Updated News From Kaup

ಕಾಪುವಿನ ದಕ್ಷ, ಪ್ರಾಮಾಣಿಕ, ಜನಸ್ನೇಹಿ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್

Posted On: 05-07-2020 02:05PM

ಮಹೇಶ್ ಪ್ರಸಾದ್ ಪ್ರಸ್ತುತ ನಮ್ಮ ಕಾಪು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು, ಇವರು ಈ ಹಿಂದೆ ಹಿರಿಯಡ್ಕ ,ಕೋಟ,ಬಂಟ್ವಾಳದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು .ಹಿರಿಯಡ್ಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರುವಾಸಿಯಾದವರು .ತದನಂತರ ಕೋಟ ಠಾಣೆಗೆ ವರ್ಗಾವಣೆಯಾದ ಬಳಿಕ ಅಲ್ಲಿ ನಡೆಯುತ್ತಿರುವ ಮಟ್ಕಾ ,ಇಸ್ಪೀಟ್,ಇನ್ನಿತರ ಕಳ್ಳ ದಂಧೆಗಳಿಗೆ ಬ್ರೇಕ್ ಹಾಕಿದವರು ಇದೇ ಮಹೇಶ್ ಪ್ರಸಾದ್ . ಯಾವುದೇ ರಾಜಕೀಯ ಶಿಫಾರಸುಗಳಿಗೆ ಬೆಲೆ ಕೊಡುತ್ತಿರಲಿಲ್ಲ .ಸಾಮಾನ್ಯ ಜನತೆಗೆ ಠಾಣೆಗೆ ಬರಲು ಮುಕ್ತ ಅವಕಾಶ ನೀಡುತ್ತಿದ್ದರು .ತಪ್ಪು ಮಾಡಿದರೆ ಮೊದಲು ಅವರ ಮೇಲೆ ಎಫ್. ಐ.ಆರ್ ಆಗುತ್ತಿತ್ತು .ದಿನದ ಇಪ್ಪತ್ತನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಇವರಿಗಿದೆ .ಪೊಲೀಸ್ ಪೇದೆಗಳು ಇವರ ವರ್ಗಾವಣೆ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದರು .ಕೋಟದಲ್ಲಿ ಇವರು ಇರುವಾಗ ಪುಂಡ ಪೋಕರಿಗಳ ಹೆಡೆಮುರಿ ಕಟ್ಟಿ ರೌಡಿಶೀಟ್ ಓಪನ್ ಮಾಡಿದ ಖ್ಯಾತಿ ಇವರಿಗಿದೆ.ಕೋಟದ ಜನತೆಗೆ ಪೊಲೀಸ್ ಹೇಗಿರಬೇಕೆಂದು ತೋರಿಸಿಕೊಟ್ಟವರು ಇವರು .ಇಂದಿಗೂ ಕೂಡ ಕೋಟದ ವ್ಯಾಪ್ತಿಯಲ್ಲಿ ಅವರಿಗೆ ವಿಶೇಷ ಗೌರವವಿದೆ. ವಿಶೇಷ ತನಿಖಾಧಿಕಾರಿಯಾಗಿ ಮಹೇಶ್ ಪ್ರಸಾದ್ :ಮಹೇಶ್ ಪ್ರಸಾದ್ ಇವರ ಕರ್ತವ್ಯ ಪರತೆ ಹಾಗೂ ಚುರುಕುತನವನ್ನು ನೋಡಿ ಅಂದಿನ ಎಸ್ಪಿ ಅವರು ಕೋಟ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮಹೇಶ್ ಪ್ರಸಾದರ ವಿಶೇಷ ತಂಡ ರಚನೆ ಮಾಡಿ ಭೂಗತ ಜಗತ್ತಿನ ಪಾತಕಿಯಾದ ಕೊರಗ ಶೆಟ್ಟಿ ಇವರ ಸಹಚರರ ದಸ್ತಗಿರಿ ಮಾಡಿದ್ದರು. ಆರ್.ಟಿ.ಐ ಕಾರ್ಯಕರ್ತ ವಂಡಾರು ವಾಸುದೇವ ಅಡಿಗ ಕೊಲೆ ಪ್ರಕರಣದ ವಿಶೇಷ ತನಿಖಾಧಿಕಾರಿ : ಕೋಟದಿಂದ ಮಹೇಶ್ ಪ್ರಸಾದ್ ಇವರು ಬಂಟ್ವಾಳಕ್ಕೆ ವರ್ಗಾವಣೆಯಾದ ನಂತರ ಆರ್ ಟಿ ಐ ಕಾರ್ಯಕರ್ತ ವಂಡಾರು ವಾಸುದೇವ ಅಡಿಗರ ಕೊಲೆಯಾದ ತಕ್ಷಣ ಆ ಗಂಭೀರ ಪ್ರಕರಣಕ್ಕೆ ವಿಶೇಷ ತನಿಖಾಧಿಕಾರಿಯಾಗಿ ಬಂದವರು ಇದೇ ಮಹೇಶ್ ಪ್ರಸಾದ್ .ಅತ್ಯಂತ ಕ್ಲಿಷ್ಟಕರವಾದ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಜನಮನ್ನಣೆ ಗೊಂಡವರು . ಕೋಟದ ಅವಳಿ ಕೊಲೆಯ ವಿಶೇಷ ತನಿಖಾಧಿಕಾರಿ ಕಳೆದ ಒಂದು ವರ್ಷದ ಹಿಂದೆ ಕೋಟದಲ್ಲಿ ಡಬ್ಬಲ್ ಮರ್ಡರ್ ಆಗಿ ಆರೋಪಿಗಳ ಪತ್ತೆ ಹಚ್ಚುವಂತೆ ಕೋಟದಲ್ಲಿ ಪ್ರತಿಭಟನೆ ನಡೆದಾಗ ಆ ಪ್ರಕರಣಕ್ಕೆ ವಿಶೇಷ ತನಿಖಾಧಿಕಾರಿಯಾಗಿ ಬಂದವರೇ ಇದೇ ಮಹೇಶ್ ಪ್ರಸಾದ್ .ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ಖ್ಯಾತಿ ಇವರಿಗಿದೆ . ಶಿರ್ವದ ಫಾದರ್ ಮಹೇಶ್ ಅವರ ಪ್ರಕರಣದ ವಿಶೇಷ ತನಿಖಾಧಿಕಾರಿ : ಶಿರ್ವ ಚರ್ಚಿನ ಫಾದರ್ ಮಹೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿರ್ವದಲ್ಲಿ ಅತಿ ದೊಡ್ಡ ಪ್ರತಿಭಟನೆ ನಡೆದಿತ್ತು .ಅಂದಿನ ಎಸ್ಪಿ ಅವರಿಗೆ ನೆನಪಾಗಿದ್ದು ಇದೇ ಮಹೇಶ್ ಪ್ರಸಾದ್ .ಆ ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿ ಸ್ವತಃ ಆರೋಪಿಯ ಮೇಲೆ ಎಫ್ಐಆರ್ ದಾಖಲು ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದವರು . ಮಣಿಪಾಲದಲ್ಲಿ ಪರಪ್ಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಣೆ ಅಣ್ಣಾಮಲೈ ಅವರು ಎಸ್ಪಿ ಆಗಿರುವ ಸಂದರ್ಭದಲ್ಲಿ ಮಣಿಪಾಲದಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು .ಮಣಿಪಾಲದ ವಿದ್ಯಾರ್ಥಿಗಳ ಫ್ಲ್ಯಾಟ್ ಒಂದರಲ್ಲಿ ಗಾಂಜಾ ಪ್ರಕರಣವನ್ನು ಪತ್ತೆ ಹಚ್ಚಿ ಹೆಸರುವಾಸಿಯಾಗಿದ್ದರು ಪುತ್ತೂರಿನಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಣೆ : ಕಾಪು ಠಾಣೆಗೆ ವೃತ್ತ ನಿರೀಕ್ಷಕರಾಗಿ ಬರುವುದಕ್ಕಿಂತ ಮುಂಚೆ ಇವರು ಪುತ್ತೂರು ನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು .ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಪುತ್ತೂರಿನಲ್ಲಿ ಪ್ರಾಮಾಣಿಕ ,ದಕ್ಷ, ಜನಸ್ನೇಹಿ ಪೊಲೀಸ್ ಎಂಬ ಹೆಸರು ಗಳಿಸಿದವರು .ಪೂರ್ಣ ಪುತ್ತೂರಿಗೆ ಮುಖ್ಯ ಮುಖ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಸಾರ್ವಜನಿಕರ ದೇಣಿಗೆಯಲ್ಲಿ ಅಳವಡಿಸಿ ಅದರ ಕಂಟ್ರೋಲ್ ರೂಮನ್ನು ಠಾಣೆಯಲ್ಲಿ ಮಾಡಿಕೊಟ್ಟು ರಾಜ್ಯದಲ್ಲೇ ಪ್ರಪ್ರಥಮ ಸಿಸಿ ಕೆಮರಾ ಅಳವಡಿಕೆ ಠಾಣೆ ಎಂದು ಹೆಸರುವಾಸಿ ಗಳಿಸಿದರು . ಮಹೇಶ್ ಪ್ರಸಾದರ ಹೆಸರಿಗೆ ಹಾಗೂ ಹುಟ್ಟಿಗೆ ವಿಶೇಷ ಅರ್ಥವಿದೆ : 1978 ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಮಹೇಶ್ ಪ್ರಸಾದ್ ಇವರ ತಂದೆ ಕಾನ್ ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು .ಅವರ ತಂದೆ ಮೇಲಧಿಕಾರಿಗೆ ಸೆಲ್ಯೂಟ್ ಮೂಲಕ ಗೌರವ ಸೂಚಿಸುವಾಗ ಮಹೇಶ್ ಅವರ ತಂದೆಯ ಮನಸ್ಸಿನಲ್ಲಿ ತನಗೆ ಗಂಡು ಮಗುವೇ ಹುಟ್ಟಬೇಕು ,ತನ್ನ ಮಗ ಓರ್ವ ಪೊಲೀಸ್ ಅಧಿಕಾರಿಯಾಗಬೇಕು ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿದ್ದರಂತೆ. ಮಹೇಶ್ ಪ್ರಸಾದ್ ಅವರ ತಂದೆಯ ಪ್ರಾರ್ಥನೆಯ ಫಲವೆಂಬಂತೆ ಶ್ರೀ ಮಹಾಲಿಂಗೇಶ್ವರ ದೇವರು ಮಹೇಶ್ ಪ್ರಸಾದ್ ಅವರ ತಂದೆ ತಾಯಿಗೆ ಗಂಡು ಮಗುವಿನ ಪ್ರಸಾದವನ್ನು ಕರುಣಿಸಿದರು .ಶ್ರೀ ಮಹಾಲಿಂಗೇಶ್ವರ ದೇವರ ವರಪ್ರಸಾದ ಎಂಬಂತೆ ಮಹೇಶ್ ಪ್ರಸಾದ್ ರವರ ಹೆಸರಿನಲ್ಲಿ ಮಹೇಶ- ಪ್ರಸಾದ ಕಾಣಿಸಿಕೊಂಡಿದೆ .ಮನಸ್ಸಿನ ತುಡಿತವೂ ನಾಡಿ ಮಿಡಿತವು ಎಂಬಂತೆ 2003 ರಲ್ಲಿ ಪೊಲೀಸ್ ಇಲಾಖೆಗೆ ಸೇರಿ 2016 ರಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ತಾನು ಹುಟ್ಟಿದ ಊರಾದ ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸಿ ಹೆಸರುವಾಸಿಯಾದವರು . ಪುತ್ತೂರು ಠಾಣೆಯಿಂದ ಕಾಪು ಠಾಣೆಗೆ ಕಳೆದ ಒಂದು ವರ್ಷದಿಂದ ಈಚೆಗೆ ಪುತ್ತೂರು ಠಾಣೆಯಿಂದ ವರ್ಗಾವಣೆಗೊಂಡು ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ .ಇವರ ಕರ್ತವ್ಯದ ಅವಧಿಯಲ್ಲಿ ಕಾಪು ಪರಿಸರದಲ್ಲಿ ಶಾಂತಿ ನೆಲೆಸಲಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ಮುಕ್ತವಾಗಲಿ ಎಂದು ಶುಭ ಹಾರೈಸೋಣ..

