Updated News From Kaup

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ರೋಟರಿ ಸದಸ್ಯರ ಬಾಂಧವ್ಯ ವೃದ್ಧಿಗೆ ಸಹಕಾರಿ: ಡಾ| ಭರತೇಶ್ ಆದಿರಾಜ್

Thumbnail
Posted On: 05 Feb 2021, 11:29 AM

ರೋಟರಿ ವಲಯ ೫ರ ಕ್ರೀಡಾಕೂಟ ಗೊಬ್ಬು ಗಮ್ಮತ್ತ್ ಬೆಳ್ಮಣ್ ರೋಟರಿಯ ಆತಿಥ್ಯದಲ್ಲಿ ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿದ್ದು ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಅವಿಭಜಿತ ರೋಟರಿ ಜಿಲ್ಲೆ ೩೧೮೨ರ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ| ಭರತೇಶ್ ಆದಿರಾಜ್ ಕ್ರೀಡಾಕೂಟ ಉದ್ಘಾಟಿಸಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ರಿಂದ ರೋಟರಿ ಸದಸ್ಯರ ಬಾಂಧವ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ನುಡಿಯುತ್ತ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಮಾಡ ರೋಟರಿ ಬೆಳ್ಮಣ್ಣಿನ ಕಾಯಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯ ೫ರ ಸಾಹಯಕ ಗವರ್ನರ್ ರೋ| ನವೀನ್ ಅಮಿನ್ ಕ್ರೀಡಾಕೂಟದ ನಿಯಮಗಳ ಬಗ್ಗೆ ವಿವರಿಸಿದರು. ವಲಯ ಸೇನಾನಿ ರೋ| ಸುರೇಶ್ ರಾವ್ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಸ್ಪೂರ್ತಿಯ ಬಗ್ಗೆ ಮಾರ್ಮಿಕವಾಗಿ ನುಡಿದರು. ವಲಯ ೫ರ ಕ್ರೀಡಾ ಸಂಯೋಜಕ ರೋ| ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಕ್ರೀಡಾಕೂಟದ ಊಟೋಪಚಾರದ ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಬೆಳ್ಮಣ್ಣಿನ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ರೋ| ವಿಘ್ನೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು.

ಮೊದಲ ಬಾರಿಗೆ ಉಡುಪಿಯಲ್ಲಿ ಶುಭಾರಂಭಗೊಂಡಿದೆ ದೊಣ್ಣೆ ಬಿರಿಯಾನಿ ಎಂಪೈರ್

Thumbnail
Posted On: 04 Feb 2021, 07:38 PM

ಬೆಂಗಳೂರಿನಲ್ಲಿ ಹೆಸರು ವಾಸಿಯಾದ ಶುಚಿರುಚಿಯಾದ ದೊಣ್ಣೆ ಬಿರಿಯಾನಿ ಇದೀಗ ಉಡುಪಿಯ ಕಲ್ಪನಾ ಚಿತ್ರಮಂದಿರ ನಂತರದ ಬಂಧನ್ ಬ್ಯಾಂಕ್ ಹತ್ತಿರದ ದೊಣ್ಣೆ ಬಿರಿಯಾನಿ ಎಂಪೈರ್ ನಲ್ಲಿ ಸಿಗಲಿದೆ. ಇಲ್ಲಿ ದೊಣ್ಣೆ ಬಿರಿಯಾನಿ, ಸೀ ಫುಡ್, ಸೌತ್ ಇಂಡಿಯನ್, ತಂದೂರ್, ಚೈನಿಸ್ ಆಹಾರಗಳು ದೊರೆಯಲಿವೆ.

