Updated News From Kaup
ಆಶಾ ಕಾರ್ಯಕರ್ತೆಯರಿಗೆ ದಿನಬಳಕೆ ಕಿಟ್ ವಿತರಿಸಿದ ಪಡುಬಿದ್ರಿ ಭಗವತಿ ಗ್ರೂಪ್

Posted On: 10-04-2020 03:13PM
ಪಡುಬಿದ್ರಿ ಎ 10 :- ಕೊರೊನಾ ನಿಯಂತ್ರಣಕ್ಕೆ ಪಣತೊಟ್ಟು ನಿರಂತರ ಸೇವೆಸಲ್ಲಿಸುತ್ತಿರುವ ಮಾತೃಹೃದಯಿ ಆಶಾ ಕಾರ್ಯಕರ್ತರಿಗೆ ಪಡುಬಿದ್ರಿ ಭಗವತಿ ಗ್ರೂಪ್ ಮತ್ತು ಶ್ರೀ ಸುಬ್ರಹ್ಮಣ್ಯ ಯುವಕ - ಯುವತಿ ವೃಂದ(ರಿ) ಪಾದೆಬೆಟ್ಟು ಇದರ ಜಂಟಿ ಆಶ್ರಯದಲ್ಲಿ ಇಂದು ದಿನಬಳಕೆಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಉಡುಪಿ ತಾ.ಪಂ ಅಧ್ಯಕ್ಷೆ ಶ್ರೀಮತಿ ನೀತಾ ಗುರುರಾಜ್,ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಡುಬಿದ್ರಿ, ಗಾಯತ್ರಿ ಪ್ರಭು ಪಲಿಮಾರು, ಸೌಮ್ಯ ಶೆಟ್ಟಿ ನಂದಿಕೂರು, ಶಶಿಕಲಾ ಬೂಡು,ಯುವರಾಜ್ ಕುಲಾಲ್,ಸಂದೇಶ್ ಶೆಟ್ಟಿ, ಸಂತೋಷ್ ಪಡುಬಿದ್ರಿ,ಭಗವತಿ ಗ್ರೂಪ್ ಮತ್ತು ಸುಬ್ರಹ್ಮಣ್ಯ ಯುವಕ ಯುವತಿ ವೃಂದದ ಸದಸ್ಯರು ಉಪಸ್ಥಿತರಿದ್ದರು.
ಕಾಪು ತಾಲೂಕಿನಲ್ಲಿ ಬಾರಿ ಮಳೆಯಾಗುವ ಸಾಧ್ಯತೆಗಳಿವೆ

Posted On: 07-04-2020 05:23PM
ಈಗಾಗಲೇ ಕಾರ್ಕಳ ತಾಲೂಕಿನಾದ್ಯಂತ ಮಳೆಯಾಗಿದ್ದು ಕಾಪು ತಾಲೂಕಿನಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮಳೆ ಬರುವ ಸಂಭವವಿದೆ, ಈ ಹಿಂದೆ ಒಂದು ತಿಂಗಳ ಹಿಂದೆಯಷ್ಟೇ ಒಂದು ಬಾರಿ ಮಳೆ ಬಿದಿದ್ದು ಇದೀಗ ಎರಡನೆ ಬಾರಿ ಮಳೆಯಾಗುವ ಸಾಧ್ಯತೆಗಳಿವೆ. ತಾಲೂಕಿನಲ್ಲಿ ಸಿಡಿಲಿನ ಆರ್ಭಟದೊಂದಿಗೆ ಮಳೆರಾಯ ಪ್ರವೇಶಿಸುವ ಮುನ್ಸೂಚನೆ.
ಕಾಪು ತಾಲೂಕಿನ 45 ಕುಟುಂಬಗಳಿಗೆ ಸಹಕರಿಸಿದ ಬಿರುವೆರ್ ಕಾಪು ಸೇವಾ ಟ್ರಸ್ಟ್

Posted On: 02-04-2020 08:35PM
ಬಿರುವೆರ್ ಕಾಪು ಸೇವಾ ಟ್ರಸ್ಟ್ ಎನ್ನುವ ಸಂಸ್ಥೆಯು ಬ್ರಹ್ಮಶ್ರೀ ನಾರಾಯಣ ಗುರು ಸಾಂತ್ವಾನ ಎಂಬ ಯೋಜನೆಯನ್ನು ಹಮ್ಮಿಕೊಂಡು ಕೊರೊನ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ಹೊರಡಿಸಿರುವ ಲಾಕ್ಡೌನ್ನಿಂದಾಗಿ ಕೆಲವೊಂದು ಕುಟುಂಬಗಳು ತಿನ್ನಲು ಅನ್ನವಿಲ್ಲದೆ, ದಿನಬಳಕೆಗೆ ಬೇಕಾಗುವ ಸಾಮಗ್ರಿಗಳನ್ನು ಕೊಳ್ಳಲಾಗದೆ ಕಂಗಾಲಾಗಿವೆ . ಈ ನಿಟ್ಟಿನಲ್ಲಿ ಈ ಸಂಸ್ಥೆಯು ಕಾಪು ತಾಲೂಕಿಗೆ ಒಳಪಡುವ ಕಾಪು ಪುರಸಭೆ, ಇನ್ನಂಜೆ ಗ್ರಾ.ಪಂಚಾಯತ್, ಕುರ್ಕಾಲು ಗ್ರಾ. ಪಂಚಾಯತ್, ಮಜೂರು ಗ್ರಾ.ಪಂಚಾಯತ್, ಶಿರ್ವ ಗ್ರಾ.ಪಂಚಾಯತ್ ಹಾಗೂ ಮಣಿಪುರ ಗ್ರಾ.ಪಂಚಾಯತ್ ವ್ಯಾಪ್ತಿಯ ಕಟ್ಟ ಕಡೆಯ ಬಡವರಿಗೆ ಹಾಗೂ ಬಾಡಿಗೆ ಮನೆಯಲ್ಲಿದ್ದು ದಿನಗೂಲಿ ಮಾಡುತ್ತಿದ್ದ 45 ಕುಟುಂಬಗಳನ್ನು ಪಂಚಾಯತ್ ಅಧಿಕಾರಿಗಳ ಸಮ್ಮುಖದಲ್ಲಿ ಗುರುತಿಸಿ ಅವರಿಗೆ ದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳಾದ ಅಕ್ಕಿ, ಬೆಳೆ, ತರಕಾರಿ, ತೆಂಗಿನಕಾಯಿ ಮತ್ತು ಇತರೆ ವಸ್ತುಗಳನ್ನು ನೀಡಿದರು.. ಈ ಸೇವೆಯನ್ನು ಮಾಡಲು ಸಹಕರಿಸಿದ ಕಾಪು ತಹಶೀಲ್ದಾರ್ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ,ಸದಸ್ಯರುಗಳಿಗೆ, ಶಿರ್ವ ಪೊಲೀಸ್ ಠಾಣಾಧಿಕಾರಿಯವರಿಗೆ, ಕಾಪು ಪೊಲೀಸ್ ಠಾಣಾಧಿಕಾರಿಯವರಿಗೆ, ವಾಹನದ ವ್ಯವಸ್ಥೆಯನ್ನು ಮಾಡಿದ ದೇವಿಪ್ರಸಾದ್ ಪೂಜಾರಿ ಶಿರ್ವ ಇವರಿಗೆ, ಸ್ಥಳಾವಕಾಶವನ್ನು ನೀಡಿದ ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಇನ್ನಂಜೆ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಸದಸ್ಯರಿಗೆ ಊಟದ ವ್ಯವಸ್ಥೆಯನ್ನು ಮಾಡಿದ ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿ, ಮಾಲಿನಿ ಶೆಟ್ಟಿ ಹಾಗೂ ದಿವೇಶ್ ಶೆಟ್ಟಿ , ಇವರೆಲ್ಲರಿಗೂ ಸಂಸ್ಥೆಯ ಅಧ್ಯಕ್ಷರಾದ ಬಾಲಕೃಷ್ಣ ಆರ್ ಕೋಟ್ಯಾನ್ ಇವರು ಧನ್ಯವಾದಗಳನ್ನು ತಿಳಿಸಿದರು, ಯೋಜನೆಯ ಫಲಾನುಭವಿಗಳು ಶುಭ ಹಾರೈಸಿದರು..