ಮುಗ್ದ ಬಾಲಕನ ಭಕ್ತಿಗೆ ಒಲಿದ ಇನ್ನಂಜೆಯ ಉಂಡಾರು ಶ್ರೀ ವಿಷ್ಣುಮೂರ್ತಿ

Posted On: 05-07-2020 12:38PM

ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇದು ಇನ್ನಂಜೆ ಗ್ರಾಮದ 700 ವರ್ಷಗಳ ಇತಿಹಾಸವಿರುವ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೂಲ ಕತೆ. ಏಳುನೂರು ವರ್ಷಗಳ ಹಿಂದೆ ಇಲ್ಲಿ ಒಂದು ಪವಾಡ ನಡೆದಿತ್ತು. ಅಂದು ಆಷಾಢ ಅಮಾವಾಸ್ಯೆ, ದೇವಸ್ಥಾನದ ಅರ್ಚಕರು ಕೆಲಸ ನಿಮಿತ್ತ ದೂರದ ಊರಿಗೆ ಹೋಗಿರುತ್ತಾರೆ, ಮಧ್ಯಾನ್ನವಾದರೂ ಹಿಂತಿರುಗಿ ಬಂದಿರುವುದಿಲ್ಲ. ನಿತ್ಯ ಪೂಜೆಯ ಅರ್ಚಕರ ಮನೆಯವರು ದೇವರ ಪೂಜೆ ಆಗದೆ ಊಟ ಮಾಡುವಂತಿರಲಿಲ್ಲ. ಅವರ ಮಗ ಬಾಲ ವಟುವಿಗೆ (ಮಾಣಿ) ತುಂಬಾ ಹಸಿವಾಗ ತೊಡಗಿ ದೇವರ ಪೂಜೆ ತಾನು ಮಾಡಿ ಬರುವೆ ಎಂದು ತಾಯಿಯ ಬಳಿ ಹೇಳುತ್ತಾನೆ. ಆಗ ತಾಯಿ ಹೇಳುತ್ತಾಳೆ; ಪೂಜೆ ಅಷ್ಟು ಸುಲಭವಿಲ್ಲ, ನೈವೇದ್ಯ ಮಾಡಿ ದೇವರಿಗೆ ಉಣಿಸಬೇಕು ಅದೆಲ್ಲ ನಿನ್ನಿಂದ ಆಗದು. ಸ್ವಲ್ಪ ತಡೆದು ಕೋ ಇನ್ನೇನು ನಿನ್ನ ಅಪ್ಪ ಬಂದು ಪೂಜೆ ಮುಗಿಸುವರು ಎಂದು ಸಮಾಧಾನ ಪಡಿಸುತ್ತಾಳೆ.ಅದರೆ ವಟು ಮಾತ್ರ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ಪೂಜೆಗೆ ತೆರಳಿ, ನೈವೇದ್ಯ ತಯಾರು ಮಾಡಿ, ದಿನಾ ತಂದೆ ಮಾಡುತ್ತಿರುವಂತೆ ದೇವರ ವಿಗ್ರಹಕ್ಕೆ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ, ಶುದ್ದ ವಸ್ತ್ರ ಉಡಿಸಿ, ಹೂವಿನ ಅಲಂಕಾರಮಾಡಿ, ದೇವರ ಎದುರು ನೈವೇದ್ಯ ಇಟ್ಟು ದೇವರಲ್ಲಿ ಉಣಲು ನಿವೇದನೆ ಮಾಡುತ್ತಾನೆ. ವಾಡಿಕೆಯಂತೆ ತುಳುವಿನಲ್ಲಿ "ಉಣ್ಲೆ ದೇವರೆ" (ಊಟ ಮಾಡಿ ದೇವರೇ) ಎನ್ನುತ್ತಾನೆ.ಅದರೆ ನೈವೇದ್ಯ ಹಾಗೆ ಇರುತ್ತದೆ. ನನ್ನ ಅಪ್ಪ ಹೇಗೆ ಉಣಿಸುತ್ತಿದ್ದಾರೋ ನನಗೆ ಗೊತ್ತಿಲ್ಲ , (ಅಪಯೇರ್ ಎಂಚ ಉಣ್ಪಾವೇರ್ ಪಂಡ್ದ್ ಎಂಕ್ ಗೊತ್ತುಜ್ಜಿ " ಬೇಗ ಉಣ್ಲೆ") ಎಂದು ಪರಿಪರಿಯಾಗಿ ನಿವೇದಿಸಿದರೂ ನೈವೇದ್ಯ ಹಾಗೆ ಇರುತ್ತದೆ. ಮಾಣಿಗೆ ದುಃಖ ಬರುತ್ತದೆ. ಕೊನೆಗೆ ಯೋಚಿಸಿ, ದೇವರಿಗೆ ಪಲ್ಯ ಇಲ್ಲದೆ ಊಟ ಸೇರುತ್ತಿಲ್ಲ ಕಾಣುತ್ತೆ ಎಂದು ಮನೆಗೆ ತೆರಳಿ ತನ್ನ ತಾಯಿಗೆ ತಿಳಿಯದಂತೆ ಮನೆಯಲ್ಲಿ ತಯಾರಿಸಿಟ್ಟ ಉಪ್ಪುನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ ಚಟ್ನಿ (ಕುಕ್ಕುದ ಚಟ್ನಿ) - ವ್ರತ ಊಟದಲ್ಲಿ ಹುಣಸೆ ಹುಳಿಯ ಬದಲಿಗೆ ಉಪಯೋಗಿಸುವ ಹುಳಿ, ತಂದಿಟ್ಟು ಮತ್ತೆ ದೇವರೇ ಉಣ್ಲೇ (ಊಟ ಮಾಡಿ) ಎಂದು ನಿವೇದಿಸುತ್ತಾ ನಿವೇದಿಸುತ್ತಾ ಅಲ್ಲೇ ನಿದ್ರೆಗೆ ಜಾರುತ್ತಾನೆ. ಎಚ್ಚರವಾಗುವಾಗ ನ್ಯೆವೇದ್ಯ ಕುಕ್ಕುದ ಚಟ್ನಿ ಎಲ್ಲವೂ ಖಾಲಿಯಾಗಿರುತ್ತದೆ. ಮಾಣಿಗೆ ಖುಷಿಯಾಗಿ "ದೇವೆರ್ ಉಂಡೆರ್ (ದೇವರು ಊಟ ಮಾಡಿದರು) ಅಮ್ಮಾ ನನಗೆ ಊಟ ಬಡಿಸು " ಎಂದು ಓಡೋಡಿ ಬಂದು ತಾಯಿಯ ಬಳಿ ಹೇಳುತ್ತಾನೆ. ಆದರೆ ತಾಯಿ ನಂಬುವುದಿಲ್ಲ. ಅಗಷ್ಟೆ ಮನೆಗೆ ಹಿಂತಿರುಗಿ ಬಂದ ತಂದೆಗೂ ವಿಷಯ ತಿಳಿಯುತ್ತದೆ. ಮಗ ಸುಳ್ಳು ಹೇಳುತ್ತಿದ್ದಾನೆ ಎಂದು ತಂದೆಗೆ ಮಗನ ಮೇಲೆ ಎಲ್ಲಿಲ್ಲದ ಸಿಟ್ಟು ಬರುತ್ತದೆ; " ಏಯ್ ದೇವರು ಎಂದಾದರೂ ನೈವೇದ್ಯ ಉಣ್ಣುತ್ತಾರೆಯೇ? ಹಸಿವು ಹಸಿವು ಅಂತ ಹೇಳಿ ನೀನೇ ತಿಂದು , ದೇವಾಲಯವನ್ನು ಅಪವಿತ್ರ ಮಾಡಿದ್ದಲ್ಲದೆ ಸುಳ್ಳು ಬೇರೆ ಹೇಳುತ್ತೀಯಾ?" ಎಂದು ಬೆತ್ತ ಹಿಡಿದು ಗದರಿಸುವಾಗ, ದೇವರ ಅಶರೀರವಾಣಿ ಕೇಳಿತಂತೆ " ಆ ಮಗುವಿಗೆ ಹೊಡೆಯಬೇಡ ; ಅವನ ಮುಗ್ಧ ಭಕ್ತಿಗೆ ಮೆಚ್ಚಿ ನಾನು ಉಣದೆ ಇರಲು ಸಾಧ್ಯವಾಗಲಿಲ್ಲ ,ನಾನು ಎಲ್ಲವನ್ನೂ ಉಂಡೆ". ಹೀಗೆ ಬಾಲವಟುವಿನ ಮುಗ್ದ ಭಕ್ತಿಗೆ ಮೆಚ್ಚಿ ಉಂಡ ದೇವರ ಊರಿಗೆ ವಿಶೇಷಣ ಸೇರಿ " ಉಂಡಾರು" ಎಂಬ ಹೆಸರು ಬಂದಿದೆ. ಶ್ರೀನಿವಾಸ್ ಪ್ರಭು. (ಸ್ಪೂರ್ತಿ) ಬಂಟಕಲ್ಲು ಉಡುಪಿ. 8762924232

ಹಲ್ಲು,ಉಗುರು ಮತ್ತು ಕಾಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿದು ದಾಖಲೆ ಮಾಡಿದ ರಾಜೇಶ್ ಪ್ರಭು

