Updated News From Kaup

ಉಚ್ಚಿಲ: ಪಾದಚಾರಿಗೆ ಕಾರು ಡಿಕ್ಕಿ ಸ್ಥಳದಲ್ಲೇ ಸಾವು

Thumbnail
Posted On: 10 Jan 2025, 08:58 PM

ಪಡುಬಿದ್ರಿ : ಉಚ್ಚಿಲ ರಿಕ್ಷಾ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರೊಂದು ರಸ್ತೆ ದಾಟುತ್ತಿದ್ದ ವಯೋವೃದ್ಧರಿಗೆ ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕುಂಜೂರು ನಿವಾಸಿ ಶ್ರೀನಿವಾಸ ತೋಣಿತ್ತಾಯ (72)ಎಂದು ಗುರುತಿಸಲಾಗಿದೆ. ಅವರು ಪಶ್ಚಿಮ ಬದಿಯಿಂದ ಪೂರ್ವ ಬದಿಗೆ ರಸ್ತೆ ದಾಟುತ್ತಿದ್ದ ಸಂದರ್ಭ ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅವರು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಮುಂಬಯಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಭೇಟಿ

Thumbnail
Posted On: 10 Jan 2025, 10:42 AM

ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮುಂಬಯಿಯ ಉದ್ಯಮಿ, ಹೇರಂಭ ಇಂಡಸ್ಟ್ರೀಸ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಅವರು ಬುಧವಾರ ಭೇಟಿ ನೀಡಿ, ಸಕುಟುಂಬಿಕರಾಗಿ ಬರೆದಿರುವ ನವದುರ್ಗಾ ಲೇಖನ ಯಜ್ಞದ ಪುಸ್ತಕವನ್ನು ಶಿಲಾಸೇವೆ ಸಹಿತವಾಗಿ ಸಮರ್ಪಿಸಿದರು. ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರು ಕನ್ನಡ ಭಾಷೆಯಲ್ಲಿ ನವದುರ್ಗಾ ಲೇಖನವನ್ನು ಬರೆದಿದ್ದು, ಅವರ ಪತ್ನಿ ಸುಜಾತ ಶೆಟ್ಟಿ ಅವರು ತುಳು ಭಾಷೆಯಲ್ಲಿ ಹಾಗೂ ಸೊಸೆ ಮತ್ತು ಮನೆಯವರು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಕಾಪು ಮಾರಿಯಮ್ಮನ ಸ್ಮರಣೆಯೊಂದಿಗೆ ನವದುರ್ಗಾ ಲೇಖನವನ್ನು ಬರೆದಿದ್ದಾರೆ. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪುಸ್ತಕವನ್ನು ಸ್ವೀಕರಿಸಿ, ಮಾರಿಯಮ್ಮ ದೇವಿಯ ಪ್ರಸಾದ ನೀಡಿ ಗೌರವಿಸಿದರು. ಮುಂಬಯಿಯ ಉದ್ಯಮಿ ಕೆ. ಕೆ. ಶೆಟ್ಟಿ , ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ನವದುರ್ಗಾ ಲೇಖನ ಯಜ್ಞದ ಮಹಿಳಾ ಸಮಿತಿ ಪ್ರಧಾನ ಸಂಚಾಲಕರಾದ ಗೀತಾಂಜಲಿ ಎಂ. ಸುವರ್ಣ, ಸಾವಿತ್ರಿ ಗಣೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ಎಲ್. ಸಾಲ್ಯಾನ್, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕರಾದ ಜಯರಾಮ್ ಆಚಾರ್ಯ, ಕಾರ್ತಿಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

Thumbnail
Posted On: 10 Jan 2025, 10:37 AM

ಉಡುಪಿ : ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು ಅವರನ್ನು ರಾಜ್ಯಾಧ್ಯಕ್ಷ ಡಾ.ಎಸ್‌ ಬಾಲಾಜಿ ಯವರು ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿಯವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಿದ್ದಾರೆ. ಕಲ್ಯಾಣಪುರ ಡಾ. ಟಿ ಎಮ್ ಎ ಪೈ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಆಯ್ಕೆಯನ್ನು ಮಾಡಲಾಗಿದೆ.

