Updated News From Kaup

ಜ.30 ರಂದು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ : ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

Thumbnail
Posted On: 28 Jan 2021, 12:42 PM

ಉಡುಪಿ : ಜನವರಿ 30 ರಂದು ಬ್ರಹ್ಮಾವರ ತಾಲೂಕಿನ ನೆಂಚೂರು ಮತ್ತು ನಾಲ್ಕೂರು ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ, ವಾಸ್ತವ್ಯ ಮಾಡಿ, ಸದ್ರಿ ಗ್ರಾಮಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದಾರೆ, ಇಡೀ ರಾಜ್ಯದಲ್ಲಿ ಇದು ಪ್ರಥಮ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಗ್ರಾಮ ವಾಸ್ತವ್ಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನವರಿ 30 ರಂದು ಗ್ರಾಮ ವಾಸ್ತವ್ಯ ನಡೆಯುವ ನೆಂಚೂರು ಮತ್ತು ನಾಲ್ಕೂರು ಗ್ರಾಮಗಳ ಸಾರ್ವಜನಿಕರ ಕುಂದು ಕೊರತೆಗಳ ಕುರಿತಂತೆ ಸಂಬAದಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು 3 ದಿನಗಳ ಮುಂಚಿತವಾಗಿಯೇ ಅರ್ಜಿಗಳನ್ನು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳಿ. ಸದ್ರಿ ಗ್ರಾಮ ವಾಸ್ತವ್ಯದ ದಿನ ಫಲಾನುಭವಿಗಳಿಗೆ ಅರ್ಜಿಗೆ ಸಂಬAಧಿಸಿAತೆ ಸೂಕ್ತ ಸೌಲಭ್ಯ ಒದಗಿಸುವ ಕುರಿತು ಕ್ರಮ ಕೈಗೊಳ್ಳಿ. ಸಂಬಂದಪಟ್ಟ ತಾಲೂಕಿನ ತಹಸೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಎಲ್ಲಾ ಅಧಿಕಾರಿಗಳು ವಾಸ್ತವ್ಯ ಕಾರ್ಯಕ್ರಮದಲ್ಲಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು ಮತ್ತು ಆಕಾರ್ ಬಂದ್ ತಾಳೆ ಹೊಂದುವ ಕುರಿತು ಖಚಿತಪಡಿಸಿಕೊಳ್ಳಬೇಕು. ಪೌತಿ ಹೊಂದಿದ ಖಾತೆದಾರರ ಹೆಸರನ್ನು, ನೈಜ ವಾರಿಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮದ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ದೊರೆಯುತ್ತಿರುವ ಬಗ್ಗೆ ಪರಿಶೀಲನೆ, ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು, ಗ್ರಾಮದಲ್ಲಿನ ಸ್ಮಶಾನ ಲಭ್ಯತೆ ಬಗ್ಗೆ ಪರಿಶೀಲನೆ, ಆಶ್ರಯ ಯೋಜನೆಗೆ ಸಂಬAಧಿಸಿದAತೆ ಅಗತ್ಯ ಜಮೀನು ಕಾದಿರಿಸಲು ಕ್ರಮ ಕೈಗೊಳ್ಳುವುದು, ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ತೆರವು, ಆಧಾರ್ ಕಾರ್ಡ್ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಮತದಾರರ ಪಟ್ಟಿ ಪರಿಷ್ಕರಣೆ, ಅತಿವೃಷ್ಠಿ/ಅನಾವೃಷ್ಠಿ ಎದುರಿಸಲು ಮುಂಜಾಗ್ರತಾ ಕ್ರಮಗಳು, ಬರ/ಪ್ರವಾಹ ಇದ್ದಲ್ಲಿ ಪರಿಹಾರ, ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ, ಆಹಾರ, ಕಲಿಕಾ ಕ್ರಮಗಳ ಬಗ್ಗೆ ಪರಿಶೀಲನೆ, ಗ್ರಾಮದಲ್ಲಿನ ವಸತಿ ನಿಲಯಗಳಿಗೆ ಭೇಟಿ ನೀಡಿ, ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲನೆ, ಗ್ರಾಮದ ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿ.ಪಿ.ಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವುದು, ಗುಡಿಸಲು ಇರುವ ವಾಸದ ಮನೆಗಳನ್ನು ಪತ್ತೆ ಹಚ್ಚಿ ಸರ್ಕಾರದ ವಿವಿಧ ಯೋಜನೆಯಡಿ ಮನೆ ಕಟ್ಟಲು ಅನುದಾನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದು ಹಾಗೂ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸದಾಶಿವ ಪ್ರಭು ತಿಳಿಸಿದರು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸಂಬಂದಪಟ್ಟ ಗ್ರಾಮದ ಪಿಡಿಓಗಳು ಮತ್ತು ಪಂಚಾಯತ್‌ಗಳ ಆಡಳಿತಾಧಿಕಾರಿಗಳು, ಕಂದಾಯ ಸಿಬ್ಬಂದಿ ಕಡ್ಡಾಯವಾಗಿ ಸ್ಥಳದಲ್ಲಿ ಹಾಜರಿರಬೇಕು. ಸಾರ್ವಜನಿಕರು ತಮ್ಮ ಕುಟುಂಬದ ವ್ಯಕ್ತಿ ಮರಣ ಹೊಂದಿದ್ದಲ್ಲಿ ಸಂಬಂದಪಟ್ಟ ಇಲಾಖೆಯಿಂದ ಮರಣ ಪ್ರಮಾಣ ಪತ್ರ ಪಡೆದು, ಪೌತಿ ಖಾತೆ ಬದಲಾವಣೆ ಮಾಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಯಗಳಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಲ್ಲಿ ಕೂಡಲೇ ಮಾಹಿತಿ ನೀಡಿ, ಅನವಶ್ಯಕವಾಗಿ ಪಿಂಚಣಿ ಹಣ ಅನರ್ಹರಿಗೆ ತಲುಪಿ ದುರುಪಯೋಗವಾಗದಂತೆ ಎಚ್ಚರವಹಿಸಬೇಕು, ಇಲ್ಲವಾದಲ್ಲಿ ಮೃತರ ಹೆಸರಿನಲ್ಲಿ ಪಿಂಚಣಿ ಪಡೆದವರಿಂದಲೇ ಮೊತ್ತವನ್ನು ವಸೂಲಿ ಮಾಡಲಾಗುವುದು ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಚ್ಚರಿಸಿದರು. ಪ್ರತೀ ತಿಂಗಳ 3 ನೇ ಶನಿವಾರ ಜಿಲ್ಲಾಧಿಕಾರಿಗಳು, ಭೂ ದಾಖಲೆಗಳ ಉಪ ನಿರ್ದೇಶಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಉಪ ವಿಭಾಗದ ಸಹಾಯಕ ಆಯುಕ್ತರು, ಸಂಬಂದಪಟ್ಟ ತಹಸೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರೊಂದಿಗೆ ಗ್ರಾಮ ವಾಸ್ತವ್ಯ ನಡೆಯಲಿದ್ದು, ಜಿಲ್ಲಾಧಿಕಾರಿ ಭೇಟಿ ನೀಡುವ ತಾಲೂಕಿನ ತಹಸೀಲ್ದಾರ್ ಹೊರತುಪಡಿಸಿ, ಉಳಿದ ತಾಲೂಕುಗಳ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಲಿದ್ದು, ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಾಸ್ತವ್ಯ ಮಾಡಲಿದ್ದಾರೆ ಎಂದರು. ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಪು ದೀಪಸ್ತಂಭ 5 ತಿಂಗಳ ಹಿಂದೆ ಹಾನಿಯಾದ ಮೆಟ್ಟಿಲು, ಗೋಡೆ ಇನ್ನೂ ದುರಸ್ತಿಯಾಗಿಲ್ಲ ಪ್ರವಾಸೋದ್ಯಮ ಇಲಾಖೆಯ ಜಾಣ ಮೌನ