Posted On: 04-07-2020 10:32PM

ಸಮಾಜದಲ್ಲಿ ಹಲವಾರು ಜನ ವಿವಿಧ ಸಾಧಕರಿದ್ದಾರೆ. ಅದರಲ್ಲಿಯೂ "ಆ ಸಾಧನೆಯಿಂದಲೆ ಹೆಸರು ವಾಸಿಯಾಗುವವರು ಬಹಳ ಕಡಿಮೆ ಮಂದಿ ಹೀಗಾಗಿ ಸಾಧನೆಗೆ ಸರಿಯಾದ ಮಾನ್ಯತೆ ದೊರೆಯದಿದ್ದರೆ ಅದು ಅಲ್ಲಿಯೇ ಕಮರಿ ಹೋಗಬಹುದು. ಆದರೆ ಕಾಪು ತಾಲೂಕಿನ ಶಿವ೯ ಸಮೀಪ ಪೆನಾ೯ಲಿ ನ.ರಾಜೇಶ್ ಪ್ರಭು ಎಂಬುವವರು ತನ್ನ ವಿಶೇಷ ಸಾಧನೆಯಿಂದ ಇಂದು ವಿಶ್ವ ದಾಖಲೆ ಮಾಡುವತ್ತ ದಾಪುಗಾಲು ಹಾಕುತ್ತಿದ್ದಾರೆ. ಹಲ್ಲು 30 ಸೆಕೆಂಡ್, ಕಾಲು 46 ಸೆ. ಉಗುರು 33 ಸೆ.. ಇದು ಅವರು ವಲ್ಡ್ ಇಂಡಿಯಾ ರೆಕಾಡ್೯ಗೆ ತೆಂಗಿನಕಾಯಿ ಸುಲಿಯುದಕ್ಕೆ ವ್ಯಯಿಸಿದ ಸಮಯ. ನಿಮಗೆ ಆಶ್ಚಯ೯ವಾಗಬಹುದು ತೆಂಗಿನಕಾಯಿಯನ್ನು ಕತ್ತಿಯಿಂದ ಅಥವಾ ಇತರ ಸಾಧನದಿಂದ ಸುಲಿಯಲು ಕಷ್ಟ ಪಡುವ ನಾವು ಕೇವಲ ಹಲ್ಲು, ಉಗುರು' ಕಾಲಿನಿಂದ ಸಿಪ್ಪೆ ಸುಲಿಯುವುದು ದೂರದ ಮಾತು ಆದರೆ ರಾಜೇಶ್ ಪ್ರಭುರವರು ಇದನ್ನು ಅತ್ಯಂತ ಚಮತ್ಕಾರದಲ್ಲಿ ಮುಗಿಸುತ್ತಾರೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ 28 ಇಂಚು ಸುತ್ತಳತೆಯ 4.477 ಕೆ.ಜಿ ತೂಕದ ತೆಂಗಿನಕಾಯಿಯನ್ನು ಉಗುರು ಕಾಲು, ಮತ್ತು ಹಲ್ಲಿನಿಂದ ಸುಲಿದು ದಾಖಲೆ ಮಾಡಿದ್ದಾರೆ.ಈಗಾಗಲೇ ವಿವಿಧ ಕಡೆಗಳಲ್ಲಿ ಈ ಪ್ರದಶ೯ನವನ್ನು ನೀಡಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದರಲ್ಲಿಯೂ ಭಾರತದಲ್ಲಿ ಬರೇ ಕಾಲಿನಿಂದ ತೆಂಗಿನಕಾಯಿ ಸುಲಿಯುವವರು ಬಹಳ ಕಡಿಮೆ ಆದರೆ ಇವರು 3 ವಿಭಾಗದಲ್ಲಿಯೂ ಈ ಸಾಧನೆ ಮಾಡಿದ ಮೊದಲ ವ್ಯಕ್ತಿಯಾಗಿದ್ದಾರೆ.ಈಗಾಗಲೇ ಲಿಮ್ಕಾ ದಾಖಲೆ ಮಾಡಿರುವ ಇವರು ಗಿನ್ನೆಸ್ ದಾಖಲೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ. 1997 ರಲ್ಲಿ ಪ್ರಾರಂಭವಾದ ಈ ಹವ್ಯಾಸ ಅಥವಾ ದಾಖಲೆಯ ಪಯಣ ಇಂದಿನವರೆಗೆ ಸಾಗಿದೆ. ಈ ಬಗ್ಗೆ ಅವರೊಂದಿಗೆ ಮಾತನಾಡಿದಾಗ ಮೊದಲು ಬಹಳ ಕಷ್ಟವಾಗುತ್ತಿತ್ತು ಒಂದು ತೆಂಗಿನಕಾಯಿಯ ಸಿಪ್ಪೆ ಸುಲಿಯಲು ಹಲ್ಲು, ಉಗುರು' ಕಾಲಿನಿಂದ ಬಹಳ ಸಮಯ ತೆಗೆದುಕೊಳ್ಳುತ್ತಿದ್ದೆ ಆದರೆ ಇಂದು ಕೆಲವೇ ಸೆಕೆಂಡುಗಳಲ್ಲಿ ಇದನ್ನು ಮಾಡಲು ಸಾಧ್ಯವಾಗಿದೆ.ಮಂಗಗಳು ತಮ್ಮ ಬೆರಳನ್ನು ಉಪಯೋಗಿಸಿ ಅಥವಾ ಹಲ್ಲಿ ನಿಂದ ಸಿಪ್ಪೆ ಸುಲಿಯುದನ್ನು ಗಮನಿಸಿ ಯಾಕೆ ನಾನು ಪ್ರಯತ್ನ ಮಾಡಬಾರದು ಎಂದು ಇದನ್ನು ಪ್ರಾರಂಭಿಸಿದೆ.ಮೊದಲಿನಿಂದಲೂ ಸಾಹಸ ಕಲೆಯಲ್ಲಿ ಆಸಕ್ತಿ ಹೊಂದಿದ ಕಾರಣ ನನಗೆ ಇದನ್ನು ಮಾಡಲು ಸಾದ್ಯವಾಯಿತು ಎಂದು ಅವರು ಹೇಳುತ್ತಾರೆ. ಇದಲ್ಲದೆ 2 ಕೈಯಿಂದಲೂ ಕನ್ನಡಿ ಬರಹವನ್ನು ಬರೆಯಬಲ್ಲರು ಇವರು ಸಾಮಾನ್ಯ ಹಳ್ಳಿ ಪ್ರದೇಶದಲ್ಲಿ ಬೆಳೆದರೂ ಸ್ಥಳೀಯ ಜನರ ಪ್ರೇರಣೆಯಿಂದ ಈ ಸಾಧನೆ ಸಾಧ್ಯವಾಯಿತು ಎನ್ನುತ್ತಾರೆ. ಮಂಗಳೂರಿನ ಖಾಸಗಿ ಟ್ರಾವೆಲ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಇವರು ಇದನ್ನು ಹವ್ಯಾಸವಾಗಿ ಮಾಡಿದ್ದಾರೆ. ಮನೆಯಲ್ಲಿ ತೆಂಗಿನಕಾಯಿ ಸುಲಿಯಲು ಕತ್ತಿ ಸಿಗದಿದ್ದಾಗ ಅವರು ಬರೇ ಕೈಯಿಂದ ಸಿಪ್ಪೆ ಸುಲಿದು ಮನೆಯವರಿಗೆ ಸಹಾಯ ಮಾಡುತ್ತಾರೆ. 60.ಕೆ.ಜಿ ಭಾರವನ್ನು ಹಲ್ಲಿನಿಂದ ಎತ್ತುವುದು ಮುಂತಾದ ಸಾಹಸವನ್ನು ಅವರು ಮಾಡಬಲ್ಲರು ಈಗಾಗಲೇ ವಲ್ಡ್ ರೆಕಾಡ್ ೯ ಇಂಡಿಯಾಕ್ಕೆ ಸೇಪ೯ಡೆಯಾದ ಇವರು ಪ್ರವಾಸ ಹೋದಾಗ ಮನರಂಜನೆಗಾಗಿ ಈ ರೀತಿಯ ಪ್ರದಶ೯ನ ಮಾಡುತ್ತಾರೆ.ಗಿನ್ನೆಸ್ ದಾಖಲೆಗಾಗಿ ಲಕ್ಷಾಂತರ ರೂ ವ್ಯಯಿಸಬೇಕಾಗಿದೆ ಅಷ್ಟೋoದು ಹಣವನ್ನು ಹೊಂದಾಣಿಕೆ ಮಾಡುವುದು ಕಷ್ಠವಾಗಿದೆ ದಾನಿಗಳು ಮುಂದೆ ಬಂದರೆ ಈ ಸಾಧನೆ ಮಾಡುವಾಗಿ ಹೇಳಿದ್ದಾರೆ.ಈ ರೀತಿಯ ಸಾಧನೆಗೆ ಹಳ್ಳಿಯ ಪರಿಸರ ಸಹಾಯಕ ವಾಗಿದೆ ನಗರದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ ವಾತಾವರಣ ಮತ್ತು ಮಂಗಗಳು ನನಗೆ ಪ್ರೇರಣೆ ಎನ್ನುತ್ತಾರೆ. ಅವರು ಈ ಸಾಧನೆ ಬೇಗನೆ ಮಾಡಲಿ ಎಂಬ ಶುಭ ಹಾರೈಕೆ ನಮ್ಮದಾಗಿದೆ. ಲೇಖನ: ರಾಘವೇಂದ್ರ ಪ್ರಭು , ಕವಾ೯ಲು

