Updated News From Kaup

ಕಾಪು, ಎ. 15 : ಮಾಸ್ಕ್ ಧರಿಸದೆ ಬಂದರೆ ಕಾಪು ಪೆಟ್ರೋಲ್ ಪಂಪ್ನಲ್ಲಿ ಪೆಟ್ರೋಲ್ ನೀಡುವುದಿಲ್ಲ

Posted On: 15-04-2020 11:08AM

ಕಾಪು ನಗರ ಪ್ರದೇಶದಲ್ಲಿ ಇರುವ ಪೆಟ್ರೋಲ್ ಪಂಪ್ನಲ್ಲಿ ಗ್ರಾಹಕರು ಮಾಸ್ಕ್ ಧರಿಸದೆ ಬಂದಲ್ಲಿ ಅವರಿಗೆ ಪೆಟ್ರೋಲ್ ನೀಡುವುದಿಲ್ಲ ಎಂದು ನೋಟಿಸ್ ಹಾಕಲಾಗಿದೆ, ಕೊರೊನ ತಡೆಗಟ್ಟಲು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಹಕರಿಸುತ್ತಿದ್ದು, ಕಾಪು ಪೆಟ್ರೋಲ್ ಪಂಪ್ ನ ಈ ನೋಟಿಸ್ ಕೂಡ ಒಂದಾಗಿರುತ್ತದೆ. ಕಾಪು ರಾಷ್ಟ್ರೀಯ ಹೆದ್ದಾರಿಯ ಎಡ ಬದಿಯಲ್ಲಿ ಇರುವ ಪೆಟ್ರೋಲ್ ಪಂಪ್ ನಲ್ಲಿ ಈ ನೋಟಿಸ್ ಜಾರಿಗೊಳಿಸಲಾಗಿದೆ

ಇನ್ನಂಜೆ, ಎ. 15 : ದೇವರು ಉಂಡ ಊರು 'ಉಂಡಾರು'ವಿನಲ್ಲಿ ಶಾಸ್ತ್ರೋಕ್ತವಾಗಿ ಉತ್ಸವ ಆಚರಣೆ

Posted On: 15-04-2020 10:27AM

ದೇವರು ಉಂಡ ಊರು ಎಂದೇ ಪ್ರಸಿದ್ಧಿಯಲ್ಲಿರುವ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೊರೊನ ಮಹಾಮಾರಿಯಿಂದ ಈ ಬಾರಿಯ ಉತ್ಸವ ಸಂಬಂಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ ಮತ್ತು ಈ ಕಾರ್ಯಕ್ರಮವನ್ನು ಮುಂದುಡುವಂತೆಯೂ ಇಲ್ಲ ಏಕೆಂದರೆ ಕೊರೊನ ಮಹಾಮಾರಿ ಸದ್ಯಕ್ಕೆ ಉಲ್ಬಣವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.. ಹಾಗಾಗಿ ವರ್ಷಾಂಪ್ರತಿ ನಡೆಯುವ ಉತ್ಸವಾದಿ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ಮಾಡುವುದೆಂದು ಆಡಳಿತ ಮಂಡಳಿ ನಿರ್ಧರಿಸಿದೆ. ಆ ಪ್ರಯುಕ್ತ ಇಂದು ಬೆಳಿಗ್ಗೆ ಧ್ವಜಾರೋಹಣಗೊಂಡಿತು ಇಂದು ರಾತ್ರಿ ಬಲಿ, ವಿಶೇಷ ರಂಗಪೂಜೆ, ಮತ್ತು ದಿನಾಂಕ 16 ರಂದು ಶ್ರೀ ದೇವರಿಗೆ ಅಭಿಷೇಕ, ಉತ್ಸವ ಹಾಗೂ ದಿನಾಂಕ 17 ರಂದು ಬೆಳಿಗ್ಗೆ ಕವಾಟೋದ್ಘಾಟನೆ ಮತ್ತು ಸಂಜೆ ದೇವಳದ ಕೆರೆಯಲ್ಲಿ ಅವಭೃತ ನಡೆಸುವುದೆಂದು ನಿಶ್ಚಯಿಸಿರುತ್ತಾರೆ. ಕಾಪು ತಹಸೀಲ್ದಾರ್ 10 ಜನ ಮೇಲ್ಪಡದಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ನೀಡಿರುತ್ತಾರೆ. ಆದುದ್ದರಿಂದ ಗ್ರಾಮಸ್ಥರು ಯಾರು ಕೂಡ ದೇವಸ್ಥಾನಕ್ಕೆ ಬಾರದೆ ಮನೆಯಲ್ಲಿಯೇ ಇದ್ದುಕೊಂಡು ಶ್ರೀ ದೇವರನ್ನು ಪ್ರಾರ್ಥಿಸಿ..

