Updated News From Kaup

ಪಡುಬಿದ್ರಿ : ಕಾಂಗ್ರೆಸ್ ವತಿಯಿಂದ ಆಟಿದ ತಮ್ಮನ ; ಸಾಧಕರಿಗೆ ಸನ್ಮಾನ ; ನೃತ್ಯೋತ್ಸವ ವೈಭವ

Posted On: 11-08-2024 05:54PM

ಪಡುಬಿದ್ರಿ : ಕೃಷಿಯು ಮಹತ್ವದ ವೃತ್ತಿಯಾಗಿದ್ದು, ಕಾಂಗ್ರೆಸ್ ಸರಕಾರ ಕೃಷಿಗೆ ಒತ್ತು ನೀಡಿ ಕೃಷಿಕರಿಗೆ ಮಹತ್ವ ನೀಡಿದೆ. ಉಳುವವನೇ ಹೊಲೆದೊಡೆಯ ಕಾನೂನು ಕಾಂಗ್ರೆಸ್ ನ ಮಹತ್ವದ ನಡೆಯಾಗಿತ್ತು‌. ನನ್ನದೆಂಬುದು ಏನಿಲ್ಲ ಎಂದಾಗ ಜನರಿಗೆ ನೆರವಾದದ್ದು ಕಾಂಗ್ರೆಸ್. ಇಂದು ಸರಕಾರ ತೆರಿಗೆಯ ಮೂಲಕ ಬಡವರ ರಕ್ತ ಹೀರುತ್ತಿದೆ. ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿದಾಗ ಮನೆ ಬೆಳಗಲು ಸಾಧ್ಯ ಅದನ್ನು ಪ್ರಸ್ತುತ ರಾಜ್ಯ ಸರಕಾರ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಗ್ರಾಮೀಣ ಕಾಂಗ್ರೆಸ್ ಸಮಿತಿ, ಮಹಿಳಾ ಮತ್ತು ಯುವ ಕಾಂಗ್ರೆಸ್ ಪಡುಬಿದ್ರಿ ಇವರ ಆಶ್ರಯದಲ್ಲಿ ಪಡುಬಿದ್ರಿ ಸುಜಾತ ಆಡಿಟೋರಿಯಂ ಸಭಾಂಗಣದಲ್ಲಿ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ದಿ| ವೈ.ಹಿರಿಯಣ್ಣ ಪಡುಬಿದ್ರಿ ಸಭಾ ವೇದಿಕೆಯಲ್ಲಿ ಜರಗಿದ ಆಟಿದ ತಮ್ಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಪದ ಚಿಂತಕ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿ ಹಿರಿಯರ ನೆನಪು ನಮ್ಮಲ್ಲಿರಬೇಕು. ಬಡತನದಲ್ಲೂ ಆಟಿಯ ಕಾಲದಲ್ಲಿ ಧಣಿಗಳನ್ನು ತೃಪ್ತಿಗೊಳಿಸಿ ಕೂಡು ಕುಟುಂಬದ ಹಸಿವನ್ನು ನುಂಗಿ ಬದುಕಿದ ಸಾರ್ಥಕತೆಯ ಸಮಯವಿದು. ರಾಸಾಯನಿಕಯುಕ್ತ ಆಹಾರದಿಂದ ನಮ್ಮ ಜೀವನ ಮಟ್ಟ ಕುಸಿಯುತ್ತಿದೆ. ಆಟಿಯ ಖಾದ್ಯಗಳ ಸೇವನೆಯಿಂದ ನಮ್ಮ ರೋಗ ರುಜಿನ ನಿರ್ಮೂಲನೆ ಸಾಧ್ಯ ಎಂದರು.

