Updated News From Kaup

ಪಡುಬಿದ್ರಿ : ಸಾಯಿ ಆರ್ಕೆಡ್ ಆವರಣದಲ್ಲಿ ಆಟಿಯ ಕಷಾಯ, ಮೆಂತೆ ಗಂಜಿ ವಿತರಣೆ

Posted On: 04-08-2024 08:50AM

ಪಡುಬಿದ್ರಿ : ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿಯರುವ ಸಾಯಿ ಆರ್ಕೆಡ್ ಆವರಣದಲ್ಲಿ ತುಳು ಜಾನಪದ ಚಿಂತಕ, ಪ್ರಗತಿಪರ ಕೃಷಿಕರಾದ ಪಿ.ಕೆ ಸದಾನಂದ ಪಡುಬಿದ್ರಿಯವರ ನೇತೃತ್ವದಲ್ಲಿ ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ನಡೆಯಿತು.

ಈ ಸಂದರ್ಭ ಮಾತನಾಡಿದ ಪಿ.ಕೆ ಸದಾನಂದರವರು, ತುಳುನಾಡಿನ ಹಿರಿಯರ ಸಂಪ್ರದಾಯದಂತೆ ಆಟಿ ಕಷಾಯದ ಜೊತೆಗೆ ದೇಹಕ್ಕೆ ತಂಪನ್ನು ನೀಡಲು ಮೆಂತೆ ಗಂಜಿ ಸೇವನೆ ಮಾಡಲಾಗುತ್ತದೆ. ಇದು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡಿ ಕಾಯಿಲೆಯನ್ನು ದೂರ ಮಾಡಲು ಸಹಕಾರಿಯಾಗಿದೆ. ಇಂದಿನ ಯುವ ಜನಾಂಗಕ್ಕೆ ಹಾಳೆ ಮರ ಸೇರಿದಂತೆ ಆಯುರ್ವೇದೀಯ ಅಂಶದ ಗಿಡಮೂಲಿಕೆಗಳ ಬಗ್ಗೆ ತಿಳಿಸಬೇಕಾದ ಅನಿವಾರ್ಯತೆಯಿದೆ. ಕಳೆದ 12 ವರ್ಷಗಳಿಂದ ಆಟಿ ಕಷಾಯ ಮತ್ತು ಮೆಂತೆ ಗಂಜಿಯನ್ನು ಸಾಮೂಹಿಕ ತಯಾರಿಯ ಜೊತೆಗೆ ಸಾರ್ವಜನಿಕ ವಿತರಣೆಯನ್ನು ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಪಡುಬಿದ್ರಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಸಂತೋಷ್, ಪ್ರಾಣೇಶ್ ಹೆಜಮಾಡಿ, ಸಂತೋಷ್ ನಂಬಿಯಾರ್, ಕುಟ್ಟಿ ಪೂಜಾರಿ, ಚಿತ್ರಾಕ್ಷಿ ಕೆ ಕೋಟ್ಯಾನ್, ಸುಧಾಕರ್, ಪಂಚಾಯತ್ ಸದಸ್ಯರು, ಪಿ ಕೆ ಸದಾನಂದರವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ಸುಮಾರು 250 ಕ್ಕೂ ಅಧಿಕ ಮಂದಿ ಆಟಿ ಕಷಾಯ ಮತ್ತು ಮೆಂತೆ ಗಂಜಿ ಸೇವಿಸಿದರು.

ಶಿರ್ವ : ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ - ವಲಯ ಮಟ್ಟದ ಬಾಲಕ, ಬಾಲಕಿಯರ ಕಬ್ಬಡ್ಡಿ ಪಂದ್ಯಾಟ

Posted On: 03-08-2024 10:57PM

ಶಿರ್ವ : ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾಟ ಶನಿವಾರದಂದು ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಪು ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿ, ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕಿರಣ್ ಶೆಟ್ಟಿ, ಎಸ್.ವಿ.ಎಚ್ ಶಾಲೆ ಇನ್ನಂಜೆಯ ದೈಹಿಕ ಶಿಕ್ಷಕ ನವೀನ್ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ ಹಸನಬ್ಬ ಶೇಖ್, ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ ಉಪಾಧ್ಯಕ್ಷರಾದ ಉಮ್ಮರ್ ಇಸ್ಮಾಯಿಲ್, ಕಾರ್ಯದರ್ಶಿ ಮೊಹಮ್ಮದ್, ಖಜಾಂಚಿ ಪರ್ವೇಝ್ ಸಲೀಂ ಮತ್ತು ಮುಖ್ಯ ಶಿಕ್ಷಕಿ ಖೈರುನ್ನೀಸಾ ಉಪಸ್ಥಿತರಿದ್ದರು.