ಉಡುಪಿ ಜಿಲ್ಲೆಯಲ್ಲಿ ಭಾನುವಾರ ಕಟ್ಟುನಿಟ್ಟಿನ ಲಾಕ್ ಡೌನ್

Posted On: 04-07-2020 08:07PM

ಉಡುಪಿ ಜುಲೈ 4 (ಕರ್ನಾಟಕ ವಾರ್ತೆ): ಜುಲೈ 5 ರ ಭಾನುವಾರದಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಪಾಲನೆಯಾಗಲಿದ್ದು, ಈ ಅವಧಿಯಲ್ಲಿ ಅವಶ್ಯಕ ಸೇವೆಗಳಾದ ಹಾಲು, ದಿನ ಪತ್ರಿಕೆ , ಆಸ್ಪತ್ರೆ, ಮತ್ತು ಔಷಧ ಅಂಗಡಿಗಳು ಮಾತ್ರ ತರೆಯಲಿದ್ದು, ಇತರೆ ಯಾವುದೇ ಅಂಗಡಿಗಳು ತರೆಯುವಂತಿಲ್ಲ, ಅಗತ್ಯ ವಸ್ತುಗಳ ಸರಕು ಸಾಗಾಣಿಕೆಗೆ ಮಾತ್ರ ಅವಕಾಶವಿದ್ದು, ಈಗಾಗಲೇ ಅನುಮತಿ ಪಡೆದಿರುವ ವಿವಾಹಗಳಲ್ಲಿ ನಿಗಧಿತ ಸಂಖ್ಯೆಯ ಜನರು ಮಾತ್ರ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ಓಡಾಡಿದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 144 ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸಮಾಜ ಸೇವಕ ಪವನ್ ಕುಮಾರ್ ರಿಂದ ಅಂಗನವಾಡಿಗೆ ಸಹಾಯ ಹಸ್ತ

Posted On: 03-07-2020 09:45PM

ಶಿರ್ವ ಮಂಚಕಲ್ಲಿನ ಸಮಾಜ ಸೇವಕ ಪವನ್ ಕುಮಾರ್ ಅವರು ಇಂದ್ರಪುರ ಅಂಗನವಾಡಿ ಕೇಂದ್ರಕ್ಕೆ ಸುಮಾರು 39000 ವೆಚ್ಚದ ಧ್ವಜಸ್ತಂಭ ಮತ್ತು ಕುಡಿಯುವ ನೀರಿನ ಯಂತ್ರ ಹಾಗೂ 2 ಬಾಗಿಲನ್ನು ನೀಡಿದರು....ಅದರ ಉದ್ಘಾಟನಾ ಸಮಯದಲ್ಲಿ ಸಮಾಜ ಸೇವಕ ಪವನ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.... ಈ ಸಂಧರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ವಾರಿಜ ಪೂಜಾರ್ತಿ ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾ ವಾಗ್ಳೆ ,ಪಶು ವೈದ್ಯಧಿಕಾರಿಗಳಾದ ಡಾ.ಅರುಣ್ ಕುಮಾರ್ ಹೆಗ್ಡೆ ,ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಅನಂತಪದ್ಮನಾಭ ನಾಯಕ್ ,ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀ ವಿಜಯ ,ಮಾಜಿ ಸದಸ್ಯರಾದ ಸುನಿಲ್ ಕಾಬ್ರಾಲ್,ರೋಟರಿ ಅಧ್ಯಕ್ಷರಾದ ವಿಷ್ಣುಮೂರ್ತಿ ಸರಳಾಯ ಹಾಗೂ ಅಂಗನವಾಡಿ ಶಿಕ್ಷಕಿ ಸುನಿತಾ ಪೂಜಾರಿಯವರು ಉಪಸ್ಥಿತರಿದ್ದರು...

53 ವರ್ಷ ಸೇವೆ ಸಲ್ಲಿಸಿದ ಹಿರಿಯ ವೈದ್ಯ ಡಾ ಎ.ಎಸ್.ಕಲ್ಕೂರರಿಗೆ ಸಮ್ಮಾನ

Posted On: 03-07-2020 09:41PM

ಉಡುಪಿ: - ಕನಾ೯ಟಕ ರಾಜ್ಯ ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ ಜಲೈ - 3 ರಂದು ವೈದ್ಯರ ದಿನಾಚರಣೆ ಕಾಯ೯ಕ್ರಮದ ಅಂಗವಾಗಿ ಕುಂದಾಪುರ ಪರಿಸರದಲ್ಲಿ ಕಳೆದ 53 ವಷ೯ಗಳಿಂದ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ|ಎ.ಎಸ್ ಕಲ್ಕೂರ್ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು. ಈ ಸಂದಭ೯ದಲ್ಲಿ ಅವರು ವೈದ್ಯಕೀಯ ಸೇವೆ ಬಗ್ಗೆ ಮಾತನಾಡಿದರು. ಜಯ೦ಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯದಾಸ್' ಕಾಯ೯ದಶಿ೯ ಪ್ರಸನ್ನ ಕಾರಂತ್, ಜಯ೦ಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮುಂತಾದವರಿದ್ದರು. ಮಂಜುನಾಥ್ ಕಾರಂತ್ ಪ್ರಾಥಿ೯ಸಿದರು, ಅನಂತ ಕೃಷ್ಣ ಹೊಳ್ಳ ಪರಿಚಯಿಸಿದರು.ಪ್ರಕಾಶ್ ಆಚಾರ್ ವಂದಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.

ಉಡುಪಿ ಜಿಲ್ಲಾ ತುಳುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಮನವಿ

Posted On: 02-07-2020 10:31PM

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ, ಉಡುಪಿ ಜಿಲ್ಲೆ ಇದರ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಒಟ್ಟು ಸೇರಿ ಕೊಟ್ಟ ಮನವಿಯನ್ನು ಸ್ವೀಕರಿಸಿ ಮಾನ್ಯ ಮುಖ್ಯಮಂತ್ರಿಯವರಿಗೆ ಆ ಮನವಿಯನ್ನು ಕಳುಹಿಸಿಕೊಟ್ಟಿದ್ದಾರೆ. ಮನವಿಗೆ ಸ್ಪಂದಿಸಿದ ಮಾನ್ಯ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ದೈವಾರಾಧಕ ಸಂಘದ ಎಲ್ಲಾ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿರುತ್ತಾರೆ.

ಉದ್ಭವ ಶ್ರೀಮಹಾಗಣಪತಿ ಮತ್ತು ಶ್ರೀಮಹಾಲಿಂಗೇಶ್ವರನ ದಿವ್ಯ ಸನ್ನಿದಿ ಶ್ರೀ ಕ್ಷೇತ್ರ, ಪೆರ್ಣಂಕಿಲ.