ಸಾಧಕರಿಗೆ ಸನ್ಮಾನ : ಭಾರತೀಯ ಸೇನೆಯ ಗಡಿಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೊಯುದ್ದೀನ್ ಪಡುಬಿದ್ರಿ, ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪತ್ರಕರ್ತ ಹರೀಶ್ ಹೆಜಮಾಡಿ, ಚಲನಚಿತ್ರ, ರಂಗಭೂಮಿ ಕಲಾವಿದ ಶಶಿಧರ್ ಗುಜರನ್, ಸಾಮಾಜಿಕ ಕ್ಷೇತ್ರದಲ್ಲಿ ದಿನೇಶ್ ಕಂಚಿನಡ್ಕ, ಪೌರಕಾರ್ಮಿಕರಾದ ಪ್ರಸಾದ್ ಕಂಚಿನಡ್ಕ, ಶಶಿಕುಮಾರ್ ಬೆಳಪು ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ದಿ| ವೈ.ಹಿರಿಯಣ್ಣರವರ ಪುತ್ರರಾದ ವೈ ಸುಧೀರ್, ವೈ ಸುಕುಮಾರ್ ರನ್ನು ಗೌರವಿಸಲಾಯಿತು. ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ ಶೆಟ್ಟಿ ಮಾತನಾಡಿದರು.

ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಎಂ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ (ಉತ್ತರ) ಸಂತೋಷ್ ಕುಮಾರ್ ಪಕ್ಕಾಲು, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಎಂ ಪೂಜಾರಿ, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ ಶೆಟ್ಟಿ, ಕೆಎಂಎಫ್ ಮಂಗಳೂರು ನಿರ್ದೇಶಕ ದಿವಾಕರ ಶೆಟ್ಟಿ, ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ ಸುಕುಮಾರ್, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಪ್ರಧಾನ ಕಾರ್ಯದರ್ಶಿ ನವೀನ್ ಎನ್ ಶೆಟ್ಟಿ, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಶೀನ ಪೂಜಾರಿ, ಸಮಾಜ ಸೇವಕಿ ಆಶಾ ಸಂದೀಪ್, ಮೀನುಗಾರರ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವಿಭಾಗ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಇಂಟೆಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್, ದಲಿತ ಮುಖಂಡ ಶೇಖರ ಹೆಜಮಾಡಿ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ರೀನ್ ಅರ, ಪಡುಬಿದ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಚರಿತ ಲಕ್ಷ್ಮಣ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಎಸ್ ಆಚಾರ್ಯ, ಅಶೋಕ್ ಸಾಲ್ಯಾನ್, ಜ್ಯೋತಿ ಮೆನನ್, ನಿಯಾಝ್, ಸುಧಾಕರ್, ಕೀರ್ತಿ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜೇಶ್ ಶೇರಿಗಾರ್ ನಿರೂಪಿಸಿ, ವಂದಿಸಿದರು. ಪ್ರತಿಷ್ಠಿತ ಡ್ಯಾಝ್ಲ್ ಸ್ಟುಡಿಯೋ ನೃತ್ಯ ತಂಡದಿಂದ ನೃತ್ಯೋತ್ಸವ ವೈಭವ ಜೊತೆಗೆ ಆಟಿದ ತಮ್ಮನ ಸಾಮೂಹಿಕ ಭೋಜನ ನಡೆಯಿತು.

ಉಡುಪಿ : ಯಶಸ್ವಿ - ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆ

Posted On: 10-08-2024 05:42PM

ಉಡುಪಿ : ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಯಶಸ್ವಿ ಇವರು ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ.

ಇವರು ಉಡುಪಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಇಲ್ಲಿನ ಗುರು ವಿದ್ವಾನ್ ಕೆ. ಭವಾನಿಶಂಕರ್ ಇವರ ಶಿಷ್ಯೆಯಾಗಿದ್ದು, ಪುತ್ತೂರು ಸುಬ್ರಹ್ಮಣ್ಯ ನಗರದ ವಿಜಯ್ ಸನಿಲ್ ಹಾಗೂ ಸುಮ ಸನಿಲ್ ಇವರ ಸುಪುತ್ರಿ.

ಪ್ರಸ್ತುತ ಇವರು ಡಾ. ಜಿ ಶಂಕರ್ ಕಾಲೇಜು ಸ್ನಾತಕೋತ್ತರ ಹಾಗೂ ಸಂಶೋಧನ ಕೇಂದ್ರ, ಉಡುಪಿ ಇಲ್ಲಿ ಪ್ರಥಮ ವರ್ಷದ ಎಂಕಾಂ ವ್ಯಾಸಂಗ ಮಾಡುತ್ತಿದ್ದಾರೆ.