ಸಹಶಿಕ್ಷಕಿ ಮುಮ್ತಾಜ್ ಬೇಗಂರವರು ಸ್ವಾಗತಿಸಿದರು. ಉಷಾ ಎಸ್. ನಿರೂಪಿಸಿದರು. ಅಂಬಿಕಾ ಎಸ್. ಪ್ರಭು ವಂದಿಸಿದರು.

ನಂದಿಕೂರು : ಬೀಳುವ ಹಂತದಲ್ಲಿದ್ದ ಮನೆಯ ಒಂಟಿ ಜೀವಕ್ಕೆ ಆಸರೆ ತೋರಿದ ಕಾಪು ತಹಶಿಲ್ದಾರ್

Posted On: 03-08-2024 05:39PM

ನಂದಿಕೂರು : ಕಾಪು ತಾಲ್ಲೂಕಿನ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ಗ್ರಾಮದಲ್ಲಿ ಆಗಲೋ ಈಗಲೋ ಬೀಳುವ ಹಂತದಲ್ಲಿದ್ದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಕೃಷ್ಣಯ್ಯ ಆಚಾರ್ಯ (82ವರ್ಷ)ರನ್ನು ಕಾಪು ತಹಶಿಲ್ದಾರ್ ನೇತೃತ್ವದ ತಂಡ ಅವರ ಮನವೊಲಿಸಿ ಉದ್ಯಾವರದಲ್ಲಿರುವ ಹಿರಿಯ ನಾಗರಿಕರ ಕನಸಿನ ಮನೆಗೆ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷ್ಣಯ್ಯ ಆಚಾರ್ಯರು ವಾಸಿಸುತ್ತಿದ್ದ ಮನೆಯ ಒಂದು ಭಾಗದ ಮಣ್ಣಿನ ಗೋಡೆ ಭಾಗಶಃ ಹಾನಿಗೊಳಗಾಗಿತ್ತು. ಟರ್ಪಾಲಿನ ಆಸರೆಯಲ್ಲಿ, ಈ ರಣಮಳೆಗೆ ಬೀಳುವ ಹಂತದಲ್ಲಿತ್ತು. ಅವಿವಾಹಿತನಾಗಿದ್ದ ಅವರ ಒಬ್ಬ ತಂಗಿಯೂ ತೀರಿ ಹೋಗಿದ್ದರು. ವೃದ್ಧಾಪ್ಯ ವೇತನ, ಊರಿನವರ ಅಲ್ಪ ಸ್ವಲ್ಪದ ಸಹಾಯ, ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳ ಸಹಾಯದಿಂದ ಜೀವಿಸುತ್ತಾ ಇದ್ದರು.