ಕೊರೋನಾ ಸತ್ವ ಪರೀಕ್ಷೆಯಿಂದ ಪಾರಾಗಲು ಮನೆಯಲ್ಲಿ ಇರುವುದೇ ಮದ್ದು - ಕಾಪು ಶಾಸಕರು

Posted On: 01-04-2020 09:56PM
ಕೊರೋನಾ ಸತ್ವ ಪರೀಕ್ಷೆಯಿಂದ ಪಾರಾಗಲು ಮನೆಯಲ್ಲಿ ಇರುವುದೇ ಮದ್ದು-ಲಾಲಾಜಿ ಮೆಂಡನ್ ಕಾಪು :ಕೊರೊನೊ ವ್ಯಾಪಿಸದಂತೆ ಮನೆಯಲ್ಲಿ ಇರುವುದೇ ಪ್ರಮುಖ ಮದ್ದು. ನಾವೇ ಮುಂಜಾಗ್ರತೆ ವಹಿಸಿಕೊಂಡು ಶಾಂತ ರೀತಿಯ ಸಹಕಾರ ಅವಶ್ಯಕ. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಸುರಕ್ಷತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಪು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ ಸೇವೆಯು ಶ್ರೇಷ್ಠ ಸೇವೆಯಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು. ಅವರು ಭಾನುವಾರ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿ ಉಡುಪಿ ಜಿಲ್ಲೆಯ ಕಾಪು ವಲಯ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ವತಿಯಿಂದ ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕೊರೋನಾ ವೈರಸ್ ಹರಡದಂತೆ ಜನಜಾಗೃತಿ ಮೂಡಿಸಲು ವಾಹನಗಳನ್ನು ಬಳಸಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಹಿತ ಇತರೇ ಇಲಾಖೆಗಳು ಹಗಲಿರುಳೆನ್ನದೆ ಸಾಮಾಜಿಕ ಸುವ್ಯವಸ್ಥೆಯನ್ನು ಕಲ್ಪಿಸಲು ಕಾರ್ಯೋನ್ಮುಖರಾಗಿದ್ದಾರೆ. ಸಾಂಕ್ರಾಮಿಕ ರೋಗದಿಂದ ಪಾರಾಗಳು ಜನರ ಜಾಗೃತಿಯಿಂದ ಮಾತ್ರ ಶೀಘ್ರ ನಿಯಂತ್ರಣ ಸಾಧ್ಯವಾಗಿದ್ದು, ಸತ್ವ ಪರೀಕ್ಷೆಯಿಂದ ಪಾರಾಗಲು ಎಲ್ಲರೂ ಸಹಕರಿಸುವಂತೆ ಕ್ಷೇತ್ರದ ಜನರಿಗೆ ಮನವಿಯನ್ನು ಮಾಡಿಕೊಂಡರು. ಕಾಪು ತಹಶೀಲ್ದಾರ ಮಹಮ್ಮದ್ ಇಸಾಕ್ ಮಾತನಾಡಿ, ವಲಸೆ ಕಾರ್ಮಿಕರು ಸಹಿತ ನಿರಾಶ್ರಿತರಿಗೆ ದಾನಿಗಳು, ಸ್ವಯಂ ಸೇವಕರ ಸಹಕಾರದಿಂದ ಗಂಜಿ ಕೇಂದ್ರ ತೆರೆಯವಲ್ಲಿ ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ. ಕೊರೊನಾ ಪೊಸಿಟೀವ್ ತಡೆಯಲು ಜತೆಗೂಡಿ ಸನ್ನದ್ಧರಾಗೋಣ ಎಂದು ಕರೆ ನೀಡಿದರು. ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾತನಾಡಿ, ಕೊರೋನಾ ತೀವ್ರತೆ ಪಡೆಯದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಜನತೆ ಕಾನೂನು ಸುವ್ಯವಸ್ಥೆಗೆ ಕೈ ಜೋಡಿಸಿದಲ್ಲಿ, ನಾವು ಇತರೇ ಸೇವೆಯಲ್ಲಿ ಮುನ್ನಡೆಸಲು ಸಹಕಾರ ನೀಡಬೇಕಿದೆ. ಇಂದಿನ ಪರಿಸ್ಥಿಯಲ್ಲಿ ವೈದ್ಯಾಧಿಕಾರಿಗಳೇ ನಮ್ಮ ನಡುವೆ ಇರುವ ಸೈನಿಕರಾಗಿದ್ದು, ಆರೋಗ್ಯ ಸೇವಕರಿಗೆ ನಾವೆಲ್ಲರೂ ಸೇರಿ ನೈತಿಕವಾದ ಬೆಂಬಲವನ್ನು ನೀಡಬೇಕಿದೆ ಎಂದರು. ಈ ಸಂದರ್ಭ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ಮಾಹಿತಿ ನೀಡಿ, ಸಾರ್ವಜನಿಕರು ಸರಕಾರದ ಕಾನೂನನ್ನು ಪಾಲಿಸಬೇಕು. ಸಾಮಾಜಿಕ ಅಂತರವನ್ನು ಅತ್ಯಂತ ಅವಶ್ಯವಾಗಿ ಕಾಪಾಡಬೇಕಿದೆ. ಹೋಮ್ ಕ್ವಾರಂಟೈನ್ ನಲ್ಲಿ ಇರುವವರು ಕಾನೂನು ಬ್ರೇಕ್ ಮಾಡಿ ತಿರುಗಾಡುವುದು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ವಿನಂತಿಸಿದರು. ಈ ಸಂದರ್ಭ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಶಿವರಾಜ್ ಮಲ್ಲಾರು, ಪ್ರಧಾನ ಕಾರ್ಯದರ್ಶಿ ದಾಮೋದರ ನಾಯಕ್, ಕಾಪು ವಲಯಾಧ್ಯಕ್ಷ ರಾಘು ಡಿ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಅನಿಲ್ ಡೇಸಾ, ಕೋಶಾಧಿಕಾರಿ ಶೇಖರ್ ಬಂಗೇರ, ರೆವೆನ್ಯೂ ಇನ್ಸ್ ಪೆಕ್ಟರ್ ರವಿಶಂಕರ್, ಆರೋಗ್ಯ ಸಹಾಯಕರು, ಗ್ರಾಮ ಕರಣಿಕರು, ಕಾಪು ಪುರಸಭಾ ಸದಸ್ಯರು, ಆರಕ್ಷಕರು, ಮೊದಲಾದವರು ಉಪಸ್ಥಿತರಿದ್ದರು. ಫೋಟೋ : 29 ಮಾ. 001
ದೈವ ನರ್ತಕನನ್ನೇ ಬೆರಗಾಗಿಸಿದ ಓಡಿಲ್ದಾಯ ದೈವದ ಪೈಂಟಿಂಗ್

Posted On: 29-03-2020 06:35PM
ಕುಂಚದಲ್ಲಿ ಅರಳಿದ ಗಂಗನಾಡಿ ಕುಮಾರ ದೈವದ ಪೈಂಟಿಂಗ್. ಸದ್ಯ ಕಾರ್ತಿಕ್ ಆಚಾರ್ಯ ಪೈಂಟಿಂಗ್ ಮೂಲಕ ಜನರ ಮನಸೆಳೆದಿದ್ದಾರೆ. ಸಾಮಾಜಿಕ ಜಾಲಾತಾಣದಾದ್ಯಂತ ವೈರಲ್ ಆಗುತ್ತಿದೆ ಗಂಗನಾಡಿ ಕುಮಾರ ದೈವದ ಪೈಂಟಿಂಗ್. ಬಹುಶಃ ಪೈಂಟಿಂಗ್ ಮೂಲಕ ಬಿಡಿಸಿರುವ ಚಿತ್ರ ಕಲೆಯು ಗಂಗನಾಡಿ ಕುಮಾರ ದೈವದ ನೇಮೋತ್ಸವ ಕಟ್ಟಿದವರನ್ನೆ ಆಶ್ಚರ್ಯ ಚಕಿತಗೊಳಿಸಿದೆ ಅರ್ಥಾತ್ ಸಂಪೂರ್ಣವಾಗಿ ಅವರನ್ನೇ ಹೋಲುವಂತಹ ಪೈಂಟಿಂಗ್ ರಚಿಸಿಬಿಟ್ಟಿದ್ದಾರೆ ಕಾರ್ತಿಕ್ ಆಚಾರ್ಯ. ಶಾಲಾ ದಿನಗಳಿಂದಲೂ ಚಿತ್ರ ಕಲೆ ಹಾಗೂ ಕ್ಲೈ ಮೋಡಲಿಂಗ್ ಪ್ರತಿಭೆಯಾಗಿರುವ ಕಾರ್ತಿಕ್ ಆಚಾರ್ಯ. ಪೈಂಟಿಂಗ್ ಲೋಕದಲ್ಲಿ ತನ್ನಲ್ಲಿರುವ ಪ್ರತಿಭೆಯನ್ನು ಆಕರ್ಷಣೀಯ ಪೈಂಟಿಂಗ್ ಗಳನ್ನು ಬಿಡಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಪೈಂಟಿಂಗ್ ಕಲಾವಿದನು ತನ್ನಲ್ಲಿರುವ ಚಾತುರ್ಯವನ್ನು ಬಳಸಿಕೊಂಡು ಅದ್ಭುತ ಪೈಂಟಿಂಗ್ ಗಳನ್ನು ರಚಿಸಿದಾಗ ಅದನ್ನು ಪ್ರೋತ್ಸಾಹಿಸುವ ಮೂಲಕ ಕಲಾವಿದನಿಗೆ ಶಕ್ತಿ ತುಂಬುವ ಕೆಲಸಮಾಡಬೇಕಿದೆ ಅದೇ ನಾವು ಅವರಿಗೆ ನೀಡುವ ಬಲುದೊಡ್ಡ ಉಡುಗೊರೆ. ನಮ್ಮ ನಡುವಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸೋಣ.
