Updated News From Kaup

ಕುಂಜೂರು ದುರ್ಗಾ ದೇವಸ್ಥಾನದ ನಿವೃತ್ತ ಸಿಬಂದಿಗಳಿಗೆ ಸಮ್ಮಾನ

Posted On: 07-08-2020 08:37PM

ಕಾಪು, ಆ. 7 : ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಹಲವು ದಶಕಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಗೋವಿಂದ ಉಡುಪ ದಂಪತಿ ಮತ್ತು ಅಡಿಪುಮನೆ ಗೋವಿಂದ ದೇವಾಡಿಗ ದಂಪತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ತಲಾ 50,000 ರೂಪಾಯಿ ಗೌರವ ನಿಧಿಯೊಂದಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಸಮ್ಮಾನ ಕಾರ್ಯಕ್ರಮ ನೆರವೇರಿಸಿದ ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಮಾತನಾಡಿ, ಇಬ್ಬರೂ ಕೂಡಾ ತಮ್ಮ ಸೇವೆಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು, ಭವಿಷ್ಯದಲ್ಲಿ ಇವರ ಜೀವನವನ್ನು ದೇವರು ಸುಖಮಯವಾಗಿರಿಸಲಿ ಎಂದು ಹಾರೈಸಿದರು.

ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ನಡಿಮನೆ ದೇವರಾಜ ರಾವ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ, ಎಲ್ಲೂರುಗುತ್ತು ಪ್ರಭಾಕರ ಶೆಟ್ಟಿ, ದೇಗುಲದ ಪರ್ಯಾಯ ಅರ್ಚಕ ವೇ. ಮೂ. ಚಕ್ರಪಾಣಿ ಉಡುಪ, ಅರ್ಚಕ ವೇ.ಮೂ. ಹರಿಕೃಷ್ಣ ಉಡುಪ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀವತ್ಸ ರಾವ್, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಗಿರಿಜಾ ಪೂಜಾರ್ತಿ, ಸರೋಜಿನಿ ಕುಮಾರಿ, ಪ್ರಬಂಧಕ ರಾಘವೇಂದ್ರ ಶೆಟ್ಟಿ, ಮಾಧವ ರಾವ್ ಪಣಿಯೂರು, ಎಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಮತಾ ವೈ. ಶೆಟ್ಟಿ, ಯಶೋಧರ ಶೆಟ್ಟಿ ಬಗ್ಗೇಡಿಗುತ್ತು, ಶ್ರೀ ದುರ್ಗಾ ಮಿತ್ರವೃಂದದ ಮಾಜಿ ಅಧ್ಯಕ್ಷ ರಾಕೇಶ್ ಕುಂಜೂರು ಮೊದಲಾದವರು ಉಪಸ್ಥಿತರಿದ್ದರು.

ಎಲ್ಲೂರು ಗ್ರಾ.ಪಂ. ಮಾಜಿ ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮಳೆ ಹಾನಿಗೆ ತಕ್ಷಣ ಪರಿಹಾರ ವಿತರಿಸಿ: ಸಚಿವ ಬೊಮ್ಮಾಯಿ

