Updated News From Kaup
ರಾಜ್ಯ ಮತ್ತು ಕೇಂದ್ರ ಸರಕಾರದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ಇದೀಗ ಕಾಪುವಿನಲ್ಲಿ ಕೋಸ್ಟಲ್ ವಿಂಗ್ಸ್ ಅಕಾಡೆಮಿ ಸಂಸ್ಥೆ
Posted On: 10 Jan 2021, 05:36 PM
ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಬಯಸುವ ಅಭ್ಯರ್ಥಿಗಳಿಗೆ ಕಾಪುವಿನ ಕೋಸ್ಟಲ್ ವಿಂಗ್ಸ್ ಅಕಾಡೆಮಿಯಲ್ಲಿ ಪರಿಣಿತ ತರಬೇತುದಾರರಿಂದ ಪರೀಕ್ಷಾ ಪೂರ್ವ ತರಬೇತಿ ಸಿಗಲಿದೆ. ಪೊಲೀಸ್ ಕಾನ್ಸ್ಟೇಬಲ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪಿಡಿಒ, ಎಫ್ ಡಿ ಎ/ ಎಸ್ ಡಿ ಎ, ಕೆಎಎಸ್, ರೈಲ್ವೆ, ಪೋಸ್ಟಲ್, ಶಿಕ್ಷಕರ ಅರ್ಹತಾ ಪರೀಕ್ಷೆ, ಗ್ರೂಪ್ ಸಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸಿಗಲಿದೆ. ಕಾಪು ಹೊಸ ಮಾರಿಗುಡಿ ಸಮೀಪದ ಹೀರ ಕಾಂಪ್ಲೆಕ್ಸಿನ ಎರಡನೆಯ ಮಹಡಿಯಲ್ಲಿ ಕೋಸ್ಟಲ್ ವಿಂಗ್ಸ್ ಅಕಾಡೆಮಿ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ : + 91 8073679442 +91 8296589648
ಮಡುಂಬು : ಯುವಸೇನೆ ಮಡುಂಬು ತಂಡದಿಂದ ಕರಸೇವೆ
Posted On: 10 Jan 2021, 05:33 PM
ಕಾಪು ತಾಲೂಕಿನ ಮಡುಂಬು ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಇಂದು ಯುವಸೇನೆ ಮಡುಂಬು ಯುವಕರ ತಂಡದಿಂದ ದೇವಸ್ಥಾನದ ಉತ್ಸವದ ಪೂರ್ವ ತಯಾರಿಯಾಗಿ ಕರಸೇವೆ ಮಾಡಿದರು.
ಉಳಿಯಾರಗೋಳಿ : ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ
Posted On: 10 Jan 2021, 05:30 PM
ಕಾಪು ಉಳಿಯಾರಗೋಳಿ ಪೂವಣಿ ಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಬಬ್ಬುಸ್ವಾಮಿ, ಧೂಮಾವತಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ಶನಿವಾರದಿಂದ ಪ್ರಾರಂಭಗೊಂಡು ಆದಿತ್ಯವಾರದವರೆಗೆ ಭಕ್ತಾಭಿಮಾನಿಗಳ ಸೇರುವಿಕೆಯಲ್ಲಿ ಸಂಪನ್ನಗೊಂಡಿತು.
ಶಂಕರಪುರ ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ಪದಗ್ರಹಣ : ಅಧ್ಯಕ್ಷರಾಗಿ ರಾಯನ್ ಫೆರ್ನಾಂಡಿಸ್
Posted On: 09 Jan 2021, 11:36 PM
ಕಾಪು : ಶಂಕರಪುರದ ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ 2021 - 22ನೇ ಸಾಲಿನ ಪದಗ್ರಹಣವು ಶಂಕರಪುರದ ಸೈಂಟ್ ಜೋನ್ಸ್ ಅಕಾಡೆಮಿ ಹಾಲ್ ನಲ್ಲಿ ಜರಗಿತು. ಸಮಾರಂಭವನ್ನು ಶಂಕರಪುರ ಸೈಂಟ್ ಜೋನ್ಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂದನೀಯ ಗುರು ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಶಾಕ್ ಜಿ. ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಸ್ಥೆಯ ಹಳೆ ವಿದ್ಯಾರ್ಥಿಗಳನ್ನು ಹಾಗೂ ಎಲ್ಲಾ ಪೂರ್ವಧ್ಯಕ್ಷರನ್ನು ಗೌರವಿಸಲಾಯಿತು ಈ ಸಂದರ್ಭದಲ್ಲಿ ನವೀನ್ ಅಮೀನ್ ಶಂಕರಪುರ ಹಳೆ ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆಯನ್ನು ತಿಳಿಸಿದರು. ಶಂಕರಪುರದ ಸೈಂಟ್ ಜೋನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಿಯಾ ಡೆಸಾ, ಶಂಕರಪುರ ಸೈಂಟ್ ಜೋನ್ಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅಶ್ವಿನ್ ರೋಡ್ರಿಗಸ್, ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿಯ ಮುಖ್ಯ ಶಿಕ್ಷಕಿಯಾದ ಸಿ. ಜುಲಿಯಾನ ಲಸ್ರಾದೊ, ಶಂಕರಪುರ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಐರಿನ್ ಡಿಸೋಜಾ, 2020-21 ನೇ ಸಾಲಿನ ರಾಯನ್ ಫೆರ್ನಾಂಡಿಸ್, ಕಾರ್ಯದರ್ಶಿ ವೀಣಾ ಡಿಸೋಜಾ, 2021-22ನೇ ಸಾಲಿನ ನೂತನ ಅಧ್ಯಕ್ಷರಾದ ರಾಯನ್ ಫೆರ್ನಾಂಡಿಸ್ ,ಕಾರ್ಯದರ್ಶಿ ಪ್ರಥಮ್ ಡಿಸೋಜಾ, ಖಜಾಂಚಿ ಶ್ರೀಮತಿ ಸುನೀತ ಲೀನಾ ಡಿಸೋಜಾ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಶೆಟ್ಟಿಗೆ ಯುಎಇ ಗೋಲ್ಡನ್ ವೀಸಾ
Posted On: 09 Jan 2021, 11:02 PM
ದುಬೈ: ದುಬೈನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕ ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ಯುಎಇ ಸರ್ಕಾರ ಹತ್ತು ವರ್ಷದ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ದುಬೈನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಎಂಬ ಹೆಸರಿನಲ್ಲಿ ಉದ್ಯಮ ಆರಂಭಿಸಿ ಬಹುದೊಡ್ಡ ಯಶಸ್ಸು ಕಂಡು ಯುಎಇ ಪ್ರವಾಸೋದ್ಯಮದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿರುವ ಇವರನ್ನು ಗುರುತಿಸಿ ದುಬಾಯಿ ಸರ್ಕಾರ ಈ ಗೌರವ ಪುರಸ್ಕಾರ ನೀಡಿದೆ. ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಈಗಾಗಲೇ ದುಬೈನಾದ್ಯಂತ ಸುಮಾರು ಏಳು ಹೋಟೆಲ್ಗಳನ್ನು ಹೊಂದಿದ್ದು, ಇದೀಗ ಹೊಸದಾಗಿ ಆರಂಭವಾದ ಫಾರ್ಚುನ್ ಅಟ್ಟಿಯಮ್ ಹೋಟೆಲ್ಗೆ ನಿನ್ನೆ ಆಗಮಿಸಿದ ದುಬೈ ಟೂರಿಸಂ ನ ಜನರಲ್ ಡೈರೆಕ್ಟರ್, ದುಬೈ ಪ್ರವಾಸೋದ್ಯಮಕ್ಕೆ ಮುಖ್ಯ ಕೊಡುಗೆ ನೀಡುತ್ತಿರುವ ಪ್ರವೀಣ್ ಶೆಟ್ಟಿ ವಕ್ವಾಡಿ ಅವರನ್ನು ಗೌರವಿಸಿ ಅಭಿನಂದಿಸಿದರು.
ಇನ್ನಂಜೆ : ದೇವಿ ಮಹಾತ್ಮೆ ಯಕ್ಷಗಾನ , ವಿಶೇಷ ಅತಿಥಿ ಪಾತ್ರದಲ್ಲಿ ಭೋಜರಾಜ್ ವಾಮಂಜೂರು
Posted On: 09 Jan 2021, 09:11 PM
ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬುವಿನ ಶ್ರೀನಿವಾಸ ತಂತ್ರಿಯವರ ಮನೆ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಇದೇ ಬರುವ ಸೋಮವಾರ ಸಂಜೆ 7ರಿಂದ ನಡೆಯಲಿದೆ. ವಿಶೇಷ ಅತಿಥಿ ಪಾತ್ರದಲ್ಲಿ ಚಲನಚಿತ್ರ ಕಲಾವಿದ, ಹಾಸ್ಯ ನಟ ಭೋಜರಾಜ್ ವಾಮಂಜೂರು ಅಭಿನಯಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಂ. ಬಿ. ಕುಕ್ಯಾನ್ ನಿಧನ
Posted On: 09 Jan 2021, 08:57 PM
ಸಾಹಿತಿ, ಅಕ್ಷಯ ಪತ್ರಿಕೆಯ ಸಂಪಾದಕರು, ಭಾರತ್ ಬ್ಯಾಂಕ್ ನ ಮಾಜಿ ಕಾರ್ಯಧ್ಯಕ್ಷರು ಆದ ಎಂ. ಬಿ. ಕುಕ್ಯಾನ್ ರವರು ಇಂದು ಮುಂಜಾನೆ 4-30 ಕ್ಕೆ ನಿಧನರಾಗಿದ್ದಾರೆ.
ಪಡುಬಿದ್ರಿ : ಕಲ್ಲಟ್ಟೆ ಶ್ರೀ ಜಾರಂದಾಯ ಬಂಟ ದೈವದ ವಾರ್ಷಿಕ ನೇಮೋತ್ಸವ
Posted On: 07 Jan 2021, 03:44 PM
ಕಲ್ಲಟ್ಟೆ ಶ್ರೀ ಜಾರಂದಾಯ ಬಂಟ ದೈವದ ನೇಮೋತ್ಸವವು ಇದೇ ಬರುವ ಶನಿವಾರ 16ರಂದು ನಡೆಯಲಿದೆ. ಬೆಳಿಗ್ಗೆ 9ಕ್ಕೆ ಕಲ್ಲಟ್ಟೆ ಗುತ್ತು ಮೂಲ ಕುಟುಂಬಸ್ಥರಿಂದ ಕಲ್ಲಟ್ಟೆಗುತ್ತು ನಾಗಬನದಲ್ಲಿ ಆಶ್ಲೇಷಾ ಬಲಿ ಸೇವೆ,10:30 ಕ್ಕೆ ಚಪ್ಪರ ಮುಹೂರ್ತ, ಮಧ್ಯಾಹ್ನ 12 ಗಂಟೆಗೆ ಕಲ್ಲಟ್ಟೆ ಶ್ರೀ ಜಾರಂದಾಯ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ 6ಕ್ಕೆ ಭಂಡಾರ ಇಳಿಯುವುದು, 10 ರಿಂದ ನೇಮೋತ್ಸವ, ರಾತ್ರಿ ಗಂಟೆ 2ರಿಂದ ಶ್ರೀ ಜಾರಂದಾಯ ಬಂಟ ದೈವ ಮತ್ತು ಸಂತೆಕಟ್ಟೆ ಶ್ರೀ ಕೋರ್ದಬ್ಬು ದೈವಗಳ ಭೇಟಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತೊಕ್ಕೊಟ್ಟು ಅಕ್ರಮ ಗೋ ಮಾಂಸ ಸ್ಟಾಲ್ ವಿರುದ್ಧ ದೂರು
Posted On: 07 Jan 2021, 03:01 PM
ತೊಕ್ಕೊಟ್ಟು ಒಳಪೇಟೆ ಮೀನುಮಾರುಕಟ್ಟೆ ಹತ್ತಿರ ರೈಲ್ವೆಗೆ ಸೇರಿದ ಸ್ಥಳದಲ್ಲಿ ಅಕ್ರಮವಾಗಿ ದನದ ಮಾಂಸದ ಸ್ಟಾಲ್ ತೆರೆದಿದ್ದು,ಇದರ ವಿರುದ್ಧ ಉಳ್ಳಾಲ ನಗರಸಭೆಯ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹಾಗೂ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ರವರಿಗೆ ವಿಶ್ವ ಹಿಂದು ಪರಿಷತ್ ಬಜರಂಗದಳದ ಉಳ್ಳಾಲ ನಗರ ಪ್ರಖಂಡ ವತಿಯಿಂದ ಮನವಿ ಸಲ್ಲಿಸಲಾಯಿತು. ಉಳ್ಳಾಲ ನಗರ ಪ್ರಖಂಡದ ಸಂಚಾಲಕ್ ಅರ್ಜುನ್ ಮಾಡೂರು ಜಿಲ್ಲಾ ಸಹಗೋರಕ್ಷ ಪ್ರಮುಖ್ ಪವಿತ್ರ್ ಕೆರೆಬೈಲ್,ಪ್ರಖಂಡ ಗೋರಕ್ಷ ಪ್ರಮುಖ್ ರಕ್ಷಿತ್ ತೊಕ್ಕೊಟ್ಟು, ಸಾಪ್ತಾಹಿಕ ಪ್ರಮುಖ್ ಕೌಶಿಕ್ ಉಳ್ಳಾಲ ಬೈಲ್ ಉಪಸ್ಥಿತರಿದ್ದರು.
