Updated News From Kaup

ಪಡುಬಿದ್ರಿ ಲಯನ್ಸ್ ಕ್ಲಬ್ : ಮನೆ ಹಸ್ತಾಂತರ

Posted On: 16-02-2024 05:21PM

ಪಡುಬಿದ್ರಿ : ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ ವಾಸ ಯೋಗ್ಯವಲ್ಲದ ಮನೆಯನ್ನು ಪಡುಬಿದ್ರಿ ಲಯನ್ಸ್ ಕ್ಲಬ್ ವತಿಯಿಂದ ನವೀಕರಿಸಿ ಗುರುವಾರ ದಾಯ್ಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ಹಸ್ತಾಂತರಿಸಿದರು.

ಪಡುಬಿದ್ರಿ-ಪಾದೆಬೆಟ್ಟು ಕೆರಮದ ರಮೇಶ್ ಆಚಾರ್ಯ-ಸುಮತಿ ದಂಪತಿ ವಾಸಿಸುವ ಮನೆಯು ಅತ್ಯಂತ ಅಜೀರ್ಣಾವಸ್ಥೆಯಲ್ಲಿರುವುದನ್ನು ಮನಗಂಡು ಸ್ಥಳೀಯರಾದ ಅಶ್ವಥ್ ಆಚಾರ್ಯ ಕೋರಿಕೆಯ ಮೇರೆಗೆ ಪಡುಬಿದ್ರಿ ಲಯನ್ಸ್ ಸಂಸ್ಥೆಯು ಸುಮಾರು ರೂ. 2 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ವಾಸಯೋಗ್ಯವಾಗಿ ನವೀಕರಿಸಿ ವಿದ್ಯುತ್ ಸಂಪರ್ಕ ಸಹಿತ ಶೌಚಾಲಯ ನಿರ್ಮಿಸಿ ಮನೆಯನ್ನು ನಿರ್ಮಿಸಿ ಕೊಟ್ಟಿದೆ.

ಮನೆ ಹಸ್ತಾಂತರಿಸಿ ಮಾತನಾಡಿದ ವಾಲ್ಟರ್ ನಂದಳಿಕೆ ಸಮಾಜ ಸೇವೆಯಲ್ಲಿ ಶ್ರೇಷ್ಠ ಶ್ರೇಣಿಯಲ್ಲಿ ಕಂಡುಬರುವ ಕಾಯಕವನ್ನು ಪಡುಬಿದ್ರಿ ಲಯನ್ಸ್ ನಿರ್ವಹಿಸಿದೆ. ಇಂತಹ ಸೇವೆಯಿಂದ ಸಮಾಜ ಮತ್ತು ದೇಶಸೇವೆ ಸಾಧ್ಯವಿದೆ ಎಂದರು.

ಈ ಸಂದರ್ಭ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎನ್. ಎಮ್.ಹೆಗ್ಡೆ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಜಿತೇಂದ್ರ ಫುರ್ಟಾಡೊ, ಉದ್ಯಮಿ ಫ್ರಾನ್ಸಿಸ್ ಡಿಸೋಜಾ, ಪ್ರಾಂತೀಯ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಪಡುಬಿದ್ರಿ ಲಯನ್ಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಡ್ವೆ, ಪಡುಬಿದ್ರಿ ಸ್ಪೂರ್ತಿ ಲಯನ್ಸ್ ಅಧ್ಯಕ್ಷೆ ಶಾರ್ಲೆಟ್ ಫುರ್ಟಾಡೊ, ಲಯನ್ಸ್ ಪ್ರಮುಖರಾದ ಕಪಿಲ್, ಪ್ರಗತ್ ಜಿ. ಶೆಟ್ಟಿ, ಕಸ್ತೂರಿ ಪ್ರವೀಣ್, ಐರಿನ್ ಅಂದ್ರಾದೆ, ಮ್ಯಾಕ್ಸಿಂ ಡಿಸೋಜಾ, ಸ್ನೇಹಾ ಪ್ರವೀಣ್, ಸವಿತಾ ಫುರ್ಟಾಡೋ, ಗೀತಾ ನವೀನ್‌ಚಂದ್ರ, ಕುಟ್ಟಿ ಪೂಜಾರಿ, ವಿಶ್ವಕರ್ಮ ಸಮಾಜದ ಮುಖ್ಯಸ್ಥ ವಸಂತ ಅಚಾರ್ಯ ಉಪಸ್ಥಿತರಿದ್ದರು.

