Updated News From Kaup
ಏಪ್ರಿಲ್ 18 : ಎಲ್ಲೂರು ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದ ಮನ್ಮಾಹಾರಥೋತ್ಸವ
Posted On: 15-04-2024 03:42PM
ಕಾಪು : ಎಲ್ಲೂರು ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 20 ರವರೆಗೆ ವಾರ್ಷಿಕ ನಡಾವಳಿ ಕಾರ್ಯಕ್ರಮಗಳು ಜರುಗುತ್ತಿದ್ದು, ಏಪ್ರಿಲ್ 18 ರಂದು ಶ್ರೀ ಮನ್ಮಾಹಾರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆಯು ನಡೆಯಲಿದೆ.
ಪರ್ಯಾಯ ತಂತ್ರಿ ವೇ.ಮೂ.ಬೆಟ್ಟಿಗೆ ವೆಂಕಟರಾಜ ತಂತ್ರಿಗಳು, ಸರದಿ ಅರ್ಚಕರಾದ ವೇ.ಮೂ ಶ್ರೀನಿವಾಸ ಭಟ್ಟ, ವೇ.ಮೂ. ವೆಂಕಟೇಶ ಭಟ್ಟ ಹಾಗೂ ವೇ.ಮೂ. ಗುರುರಾಜ ಭಟ್ಟರ ನೇತೃತ್ವದಲ್ಲಿ ಏಪ್ರಿಲ್ 18 ರಂದು ಬೆಳಿಗ್ಗೆ 11 ಕ್ಕೆ ರಥಾರೋಹಣ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸ್ಯಾಕ್ಸೋಫೋನ್ ಕಛೇರಿ, ರಾತ್ರಿ 8.30ಕ್ಕೆ ರಥೋತ್ಸವ, ಉತ್ಸವ ಬಲಿ, ರಂಗಪೂಜೆ, ಭೂತ ಬಲಿ, ಶಯನೋತ್ಸವ.
ಏಪ್ರಿಲ್ 19 ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಉತ್ಸವ ಬಲಿ, ಸಂಜೆ ಅವಭೃತ, ಗಂಧಪೂಜೆ, ಧ್ವಜ ಅವರೋಹಣ, ಮಹಾಮಂತ್ರಾಕ್ಷತೆ.
ಏಪ್ರಿಲ್ 13 ರಿಂದ 19 ರವರೆಗೆ ಪ್ರತಿದಿನ ಪ್ರಧಾನ ಹೋಮ, ನವಕ, ಶತರುದ್ರಾಭಿಷೇಕ, ಉತ್ಸವ ಬಲಿ, ಕಟ್ಟೆಪೂಜೆಗಳು ನಡೆಯಲಿರುವುದು.
ಏಪ್ರಿಲ್ 15 (ನಾಳೆ) : ದೆಂದೂರು ಕೊಲ್ಲು ಕೆ. ಶೆಡ್ತಿ ನೆನಪಿನ ಪಾಡ್ದನ ಪ್ರಶಸ್ತಿ ಪ್ರದಾನ ಸಮಾರಂಭ
Posted On: 14-04-2024 10:31PM
ಕಾಪು : ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಮತ್ತು ಉಡುಪಿ ಜೈಂಟ್ ಗ್ರೂಪ್ ವತಿಯಿಂದ ದೆಂದೂರು ಕೊಲ್ಲು ಕೆ. ಶೆಡ್ತಿ ನೆನಪಿನ ಪಾಡ್ಡನ ಪ್ರಶಸ್ತಿ ಪ್ರದಾನ ಸಮಾರಂಭ ಏ.15ರಂದು ಬೆಳಗ್ಗೆ 10:30 ಗಂಟೆಗೆ ಕಾಪು ಕೆ.ಒನ್ ಹೊಟೇಲಿನಲ್ಲಿ ನಡೆಯಲಿದೆ.
