Updated News From Kaup

ಹೆಜಮಾಡಿ : ಸುಳ್ಳು ಸುದ್ದಿಯ ವಿಡಿಯೋ ವೈರಲ್

Posted On: 28-07-2020 12:49PM

ಸೋಮವಾರದಿಂದ ಉಡುಪಿ ಜಿಲ್ಲೆಯ ಹೆಜಮಾಡಿ ಕಡಲ ಕಿನಾರೆಯಲ್ಲಿ ಸಮುದ್ರದ ಅಲೆಗಳು ಉಕ್ಕೇರಿ ಜನವಸತಿಯತ್ತ ಹರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಚರ್ಚೆಗೂ ಕಾರಣವಾಗಿತ್ತು. ಇದರಿಂದ ದೂರದ ಊರಿನಲ್ಲಿದ್ದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಆದರೆ ಇದು ಎಲ್ಲಿಯೋ ನಡೆದ ಘಟನೆಯನ್ನು ಹೆಜಮಾಡಿಯಲ್ಲಿ ಎಂದು ಬಿಂಬಿಸಲಾಗಿದ್ದು. ಇಂತಹ ಘಟನೆ ನಡೆದೇ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂತಹ ವಿಡಿಯೋ ಹರಿಬಿಡುವ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರೋಟರಿ ಕಲ್ಯಾಣಪುರ ಹಾಗೂ ಸ್ವಚ್ಛಮ್ ಸರ್ವಿಸಸ್ ವತಿಯಿಂದ ಮಲ್ಪೆ ಪೊಲೀಸ್ ಠಾಣೆ ಸ್ಯಾನಿಟೈಜ್

Posted On: 28-07-2020 12:44PM

ರೋಟರಿ ಕಲ್ಯಾಣಪುರ ಹಾಗೂ ಸ್ವಚ್ಛಮ್ ಸರ್ವಿಸಸ್ ಉಡುಪಿ ವತಿಯಿಂದ ಜಂಟಿ ಯಾಗಿ ಮಲ್ಪೆ ಆರಕ್ಷಕರ ಠಾಣೆ ಯನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಯಿತು. ಉದ್ಘಾಟನೆ ಯನ್ನು ಠಾಣಾಧಿಕಾರಿ ತಿಮ್ಮೇಶ್ ಮಾಡಿದರು. ರೋಟರಿ ಅಧ್ಯಕ್ಷ ರಾದ ರೋ. ಡೆಸ್ಮಂಡ್ ವಾಜ್ ಮಾಜಿ ಅಧ್ಯಕ್ಷ ರಾದ ರೋ. ರಾಮ ಪೂಜಾರಿ ಸ್ವಚಮ್ ಸರ್ವಿಸಸ್ ನ ಮಾಲಕರಾದ ರೋ ತಾರಾನಾಥ್ ಪೂಜಾರಿ ಮಾಜಿ ಸಹಾಯಕ ಗವರ್ನರ್ ರೋ.ಎಮ್ ಮಹೇಶ್ ಕುಮಾರ್. ಸುನಿಲ್ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿ ಗಳು ಉಪಸ್ಥಿತರಿದ್ದರು..

ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಎಕ್ಸಲೆನ್ಸಿ ಪ್ರಶಸ್ತಿ

Posted On: 28-07-2020 09:03AM

ಕಟಪಾಡಿ: (ಶಂಕರಪುರ) ಜೇಸಿಐ ಉಡುಪಿ ಸಿಟಿ ಘಟಕವು ಎಕ್ಸಲೆನ್ಸಿ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರವನ್ನು ಪಡೆದುಕೊಂಡಿತ್ತು. ಜುಲೈ.27ರಂದು ಶಂಕರಪುರ ಜೇಸಿ ಭವನದಲ್ಲಿ ನಡೆದ ವಲಯ 15 ರ ಮಧ್ಯಂತರ ಸಮ್ಮೇಳನ "ಬದಲಾವಣೆ -2020 " ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಲಯಾಧ್ಯಕ್ಷ ಕಾತಿ೯ಕೇಯ ಮಧ್ಯಸ್ಥ ರವರಿಂದ ಪ್ರಶಸ್ತಿಯನ್ನು ಘಟಕಾಧ್ಯಕ್ಷೆ ತನುಜಾ ಮಾಬೆನ್ ರವರು ಪಡೆದುಕೊಂಡರು. ಘಟಕವು ಅತ್ಯುತ್ತಮ ಕಾಯ೯ಕ್ರಮ, ತರಬೇತಿ ವಿಭಾಗ ಸೇರಿದಂತೆ ವಿವಿಧ ಮನ್ನಣೆಯನ್ನು ಪಡೆದುಕೊಂಡಿತ್ತು. ಈ ಸಂದಭ೯ದಲ್ಲಿ ವಲಯ ಉಪಾಧ್ಯಕ್ಷ ಲೋಕೇಶ್ ರೈ, ಅಶೋಕ್ ಚುಂತಾರ್, ಅಶ್ವಿನಿ ಐತಾಳ, ಜಬ್ಬಾರ್ ಸಾಹೇಬ್, ಉದಯ ನಾಯ್ಕ್, ಜಗದೀಶ್ ಶೆಟ್ಟಿ, ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು,ಕವಾ೯ಲ್ ಮುಂತಾದವರಿದ್ದರು.

