Updated News From Kaup
ಮಣಿಪುರ ಗ್ರಾಮದ ರೈಲ್ವೆ ಟ್ರ್ಯಾಕ್ ನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

Posted On: 24-06-2020 08:25AM
ದಿನಾಂಕ 23.06.2020 ರಂದು ಸಮಯ 23.45 ಗಂಟೆಗೆ ಮಣಿಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಬದಿಯಲ್ಲಿ ಸುಮಾರು 30 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ದೊರೆತಿದ್ದು ಸದ್ರಿ ಮೃತ ದೇಹದ ವಾರಸುದಾರರು ಪತ್ತೆಯಾಗಿರುವುದಿಲ್ಲ ಮೃತ ದೇಹ ನೋಡಲಾಗಿ ಬಲಗೈ ಬಲ ಕಾಲು ಸಂಪೂರ್ಣ ವಾಗಿ ಮುರಿದಿದ್ದು ತಲೆಗೆ ಪೆಟ್ಟಾಗಿರುತ್ತದೆ ಮೃತ ದೇಹದ ಮೇಲೆ ಆಕಾಶ ನೀಲಿ ಬಣ್ಣದ ಟಿ ಶರ್ಟ್ ಹಾಗೂ ಕಪ್ಪು ಚೌಕ್ ಇರುವ ನೀಲಿ ಲುಂಗಿ ನೀಲಿ ಬಣ್ಣದ ಒಳ ಚಡ್ಡಿ ಧರಿಸಿದ್ದು ಕಿವಿಯಲ್ಲಿ ಕಿವಿಯೋಲೆ ಮತ್ತು ಸೊಂಟದಲ್ಲಿ ಉಡುದರ ಹಾಗೂ ಸೊಂಟಕ್ಕೆ ಕಪ್ಪು ಬಣ್ಣದ ದಾರವನ್ನು ಧರಿಸಿರುತ್ತಾನೆ, ಶವವನ್ನು ಸೂರಿ ಶೆಟ್ಟಿಯವರ ಸಹಾಯದಿಂದ ಆಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ - ನಮ್ಮ ಕಾಪು ನ್ಯೂಸ್
ಶ್ರೀ ವಿಶ್ವನಾಥ್ ರಾವ್ ಪೈಯ್ಯಾರು ಇನ್ನಿಲ್ಲ.

Posted On: 23-06-2020 08:26AM
ಯಕ್ಷಲೋಕದ ಭಾಗವತಿಕೆಯಲ್ಲಿ ಮಿನುಗಿದ, ಬಿ.ಜೆ.ಪಿ ಪಕ್ಷವನ್ನ ಗ್ರಾಮೀಣ ಭಾಗದಲ್ಲಿ ಸಂಘಟಿಸಿದ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜ್ಯೋತಿನಗರ ಕಳತ್ತೂರು ಇದರ ಸ್ಥಾಪಕ ಸದಸ್ಯರಾಗಿ,ಅಧ್ಯಕ್ಷರಾಗಿ, ಸಮಿತಿಯ ರಜತ ಸಂಭ್ರಮವನ್ನ ಯಶಸ್ವಿಯಾಗಿ ನಿರ್ವಹಿಸಿದ ಪೈಯಾರಿನ ಹಿರಿಯ ಚೇತನವೊಂದು ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ಧೈವಾದೀನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಉಡುಪಿಯ ಭುಜಂಗ ಪಾರ್ಕಿನಲ್ಲಿ ಕುಡುಕರ ಹಾವಳಿ.

Posted On: 22-06-2020 07:59PM
ಉಡುಪಿ, ಜೂ.22; ವಾಯು ವಿಹಾರ ತಾಣ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ, ಕುಡುಕರು ಅಲ್ಲಲ್ಲಿ ಎಸೆದಿರುವ ಸಾವಿರಾರು ಮದ್ಯದ ಬಾಟಲಿಗಳನ್ನು ತೆರವುಗೊಳಿಸಲು ಜಿಲ್ಲಾ ನಾಗರಿಕ ಸಮಿತಿ ಹಾಗೂ ಸ್ವಚ್ಚ ಭಾರತ್ ಪ್ರೇಂಡ್ಸ್ ಇವರು ಸ್ವಚ್ಚತಾ ಕಾರ್ಯಕ್ರಮವನ್ನು ಸೋಮವಾರ ನಡೆಸಿದರು. ಜಂಟಿ ಸಮಿತಿಯ ಕಾರ್ಯಕರ್ತರು ಸುರಿಯುವ ಮಳೆಯಲ್ಲಿಯೇ ಬಾಟಲಿಗಳ ಒಟ್ಟುಗೂಡಿಸಿ ಆಯಾಕಟ್ಟಿನ ಸ್ಥಳಗಳಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ವಿಲೇವಾರಿಗೊಳಿಸಲು ಸಂಬಂಧಪಟ್ಟವರಿಗೆ ತಿಳಿಸಿಟ್ಟಿದ್ದಾರೆ. ಸ್ವಚ್ಚತಾ ಸೇವಾಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಹಾಗೂ ಸ್ವಚ್ಚ ಭಾರತ ಪ್ರೇಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು, ಕರ್ವಾಲು, ಜೇಸಿ ಉಡುಪಿ ಸಿಟಿ ಪೂರ್ವಾದ್ಯಕ್ಷ ಜಗದೀಶ್ ಶೆಟ್ಟಿ , ಉದಯ ನಾಯ್ಕ ಪಾಲ್ಗೊಂಡಿದ್ದರು. ಅಜ್ಜರಕಾಡು ಭುಜಂಗ ಪಾರ್ಕ್ ಇದೊಂದು ನಗರದ ಏಕೈಕ ವಾಯುವಿಹಾರ ತಾಣ. ಇಲ್ಲಿಗೆ ಹಿರಿಯ ನಾಗರಿಕರು, ಚಿಕ್ಕ ಮಕ್ಕಳು, ವಾಯು ವಿಹಾರಿಗಳು ಬರುತ್ತಾರೆ. ಇಲ್ಲಿ ಕುಡುಕುರ ಹಾವಳಿಯಿಂದಾಗಿ ಸಾರ್ವಜನಿಕರು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲದಿದ್ದರೂ ಇಲ್ಲಿ ಕಾನೂನಿಗೆ ವಿರುದ್ಧವಾಗಿ ರಾತ್ರಿಯ ಹೊತ್ತಿನಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ. ಹುತಾತ್ಮ ಸೈನಿಕರ ಸ್ಮಾರಕದ ವಠಾರದಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಮಹಾ ಅಪರಾಧವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ನಗರಡಾಳಿತ ಜಿಲ್ಲಾಡಳಿತವು ಅಜ್ಜರಕಾಡು ಪಾರ್ಕಿಗೆ ಕಾವಲುಗಾರನ ವ್ಯವಸ್ಥೆ, ಪೊಲೀಸ್ ಗಸ್ತು, ಬೆಳಕಿನ ವ್ಯವಸ್ಥೆಗಳೊಂದಿಗೆ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಸುರಕ್ಷೆ ಒದಗಿಸಬೇಕೆಂದು ಜಂಟಿ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಕುಂಜಾರುಗಿರಿ ಪಾಜಕದ ಸಮೀಪ ಇರುವ ಹನುಮ,ಭೀಮ ಮತ್ತು ಮಧ್ವರ ಶಿಲೆ...

