠಲ ನಾಯಕ್, ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಉಮೇಶ್ ಪ್ರಭು,ಯುವ ವೃಂದದ ಸದಸ್ಯರು, ಸಮಾಜ ಭಾಂಧವರು ಉಪಸ್ಥಿತರಿದ್ದರು.
.ಯುವ ವೃಂದದ ಗೌರವಾಧ್ರಕ್ಷ ಶ್ರೀ ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.
ಯುವ ವೃಂದದ ಅಧ್ಯಕ್ಷ ಶ್ರೀ ವಿಶ್ವನಾಥ ಬಾಂದೇಲ್ಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಶ್ರೀ ಆಶಿಷ್ ಪಾಟ್ಕರ್ ಧನ್ಯವಾದ ನೀಡಿದರು. ಯುವ ವೃಂದದ ಜೊತೆಕಾರ್ಯದರ್ಶಿ ಪ್ರಾರ್ಥಿಸಿ, ಕುಮಾರಿ ರಚಿತಾ ಪಾಟ್ಕರ್ ರವರು ಕಾರ್ಯಕ್ರಮ ನಿರ್ವಹಿಸಿದರು.
ಬಿರುವೆರ್ ಕಾಪು ಸೇವಾ ಟ್ರಸ್ಟ್ 2020ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿ ಅಹ್ವಾನ

Posted On: 18-08-2020 10:21AM
ಕಾಪು ತಾಲೂಕಿನಲ್ಲಿ ಎರಡನೇ ಬಾರಿಗೆ ಬಿರುವೆರ್ ಕಾಪು ಸೇವಾ ಟ್ರಸ್ಟ್ ಇದರ ವತಿಯಿಂದ ಕಾಪು ತಾಲೂಕಿನ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ *ಜ್ಞಾನ ದೀವಿಗೆ 2020* ಎಂಬ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಆರ್ಥಿಕವಾಗಿ ಹಿಂದುಳಿದಿದ್ದು ಹಿಂದಿನ ತರಗತಿಯಲ್ಲಿ ಕಲಿಕೆಯಲ್ಲಿ ಶೇಕಡಾ 85% ಗಿಂತ ಹೆಚ್ಚು ಅಂಕಗಳಿಸಿದ್ದರೆ ಆತನು ಅಥವಾ ಆಕೆಯು *ಜ್ಞಾನ ದೀವಿಗೆ 2020* ಯೋಜನೆಯ ಫಲಾನುಭವಿಯಾಗಬಹುದು (ವಿ.ಸೂ : ಬಿರುವೆರ್ ಕಾಪು ಸೇವಾ ಟ್ರಸ್ಟ್ ಪರಿಶೀಲಿಸಿದ ಅರ್ಜಿಯಲ್ಲಿ ಯೋಜನೆಗೆ ಅರ್ಹರಾದವರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.. )
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು 1. 2020 ನೇ ಸಾಲಿನ SSLC ಮತ್ತು 2nd PUC ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. 2. ಹಿಂದಿನ ತರಗತಿಯಲ್ಲಿ ಶೇಕಡಾ 85% ಅಂಕ ಪಡೆದಿರಬೇಕು. 3. ವಿದ್ಯಾರ್ಥಿವೇತನ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ತಮ್ಮ ಹಿಂದಿನ ಪರೀಕ್ಷೆಯ ಮಾರ್ಕ್ ಕಾರ್ಡ್ ಲಗತ್ತೀಕರಿಸಿ, ಈ ಕೆಳಗೆ ತಿಳಿಸಿರುವ ವಿಳಾಸಕ್ಕೆ ವಿದ್ಯಾರ್ಥಿಯೇ ಸ್ವತಃ ಅರ್ಜಿ ಸಲ್ಲಿಸಬೇಕು. 4. ಅರ್ಜಿಯೊಂದಿಗೆ ವಿದ್ಯಾರ್ಥಿಯ ಒಂದು ಫೋಟೊ ಲಗತ್ತಿಸಿರಬೇಕು ಮತ್ತು ಮೊಬೈಲ್ ನಂಬರ್ ನಮೂದಿಸಿರಬೇಕು. 5. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10/ 09/2020 6. ಅರ್ಜಿಯನ್ನು ಬಿರುವೆರ್ ಕಾಪು ಸೇವಾ ಟ್ರಸ್ಟ್ ಗೆ ಬರೆದಿರಬೇಕು ಮತ್ತು ಕೆಳಗೆ ಬರೆದ ವಿಳಾಸವನ್ನು ನಮೂದಿಸರಬೇಕು.
ಅರ್ಜಿ ಸಲ್ಲಿಸುವ ವಿಳಾಸ (ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮುಖಾಂತರವೇ ಸಲ್ಲಿಸಬೇಕು) Anil amin kaup City travels & tours Janardhana complex Main road kaup Near trupthi hotel - 574106 ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಕಾರ್ತಿಕ್ ಅಮಿನ್ : 74833 45138 ಸುಧಾಕರ್ ಸಾಲ್ಯಾನ್:9901329819