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರು: ಮೇಯರ್ ದಿವಾಕರ್ ಅವರಿಗೆ ಅಭಿನಂದನೆ

Thumbnail
Posted On: 03 Feb 2021, 05:27 PM

ಮಂಗಳೂರು: ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಮರು ನಾಮಕರಣ ಮಾಡಲು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು ಈ ಪ್ರಯುಕ್ತ ಈ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರಿಡಲು ಹೋರಾಟ ನಡೆಸಿದ ಬಿರುವೆರ್ ಕುಡ್ಲ ಫ್ರೆಂಡ್ಸ್ ಬಳ್ಳಾಲ್ ಬಾಗ್ ಇದರ ವತಿಯಿಂದ ಮೇಯರ್ ದಿವಾಕರ ಪಾಂಡೇಶ್ವರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್ ಬಾಗ್, ಸಮಾಜ ಸೇವಕ ಹನುಮಂತ ಕಾಮತ್,ಬಿರುವೆರ್ ಕುಡ್ಲ ಇದರ ಮಂಗಳೂರು ಘಟಕದ ನಿಯೋಜಿತ ಅಧ್ಯಕ್ಷ ರಾಕೇಶ್ ಸಾಲಿಯಾನ್,ರಿತೇಶ್ ಕೊಟ್ಟಾರಿ,ರಾಮ್ ಪ್ರಸಾದ್ ಎಕ್ಕೂರು,ಪ್ರಾಣೇಶ್ ಬಂಗೇರ,ರಾಜೇಶ್ ಉರ್ವ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಕಾಪು ವರದಿಗೆ ಸ್ಪಂದಿಸಿದ ಅಧಿಕಾರಿಗಳು - 5 ತಿಂಗಳಿಂದ ದುರಸ್ತಿ ಭಾಗ್ಯ ಕಾಣದಾಗಿದ್ದ ಕಾಪು ದೀಪಸ್ತಂಭದ ಮೆಟ್ಟಿಲುಗಳು ಮತ್ತು ಗೋಡೆಗಳು ದುರಸ್ತಿ

Thumbnail
Posted On: 02 Feb 2021, 11:40 PM

ಅಸಂಖ್ಯಾತ ಪ್ರವಾಸಿಗರನ್ನು ಸೆಳೆಯುತ್ತಿದ್ದ ಪ್ರವಾಸಿ ತಾಣ ಉಡುಪಿ ಜಿಲ್ಲೆಯ ಕಾಪು ಕಡಲ ಕಿನಾರೆಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲ್ಪಟ್ಟ ಕಾಪು ದೀಪಸ್ತಂಭ. ಇತ್ತೀಚಿನ ಮಳೆಯ ಸಂದರ್ಭ ದೀಪಸ್ತಂಭದ ಆರಂಭದ ಮೆಟ್ಟಿಲುಗಳು ಮತ್ತು ಗೋಡೆ ಹಾನಿಗೊಂಡಿದ್ದವು. 5 ತಿಂಗಳಿಂದ ಈ ರೀತಿಯ ಅವಸ್ಥೆ ಇದ್ದರೂ ದುರಸ್ತಿ ಕಂಡಿರಲಿಲ್ಲ. ಈ ಬಗ್ಗೆ ಕೆಳ ತಿಂಗಳ ಹಿಂದೆ ಕೆಲವು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದರೂ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ. ಸ್ಥಳೀಯ ನಿವಾಸಿಯೊಬ್ಬರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಾಕಷ್ಟು ಮಾತುಕತೆ ಮತ್ತು ಪತ್ರವ್ಯವಹಾರ ನಡೆಸಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಅದೇ ರೀತಿ ಈ ಬಗ್ಗೆ ನಮ್ಮ ಕಾಪು ವೆಬ್ ಪೋರ್ಟಲ್ ಸಚಿತ್ರ ವರದಿ ಪ್ರಕಟಿಸಿ ತಲುಪಬೇಕಾದವರಿಗೆ ತಲುಪುವಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು. ಸಂಬಂಧಪಟ್ಟ ಇಲಾಖೆಗೆ ತಲುಪಿಸಿ ಆ ಮೂಲಕ ದೀಪಸ್ತಂಭದ ಮೆಟ್ಟಿಲು ಮತ್ತು ಗೋಡೆ ದುರಸ್ತಿಯಾಗಿದೆ. ಸ್ಥಳೀಯ ನಿವಾಸಿ ಹಾಗೂ ನಮ್ಮ ಕಾಪುವಿನ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ವಿಶ್ವಕರ್ಮ ಪೂಜೆ