ಕಿಂಗ್ ಟೈಗರ್ಸ್ ಕಾಪು : 3ನೇ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 10-08-2024 05:04PM

ಕಾಪು : ಕಿಂಗ್ ಟೈಗರ್ಸ್ ಕಾಪು ಇವರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ 3ನೇ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಆಗಸ್ಟ್ 26 ಮತ್ತು 27 ರಂದು ಎರಡು ದಿನಗಳ ಕಾಲ ಹುಲಿ ವೇಷದ ಸೇವೆ ನಡೆಯಲಿದೆ. ಆಗಸ್ಟ್ 26 ರಂದು ಸೋಮವಾರ ಬೆಳಿಗ್ಗೆ 7 ಗಂಟೆಗೆ ಕಾಂಚನ್ ಮೂಲಸ್ಥಾನ, ಪೊಲಿಪು, ಕಾಪು ಇಲ್ಲಿ ಲೋಬನ ಸೇವೆಯು ಜರಗಲಿದೆ.

ಈ ಸಂದರ್ಭ ಕಿಂಗ್ ಟೈಗರ್ಸ್ ಕಾಪು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಹಿರಿಯಡ್ಕ : ಪ್ರಕೃತಿಯ ಸೊಬಗಿನ ನಡುವೆ ನಾಗಾರಾಧನೆ

Posted On: 09-08-2024 04:17PM

ಹಿರಿಯಡ್ಕ : ಪ್ರಕೃತಿ ನಡುವೆ ನಡುವೆ ನಡೆಯುತ್ತಿದ್ದ ನಾಗಾರಾಧನೆಯು ಆಧುನಿಕತೆಯ ಭರಾಟೆಯಲ್ಲಿ ಕಾಂಕ್ರೀಟೀಕರಣವಾಗುತ್ತಿರುವ ಸನ್ನಿವೇಶದಲ್ಲಿ ಕೆಲವು ನಾಗಬನಗಳು ಇನ್ನೂ ಹಿಂದಿನ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿದೆ.

ಹಿರಿಯಡಕ ಹಳೆ ಕೋಲ್ಯಾರು ನಾಗಬನ ಇಂದಿಗೂ ಪ್ರಕೃತಿಯ ನಡುವೆ ಭಕ್ತಾದಿಗಳು ನಾಗರ ಪಂಚಮಿಯನ್ನು ನೂರಾರು ಭಕ್ತರು ಭಕ್ತಿ ಶ್ರದ್ಧೆಯಿಂದ ನಾಗನಿಗೆ ತನು ಸಮರ್ಪಿಸಿದರು.

ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆಯಿಂದ ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

Posted On: 09-08-2024 04:07PM

ಉಡುಪಿ : ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂದೂ ಶ್ರದ್ಧಾ ಕೇಂದ್ರಗಳ ಧ್ವಂಸ, ಹಿಂದೂಗಳ ಮೇಲೆ ನಡೆಯುತ್ರಿರುವ ಹಿಂಸಾಚಾರ, ಕೊಲೆ ಹಾಗೂ ಮಹಿಳೆಯರ ಅತ್ಯಾಚಾರ ದೌರ್ಜನ್ಯಗಳ ವಿರುದ್ಧ ತಕ್ಷಣ ಮಧ್ಯ ಪ್ರವೇಶ ಮಾಡುವಂತೆ ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಉಡುಪಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ಆಗುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರ ಮಾತ್ರವಲ್ಲದೆ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಆದಷ್ಟು ಬೇಗ ಮಧ್ಯಪ್ರವೇಶಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾಗೆಯೇ ಪೌರತ್ವ ಕಾಯ್ದೆಯಲ್ಲಿ ಮಾಡಿದ ತಿದ್ದುಪಡಿಯಂತೆ ಅಲ್ಪ ಸಂಖ್ಯಾತ ಹಾಗೂ ಅಸಹಾಯಕ ಬಾಂಗ್ಲಾದೇಶದ ಹಿಂದೂಗಳನ್ನು ಆದಷ್ಟು ಶೀಘ್ರವಾಗಿ ಭಾರತಕ್ಕೆ ಕರೆತಂದು ಅವರಿಗೆ ಪುನರ್ವಸತಿಯನ್ನು ಕಲ್ಪಿಸಿ, ಈ ದೇಶದ ಪೌರತ್ವವನ್ನು ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು.

