Updated News From Kaup
ಅಬ್ದುಲ್ ಕಲಾಂ ಸದ್ಭಾವನಾ ರಾಷ್ಟೀಯ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಎಂ ಫಾರೂಕ್ ಚಂದ್ರನಗರ
Posted On: 05 Jan 2025, 06:56 PM
ಕಾಪು : ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಬೆಂಗಳೂರು (ರಿ.) ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ ನ ಆಡಳಿತ ನಿರ್ದೇಶಕ ಡಾ.ಯು.ಎಂ ಫಾರೂಕ್ ಚಂದ್ರನಗರ ಇವರ ಸಮಾಜ ಸೇವೆಗಾಗಿ ಕೊಡಲ್ಪಡುವ ಡಾ||ಎ.ಪಿ.ಜೆ. ಅಬ್ದುಲ್ ಕಲಾಂ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಕಲಾಗ್ರಾಮ ಜ್ಞಾನಭಾರತಿ ಯೂನಿವರ್ಸಿಟಿ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಚಿತ್ರದುರ್ಗ, ಕರ್ನಾಟಕ ಸರಕಾರದ ಸಚಿವರಾದ ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್. ಕೆ. ಸುಧೀಂದ್ರ, ಬಿ.ಎಂ.ಟಿ.ಎಫ್ ರೆವಿನ್ಯೂ ತಹಸೀಲ್ದಾರ್ ದೀಪಾ ಪ್ರಭಾಕರ್ ಮೈಶಾಲೆ, ಲೋಕಾಯುಕ್ತ ಸಿಪಿಐ ಹಾಲಪ್ಪ ವಾಯ್ ಭಾಲದಂಡಿ, ಬೆಳಗಾವಿ ವಿಜಯಕಾಂತ್ ಡೈರಿ ಮತ್ತು ಆಹಾರ ಉತ್ಪನ್ನಗಳ ಉಪಾಧ್ಯಕ್ಷರು ನಿವೇದಿತಾ ಶಿವಕಾಂತ್ ಸಿದ್ನಾಳ್, ಹೈಕೋರ್ಟ್ ವಕೀಲರಾದ ಅನಂತ್ ನಾಯ್ಕ್, ಕೆ.ಪಿ.ಸಿ.ಸಿ ಸದಸ್ಯರಾದ ಅರ್ಜುನ್ ನಾಯಕ್ ವಾಡಿ, ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ (ರಿ.) ಬೆಂಗಳೂರು ಇದರ ಅಧ್ಯಕ್ಷರಾದ ಕು| ನಿತ್ಯ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಕುತ್ಯಾರು ಸೂರ್ಯ ಚೈತನ್ಯ ಪ್ರೌಢಶಾಲೆ : ಕಂಪ್ಯೂಟರ್, ಎಲ್.ಕೆ.ಜಿ, ಯು.ಕೆ.ಜಿ ತರಗತಿ ಕೊಠಡಿಗಳ ಉದ್ಘಾಟನೆ
Posted On: 05 Jan 2025, 05:16 PM
ಕಾಪು : ಆನೆಗುಂದಿ ಸರಸ್ವತಿ ಪೀಠ ಪಡುಕುತ್ಯಾರು ಅಸ್ಸೆಟ್ ಅಧೀನಕ್ಕೆ ಒಳಪಟ್ಟ ಕುತ್ಯಾರು ಸೂರ್ಯ ಚೈತನ್ಯ ಪ್ರೌಢಶಾಲೆಯಲ್ಲಿ ನೂತನ ಕಂಪ್ಯೂಟರ್ ವಿಭಾಗ, ಎಲ್ ಕೆ ಜಿ ಹಾಗೂ ಯು ಕೆ ಜಿ ಕೊಠಡಿಗಳ ಉದ್ಘಾಟನೆಯನ್ನು ಪಡುಕುತ್ಯಾರು ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭ ಶ್ರೀಗಳು ವಿದ್ಯಾರ್ಥಿಗಳ ಹಸ್ತಪ್ರತಿ ಚೈತನ್ಯವಾಣಿ ಇದರ ದ್ವಿತೀಯ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಂಪಾದಕ ಮಂಡಳಿಯ ಶಿಕ್ಷಕಿ ಅನಿತಾ ಮತ್ತು ಅಮಿತಾ ಸಹಕರಿಸಿದರು. ಅಸ್ಸೆಟ್ ಅಧ್ಯಕ್ಷರಾದ ಬಿ ಸೂರ್ಯಕುಮಾರ ಹಳೆಯಂಗಡಿ, ಗೌರವಾಧ್ಯಕ್ಷ ಬಿ. ಮೋಹನ್ ಕುಮಾರ್ ಮಂಗಳೂರು, ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ ಶಿರ್ವ, ಜನಾರ್ದನ ಆಚಾರ್ಯ ಬಜಕೂಡ್ಲು, ಆನೆಗುಂದಿ ಮೂಲ ಮಠದ ಅಧ್ಯಕ್ಷರಾದ ದಿನೇಶ್ ಆಚಾರ್ಯ ಪಡುಬಿದ್ರೆ,ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿತಂತ್ರಿ, ಮಾತೃ ಮಂಡಳಿಯ ಅಧ್ಯಕ್ಷೆ ಶೋಭಾ ಆಚಾರ್ಯ, ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ, ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಅಸೆಟ್ ಕಾರ್ಯದರ್ಶಿ ಗುರುರಾಜ. ಕೆ ಸ್ವಾಗತಿಸಿ, ಶಾಲಾ ಪ್ರಾಂಶುಪಾಲರಾದ ಸಂಗೀತ ರಾವ್ ವಂದಿಸಿದರು. ಶಿಕ್ಷಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
8 ಭಾಷೆಗಳಲ್ಲಿ 'ಸುಳ್ಳಿ' ಆಲ್ಬಂ ಸಾಂಗ್ ಬಿಡುಗಡೆ
Posted On: 05 Jan 2025, 07:30 AM
ಕಾಪು : ಶುಭ್ ಮ್ಯೂಸಿಕ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ನಲ್ಲಿ ಶುಭ್ ದಾಸ್ ಶೆಟ್ಟಿ ನಿರ್ಮಾಣದ, ವಿಘ್ನೇಶ್ ದೇವನಾಥನ್ ಮತ್ತು ಶುಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿದ 'ಸುಳ್ಳಿ' ಆಲ್ಬಂ ಸಾಂಗ್ ಶುಭ್ ಮ್ಯೂಸಿಕ್ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ. ವಿಭಿನ್ನ ರೀತಿಯ ಆಲ್ಬಮ್ ಸಾಂಗ್ ಇದಾಗಿದ್ದು, 8 ಭಾಷೆಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಶುಭ್ ಮ್ಯೂಸಿಕ್ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಲು ಲಭ್ಯವಿದೆ.
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Posted On: 05 Jan 2025, 06:58 AM
ಕಾಪು : ಕಾಪು ನಗರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಮಾಜಿ ನಾಗರಾಭಿವೃದ್ಧಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರ ಶಿಫರಾಸ್ಸಿನ ಮೇರೆಗೆ ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷರು, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿರುವ ವಿಕ್ರಂ ಕಾಪುರವರನ್ನು ಅಧ್ಯಕ್ಷರನ್ನಾಗಿ, ಮೊಹಮ್ಮದ್ ಸಾದಿಕ್, ಲಕ್ಷ್ಮೀಶ ತಂತ್ರಿ ಮತ್ತು ಹರೀಶ್ ನಾಯಕ್ ರವರನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ. ನೇಮಕದ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯವರ ಪ್ರಕಟಣೆಯು ತಿಳಿಸಿದೆ. ನೂತನ ಕಾಪು ನಗರ ಯೋಜನಾ ಪ್ರಾಧಿಕಾರದ ಸಮಿತಿಯ ಅಧಿಕಾರ ಸ್ವೀಕಾರ ಸಮಾರಂಭವು ಜ. 6, ಸೋಮವಾರದಂದು ಪೂರ್ವಹ್ನ ಗಂಟೆ 10ಕ್ಕೆ ಕಾಪು ಪುರಸಭೆ ಕಟ್ಟಡದಲ್ಲಿರುವ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಜರುಗಲಿದೆ.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಪೂರ್ವಭಾವಿ ಸಮಾಲೋಚನಾ ಸಭೆ
Posted On: 04 Jan 2025, 06:25 PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ. 25 ರಿಂದ ಮಾ. 5 ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭ ವಿವಿಧ ಮೂಲ ಸೌಕರ್ಯಗಳ ಜೋಡಣೆ ಬಗ್ಗೆ ಉಡುಪಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ಶನಿವಾರ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು. ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಅವರು ಜೀರ್ಣೋದ್ಧಾರ ಕಾರ್ಯ ನಡೆದು ಬಂದ ದಾರಿ, ವಿವಿಧ ವ್ಯವಸ್ಥೆಗಳ ಜೋಡಣೆ ಬಗ್ಗೆ ಮಾಹಿತಿ ನೀಡಿದರು. ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಮಾತನಾಡಿ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಭಕ್ತರು, ಮುಖ್ಯಮಂತ್ರಿಗಳಾದಿಯಾಗಿ ರಾಜ್ಯ ಮತ್ತು ಕೇಂದ್ರ ಸಚಿವರುಗಳ ಸಹಿತ ವಿವಿಧ ಗಣ್ಯರು, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ. ಸುಸಜ್ಜಿತ ವ್ಯವಸ್ಥೆಗಳ ಜೋಡಣೆ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಪುರಸಭೆ ಸಹಿತ ವಿವಿಧ ಇಲಾಖೆಗಳು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯೊಂದಿಗೆ ಕೈ ಜೋಡಿಸಲಿದೆ ಎಂದರು. ಪೊಲೀಸ್ ಇಲಾಖೆಯು ಪೂರ್ಣ ಸಹಕಾರ ನೀಡಲಿದೆ ಎಂದರು. ಈ ಸಂದರ್ಭ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪರಮೇಶ್ವರ ಎ. ಹೆಗಡೆ, ಎಸ್. ಟಿ. ಸಿದ್ಧಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಮ್ಯಾನೇಜರ್, ತಹಶೀಲ್ದಾರ್ ಡಾ| ಪ್ರತಿಭಾ ಆರ್., ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ., ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ, ಕಾಪು ಎಸ್ಸೈ ತೇಜಸ್ವಿ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸಹಾಯಕ ಆಯುಕ್ತ ಪ್ರಶಾಂತ್ ಕುಮಾರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯ, ಸಮಿತಿ ಉಪಾಧ್ಯಕ್ಷರಾದ ಮನೋಹರ ಶೆಟ್ಟಿ, ಮಾಧವ ಆರ್. ಪಾಲನ್, ಕಾಪು ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ಸಾಲ್ಯಾನ್, ಜಯಲಕ್ಷ್ಮೀ ಶೆಟ್ಟಿ, ಚರಿತಾ ದೇವಾಡಿಗ, ಮನೋಹರ ರಾವ್ ಮೊದಲಾದವರು ಉಪಸ್ಥಿತರಿದ್ದರು.
ದಿವ್ಯಾಂಗ ಬಾಲಕನ ಮನೆ ಬಾಗಿಲಿಗೆ ಬಂದು ಅಂಗವಿಕಲ ವೇತನ ಮಂಜೂರು ಮಾಡಿದ ತಹಶಿಲ್ದಾರ್ ಡಾ.ಪ್ರತಿಭಾ ಆರ್.