ಅಜ್ಜನ ಮನೆ ಸೆಂಟಿಮೆಂಟ್ : ಕೃಷ್ಣಯ್ಯರಿಗೆ ಮನೆ ಬಗ್ಗೆ ಬಹಳ ಪ್ರೀತಿ. ಬೀಳುವಂತಿದ್ದರೂ ಬೇರೆ ಕಡೆಗೆ ಹೋಗಲು ಒಪ್ಪಿರಲಿಲ್ಲ. ಪಲಿಮಾರು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಊರವರು ಎಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಬೇರೆಡೆಗೆ ಹೋಗಲು ಅಜ್ಜ ಒಪ್ಪಿರಲಿಲ್ಲ. ಅಧಿಕಾರಿಗಳು ಹಲವು ವರ್ಷಗಳಿಂದ ಪ್ರಯತ್ನ ಪಟ್ಟರೂ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕಳಿಸಲು ಸಾಧ್ಯವಾಗಿರಲಿಲ್ಲ. ಇಷ್ಟೆಲ್ಲ ವಿಷಯ ಮನಗಂಡ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರು ತಾವೇ ಸ್ವತಃ ಖುದ್ದಾಗಿ ಅಲ್ಲಿಗೆ ಬಂದು ಕೃಷ್ಣಯ್ಯ ಆಚಾರ್ಯರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿ ಕೊನೆಗೆ ಉದ್ಯಾವರದ ವೃದ್ಧಾಶ್ರಮಕ್ಕೆ ಸೇರಿಸುವ ಪ್ರಯತ್ನ ಯಶಸ್ವಿಯಾಯಿತು. ಅಲ್ಲಿಯ ಸ್ವಚ್ಛವಾಗಿದ್ದ ಪರಿಸರ, ನಾಗರಿಕ ಸೌಲಭ್ಯಗಳು, ಇತರ ಸಮಾನ ವಯಸ್ಕರನ್ನು ಕಂಡು ಕೃಷ್ಣಯ್ಯರಿಗೂ ಮುಖದಲ್ಲಿ ನಗು ಮೂಡಿತು. ಇಂಥಹ ವ್ಯವಸ್ಥೆ ಮಾಡಿಕೊಟ್ಟ ತಹಶಿಲ್ದಾರ್ ಗೆ ಕೃಷ್ಣಯ್ಯರವರು ಕೃತಜ್ಞತೆ ಸಲ್ಲಿಸಲು ಮರೆಯಲಿಲ್ಲ. ತಹಶಿಲ್ದಾರ್ ರವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಈ ಸಂದರ್ಭ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಪಿಡಿಒ ಶಶಿಧರ್, ಸ್ಥಳೀಯರಾದ ಸತೀಶ್, ಸುರೇಶ್ ಮತ್ತು ಸತೀಶ್, ಗ್ರಾಮ ಲೆಕ್ಕಾಧಿಕಾರಿ ಸುನಿಲ್, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್ ಸಹಕರಿಸಿದ್ದರು.

ಕಾಪು - ಶಂಕರಪುರ - ಬಂಟಕಲ್ಲು ಕೂಡುವ ರಸ್ತೆ ಮಡುಂಬು : ಯುವಕರಿಂದಲೇ ದುರಸ್ತಿ ಕಾರ್ಯ

Posted On: 03-08-2024 06:36AM

ಕಾಪು : ತಾಲೂಕಿನ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡುಂಬು ಇಲ್ಲಿನ ಹೃದಯ ಭಾಗವಾಗಿ ಗುರುತಿಸಿಕೊಂಡಿರುವ ಬೆರ್ಮೊಟ್ಟು ಬಳಿಯ ಮಡುಂಬು ಮೂರು ರಸ್ತೆಯು ಕಳೆದ ಕೆಲವು ತಿಂಗಳಿನಿಂದ ಪೈಪ್ ಲೈನ್ ಗಾಗಿ ಗುಂಡಿ ತೋಡುವ ಭರದಲ್ಲಿ ಈ ಭಾಗದಲ್ಲಿ ಸಂಚರಿಸುವವರಿಗೆ ಅಪಾಯಕಾರಿ ತಿರುವಿನ ರಸ್ತೆಯಾಗಿ ಪರಿಣಮಿಸಿತ್ತು. ಮಳೆಗಾಲದಲ್ಲಿ ರಸ್ತೆಯ ಮೇಲಿನ ಮಣ್ಣು ಮತ್ತು ಹೊಂಡದಿಂದಾಗಿ ನೀರು ನಿಲ್ಲುತ್ತಿದ್ದು ಇದಕ್ಕಾಗಿ ಪಿ. ಡಬ್ಲ್ಯೂ.ಡಿ ಕಾಂಟ್ರಾಕ್ಟರ್, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಕಂಡು ಇಲ್ಲಿನ ಸ್ಥಳೀಯ ಯುವಕರ ತಂಡವೊಂದು ದುರಸ್ತಿ ಕಾರ್ಯವನ್ನು ಮಾಡಿದೆ.

ಮಳೆಗಾಲ ಮುಗಿಯುವ ಮುನ್ನವೇ ಈ ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಿರುವುದರಿಂದ ಈ ಭಾಗದಲ್ಲಿ ಚಲಿಸುವ ವಾಹನ ಸವಾರರಿಗೆ ಕೊಂಚ ಮಟ್ಟಿನ ಸಮಾಧಾನ ಉಂಟಾಗಿದೆ.

ಪೈಪ್ ಲೈನ್ ಅಳವಡಿಸಿರುವವರು ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಬೇಕಾಗಿದ್ದು, ಅವರು ಇಲ್ಲದಿದ್ದಲ್ಲಿ ಪಿ. ಡಬ್ಲ್ಯೂ. ಡಿ ಗುತ್ತಿಗೆದಾರರು ಅಥವಾ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಾಗಿದ್ದು ಎಲ್ಲರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಇದ್ದಾರೆ.

ನಾವ್ಯಾರಿಗೂ ಕಾಯುವುದು ಬೇಡ ನಮ್ಮೂರಿನ ರಸ್ತೆಯ ದುರಸ್ತಿ ನಾವೇ ಮಾಡೋಣ ಎಂದು ಯುವಕರೇ ಫೀಲ್ಡಿಗೆ ಇಳಿದಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉಳಿದಿರುವ ಅಲ್ಪ ಸ್ವಲ್ಪ ಕೆಲಸವನ್ನಾದರೂ ಮಾಡಲಿ ಎಂದು ಯುವಕರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.

ಆಗಸ್ಟ್ 4 : ಪಡುಬಿದ್ರಿಯ ಸಾಯಿ ಆರ್ಕೆಡ್ ನಲ್ಲಿ ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ; 10 ವರ್ಷಗಳ ಸ್ತುತ್ಯರ್ಹ ಸೇವೆ

Posted On: 02-08-2024 08:55PM

ಪಡುಬಿದ್ರಿ : ಸಾಯಿ ಆರ್ಕೆಡ್ ಪಡುಬಿದ್ರಿ ಇದರ ಆಶ್ರಯದಲ್ಲಿ ಆಗಸ್ಟ್ 4, ಆದಿತ್ಯವಾರ ಆಟಿ ಅಮಾವಾಸ್ಯೆಯಂದು ಪಡುಬಿದ್ರಿಯ ಮಾರ್ಕೆಟ್ ರಸ್ತೆಯಲ್ಲಿಯರುವ ಸಾಯಿ ಆರ್ಕೆಡ್ ನಲ್ಲಿ ಪೂರ್ವಾಹ್ನ 6 ಗಂಟೆಯಿಂದ 9 ಗಂಟೆಯವರೆಗೆ ತುಳು ಜಾನಪದ ವಿದ್ವಾಂಸರು, ಪ್ರಗತಿಪರ ಕೃಷಿಕರಾದ ಪಿ.ಕೆ ಸದಾನಂದ ಪಡುಬಿದ್ರಿಯವರ ನೇತೃತ್ವದಲ್ಲಿ ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ನಡೆಯಲಿದೆ.

ಕಳೆದ 10 ವರ್ಷಗಳಿಂದ ಆಟಿ ಅಮಾವಾಸ್ಯೆಯ ದಿನದಂದು ಕಷಾಯ ಹಾಗೂ ಮೆಂತೆ ಗಂಜಿಯನ್ನು ಸಾರ್ವಜನಿಕರಿಗೆ ಯಾವ ಫಲಾಪೇಕ್ಷೆ ಇಲ್ಲದೆ ನಿರಂತರವಾಗಿ ವಿತರಿಸುತ್ತಿರುವ ಇವರ ಕಾರ್ಯ ಸ್ತುತ್ಯರ್ಹವಾಗಿದೆ.

ಕಾಪು : ಕಟಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜಾಗೃತಿ

Posted On: 02-08-2024 08:31PM

ಕಾಪು : ತಾಲೂಕಿನ ಕಟಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಲಾರ್ವಾ ಉತ್ಪತ್ತಿಯಾಗಿದೆಯೇ ಎಂದು ತಹಶಿಲ್ದಾರ್ ನೇತೃತ್ವದಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಪರಿಶೀಲಿಸಿ ಜಾಗೃತಿ ಉಂಟು ಮಾಡಲಾಯಿತು. ಸೊಳ್ಳೆ ಕಚ್ಚದ ಹಾಗೆ ನೋಡಿಕೊಳ್ಳಬೇಕು. ಯಾವುದೇ ಜ್ವರಕ್ಕೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಡಾಕ್ಟರ್ ರವರ ಸಲಹೆ ಪಡೆಯಬೇಕು. ಸಾರ್ವಜನಿಕರು ತೆರೆದ ಪರಿಕರಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತದೆ‌. ಅದನ್ನು ನಿಯಂತ್ರಿಸಬೇಕು. ಸ್ವಚ್ಚತೆ ಕಾಪಾಡಬೇಕು ಎಂದು ಕಾಪು ತಾಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಕರೆ ನೀಡಿದರು.