ಕಾಪು: ಇನ್ನಂಜೆ ದೇವಳದ ಕೆರೆಯಲ್ಲಿ ಯುವಕನ ಶವ ಪತ್ತೆ

Posted On: 16-02-2024 04:40PM

ಕಾಪು : ತಾಲೂಕಿನ ಇನ್ನಂಜೆ ವಿಷ್ಣುಮೂರ್ತಿ ದೇವಸ್ಥಾನ ಕೆರೆಯಲ್ಲಿ ಯುವಕನ ಶವವೊಂದು ಪತ್ತೆಯಾಗಿದ್ದು ಇದಕ್ಕೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ.

ಈತ ಪಡುಬಿದ್ರಿ ನಿವಾಸಿ ವಿನಯ ರಾವ್(27) ಆಗಿದ್ದು ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಇಂದು ಮುಂಜಾನೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೆರೆಯ ದಡದಲ್ಲಿ ಲ್ಯಾಪ್‌ಟಾಪ್ ಸಹಿತ ಕೆಲ ಪರಿಕರಗಳು ಪತ್ತೆಯಾಗಿದೆ. ದೇವಳದ ಸಿಸಿ ಕ್ಯಾಮಾರ ಸಾಧನವನ್ನು ಪರಿಶೀಲನೆ ನಡೆಸಿದಾಗ ಈತ ರಾತ್ರಿ ಹನ್ನೆರಡರ ಬಳಿಕ ದೇವಳದ ಪರಿಸರದಲ್ಲಿ ಸುತ್ತಾಡುತ್ತಿದ್ದ ದೃಶ್ಯ ಸೆರೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.

ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ, ಸ್ಥಳಕ್ಕೆ ಬಂದ ಕಾಪು ಪೊಲೀಸರು ಸಾರ್ವಜನಿಕ ಸಹಕಾರದಿಂದ ಶವವನ್ನು ಕೆರೆಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್ 7: ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ - ಭಗ್ವ ಟ್ರೋಫಿ 2024

Posted On: 15-02-2024 09:18PM

ಉಡುಪಿ : ಜಿಲ್ಲೆಯಲ್ಲಿ ರೂಪುಗೊಂಡ ಸಮಾನ ಮನಸ್ಕರ ತಂಡ ಟೀಮ್ ಭಗ್ವ ಈ ಬಾರಿ ಅಶಕ್ತ ಬಡ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ 65 ಕೆಜಿ ವಿಭಾಗದ ಮತ್ತು 23 ವರ್ಷ ವಯೋಮಿತಿಯ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಮಾರ್ಚ್ 7 ರಂದು ಮಧ್ಯಾಹ್ನ 2 ಗಂಟೆಗೆ ಮೂಳೂರು ಕೊಡಮಣಿತ್ತಾಯ ದೈವಸ್ಥಾನದ ಹಿಂಬದಿಯ ಮೈದಾನದಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ 988075 4812, 8971388220 ಸಂಪರ್ಕಿಸಿ ಕ್ರೀಡಾ ಕೂಟದಲ್ಲಿ ತಮ್ಮ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಟೀಮ್ ಭಗ್ವ ತಂಡದ ಅಧ್ಯಕ್ಷರಾದ ದೀಪಕ್ ಮೂಡುಬೆಳ್ಳೆ ಪ್ರಕಟಣೆಯಲ್ಲಿ ತಿಳಿಸಿರುವರು.

ಕುತ್ಯಾರು : ಸೂರ್ಯ ಚೈತನ್ಯ ಹೈಸ್ಕೂಲ್ - ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Posted On: 15-02-2024 07:15PM