Posted On: 22-06-2020 02:38PM
ಮೇಲೆ 'ಹನುಮ' ಮಧ್ಯೆ 'ಭೀಮ' ಕೆಳಗೆ 'ಮಧ್ವ'. ಈ ಯಾದಿಯಲ್ಲಿ ಮಧ್ವಾಚಾರ್ಯರ ಅವತಾರ ಮೂರನೇಯದ್ದು . ಹನುಮಂತ , ಭೀಮ , ಮಧ್ವರು ಎಂಬುದು ಉಡುಪಿ ಮತ್ತು ಮಧ್ವಾನುಯಾಯಿಗಳ ಅನುಸಂಧಾನ . ತುಳು ಮಣ್ಣಿನಲ್ಲಿ ಅಂಕುರಿಸಿದ " ದ್ವೈತ " ತುಳು ಸಂಸ್ಕೃತಿಯ ಬುನಾದಿ , ನಂಬಿಕೆ - ನಡವಳಿಕೆಗಳ ಶ್ರದ್ಧೆ , ವೈಚಾರಿಕ ವೈಶಾಲ್ಯತೆಯ ಸಮೃದ್ಧ ನೆಲದಲ್ಲಿ ಅಂಕುರಿಸಿತು "ತತ್ತ್ವವಾದ" , ಅದೇ ಮುಂದೆ "ದ್ವೈತ" ಸಿದ್ಧಾಂತವಾಗಿ ಪ್ರಸಿದ್ಧವಾಯಿತು . ಮೂರನೇ ಆಚಾರ್ಯರಾಗಿ ಭಾರತೀಯ ಅಧ್ಯಾತ್ಮಕ್ಕೆ ತುಳುನಾಡಿನ ಕೊಡುಗೆಯಾದರು ಆಚಾರ್ಯ ಮಧ್ವರು .ಪೂರ್ಣಪ್ರಜ್ಞ , ಆನಂದ ತೀರ್ಥರೆಂದೂ ಮಾನ್ಯರು . ವೈವಿಧ್ಯಮಯ ಆಚಾರ - ವಿಚಾರಗಳು , ಶ್ರದ್ಧೆ - ನಂಬಿಕೆಗಳು , ನಾಗ - ಬೂತ ಆರಾಧನಾ ವಿಧಾನಗಳು ಸರಳ - ಮುಗ್ಧ ವಿಧಿಯಾಚರಣೆಗಳು , ಕೃಷಿ - ಮೀನುಗಾರಿಕೆ - ಮೂರ್ತೆ ಆಧರಿತ ಬದುಕುಗಳು ಪಡಿಮೂಡಿದ್ದ ತುಳುವ ಮಣ್ಣಿನಲ್ಲಿ ಆಚಾರ್ಯರು ಜನಿಸಿದರು.ಈ ಸಾಂಸ್ಕೃತಿಕ ಹಿನ್ನೆಲೆಯಿಂದಲೇ ಪ್ರೇರಿತರಾಗಿ ಪರಮಾರ್ಥ ಪರಿವ್ರಾಜಕರೆನಿಸಿದರು . ತೌಳವದ ಎಲ್ಲ ಧಾರ್ಮಿಕ - ಸಾಂಸ್ಕೃತಿಕ ವೈವಿಧ್ಯಗಳನ್ನು ಉಡುಪಿಯ ಶ್ರೀ ಕೃಷ್ಣ ಮಠದ ಪೂಜಾ ವಿಧಾನಗಳಲ್ಲಿ ಅಳವಡಿಸಿಕೊಂಡು ಆಚರಣೆ - ಉತ್ಸವ ಪರ್ವಗಳಲ್ಲಿ ಮತ್ತೆ ವಿಜೃಂಭಿಸುವಂತೆ ಮಾಡಿದ ಆಚಾರ್ಯರು ವೈದಿಕದ ಪರಮೋಚ್ಚ ಸ್ವೀಕಾರದಲ್ಲೂ ತುಳು ಮಣ್ಣಿನ ತನ್ನ ಮೂಲವನ್ನು ಮರೆಯದೆ ಒಂದು ಬಹು ಆಯಾಮದ ಧಾರ್ಮಿಕ ಕ್ಷೇತ್ರ ವಾಗಿ ಸಾಂಸ್ಕೃತಿಕ ಕೇಂದ್ರವಾಗಿ ಉಡುಪಿಯನ್ನು ಸಿದ್ಧಗೊಳಿಸಿದರು .ಬಹುಶಃ ಇದೇ , ಧಾರ್ಮಿಕ ಬಹುತ್ವ ಕಾರಣವಾಗಿ , ಉಡುಪಿ ದೇಶದ ಭೂಪಟದಲ್ಲಿ , ವಿಶ್ವದಲ್ಲಿ ಗುರುತಿಸಲ್ಪಟ್ಟಿತು . ತುಳುವರ ಹೆಚ್ಚುಗಾರಿಕೆ , ಬದುಕಿನ ವಿಧಾನದಲ್ಲಿ , ಭಾಷೆಯ ಮಾಧುರ್ಯದಲ್ಲಿ , ಮಣ್ಣಿನ ಅತಿಶಯತೆಯಲ್ಲಿದೆ . ಈ ಎಲ್ಲವನ್ನೂ ನಾವಿಂದು ಉಡುಪಿಯಲ್ಲಿ , ಶ್ರೀ ಕೃಷ್ಣ ಮಠದ ಮಹೋತ್ಸವಗಳಲ್ಲಿ ,ರಥ ಬೀದಿಯಲ್ಲಿ ಕಾಣಬಹುದು . ಸುಂದರ ಮಂದಿರಗಳ ನಗರ ಉಡುಪಿ ಆಚಾರ್ಯ ಮಧ್ವರು ವೇದಾಂತ ಸಾಮ್ರಾಜ್ಯವನ್ನು ಆಳಿದ ಮಂಗಳ ಭೂಮಿ , ಶ್ರೀ ಕೃಷ್ಣ ಪ್ರತಿಷ್ಠೆಯಿಂದ ಪರಿಪೂರ್ಣ ಕ್ಷೇತ್ರವಾಯಿತು . ಅಷ್ಟ ಯತಿಗಳನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಸರದಿಯಲ್ಲಿ ಶ್ರೀ ಕೃಷ್ಣನ ಪೂಜೆಗೆ ನೆಲೆಗೊಳಿಸಿದ ಪೂರ್ಣಪ್ರಜ್ಞರು ಎರಡು ತಿಂಗಳ ಅವಧಿಯ ಪರ್ಯಾಯ ಪೂಜಾ ವಿಧಾನ ಆರಂಭಿಸಿದರು . ಈ ಕಾಲಾವಧಿಯನ್ನುಸೋದೆ ಮಠದ ಶ್ರೀ ಮದ್ವಾದಿರಾಜರು ಎರಡು ವರ್ಷಕ್ಕೆ ವಿಸ್ತರಿಸಿ ಪರ್ಯಾಯಕ್ಕೆ ಹೊಸ ಆಯಾಮ ನೀಡಿದರು , ಸಮಷ್ಟಿಯ ಸಹಭಾಗಿತ್ವಕ್ಕೆ ಅವಕಾಶವಾಯಿತು . ನಿತ್ಯೋತ್ಸವದ ನಾಡಿನಲ್ಲಿ ಮತ್ತೊಂದು ಉತ್ಸವ ಸೇರಿ ಕೊಂಡು ಪರ್ಯಾಯೋತ್ಸವವಾಯಿತು, ನಾಡ ಹಬ್ಬವಾಗಿ ಮಾನ್ಯವಾಯಿತು . ತತ್ತ್ವವಾದ ಭಾರತೀಯ ತತ್ತ್ವಜ್ಞಾನದ ಪರಂಪರೆಗೆ ಹೊಸ ತಿರುವು ನೀಡಿ ದೇಶದಾದ್ಯಂತದ ವಿದ್ವಾಂಸರನ್ನು ನಿಬ್ಬೆರಗುಗೊಳಿಸಿ ಹೊಸ ಚರ್ಚೆಗೆ ನಾಂದಿ ಹಾಡಿದ ಶ್ರೀ ಮಧ್ವಾಚಾರ್ಯರ ವಿಚಾರಧಾರೆ "ತತ್ತ್ವವಾದ". ವೇದಗಳಿಗೆ ಜೀವಾತ್ಮ - ಪರಮಾತ್ಮಪರವಾದ ವ್ಯಾಖ್ಯಾನ ನೀಡಿದವರಲ್ಲಿ ಮೊದಲಿಗರಾಗಿ , ವೇದ ಪ್ರತಿಪಾದ್ಯವಾದ ಅನೇಕ ಸತ್ಯಗಳ ಪರಿಶೋಧಕರಾಗಿ ಆಚಾರ್ಯ ಮಧ್ವರು ತಾವು ನಡೆಸಿದ ಅಧ್ಯಯನದ ಮೂಲಕ ಕಂಡು ಕೊಂಡ 'ತತ್ತ್ವವಾದ' ಅಂದರೆ 'ದ್ವೈತ' ಸಿದ್ಧಾಂತವನ್ನು ಘೋಷಿಸಿದ್ದು'ಒಡಿಪು' ಅಥವಾ ' ಉಡುಪಿ'ಯಲ್ಲಿ . ಮೂರನೇ ಆಚಾರ್ಯನಾಗಿ ಸನಾತನ ಧರ್ಮಕ್ಕೆ ಸರಳ ಸುಂದರ ಸರ್ವಮಾನ್ಯ , ಸರ್ವಸಮ್ಮತ ವಿವರಣೆ ನೀಡಿದ ಪೂರ್ಣಪ್ರಜ್ಞರು ಲೋಕದೃಷ್ಟಿಯಿಂದ ಕಾಲದ ಅನಿವಾರ್ಯತೆಗೆ ಸ್ಪಂದಿಸಿದವರು .ಹಳೆಯ , ತಿರುಳಿಲ್ಲದ , ಗೊಂದಲಕ್ಕೆ ಕಾರಣವಾಗಬಹುದಾದ ಅನೇಕ ನಂಬಿಕೆಗಳನ್ನು ಸ್ಪಷ್ಟವಾಗಿ ಖಂಡಿಸಿ ,ಅಧ್ಯಾತ್ಮವನ್ನು ಮೂಢನಂಬಿಕೆಗಳ ಜೊತೆಗೆ ಸಮೀಕರಿಸಬಾರದೆಂದು ಪ್ರಚುರಪಡಿಸಿದರು . ಸಮಾಜದ ಯಾವ ವರ್ಗದ ಮೇಲೂ ತಿರಸ್ಕಾರ ಭಾವವಿಲ್ಲ , ಸಮಸ್ತರಿಗೂ ನಿಷ್ಕಳಂಕ ,ನಿಸ್ವಾರ್ಥ ಭಗವತ್ ಸೇವೆಯಿಂದ ಮೋಕ್ಷ ಖಚಿತ . ಮಹಾಪಾಪಿಗಳೂ ಪಶ್ಚಾತ್ತಾಪ ಪಟ್ಟಲ್ಲಿ , ಸನ್ಮಾರ್ಗದಲ್ಲಿ ನಡೆದಲ್ಲಿ ಆತ್ಮೋನ್ನತಿ ಸಾಧ್ಯ ಎಂಬ ಸಂದೇಶವನ್ನು ನೀಡಿದವರು ಮಧ್ವರು . ಸದ್ಗುಣಭರಿತವಾದ ಗುಣ ಹಿರಿತನ ವ್ಯಕ್ತಿಗೆ ಮಾನ್ಯತೆಯನ್ನು ನೀಡುತ್ತದೆ ಗುಣಗಳೇ ಇಲ್ಲದ ಬ್ರಾಹ್ಮಣನೂ ನಿಂದ್ಯನೆ ಎಂಬುದು ಮಧ್ವಾಚಾರ್ಯರ ನಿಲುವು ಆಗಿತ್ತು . ಪ್ರಾಣಿ ಸೇವೆಯೂ ಭಗವಂತನನಿಗೆ ಪ್ರಿಯವಾದುದು ಎಂದು ವಿಶ್ಲೇಷಿಸುತ್ತಿದ್ದ ಆಚಾರ್ಯರು ನಾರಾಯಣನೊಬ್ಬನೆ ಸರ್ವೋತ್ತಮ , ಸ್ವತಂತ್ರನಾದ ಪರದೈವ , ಏಕೋ ದೇವಃ ಎನ್ನುವುದೇ ವೈದಿಕ ವಾಙ್ಮಯದ ಸಾರ ಎಂದು ಪ್ರತಿಪಾದಿಸಿದರು . ಉಡುಪಿಯಲ್ಲಿ ಶ್ರೀ ಕೃಷ್ಣ ಪ್ರತಿಷ್ಠೆಯ ಮೂಲಕ ಭಕ್ತಿ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ ಆಚಾರ್ಯರು ಬೆಳೆದದ್ದು ನೆಲದಗಲಕ್ಕೆ , ಮುಗಿಲೆತ್ತರಕ್ಕೆ . ಸುಲಭ ಗ್ರಾಹ್ಯವಾದ ತತ್ವಜ್ಞಾನದ ನಿರೂಪಣೆ , ಸರ್ವ ಸಮಭಾವದ ಉದಾತ್ತ ಧೋರಣೆ , ಜನಪದಕ್ಕೆ ಹತ್ತಿರವಾದ ವಿಚಾರಧಾರೆಗಳಿಂದ ಜನಮಾನಸ ಗೆದ್ದರು . ಪ್ರವೇಶಕ್ಕೆ ಸುಲಭ ಸಾಧ್ಯವಾದ , ವಿಸ್ತೃತ ಹರವುಳ್ಳ , ಸುಂದರ ವೇದಾಂತವು ಆಚಾರ್ಯರ 'ತತ್ತ್ವವಾದ'ವಾಗಿದ್ದರೂ ಸ್ಥಾಪಿತ ಚಿಂತನೆಗಳವರಿಂದ , ವಿದ್ವಾಂಸರಿಂದ ಬಹಳಷ್ಟು ಆಕ್ಷೇಪಗಳಿಗೆ , ಚರ್ಚೆಗೆ ವಸ್ತುವಾಯಿತು . ಆದುದರಿಂದ ವಾದಗಳೇ ಪ್ರಧಾನವಾಯಿತು . ನಿಜ ಅರ್ಥದಲ್ಲಿ ತತ್ತ್ವವಾದ ಮಂಡಿಸಲ್ಪಟ್ಟಿತು .ಹೊಸ ಚಿಂತನೆಯೊಂದನ್ನು ಸ್ಥಾಪಿಸಲು , ಪ್ರಚುರ ಪಡಿಸಲು , ಜನಪ್ರೀತಿ ಸಂಪಾದಿಸಲು ಮಂಡನೆ - ಖಂಡನೆಗಳು ಅನಿವಾರ್ಯ . ಇದು ಮಧ್ವರಿಗೂ ಸಹಜವಾಗಿ ಎದುರಾದ ಸಮಸ್ಯೆ . ಆದರೆ ಎಲ್ಲಾ ವಾದಗಳಿಗೆ ಸಮರ್ಥವಾಗಿ, ಸಮಾಧಾನಕರವಾಗಿ ಉತ್ತರಿಸಿ ದ್ವೈತ ವನ್ನು ಜನಪ್ರಿಯಗೊಳಿಸಿದರು . ಚಾರಿತ್ರಿಕ , ಧಾರ್ಮಿಕ ಸ್ಥಿತ್ಯಂತರ ತನ್ನ ಆಧ್ಯಾತ್ಮಿಕ ಗುರು ಅಚ್ಯುತ ಪ್ರಜ್ಞರಿಗೆ ಅಚ್ಚರಿಯನ್ನುಂಟು ಮಾಡುತ್ತಾ ಬೆಳೆದ ಪೂರ್ಣಪ್ರಜ್ಞರು ಆನಂದ ತೀರ್ಥರಾಗಿ ಮಧ್ವಾಚಾರ್ಯರೆಂದೇ ಪ್ರಸಿದ್ಧರಾದರು .ಸನ್ಯಾಸ ಸ್ವೀಕರಿಸಿ , ಪೂರ್ಣಪ್ರಜ್ಞರಾಗಿ ನಲುವತ್ತೆ ದಿನಗಳಲ್ಲಿ ವಾದವನ್ನು ಎದುರಿಸಿದರು , ಉಡುಪಿಗೆ ಬಂದಿದ್ದ ಆ ವಿದ್ವಾಂಸರನ್ನು ತರ್ಕದಲ್ಲಿ ಸೋಲಿಸಿದರು .ಬಾಲಕ ಯತಿಯ ಅದ್ಭುತ ಪ್ರತಿಭೆಗೆ ಗುರುಗಳಾದ ಅಚ್ಯುತ ಪ್ರಜ್ಞರು ತಲೆದೂಗಿದರು . ಮುಂದೊಂದು ದಿನ ಬುದ್ಧಿಸಾಗರನೆಂಬಾತ ತನ್ನ ಶಿಷ್ಯ ವಾದಿಸಿಂಹನೊಂದಿಗೆ ಅಚ್ಯುತಪ್ರಜ್ಞರ ಮಠಕ್ಕೆ ಆಗಮಿಸಿದ್ದ , ಈ ವಿದ್ವಾಂಸನನ್ನು ಪೂರ್ಣಪ್ರಜ್ಞರು ನಿರುತ್ತರಗೊಳಿಸಿದರು . ಸಂತುಷ್ಟರಾದ ಗುರು ಅಚ್ಯುತ ಪ್ರಜ್ಞರು ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಷೇಕಗೈದು " ಆನಂದತೀರ್ಥ" ರೆಂದು ಹೆಸರಿಸಿದ್ದು ಸಾರ್ಥಕವಾಯಿತೆಂದು ಸಮಾಧಾನಪಟ್ಟರು . ಮುಂದೆ ಎರಡುಬಾರಿ ಭಾರತದಾದ್ಯಂತ ಸಂಚರಿಸಿ ಹಲವು ವಿದ್ವಾಂಸರನ್ನು , ಚಿಂತಕರನ್ನು ವಾದದಲ್ಲಿ ಮಣಿಸಿದಾಗ ಕೆಲವರು ಶಿಷ್ಯರಾದರು . ಮಧ್ವರು ಅಂತ್ಯದ ದಶಕದವರೆಗೂ ವಾದಗಳನ್ನೆ ಎದುರಿಸಬೇಕಾಯಿತು . ' ತತ್ತ್ವವಾದ ' ವನ್ನು ಸ್ಥಾಪಿಸಿದರು . ಉಡುಪಿಯು ನಿಗಮಾಗಮಗಳು ನಿಗಿನಿಗಿಸುವ ನಿಕೇತನವಾಯಿತು. ನಿಸ್ಪೃಹ ಮನಸ್ಥಿತಿಯಿಂದ ನಿಸ್ಸೀಮ ಚಿಂತಕನೆನಿಸಿ ನೀಲಮೇಘಶ್ಯಾಮನಾದ ಕೃಷ್ಣನನ್ನು ಆರಾಧಿಸುತ್ತಾ ಒಂದು ಸುವ್ಯವಸ್ಥೆಯ ಕ್ಷೇತ್ರವನನ್ನು ಕಟ್ಟಿದರು .