Thumbnail
Posted On: 28 Jan 2021, 12:36 PM

ಉಡುಪಿ ಜಿಲ್ಲೆಯ ಕಾಪು ಕಡಲ ಕಿನಾರೆಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲ್ಪಟ್ಟ ಕಾಪು ದೀಪಸ್ತಂಭ ವೀಕ್ಷಿಸಲು ದಿನನಿತ್ಯ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಇತ್ತೀಚಿನ ಮಳೆಯ ಸಂದರ್ಭ ದೀಪಸ್ತಂಭದ ಆರಂಭದ ಮೆಟ್ಟಿಲುಗಳು ಮತ್ತು ಗೋಡೆ ಹಾನಿಗೊಂಡಿದೆ. 5 ತಿಂಗಳಿಂದ ಈ ರೀತಿಯ ಅವಸ್ಥೆ ಇದ್ದರೂ ಈವರೆಗೂ ದುರಸ್ತಿ ಕಂಡಿಲ್ಲ. ಈ ಬಗ್ಗೆ ಕೆಳ ತಿಂಗಳ ಹಿಂದೆ ಪತ್ರಿಕೆಯಲ್ಲಿ ವರದಿ ಪ್ರಕಟವಾದರೂ ಇನ್ನೂ ಎಚ್ಚೆತ್ತು ಕೊಳ್ಳದ ಪ್ರವಾಸೋದ್ಯಮ ಇಲಾಖೆ ಸುಂದರ ಪ್ರವಾಸಿ ತಾಣವಾದ ಈ ಸ್ಥಳದ ಇಂತಹ ಸ್ಥಿತಿಯನ್ನು ಈವರೆಗೂ ಗಮನಿಸದಂತಿದ್ದು, ಆದಷ್ಟು ಬೇಗ ಸರಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುತ್ಯಾರು : ಭಾರತ ಮಾತಾ ಪೂಜನಾ ಕಾರ್ಯಕ್ರಮ

Thumbnail
Posted On: 27 Jan 2021, 07:37 PM

ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾರತಮಾತಾ ಪೂಜನಾ ಕಾರ್ಯಕ್ರಮವು ಪಡು ಕುತ್ಯಾರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಜರಗಿತು. ಹಿಂದುಗಳು ಬಿಂದು ಬಿಂದುವಾಗಿ ಸಂಘಟಿತರಾಗಿ ಆದರ್ಶಪುರುಷ ಶ್ರೀರಾಮನ ತತ್ವ, ಪರಸ್ಪರ ಪ್ರೇಮ, ಸ್ನೇಹ, ಸದ್ಭಾವ, ಕರುಣೆ, ಮಮತೆ, ಬಂಧುತ್ವ, ಆರೋಗ್ಯಗಳಿಂದ ಕೂಡಿದ ಸಂತೃಪ್ತ ಜೀವನ ನಡೆಸುವಂತಾಗಲಿ. ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಾತೃ ಮಂಡಳಿಯ ಪ್ರಮುಖ್ ಶ್ರೀಮತಿ ರಾಜಲಕ್ಷ್ಮಿ ಸತೀಶ್ ಕರೆ ನೀಡಿದರು. ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ್ ಬಿ. ಶೆಟ್ಟಿ, ಸಂಪತ್ ಕುಮಾರ್, ಭಾರತಿ ರಾಘವೇಂದ್ರ, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಆಚಾರ್ಯ ಹಾಗೂ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರಾದ ಪವನ್ ಶೆಟ್ಟಿ ಕೇಂಜ, ಸುಂದರಿ ಕುಲಾಲ್, ಪ್ರವೀಣ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಗಂಗಾಧರ ಆಚಾರ್ಯ ಸ್ವಾಗತಿಸಿ, ಶಶಿರಾಜ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸುಶಾಂತ್ ಶೆಟ್ಟಿ ವಂದಿಸಿದರು.

ಕುತ್ಯಾರು ಗ್ರಾಮಪಂಚಾಯತ್ ನಲ್ಲಿ ಗಣರಾಜ್ಯೋತ್ಸವ

Thumbnail
Posted On: 27 Jan 2021, 07:19 PM

ಕುತ್ಯಾರು ಗ್ರಾಮಪಂಚಾಯತ್ ಆಡಳಿತಾಧಿಕಾರಿ ಅರುಣ್ ಕುಮಾರ್ ಹೆಗ್ಡೆ ಧ್ವಜಾರೋಹಣ ಮಾಡುವ ಮೂಲಕ ಕುತ್ಯಾರು ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭ ನೂತನ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ರಜನಿ ಭಟ್ ಸ್ವಾಗತಿಸಿ, ವಂದಿಸಿದರು.

ಕಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ

Thumbnail
Posted On: 27 Jan 2021, 07:15 PM

ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಿವೃತ್ತ ಶಿಕ್ಷಕರಾದ ಶ್ರೀಕರಯ್ಯ ಧ್ವಜಾರೋಹಣ ಮಾಡಿದರು. ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಅರುಣ್ ಕುಮಾರ್ ಹೆಗ್ಡೆ, ಪಿಡಿಒ ರಜನಿ ಭಟ್, ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಮಟ್ಟಾರು : ಶ್ರೀ‌ರಾಮ ನಾಮ ಜಪದೊಂದಿಗೆ ಶ್ರೀರಾಮೋತ್ಸವ

Thumbnail
Posted On: 27 Jan 2021, 06:42 PM

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ವಿಶ್ವ ಹಿಂದು ಪರಿಷದ್ ಬಜರಂಗದಳ ಮಾತೃಶಕ್ತಿ ಮಟ್ಟಾರು ಘಟಕದ ನೇತೃತ್ವದಲ್ಲಿ ಶ್ರೀರಾಮೋತ್ಸವ ಜರಗಿತು. ಸಾಮೂಹಿಕವಾಗಿ ದೀಪ ಪ್ರಜ್ವಲನೆಯೊಂದಿಗೆ ಶ್ರೀರಾಮ ನಾಮ ಜಪ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಕರಸೇವಕರಾದ ಪಾಂಡುರಂಗ ಶ್ಯಾನಭಾಗ್ ಮಾರ್ಗದರ್ಶನ ಮಾಡಿದರು. ಕರಾವಳಿ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ,ಅಯೋಧ್ಯೆ ಕರಸೇವಕರಾದ ರಮೇಶ ಪ್ರಭು, ದಿನೇಶ ಪಾಟ್ಕರ್, ವಿಶ್ವ ಹಿಂದು ಪರಿಷದ್ ಮಟ್ಟಾರು ಘಟಕದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಧರ್ಮಾಚಾರ್ಯ ಪ್ರಮುಖ್ ವೇದಮೂರ್ತಿ ಪ್ರಸನ್ನ ಭಟ್ ಶ್ರೀರಾಮ ನಾಮ ಮಂತ್ರ ಭೋಧಿಸಿದರು.ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸುಮಾರು 200 ರಷ್ಟು ಜನರು ಸಾಮೂಹಿಕವಾಗಿ ಶ್ರೀರಾಮ ನಾಮ ಜಪ ಮಾಡಿದರು.

92 ಹೇರೂರು ಗ್ರಾಮದಲ್ಲಿ ಕಳ್ಳರ ಕಾಟ

Thumbnail
Posted On: 27 Jan 2021, 10:54 AM

ಹಲವು ದಿನಗಳಿಂದ ಕಳ್ಳರ ಕಾಟ ಉಡುಪಿಯಲ್ಲಿ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲೆಯ ಕಾಪು ತಾಲೂಕಿನ 92 ಹೇರೂರು ಗ್ರಾಮದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ರಾತ್ರಿ ವಿದ್ಯುತ್ ಕಡಿತಗೊಂಡಾಗ, ನಾಯಿಗಳ ಬೊಗಳುವಿಕೆ ಜಾಸ್ತಿ ಆಗುತ್ತೆ, ಇದೆ ಹೊತ್ತಿನಲ್ಲಿ ಕಳ್ಳರು ಈ ಪರಿಸರದಲ್ಲಿ ತಿರುಗಾಡುವುದರ ಬಗ್ಗೆ ಹಲವರ ಅನಿಸಿಕೆಯಾಗಿದೆ. ಈ ಬಗ್ಗೆ ಊರಿನ ಜನಪ್ರತಿನಿಧಿಗಳಿಗೆ ಗೊತ್ತಿದ್ದರು ಸುಮ್ಮನಿರುವುದು ಗ್ರಾಮಸ್ಥರಿಗೆ ಬೇಸರದ ವಿಷಯ. ಈ ಕಳ್ಳರ ಕಾಟಕ್ಕೆ ಗ್ರಾಮಸ್ಥರೆ ಎಚೆತ್ತುಕೊಳ್ಳ ಬೇಕೇ? ಎಂದು ಸ್ಥಳೀಯರಾದ ಜಗದೀಶ್ ಬಂಟಕಲ್ಲ್ ಪ್ರಶ್ನಿಸಿದ್ದಾರೆ.