ಪಣಿಯೂರು : ಪಡುಬಿದ್ರಿ ರೈಲು ನಿಲ್ದಾಣದ ಹೆಸರು ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮಾಲೋಚನಾ ಸಭೆ
Posted On: 07 Jan 2021, 10:55 AM
ಕಾಪು : ಬೆಳಪು ಗ್ರಾಮದ ಪಣಿಯೂರಿನಲ್ಲಿ ಇರುವ ಪಡುಬಿದ್ರಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ, ಬೆಳಪು ರೈಲು ನಿಲ್ದಾಣ ಎಂದು ಪುನರ್ ನಾಮಕರಣ ಮಾಡುವಂತೆ ಹಾಗೂ ರೈಲ್ವೇ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಜೋಡಿಸಿ ಮುಂಬಯಿ - ಬೆಂಗಳೂರು ರೈಲುಗಳಿಗೆ ನಿಲುಗಡೆಗೆ ಒತ್ತಾಯಿಸಿ ಸುತ್ತಲಿನ ಗ್ರಾಮದ ಜನರನ್ನು ಸೇರಿಸಿಕೊಂಡು ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ವಠಾರದಲ್ಲಿ ಮಂಗಳವಾರ ಸಮಾಲೋಚನಾ ಸಭೆ ನಡೆಸಲಾಯಿತು. ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಬೆಳಪು ಗ್ರಾ.ಪಂ. ಮಾಜಿ ಸದಸ್ಯ ಕರುಣಾಕರ ಶೆಟ್ಟಿ ಪಣಿಯೂರು ಮಾತನಾಡಿ, ಬೆಳಪು ಗ್ರಾಮದಲ್ಲಿ ಇರುವ ರೈಲು ನಿಲ್ದಾಣವು ಪಡುಬಿದ್ರಿ ನಿಲ್ದಾಣ ಎಂಬ ಹೆಸರಿನೊಂದಿಗೆ ಕರೆಯಲ್ಪಡುತ್ತಿದ್ದು ಇದರೊಂದಿಗೆ ವಿವಿಧ ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗಿದೆ. ಮುಂಬಯಿಗೆ ಹೋಗುವ ರೈಲು ಆದರೂ ನಿಲುಗಡೆಯಾಗುತ್ತದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಈ ಬಗ್ಗೆ ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ನಾವೆಲ್ಲರೂ ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಇದ್ದ ರೈಲುಗಳ ನಿಲುಗಡೆಯ ಅವಕಾಶದಿಂದಲೂ ವಂಚಿತರಾಗಬೇಕಾದೀತು ಎಂದರು. ಪತ್ರಕರ್ತ ರಾಕೇಶ್ ಕುಂಜೂರು ಬೆಳಪು ರೈಲು ನಿಲ್ದಾಣ, ರೈಲ್ವೇ ಟ್ರಾಕ್ ನ್ನು ದಾಟಿಕೊಂಡು ಹತ್ತಾರು ಕುಟುಂಬಗಳು ನಡೆದಾಡುತ್ತಿದ್ದು, ಕೃಷಿ ಕೆಲಸ ಕಾರ್ಯಗಳಿಗೂ ತೊಂದರೆಯುಂಟಾಗುತ್ತಿದೆ. ಕೊಂಕಣ ರೈಲು ಮಾರ್ಗಕ್ಕಾಗಿ ಹಲವಾರು ಕುಟುಂಬಗಳು ಭೂಮಿಯನ್ನು ಕಳೆದುಕೊಂಡಿದ್ದು, ಅವರಿಗೆ ಸರಿಯಾಗಿ ಉದ್ಯೋಗವೂ ಸಿಕ್ಕಿಲ್ಲ. ಕನಿಷ್ಟ ಪಕ್ಷ ಸ್ಥಳೀಯ ಜನರ ಬೇಡಿಕೆಯಂತೆ ಮುಂಬಯಿ - ಬೆಂಗಳೂರು ರೈಲುಗಳ ನಿಲುಗಡೆಯ ಬೇಡಿಕೆಯಾದರೂ ಈಡೇರಲಿ ಎಂಬ ಆಶಯದೊಂದಿಗೆ ನಾವು ಹೋರಾಟ ನಡೆಸಬೇಕಿದೆ ಎಂದರು. ಬಿಜೆಪಿ ಮುಖಂಡ ಸುರೇಂದ್ರ ಪಣಿಯೂರು ಮಾತನಾಡಿ, ಬೆಳಪು ಮಾತ್ರವಲ್ಲದೇ ಸುತ್ತಲಿನ ಉಚ್ಚಿಲ, ಎರ್ಮಾಳು, ಪಡುಬಿದ್ರಿ, ಎಲ್ಲೂರು, ಮುದರಂಗಡಿ, ಮಜೂರು, ಕುತ್ಯಾರು, ಶಿರ್ವ ಆಸುಪಾಸಿನ ಗ್ರಾಮಗಳ ಜನತೆಯ ಅನುಕೂಲಕ್ಕಾಗಿ ಬೆಳಪು ರೈಲು ನಿಲ್ದಾಣ ಮೇಲ್ದರ್ಜೆಗೇರಬೇಕಿದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆಗೆ ಮಾತುಕತೆ ನಡೆಸಲು, ವಿವಿಧ ಜನಪ್ರತಿನಿಧಿಗಳ ಬಳಿಗೆ ನಿಯೋಗ ತೆರಳುವ ಅಗತ್ಯತೆಯಿದೆ. ರೈಲು ನಿಲ್ದಾಣ ಮೇಲ್ದರ್ಜೆಗೇರುವ ಮತ್ತು ರೈಲು ನಿಲುಗಡೆಯ ಹೋರಾಟಕ್ಕೆ ನಾವೆಲ್ಲರೂ ಜೊತೆಗೂಡಿ ಕೈ ಜೋಡಸಿಸಬೇಕಿದೆ ಎಂದರು. ಬೆಳಪು ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಮತ್ತು ಮುಂಬಯಿ-ಬೆಂಗಳೂರು ರೈಲು ನಿಲುಗಡೆಗೆ ಹಕ್ಕೊತ್ತಾಯ ಮಂಡಿಸಲು ಮುಂದಿನ ದಿನಗಳಲ್ಲಿ ಬೆಳಪು ಸುತ್ತಲಿನ ಪ್ರತೀ ಗ್ರಾಮಗಳಲ್ಲಿ ಮತ್ತು ಮುಂಬಯಿ ಮಹಾನಗರದಲ್ಲೂ ಸಭೆ ನಡೆಸಲು ತೀರ್ಮಾನಿಸಲಾಯಿತು. ಅಂಚೆ ಕಾರ್ಡ್ ಮೂಲಕ ಹಕ್ಕೊತ್ತಾಯ ಮಂಡಿಸಲು ಮತ್ತು ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹಕ್ಕೊತ್ತಾಯ ಮಂಡನೆಗೆ ಪ್ರಮುಖರನ್ನು ಸೇರಿಸಿಕೊಂಡು ಕಾರ್ಯಕಾರಿ ಸಮಿತಿ ರಚಿಸಲು ನಿರ್ಧರಿಸಲಾಯಿತು. ಬೆಳಪು ಗ್ರಾಮದ ಪ್ರಮುಖರಾದ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ನಿರಂಜನ್ ಶೆಟ್ಟಿ ಪಣಿಯೂರು, ಆನಂದ ಶೆಟ್ಟಿ ಕಬೇರಗುತ್ತು, ಸುಕುಮಾರ ಶೆಟ್ಟಿ ನಡಿಮನೆ, ವಸುಂಧರ್ ಶೆಟ್ಟಿ ಬುಳಿಬೆಟ್ಟುಗುತ್ತು, ದಿವಾಕರ ಶೆಟ್ಟಿ, ಶಿವ ಕುಮಾರ್, ವಸಂತ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ಕರುಣಾಕರ ಶೆಟ್ಟಿ ಪಣಿಯೂರುಗುತ್ತು ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು.