ನಿತ್ಯ ಉತ್ಸವದಂತಹ ವೈಭವದ ಭವ್ಯತೆಯನ್ನು ಕಲ್ಪಿಸಿ ದಿವ್ಯವಾದ ಕೃಷ್ಣ ಸಾನ್ನಿಧ್ಯ ಭಕ್ತಜನ ಕೋಟಿಯು ಶ್ರದ್ಧಾ ಕೇಂದ್ರವಾಯಿತು . ಅನ್ನ ಬ್ರಹ್ಮನ ಆರಾಧನೆ ಮುಂತಾದ ಅನೇಕ ಆ ಕಾಲಕ್ಕೆ ನೂತನವಾದ ವ್ಯವಸ್ಥೆಗಳನ್ನು ನೆಲೆಗೊಳಿಸಿ ಮಧ್ವರು ಜನಪದಕ್ಕೆ ಸಮೀಪವಾದರು . ಆದರೂ ಈ ತತ್ತ್ವವಾದಿ ವಾದದೊಳು ಉದ್ಭವಿಸಿದವರು . ಕಾಲ : 13ನೇ ಶತಮಾನ . ಚಾರಿತ್ರಿಕವಾಗಿ ಬದಲಾವಣೆಯ ಕಾಲ . ಧಾರ್ಮಿಕ - ಸಾಂಸ್ಕೃತಿಕ ಸ್ಥಿತ್ಯಂತರಗಳ ಸಂದರ್ಭ . ಅನ್ಯಸಂಸ್ಕೃತಿಗಳು ಧಾರ್ಮಿಕತೆಯನ್ನು ಅಲುಗಾಡಿಸುತ್ತಿದ್ದ ವೇಳೆ . ಆಚಾರ್ಯರು ಕಾಲದ , ಸಂದರ್ಭದ , ಮನೋಧರ್ಮಗಳ ಅನಿವಾರ್ಯತೆಯನ್ನು ಮನಗಂಡು ಕಾರ್ಯ ಸಾಧಿಸಿದರು .ಈ ಮಹಾತ್ಮ ತುಳುವ ತಾಯಿಯ ಮಗ ಎನ್ನುವುದು ನೆನಪಿಸಿಕೊಳ್ಳಲೇಬೇಕು . (ಬರಹ : ಕೆ . ಎಲ್ . ಕುಂಡಂತಾಯ) (ಮದ್ವಾಚಾರ್ಯರ ಕಾಲಿನ ಕೆಳಗಡೆ ಇರುವುದು ಮಣಿಮಂತ ರಾಕ್ಷಸ, ಈ ಫೋಟೋ ಮದ್ವಾಚಾರ್ಯರು ಮಣಿಮಂತ ರಾಕ್ಷಸನನ್ನು ಸಂಹರಿಸಿದ ಸ್ಥಳದಲ್ಲಿರುವ ಏಕಶಿಲೆಯದ್ದಾಗಿದೆ) ಅದರ ಕಥೆಯನ್ನು ಮುಂದಿನ ಭಾಗದಲ್ಲಿ ಬರೆಯಲಾಗುವುದು
ಸಂಕಷ್ಟದಲ್ಲಿರುವ ಜಾನುವಾರಿಗೆ ಮಿಡಿದ ಯುವಕರ ಕಾಯ೯ಕ್ಕೆ ವ್ಯಾಪಕ ಪ್ರಶoಸೆ

Posted On: 21-06-2020 12:29PM
ಉಡುಪಿ : ಇತ್ತೀಚೆಗೆ ಮಿಯಾರು ಬೋಕ೯ಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿರುವ ಗಬ್ಬದನ ವನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿರುವ ಸ್ಥಳೀಯರಾದ ರಾಜೇಶ್ ಶೆಟ್ಟಿ ಕುಟುಂಬ ಕೊರೋನಾ ವಾರಿಯರ್ಸ್ ಉಡುಪಿ ತoಡ ತಯಾರಿಸಿದ 21 ಭಾಷೆಯ ಅಡಿಯೋ ಕೇಳಿ ಸಹಾಯಕ್ಕೆ ಮನವಿ ಮಾಡಿರುತ್ತಾರೆ ಈ ಸಂದಭ೯ದಲ್ಲಿ ಮಂಗಳೂರಿನ ದೂರಸಂಪಕ೯ ಇಲಾಖೆಯ ಗೋಪಾಲ ಕೃಷ್ಣ ಪ್ರಭು ಜಾನುವಾರಿಗೆ ಬೇಕಾದ ಅಗತ್ಯ ಆಹಾರ ವಸ್ತುಗಳನ್ನು ಅದೇ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿದೇ೯ಶಕ ಡಾII ಸುಬ್ರಮಣ್ಯ ಪ್ರಸಾದ್ ರವರ ಸಹಕಾರ ಚಿಕಿತ್ಸೆಗೆ ಸಹಕರಿಸಿದ್ದಾರೆ.ಮಾಜಿ ಸಹಾಯಕ ತಹಶೀಲ್ದಾರ್ ಮಾತ೯ಮ್ಮ ರವರ ತೋಟದ ಹಟ್ಟಿಯಲ್ಲಿ ಈ ದನದ ಶುಶ್ರೂಷೆ ನಡೆಯುತ್ತಿದೆ.ಈ ಕಾಯ೯ಕ್ಕೆ ಪ್ರಸಾದ್ ಶೆಟ್ಟಿ, ರಮೇಶ್, ಸಂದೀಪ್ ಹೆಗ್ಡೆ ಸಹಕರಿಸುತ್ತಿದ್ದಾರೆ. ಇದೀಗ ದನದ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಕರೋನಾ ವಾರಿಯರ್ಸ್ ತಂಡದ ದೀಪಕ್, ರಾಘವೇಂದ್ರ ಕವಾ೯ಲು ಸಹಕರಿಸಿದರು. ಸಂಕಷ್ಟದಲ್ಲಿರುವ ಜಾನುವಾರಿಗೆ ಮಿಡಿದ ಈ ಯುವಕರ ಕಾಯ೯ಕ್ಕೆ ವ್ಯಾಪಕ ಪ್ರಶoಸೆ ವ್ಯಕ್ತವಾಗಿದೆ.
ಹುತಾತ್ಮ ಯೋಧರ ಬಲಿದಾನ ವ್ಯರ್ಥವಾಗಬಾರದು: ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ

Posted On: 20-06-2020 02:55PM
ಕಾಪು, 20.ಜೂನ್ : ಭಾರತಾಂಬೆಯ ಗಡಿ ರಕ್ಷಣೆಯಲ್ಲಿ ಕಾರ್ಯನಿರತರಾಗಿದ್ದ ಭಾರತೀಯ ಸೈನಿಕರು ಇತ್ತೀಚೆಗೆ ಕುತಂತ್ರಿ ಚೀನೀ ಸೈನಿಕರಿಂದ ಹತರಾಗಿರುವುದು ಅತ್ಯಂತ ಖೇದಕರ ಮತ್ತು ಖಂಡನೀಯ. ಚೀನೀ ಸೈನಿಕರು ಎಲ್ಲ ಗಡಿ ನಿಯಮ, ನಿರ್ಬಂಧಗಳನ್ನು ಉಲ್ಲಂಘಿಸಿ ಭಾರತದ ಸೈನಿಕರನ್ನು ಹತ್ಯೆಗೈದಿರಿವುದು ಮತ್ತು ದೇಶದ ಗಡಿಯಲ್ಲಿ ಉದ್ವಿಘ್ನತೆ ಹೆಚ್ಚುತ್ತಿರುವುದು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರ ಯೋಧರಿಗೆ ನಮ್ಮ ಭಾವಪೂರ್ಣ ನಮನಗಳು, ಹುತಾತ್ಮರಾದ ವೀರ ಯೋಧರ ಬಲಿದಾನ ವ್ಯರ್ಥವಾಗಬಾರದು, ಹಾಗೂ ಅವರ ಕುಟುಂಬವರ್ಗಕ್ಕೆ ಆತ್ಮಸ್ಥೈರ್ಯ ವನ್ನು, ಶಕ್ತಿಯನ್ನು ನೀಡಬೇಕು ಎಂದು ಹೇಳಿದರು. ಅವರು ಕಾಪು ರಾಜೀವ್ ಭವನದಲ್ಲಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷರಾದ ನವೀನಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರುಗಳಾದ ಕಾಪಿ ದಿವಾಕರ್ ಶೆಟ್ಟಿ, ಕೆ. ಇಬ್ರಾಹಿಂ ಮನಹರ್, ಪ್ರಧಾನ ಕಾರ್ಯದರ್ಶಿ ವೈ. ಸುಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೇ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಮೆಲ್ವಿನ್ ಡಿಸೋಜ, ಚರಣ್ ವಿಠ್ಠಲ್ ಕುದಿ,ಯು. ಸಿ.ಶೇಕಬ್ಬ,ದಿನೇಶ್ ಕೋಟ್ಯಾನ್,ಅಮೀರ್ ಮೊಹಮ್ಮದ್, ಅಬ್ದುಲ್ ಹಮೀದ್, ನಾಗೇಶ್ ಸುವರ್ಣ, ಕೆ. ಎಚ್. ಉಸ್ಮಾನ್, ಮಹಮ್ಮದ್ ಇಮ್ರಾನ್,ಪ್ರಭಾಕರ ಆಚಾರ್ಯ, ಶಾಂತಲತಾ ಶೆಟ್ಟಿ, ಸೌಮ್ಯಾ ಎಸ್., ಅಶ್ವಿನಿ.ಎನ್., ಸುನಿಲ್ ಬಂಗೇರ, ಪ್ರಶಾಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾಪುವಿನಲ್ಲಿ ಮೀನು ಮಾರುತ್ತಿದ್ದ ವೃದ್ಧೆಯ ಕಾಲಿನ ಸಮಸ್ಯೆಗೆ ನೆರವಾಗುವಿರಾ?

Posted On: 20-06-2020 01:34PM
ಹಾಸಿಗೆ ಹಿಡಿದು ನಡೆದಾಡಲು ಹಂಬಲಿಸುವ ವೃದ್ಧೆಗೆ ನೆರವಾಗುವಿರಾ? ಬ್ರಹ್ಮಾವರ.20,ಜೂನ್ : ಗಂಗು ಕಾಂಚನ್ ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ವಾಸವಿದ್ದು, ಮೀನಿನ ಬುಟ್ಟಿ ಹೊತ್ತು ಮನೆ ಮನೆ ಸಾಗಿ ದಿನದ ಖರ್ಚಿನ ಹಣ ಸರಿದೂಗಿಸುತ್ತಿದ್ದವರು. ಕಾಪು ಭಾಗದಲ್ಲಿ ಕೂಡಾ ಮೀನು ಮಾರಲು ಮೀನಿನ ಬುಟ್ಟಿ ಹೊತ್ತು ಬರುತ್ತಿದ್ದರು ದುರಾದೃಷ್ಟವಶಾತ್ ಕೆಲವು ವರ್ಷಗಳಿಂದ ನಡೆದಾಡುವ ಕಾಲಿನ ಕೀಲು ಸಮಸ್ಯೆಯಿಂದ ಎದ್ದು ನಿಲ್ಲಲೂ ಸಾಧ್ಯವಾಗದೆ ಜೊತೆಗೆ ದುಡಿಮೆಯೂ ಇಲ್ಲದೆ, ಅತ್ತ ಪೋಷಕರೂ ಇರದೆ ಕಂಗಾಲಾಗಿದ್ದರು. ಇವರ ದಯನೀಯ ಪರಿಸ್ಥಿತಿಯನ್ನು ಮನಗಂಡ ಬ್ರಹ್ಮಾವರ ' ಅಪ್ಪ-ಅಮ್ಮ ಅನಾಥಾಲಯ'ದ ಸಂಚಾಲಕ ಪ್ರಶಾಂತ್ ಪೂಜಾರಿ ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿ ರಕ್ಷಣೆ ನೀಡಿದ್ದಾರೆ. ಇವರನ್ನು ವಿವಿದ ಆಸ್ಪತ್ರೆಗಳಲ್ಲಿ ಪರೀಕ್ಷಿಸಲಾಗಿದ್ದು, ಚಿಕಿತ್ಸೆಗೆ ಸುಮಾರು ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಖರ್ಚು ಮಾಡಬೇಕಿದೆ. ಅಜ್ಜಿಗೆ ಒಂದು ಕಡೆ ದೈಹಿಕ ನೋವು. ಇನ್ನೊಂದು ಕಡೆ ಕಾಲುಗಳನ್ನು ಕಳೆದುಕೊಳ್ಳುವ ಆತಂಕ. ಹೀಗಾಗಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಪ್ರಶಾಂತ್ ಪೂಜಾರಿಯವರು ತಮ್ಮ ಆಶ್ರಮದಲ್ಲಿ 21 ಮಂದಿ ನಿರ್ಗತಿಕರನ್ನು ಜೊತೆಯಾಗಿ ಇರಿಸಿಕೊಂಡು ಎಲ್ಲಾ ರೀತಿಯ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುತ್ತಿದ್ದಾರೆ. ದಾನಿಗಳ ನೆರವು ಸಿಕ್ಕಲ್ಲಿ ಅಜ್ಜಿಯನ್ನು ಸ್ವಂತ ಕಾಲಿನಲ್ಲಿ ನಿಲ್ಲಿಸುವ ತವಕವೂ ಅವರಲ್ಲಿದೆ. ಸಹೃದಯಿ ಬಂಧುಗಳು , ಸಂಘಸಂಸ್ಥೆಗಳು ತಮ್ಮಿಂದ ಸಾಧ್ಯವಾದಷ್ಟು ನೆರವನ್ನು ನೀಡಿ ಸಹಕರಿಸಿ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ. ಅಪ್ಪ-ಅಮ್ಮ ಅನಾಥಾಲಯ ಬ್ರಹ್ಮಾವರ (ಉಚಿತ ಸೇವೆ) ಸಂಚಾಲಕರು- ಪ್ರಶಾಂತ್ ಪೂಜಾರಿ ಕೂರಾಡಿ. ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ). ಕೂರಾಡಿ ಅಪ್ಪ ಅಮ್ಮ- ಅನಾಥಾಲಯ(ಉಚಿತ ಸೇವೆ) :9164765898,9986111989 ಆಶ್ರಮಕ್ಕೆ ದೇಣಿಗೆ ಅಥವಾ ಧನ ಸಹಾಯ ನೀಡಲು ಇಚ್ಚಿಸುವವರು ನೇರವಾಗಿ ಆಶ್ರಮಕ್ಕೆ ಬೇಟಿ ನೀಡಿ ಅಥವಾ ಬ್ಯಾಂಕ್ ನ ಖಾತೆ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ (ರಿ.)ಕೂರಾಡಿ 1 ಕರ್ನಾಟಕ ಬ್ಯಾಂಕ್ ಉಪ್ಪಿನಕೋಟೆ A/c no.7172000100017301 IFSC Code: KARB0000717 2 ಕೆನರಾ ಬ್ಯಾಂಕ್ ಕುರಾಡಿ A/c No.02103070000145, IFSC CODE:SYNB0000210 ಸಂಖ್ಯೆಗೆ ಜಮಾ ಮಾಡಬಹುದಾಗಿದೆ. Google pay & Phone pay.9164765898
ಸೂರ್ಯ ನಮಸ್ಕಾರದಲ್ಲಿ ವಿಶ್ವ ದಾಖಲೆಯತ್ತ ಉಡುಪಿಯ ರೇಣು ಗೋಪಿ

Posted On: 20-06-2020 11:55AM
ಸೂರ್ಯ ನಮಸ್ಕಾರ ಮಾಡಿ ಗಿನ್ನಿಸ್ ದಾಖಲೆ ಮಾಡಲು ಹೊರಟ ರೇಣು ಗೋಪಿ ಸೂರ್ಯ ನಮಸ್ಕಾರ : ಗಿನ್ನಿಸ್ ದಾಖಲೆಯತ್ತ ರೇಣು ಗೋಪಿ… ಉಡುಪಿ : ಶ್ರೀಮತಿ ರೇಣುಕಾ ಶುಭಪ್ರದ ಪೆರಂಪಳ್ಳಿ ಉಡುಪಿ ಜಿಲ್ಲೆಯ ಇವರು 108 ಬಾರಿ ಸೂರ್ಯನಮಸ್ಕಾರವನ್ನು ಬರೇ 15 ನಿಮಿಷದಲ್ಲಿ ಮುಗಿಸಿ ವಿಶ್ವದಾಖಲೆ ಗಿನ್ನಿಸ್ ರೆಕಾರ್ಡ್ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು, ಅದೇ ಸಂದರ್ಭದಲ್ಲಿ ವಕ್ಕರಿಸಿಕೊಂಡ ಕೊರೊನ ಲಾಕ್ಡೌನ್ ನಿಂದಾಗಿ ಇನ್ನು ಕೂಡ ಸಾಧನೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಇವರು ಪೆರಂಪಳ್ಳಿ ದೊಡ್ಡಣ್ಣಗುಡ್ಡೆ ಪರಿಸರದಲ್ಲಿ ಗೋಪಿ ರಾಧಿಕಾ ಎಂದು ಕರೆಸಿಕೊಳ್ಳುತ್ತಿದ್ದ ಇವರಿಗೆ ಬೆನ್ನೆಲುಬಾಗಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಅವರ ಪತಿ ಗೋಪಾಲಕೃಷ್ಣ ಹಾಗೂ ಬಂಧುಗಳು ಮತ್ತು ಸ್ನೇಹಿತರು ಇವರೆಲ್ಲರ ಪ್ರೇರಣೆಯಿಂದ ಮತ್ತು ಪ್ರೋತ್ಸಾಹದಿಂದ, ಈ ಒಂದು ಕಾರ್ಯದ ಯಶಸ್ವಿಗೆ ನೀವು ಕೂಡ ಸಹಕರಿಸಬೇಕಾಗಿ ಗೋಪಿ ರಾಧಿಕಾ ಅವರು ವಿನಂತಿಸಿಕೊಂಡಿದ್ದಾರೆ. ಅಂದ ರೇಣು ಗೋಪಿ ಇಷ್ಟೆಲ್ಲಾ ಹರಸಾಹಸ ಮಾಡುತ್ತಿರುವುದು ಯಾವುದೇ ಗುರುಗಳ ಸಹಾಯವಿಲ್ಲದೆ, ನುರಿತ ಯೋಗ ಗುರುಗಳ ಅವಶ್ಯಕತೆ ಇದೆ, ಇದರಿಂದ ಇನ್ನಷ್ಟು ಸಾಧನೆ ಮಾಡಬಹುದು ಅನ್ನುತ್ತಾರೆ ರೇಣು ಗೋಪಿ, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬ ನಾಣ್ಣುಡಿ ಅಕ್ಷರಶಹ ಸತ್ಯ ಎಂಬುದು ಇಲ್ಲಿ ತಿಳಿಯಬಹುದು.
ಕುಂದಾಪುರ : ಮೈ ಸುಟ್ಟುಕೊಂಡ ಎರಡು ವರ್ಷದ ಮಗು ಶ್ರಿಯಾಗೆ ನೆರವಾಗುವಿರಾ?

