Updated News From Kaup

ಕಾಪು : ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ಭಾರೀ ಅಂತರದ ಗೆಲುವು ಸಾಧಿಸಲಿದ್ದೇವೆ - ಕೋಟ ಶ್ರೀನಿವಾಸ ಪೂಜಾರಿ

Posted On: 30-03-2024 07:10PM

ಕಾಪು : ಬಿಜೆಪಿ ಪಕ್ಷವು ನಿಶ್ಚಲವಾದ ಬಹುಮತದೊಂದಿಗೆ ಭಾರೀ ಅಂತರದ ಗೆಲುವನ್ನು ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ಗಳಿಸಲಿದೆ. ಈಗಾಗಲೇ ಪ್ರಥಮ ಸುತ್ತಿನ ಪ್ರಚಾರ ಮುಗಿದಿದೆ. ಏಪ್ರಿಲ್ 3 ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಶನಿವಾರ ಕಾಪುವಿನ ಹೋಟೆಲ್ K1 ನಲ್ಲಿ ನಡೆದ ಬಿಜೆಪಿ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಮಂತ್ರಿಯೂ ಆಗಿ ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಳ. ಮೀನುಗಾರಿಕೆ ಮಂತ್ರಿಯಾಗಿ ಹೆಜಮಾಡಿ ಬಂದರಿಗೆ 181ಕೋಟಿ ರೂ. ಬಿಡುಗಡೆ ಮಾಡಿಸಿ ಮುಖ್ಯಮಂತ್ರಿಯಿಂದ ಶಿಲಾನ್ಯಾಸ ಕಾರ್ಯ, 22,000 ಜನ ಮಹಿಳೆಯರಿಗೆ ಸಾಲ ಮನ್ನ ಮಾಡಿಸಿದ ಸಮಾಧಾನವಿದೆ. ಹಿಂದುಳಿದ ವರ್ಗದ ಮಂತ್ರಿಯಾಗಿದ್ದಾಗ 36,000 ಬಡ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ, 4 ನಾರಾಯಣಗುರು ವಸತಿ ಶಾಲೆ, ಉಡುಪಿಯಲ್ಲಿ ಅಗ್ನಿ ಪಥ್ ಶಿಬಿರ ಏರ್ಪಡಿಸಿದ್ದೇನೆ. ಈ ಎಲ್ಲಾ ಕಾರ್ಯಗಳ ಜೊತೆಗೆ ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಖಂಡಿತವಾಗಿಯೂ ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಕಾಂಗ್ರೆಸ್ ಪಕ್ಷ ದಿಗ್ಭ್ರಮೆಗೊಂಡಿದೆ. ಜೆಡಿಎಸ್ ಸದಸ್ಯ ಬಲ ಕಡಿಮೆ ಇರಬಹುದು‌ ಆದರೆ ಪಕ್ಷದ ವರಿಷ್ಠರ ಆಣತಿಯಂತೆ ನಿಷ್ಠೆಯಿಂದ ಕೆಲಸ ಮಾಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ, ನವೀನ್ ಶೆಟ್ಟಿ ಕುತ್ಯಾರು, ಗೋಪಾಲಕೃಷ್ಣ ರಾವ್, ಜೆಡಿಎಸ್ ಪ್ರಮುಖರಾದ ವಾಸುದೇವ ರಾವ್ ಮುಂತಾದವರು ಉಪಸ್ಥಿತರಿದ್ದರು.

ಕಾಪು ಪೊಲೀಸ್ ಠಾಣಾ ಮಹಿಳಾ ಸಿಬಂದಿ ನೇಣಿಗೆ ಶರಣು

Posted On: 30-03-2024 01:46PM

ಕಾಪು : ಇಲ್ಲಿನ ಪೊಲೀಸ್ ಠಾಣೆಯ ಮಹಿಳಾ ಸಿಬಂದಿ ಪೊಲೀಸ್ ಕ್ವಾಟ್ರಸ್ ನಲ್ಲಿಯೇ ನೇಣಿಗೆ ಶರಣಾದ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.