Posted On: 06-08-2020 07:12PM

ಉಡುಪಿ ಆಗಸ್ಟ್ 6 : ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ತಕ್ಷಣವೇ ಪರಿಹಾರ ವಿತರಿಸುವಂತೆ ರಾಜ್ಯ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಗುರುವಾರ, ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಮಳೆ ಹಾನಿ ಹಾಗೂ ಕೋವಿಡ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪ್ರಾಥಮಿಕ ಹಂತದ ಪರಿಹಾರ ಬಿಡುಗಡೆಗೊಳಿಸಿ, ಮನೆ ಹಾನಿಯ ವಿವರ ಕುರಿತು ರಾಜೀವ ಗಾಂಧಿ ವಸತಿ ನಿಗಮದ ಪೋರ್ಟಲ್ ನಲ್ಲಿ , ಹಾನಿಯದ ದಿನವೇ ಅಪ್‌ಲೋಡ್ ಮಾಡುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ಕೃಷಿ ಬೆಳೆ ಹಾನಿ ಪರಿಶೀಲಿಸಲು ತಾಲೂಕುವಾರು ಕಂದಾಯ, ಕೃಷಿ ಮತ್ತು ಪಿಡಿಓ ಒಳಗೊಂಡ ತಂಡಗಳನ್ನು ರಚಿಸಿ, ಹಾನಿಯ ಸಮೀಕ್ಷೆಯನ್ನು ಶೀಘ್ರದಲ್ಲಿ ನಡೆಸಿ ವರದಿ ಪಡೆದು ಪರಿಹಾರ ನೀಡಲು ಕ್ರಮ ಕೈಗೊಂಡು ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ, ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿದ್ದಲ್ಲಿ ಅಲ್ಲಿನ ಜನತೆಗೆ ಈ ತಿಂಗಳ ಪಡಿತರದ ಜೊತೆಗೆ , ಮುಂದಿನ ತಿಂಗಳು ಪಡಿತರವನ್ನು ಮುಂಚಿತವಾಗಿ ವಿತರಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 116 ಮನೆಗಳಿಗೆ ಭಾಗಶ: ಹಾನಿ ಮತ್ತು 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅವುಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ, ವಿಪತ್ತು ಪರಿಹಾರ ನಿಧಿಯಲ್ಲಿ ಹಣದ ಕೊರತೆ ಇಲ್ಲ, ತಹಸೀಲ್ದಾರ್ ಗಳಿಗೆ ಹಾನಿಯ ಪರಿಹಾರ ವಿತರಿಸುವ ಅಧಿಕಾರ ನೀಡಲಾಗಿದೆ, ಸಂಬಂಧಪಟ್ಟ ತಹಸೀಲ್ದಾರ್ ಗಳಿಗೆ ಹಣ ಬಿಡುಗಡೆ ಮಾಡಲಾಗಿದೆ, ಪ್ರವಾಹದಿಂದ ಜನರನ್ನು ಸ್ಥಳಾಂತರಿಸುವ ಪರಿಸ್ಥಿತಿ ಜಿಲ್ಲೆಯಲ್ಲಿ ಇಲ್ಲ, ಪ್ರವಾಹ ಪೀಡಿತ ಸಂಭವವಿರುವ 26 ಗ್ರಾಮಗಳನ್ನು ಗುರುತಿಸಲಾಗಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಎಲ್ಲಾ ಅಧಿಕಾರಿಗಳಿಗೆ ಕೇಂದ್ರಸ್ಥಾನದಲ್ಲಿರಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಚಿವರಿಗೆ ತಿಳಿಸಿದರು. ಜಿಲ್ಲೆಯಲ್ಲಿ ಈ ತಿಂಗಳ ಪಡಿತರ ಎತ್ತುವಳಿ ಆಗಿದ್ದು, ಕಳೆದ ತಿಂಗಳು 95% ಪಡಿತರ ವಿತರಣೆ ಆಗಿದೆ, 1000 ಟನ್ ರಸಗೊಬ್ಬರದ ಅವಶ್ಯಕತೆಯಿದ್ದು, ಎಂಸಿಎಫ್ ನಿಂದ ನಾಳೆ ಸರಬರಾಜು ಆಗಲಿದ್ದು, ರಸಗೊಬ್ಬರದ ಸಮಸ್ಯೆ ಇಲ್ಲ, ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, 88% ಪೂರ್ಣಗೊಂಡಿದೆ , ಮರವಂತೆ ಮತ್ತು ನಾವುಂದ ಕ್ಕೆ ಭೇಟಿ ನೀಡಿ ನೆರೆ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಡಿಸಿ ಹೇಳಿದರು. ಜಿಲ್ಲೆಗೆ ಪ್ರಾಕೃತಿಕ ವಿಕೋಪ ನಿಧಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಸಚಿವ ಬೊಮ್ಮಾಯಿ , ಜಿಲ್ಲೆಯ ಪ್ರತಿದಿನದ ಹಾನಿಯ ವರದಿಯನ್ನು ತಮಗೆ ನೀಡುವಂತೆ ಹಾಗೂ ಜಿಲ್ಲೆಯ ನಾಗರೀಕರಿಗೆ ಮಳೆಯಿಂದಾಗಿ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ , ತಕ್ಷಣವೇ ಸ್ಪಂದಿಸಿ ಅಗತ್ಯ ನೆರವು ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್19 ಸ್ಥಿತಗತಿ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕಳೆದ ವಾರದಿಂದ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 145 ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಸ್ತುತ 2100 ಸಕ್ರಿಯ ಪ್ರಕರಣಗಳಿದ್ದು, 1000 ಮಂದಿ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ನಲ್ಲಿ ಮತ್ತು 1100 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ, ಇದುವರೆಗೆ ಒಟ್ಟು 46 ಮರಣ ಸಂಭವಿಸಿದ್ದು, 15 ದಿನಗಳಿಂದ ಮರಣದ ಸಂಖ್ಯೆ ಅಧಿಕವಾಗಿದೆ. ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಬೆಡ್ ಗಳು , ವೆಂಟಿಲೇಟರ್ ಮತ್ತು ಹೈ ಪ್ಲೋ ಆಕ್ಸಿಜಿನ್ ಬೆಡ್ ಗಳ ಕೊರತೆ ಇಲ್ಲ , ಪಾಸಿಟಿವ್ ಬಂದ ಕೊನೆಯ ಹಂತದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಮರಣ ಅಧಿಕವಾಗಿದ್ದು, ಇದನ್ನು ತಪ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಕ್ಷಣೆ ನಡೆಸಬೇಕಿದ್ದು, ಇದಕ್ಕಾಗಿ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಅನುಮತಿ ನೀಡುವಂತೆ ಸಚಿವರಲ್ಲಿ ಕೋರಿದರು. ಜಿಲ್ಲೆಯಲ್ಲಿನ ಸರ್ಕಾರಿ ಕೋವಿಡ್ ಲ್ಯಾಬ್ ಕಾರ್ಯ, ಪರೀಕ್ಷಾ ಕಿಟ್ ಗಳ ಸರಬರಾಜು ಕುರಿತು ಮಾಹಿತಿ ಪಡೆದ ಉಸ್ತುವಾರಿ ಸಚಿವರು, ತುರ್ತು ಸಂದರ್ಭಗಳಲ್ಲಿ ಮಾತ್ರ ಆಂಟಿಜಿನ್ ಕಿಟ್ ಗಳ ಬಳಕೆ ಮಾಡುವಂತೆ ಮತ್ತು ರೋಗ ಲಕ್ಷಣವಿರುವ ವ್ಯಕ್ತಿಗಳನ್ನು ಆರ್.ಟಿ.ಪಿ.ಸಿ.ಆರ್. ಮೂಲಕ ಪರೀಕ್ಷೆ ನಡೆಸುವಂತೆ ಸೂಚಿಸಿದರು, ಆರೋಗ್ಯ ಇಲಾಖೆಯಲ್ಲಿ ಸರ್ವೆಕ್ಷಣಾ ಸಿಬ್ಬಂದಿ ನೇಮಕ ಕುರಿತಂತೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬೊಮ್ಮಾಯಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಉಪಸ್ಥಿತರಿದ್ದರು

ಉಡುಪಿಯಲ್ಲಿ ಬಾವಿಗೆ ಆಕಸ್ಮಿಕವಾಗಿ ಬಿದ್ದಿರುವ ವೃದ್ಧೆಯ ರಕ್ಷಣೆ

Posted On: 06-08-2020 06:32PM

ಉಡುಪಿ,ಅ.6; ವೃದ್ಧೆಯೊರ್ವರು ಮನೆಯ ನೀರಿರುವ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಉಡುಪಿ ನಗರ ಠಾಣೆಯ ಪಿ.ಎಸ್.ಐ-2 ಸದಾಶಿವ ರಾ ಗವರೋಜಿ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಹಾಗೂ ಸ್ಥಳಿಯ ಆಟೋ ಚಾಲಕ ರಾಜೇಶ್ ನಾಯಕ್ ಇರ್ವರು ಬಾವಿಗಿಳಿದು ರಕ್ಷಿಸಿದ ಘಟನೆಯು ಕುಕ್ಕಿಕಟ್ಟೆ ಮಾರ್ಪಳ್ಳಿಯಲ್ಲಿ ಗುರುವಾರ ನಡೆದಿದೆ. . ಜೀವರಕ್ಷಣೆ ಕಾರ್ಯಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಮತ್ತು ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು ಕವಾ೯ಲು ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಆಪತ್ಬಾಂದವರು