ನೋವಲ್ ಕೊರೊನ ವೈರಸ್ ತಡೆಗಟ್ಟಲು ಜನಜಾಗೃತಿ

Posted On: 29-03-2020 01:22PM
ಧ್ವನಿ ಬೆಳಕು ಸಂಯೋಜಕರ ಸಂಘಟನೆ(ರಿ.) ಉಡುಪಿ ಜಿಲ್ಲೆ, ಕಾಪು ವಲಯ, ಉಡುಪಿ ಜಿಲ್ಲಾಡಳಿತ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನೋವಲ್ ಕೊರೋನಾ ವೈರಸ್ ಹರಡದಂತೆ ಜನಜಾಗೃತಿ ಕಾರ್ಯಕ್ರಮ. ಇವತ್ತು ಅಣ್ಣಪ್ಪ ಸೌಂಡ್ಸ್ ಶಂಕರಪುರದ ಶೇಖರ್ ಎನ್ ಬಂಗೇರ ಮತ್ತು ಅನಿಲ್ ಸೌಂಡ್ಸ್ ನ ಅನಿಲ್ ಡೇಸಾ ಇವರು ತಮ್ಮ ವಾಹನದಲ್ಲಿ ಕೊರೋನಾ ಬಗ್ಗೆ ಜನಜಾಗೃತಿ ಮೂಡಿಸಲು ತಮ್ಮ ವಾಹನದಲ್ಲಿ ಹೊರಟ್ಟಿದ್ದಾರೆ. ನಿಮ್ಮ ಈ ಉತ್ತಮ ಸೇವೆಯಿಂದ ಜನರು ಇನ್ನಷ್ಟು ಜಾಗ್ರತರಾಗಲಿ ಎಂಬುದೇ ನಮ್ಮ ಆಶಯ.. ಮಾಹಿತಿ : ಮಾಲಿನಿ ಶೆಟ್ಟಿ ಇನ್ನಂಜೆ
ದೈವ ನರ್ತಕ ಉಗ್ಗಪ್ಪ ಪರವೆ ಕೆರ್ವಾಸೆ

Posted On: 28-03-2020 06:49PM
ಅದೇಕೋ ಬಹಳ ದಿನಗಳ ನಂತರ ತೆರೆಮರೆಯಲ್ಲಿರುವ ವ್ಯಕ್ತಿಯೊಬ್ಬರ ಬಗೆ ನಿಮ್ಮೆಲ್ಲರಿಗೂ ಪರಿಚಯಿಸೋಣ ಅಂತ ಪೆನ್ನು ಪೇಪರ್ ಹಿಡಿದು ಕುಳಿತೆ ಬಿಟ್ಟೆ. ಅಂದ ಹಾಗೆ ನಾನಿವತ್ತು ಬರೆಯಲು ಹೊರಟಿರೋದು ದೈವ ನರ್ತಕ ಉಗ್ಗಪ್ಪ ಪರವ ಅವರ ಬಗ್ಗೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಸೆ ಗ್ರಾಮದ ಚಕ್ಕು ಪರವ ಮತ್ತು ಮಚ್ಚುಲು ಪರತಿ ದಂಪತಿಗಳು ಐದು ಜನ ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ. ಗಂಡು ಮಕ್ಕಳಿಲ್ಲವೆಂದು ಕೊರಗುತ್ತಿದ್ದ ಇವರಿಗೆ ಇವರು ನಂಬುತ್ತಿದ್ದ ದೈವ ದೇವರುಗಳ ದಯೆಯಿಂದ ಗಂಡು ಮಗುವಿನ ಜನನವಾಗುತ್ತದೆ. ಆ ಮಗು ಬೇರೆ ಯಾರು ಅಲ್ಲ ಅವರೆ ಉಗ್ಗಪ್ಪ ಪರವ. ಉಗ್ಗಪ್ಪ ಪರವ ಇವರು ಬಾಲ್ಯದಿಂದಲೇ ದೈವ ದೇವರ ಮೇಲೆ ಅಪಾರ ಭಕ್ತಿ ಉಳ್ಳವರಾಗಿದ್ದರು. ಇವರು ಐದನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ದೈವ ಚಿತ್ತವೋ ಏನೋ ಎಂಬಂತ್ತೆ ತನ್ನ ಹದಿನಾರನೇ ವಯಸಿನಲ್ಲಿ ಗುರುಹಿರಿಯರ ಸಮ್ಮತಿಯೊಂದಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿವಪುರದ ಪಾಂಡುಕಲ್ಲು ಕೋಟೆನಾಥೇಶ್ವರ ಸನ್ನಿಧಾನಕ್ಕೆ ಒಳಪಡುವ ಬೆರ್ಮೆರ್ ಬೈದೇರುಗಳ ಗರಡಿಯಲ್ಲಿ ಮೊದಲ ಬಾರಿ ಎಣ್ಣೆ ಬೂಳ್ಯ ಸ್ವೀಕರಿಸಿ ದೈವ ನರ್ತಕನಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ದೈವ ನರ್ತಕನಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೊಡಮಣಿತ್ತಾಯ, ಜುಮಾದಿ, ರಕ್ತೇಶ್ವರಿ, ಪಿಲ್ಚಂಡಿ, ಔಟಲ್ದಾಯ,ಬೈದೆರ್ಲು, ಮಾಯಂದಾಲ್ ಹೀಗೆ ಹತ್ತು ಹಲವಾರು ದೈವಗಳಿಗೆ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಪ್ಪತ್ತಾರನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ಇವರು ತಮ್ಮ ಧರ್ಮಪತ್ನಿಯೊಂದಿಗೆ ಎರಡು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ. ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಾದ ಹೆರ್ಮುಂಡೆ ಕಲ್ಕುಡ ಕ್ಷೇತ್ರ, ಅಂಡಾರು ಕೊಡಮಣಿತ್ತಾಯ ಕ್ಷೇತ್ರ, ಮಾಲ ಔಟಲ್ದಾಯ ಕ್ಷೇತ್ರ, ಮತ್ತು ಮುಜೂರು ಮಾಯಂದಾಲ್ ದೇವಿಯ ಸನ್ನಿದಿಯಲ್ಲಿ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿನ ಐದಾರು ವರ್ಷಗಳಿಂದ ಯುವಕರಿಗೆ ದೈವಾರಾಧನೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದ್ದು, ಕೆಲವೊಂದು ಯುವಕರು ಅನೇಕ ಮಾಹಿತಿಯನ್ನು ಕಳೆ ಹಾಕಿ ತುಳುನಾಡಿನ ದೈವಗಳ ಬಗ್ಗೆ ಪುಸ್ತಕಗಳನ್ನು ಕೂಡ ಬರೆಯುತ್ತಿದ್ದಾರೆ. ಯುವಕರ ಈ ರೀತಿಯ ಬೆಳವಣಿಗೆ ಪ್ರಶಂಸನೀಯ ಎಂದರು. ದೈವಾರಾಧನೆಯಲ್ಲಿ ನಾವು ಮಾಡುವ ವಿಧಿವಿಧಾನಗಳು ಕ್ರಮವಾಗಿರಬೇಕು ಮತ್ತು ಶೃದ್ದೆ ಹಾಗೂ ನಿಷ್ಠೆಯಿಂದ ಕೂಡಿರಬೇಕು ಅನ್ನುತ್ತಾರೆ. ದೈವಗ್ ಡೋಲು ಪೊರ್ಲು ದೇವೆರೆಗ್ ಚೆಂಡೆ ಪೊರ್ಲು ಎನ್ನುವ ಮಾತಿದೆ ಇದರ ಅರ್ಥ ದೈವಕ್ಕೆ ಡೋಲು ದೇವರಿಗೆ ಚೆಂಡೆ ಆದರೇ ಇತ್ತೀಚಿನ ಕಾಲಘಟ್ಟದಲ್ಲಿ ದೈವಾರಾಧನೆಯಲ್ಲಿ ಚೆಂಡೆ ಬಳಕೆಯಾಗುತ್ತಿದೆ, ಇದರ ಬಗ್ಗೆ ಉಗ್ಗಪ್ಪ ಪರವರಲ್ಲಿ ಕೇಳಿದಾಗ ಅವರ ಉತ್ತರ ಹೀಗಿತ್ತು. ದೈವಾರಾಧನೆಯಲ್ಲಿ ಚೆಂಡೆಯ ಬಳಕೆಯಲ್ಲಿ ಯಾವುದೇ ತಪ್ಪಿಲ್ಲ ಕಾಲ ಬದಲಾದ ಹಾಗೆ ಎಲ್ಲವೂ ಬದಲಾಗಲೇ ಬೇಕು, ಹಿಂದಿನ ಕಾಲದಲ್ಲಿ ಗ್ಯಾಸ್ ಲೈಟ್, ತೂಟೆ, ದೊಂದಿಯ ಬೆಳಕಿನಲ್ಲಿ ದೈವಾರಾಧನೆ ನಡೆದು ಹೋಗಿತ್ತು ಕಾಲ ಬದಲಾದಂತೆ ಜನರೇಟರ್,ಟ್ಯುಬ್ಲೈಟ್ ಹಾಗೂ ಇನ್ನಿತರ ಜಗಮೀಗಿಸುವ ಬೆಳಕಿನ ಬಳಕೆ ಶುರುವಾಯ್ತು, ಇದೆ ರೀತಿಯಲ್ಲಿ ಚೆಂಡೆಯ ಬಳಕೆಯಲ್ಲಿ ಕೂಡ ಯಾವುದೇ ತಪ್ಪಿಲ್ಲ ಇದೊಂದು ರೀತಿಯ ಸೇವೆಯೇ ಆಗಿದೆ ಎನ್ನುತ್ತಾರೆ. ಕಾಲೊಗ್ ತಕ್ಕ ಕೋಲ ಎನ್ನುವ ಗಾದೆ ಮಾತು ಈ ರೀತಿಯಲ್ಲಿ ನೋಡಿದಾಗ ನಿಜ ಎಂದೆನಿಸುತ್ತದೆ. ದೈವಾರಾಧನೆಯಲ್ಲಿ ಪ್ರಮುಖವಾಗಿ ಇರಬೇಕಾದ ಪರಿಕರಗಳು ಕಂಟೆ, ತೆಂಬರೆ, ದಗರೇ, ಡೋಲು, ಕೊಂಬು, ವಾದ್ಯ ಇವುಗಳನ್ನು ತುಳುವಿನಲ್ಲಿ ಸರ್ವಬಿರ್ದ್ ಅನ್ನುತ್ತಾರೆ. ದೈವಾರಾಧನೆಯಲ್ಲಿ ಇವಿಷ್ಟನ್ನು ಬಳಸಿದರೆ ಎಲ್ಲಾ ರೀತಿಯ ಸೇವೆಗಳನ್ನು ಸಲ್ಲಿಸಿದಂತೆ ಆಗುತ್ತದೆ. ಇವರಿಗೆ ಈಗ ಐವತ್ತು ವರ್ಷ ಪ್ರಾಯ, ಅದೆಷ್ಟೋ ದೈವಸ್ಥಾನದಲ್ಲಿ ಸೇವೆ ಸಲ್ಲಿಸಿದ ಇವರಿಗೆ ಮೂವತ್ನಾಲ್ಕು ವರುಷದ ಅನುಭವ ದೈವಾರಾಧನೆಯಲ್ಲಿ ಇದೆ. 2018ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜನವರಿ 2020ನೇ ಸಾಲಿನ ಉಡುಪಿಯ ದೈವ ವಿಶಾದಕರು , ಪಾಂಡುಕಲ್ಲು ಇಲ್ಲಿನ ದೈವಸ್ಥಾನದಲ್ಲಿ ಚಿನ್ನದ ಬಳೆ ತೊಡಿಸಿ ಸನ್ಮಾನಿಸಿರುತ್ತಾರೆ, ಕಾಪು ಪೊಯ್ಯ ಪೊಡಿಕಲ್ಲ ಗರಡಿಯಲ್ಲಿಯೂ ಸನ್ಮಾನಿತರಾಗಿರುತ್ತಾರೆ, ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ, ಬೈದರ ನೃತ್ಯ ವಿಶಾರದರು, ಕೆರ್ವಾಶೆ, ಮಂಗಳೂರು ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಸನ್ಮಾನಿತರಾಗಿರುತ್ತಾರೆ. ಇವರು ಮಾಡುತ್ತಿರುವ ಸೇವೆಗೆ ತುಳುನಾಡಿನ ಸರ್ವಶಕ್ತಿಗಳ ಆಶೀರ್ವಾದ ಇವರ ಹಾಗೂ ಇವರ ಕುಟುಂಬದ ಮೇಲಿರಲಿ. ಅದೆಷ್ಟೋ ದೈವಸ್ಥಾನದ ಕೋಡಿಯಡಿಯಲ್ಲಿ ನ್ಯಾಯ ತೀರ್ಮಾನ ನೀಡಿರುವ ಇವರಲ್ಲಿ ಯುವಕರಿಗೆ ದೈವಾರಾಧನೆಯಲ್ಲಿ ಇರುವಂತಹ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದು. ಸಂಪರ್ಕ ಸಂಖ್ಯೆ : 9972406269 ಬರಹ : ವಿಕ್ಕಿ ಪೂಜಾರಿ ಮಡುಂಬು