ಜ.13 : ಪಡುಬಿದ್ರಿ ಸಿ.ಎ.ಸೊಸೈಟಿ ವಿರುದ್ಧ ಜನಜಾಗೃತಿಗಾಗಿ ಸಾರ್ವಜನಿಕ ಬೃಹತ್ ಪ್ರತಿಭಟನೆ

Thumbnail
Posted On: 09 Jan 2025, 07:17 PM

ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ಕನಿಷ್ಠ ಷೇರು ಹೊಂದಿರುವ ಸಾಮಾನ್ಯ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಣಯ ಕೃೆಗೊಂಡಿರುವ ಆಡಳಿತ ಮಂಡಳಿ ವಿರುದ್ಧ ಹಾಗು ಆಡಳಿತ ಮಂಡಳಿ ಕಳೆದ ಎರಡು ದಶಕಗಳಿಂದ ನಡೆಸಿದ ದುರಾಡಳಿತ ಮತ್ತು ಸಾರ್ವಜನಿಕರನ್ನು ಹಾಗು ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿ ಮತ್ತೆ ಚುನಾವಣೆಗೆ ಮುಂದಾದ ಅಧ್ಯಕ್ಷ ಹಾಗು ಆಡಳಿತ ಮಂಡಳಿ ವಿರುದ್ಧ ಇಲಾಖಾ ತನಿಖೆಯ ಬಗ್ಗೆ ಹಕ್ಕೊತ್ತಾಯ ಪಡಿಸಲು ಜನ ಜಾಗೃತಿಗಾಗಿ ಜನವರಿ 13 ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಜಾಥವು ಪಡುಬಿದ್ರಿ ಗ್ರಾಮ ಪಂಚಾಯತಿಯಿಂದ ಹೊರಟು ಸೊಸೈಟಿಯ ಕೇಂದ್ರ ಕಚೇರಿಯ ಮುಂದುಗಡೆ ಸಾರ್ವಜನಿಕ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಹಕಾರಿ ಜನಪರ ಒಕ್ಕೂಟದ ಅಧ್ಯಕ್ಷರಾದ ಶೇಖರ್ ಹೆಜಮಾಡಿ ತಿಳಿಸಿದ್ದಾರೆ. ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕನಿಷ್ಠ ಷೇರು ಹೊಂದಿರುವ ಸಾಮಾನ್ಯ ಜನರಿಗೆ ಸ್ಪರ್ಧಿಸದಂತೆ ನಿರ್ಣಯವನ್ನು ಕೃೆಗೊಂಡಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವೃೆವಸ್ಥೆಗೆ ವಿರುದ್ಧವಾದ ಕೃತ್ಯವಾಗಿದೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಸುಮಾರು 15 ವರ್ಷಗಳಿಂದ ಈ ಹಿಂದೆ ಇದ್ದ ನಿರ್ದೇಶಕರೇ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಬ್ಯಾಂಕಿನ ಲಾಭಾಂಶವನ್ನು ತನ್ನ ಸ್ವಹಿತಕ್ಕಾಗಿ ಬಳಸಿಕೊಂಡು ಬಡವರ ಕಣ್ಣೀರ ದುಡ್ಡಿನಲ್ಲಿ ಮೋಜು ಮಸ್ತಿಗಾಗಿ ದೇಶ, ವಿದೇಶಗಳಿಗೆ ಪ್ರವಾಸ ಕೈಗೊಂಡು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತಿದ್ದಾರೆ. ನೆಪ ಮಾತ್ರಕ್ಕೆ ಅಧ್ಯಯನ ಪ್ರವಾಸ ಎಂಬ ಶಿರ್ಷೀಕೆ. ಮತ್ತೇ ಅದೇ ತಂಡ‌ ಈ ಬಾರಿಯ ಚುನಾವಣೆಗೆ ಸಜ್ಜುಗೂಂಡು ಸಹಕಾರಿ ಇಲಾಖೆಯ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಚುನಾವಣೆಯೇ ನಡೆಯಬಾರದೆಂದು ನಮ್ಮ ತಂಡದ ಸ್ಪರ್ಧಾಳುಗಳ ಮೇಲೆ ಒತ್ತಡ ತರುತ್ತಿದ್ದಾರೆ. ಹೆಜಮಾಡಿ ಮತ್ತು ಪಡುಬಿದ್ರಿ ಬ್ಯಾಂಕಿನಲ್ಲಿ ನಕಲಿ ಬಂಗಾರದ ಮೇಲೆ ಕೋಟಿ ಹತ್ತಿರದ ಮೊತ್ತದ ಸಾಲ ನೀಡಿರುವುದರಲ್ಲಿ ಅಡಳಿತ ಮಂಡಳಿ ಶಾಮೀಲಾಗಿರುತ್ತದೆ ಹಾಗೂ ಹೆಜಮಾಡಿ ಮತ್ತು ಪಲಿಮಾರು ಶಾಖೆಯ ಕಟ್ಟಡದಲ್ಲೂ ಬಹಳ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದು ಅಲ್ಲದೆ ಇತ್ತೀಚೆಗೆ ನಡೆದ ಉದ್ಯೋಗ ನೇಮಕಾತಿಯಲ್ಲಿ ಭಾರಿ ಮೊತ್ತದ ಹಣ ಬೇಡಿಕೆಯನ್ನು ಪಡೆದು ನೂರಾರು ಸಂಖ್ಯೆಯ ಬಡ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ವಂಚಿಸಿರುತ್ತಾರೆ. ಈ ರೀತಿ ನೇಮಕಾತಿ ನಡೆಸಿದರೂ ಯಾರೂ ಪ್ರಶ್ನಿಸುವಂತಿಲ್ಲ, ಅನ್ಯಾಯಕ್ಕೆ ಒಳಗಾದ ಯುವಜನತೆಯ ಪರವಾಗಿ ಇಂತಹ ಸ್ವಾರ್ಥ ಆಡಳಿತ ಮಂಡಳಿಯ ವಿರುದ್ದ ಪ್ರಜ್ಞಾವಂತ ಮತದಾರರು ಧ್ವನಿಯಾಗಬೇಕಾಗಿದೆ. ಯಾಕೆಂದರೆ 13 ಸದಸ್ಯರೂ ಒಂದೇ ಗುಂಪಿನವರಾಗಿದ್ದೂ ವಿರೋಧ ಪಕ್ಷ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಇದಲ್ಲದೆ, ಬ್ಯಾಂಕಿನ ಈಗಿರುವ ಕೆಲವು ನಿರ್ದೇಶಕರು ರಾಷ್ಟ್ರೀಯ ಬ್ಯಾಂಕಿನಲ್ಲಿ ಮತ್ತು ಸೊಸೈಟಿಯಲ್ಲಿಯೇ ಸಾಲದ ಸುಸ್ತಿದಾರರಾಗಿದ್ದು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಇಂಥವರು ಚುನಾವಣೆಯಲ್ಲಿ ಗೆದ್ದರೆ ಪಡುಬಿದ್ರಿ ಸಿ.ಎ.ಸೊಸೈಟಿ ದಿವಾಳಿ ಆಗುವುದು ಖಂಡಿತ ಎಂದಿದ್ದಾರೆ. ಆದ್ದರಿಂದ ಎರಡು ದಶಕಗಳ ಕಾಲ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘವನ್ನು ದುರಾಡಳಿತ ನಡೆಸಿ ಸಾರ್ವಜನಿಕರನ್ನು ಹಾಗು ಯುವಜನತೆಯನ್ನು, ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಸೊಸೈಟಿ ಅಧ್ಯಕ್ಷ ಹಾಗು ಅಡಳಿತ ಮಂಡಳಿ ವಿರುದ್ಧ ಇಲಾಖಾ ತನಿಖೆಯ ಬಗ್ಗೆ ಹಕ್ಕೊತ್ತಾಯ ಪಡಿಸಲು ಜನಜಾಗೃತಿಗಾಗಿ "ಸಾರ್ವಜನಿಕ ಬೃಹತ್ ಪ್ರತಿಭಟನೆಯು" ನಡೆಯಲಿದೆ. ಈ ಪ್ರತಿಭಟನಾ ಸಭೆಯಲ್ಲಿ ಪ್ರಜ್ಞಾವಂತ ನಾಗರಿಕರು, ವಿದ್ಯಾರ್ಥಿಗಳು , ಮಹಿಳೆಯರು ಹಾಗು ಮತದಾರರು ಭಾಗವಹಿಸುವಂತೆ ವಿನಂತಿಸಿದ್ದಾರೆ.