ಬಿರುವೆರ್ ಕಾಪು ಸೇವಾ ಟ್ರಸ್ಟ್ ನಿಂದ ದಾರಿಸೂಚಿ ನಾಮಫಲಕ ಹಸ್ತಾಂತರ

Posted On: 06-08-2020 05:47PM

ಬಿರುವೆರ್ ಕಾಪು ಸೇವಾ ಟ್ರಸ್ಟ್ ಕಾಪು ತಾಲೂಕು ಉಡುಪಿ ಜಿಲ್ಲೆ ಇದರ 4ನೇ ವರ್ಷದ ಪಾದರ್ಪಣೆಯ ಸುಸಂದರ್ಭದಲ್ಲಿ ವಿಜೇತ ವಸತಿಯುತ ವಿಶೇಷ ಶಾಲೆ ನೂತನವಾಗಿ ಸ್ಥಳಾಂತರಗೊಂಡ ಅಯ್ಯಪ್ಪನಗರ, ದುರ್ಗಾ ಹೈಸ್ಕೂಲ್ ಕಟ್ಟಡದಲ್ಲಿ ಜೋಡುರಸ್ತೆ ಹೆಬ್ರಿ ಹೆದ್ದಾರಿಯಲ್ಲಿ ದಾರಿಸೂಚಿ ನಾಮಫಲಕ ಹಸ್ತಾಂತರ ಕಾರ್ಯಕ್ರಮ ನೆರವೇರಿಸಲಾಯಿತು .

ಸಮಾಜದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶೇಷ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಕೂಡ ತಮ್ಮ ಸೇವೆಯನ್ನು ಮುಂದುವರೆಸುವುದಾಗಿ ತಿಳಿಸಿದರು.

4ನೇ ವರ್ಷದ ಸಂಭ್ರಮದ ಪ್ರಯುಕ್ತ ಶಾಲಾ ಸಂಸ್ಥಾಪಕಿ ಡಾ.ಕಾಂತಿ_ಹರೀಶ್ ಇವರಿಗೆ ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೋಟ್ಯಾನ್ ರವರ ಸುಪುತ್ರ ಶ್ರೀ ವರುಣ್, ಶ್ರಿ ಮನೋಹರ್, ಶ್ರೀ ಕಾರ್ತಿಕ್, ಶ್ರೀ ಅತಿಥ್, ಶ್ರೀ ಪ್ರಶಾಂತ್ ಪೂಜಾರಿ, ಶ್ರೀ ಅನಿಲ್ ಕಾಪು, ಶ್ರೀ ವಿಕ್ಕಿ ಪೂಜಾರಿ, ಶ್ರೀ ದೇವಿಪ್ರಸಾದ್,ಯೋಗೀಶ್ ಬಿಲ್ಲವ ಮತ್ತು ಶಾಲಾ ಟ್ರಸ್ಟಿ ಶ್ರೀ ಸಂತೋಷ್ ನಾಯಕ್ ಸಿಯಾ ಉಪಸ್ಥಿತರಿದ್ದರು

ಕುತ್ಯಾರು ಯುವಕ ಮಂಡಲ ಆಶ್ರಯದಲ್ಲಿ ಕುತ್ಯಾರು ಭಾಗದವರಿಗೆ ಮುದ್ದು ಕೃಷ್ಣ ಸ್ಪರ್ಧೆ.

Posted On: 06-08-2020 04:19PM

ಕುತ್ಯಾರು ಗ್ರಾಮಸ್ಥರಿಗಾಗಿ. ಸದುಪಯೋಗ ಪಡೆಯಲು ಕೋರಲಾಗಿದೆ. ಯುವಕ ಮಂಡಲ(ರಿ.) ಕುತ್ಯಾರು

ಅಯೋದ್ಯೆಯಲ್ಲಿ ಕರಸೇವೆ ಸಲ್ಲಿಸಿದ ಇಬ್ಬರಿಗೆ ಕಾಪುವಿನ ಹಿಂದೂ ಸಂಘಟನೆಯಿಂದ ಸಮ್ಮಾನ

Posted On: 05-08-2020 10:08PM

ಅಯೋಧ್ಯೆ ರಾಮಜನ್ಮ ಭೂಮಿ ಹೋರಾಟದಲ್ಲಿ ಕರಸೇವಕರಾಗಿ ಸೇವೆ ಸಲ್ಲಿಸಿದ ಕಾಪು ತಾಲೂಕಿನ ಉಚ್ಚಿಲದ ವಸಂತ್ ದೇವಾಡಿಗ ಮತ್ತು ಸದಾನಂದ್ ದೇವಾಡಿಗರಿಗೆ ಹಿಂದೂ ಜಾಗರಣ ವೇದಿಕೆ ಕಾಪು ತಾಲೂಕು ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

ಕೋವಿಡ್19 ಸುರಕ್ಷಾ ಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್

Posted On: 05-08-2020 08:36PM

ಉಡುಪಿ ಆಗಸ್ಟ್ 5 (ಕರ್ನಾಟಕ ವಾರ್ತೆ): ಸರ್ಕಾರದ ಮಾರ್ಗಸೂಚಿಯಂತೆ, ಕೋವಿಡ್-19 ನಿಯಂತ್ರಣದ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಸ್ವಾತಂತ್ರ್ಯ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವವರನ್ನು ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಪರಿಶೀಲಿಸಲು ಹಾಗೂ ಸ್ಯಾನಿಟೈಸರ್ ವ್ಯವಸ್ಥೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆ ಮತ್ತು ವೇದಿಕೆ ಮೇಲೆ ಸಹ ಸಾಮಾಜಿಕ ಅಂತರದಲ್ಲಿ ಗಣ್ಯರಿಗೆ ಆಸನ ವ್ಯವಸ್ಥೆ ಮಾಡುವಂತೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಡಿಸಿ ತಿಳಿಸಿದರು.

ಕಾರ್ಯಕ್ರಮವನ್ನು ವೆಬ್ ಕಾಸ್ಟಿಂಗ್ ಮೂಲಕ ನೇರ ಪ್ರಸಾರ ಮಾಡುವುದು ಸೇರಿದಂತೆ ಫೇಸ್ ಬುಕ್ ಲೈವ್ ಹಾಗೂ ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ನೇರವಾಗಿ ತಲುಪುವಂತೆ ಎನ್.ಐ.ಸಿ ಮೂಲಕ ಅಗತ್ಯ ಕ್ರಮ ಕೈಗೊಂಡು, ಈ ಲಿಂಕ್ ಗಳ ವಿವರಗಳನ್ನು ಸಾಕಷ್ಟು ಮುಂಚಿತವಾಗಿ ಸಾರ್ವಜನಿಕರಿಗೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಕಾರ್ಯಕ್ರಮದಲ್ಲಿ ಕೋವಿಡ್-9 ವಿರುದ್ದ ಹೋರಾಟದಲ್ಲಿ ಗಮನಾರ್ಹ ಸಾಧನೆ ತೋರಿದ ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸಿ ಗೌರವಿಸುವಂತೆ ಹೇಳಿದ ಜಿಲ್ಲಾಧಿಕಾರಿಗಳು, ಕೋವಿಡ್ ನಿಂದ ಗುಣಮುಖರಾದ ಆಯ್ದ ಕೆಲವು ಮಂದಿಗೆ ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ನೀಡುವಂತೆ ಹಾಗೂ ಆ ಪ್ರಯುಕ್ತ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸುವಂತೆ ಡಿಸಿ ಜಿ.ಜಗದೀಶ್ ತಿಳಿಸಿದರು.

