Updated News From Kaup
ಪಡುಬಿದ್ರಿ : ಬಂಟರ ಸಂಘದಲ್ಲಿ ಆಟಿ ಕೂಟ ಕಾರ್ಯಕ್ರಮ

Posted On: 28-07-2024 04:30PM
ಪಡುಬಿದ್ರಿ : ತುಳುವರ ನಾಲ್ಕನೇ ತಿಂಗಳು ಆಟಿ. ಈ ತಿಂಗಳ ವಿವಿಧ ತಿನಿಸುಗಳು ನಮ್ಮ ದೇಹಕ್ಕೆ ಅವಶ್ಯಕವಾಗಿದೆ. ತುಳುವರ ನಂಬಿಕೆ, ಸಂಪ್ರದಾಯಗಳು ವಿಶೇಷವಾಗಿದೆ. ಅಂದು ಆಟಿ ಸಂಭ್ರಮದ ದಿನಗಳಾಗಿರಲಿಲ್ಲ. ಪ್ರತಿ ಆಚರಣೆ, ಸಂಪ್ರದಾಯಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ತಿಳಿಸುವ ಪ್ರಯತ್ನ ನಾವು ಮಾಡಬೇಕಿದೆ ಎಂದು ಉಪನ್ಯಾಸಕಿ, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷರಾದ ಡಾ. ಸ್ಫೂರ್ತಿ ಪಿ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ ಆಯೋಜಿಸಿದ ಆಟಿದ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ನಳಿನಿ ರವೀಂದ್ರನಾಥ ಹೆಗ್ಡೆ, ಶೀಲಾ ಕೆ ಶೆಟ್ಟಿ ತುಳುನಾಡಿನ ಕ್ರೀಡೆ ಚೆನ್ನೆಮನೆ ಆಟದ ಪ್ರಾತ್ಯಕ್ಷಿಕೆ ನೀಡಿದರು. ಸಮಾಜ ಸೇವಕ, ಪ್ರಗತಿಪರ ಕೃಷಿಕ ಸಂತೋಷ್ ಶೆಟ್ಟಿ ಬರ್ಪಾಣಿ ಇವರನ್ನು ಗೌರವಿಸಲಾಯಿತು. ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗಿಡಮೂಲಿಕೆಯ ಸಸಿಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಪಡುಬಿದ್ರಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ವೈ. ಶಶಿಧರ್ ಕೆ ಶೆಟ್ಟಿ, ಪಡುಬಿದ್ರಿ ಬಂಟರ ಸಂಘ ಸಿರಿಮುಡಿ ದತ್ತಿನಿಧಿ ಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಪಡುಬಿದ್ರಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ವಹಿಸಿದ್ದರು.
ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಎಸ್ ಶೆಟ್ಟಿ ಸ್ವಾಗತಿಸಿದರು. ಅಕ್ಷತಾ ಸುರೇಂದ್ರ ಶೆಟ್ಟಿ ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ವಾಣಿ ರವಿ ಶೆಟ್ಟಿ ವಂದಿಸಿದರು.
ಎರ್ಮಾಳು : ಕಂಡೊಡೊಂಜಿ ದಿನ ಕಾರ್ಯಕ್ರಮ

Posted On: 28-07-2024 04:25PM
ಎರ್ಮಾಳು : ತುಳುನಾಡಿನ ಜನರು ಆಟಿ ತಿಂಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಸಂತಸದ ವಿಷಯ. ಇದು ತುಳುವರ ಸಂಸ್ಕೃತಿಯ ಬಗೆಗಿನ ಕಾಳಜಿ ತೋರಿಸುತ್ತದೆ ಎಂದು ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗ ಅವರು ಹೇಳಿದರು. ಅವರು ಬಿಲ್ಲವರ ಯೂನಿಯನ್ ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳು ಬಡಾ, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ ಮತ್ತು ಬೈದಶ್ರೀ ಮಹಿಳಾ ಮಂಡಳಿ ಎರ್ಮಾಳು ಬಡಾ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ರವಿವಾರ ಜರಗಿದ ಕಂಡೊಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕ ನಿತ್ಯಾನಂದ ಶೆಟ್ಟಿ ಎರ್ಮಾಳು ಬಡಾ ಮಾತನಾಡಿ, ಯಾವುದೇ ಕಾರ್ಯಕ್ರಮಗಳನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಸಂಘಟನೆಗಳ ಕರ್ತವ್ಯ. ಇಂತಹ ಕಾರ್ಯಕ್ರಮಗಳ ಮೂಲಕ ಕೃಷಿಯ ಮಹತ್ವವನ್ನೂ ಯುವ ಜನಾಂಗಕ್ಕೆ ಮನವರಿಕೆ ಮಾಡಬೇಕಾಗಿದೆ ಎಂದರು.