ಸಂಚಾರಿ ನಿಯಮದ ಬಗ್ಗೆ ಬೆಳಕು ಚೆಲ್ಲಿದ ಕಿರುಚಿತ್ರ ಮುಗುರು ಮೋಕೆ

Posted On: 27-07-2020 07:52AM

ಪ್ರತಿಯೊಬ್ಬ ವ್ಯಕ್ತಿ ಕುಟುಂಬದ ಆಧಾರವಾಗಿದ್ದು , ಜೀವದ ಬೆಲೆಗೆ ನಮ್ಮವರನ್ನೆ ಕಾಯುವ ನಮ್ಮ ಮನೆ ,ಒಂದು ಕ್ಷಣದ ಮುಜುಗರಕ್ಕೆ ಹೆಲ್ಮೆಟ್ ಬಳಸದಿದ್ದರೆ ಆಗುವ ಅನಾಹುತದ ಬಗ್ಗೆ ಸಂದೇಶ ಸಾರುವ ಸ್ನೇಹಿತನ ಬದುಕಿನಲ್ಲಿ ನಡೆದ ಘಟನೆಯನ್ನ ಕಿರುಚಿತ್ರವಾಗಿ ಚಿತ್ರಿಸಿರುವ ಮುಗುರು ಮೋಕೆ ಕಿರುಚಿತ್ರದ ಬಿಡುಗಡೆ ಸಮಾರಂಭವು ಕಾರ್ಕಳದ ಇನ್ನದ ಮರದ ಮನೆ ಆವರಣದಲ್ಲಿ ದಿನಾಂಕ 25/07/2020 ರ ಶನಿವಾರ ನಮ್ಮ ನೆಚ್ಚಿನ ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾ ಉದಯ ಕುಮಾರ್ ಶೆಟ್ಟಿ ಶುಭಹಾರೈಸಿ ಬಿಡುಗಡೆಗೊಳಿಸಿದರು.. ಅದರ್ಶ ಯುವಕ ಮಂಡಲ ಬೆಳ್ಮಣ್ ಇವರ ಮುಂದಾಳತ್ವ,ನಿತ್ಯಾನಂದ ಶೆಟ್ಟಿ ಬೆಳ್ಮಣ್ ಇವರ ನಿರ್ಮಾಣದ ಈ ಕಿರುಚಿತ್ರಕ್ಕೆ ಕಥೆ ನಿರ್ದೇಶನ ದೀಪಕ್ ಬೆಳ್ಮಣ್,ಸಾಹಿತ್ಯ ರಚನೆ ದಿಲೀಪ್ ಡಿ.ಕೆ,ಸುಮಧುರ ಕಂಠದ ಕೆ.ಪಿ ಮಿಲನ್ ಆಚಾರ್ಯ ಸಚ್ಚರಿಪೇಟೆ ಇವರ ಸಂಗೀತ,ಚಿತ್ರದ ದೃಶ್ಯಕ್ಕೆ ಜೀವ ತುಂಬಿದ ರಾಜೇಶ್ ಬೆಳುವಾಯಿ,ಎಡಿಟಿಂಗ್ ಮಾಡಿದ ಶ್ರೀಜಿತ್ ಬೆಳುವಾಯಿ ಇವರೆಲ್ಲರ ಸಹಕಾರದೊಂದಿಗೆ ಮೂಡಿ ಬಂದ ಈ ಕಿರುಚಿತ್ರವು ಕಾರ್ಕಳ ಬಿ.ಜೆ.ಪಿ ಯುವಮೋರ್ಚಾ ಇದರ ಅಧ್ಯಕ್ಷರು ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಉದ್ಯಮಿ ಇನ್ನ ಉದಯ ಕುಮಾರ್ ಶೆಟ್ಟಿ, ದೀಪಕ್ ಬೆಳ್ಮಣ್, ಸುಖೇಶ್ ಶೆಟ್ಟಿ ಇನ್ನ, ಸುರೇಶ್ ಡಿ ಕುಲಾಲ್,ಸಂದೀಪ್ ಅಂಚನ್ ಹಾಗೂ ಇನ್ನಿತರ ಉಪಸ್ಥಿತಿಯ ಶುಭಾಶಯದೊಂದಿಗೆ ನಡೆಯಿತು.. ಸಣ್ಣ ಪ್ರಯತ್ನದೊಂದಿಗೆ ಮೂಡಿ ಬಂದ ನಮ್ಮ ಕಿರುಚಿತ್ರವನ್ನ ಪೋತ್ಸಾಹಿಸಿ..

ಶಿರ್ವದ ಸದಾಶಿವ ಕುಲಾಲ್ ದಂಪತಿಗಳ ಸ್ವದೇಶಿ ಉದ್ಯಮವನ್ನು ಪ್ರೋತ್ಸಾಹಿಸೋಣ

Posted On: 26-07-2020 07:24PM

ಕಾಪು:(ನಮ್ಮ ಕಾಪು ನ್ಯೂಸ್ 25/07/2020) ಕಾಪು ಶಿರ್ವದ ಸದಾಶಿವ ಕುಲಾಲ್ ದಂಪತಿಗಳು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅತ್ಮ ನಿರ್ಭರ ಭಾರತ ಸಂಕಲ್ಪದಿಂದ ಪ್ರೇರಣೆಗೊಂಡು ಮನೆಯಲ್ಲಿಯೇ ದೀಪದ ಬತ್ತಿ ತಯಾರಿಸಿ ಸ್ವದೇಶಿ ಉದ್ಯಮದತ್ತ ಸಾಗುತ್ತಿದ್ದಾರೆ.. ಬದುಕಿನ ಬವಣೆಯ ಜೊತೆ ಜೊತೆ ಸಾಗುವ ಇವರ ಕಾಯಕಕ್ಕೆ ನಿಮ್ಮಲ್ಲೆರ ಸಹಕಾರ ಸದಾ ಇರಲಿ... ನಿಮ್ಮ ಸೇವೆಯಲ್ಲಿ... ಸದಾಶಿವ ಕುಲಾಲ್ Contact: 9945329904 ಲೇಖನ : U.k kalathur.

ಇನ್ನಂಜೆಯಲ್ಲಿ ಲಾಕ್ಡೌನ್ ಸದುಪಯೋಗಪಡಿಸಿಕೊಂಡ ಯುವಸೇನೆ ಮಡುಂಬು ತಂಡ

Posted On: 26-07-2020 06:55PM

ಲಾಕ್ ಡೌನ್ ಎಂದರೆ ಬಹುಷಃ ಕೆಲವರು ಮನೆಯಲ್ಲಿ ಕುಳಿತಿರಬಹುದು, ಇನ್ನೊಂದಷ್ಟು ಜನ ಅಲ್ಲಲ್ಲಿ ತಿರುಗಾಡ್ತಾ ಇರಬಹುದು.. ಆದರೇ ಇನ್ನಂಜೆ ಗ್ರಾಮದ ಮಡುಂಬುವಿನ "ಯುವಸೇನೆ ಮಡುಂಬು" ಎಂಬ ಯುವಕರ ತಂಡವೊಂದು ಲಾಕ್ ಡೌನ್ ಸಮಯವನ್ನು ವ್ಯರ್ಥ ಮಾಡದೇ ಇಪ್ಪತ್ತರಿಂದ, ಇಪ್ಪತ್ತೈದು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಡುಂಬು ಕೆ.ಪಿ ಶ್ರೀನಿವಾಸ ತಂತ್ರಿಗಳ ಮನೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಪೊದೆಗಳನ್ನು ಮತ್ತು ಮರದ ಗೆಲ್ಲುಗಳನ್ನು ಕಡಿದು, ಜನಸಂಚಾರಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಯುವಕರಿಗೆ ಮಾದರಿಯಾಗಿದ್ದಾರೆ.. ಈ ಸಂದರ್ಭದಲ್ಲಿ ಯುವಸೇನೆ ತಂಡದ ಅಧ್ಯಕ್ಷರಾದ ವರುಣ್ ಶೆಟ್ಟಿ ಮಡುಂಬು, ಮಾಜಿ ಅಧ್ಯಕ್ಷರಾದ ಸುಕೇಶ್ ಪೂಜಾರಿ ಹಾಗೂ ಗೌರವ ಸಲಹೆಗಾರರಾದ ನಿತೇಶ್ ಸಾಲ್ಯಾನ್ ಮಡುಂಬು ಉಪಸ್ಥಿತರಿದ್ದರು

ಕಟಪಾಡಿ ಕಾರುಣ್ಯ ಆಶ್ರಮದಲ್ಲಿ ಬಿರುವೆರ್ ಕಾಪು ಸಂಸ್ಥೆಯ 4ನೇ ವರ್ಷದ ಸಂಭ್ರಮಾಚರಣೆ

Posted On: 26-07-2020 09:51AM

ಸದಾ ಒಂದಿಲ್ಲೊಂದು ಕೆಲಸ ಕಾರ್ಯಗಳೊಂದಿಗೆ ಕಾಪು ತಾಲೂಕಿನಲ್ಲಿ ಗುರುತಿಸಿಕೊಂಡಿರುವ ಸಂಸ್ಥೆ "ಬಿರುವೆರ್ ಕಾಪು ಸೇವಾ ಟ್ರಸ್ಟ್" ತನ್ನ ನಾಲ್ಕನೇ ವರ್ಷದ ಪದಾರ್ಪಣೆಯ ಶುಭ ಸಂದರ್ಭವನ್ನು ಕಟಪಾಡಿಯ ಕಾರುಣ್ಯ ಆಶ್ರಯಧಾಮದಲ್ಲಿ ಕಳೆಯಿತು, ಆಶ್ರಮಕ್ಕೆ ನಿನ್ನೆಯ ದಿನದ ಊಟದ ವ್ಯವಸ್ಥೆ, ಒಂದು ವಾರಕ್ಕೆ ಬೇಕಾಗುವಷ್ಟು ತರಕಾರಿ, ಧವಸ ದಾನ್ಯ ಹಾಗೂ ಕೇಕ್ ಕಟಿಂಗ್ ಮತ್ತು ಸಿಹಿ ಹಂಚುವುದರ ಮೂಲಕ ನಡೆಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಫ್ರೆಂಡ್ಸ್ ಕೇಟರರ್ಸ್ ನ ಮಾಲಿಕರಾದ Rtn. ನವೀನ್ ಅಮೀನ್ ಶಂಕರಪುರ, ದೀಪಕ್ ಕುಮಾರ್ ಎರ್ಮಾಳ್, ಅಶ್ವಿನಿ ಬಂಗೇರ, ರಾಕೇಶ್ ಕುಂಜೂರು, ನೀತಾ ಪ್ರಭು, ಅಶೋಕ್ ಪೂಜಾರಿ ಕಟಪಾಡಿ, ಪ್ರಮೋದ್ ಸುವರ್ಣ ಕಟಪಾಡಿ, ಪುರುಷೋತ್ತಮ್ ಸಾಲಿಯಾನ್ ಮೂಳೂರು, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಮುಖ್ಯಸ್ಥರು ಮತ್ತು ಆಶ್ರಮದ ಸಂಚಾಲಕರಾದ ಕುಮಾರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗೀತಾಂಜಲಿ ಸುವರ್ಣ ಕಟಪಾಡಿ ಇವರು ಕೊರೋನ lockdown ಸಂದರ್ಭದಲ್ಲಿ "ಬಿರುವೆರ್ ಕಾಪು ಸೇವಾ ಟ್ರಸ್ಟ್" ಮಾಡಿದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು ಯಾವುದೇ ಸ್ವಾರ್ಥವಿಲ್ಲದೆ ಯುವಕರ ತಂಡ ಬಡವರ ಸೇವೆ ಮಾಡುತ್ತಿರುವುದು ಪ್ರಶಂಸಾರ್ಹ ಎಂದರು. ಕಾರ್ಯಕ್ರಮದ ಕೊನೆಗೆ ಸುಧಾಕರ್ ಸಾಲ್ಯಾನ್ ಕಾಪು ಇವರು ಧನ್ಯವಾದ ತಿಳಿಸುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಕಾಪು : ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ

Posted On: 25-07-2020 10:08PM

ಕಾಪು : ಶುಕ್ರವಾರ ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಬರ್ಬರವಾಗಿ ಕೊಲೆಗೈದು, ಮನೆಯಂಗಳದಲ್ಲೇ ಸುಟ್ಟು ಹಾಕಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಳೂರು ಐದು ಸೆಂಟ್ಸ್ ಕಾಲೊನಿ ನಿವಾಸಿ ಹೇಮಂತ್ ಪೂಜಾರಿ (45) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಆತನನ್ನು ಪುಂಚಲಕಾಡು ನಿವಾಸಿ ಅಲ್ಬನ್ ಡಿ. ಸೋಜ (50) ಕೊಲೆ ನಡೆಸಿದ್ದನು. ಇಬ್ಬರೂ ಕೂಡಾ ಸ್ನೇಹಿತರಾಗಿದ್ದು, ಜೊತೆಗೂಡಿ ಕುಡಿಯುವ ಛಟ ಹೊಂದಿದ್ದರು. ಶುಕ್ರವಾರ ಸಂಜೆ ಕ್ಷುಲ್ಲಕ ಕಾರಣವೊಂದಕ್ಕೆ ಇಬ್ಬರ ನಡುವೆ ಜಗಳವುಂಟಾಗಿದ್ದು, ಬಳಿಕ ಅದು ಕೊಲೆಯಲ್ಲಿ ಅಂತ್ಯ ಕಂಡಿತ್ತು. ಕೊಲೆ ಗಡುಕ ಆರೋಪಿಯು ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮನೆಯ ಅಂಗಳದಲ್ಲೇ ಮರದ ತುಂಡುಗಳು ಮತ್ತು ಸೋಗೆ ಮಡಲುಗಳನ್ನು ಹಾಕಿ ಶವವನ್ನು ಸುಟ್ಟು ಹಾಕಲು ಯತ್ನಿಸಿದ್ದನು. ಸ್ಥಳೀಯರು ಸಕಾಲಿಕವಾಗಿ ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿ ಹೆಣವನ್ನು ಸುಟ್ಟು ಹಾಕಿ, ಸಾಕ್ಷ್ಯ ನಾಶ ಮಾಡುವ ದುಷ್ಕೃತ್ಯವನ್ನು ತಡೆಹಿಡಿದಿದ್ದರು. ಸೂರಿ ಶೆಟ್ಟಿ ಕಾಪು ಸುಟ್ಟ ಹೆಣವನ್ನು ತೆಗೆಯಲು ಸಹಕರಿಸಿದರು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಶಿರ್ವ ಎಸ್ಸೈ ಶ್ರೀಶೈಲ ಮುರಗೋಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಆಟೋಚಾಲಕಿ, ಆಶಾಕಾರ್ಯಕರ್ತೆ ರಾಜೀವಿಯವರ ಮಾನವೀಯ ಸೇವೆ ಅಪೂವ೯