ಕುತ್ಯಾರು : ಇತ್ತೀಚಿಗೆ ಬೆಳ್ಮಣ್ ವಿಠೋಭಾ ಭಜನಾ ಮಂದಿರದಲ್ಲಿ ನಡೆದ ಬುಡೋಕಾನ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಡೋ ಇದರ ಅಂಗವಾಗಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸೂರ್ಯ ಚೈತನ್ಯ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಕೃಷ್ಣ ಆಚಾರ್, ಕುಮಿಟೆ ವಿಭಾಗದಲ್ಲಿ ಕುಮಾರಿ ಧನ್ವಿ ಪ್ರಥಮಸ್ಥಾನ , ಧನಂಜಯ ದ್ವಿತೀಯ ಸ್ಥಾನ ಹಾಗು ಶ್ರೀ ವರ್ಧನ , ಧೃತೇಶ್ , ರನ್ವಿತ್ , ಕುಮಾರಿ ಪ್ರಾಪ್ತಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವರ್ಗದವರು ಹಾಗೂ ಕರಾಟೆ ತರಬೇತುದಾರರಾದ ಸತೀಶರವರು ಅಭಿನಂದಿಸಿದ್ದಾರೆ.

ರತ್ನಾವತಿ ಕಲ್ಯಾಣ - ಕುಮಾರ ವಿಜಯ ; ಪ್ರಸಂಗನಡೆ - ರಂಗತಂತ್ರ

Posted On: 15-02-2024 07:05PM

ನಂದಳಿಕೆಯ ಲಕ್ಷ್ಮೀನಾರಾಯಣಯ್ಯ ಅಂದರೆ ಮಹಾಕವಿ ಮುದ್ದಣನೆಂದೇ ಪ್ರಸಿದ್ದರು.ತನ್ನ‌ ಕಾವ್ಯ‌ ರಚನೆಯ ಪೂರ್ವಭಾವೀಯಾಗಿ ರತ್ನಾವತಿ ಕಲ್ಯಾಣ ಮತ್ತು ಕುಮಾರವಿಜಯ ಪ್ರಸಂಗಗಳನ್ನು‌‌ ಬರೆಯುವುದರ ಮೂಲಕ ಯಕ್ಷಗಾನ ಪದ್ಯರಚನೆಯಲ್ಲಿ ಒಂದು ಹೊಸಯುಗವನ್ನೇ ತೆರೆದವರು.ಪದ ಪ್ರಯೋಗ ಮತ್ತು ಹೊಸ ಛಂದಸ್ಸುಗಳ ರೀತಿ ತುಂಬಾ ಪ್ರಭಾವಿಯಾಗಿವೆ.ಈ ಎರಡು ಪ್ರಸಂಗಗಳು ಕಳೆದ ಶತಮಾನದ ಪೂರ್ವಾರ್ಧದಲ್ಲಿ ತೆಂಕು ಮತ್ತು‌ ಬಡಗು ಎರಡೂ ತಿಟ್ಟುಗಳಲ್ಲಿ ಬಹಳಷ್ಟು ಪ್ರದರ್ಶನಗೊಂಡು ತಿರಿಗಾಟದ ಮುಖ್ಯ ಪ್ರಸಂಗಗಳಾಗಿ ಪ್ರಸಿದ್ಧವಾಗಿದ್ದುವು. ಇನ್ನೊಂದು ವಿಶೇಷ ; ರತ್ನಾವತಿ ಕಲ್ಯಾಣ ಮತ್ತು ಕುಮಾರ ವಿಜಯಗಳು ಪ್ರಚಾರಕ್ಕೆ ಬಂದ ಮೇಲೆ ಭಾಗವತಿಕೆ ಪಾಠಗಳಲ್ಲಿ ಕಲಿಸುವಿಕೆಯಲ್ಲಿ ಮುಖ್ಯವಾದ ಎರಡು ಪಠ್ಯಗಳಾಗಿಯೂ ಪ್ರಸಿದ್ಧವಾಗಿದ್ದುವು.