ಬಿಲ್ಲವರ ಯೂನಿಯನ್ ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಸುಖೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಬೈದರ್ಕಳ ದರ್ಶನ ಪಾತ್ರಿ ರವಿ ಪೂಜಾರಿ ಕುರ್ಕಾಲು, ಎರ್ಮಾಳು ಶ್ರೀ ನಂದಿಕೇಶ್ವರ ದೇವಸ್ಥಾನದ ಅರ್ಚಕ ಬಾಲಕೃಷ್ಣ ಭಟ್, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆಯ ಅಧ್ಯಕ್ಷ ಸತೀಶ್ ಪೂಜಾರಿ, ಎರ್ಮಾಳು ಬಡಾ ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಸಬಿತ ಸೋಮನಾಥ, ಆಡಳಿತ ಸಮಿತಿ ಕಾರ್ಯದರ್ಶಿ ರಮೇಶ್ ಅಂಚನ್, ಹಿರಿಯರಾದ ಶಂಕರ ಪೂಜಾರಿ, ಉದ್ಯಮಿ ಕರುಣಾಕರ ಪೂಜಾರಿ, ಪತ್ರಕರ್ತ ಬಾಲಕೃಷ್ಣ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.
ಮನೋಹರ್ ಉಚ್ಚಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪಡುಬಿದ್ರಿ : ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ

Posted On: 27-07-2024 07:28PM
ಪಡುಬಿದ್ರಿ : ಇಲ್ಲಿನ ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಸಚಿವರಾದ ಮಂಕಾಳ ವೈದ್ಯ ಶನಿವಾರ ಭೇಟಿ ನೀಡಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಕರಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿತವಾಗಿದೆ. ಕೇಂದ್ರಕ್ಕೂ ರೂ.478 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡಲ್ಕೊರೆತಕ್ಕೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 5 ಕೋಟಿಯಂತೆ ಒಟ್ಟು 15 ಕೋಟಿ ತಕ್ಷಣದ ಪರಿಹಾರ ಬಿಡುಗಡೆಯಾಗಿದೆ. ಇದರಲ್ಲಿ ಪಡುಬಿದ್ರಿಗೆ 1ಕೋಟಿ ರೂ. ನೀಡಲಾಗುವುದು. ಪ್ರಸ್ತುತ ಮೀನುಗಾರಿಕಾ ರಸ್ತೆ ಉಳಿಸಬೇಕಾಗಿದೆ. ಅದಕ್ಕೆ ತಕ್ಷಣ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದರು.
ಈ ಸಂದರ್ಭ ಸ್ಥಳೀಯರು ಕಡಲ್ಕೊರೆತ ಸಮಸ್ಯೆಗೆ ತಕ್ಷಣ ಪರಿಹಾರ ನೀಡಿ, ಪ್ರತಿ ಬಾರಿಯು ಭರವಸೆ ಮಾತ್ರ ಸಿಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನಿಮ್ಮ ಸಮಸ್ಯೆ ನನ್ನ ಸಮಸ್ಯೆ ಖಂಡಿತವಾಗಿ ಬಗೆಹರಿಸಲಾಗುವುದು ಎಂದರು. ನಡಿಪಟ್ಣದ ವಿಷ್ಣು ಮಂದಿರ ಸಮೀಪದಲ್ಲಿರುವ ಅಂತರಾಷ್ಟ್ರೀಯ ಮನ್ನಣೆಯ ಬ್ಲೂ ಫ್ಲ್ಯಾಗ್ ಬೀಚ್ ನ ರಸ್ತೆ ಸಮದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದೆ. ಈಗಾಗಲೇ ಈ ಭಾಗದ ಮೀನುಗಾರಿಕಾ ಶೆಡ್, ವಿಶ್ರಾಂತಿ ಗೃಹ, ಸುಮಾರು 35 ತೆಂಗಿನ ಮರಗಳು ಸಮುದ್ರ ಪಾಲಾಗಿದೆ.