ವಿಜೇತ ವಿಶೇಷ ಶಾಲೆ : ಗಣರಾಜ್ಯೋತ್ಸವ ದಿನಾಚರಣೆ, ಮೇಕ್ ಸಂ ಒನ್ ಸ್ಮೈಲ್ ತಂಡದಿಂದ ಶಾಲಾ ಗೋಡೆಯಲ್ಲಿ ಇಂಡಿಯಾ ಬಾರ್ಡರ್ ಚಿತ್ರಗಳ ಅನಾವರಣ, ದೇಶದ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ.

Thumbnail
Posted On: 27 Jan 2021, 10:46 AM

ವಿಜೇತ ವಿಶೇಷ ಶಾಲೆಯಲ್ಲಿ 72ನೇ ವರ್ಷದ ಗಣರಾಜ್ಯೋತ್ಸವ ಹಾಗೂ ಮೇಕ್ ಸಂ ಒನ್ ಸ್ಮೈಲ್ ತಂಡದ ವತಿಯಿಂದ ವಿಜೇತ ವಿಶೇಷ ಶಾಲಾ ಗೋಡೆಯಲ್ಲಿ ಚಿತ್ರಿಸಿದ ಇಂಡಿಯಾ ಬಾರ್ಡರ್ (ಭಾರತ ದ ಗಡಿ ಪ್ರದೇಶ) ಚಿತ್ರಣವನ್ನು ವಿಜೇತ ವಿಶೇಷ ಶಾಲೆಗೆ ಸಮರ್ಪಿಸಿ, ದೇಶದ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ದ್ವಜಾರೋಹಣವನ್ನು ಶ್ರೀ ಮೋಹನ್ ಶೆಣೈ ಮತ್ತು ಶ್ರೀಮತಿ ಅರುಣಾ ಎಂ. ಶೆಣೈ ದಂಪತಿಗಳು ನೆರವೇರಿಸಿದರು. ಜಿಲ್ಲಾ ನಕ್ಸಲ್ ನಿಗ್ರಹ ದಳದ ಎಸ್.ಪಿ, (ಐ ಪಿ ಎಸ್.) ಅಧಿಕಾರಿ ಶ್ರೀ ನಿಖಿಲ್ ಬುಲ್ಲವರ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಶಿಧರ್ ಜಿ. ಎಸ್, ಕೆ.ಎಂ.ಇ.ಎಸ್ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ನೆಲ್ಲಿಕಾರ್, ಮೇಕ್ ಸಮ್ ಒನ್ ಸ್ಮೈಲ್ ತಂಡದ ಪ್ರಖ್ಯಾತ ಕಲಾವಿದರು ಹಾಗೂ ದಂತವೈದ್ಯರು ಡಾ.ವರ್ಣೋಧರ್, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಶೆಟ್ಟಿ, ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅದ್ಯಕ್ಷರು ಶ್ರೀ ರತ್ನಾಕರ್ ಅಮೀನ್, ಟ್ರಸ್ಟಿ ಶ್ರೀ ಸಿಯಾ ಸಂತೋಷ್ ನಾಯಕ್, ಶ್ರೀ ಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೇಕ್ ಸಂ ಒನ್ ಸ್ಮೈಲ್ ತಂಡದ ವತಿಯಿಂದ ಡಾ. ವರ್ನೋಧರ್ ಹಾಗೂ ಆರ್ಟಿಸ್ಟ್ ಶ್ರೀ ನವೀನ್ ಅವರನ್ನು ಗೌರವಿಸಲಾಯಿತು. ಶ್ರೀ ಮೋಹನ್ ಶೆಣೈ ದಂಪತಿಗಳು ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಪ್ಯಾಕ್ ವಿತರಿಸುವ ಜತೆಗೆ ಸಂಸ್ಥೆಗೆ ದೇಣಿಗೆ ನೀಡಿ ಸಹಕರಿಸಿದರು. ಮೇಕ್ ಸಂ ಒನ್ ಸ್ಮೈಲ್ ತಂಡದ ಸದಸ್ಯರು ಉಪಸ್ಥಿತರಿದ್ದರು. ವಿಶೇಷ ಶಿಕ್ಷಕಿ ಶ್ರೀಮತಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿ, ಕು.ವಿದ್ಯಾ ನಾಯ್ಕ್ ವಂದಿಸಿದರು.