ಜ್ಯೋತಿ (28) ಮೃತ ಮಹಿಳಾ ಪೊಲೀಸ್ ಸಿಬಂದಿಯಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಶುಕ್ರವಾರ ಎಂದಿನಂತೆ ಕರ್ತವ್ಯ ನಡುವೆ ನಿರ್ವಹಿಸಿದ್ದ ಅವರು ರಾತ್ರಿ ಕ್ವಾಟ್ರಸ್ ಗೆ ಮರಳಿದ್ದು ಶನಿವಾರ ಬೆಳಿಗ್ಗೆ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಮೃತ ಪೊಲೀಸ್ ಸಿಬಂದಿಯ ಪತಿ ಕೆ.ಎಸ್.ಆರ್.ಟಿ.ಸಿ ಸಿಬಂದಿಯಾಗಿದ್ದು, ಬೆಳಿಗ್ಗೆ ಕರ್ತವ್ಯಕ್ಕೆ ಹೋಗಲೆಂದು ಹೊರಟಿದ್ದು ಈ ವೇಳೆ ಪತ್ನಿ ಜ್ಯೋತಿ ನೇಣಿಗೆ ಕೊರಳೊಡ್ಡಿರುವುದನ್ನು ಗಮನಿಸಿದ್ದರು. ಕಾಪು‌ ಎಸ್ಸೈ ಅಬ್ದುಲ್ ಖಾದರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಹಿ, ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿರ್ವ : ಉಡುಪಿ -ಚಿಕ್ಕಮಗಳೂರು ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು

Posted On: 29-03-2024 10:43PM

ಶಿರ್ವ: ಗ್ರಾಮದ ದೈವಸ್ಥಾನಕ್ಕೆ ತಡರಾತ್ರಿ ಆಗಮಿಸಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.

ಶಿರ್ವ ಗ್ರಾಮದ ಜಾರಂದಾಯ ದೈವಸ್ಥಾನದಲ್ಲಿ ಜಾತ್ರೆ ಇದ್ದ ಬಗ್ಗೆ ಮಾಹಿತಿ ಆಧರಿಸಿ ರಾತ್ರಿ ಗಂಟೆ 12:30 ಕ್ಕೆ ಚುನಾವಣಾಧಿಕಾರಿ ಹೋದಾಗ ಯಾವುದೇ ಕಾರ್ಯಕ್ರಮ ಇಲ್ಲದೇ ಇದ್ದು ಅಲ್ಲಿ ವಿಚಾರಿಸಿದಾಗ ಆಡಳಿತ ಮಂಡಳಿಯವರು ತಡರಾತ್ರಿಯವರೆಗೆ ಕಾರ್ಯಕ್ರಮ ನಡೆಸಿದ್ದಲ್ಲದೆ, ಈ ಧಾರ್ಮಿಕ ಸ್ಥಳದಲ್ಲಿ ಉಡುಪಿ -ಚಿಕ್ಕಮಗಳೂರು ಕಾಂಗ್ರೆಸ್‌ ಪಕ್ಷದ ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಇವರ ಜೊತೆಗೂಡಿ ಸಭೆ ನಡೆಸಿ ಸಾರ್ವಜನಿಕರಿಗೆ ಪ್ರಭಾವ ಬೀರಿರುವುದು ಕಂಡು ಬಂದಿದೆ.

ಈ ಬಗ್ಗೆ ಕರ್ತವ್ಯದಲ್ಲಿದ್ದ ಚುನಾವಣಾಧಿಕಾರಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷೆ ಗ್ಲ್ಯಾಡಿಸ್ ಆಲ್ಮೇಡಾ ಮತ್ತು ಜೆಡಿಎಸ್ ಪಕ್ಷದ ಸನಾ ಕಾಂಗ್ರೆಸ್ ಸೇರ್ಪಡೆ