Thumbnail
Posted On: 02 Feb 2021, 07:09 PM

ಕಾಪು ತಾಲೂಕಿನ ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘವು ಸಾಕಷ್ಟು ಚಟುವಟಿಕೆಯುಕ್ತವಾಗಿದ್ದು, ನಡೆಸುವ ಧಾರ್ಮಿಕ ಚಟುವಟಿಕೆಯು ಸಂಘಟನಾ ಶಕ್ತಿಗೆ ಪೂರಕವಾಗಲಿದೆ ಸ್ವಂತ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣ ಶೀಘ್ರ ಕೈಗೂಡಲಿ ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರುಳೀಧರ ಆಚಾರ್ಯ ಇನ್ನಂಜೆ ಹೇಳಿದರು. ಅವರು ಎಲ್ಲೂರು ಕಂಚುಗರ ಕೇರಿಯ ಸ್ವಂತ ನಿವೇಶನದಲ್ಲಿ ನಡೆದ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಎಲ್ಲೂರು ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಕಾಪು ದಂಡತೀರ್ಥ ಶಾಲೆಯ ಚಿತ್ರಕಲಾ ಶಿಕ್ಷಕಿ ಅನುಪಮಾ ದೇವರಾಜ ಆಚಾರ್ಯ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿನ ಆಚಾರ-ವಿಚಾರವು ಕುಲದ ಶ್ರೇಷ್ಠತೆಗೆ ಮೌಲ್ಯ ನೀಡಲಿ ಎಂದು ಕರೆ ನೀಡಿದರು. ಪಡುಬಿದ್ರಿಯ ಉದಯ ಪುರೋಹಿತ್ ಆಶೀರ್ವಚನ ನೀಡಿದರು. ನಿವೃತ್ತ ತಹಶೀಲ್ದಾರ್ ಗಣೇಶ್ ಪಿ. ಆಚಾರ್ಯ ಪಡುಬಿದ್ರಿ, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ ಸಂಘಕ್ಕೆ ಮಾರ್ಗದರ್ಶನದ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವೈ. ಸತೀಶ ಎಂ.ಆಚಾರ್ಯ, ಗೌರವಾಧ್ಯಕ್ಷರಾದ ವೈ. ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು. ವಿಶ್ವಕರ್ಮ ಪೂಜೆ :ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಪೂಜೆಯು ಉದಯ ಪುರೋಹಿತ್ ಪೌರೋಹಿತ್ಯದಲ್ಲಿ ಎಲ್ಲೂರು ಕಂಚುಗರ ಕೇರಿಯ ಸ್ವಂತ ನಿವೇಶನದಲ್ಲಿ ಜರಗಿತು. ಈ ಸಂದರ್ಭ ಸಂಘದ ಗೌರವಾಧ್ಯಕ್ಷರಾದ ವೈ. ರಾಘವೇಂದ್ರ ಆಚಾರ್ಯ, ಅಧ್ಯಕ್ಷರಾದ ವೈ. ಸತೀಶ ಎಂ.ಆಚಾರ್ಯ, ಕಾರ್ಯದರ್ಶಿ ವೈ. ಪ್ರಶಾಂತ್ ಆಚಾರ್ಯ, ಕೋಶಾಧಿಕಾರಿ ವೈ. ಕಿಶೋರ್ ಆಚಾರ್ಯ, ಗೌರವ ಸಲಹೆಗಾರ ವೈ. ವಾಸುದೇವ ಆಚಾರ್ಯ, ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಕಲ್ಲುಗುಡ್ಡೆ ಕಿಂಗ್ಸ್ ವತಿಯಿಂದ ತುಳು ಲಿಪಿಯ ದಾರಿ ಫಲಕದ ಕೊಡುಗೆ