ಪೊಲೀಸ್, ಹೋಂ ಗಾರ್ಡ್, ಕರಾವಳಿ ಕಾವಲು ಪಡೆ, ಅರಣ್ಯ ಇಲಾಖೆಯಿಂದ ಪಥ ಸಂಚಲನ ನಡೆಸುವಂತೆ ಹಾಗೂ ಕಾರ್ಯಕ್ರಮದಲ್ಲಿ ಕೋವಿಡ್-19 ಸುರಕ್ಷಾ ನಿಯಮಗಳ ಉಲ್ಲಂಘನೆಯಾಗದಂತೆ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಡಿಸಿ ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ವಿವಿಧ ಅಧಿಕಾರಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

"ಮರ್ಯಾದಾ ಪುರುಷೋತ್ತಮ" ಶ್ರೀ ರಾಮ - ಕೆ.ಎಲ್. ಕುಂಡಂತಾಯ

Posted On: 05-08-2020 08:04PM

ಸಂಸ್ಕೃತಿಯ ದ್ರಷ್ಟಾರರಾಗಿ , ಮನುಕುಲಕ್ಕೆ ಬದುಕಿನ ಸತ್ಪಥವನ್ನು ತೋರಿದ ಋಷಿಮುನಿಗಳು ತಮ್ಮ ತಪಸ್ಸಿನ ಫಲವನ್ನು ಕಾಡಿನಿಂದ ನಾಡಿಗೆ 'ಹರಿಸಿದರು' ಅಥವಾ 'ಹರಸಿದರು' .ಈ ರೀತಿಯಲ್ಲಿ ದಟ್ಟಾರಣ್ಯದಲ್ಲಿ ಅನುರಣಿಸಿ , ಮಹಾಮಂತ್ರವಾಗಿ ,ಕೋಗಿಲೆಯ ಇಂಚರದ ಮಾಧುರ್ಯದೊಂದಿಗೆ ನಾಡಿಗೆ ಕೇಳಿದ ಎರಡಕ್ಷರದ ಮಂತ್ರ "ರಾಮ". ಸಾವಿರಾರು ವರ್ಷಗಳ ನಿರಂತರ ಪಠನದ ಬಳಿಕ 'ರಾಮ' ಶಬ್ದ 'ರಾಮನಾಮ'ವಾಯಿತು , 'ಶ್ರೀ ರಾಮ' ಮಂತ್ರವಾಯಿತು .ಒಂದು ಮನೋಹರ ಬಿಂಬ ಸಿದ್ಧಗೊಂಡಿತು , ವಾಲ್ಮೀಕಿ ಆದಿ ಕವಿಯಾದರು . ಮಹರ್ಷಿ ವಾಲ್ಮೀಕಿಯು 'ರಾಮಾಯಣ' ಮಹಾಕಾವ್ಯದ ಮೂಲಕ ಜಗತ್ತಿಗೆ ನೀಡಿದ ಪರಿಪೂರ್ಣ ವ್ಯಕ್ತಿತ್ವ 'ರಾಮ'. ಭಾರತೀಯ ಸಂಸ್ಕೃತಿಯನ್ನು 'ರಾಮ' ಎಂಬ ಪ್ರತಿಮೆಯ ಮೂಲಕ ಸಮಗ್ರವಾಗಿ ಚಿತ್ರಿಸಿದ್ದು , ರಘುರಾಮನೆಂದೇ ಗುರುತಿಸಲ್ಪಟ್ಟ ದಾಶರಥಿಯದ್ದು , "ಮರ್ಯಾದಾ ಪುರುಷೋತ್ತಮನಾದ" ಶ್ರೀ ರಾಮಚಂದ್ರನದ್ದು . ಹಾಗಾಗಿಯೇ 'ರಾಮ' ಸಾಮಾನ್ಯ ಮಾನವನಾಗಿ ಜನಿಸಿ ದೇಶದಾದ್ಯಂತ , ಪ್ರಪಂಚದೆಲ್ಲೆಡೆ ವ್ಯಾಪ್ತನಾಗುತ್ತಾನೆ ,ಆದುದರಿಂದ 'ರಾಮ' ಎಂಬುದು ನಮಗೆ 'ಶ್ರೇಷ್ಠ' , 'ರಾಮ' ಎಂಬುದು 'ಪ್ರತಿಷ್ಠೆ'. ಬಳಸಿಕೊಂಡು ಪ್ರವಹಿಸುವ ಸರಯೂ ನದಿಯಿಂ‌ದ ಅಯೋಧ್ಯೆ ಪಾವನ ಭೂಮಿಯಾಗುತ್ತದೆ. ಇಂತಹ ನೆಲದಲ್ಲಿ‌ ಸೂರ್ಯವಂಶವೇ ಹಿನ್ನೆಲೆಯಾಗಿದ್ದ ಮಹಾರಾಜರಲ್ಲಿ 'ಸತ್ಯ'ಕ್ಕೆ ಬೇಕಾಗಿ ಸರ್ವವನ್ನೂ ತಿರಸ್ಕರಿಸಿ ,ಆಡಿದ ಮಾತಿಗೆ ತಪ್ಪದೇ ನಡೆದು ಅದ್ಭುತ ಮೌಲ್ಯವನ್ನು ಪ್ರತಿಪಾದಿಸಿದವರಿದ್ದರು , ದೇವಗಂಗೆಯನ್ನು ಧರೆಗಿಳಿಸಿದ ಪ್ರಯತ್ನಶೀಲ ಸಾಧಕರಿದ್ದರು, ಇಕ್ಷ್ವಾಕು ,ಸಗರ, ದಿಲೀಪ , ರಘು ಹೀಗೆ ಹತ್ತು ಹಲವು ಮಹನೀಯ ಮಹಾರಾಜರು ಅಷ್ಟೇ ಬೆಲೆಯುಳ್ಳ ಮಹತ್ತನ್ನು ಸಾಧಿಸಿದ್ದು , ರಾಜರಾದರೂ ರಾಜ ಋಷಿಗಳಾಗಿ ಮೆರೆದದ್ದು , ಸೂರ್ಯವಂಶದಲ್ಲಿ. ಇನವಂಶ ವಾರಿಧಿಗೆ ಪ್ರತಿಚಂದ್ರನಂತೆ ದೀರ್ಘ ಅವಧಿಗೆ ಅಯೋಧ್ಯೆಯನ್ನು ಆಳಿದ ದಶರಥನಿಗೆ ಋಷಿಕಲ್ಪರಾಗಿ ,ದೇವಕಲ್ಪರಾಗಿ ನಾಲ್ವರು ಗಂಡು ಮಕ್ಕಳು ಹುಟ್ಟುತ್ತಾರೆ ,ಅವರಲ್ಲಿ ರಾಮ ಒಬ್ಬ .ಪುತ್ರಕಾಮೇಷ್ಠಿ ಯಾಗವೇ ಇದಕ್ಕೆ ನೆರವೇರಿದ ಸತ್ ಕರ್ಮ. ಇಂತಹ ಭವ್ಯ 'ಐತಿಹಾಸಿಕ ಪರಂಪರೆ'ಯ ಹಿನ್ನೆಲೆಯೊಂದಿಗೆ ರಾಮನ ಬದುಕು ಆರಂಭವಾಗುತ್ತದೆ .