ತುಳುನಾಡಿನ ಮೂಲ ಬೈದ್ಯ ಪರಂಪರೆಯಲ್ಲಿ ಔಷಧಿ ನೀಡುತ್ತಿರುವ ಶಿರ್ವ ನಿವಾಸಿ

Posted On: 25-03-2020 11:48AM
ಕಾಪು ತಾಲೂಕಿನ ಶಿರ್ವದಲ್ಲಿರುವ ತುಳುನಾಡ ಬೈದ್ಯರು (ವೈದ್ಯರು) ಶಾಲಿನಿ ಡಿ ಅಮೀನ್ ಶಿರ್ವ ಹಿಂದಿನ ಕಾಲದಲ್ಲಿ ಈ ತುಳುನಾಡ ಮಣ್ಣಿನಲ್ಲಿ ಜನರಿಗೆ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ಆಯುರ್ವೇದ ಪದ್ಧತಿ ಮುಖಾಂತರ ನೀಡುತಿದ್ದವರು ಪಂಡಿತರು ಅಥವಾ ವೈದ್ಯರು.. ಇವರನ್ನು ತುಳುವಿನಲ್ಲಿ ಬೈದ್ಯರು(ಬೈದ್ಯೆ) ಎಂದು ಕರೆಯುತ್ತಿದ್ದರು.ಪ್ರಕೃತಿಯಲ್ಲಿ ಸಿಗುವ ಗಿಡ ಮೂಲಿಕೆಗಳನ್ನು, ಬೇರು, ವಿಶೇಷ ಕಲ್ಲು ಹಾಗೂ ಮಣ್ಣನ್ನು ಬಳಸಿ ಸರಿಯಾದ ರೀತಿಯ ಪಥ್ಯೆ ಮುಖಾಂತರ ಮದ್ದು ನೀಡಿ ಯಾವುದೇ ಫಲಾಫೇಕ್ಷೆ ಇಲ್ಲದೇ ಖಾಯಿಲೆ,ಗಾಯ, ಇತರೆ ರೋಗವನ್ನು ವಾಸಿ ಮಾಡಿಸುತ್ತಿದ್ದ ಹಿರಿಮೆ ಬೈದ್ಯರದ್ದು. ಈಗಿನ ಕಾಲದಲ್ಲಿ ಕೇವಲ ಕೆಲವೇ ರೋಗಕ್ಕೆ ಅನಿವಾರ್ಯವಾಗಿ ಜನರು ಬೈದ್ಯರನ್ನು ಅವಲಂಬಿಸಿದ್ದಾರೆ. ಕಾರಣವೇನೆಂದರೆ ಆಧುನಿಕ ಕಾಲದಲ್ಲಿ ಜನರು ಪರಕೀಯ ಮಾತ್ರೆ ಮದ್ದುಗಳ ದಾಸರಾಗಿದ್ದಾರೆ ಆದ್ದರಿಂದ ಬೈದ್ಯ ಪರಂಪರೆಯು ನಶಿಸುತ್ತಾ ಬಂದಿದ್ದು ಈಗ ಕೆಲವೇ ಕೆಲವು ಬೈದ್ಯರು ಮದ್ದು ನೀಡುತ್ತಿದ್ದಾರೆ. ಅಂತವರಲ್ಲಿ ಒಬ್ಬರು ಶಿರ್ವಮೂಲದ ಚೆಕ್ ಪಾದೆ ನಿವಾಸಿ ಶಾಲಿನಿ ಡಿ ಅಮೀನ್, ದಿವಂಗತ ಕೊರಗ ಪೂಜಾರಿ ಮತ್ತು ಜಲಜ ದಂಪತಿಗಳ ಮಗಳಾದ ಇವರು 14-06-1972 ರಲ್ಲಿ ಜನಿಸಿರುತ್ತಾರೆ ಪಾರಂಪರಿಕ ಹಿನ್ನೆಲೆ : ಬೈದ್ಯರ ಮದ್ದುಕೊಡುವ ಸೇವೆ ವಂಶ ಪಾರಂಪರ್ಯವಾಗಿ ಬಂದಿರುವಂತಹದ್ದು. ಬೈದ್ಯ ಕುಲದೇವ ನಾಗಬ್ರಹ್ಮರನ್ನು, ಕುಟುಂಬದ ಆರಾಧಿಸುವ ನಾಗನನ್ನು ಹಾಗೂ ದೈವ ದೇವರನ್ನು ಮನಸಾರೆ ನೆನೆಸಿ, ಪ್ರಾರ್ಥಿಸಿ ಕಾಣಿಕೆ ಇಟ್ಟು ಮದ್ದು ಅರೆಯುತ್ತಿದ್ದರು, ತಮ್ಮ ಮದ್ದು ಕೊಡುವ ವಿದ್ಯೆಯನ್ನು ಯಾರ ಬಳಿಯೂ ತಿಳಿಸುತ್ತಿರಲಿಲ್ಲ. ಶಾಲಿನಿ ಅವರ ವಂಶದಲ್ಲಿ, ಅವರ ಹಿರಿಯರಿಗೆ ವಿಶೇಷ ದೈವ ಶಕ್ತಿ ಹಾಗೂ ಬೈದ್ಯ ಶಕ್ತಿಯನ್ನು ಪಡೆದ ಶ್ರೀ ಮೈಂದ್ಯ ಪೂಜಾರಿ ಅವರು ಹಿಂದಿನ ಕಾಲದಲ್ಲಿ ಬೈದ್ಯರಾಗಿ ಮದ್ದು ನೀಡುತ್ತಿದ್ದರು. ಅವರ ಬೈದ್ಯ ಶಕ್ತಿ ಎಷ್ಟಿತ್ತೆಂದರೆ ಅವರು ಜನರಿಗೆ ಹಾವು ಕಚ್ಚಿದರೆ ಮದ್ದು ಕೊಡುವಾಗ ಪ್ರಾರ್ಥಿಸಿ, ಒಂದು ರೇಖೆ(ದಡೆ ಕಟ್ಟುವುದು) ಹಾಕಿದರೆ ತಕ್ಷಣ ಕಚ್ಚಿದ ಹಾವು ಎಲ್ಲಿದ್ದರೂ ಅವರು ಹಾಕಿದ ರೇಖೆಯ ಬಳಿ ಬಂದು ಹೋಗುತ್ತಿತ್ತು, ಇದರಿಂದ ಯಾವ ಹಾವು ಕಚ್ಚಿದ್ದು ಮತ್ತು ಯಾವ ಪ್ರಮಾಣದ ಮದ್ದು ನೀಡಬಹುದೆಂದು ಅವರಿಗೆ ತಿಳಿಯುತ್ತಿತ್ತಂತೆ. ಕಾಲಕ್ರಮೇಣ ಅವರ ನಂತರ ಅವರ ಅಳಿಯ ನರಂಗ ಪೂಜಾರಿ ತನ್ನ ಮಾವ ಮೈಂದ್ಯ ಪೂಜಾರಿಯವರಂತೆ ಮದ್ದು ನೀಡಲಾರಂಭಿಸಿದರು, ಬೈದ್ಯ ಪರಂಪರೆಯಲ್ಲಿ ಒಂದು ಮಾತಿದೆ ತನಗೆ ತಿಳಿದಿರುವ ಪರಿಪೂರ್ಣ ವಿದ್ಯೆಯನ್ನು ಮತ್ತೊಬ್ಬರಿಗೆ ತಿಳಿಸಬಾರದು ತಿಳಿಸಿದರೆ ಅವರ ವಿದ್ಯೆ ಮರೆಯಾಗುತ್ತದೆ ಇಲ್ಲವೇ ಶಕ್ತಿಕುಂದುತ್ತದೆ,ಅದರ ಪ್ರಕಾರ ನರಂಗ ಪೂಜಾರಿಯವರು ತನ್ನ ಮಾವನನ್ನು ನೋಡಿ ಕಲಿತು ಮದ್ದು ನೀಡುತ್ತಿದ್ದರು ನರಂಗ ಪೂಜಾರಿಯವರು ಶಿರ್ವ ಮಾತ್ರವಲ್ಲದೆ ನೆರೆಹೊರೆಯ ಎಲ್ಲಾ ಊರಲ್ಲಿಯೂ ಹೆಸರುವಾಸಿಯಾಗಿದ್ದರು. ಶಾಲಿನಿಯವರ ಬೈದ್ಯ ಶಾಸ್ತ್ರದತ್ತ ಚಿತ್ತ : ತನ್ನ ಮಾವ ನರಂಗ ಪೂಜಾರಿಯವರ ಆಕಸ್ಮಿಕ ನಿಧನದ ದಿನದಂದೇ ಇಬ್ಬರು ಅನಾರೋಗ್ಯದಿಂದ ಮದ್ದು ಕೇಳಲು ಬಂದಿದ್ದರು, ಆ ವೇಳೆ ಅವರಿಗೆ ಮದ್ದು ಕೊಡಲೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು ಆಗ ಶಾಲಿನಿಯವರು ಭಯದಿಂದ ದೈವ ದೇವರನ್ನು ನೆನೆತು ಮಾವ ಮದ್ದು ಕೊಡುವುದನ್ನು ನೋಡಿದ ಕೆಲವು ಗಿಡ ಮೂಲಿಕೆ ತಂದು ಮದ್ದು ನೀಡಿದರು ಕೊಟ್ಟ ಮದ್ದು ವಿಷ ನೀಗುವ ಅಮೃತವಾಯಿತು. ನಂತರ ಅವರಿಗೆ ಮದ್ದು ಕೊಡುವ ಬೈದ್ಯ ವೃತ್ತಿಯನ್ನು ಮುಂದುವರೆಸುವ ಯಾವುದೇ ಯೋಚನೆಯಲ್ಲಿರಲಿಲ್ಲ ಆದರೇ ಒಂದು ಕಡೆಯಲ್ಲಿ ಬಡತನ, ಮತ್ತೊಂದುಕಡೆಯಲ್ಲಿ ಮದ್ದು ಕೊಡಲು ಧೈರ್ಯವಿರಲಿಲ್ಲ ಯಾಕೆಂದರೆ ಬೈದ್ಯ ವಿದ್ಯೆಯುಅವರಿಗೆ ಅಷ್ಟಾಗಿ ತಿಳಿದಿರಲಿಲ್ಲ ಈ ಹೊತ್ತಿಗೆ ಶಿರ್ವದ ಕಾರಣಿಕದ ಶಕ್ತಿ ನ್ಯಾರ್ಮ ಶ್ರೀ ಧರ್ಮ ಜಾರಂದಾಯನ ಹೂವಿನ ಪೂಜೆಯಲ್ಲಿ ದೈವದ ಬಳಿ ಕೇಳಿದಾಗ ದೈವದ ನುಡಿಯಾಗುತ್ತದೆ ಬೈದ್ಯ ವೃತ್ತಿಯನ್ನು ನಿಲ್ಲಿಸಬೇಡಿ ಮದ್ದು ಕೊಡಿ ವಿಷವನ್ನು ನಾನು ಅಮೃತ ಮಾಡುವೆನೆಂದು ಅಭಯ ನೀಡಿ ಅಪ್ಪಣೆ ನೀಡಿದ ನಂತರದ ದಿನದಲ್ಲಿ ಶಾಲಿನಿಯವರು ಧೈರ್ಯದಿಂದ, ಗುರುಹಿರಿಯರ ಆಶೀರ್ವಾದದಿಂದ, ಮದ್ದು ಕೊಡುವ ಮೊದಲು ಮನೆಯಲ್ಲಿ ಧರ್ಮ ಜಾರಂದಾಯನನ್ನು ಭಕ್ತಿಯಿಂದ ನೆನೆದು 20 ರೂಪಾಯಿ ಕಾಣಿಕೆ ತೆಗೆದಿಟ್ಟು ಯಾವ ರೋಗಕ್ಕೂ ಮದ್ದು ನೀಡುತ್ತಾರೆ, ನೀಡಿದ ಮದ್ದು ರಾಮ ಭಾಣವಾಗಿ ಪರಿಣಮಿಸಿದೆ. ಶಾಲಿನಿಯವರು ಕಳೆದ 10 ವರ್ಷಗಳಿಂದ ಸುಮಾರು 4,500 ಜನಕ್ಕೆ ಉಚಿತ ಮದ್ದು ನೀಡಿದ್ದಾರೆ. ಕೊಟ್ಟ ಮದ್ದಿನಿಂದ ರೋಗ ವಾಸಿಯಾದ ಜನರು ಸಂತೋಷದಿಂದ ಕೊಟ್ಟ ಹಣವನ್ನು ಸ್ವೀಕರಿಸುತ್ತಾರೆ. ಇವರೊಂದಿಗೆ ಇವರ ಅಕ್ಕ ಕುಶಲ ಪೂಜಾರಿ ಇವರಿಗೆ ಸಹಾಯ ಮಾಡುತ್ತಾರೆ, ಪಕ್ಕದ ಗುಡ್ಡದಿಂದ ಗಿಡ ಮೂಲಿಕೆ ತಂದು ಮದ್ದು ನೀಡಬೇಕು, ಆದರೆ ಈಗ ಗಿಡಮೂಲಿಕೆಗಳ ಸಂಖ್ಯೆ ವಿರಳವಾಗಿದೆ ಮತ್ತು ಕಾಡು ಮತ್ತು ಗುಡ್ಡ ನಾಶದಿಂದ ಅವನತಿಯಾಗಿದೆ ಎಂಬುವುದು ಇವರ ಅಭಿಪ್ರಾಯ. ಎಷ್ಟೋ ಜನರನ್ನು ಇವರು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ, ಮಣಿಪಾಲದಂತಹ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಬದುಕುವುದು ಕಷ್ಟ ಎಂದವರನ್ನು ಬದುಕಿಸಿದ್ದಾರೆ, ಇನ್ನು ಎರಡು ದಿವಸದಲ್ಲಿ ಕಾಲು ಕಡಿಯಬೆಕು ಎಂದವರ ಕಾಲನ್ನು ವಾಸಿ ಮಾಡಿಸಿ ಈಗ ಅವರು ನಡೆಯುತ್ತಿದ್ದಾರೆ. ತನ್ನ ಮನೆಗೆ ಬರುವ ಮಾರ್ಗ ಸಂಪೂರ್ಣ ಹಾಳಾಗಿದ್ದು ವಾಹನ ಮನೆಯಿಂದ 200 ಮೀಟರ್ ದೂರದ್ದಲ್ಲಿ ನಿಲ್ಲಿಸಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ರಾತ್ರಿಯ ಸಮಯದಲ್ಲಿ ನಡೆಯಲಾಗದೆ ಹೊತ್ತು ತರಲಾಗದ ವ್ಯಕ್ತಿಯ ಬಳಿಗೆ ಕುರ್ಚಿಯನ್ನು ತೆಗೆದುಕೊಂಡು ಹೋಗಿ, ಚುಮುಣಿ ಬೆಳಕಿನ ಸಹಾಯದಲ್ಲಿ ಮದ್ದು ನೀಡಿರುವುದು ಇವರ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ. ಶಾಲಿನಿಯವರು ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಎಲ್ಲಾ ರೋಗಿಗಳಿಗೆ ಯಾವುದೇ ಸಂಧಿಗ್ದ ಸಮಯದಲ್ಲೂ, ಯಾವುದೇ ಕೆಲಸದಲ್ಲಿದ್ದರೂ ಮದ್ದು ನೀಡಿ ಜನರ ಸೇವೆ ಮಾಡುತ್ತಿದ್ದಾರೆ.. ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದೆ... ಬಡತನವಾದರೂ ಪರವಾಗಿಲ್ಲ ಮನೆಗೆ ವ್ಯವಸ್ಥಿತ ರಸ್ತೆಯು ಅನಿವಾರ್ಯವಾಗಿ ಬೇಕೆಂಬುದು ಇವರ ಬೇಡಿಕೆ. ತುಳುನಾಡ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬೈದ್ಯರಲ್ಲಿ ಒಬ್ಬರಾದ ಇವರಿಗೆ ಇನ್ನಷ್ಟು ನಮ್ಮ ಸಮಾಜದ ಬೆಂಬಲ ಪ್ರೋತ್ಸಾಹ ಅಗತ್ಯವಿದೆ. ಬರಹ : ಅತಿಥ್ ಸುವರ್ಣ ಪಾಲಮೆ +91 73535 21150
ಕಾಪು : ಸುಗ್ಗಿ ಮಾರಿಪೂಜೆಗೆ ಕುರಿ ಕೋಳಿ ಬಲಿ ಕೊಡಲು ಪ್ರಯತ್ನಿಸಿದರೆ ಕೇಸ್

Posted On: 23-03-2020 07:48PM
ಕಾಪು ಸುಗ್ಗಿ ಮಾರಿ ಪೂಜೆ ಸರಳ ರೀತಿಯಲ್ಲಿ ಆಚರಣೆ . ಸಾರ್ವಜನಿಕರಿಗೆ ಪ್ರವೇಶವಿಲ್ಲ. ಕುರಿ, ಕೋಳಿ ಬಲಿ ಕೊಡಲು ಪ್ರಯತ್ನಿಸಿದರೆ ಕೇಸ್ ಮಾಡಲಾಗುವುದು ಎಂದು ಕಾಪು ವ್ರತ್ತನಿರೀಕ್ಷಕ ಮಹೇಶ್ ಪ್ರಸಾದ್ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಾಪು ವೀರಭದ್ರ ಸಭಾಂಗಣದಲ್ಲಿ ತಹಶೀಲ್ದಾರ್ ನೇತ್ರತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹರಕೆ ಹೊತ್ತವರು ಇದ್ದರೆ ಮುಂಬರುವ ಆಟಿ ಮಾರಿಪೂಜೆಯಲ್ಲಿ ಸಲ್ಲಿಸಬಹುದು. ಸುಗ್ಗಿ ಮಾರಿ ಪೂಜೆ ದಿವಸ ಯಾವುದೇ ಬಸ್ ಸಂಚಾರ ಇರುವುದಿಲ್ಲ. ಕೊರೊನಾ ಸೋಂಕು ಹಿನ್ನೆಲೆ ಜನ ಜಂಗುಳಿ ತಡೆಯಲು ಸೆಕ್ಷನ್ 144 ಹಾಕಲಾಗಿದೆ. ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಯಾರು ಕೂಡಾ ಮನೆಯಿಂದ ಹೊರಗೆ ಬಾರದೆ ಸಹಕರಿಸಬೇಕು ಎಂದರು. ಕಾನೂನು ಪಾಲನೆ ಕಟ್ಟು ನಿಟ್ಟಿನ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಜಾಮಿಯ ಮಸೀದಿಯಲ್ಲಿ ಜಮಾಅತ್ ನಮಾಝ್ ತಾತ್ಕಾಲಿಕ ಸ್ಥಗಿತ

Posted On: 23-03-2020 03:41PM
ಉಡುಪಿ : ಜಾಮಿಯ ಮಸೀದಿಯಲ್ಲಿ ಜಮಾಅತ್ ನಮಾಝ್ ತಾತ್ಕಾಲಿಕ ಸ್ಥಗಿತ ಉಡುಪಿ, ಮಾ.23: ಕೊರೋನ ವೈರಸ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಾಮಿಯ ಮಸೀದಿಯಲ್ಲಿ ಎಲ್ಲ ಸಾಮೂಹಿಕ ನಮಾಝಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.