"ರತ್ನಾವತಿ ಕಲ್ಯಾಣ"ವು ಬಡಗುತಿಟ್ಟಿನವರಿಗೆ ಹಾಗೂ "ಕುಮಾರ ವಿಜಯ"ವು ತೆಂಕು‌ತಿಟ್ಟಿನವರಿಗೆ ಅನುಕೂಲ ಎಂದು ಪರಿಗಣಿತವಾಗಿ ಪ್ರದರ್ಶನಗಳಾಗುತ್ತಿದ್ದುವು, ಇವತ್ತಿಗೂ‌ ಪ್ರಶಂಸೆಗೆ ಪಾತ್ರವಾಗುತ್ತಿವೆ. ಈ ಪ್ರಸಂಗಗಳ ಯಾವ ಪದ್ಯವನ್ನೂ ಬಿಡದೆ ಹಾಡಿಸಿ ದಾಖಲಿಸಿದ ಕೆಲಸ ಎಂಟು ವರ್ಷಗಳ ಹಿಂದೆಯೇ ನಡೆದಿತ್ತು. ಕುಮಾರ ವಿಜಯದ ಏಳು ನೂರು ಪದ್ಯಗಳನ್ನು ದಿ.ಬಲಿಪ‌ನಾರಾಯಣ ಭಾಗವತರು, ತನ್ನ ಪುತ್ರ ಪ್ರಸಾದ ಬಲಿಪ ಹಾಗೂ ಶಿವಶಂಕರ ಬಲಿಪ ಮತ್ತು ಬಲಿಪರ ಸೋದರಳಿಯ ಗೋಪಾಲಕೃಷ್ಣ ಭಾಗವತರೊಂದಿಗೆ ಹಾಡಿದ್ದಾರೆ. ಪ್ರಾರಂಭದಿಂದ ಅಂತ್ಯದವರೆಗೆ ರಂಗನಡೆ ಹಾಗೂ‌‌ ರಂಗ ತಂತ್ರಕ್ಕನುಗುಣವಾಗಿ ನುಡಿತಗಳಿವೆ. ಪ್ರಸಂಗ ಪ್ರದರ್ಶನವನ್ನು ನೋಡಿದ ಅನುಭವವು‌ ಕೇಳುಗನಿಗೆ ಆಗುವಂತಿದೆ.ಇದಕ್ಕೆ ದಿ.ಬಲಿಪರು ಸ್ವತಃ‌ಬರೆದ ರಂಗ ಟಿಪ್ಪಣೆ ಇರುವ ಪುಸ್ತಕ "ರತ್ನಾವತಿಕಲ್ಯಾಣ - ಕುಮಾರವಿಜಯ ; ಪ್ರಸಂಗನಡೆ - ರಂಗತಂತ್ರ" ಗಮನಿಸಬಹುದು.

ಬಡಗುತಿಟ್ಟಿನ ಭಾಗವತರಾದ ವಿದ್ವಾನ್ ಗಣಪತಿ ಭಟ್ ಹಾಗೂ ಹೆರಂಜಾಲು ಗೋಪಾಲ ಗಾಣಿಗ ಅವರು ಜೊತೆಯಾಗಿರತ್ನಾವತಿ ಕಲ್ಯಾಣ ಪ್ರಸಂಗಕ್ಜಾಗಿ ಹಾಡಿದ್ದಾರೆ.ಗೋಪಾಲ ಗಾಣಿಗ ಹಾಗೂ ನಿತ್ಯಾನಂದ ಹೆಬ್ಬಾರ್ ಅವರು ಬರೆದಿರು ರಂಗಟಿಪ್ಪಣಿಯು ಈಪುಸ್ತಕದಲ್ಲಿ ದಾಖಲಾಗಿದೆ.ಕುಮಾರವಿಜಯದಂತೆಯೇ ಈ‌ ಪ್ರಸಂಗದ ಧ್ವನಿ ಮುದ್ರಣ ನಡೆದಿದೆ. ಲಕವಿ ಮುದ್ದಣನ ಬಗ್ಗೆ, ಬಲಿಪ ಭಾಗವತರ ಬಗ್ಗೆ ಯಕ್ಷಗಾನ ವಿದ್ವಾಂಸರು ಬರೆದ ಪ್ರತಿಕ್ರಿಯೆಗಳೂ ಸಂದೇಶದ ರೂಪದಲ್ಲಿ ಈ ಪುಸ್ತಕ‌ ಒಳಗೊಂಡಿದೆ. ಅಭ್ಯಾಸ ಮಾಡುವ ಭಾಗವತರಿಗೆ,ಈ ಎರಡು ಪ್ರಸಂಗಗಳ ಪ್ರಯೋಗ ವಿಧಾನವನ್ನು ತಿಳಿಯಬೇಕೆಂಬ ಆಸಕ್ತರಿಗೆ ಈ ಪುಸ್ತಕ ಹಾಗೂ ಧ್ವನಿ ಮುದ್ರಣ ಮಾರ್ಗದಶಿಯಾಗಲಿದೆ. ಬಲಿಪರ ಪರಂಪರೆ ಹಾಗೂ ಬಡಗುತಿಟ್ಟಿನ ಒಂದುಕಾಲದ ಸಂಪ್ರದಾಯವು ದ್ವನಿಮುದ್ರಣದಲ್ಲ ಅಡಕವಾಗಿದೆ. ಸುಶ್ರಾವ್ಯವಾದ ಯಕ್ಷಗಾನ ಹಾಡುಗಾರಿಕೆ ಪರಂಪರೆಯ ಚೌಕಟ್ಟಿನೊಳಗೆ ಮೂಡಿಬಂದಿದೆ.