ಉಡುಪಿ ಜಿಲ್ಲಾ ಮಟ್ಟದ ಕನ್ನಡ ಜಾನಪದ ರಾಜ್ಯೋತ್ಸವ 2025 ಕಾರ್ಯಕ್ರಮ

Thumbnail
Posted On: 08 Jan 2025, 10:06 PM

ಉಡುಪಿ : ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ ಇದರ ವತಿಯಿಂದ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಡಾ.ಟಿ. ಎಂ. ಎ. ಪೈ ಪ್ರೌಢಶಾಲೆ ಕಲ್ಯಾಣಪುರ ಶಾಲೆಯಲ್ಲಿ ಬುಧವಾರ ಉಡುಪಿ ಜಿಲ್ಲಾ ಮಟ್ಟದ ಕನ್ನಡ ಜಾನಪದ ರಾಜ್ಯೋತ್ಸವ 2025 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ, ಜಾನಪದವು ಪಠ್ಯಕ್ರಮವಾಗಬೇಕಾಗಿದೆ. ಜನಪದವು ಮುಂದಿನ ತಲೆಮಾರಿಗೆ ಉಳಿಯಬೇಕಾದರೆ ವಿದ್ಯಾರ್ಥಿಗಳಲ್ಲಿ ಜನಪದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಇದರಲ್ಲಿರುವ ಅಘಾತವಾದ ಜ್ಞಾನ ಸಂಪತ್ತು ಇದನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇಂದಿನ ಸಮಾಜಕ್ಕಿದೆ. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು. ಈ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ದೈವನರ್ತಕರಾದ ಬಿರು ಪಾಣರ, ಸಂಗೀತ ಕಲಾವಿದರಾದ ವೇಣುಗೋಪಾಲ್ ಭಟ್ ಕೊಟೇಶ್ವರ, ಕನ್ನಡ ಅಧ್ಯಾಪಕಿ ಸುರೇಖಾ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಶ್ರೇಯ ಮತ್ತು ಮಾನ್ಯ ಆಚಾರ್ಯ ಅವರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದವು ಜನರ ಜೀವನ ಪದ್ಧತಿಯಾಗಿತ್ತು. ಜನಪದರು ಯಾವುದೇ ಶಿಕ್ಷಣ ಇಲ್ಲದೆ ಸಾವಿರಾರು ಹಾಡನ್ನು ರಚನೆ ಮಾಡಿ ಹಾಡಿದ್ದರು. ಅವರ ಕೊಡುಗೆಯನ್ನು ನಾವು ಉಳಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಎಚ್.ಎನ್. ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಜಿಲ್ಲಾ ಪದಾಧಿಕಾರಿಗಳಾದ ಚಂದ್ರ ಹಂಗಾರಕಟ್ಟೆ, ಫಾರೂಕ್ ಚಂದ್ರ ನಗರ, ತಾಲ್ಲೂಕು ಪದಾಧಿಕಾರಿಗಳಾದ ಪ್ರಭಾರಾವ್, ಸುಜಾತ ನಿತ್ಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು. ನಿಕಿತಾ ಮತ್ತು ತಂಡದವರು ಜಾನಪದ ಗೀತೆ ಹಾಡಿದರು. ಜಿಲ್ಲಾ ಪದಾಧಿಕಾರಿ ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.

ವಿಶ್ವಮಾನವನಾಗಬೇಕೆಂಬುದು ಕುವೆಂಪುರವರ ಕನಸಾಗಿತ್ತು : ಕುಸುಮಾ ಕೆ.ಆರ್.