Posted On: 25-07-2020 12:21PM

ರಾಜೀವಿ ಕರೋನಾ ವಾರಿಯರ್ ಮಾನವೀಯ ಸೇವೆ ಅಪೂವ೯ ಗುರುವಾರ ರಾತ್ರಿ 3 ಗಂಟೆಗೆ ಊರಿನ ಒಂದು ಹೆಣ್ಣು ಮಗಳಿಗೆ ಹೆರಿಗೆ ನೋವು ಕಾಣಿಸಿತು. ಆಶಾ ಕಾರ್ಯಕರ್ತೆ ರಾಜೀವಿ ಅವರು ಸ್ವತಃ ರಿಕ್ಷಾ ಚಲಾಯಿಸಿ ಪೆರ್ನಂಕಿಲ ದಿಂದ 18 ಕಿ.ಮಿ. ದೂರ ಇರುವ ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆಗೆ ಮಹಿಳೆಯನ್ನು ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ. ಗಭಿ೯ಣಿ ಮಹಿಳೆಯರಿಗೆ ಉಚಿತ ಸೇವೆ ನೀಡುತ್ತಿರುವ ಇವರು ಬಹುಮುಖ ಪ್ರತಿಭೆಯವರು ತನ್ನ ಬದುಕು ಮತ್ತೊಬ್ಬರಿಗೆ ಸಹಾಯವಾಗಬೇಕು. ಎನ್ನುವ ಪರಿಕಲ್ಪನೆ ಯಿಂದ ಊರಿನಲ್ಲಿಯೂ ಕೂಡ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ತನ್ನ ರಿಕ್ಷಾವನ್ನು ಕರೋನಾಕ್ಕೆ ಅನುಗುಣವಾಗಿ ಬದಲಾವಣೆ ಮಾಡಿ ವಿವಿಧ ಸಂದೇಶ ಉಳ್ಳ ಭಿತ್ತಿಪತ್ರ ಅಳವಡಿಸಿರುತ್ತಾರೆ. *ರಾಜೀವಿ ಅವರ ಮನದಾಳದ ಮಾತು* ನಾನು ಆಟೋ ಓಡಿಸಲು ಶುರುಮಾಡಿದಾಗ ಈ ಭಾಗದಲ್ಲಿ ಬಸ್ಸಿನ ಸೌಕರ್ಯ ಇರಲಿಲ್ಲ. ಹಾಗಾಗಿ, ಇತರರಿಗೆ ಸಹಾಯವಾದಂತಾಯಿತು, ನನ್ನ ಬದುಕಿಗೂ ಆಧಾರವಾದಂತಾಯಿತು ಎಂಬ ಧೋರಣೆಯಲ್ಲಿ ಈ ಕಾಯಕಕ್ಕೆ ಕಾಲಿರಿಸಿದೆ. ಈಗ ನಾನು ಆಟೋ ಚಾಲಕಿ ಮಾತ್ರವಲ್ಲ, ಆಶಾ ಕಾರ್ಯಕರ್ತೆಯಾಗಿಯೂ ದುಡಿಯುತ್ತಿದ್ದೇನೆ. ಈ ಭಾಗದ ಮಹಿಳೆಯರಿಗೆ ಹೆರಿಗೆನೋವು ಕಂಡುಬಂದರೆ, ರಾತ್ರಿಯಾಗಲಿ ಹಗಲಾಗಲಿ ನಾನು ಆಟೋ ಹತ್ತಿಬಿಡುತ್ತೇನೆ. ಒಮ್ಮೆ ಮಹಿಳೆಯೊಬ್ಬರಿಗೆ ಹೆರಿಗೆನೋವು ಬಂದಾಗ 108 ಆ್ಯಂಬುಲೆನ್ಸ್‌ ಗೆ ಫೋನ್‌ ಮಾಡಿದ್ದರು. ಆ್ಯಂಬುಲೆನ್ಸ್‌ ಬರುವುದು ತಡವಾದಾಗ, ನಾನೇ ಆಟೋದಲ್ಲಿ ಅವರನ್ನು ಕರೆದೊಯ್ದೆ. ತುಸು ದೂರ ಚಲಿಸುವಾಗ ಎದುರಿನಿಂದ ಆ್ಯಂಬುಲೆನ್ಸ್‌ ಬಂತು. ಗರ್ಭಿಣಿಯನ್ನು ಆ್ಯಂಬುಲೆನ್ಸ್‌ ಹತ್ತಿಸಿ ಮತ್ತೈದು ನಿಮಿಷದಲ್ಲಿಯೇ ಹೆರಿಗೆ ಆಯಿತು. ಈ ಘಟನೆ ಪತ್ರಿಕೆಗಳಲ್ಲಿಯೂ ವರದಿಯಾಗಿತ್ತು. ಆ ಮಗು ಈಗ ನಾನು ಕೆಲಸ ಮಾಡುವ ಅಂಗನವಾಡಿಗೆ ಬರುತ್ತಿದೆ. ಮಗುವಿನ ಮುಖ ನೋಡುವಾಗ ಬಹಳ ಖುಷಿ ಆಗುತ್ತದೆ. ಆಟೋ ಚಾಲನೆ ಆರಂಭದ ದಿನಗಳಲ್ಲಿ ಅಡೆತಡೆಗಳನ್ನು ಎದುರಿಸಿದ್ದೇನೆ. ಆದರೂ ಯಾವುದನ್ನೂ ಲೆಕ್ಕಿಸದೆ ನನ್ನ ಕಾಯಕವನ್ನು ಮುಂದುವರಿಸಿದೆ. ಕೆಲವೊಮ್ಮೆ ರಾತ್ರಿ ಹೊತ್ತು ಆಟೋ ಅಡ್ಡಹಾಕಿದ ಘಟನೆಗಳೂ ನಡೆದಿವೆ. ಆದರೆ ನಾನು ರಾತ್ರಿ ಎಲ್ಲಿಯೂ ಆಟೋ ನಿಲ್ಲಿಸುವುದೇ ಇಲ್ಲ. ಎಲ್ಲವನ್ನೂ ಎದುರಿಸಿ ಮುನ್ನುಗ್ಗಿದ ಮೇಲೆ ತೊಂದರೆ ಕೊಡುವವರೆಲ್ಲ ಹಿಮ್ಮೆಟ್ಟಿದ್ದಾರೆ. ಈಗ ಸಮಾಜಮುಖಿಯಾಗಿಯೂ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರಧಾನಮಂತ್ರಿ ಗಳ ಸ್ವಚ್ಛತಾ ಅಭಿಯಾನದ ಮಾಸ್ಟರ್‌ ಟ್ರೈನರ್‌ ಆಗಿದ್ದೇನೆ. ಕೊಡಿಬೆಟ್ಟು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಮಾಡುವ ವಿಂಗಡಿಸುವ ಕೆಲಸ ಮಾಡುತ್ತೇನೆ. ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಲಸಗಳಲ್ಲಿ ಸಕ್ರಿಯಳಾಗಿದ್ದೇನೆ. ಹೀಗೆ ಬಹುಮುಖಿಯಾಗಿ ಕೆಲಸಮಾಡಲು ಧೈರ್ಯ ನನಗೆ ಕೊಟ್ಟಿದ್ದು ಇದೇ ಆಟೋ. ಇನ್ನೊಂದು ಆಟೋ ಖರೀದಿಸಿ, ಅದನ್ನು ಇನ್ನೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೇನೆ. ಆಟೋರಿಕ್ಷಾದಲ್ಲಿ ದೂರದೂರಿಗೆ ಪ್ರಯಾಣಿಸು ವುದು ನನಗೆ ಖುಷಿ ಅನಿಸುತ್ತೆ, ನನ್ನ ತವರುಮನೆ ಸುಳ್ಯದಲ್ಲಿದೆ ನಾವೆಲ್ಲ ರಿಕ್ಷಾದಲ್ಲಿಯೇ ಸುಳ್ಯಕ್ಕೆ ಹೋಗುತ್ತೇವೆ. ಧರ್ಮಸ್ಥಳ, ಬೆಳ್ತಂಗಡಿ ಮುಂತಾದ ಕಡೆಗೂ ರಿಕ್ಷಾದಲ್ಲಿಯೇ ಪ್ರಯಾಣಿಸಿದ್ದೇನೆ. ದೂರದ ಪ್ರಯಾಣ ಎಂದರೆ ನನಗೆ ಇಷ್ಟವೇ ಎಂದು ಹೇಳುತ್ತಾರೆ. ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಜೀವಿಯವರು ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಅದೆಷೋ ಮಹಿಳೆಯರು ಚಾಲಕ ಕೆಲಸ ನಿವ೯ಹಿಸಲು ಹಿಂಜರಿಯುವ ಈ ಸಂದಭ೯ದಲ್ಲಿ ಅತ್ಯಂತ ಗಟ್ಟಿಮನಸ್ಸಿನಿಂದ ಈ ಚಾಲಕ ವೃತ್ತಿಯನ್ನು ನಡೆಸುತ್ತಿದ್ದಾರೆ. ಸರಕಾರ ಇವರ ಕೆಲಸಗಳನ್ನು ಗುರುತಿಸಿ ಗೌರವಿಸಬೇಕಾಗಿದೆ. ಈ ರೀತಿಯ ಗಟ್ಟಿ ಮನಸ್ಸಿನ ಕರೋನಾ ವಾರಿಯರ್ಸ್ ನಿಂದ ಈ ಕರೋನಾ ವ್ಯಾಧಿ ಸಮಥ೯ವಾಗಿ ಎದುರಿಸಲು ದೇಶಕ್ಕೆ ಸಾಧ್ಯವಾಗಿದೆ.ಇವರಿಗೆ ಜಿಲ್ಲಾಡಳಿತ ಗುರುತಿಸಿ ಪ್ರೋತ್ಸಾಹ ನೀಡಲಿ ಎನ್ನುವುದು ನಮ್ಮ ಆಶಯವಾಗಿದೆ. ಈಗಾಗಲೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರವರು ತಮ್ಮ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ರಾಘವೇಂದ್ರ ಪ್ರಭು ಕವಾ೯ಲು