ಫೆ.17 ರಂದು ಮೂಡುಬಿದ್ರಿಯ ಅಲಂಗಾರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧ್ವನಿ‌ಮುದ್ರಣ ಹಾಗೂ ಪುಸ್ತಕ ಲೋಕಾರ್ಪಣೆಯಾಗಲಿದೆ ಎಂದು ನಂದಳಿಕೆಯ ಮುದ್ದಣ ಪ್ರಕಾಶನ‌ದ ಅಧ್ಯಕ್ಷ ನಂದಳಿಕೆ ಬಾಲಚಂದ್ರರಾವ್ ಹಾಗೂ‌ ಬಲಿಪಗಾನಯಾನದ ಚಂದ್ರಶೇಖರ ಭಟ್ ಕೊಂಕಣಾಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.17 : ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶ

Posted On: 15-02-2024 06:05PM

ಕಾಪು : ಲೋಕಸಭಾ ಚುನಾವಣಾ ಸಿದ್ಧತೆಗಾಗಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಫೆ.17ರಂದು ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕಾಲೇಜಿನ ಮುಂಭಾಗದ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿನಯಕುಮಾರ್ ಸೊರಕೆ ತಿಳಿಸಿದರು ಕಾಪು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಹಭಾಗಿತ್ವದಲ್ಲಿ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲಾ ಹಂತದ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಶನಿವಾರ ಅಪರಾಹ್ನ 2ಗಂಟೆಯಿಂದ ಪ್ರಾರಂಭಗೊಳ್ಳುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯ ಕ್ರಮದಲ್ಲಿ ಎಐಸಿಸಿ ಪ್ರ. ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜವಾಲ, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ಮುಖಂಡರಾದ ರೋಜಿ ಜೋನ್, ಸಲೀಂ ಅಹ್ಮದ್, ಸಚಿವರು, ಪಕ್ಷದ ಶಾಸಕರು, ಮುಖಂಡರೆಲ್ಲರೂ ಭಾಗವಹಿಸಲಿದ್ದಾರೆ ಎಂದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ತೆಕ್ಕೆಗೆ ಮರಳಿ ಪಡೆಯುವ ಗುರಿಯೊಂದಿಗೆ ರಾಜ್ಯ ಮಟ್ಟದ ಸಮಾವೇಶವನ್ನು ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಬೂತ್ ಮಟ್ಟದಿಂದಲೇ ಸಮಿತಿಗಳನ್ನು ರಚಿಸಲಾಗುವುದು ಎಂದು ಸೊರಕೆ ವಿವರಿಸಿದರು. ಶನಿವಾರ ಬೆಳಿಗ್ಗೆ 10 ಗಂಟೆಗೆ ಕಾಪುವಿನಿಂದ ಹೊರಟು, 11 ಗಂಟೆಗೆ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಹೆಜಮಾಡಿ ಟೋಲ್‌ನಲ್ಲಿ ಜತೆ ಸೇರಲಿದ್ದಾರೆ. ಅಲ್ಲಿಂದ 300ಕ್ಕೂ ಅಧಿಕ ಬಸ್‌ಗಳ ಮೂಲಕವಾಗಿ ಕಾರ್ಯಕರ್ತರು ಸಮಾವೇಶದ ಮೈದಾನದವರೆಗೆ ತೆರಳಲಿದ್ದಾರೆ.