ಈ ಸಂದರ್ಭ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.
ಜುಲೈ 27 : ಕಾಪುವಿನಲ್ಲಿ ಬೃಹತ್ ಪಂಜಿನ ಮೆರವಣಿಗೆ

Posted On: 27-07-2024 08:13AM
ಕಾಪು : ಬಿಜೆಪಿ ಯುವಮೋರ್ಚ ಕಾಪು ಮಂಡಲದ ವತಿಯಿಂದ ಇಪ್ಪತ್ತೈದನೇ ವರ್ಷದ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಜುಲೈ 27ರಂದು ಸಂಜೆ 6.30ಕ್ಕೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಹೊರಟು ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಕಾಪು ವಾಜಪೇಯಿ ಕಟ್ಟೆಯ ತನಕ ನಡೆಯಲಿದೆ.
ಬಳಿಕ ವಾಜಪೇಯಿ ಕಟ್ಟೆಯ ಸಮೀಪ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರೀಯ ವಿಶ್ವಸ್ಥ ಮಂಡಳಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಕುಂದಾಪುರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಕಾಪು ಯುವಮೋರ್ಚಾದ ಪ್ರಕಟನೆ ತಿಳಿಸಿದೆ.
ಜುಲೈ 28 : ಪಡುಬಿದ್ರಿಯಲ್ಲಿ ಆಟಿಡೊಂಜಿ ಕೆಸರ್ದ ಕಂಡದ ಗೊಬ್ಬುಲು

Posted On: 27-07-2024 06:48AM
ಪಡುಬಿದ್ರಿ : ಇಲ್ಲಿನ ಗ್ರಾಮೀಣ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸಮಿತಿ ಮತ್ತು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜುಲೃೆ 28 ರಂದು ಸಾರ್ವಜನಿಕರಿಗಾಗಿ ಆಟಿಡೊಂಜಿ ಕೆಸರ್ದ ಕಂಡದ ಗೊಬ್ಬುಲು ಕಾರ್ಯಕ್ರಮವು ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದ ಬಳಿಯ ಗದ್ದೆಯಲ್ಲಿ ನಡೆಯಲಿದೆ.
ವಿವಿಧ ವಯೋಮಿತಿ ವಿಭಾಗದಲ್ಲಿ ಓಟ, ಉಪ್ಪು ಮೂಟೆ ಓಟ, ಗೋಣಿ ಚೀಲ ಓಟ, ಮೂರು ಕಾಲು ಓಟ, ಮ್ಯೂಸಿಕಲ್ ಚಯರ್ ಹಾಗೂ ದಂಪತಿಗಳಿಗೆ ಹಾಳೆ ಎಲೆ ಓಟ, ಉಪ್ಪು ಮೂಟೆ ಓಟ ಹಾಗೂ ಪುರುಷ ಮತ್ತು ಮಹಿಳಾ ತಂಡಗಳಿಗೆ ಹಗ್ಗ- ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ನಗದು ಹಾಗು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