ತುಳುವರ ನಾಗಾರಾಧನೆಯ ಹಿನ್ನೋಟ - ಕೆ. ಎಲ್. ಕುಂಡಂತಾಯ

Posted On: 24-07-2020 11:12PM

ಗಿಡ ,ಮರ , ಬಳ್ಳಿ ,ಪ್ರಾಣಿ ,ಪಕ್ಷಿ , ನದಿ , ಸಮುದ್ರ , ಪರ್ವತ , ಬೆಟ್ಟ , ಗುಡ್ಡಗಳನ್ನು ಆರಾಧಿಸುವ ಭಾರತೀಯ ಆಚಾರ - ವಿಚಾರ ಪ್ರಪ್ರಥಮ ದೈವೀಕರಿಸಿದ ಪ್ರಾಣಿ "ನಾಗ" ಅಥವಾ "ಸರ್ಪ" . ಪರಶುರಾಮ ಸೃಷ್ಟಿ ಎಂದು ನಂಬಲಾಗುವ ಈ ಪಶ್ಚಿಮ ಕರಾವಳಿಯಲ್ಲಂತೂ ನಾಗ ಶ್ರದ್ಧೆ ವಿಶಿಷ್ಟವಾದುದು .ವಿಶ್ವದ ಬೇರೆಲ್ಲೂ ಕಾಣಸಿಗದ ನಂಬಿಕೆ - ನಡವಳಿಕೆಗಳು ನಾಗ ಸಂಬಂಧಿಯಾಗಿದೆ .ನಾಗ ಪ್ರೀತಿ - ಭಕ್ತಿ - ಒಡಂಬಡಿಕೆ - ಸ್ವೀಕಾರಗಳು ನಮ್ಮಲ್ಲಿರುವಷ್ಟು ವೈವಿಧ್ಯಮಯವಾಗಿ ಬೇರೆಲ್ಲೂ ಇಲ್ಲ . ಈ ಭರವಸೆ - ವಿಶ್ವಾಸವು ಪುರಾತನವಾದರೂ ಬಲಗುಂದದೆ ಸಾಗಿಬಂದಿದೆ . ಸಹಸ್ರಾರು ವರ್ಷಕಳೆದರೂ "ನಾಗ ನಂಬಿಕೆ" ಪ್ರಸ್ತುತ , ಅಷ್ಟೇ ಗಾಢವಾದುದಾಗಿದೆ . ಮೃತ ನಾಗನ ಕಳೇವರ ಸಿಕ್ಕಿದರೆ ಸಂಸ್ಕಾರ ವಿಧಿ ಪೂರೈಸುವ ಭಯ ,ಭಕ್ತಿಯ ಸರ್ಪ ಸಂಸ್ಕಾರ ಧಾರ್ಮಿಕ ವಿಧಿವಿಧಾನಗಳನ್ನು( ಇದು ಬಹುಶಃ ವೈದಿಕ ಆಗಮನದ ಬಳಿಕದ ಅನುಸಂಧಾನ - ವಿರಬಹುದು) ಗಮನಿಸಿದಾಗ ,ನಮಗೇನು ನಾಗನೊಂದಿಗೆ ಪೈತೃಕದ ಸಂಬಂಧವೇ ಎಂದು ಅನ್ನಿಸುವುದಿಲ್ಲವೇ ? ಹೀಗೆ ಲೋಕ ಪ್ರಿಯ ನಾಗನನ್ನು ಭೂಮಿಪುತ್ರನೆಂದೇ ಒಪ್ಪಿದೆ ನಮ್ಮ ಧರ್ಮಶ್ರದ್ಧೆ . ಬ್ರಹ್ಮ ಸೃಷ್ಟಿಯ ಬಳಿಕ ಸಂಭವಿಸಿದ ಅಥವಾ ಗೋಚರಿಸಿದ ಈ ಭೂಭಾಗದ ಮೂಲನಿವಾಸಿಯೇ ನಾಗ ಎಂದು ಭಾವಿಸುವ ನಮ್ಮ ಮನಸ್ಸುಗಳು ನಾಗ ಸಂತತಿಯ ಕುರಿತಾಗಿ ಯೋಚಿಸುವಾಗ ಭಕ್ತಿ ಇರುತ್ತದೆ , ಹಿನ್ನೆಲೆಯಲ್ಲಿ ಭಯವೂ ಸ್ಪಷ್ಟ . 'ಮೂಲದ ನಾಗ'ಎಂದು ಜನಪದರಲ್ಲಿರುವ ರೂಢಿಯನ್ನು ನೆನಪಿಸಿಕೊಳ್ಳಬಹುದು . ವಿಶ್ವದ ಹಲವು ಸಂಸ್ಕೃತಿಗಳಲ್ಲಿ ನಾಗ ನಂಬಿಕೆಗಳಿವೆ ,ವೈವಿಧ್ಯಮಯ‌ ಆಚರಣೆಗಳಿವೆ . ಭಾರತದಲ್ಲಂತೂ ಸಾವಿರಾರು ವಿಶ್ವಾಸಗಳು - ಸ್ವೀಕಾರಗಳಿವೆ .ಉತ್ತರ ಭಾರತಕ್ಕಿಂತ ದಕ್ಷಿಣದಲ್ಲಿ ಭಿನ್ನತೆ ಇದೆ .ಕರ್ನಾಟಕದಲ್ಲೆ ಹಲವು ಕ್ರಮಗಳ ಆಚರಣೆಗಳು .ಕೇರಳದ ಕರಾವಳಿಯಲ್ಲಿ ಅನೇಕ‌ ವಿಧಿವಿಧಾನಗಳು. ಆದರೆ ನಮ್ಮ ಜಿಲ್ಲೆಗಳ ಕರಾವಳಿಯದ್ದು ಪ್ರತ್ಯೇಕ ಅನುಸಂಧಾನ - ಆರಾಧನಾ ವೈವಿಧ್ಯ . |ವೈದಿಕ ಅನುಸಂಧಾನ| ನಾಗ ಶ್ರದ್ಧೆಗೆ , ಆರಾಧನಾ ಸ್ವರೂಪಕ್ಕೆ ವಿಸ್ತಾರವಾದ ಆಯಾಮ ದೊರೆಯುವುದು ವೈದಿಕದಿಂದ . ನಾಗ ಸಂಬಂಧಿಯಾದ ವೇದ ಮಂತ್ರಗಳು ಎಲ್ಲೆಡೆ ವ್ಯಾಪ್ತನಾದ ನಾಗ - ಸರ್ಪದ ಕುರಿತು ವ್ಯಾಖ್ಯಾನಿಸುತ್ತದೆ . ಮಹಾಶೇಷನು ತನ್ನ ತಮ್ಮನಾದ ವಾಸುಕಿಗೆ ಭೂಮಿಯ ಅಧಿಕಾರವನ್ನು ಕೊಟ್ಟು ನಾಗರಾಜನಾಗಿರು ಎನ್ನುತ್ತಾನೆ. ಹಾಗಾಗಿಯೇ ನಮ್ಮಲ್ಲಿ "ವಾಸುಕೀ ನಾಗರಾಜ" ಎಂಬ ಸಂಕಲ್ಪ ರೂಢವಾಯಿತು .