ರಾಜ್ಯದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಮಾವೇಶದಲ್ಲಿ ಪಾಲ್ಗೊ ಳ್ಳುವ ನಿರೀಕ್ಷೆ ಇದೆ ಎಂದ ಸೊರಕೆ, ಪಕ್ಷದ ಸಾಧನೆ ಹಾಗೂ ಮುಂದಿನ ಯೋಜನೆಗಳನ್ನು ಈ ಸಮಯದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು. ಉಡುಪಿ ಜಿಲ್ಲೆಯ ಪ್ರತಿ ಬೂತ್ ಮಟ್ಟದಿಂದ ಕನಿಷ್ಠ ತಲಾ 20 ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಜಿಲ್ಲೆಯಿಂದ ಒಟ್ಟು ಕನಿಷ್ಠ 15,000 ಮಂದಿ ಕಾಂಗ್ರೆಸಿಗರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯನ್ನು ಹೊಂದಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಲಾಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಬಂಗೇರ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ ಉಪಸ್ಥಿತರಿದ್ದರು.

ಶಿರ್ವ : ಹಿಂದು ಪ್ರೌಢಶಾಲೆ ಮತ್ತು ಸ.ಹಿ.ಪ್ರಾ.ಶಾಲೆ ಕೈರಬೆಟ್ಟುಗೆ ವಾಟರ್ ಕೂಲರ್‌ ಕೊಡುಗೆ

Posted On: 15-02-2024 05:56PM

ಶಿರ್ವ : ಇಲ್ಲಿನ ಹಿಂದು ಪ್ರೌಢಶಾಲೆ ಹಾಗೂ ಸ.ಹಿ.ಪ್ರಾ.ಶಾಲೆ ಕೈರಬೆಟ್ಟುವಿನ ಹಳೆ ವಿದ್ಯಾರ್ಥಿ ದಿವಂಗತ ಕುಮಾರ್ ಟಿ. ಸುವರ್ಣ ಮತ್ತು ಅವರ ಪತ್ನಿ ದಿವಂಗತ ಹೇಮಾವತಿ ಕೆ. ಸುವರ್ಣ ಸ್ಮರಣಾರ್ಥ ಅವರ ಮಕ್ಕಳು ವಿದ್ಯಾರ್ಥಿಗಳ ಉಪಯೋಗಕ್ಕಾಗಿ 45 ಸಾವಿರ ರೂ. ಮೌಲ್ಯದ ವಾಟರ್ ಕೂಲರನ್ನು ಸೋಮವಾರ ಹಸ್ತಾಂತರಿಸಿದರು.

ಈ ಸಂಧರ್ಭ ಅವರ ಮಕ್ಕಳಾದ ಸುನಿಲ್ ಕೆ.ಸುವರ್ಣ, ಸುಧೀರ್ ಕೆ. ಸುವರ್ಣ, ಸುಜಿತ್ ಸುವರ್ಣ, ಮಗಳು ಸುನಿತಾ ಕೆ. ಕೋಟ್ಯಾನ್, ಮತ್ತು ಅಳಿಯ ಶೇಖರ್ ಕೋಟ್ಯಾನ್, ಕುಟುಂಬಿಕರಾದ ಲಕ್ಷ್ಮಣ ಸುವರ್ಣ, ಶೇಖರ್ ಕೋಟ್ಯಾನ್, ಸುಜನ್.ಎಲ್.ಸುವರ್ಣ, ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಹರೀಶ್ ಕೋಟ್ಯಾನ್, ಉಪಾಧ್ಯಕ್ಷೆಯಾದ ಸರಿತಾ ನಾಯ್ಕ್, ಸದಸ್ಯರಾದ ನಾಗೇಶ್ ಆಚಾರ್ಯ, ಶಕುಂತಳಾ, ಮಮತಾ ನಾಯ್ಕ್, ಹಿರಿಯ ಸಹಶಿಕ್ಷಕಿಯಾದ ಶಶಿಕಲಾ.ಹೆಚ್, ಅತಿಥಿ ಶಿಕ್ಷಕರಾದ ಸ್ವಾತಿ ಆಚಾರ್ಯ, ಅಡುಗೆ ಸಿಬ್ಬಂದಿಗಳಾದ ಪ್ರೇಮ ಮತ್ತು ಲಲಿತಾ, ಕಾಲೇಜಿನ ಪ್ರಿನ್ಸಿಪಾಲ್ ಭಾಸ್ಕರ ಎ. ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಸಂತಿ ಬಾಯಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಶಶಿಕಲಾ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿಯಾದ ಕುಮುದಾ ವಂದಿಸಿದರು. ಗೌರವ ಶಿಕ್ಷಕಿಯಾದ ಸವಿತಾ ಕಾರ್ಯಕ್ರಮ ನಿರೂಪಿಸಿದರು.

