Updated News From Kaup
ಕಾಪು ತಾಲೂಕಿನ ಮಜೂರಿನಲ್ಲಿ ನಡೆದ ಅಗ್ನಿ ಅವಘಡ - nammakaup.in

Posted On: 23-03-2020 03:12PM
ಕಾಪು : ಮಜೂರು ರೈಲ್ವೆ ಸೇತುವೆ ಬಳಿ ಆಗ್ನಿ ಅವಘಡ, ಇಂದು ಮಧ್ಯಾಹ್ನ ಮಜೂರು ಬ್ರಹ್ಮ ಬೈದರ್ಕಳ ಗರಡಿಗೆ ಹೋಗುವ ದಾರಿಯಲ್ಲಿ ಇರುವ ರೈಲ್ವೆ ಸೇತುವೆ ಬಲಿ ಆಕಸ್ಮಿಕ ಬೆಂಕಿ ಹಿಡಿದಿದ್ದು.. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ಸಂದರ್ಭದಲ್ಲಿ ಸ್ಥಳೀಯರಾದ ಅಪೇಕ್ಷಾ ಶೆಟ್ಟಿ ಇವರು ಸರಿಯಾದ ಸಮಯಕ್ಕೆ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಅನಾಹುತ ಆಗುವುದನ್ನು ತಪ್ಪಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ . ಆಗ್ನಿಶಾಮಕದಳ ಸರಿಯಾದ ಸಮಯಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಈ ಅನಾಹುತದಿಂದ ಯಾವುದೇ ರೀತಿಯ ನಷ್ಟ ಆಗಿಲ್ಲ ಎಂದು ತಿಳಿದು ಬಂದಿದೆ.
ಮಾರ್ಚ್ 31ರ ವರೆಗೆ ಖಾಸಗಿ ಬಸ್ಸು ಬಂದ್ - nammakaup.in

Posted On: 22-03-2020 08:25PM
ಸರಕಾರದ ಆದೇಶದಂತೆ ಕೊರೊನಾ ವೈರಸ್ ಎದುರಿಸುವ ನಿಟ್ಟಿನಲ್ಲಿ 31-03-2020 ರ ತನಕ ಖಾಸಗಿ ಬಸ್ಸುಗಳ ಸೇವೆ ಇರುವುದಿಲ್ಲ. ದಿಲ್ ರಾಜ್ ಆಳ್ವಾ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘ #IndiaFightsCovid19
ಕಾಪು, ಶಂಕರಪುರ, ಬಂಟಕಲ್ಲು ಸಂಪರ್ಕ ಕಲ್ಪಿಸುವ ರಸ್ತೆ ಬಿಕೋ ಎನ್ನುತಿದೆ

Posted On: 22-03-2020 10:13AM
ಜನತಾ ಕರ್ಫ್ಯೂಗೆ ಕಾಪು ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಮಹಾಮಾರಿ ಕೊರೊನ(COVID-19)ವನ್ನು ತೊಲಗಿಸಲು ಜನರು ಮನೆಯಲ್ಲಿಯೇ ಕುಳಿತು ದೇಶದ ಪ್ರಧಾನಿಗಳು ಹೊರಡಿಸಿರುವ ಆಜ್ಞೆಯನ್ನು ಪಾಲಿಸುತ್ತಿದ್ದಾರೆ ಮತ್ತು ಅಂಗಡಿಗಳನ್ನು ತೆರೆಯದೆ ಅಂಗಡಿ ಮಾಲೀಕರು ಕೂಡ ಈ ಒಂದು ನಿರ್ಧಾರಕ್ಕೆ ಕೈ ಜೋಡಿಸಿದ್ದಾರೆ ಇಲ್ಲಿ ತೋರಿಸಿರುವ ಚಿತ್ರ ಇನ್ನಂಜೆಯ ಮೂರು ರಸ್ತೆಗಳಾಗಿವೆ. ಈ ರಸ್ತೆಯು ಕಾಪು, ಶಂಕರಪುರ ಮತ್ತು ಬಂಟಕಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಾಗಿವೆ.
ಕಾಪು ತಾಲೂಕಿನಾದ್ಯಂತ ಮೂರು ದಿನ (22,23,24) ಸೆಲೂನ್ ಬಂದ್ - nammakaup.in

Posted On: 20-03-2020 09:34PM
ಕಾಪು ತಾಲೂಕು ಸವಿತಾ ಸಮಾಜ. ಸವಿತಾ ಬಂಧುಗಳು ಗಮನಕ್ಕೆ ಕೋರನಾ ವೈರಸ್ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮವಾಗಿ ಕಾಪು ತಾಲೂಕಾದ್ಯಂತ ಭಾನುವಾರ ಸೋಮವಾರ ಮಂಗಳವಾರ 22 23 24 ರಂದು ಎಲ್ಲಾ ಸೆಲೂನ್ ಮುಚ್ಚಲಾಗುವುದು ದಯವಿಟ್ಟು ಎಲ್ಲರೂ ಸಹಕರಿಸಬೇಕು, ✍️ ಇಂತಿ ನಿಮ್ಮ ಕಾಪು ತಾಲೂಕು ಅಧ್ಯಕ್ಷರು ವಿನಯ ಭಂಡಾರಿ ಪಡುಬಿದ್ರೆ.
ಮಾನ್ಯ ಸಚಿವರ ಕಾರ್ಯಶೈಲಿಯ ಬಗ್ಗೆ ಯುವಕನಿಂದ ಅದ್ಭುತ ಬರಹ - nammakaup.in

Posted On: 20-03-2020 08:39AM
ಬಹುಶಃ ಈ ಹಿಂದೆಲ್ಲಾ ಮುಜರಾಯಿ ಇಲಾಖೆ ಅಂದರೆ ಯಾರಿಗೂ ಬೇಡದ ಇಲಾಖೆ... ಆದಾಯವೇನೋ ಚೆನ್ನಾಗಿದ್ದರೂ ದೇವರ ದುಡ್ಡಲ್ವಾ... ಅದನ್ನ ಯಾವ್ಯಾವುದಕ್ಕೋ ಬಳಸಿ ಅನೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನ ಹಾಳು ಮಾಡಿದ ಖ್ಯಾತಿಯೂ ಈ ಇಲಾಖೆಗೆ ಇದೆ. ಅಂತಹಾ ಇಲಾಖೆಯೊಂದು ಈ ಬಾರಿ ಬಲು ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದೆ. ಅದನ್ನ ಬಲು ಹುಮ್ಮಸ್ಸಿನಿಂದ ನಡೆಸಿಕೊಂಡು ಹೋಗುತ್ತಿರುವ ನಿಮ್ಮ ನಡೆ ಕಂಡು ತುಂಬಾನೇ ಹೆಮ್ಮೆ ಪಡುತ್ತಿರುವೆ... ನೀವು ಹಾಕಿಕೊಂಡಿರುವ ಅನೇಕ ಯೋಜನೆಗಳು ಉತ್ತಮವಾಗಿದೆ... ಇವುಗಳಲ್ಲಿ ನನ್ನನ್ನ ಬಹುವಾಗಿ ಸೆಳೆದದ್ದು ಎ ಗ್ರೇಡ್ ದೇವಳಗಳಲ್ಲಿ ಗೋಶಾಲೆಯ ನಿರ್ಮಾಣ... ಬಹುಶಃ ಇದೊಂದು ಬಲು ಉತ್ತಮ ಪರಿಕಲ್ಪನೆ... ಇದರ ಮೂಲ ಸ್ವರೂಪ ಹೇಗಿದೆಯೋ ಗೊತ್ತಿಲ್ಲ ಆದರೆ ಗೋಶಾಲೆ ನಿರ್ಮಾಣ ಮಾಡುವುದೇನೋ ದೊಡ್ದದಲ್ಲ ಆದರೆ ಅದನ್ನ ನಿರ್ವಹಿಸೋದು ಬಹಳ ಕಷ್ಟ... ಮಂಗಳೂರಿನ ಗೋವನಿತಾಶ್ರಯಕ್ಕೆ ಭೇಟಿ ಕೊಟ್ಟಾಗ ನಾನು ಕಂಡ ಸತ್ಯ ಅದು... ಗೋವುಗಳಿಗೆ ಬೇಕಾದ ಆಹಾರ, ಅವುಗಳನ್ನ ನೋಡಿಕೊಳ್ಳಲು ಬೇಕಾದ ಆಳು ಕಾಳುಗಳು ಇವೆಲ್ಲವನ್ನೂ ಹೊಂದಿಸೋದು ಬಲು ಕಷ್ಟವೇ ಸರಿ.. ಗೋಶಾಲೆಯನ್ನ ಮಾಡಿ ಅಂತ ಸುತ್ತೋಲೆ ಕಳುಹಿಸಿ ಅದು ಸರಿಯಾಗಿ ನಿರ್ವಹಣೆಯಾಗದೇ ಹೋದರೆ ಅದೊಂದು ದುರಂತವೇ ಸರಿ... ಈ ನಿಟ್ಟಿನಲ್ಲಿ ಸರಕಾರ ಪರಿಪೂರ್ಣವಾದ ಯೋಜನೆ ಮತ್ತು ಯೋಚನೆ ಮಾಡಿಯೇ ಮುಂದುವರಿಯುವುದು ಉತ್ತಮ... ಮುಖ್ಯವಾಗಿ ನೋಡಿಕೊಳ್ಳಲು ಜನ ಸಿಗುವುದು ಬಹಳ ಕಷ್ಟ ಪ್ರತಿಯೊಬ್ಬರ ಮನೆಯಲ್ಲೂ ದನಗಳಿರುತ್ತಿದ್ದ ಕಾಲದಿಂದ ಜಿಲ್ಲೆಗೊಂದು ಗೋಶಾಲೆ ಅನ್ನುವಂತಾಗಿದೆ. ಹಾಗಾಗಿ ಗೋವಿನ ಚಾಕರಿ ಮಾಡಲು ಮುಂದೆ ಬರುವವರಿಗೆ ಅತ್ಯುತ್ತಮ ವೇತನ ನೀಡುವ ಕಾರ್ಯ ಕೈಗೊಂಡಲ್ಲಿ ನಿಜಕ್ಕೂ ಜನ ಮುಂದೆ ಬಂದಾರು... ಆರ್ಥಿಕವಾಗಿ ಲಾಭವಿದೆ ಅಂದಾಗ ಈ ವೃತ್ತಿಯನ್ನೂ ಸ್ವೀಕರಿಸೋ ಜನರು ಸಿಗುವುದರಲ್ಲಿ ಸಂಶಯವಿಲ್ಲ... ಕಲಿಯೋದರಲ್ಲಿ ಹಿಂದುಳಿದ ಅದೆಷ್ಟೋ ಜನರಿಗೆ ಇದು ಉತ್ತಮ ಕೆಲಸವಾಗಬಲ್ಲದು... ಇನ್ನೂ ಆಕಳ ಮೇವಿನ ಬಗ್ಗೆ... ದೇವಳ ಅಂತಂದ ಮೇಲೆ ಭಕ್ತರು ಇದ್ದೇ ಇರುತ್ತಾರೆ... ಈ ಭಕ್ತರಿಗೂ ಒಂದು ಅವಕಾಶ ಒದಗಿಸಿ ಕೊಡೋ ಯೋಚನೆ ಮಾಡಬಹುದು.... ಅದೇನೆಂದರೆ ಭಕ್ತರು ತಾವೇ ಹುಲ್ಲನ್ನ ಬೆಳೆದು ಗೋವಿಗೆ ತಂದು ಕೊಡುವ ಯೋಜನೆ... ಈ ರೀತಿ ತಂದು ಹುಲ್ಲು ಕೊಡುವ ಭಕ್ತರಿಗೆ ದೇವರ ಮತ್ತು ಗೋವಿನ ವಿಶೇಷ ಪ್ರಸಾದ ವಿತರಣೆಯ ಕ್ರಮ... ಇನ್ನೂ ಬೇಕಿದ್ದಲ್ಲಿ ದೇಸೀ ಗೋವುಗಳನ್ನೇ ಸಾಕಿ, ಮೇವು ತಂದವರಿಗೆ ಹಾಲು ಅನ್ನುವ ಪರಿಕಲ್ಪನೆಯನ್ನೂ ಯೋಚಿಸಬಹುದು. ಇದರಿಂದ ದೇಸೀ ತಳಿಗಳೂ ಬೆಳೆಯುತ್ತದೆ.. ಜತೆಗೆ ದೇಸೀ ಹಾಲನ್ನ ಪಡೆದ ಭಕ್ತರ ಆರೋಗ್ಯವೂ ಚೆನ್ನಾಗಿರುತ್ತದೆ. ಗೋಸೇವೆಯ ಅವಕಾಶವನ್ನೂ ಭಕ್ತರಿಗೆ ನೀಡಬಹುದು. ಗೋಶಾಲೆಯ ಪರಿಪೂರ್ಣ ಲಾಭ ಪಡೆದುಕೊಳ್ಳಬೇಕಾದಲ್ಲಿ ಗೋವಿನ ಪ್ರತಿಯೊಂದು ಉತ್ಪನ್ನಗಳನ್ನೂ ತಯಾರಿಸಿ ಮಾರಾಟ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಇದರಿಂದ ಸ್ಥಳೀಯರಿಗೆ ಗೋವಿನ ತಾಜಾ ಉತ್ಪನ್ನಗಳು ಕಡಿಮೆ ಬೆಲೆಗೆ ಮತ್ತು ಕ್ಲಪ್ತ ಸಮಯಕ್ಕೆ ಸಿಗುವಂತಾಗುತ್ತದೆ. ಇದರ ಜತೆಗೇ ದೇವಳದಲ್ಲಿ ಜಾಗಗಳಿದ್ದಲ್ಲಿ " ಯಾಗವನ "... ಅನ್ನುವ ಯೋಜನೆಯನ್ನೂ ಹಾಕಿಕೊಳ್ಳಬಹುದು... ನಮ್ಮಲ್ಲಿ ಅನೇಕಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ ಇದಕ್ಕೆ ಬೇಕಾದ ಸಮಿತ್ತುಗಳನ್ನ ದೇವಳದ ಯಾಗವನದಲ್ಲಿ ಬೆಳೆದು ಅದನ್ನ ಭಕ್ತರಿಗಾಗಲೀ ಇತರರಿಗಾಗಲೀ ಕೊಡುವ ಯೋಜನೆ... ನ್ಯಾಯಯುತವಾದ ಬೆಲೆಗೆ ಅಸಲಿ ಸಮಿಧೆಗಳು ಸಿಗುವುದೇ ಅಪರೂಪವಾದ ಈ ಕಾಲದಲ್ಲಿ ಇದು ಉತ್ತಮ ಯೋಜನೆಯಾಗಬಹುದು. ದೇವಳಕ್ಕೆ ಆದಾಯವೂ ಆಗಬಹುದು. ಇದೇ ರೀತಿಯಲ್ಲಿ ದೇವಳದಲ್ಲಿ ಸಾಂಪ್ರದಾಯಿಕವಾಗಿ, ಶುದ್ಧವಾದ ರೀತಿಯಲ್ಲಿ ಮಾಡುವ ಕುಂಕುಮ, ಭಸ್ಮ, ಅರಶಿನಗಳನ್ನು ಬಳಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಅದೇ ರೀತಿ ದೇವಳದ ಪರಿಸರದಲ್ಲಿ ಭಕ್ತರಿಗೆ ಈ ಸುವಸ್ತುಗಳು ಸಿಗುವ ವ್ಯವಸ್ಥೆಯೂ ಆದರೆ ಉತ್ತಮ. ಇನ್ನು ಪೂಜಾ ಸಾಮಾಗ್ರಿಗಳ ಉತ್ಪಾದನೆಯ ಎಲ್ಲಾ ಸಂಸ್ಥೆಗಳು ಧಾರ್ಮಿಕ ಧತ್ತಿ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವಂತಾಗಬೇಕು. ಕರ್ಪೂರ, ಊದುಬತ್ತಿ ಇತ್ಯಾದಿ ಅನೇಕ ವಸ್ತುಗಳು ನಕಲಿಯೇ ಸಿಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯು ಪ್ರಮಾಣ ಪತ್ರ ಕೊಡುವ ಸಂಸ್ಥೆಯು ಸಾಂಪ್ರದಾಯಿಕವಾಗಿ ಅದನ್ನ ತಯಾರಿಸುತ್ತಿದೆಯೇ...? ಅನ್ನುವುದನ್ನ ಕಾಲಕಾಲಕ್ಕೆ ಪರಿಶೀಲನೆ ಮಾಡಿದರೆ ಉತ್ತಮವಲ್ವೇ.. ಇನ್ನು ದೇವಳದಲ್ಲಿ ವಸ್ತ್ರಸಂಹಿತೆಯನ್ನ ಕಡ್ಡಾಯಗೊಳಿಸುವ ಆಲೋಚನೆಯನ್ನೂ ಮಾಡಬಹುದು.. ಇಲ್ಲಿ ಅನೇಕರು ಕೆಲಸದ ನಡುವೆ ದೇವಳಕ್ಕೆ ಬಂದು ಹೋಗುವವರಿದ್ದರೆ ಅವರಿಗೆ ಅನುಕೂಲವಾಗುವಂತೆ ದೇವಳದಲ್ಲೇ ಪಂಚೆ ಶಲ್ಯಗಳನ್ನೂ... ಬಾಡಿಗೆಗೆ ವಿತರಿಸುವ ಕ್ರಮ ಅನುಸರಿಸಿದಲ್ಲಿ ಉತ್ತಮ..