Thumbnail
Posted On: 02 Feb 2021, 04:32 PM

ಕಾಪು ತಾಲೂಕಿನ 92 ನೇ ಹೇರೂರು ಗ್ರಾಮದ ಕಲ್ಲುಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರೋಡಿಗೆ ಹೋಗುವ ದಾರಿ ತೋರುವ ತುಳು ಲಿಪಿಯ ಫಲಕವನ್ನು ಕಲ್ಲುಗುಡ್ಡೆ ಕಿಂಗ್ಸ್ ಇಂದು ಕೊಡುಗೆಯಾಗಿ ನೀಡಿದರು.

ಕಿನ್ನಿಗೋಳಿ : ಸಾಹಿತ್ಯಾಸಕ್ತರಿಗೆ ಶುಭಸುದ್ದಿ ಒಕ್ಕಲುಗೊಂಡಿದೆ ಪುಸ್ತಕದ ಮನೆ

Thumbnail
Posted On: 02 Feb 2021, 07:47 AM

ಕಿನ್ನಿಗೋಳಿ : ಪುಸ್ತಕದ ಮನೆ ಇಲ್ಲಿ ಕಾದಂಬರಿ,ಕಥಾಸಂಕಲನ , ಧಾರ್ಮಿಕ , ಯಕ್ಷಗಾನ, ಪುರಾಣ, ತುಳುಸಾಹಿತ್ಯ ಹೀಗೆ ಪುಸ್ತಕಗಳ ಸಂಗ್ರಹವಿದೆ . ಇಲ್ಲಿ ಪುಸ್ತಕ ಓದಬಹುದು , ಓದಿ ವಾಪಾಸು ತಂದು ಕೊಡಬಹುದು - ಕೊಂಡುಕೊಳ್ಳಲೂ ಬಹುದು , ಓದುಗರ ಬಳಗ ಸೇರಬಹುದು. ಪುಸ್ತಕ - ಸಾಹಿತ್ಯ ಚರ್ಚೆ ನಡೆಸಬಹುದು. ಸಾಹಿತಿಗಳನ್ನು ಭೇಟಿಮಾಡಬಹುದು. ಹೀಗೆ ಸಾಹಿತ್ಯಾಸಕ್ತರಿಗೆ ,ಓದುವ ಮನಸ್ಸುಳ್ಳ ಜ್ಞಾನದಾಹಿಗಳಿಗೆ ಏನಾದರೂ ಮಾಡಬೇಕೆಂಬ ಒತ್ತಾಸೆಯಿಂದ ಕಟ್ಟಿದ ಪುಸ್ತಕದ ಮನೆ ಜ.28 ರಂದು ಕಿನ್ನಿಗೋಳಿಯಲ್ಲಿ ತೆರೆಯಿತು . ಕಟೀಲಿನ ಪಾಂಡುರಂಗ ಭಟ್ಟ ಮತ್ತು ಕೆ.ಎಲ್.ಕುಂಡಂತಾಯ ಅವರು 'ಪುಸ್ತಕದ ಮನೆ'ಯನ್ನು ಉದ್ಘಾಟಿಸಿದರು .ಬಾಲಕೃಷ್ಣ ಉಡುಪ ,ದೇವದಾಸ ಮಲ್ಯ , ಪುರುಷೋತ್ತಮ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ಕಿನ್ನಿಗೋಳಿಯ ಅನಂತ ಪ್ರಕಾಶದ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಅಂಗವಾಗಿ 'ಪುಸ್ತಕದ ಮನೆ' ತೆರೆಯಲಾಗಿದೆ ಎಂದು ಸಚ್ಚಿದಾನಂದ ಉಡುಪ ಹೇಳಿದರು .ಗಾಯತ್ರೀ ಉಡುಪ ಸ್ವಾಗತಿಸಿ ,ವಂದಿಸಿದರು .ಮಿಥುನ್ ಉಡುಪ , ರಸನಾ ಉಡುಪ ಉಪಸ್ಥಿತರಿದ್ದರು .ಸಾಹಿತ್ತಾಸಕ್ತರು ಶುಭಹಾರೈಸಿದರು. "ಪುಸ್ತಕದ ಮನೆ" ಅಪೂರ್ವ ಕಲ್ಪನೆಯ ಮೂರ್ತ ಸ್ವರೂಪವಾಗಿ ಲೋಕಾರ್ಪಣೆ ಯಾಗಿದೆ.