ವೈದಿಕದ ಪೂಜಾ ವಿಧಾನಗಳು ಒಪ್ಪಿತವಾದುವು . ಆಸ್ತಿಕನೆಂಬ ಬ್ರಾಹ್ಮಣ ವಟುವಿನಿಂದ ಸರ್ಪ ಸಂತತಿ ಉಳಿಯಿತು . ಇದು ಜನಮೇಜಯನ ಸರ್ಪಯಾಗದ ಪ್ರಸಂಗದಲ್ಲಿ (ಮಹಾಭಾರತ) . ಹಾಗಾಗಿಯೇ ನಾಗಬನಗಳಲ್ಲಿ , ವಿಶೇಷ ಪೂಜೆಗಳ ಸಂದರ್ಭ "ವಟುವಾರಾಧನೆ" ನಾಗ ಪ್ರೀತ್ಯರ್ಥವಾಗಿ ನೆರವೇರುತ್ತವೆ .ಇದನ್ನು ಆಸ್ತಿಕರು ಪ್ರೀತಿಯಿಂದ ನೆರವೇರಿಸುತ್ತಾರೆ . ಇಂತಹ ಹತ್ತಾರು ನಾಗ ಉಪಾಸನಾ ಪದ್ಧತಿಗಳು ವೈದಿಕ - ಅವೈದಿಕದ ಸುಗಮ ಸಮಾಗಮವಾಗಿ ಕಂಡುಬರುತ್ತವೆ .ಹಾಗಾಗಿ ಆಶಯದಲ್ಲಿ ವೈದಿಕ ಸಂಕಲ್ಪವು ಉದಾತ್ತವಾದುದಾಗಿದೆ. ‌ |ಸಮೂಹ ಪೂಜೆ| ಕರಾವಳಿಯಲ್ಲಿ ದೊರೆಯುವ ಮಾಹಿತಿಗಳಂತೆ ಮಾನವ ತನಗೆ ಆರಾಧಿಸಬೇಕೆಂದು ಬಯಸಿದುದನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ (ಮರದ ಬುಡದಲ್ಲಿ ಪ್ರತೀಕವಾಗಿ ಕಲ್ಲಿನ ತುಂಡೊಂದನ್ನಿರಿಸಿ) ನಂಬ ತೊಡಗಿರುವುದು ನಿಖರವಾಗುತ್ತದೆ . ಇದಕ್ಕೆ ಆಧಾರವಾಗಿ ಈಗ ಇರುವ ಬ್ರಹ್ಮಸ್ಥಾನಗಳು , ಆಲಡೆಗಳು , ಬೂತ - ದೈವಗಳ ಸಹಿತದ ಸಮೂಹ ಆರಾಧನಾ ನೆಲೆಗಳು ಇವೆ .ಆ ಸಂದರ್ಭದಲ್ಲಿ ನಾಗನು ಸಮೂಹದಲ್ಲೆ ಬೂತ - ದೈವಗಳೊಂದಿಗೆ ಪೂಜೆಗೊಳ್ಳುತ್ತಿದ್ದ . ಮುಂದೆ "ಬೆರ್ಮೆರ್", ಬೆಮ್ಮೆರ್ , ಬಿಮ್ಮೆರ್ ಎಂದರೆ 'ತುಳುವಿನ ದೇವರು' ( ಡಾ.ಜನಾರ್ದನ ಭಟ್ ಅವರ ಸಂಶೋಧನೆ) . ಈ 'ಬ್ರಹ್ಮ'( ಬೆರ್ಮೆರ್) ಪ್ರಧಾನವಾಗಿ ಆರಾಧನೆಗಳು ನಿಚ್ಚಳವಾದಾಗ ಬೆರ್ಮೆರ್(ಬ್ರಹ್ಮ) ಮುಖ್ಯವಾಯಿತು . ಬ್ರಹ್ಮನ ನೆಲೆಯಿಂದಾಗಿ ಅವು ಬ್ರಹ್ಮಸ್ಥಾನಗಳಾದುವು .ಹೇಗೆ ಬೆರ್ಮೆರ್ ತುಳುವಿನ ದೇವರೋ ಹಾಗೆಯೇ ಬ್ರಹ್ಮ - ಬೆರ್ಮೆರ್ ಇರುವ ತಾಣ ತುಳುವರ ದೇವಸ್ಥಾನ ಅದೇ ಬ್ರಹ್ಮಸ್ಥಾನವಾಯಿತು. ಇವೇ ಮೂಲದ ಬೆರ್ಮೆರ್ ಪ್ರಧಾನವಾದ ಸಮೂಹ ಪೂಜಾ ಸ್ಥಾನ . ಇತ್ತೀಚೆಗಿನ ದಶಕಗಳಲ್ಲಿ ತುಳುನಾಡಿನ ಅಥವಾ ಕರೆನಾಡಿನ ಬೆರ್ಮೆರ್ - ಬೆಮ್ಮೆರ್ - ಬಿಮ್ಮೆರ್ ಉತ್ತರಕನ್ನಡದಲ್ಲಿ ಗುರುತಿಸಲಾಗುವ 'ಬೊಮ್ಮಯ' ಮುಂತಾದ ಹೆಸರುಗಳಿಂದ ನಂಬಲಾದ ಬೆರ್ಮೆರ್ ಬಗ್ಗೆ ಸ್ಪಷ್ಟತೆ ಇಲ್ಲವಾಯಿತು , ನಾಗ ಪಾರಮ್ಯ ಅಧಿಕವಾಯಿತು ಹಾಗಾಗಿ ನಮ್ಮ ಪುರಾತನ 'ಬೆರ್ಮಸ್ಥಾನ'ಗಳು"ನಾಗ - ಬ್ರಹ್ಮಸ್ಥಾನ" ಗಳಾಗಿ ಪರಿವರ್ತನೆಯಾದುವು . |ಮೂಲದ ನಾಗಾರಾಧನೆ| ವೈದಿಕ ಆಗಮನ ಪೂರ್ವದ ನಾಗಾರಾಧನಾ ವಿಧಾನಗಳು ಅಲ್ಲಲ್ಲಿ ಉಳಿಕೆಯಾಗಿ ಉಳಿದುಕೊಂಡಿವೆ . ಈ ಲೇಖಕ ಗುರುತಿಸಿ ಪತ್ರಿಕೆಗೆ ಬರೆದಿರುವ 12 -13 ನಾಗಬನಗಳಲ್ಲಿ ಇಂದಿಗೂ ಮೂಲದ ನಾಗನ ಆರಾಧನೆ ಮೂಲಕ್ರಮದಂತೆ ನಡೆಯುತ್ತಿದೆ ( ಇನ್ನೂ ಇರಬಹುದು , ಇದೆ . ಪತ್ರಿಕೆಗಳು ಆ ಕುರಿತ ಲೇಖನಗಳನ್ನು ಪ್ರಕಟಿಸಿವೆ) . ಕಾಡ್ಯನ ಮನೆಗಳಲ್ಲಿ , ಮೂಲಿಗರ ಮೂಲಸ್ಥಾನಗಳಲ್ಲಿ ನಾಗರಪಂಚಮಿ ಆರಾಧನೆ ಇರುವುದಿಲ್ಲ . ಈ ಆರಾಧನಾ ಉಳಿಕೆಗಳನ್ನು ಮತ್ತು ಅಲ್ಲಿಯ ವಿಧಿಯಾಚರಣೆಗಳನ್ನು ಆಧರಿಸಿ "ನಾಗರಪಂಚಮಿ ತುಳುನಾಡಿನ ನಾಗಾರಾಧನಾ ಪರ್ವ ದಿನವೇ" ಎಂಬ ಸಂಶಯ ಬರುತ್ತದೆ . ಇವುಗಳೆಲ್ಲ ಪುರಾತನ ಬನಗಳು , ಮೂಲದ ಜನವರ್ಗದವರ ಆರಾಧನಾ ನೆಲೆಗಳು ಎಂಬುದು ಮತ್ತಷ್ಟು ಮೇಲಿನ ಊಹೆಗೆ ಪುಷ್ಟಿ ನೀಡುತ್ತದೆ . ನಮ್ಮಲ್ಲಿದ್ದ ,ಈಗಲೂ ಉಳಿದಿರುವ 'ಬೇಷದ ತನು" ಎಂಬ ಆಚರಣೆ ಈ ಸಂಶಯವನ್ನು ದೃಢಪಡಿಸುತ್ತದೆ .ಅಂದರೆ ಕೃಷಿ - ಬೇಸಾಯಕ್ಕೆ ಪೂರ್ವಭಾವಿಯಾಗಿ ನಮ್ಮ ದೈವ - ದೇವರನ್ನು‌ ಪೂಜಿಸುವ ಪದ್ಧತಿಯೊಂದು ನಮ್ಮಲ್ಲಿದೆ . ಅದಕ್ಕಾಗಿಯೇ ಬೇಷದ ತನು - ತಂಬಿಲ ನಮ್ಮಲ್ಲಿ ಮುಖ್ಯವಾದುದು. ಪಗ್ಗು ತಿಂಗಳು ಬರುವ ಸಂಕ್ರಮಣ (ಮೇಷ ಸಂಕ್ರಮಣ) ಎಂದರೆ 'ಪಗ್ಗು ಬರ್ಪಿ ಸಂಕ್ರಾಂದಿ'ಯಂದು ಆಚರಣೆಗಳು , ತನು ಹೊಯ್ಯುವ ವಿಧಿಗಳು ನಡೆಯುವ ಬನಗಳು ಗುರುತಿಸಲ್ಪಟ್ಟಿವೆ . ಹಾಗೆಯೇ ಇಂತಹ ಅಪೂರ್ವ ನಾಗಬನಗಳು ವೈದಿಕೀಕರಣಕ್ಕೆ ಮತ್ತು ವೈಭವೀಕರಣಕ್ಕೆ ಒಳಗಾಗುತ್ತಿವೆ . ಇದು ವೈದಿಕಾನುಕರಣೆಯ ಪ್ರಭಾವದಿಂದ . ನಮ್ಮ ಕಾಳಜಿ ಆರಾಧನಾ ವಿಧಾನದ ಮೂಲ ಮತ್ತು ವೈವಿಧ್ಯತೆಯ ಅನ್ವೇಷಣೆ ಅಥವಾ ತಿಳಿದುಕೊಳ್ಳುವುದೇ ಹೊರತು ಆಕ್ಷೇಪಗಳಲ್ಲವಲ್ಲ . ನಾಗನಿಗೆ 'ಅಭಿಷೇಕ'ವಲ್ಲ , ತನು ಹೊಯ್ಸುವುದು ( ತನು ಮಯಿಪಾವುನು). 'ಪ್ರಸನ್ನಪೂಜೆಯಲ್ಲ ; ತಂಬಿಲಕಟ್ಟಾವುನು . "ತನು ಮಯಿಪಾವೊಡು ತಂಬಿಲಕಟ್ಟಾವೊಡು" ಎನ್ನವುದೇ ನಾಗಸ್ಥಾನ - ಮೂಲತಾನಗಳ ಸಂದರ್ಶನದ ಉದ್ದೇಶವಾಗಿರುತ್ತದೆ . | 'ನಾಗಬನ'ಗಳು 'ವನ'ಗಳಾಗಿಯೇ ಇರಲಿ | ‌ ‌ ಮಾನವ ವಾಸ್ತವ್ಯದ ಹರವು ವಿಸ್ತಾರವಾಗುತ್ತಿರುವಂತೆ ಅಥವಾ ನಾಗ ಹರಿದಾಡುವುದು ಹೆಚ್ಚಾದಾಗ , ದರ್ಶನವಾದಾಗ ನಾಗ ಪ್ರೀತ್ಯರ್ಥವಾಗಿ ನಾಗನನ್ನು ಮಾತ್ರ ಪ್ರತ್ಯೇಕವಾಗಿ ನಂಬುವ ಅನಿವಾರ್ಯತೆ ಬಂದೊದಗಿತು .