Posted On: 18-06-2020 09:32PM
ಮೊನ್ನೆ ದಿನ ಮನೆಯೊಳಗೆ ಆಟ ಆಡುತ್ತಿದ್ದ ಕೋಟ ಯಜ್ಙೇಶ ಆಚಾರ್ರ ಎರಡು ವರುಷದ ಮಗು ಶ್ರೀಯಾ ಆಡುತ್ತಾ ಆಡುತ್ತಾ ದೇವರ ಕೋಣೇಯೊಳಗೆ ಹೋಗಿದೆ.ಅಲ್ಲಿ ಉರಿಯುತ್ತಿದ್ದ ದೀಪ ಮಗುವಿನ ಬಟ್ಟೆಗೆ ತಾಗಿ ಬೆಂಕಿ ಹತ್ತಿಕೊಂಡಿದೆ, ಮಗು ಕಿರುಚಿಕೊಂಡು ಮನೆಯವರು ಓಡೋಡಿ ಬರುವುದರೊಳಗೆ ಮಗುವಿನ ದೇಹ ಭಾಗಶಃ ಸುಟ್ಟು ಹೋಗಿದೆ..ಕೂಡಲೆ ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್ಗೆ ಸೇರಿಸಲಾಯಿತಾದರೂ,ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ದಾಖಲಿಸಿ ಎಂದಿದ್ದಾರೆ ವೈದ್ಯರು.. ಅಲ್ಲಿಂದ ಮಣಿಪಾಲಕ್ಕೆ ಕೊಂಡೊಯ್ದು ಮಗು ಈಗ ತೀವೃ ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದೆ.. ಆ ಎರಡು ವರುಷದ ಹೆಣ್ಣು ಮಗು ಸುಟ್ಟ ಉರಿಯಲ್ಲಿ ಅದೇಷ್ಟು ಕಷ್ಟ ಅನುಭವಿಸುತ್ತಿದೆಯೋ ಏನೊ..? ಒಮ್ಮೊಮ್ಮೆ ದೇವರು ಯಾಕೆ ಅಷ್ಟೊಂದು ಕ್ರೂರಿ ಅನ್ನಿಸುತ್ತದೆ. ಬೆಳಿಗ್ಗೆ ಮಗುವಿನ ಸುಟ್ಟ ಮೈಯ ಪೋಟೊ ಕಂಡವನಿಗೆ ಭಾರೀ ಸಂಕಟವಾಗಿ ಬಿಟ್ಟಿತು.. ಮಕ್ಕಳೇನಾದರೂ ಸಣ್ಣ ಗಾಯ ಮಾಡಿಕೊಂಡರೆ ಹೆತ್ತ ಕರುಳಿಗೆ ಸಹಿಸುವುದೇ ಕಷ್ಟ ವಾಗುತ್ತದೆ, ಅದರಲ್ಲೂ ಎರಡು ವರುಷದ ಹಸುಳೆ ಕಂದಮ್ಮ ಮೈತುಂಬಾ ಸುಟ್ಟುಕೊಂಡು ಪಡಿಪಾಟಲು ಪಡುತ್ತಿರಬೇಕಾದರೆ ಆ ಹೆತ್ತ ಜೀವಗಳಿಗೆ ಹೇಗಾಗಬೇಡ ಹೇಳಿ?? ಈ ಮಗುವಿನ ತಂದೆ ಸ್ವಿಗ್ಗಿ ಕಂಪೆನಿಯಲ್ಲಿ ಸಣ್ಣದೊಂದು ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದವರಿಗೆ ಇದೀಗ ಏಕಾಏಕಿ ಮಣಿಪಾಲದ ಆಸ್ಪತ್ರೆಯ ಬಿಲ್ಲು ನೋಡಿ ದಿಕ್ಕೇ ತೋಚದಂತಾಗಿದೆ.. ಹಿಂದೊಮ್ಮೆ ನಾವೆಲ್ಲಾ ಇಂತಹುದೇ ಒಂದು ಮಾನವೀಯ ಅಂತಃಕರಣದ ಅಭಿಯಾನದಲ್ಲಿ ಜೊತೆಯಾದವರು.. ಇಂದು ಕೂಡ ಮಗು ಶ್ರೀಯಾಳ ಈ ಕಷ್ಟಕ್ಕೆ ನಾವೆಲ್ಲಾ ಕೈ ಜೋಡಿಸಬೇಕಿದೆ. ನೀವೆಲ್ಲಾ ಜೊತೆಯಾಗಲಿದ್ದಿರಿ ಎನ್ನುವ ತುಂಬು ನಂಬಿಕೆ ನಮ್ಮದು. ಇದು ಶ್ರೀಯಾಳ ತಂದೆ ಯಜ್ಙೇಶ್ ಆಚಾರ್ ಅಕೌಂಟ್ ಡಿಟೈಲ್ಸ್.. ಗೆಳೆಯರೇ ನಮ್ಮೀ ಜಗತ್ತಿನಲ್ಲಿ ಮಾನವೀಯತೆಯ ಒರತೆ ಎಂದೂ ಬತ್ತದೇ ಇರಲಿ ಅಲ್ವಾ? ಮಗುವಿನ ತಂದೆಯ ಅಕೌಂಟ್ ಡಿಟೈಲ್ಸ್. Yajnesh achar Ac.No 4152500101055101 Ifsc- KARB0000415 Branch - kumbhshi Google pay/ phone pay/paytm 7892770492 ಪ್ರವೀಣ್ ಯಕ್ಷಿಮಠ
ಉಡುಪಿ.ಜೂನ್,18 : ಕೊರೊನಾ ನಿಯಂತ್ರಣ ಅಭಿಯಾನ. ಮಾಸ್ಕ್ ದಿನಾಚರಣೆ.

Posted On: 18-06-2020 06:32PM
ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರಿಂದ, ಕೊರೊನಾ ನಿಯಂತ್ರಣ ಅಭಿಯಾನ, ಮಾಸ್ಕ್ ದಿನಾಚರಣೆ ಕಾರ್ಯಕ್ರಮವು ಮಾರುಥಿ ವಿಥೀಕಾದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಅವರು, ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ನಿಯಂತ್ರಿಸುವ ಮುನ್ನೆಚ್ಚರಿಕೆಯ ಅಗತ್ಯ ಕ್ರಮಗಳನ್ನು ಹೇಳಿದರು. ಸಾಯಿರಾಂ ಬಟ್ಟೆ ಮಳಿಗೆಯವರು ಉಚಿತವಾಗಿ ಒದಗಿಸಿದ ಹತ್ತಿಬಟ್ಟೆ ಬಳಸಿಕೊಂಡು, ಕ್ಲಾಸಿಕ್ ಟಚ್ ಟೈಲರ್ಸ್ ತಂಡದವರು ತಯಾರಿಸಿದ, 6 ಅಡಿ ಉದ್ದ, 5 ಅಡಿ ಅಗಲದ ಬೃಹತ್ ಗಾತ್ರದ ಮಾಸ್ಕ್ ಪ್ರದರ್ಶನವು ನಡೆಯಿತು. ಬೃಹತ್ ಗಾತ್ರದ ಮಾಸ್ಕ್ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಕೊರೊನಾ ನೊಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಕ್ತಿವೇಲು ಸಂಪನ್ಮೂಲ ಅತಿಥಿಗಳಾಗಿದ್ದರು. ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರಾಸ್ತವಿಕ ನುಡಿಗಳಾಡಿದರು. ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ವಂದಿಸಿದರು. ರಾಜೇಶ ಶೆಟ್ಟಿ, ರಾಘವೇಂದ್ರ ಪ್ರಭು,ಕರ್ವಾಲು, ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.