ಇನ್ನಂಜೆ, ಎ. 12 : ಹಿರಿಯ ನಾಗರಿಕರಿಗೆ ವೀಳ್ಯದೆಲೆ ಭಾಗ್ಯ

Posted On: 14-04-2020 10:00PM

ಕೊರೊನ ಲಾಕ್ ಡೌನ್ ಸಂದರ್ಭದಲ್ಲಿ ಎಷ್ಟೋ ಮಂದಿ ಜನರು ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ.. ಇದರ ನಡುವೆ ವಿಶೇಷ ರೀತಿಯಲ್ಲಿ ಜನರ ಗಮನ ಸೆಳೆದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಧೀರ್ ಶೆಟ್ಟಿ ಮಂಡೇಡಿ. ಇವರು ಸತತ ಲಾಕ್ ಡೌನ್ ಆರಂಭವಾದ ದಿನಗಳಿಂದ ಊರಿನ ಎಲ್ಲಾ ಹಿರಿಯ ನಾಗರಿಕರಿಗೆ ವೀಳ್ಯದೆಲೆಯನ್ನು ಕೊಟ್ಟು ತಮ್ಮ ಅಳಿಲು ಸೇವೆ ಮಾಡಿ ಹಿರಿಯ ನಾಗರೀಕರ ಮನಸ್ಸು ಮತ್ತು ಊರಿನವರ ಮನ ಗೆದ್ದಿದ್ದಾರೆ. ಇವರು ಶಂಕರಪುರ ಇನ್ನಂಜೆಯ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರು ಆಗಿದ್ದು ಎಲ್ಲರಿಗೂ ತಿಳಿಯದಂತೆ ಸಮಾಜ ಸೇವೆಯನ್ನು ಕೂಡ ಮಾಡುತ್ತಿದ್ದಾರೆ..

ಕರಾವಳಿ ಫ್ರೆಂಡ್ಸ್ ಹರೀಶ್ ಪೂಜಾರಿ ಸ್ಮರಣಾರ್ಥ ದಿನ ಬಳಕೆ ಸಾಮಗ್ರಿ ಹಸ್ತಾಂತರ

Posted On: 14-04-2020 08:33PM

ಕಟಪಾಡಿ,ಎ.12: ಸರಕಾರಿಗುಡ್ಡೆ ಕರಾವಳಿ ಫ್ರೆಂಡ್ಸ್ ತಂಡವು ಕಳೆದ 7 ತಿಂಗಳ ಹಿಂದೆ ಅಗಲಿದ ತಂಡದ ಸದಸ್ಯ ಹರೀಶ್ ಪೂಜಾರಿ ಸ್ಮರಣಾರ್ಥ ಲಾಕ್‍ಡೌನ್ ಸಂದರ್ಭದಲ್ಲಿ ಅಶಕ್ತರಿಗೆ ವಿತರಿಸಲು ಅಕ್ಕಿ, ಬೇಳೆ, ಜಿನಸು ಸಾಮಾಗ್ರಿಗಳನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ.ಸುವರ್ಣ ಮೂಲಕ ಬಿರುವೆರ್ ಕಾಪು ಸೇವಾ ಟ್ರಸ್ಟ್ಗೆ ಹಸ್ತಾಂತರಿಸಿದರು. ಈ ಸಂದರ್ಭ ಕರಾವಳಿ ಫ್ರೆಂಡ್ಸ್, ಸಂತೋಷ್ ಪೂಜಾರಿ, ಪ್ರವೀಣ್, ನವೀನ್, ರಾಜಾ, ಬಿರುವೆರ್ ಕಾಪು ಸೇವಾ ಟ್ರಸ್ಟ್ನ ಮನೋಹರ್ ಕಲ್ಲುಗುಡ್ಡೆ , ವಿಕೇಶ್ ಪೂಜಾರಿ ಮಡುಂಬು ಮೊದಲಾದವರು ಉಪಸ್ಥಿತರಿದ್ದರು..