ಇದರಿಂದ ದೇವಳಕ್ಕೆ ಆದಾಯವೂ ಆಗುತ್ತದೆ.. ಸಂಪ್ರದಾಯ ಉಳಿದಂತೆಯೂ ಆಗುತ್ತದೆ... ಬರುವ ಜನರಿಗೂ ಅನುಕೂಲವಾಗುತ್ತದೆ. ಇದರಿಂದ ಅಲ್ಲೂ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ... ಅದನ್ನ ನೋಡಿಕೊಳ್ಳುವವ ಒಬ್ಬಾತನಾದರೆ ...ಆ ಬಟ್ಟೆಗಳನ್ನ ಒಗೆದು ಶುಭ್ರಗೊಳಿಸುವ ಕಾಯಕವೂ ಸೃಷ್ಟಿಯಾಗುತ್ತದೆ. ಇನ್ನು ದೇವಳದ ಪರಿಚಾರಿಕೆಯಲ್ಲಿ ತೊಡಗಿಸಿಕೊಳ್ಳುವ ಅನೇಕರ ಮಕ್ಕಳಿಗೆ ಅವರ ಧಾರ್ಮಿಕ ನಡವಳಿಕೆಯ ಆಧಾರದ ಮೇಲೆ ವಿದ್ಯಾರ್ಥಿ ವೇತನವನ್ನೂ ನೀಡುವ ಕಾರ್ಯಕ್ರಮ ಹಾಕಿಕೊಳ್ಳಬಹುದು. ದೇವಳದಿಂದ ರಾಮಯಾಣ, ಮಹಾಭಾರತ ಮುಂತಾದ ಅನೇಕ ವಿಚಾರಗಳ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವಂತಹಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಬಹುದು... ಪ್ರತಿ ನಿತ್ಯ ಅಥವಾ ಸಂಜೆ ಆಸುಪಾಸಿನ ಮಕ್ಕಳಿಗೆ ಎಳವೆಯಲ್ಲಿಯೇ " ಸಂಸ್ಕಾರ ಮತ್ತು ಸಂಪ್ರದಾಯ "ಗಳ ಪಾಠ ಹೇಳಿಕೊಡುವ ಹಿಂದೂ ಧರ್ಮದ ಶ್ರೇಷ್ಠತೆಯ ಪಾಠ ಹೇಳಿಕೊಡುವ ಕೆಲಸವನ್ನೂ ಮಾಡಬಹುದು. ನಮ್ಮ ಹಿಂದಿನ ಜೀವನಶೈಲಿಯನ್ನ ಅನುಸರಿಸುವಂತಹಾ ಕುಟುಂಬಗಳನ್ನ ಗುರುತಿಸುವ ಮತ್ತು ಅದನ್ನ ಇತರಿಗೆ ತೋರಿಸಿಕೊಟ್ಟು ಜನರಲ್ಲಿ ಅವರಂತೆ ಬಾಳಿ ಬದುಕಬೇಕೆನ್ನುವ ಅಂತಃಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಬಹುದು. ದೇವಳಗಳು ಬರಿಯ ಶಿಲ್ಪಸೌಂದರ್ಯದ ಬೀಡಾಗದೇ ಅದು ಭಕ್ತರ ಆಧ್ಯಾತ್ಮಿಕ ಉನ್ನತಿಗೂ ಕಾರಣವಾಗುವಂತಹಾ ಯೋಜನೆಗಳನ್ನೂ ಹಾಕಿಕೊಳ್ಳಬಹುದು. ಇನ್ನೂ ಸಲಹೆಗಳನ್ನ ಕೇಳಿದಲ್ಲಿ ಉತ್ತಮವಾದ ಸಲಹೆಗಳು ಬಂದೀತು... ಎಷ್ಟು ಸಾಧ್ಯವೋ ಅಷ್ಟನ್ನು ಅಳವಡಿಸಿಕೊಂಡು ದೇವಳಗಳನ್ನ ಸಮಾಜದ ಶಕ್ತಿ ಕೇಂದ್ರವನ್ನಾಗಿಸಿ ಅನ್ನುವ ಆಶಯ ನನ್ನದು...ಬಹುಶಃ ನೀವಿದನ್ನ ಮಾಡಿ ತೋರಿಸಬಲ್ಲಿರಿ ಅನ್ನುವ ಆಶಾಭಾವ ಜಾಗೃತವಾದ ಕಾರಣಕ್ಕೇನೇ ಇಂತಹಾ ಪತ್ರವೊಂದನ್ನ ಬರೆದೆನೇನೋ... ✍️ ಗುರುಪ್ರಸಾದ್ ಆಚಾರ್ಯ, ಕುಂಜೂರು
ಪಾಂಗಾಳ : ಸುಸಜ್ಜಿತ ಹಿಂದೂ ರುದ್ರಭೂಮಿ ನಿರ್ಮಾಣ

Posted On: 18-03-2020 03:19PM
ಇನ್ನಂಜೆ ಗ್ರಾಮಪಂಚಾಯತಿಯ ಹದಿನಾಲ್ಕನೇ ಹಣಕಾಸಿನ ನಿಧಿಯಿಂದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ "ಪಾಂಗಾಳ ಹಿಂದೂ ರುದ್ರಭೂಮಿಯನ್ನು" ಸುಸಜ್ಜಿತ ಗೊಳಿಸಿದ ಇನ್ನಂಜೆ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಗಳಿಗೆ ,ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರೆಲ್ಲರಿಗೂ ಗ್ರಾಮಸ್ಥರ ಪರವಾಗಿ ಧನ್ಯವಾದಗಳು. ಇದರ ಹಿಂದೆ ಶ್ರಮಿಸಿದ ಪಂಚಾಯತ್ ಅಧ್ಯಕ್ಷರಾದ ರೇಖಾ ಅನಿಲ್ ಕುಮಾರ್, ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ, ಪಂಚಾಯತ್ ಸದಸ್ಯರಾದ ನಾಗೇಶ್ ಭಂಡಾರಿಯವರಿಗೆ ಧನ್ಯವಾದಗಳು. ಹಿಂದೂ ಮುಖಂಡರಾದ ದಿನೇಶ್ ಪಾಂಗಾಳ ಇವರ ನೇತೃತ್ವದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಲಿನಿಶೆಟ್ಟಿ ಇನ್ನಂಜೆ ಹಾಗೂ ಪಂಚಾಯತ್ ಸದಸ್ಯರಾದ ನಾಗೇಶ್ ಭಂಡಾರಿಯವರಿಗೆ ಈ ಹಿಂದೆ ಸ್ಮಶಾನದ ಕುರಿತಂತೆ "ಸಾರ್ವಜನಿಕರ ಸಮ್ಮುಖದಲ್ಲಿ ಮನವಿ ಸಲ್ಲಿಸಲಾಗಿತ್ತು.. ಜನರ ಬೇಡಿಕೆಗಳಿಗೆ ಶೀಘ್ರದಲ್ಲಿ ಸ್ಪಂದಿಸುವ ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಿಗೆ ಪಾಂಗಾಳದ ಜನತೆ ಧನ್ಯವಾದಗಳನ್ನು ತಿಳಿಸಿದರು.
ಸ್ವಚ್ಚತೆ ಭಾರತೀಯರ ಸಂಸ್ಕೃತಿಯಲ್ಲೇ ಅಡಕವಾಗಿದೆ - ಕೆ.ಎಲ್.ಕುಂಡಂತಾಯ

Posted On: 18-03-2020 01:55PM
ಸ್ವಚ್ಛತೆ ನಮ್ಮ ಸಂಸ್ಕೃತಿ , ಪರಂಪರೆ ಕೆ . ಎಲ್ . ಕುಂಡಂತಾಯ "ಕೊರೋನ ವೈರಸ್" ಮನುಕುಲವನ್ನು ಬಾಧಿಸುತ್ತಿದೆ . ಆದರೆ ಭಾರತೀಯ ಸಂಸ್ಕೃತಿಯಲ್ಲಿ - ಪರಂಪರೆಯಲ್ಲಿ , ನಮ್ಮ ವಿಧಿಯಾಚರಣೆಗಳಲ್ಲಿ , ಜೀವನವಿಧಾನದಲ್ಲಿ ಸ್ವಚ್ಛತೆ ಹೇಗೆ ಹಾಸುಹೊಕ್ಕಾಗಿದೆ ಎಂಬುದೇ ಈ ಬರೆಹ . ಭಾರತೀಯರ ಬದುಕಿನ ಸಮಗ್ರತೆಯಲ್ಲಿ , ಸಾಂಸ್ಕೃತಿಕ ಸದಾಚಾರಗಳಲ್ಲಿ , ಧಾರ್ಮಿಕ ವಿಧಿಯಾಚರಣೆಗಳಲ್ಲಿ ಸ್ವಚ್ಛತೆಯ ಸಂಸ್ಥಾಪನೆ ಅನಿವಾರ್ಯ . ಇದು ನಿಚ್ಚಳ . ಶುದ್ಧೀಕರಣ ಪ್ರಕ್ರಿಯೆಯಿಂದಲೇ ನಮ್ಮ ಆಚಾರ - ವಿಚಾರಗಳು , ನಡವಳಿಕೆಗಳು ಮೊದಲ್ಗೊಳ್ಳುವುದು . ಮನುಕುಲವು ನಾಗರಿಕತೆಯ ಪ್ರಾರಂಭದಲ್ಲಿ , ವಾಸ್ತವ್ಯ ಹೂಡಿ ಬದುಕು ಕಟ್ಟಿದಂದಿನಿಂದ ಶುಚಿತ್ವಕ್ಕೆ ಆದ್ಯತೆ ಕೊಟ್ಟಿದೆ . ಅದು ಬಹಳ ಸರಳ ವಿಧಾನದಲ್ಲಿದ್ದು ಮುಂದೆ ವಿಕಾಸದ ವಿವಿಧ ಹಂತಗಳಲ್ಲಿ ರೂಪಾಂತರ , ನಿಷ್ಟಾಂತರಗೊಂಡರೂ ಮೂಲ ಆಶಯವನ್ನು ಮರೆಯದೆ ಜೀವನದ ಅಗತ್ಯವಾಗಿ ಗಾಢವಾಗಿ ರೂಢಗೊಂಡಿರುವುದನ್ನು ಗುರುತಿಸಬಹುದು. ಸ್ವಚ್ಛತೆಗೆ ಜನಪದರಲ್ಲಿ ಇರುವ ನಿರೂಪಣೆ , ಆಚರಣೆಯಲ್ಲಿರುವ ಶ್ರದ್ಧೆಯ ಸ್ವರೂಪವೇ ಆಧಾರವಾಗಿ ಸ್ಪುಟಗೊಳ್ಳುವಿಕೆಯಲ್ಲಿ ಬದುಕಿನ ಅವಿಭಾಜ್ಯ ಅಂಗವಾಗುತ್ತದೆ . ವೇದ ಪೂರ್ವಕಾಲದ ಜನಪದರ ಕಲ್ಪನೆಗಳು ವೇದಕಾಲದಲ್ಲಿ ವಿಮರ್ಶೆಗೊಳಗಾಗಿ ಶಿಷ್ಟವಾಗಿ ಬದಲಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ . ಅದರಂತೆ ಜೀವನ ಶೈಲಿಯೂ ಮೂಲವನ್ನು ಮರೆಯದೆ , ಅದರ ನೆಲೆಗಟ್ಟಿನ ಆಧಾರದಲ್ಲಿ ರೂಪುಗೊಂಡಿತು . ಎಲ್ಲ ಅಗತ್ಯ ಸ್ವೀಕಾರಗಳೊಂದಿಗೆ ಸ್ವಚ್ಛತೆಯ ವಿಚಾರವೂ ಮತ್ತಷ್ಟು ನಿಖರವಾಗಿ ನಿಯಮಬದ್ಧವಾಗುತ್ತದೆ . ನಿಷ್ಟೆಯಾಗಿ , ಬದ್ಧತೆಯಾಗಿ ನೆಲೆಯಾಗುತ್ತದೆ . ಸ್ವಚ್ಛತೆ , ವೈಯಕ್ತಿಕದಿಂದ ತೊಡಗಿ ಸಮಷ್ಟಿಯವರೆಗೆ ವ್ಯಾಪಿಸಿದ ಕ್ರಮವನ್ನು ಬೇರೆ ಬೇರೆ ಆಯಾಮಗಳಿಂದ ಗಮನಿಸಿದಾಗ ನಮ್ಮ ಪೂರ್ವಸೂರಿಗಳ ನಂಬಿಕೆಯ ಬದುಕಿನಲ್ಲಿ ಸ್ವಚ್ಛತೆ ಎಷ್ಟು ಪ್ರಧಾನವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ . ವೈಯಕ್ತಿಕ - ಕೌಟುಂಬಿಕವಾಗಿ ಇರುವ ಶುದ್ಧದ ಕಲ್ಪನೆ - ಪ್ರಕ್ರಿಯೆ ಸಾಮಾಜಿಕವಾಗಿ ವ್ಯಾಪಿಸಿರುವ ವಿಧಾನವು ಸ್ವಚ್ಛತೆಗೆ ನೀಡಿರುವ ಪ್ರಾಶಸ್ತ್ಯವನ್ನು ಪ್ರತಿಪಾದಿಸುವಂತಿದೆ .ಇದು ನಮ್ಮ ಉಪಾಸನಾ ಶ್ರದ್ಧೆ ಆರಂಭದಿಂದಲೇ ಇದೆ . ಯಾಕೆ ಎಂಬ ಪ್ರಶ್ಮೆ ಇಲ್ಲದೆ ಸಂಪ್ರದಾಯವಾಗಿ ಆಚರಿಸಲ್ಪಡುತ್ತಲೇ ಬಂದಿದೆ . ಇದು ನಮ್ಮ ಸಂಸ್ಕೃತಿಯಾಗಿ ಅನುಷ್ಠಾನದಲ್ಲಿದೆ . |ಸ್ವಚ್ಛತೆ - ಶುದ್ಧಿ - ಮಡಿ| ಸ್ವಚ್ಛತೆಯು 'ಶುದ್ಧ' ವಾಗಿ 'ಮಡಿ' ಎಂಬಲ್ಲಿ ಬಹುವಾಗಿ ವಿಸ್ತರಿಸಲ್ಪಟ್ಟು "ನಿರ್ಮಲ" ಎಂಬ ಭಾವದಲ್ಲಿ ಒಪ್ಪಿತವಾಗಿ "ಶುದ್ಧಾಚಾರ"ವಾಗುವುದನ್ನು ಕಾಣುತ್ತೇವೆ .ಇದೇ ಪವಿತ್ರ ಎಂದಾಗುವುದು ನಮ್ಮ ಸಂಸ್ಕೃತಿ , ನಾವು ಒಪ್ಪಿದ ಮೌಲ್ಯ .ಭಾರತೀಯ ಮನಸ್ಸುಗಳು ಇಂತಹ ಶಿಷ್ಟಾಚಾರಗಳನ್ನು ತಲತಲಾಂತರಗಳಿಂದ ಅನುಸರಿಸಿಕೊಂಡು ಬಂದಿವೆ . ಈ ಸಂಬಂಧದ ಯಾವುದೇ ವಿಮರ್ಶೆಗಳಿಗೆ ಅವಕಾಶವನ್ನು ಕೊಡಲೇ ಇಲ್ಲ . ಯಾಕೆಂದರೆ ಇದು ಸರಳ ಮತ್ತು ಮುಗ್ಧ ಹೃದಯಗಳು ಸಮ್ಮತಿಸಿದ ನಡವಳಿಕೆಗಳು . ಇವು ಅಂತೆಯೇ ಸಾಗಿಬಂದುವು . ಆಚರಣೆಗಳ ಆರಂಭದಲ್ಲಿ ಒಮ್ಮೆ ಸ್ವಚ್ಭತಾಕಾರ್ಯ . ಇದು 'ನಿರ್ಮಲ' ಎಂಬ ಅರ್ಥದಲ್ಲಿ , ಶುದ್ಧಾಚಾರವಾಗಿ ನೆರವೇರುವುದು . ಆರಾಧನೆ , ವಿಧಿನಿರ್ವಹಣೆ ವೇಳೆ ಪರಿಸರದಲ್ಲಿ ಪಾವಿತ್ರ್ಯ ಸೃಷ್ಟಿಗೆ ಶುದ್ಧ ಪ್ರಕ್ರಿಯೆ . ಆಚರಣೆಯಲ್ಲಿ ಪಾಲ್ಗೊಳ್ಳಲು ಬಹುಮಂದಿ ಆಗಮಿಸುವುದು , ಆಚರಣೆಯ ಅನಂತರ ಹಿಂದೆ ತೆರಳುವುದು ,ಈ ಮಧ್ಯೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಜನಸಂದಣಿಯಿಂದ ಉಂಟಾಗುವ ಅಶುದ್ಧಿಯನ್ನು ( ತ್ಯಾಜ್ಯಗಳಿಂದ) ಹೋಗಲಾಡಿಸಿ ಮರಳಿ ಸ್ವಚ್ಛತೆಯನ್ನು ನೆಲೆಗೊಳಿಸಲು ಮತ್ತೆ ಶುದ್ಧದ ವಿಧಿ ನಡೆಯುವುದು ಸಹಜ . ಇದು ದೈವ - ಬೂತ ಆರಾಧನೆ ಮತ್ತು ದೇವತಾರಾಧನೆಗಳ ಸಂದರ್ಭದಲ್ಲಿ ನಡೆಯುತ್ತವೆ . ವೈಯಕ್ತಿಕವಾಗಿ ಮನೆಯಲ್ಲಿ ನಿತ್ಯದಲ್ಲಿ ದೈನಂದಿನ ಕರ್ತವ್ಯದಂತೆ ಸ್ವಚ್ಛತೆ ಪಾಲಿಸಲ್ಪಡುತ್ತದೆ . ಸ್ವಂತದ ಆಚಾರಗಳಲ್ಲಿ - ಉಪಾಸನೆಗಳಲ್ಲಿ ಶುದ್ಧಾಚಾರ ಅನಿವಾರ್ಯವಾಗಿರುತ್ತದೆ . ಅದು ಅಂತೆಯೇ ಪಾಲಿಸಲ್ಪಡುತ್ತವೆ . ಈ ಕಾಳಜಿ ಸಮಷ್ಟಿಯಲ್ಲಿ ಇರಬೇಕು . ಇರಬೇಕು ಎಂಬ ಘೋಷಣೆಗೆ ಹೊಸತಾದ ಚಿಂತನೆಗಳು ಅಗತ್ಯವಿಲ್ಲ , ನಮ್ಮ ಸಂಸ್ಕೃತಿಯ ಮೂಲದಲ್ಲಿದೆ ಎಂಬ ನೆನಪು ಇದೆಯಾದರೆ ಸ್ವಚತಾ ಕಾರ್ಯ ನಿರಾಳ . ಆದರೆ ನಾವು ಮರೆತಿದ್ದೇವೆ ಎನ್ನೋಣವೇ , ಇಲ್ಲ ; ನಮ್ಮ ನೆನಪು ಹಸಿರಾಗಿದೆ . ಆದರೆ ಸ್ವಚ್ಛತೆಗಾಗಿ ಈ ವಿಧಿ ನಿಷೇಧಗಳಿವೆ ಎಂಬ ಗ್ರಹಿಕೆಯೇ ಇಲ್ಲ , ಆಲೋಚಿಸುವುದೇ ಇಲ್ಲ .ಆದರೆ ಈ ಕುರಿತಾದ ಜಾಗೃತಿ ಇರುವುದು , ಜಾಗೃತಿ ಮೂಡುವುದು ಈ ಕಾಲದ ಅಗತ್ಯವಾಗಿದೆ , ನಿರೀಕ್ಷೆಯಾಗಿದೆ .ಅಂದರೆ ನಮ್ಮ ಜೀವನ ವಿಧಾನದಲ್ಲೆ ಸ್ವಚ್ಛತೆಗೆ ಅಷ್ಟು ಪ್ರಾಧಾನ್ಯವಿದೆ ಎಂದು ತಿಳಿಯ ಬೇಕಷ್ಟೆ . ಹಬ್ಬಗಳ ಆಚರಣೆಗಳಲ್ಲಿ ಕೃಷಿಯನ್ನು ನಂಬಿ ,ಅದನ್ನೆ ಆಶ್ರಯಿಸಿ ಬದುಕಲಾರಂಭಿಸಿದ ನಾವು ಕೃಷಿಯ ಫಲವನ್ನೇ ( ಬೆಳೆಯನ್ನು) ದೇವರು ಎಂದು ಪೂಜಿಸುವವರು . ಕೃಷಿ ಕಾರ್ಯ ಮುಗಿಸಿ ಸುರಿಯುವ ಮಳೆಯನ್ನು ಗಮನಿಸುತ್ತಾ ವಿಶ್ರಾಂತಿಗಾಗಿ ಆಟಿ ( ಕರ್ಕಾಟಕ ಮಾಸ) ತಿಂಗಳಲ್ಲಿ ಮನೆ ಸೇರುವ ಕೃಷಿಕ ಆಟಿತಿಂಗಳು ಮುಗಿದೊಡನೆ ಮಳೆಯ ತೀವ್ರತೆ ಕಡಿಮೆಯಾಗುತ್ತದೆ . ಕೃಷಿಕ ಮೈಕೊಡವಿ ಎದ್ದು ಮೊದಲು ಮಾಡುವ ಕೆಲಸ "ಆಟಿ ಪಿದಾಯಿ ಪಾಡ್ನು" ( ಆಟಿಯನ್ನು ಹೊರಹಾಕುವುದು) . ಇದು ಒಂದು ಸ್ವಚ್ಛತಾ ಕಾರ್ಯವೇ . ತೆನೆಕಟ್ಟುವ ಸಂದರ್ಭ ಮತ್ತೊಮ್ಮೆ ಮನೆ , ಮನೆಯಂಗಳವನ್ನು ಸ್ವಚ್ಛಗೊಳಿಸಿ ಅಲಂಕರಿಸುವುದು ಕ್ರಮ . ಮುಂದೆ ದೀಪಾವಳಿಯ ವೇಳೆ ಸಾಮೂಹಿಕವಾಗಿ ,ಊರಿನ ಎಲ್ಲಾ ಮನೆಯವರು ತಮ್ಮತಮ್ಮ ಪರಿಸರದ ಕಸಕಡ್ಡಿಗಳನ್ನೆಲ್ಲ ಒಂದೆಡೆ ರಾಶಿಹಾಕಿ ದೀಪಾವಳಿಯ ಹಿಂದಿನ ದಿನ ಬೆಂಕಿಹಚ್ಚಿ "ಮುಳ್ಳ ಮುಟ್ಟೆ" ಎಂದು ಉರಿನ ಸ್ವಚ್ಛತಾ ಕಾರ್ಯವನ್ನು ಸಾಮೂಹಿಕವಾಗಿ ಮಾಡುವ ಪದ್ದತಿ ಇದೆ . ಈ ಕ್ರಿಯೆ ದೀಪಾವಳಿಯ ಅಂಗವಾಗಿ ನೆರವೇರುತ್ತದೆ . ದೀಪಾವಳಿಯಂದು ಮನೆ , ಹಟ್ಟಿ - ಕೊಟ್ಡಿಗೆ , ಮನೆಗಳ , ಕೃಷಿ ಸಹಾಯಿ ಪ್ರಾಣಿಗಳನ್ನು , ಕೃಷಿಗೆ ಬೇಕಾಗುವ ನೇಗಿಲು ಮುಂತಾದ ಉಪಕರಣಗಳನ್ನು ತೊಳೆದು - ಸ್ವಚ್ಛಗೊಳಿಸಿ ರಾತ್ರಿ ದೀಪ ಬೆಳಗುವ ಆಚರಣೆಯಲ್ಲಿ ಸ್ವಚ್ಛತೆಗೆ ಇರುವ ಆದ್ಯತೆ ಅರಿವಾಗುತ್ತದೆ . ಪ್ರತಿ ಮನೆಯು ಆಚರಣೆಗಳ ನೆವದಲ್ಲಿ ಸ್ವಚ್ಛತೆ ಪಾಲಿಸುವ ಸಂಪ್ರದಾಯ ಪ್ರಾಚೀನವಾದುದು .ಹೀಗೆ ನಮ್ಮ ಆಚರಣೆಗಳಲ್ಲಿ ಸ್ವಚ್ಛತೆಯ ಕಾರ್ಯ ಅಡಕವಾಗಿದೆ . ಮದುವೆ , ಸೀಮಂತ , ಜನನ , ಹೆಣ್ಣು ಮಗು ಪುಷ್ಪವತಿಯಾಗುವುದು ಹೀಗೆ ಎಲ್ಲ ಮಂಗಳಕಾರ್ಯಗಳಲ್ಲಿ ಸ್ವಚ್ಛತೆಗೆ ವಿಶೇಷ ಅವಕಾಶಗಳಿವೆ , ಇವು ಸಂಪ್ರದಾಯಗಳಾಗಿ ನಡೆಸಲ್ಪಡುತ್ತವೆ . ಈ ಸಂದರ್ಭಗಳಲ್ಲಿ ನಡೆಯುವ ಸ್ವಚ್ಛತಾ ಕಾರ್ಯವನ್ನು "ಮಡಿ"ಮಾಡುವುದೆಂದೇ ಹೇಳಲಾಗುತ್ತದೆ. ಅದಕ್ಕಾಗಿಯೇ ಸಮಾಜದಲ್ಲಿ ನಮ್ಮೊಳಗೊಂದು ವರ್ಗವೇ ಇದೆ . ಅವರು ಮಾಡುವ ಮಡಿಯ ಕೆಲಸವು ಶುದ್ಧೀಕರಣ ಎಂದು ಸ್ವೀಕರಿಸಲ್ಪಡುತ್ತದೆ .ಸಾವಿನಲ್ಲಿ ಸ್ವಚ್ಛತೆಗೆ ಮತ್ತೆ ಪೂರ್ಣ ಪ್ರಾಶಸ್ತ್ಯ ನೀಡಲಾಗುತ್ತದೆ . ಮಡಿಯಾಗುವ - ಮಡಿಮಾಡುವ ಕ್ರಿಯೆಗಳು ಬಹಳ ವಿಸ್ತಾರವಾಗಿ ನೆರವೇರುತ್ತವೆ .ಇದೆಲ್ಲವೂ ಸ್ವಚ್ಛತೆಗೆ ನೀಡಲಾದ ಅವಕಾಶವೇ ಆಗಿದೆ . ಬೂತಾರಾಧನೆ - ಕೋಲ ,ನೇಮ ಬೂತಾರಾಧನೆಯ ವೇಳೆ ಸ್ವಚ್ಛತೆ ಬಹಳ ಮಹತ್ವ ಪಡೆಯುವುದನ್ನು ಕಾಣುತ್ತೇವೆ . ಮನೆಯಲ್ಲಿ ನಡೆಯುವ ಬೂತ ಆರಾಧನೆ ಕಾಲದಲ್ಲಿ ಹೇಗೆ ಸ್ವಚ್ಛತೆಗೆ ಅವಕಾಶವಿದೆಯೋ ಅಂತೆಯೇ ಊರಿನ , ಗ್ರಾಮದ , ಸೀಮೆಯ ದೈವಸ್ಥಾನಗಳ ಕೋಲ - ನೇಮ - ಬಂಡಿ ಸಂದರ್ಭಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ . ಪ್ರಾರಂಭದಲ್ಲಿ ಒಮ್ಮೆ ಶುದ್ದದ ಪ್ರಕ್ರಿಯೆ , ಅಂತ್ಯದಲ್ಲೊಮ್ಮೆ ಶುದ್ಧದ ಕೆಲಸ ಎಂದರೆ "ಶುದ್ಧದ ಅಗೇಲು" ಎಂಬ ಆಚರಣೆ ನಡೆಯುತ್ತದೆ . ಇದೆಲ್ಲವೂ ಸ್ವಚ್ಛತೆಗೆ ನೀಡಲಾದ ಅವಕಾಶಗಳೇ ಆಗಿವೆ . ಆಚರಣೆಯ ಪ್ರತಿ ಹಂತದಲ್ಲಿ ಮಡಿ , ಶುದ್ಧ , ಸ್ವಚ್ಛತೆಗೆ ಮಹತ್ವನೀಡುವುದನ್ನು ಗಮನಿಸಬಹುದು .