ವಸಿಷ್ಠ - ವಿಶ್ವಾಮಿತ್ರರೇ ಗುರುಗಳಾಗಿ ಹರಸಿದ ಪುಣ್ಯಾತ್ಮ 'ರಾಮ'. ಪರಸ್ಪರ ವಿರೋಧಿಗಳಾದ ಈ ಮಹರ್ಷಿಗಳ ಶಿಷ್ಯನಾಗುವುದು ಎಂದರೆ ಇದು ಎಂತಹ ದೈವ ಸಂಕಲ್ಪ , ಮನುಕುಲಕ್ಕೆ ಎಂತಹ ಸಂದೇಶ. ರಾಮನೆಂಬವನೊಬ್ಬನ ಜನನವಾಗುತ್ತದೆ ಎಂದು ರಾಮನ ಹುಟ್ಟಿನ ಶತಮಾನ ಶತಮಾನಗಳಷ್ಟು ಪೂರ್ವದಲ್ಲೆ ವೇದಿಕೆ ಸಿದ್ಧಗೊಂಡಿರುತ್ತದೆ - ಸಂದರ್ಭ ಸೃಷ್ಟಿ ಯಾಗಿರುತ್ತದೆ . ತಪಸ್ವಿ ಗೌತಮನಿಂದ ಶಪಿಸಲ್ಪಟ್ಟು ಶಿಲೆಯಾಗಿದ್ದ ಆತನ ಪತ್ನಿ ಅಹಲ್ಯೆಯು ರಾಮನ ಪಾದಸ್ಪರ್ಶದಿಂದ ಮರಳಿ ಶಿಲೆಯ ಜಡತ್ವದಿಂದ ಮುಕ್ತಿಯನ್ನು ಪಡೆದು ಕ್ರಿಯಾಶೀಲ ಋಷಿ ಪತ್ನಿಯಾಗಿ , ಪತಿವ್ರತೆಯಾಗಿ ಎದ್ದು ಬರುತ್ತಾಳೆ. ಈ ಪ್ರಕರಣ ಪ್ರಾಚೀನವಾದ ಒಂದು ಋಷಿ ದಂಪತಿಯ ಬದುಕನ್ನು ಮತ್ತೆ ಒಂದಾಗಿಸಿದ 'ರಾಮ' ಕೆಲವೇ ದಿನಗಳಲ್ಲಿ ತಾನು 'ಸೀತಾರಾಮ'ನಾಗುತ್ತಾನೆ .ಬಳಿಕ ಭಾರ್ಗವರಾಮರಿಂದ ಅನುಗ್ರಹಿತನಾಗುತ್ತಾನೆ .ಏಕಕಾಲದಲ್ಲಿ ಎರಡು ರಾಮರ ಅಗತ್ಯ ಈ ಕಾಲಕ್ಕೆ ಬೇಡ , ಭಾರ್ಗವರಾಮನಾದ ನಾನು ನೇಪಥ್ಯಕ್ಕೆ ಸರಿಯುತ್ತೇನೆ , ರಘುರಾಮನಾದ ನೀನೇ ಧರ್ಮ ರಕ್ಷಣೆಯ ಕಾರ್ಯ ಮುಂದುವರಿಸು ಎಂದು ನಿರ್ದೇಶಿಸಲ್ಪಡುತ್ತಾನೆ . ಆ ಮೂಲಕ ಮಾನವ ಸಹಜವಾಗಿ ಪೂರ್ವಸೂರಿ ಸಾಧಕರಿಂದ ಹಾಗೂ ಯುಗಪ್ರವರ್ತಕರಿಂದ ಶುಭಾಶೀರ್ವಾದ ಪಡೆಯುತ್ತಾನೆ .