ಸಂತ ಮೇರಿಕಾಲೇಜು ಶಿರ್ವ : 72ನೇ ಗಣರಾಜ್ಯೋತ್ಸವ ಆಚರಣೆ

Thumbnail
Posted On: 26 Jan 2021, 10:44 PM

ಶಿರ್ವ: ದೇಶವು 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದೆ.ಈ ದಿನವನ್ನು ಸಂವಿಧಾನ ರಚನಾ ದಿನವೆಂದೂ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ವಂದನೆಯನ್ನು ಸಲ್ಲಿಸುತ್ತಾ,ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ನೆನೆಯುತ್ತಾ,ಈ ದಿನದ ಮಹತ್ವವನ್ನು ವಿವರಿಸುವ ಮೂಲಕ ನವಯುವಕರು ಮತ್ತು ಜನಪ್ರತಿನಿಧಿಗಳು ಸಂವಿಧಾನದ ಮೂಲಭೂತ ವಿಚಾರಗಳನ್ನು ಅರ್ಥೈಸಿಕೊಂಡು ನವಭಾರತದ ನಿರ್ಮಾಣದಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಬೇಕೆಂದು ತಿಳಿಸುವ ಮೂಲಕ ರಾಷ್ಟ್ರ ಪ್ರಶ್ನೆ ಬಂದಾಗ ಧರ್ಮ,ಜಾತಿ,ಪ್ರಾಂತೀಯತೆಯನ್ನು ಮರೆತು ನಾವೆಲ್ಲರೂ ಭಾರತೀಯರೆಂಬ ವಿಶಾಲ ಮನೋಭಾವನೆಯನ್ನು ಜಗತ್ತಿನೆಲ್ಲೆಡೆಗೆ ಸಾರಿ,ಭವ್ಯ ಭಾರತದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಾರತದ ಕೀರ್ತಿಯನ್ನು ವಿಶ್ವ ಪಟದಲ್ಲಿ ಬೆಳಗಬೇಕೆಂದು ವಿದ್ಯಾರ್ಥಿ ಸಮುದಾಯಕ್ಕೆ ಮುಖ್ಯ ಅತಿಥಿಯಾಗಿ ಧ್ವಜಾರೋಹಣವನ್ನು ನೆರವೇರಿಸಿ ಶಿರ್ವ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲರಾದ ಡಾ ಹೆರಾಲ್ಡ್ ಐವನ್ ಮೊನಿಸ್ ರವರು ಕರೆ ನೀಡಿದರು. ರಾಷ್ರೀಯಯುವ ಸೇನಾದಳಗಳ ನೇತೃತ್ವದಲ್ಲಿಈ ಕಾರ್ಯಕ್ರಮವನ್ನು ಆಚರಿಸಲಾಯಿತು. ಪ್ರತಿಯೊಬ್ಬ ಭಾರತೀಯನೂ ಸ್ವಚ್ಛ ಭಾರತ ಪರಿಕಲ್ಪನೆಯ ಲ್ಲಿ ಶ್ರಮಿಸಿ ದೇಶದ ಪ್ರಗತಿಯಲ್ಲಿಕೈಜೋಡಿಸಬೇಕು. ಅಳಿದ ಮಹಾತ್ಮರ ಬಗ್ಗೆ ಗೌರವ, ಅಭಿಮಾನಅವರ ಸಾಧನೆಯಅರಿವು ಮಾಡಿಕೊಳ್ಳುವುದು ಅಗತ್ಯ ಆ ಮೂಲಕ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಬೇಕೇಂದು ಗಣರಾಜ್ಯೋತ್ಸವ ಸಂದೇಶ ನಿಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ಘಟಕಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪರೇಡನ ಮುಂದಾಳತ್ವವನ್ನು ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮ್ ದಾಸ್ ಸತೀಶ್ ಜೂನಿಯರ್ ಅಂಡರ್ ಆಫೀಸರ್ ಪ್ರವಿತಾ ಆಚಾರ್ಯ , ರಿಯೋನ್ ರಿಷಿ ಅಲ್ಫೊನ್ಸೊ, ಸಾರ್ಜೆಂಟ್ ಮೇಜರ್ ಪ್ರತೀಮಾ ಆಚಾರ್ಯ, ಸಾರ್ಜೆಂಟ್ ರೈನಾ ಅಂದ್ರಾದೆ ನೆರವೇರಿಸಿಕೊಟ್ಟರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ.ಐರಿನ್ ಮೆಂಡೋನ್ಸ, ಪ್ರೌಢಶಾಲೆಯ ಮುಖೋಪಾಧ್ಯಾಯರಾದ ಗಿಲ್ಬರ್ಟ್ ಪಿಂಟೋ,ಶ್ರೀಮತಿ ಪೌಲಿನ್ ಲೋಬೊ, ಕಾಲೇಜಿನ ವಿವಿಧ ಘಟಕಗಳ ಯೋಜಕರಾದ ಎನ್.ಎಸ್.ಎಸ್ ಶ್ರೀ ಪ್ರೇಮನಾಥ್, ಕು.ರಕ್ಷ, ರೋವರ್ಸ್ ಸ್ಕೌಟ್ ಲೀಡರ್ ಶ್ರೀಪ್ರಕಾಶ್,ರೇಂಜರ್ಸ್ ಲೀಡರ್ ಶ್ರೀಮತಿ ಸಂಗೀತಾ ಪೂಜಾರಿ,ವಿದ್ಯಾರ್ಥಿ ನಾಯಕರಾದ ಅಕ್ಷಯ್, ಸುರೇಖ, ಪ್ರಾಂಕ್ಲೀನ್ ಮಥಾಯಸ್, ಪ್ರತೀಕ್ಷ, ಕ್ಯಾಂಪಸ್‍ನ ಇತರ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‍ಕುಮಾರ್ ರವರು ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸೆಕೆಂಡ್ ಆಫೀಸರ್ ಜಾನ್ ವಿಲಿಯಂರವರು ವಂದಿಸಿದರು.