ಲಯನ್ಸ್ ಕ್ಲಬ್ ಕೊಡುಗೆ ನೀಡಿದ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು.

ಸೀನಿಯರ್ ಹೆಲ್ತ್ ಆಫೀಸರ್ ಬಸವರಾಜ್, ಮೆಡಿಕಲ್ ಆಫೀಸರ್ ಶೈನಿ, ಪಂಚಾಯತಿ ಅದ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ಆಗಸ್ಟ್ 4 : ಕಾಪುವಿನಲ್ಲಿ ಹಾಲೆ ಮರದ ತೊಗಟೆ ಕಷಾಯ ವಿತರಣೆ

Posted On: 02-08-2024 06:59PM

ಕಾಪು : ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ‌ಆಗಸ್ಟ್ 4 ರಂದು ಆಟಿ ಅಮವಾಸ್ಯೆ ಪ್ರಯುಕ್ತ ಕಾಪು ತೃಪ್ತಿ‌ ಹೊಟೇಲ್ ಮುಂಭಾಗದಲ್ಲಿ ಬೆಳಿಗ್ಗೆ 6.30 ರಿಂದ 8.30 ರವರೆಗೆ ಉಚಿತವಾಗಿ ಹಾಲೆ ಮರದ ತೊಗಟೆ ಕಷಾಯ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯು ತಿಳಿಸಿದೆ.

ಪಡುಬಿದ್ರಿ : ಅದಾನಿ‌ ಫೌಂಡೇಶನ್ ವತಿಯಿಂದ ರೂ.60 ಲಕ್ಷ ಮೌಲ್ಯದ ಶಿಕ್ಷಣ ಪರಿಕರಗಳ ವಿತರಣೆ

Posted On: 02-08-2024 04:56PM

ಪಡುಬಿದ್ರಿ : ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಸ್ಥಾವರದ ಆಸುಪಾಸಿನ ಕನ್ನಡ ಮಾಧ್ಯಮದ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ ಎಸ್ ಆರ್ ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ರೂ. 60 ಲಕ್ಷ ಮೊತ್ತದ ಶಿಕ್ಷಣ ಪರಿಕರಗಳನ್ನು 76 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 6,800 ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ ಎಂದು ಅದಾನಿ ಫೌಂಡೇಷನ್ ಅಧ್ಯಕ್ಷರಾದ ಕಿಶೋರ್ ಆಳ್ವ ಹೇಳಿದರು. ಅವರು ಪಡುಬಿದ್ರಿ ಬಂಟರ ಸಂಘದಲ್ಲಿ ಅದಾನಿ ಸಂಸ್ಥೆಯ ವತಿಯಿಂದ ಸ್ಥಾವರದ ಆಸುಪಾಸಿನ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶೈಕ್ಷಣಿಕ ಪರಿಕರ ವಿತರಿಸಿ ಮಾತನಾಡಿದರು.

ಪ್ರತಿ ವಾರ್ಷಿಕ ಸಾಲಿನ ಅದಾನಿ ಸಿಎಸ್‌ಆರ್ ಅನುದಾನದಲ್ಲಿ ಶೇ. 20ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನಿಯೋಜಿಸುತ್ತಿದೆ. ಅದಾನಿ ಸಂಸ್ಥೆಯು ಕರಾವಳಿ ಪ್ರದೇಶದಲ್ಲಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ಜೊತೆಗೆ ಮಂಗಳೂರಿನ ವಿಮಾನ ನಿಲ್ದಾಣ, ಗ್ಯಾಸ್ ಪೈಪ್‌ಲೈನ್ ಯೋಜನೆ, ಸಿಮೆಂಟ್ ಕೈಗಾರಿಕಾ ಘಟಕದ ವಿಸ್ತರಣೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಕೈಗಾರಿಕಾ ಅಭಿವೃದ್ಧಿಯ ಜೊತೆಗೆ ಸ್ಥಳೀಯರಿಗೆ ಉದ್ಯೋಗವಕಾಶ ಹಾಗೂ ಅನೇಕ ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿಯವರು ಮಾತನಾಡಿ ಅದಾನಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಸುಮಾರು ಒಂದು ದಶಕದಿಂದ ಹಲವಾರು ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ನೆರೆ ಗ್ರಾಮಗಳಲ್ಲಿ ಹಮ್ಮಿಕೊಂಡು ಬರುತ್ತಿದ್ದು ಪಂಚಾಯತ್ ಹಾಗೂ ಗ್ರಾಮಸ್ಥರ ವಿಶ್ವಾಸವನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ಕಾಪು ತಾಲೂಕಿನ ಯುವಜನ ಕ್ರೀಡಾಧಿಕಾರಿಯಾದ ರಿತೇಶ್, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾರವರು ಮಾತನಾಡಿದರು.