ಫೆಬ್ರವರಿ 18 : ಕುತ್ಯಾರು ಕುಲಾಲ ಸಂಘದ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ

Posted On: 15-02-2024 09:43AM

ಕಾಪು : ತಾಲೂಕಿನ ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಆಯೋಜನೆಯಲ್ಲಿ ಫೆಬ್ರವರಿ 18 ರಂದು ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ, ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆಯು ಕುತ್ಯಾರು ರಾಮೊಟ್ಟು ಬನತೊಡಿ ಗದ್ದೆಯಲ್ಲಿ ನಡೆಯಲಿದೆ ಎಂದು ಕುತ್ಯಾರು ಕುಲಾಲ ಸಂಘದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.

ಉಡುಪಿ : ಶ್ರೀ ಸಾಯಿ ಮುಖ್ಯ ಪ್ರಾಣ ದೇವಸ್ಥಾನ ದ್ವಾರಕಾಮಾಯಿ ಮಠ ಶ್ರೀ ಕ್ಷೇತ್ರ ಶಂಕರಪುರ - ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಸೈನಿಕರಿಗೆ ನುಡಿ ನಮನ

Posted On: 14-02-2024 05:10PM

ಉಡುಪಿ : ಶ್ರೀ ಸಾಯಿ ಮುಖ್ಯ ಪ್ರಾಣ ದೇವಸ್ಥಾನ ದ್ವಾರಕಾಮಾಯಿ ಮಠ ಶ್ರೀ ಕ್ಷೇತ್ರ ಶಂಕರಪುರ ವತಿಯಿಂದ ಪುಲ್ವಾಮಾ ದಾಳಿಯ 5ನೇ ವರ್ಷಾಚರಣೆ ಅಂಗವಾಗಿ ದಾಳಿಯಲ್ಲಿ ಮಡಿದ ವೀರ ಸೈನಿಕರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಅಜ್ಜರಕಾಡು ಯುದ್ಧ ಸ್ಮಾರಕ ಬಳಿ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶಂಕರಪುರ ಸಾಯಿ ಮುಖ್ಯಪ್ರಾಣ ದೇವಾಲಯದ ಶ್ರೀ ಸಾಯಿ ಈಶ್ವರ ಗುರೂಜಿ ಮಾತನಾಡಿ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಮಾಡುವುದು ಸರಿಯಲ್ಲ. ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನು ಅಪ್ಪಿದ 40 ಜನ ವೀರ ಸೈನಿಕರಿಗೆ ನುಡಿ ನಮನ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್ ಹವಾಲ್ದಾರ್ ಮುರಳಿದರ್ .ಕೆ, ಸಿ.ಆರ್.ಪಿ.ಎಫ್ ಎ.ಎಸ್.ಐ ಕೇಶವ ಆಚಾರ್ಯ, ಉಡುಪಿ ಜಿಲ್ಲಾ ಹಿಂದೂ ಮಹಾಸಭಾ ಅಧ್ಯಕ್ಷರು ಸಂತೋಷ್ ಉದ್ಯಾವರ, ರಾಘವೇಂದ್ರ ಭಕ್ತ, ಸುಧಾಕರ್ ಶೆಟ್ಟಿ, ರಾಘವೇಂದ್ರ ಪ್ರಭು ಕವಾ೯ಲು, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ.ಎಸ್. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ವಿಜಯ ಕುಂದರ್, ವಾರಿಜ ಕಲ್ಮಾಡಿ, ಸತೀಶ್, ವಿಘ್ನೇಶ್, ಪ್ರದೀಪ್, ನೀಲೇಶ್, ಅಜಯ್, ಸುದರ್ಶನ್, ಸುಪ್ರೀತಾ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್ ಹವಾಲ್ದಾರ್ ಮುರಳಿದರ್ .ಕೆ, ಸಿ.ಆರ್.ಪಿ.ಎಫ್ ಎ.ಎಸ್.ಐ ಕೇಶವ ಆಚಾರ್ಯ, ಉಡುಪಿ ಜಿಲ್ಲಾ ಹಿಂದೂ ಮಹಾಸಭಾ ಅಧ್ಯಕ್ಷರು ಸಂತೋಷ್ ಉದ್ಯಾವರ, ರಾಘವೇಂದ್ರ ಭಕ್ತ, ಸುಧಾಕರ್ ಶೆಟ್ಟಿ, ರಾಘವೇಂದ್ರ ಪ್ರಭು ಕವಾ೯ಲು, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ.ಎಸ್. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ವಿಜಯ ಕುಂದರ್, ವಾರಿಜ ಕಲ್ಮಾಡಿ, ಸತೀಶ್, ವಿಘ್ನೇಶ್, ಪ್ರದೀಪ್, ನೀಲೇಶ್, ಅಜಯ್, ಸುದರ್ಶನ್, ಸುಪ್ರೀತಾ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಖಾರ್ಲಾಂಡ್ ಯೋಜನೆಯಡಿಯಲ್ಲಿ ಅನುದಾನ ಮಂಜೂರು ಮಾಡಿ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಸ್ತಾವನೆ