Posted On: 03 Jan 2025, 07:02 PM
ಕಾಪು : ಕೆಲ ದಿನಗಳ ಹಿಂದೆ ಫಲಿಮಾರು ಗ್ರಾಮದ ಅಡ್ವೆಯ ದಿವ್ಯಾಂಗ ಬಾಲಕನಿಗೆ ಮನೆ ಬಾಗಿಲಿಗೆ ಬಂದು ಆಧಾರ್ ಮಾಡಿಸಿಕೊಟ್ಟಿದ್ದ ತಹಶಿಲ್ದಾರ್ ಡಾ. ಪ್ರತಿಭಾರವರು ಗುರುವಾರ ಅದೇ ಬಾಲಕನ ಮನೆ ಬಾಗಿಲಿಗೆ ಬಂದು ಅಂಗವಿಕಲ ವೇತನವನ್ನೂ ಮಂಜೂರು ಮಾಡಿ ಮಾನವೀಯತೆ ಮೆರೆದಿದ್ದಾರೆ. ಹದಿನಾಲ್ಕು ವರ್ಷದ ಕೀರ್ತನ್ ರವರಿಗೆ ಅಂಗವೈಕಲ್ಯದಿಂದ ಸದಾ ಕಾಲ ಹಾಸಿಗೆಯಲ್ಲಿಯೇ ಇರಬೇಕಾದ ಪರಿಸ್ಥಿತಿ. ತಾಯಿ ಮಮತಾರವರೇ ಎಲ್ಲಾ ಸೇವೆ ಮಾಡುತ್ತಿದ್ದು, ಆಧಾರ್ ಕಾರ್ಡ್ ಇಲ್ಲದೇ ಅಂಗವಿಕಲ ವೇತನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಆಗ ಸ್ವತಃ ತಹಶಿಲ್ದಾರ್ ಇಡೀ ಆಧಾರ್ ಕೇಂದ್ರವನ್ನೇ ಬಾಲಕನ ಮನೆ ಬಾಗಿಲಿಗೆ ಕೊಂಡೊಯ್ದು ಆಧಾರ್ ಕಾರ್ಡ್ ಮಾಡಿಸಿದ್ದರು. ಶೀಘ್ರವಾಗಿ ಅಂಗವಿಕಲ ಕಾರ್ಡ್ ಬರುವಂತೆ ಮಾಡಿ ಅಂಗವಿಕಲ ವೇತನವನ್ನು ಸಹ ಮಂಜೂರು ಮಾಡಿರುತ್ತಾರೆ. ಈ ಬಗ್ಗೆ ಬಾಲಕನ ತಾಯಿ ಮಮತಾ ಮತ್ತು ತಂದೆ ಗುರುಸ್ವಾಮಿ ಪ್ರತಿಕ್ರಿಯಿಸಿ, ತಹಶಿಲ್ದಾರ್ ಪ್ರತಿಭಾ ಮೇಡಂರವರ ದೆಸೆಯಿಂದಾಗಿ ನಮಗಿಂದು ಈ ಪಿಂಚಣಿ ದೊರಕಲು ಸಾಧ್ಯವಾಗಿದೆ. ಅಂದು ಮನೆಗೆ ಆಧಾರ್ ಕೇಂದ್ರ ತಂದು ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಹೋಗಿದ್ದರು. ಇಂದು ಮನೆ ಬಾಗಿಲಿಗೆ ಬಂದು ಪಿಂಚಣಿ ಮಂಜೂರಾತಿ ಪತ್ರ ನೀಡಿದ್ದಾರೆ. ಅವರಿಲ್ಲದೇ ಇದ್ದಿದ್ದರೆ ನಾವು ಜೀವನವಿಡೀ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಿಂದಾಗಿ ನಮ್ಮ ಬಾಳಿನಲ್ಲಿ ಬೆಳಕು ಕಂಡಿದೆ. ಇಂತಹ ಮಾನವೀಯತೆಯ ಅಧಿಕಾರಿಗಳು ವಿರಳ ಎಂದರು. ಈ ಬಗ್ಗೆ ತಹಶಿಲ್ದಾರ್ ಪ್ರತಿಭಾ ಆರ್ ಮಾತನಾಡಿ, ಸರಕಾರದ ಸೌಲಭ್ಯಗಳನ್ನು ನಿಜವಾದ ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಅಂಗವಿಕಲ ವೇತನ ಮಂಜೂರು ಮಾಡಲು ಆಧಾರ್ ಕಾರ್ಡ್ ಅವಶ್ಯಕತೆ ಇತ್ತು. ವೈದ್ಯರಿಂದ ಅಂಗವಿಕಲ ಕಾರ್ಡ್ ನ ಅವಶ್ಯಕತೆ ಇತ್ತು. ಇವುಗಳನ್ನು ನಾನೇ ಸ್ವತಃ ಮುತುವರ್ಜಿ ವಹಿಸಿ ಮಾಡಿಸಿಕೊಟ್ಟಿರುತ್ತೇನೆ. ಇಂದು ಅಂಗವಿಕಲ ವೇತನವನ್ನು ಸಹ ಮಂಜೂರು ಮಾಡಿರುತ್ತೇನೆ. ಸರ್ಕಾರದ ಸೌಲಭ್ಯಗಳನ್ನು ದೊರಕಿಸುವಲ್ಲಿ ಅಧಿಕಾರಿಗಳು ಮಾನವೀಯ ಸ್ಪರ್ಶದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದರು. ಗ್ರಾಮ ಒನ್ ಸೆಂಟರ್ ನಡೆಸುತ್ತಿರುವ ಇಸ್ಮಾಯಿಲ್ ಫಲಿಮಾರು ಇವರು ತಹಶಿಲ್ದಾರ್ ಪ್ರತಿಭಾರವರ ಗಮನಕ್ಕೆ ತಂದು ಅಗತ್ಯ ನೆರವು ಸಿಗಲು ನೆರವಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ಸುನಿಲ್ ಉಪಸ್ಥಿತರಿದ್ದರು.
ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಅವಿರೋಧ ಆಯ್ಕೆ
Posted On: 03 Jan 2025, 06:58 PM
ಪಡುಬಿದ್ರಿ : ಬೆಳಪು ವ್ಯವಸಾಯ ಸಹಕಾರಿ ಸಂಘದ ಚುನಾವಣೆಯಲ್ಲಿ ಸಹಕಾರಿ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಬಳಗದ ಎಲ್ಲಾ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಆಡಳಿತ ಮಂಡಳಿಯ ಮುಂದಿನ ಅವಧಿಗೆ ಸತತವಾಗಿ 9 ನೇ ಅವಧಿಗೆ ಅಧ್ಯಕ್ಷರಾಗಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹಾಗೂ ಉಪಾಧ್ಯಕ್ಷರಾಗಿ ದ್ಯುಮಣಿ ಆರ್ ಭಟ್ ಉಚ್ಚಿಲರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಪಣಿಯೂರಿನಲ್ಲಿರುವ ಸಂಘದ ಕೇಂದ್ರ ಕಛೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ನಿರ್ದೇಶಕರುಗಳಾಗಿ ಪಾಂಡು ಶೆಟ್ಟಿ, ಸಾಧು ಶೆಟ್ಟಿ ಪಣಿಯೂರು, ಆಲಿಯಬ್ಬ, ಗೋಪಾಲ ಪೂಜಾರಿ, ಪಾಂಡು ಎಮ್. ಶೇರಿಗಾರ, ಸೈಮನ್ ಡಿಸೋಜ , ಮೀನ ಪೂಜಾರ್ತಿ, ಸುಂದರಿ, ವಿಮಲ ಅಂಚನ್, ಅನಿತ ಆನಂದರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಚುನಾವಣೆಯಲ್ಲಿ ಸಹಕಾರ ಸಂಘಗಳ ಚುನಾವಣಾ ನಿರ್ವಚನಾಧಿಕಾರಿ ಕೆ. ಆರ್. ರೋಹಿತ್‌ರವರು ಚುನಾವಣಾ ಪ್ರಕ್ರಿಯೆ ನಡೆಸಿದರು. ಈ ಸಂದರ್ಭ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ನಿರ್ದೇಶಕ ಬಾಲಗೋಪಾಲರವರು ಉಪಸ್ಥಿತರಿದ್ದರು.
ಜ.5 : ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಮಹಾಸಭೆ
Posted On: 02 Jan 2025, 10:50 PM
ಉಡುಪಿ : ನಾಯಕ ಸಮುದಾಯ ಸಂಘ (ರಿ.) ಉಡುಪಿ ಜಿಲ್ಲೆ ಇದರ ಮಹಾಸಭೆ ಜನವರಿ 5, ಆದಿತ್ಯವಾರ ಪೂರ್ವಾಹ್ನ ಘಂಟೆ 10 ಕ್ಕೆ ವೀರಭದ್ರ ದೇವಸ್ಥಾನ, ಕಲ್ಯಾಣಪುರ ಇಲ್ಲಿ ಜರಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯಕ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞರಾದ ಡಾ| ದಯಾಮಣಿ ಬಿ., ಕಾರ್ಕಳ ನಗರ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಯಶವಂತ್ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಗೌರವಾಧ್ಯಕ್ಷ ಶೇಖರ ನಾಯಕ, ಗೌರವ ಸಲಹೆಗಾರರಾದ ವಸಂತ ನಾಯಕ, ಸುನೇತ್ರ ನಾಯಕ, ಕಾಪು ತಾಲೂಕು ನಾಯಕ ಸಮುದಾಯ ಸಂಘದ ಅಧ್ಯಕ್ಷರಾದ ನೀಲಾನಂದ ನಾಯಕ, ಮಂಗಳೂರು ತಾಲೂಕು ಅಧ್ಯಕ್ಷರಾದ ಹರೀಶ ನಾಯಕ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸಂಘದ ಸಂಚಾಲಕರಾದ ನೀಲಾನಂದ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಹದಿಹರೆಯದ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ ಮತ್ತು ವೃತ್ತಿ ಸಮಾಲೋಚನೆ ಕಾರ್ಯಕ್ರಮ
Posted On: 02 Jan 2025, 12:40 PM
ಕಾಪು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಪ್ರಯುಕ್ತ ಗುರುವಾರ ಪೊಲಿಪು ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ "ಹದಿಹರೆಯದ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ ಮತ್ತು ವೃತ್ತಿ ಸಮಾಲೋಚನೆ ಕಾರ್ಯಕ್ರಮನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜಗತ್ತಿನಲ್ಲಿ ಹೆಣ್ಣು ಮಕ್ಕಳು ಪಾತ್ರ ಬಹುಮುಖ್ಯವಾದದ್ದು. ಹೆಣ್ಣು ಮಕ್ಕಳನ್ನು ರಕ್ಷಿಸುವ ಕಾರ್ಯವಾಗಬೇಕು. ಪ್ರಸ್ತುತ ಸಮಾಜದಲ್ಲಿ ವಿವಿಧ ಪಾಳಿಯಲ್ಲಿ ಉದ್ಯೋಗ ಮಾಡುವಂತ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಪುರಸಭೆಯ ಸದಸ್ಯರಾದ ರಾಧಿಕಾ, ಕಾಪು ತಹಶೀಲ್ದಾರರಾದ ಡಾ. ಪ್ರತಿಭ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕುಮಾರ್ ವಿ ನಾಯ್ಕ್, ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶಿವಲಿಂಗಪ್ಪ, ಗಣ್ಯರು, ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
ಮತ್ತೆ ಬಂದಿದೆ ಹೊಸ ವರ್ಷ, ತರಲಿ ಹೊಸ ಹರ್ಷ
Posted On: 01 Jan 2025, 09:27 AM