ವೇದಿಕೆಯಲ್ಲಿ ಸ್ಥಾವರದ ಆಸುಪಾಸಿನ ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು, ಅದಾನಿ ಫೌಂಡೇಶನ್ ಸಂಸ್ಥೆಯ ಅನುದೀಪ್, ಧೀರಜ್, ಶುಭಮಂಗಳ ಉಪಸ್ಥಿತರಿದ್ದರು. ಅದಾನಿ ಸಮೂಹದ ಅಸೋಸಿಯೇಟ್ ಜನರಲ್ ಮ್ಯಾನೇಜರ್ ರವಿ ಆರ್. ಜೇರೆ ಸ್ವಾಗತಿಸಿದರು. ಶಿಕ್ಷಕ ಸುಧಾಕರ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪಡುಕುತ್ಯಾರು : ಆನೆಗುಂದಿ ಶ್ರೀಗಳವರ ಜನ್ಮ ವರ್ಧಂತ್ಯುತ್ಸವ ; ವಿವಿಧ ಧಾರ್ಮಿಕ ಕಾರ್ಯಕ್ರಮ

Posted On: 02-08-2024 09:14AM

ಪಡುಕುತ್ಯಾರು : ಬದುಕಿನಲ್ಲಿ ಸಂತಸ ಕಾಣಲು ಹುಟ್ಟು ಸಾವಿನ ನಡುವಿನ ನಮ್ಮ ಜೀವನದ ಅವಧಿಯಲ್ಲಿ ಭಗವಂತನ ಅನುಗ್ರಹದೊಂದಿಗೆ ಸನ್ನಡತೆ, ಸತ್ಕಾರ್ಯ,ಉತ್ತಮ ನುಡಿಯ ಮೂಲಕ ಬದುಕಿನಲ್ಲಿ ಸ್ವರ್ಗವನ್ನು ಕಾಣಲು ಸಾಧ್ಯ. ನಮ್ಮಿಂದ ಇನ್ನೊಬ್ಬರ ಬದುಕಿನಲ್ಲಿ ಸಂತಸ ಮೂಡಿದರೆ ಅದುವೇ ಬದುಕಿನ ಅತ್ಯಂತ ಸುಂದರ ಸಂತಸದ ಕ್ಷಣಗಳು ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಹೇಳಿದರು. ಅವರು ಪಡುಕುತ್ಯಾರಿನಲ್ಲಿ ಗುರುವಾರ ನಡೆದ ತಮ್ಮ 20ನೇ ಚಾತುರ್ಮಾಸ್ಯದ ಅಂಗವಾಗಿ ಜನ್ಮವರ್ಧಂತ್ಯುತ್ಸವ ಧರ್ಮ ಸಂಸತ್‌ನಲ್ಲಿ ಆಶೀರ್ವಚನ ನೀಡಿದರು. ಜ್ಞಾನದ ಹರಿವು ಹರಿದಷ್ಟು ಸಮಾಜದ ಜನರಲ್ಲಿ ಅರಿವಿನ ಜಾಗೃತಿ ಹೆಚ್ಚುತ್ತದೆ. ಶಾಸ್ತ್ರರಹಿತವಾದ ಶಿಲ್ಪವು ಕೇವಲ ಕೂಲಿ ಕೆಲಸವಾಗುತ್ತದೆ ಶಾಸ್ತ್ರಸಹಿತವಾದ ಅಧ್ಯಯನದ ಮೂಲಕ ಮಾತ್ರವೇ ಅದು ಶಿಲ್ಪವಾಗುತ್ತದೆ ಅದರ ನಿರ್ಮಾತೃ ಶಿಲ್ಪಿ ಎನಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪಡುಕುತ್ಯಾರಿನ ಮಹಾಸಂಸಂಸ್ಥಾನದಲ್ಲಿ ಶಾಸ್ತ್ರ ಸಹಿತವಾದ ಶಿಲ್ಪ ಕಲೆಯ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಪಂಚ ಶಿಲ್ಪದ, ವಾಸ್ತು ಶಿಲ್ಪವನ್ನು ಕಲಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ನುಡಿದರು.