ಇದಕ್ಕೆ ಸಂಬಂಧಿಸಿದಂತೆ ಭಾರತ ದೇಶಕ್ಕೆ ನಿರಂತರ ಅಕ್ರಮವಾಗಿ ನುಸುಳುತ್ತಿರುವ ರೋಹಿಂಗ್ಯ ಮುಸ್ಲಿಮರು ಪ್ರಸಕ್ತ ಈಗಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಬಹಳ ಅಪಾಯಕಾರಿಯಾಗಬಹುದು. ವಿಶ್ವದಲ್ಲಿ ಭಾರತವು ಒಂದೇ ಹಿಂದೂ ರಾಷ್ಟ್ರವಾಗಿದ್ದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಮತಾಂಧ ಅನ್ಯಧರ್ಮೀಯರ ಅಟ್ಟಹಾಸಕ್ಕೆ ನಮ್ಮ ನಿರ್ದೋಷಿ ತಾಯಂದಿರು, ಅಕ್ಕ, ತಂಗಿಯರು ಹಿಂದೂ ಸಮಾಜ ಬಾಂಧವರು ಬಲಿಯಾಗದಂತೆ ತಡೆಯುವ ಜವಾಬ್ದಾರಿಯು ಬಹುಸಂಖ್ಯಾತ ಹಿಂದೂಗಳು ಮತದಾನ ಮಾಡಿ ಚುನಾಯಿಸಿದಂತಹ ನಮ್ಮ ಕೇಂದ್ರ ಸರಕಾರದ ಪ್ರಥಮ ಆದ್ಯತೆ ಆಗಿರಬೇಕು. ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಹಿಂದೂ ನಾಗರಿಕರಿಗೂ ಭಾರತ ದೇಶದ ಗೌರವಾನ್ವಿತ ಪ್ರಧಾನಮಂತ್ರಿಯವರ ಮೇಲೆ ಸಂಪೂರ್ಣ ವಿಶ್ವಾಸವಿದ್ದು ಕಾಲ ವಿಳಂಬ ಮಾಡದೆ ಬಾಂಗ್ಲಾದೇಶದಲಿ ಇನ್ನಷ್ಟು ಹಿಂದೂಗಳ ಸಾವು ನೋವುಗಳಿಗೆ, ನಮ್ಮ ಶ್ರದ್ಧೆಯ ಮಾತಾ ಭಗಿನಿಯರ ಅತ್ಯಾಚಾರಕ್ಕೆ ಕಾರಣವಾಗದೆ ಅಗತ್ಯವೆನಿಸಿದರೆ ಮಿಲಿಟರಿ ಕಾರ್ಯಾಚರಣೆಯ ಮೂಲಕವಾದರೂ ಅಸಹಾಯಕ ಹಿಂದೂಗಳನ್ನು ರಕ್ಷಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭ ಸಂಘಟನೆಯ ಪ್ರಮುಖರಾದ ಜಿತೇಶ್, ಕುಮಾರಸ್ವಾಮಿ, ಸುಧೀರ್ ಪೂಜಾರಿ, ಶ್ರೀಧರ್, ರವೀಂದ್ರ ಕಾಮತ್, ಮೋಹನ್ ಭಟ್, ಚಿತ್ತನ್ ಮೂಳೂರು, ರಾಜಗೋಪಾಲ್, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.

ನಾಗರಪಂಚಮಿ - ಪ್ರಕೃತಿಗೆ ಮಾನವ ಕೃತಜ್ಞತೆ ಹೇಳುವ ದಿನ

Posted On: 09-08-2024 09:01AM

ಇಂದು ನಾಗರ ಪಂಚಮಿ. ಪ್ರಕೃತಿಯನ್ನು ಪೂಜಿಸುವ ವಿಶಿಷ್ಟ ಹಬ್ಬವಾದ ನಾಗಾರಾಧನೆ ಈ ಭೂಮಂಡಲದಲ್ಲಿ ಇಂದು- ನಿನ್ನೆಯದಲ್ಲ. ವಿಶ್ವದ ಎಲ್ಲಾ ಭಾಗಗಳ ಧರ್ಮ- ಪುರಾಣ ಮತ್ತು ಜನಪದಗಳಲ್ಲಿ ನಾಗನ ಪ್ರಾಮುಖ್ಯ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ನಮ್ಮ ಪೂರ್ವಜರು ನಾಗನನ್ನು ದೇವತೆಗಳ ಸಾಲಿಗೆ ಸೇರಿಸಿ 'ನಾಗದೇವತೆ' ಎಂದರು. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ, ಕೇವಲ ಸಪ್ಪಳವನ್ನು ಗ್ರಹಸಿ ತನ್ನ ಬೇಟೆಯನ್ನು ಅದು ಕಂಡುಕೊಳ್ಳುತ್ತದೆ. ಅದು ತಾನಾಗಿಯೇ ಯಾರಿಗೂ ಕಚ್ಚುವುದಿಲ್ಲ, ಮೆಟ್ಟಿದಲ್ಲದೇ ಹಾವು ಕಚ್ಚದು ಎಂಬ ಮಾತು ಕೇಳಿದ್ದಿರಲ್ಲವೇ?