ಸಾಹಿತಿ ದಯಾಮಣಿ ಎಸ್. ಶೆಟ್ಟಿ ಎಕ್ಕಾರು ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ ಅಧ್ಯಕ್ಷತೆ ವಹಿಸುವರು. ಉದ್ಯಮಿಗಳಾದ ಶಶಿಧರ ನಾಯಕ್, ಚೇತನ್ ಕುಮಾರ್ ಶೆಟ್ಟಿ ಬ್ರಹ್ಮಾವರ, ದೆಂದೂರು ಸುಭಾಸ್ ಎಮ್. ಸಾಲಿಯನ್ ನೆಲ್ಲಿಕಟ್ಟೆ ಮೂಡುಬೆಳ್ಳೆ, ಉಡುಪಿ ಜೈಂಟ್ ಸಂಸ್ಥೆ ಅಧ್ಯಕ್ಷ ಯಶವಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಪಾಡ್ದನಗಾರ್ತಿ ಗೋಪಿ ಪಾನರ ಮೂಡುಬೆಟ್ಟು ಕಟಪಾಡಿ ಇವರಿಗೆ ಪಾಡ್ದನ ಪ್ರಶಸ್ತಿಯನ್ನು 5 ಸಾವಿರ ನಗದಿನೊಂದಿಗೆ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಗೌರವಾಧ್ಯಕ್ಷೆ ದೀಪಾ ಚೇತನ್ ಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷ ದಯಾನಂದ ಕೆ. ಶೆಟ್ಟಿ ದೆಂದೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿಯಲ್ಲಿ 133 ನೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
Posted On: 14-04-2024 08:09PM
ಪಡುಬಿದ್ರಿ : ಈ ದೇಶದ ಸಮಸ್ತ ಮಹಿಳೆಯರಿಗೆ ಆಸ್ತಿ ಹಕ್ಕು, ಉದ್ಯೋಗ, ಹೆರಿಗೆ ಭತ್ಯೆ, ಸಮಾನ ವೇತನ ಅನೇಕ ಸಂವಿಧಾನ ಬದ್ದ ಹಕ್ಕುಗಳನ್ನು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕಾರಣರಾದವರು ಡಾ. ಬಿ.ಆರ್ ಅಂಬೇಡ್ಕರ್, ಹಾಗು ಸಮಸ್ತ ದೇಶವಾಸಿಗಳಿಗೆ ದುಂಡು ಮೇಜಿನ ಪರಿಷತ್ ನಲ್ಲಿ ವಾದ ಮಾಡುವ ಮೂಲಕ ಮತದಾನದ ಹಕ್ಕನ್ನು ನೀಡಿರುತ್ತಾರೆ. ರಿಸರ್ವ್ ಬ್ಯಾಂಕ್ ಅನ್ನು ಸ್ಥಾಪಿಸುವುದರ ಮೂಲಕ ದೇಶದ ಆರ್ಥಿಕತೆಗೆ ಭಾಷ್ಯ ಬರೆದವರು ಡಾ. ಬಿ.ಆರ್ ಅಂಬೇಡ್ಕರ್ ರವರು. ದೇಶದ ಸಮಸ್ತ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು ಮಾತ್ರವಲ್ಲ ಈ ದೇಶದಲ್ಲಿ ಜಾರಿಯಾಲ್ಲಿರುವ ಕಾಯ್ದೆಗಳನ್ನು ರೂಪಿಸಿ, ಸಮ ಸಮಾಜದ ಬದುಕಿಗೆ ಸಂವಿಧಾನ ಬದ್ಧವಾಗಿ ಒತ್ತು ಕೊಟ್ಟವರು ಡಾ.ಬಿ.ಆರ್ ಅಂಬೇಡ್ಕರ್. ವಿಶ್ವಶ್ರೇಷ್ಠ ಭಾರತದ ಸಂವಿಧಾನವನ್ನು ಉಳಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹಾಗು ಅಂಬೇಡ್ಕರ್ ರವರಿಗೆ ನೀಡುವ ವಿಶೇಷ ಗೌರವವೆಂದು ಚಿಂತಕ, ಹೋರಾಟಗಾರ ಶೇಖರ್ ಹೆಜ್ಮಾಡಿ ಹೇಳಿದರು. ಅವರು ಪಡುಬಿದ್ರಿ ಬೋರ್ಡ್ ಶಾಲೆಯಲ್ಲಿ ದ.ಸಂ.ಸ. ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖೆ ಹಾಗು ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ 133 ನೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ದ.ಸಂ.ಸ ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖಾ ಪ್ರಧಾನ ಸಂಚಾಲಕ ಕೀರ್ತಿ ಕುಮಾರ್, ಪಡುಬಿದ್ರಿ ಗ್ರಾ.ಪಂ.ಸದಸ್ಯ ರಮೀಜ್ ಹುಸೇನ್, ಕರ್ನಾಟಕ ದಲಿತ ಸಂಘಷ ಸಮಿತಿ ಜಿಲ್ಲಾ ಖಜಾಂಚಿ ಸದಾಶಿವ ಕೋಟ್ಯಾನ್, ರಾಜ್ಯ ದ.ಸಂ.ಸ. ಮಹಿಳಾ ಸಂಘಟನ ಸಂಚಾಲಕಿ ವಸಂತಿ ಶಿವಾನಂದ್,, ದ.ಸಂ.ಸ. ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖಾ ಮಹಿಳಾ ಸಂಚಾಲಕಿ ಆಶಾ ಕರ್ಕೇರ ಉಪಸ್ಥಿತರಿದ್ದರು.