ಇಂದಿಗೂ ರೂಢಿಯಲ್ಲಿವೆ ಎಂಬುದರಿಂದ ಸ್ವಚ್ಛತೆ ನಮ್ಮ ಸಂಸ್ಕೃತಿಯ ಒಂದಂಗವಾಗಿರುವುದು ನಿಚ್ಚಳವಾಗುತ್ತದೆ . ಬೂತಾರಾಧನೆಯ ಪ್ರತಿ ಹಂತವೂ ಶುದ್ಧವನ್ನು ಅಥವಾ ಶುದ್ಧ ಪ್ರಕ್ರಿಯೆಯನ್ನು ಒಳಗೊಂಡಿದೆ .ಶುದ್ಧಕ್ಕಾಗಿ "ಹೋಮ ದೀಪಿನಿ" ಎಂಬ ವಿಧಿ ನಿರ್ವಹಿಸಲಾಗುತ್ತದೆ ."ಸುದ್ದ ಕಲಸ ಕಟ್ಟುನಿ" ಎಂಬ ಜನಪದರ ನಿರ್ವಹಣೆಯೂ ಶುದ್ಧದ ಕಾರ್ಯವೇ ಆಗಿದೆ . ಅಗ್ನಿ - ಜಲಗಳೇ ಪ್ರಧಾನವಾಗಿ ಶುದ್ದ ಕ್ರಿಯೆ ನಡೆಸಲಾಗುವುದು .ಬಹು ಮಂದಿ ಭಾಗವಹಿಸುವ ಸಮಷ್ಟಿಯ ಕಾರ್ಯಕ್ರಮಗಳು ಇವು ಆಗಿರುವುದರಿಂದ ಪ್ರಾರಂಭದಲ್ಲಿ ಮತ್ತೆ ಕೊನೆಯಲ್ಲಿ ಶುದ್ಧದ ಶಾಸ್ತ್ರ ನಡೆಯುತ್ತದೆ . ಶುದ್ಧ - ಸ್ವಚ್ಛ ಪರಿಸರದಲ್ಲಿ ಆರಾಧನೆ .ಬಳಿಕ ಕೊನೆಗೆ ಶುದ್ದ ಕ್ರಿಯೆಯಿಂದ ಶುದ್ಧವನ್ನು ಮತ್ತೆ ನೆಲೆಗೊಳಿಸುವುದು . ಎಂತಹ ಕಲ್ಪನೆ , ಸ್ವಚ್ಛತೆಗೆ ನೀಡಿದ ಪ್ರಾಶಸ್ತ್ಯ . ದೇವಾಲಯ - ಉತ್ಸವ ದೇವಾಲಯಗಳ ಉತ್ಸವಗಳು ವೈದಿಕ ವಿಧಿಯಾಚರಣೆಯಾಗಿ ನಡೆಯುತ್ತವೆ . ಇಲ್ಲಿ ತಂತ್ರಾಗಮ ಶಾಸ್ತ್ರದ ಅನುಕರಣೆಯೂ ನಿಚ್ಚಳ . ವಾರ್ಷಿಕ ಮಹೋತ್ಸವ ಆರಂಭದಲ್ಲಿ ಒಮ್ಮೆ ಶುದ್ಧೀಕರಣ . ಉತ್ಸವ ಅಂತ್ಯದಲ್ಲಿ "ಸಂಪ್ರೋಕ್ಷಣೆ" ಎಂಬ ಶುದ್ಧೀಕರಣ . ಭಕ್ತರು ಆಗಮಿಸುವ ವೇಳೆ ಸ್ವಚ್ಛ ಪರಿಸರ ನಿರ್ಮಿಸುವುದು .ದೇವರ ಬಲಿ ಹೊರಟು ಒಳಾಂಗಣದಿಂದ ಹೊರಾಂಗಣಕ್ಕೆ ಆಗಮಿಸುವಾಗ "ಅಡಿಪು" ಎಂಬ ಸಾಂಕೇತಿಕ ಗುಡಿಸುವ ಕ್ರಿಯೆ ಇದೆ , ಬಹುಶಃ ಇದೇ ದೇವಳ ಪರಿಸರದ ಸ್ವಚ್ಛತೆಯನ್ನು ಮಾಡಬೇಕು ಎಂಬ ಸಂದೇಶವನ್ನು ಕೊಡುವಂತಿದೆ . ಬಳಿಕ ಜಾತ್ರೆ ಮುಗಿದೊಡನೆ ಮತ್ತೆ ಶುದ್ಧವನ್ನು ಅಂದರೆ ಸ್ವಚ್ಛತೆಯನ್ನು ನೆಲೆಗೊಳಿಸುವುದು .ಸದಾ ಸ್ವಚ್ಭವಾಗಿರ ಬೇಕೆಂಬ ಸೂಚನೆ ಇದಲ್ಲವೇ . ಈ ಸ್ವಚ್ಛತೆ - ಶುದ್ಧೀಕರಣವನ್ನು ಹೇಗೆ ನಿರ್ವಹಿಸಬೇಕೆಂದು ಶಾಸ್ತ್ರವು ವಿಸ್ತಾರವಾಗಿ ವಿವರಿಸುತ್ತದೆ . ಗೋಮಯದಿಂದ ದೇವಾಲಯ ಪರಿಸರವನ್ನು ಸಾರಿಸಿ ಎಂದು ಹೇಳುವ ಶಾಸ್ತ್ರವು ಬಳಿಕ ತಳಿರು ತೋರಣಗಳಿಂದ ಅಲಂಕರಿಸಬೇಕು ಎಂದು ಸೂಚಿಸುತ್ತದೆ . ಮೊದಲು ಸ್ವಚ್ಭತೆಯನ್ನು ಸ್ಥಾಪಿಸಿ ಉತ್ಸವಾದಿಗಳನ್ನು ನಡೆಸಬೇಕು ಎಂದು ಪ್ರಮಾಣ ಗ್ರಂಥಗಳು ಮಾರ್ಗದರ್ಶನ ನೀಡುತ್ತವೆ .ಸ್ವಚ್ಛತೆ ನಮ್ಮ ಜೀವನ ವಿಧಾನದಲ್ಲಿ ಹಾಸುಹೊಕ್ಕಾಗಿದೆ . ಇಂತಹ ಸ್ವಚ್ಛತಾ ಪರಿಕಲ್ಪನೆಯನ್ನು ಮತ್ತೊಮ್ಮೆ ನೆನಪಿಸುವುದು ಈ ಲೇಖನದ ಉದ್ದೇಶ . ಪುಣ್ಯಾಹ ವಾಚನ ಇದೊಂದು ವೈದಿಕದ ಕರ್ಮಾಂಗ . ಇದನ್ನು "ಶುದ್ಧ ಪುಣ್ಯಾರ್ಚನೆ" ಎಂದೂ ಹೇಳಲಾಗುತ್ತದೆ . ಅಂದರೆ ಕಾರ್ಯಾರಂಭದಲ್ಲಿ ಪಂಚಗವ್ಯದಿಂದ , ಕುಶೋದಕದಿಂದ ಕಲಶವನ್ನು ಸಿದ್ಧಗೊಳಿಸಿ ಅದರಲ್ಲಿ ದೇವಾನು ದೇವತೆಗಳನ್ನು ನೆಲೆಗೊಳಿಸಿ ಪೂಜಿಸುವುದು , ಶುದ್ಧವನ್ನು ಸ್ಥಾಪಿಸಿ , ಘೋಷಿಸುವುದು . ಬಳಿಕ ದೇಹ ಶುದ್ಧಿಗಾಗಿ ಸೇವಿಸುವುದು , ಪರಿಸರ ಶುದ್ಧಿಗಾಗಿ ಪ್ರೋಕ್ಷಿಸುವುದು . ಪುಣ್ಯವಾಗಲಿ , ವೃದ್ಧಿಯು ಸಮೃದ್ದಿಯಾಗಲಿ , ಕರ್ಮಾಂಗದ ಸಂಭ್ರಮವು ನೆಲೆಯಾಗಲಿ ಎಂಬುದು ಆಶಯವಾಗಿರುತ್ತದೆ . ಇದು ವೈದಿಕವು ವಿಸ್ತರಿಸುವ ಶುದ್ಧದ ಪ್ರಕ್ರಿಯೆ, ಅದೇ ಸ್ವಚ್ಛತಾ ಘೋಷಣೆ . ಇಂತಹ ಪರಿಶುದ್ಧ ಪರಿಸರವು ಶಾಂತ ಮನಸ್ಸಿನ ಪಾಲ್ಗೊಳ್ಳುವಿಕೆಗೆ ಪೂರಕವಾಗುವುದು . ಮನಸ್ಸಿನ ಸುಪ್ರಸನ್ನತೆಗೆ ಪರಿಸರ ಕಾರಣವಾಗುತ್ತದೆ . ಗಮಗಮಿಸುವ ಹೂವುಗಳು , ಹಚ್ಚ ಹಸುರಿನ ನೋಟ , ಮುದನೀಡುವ ನಿರ್ಮಿತಿಗಳು , ದಿವ್ಯವು ಸಾನ್ನಿಧ್ಯವಹಿಸುವ ಭವ್ಯ ಕಟ್ಟಡಗಳು , ಎಲ್ಲೆಡೆ ಒಪ್ಪ ಓರಣ , ಸ್ವಚ್ಛ . ಹೀಗೆ ಸ್ವಚ್ಛತೆಯನ್ನು ಕಾಪಾಡಬೇಕೆಂದು ವೈದಿಕ ಕರ್ಮಾಂಗಗಳು ಸೂಚಿಸುತ್ತವೆ . ಮನಃ ಶಾಂತಿಗೆ ಪೂರಕವಾಗಬಹುದಾದ ಸನ್ನಿವೇಶದಲ್ಲಿ ಮಾತ್ರ ದೇವಾಲಯ ಸಂದರ್ಶನ - ದೇವರೊಂದಿಗೆ ತಾದಾತ್ಮ್ಯ ಬೆಸೆಯಲು ಸಾಧ್ಯ . ಇಂತಹ ಸಿದ್ಧಿಗೆ ದೇವಾಲಯ ಪರಿಶುದ್ಧವಾಗಿರ ಬೇಕು ,ಸ್ವಚ್ಛವಾಗಿರಬೇಕು . ಈ ಸ್ವಚ್ಛ ಪರಿಸರ ಮಾನಸಿಕ ಶುಭ್ರತೆಗೆ ಕಾರಣವಾಗುತ್ತದೆ . ನೂತನ ದೇವಾಲಯಗಳಲ್ಲಿ ಅಥವಾ ಪ್ರತಿವರ್ಷಕ್ಕೊಮ್ಮೆ ದೇವಾಲಯಗಳಲ್ಲಿ ಶುದ್ಧವನ್ನು ಅಂದರೆ ಸ್ವಚ್ಛವನ್ನು ಸ್ಥಾಪಿಸಲು ಮಾಡುವ "ಸಪ್ತಶುದ್ದಿ" ಕರ್ಮಾಂಗವು ವೈದಿಕದ ಅದ್ಭುತ ಪರಿಕಲ್ಪನೆಯಾಗಿದೆ . ಏಳು ವಿಧದಲ್ಲಿ ಈ ಶುದ್ಧಿ ಕ್ರಿಯೆ ನಡೆಯುತ್ತದೆ .