Posted On: 29-03-2024 09:57PM

ಕಾಪು : ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಗ್ಲ್ಯಾಡಿಸ್ ಅಲ್ಮೇಡಾ ಬಿಜೆಪಿ ಪಕ್ಷವನ್ನು ಮತ್ತು ಸನಾ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶುಕ್ರವಾರ ಕಾಪು ರಾಜೀವ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾ ‌ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ‌ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್, ಉಡುಪಿ ಜಿಲ್ಲಾ ‌ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಶಾಂತಲತಾ ಶೆಟ್ಟಿ, ಸನವರ್, ಪ್ರಶಾಂತ್ ಜತ್ತನ್ನರವರ ನೇತೃತ್ವದಲ್ಲಿ ಪಕ್ಷದ ಧ್ವಜವನ್ನು ಸ್ವೀಕರಿಸಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಕಾಪು : ಕ್ಷೇತ್ರ ಬಿಜೆಪಿ ಹಿಂದುಳಿದ ಮೋರ್ಚಾ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಬಿಳಿಯಾರು ಆಯ್ಕೆ

Posted On: 29-03-2024 09:08PM

ಕಾಪು : ಬಿಜೆಪಿ ಹಿಂದುಳಿದ ಮೋರ್ಚಾ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ ಬಿಜೆಪಿ ಪಕ್ಷದ ಕಾರ್ಯಕರ್ತ, ಕಾಪು ಕುಲಾಲ ಯುವ ವೇದಿಕೆ ಸಕ್ರಿಯ ಸದಸ್ಯ ಹರೀಶ್ ಕುಲಾಲ್ ಬಿಳಿಯಾರು ಶಂಕರಪುರ ಆಯ್ಕೆಯಾಗಿದ್ದಾರೆ.

ಕಾಪು ಕುಲಾಲ ಸಂಘ ಹಾಗೂ ಕಾಪು ಕುಲಾಲ ಯುವ ವೇದಿಕೆ ಇವರಿಗೆ ಅಭಿನಂದನೆ ಸಲ್ಲಿಸಿದೆ.

ನರೇಂದ್ರ ಮೋದಿ ಅವರು ಮಗದೊಮ್ಮೆ ಪ್ರಧಾನಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಗುರ್ಮೆ ಸುರೇಶ್ ಶೆಟ್ಟಿ

Posted On: 29-03-2024 07:54PM

ಕಾಪು : ಬಿಜೆಪಿ ಪಕ್ಷದ ಭೈರಂಪಳ್ಳಿ ಶಕ್ತಿ ಕೇಂದ್ರದ ಸಭೆ ಶುಕ್ರವಾರ ಪದ್ಮರಾಜ್ ರಾವ್ ಅವರ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ ನರೇಂದ್ರ ಮೋದಿ ಅವರು ಮಗದೊಮ್ಮೆ ಪ್ರಧಾನಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೆಲ್ಲಿಸಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಮಲ್ಯ, ಪೆರ್ಡೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ಭೈರಂಪಳ್ಳಿ ಶಕ್ತಿ ಕೇಂದ್ರದ ಸಹ ಸಂಚಾಲಕರಾದ ಸತೀಶ್ ಶೆಟ್ಟಿ, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಮರುಳಿಧರ್ ಪೈ, ಭೈರಂಪಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಹೆಜಮಾಡಿ : ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗಳಿಸುವುದು ಖಚಿತ - ವಿನಯಕುಮಾರ್ ಸೊರಕೆ

Posted On: 29-03-2024 07:42PM

ಹೆಜಮಾಡಿ : ಕರ್ನಾಟಕದಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ಅಚಲ ವಿಶ್ವಾಸ ಇಟ್ಟುಕೊಂಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗಳಿಸುವುದು ಖಚಿತ ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಸ್ವಕ್ಷೇತ್ರಕ್ಕೆ ಅಗಮಿಸಿದ ಸಂದರ್ಭ ಗುರುವಾರ ರಾತ್ರಿ ಹೆಜಮಾಡಿ ಗಡಿಭಾಗದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ ಸಂದರ್ಭ ಮಾಧ್ಯಮದ ಜತೆ ಮಾತನಾಡಿದರು.