Thumbnail
Posted On: 07 Jan 2025, 08:41 PM

ಮಂಗಳೂರು : ಹುಟ್ಟುವ ಪ್ರತಿ ಮಗು ವಿಶ್ವಮಾನವನೇ. ಆನಂತರ ಆ ಮಗುವನ್ನು ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪುರವರಿಗಿತ್ತು ಎಂದು ಶಿಕ್ಷಕಿ ಕುಸುಮಾ ಕೆ. ಆರ್ ಹೇಳಿದರು. ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಾರಥ್ಯದಲ್ಲಿ ಜ5ರಂದು ಮಂಗಳೂರು ಪುರಭವನದ ಎದುರಿನ ರಾಜಾಜಿ ಪಾರ್ಕ್ನಲ್ಲಿ ಕುವೆಂಪು ಜನ್ಮ ದಿನದ ಪ್ರಯುಕ್ತ ನಡೆದ “ಕನ್ನಡವೇ ಸತ್ಯ” ವಿಚಾರಗೋಷ್ಠಿ-ಕವಿಗೋಷ್ಠಿ ಮತ್ತು ಗೀತಗಾಯನ ಉದ್ಘಾಟಿಸಿ ಮಾತನಾಡಿದರು. ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಕೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಅವರ ಕನಸನ್ನು ನನಸಾಗಿಸುವ ಪ್ರಯತ್ನ ನಮ್ಮದಾಗಬೇಕು. ಇಂದಿನ ಈ ಕನ್ನಡವೇ ಸತ್ಯ ಕಾರ್ಯಕ್ರಮವು ನಿಜಕ್ಕೂ ರಸಋಷಿಗೆ ಸಮರ್ಪಣೆ ಎಂದು ನುಡಿದರು. ಈ ಸಂದರ್ಭದಲ್ಲಿ ಹೊಸ ಕನ್ನಡ ಎಂಬ ಪತ್ರಿಕೆಯನ್ನು ಮಂಗಳೂರಿನ ಜನಪ್ರಿಯ ವೈದ್ಯ, ಸಾಹಿತಿ ಡಾ.ಸುರೇಶ್ ನೆಗಳಗುಳಿ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳು ಸಾಕಷ್ಟು ಇದ್ದರೂ ಪತ್ರಿಕೆ ಓದುವ ಹವ್ಯಾಸ ಈಗಲೂ ಇರುವುದರಿಂದ ಇಂತಹ ಪತ್ರಿಕೆಗಳು ಮೂಡಿಬರಲು ಸಾಧ್ಯ. ಪತ್ರಿಕೆ ತನ್ನ ವಸ್ತುನಿಷ್ಠತೆಯನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮರೆಯದೆ ಕರ್ತವ್ಯ ನಿರ್ವಹಿಸಬೇಕು. ಹಾಗೇನೇ ಪತ್ರಿಕೆ ಬೆಳೆಯಬೇಕಾದರೆ ಪತ್ರಿಕೆಯನ್ನು ಕೊಂಡು ಓದುವ ಮನಸ್ಥಿತಿ ಹೆಚ್ಚಾಗಬೇಕು ಎಂದು ಮಾರ್ಮಿಕವಾಗಿ ನುಡಿದರು. ಅಧ್ಯಕ್ಷತೆ ವಹಿಸಿದ್ದ ಕೆಎಸ್ಎಸ್ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪುರವರು ಒಂದು ದೊಡ್ಡ ಜ್ಞಾನ ಭಂಡಾರವೇ ಸರಿ. ಅವರ ಒಂದೊಂದು ಸಾಹಿತ್ಯವು ಕೂಡಾ ಒಂದೊಂದು ಗ್ರಂಥಗಳು ಎಂದು ಹೇಳಬಹುದು. ಅವರು ಒಂದು ಗ್ರಂಥಾಲಯವಲ್ಲ ಅವರು ಒಂದು ವಿಶ್ವವಿದ್ಯಾನಿಲಯವೇ ಸರಿ. ಅಂತಹ ಮಹಾನ್ ಚೇತನರನ್ನು ನೆನಯುವುದು ಕನ್ನಡಿಗರಾದ ನಮ್ಮ ಕರ್ತವ್ಯ ಮತ್ತು ಜವಾಬ್ಧಾರಿ ಎಂದು ಹೇಳಿದರು. ಮಂಗಳೂರು ಮಹಾನಗರಪಾಲಿಕೆ ನಗರ ಯೋಜನಾಧಿಕಾರಿ ಎನ್ ನಾಗೇಂದ್ರ, ಪುತ್ತೂರು ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ, ಎನ್ಎಸ್ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ, ಮತ್ತು ಪತ್ರಕರ್ತ ಲೋಕಯ್ಯ ಶಿಶಿಲ ಉಪಸ್ಥಿತರಿದ್ದರು. ಕವಿಗೋಷ್ಟಿ : ಕಬಕ ಸರಕಾರಿ ಪದವಿಪೂರ್ವ ಕಾಲೇಜು ಶಿಕ್ಷಕಿ ಶ್ರೀಮತಿ ಶಾಂತ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಅನುರಾಧ ರಾಜೀವ ಸುರತ್ಕಲ್ , ಎಂ.ಎಸ್.ವೆಂಕಟೇಶ್ ಗಟ್ಟಿ , ದೀಪಾ ಚಿಲಿಂಬಿ, ಅನಿತಾ ಶೆಣೈ, ನಿಶಾನ್ ಅಂಚನ್, ವೀಣಾ ರಾವ್ ವಾಮಂಜೂರು, ಸಲೀಂ ಅನಾರ್ಕಲಿ, ಉಮೇಶ್ ಕಾರಂತ್, ಬದ್ರುದ್ದೀನ್ ಕೂಳೂರು, ಸುಕಲತ ಶೆಟ್ಟಿ, ಜುಲಿಯೆಟ್ ಫೆರ್ನಾಂಡಿಸ್ ತಮ್ಮ ಸ್ವರಚಿತ ಕವನ ವಾಚಿಸಿದರು. ಕೆಎಸ್ಎಸ್ಎಪಿ ಖಜಾಂಚಿ ವರ್ಷ ನಿಖಿಲ್‌ರಾಜ್ ಪ್ರಾರ್ಥನೆ ಗೈದರು. ಎನ್ಎಸ್ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ವಂದಿಸಿದರು, ದೀಪಾ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು. ಅ ಬಳಿಕ ಗಾಯನ ಕ್ಷೇತ್ರದಲ್ಲಿ ವಿಶ್ವದಾಖಲೆ ನಿರ್ಮಿಸಿದ ಗಂಗಾಧರ್ ಗಾಂಧಿ ಬಳಗದಿಂದ ಗೀತಗಾಯನ ನಡೆಯಿತು.

ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಮಹಾಸಭೆ ಸಂಪನ್ನ

Thumbnail
Posted On: 07 Jan 2025, 06:00 PM

ಉಡುಪಿ : ವಿದ್ಯಾರ್ಥಿಗಳು ಮೊಬೈಲನ್ನು ದೂರವಿಟ್ಟು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಆ ಮೂಲಕ ಜ್ಞಾನ ಸಂಪಾದನೆ ಮಾಡಿ , ಉನ್ನತ ವ್ಯಾಸಂಗವನ್ನು ಮಾಡಿ ಉತ್ತಮ ನೌಕರಿಯನ್ನು ಆಯ್ಕೆ ಮಾಡಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಿ-ಬದುಕಿ, ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಉಡುಪಿ ಸರಕಾರಿ ಜಿಲ್ಲಾ ಆಸ್ಫತ್ರೆಯ ಹಿರಿಯ ವೈದ್ಯಕೀಯ ತಜ್ಞರಾದ ಡಾ . ದಯಾಮಣಿ ಬಿ. ಇವರು ತಿಳಿಸಿದರು. ಅವರು ಕಲ್ಯಾಣಪುರದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಜರುಗಿದ ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಸಮುದಾಯ ಸಂಘದ ಅಧ್ಯಕ್ಷರಾದ ಬಾಲಕ್ರಷ್ಣ ನಾಯಕ ಮಾತನಾಡಿ, ನಮ್ಮ ಸಮುದಾಯವು ಒಗ್ಗಟ್ಟಿನಿಂದ ಇದ್ದು ಮುಂದೆ ಏನೇ ಸಮಸ್ಯೆ ಬಂದರೂ ನಾವೆಲ್ಲ ಒಂದಾಗಿ ಹೋರಾಟ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರಕಾರದಿಂದ ನಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಬೇಕು ಎಂದು ಹೇಳಿದರು. ಸಭೆಯನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾದ ಕಾರ್ಕಳ ನಗರ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಯಶವಂತ, ಜಿಲ್ಲಾ ನಾಯಕ ಸಮುದಾಯ ಸಂಘದ ಗೌರವ ಅಧ್ಯಕ್ಷರಾದ ಶೇಖರ್ ನಾಯಕ, ಕಾಪು ತಾಲೂಕು ನಾಯಕ ಸಮುದಾಯದ ಅಧ್ಯಕ್ಷರಾದ ನೀಲಾನಂದ ನಾಯಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸನ್ಮಾನ‌ : ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ,ನಿವೃತ್ತರನ್ನು ,ಸಾಧಕರನ್ನು ಹಾಗೂ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಂಗಳೂರು ತಾಲೂಕು ಸಂಘದ ಅಧ್ಯಕ್ಷರಾದ ಹರೀಶ್ ನಾಯಕ, ಜಿಲ್ಲಾ ಸಂಘದ ಗೌರವ ಸಲಹೆಗಾರರಾದ ವಸಂತ ನಾಯಕ, ಕೋಶಾಧಿಕಾರಿ ಮಂಜುನಾಥ ನಾಯಕ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸತೀಶ್ ನಾಯಕ ವರದಿ ವಾಚಿಸಿದರು. ಉಪನ್ಯಾಸಕಿ ಪ್ರತಿಮ ಸನ್ಮಾನ ಪತ್ರ ವಾಚಿಸಿದರು. ಸಂಶೋಧನಾ ವಿದ್ಯಾರ್ಥಿನಿ ಕುಮಾರಿ ನಿಶಾ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ನಾಯಕ ವಂದಿಸಿದರು.