ತುಲುವರ ಮೊದಲ ಹಬ್ಬ - ಕೆ.ಎಲ್. ಕುಂಡಂತಾಯ

Posted On: 14-04-2020 09:36AM

ಯುಗಾದಿ, ಇಗಾದಿ ವಿಷು, ಬಿಸು ಬೆನ್ನಿಗ್ ತೊಡಗ್ ಗ ಇಗಾದಿ , ಯುಗಾದಿ , ವಿಷು ,ಬಿಸು ಹೀಗೆ ಆಚರಿಸಲ್ಪಡುವ ಹಬ್ಬ , ತುಳುವರ ಮೊತ್ತಮೊದಲ ಹಬ್ಬ ಸೌರಯುಗಾದಿ. ನಾವು ಕೃಷಿ ಸಂಸ್ಕೃತಿಯಲ್ಲಿ ಬದುಕು ಕಟ್ಟಿದವರು .ಕೃಷಿಯ ಉತ್ಪನ್ನಗಳಲ್ಲಿ ಸಮೃದ್ಧಿಯನ್ನು ಕಂಡವರು .‌ನಾವು ಬೆಳೆಯುವ ಧಾನ್ಯವೇ ಧಾನ್ಯಲಕ್ಷ್ಮೀ ಎಂದು ಪರಿಗ್ರಹಿಸಿದವರು .ಇದಕ್ಕೆ ಕಾರಣ ಕೃಷಿ ಬೇಸಾಯವೇ ನಮಗೆ ಜೀವನಾಧಾರವಾಗಿತ್ತು .ಬೆನ್ನಿದ ಬದ್ಕ್ . ಮುಂದೆ ಬದಲಾಗುತ್ತಾ ಸಾಗಿಬಂತು .ಪ್ರಸ್ತುತ ಕೃಷಿ ಸಂಪೂರ್ಣ ಅವಗಣಿಸಲ್ಪಟ್ಟು ತುಳುನಾಡಿನಾದ್ಯಂತ ಪಡೀಲ್ ಹಡೀಲು ಗದ್ದೆಗಳನ್ನು ಅಥವಾ ಮಣ್ಣು ತುಂಬಿಸಿದ ಫಲವತ್ತಾದ ಪರಿವರ್ತಿತ ರೂಪಾಂತರಗೊಂಡ ,ವಿರೂಪಗೊಂಡ ಕೃಷಿಭೂಮಿಯನ್ನು ಕಾಣುತ್ತಿದ್ದೇವೆ . ಪಗ್ಗುದ ತಿಂಗೊಡೆ ಪಗ್ಗು ತಿಂಗಳ ತಿಂಗೊಡೆ ಅಂದರೆ ಪಗ್ಗುಡು ಒಂಜಿ ಪೋನಗ ಅಥವಾ ಮೇಷಮಾಸದ ಮೊದಲ ದಿನ ನಮಗೆ ಯುಗಾದಿ . ಸುಗ್ಗಿ ಮೀನ ಮಾಸ ತುಳು ತಿಂಗಳ ಯಾದಿಯಲ್ಲಿ ಕೊನೆಯ ತಿಂಗಳು . ವಾರ್ಷಿಕ ಚಕ್ರ ಆರಂಭವಾಗುವುದು ‌ಪಗ್ಗು ತಿಂಗಳಿನಿಂದ .‌ ಕೃಷಿಯೇ ಪ್ರಧಾನವಾಗಿರುವುದರಿಂದ , ನಾವು ಮಳೆಯನ್ನು ಆದರಿಸಿ ಬೆಳೆಯ ವಿಧಾನವನ್ನು ಅಂದರೆ 'ಕೃಷಿ ಸಂವಿಧಾನವನ್ನು ರೂಪಿಸಿಕೊಂಡವರು .‌ಸುದೀರ್ಘ ಅವಧಿಯ ಮಾನವ ಪ್ರಕೃತಿಯ ಸಂಬಂಧ , ಋತುಗಳು ,ಮಳೆ, ಚಳಿ, ಬೇಸಗೆ ಇಂತಹ ಸಹಜ ಬದಲಾವಣೆಗಳನ್ನು ಶತಮಾನ , ಶತಮಾನಗಳಷ್ಟು ಕಾಲ ಅನುಭವಿಸುತ್ತಾ ನಮ್ಮ ಜೀವನಾಧಾರವಾದ ಬೆನ್ನಿ ಕೃಷಿ ಬೇಸಾಯದ ಕ್ರಮವನ್ನು‌ ಸಿದ್ಧಗೊಳಿಸಿದ ನಮ್ಮ ಪೂರ್ವಸೂರಿಗಳು ಕೃಷಿಯೇ ಸರ್ವೋತ್ಕೃಷ್ಟವಾದುದು , ಕೃಷಿ ಇದ್ದಲ್ಲಿ ದುರ್ಭಿಕ್ಷೆ ಇಲ್ಲ ಎಂಬುದನ್ನು ಮನಗಂಡರು .ಆದರೆ ಶತಮಾನ ದಾಟಿ ಸಹಸ್ರಮಾನ ಸಹಸ್ರಮಾನಕಾಲ ಸಾಗಿ ಬಂದ ಕೃಷಿಯಲ್ಲಿ ಒಂದು ಸತ್ಯವನ್ನು ದೇವರನ್ನು ನಮ್ಮ ಹಿರಿಯರು ಕಂಡಿದ್ದರು ಆದರೆ ನಾವು‌ ಅವಗಣಿಸುತ್ತಿದ್ದೇವೆ .ಅದರ ಪರಿಣಾಮದ ಫಲವನ್ನು ನೇರವಾಗಿ ಪರೋಕ್ಷವಾಗಿ ಅನುಭವಿಸುತ್ತಿದ್ದೇವೆ . ಇದು ನಮ್ಮ ವಿಕೃತಿ . ಪ್ರಕೃತಿಯ ಮೇಲೆ ನಡೆಸಿದ ಅಭಿಯೋಗದ ಪರಿಣಾಮ . ಯುಗಾದಿಯ ಶುಭನುಡಿಯನ್ನು ಹೇಳದೆ ಬೇರೆ ಏನನ್ನೋ ಬರೆಯುತ್ತಿದ್ದಾನಲ್ಲ‌, ಏಕೆ ಪ್ರಾರಂಭ ಮರೆತು ಹೋಯಿತೆ? ಖಂಡಿತ ಇಲ್ಲ .ಕೃಷಿ ಎಂದು ಬಂದಾಗ ಕೃಷಿ ಸಂಸ್ಕೃತಿಯ ಅವಗಣನೆಯನ್ನು ಹೇಳುತ್ತಲೇ ಇರುವುದು ನನ್ನ ಜಾಯಮಾನ .ಆದರೆ ಅದು ಸತ್ಯವೂ ಹಾದು ತಾನೆ? ತುಳುವರು ಇಗಾದಿ, ಯುಗಾದಿ ವಿಷು, ಬಿಸು ದಿನದಂದು ವಾರ್ಷಿಕ ಕೃಷಿಗೆ ಆರಂಭಿಸುವ ಪವಿತ್ರದಿನ . ನಾಲೆರು ಮಾದಾವೊಡು , ಪುಂಡಿಬಿತ್ತ್ ಪಾಡೊಡು ಇದು ಯುಗಾದಿಯ ಆಚರಣೆ . ಪಗ್ಗು ತಿಂಗಳ ಮೊದಲ ದಿನ ಹೀಗೆ ಕೃಷಿಯನ್ನು ಸಾಂಕೇತಿಕವಾಗಿ ಆರಂಭಿಸುತ್ತಾ ಮುಂದೆ ಪಗ್ಗುಡು ಪದಿನೆಡ್ಮ ಪೋನಗ ಪೂರ್ಣ ಪ್ರಮಾಣದ ಬೇಸಾಯಕ್ಕೆ ಬೇಕಾದ 'ಬಿದೆ' ಅಂದರೆ ತಳಿಯನ್ನು ನಿರ್ಧರಿಸಿ ನೇಜಿ ಹಾಕುವ ಸಂಪ್ರದಾಯ .ಈ ನಡುವೆ ಉರಿನ ದೇವಾಲಯಗಳಲ್ಲಿ , ಮನೆಗಳಲ್ಲಿ ಯುಗಾದಿ ಫಲ ಓದುವ ಶಿಷ್ಟಾಚಾರವಿತ್ತು . ಈಗಲೂ ಕೆಲ ದೇವಳಗಳಲ್ಲಿ ,ಕೆಲವು ಮನೆಗಳಲ್ಲಿ ಓದುವ ಕ್ರಮ ರೂಢಿಯಲ್ಲಿದೆ . ಸುದೀರ್ಘವಾದ ಯುಗಾದಿ ಫಲದ ಓದುವಿಕೆಯಲ್ಲಿ ರೈತನಿಗೆ ಬೇಕಾದ್ದು ಈವರ್ಷ ಎಷ್ಟು ಕೊಳಗ ಮಳೆ ಬರುತ್ತದೆ ಮತ್ತು ಕಜೆ ಬಿದೆ ಆವ , ಮಡಿ ಬಿದೆ ಆವ ಎಂಬ ತೀರ್ಮಾನಕ್ಕೆ ಬರುವುದೇ ಆಗಿದೆ . ಪ್ರಕೃತಿಯನ್ನು ಓದುತ್ತಾ ಮಳೆ ಇಷ್ಟು ಬರಬಹುದು ಎಂದು ಊಹಿಸುತ್ತಾ , ಕೆಲವೊಂದ ಸಂಜ್ಞೆಗಳನ್ನು ಆಧರಿಸಿ ತಳಿ ನಿರ್ಣಯಿಸುತ್ತಿದ್ದು ಮುಂದೆ ಯುಗಾದಿ ಫಲವನ್ನು ಅವಲಂಬಿಸಿದ್ದು ವಿಕಾಸದ ಹಂತ ಎಂದು ತಿಳಿಯಬಹುದು . ಆದರೆ ಈಗ ಇದೆಲ್ಲ ಅಪ್ರಸ್ತುತ . ಗಮನಿಸಿ. ಹೇಗೆ ಹಂತ ಹಂತವಾಗಿ ಮಳೆ ಆರಂಭವಾಗುತ್ತಾ ,ಸುರಿಯುತ್ತಾ ತೀವ್ರವಾಗುವ ಮೊದಲು ನೇಜಿ ಭತ್ತದ ಸಣ್ಣ ಗಿಡ ಬೆಳೆಯುತ್ತದೆ , ಮತ್ತೆ ನೆಡುವ ಕಾರ್ಯ ಆರಂಭ ಇದೆ ಬೆನ್ನಿ . ಇದಕ್ಕೆ ತೊಡಗುವ ಸುಮುಹೂರ್ತವೇ ಯುಗಾದಿ, ಇಗಾದಿ ,ವಿಷು, ಬಿಸು ಬಿಸು ಕಣಿ ವಿಷು - ಬಿಸು ಕಣಿ ದರ್ಶನ : ಹಿಂದಿನ ರಾತ್ರಿ ಮನೆ ದೇವರ ಮುಂಭಾಗ ಮಂಗಲ ದ್ರವ್ಯಗಳನ್ನು ಅಂದರೆ ತೆಂಗಿನಕಾಯಿ , ಕನ್ನಡಿ , ಚಿನ್ನದ ಆಭರಣ , ಪುಸ್ತಕ , ತರಕಾರಿ , ಲಭ್ಯ ಫಲ ಗೇರು ಹಣ್ಣು , ಮಾವಿನ ಹಣ್ಣು ಮುಂತಾದುವವುಗಳನ್ನು ಇರಿಸಿ ದೀಪ ಹಚ್ಚಿಟ್ಟು ಇಗಾದಿಯಂದು ಬೆಳಗ್ಗೆ ಬೇಗ ಎದ್ದೊಡನೆ ಈ ಮಂಗಲ ದ್ರವ್ಯಗಳನ್ನು ನೋಡಿ ನಮಸ್ಕರಿಸುವುದು ಕ್ರಮ . ಈ ಶಿಷ್ಟಾಚಾರ ತುಳು ನಾಡಿನ ದಕ್ಷಿಣ ಭಾಗದಲ್ಲಿ ಸಂಭ್ರಮದಲ್ಲಿ ನಡೆಯುತ್ತಿರುತ್ತದೆ . ಈ ಸಂದರ್ಭದಲ್ಲಿ ಉತ್ಸವ ಆರಂಭವಾಗುವ ದೇವಾಲಯಗಳಲ್ಲೂ ಕಣೆ ಇಡುವ ಸಂಪ್ರದಾಯ , ಯುಗಾದಿ ಫಲ ಓದುವ ಕ್ರಮ ಇಂದಿಗೂ ರೂಢಿಯಲ್ಲಿದೆ . ಹೆಸರು ಬೇಳೆ ಪಾಯಸ ,ಅದಕ್ಕೆ ಗೇರು ಬೀಜದ ಎಳಸು ಬೀಜದ ತಿರುಳನ್ನು ಹಾಕಬೇಕು . ಗೇರು ಬೆಳೆಯುವ ಕಾಲ ತಾನೆ ,ಹಾಗಾಗಿ ಅದು ಸುಲಭ ಲಭ್ಯ . ಯುಗಾದಿಯಂದು ಮನೆಯ ದೈವ ದೇವರಿಗೆ , ಗುರು ಹಿರಿಯರಿಗೆ ನಮಸ್ಕರಿಸುವುದು , ಊರಿನ‌ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವುದು ನಡೆದು ಬಂದ ಪದ್ಧತಿ .ಇಗಾದಿ ಸಂಭ್ರಮಿಸುವ ಹಬ್ಬವಲ್ಲ , ಕೃಷಿಗೆ ತೊಡಗುವ ಹಬ್ಬ ಎನ್ನಬಹುದು .ಈಗ ಅದರ ಸ್ವರೂಪ ಬದಲಾಗಿದೆ , ಪ್ರಧಾನವಾದ ಕೃಷಿ ಬೆನ್ನಿ ಮರೆತು ಹೋಗಿದೆ. ಕೃಷಿ ಸಮೃದ್ಧಿ ಮಾತ್ರ ಈ ವರ್ಷದ ಯುಗಾದಿ ಆಶಯಕ್ಕೆ ಸೀಮಿತವಾಗುವುದು ಬೇಡ . ರಾಜ್ಯ, ರಾಷ್ಟ, ವಿಶ್ವವನ್ನು ಕಂಗೆಡಿಸಿ ಮನುಕುಲ ಆತಂಕ ಪಡುವ ಹಾಗೆ ಮಾಡಿರುವ ಕೊರೋನ ವ್ಯಾದಿ ದೂರವಾಗಲಿ ಎಂದು ಈ ಮಣ್ಣಿನ‌ ಸತ್ಯವನ್ನು ಮತ್ತು ನಿಯಾಮ ಶಕ್ತಿಯನ್ನು ಪ್ರಾರ್ಥಿಸೋಣ . ಇಗಾದಿ ಬಿಸು ಶುಭಾಶಯಗಳು ಕೆ.ಎಲ್. ಕುಂಡಂತಾಯ

ಪಡುಬಿದ್ರಿ : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ವತಿಯಿಂದ ದೈನಂದಿನ ಆಹಾರ ಸಾಮಗ್ರಿ ವಿತರಣೆ

Posted On: 13-04-2020 03:23PM

ಸೌರಮಾನ ಯುಗಾದಿಯ ಪ್ರಯುಕ್ತ ಲಾಕ್ಡೌನ್ ಹಿನ್ನೆಲೆಯಲ್ಲಿ ಅವರಾಲು ಮಟ್ಟು ಗ್ರಾಮದ 30 ಮನೆಗಳಿಗೆ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇದರ ಸದಸ್ಯರು ಹಾಗು ದಾನಿಗಳಾದ ಗೌತಮ್ ಶೆಟ್ಟಿ ಅವರಾಲು, ಪ್ರಶಾಂತ್ ಶೆಟ್ಟಿ ಅವರಾಲು, ಗಾಯತ್ರಿ ಪ್ರಭು ಪಲಿಮಾರ್, ಪ್ರಕಾಶ್ ನಡಿಯಾರ್, ದಯಾನಂದ ಬಾಳೆಹಿತ್ಲು, ಗಣೇಶ್ ಗುಜರನ್ ಪಡುಬಿದ್ರಿ ಸಹಕಾರದಿಂದ ಕುಚ್ಚಲು ಅಕ್ಕಿ ಮತ್ತು ದೈನಂದಿನ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಕಾಪು : ಸುರಕ್ಷಿತವಾಗಿ ತವರು ಮನೆ ಸೇರಿದ ತುಂಬು ಗರ್ಭಿಣಿ