ವಿವಿಧ ವಿಭಾಗದಲ್ಲಿ ಸಾಧನೆಗೃೆದ ಅಂಕಿತ್ ಪೂಜಾರಿ, ಭಾಸ್ಕರ್ ಬಂಗೇರ, ಚಿನ್ಮಯಿ ಪೃೆ, ರಜನಿ ದೇವಾಡಿಗ, ಸಂಜೀವಿ ಪೂಜಾರ್ತಿ ಮತ್ತು ಸುನಿತಾರವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ನವೀನಚಂದ್ರ ಸುವರ್ಣ , ನವೀನಚಂದ್ರ ಶೆಟ್ಟಿ, ಗುಲಾಂ ಮೊಹಮ್ಮದ್, ಪಿ.ಕೆ ಸದಾನಂದ, ಜಿತೇಂದ್ರ ಪುರ್ಟಾಡೋ , ದೀಪಕ್ ಎರ್ಮಾಳ್, ವಿಶ್ವಾಸ್ ಅಮೀನ್ ಮತ್ತಿತರರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ವೃೆ ಸುಧೀರ್ ಕುಮಾರ್, ರಾಲ್ಫಿ ಡಿ ಕೋಸ್ತಾ, ಶೇಖರ್ ಹೆಜ್ಮಾಡಿ, ದೀಪಕ್ ಕೋಟ್ಯಾನ್ ಇನ್ನಾ ಮತ್ತಿತರರು ಭಾಗವಹಿಸಲಿರುವರು ಎಂದು ಕಾರ್ಯಕ್ರಮ ನಿರ್ದೇಶಕರಾದ ಗಣೇಶ್ ಕೋಟ್ಯಾನ್, ರಾಜೇಶ್ ಶೇರಿಗಾರ್, ಕರುಣಾಕರ್ ಪೂಜಾರಿ, ಸುಚರಿತಾ ಎಲ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಭವಿಷ್ಯದ ಭಾರತಕ್ಕೆ ಭದ್ರ ಅಡಿಪಾಯ ಹಾಕಿದೆ ಈ ಬಾರಿಯ ಬಜೆಟ್ : ಶ್ರೀನಿಧಿ ಹೆಗ್ಡೆ

Posted On: 26-07-2024 09:13PM
ಕಾಪು : ರಾಷ್ಟ್ರದ ಮದ್ಯಮ ವರ್ಗ, ಬಡವರು ಗ್ರಾಮೀಣ ಪ್ರದೇಶದ ಜನರ ರೈತರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮುಲಕ ಸಮಾಜದ ಪ್ರತೀ ಕ್ಷೇತ್ರದ ಜನರಿಗೆ ಶಕ್ತಿ ನೀಡುವ ಬಜೆಟ್ ಇದಾಗಿದೆ. ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ, ಮೂಲ ಸೌಕರ್ಯ ಹೀಗೆ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಭವಿಷ್ಯದ ಭಾರತಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಈ ಮೂಲಕ ಮೋದಿ ಸರ್ಕಾರ ಭಾರತದ ಆರ್ಥಿಕ ವೇಗಕ್ಕೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ.
ಮಹಿಳಾ ಸಬಲೀಕರಣಕ್ಕೆ 3 ಲಕ್ಷ ಕೋಟಿ ಮೀಸಲಿಡುವ ಮೂಲಕ ಹೆಣ್ಣು ಮಕ್ಕಳ ಯೋಜನೆಗೆ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವಲ್ಲಿ ಸರ್ಕಾರದ ಈ ನಿರ್ಧಾರ ಮಹತ್ವದ ಪಾತ್ರ ವಹಿಸಿದೆ. ಸ್ತ್ರೀಯರು ಖರೀದಿಸುವ ಆಸ್ತಿ ಮೇಲೆ ಸುಂಕ ಇಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕೇಂದ್ರೀಕರಿಸಿದೆ.
ರೈಲ್ವೆಗೆ ದಾಖಲೆಯ 2.25 ಲಕ್ಷ ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ರೈಲ್ವೆ ಇಲಾಖೆಯ ಕ್ರಾಂತಿಕಾರಿ ಬದಲಾವಣೆ ಯೋಜನೆಗೆ ಮತ್ತಷ್ಟೂ ವೇಗ ದೊರಕಲಿದೆ. ರಾಜ್ಯದ ರೈಲ್ವೇ ಯೋಜನೆಗಳಿಗೆ 7,500ಕೋಟಿ ಅನುದಾನವನ್ನ ಒದಗಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಸಂಶೋಧನೆ, ತಂತ್ರಜ್ಞಾನ, ಖಾಸಗಿ ಸಹಭಾಗಿತ್ವದ ಮೂಲಕ ಆಧುನಿಕ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ 1.52 ಲಕ್ಷ ಕೋಟಿ ಘೋಷಣೆ ಮಾಡಿದೆ.