ಕಾಪು : ಶ್ರೀ ನಾರಾಯಣಗುರು ಟ್ರೋಫಿ - ಮುಕ್ತ ಹಾಗೂ ಮಕ್ಕಳ ವಿಭಾಗದ ಚೆಸ್ ಸ್ಪರ್ಧೆ

Thumbnail
Posted On: 07 Jan 2025, 05:54 PM

ಕಾಪು: ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಕಾಪು ಹಳೆ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ 25ನೇ ಶ್ರೀ ನಾರಾಯಣಗುರು ಟ್ರೋಫಿ ಮುಕ್ತ ಹಾಗೂ ಮಕ್ಕಳ ವಿಭಾಗದ ಚೆಸ್ ಸ್ಪರ್ಧೆ ನೆರವೇರಿತು. ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್, ಬೆಂದೂರು ರೋಡ್ ಇಲ್ಲಿನ ಹೃದ್ರೋಗ ತಜ್ಞರಾದ ಡಾ. ಮುಕುಂದ ಕುಂಬಳೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಈ ಸಂದರ್ಭ ಕಾಪು ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಮಂಗಳೂರು ಸಾಮ್ರಾಟ್ ಚೆಸ್ ಯುನಿಟ್ ಕಾರ್ಯದರ್ಶಿ ನಾಗೇಶ್ ಕಾರಂತ್, SNG ಕೋಚಿಂಗ್ ಸೆಂಟರ್ ಹಳೆ ವಿದ್ಯಾರ್ಥಿನಿ ಕು. ನಮೃತಾ ಎಸ್. ಶೆಟ್ಟಿ, ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಧಾಕರ್ ಸಾಲ್ಯಾನ್ ಕಾಪು ಗುರಿಕಾರರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಠಲ ಸಾಲ್ಯಾನ್ ಕಾರ್ಯದರ್ಶಿ ಬಿಲ್ಲವರ ಸಹಾಯಕರ ಸಂಘ (ರಿ.) ಕಾಪು, ಡಾ. ಅಜಿತ್ ಶೆಣೈ ಮಹಾಲಕ್ಷ್ಮೀ ಕಣ್ಣಿನ ಆಸ್ಪತ್ರೆ ಉಡುಪಿ, ಶ್ರೀ ಲಕ್ಷ್ಮೀ ನಾರಾಯಣ ಆಚಾರ್ಯ ಉಡುಪಿ ಮುಖ್ಯ ಸಲಹೆಗಾರರು ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ನಾಗೇಶ್ ಕಾರಂತ್ ಪಾಂಗಳ ಟೂರ್ನಮೆಂಟ್ ಡೈರೆಕ್ಟರ್, ಶ್ರೀ ಪ್ರಶಾಂತ್ ಎನ್ ಹಾಗೂ ಶಶೀಂದ್ರ ಎಮ್ ಮಾಸ್ಟರ್ ಚೆಸ್ ಅಕಾಡೆಮಿ ಬದಿಯಡ್ಕ, ಉಮಾನಾಥ ಕಾಪು ಅಧ್ಯಕ್ಷರು ಶ್ರೀ ನಾರಾಯಣ ಗುರು ಸ್ಪೋಟ್ಸ್ & ಎಜುಕೇಶನ್ ಟ್ರಸ್ಟ್ ಬಾಬು ಜೆ ಪೂಜಾರಿ ಉಪ್ಪುಂದ ಉಪಸ್ಥಿತರಿದ್ದರು. ಚಾಂಪಿಯನ್ ಆಗಿ ರುದ್ರ ರಾಜೀವ್ ಮಂಗಳೂರು, ರನ್ನರ್ ಆಫ್ ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ನ ವಿದ್ಯಾರ್ಥಿ ಲೀಲಾ ಜೈ ಕೃಷ್ಣ, ತೃತೀಯ ಚೆಸ್ ಕೋಚ್ ಹರೀಶ್ ಕುಮಾರ್ ಉಡುಪಿ ಪ್ರಶಸ್ತಿ ಗಳಿಸಿದರು. ಒಟ್ಟು 115 ಬಹುಮಾನ ವಿತರಿಸಲಾಯಿತು. ಫಿಡೇ ಆರ್ಬಿಟರ್ ಕೋಚ್, ಸ್ಥಾಪಕರಾದ ಸಾಕ್ಷಾತ್ ಯು.ಕೆ. ಸ್ವಾಗತಿಸಿದರು. ಫಿಡೇ ಆರ್ಬಿಟರ್ ಕೋಚ್ ನಿರ್ದೇಶಕಿ ಸೌಂದರ್ಯ ಯು.ಕೆ. ಕಾರ್ಯಕ್ರಮ ನಿರೂಪಿಸಿದರು. ಉಮಾನಾಥ ವಂದಿಸಿದರು.

ಪಡುಬಿದ್ರಿ ಸಿ.ಎ.ಸೊಸೈಟಿ ಚುನಾವಣೆಯಲ್ಲಿ ಸಾಮಾನ್ಯ ಸದಸ್ಯರಿಗೂ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ

Thumbnail
Posted On: 06 Jan 2025, 05:12 PM

ಪಡುಬಿದ್ರಿ : ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿಯ ಚುನಾವಣೆಯಲ್ಲಿ ಯಾವುದೇ ರೀತಿಯ ‌ಅಕ್ರಮ ಮತದಾನ ನಡೆಯದಂತೆ ಪಾರದರ್ಶಕ ಮತ್ತು ನ್ಯಾಯಯುತವಾಗಿ ಚುನಾವಣೆ ನಡೆಸುವಂತೆ ಹಾಗು ಆಡಳಿತ ಮಂಡಳಿಯು ದುರುದ್ದೇಶ ಪೂರಕವಾಗಿ, ಸ್ವಾರ್ಥಕ್ಕಾಗಿ ನಿಗದಿ ಪಡಿಸಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸದಸ್ಯನು ರೂ ರೂ.15,000 ಷೇರು ಮೊಬಲಗನ್ನು ಹೊಂದಿರ ಬೇಕೇಂಬ ನಿಯಮವನ್ನು ರದ್ದು ಪಡಿಸಿ , ಸರಕಾರದ ನಿರ್ದೇಶನದಂತೆ ಕನಿಷ್ಠ ರೂ. 500 ಷೇರು ಮೊತ್ತ ಹೊಂದಿರುವ ಸಾಮಾನ್ಯ ಸದಸ್ಯರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೂಂಡುವಂತೆ ಪಡುಬಿದ್ರಿ ಸಹಕಾರಿ ಜನಪರ ಒಕ್ಕೂಟದ ವತಿಯಿಂದ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲಾಧಿಕಾರಿಯವರು ಈ ಬಗ್ಗೆ ಸೂಕ್ತ ಕ್ರಮ ಕೃೆಗೊಳ್ಳುವುದಕ್ಕಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ಶೇಖರ್ ಹೆಜ್ಮಾಡಿ, ಗೌರವ ‌ಸಲಹೆಗಾರ ದಿನೇಶ್ ಕೋಟ್ಯಾನ್ ಪಲಿಮಾರು, ಉಪಾಧ್ಯಕ್ಷರಾದ ಮೈಯದ್ದಿ ಕನ್ನಂಗಾರು, ರಚನ್ ಸಾಲ್ಯಾನ್, ಲೀಲಾಧರ್.ಪಿ., ರೋಶನ್ ಕಾಂಚನ್ ಹೆಜ್ಮಾಡಿ, ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿ ರತ್ನಾಕರ್ ಕೋಟ್ಯಾನ್ ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕೃಷ್ಣ ಮತ್ತು ಧನ್ತಿ

Thumbnail
Posted On: 05 Jan 2025, 07:20 PM

ಕಾಪು : ಬೈಂದೂರಿನಲ್ಲಿ ಜರಗಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರ್ ಇಲ್ಲಿನ ವಿದ್ಯಾರ್ಥಿ ಕೃಷ್ಣ ಇವರು ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇನ್ನೋರ್ವ ವಿದ್ಯಾರ್ಥಿನಿ ಕುಮಾರಿ ಧನ್ತಿ ಇವರು ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ವಿದ್ಯಾರ್ಥಿ ಕೃಷ್ಣ, ಬೆಂಗಳೂರಿನ ರಮೇಶ್ ಆಚಾರ್ ಮತ್ತು ಕವಿತಾ ಎಸ್ ಆಚಾರ್ ಇವರ ಮಗನಾಗಿದ್ದು, 9ನೇ ತರಗತಿ ವಿದ್ಯಾರ್ಥಿ. ಕುಮಾರಿ ಧನ್ತಿ, ಬೋಳ ಪದವಿನ ಸುರೇಶ್ ಮೂಲ್ಯ ಮತ್ತು ಅಮಿತಾ ದಂಪತಿಗಳ ಮಗಳು. 7ನೇ ತರಗತಿಯ ವಿದ್ಯಾರ್ಥಿನಿ.