ಶ್ರಾವಣ ಮಾಸದಲ್ಲಿ ನಾಗಪೂಜೆ ಪುನರ್ಜನ್ಮದ ಸಂಕೇತ ಹಾವು ಎಂಬುದು ಹುಟ್ಟು , ಸಾವು - ಪುನರ್ಜನ್ಮದ ಸಂಕೇತ. ಆಗಾಗ ತನ್ನ ಪೊರೆಯನ್ನು ಕಳಚಿ ಹೊಸ ಜನ್ಮವನ್ನು ಪಡೆಯುತ್ತದೆ. ನಮ್ಮ ಹಿಂದೂ ಧರ್ಮವೂ ಇದನ್ನೇ ಪ್ರತಿಪಾದಿಸುತ್ತದೆ. ಶ್ರಾವಣಮಾಸ ಎಂದರೆ ಮಳೆ ಬೀಳುವ ಸಮಯ , ಈ ಸಮಯ ನಾಗನ ಬಿಲಗಳಲ್ಲಿ ನೀರುತುಂಬುತ್ತವೆ , ಆದ್ದರಿಂದ ನಾಗಗಳು ಬಿಲದಿಂದ ಹೊರಬರುತ್ತವೆ ,ಹೊಲಗದ್ದೆಗಳಲ್ಲಿ ಸುತ್ತಾಡುತ್ತವೆ. ಫಸಲು ಹಾಳುಮಾಡುವ ಜಂತುಗಳನ್ನು ತಿಂದು ಫಸಲು ಹಾಳಾಗದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಾಗಪೂಜೆಗೆ ಆದ್ಯತೆ ನೀಡುತ್ತಾ ಬಂದಿದ್ದೇವೆ. ದೋಷಗಳನ್ನು ಅತಿಶಯೋಕ್ತಿ ನಾಗಕುಲದವರು ಇಂದ್ರಾದಿ ದೇವತೆಗಳಂತೆ ನಾಗಕುಲದವರು ಕಶ್ಯಪ ಮುನಿಗಳಿಂದ ಕದ್ರೂ ಎಂಬ ನಾಗಮಾತೆಯಿಂದ ಜನಿಸಿದೆ. ಹೀಗಾಗಿ ಜ್ಞಾನಿಗಳು ದೇವತೆಗಳನ್ನು ಗೌರವಿಸಿದಂತೆ ನಾಗಗಳನ್ನು ಗೌರವಿಸುತ್ತಾರೆ. ಗೀತೆಯಲ್ಲಿ ಹೇಳಿದಂತೆ ನಮಗೆ ತಿಳಿಯದಿದ್ದರೂ ಈ ಪೂಜೆ ಭಗವಂತನ ಪೂಜೆಯೇ ಆಗುತ್ತದೆ. ತಿಳಿದು ಪೂಜಿಸಿದರಂತೂ ಅದು ಅತ್ಯಂತ ವಿಶೇಷ.

ಈ ಹಬ್ಬ ಪ್ರಕೃತಿಗೆ ಮಾನವ ಕೃತಜ್ಞತೆ ಹೇಳುವ ದಿನ :ಹಬ್ಬಗಳು ಆರಂಭವಾದಂತೆ ಸಂಬಂಧವನ್ನು ಬೆಳಸಲಿಕ್ಕೆ ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬೆಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ನಾಗಪಂಚಮಿ ಬಂತೂ ಎಂದರೆ ಹಬ್ಬಗಳು ಆರಂಭವಾದಂತೆ , ನಾಗನಕಟ್ಟೆಗೆ ಹೋಗಿ ನಾಗನಿಗೆ ಹಾಲು ಎಳನೀರು ಆಭಿಷೇಕ ಮಾಡಿ ಬರುವುದೆಂದರೆ ಎಲ್ಲಿಲ್ಲದ ಸಂಭ್ರಮ . ದೊಡ್ಡ ದೊಡ್ಡ ಮರಗಳ ನಡುವೆ ಬುಡದಲ್ಲಿ ನಾಗನ ಕಲ್ಲುಗಳೂ ,ಪಕ್ಕದಲ್ಲಿ ಕೆರೆ ಅಬ್ಬಬ್ಬಾ ಆ ಪರಿಸರವೇ ನಮ್ಮಲ್ಲಿ ಭಯ ಭಕ್ತಿ ಹುಟ್ಟಿಸುತ್ತಿತ್ತು! ಆದರೆ ಇಂದು ಅದಕ್ಕೆ ಗುಡಿಯನ್ನು ಕಟ್ಟಿಸಿ ಮೂಲ ಸ್ವರೂಪವೇ ಮಾಯವಾಗಿ ಸಿಮೆಂಟ್ ಗೋಡೆಗಳ ನಡುವೆ ಬಂಧಿಸಲ್ಪಟ್ಟಿವೆ.

ಮಾನವನ ಅಧಿಕ ಪ್ರಸಂಗದಿಂದ ನಾಗಬನದಲ್ಲಿರುವ ಮರಗಳನ್ನು ಕಡಿದು ಅಲ್ಲಿ ನಾಗ ಬನ ಕಾಂಕ್ರಿಟ್ ನಿಂದ ತಯಾರಿಸಿ ತೋರಿಕೆಯ ಪ್ರಸಂಗವಾಗುತ್ತಿದೆ. ನಾಗಗಳು ಈ ಕಾಂಕ್ರಿಟ್ ಬನಕ್ಕೆ ಬರಲಿಕ್ಕಿಲ್ಲ ಈ ರೀತಿಯಾಗಿ ಅದರ ಆವಾಸ ಸ್ಥಾನ ಇರುದಿಲ್ಲ ಹೀಗಾಗಿ ನಾವೆಲ್ಲರೂ ಮೂಲ ನಾಗಬನಗಳನ್ನು ರಕ್ಷಣಿ ಮಾಡಬೇಕಾಗಿದೆ. ಖ್ಯಾತ ಉರಗ ತಜ್ಞ ಗುರುರಾಜ ಸನಿಲ್ ಮಾತಿನಂತೆ ಹೇಳುದಾದರೆ ನಾಗಬನದಲ್ಲಿ ಈ ಹಿಂದೆ ಸುಮಾರು 30-40 ಪ್ರಭೇದದ ಗಿಡ ಮರಗಳಿದ್ದವು ಇದರಿಂದ ಪ್ರಕೃತಿಯ ರಕ್ಷಣೆ ನಡೆಯುತ್ತಿತ್ತು ಆದರೆ ಇಂದು ಅದರ ಚಿತ್ರಣ ಬದಲಾಗಿದೆ. ಮನುಷ್ಯನಿಂದ ಈ ಪ್ರಕೃತಿಗೆ ಯಾವುದೇ ಲಾಭ ಇರಲಾರದು ಆದರೆ ಪ್ರಕೃತಿಯ ನೆರವಿಲ್ಲದೆ ಖಂಡಿತ ಬದುಕು ಅಸಾಧ್ಯ.ಇಂತಹ ಶ್ರೇಷ್ಠ ಪ್ರಕೃತಿಗೆ ನಾಗ ಆರಾಧನೆ ಮೂಲಕ ಕೃತಜ್ಞತೆ ಸಲ್ಲಿಸುವ ಈ ಹಬ್ಬ ನಾಗ ಬನ ಗಳ ರಕ್ಷಣಿ ಮತ್ತು ಸ್ವಚ್ಚ ನಾಗ ಪಂಚಮಿಯತ್ತ ನಮ್ಮ ಚಿತ್ತವಿರಲಿ. ✍

ಉಡುಪಿ : ಕನ್ನಡ ಚಲನಚಿತ್ರ - ಉಡುಪಿ ನ್ಯೂಸ್ ಮುಹೂರ್ತ

Posted On: 08-08-2024 08:28PM

ಉಡುಪಿ : ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕನ್ನಡ ಚಲನಚಿತ್ರ ಉಡುಪಿ ನ್ಯೂಸ್ ನ ಮುಹೂರ್ತ ಜರಗಿತು.

ಈ ಸಂದರ್ಭ ಚಲನಚಿತ್ರದ ನಿರ್ದೇಶಕರಾದ ಯಧುಕೃಷ್ಣ, ನಿರ್ಮಾಪಕ ಪಾಪ್ ಸಿನಿಮಾಸ್ ಅಂಡ್ ಜಿ ರ್ ಕೆ ಪ್ರೊಡಕ್ಷನ್, ಲೈನ್ ಪ್ರೊಡ್ಯೂಸರ್ ವಾಧಿರಾಜ್ ಉಪ್ಪೂರು, ಸಂಗೀತ ಸಂದೇಶ್ ಬಾಬಣ್ಣ, ಡಿಒಪಿ ಮಹಾಬಲೇಶ್ವರ ಹೊಳ್ಳ, ಸಂಕಲನ ಸುಬ್ರಮಣ್ಯ ಹೊಳ್ಳ, ಪ್ರಸಾದನ ಪ್ರಭಾಕರ್ ಬೆದ್ರ, ಕಾಸ್ಟ್ಯೂಮ್ ಟಿಕೆನೋ ಡಿಸೈನ್ಸ್, ಆರ್ಟ್ ಡೈರೆಕ್ಟರ್ ದೇವಿ ಪ್ರಕಾಶ್, ಸಹ ನಿರ್ದೇಶಕ ಅನಿಶ್ ಪಿ ಸಿ, ಪ್ರೊಡಕ್ಷನ್ ಮ್ಯಾನೇಜರ್ ಮಹೇಶ್ ಸಹಾಯಕ ನಿರ್ದೇಶಕ ಶ್ರವಣ್ ರೈ, ಯೂನಿಟ್ ಜಿ ರ್ ಕೆ ಸ್ಟುಡಿಯೋ ಬ್ಯಾಂಗಲೋರ್, ಪಿ ರ್ ಓ ನಾಗೇಂದ್ರ, ಪಬ್ಲಿಸಿಟಿ ಡಿಸೈನರ್ ಅಂತೋನಿ ಸ್ಟೆಫೆನ್, ನಟರಾದ ಕರಣ್ ಪೂಜಾರಿ, ಸ್ವಾತಿ, ಪ್ರಕಾಶ್ ಶೆಟ್ಟಿ, ನಿಧಿ, ಶ್ರೀ ನಾಯ್ಕ್ , ಪ್ರತ್ಯುಷಾ ಪ್ರವೀಣ್ ರಾಜ್, ಜಗಪತಿ ಬಾಬು, ರವಾನ್ ಕಟ್ಟಿ ಮಿತ್ರ, ವಿನಯ ಪ್ರಸಾದ್, ಮಲ್ಲಿಕಾ ಶರಾವತಿ, ವಿ ರ್ ಸತೀಶ್ ಆಚಾರ್ಯ ವರಂಗ, ವಸಂತ ಕುಮಾರ ಉಪಸ್ಥಿತರಿದ್ದರು.

ಆಗಸ್ಟ್ 11 : ಪಡುಬಿದ್ರಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಟಿದ ತಮ್ಮನ

Posted On: 08-08-2024 08:01PM

ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ಪಡುಬಿದ್ರಿ, ಮಹಿಳಾ ಕಾಂಗ್ರೆಸ್ ಪಡುಬಿದ್ರಿ ಹಾಗೂ ಯುವ ಕಾಂಗ್ರೆಸ್ ಪಡುಬಿದ್ರಿ ಇದರ ಆಶ್ರಯದಲ್ಲಿ ಆಗಸ್ಟ್ 11, ಆದಿತ್ಯವಾರ ಪೂರ್ವಾಹ್ನ ಗಂಟೆ 9.30 ಕ್ಕೆ ಸರಿಯಾಗಿ ಸುಜಾತಾ ಆಡಿಟೋರಿಯಂ ಸಭಾಂಗಣದ ಕಾಂಗ್ರೆಸ್ ಹಿರಿಯ ಮುತ್ಸದ್ದಿ ದಿ.ವೈ ಹಿರಿಯಣ್ಣ ಸಭಾ ವೇದಿಕೆಯಲ್ಲಿ ಆಟಿದ ತಮ್ಮನ ತುಳುನಾಡಿನ ಆಚಾರ ವಿಚಾರಗಳು ನಶಿಸಿ ಹೋಗದಂತೆ ಯುವ ಪೀಳಿಗೆಗೆ ಪ್ರೇರಣೆ ನೀಡುವ ಅಮೋಘ ಕಾರ್ಯಕ್ರಮದ ಜೊತೆಗೆ ವಿಶೇಷ ಆಕರ್ಷಣೆಯಾಗಿ ನೃತ್ಯೋತ್ಸವ ವೈಭವ ಜರುಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಗ್ರಾಮೀಣ ಕಾಂಗ್ರೆಸ್ ಸಮಿತಿ ಪಡುಬಿದ್ರಿ ಅಧ್ಯಕ್ಷರಾದ ಕರುಣಾಕರ್ ಎಮ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಣಿಯೂರು : ಶೈಕ್ಷಣಿಕ ಪರಿಕರಗಳ ವಿತರಣೆ

Posted On: 07-08-2024 09:24PM

ಕಾಪು : ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಣಿಯೂರು ಇಲ್ಲಿ 2024 -25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅದಾನಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾದ ಶೈಕ್ಷಣಿಕ ಪರಿಕರಗಳನ್ನು ಬೆಳಪು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಾ| ದೇವಿ ಪ್ರಸಾದ್ ಶೆಟ್ಟಿ ವಿತರಿಸಿದರು.

ಅದಾನಿ ಸಂಸ್ಥೆಯಿಂದ ಮಕ್ಕಳಿಗಾಗಿ ಕೊಡೆ, ನೋಟ್ಸ್ ಪುಸ್ತಕ, ಬ್ಯಾಗು ಹಾಗೂ ಮಹೇಶ್ ಬೆಳಪು ಇವರು ವಿದ್ಯಾರ್ಥಿಗಳಿಗೆ ಉಚಿತ ಐಡಿ ಕಾರ್ಡ್ ನೀಡಿದರು.

ಈ ಸಂದರ್ಭ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಭೋಜ ದೇವಾಡಿಗ, ಉಪಾಧ್ಯಕ್ಷರಾದ ಸುಜಯ, ಮಹೇಶ್ ಬೆಳಪು, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಸಾವಿತ್ರಿ, ಶಾಲಾ ಶಿಕ್ಷಕ ವೃಂದ, ಮಕ್ಕಳು, ಪೋಷಕರು ಉಪಸ್ಥಿತರಿದ್ದರು.

ಕಾಪು : ನಿಸರ್ಗ ಫ್ರೆಂಡ್ಸ್ ವತಿಯಿಂದ ಶಂಕರಪುರ ಇನ್ನಂಜೆ ಮಾರ್ಕೆಟ್ ರಸ್ತೆಯಲ್ಲಿ ಶ್ರಮದಾನ

Posted On: 07-08-2024 09:16PM

ಕಾಪು : ನಿಸರ್ಗ ಫ್ರೆಂಡ್ಸ್ (ರಿ.) ಇದರ ವತಿಯಿಂದ ಶಂಕರಪುರ ಇನ್ನಂಜೆ ಮಾರ್ಕೆಟ್ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಅನಾನುಕೂಲ ವಾಗುತ್ತಿದ ಗಿಡ, ಪೊದೆಗಳನ್ನು ಕಡಿದು ಸ್ಥಳೀಯ ಗ್ರಾಮಸ್ಥರ ಸಹಕಾರ ದೊಂದಿಗೆ ಸ್ವಚ್ಚ ಗೊಳಿಸಲಾಯಿತು.

ಗಿಡ, ಪೊದೆಗಳು ರಸ್ತೆಯನ್ನು ಆವರಿಸಿಕೊಂಡಿದ್ದು, ಅಪಘಾತಗಳು ಸಂಭವಿಸುತ್ತಿದವು. ಇಲ್ಲಿನ ಸ್ವಚ್ಛತೆಯ ಮೂಲಕ ನಿಸರ್ಗ ಫ್ರೆಂಡ್ಸ್ ನ ಸದಸ್ಯರು ಆದರ್ಶ ಮೆರೆದಿದ್ದಾರೆ.