Posted On: 02-07-2020 08:28PM

ಐತಿಹಾಸಿಕ ಹಿನ್ನೆಲೆಯ ಚಾರಿತ್ರಿಕ ಕ್ಷೇತ್ರ: - ಹಿರಿಯಡ್ಕದ ಸಮೀಪವಿರುವ ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 2 ಸಾವಿರ ವರ್ಷಗಳ ಹಿನ್ನೆಲೆ, ಹಾಗೂ ಇಲ್ಲಿನ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸುಮಾರು 1600 ವರ್ಷಗಳ ಭವ್ಯ ಇತಿಹಾಸ ಇದೆ. ಖರಾಸುರನ ಈಶ್ವರ: ಧಾಮಿ೯ಕ ಹಿನ್ನಲೆಯ ಪ್ರಕಾರ ಕಥೆ ಪೆರ್ಣಂಕಿಲ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶವು ಹಿಂದೆ ಕಾರ್ಕಳದ ಜೈನ ಅರಸರ ಹಾಗೂ ಆಳುಪ ವಂಶದ ಆಡಳಿತಕ್ಕೆ ಒಳಪಟ್ಟಿತ್ತು. ಖರಾಸುರ ಎಂಬ ರಾಕ್ಷಸ ಶಾಪ ವಿಮೋಚನೆಗೆ ಆತ ತ್ರಿಕಾಲ ಶಿವನ ಪೂಜೆ ಮಾಡಬೇಕಾಗಿತ್ತು. ಊರಿಡೀ ಸಂಚಾರ ಮಾಡುತ್ತಿದ್ದ ಆತನಿಗೆ ತ್ರಿಕಾಲ ಶಿವನ ಪೂಜೆ ಮಾಡುವುದು ಕಷ್ಟಕರವಾಯಿತು. ಆದ್ದರಿಂದ ಆತ ತಾನು ಸಂಚರಿಸುವ ಸ್ಥಳಗಳಲ್ಲಿ ಒಂದೊಂದು ಶಿವಾಲಯವನ್ನೇ ಸ್ಥಾಪಿಸಿದನು! ಇಲ್ಲಿನ ಶಿವಾಲಯವನ್ನು ಖರಾಸುರನು ಪ್ರತಿಷ್ಠೆ ಮಾಡಿದ್ದು, ಕಟ್ಟಿಂಗೇರಿ, ಕಣಜಾರು, ಕೊಂಡಾಡಿ ಹಾಗೂ ಪರೀಕದಲ್ಲಿರುವ ಶಿವಾಲಯಗಳೂ ಈತನಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಈ ಎಲ್ಲಾ ದೇವಾಲಯಗಳು ಒಂದೇ ಶೈಲಿಯಲ್ಲಿ ನಿರ್ಮಾಣಗೊಂಡಿರುವುನ್ನು ನಾವು ಗಮನಿಸಬಹುದು. ಮುಂದೆ ಇಲ್ಲಿನ ಶಿವಾಲಯಕ್ಕೆ ಆಳುಪ ವಂಶದ ರಾಣಿಯು ಶಿವ ದೇವಾಲಯವನ್ನು ನಿರ್ಮಿಸಿದಳು ಎನ್ನುತ್ತದೆ ಇಲ್ಲಿರುವ ಶಾಸನ. ಶಿವಾಲಯದ ಪಕ್ಕ ಇರುವ ಈ ಶಾಸನವು ಸವೆದು ಹೋದ ಕಾರಣ ಅದನ್ನು ಪೂರ್ತಿಯಾಗಿ ಓದಲು ಸಾಧ್ಯವಾಗಿಲ್ಲ, ಓದಿದ್ದೇ ಆದ್ದಲ್ಲಿ ಶಿವಾಲಯದ ಬಗ್ಗೆ ಇನ್ನಷ್ಟು ಸ್ವಾರಸ್ಯಕರ ಹಾಗೂ ಐತಿಹಾಸಿಕ ಮಾಹಿತಿಗಳು ಒದಗುವ ಸಾಧ್ಯತೆ ಇದೆ. ದಲಿತನಿಗೆ ಒಲಿದ ದೇವರು : ಇಲ್ಲಿನ ಗಣಪತಿಯು ಭೂಗರ್ಭದಿಂದ ಉದ್ಬವವಾಗಿದೆ. ಹಿಂದೆ ದಲಿತನೊಬ್ಬನ ಮಗನಾದ ಪೆರ್ಣನು ಅಕಾಲದಲ್ಲಿ ಮರಣ ಹೊಂದುತ್ತಾನೆ. ಆತನ ತಂದೆಯು ಹಿಂದಿನ ಸಂಪ್ರದಾಯದಂತೆ ಪೆರ್ಣನನ್ನು ಗದ್ದೆಯಲ್ಲಿ ಹೂಳುತ್ತಾನೆ. ಕೆಲ ವರುಷಗಳ ನಂತರ ದಲಿತನು(ಪೆರ್ಣನ ತಂದೆ) ಆ ಗದ್ದೆಯನ್ನು ಉಳುವಾಗ ನೇಗಿಲಿನ ತುದಿಗೆ ಕಲ್ಲಿನಂತಹ ವಸ್ತು ತಾಗಿ ರಕ್ತಮಯವಾಗುತ್ತದೆ. ಭಯಗೊಂಡ ದಲಿತನು "ಪೆರ್ಣಾ ಈ ನನಲಾ ಉಲ್ಲನಾ?" (ಪೆರ್ಣಾ ನೀನಿನ್ನೂ ಬದುಕಿದ್ದೀಯಾ?) ಎಂದು ಉದ್ಗಾರ ತೆಗೆಯುತ್ತಾನೆ. ಸರಿಯಾಗಿ ಗಮನಿಸಿದಾಗ, ನೇಗಿಲು ತಾಗಿದ್ದು ಗಣಪತಿಯ ಕಲ್ಲಿನ ವಿಗ್ರಹಕ್ಕೆ. (ಓದುಗರ ಗಮನಕ್ಕೆ: ಹಲವಾರು ಕಡೆ ಗಣಪತಿಯ ವಿಗ್ರಹವು ದೊರೆತಿದ್ದು ಪೆರ್ಣನಿಗೆ ಎಂದೇ ನಂಬಲಾಗಿದೆ, ಆದರೆ ಆ ವಿಗ್ರಹವು ದೊರೆತಿದ್ದು ಪೆರ್ಣನಿಗೆ ಅಲ್ಲ, ಆತನ ತಂದೆಗೆ ಎಂದು ಇಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ) ಆ ದಿನ ರಾತ್ರಿ ದಲಿತನ ಕನಸಿನಲ್ಲಿ ಗಣಪತಿ ವಿಗ್ರಹವನ್ನು ಶಿವಾಲಯದ ಪಕ್ಕ ಸ್ಥಾಪಿಸುವಂತೆ ತಿಳಿಸಿತು. ಅದರಂತೆ ದಲಿತನು ಗಣಪತಿಯ ವಿಗ್ರಹವನ್ನು ಶಿವಾಲಯದ ಪಕ್ಕ ಸ್ಥಾಪಿಸುತ್ತಾನೆ. ಅಂದಿನಿಂದ ಈ ಊರಿಗೆ ಪೆರ್ಣ+ಅಂಕಿಲ(ನೇಗಿಲು) ಎಂಬ ಹೆಸರು ಬಂದಿದೆ. ಜಾತಿ ಪದ್ದತಿಗಳು ಬಲಿಷ್ಠವಾಗಿದ್ದ ಆ ಕಾಲದಲ್ಲಿ ಒಬ್ಬ ದಲಿತನ(ಪೆರ್ಣನ) ಹೆಸರು ಊರಿಗೇ ಬರುವಂತೆ ಮಾಡಿ, ದಲಿತ ವಂಶವನ್ನು ಅಜರಾಮರ ಮಾಡಿದ್ದು ನಿಜಕ್ಕೂ ಈಗಣೇಶನ ಮಹಿಮೆ. ರಥೋತ್ಸವದಂದು ರಥವು ವಿಗ್ರಹ ದೊರೆತ ಸ್ಥಳದವರೆಗೆ ಸಾಗಿ ಹಿಂತಿರುಗಿ ಬರುತ್ತದೆ. ಈ ಕ್ಷೇತ್ರದ ವಿಶೇಷ: ಇಲ್ಲಿನ ಶಿವಾಲಯವನ್ನು ಪ್ರತಿಷ್ಠೆ ಮಾಡಿದ್ದು ಖರಾಸುರ ಎಂಬ ಒಬ್ಬ ರಾಕ್ಷಸ. ಈಗ ಮೇಲ್ವರ್ಗದಿಂದ ಪೂಜಿಸಲ್ಪಡುವ ಗಣಪತಿಯ ಉದ್ಭವ ಮೂರ್ತಿ ದೊರೆತಿದ್ದು ಒಬ್ಬ ದಲಿತನಿಗೆ. ಎರಡೂ ದೇವಸ್ಥಾನಗಳು ಅಕ್ಕಪಕ್ಕದಲ್ಲಿಯೇ ಇವೆ, ಆದರೆ ಈಶ್ವರ ಪೂರ್ವಕ್ಕೆ ಮುಖ ಮಾಡಿಕೊಂಡಿದ್ದರೆ, ಮಗನು ಅಪ್ಪನಿಗೆ ತದ್ವಿರುದ್ಧವಾಗಿ, ಪಶ್ಚಿಮಕ್ಕೆ ಮುಖ ಮಾಡಿಕೊಂಡಿದ್ದಾನೆ.. ದೇವರ ದರ್ಶನದ ಮಾಡುವಾಗ ನಮಗೆ ಗಣಪತಿಯ ವಿಗ್ರಹದ ತಲೆಯ ತುದಿಭಾಗವು ಮಾತ್ರ ಕಾಣುತ್ತದೆ. ಆದರೆ,,, ಈ ವಿಗ್ರಹದ ಕೆಳಗೆ ಆಳವಾದ ಬಾವಿಯಿದ್ದು ಅದರಲ್ಲಿ ಗಣಪತಿಯ ಪೂರ್ತಿ ವಿಗ್ರಹವೇ ಹುದುಗಿದೆ.. ಪೆರ್ಣಂಕಿಲ ಗಣಪತಿಯು ಅಪ್ಪ ಪ್ರಿಯ. ಅಕ್ಕಿ, ಎಳ್ಳು, ಬೆಲ್ಲ, ತೆಂಗಿನಕಾಯಿ, ತುಪ್ಪದಿಂದ ತಯಾರಿಸುವ ಅಪ್ಪ ಪ್ರಸಾದ ಸೇವೆಯು 'ಕೊಪ್ಪರಿ ಅಪ್ಪ' ಎಂದೇ ಪ್ರಸಿದ್ಧಿ. ಈ ದೇವಸ್ಥಾನವು ಉಡುಪಿ ಪರ್ಯಾಯ ಶ್ರೀಪೇಜಾವರ ಅಧೊಕ್ಷಜ ಮಠದ ಆಡಳಿತಕ್ಕೆ ಒಳಪಟ್ಟಿದೆ. ದೇವಸ್ಥಾನವು ಸಂಪೂರ್ಣ ಹಳ್ಳಿ ಪ್ರದೇಶದಲ್ಲಿದ್ದರೂ ಆಗಮಿಸುವ ಭಕ್ತರಿಗೆ ಉಡುಪಿ ಪೇಜಾವರ ಮಠದ ವತಿಯಿಂದ ನಿತ್ಯ ಅನ್ನಸಂತರ್ಪಣೆಯ ವ್ಯವಸ್ಥೆ ಇದೆ. ಗಣೇಶ ಚತುರ್ಥಿ ಹಾಗೂ ಪ್ರತಿ ವರ್ಷದ ಮೀನ ಮಾಸದ ಬಿದಿಗೆಯಂದು ನಡೆಯುವ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಪಾಲ್ಗೊಂಡು ಸೇವೆ ಸಲ್ಲಿಸುತ್ತಾರೆ. ಈ ಕ್ಷೇತ್ರ ಅತ್ಯಂತ ಅಪೂವ೯ ವಾದ ಕ್ಷೇತ್ರವಾಗಿದೆ ಇನ್ನೂ ಸ್ವಲ್ಪ ಅಭಿವೃಧಿಯಾಗಬೇಕಾಗಿದೆ. ಬನ್ನಿ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ. ಬರಹ : ರಾಘವೇಂದ್ರ ಪ್ರಭು, ಕವಾ೯ಲು