ಇಂತಹ ಹತ್ತಾರು ವಿಧದ ಸ್ವಚ್ಛತೆಗೆ ಎಂದೇ ಇರುವ ವಿಧಿಗಳು ದೇವಾಲಯಗಳಲ್ಲಿ ನಡೆಯುತ್ತವೆ . ಇದೊಂದು ವಿಸ್ತಾರವಾದ ಕರ್ಮಾಂಗ .ಇದೆಲ್ಲವೂ ನಮ್ಮ ಸಂಸ್ಕೃತಿಯ ಕೊಡುಗೆಗಳು . ಆದರೆ ..ಸ್ವಚ್ಛತೆಯ ಬಗ್ಗೆ ನಾವು ಇಷ್ಟು ಗಾಢವಾದ , ಸ್ಪಷ್ಟವಾದ ಪರಂಪರೆವುಳ್ಳವರಾದರೂ ನಮ್ಮಲ್ಲಿ ಮತ್ತೆ ಅಭಿಯಾನ ಆರಂಭವಾಗಿದೆ .ಆಗಲೇ ಬೇಕಾದ ಸ್ಥಿತಿ ಸನ್ನಿಹಿತವಾಗಿದೆ . ಈಗಲಾದರೂ ಸ್ವಚ್ಛತೆ ನಮ್ಮ ಸಂಪ್ರದಾಯ ಎಂದು ತಿಳಿಯೋಣ .
ಮಾಚ್೯ 21,22 ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಳ ಜಾತ್ರಾ ಮಹೋತ್ಸವ : ಕೊರೋನಾ ಭೀತಿ ಹಿನ್ನೆಲೆ ಸರಳ ಆಚರಣೆಗೆ ಆದೇಶ

Posted On: 17-03-2020 01:06PM
ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಮಹೋತ್ಸವ ಮಾಚ್ 21 ಮತ್ತು ಪಡುಬಿದ್ರಿ ಚೆಂಡು 22 ರಂದು ನಡೆಯಲಿದೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಅಂದು ನಡೆಯುವ ಎಲ್ಲಾ ಆಚರಣೆಗಳನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲು ಆದೇಶಿಸಿದೆ. ಜಾತ್ರೆಯ ಸಂದರ್ಭದಲ್ಲಿ ಅಂಗಡಿಗಳನ್ನು ಹಾಕಬಾರದು ಎಂದು ತಿಳಿಸಲಾಗಿದೆ. ಇಲ್ಲಿ ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿವೆ. ಇಲ್ಲಿ 14 ಶನಿವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನಡೆದಿದ್ದು, ಪ್ರತಿದಿನದ ಬಲಿ ಸೇವೆಯು ಯಥಾವತ್ತಾಗಿ ನಡೆಯುತ್ತಿದೆ.
ಉಡುಪಿಯಲ್ಲಿ ಹಿಂದೂ ಜನ ಸಂಘ ಉದ್ಘಾಟನೆ - nammakaup.in

Posted On: 16-03-2020 04:48PM
ಉಡುಪಿ: ಮಾರ್ಚ್ 15. ಉಡುಪಿಯ ಕಿನ್ನಿಮೂಲ್ಕಿ ವೀರಭದ್ರ ಕಲಾಭವನದಲ್ಲಿ ಸ್ವಾಭಿಮಾನಿ, ಸ್ವಾವಲಂಭಿ ಹಿಂದೂ ಸಮಾಜ ನಿರ್ಮಾಣದ ಕನಸಿನೊಂದಿಗೆ ನಾಡಿನ ಹಿರಿಯ ಹಿಂದೂ ಮುಖಂಡರ ಸಮ್ಮುಖದಲ್ಲಿ ಹಿಂದೂ ಜನಸಂಘ ಕರ್ನಾಟಕ ಘಟನೆಯ ಸ್ಥಾಪನೆ ಯಾಗೂ ಅಧಿಕೃತ ಉದ್ಘಾಟನಾ ಸಮಾರಂಭ ನಡೆಯಿತು. ಹಿಂದೂ ಸಮಾಜವನ್ನು ಸಶಕ್ತಶಾಲಿ, ಸದೃಢ ಸಮಾಜವನ್ನಾಗಿ ಮಾಡುವಲ್ಲಿ ಹಿಂದೂ ಸಂಘಟನೆಗಳ ಅಗತ್ಯವಿದೆ, ಈ ದೇಶದ ರಕ್ಷಣೆಗೆ ಹಿಂದೂ ಸಂಘಟನೆಗಳು ಸದಾ ಸಿದ್ದವಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ ಅವರು ತಮ್ಮ ಉದ್ಘಾಟಕರ ಮಾತಿನಲ್ಲಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಹಿಂದೂ ಜನಸಂಘದ ಸಂಸ್ಥಾಪಕಿಯಾದ ಶ್ರೀಮತಿ ಅಂಬಿಕಾ ಪ್ರಭು ಸಂಘಟನೆಯ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಹಿಂದೂ ಮುಖಂಡರಾದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಶ್ರೀರಾಮ ಸೇನೆಯ ಜಿಲ್ಲಾದ್ಯಕ್ಷರಾದ ಜಯರಾಮ ಅಂಬೆಕಲ್ಲು, ಹಿಂದೂ ಜನಜಾಗೃತಿಯ ವಿಜಯಕುಮಾರ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಅವರು ಆಯ್ಕೆಯಾದರು. ಬೆಳಗಾವಿ ಜಿಲ್ಲಾ ಪ್ರಮುಖರಾಗಿ ವೀರೇಶ್ ಹಡಪದ್ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ನಿತಿನ್ ಬೆಳುವಾಯಿ, ವಿನೋದ್ ಕರ್ಕೇರ, ಜಿಲ್ಲಾ ಕಾರ್ಯದರ್ಶಿಯಾಗಿ ಶರತರಾಜ್ ಉಡುಪಿ, ಕೋಶಾಧಿಕಾರಿಯಾಗಿ ಸಂಪತ್ SJ, ಹಾಗೂ ಇತರ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಿ. ರಾಧಾಕೃಷ್ಣ ಶೆಟ್ಟಿ, ಮಧುಕರ ಮುದ್ರಾಡಿ, ವಿಕ್ರಮ್ ಬಾಳಿಗ, ಸುಶಾಂತ್ ಅಮೀನ್ ಉಪಸ್ಥಿತರಿದ್ದರು. ಪ್ರದೀಪ್ ಬೇಲಾಡಿ ಪ್ರಸ್ತಾವನೆಗೈದು, ಶರತರಾಜ್ ಧನ್ಯವಾದ ಸಲ್ಲಿಸಿದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.
ಸಕಲಕಲೆಗಳ ಅಂಬಾರಿ ಪೃಥ್ವಿ ಅಂಬಾರ್

Posted On: 14-03-2020 05:23PM
ಈ ಕಲಾವಿದನ ಬಗ್ಗೆ ನಾವೇನೂ ಹೇಳ್ಬೇಕಂತಾನೇ ಇಲ್ಲ, ಯಾಕಂದ್ರೆ ಈತ ತನ್ನಲ್ಲಿರುವ ಕಲೆಯಿಂದ ಈಗಾಗಲೇ ತನ್ನನ್ನು ತಾನು ಗುರುತಿಸಿಕೊಂಡಿದ್ದಾನೆ.. ಈ ಅದ್ಭುತ ಕಲಾವಿದ ನಮ್ಮ ಕಾಪುವಿನವರು ಅನ್ನೋದೆ ನಮ್ಮ ಹೆಮ್ಮೆ . ಹೌದು, ಕಾಪುವಿನ ಮಜೂರಿನವರು ಈ ಸಕಲಕಲಾವಲ್ಲಭ. ಇವರ ಫೋಟೋ / ವೀಡಿಯೋ ನೋಡಿದ ತಕ್ಷಣ ಹೆಚ್ಚಿನವರು ಗುರುತಿಸೋದು ಇದು ಪೃಥ್ವಿ ಅಂಭಾರ್ ಅಂತ. ಆದರೆ ನಾವು ಗುರುತಿಸೋದು ಉಂದು ನಮ್ಮ ಊರುದ ಜವನೆ ನಾಗರಾಜ್ ಅಂಬೇರ್ ಅಂತ. ಇವರು ಮೊದಲು ಗುರುತಿಸಿಕೊಂಡಿದ್ದು ಈ ಟೀವಿಯ ದಿ ಗ್ರೇಟ್ ಕರ್ನಾಟಕ ಡಾನ್ಸ್ ಲೀಗ್ ರಿಯಾಲಿಟಿ ಶೋನಲ್ಲಿ.. ನಂತರ ಸೈ ಅನ್ನೋ ಡಾನ್ಸ್ ಶೋನಲ್ಲಿ . ಕೇವಲ ಡಾನ್ಸ್'ಗೆ ಮಾತ್ರ ಸೀಮಿತವಾಗಿರದೆ ಕಲೆಯ ಇನ್ನಿತರ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಮಲ್ಟಿ ಟ್ಯಾಲೆಂಟೆಡ್ ಎಂದು ಗುರುತಿಸಿಕೊಂಡರು. ಮುಂದಿನ ದಿನಗಳಲ್ಲಿ ಮಂಗಳೂರಿನ ರೆಡ್ ಎಫ್.ಎಮ್'ನಲ್ಲಿ RJ / ರೇಡಿಯೋ ಜಾಕಿಯಾಗಿ ಗಮನ ಸೆಳೆದರು , ಆಲ್ಬಂ ಸಾಂಗ್ಸ್ , ಶಾರ್ಟ್ ಫಿಲ್ಮ್ಸ್ ,ಸೀರಿಯಲ್'ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು, ಹಾಡುವ,ಕುಣಿಯುವ,ಬರೆಯುವ,ನಟಿಸುವ ಈ ಕಲಾವಿದನಿಗೆ ನಿರ್ದೇಶಕನಾಗೋದು ಕೂಡ ದೊಡ್ಡ ಕನಸು. ಕಲಾ ಪಯಣದಲ್ಲಿ ಏಳು ಬೀಳುಗಳನ್ನು ಕಂಡ ಪೃಥ್ವಿ, ತುಳು ಚಿತ್ರರಂಗದಲ್ಲಿ ಹೀರೋ ಎಂದರೆ ಪೃಥ್ವಿ ಎಂಬ ಮಟ್ಟಿಗೆ ಬೆಳೆದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ದಾರಾವಾಹಿ ಜೊತೆ ಜೊತೆಯಲಿಯಲ್ಲಿ ನೀಲ್ ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದಾರೆ. ಇದೀಗ ಪೃಥ್ವಿಗೆ ಅತಿದೊಡ್ಡ ಬ್ರೇಕ್ ನೀಡಿದ ದಿಯಾ ಸಿನಿಮಾದ್ದೇ ಸುದ್ದಿ.. ದಿಯಾ ಚಿತ್ರದಲ್ಲಿ ಪೃಥ್ವಿಯದ್ದು ಆದಿ ಅನ್ನೋ ಪಾತ್ರ. ಈ ಪಾತ್ರದಲ್ಲಿ ಆದಿ ಒಬ್ಬ ಸದಾಲವಲವಿಕೆಯಲ್ಲಿರೋ ಯುವಕ ಹಾಗೂ ಅಮ್ಮನ ಮುದ್ದಿನ ಮಗ. ಈ ಚಿತ್ರದಲ್ಲಿ ಜಾಸ್ತಿ ಏನೂ ಸ್ಟಾರ್ ಕಾಸ್ಟ್ ಆಗ್ಲಿ - ಕಲಾವಿದರಾಗ್ಲಿ ಇಲ್ಲ. ಚಿತ್ರದುದ್ದಕ್ಕೂ ಪ್ರಮುಖವಾಗಿ ನಾಲ್ಕು ಪಾತ್ರಗಳು ಹೀರೋಯಿನ್ ದಿಯಾ, ನಾಗಿಣಿ ಸೀರಿಯಲ್ಲಿನಲ್ಲಿ ನಾಯಕ ನಟನಾಗಿದ್ದ ದಿಶಾಂತ್ / ಅರ್ಜುನ್ , ಆದಿ/ ಪೃಥ್ವಿ ಹಾಗೂ ಪೃಥ್ವಿ ತಾಯಿ. ಅದರಲ್ಲೂ ಹೈಲೈಟ್ ಆಗೋದು ನಮ್ಮ ಆದಿಯ ಪಾತ್ರ. ಈ ಪಾತ್ರ ನಗಿಸುತ್ತದೆ - ಅಳಿಸುತ್ತದೆ-ಪ್ರೀತಿಸುತ್ತದೆ. ಈ ಚಿತ್ರಕ್ಕೆ ಹಣ ಎಷ್ಟು ಖರ್ಚು ಮಾಡಿದ್ದಾರೋ ಗೊತ್ತಿಲ್ಲ.. ಆದ್ರೆ ಬುದ್ಧಿ ಮಾತ್ರ ಚೆನ್ನಾಗಿ ಖರ್ಚು ಮಾಡಿದ್ದಾರೆ. "ಕಾಸ್ ಏತ್ ಖರ್ಚಿ ಮಲ್ದೆರಾ ಗೊತ್ತುಜ್ಜಿ, ಆಂಡ ಮಂಡೆಖರ್ಚಿ ಎಡ್ಡೆ ಮಲ್ದೆರ್". ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿರೋದು ಈ ಹಿಂದೆ ಸಂಚಲನ ಮೂಡಿಸಿದ್ದ 6-5=2 ಚಿತ್ರದ ಡೈರೆಕ್ಟರ್ ಕೆ.ಎಸ್ ಅಶೋಕ್. ಥಿಯೇಟರ್'ಗಳಲ್ಲಿ ಕಾರಣಾಂತರಗಳಿಂದ ಸಿನೇಮಾ ಜಾಸ್ತಿ ದಿನ ಓಡಲಿಲ್ಲವಾದರೂನು, ಅಮೆಜಾನ್ ಪ್ರೈಮ್ ನಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಏನೇ ಆಗಲಿ, ಪೃಥ್ವಿ ಪಾಲಿಗೆ ದಿಯಾ ಬೆಳಕಾಗಿದ್ದು ಮಾತ್ರ ಸುಳ್ಳಲ್ಲ.. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾಸೇವೆ ಮಾಡುವಂತೆ ಕಾಪು ಮಾರಿಯಮ್ಮ ಹಾಗೂ ಕಾಪು ಸಾವಿರ ಸೀಮೆಯ ಒಡೆಯ ಲಕ್ಷ್ಮೀ ಜನಾರ್ಧನ ಸ್ವಾಮಿಯು ಅನುಗ್ರಹಿಸಲಿ ಎಂದು ಕಾಪು ಜನತೆಯ ಪರವಾಗಿ ಹಾರೈಸುತ್ತೇವೆ. ✍