ರಾಜರ್ಷಿ ಜನಕರಾಜನು ಯಾಗ ಮಾಡುವ ಉದ್ದೇಶದಿಂದ ಚಿನ್ನದ ನೇಗಿಲಿನಿಂದ ಭೂಮಿಯನ್ನು ಉಳುವಾಗ ಸೀತೆ ಸಿಗುತ್ತಾಳೆ ,ಅಂದರೆ ಯಾಗ ಸಂಕಲ್ಪದಲ್ಲೆ ಸೀತೆ ಜನಕನಿಗೆ ಮಗಳಾಗಿ ಪ್ರಾಪ್ತಳಾಗುತ್ತಾಳೆ . ದಶರಥ ಯಾಗದ ಫಲವಾಗಿ ರಾಮನ ಸಹಿತ ನಾಲ್ವರು ಮಕ್ಕಳನ್ನು ಪಡೆಯುತ್ತಾನೆ . ಎಂತಹ ಋಣಾನುಬಂಧ ಕಾರಣವಾಗಿ ಇವರೆಲ್ಲ ಒಂದಾಗುತ್ತಾರೆ.ಇದು ಕಾಲದ ಅಗತ್ಯ . ಅಯೋಧ್ಯೆಯ ಯುವರಾಜ ಪಟ್ಟಾಭೀಷೇಕಕ್ಕೆ ಮಂಗಳಸ್ನಾನದಿಂದ ಪುನೀತನಾದ ರಾಮನಿಗೆ ಪ್ರಾಪ್ತಿಯಾದದ್ದು ವನವಾಸದ ದೀಕ್ಷೆ , ಯುವರಾಜ ಸಿಂಹಾಸನವಲ್ಲ .ಇದು 'ಪಿತೃವಾಕ್ಯ ಪರಿಪಾಲನೆ'ಯಾಗಿ ರಾಮನಿಗೆ ಒದಗಿದ ಅವಕಾಶ . ಈ ಒಂದು ತಿರುವು ಕಾರಣವಾಗಿ ರಾಮ ಅಯೋಧ್ಯೆಯಿಂದ ಭರತವರ್ಷವನ್ನು ದಾಟಿ ಲಂಕೆಯವರೆಗೆ ತನ್ನ ವ್ಯಕ್ತಿತ್ವವನ್ನು ಸ್ಥಾಪಿಸುತ್ತಾನೆ . ಭಾರತೀಯ ಸಂಸ್ಕೃತಿಯ ಸಂದೇಶವನ್ನು‌ ಜಗದಗಲ ಸಾರುತ್ತಾನೆ . ಈ ವಿಸ್ತಾರವಾದ ಅಂದರೆ ಹದಿನಾಲ್ಕು ವರ್ಷಕಾಲದ 'ವನವಾಸ' ಎಂಬ ಹೆಸರಿನ 'ತಿರುಗಾಟ' ರಾಮನ ವ್ಯಕ್ತಿತ್ವಕ್ಕೆ ವೈಚಾರಿಕ ವೈಶಾಲ್ಯತೆಯನ್ನು ಒದಗಿಸಿಕೊಡುತ್ತದೆ. ಸೀತೆ ಆದರ್ಶ ಸತಿಯಾಗುತ್ತಾಳೆ . ಲಕ್ಷ್ಮಣ ಅಣ್ಣನ ತಮ್ಮನಾಗುತ್ತಾನೆ , ಶ್ರೀರಾಮ ಪಾದುಕೆಯನ್ನು ಸ್ವೀಕರಿಸಿದ ಭರತ ಭ್ರಾತೃ ಪ್ರೇಮಕ್ಕೆ ಜ್ವಲಂತ ಉದಾಹರಣೆಯಾಗುತ್ತಾನೆ ,ಶತ್ರುಘ್ನ ರಾಮ ಸೇವೆಯ ನಿರೀಕ್ಷೆಯಲ್ಲಿರುತ್ತಾನೆ .ಇದೆಲ್ಲ ಪುತ್ರಕಾಮೇಷ್ಠಿಯಲ್ಲಿ ದೊರೆತ ಒಂದೇ ಪಾತ್ರೆಯಲ್ಲಿದ್ದ ಪಾಯಸ ಭಕ್ಷದ ಫಲಗಳೇ ತಾನೆ . ವನಾಭಿಮುಖರಾದ 'ಸೀತಾ , ರಾಮ , ಲಕ್ಷ್ಮಣ'ರು ಗಂಗಾನದಿಯನ್ನು ದಾಟುತ್ತಾರೆ . ಗಂಗಾನದಿಯ ಹರಿಯುವಿಕೆಯ ಜುಳುಜುಳು ಸ್ವರದಲ್ಲಿ ರಾಮನಿಗೆ ಕೇಳಿಸುವುದು "ಮರಳಿ ಯತ್ನವ ಮಾಡು" ,'ಮರಳಿ ಯತ್ನವ ಮಾಡು' ಎಂಬ 'ರವ'. ಭಗೀರಥನ ಪ್ರಯತ್ನವು ಗಂಗೆಯ ಪ್ರವಹಿಸುವಿಕೆಯಲ್ಲಿ ನಾದವಾಗಿ ಸ್ಥಾಯಿಯಾಗಿದೆ ಎಂಬುದು ರಾಮನಿಗೆ ಪ್ರೇರಣೆಯಾಗುತ್ತದೆ . ಆದುದರಿಂದಲೇ ತ್ಯಾಗಕ್ಕೆ ,ನಿರ್ಲಿಪ್ತ ಭಾವಕ್ಕೆ ,ಮಹಾನ್ ಸಾಧನೆಯ ಆದರ್ಶಕ್ಕೆ ರಾಮನ ಬದುಕು ದೃಶ್ಯ ಕಾವ್ಯವಾಗುತ್ತದೆ .

ಬಹಳ ಮಂದಿ ಋಷಿಗಳಿಂದ ಅನುಗ್ರಹಿತನಾಗುತ್ತಾನೆ , ಕಾಲ್ನಡಿಗೆಯಲ್ಲಿ ಉತ್ತರದ ರಾಮ ದಕ್ಷಣದ ಗೋದಾವರಿ ನದಿಯ ದಡಕ್ಕೆ ಬಂದು ವಾಸಿಸುತ್ತಾನೆ. ‌ಸೀತಾಪಹಣವಾಗುತ್ತದೆ . ಸುಗ್ರೀವ ಸಖ್ಯವು ಆಂಜನೇಯನಿಂದಾಗುತ್ತದೆ ,ಶಬರಿಯ ಮಾತು ಸತ್ಯವಾಗುತ್ತದೆ . ಸೀತಾಪಹರಣವನ್ನು ತಡೆದು ಧರೆಗೆ ಉರುಳಿದ ಪಕ್ಷಿರಾಜ ಜಟಾಯುವಿನಿಂದ ಅಪಹರಣದ ಸೂಕ್ಷ್ಮ ತಿಳಿಯುವುದು .ವಾಲಿ ಬಲಾಢ್ಯನಾದರೂ ಸುಗ್ರೀವನ ಪಕ್ಷವಹಿಸಿ ಸಖ್ಯದ ಮಹತ್ವವನ್ನು ಜಗತ್ತಿಗೆ ತೋರಿಸುತ್ತಾನೆ .ಸೀತಾನ್ವೇಷಣೆ , ಸೇತುಬಂಧನ , ಲಂಕಾ ಪ್ರವೇಶ , ಅಂಗದ ಸಂಧಾನ ಹೀಗೆ ರಾಮಾಯಣ ಮುಂದುವರಿಯುತ್ತದೆ ರಾಮ - ರಾವಣರು ಯುದ್ಧಭೂಮಿಯಲ್ಲಿ ಮುಖಾಮುಖಿಯಾಗುತ್ತಾರೆ . ಯುದ್ಧದಲ್ಲಿ ಒಮ್ಮೆ ಪರಾಜಿತನಾಗುವ ರಾಮ ಸಹಜವಾಗಿ ನನ್ನಿಂದ ಈ ಕಾರ್ಯವಾಗದು ,ಎಲ್ಲರೂ ಮರಳಿಹೋಗಿ ಎಂದು ಸುಗ್ರೀವಾದಿಗಳಿಗೆ ಹೇಳುತ್ತಾನೆ , ವಿಭೀಷಣನಿಗೆ ವಾಗ್ದಾನದಂತೆ ಲಂಕೆಯ ಪಟ್ಟಕಟ್ಟುವಲ್ಲಿ ನಾನು ವಿಫಲನಾದೆ , ಕ್ಷಮಿಸು ಅಯೋಧ್ಯೆ ನನಗಾಗಿ ಕಾಯುತ್ತಿದೆ ನಿನಗೆ ಅಲ್ಲಿಯ ಪಟ್ಟ ಕಟ್ಟುತ್ತೇನೆ ಎಂದು ಹೇಳಿ ಲಕ್ಷ್ಮಣನಲ್ಲಿ ನಾನು ಮರಳಿ ಬರಲಾರೆ ಎಂದು ವೈರಾಗ್ಯದ ಮಾತನ್ನು ಹೇಳುತ್ತಾನೆ .ಇದು ರಾಮ , ರಾಮನ ವ್ಯಕ್ತಿತ್ವ . ಇಂದ್ರ ; ದೇವಸಾರಥಿಯಾದ ಮಾತಲಿಯ ಮೂಲಕ ರಥವನ್ನು ಕಳುಹಿಸುತ್ತಾನೆ , ರಾಮ ಅದನ್ನು ತಿರಸ್ಕರಿಸುತ್ತಾನೆ ,ಆದರೆ ವಾನರರು ರಥಾರೂಢನಾದ ರಾಮನನ್ನು ಕಾಣಬೇಕು ಎಂದು ಹಠಹಿಡಿದಾಗ ರಥಾರೋಹಣ ಮಾಡುತ್ತಾನೆ . ಕಪಿಗಳ ಮಾತನ್ನು ಪರಿಪಾಲಿಸುವ ರಾಮ ಕಪಿಗಳನ್ನು ದುಡಿಸಿಕೊಂಡದ್ದು ಮಾತ್ರವಲ್ಲ‌ , ಅವರನ್ಮು ಗೌರವಿಸುತ್ತಿದ್ದ , ಪ್ರೀತಿಸುತ್ತಿದ್ದ ಎಂಬುದು ಈ ಸಂದರ್ಭದ ಸಂದೇಶವಲ್ಲವೆ . ಸೀತೆಯನ್ನು ಮರಳಿ ಪಡೆಯುವುದು ಲಂಕಾ ಪ್ರವೇಶದ ಉದ್ದೇಶವಲ್ಲ ಸೂರ್ಯ ವಂಶದ ರಾಜರ್ಷಿ ಅನರಣ್ಯನು ಯಾಗ ದೀಕ್ಷಾಬದ್ದನಾಗಿದ್ದ ವೇಳೆ ರಾವಣ ಆ ರಾಜರ್ಷಿಯನ್ನು ಕೊಲ್ಲುತ್ತಾನೆ . ಆ ಸೇಡನ್ನು ತೀರಿಸಿಕೊಳ್ಳುವುದು ಈ ಅಭಿಯೋಗದ ಉದ್ದೇಶವಾಗಿದೆ ಎಂಬುದನ್ನು ರಾಮ ದೃಢೀಕರಿಸುತ್ತಾನೆ . ರಾವಣ ವಧಾನಂತರ ಸೀತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸುವುದು ಮತ್ತೊಂದು ಆದರ್ಶ. ಅಯೋಧ್ಯೆಯಲ್ಲಿ ನಿಜ ಪಟ್ಟಾಭಿಷೇಕದ ಅನಂತರ ದೀರ್ಘ ಅವಧಿಗೆ ರಾಮರಾಜ್ಯ ಸ್ಥಾಪನೆಯಾಗುತ್ತದೆ . ಅಯೋಧ್ಯೆಯ ರಜಕನೊಬ್ಬನ ಮಾತಿಗೂ ರಾಜರಾಮ ಸ್ಪಂದಿಸುತ್ತಾನೆ , ಗರ್ಭಿಣಿಯಾದ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸುತ್ತಾನೆ , 'ಸೀತಾ ಪರಿತ್ಯಾಗ' ರಾಮನ ದೃಢ ನಿರ್ಧಾರಕ್ಕೆ ಒಂದು ಸಾಕ್ಷಿ . ಈ ಕೆಲಸಕ್ಕೆ ಲಕ್ಷ್ಮಣನನ್ನು ನಿಯೋಜಿಸುತ್ತಾನೆ .ಇಲ್ಲಿ ಸೀತೆಯನ್ನು ಕಾಡಿಗೆ ಬಿಟ್ಟುಬರಲು ಲಕ್ಷ್ಮಣನನ್ನು ನಿಯೋಜಿಸುವ ಸಂದರ್ಭ‌ವಂತೂ ಸೀತೆಗೆ ಮಾತ್ರವಲ್ಲ ಲಕ್ಷ್ಮಣನಿಗೂ ಅಗ್ನಿಪರೀಕ್ಷೆ .ರಾಮ ತಾನು ಸ್ವತಃ ಸವಾಲುಗಳನ್ನು ಸ್ವೀಕರಿಸುತ್ತಾನೆ , ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ . ಅವನನ್ನು ಅನುಸರಿಸಿದವರಿಗೂ ಅದೇ ಪರೀಕ್ಷೆಗಳನ್ನು ಎದುರಿಸುವ ಸ್ಥತಿ ಸೃಷ್ಟಿಸುತ್ತಾನೆ . ಕಾಡಿಗೆ ಹೋದ ಸೀತೆ ವಾಲ್ಮೀಕಿಯ ಮಡಿಲನ್ನು ಸೇರುತ್ತಾಳೆ ,ಕುಶಲವರ ಹುಟ್ಟು , ಕುಶಲವರ ಸಮೇತ ಸೀತಾರಾಮರ ಸಮಾಗಮ‌ . ಇದಕ್ಕೆ ವಾಲ್ಮೀಕಿಯ ಅನುಗ್ರಹ . ರಾಮ ನಿರ್ಯಾಣದವರೆಗೆ ಎಲ್ಲವೂ ವಚನಬದ್ಧತೆ , ಮನುಷ್ಯನಾಗಿ ಊಹಿಸಲೂ ಆಗದ ಆದರ್ಶವನ್ನು ಮೆರೆಯುವ ಕ್ರಮ , ನಿಜ ಕ್ಷತ್ರಿಯನಾಗಿ ವಿಜೃಂಭಿಸುವುದು , ರಾಜಧರ್ಮದ ಪಾಲನೆ ಎಲ್ಲವೂ ಅವಿಸ್ಮರಣೀಯ . ಆದುರಿಂದಲೇ ರಾಮ ಈ ದೇಶದ ಪ್ರತಿಷ್ಠೆ , ಸಂಸ್ಕೃತಿಯ ಸಾಕಾರಮೂರ್ತಿ , ಭಾರತೀಯರೆಲ್ಲರ ಆರಾಧ್ಯ ಮೂರ್ತಿ . ಪುರಾಣ ಪ್ರಪಂಚದ ನಿರೂಪಣೆಯಲ್ಲಿ ಪ್ರಖರವಾಗಿ ಮಿನುಗುವ ಜ್ಯೋತಿ . ರಾಮನ ಇಡೀ ಚರಿತ್ರೆಯಂತೆಯೇ ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ಕಟ್ಟುವ ಸಾಹಸದ ಕಾರ್ಯ ನಡೆದಿದೆ .ಎಷ್ಟು ತಿರುವುಗಳು , ಎಂತಹ ಆಘಾತಗಳು‌, ಮಂಥರೆಯಂತೆ , ಅಗಸನ ಪಾತ್ರಗಳ ಮೂಲಕ , ಸೀತಾಪಹರಣ ಪ್ರಕರಣಗಳಂತೆ ತಿರುವುಗಳನ್ನು ಪಡೆಯುತ್ತದೆ . ರಾಮನೆಂಬ ವ್ಯಕ್ತಿ ಇದ್ದನೆ ಎಂಬ ಪ್ರಶ್ನೆಯವರೆಗೂ ತಿಕ್ಕಾಟ ಭಾರತದಲ್ಲಿ ಕೇಳಿಬರುತ್ತದೆ . ರಾಮಮಂದಿರ ನಿರ್ಮಾಣಕಾರ್ಯ ಹೀಗೆ ಹಲವು ಆಯಾಮಗಳನ್ನು ಪಡೆಯುತ್ತಾ ಈ ಹಂತಕ್ಕೆ ಬರುತ್ತದೆ . ಈಗ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯಾಗುತ್ತದೆ . ದೇಶದ ಸಂಸ್ಕೃತಿಗೆ ಸ್ಮಾರಕದಂತೆ ಈ ಮಂದಿರವು ನಿರ್ಮಾಣವಾಗುತ್ತದೆ .ರಾಮ ಒಂದು ಸಂಸ್ಕೃತಿಯಂತೆ , ಪ್ರತಿಷ್ಠೆಯಂತೆ ಭಾರತದಲ್ಲಿ ಸ್ಥಾಪನೆಯಾಗುವ ಕಾಲಸನ್ನಿಹಿತವಾಗಿದೆ . ಜೈ ಶ್ರೀರಾಮ್ ಲೇಖನ : ಕೆ .ಎಲ್ .ಕುಂಡಂತಾಯ