ತೆರಿಗೆ ಸ್ಲ್ಯಾಬ್ ಗಳ ಬದಲಾವಣೆ ಅಗತ್ಯ ಔಷಧಿಗಳ ಬೆಲೆ ಇಳಿಕೆ, ಯುವಕರಿಗೆ ಕೌಶಲ್ಯ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸುವ ಮೂಲಕ ಮುಂದಿನ 5 ವರ್ಷ ಅವಧಿಗೆ ಭಾರತಕ್ಕೆ ದಿಕ್ಸೂಚಿ ನೀಡಬಲ್ಲ ಹಾಗೂ 2047 ಕ್ಕೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಲು ಅಡಿಪಾಯ ಹಾಕಬಲ್ಲ ಮುಂಗಡ ಪತ್ರ ಇದಾಗಿದೆ ಎಂದು ಶ್ರೀನಿಧಿ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಡಲ್ಕೊರೆತ : ಪಡುಬಿದ್ರಿಯ ನಡಿಪಟ್ಣದಲ್ಲಿ ಮೀನುಗಾರಿಕಾ ರಸ್ತೆಗೂ ಆಪತ್ತು

Posted On: 26-07-2024 09:09PM
ಪಡುಬಿದ್ರಿ : ಇಲ್ಲಿಯ ನಡಿಪಟ್ಣ ಪ್ರದೇಶದಲ್ಲಿಯ ಕಡಲ ಕೊರೆತದಿಂದ ಮೀನುಗಾರಿಕಾ ಶೆಡ್, ಮೀನುಗಾರರ ವಿಶ್ರಾಂತಿ ಗೃಹ ಸಮುದ್ರ ಪಾಲಾದ ಬಳಿಕ ಇದೀಗ ಮೀನುಗಾರಿಕಾ ರಸ್ತೆಗೂ ಆಪತ್ತು ಬಂದೊದಗಿದೆ.

ಕಡಲಿನ ರಕ್ಕಸ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ರಸ್ತೆಯು ಹಾನಿಯಾಗುವುದರಲ್ಲಿದೆ. ಇದೇ ರಸ್ತೆಯ ಮೂಲಕ ಪ್ರತಿನಿತ್ಯ ಸ್ಥಳೀಯರಲ್ಲದೆ ಅಂತರಾಷ್ಟ್ರೀಯ ಮನ್ನಣೆಯ ಬ್ಲೂ ಫ್ಲ್ಯಾಗ್ ಬೀಚ್ ಗೂ ಇದೇ ರಸ್ತೆ ಅವಲಂಬಿತವಾಗಿದೆ.
ಸ್ಥಳಕ್ಕೆ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಭೇಟಿ ನೀಡಿದ್ದಾರೆ. ಜಿಲ್ಲಾಡಳಿತದ ಅಸಡ್ಡೆಗೆ ಸ್ಥಳೀಯರು ಆಕ್ರೋಶಿತರಾಗಿದ್ದು, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ಕಟಪಾಡಿ : ರೋಟರಿ ಕ್ಲಬ್ ಶಂಕರಪುರ - ಆಟಿಡೊಂಜಿ ದಿನ ; ಪ್ಲಾಸ್ಟಿಕ್ ದುಷ್ಪರಿಣಾಮ ಕರಪತ್ರ ಬಿಡುಗಡೆ

Posted On: 26-07-2024 10:54AM
ಕಟಪಾಡಿ : ರೋಟರಿ ಕ್ಲಬ್ ಶಂಕರಪುರ ವತಿಯಿಂದ ಶಂಕರಪುರದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರೋಟರಿ 3182 ರ ಟೀಚರ್ಸ್ ಸಪೋರ್ಟ್ ಜಿಲ್ಲಾ ಚಯರ್ ಮ್ಯಾನ್ ಆದ ಬಾಲಕೃಷ್ಣ ಶೆಟ್ಟಿ ಕಾರ್ಕಳ ಇವರು ಭಾಗವಹಿಸಿ ಮಾತನಾಡಿ, ಪ್ಲಾಸ್ಟಿಕ್ ದುಷ್ಪರಿಣಾಮದ ಕರಪತ್ರ ಬಿಡುಗಡೆಗೊಳಿಸಿದರು. ಅತಿಥಿಯಾಗಿ ವಲಯ 5 ರ ಸಹಾಯಕ ಗವರ್ನರ್ ಅನಿಲ್ ಡೆಸಾ, ಕ್ಲಬ್ ಕಮುನಿಟಿ ನಿರ್ದೇಶಕ ಸಂದೀಪ್ ಬಂಗೇರ ಮತ್ತು ಕಾರ್ಯದರ್ಶಿ ಅನಿಲ್ದಾ ನೋರೋನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಶಂಕರಪುರ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ ವಹಿಸಿದ್ದರು.
ಈ ಸಂದರ್ಭ ರೋಟರಿ ಕ್ಲಬ್ ಶಂಕರಪುರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಗಿಲ್ ವಿಜಯ ದಿನ - ಭಾರತೀಯರು ಎಂದು ಮರೆಯದ ಈ ದಿನಕ್ಕೆ ಇಂದು 25 ವಷ೯

Posted On: 26-07-2024 10:40AM
"ಕಾರ್ಗಿಲ್ ವಿಜಯ್ ದಿವಸ್" ಪ್ರತಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತೀಯರಿಗೆ ಇದು ಎಂದು ಮರೆಯದ ದಿನವಾಗಿದೆ. ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೋಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ.
ಯುದ್ಧದ ಗತಿ : 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು. ಈ ಯುದ್ಧ ನಡೆಯಲು ಮುಖ್ಯ ಕಾರಣ ಪಾಕಿಸ್ತಾನದ ಮೋಸದಾಟ. ಕಾರ್ಗಿಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಇದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. 1999 ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು.
ಆಪರೇಷನ್ ವಿಜಯ ಕಾರ್ಯಚರಣೆ : ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಚರಣೆ ಆರಂಭದಲ್ಲಿ ಪಾಕಿಸ್ತಾನೀಯರು ಭಾರತದ ಒಳಗೆ ಸುಮಾರು ದೂರ ನುಸುಳಿದ್ದರು. ಆದರು ಅದು ಭಾರತೀಯ ಸೇನೆಯ ಅರಿವಿಗೆ ಬಂದಿರಲಿಲ್ಲ. ಆದರೆ ಪಾಕಿಸ್ತಾನಿಯರನ್ನು ಕಂಡ ಕಾಶ್ಮೀರದ ಕೆಲವು ಕುರಿಗಾಹಿ ಜನರು, ಭಾರತೀಯ ಸೇನೆಗೆ ವಿಷಯ ಮುಟ್ಟಿಸಿದ್ದರು. ತಕ್ಷಣವೇ ಕಾರ್ಯ ಪ್ರರುತ್ತಾರದ ಸೇನಾಧಿಕಾರಿಗಳು, ಐದು ಯೋಧರನ್ನು ಗಸ್ತು ತಿರುಗಲೆಂದು ಕಳುಹಿಸಿಕೊಟ್ಟರು. ಆದರೆ ಆಕ್ರಮಣ ಮನಸ್ಥತಿಯಲ್ಲಿದ್ದ ಪಾಕ್ನ ಸೇನೆ, ಭಾರತದ ಆ ಐದು ಯೋದರನ್ನು ಚಿತ್ರಹಿಂಸೆ ನೀಡಿ ಕೊಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ, ತಕ್ಷಣವೇ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ನಿರ್ಧರಿಸಿತು. ಇದಕ್ಕಾಗಿ ಸೇನೆಯನ್ನು ಸಿದ್ಧಗೊಳಿಸಿತು. ಭಾರತ ಸರ್ಕಾರ ಇಪ್ಪತ್ತು ಸಾವಿರ ಭಾರತೀಯ ಸೈನಿಕರನ್ನ ಸಜ್ಜುಗೊಳಿಸಿ ಮೇ 3 ರಿಂದ ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಚರಣೆ ಆರಂಭ ಮಾಡಿತು.