ಹೊಸ ವರ್ಷಕ್ಕೆ ಸ್ವಾಗತ. 2025 ಹೊಸತನ ಅನ್ನುವುದು ಸೃಷ್ಟಿಯ ನಿಯಮ. ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಾವು ಕಾಯುತ್ತಿರುತ್ತೇವೆ. ಹೊಸ ಜೀವನ, ಹೊಸ ಕಾರು, ಹೊಸ ಮನೆ, ಹೊಸ ಹುದ್ದೆ, ಹೊಸ ಗೆಳೆಯರು, ಹೊಸ ಸ್ಥಳಗಳು, ಹೊಸ ಮೊಬೈಲ್ ಹೀಗೆ ಹೊಸ ಬಟ್ಟೆಯಿಂದ ಹಿಡಿದು ಹೊಸ ಚಪ್ಪಲಿಯವರೆಗಿನ ಪ್ರತಿಯೊಂದು ಹೊಸತನಗಳನ್ನು ನಾವು ತುಂಬಾ ಹರ್ಷದಿಂದ ಸ್ವಾಗತಿಸುತ್ತೇವೆ. ಅದೇ ರೀತಿ ಈಗ ಹಳೆಯ ನೋವು, ನೆನಪುಗಳನ್ನೆಲ್ಲಾ ಬದಿಗೆ ಸರಿಸಿ ಹೊಸ ನಿರೀಕ್ಷೆ ಹಾಗೂ ಕನಸುಗಳೊಂದಿಗೆ ಮತ್ತೊಂದು ಹೊಸ ವರ್ಷವನ್ನು ನಾವು ಬರಮಾಡಿಕೊಳ್ಳುತ್ತಿದೇವೆ. ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ಹಲವು ಹೊಸತನಗಳೊಂದಿಗೆ ಹೊಸ ಹರ್ಷ ತರಲಿ. ಕಳೆದ ವರ್ಷ ಮಾಡಿದ ರೆಸಲ್ಯೂಶನೇ ಇನ್ನೂ ಪೂರ್ಣವಾಗ್ಲಿಲ್ಲ. ಈ ವರ್ಷ ಇನ್ನೇನು ಮಾಡೋದು ಎಂದು ಹೊಸ ವರ್ಷದ ಪ್ರಾರಂಭದಲ್ಲಿ ನಮಗೆಲ್ಲ ಅನಿಸೋದು ಸರ್ವೇಸಾಮಾನ್ಯ. ರೆಸಲ್ಯೂಶನ್ ಗಳೆ ಹೊಸ ವರ್ಷದ ಮೊದಲ ನಾಲ್ಕು ದಿನಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ. ವರ್ಷದ ಮೊದಲ ದಿನದಂದು ಈ ವರ್ಷ ಇದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಸಂಕಲ್ಪ ಮಾಡುತ್ತೇವೆ. ಆದರೆ ಕೆಲಸದ ಜಂಜಾಟದ ನಡುವೆ ನಾವು ಸಾಧಿಸಬೇಕಾದ ವಿಷಯವನ್ನೇ ಮರೆತುಬಿಡುತ್ತಿದ್ದೇವೆ. ಆ ರೀತಿ ಮಾಡಿದಾಗ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಏನಿದೆ ವ್ಯತ್ಯಾಸ. ದಿನಗಳು ಅಥವಾ ವರ್ಷ ನಮಗಾಗಿ ಕಾಯುವುದಿಲ್ಲ. ಅದರ ಪಾಡಿಗೆ ಅದು ಸಾಗುತ್ತಿರುತ್ತದೆ. ನಾವು ಅದರ ಜತೆ ಸಾಗುತ್ತಿರಬೇಕು ಅಷ್ಟೇ. ಆದರೆ ನಾವು ಸಮಯದ ಜತೆ ಎಷ್ಟು ಬಾರಿ ಸರಿಯಾಗಿ ಸಾಗಿದ್ದೇವೆ ಅನ್ನೋದನ್ನು ಮನನ ಮಾಡಿಕೊಳ್ಳಬೇಕು. ನಮ್ಮ ಸಂಕಲ್ಪ ಸದಾ ಇರಲಿ : ನಾವು ಪ್ರತೀ ವರ್ಷ ಹೊಸ ವರ್ಷದಂದು ಸಂಕಲ್ಪಗಳನ್ನು ಮಾಡುತ್ತೇವೆ. ಆದರೆ ವರ್ಷವಿಡೀ ಅದನ್ನು ಅನುಸರಿಸುವುದು ಕಷ್ಟವಾಗುತ್ತದೆ. ನಾವು ಮಾಡಿಕೊಂಡ ಸಂಕಲ್ಪಗಳ ಪೈಕಿ ವಾಸ್ತವವಾಗಿ ಕಾರ್ಯರೂಪಕ್ಕೆ ಬರುವುದು ಕೆಲವು ಮಾತ್ರ ಎಂಬ ಸತ್ಯ ನಮಗೆ ತಿಳಿದಿದೆ. ಈ ನಿರ್ಣಯಗಳನ್ನು ಗಟ್ಟಿಯಾಗಿ ಅನುಸರಿಸುವುದು ನಮ್ಮ ಕೈಯಲ್ಲಿ ಇರುವುದರಿಂದ ಮೊದಲು ನಾವು ದೃಢ ಸಂಕಲ್ಪವನ್ನು ಮಾಡಬೇಕು. ಧನಾತ್ಮಕ ಚಿಂತನೆ ಮೈಗೂಡಿಸಿ ಪ್ರತೀ ದಿನ, ಕ್ಷಣ ಅದನ್ನು ನೆನಪಿಸಿಕೊಳ್ಳುತ್ತಿರಬೇಕು. ಈ ವರ್ಷ ಇದನ್ನು ಮಾಡಬೇಕು ಎಂದುಕೊಂದಿದ್ದರೆ ಮಾರನೇ ದಿನವೇ ಮರೆತುಬಿಡುವುದಲ್ಲ. ಬದಲಾಗಿ ನಾವು ಅದನ್ನು ಸಂಪೂರ್ಣಗೊಳಿಸಲು ಎಡವಿದೆ, ನಾವು ತಲುಪಬೇಕಾದ ಗುರಿಯನ್ನು ನೆನಪಿಸಿಕೊಳ್ಳುತ್ತಿರಬ ಆ ಕೆಲಸ ಕೆಲಸ ಆಗುವರೆಗೂ ಬಿಡಬಾರದು ಹೀಗಾದರೆ ನಾವು ಎಣಿಸಿದ ಕಾಯ೯ ಯಾವುದೇ ತೊಂದರೆ ಇಲ್ಲದೆ ಆಗುವುದು. ಮನಸ್ಸು ಕಂಟ್ರೋಲ್ ನಲ್ಲಿ ಇರಲಿ : ನಮ್ಮ ಮನಸ್ಸು ನಾವು ಹೇಳಿದಂತೆಯೇ ಇರುತ್ತದೆ. ಈ ವರ್ಷ ಒಳ್ಳೆಯದನ್ನು ಮಾಡಬೇಕು ಎಂದು ಪ್ರತಿ ಕ್ಷಣ ನಮ್ಮ ಮನಸ್ಸಿಗೆ ಹೇಳುತ್ತಾ ಅದನ್ನೇ ಯೋಚಿಸುತ್ತಾ ಇದ್ದರೆ ಖಂಡಿತ ಬದಲಾವಣೆ ಸಾಧ್ಯವಿದೆ. ಪ್ರತೀ ದಿನವನ್ನು ಹೊಸವರ್ಷವೆಂದು ಭಾವಿಸುವುದು ರೆಸಲ್ಯೂಷನ್ ಗಳನ್ನು ಪೂರ್ಣಗೊಳಿಸಲು ಇರುವ ಇನ್ನೊಂದು ಹಾದಿ. ನಮಗೆ ದಿನದಲ್ಲಿ 24 ಗಂಟೆ ಸಿಗುವುದರಿಂದ ಅಷ್ಟು ಗಂಟೆಯಲ್ಲಿ ಎಷ್ಟು ಸಮಯವನ್ನು ನಾವು ಒಳ್ಳೆಯ ಕೆಲಸಕ್ಕೆ ಸದುಪಯೋಗಪಡಿಸಿಕೊಳ್ಳುತ್ತೇವೆ ಎಂಬುವುದರ ಕಡೆ ಗಮನ ಹರಿಸಬೇಕು. ಹೊಸ ವರ್ಷ ಎಂಬುವುದು ಖಾಲಿ ಪುಸ್ತಕದಂತೆ. ಪೆನ್ನು ನಮ್ಮ ಕೈಯಲ್ಲಿ ಇರುವುದರಿಂದ ಸುಂದರವಾದ ಕಥೆಯನ್ನು ಬರೆಯಲು ಇದು ನಮಗೆ ಉತ್ತಮ ಅವಕಾಶ.ಈ ಕಥೆ ನಮ್ಮ ಬದುಕಿನ ಹೊಸ ಅಧ್ಯಾಯವಾಗಬೇಕು. ನಾವೆಲ್ಲರೂ ಕೇವಲ ಮೋಜು, ಮಸ್ತಿಯಲ್ಲಿ ಕಾಲ ಕಳೆಯದೆ ನಮ್ಮ ಬದುಕು ಮತ್ತೊಬ್ಬರ ಬದುಕಿಗೆ ಆಸರೆಯಾಗ ಬೇಕು. ನಮ್ಮ ಕೆಲಸದ ಸಂಸ್ಥೆಯ ಅಭಿವೃದ್ಧಿಗೆ ಪಣ ತೊಟ್ಟು ಕೆಲಸ ಮಾಡಬೇಕು. ಏಕೆಂದರೆ ಸಂಸ್ಥೆಯು ಅಭಿವೃದ್ಧಿಯಾದರೆ ನಮ್ಮ ಅಭಿವೃದ್ಧಿ ಸಾಧ್ಯ. ಈ ಕ್ಯಾಲೆಂಡರ್ ವಷ೯ದಲ್ಲಿ ಒಂದಿಷ್ಟು ಸಂಕಲ್ಪಗಳನ್ನು ಈಡೇರಿಸಲು ಹೆಚ್ಚು ಕೆಲಸ ಮಾಡೋಣ ಈ ಉತ್ತಮ ಸಂಕಲ್ಪಗಳು ನಮ್ಮ ಬದುಕಿಗೆ ಹೊಸ ಅಥ೯ ಕೊಡುವಲ್ಲಿ ಅನುಮಾನವಿಲ್ಲ. ✍