ಮರ್ಣೆ ಯುವಕನಿಂದ ಪೇಪರ್ ಆರ್ಟ್ನಲ್ಲಿ ಮೂಡಿದ ಅಯೋಧ್ಯೆಯ ಚಿತ್ರಣ

Posted On: 04-08-2020 08:45PM

ಇOಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಗೊOಡಕಲಾವಿದ ಮಹೇಶ್ ಮರ್ಣೆ ಯವರು ತೆಳುವಾದ ಬಿಳಿ ಪೇಪರ್ ಹಾಳೆ ಯಲ್ಲಿ ಬ್ಲೇಡ್ ನ ಸಹಾಯದಿOದ ರಚಿಸಿದ ಪೇಪರ್ ಕಟ್ಟಿOಗ್ ಆರ್ಟ್

ಕಡಲ ಮಕ್ಕಳಿಂದ ಸಮುದ್ರ ರಾಜನಿಗೆ ಸಮುದ್ರ ಪೂಜೆ

Posted On: 03-08-2020 06:36PM

ಕರಾವಳಿಯ ವಿವಿಧೆಡೆ ಸೋಮವಾರ ಮೀನುಗಾರರು ಸಮುದ್ರಪೂಜೆ ಸಹಿತವಾಗಿ ಕ್ಷೀರಾಭಿಷೇಕ ನಡೆಸಿದರು. ಕಾಪು, ಮಲ್ಪೆ, ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಪೊಲಿಪು, ಕೈಪುಂಜಾಲು, ಮೂಳೂರು ಸಹಿತವಾಗಿ ಕರಾವಳಿಯಾದ್ಯಂತ ಇರುವ ಮೊಗವೀರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಭಜನಾ ಮಂದಿರಗಳು ಮತ್ತು ಪ್ರಾರ್ಥನಾ ಮಂದಿರಗಳ ಸಹಕಾರದೊಂದಿಗೆ ಸಮುದ್ರ ಪೂಜೆ ನೆರವೇರಿಸಲಾಯಿತು. ನೂಲ ಹುಣ್ಣಿಮೆಯಂದು ಕರಾವಳಿಯಲ್ಲಿ ಸಮುದ್ರ ಪೂಜೆ ನಡೆಸುವ ಮೀನುಗಾರರು ಹೇರಳ ಮತ್ಸ್ಯ ಸಂಪತ್ತು ದೊರಕಿಸುವಂತೆ ಮತ್ತು ಮೀನುಗಾರಿಕೆಯ ವೇಳೆ ಯಾವುದೇ ರೀತಿಯ ತೊಂದರೆಗಳು ಆಗದಿರಲೆಂಬ ಪ್ರಾರ್ಥನೆಯೊಂದಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ಸಹಿತ ಪೂಜೆ ನೆರವೇರಿಸುತ್ತಾರೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಸಹಿತ ವಿವಿಧ ಗಣ್ಯರು, ಸಮಾಜದ ಮುಖಂಡರು, ಮೊಗವೀರ ಮಹಾಸಭೆ,ಯ ಪದಾಧಿಕಾರಿಗಳು, ಸದಸ್ಯರು, ಮೊಗವೀರ ಪ್ರತಿನಿಧಿಗಳು ಉಪಸ್ಥಿತರಿದ್ದರು.