Posted On: 14-02-2024 12:43PM

ಕಾಪು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಪು ತಾಲೂಕು ಕೈಪುಂಜಾಲು, ಉಳಿಯಾರಗೋಳಿ, ಮಟ್ಟು ಆಳಿಂಜೆ, ತೆಂಕು ಕೊಪ್ಪಳ, ಬಡಗು ಕೊಪ್ಪಳ, ಕಲ್ತಟ್ಟ ಹಾಗೂ ದಡ್ಡಿ ಎಂಬಲ್ಲಿ ಪಾಂಗಾಳ ನದಿದಂಡೆಯ ಕೊರೆತಕ್ಕೊಳಗಾದ ಆಯ್ದ ಭಾಗಗಳಲ್ಲಿ ಖಾರ್ಲಾಂಡ್ ನಿರ್ಮಾಣ ಕಾಮಗಾರಿಯು ತೀರಾ ಅತ್ಯವಶ್ಯಕವಿರುತ್ತದೆ. ಈ ಭಾಗದಲ್ಲಿ ಜಿ.ಐ ಟ್ಯಾಗ್ ಮಾನ್ಯತೆ ಹೊಂದಿದ ಮಟ್ಟುಗುಳ್ಳ ವಿಭಿನ್ನ ತರಕಾರಿ ಬೆಳೆಯಾಗಿದ್ದು, ಬಹು ಬೇಡಿಕೆಯದ್ದಾಗಿರುತ್ತದೆ. ಅಷ್ಟ ಮಠದ ಪ್ರಮುಖ ಯತಿಗಳಾದ ವಾದಿರಾಜ ಸ್ವಾಮೀಗಳು ಪ್ರಸಾದ ರೂಪದಲ್ಲಿ ನೀಡಿದ ದಿವ್ಯ ಸ್ವರೂಪದ ಬೀಜವನ್ನು ಬಿತ್ತಿದ ಪ್ರದೇಶವಾಗಿರುತ್ತದೆ ಎಂಬ ಐತಿಹ್ಯವಿದೆ. ಮಟ್ಟುಗುಳ್ಳ ಬೆಳೆಗಾರರು ಇಂದಿಗೂ ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಮಟ್ಟುಗುಳ್ಳ ತರಕಾರಿಯನ್ನು ಹೊರೆಕಾಣಿಕೆಯ ರೂಪದಲ್ಲಿ ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಸದ್ರಿ ಪ್ರದೇಶದಲ್ಲಿನ ತೆಂಗು ಬೆಳೆಯು ಹಾನಿಯಾಗಿರುತ್ತದೆ.

ಆದ್ದರಿಂದ ಕೆಳಗಿನ ಪ್ರದೇಶಗಳಲ್ಲಿ ಪಾಂಗಾಳ ನದಿಗೆ ಖಾರ್ಲಾಂಡ್ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುದಾನ ಮಂಜೂರು ಮಾಡುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸದನದ ಗಮನ ಸೆಳೆದರು.