ಕುತ್ಯಾರು : ಸೂರ್ಯ ಚೈತನ್ಯ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

Thumbnail
Posted On: 26 Jan 2021, 10:31 PM

ಶಿಕ್ಷಣದ ಪ್ರಮುಖ ಉದ್ದೇಶವು ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಬೆಳೆಸುವುದಾಗಿದೆ. ಯುವಜನತೆಯು ಸಮಾಜದ ಏಳಿಗೆಗೆ ಸದಾ ಶ್ರಮಿಸಬೇಕು. ಭಾರತದ ಉನ್ನತ ಪರಂಪರೆಯನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದು. ಜನರ ತೆರಿಗೆ ಹಣದ ಸದ್ವಿನಿಯೋಗವಾಗಬೇಕು. ದೇಶದ ಸೈನಿಕರ ತ್ಯಾಗ ,ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಮಂಗಳೂರಿನ ನೀರು ಸರಬರಾಜು ಯೋಜನೆಯ ಡಿಸೈನ್ ಇಂಜಿನಿಯರ್ ಪ್ರಕಾಶ್ ಕಿಣಿ ಕುತ್ಯಾರು ಹೇಳಿದರು. ಅವರು ಕುತ್ಯಾರಿನ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸಂಸ್ಥೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವಾನ್ ಶಂಭುದಾಸ್ ಗುರೂಜಿ ವಹಿಸಿ ಶುಭ ಹಾರೈಸಿದರು . ಸಂಸ್ಥೆಯ ಪ್ರಾಂಶುಪಾಲ ಗುರುದತ್ತ ಸೋಮಯಾಜಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರುತಿ ರಾವ್ ಪರಿಚಯಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿ, ನಾಗರಾಜ್ ವಂದಿಸಿದರು.