ಬಂಟಕಲ್ಲು : ಆರಕ್ಷರ ಠಾಣೆ ಶಿರ್ವ, ನಾಗರಿಕ ಸೇವಾ ಸಮಿತಿ ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ

Thumbnail
Posted On: 01 Feb 2021, 11:02 PM

ಬಂಟಕಲ್ಲು : ಆರಕ್ಷರ ಠಾಣೆ ಶಿರ್ವ, ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವು ಜರುಗಿತು. ಬಂಟಕಲ್ಲು ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿ ಗಳೊಂದಿಗೆ ಜಾಗೃತಿ ಜಾಥವು ಕಾಲೇಜಿನಿಂದ ಬಂಟಕಲ್ಲು ಪೇಟೆಯವರೆಗೆ ನಡೆಯಿತು. ಶಿರ್ವ ಠಾಣಾಧೀಕಾರಿ ಶ್ರೀ ಶ್ರೀಶೈಲ ಮುರಗೋಡುರವರು ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥದಲ್ಲಿ ವಾಹನ ಜಾಗೃತಿ ಫಲಕಗಳನ್ನು ಪ್ರದರ್ಶಿಸಲಾಯಿತು. ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರ ಕಛೇರಿವರೆಗೆ ಜಾಥ ನಡೆಯಿತು. ನಂತರ ಸಮಿತಿಯ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರು ನಾಗರಿಕರ ಭದ್ರತೆ ಹಿತದೃಷ್ಟಿಯಿಂದ ಪೇಟೆಯ ಮುಖ್ಯ ರಸ್ತೆಗೆ ಅಳವಡಿಸಿದ 3 ಸಿ.ಸಿ ಕೆಮಾರಗಳನ್ನು ಠಾಣಾಧಿಕಾರಿಯವರು ಉಧ್ಘಾಟಿಸಿದರು. ನಂತರ ರಸ್ತೆ ಸುರಕ್ಷಾ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಠಾಣಾಧಿಕಾರಿಯವರು ರಸ್ತೆ ಸುರಕ್ಷಾ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು, ಈ ಮೂಲಕ ನಿಮ್ಮ ಜೀವ ರಕ್ಷಣೆ ಮಾಡಿ, ಹೆಲ್ಮೆಟನ್ನು ಖಡ್ಡಾಯವಾಗಿ ಧರಿಸಿ, ಸಂಚಾರದ ಸಮಯದಲ್ಲಿ ವಾಹನದ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಡುವಂತೆ ತಿಳಿಸಿ ಮುಖ್ಯವಾಗಿ ಯುವಕರು, ಯುವತಿಯರು ಈ ನಿಟ್ಟಿನಲ್ಲಿ ಜಾಗೃತಿವಹಿಸುವಂತೆ ತಿಳಿಸಿದರು. ಇಲಾಖೆ 112 ತುರ್ತು ಕರೆ ಸಂಖ್ಯೆಯ ಮಾಹಿತಿ ನೀಡಿದರು. ಬಂಟಕಲ್ಲು ನಾಗರೀಕ ಸೇವಾ ಸಮಿತಿಯವರ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಿ.ಸಿ. ಕೆಮಾರ ಅಳವಡಿಕೆ ಬಗ್ಗೆ ಕೃತಜ್ಞತೆಯನ್ನು ತಿಳಿಸಿದರು. ಇಂತಹ ಕಾರ್ಯಕ್ರಮವನ್ನು ಸಂಯೋಜಿಸಿದ ನಾಗರಿಕ ಸೇವಾ ಸಮಿತಿಯನ್ನು ಇಲಾಖಾ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಎಸೋಸಿಯೇಶನ್ ನ ಪ್ರಾಧಾನ ಕಾರ್ಯದರ್ಶಿ ಶ್ರೀ ರಮೇಶ್ ಕೊಟ್ಯಾನ್ ರವರು ನಾಗರಿಕ ಸಮಿತಿಯ ಶ್ಲಾಘನೀಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಸಾಮಾಜಿಕ ಕಾರ್ಯಕ್ರಮಗಳಿಗೆ ಎಸೋಸಿಯೇಶನ್ ನ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಶ್ರೀ ಗಣೇಶ್ ಶೆಟ್ಟಿ, ಬಂಟಕಲ್ಲು ಕಾರು ಚಾಲಕರ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ಬಂಟಕಲ್ಲು ರಿಕ್ಷಾ ಚಾಲಕ ಮಾಲಕರ ಸಂಘದ ಶ್ರೀ ಸತೀಶ್ ಬಂಟಕಲ್ಲು ಉಫಸ್ಥಿತರಿದ್ದರು. ಸಮಿತಿಯ ಉಪಾಧ್ಯಕ್ಷ ಶ್ರೀ ಪುಂಡಲೀಕ ಮರಾಠೆ, ಕೋಶಾಧಿಕಾರಿ ಶ್ರೀ ಜಗದೀಶ ಆಚಾರ್ಯ, ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಶ್ರೀ ಮಧುಕರ್, ಬಂಟಕಲ್ಲು ದೇವಾಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀ ಉಮೇಶ್ ಪ್ರಭು, ಬಂಟಕಲ್ಲು ವಿಶ್ವಕರ್ಮ ಸಂಘದ ಶ್ರೀ ದಾಮೋದರ ಆಚಾರ್ಯ, ಬಿ.ಸಿ ರೋಡ್ ರಿಕ್ಷಾ ಚಾಲಕ ಮಾಲಕರ ಸಂಘದ ಶ್ರೀ ಡೇನಿಸ್, ಶಿರ್ವ ಆರಕ್ಷಕರ ಠಾಣೆಯ ಸಿಬ್ಬಂದಿ ವರ್ಗ , ನಾಗರಿಕ ಸೇವಾ ಸಮಿತಿಯ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