ವಿಶೇಷ ಉಪನ್ಯಾಸ ನೀಡಿದ ಮಹಾಸಂಸ್ಥಾನ ಆಸ್ಥಾನ ವಿದ್ವಾಂಸ ಪಂಜ ಭಾಸ್ಕರ ಭಟ್ ಅವರು ದೇಶ, ದೇಶದ ಭವಿಷ್ಯ, ಜನತೆ ಮತ್ತು ಸಮಾಜದ ಹಿತಕ್ಕಾಗಿ ನಿರಂತರ ಕ್ರಿಯಾಶೀಲ ಚಟುವಟಿಕೆ ನಿರತರಾಗಿರುವ ಕಾಳಹಸ್ತೇಂದ್ರ ಶ್ರೀಗಳು ಸಮಾಜದ ಅಭ್ಯದಯಕ್ಕಾಗಿ ನಡೆಸುತ್ತಿರುವ ಸೇವಾ ಕಾರ್ಯಗಳು ಸರ್ವರಿಗೂ ಅನುಕರಣೀಯವಾಗುವಂತದ್ದಾಗಿದೆ. ಅಂತಹ ಯತಿಗಳನ್ನು ಗೌವಿಸಬೇಕಾಗಿರುವುದು ನಮ್ಮ ಕರ್ತವ್ಯ ಅವರ ವರ್ದಂತಿಯು ನಮ್ಮ ವರ್ದಂತಿಯಂತೆ ಆಚರಿಸಬೇಕು ವಿಶ್ವಕರ್ಮ ಸಮಾಜದ ಜನರು ಶಿಲ್ಪ ಮತ್ತು ಬ್ರಾಹ್ಮಣ್ಯ ಎರಡು ಅತ್ಯಂತ ಪ್ರಮುಖವಾದುವು. ಕಾಷ್ಠ ಶಿಲ್ಪ ಸಹಿತವಾಗಿ ತಮ್ಮ ಕುಲಕಸುಬುಗಳನ್ನು ಉಳಿಸಿ, ಬೆಳೆಸಿ ಕೊಂಡು ಬರುವುದರ ಜತೆಗೆ ಸಮಾಜಕ್ಕಾಗಿ, ಸಮಾಜದ ಹಿತಕ್ಕಾಗಿಯೂ ಯೋಚನೆ, ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಶ್ರೀಗಳ ಸಂಕಲ್ಪದ ಸಾಕಾರಕ್ಕೆ ಕೈ ಜೋಡಿಸಬೇಕು ಎಂದರು. ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಮಾತನಾಡಿ, ನದಿಗಳು ಹರಿದು ಸಮುದ್ರವನ್ನು ಸೇರುವಂತೆ ನಾವೆಲ್ಲರೂ ನಡೆಸುವ ಧಾರ್ಮಿಕ ಕ್ರೀಯಾ ಕರ್ಮಗಳು ನಾಂ ರೂಪವನ್ನು ಬಿಟ್ಟು ಗುರು ಅನುಗ್ರಹದಿಂದ ಭಗವಂತನಲ್ಲಿಯೇ ಸೇರುತ್ತದೆ. ಒಂದೇ ಉದ್ದೇಶದಿಂದ, ಒಂದೇ ಮನಸ್ಸಿನಿಂದ ಎಲ್ಲರೂ ಒಂದು ಕಡೆ ಸೇರಿಕೊಂಡು ನಡೆಸುವ ಸಂಸತ್ತು ಆನೆಗುಂದಿಶ್ರೀಗಳವರ ಸಾನಿಧ್ಯದಿಂದ ಧರ್ಮ ಸಂಸತ್ತಾಗಿ ಜಾಗೃತಿಯನ್ನು ಮೂಡಿಸುತ್ತಿದೆ. ಸನ್ಯಾಸ ಎನ್ನುವುದು ಶಿಷ್ಟಾಚಾರ ಪಾಲನೆಯ ಸಂಕೇತವಾಗಿದೆ. ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬಂದು, ಧರ್ಮ ರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸನ್ಯಾಸವನ್ನು ಸರ್ವರೂ ಗೌರವಿಸುತ್ತಾರೆ ಎಂದು ಹೇಳಿದರು. ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ದಿನೇಶ್ ಆಚಾರ್ಯ ಪಡುಬಿದ್ರಿ ಆನೆಗುಂದಿ, ಮುರಹರಿ ಆಚಾರ್ಯ ಉಡುಪಿ ಕಟಪಾಡಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಚಂದ್ರಯ್ಯ ಆಚಾರ್ಯ ಕಳಿ ಉಪ್ರಳ್ಳಿ, ಗಜಾನನ ಎನ್ ಆಚಾರ್ಯ ನೀರಕಂಠ ಭಟ್ಕಳ, ಕೆ. ಎಂ. ಗಂಗಾಧರ ಆಚಾರ್ಯ ಕೊಂಡೆವೂರು ಬಂಗ್ರಮಂಜೇಶ್ವರ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಮಧೂರು, ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್, ಜಗದೀಶ್ ಆಚಾರ್ಯ ಪಡುಪಣಂಬೂರು, ಶಂಕರ ಬಲವಂತರಾವ್ ಅಥಣಿ, ಪುರೋಹಿತ್ ಜಯಕರ ಆಚಾರ್ಯ ಮೂಡುಬಿದಿರೆ, ಜನಾರ್ಧನ ಆಚಾರ್ಯ ಅರಿಕ್ಕಾಡಿ, ಮೋಹನ್ ಕುಮಾರ್ ಬೆಳ್ಳೂರು, ಗಣೇಶ್ ಆಚಾರ್ಯ ಕೆಮ್ಮಣ್ಣು, ದಿನೇಶ್ ಆಚಾರ್ಯ ಕಿನ್ನಿಗೋಳಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ವಿದ್ವಾನ್ ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು ಉಪಸ್ಥಿತರಿದ್ದರು.