ಆಪರೇಷನ್ ಸಫೇದ್ ಸಾಗರ್ : ಅತ್ತ ಪಾಕಿಸ್ತಾನವು ಕೂಡಾ ಭಾರತದ ಮೇಲೆ ದಾಳಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅದರಂತೆ ಪಾಕ್ ಸುಮಾರು 5,000 ಕ್ಕೂ ಹೆಚ್ಚು ಸೈನಿಕರನ್ನ ಕಳುಹಿಸಿಕೊಟ್ಟಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಶಸ್ತ್ರಸಜ್ಜಿತವಾಗಿ ಮುನ್ನುಗ್ಗಿತ್ತು. ಎತ್ತರದ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಶೆಲ್ ದಾಲಿಯ ಮೂಲಕ ಭಾರತೀಯ ಸೇನೆ ಪಾಕಿಸ್ತಾನಿಯ ಬಂಕರ್ಗಳತ್ತ ದೃಷ್ಟಿ ಇರಿಸಿತ್ತು. ಭಾರತಕ್ಕೆ ಬೋಫೋರ್ಸ್ ಫಿರಂಗಿ, ವಾಯುಪಡೆಯ ಮಿಗ್-27, ಮಿಗ್-29 ಯುದ್ಧ ವಿಮಾನಗಳು ಸಾಕಷ್ಟು ಬಲ ತುಂಬಿದ್ದವು. ಭಾರತೀಯ ಸೇನೆ, ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಮಾಡಲು ಇಂಡಿಯನ್ ಮಿಗ್ -21, ಮಿಗ್ -27 ಮತ್ತು ಮಿರಾಜ್ 2000 ನಂತಹ ಯುದ್ಧ ವಿಮಾನಗಳನ್ನು ಬಳಸಿತು. ಪಾಕ್ ಶತ್ರುಗಳನ್ನು ನಿರ್ಮೂಲನೆ ಮಾಡಲು ಐಎಎಫ್ ಯೋಧರು ಈ ವಿಮಾನಗಳಿಂದ ರಾಕೆಟ್ ಮತ್ತು ಕ್ಷಿಪಣಿಗಳನ್ನು ಹಾರಿಸಿದರು. ಆಪರೇಷನ್ ತಲ್ವಾರ್ : ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ 'ಆಪರೇಷನ್ ತಲ್ವಾರ್' ಅನ್ನು ಪ್ರಾರಂಭಿಸಿತು. ಇದರಿಂದಾಗಿ ಪಾಕಿಸ್ತಾನೀಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. ಪಾಕಿಸ್ತಾನಿಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಜುಲೈ 24 ರಂದು ಪಾಕಿಗಳನ್ನು ಹಿಮ್ಮೆಟ್ಟಿಸಿ ಭಾರತ ಯುದ್ಧ ಗೆದ್ದಿತು. ಬಳಿಕ ಪ್ರತೀ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಣೆ ಮಾಡಲಾಗುತ್ತದೆ. ಆದರೆ ದೇಶದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ವಿಜಯ ದಿವಸ್ ಮಾಡಬಾರದು ಎಂದು ಆಗ್ರಹಿಸಿರುವುದು ಸೈನಿಕರಿಗೆ ಮಾಡಿದ ಮೋಸವಾಗಿದೆ. ಸೈನಿಕರ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವ ಪ್ರಯತ್ನ ನಿರಂತವಾಗಿ ನಡೆಯುತ್ತಿದೆ ಆದರೂ ನಮ್ಮ ವೀರ ಯೋಧರು ದೇಶದ ಸೇವೆಯನ್ನು ಚಾಚುತಪ್ಪದೆ ಮಾಡುತ್ತಿದ್ದಾರೆ. ನಾವೆಲ್ಲರೂ ಸೈನಿಕರ ಮನೋಬಲ ಹೆಚ್ಚಿಸುವ ಕಾಯ೯ ನಿರಂತರವಾಗಿ ಮಾಡಬೇಕಾಗಿದೆ.. ಮರೆತು ಹೋದ ಕಾಗಿ೯ಲ್ ದಿನ. ಈ ದಿನವನ್ನು ಶಾಲಾ ಕಾಲೇಜಿನಲ್ಲಿ ಎಲ್ಲಾ ಕಡೆಗಳಲ್ಲಿಯೂ ಮಾಡಬೇಕು ಆದರೆ ಎಷ್ಟೋ ಜನರಿಗೆ ಈ ದಿನ ಮರೆತೇ ಹೋಗಿದೆ. ಸಾಮಾನ್ಯರಿಗೆ ಬಿಡಿ ಸಕಾ೯ರಕ್ಕೆ ಕೂಡ ಮರೆತು ಹೋದ ಪ್ರಸಂಗ ಬಹಳಷ್ಟಿದೆ. ಈ ದಿನ ನಮ್ಮ ದೇಶದ ಸ್ವಾಭಿಮಾನದ ದಿನವಾಗಲಿ ಎಲ್ಲಾ ಹುತಾತ್ಮ ಸೈನಿಕರಿಗೆ ವೀರ ಸ್ವಗ೯ ಪ್ರಾಪ್ತಿಯಾಗಲಿ ನಮ್ಮ ದೇಶ ಮತ್ತೊಮ್ಮೆ ವಿಶ್ವ ಗುರುವಾಗಲಿ' ಲೇಖನ : ರಾಘವೇಂದ್ರ ಪ್ರಭು ಕವಾ೯ಲು
ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಆಚರಣೆ

Posted On: 25-07-2024 07:45PM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಕಾಪು ಜೇಸೀಸ್ ನ ಸಹಕಾರದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.

ಶಾಲಾ ಮಕ್ಕಳಿಗೆ ಗಿಡ ವಿತರಿಸಿ ಮಾತನಾಡಿದ ಕಾಪು ಜೇಸೀಸ್ ನ ಅಧ್ಯಕ್ಷರಾದ ಸುಖಾಲಾಕ್ಷಿ ಬಂಗೇರ, ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಾದ ತಾವು ಪರಿಸರದ ಬಗ್ಗೆ, ಕಾಳಜಿ ವಹಿಸಬೇಕು. ಪ್ರತಿಯೊಬ್ಬರೂ ತಮ್ಮ ಮನೆ, ಶಾಲೆಗಳಲ್ಲಿ ಗಿಡ ನೆಟ್ಟು ಅದನ್ನು ಪೋಷಿಸಬೇಕು ಹಾಗೂ ಸುಂದರ ಪರಿಸರವನ್ನು ನಿರ್ಮಿಸಿ ಅರೋಗ್ಯವಂತ ಸಮಾಜವನ್ನು ರೂಪಿಸಬೇಕು ಎಂಬ ಸಂದೇಶವನ್ನು ನೀಡಿದರು.
ಆಡಳಿತಾಧಿಕಾರಿಗಳಾದ ಆಲ್ಬನ್ ರೋಡ್ರಿಗಸ್ ರವರು ಧಾರ್ಮಿಕ ನಂಬಿಕೆಯೊಂದಿಗೆ ನಾವು ಪರಿಸರವನ್ನು ರಕ್ಷಿಸುತ್ತಿದ್ದೇವೆ. ಪ್ರತಿಯೊಬ್ಬರು ಕೂಡಾ ಇದರ ಮಹತ್ವವನ್ನು ಅರಿತು ಸುಂದರ ವಾತಾವರಣವನ್ನು ನಿರ್ಮಿಸಬೇಕೆಂಬ ಕಿವಿ ಮಾತನ್ನು ಹೇಳಿದರು.
ಸಮಾರಂಭದಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್. ಸ್ಕೌಟ್ಸ್, ಕಬ್-ಬುಲ್ ವಿದ್ಯಾರ್ಥಿಗಳು, ಹಾಗೂ ವಿವಿಧ ಘಟಕಗಳ ನಿರ್ದೇಶಕರುಗಳಾದ ತೇಜಶ್ರೀ, ವೀಣಾ ನಾಯಕ್, ಉದಯಕುಮಾರ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥೆ ಕೃಪಾ, ಜೇಸಿಯ ಪೂರ್ವಾಧ್ಯಕ್ಷ ರಮೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್ ನಿರೂಪಿಸಿದರು. ಪ್ರಾಥಮಿಕ ಶಾಲಾ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನಸ್ ವಂದಿಸಿದರು.