ಆಗ ನಾಗಬನಗಳು ಅಸ್ತಿತ್ವಕ್ಕೆ ಬಂದಿರುವುದನ್ನು ಸಂಶೋಧಕರು ಗಮನಿಸಿದ್ದಾರೆ . ಮಾನವ ಸಂಕಲ್ಪ - ಪ್ರಕೃತಿ ನಿರ್ಮಿಸಿದ ,ಶ್ರದ್ಧೆಯಿಂದ ಕಾಪಿಟ್ಟನಾಗ ಬನ ಎಂದರೆ ,ಅದೊಂದು ದಟ್ಟವಾದ ಅರಣ್ಯದ ಸಣ್ಣ ಮಾದರಿ . ಇದೊಂದು ಸುರಕ್ಷಿತ ಪರಿಸರ . ಮಾನವ ಅಭಿಯೋಗವಾಗದ ಒಂದು ನಾಗ ಬನದಲ್ಲಿ ಕನಿಷ್ಠ 50-60 ವೃಕ್ಷ - ಗಿಡ - ಬಳ್ಳಿ - ಪೊದೆಗಳ ಪ್ರಭೇದ , 20-30 ಔಷಧೀಯ ಸಸ್ಯಗಳು ಇರುತ್ತವೆ ಎಂಬುದು ಸಂಶೋಧಕರ , ಪರಿಸರ ಆಸಕ್ತರ ಅಭಿಪ್ರಾಯ . ಇಲ್ಲಿ ಬೆಳೆದ ಮರ- ಗಿಡ- ಬಳ್ಳಿಗಳನ್ನು ಆಶ್ರಯಿಸಿ ಪಕ್ಷಿಸಂಕುಲ ನಿರ್ಭಯದಿಂದ ಬದುಕುತ್ತವೆ . ಕ್ರಿಮಿಕೀಟಗಳಿಗೂ ಇದು ಆಶ್ರಯಸ್ಥಾನ .ಹೀಗೆ ನಾಗಬನಗಳು ಜೀವ ವೈವಿಧ್ಯಗಳ ತಾಣವೂ ಹೌದು . ಇದು ನಿಜ ಅರ್ಥದ ವನ , ಬನ.ಮರ ಗಿಡಗಳಿಲ್ಲದ "ನಾಗ ಬನ"ದಲ್ಲಿ ನಾಗವೇದಿಕೆ , ನಾಗಗುಡಿ , ನಾಗಮಂದಿರಗಳು ನಿರ್ಮಾಣವಾಗುತ್ತಿರುವುದನ್ನು ಇತ್ತೀಚೆಗಿನ ನಾಲ್ಕೈದು ದಶಕಗಳಿಂದ ಕಾಣುತ್ತಿದ್ದೇವೆ . ತಂಪನ್ನು ಬಯಸಿ ತಂಪನ್ನು ಆಶ್ರಯಿಸುವ ಪ್ರಾಣಿ ನಾಗ ಹುತ್ತದ ಆಳದಲ್ಲಿ , ವಿಶಾಲವಾದ ಮರಗಳ ಬುಡದಲ್ಲಿ , ಒತ್ತೊತ್ತಾಗಿ ಗಿಡ ಮರಗಳು ಬೆಳೆದಿರುವಲ್ಲಿ , ಮನುಷ್ಯ ಸಂಚಾರವಿಲ್ಲದೆ ತರಗೆಲೆಗಳು ಬಿದ್ದು ದಪ್ಪನೆಯ ಹಾಸು ನಿರ್ಮಾಣವಾದಲ್ಲಿ ಅದರಡಿಯಲ್ಲಿ ನಾಗನ ವಾಸಸ್ಥಾನ . ಇಲ್ಲೆ ಸಂತಾನಾಭಿವೃದ್ಧಿ . ಇಂತಹ ಸಹಜವಾದ ವ್ಯವಸ್ಥೆ ಇದ್ದುದನ್ನು ಹಾಳುಗೆಡಹದೆ ರಕ್ಷಿಸಿದರೆ ಇದೂ ಒಂದು ರೀತಿಯ ನಾಗಾರಾಧನೆ .ಹಿಂದೆ ಆಟಿ( ಕರ್ಕಾಟಕ ಮಾಸ) ತಿಂಗಳ ಅಮಾವಾಸ್ಯೆಯಂದು ಮಾತ್ರ ನಾಗಬನಗಳ ಅನಗತ್ಯ ಬೆಳವಣಿಗೆಗಳನ್ನು ಮಾತ್ರ ಕಡಿದು ನಾಗರಪಂಚಮಿಗೆ ಬನ ಪ್ರವೇಶಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದರು . ಆದರೆ ಇದೇ ರೀತಿಯ ನಾಗಬನಗಳ ನಾಶ ಪ್ರಕ್ರಿಯೆ , ಆಶಯ ಮರೆತ ವೈಭವೀಕರಣ ಅವ್ಯಾಹತವಾಗಿ ನಡೆದರೆ ಮುಂದೊಂದು ದಿನ ಕಾಂಕ್ರೀಟ್ ಕಟ್ಟೆಯನ್ನೊ , ಗುಡಿಯನ್ನೊ , ಮಂದಿರವನ್ನೋ ನಾಗಬನವೆಂದು ನಮ್ಮ ಮಕ್ಕಳಿಗೆ ತೋರಿಸಬೇಕಾಗಬಹುದು. ಆಗ ಮಾತ್ರ ಮಕ್ಕಳು ' ಬನ ಎನ್ನುತ್ತೀರಿ ಎಲ್ಲಿದೆ ವನ' ಎಂದು ಪ್ರಶ್ನಿಸಿದರೆ ನಮ್ಮಲ್ಲಿ ಉತ್ತರ ಇದೆಯಾ ? ಪ್ರತಿ ವರ್ಷ ಕನಿಷ್ಠ ಒಂದೆರಡು ಬಾರಿಯಾದರೂ ನಾಗ ಮೂಲಸ್ಥಾನಕ್ಕೆ "ತನುತಂಬಿಲ" ಸೇವೆಸಲ್ಲಿಸಲು ಹೋಗುವ ನಾವು ನಾಗರಪಂಚಮಿಯ ಪರ್ವದಲ್ಲಿ ಮೂಲಕ್ಕೆ ಹೋಗುವಾಗ ಒಂದು ಗಿಡವನ್ನು ಕೊಂಡೊಯ್ಯುವ ,ಬನದ ಪರಿಸರದಲ್ಲಿ ನೆಟ್ಟು ವನ ಮಹೋತ್ಸವ ಆಚರಿಸೋಣ . ಆ ವೇಳೆಯಲ್ಲಿ ಗಿಡನೆಡುವ ಅಭಿಯಾನ ಎಲ್ಲೆಡೆ ನೆರವೇರುತ್ತಿರುತ್ತವೆ . ಈ ವರ್ಷ ಮೂಲಕ್ಕೆ ಹೋಗುವ‌ , ಗಿಡ ನೆಡುವ ಪ್ರಯತ್ನಬೇಡ . ‌‌‌‌ ‌ ‌ ‌‌ಬನಗಳ ಮರುನಿರ್ಮಾಣಕ್ಕೆ ಹೀಗೊಂದು ಅವಕಾಶವಿದೆ. ಬರಹ : ಕೆ .ಎಲ್ .ಕುಂಡಂತಾಯ