ಶಿವಾನಂದ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಠಲ್ ಮಾಸ್ಟರ್ ವಂದಿಸಿದರು.
ಪಡುಬಿದ್ರಿ : ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜಯಂತಿ ಆಚರಣೆ
Posted On: 14-04-2024 01:44PM
ಪಡುಬಿದ್ರಿ : ನಡ್ಸಾಲು ಗ್ರಾಮದ ಸಾಮಾಜಿಕ ಕಾರ್ಯಕರ್ತ ಸುಧಾಕರ್ ಕೆ ಪಡುಬಿದ್ರಿ ಇವರ ನಿವಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜಯಂತಿ ಆಚರಿಸಲಾಯಿತು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಾಪು ದಿವಾಕರ್ ಶೆಟ್ಟಿ, ವೈ. ಸುಧೀರ್ ಕುಮಾರ್, ನವೀನ್ ಚಂದ್ರ ಜೆ ಶೆಟ್ಟಿ, ಕಿರಣ್, ಗ್ರಾಮ ಪಂಚಾಯತ್ ಸದಸ್ಯ ರಮೀಜ್ ಹುಸೇನ್, ಬೂತ್ ಅಧ್ಯಕ್ಷರಾದ ಅಬ್ದುಲ್ ಖಾದರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ರವಿ ಪೂಜಾರಿ ಹಾಗೂ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.
ಕಾಪು : ತಹಶಿಲ್ದಾರರ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಣೆ
Posted On: 14-04-2024 11:39AM
ಕಾಪು : ಸಂವಿಧಾನ ಶಿಲ್ಪಿ, ನೊಂದವರ ದನಿ, ಸಮಾನತಾವಾದಿ, ಶೋಷಿತರ ಆಶಾಕಿರಣ ಡಾ ಅಂಬೇಡ್ಕರ್ ರವರು ಸಾರ್ವಕಾಲಿಕ ಆದರ್ಶ ಮತ್ತು ಚಿಂತನೆಗಳನ್ನು ಹೊಂದಿದ್ದರು. ಅವರ ಚಿಂತನೆಗಳು ಭಾರತದ ಭವ್ಯ ಭವಿಷ್ಯದ ರೂವಾರಿ ಈ ಮಹಾಪುರುಷ. ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್. ಪ್ರತಿ ವರ್ಷ ಏಪ್ರಿಲ್ 14 ರಂದು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಕಾಪು ತಾಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್. ಹೇಳಿದರು.
ಡಾ.ಬಿ. ಆರ್. ಅಂಬೇಡ್ಕರ್ ಭಾರತದ ಹೆಮ್ಮೆಯ ಪುತ್ರ. ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಪ್ರಮುಖರು. ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರು ಸಾಮಾಜಿಕವಾಗಿ ಮೂಡಿಸಿದ ಸಂಚಲನಗಳು ಅಷ್ಟು ಹಿರಿದಾಗಿದ್ದವು. ಇವರ ತತ್ವ ಆದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುವಂತಿದೆ. ಅದೂ ಅಲ್ಲದೆ, ಪ್ರತಿಯೊಬ್ಬ ಭಾರತೀಯರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.
ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಜಯಮಾಧವ, ಉಪ ತಹಶಿಲ್ದಾರ್ ಗಳಾದ ರವಿಕಿರಣ್, ಅಶೋಕ್ ಎನ್ ಕೋಟೇಕಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಪು : ಮನೆ ಮತದಾನ ಪ್ರಕ್ರಿಯೆ ಪ್ರಾರಂಭ - ತಮ್ಮ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು
Posted On: 13-04-2024 03:09PM
ಕಾಪು : ಏಪ್ರಿಲ್ 13 ರಿಂದ 18 ರವರೆಗೆ ಮನೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಆ ಪ್ರಯುಕ್ತ ಕಾಪು ತಾಲೂಕಿನ ಕಲ್ಯ ಗ್ರಾಮಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಭೇಟಿ ನೀಡಿ ಪರಿಶೀಲಿಸಿದರು.
85 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು ದಿವ್ಯಾಂಗರ ಮನೆಗೆ ತೆರಳಿ ಚುನಾವಣಾ ಅಧಿಕಾರಿಗಳು ಮತದಾನ ಮಾಡಿಸಿದರು.