Posted On: 12-04-2020 07:49PM

ಕಾಪು : ಶಿರ್ವ ಪಿಲಾರುವಿನಲ್ಲಿ ಅತ್ತೆ ಮನೆಯಲ್ಲಿ ವಾಸವಾಗಿದ್ದ ಲವೀನಾ ಎಂಟು ವರೆ ತಿಂಗಳ ಗರ್ಭಿಣಿ ಇವರು ತನ್ನ ತವರು ಮನೆಗೆ ಹೋಗಬೇಕೆಂದು ಬಹಳ ದಿನದಿಂದ ಚಡಪಡಿಸುತ್ತಿದ್ದರು. ಲವೀನಾ ಅವರ ಶಿರ್ವದ ಮನೆಗೆ ಹೋಗುವ ದಾರಿಯು ಕೂಡ ಸರಿಯಾಗಿ ವ್ಯವಸ್ಥಿತವಾಗಿ ಇರಲಿಲ್ಲ ಆದ್ದರಿಂದ ವೈದ್ಯರು ಕೂಡ ಮನೆಗೆ ಬರುವಂತೆ ಇರಲಿಲ್ಲ ಮತ್ತು ಹತ್ತಿರದಲ್ಲಿ ಯಾವುದೇ ರೀತಿಯ ಆಸ್ಪತ್ರೆಯ ಸೌಲಭ್ಯ ಇರಲಿಲ್ಲ. ಪತಿ ಕೂಡ ಸೌದಿ ಅರೇಬಿಯಾದಲ್ಲಿ ಇರುವುದರಿಂದ ಈಕೆಗೆ ತವರು ಮನೆಗೆ ಹೋಗಲು ಅನಾನುಕೂಲವಾಗಿತ್ತು. ಈ ಬಗ್ಗೆ ಲವೀನಾ ಇವರು ಶಿರ್ವ ಪೊಲೀಸ್ ಸ್ಟೇಷನ್ ಠಾಣಾಧಿಕಾರಿಗಳಲ್ಲಿ ವಿಷಯವನ್ನು ತಿಳಿಸಿದಾಗ, ಠಾಣಾಧಿಕಾರಿಗಳು ಮುತುವರ್ಜಿಯನ್ನು ವಹಿಸಿ ಈ ವಿಷಯವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಇವರಿಗೆ ತಿಳಿಸಿದರು, ಗೀತಾಂಜಲಿ ಸುವರ್ಣ ಇವರು ತಕ್ಷಣ ADC ಅವರಿಂದ ಅನುಮತಿ ಪಡೆದುಕೊಂಡು, ಲವೀನಾ ಅವರನ್ನು ತಪಾಸಣೆಗೆ ಒಳಪಡಿಸಿ ಆಂಬುಲೆನ್ಸ್ ನ ವ್ಯವಸ್ಥೆಯನ್ನು ಮಾಡಿ ಸುರಕ್ಷಿತವಾಗಿ ಲವೀನಾರನ್ನು ಕಾರವಾರದಲ್ಲಿರುವ ತವರು ಮನೆಗೆ ಕಳುಹಿಸುವ ಕಾರ್ಯವನ್ನು ಮಾಡಿರುತ್ತಾರೆ.

ಕಾಪು : ಬೆಂಕಿಯ ರೂಪದ ವಿಷಾನಿಲದಿಂದ ಭೀತಿಗೊಳಗಾದ ಜನರು

Posted On: 11-04-2020 09:30PM

ಕಾಪು : ಪಾದೂರು ಹಾಗೂ ಸುತ್ತಮುತ್ತಲ ಗ್ರಾಮದವರ ಗಮನಕ್ಕೆ ISPRL company ಯವರು ಕಚ್ಚಾ ತೈಲದ ಜೊತೆಗೆ ಬರುವ ವಿಷಾನಿಲವನ್ನು ಪ್ರತ್ಯೇಕ ಸಂಗ್ರಹ ಮಾಡಿ ಪ್ರತ್ಯೇಕ ಕೊಳವೆಯ ಮೂಲಕ LPG Gas ಬಳಸಿ ಹೊತ್ತಿಸಿರುವುದರಿಂದ ವಿಷಾನಿಲ ಬೆಂಕಿಯ ರೂಪದಲ್ಲಿ ಹೊರಗೆ ಹೋಗುತ್ತೀರುವ ಕಾರಣ ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ವಿಷಾನಿಲ ಹಾಗೆಯೇ ಬಿಟ್ಟರೆ ಪರಿಸರಕ್ಕೆ ಹಾನಿಯಾಗುವ ಕಾರಣ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.

ಕಾಪು : ಕಳೆದ ಹನ್ನೊಂದು ದಿನಗಳಿಂದ ಸಾವಿರಾರು ಜನಕ್ಕೆ ಅನ್ನದಾನ

Posted On: 11-04-2020 09:15PM

ಕಾಪು : ಕೊರೊನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರಡಿಸಿದ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನರು ತತ್ತರಿಸುತ್ತಿದ್ದಾರೆ. ದಿನಗೂಲಿ ಮಾಡುವವರು ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ, ಈ ಒಂದು ಸಮಯದಲ್ಲಿ ಯಾವುದೇ ಪ್ರಚಾರ ಬಯಸದೆ ಯಾರು ಹಸಿವಿನಿಂದ ನರಳುವಂತಾಗಬಾರದು ಎಂದು ಕಳೆದ ಹನ್ನೊಂದು ದಿನಗಳಿಂದ ಕಾಪುವಿನ ಮಡುಂಬು ಎಂಬಲ್ಲಿ ದಂಪತಿಗಳಿಬ್ಬರು ಸಾವಿರಾರು ಜನಕ್ಕೆ ಅನ್ನದಾನ ಮಾಡುತ್ತಿದ್ದಾರೆ. ಅವರೇ ಶ್ರೀ ವಿದ್ವಾನ್ ಕೆ.ಪಿ. ಶ್ರೀನಿವಾಸ್ ತಂತ್ರಿ ಮಡುಂಬು ಮತ್ತು ದೀಕ್ಷಾ ತಂತ್ರಿ ದಂಪತಿಗಳು. ಮಡುಂಬು ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಇನ್ನಂಜೆ, ಪಾಂಗಾಳ, ಮಂಡೇಡಿ, ಮಲ್ಲಾರ್ ಸೇರಿದಂತೆ ಇನ್ನು ಅನೇಕ ಕಡೆಗಳಿಗೆ ಆಹಾರವನ್ನು ತಲುಪಿಸುತ್ತಿದ್ದಾರೆ. ಈ ಒಂದು ಕಾರ್ಯಕ್ಕೆ ಗ್ರಾಮಸ್ಥರು ಆಹಾರ ಪ್ಯಾಕ್ ಮಾಡಲು ಸಹಕರಿಸುತ್ತಿದ್ದಾರೆ ಹಾಗೂ ಇನ್ನಂಜೆ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ ಮತ್ತು ಸದಸ್ಯರಾದ ದಿವೇಶ್ ಶೆಟ್ಟಿ ಕಲ್ಯಾಲು ಇವರು ಕೂಡ ಕೈ ಜೋಡಿಸಿದ್ದಾರೆ .

ಕಾಪು : ಸ್ವಯಂ ಸೇವಕರಿಗೆ ಫೇಸ್ ಮಾಸ್ಕ್ ನೀಡಿದ ಜಿಲ್ಲಾ ಪಂಚಾಯತ್ ಸದಸ್ಯೆ

Posted On: 11-04-2020 02:01PM

ಕಾಪು : ಕೊರೊನ ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಕರಿಗೆ ಸರ್ಜಿಕಲ್ ಫೇಸ್ ಮಾಸ್ಕ್ ನೀಡುವ ಮೂಲಕ ಯುವಕರನ್ನು ಹುರಿದುಂಬಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ. ಗೀತಾಂಜಲಿ ಸುವರ್ಣ ಮತ್ತು ಗುರೂಜಿ ಸಾಯಿ ಈಶ್ವರ್ ಇವರು ಕಳೆದ 17 ದಿನಗಳಿಂದ ಕಟಪಾಡಿ ಸುತ್ತಮುತ್ತಲಿನ ಪ್ರದೇಶಗಳಿಗೆ ಆಹಾರ ತಯಾರಿಸಿ ಸಿಲ್ವರ್ ಕಂಟೈನರ್ ನಲ್ಲಿ ಪಾರ್ಸೆಲ್ ಮಾಡಿ ಹಸಿದವರಿಗೆ, ಊಟ ತಯಾರಿಸಲಾಗದೆ ಇರುವವರಿಗೆ, ರಸ್ತೆ ಬದಿ ತಿರುಗಾಡುವವರಿಗೆ, ಆಹಾರವನ್ನು ತಯಾರಿಸಿ ಕಳುಹಿಸಿಕೊಡುತ್ತಿದ್ದಾರೆ. 18 ನೇ ದಿನವಾದ ಇಂದು ಚಿತ್ರಾನ್ನ ತಯಾರಿಸಿದರು. ಸಾಯಿ ಸಾಂತ್ವನ ಮಂದಿರ ಶಂಕರಪುರ, ಗುಡ್ಡೆಯಂಗಡಿ ಫ್ರೆಂಡ್ಸ್ ಮತ್ತು ಸುಭಾಸ್ನಗರದ ಯುವಕರ ತಂಡವೊಂದು ಇವರಿಗೆ ಸಾಥ್ ನೀಡುತ್ತಿದೆ.