ಅಪೂರ್ವ ಸಾಧಕ, ಯುವ ಕಲಾವಿದ ಕಾಪು ಕ್ಷೇತ್ರದ ಮಹೇಶ್ ಮರ್ಣೆ

Posted On: 02-07-2020 07:18PM

ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪಕಲೆಗಳು ವೈವಿಧ್ಯಪೂರ್ಣವಾಗಿ ರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತ ಬಂದಿದೆ. ಒಬ್ಬ ಶಿಲ್ಪಿ ತನ್ನ ಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನು ಕೂಡ ಮೂರ್ತಿಯನ್ನಾಗಿ ಮಾಡಬಲ್ಲನು. ಅಲ್ಲದೆ ತನ್ನ ಕ್ರಿಯಾಶೀಲತೆಯಿಂದ ಯಾವ ವಸ್ತುವಿನಲ್ಲಿಯೂ ಕೂಡ ಕಲಾ ದೇವತೆಯನ್ನು ಪ್ರತಿಷ್ಠಾಪನೆ ಮಾಡಬಲ್ಲನು, ಇಂತಹ ನೂರಾರು ಜನ ಹಿರಿಯ ಕಲಾವಿದರು ನಮ್ಮ ನಾಡಿನಲ್ಲಿದ್ದಾರೆ. ಈ ಹಿರಿಯ ಕಲಾವಿದರಿಗೆ ಸರಿಸಾಟಿ ಎಂಬಂತೆ ಉಡುಪಿಯ ಉದಯೋನ್ಮುಖ ಯುವ ಕಲಾವಿದರಲ್ಲಿ ಮಹೇಶ್ ಮರ್ಣೆ ಓಬ್ಬರು. ಉಡುಪಿಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಮರ್ಣೆ ಗ್ರಾಮದಲ್ಲಿ 1984 ರಲ್ಲಿ ಜನಿಸಿದ ಮಹೇಶ್ ಗೆ ಶಿಲ್ಪ ಕೆತ್ತನೆಯ ಹವ್ಯಾಸ ಹುಟ್ಟಿಕೊಂಡಿತ್ತು. ಮರ್ಣೆ ಶ್ರೀಧರಾಚಾರ್ಯ ಮತ್ತು ಲಲಿತಾ ದಂಪತಿಗಳಿಗೆ ಪುತ್ರರಾಗಿರುವ ಇವರು ಉನ್ನತ ವ್ಯಾಸಂಗ ಮಾಡಲು ಇಷ್ಟವಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ತನ್ನ ಇಷ್ಟದ ಹವ್ಯಾಸವನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಆ ವೃತ್ತಿಯಲ್ಲಿರುವ ಕಲಾವಂತಿಕೆಯನ್ನು ನಾಡಿನ ಜನರಿಗೆ ಉಣಬಡಿಸುತ್ತಾರೆ. ಮಹೇಶ್ ಮರ್ಣೆಯಲ್ಲಿರುವ ಕಲಾವಿದ ಶಿಲ್ಪಿ ಉನ್ನತ ರೂಪ ಪಡೆದಿದ್ದು, ಖ್ಯಾತ ಶಿಲ್ಪಿ ಗುಣವಂತೇಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಅವರು ಶಿಲ್ಪಕಲೆಯಲ್ಲಿ ಪರಿಪಕ್ವತೆಯನ್ನು ಸಾಧಿಸುತ್ತಾ ಹೋದರು, ಸಹೋದರರಾದ ಸಂತೋಷ್ ಮತ್ತು ಉಮೇಶ್ ರವರ ಪ್ರೋತ್ಸಾಹದೊಂದಿಗೆ ಶಿಲ್ಪಕಲಾ ತರಬೇತಿಯನ್ನು ಪೂರ್ಣಗೊಳಿಸಿದರು. ಪ್ರತಿಭಾವಂತ ಕಲಾವಿದ ಗೋಪಾಡ್ಕರ್ ರವರ ಪರಿಚಯವಾದ ನಂತರ ಅವರಲ್ಲಿ ತನ್ನ ಕಲಾಸೇವೆಯನ್ನು ಮುಂದುವರಿಸಿದ ಮಹೇಶ್ ರವರು ಈವರೆಗೆ ಸಾವಿರಾರು ಕಾಷ್ಟ ಹಾಗೂ ಶಿಲೆಗಳಿಂದ ಶಿಲ್ಪವನ್ನು ರಚಿಸಿರುತ್ತಾರೆ. ಥರ್ಮೋಫೋಮ್ ನಲ್ಲಿ 10 ಅಡಿ ಎತ್ತರದ ಸುಂದರ ನಟರಾಜನ ವಿಗ್ರಹ, 7 ಅಡಿ ಎತ್ತರದ ನಟರಾಜನ ವಿಗ್ರಹ, ಥರ್ಮಕೋಲ್ ನಲ್ಲಿ ಮಹಾಗಣಪತಿ ಹಾಗೂ ಮುಂತಾದ ಶಿಲ್ಪಕಲಾಕೃತಿಯನ್ನು ರಚಿಸಿರುತ್ತಾರೆ. ಅಪೂರ್ವ ವೇದಿಕೆ ನಿರ್ಮಾಣ : ಕೇವಲ ಶಿಲ್ಪಕಲೆ ಅಲ್ಲದೆ ಅತ್ಯುತ್ತಮವಾದ ಪಾರಂಪರಿಕ ವೇದಿಕೆ ನಿರ್ಮಾಣದಲ್ಲಿಯೂ ಮಹೇಶ್ ಮರ್ಣೆಯವರು ಎತ್ತಿದ ಕೈ. ತನ್ನ ಅದ್ಭುತ ಕಲಾಕೃತಿಯಿಂದ ಹಲವಾರು ಸುಂದರ ಕಾರ್ಯಕ್ರಮಗಳಲ್ಲಿ ವೇದಿಕೆ ನಿರ್ಮಾಣ ಮಾಡಿದ್ದಾರೆ. ಈ ವೇದಿಕೆಯನ್ನು ನೋಡಿದ ಹಲವಾರು ಜನ ಕಲಾಪ್ರೇಮಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಐಸ್ ಕ್ರೀಮ್ ಕಡ್ಡಿಯಿಂದ ಅರಳಿದ ಗಣಪ : ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭ ಸೃಜನಾತ್ಮಕವಾಗಿ ಗಣಪತಿ ಕಲಾಕೃತಿಯನ್ನು ರಚಿಸಿರುತ್ತಾರೆ. ಈ ಬಾರಿ ಐಸ್ ಕ್ರೀಮ್ ತಿನ್ನಲು ಬಳಸುವ ಕಡ್ಡಿಯನ್ನು ಫೆವಿಕೋಲ್ ಗಮ್ ನಿಂದ ಅಂಟಿಸಿ ದಪ್ಪ ಮಾಡಿಕೊಂಡು ಅದರಿಂದ ಗಣಪತಿಯ ಮುಖ, ಹೊಟ್ಟೆ, ಕೈಕಾಲುಗಳನ್ನು ಕೆತ್ತನೆಯ ಮೂಲಕ ಮೂಡಿಸಿದ್ದಾರೆ. ಕಡ್ಡಿಯನ್ನು ಕ್ರಮವಾಗಿ ಜೋಡಿಸಿ ಪ್ರಭಾವಳಿ, ಗಣಪತಿ ಪೀಠ ರಚಿಸಿದ್ದಾರೆ. ಇದಕ್ಕೆ 3500 ಐಸ್ ಕ್ರೀಮ್ ಕಡ್ಡಿ ಉಪಯೋಗಿಸಲಾಗಿದೆ. ಗಣಪತಿ ಪ್ರಭಾವಳಿ, ಆಭರಣಗಳ ಅಲಂಕಾರಕ್ಕಾಗಿ ಕೆಂಪು ಮತ್ತು ಕಪ್ಪು ಬಣ್ಣದ 750 ಬೆಂಕಿ ಕಡ್ಡಿ ಬಳಸಿದ್ದು, 24 ಇಂಚು ಎತ್ತರ ಮತ್ತು 17 ಇಂಚು ಅಗಲವಿರುವ ಈ ಕಲಾಕೃತಿ 15 ದಿನಗಳ ಕಠಿಣ ಪರಿಶ್ರಮದಿಂದ ರೂಪುಗೊಂಡಿದೆ ಎಂದು ಅವರು ಹೇಳುತ್ತಾರೆ. ಈ ಹಿಂದೆ ಬಾಟಲಿಯೊಳಗೆ ಗಣಪತಿ, ತರಕಾರಿಯಲ್ಲಿ ಗಣಪತಿ, ಸೀಮೆಸುಣ್ಣದಲ್ಲಿ ಗಣಪತಿಯ ಕಲಾಕೃತಿಯನ್ನು ರಚಿಸಿದ್ದಾರೆ. ಈಗಾಗಲೇ ಹತ್ತಾರು ಕಡೆಗಳಲ್ಲಿ ಇವರ ಸಾಧನೆಯನ್ನು ಗಮನಿಸಿ ಸನ್ಮಾನ ದೊರಕಿದೆ. ಈ ಕಲಾವಿದನ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೀಡಿದಲ್ಲಿ ರಾಷ್ಟ್ರಮಟ್ಟದಲ್ಲಿ ಕಲಾವಿದನಾಗುವಲ್ಲಿ ಸಂದೇಹವಿಲ್ಲ. ತನ್ನ ಎಲ್ಲಾ ಬಗೆಯ ಕಲಾಪ್ರಕಾರಗಳಲ್ಲಿ ಸಾಧನೆಯನ್ನು ಮಾಡಿ ಹವ್ಯಾಸ ಮತ್ತು ಉದ್ಯೋಗದಲ್ಲಿ ಹೊಸ ಪರಿಕಲ್ಪನೆಯನ್ನು ತಂದ ಮಹೇಶ್ ಮರ್ಣೆ ಅಭಿನಂದಾರ್ಹರು, ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂಬುದು ನಮ್ಮ ಶುಭಾ ಹಾರೈಕೆ. ಬರಹ : ರಾಘವೇಂದ್ರ ಪ್ರಭು ಕರ್ವಾಲು..

ಕೋವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ - ಡಾ!! ಉಮೇಶ್ ಪ್ರಭು

Posted On: 01-07-2020 10:43PM

ಉಡುಪಿ.01, ಜುಲೈ :- ವೈದ್ಯರು ರೋಗಿಗಳ ಜೀವರಕ್ಷಣಿಗೆ ತಮ್ಮ ವೈಯತ್ತಿಕ ಬದುಕನ್ನು ತ್ಯಾಗ ಮಾಡಿ ಸಮಾಜದ ರಕ್ಷಕರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.ಕೊವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ಭಾರತೀಯ ವೈದ್ಯ ಸಂಘ ಕರಾವಳಿ ಶಾಖೆ ಅಧ್ಯಕ್ಷ ಡಾ|| ಉಮೇಶ್ ಪ್ರಭು ಹೇಳಿದರು. ಅವರು ಜುಲೈ 1 ರಂದು ಬಡಗಬೆಟ್ಟು ಸೊಸೈಟಿಯ ಜಗನ್ನಾಥ್ ಸಭಾ ಭವನದಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘ(ಕೆ.ಎಸ್.ಎಂ ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ 18ನೇ ವಷ೯ದ ವೈದ್ಯರ ದಿನಾಚರಣೆ ಕಾಯ೯ಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಹೇಳಿದರು. ಕೋವಿಡ್ ನಿಂದ ವೈದ್ಯರು, ವೈದ್ಯಕೀಯ ಸಿಬ್ಬ೦ದಿಗಳು ಹಗಲು ರಾತ್ರಿಯೆನ್ನದೆ ಕಾಯ೯ ನಿವ೯ಹಿಸುತ್ತಿರುವುದು ಅಭಿನಂದನೀಯ ಎಂದರು. ಬಡಗಬೆಟ್ಟು ಸೊಸೈಟಿಯ ಪ್ರ.ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವೈದ್ಯರು ನಿಜವಾದ ಸಮಾಜ ರಕ್ಷಕರು ಅವರ ಸೇವೆ ಅಭಿನಂದನೀಯ ಎಂದರು. ವೇದಿಕೆಯಲ್ಲಿ ವೇಣುಗೋಪಾಲ ಹೆಬ್ಬಾರ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕಾಯ೯ದಶಿ೯ ಶ್ರೀನಾಥ್ ಕೋಟ, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರ.ಕಾಯ೯ದಶಿ೯ ಪ್ರಸನ್ನ ಕಾರಂತ್, ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು. ಹಿರಿಯ ಸಾಧಕ ವೈದ್ಯರಾದ ಕುಟುಂಬ ವೈದ್ಯ ಡಾ|| ಡೊನಾಲ್ಡ್ ಸೈಮನ್, ಕೆ.ಎಂ.ಸಿ ಮಣಿಪಾಲ ಇ.ಎನ್.ಟಿ ವಿಭಾಗದ ಡಾII ದೀಪಕ್ ರಂಜನ್ ನಾಯ್ಕ್ ರವರನ್ನು ಗೌರವಿಸಲಾಯಿತು.ಸನ್ಮಾನಿತರು ಶುಭ ಹಾರೈಸಿದರು.ಮಾಧವ ಆಚಾರ್ , ಸುಬ್ರಮಣ್ಯ, ಮೋಹನ್ ಸನ್ಮಾನ ಪತ್ರ ವಾಚಿಸಿದರು.ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು. ಮಧುಸೂಧನ್ ಪ್ರಸ್ತಾಪಿಸಿದರು.ಕೋವಿಡ್ ಮಾಗ೯ ಸೂಚಿಯನ್ನು ಅನುಸರಿಸಿ ಕಾಯ೯ಕ್ರಮ ನಡೆಸಲಾಯಿತು.