ಮಹಾಮಾಯ ಫೌಂಡೇಷನ್ : ಪಿಯು ಮಕ್ಕಳಿಗೆ ಆನ್ ಲೈನ್, ಆಫ್ ಲೈನ್ ತರಗತಿಗಳು, ವಿದ್ಯಾರ್ಥಿ ವೇತನ
Posted On: 12-04-2024 05:03PM
ಮಣಿಪಾಲ್ ಫೌಂಡೇಶನ್ ನ ಆರ್ಥಿಕ ಸಹಯೋಗದೊಂದಿಗೆ ಶ್ರೀ ಕಾರ್ಕಳ ರುಕ್ಮ ರಂಗನಾಥ ಪೈ ಮೆಮೋರಿಯಲ್ ಮಹಾಮಾಯ ಫೌಂಡೇಶನ್ ಕಾರ್ಯಯೋಜನೆಯಲ್ಲಿ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಮತ್ತು ದ.ಕ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ ಲೈನ್ ವಿಭಾಗದ ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಫ್ ಲೈನ್ ತರಗತಿಯಲ್ಲಿ ಕೋಟ ಪಿಯು ಕಾಲೇಜಿನ ಶ್ರೀಪ್ರಿಯ (588), ಉಡುಪಿ ಸರಕಾರಿ ಪಿಯು ಕಾಲೇಜಿನ ಚಿರಂಜೀವಿ ಜಿ. (587), ಉಡುಪಿ ಎಮ್ ಜಿ ಎಮ್ ಕಾಲೇಜಿನ ವಿದ್ಯಾರ್ಥಿಗಳಾ ನಿಖಿತ (586), ಎಸ್ ವರುಣ್ ನಾಯಕ್ (578), ಪ್ರಥಮ್ (575), ಹಿರಿಯಡ್ಕ ಪಿಯು ಕಾಲೇಜಿನ ಸುಶಾನ್ (575), ಸುಹಾನ್ (571), ಬೈಲೂರು ಪಿಯು ಕಾಲೇಜಿನ ನಿಖಿತ (570) ಅಂಕ ಗಳಿಸಿದ್ದಾರೆ.
ಆನ್ ಲೈನ್ ತರಗತಿಯಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ಪಿಯು ಕಾಲೇಜಿನ ಸಾತ್ವಿಕ್ ಎಚ್ ಎಸ್ (592), ಭುವನೇಂದ್ರ ಕಾಲೇಜಿನ ನಾಗೇಶ್ ಪ್ರಭು (588), ಕಾರ್ಕಳ ಕ್ರಿಸ್ತ ಕಿಂಗ್ ಕಾಲೇಜಿನ ಶ್ರೀಲಕ್ಷ್ಮಿ ಪ್ರಭು (582), ಉಡುಪಿ ಪಿಪಿಸಿ ಕಾಲೇಜಿನ ಪುನೀತ್ (578), ಮುಲ್ಕಿ ವಿಜಯ ಕಾಲೇಜಿನ ಅಭಿಜ್ಞಾ ಪ್ರಭು (577), ಸುನ್ನಾರಿ ಎಕ್ಸಲೆಂಟ್ ಪಿಯು ಕಾಲೇಜ್ ಆಶ್ರಿತ ಎಚ್ಆರ್ (574), ಕಾರ್ಕಳ ಜ್ಞಾನಸುಧ ಪಿಯು ಕಾಲೇಜಿನ ರಾಮ್ ಪ್ರಸಾದ್ ಪೈ (573), ಎಂಜಿಎಂ ಪಿಯು ಕಾಲೇಜಿನ ಪ್ರಶಾಂತ್ ಕೋಟ್ಯಾನ್ (572) ಅಂಕ ಗಳಿಸಿರುತ್ತಾರೆ.
ಸಂಸ್ಥೆಯು 2014 ರಲ್ಲಿ ಪ್ರಾಂಭವಾಗಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳ ಜೊತೆಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ವಿದ್ಯಾರ್ಥಿವೇತನ ಜೊತೆಗೆ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಬಂಗಾರದ ಪದಕವನ್ನೂ ನೀಡಲಾಗುತ್ತಿದೆ.
ಉದ್ಯಾವರ : ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಸಹಿತ ಹಲವರು ಕಾಂಗ್ರೆಸ್ ಸೇರ್ಪಡೆ
Posted On: 11-04-2024 12:59PM
ಉದ್ಯಾವರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉದ್ಯಾವರದಲ್ಲಿ ನಡೆದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಸಹಿತ ಮೂವರು ಕಾಂಗ್ರೆಸ್ ಸೇರ್ಪಡೆಗೊoಡರು.
ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಫ್ರೀಡಾ ಡಿಸೋಜಾ ಸಹಿತ ಐವನ್ ಡಿಸೋಜಾ, ರಿಚರ್ಡ್ ಡಿಸೋಜಾ ರವರನ್ನು ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷ ಸಂತೋಷ್ ಕುಲಾಲ್, ಕಾರ್ಯಾಧ್ಯಕ್ಷ ಚರಣ್ ವಿಠ್ಠಲ್ ಪಕ್ಷದ ಶಾಲು ಹೊಂದಿಸಿ ಸೇರ್ಪಡೆಗೊಳಿಸಿದರು.
ಈ ಸಂದರ್ಭದಲ್ಲಿ ಸೋಶಿಯಲ್ ಮಾಧ್ಯಮ ಉಸ್ತುವಾರಿ ನವೀನ್ ಶೆಟ್ಟಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್, ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ, ಶೇಖರ್ ಕೋಟ್ಯಾನ್, ಗಿರೀಶ್ ಕುಮಾರ್, ಹೆಲನ್ ಫೆರ್ನಾಂಡಿಸ್, ಗ್ರಾಮ ಪಂಚಾಯತ್ ಸದಸ್ಯರಾದ ಲಾರೆನ್ಸ್ ಡೆಸಾ, ನಿತಿನ್ ಸಾಲ್ಯಾನ್, ದಿವಾಕರ ಬೊಳ್ಜೆ, ಮಧುಲತಾ, ಆಶಾ ಸುರೇಶ್, ಆಶಾ ವಾಸು, ಪೂರ್ಣಿಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು - ಶೇ. 100 ಫಲಿತಾಂಶದೊಂದಿಗೆ 9 ರ್ಯಾಂಕ್ ಗಳು
Posted On: 10-04-2024 03:38PM
ಕಾರ್ಕಳ : ಉಡುಪಿ ಜಿಲ್ಲೆಯಲ್ಲಿಯೇ ಉತ್ತಮ ಫಲಿತಾಂಶ ವನ್ನು ನೀಡುತ್ತಾ ಬಂದಿರುವ ಕ್ರಿಯೇಟಿವ್ ಸಂಸ್ಥೆ ರಾಜ್ಯಮಟ್ಟದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ 9 ರ್ಯಾಂಕ್ ಗಳನ್ನು ಪಡೆಯುವ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಾನ್ವಿರಾವ್ 3ನೇ ಸ್ಥಾನ, ಭಕ್ತಿ ಕಾಮತ್ ಮತ್ತು ಎಎಸ್ ಚಿನ್ಮಯ 6ನೇ ಸ್ಥಾನ, ಎ ಅನನ್ಯ ಜೈನ್ 9ನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಿಂಚನ ಆರ್ ಎಚ್ 7ನೇ ಸ್ಥಾನ, ಸುಜಿತ್ ಡಿಕೆ ಮತ್ತು ಹಂಸಿನಿ ವಿ 8ನೇ ಸ್ಥಾನ, ಪ್ರೇಮ್ ಸಾಗರ್ ಪಾಟೀಲ್ ಮತ್ತು ವರ್ಷ ಎಚ್ ವಿ 10ನೇ ಸ್ಥಾನ ಪಡೆದಿರುತ್ತಾರೆ.
ಇವರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದ.ಕ. ಪ್ರಥಮ ; ಉಡುಪಿ ದ್ವಿತೀಯ ಸ್ಥಾನ
Posted On: 10-04-2024 11:13AM
ಉಡುಪಿ : ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇಂದು ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ 97.37% ನೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದೆ. ಉಡುಪಿ - 96.80% ನೊಂದಿಗೆ ದ್ವಿತೀಯ, ವಿಜಯಪುರ – 94.89% ನೊಂದಿಗೆ ತೃತೀಯ ಸ್ಥಾನ ಪಡೆದಿದೆ. ಗದಗ ಜಿಲ್ಲೆ 72.86% ನೊಂದಿಗೆ ಕೊನೆ ಸ್ಥಾನದಲ್ಲಿದೆ.
ಮಾಚ್೯ 1ರಿಂದ 22 ರವರೆಗೆ ಪರೀಕ್ಷೆಗಳು ನಡೆದಿದ್ದು, ಮಂಡಳಿಯು ಮಾರ್ಚ್ 25 ರಂದು ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಪ್ರಾರಂಭಿಸಿತ್ತು. ಈ ಬಾರಿಯೂ ಬಾಲಕಿಯರದ್ದೇ ಮೇಲುಗೈಯಾಗಿದ್ದು ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ.