Updated News From Kaup

ಬೆಳಪು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳ ಉಡುಪಿ ವಲಯ ಮಟ್ಟದ ಕ್ರೀಡಾಕೂಟದ ಟ್ರೋಫಿ ಹಾಗೂ ಪದಕಗಳ ಕೊಡುಗೆ

Thumbnail
Posted On: 24 Oct 2024, 11:29 AM

ಕಾಪು : ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಉಡುಪಿ, ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆ ಮಲ್ಲಾರು ಮತ್ತು ಸರಕಾರಿ ಸಂಯುಕ್ತ ಪ್ರೌಢಶಾಲೆ ಮೂಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅ.23 ಮತ್ತು 24 ರಂದು ಮಹಾತ್ಮ ಗಾಂಧಿ ಕ್ರೀಡಾಂಗಣ ಅಜ್ಜರಕಾಡು ಉಡುಪಿಯಲ್ಲಿ ನಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಉಡುಪಿ ವಲಯ ಮಟ್ಟದ ಕ್ರೀಡಾಕೂಟದ ಟ್ರೋಫಿ ಹಾಗೂ ಪದಕಗಳನ್ನು ಬೆಳಪು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿವಂಗತ ಮೊಹಮ್ಮದ್ ಝಹಿರ್ ಅಬ್ದುಲ್ ಸತ್ತಾರ್ ಅವರ ಸ್ಮರಣಾರ್ಥ ವಹಿಸಲಾಗಿದೆ. ಇದರ ವೆಚ್ಚದ ಚೆಕ್ ನ್ನು ಉರ್ದು ಪ್ರೌಢಶಾಲಾ ಮಲ್ಲಾರು ಇದರ ಮುಖ್ಯ ಶಿಕ್ಷಕಿ ವೀಣಾ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶಾನವಾಝ್ ಫಜಲುದ್ದೀನ್, ಉಪಾಧ್ಯಕ್ಷ ಶಾಹಿದ್ ನವಾಝ್, ಹಿರಿಯ ಸದಸ್ಯರಾದ ಶೇಕ್ ಖಾಲಿದ್ ಅಹ್ಮದ್, ಶಾನವಾಝ್ ನೂರುಲ್ಲಾ ಮತ್ತು ಸಯೀದ್ ಅಹ್ಮದ್ ಅಂಜಲಬೆಟ್ಟು ಉಪಸ್ಥಿತರಿದ್ದರು.

ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ಕೋರಿ ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಉನ್ನತ ಶಿಕ್ಷಣ ಸಚಿವರಿಗೆ ಪತ್ರ

Thumbnail
Posted On: 23 Oct 2024, 10:52 PM

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ತುಳು ಸ್ನಾತಕೋತ್ತರ ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದು, ಸರ್ಕಾರ ಕೂಡಲೇ ಶುಲ್ಕ ಕಡಿತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ವಿಭಾಗದ 2024-25ನೇ ಸಾಲಿನ ಪ್ರವೇಶ ಶುಲ್ಕವನ್ನು 22,410 ರೂ. ಏರಿಸುವ ಮೂಲಕ ತುಳು ಭಾಷೆ ಅಧ್ಯಯನ ಮಾಡಬಯಸುವವರಿಗೆ ಆರ್ಥಿಕ ಹೊರೆಯುಂಟು ಮಾಡಲಾಗಿದೆ. ಆರಂಭದಲ್ಲಿ ತುಳು ಎಂಎ ಕೋರ್ಸ್‌ಗೆ 15 ಸಾವಿರ ರೂ. ಪ್ರವೇಶ ಶುಲ್ಕ ಇತ್ತು. ಆದರೆ ಇದೀಗ ಮೂರು ವರ್ಷದ ಬಳಿಕ 22,410 ರೂ.ಗೆ ಶುಲ್ಕ ಏರಿಕೆ ಮಾಡಿರುವುದರಿಂದ ತುಳು ಎಂಎ ಅಧ್ಯಯನಕ್ಕೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ತುಳು ಭಾಷೆಗೆ ಅಧಿಕೃತ ಭಾಷೆ ಮಾನ್ಯತೆ ಪಡೆಯುವುದಕ್ಕೆ ಪ್ರಯತ್ನಗಳು ನಡೆಯುತ್ತಿರಬೇಕಾದರೆ, ರಾಜ್ಯ ಸರ್ಕಾರವು ತುಳು ಭಾಷೆ ಉತ್ತೇಜನಕ್ಕೆ ಸಹಕಾರಿಯಾಗಿರುವ ಎಂಎ ಅಧ್ಯಯನ ಕೋರ್ಸ್‌ನ ಪ್ರವೇಶ ಶುಲ್ಕ ಹೆಚ್ಚಿಸಿರುವುದು ಸರಿಯಲ್ಲ. ಸ್ಥಳೀಯ ಭಾಷೆಗೆ ನೆರವು ನೀಡುವ ನಿಟ್ಟಿನಲ್ಲಿ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಬೇಕೆಂಬ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ 2020-21ನೇ ಸಾಲಿನಿಂದ 4 ಸಾವಿರ ರೂ. ಕಡಿತಗೊಳಿಸಲಾಗಿತ್ತು. ಆದರೆ, 3 ವರ್ಷದ ಬಳಿಕ ವಿವಿಯು ಪ್ರವೇಶ ಶುಲ್ಕ ಹೆಚ್ಚಿಸುವ ಮೂಲಕ ತುಳು ಭಾಷೆ ಅಧ್ಯಯನಾಸಕ್ತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಹೀಗಾಗಿ, ಕೂಡಲೇ ಶುಲ್ಕ ರಿಯಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಮನವಿ ಮಾಡಿದ್ದಾರೆ. ತುಳು ಎಂಎ ವಿಭಾಗಕ್ಕೆ ಕನಿಷ್ಠ 15 ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಮಾತ್ರ ವಿವಿಯು ತುಳು ಸ್ನಾತಕೋತ್ತರ ವಿಭಾಗವನ್ನು ಮುಂದುವರಿಸುವುದಕ್ಕೆ ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಶುಲ್ಕವನ್ನು ಏಕಾಏಕಿ ಹೆಚ್ಚಳ ಮಾಡಿದರೆ ತುಳು ಎಂಎ ಅಧ್ಯಯನಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿಯುವ ಆತಂಕವಿದೆ. ಹೀಗಿರುವಾಗ, ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿಗಳು ಯಶಸ್ವಿಯಾಗಿ ಮುಂದುವರಿಯಬೇಕಾದರೆ, ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕವನ್ನು ಈ ಮೊದಲಿನಂತೆ ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಸಚಿವ ಡಾ.ಎಂ.ಸಿ ಸುಧಾಕರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ : 2025ರ ಏಪ್ರಿಲ್ 3 ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್‌ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ

Thumbnail
Posted On: 23 Oct 2024, 08:42 PM

ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ದೇವಳದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಬುಧವಾರ ಸಂಜೆ ನಡೆದ ನಡೆದ ವಿಶೇಷ ಸಭೆಯಲ್ಲಿ 2025 ಏಪ್ರಿಲ್ 3ರಂದು ಬಾಲಾಲಯ ಪ್ರತಿಷ್ಟೆ, 2026 ಮಾರ್ಚ್‌ ತಿಂಗಳಲ್ಲಿ ಬ್ರಹ್ಮಕಲಶಾದಿ ಕಾರ್ಯ ಎಂದು ಗ್ರಾಮಸ್ಥರ ಸಮ್ಮುಖ ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ, ದೇವಳ ಸಂಕೋಚಕ್ಕೆ ತಂತ್ರಿಗಳು ಪ್ರಶಸ್ತ ದಿನ ನೀಡಿದ್ದಾರೆ. 20 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ದೇಗುಲದ ಸಮಗ್ರ ಜೀರ್ಣೋದ್ಧಾರವಾಗಲಿದೆ. ದೇವಸ್ಥಾನದ ಗರ್ಭಗುಡಿಯ ಪುಣ್ಯಕಾರ್ಯವು ಗ್ರಾಮದ ಸಮಸ್ತ ಭಕ್ತಾದಿಗಳ ಆರ್ಥಿಕ ಸಹಕಾರದಿಂದ ನಡೆಯಲಿದೆ ಎಂದು ಹೇಳಿದರು. ದೇವಳದ ತಂತ್ರಿವರ್ಯರಾದ ವೇದಮೂರ್ತಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಮಾತನಾಡಿ, ಮುಂದಿನ ಏಪ್ರಿಲ್ 3ರಂದು ಬಾಲಾಲಯ ಪ್ರತಿಷ್ಟೆ, ಸಂಕೋಚಕ್ಕೆ ದಿನ ನಿಗದಿ ಪಡಿಸಲಾಗಿದೆ. 2026 ಮೀನ ಸಂಕ್ರಮಣದೊಳಗಾಗಿ ನಡೆಯಬೇಕಾದ ಬ್ರಹ್ಮಕಲಶಾದಿಗಳ ಕಾರ್ಯ ನಡೆಸಬೇಕು ಎಂದು ಸಮಗ್ರವಾಗಿ ವಿವರಣೆ ನೀಡಿದರು. ಗೌರವಾಧ್ಯಕ್ಷ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಶಕ್ತಿ ಮುಖ್ಯವಲ್ಲ ಭಕ್ತಿ ಮುಖ್ಯ. ಪಡುಬಿದ್ರಿಯ ದೇವಳದ ಜೀಣೋದ್ಧಾರಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು. ರಾಜೇಶ್ ಶೇರಿಗಾರ್, ವಿಶುಕುಮಾರ್ ಶೆಟ್ಟಿಬಾಲ್, ಕೇಶವ ಅಮೀನ್, ರವೀಂದ್ರನಾಥ ಜಿ. ಹೆಗ್ಡೆ, ವಿಷ್ಣುಮೂರ್ತಿ ಆಚಾರ್ಯ ಸಭೆಯಲ್ಲಿ ಮಾತನಾಡಿದರು. ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ದೇವಳದ ಅರ್ಚಕರಾದ ಪದ್ಮನಾಭ ಭಟ್, ವೈ. ಗುರುರಾಜ ಭಟ್, ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ ಉಪಸ್ಥಿತರಿದ್ದರು. ಉಪಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಪ್ರಾಸ್ತಾವಿಸಿದರು. ಮುರಳೀನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಯ ಶೆಟ್ಟಿ ಪದ್ರ ವಂದಿಸಿದರು.

ರಾಜ್ಯಮಟ್ಟದ ‌ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತರಾದ ಎಮ್. ನೀಲಾನಂದ ನಾಯ್ಕ್

Thumbnail
Posted On: 22 Oct 2024, 11:13 PM

ಕಾಪು : ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರಿ.) ಕರ್ನಾಟಕ (ರುಪ್ಸ) ವತಿಯಿಂದ ಸೋಮವಾರ ಬೆಂಗಳೂರಿನಲ್ಲಿ ನಡೆದ ರುಪ್ಸ ಸಂಭ್ರಮ ಮತ್ತು ರುಪ್ಸ ಮಿತ್ರ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಮ್. ನೀಲಾನಂದ ನಾಯ್ಕ್ ರನ್ನು ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಎಲ್ ಭೋಜೆಗೌಡ, ರುಪ್ಸ ಕರ್ನಾಟಕ ಬೆಂಗಳೂರು ಇದರ ಗೌರವ ಅಧ್ಯಕ್ಷರಾದ ಟಿ.ವಿ ಮೋಹನ್, ರಾಜ್ಯಾಧ್ಯಕ್ಷರಾದ ಡಾ. ಹಾಲನೂರು ಲೇಪಾಕ್ಷಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಧರ ಎಲ್ ದಿಂಡೂರ, ರಾಜ್ಯ ಕಾರ್ಯಾಧ್ಯಕ್ಷ ಕೊಟ್ರೇಶ್ ಬಿ ಎಮ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ನವದುರ್ಗಾ ಮಂಟಪ ಶಂಕುಸ್ಥಾಪನೆ

Thumbnail
Posted On: 22 Oct 2024, 06:42 PM

ಕಾಪು : ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನವದುರ್ಗಾ ಮಂಟಪದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಗಳ ಕಚೇರಿ, 9 ಸೇವಾ ಕೌಂಟರ್, ಮೀಟಿಂಗ್ ಹಾಲ್ ಒಳಗೊಂಡಿರುವ ಸುಸಜ್ಜಿತ ಕಟ್ಟಡದ ಕಾಮಗಾರಿಗೆ ಕ್ಷೇತ್ರದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿಯವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಶಂಕುಸ್ಥಾಪನೆ ಮಾಡಲಾಯಿತು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ ಇವರು ಗ್ರಾಮ ದೇವರಾದ ಒಡೆಯ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಾನದಲ್ಲಿ ಪ್ರಾರ್ಥಿಸಿ ಶಂಕುಸ್ಥಾಪನೆಯ ಕಲ್ಲುಗಳನ್ನು ಪುಷ್ಕರಣಿಯಲ್ಲಿ ಶುದ್ಧೀಕರಿಸಿ, ಅಮ್ಮನ ಸನ್ನಿಧಾನಕ್ಕೆ ತಂದು ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿ ಬಳಿಕ ಕಾಪು ಕ್ಷೇತ್ರದ ಶಾಸಕ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಮತ್ತು ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್, ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಜಾತ್ಯಾತೀತ ಜನತಾದಳ ಉಡುಪಿ ಜಿಲ್ಲಾಧ್ಯಕ್ಷ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ಸಾಯಿರಾಧ ಗ್ರೂಪ್ ಉಡುಪಿ ಆಡಳಿತ ನಿರ್ದೇಶಕ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮನೋಹರ್ ಎಸ್. ಶೆಟ್ಟಿ , ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕಿ ಬೀನಾ ವಿ. ಶೆಟ್ಟಿ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನವದುರ್ಗೆಯರ ಹೆಸರಿನ ಚೀಟಿಯನ್ನು ತೆಗೆಯುವ ಮೂಲಕ ಕೊರಂಗ್ರಪಾಡಿ ದೊಡ್ಡಮನೆ ನೇತ್ರಾವತಿ ಶೆಡ್ತಿಯವರ ಸ್ಮರಣಾರ್ಥ ಕಾಪು ದೇವಿ ಪ್ರಸಾದ್ ಕನ್ಸ್ಟ್ರಕ್ಷನ್ ಆಡಳಿತ ನಿರ್ದೇಶಕರಾದ ಬೀನಾ ವಾಸುದೇವ ಶೆಟ್ಟಿಯವರು ಕಟ್ಟಡ ನಿರ್ಮಿಸಿ ಕೊಡುವುದಾಗಿ ಗುತ್ತಿಗೆದಾರ ಪರಮೇಶ್ ಆಚಾರ್ಯ ಅವರಿಗೆ ಪ್ರಸಾದ ನೀಡಿ ಅಡ್ವಾನ್ಸ್ ನೀಡುವ ಮೂಲಕ ಕಟ್ಟಡ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಅನಿಲ್ ಬಳ್ಳಾಲ್ ಕಾಪು ಬೀಡು, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ನವದುರ್ಗಾ ಲೇಖನ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ದಾನಿಗಳಾದ ನಾರಾಯಣ ಶೆಟ್ಟಿ ಮೂಳೂರು, ಉಡುಪಿ ನಗರಸಭಾ ಸಮಿತಿಯ ಪ್ರಧಾನ ಸಂಚಾಲಕ ದಿವಾಕರ ಶೆಟ್ಟಿ ಕೊಡವೂರು, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಕೆ ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ಕಾಪು ಕ್ಷೇತ್ರದ ಗ್ರಾಮ ಸಮಿತಿಯ ಪ್ರಧಾನ ಸಂಚಾಲಕ ಅರುಣ್ ಶೆಟ್ಟಿ ಪಾದೂರು, ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ, ಗೌರವ ಸಲಹೆಗಾರ ವಿಕ್ರಂ ಕಾಪು, ನಿರ್ಮಲ್ ಕುಮಾರ್ ಹೆಗ್ಡೆ, ವಾರ್ಡ್ ಸಮಿತಿಯ ಅನಿಲ್ ಕುಮಾರ್ ಕಾಪು, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರುಗಳಾದ ಜಗದೀಶ್ ಬಂಗೇರ, ಚಂದ್ರಶೇಖರ ಅಮೀನ್, ರವೀಂದ್ರ ಎಂ, ಬಾಬು ಮಲ್ಲಾರ್, ರೇಣುಕಾ ದೇವಾಡಿಗ, ಶೈಲಜಾ ಪುರುಷೋತ್ತಮ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕಿ ಗೀತಾಂಜಲಿ ಎಂ ಸುವರ್ಣ, ಶಿಲ್ಪಾ ಜಿ.ಸುವರ್ಣ, ಪ್ರಚಾರ ಸಮಿತಿಯ ಮಹಿಳಾ ಮುಖ್ಯ ಸಂಚಾಲಕಿ ಸಾವಿತ್ರಿ ಗಣೇಶ್, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಮಧುಕರ್ ಎಸ್, ಆರ್ಥಿಕ ಸಮಿತಿಯ ಸಂಚಾಲಕ ಸುನಿಲ್ ಎಸ್. ಪೂಜಾರಿ, ಪ್ರಚಾರ ಸಮಿತಿಯ ಸಂಚಾಲಕ ಜಯರಾಮ್ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಮುಖ್ಯ ಸಂಚಾಲಕರು, ಸಂಚಾಲಕರು ಉಪಸ್ಥಿತರಿದ್ದರು.

ಅ. 23 : ಪಡುಬಿದ್ರಿ ದೇಗುಲ ಜೀರ್ಣೋದ್ಧಾರ ಕುರಿತು ಗ್ರಾಮ ಸಮಿತಿಯ ವಿಶೇಷ ಸಭೆ

Thumbnail
Posted On: 22 Oct 2024, 07:13 AM

ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಸ್ತಾವಿತ ಕಾಮಗಾರಿ ಮತ್ತು ಪೂರ್ವಭಾವಿ ಧಾರ್ಮಿಕ ವಿಧಿ, ಸಂಕೋಚ ಹಾಗೂ ವಿಶೇಷವಾಗಿ ಧನ ಸಂಗ್ರಹಣೆ ಕುರಿತು ಚರ್ಚಿಸಲು ಅ.23ರಂದು ಸಂಜೆ 5 ಗಂಟೆಗೆ ಗ್ರಾಮ ಸಮಿತಿಯ ವಿಶೇಷ ಸಭೆ ದೇವಸ್ಥಾನದಲ್ಲಿ ನಡೆಯಲಿದೆ. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ದೇವಸ್ಥಾನದ ತಂತ್ರಿ ವೇ.ಮೂ.ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಉಪಸ್ಥಿತರಿರುವರು ಎಂದು ದೇವಸ್ಥಾನದ ಅನು ವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ತಿಳಿಸಿದ್ದಾರೆ.

ಉಡುಪಿ : ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ತರಬೇತಿಗೆ ಮಹತ್ವವಿದೆ - ಡಾ. ಗಾಯತ್ರಿ ಎನ್

Thumbnail
Posted On: 22 Oct 2024, 06:58 AM

ಉಡುಪಿ : ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ ತರಬೇತಿ ಪ್ರಧಾನ ಪಾತ್ರ ವಹಿಸುತ್ತದೆ. ಪರಿಣಾಮಕಾರಿ ತರಬೇತಿಯು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬಹು ಮುಖ್ಯವಾದುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ರೆಡ್ ಕ್ರಾಸ್ ಘಟಕ ಮತ್ತು ಉಡುಪಿ ಜಿಲ್ಲಾ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ರೆಡ್‌ಕ್ರಾಸ್ ನಾಯಕರಿಗೆ ನಡೆದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡುತ್ತಿದ್ದರು. ರೆಡ್‌ಕ್ರಾಸ್ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯರಾದ ವಿ.ಜಿ. ಶೆಟ್ಟಿಯವರು ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣವನ್ನು ಪದವಿ ಶಿಕ್ಷಣದಿಂದಲೇ ರೂಢಿಸಿಕೊಳ್ಳುವಂತೆ ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರೆಡ್ ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಯುವ ರೆಡ್ ಕ್ರಾಸ್ ಅನುಷ್ಠಾನದಲ್ಲಿ ವಿದ್ಯಾರ್ಥಿ ನಾಯಕರ ಪಾತ್ರವನ್ನು ವಿವರಿಸಿದರು. ರೆಡ್ ಕ್ರಾಸ್ ಸ್ವಯಂಸೇವಕಿಯರು ರೆಡ್ ಕ್ರಾಸ್ ಪ್ರಾರ್ಥನೆ ನಡೆಸಿದರು. ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ ಪೈ ಮೆಮೊರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಸಂಯೋಜಕಿ ಡಾ. ದಿವ್ಯಾ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿ, ರಾಘವೇಂದ್ರ ಪ್ರಭು ಕರ್ವಾಲ್ ಕಾರ್ಯಕ್ರಮ ನಿರೂಪಿಸಿದರು.

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆಗೆ ಚಾಲನೆ

Thumbnail
Posted On: 20 Oct 2024, 04:17 PM

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ನೇತೃತ್ವದಲ್ಲಿ ನವದುರ್ಗಾ ಲೇಖನ ಯಜ್ಞ ಪೂರ್ವಭಾವಿಯಾಗಿ ನವದಿನಗಳ ಕಾಲ ಹಮ್ಮಿಕೊಂಡಿರುವ 108 ತಂಡಗಳ ಭಜನಾ ಸಂಕೀರ್ತನೆಗೆ ರವಿವಾರ ಚಾಲನೆ ನೀಡಲಾಯಿತು. ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಪ್ರಸ್ತಾವನೆಗೈದು ಮಾತನಾಡಿ, ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೂ ಈಗಿನಿಂದಲೇ ಸಿದ್ಧತೆಗಳು ಪ್ರಾರಂಭಗೊಂಡಿವೆ. ಅದಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನ ಯಜ್ಞವನ್ನು ಹಮ್ಮಿಕೊಂಡಿದ್ದು ಪ್ರಪಂಚದಾದ್ಯಂತ ಇರುವ ಭಕ್ತರನ್ನು ನವದುರ್ಗಾ ಲೇಖನ ಬರೆಯುವ ಮಹಾಸಂಕಲ್ಪದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು. ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ಕಾಪು ಮಾರಿಯಮ್ಮನ ಸನ್ನಿಧಿಯ ಜೀರ್ಣೋದ್ಧಾರ ನಮ್ಮ ಜೀವನದಲ್ಲಿ ದೊರಕಿರುವ ಸುವರ್ಣಾವಕಾಶವಾಗಿದೆ. ನವದುರ್ಗಾ ಲೇಖನ ಯಜ್ಞದ ಮೂಲಕ ಎಲ್ಲಾ ಭಕ್ತರಿಗೂ ಅಮ್ಮನ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಮುಂಬಯಿ ಸಹಿತ ವಿವಿಧೆಡೆ ಸಭೆ ನಡೆಸಿ ಜನರನ್ನು ಜಾಗೃತಿಗೊಳಿಸಲಾಗುತ್ತಿದ್ದು, ಎಲ್ಲೆಡೆ ಪೂರಕ ಸ್ಪಂಧನೆ ದೊರಕುತ್ತಿದೆ ಎಂದರು. ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ನವದುರ್ಗಾ ಲೇಖನಯಜ್ಞದ ಸಿದ್ಧತೆ ಮತ್ತು ಭಜನಾ ಸಂಕೀರ್ತನೆ ಕುರಿತಾಗಿ ಮಾಹಿತಿ ನೀಡಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷರಾದ ಮನೋಹರ ಶೆಟ್ಟಿ, ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಕಾರ್ಯಾಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪದಾಧಿಕಾರಿಗಳಾದ ಕೃಷ್ಣ ಪ್ರಸಾದ್ ಅಡ್ಯಂತಾಯ, ಅಶೋಕ್ ಕುಮಾರ್ ಶೆಟ್ಟಿ, ಕೆ. ವಿಶ್ವನಾಥ್, ಹರಿಯಪ್ಪ ಸಾಲ್ಯಾನ್, ಸಂದೀಪ್ ಕುಮಾರ್ ಮಂಜ, ಪ್ರಮುಖರಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ಮೋಹನ್ ಬಂಗೇರ, ಶ್ರೀಧರ ಕಾಂಚನ್, ಗೀತಾಂಜಲಿ ಸುವರ್ಣ, ಸಾವಿತ್ರಿ ಗಣೇಶ್, ಶ್ರೀಕರ ಶೆಟ್ಟಿ ಕಲ್ಯ , ಬೀನಾ ವಿ. ಶೆಟ್ಟಿ, ಅನುರಾಧ ಶೆಟ್ಟಿ, ಪ್ರತಿಮಾ ಶೆಟ್ಟಿ, ಹರಿಣಾಕ್ಷಿ ದೇವಾಡಿಗ, ಸರಿತಾ ಶಿವಾನಂದ್, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಸಂತೋಷ್ ಶೆಟ್ಟಿ ಮೂಡುಶೆಡ್ಡೆ, ರಮೇಶ್ ಕಲ್ಮಾಡಿ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಸುವರ್ಧನ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.

ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಸನ್ಮಾನ

Thumbnail
Posted On: 20 Oct 2024, 09:32 AM

ಕಾಪು : ಸಮಾಜ ಸೇವೆಗಾಗಿ ಇತ್ತೀಚೆಗೆ ಗೌರವ ಡಾಕ್ಟರೆಟ್ ಪದವಿ ಪಡೆದ ಕಾಪುವಿನ ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಹಜ್ರತ್ ಸಾದಾತ್ ವೃದ್ದಾಶ್ರಮ ರವರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ವೃದ್ದಾಶ್ರಮದ ಸ್ಥಾಪಕ ಅಧ್ಯಕ್ಷರಾದ ಮೊಹಮ್ಮದ್ ಶಾಫಿ ಮದಾರಿಯವರ ನೇತೃತ್ವದಲ್ಲಿ ಆಶ್ರಮದ ಖಾಸಗಿ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಡಾ.ಫಾರೂಕ್ ಮೊದಲು 2 ಬಾರಿ ಈ ವೃದ್ದಾಶ್ರಮಕ್ಕೆ ಭೇಟಿ ನೀಡಿದ್ದೆ ಈ ರೀತಿಯ ಸೇವೆಯ ಜೊತೆಗೆ ತಾವು ಮಾಡುತ್ತಿರುವ ಸಮಾಜ ಸೇವೆ ದೇವರು ಮೆಚ್ಚುವಂತದ್ದು ತಮ್ಮ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೃದ್ದಾಶ್ರಮ ಅಧ್ಯಕ್ಷರಾದ ನಾಸಿರ್ ಕೊಂಬಗುಡ್ಡೆ, ಮುಸ್ತಾಕ್ ಬೆಳಪು, ಆಶ್ರಮದ ಕಾರ್ಯದರ್ಶಿ ಅಶಿಕ್, ಜಲೀಲ್ ರಝಕ್ (ಕೊಪ್ಪ )ಚಂದ್ರನಗರ ಮತ್ತಿತರರು ಉಪಸ್ಥಿತರಿದ್ದರು.

ಕಾಪು ಹೊಸಮಾರಿಗುಡಿ : ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವದಿನಗಳ ಪರ್ಯಂತ ಭಜನಾ ಸಂಕೀರ್ತನೆ

Thumbnail
Posted On: 19 Oct 2024, 10:43 AM

ಕಾಪು : ಇಲ್ಲಿನ ಮಾರಿಯಮ್ಮನ ಸನ್ನಿದಾನದಲ್ಲಿ ಪ್ರತಿಷ್ಠಾ ಬ್ರಹ್ಮಕಳಶೋತ್ಸವಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನವನ್ನು ಬರೆಯುವ ಮಹಾ ಸಂಕಲ್ಪವನ್ನು ಲೋಕಕಲ್ಯಾಣಾರ್ಥವಾಗಿ ಮತ್ತು ಸಾನಿಧ್ಯ ವೃದ್ಧಿಗಾಗಿ ಆಯೋಜಿಸಲಾಗಿದ್ದು ಇದರ ಪ್ರಯುಕ್ತ ಅಕ್ಟೋಬರ್ 20 ರಿಂದ ಮೊದಲ್ಗೊಂಡು 28 ರ ವರೆಗೆ ನವದಿನಗಳ ಪರ್ಯಂತ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡ 108 ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಅ. 26, ಶನಿವಾರ ಸಾಯಂಕಾಲ 6 ಗಂಟೆಯಿಂದ ಆಹ್ವಾನಿತ ತಂಡಗಳ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಅಕ್ಟೋಬರ್ 29ರ ಮಂಗಳವಾರದಂದು ವಾಗೀಶ್ವರಿ ಪೂಜೆಯ ಮೂಲಕ ಪೂಜ್ಯ ಪೇಜಾವರ ಶ್ರೀಗಳು ನವದುರ್ಗಾ ಲೇಖನವನ್ನು ಬರೆದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ಸಭಾಕಾರ್ಯಕ್ರಮವನ್ನು ನಡೆಸಿ ನವದುರ್ಗಾ ಲೇಖನದ ಪುಸ್ತಕವನ್ನು ಭಕ್ತಾದಿಗಳಿಗೆ ನೀಡಲಾಗುವುದು ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.