ಐ ಲೋಲಾಕ್ಷ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರ್ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ವಂದಿಸಿದರು. ಗೀತಾಚಂದ್ರ ಆಚಾರ್ಯ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಶ್ರೀಗಳ ಜನ್ಮವರ್ಧಂತಿ ಅಂಗವಾಗಿ ಶ್ರೀ ಗಣೇಶ ಅಥರ್ವಶಿರ್ಷ ಹೋಮ, ಪೂರ್ಣಮಾನ ನವಗ್ರಹ ಹೋಮ, ಶತರುದ್ರ ಯಾಗ, ಮಹಾಮೃತ್ಯುಂಜಯ ಹೋಮ, ಶ್ರೀ ಧನ್ವಂತರೀ ಹೋಮ, ಶ್ರೀ ಮಹಾ ಸರಸ್ವತೀ ಯಜ್ಞ ವೈದಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಶಿಷ್ಯವೃಂದದವರಿಂದ ಜಗದ್ಗುರುಗಳವರ ತುಲಾಭಾರ ಸೇವೆ ಗುರುಪಾದುಕಾ ಪೂಜೆ ನೆರವೇರಿತು

ಶಿರ್ವ : ಆಶಾಲತ ಮೂಲ್ಯರಿಗೆ ಬೇಕಿದೆ ಸಹೃದಯಿ ಬಂಧುಗಳ ನೆರವು

Posted On: 02-08-2024 08:55AM

ಕಾಪು : ತಾಲೂಕಿನ ಶಿರ್ವ ಸಮೀಪದ ಆಶಾಲತ ಮೂಲ್ಯ ಇವರಿಗೆ 6 ವರ್ಷದ ಹಿಂದೆ ಕ್ಯಾನ್ಸರ್ ಆಗಿದ್ದು, ಇದೀಗ ಚೇತರಿಸಿ ಮತ್ತೆ ಅಲ್ಸರ್ ಸಮಸ್ಯೆ ಇದ್ದು ಒಂದು ಹೆಣ್ಣು ಮಗಳ ವಿದ್ಯಾಭ್ಯಾಸದ ಚಿಂತೆಯಾದರೆ, ಇತ್ತ ಪತಿಯ ಆಸರೆಯನ್ನು ಕಳೆದುಕೊಂಡ ಇವರಿಗೆ ತಿಂಗಳ ಚಿಕಿತ್ಸೆಗಾಗಿ ಹಣವಿಲ್ಲದೆ ಸಂಕಷ್ಟದಲ್ಲಿದ್ದು ನೆರವಿನ ನಿರೀಕ್ಷೆಯಲ್ಲಿದ್ದಾರೆ.

Bank details : Ashalatha Canara bank Shirva branch. A/c numberr :O14522OOO94784 Ifsc code :CNRB0010145. Contact :96110 04077.