ಯುವ ನಟ, ಬಹುಮುಖ ಪ್ರತಿಭೆ ರಾಜೇಶ್ ಮುಂಡ್ಕೂರು ಇವರಿಗೆ ಸನ್ಮಾನ

Thumbnail
Posted On: 01 Feb 2021, 10:29 PM

ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಪದಗ್ರಹಣ ಸಮಾರಂಭ ಮತ್ತು ಕುಲಾಲ ಸಮ್ಮಿಲನ ಕಾರ್ಯಕ್ರಮವು ಭಾನುವಾರ ಮಂಗಳೂರು ಕುಲಶೇಖರದ ಶ್ರೀ ವೀರ ನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಸುಂದರ ಕಾರ್ಯಕ್ರಮದಲ್ಲಿ ಅನೇಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಗಣ್ಯರ ಉಪಸ್ಥಿತಿಯಲ್ಲಿ ಕುಲಾಲ ಸಮುದಾಯದ ಯುವ ನಟ, ಬಹುಮುಖ ಪ್ರತಿಭೆ ರಾಜೇಶ್ ಮುಂಡ್ಕೂರು ಇವರನ್ನು ಸನ್ಮಾನಿಸಿಲಾಯಿತು.

ಪಡುಬಿದ್ರಿ : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಗ್ರಾ. ಪಂ. ಸದಸ್ಯರ ಜವಾಬ್ದಾರಿಗಳು ಕಾರ್ಯಾಗಾರ

Thumbnail
Posted On: 01 Feb 2021, 06:00 PM

ಪಡುಬಿದ್ರಿ : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಗ್ರಾ. ಪಂ. ಸದಸ್ಯರ ಜವಾಬ್ದಾರಿಗಳು ಕುರಿತಾದ ಒಂದು ದಿನದ ಕಾರ್ಯಾಗಾರ ಉಡುಪಿ ಜಿಲ್ಲೆಯ ಪಡುಬಿದ್ರಿ ಸುಜ್ಲೋನ್ ಆರ್ & ಆರ್ ಕೊಲೊನಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಿವಿಲ್ ಹಿರಿಯ ನ್ಯಾಯಾಧೀಶೆ ಶ್ರೀಮತಿ ಕಾವೇರಿ ಮಾತನಾಡಿ ಇದೀಗ ಚುನಾಯಿತರಾದ ನೀವುಗಳು ಕಾನೂನಿನ ಯಾವ ಕಾಯಿದೆ ಅಡಿಯಲ್ಲಿ ಆಯ್ಕೆಯಾಗಿದ್ದೀರಿ, ನಿಮ್ಮ ಜವಾಬ್ದಾರಿಗಳು ಏನು? ಜನ ಯಾಕಾಗಿ ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ನಿಮ್ಮ ಕರ್ತವ್ಯಗಳು ಏನು ? ಗ್ರಾಮದ ಯಾವ ಯಾವ ಕಾರ್ಯಗಳಲ್ಲಿ ತಾವು ತೊಡಗಿಕೊಳ್ಳಬೇಕು ಎಂಬುದರ ಸ್ಪಷ್ಟ ಚಿತ್ರಣ ನಿಮ್ಮಲ್ಲಿ ಇದ್ದಾಗ ಮಾತ್ರ ಒಂದು ಗ್ರಾಮವನ್ನು ಸುಂದರ ಗ್ರಾಮವನ್ನಾಗಿಸ ಬಹುದು ಎಂದು ಹೇಳಿದರು. ಮುಖ್ಯ ಅತಿಥಿ ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ವಿ. ಗಾಂವ್ಕರ್ ಮಾತನಾಡಿ ಇಲ್ಲಿ ಪಾಲ್ಗೊಂಡ ತಾವುಗಳು ಅದೃಷ್ಟ ಶಾಲಿಗಳು ಭಾಗ್ಯ ಶಾಲಿಗಳು ಯಾಕೆಂದರೆ ಇದೊಂದು ರಾಜ್ಯದಲ್ಲೇ ಪ್ರಥಮ ಮಾಹಿತಿ ಕಾರ್ಯಾಗಾರ ಎಂದು ಅಭಿಪ್ರಾಯ ಪಟ್ಟರು. NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಸುಜ್ಲೋನ್ ಆರ್ ಆರ್ ಕಾಲೋನಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮಾನಾಥ ಕೆ.ಆರ್. ಉಪಸ್ಥಿತರಿದ್ದರು. ಬಳಿಕ ಮಕ್ಕಳ ಅಭಿವೃದ್ಧಿಯಲ್ಲಿ ಗ್ರಾಮಪಂಚಾಯತ್ ಸದಸ್ಯರ ಪಾತ್ರ ಕುರಿತಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಗ್ರಾಮಪಂಚಾಯತ್ ಸದಸ್ಯರುಗಳ ಕರ್ತವ್ಯ ಮತ್ತು ಅಧಿಕಾರ ಕುರಿತು ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಾನ್ಯತೆಪಡೆದ ಸಂಪನ್ಮೂಲ ಜವವಂತ ರಾವ್ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಪಡುಬಿದ್ರಿ, ಫಲಿಮಾರು, ಹೆಜಮಾಡಿ, ತೆಂಕ ಎರ್ಮಾಳ್ ಮತ್ತು ಬಡ ಎರ್ಮಾಳ್ ಗ್ರಾಮಪಂಚಾಯತ್ ಸದಸ್ಯರು ಭಾಗವಹಿಸಿದ್ದರು.