ಕಳೆದ ಬಾರಿ ಬಿಜೆಪಿ 25 ಸ್ಥಾನ ಗೆದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ತೆರಿಗೆ ಪಾಲನ್ನು ತರಲು ಸಾಧ್ಯವಾಗಲಿಲ್ಲ. ಹಾಗಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಲಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಖಚಿತವಾಗಿ ಗೆಲ್ಲಲಿದೆ ಎಂದರು. ಕೇಂದ್ರ ಸರಕಾರದ ದುರಾಡಳಿತದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ರಾಜ್ಯ ಸರಕಾರದ ಸುದೃಢ ಅಡಳಿತಕ್ಕೆ ಜನತೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಪಡೆಯುವುದು ಶತಸಿದ್ಧ ಎಂದವರು ಹೇಳಿದರು.

ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏಪ್ರಿಲ್ 6ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಸಂದರ್ಭ ಪಕ್ಷದ ಬೃಹತ್ ಸಮಾವೇಶ ಅನಾವರಣಗೊಳ್ಳಲಿದೆ ಎಂದವರು ಹೇಳಿದರು.

ಪಕ್ಷದ ಪ್ರಮುಖರಾದ ಅಶೋಕ್ ಕುಮಾರ್ ಕೊಡವೂರು, ದಿನೇಶ್ ಮಳವಳ್ಳಿ, ದೀಪಕ್ ಕೋಟ್ಯಾನ್, ಗೀತಾ ವಾಗ್ಲೆ, ನವೀನ್‌ಚಂದ್ರ ಸುವರ್ಣ, ಸಂತೋಷ್ ಕುಲಾಲ್, ಹರೀಶ್ ಕಿಣಿ, ದಿವಾಕರ ಶೆಟ್ಟಿ ಕಾಪು, ಶಾಂತಲತಾ ಶೆಟ್ಟಿ, ರಮೀಝ್ ಹುಸೈನ್, ಸುನಿಲ್ ಬಂಗೇರ, ನಾಗೇಶ್ ಉದ್ಯಾವರ, ಎಮ್.ಎ.ಗಫೂರ್, ವೈ. ಸುಧೀರ್ ಕುಮರ್, ನವೀನ್‌ಚಂದ್ರ ಜೆ. ಶೆಟ್ಟಿ, ಜಿತೇಂದ್ರ ಫುರ್ಟಾಡೊ, ವಿಶ್ವಾಸ್ ವಿ. ಅಮೀನ್, ವೈ.ಸುಕುಮಾರ್, ಸುಧೀರ್ ಕರ್ಕೇರ, ದೀಪಕ್ ಎರ್ಮಾಳ್, ಅಮೀರ್, ಚರಣ್ ವಿಠಲ್, ರಮೇಶ್ ಕಾಂಚನ್, ಯು.ಸಿ.ಶೇಖಬ್ಬ, ದಿನೇಶ್ ಪಲಿಮಾರು, ಕರುಣಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಬಂಟಕಲ್ಲು : ಆಟೊ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ - ಸತತ 4ನೇ ಬಾರಿಗೆ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆ

Posted On: 28-03-2024 06:54PM

ಬಂಟಕಲ್ಲು : ಆಟೊ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ಲು ಇದರ ಅಧ್ಯಕ್ಷರಾಗಿ ಸತತ 4ನೇ ಬಾರಿಗೆ ಮಂಜುನಾಥ ಪೂಜಾರಿಯವರು ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಮಾಧವ ಕಾಮತ್, ಉಪಾಧ್ಯಕ್ಷರಾಗಿ ಸತೀಶ್ ಬಂಟಕಲ್, ಕಾರ್ಯದರ್ಶಿಯಾಗಿ ಡೆನಿಸ್ ಡಿಸೋಜ, ಜೊತೆ ಕಾರ್ಯದರ್ಶಿಯಾಗಿ ದಿವಾಕರ್ ಶೆಟ್ಟಿ, ಕೋಶಾಧಿಕಾರಿಯಾಗಿ ಸುಧಾಕರ್ ಕೋಟ್ಯಾನ್ ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮೇಶ್ ಪಾಲಮೆ, ರಾಘವೇಂದ್ರ, ಸುರೇಶ್ ಕಲ್ಲು ಗುಡ್ಡೆ, ಮುದ್ದು ಕುಲಾಲ್, ರಮೇಶ್ ಅರಸಿ ಕಟ್ಟೆ, ರವಿ ಕುಲಾಲ್, ಭಾಸ್ಕರ, ಸಂದೇಶ್, ವಿಠ್ಠಲ ಮೂಲ್ಯ, ಕೇಶವ ಕುಲಾಲ್ ಆಯ್ಕೆಯಾಗಿರುತ್ತಾರೆ.

ಮಣಿಪಾಲ : ಮತದಾರ ಜಾಗೃತಿ ಕಾರ್ಯಕ್ರಮ

Posted On: 26-03-2024 10:01AM

ಮಣಿಪಾಲ : ಇಲ್ಲಿನ ಡಾ| ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜು, ಮಣಿಪಾಲ ಜೆಸಿಐ ಉಡುಪಿ ಸಿಟಿ ಇದರ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎಂಐಟಿ ಮಣಿಪಾಲದ ಉಪನ್ಯಾಸಕರದ ಡಾ| ಬಾಲಕೃಷ್ಣ ಮದ್ದೋಡಿ ಭಾಗವಹಿಸಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಡಾ. ಹರಿಣಾಕ್ಷಿ ಕರ್ಕೇರ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್ ಕಾಂತರಾಜ್, ಎಂಐಟಿ ಉಪನ್ಯಾಸಕರಾದ ಡಾ.ನಾರಾಯಣ ಶೆಣೈ, ವಲಯ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ಕಾಪು ಮಂಡಲ ಬಿಜೆಪಿ ಯುವ ಮೋರ್ಚಾ ಪದಗ್ರಹಣ ಸಮಾರಂಭ

Posted On: 24-03-2024 07:57PM

ಕಾಪು : ಮಂಡಲ ಬಿಜೆಪಿ ಇದರ ಯುವ ಮೋರ್ಚಾದ ಪದಗ್ರಹಣ ಸಮಾರಂಭ ರವಿವಾರ ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಮಾತನಾಡಿ ಈ ದೇಶದ ಮುಂದಿನ ಭವಿಷ್ಯ ಯುವ ಸಮುದಾಯದ ಮೇಲಿದೆ. ಯುವ ಸಮುದಾಯ ಈ ದೇಶದ ಮುಂದಿನ ಶಕ್ತಿ ಎಂದು ಹೇಳಿದ ಅವರು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು "ಒನ್ ಬೂತ್ ಟೆನ್ ಯೂತ್" ಎಂಬಂತೆ ತಳ ಮಟ್ಟದಿಂದ ಸಂಘಟನಾ ಪ್ರರ್ವವನ್ನು ಆರಂಭಿಸಿ ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ದಾಖಲೆಗಳ ಮತಗಳ ಅಂತರದಲ್ಲಿ ಗೆಲ್ಲಿಸಲು ನಾವೆಲ್ಲರೂ ಕಟಿಬದ್ಧರಾಗೋಣ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಪ್ರಥ್ವಿರಾಜ್ ಶೆಟ್ಟಿ, ಕಾಪು ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದ ಸಚಿನ್, ಪ್ರಧಾನ ಕಾರ್ಯದರ್ಶಿಗಳಾದ ಅಭಿರಾಜ್ ಸುವರ್ಣ, ಶಶಾಂಕ್ ಶಿವತ್ತಾಯ, ಕಾಪು ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಶೆಟ್ಟಿ ಮಟ್ಟಾರು ಹಾಗೂ ಕಾಪು ಮಂಡಲ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು