Updated News From Kaup

ಬಂಟಕಲ್ಲು : ಬಸ್ಸು ನಿಲ್ದಾಣ ಗ್ರಂಥಾಲಯಕ್ಕೆ ಬನ್ನಂಜೆ ಬಾಬು ಅಮೀನ್ ರವರ ಅಕ್ಷರ ತುಲಾಭಾರದ ಪುಸ್ತಕಗಳ ಕೊಡುಗೆ

Posted On: 07-01-2024 03:12PM

ಬಂಟಕಲ್ಲು : ಇಲ್ಲಿನ ನಾಗರಿಕ ಸೇವಾ ಸಮಿತಿ (ರಿ.) ಇವರು ಜಿಲ್ಲೆಯಲ್ಲೇ ಪ್ರಥಮವಾಗಿ ಬಂಟಕಲ್ಲು ಬಸ್ಸು ನಿಲ್ದಾಣದಲ್ಲಿ ಪ್ರಾಯೋಜಿಸಿರುವ ಬಸ್ಸು ನಿಲ್ದಾಣ ಗ್ರಂಥಾಲಯಕ್ಕೆ ಬನ್ನಂಜೆ ಬಾಬು ಅಮೀನ್ ರವರ ಅಕ್ಷರ ತುಲಾಭಾರದ ಆಯ್ದ ಸುಮಾರು ರೂ. 2,500 ಬೆಲೆಯ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ಇತ್ತೀಚೆಗೆ ಬನ್ನಂಜೆ ನಾರಾಯಣಗುರು ಸಭಾಗೃಹದಲ್ಲಿ ನಡೆದ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ರವರ 80 ರ ಸಂಭ್ರಮದ ಸಿರಿತುಪ್ಪೆ ಕಾರ್ಯಕ್ರಮ ನಡೆದಿತ್ತು. ಈ ಸಂಧರ್ಭದಲ್ಲಿ ಅವರನ್ನು ಪುಸ್ತಕಳಿಂದ ತುಲಾಭಾರ ನಡೆಸಲಾಗಿತ್ತು. ಈ ಅಕ್ಷರ ತುಲಾಭಾರದ ಬಾಬು ಅಮೀನ್ ರವರೇ ಬರೆದ ಪುಸ್ತಕಗಳ ಸಹಿತ ಕೆಲವು ಪುಸ್ತಕಗಳನ್ನು ಅಭಿನಂದನಾ ಸಮಿತಿಯ ಅರವಿಂದ ಕಲ್ಲುಗುಡ್ಡೆಯವರು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಬಂಟಕಲ್ಲು, ನಾಗರಿಕ ಸೇವಾ ಸಮಿತಿಯ ಅನಂತರಾಮ ವಾಗ್ಲೆ, ವಿನ್ಸಂಟ್ ಕಸ್ತಲಿನೊ, ವಿರೇಂದ್ರ ಪಾಟ್ಕರ್, ಉದ್ಯಮಿ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ಪಲಿಮಾರು : ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ

Posted On: 07-01-2024 03:07PM

ಪಲಿಮಾರು : ವಿದ್ಯಾರ್ಥಿಗಳು ಕನಿಷ್ಠ 2 ದಿನಪತ್ರಿಕೆಗಳನ್ನು ಪ್ರತಿನಿತ್ಯ ಓದಬೇಕು. ಕೇವಲ ಪಠ್ಯ ಪುಸ್ತಕಗಳಿಂದ ಮಾತ್ರವಲ್ಲ, ಹೊರಗಿನ ಪ್ರಪಂಚದ ಜ್ಞಾನವನ್ನು ಎಲ್ಲಾ ಮೂಲಗಳಿಂದ ಗಳಿಸಿ ಜೀವನದಲ್ಲಿ ಯಶಸ್ವಿಗಳಾಗಬೇಕು. ಉತ್ತಮ ವಿದ್ಯಾರ್ಥಿಗಳಾಗಿ, ನೀವು ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ ಕೀರ್ತಿ ಗೌರವವನ್ನು ತರಬೇಕು ಎಂದು ಪಲಿಮಾರು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾದ ಗಾಯತ್ರಿ ಡಿ. ಪ್ರಭು ಹೇಳಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು, ಇಲ್ಲಿ ಪಲಿಮಾರು ಸುತ್ತಮುತ್ತಲಿನ ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯ ಕನ್ನಡ ಶಿಕ್ಷಕರಾದ ಪಿಲಾರು ಸುಧಾಕರ್ ಶೆಣೈಯವರ ನೇತೃತ್ವದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಸ್ಥಳೀಯ ಐದು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ ಚಾಂಪಿಯನ್‌ಶಿಪ್ ಪಡೆದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನಿರೆ ದ್ವಿತೀಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಂತೂರು ಕೊಪ್ಪಲ ತೃತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಪಲಿಮಾರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ರಾಯೇಶ್ವರ್ ಪೈ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶೋಭಾ, ಗ್ರಾಮ ಪಂಚಾಯತ್ ಸದಸ್ಯರಾದ ಸುಜಾತ, ಸ್ಥಳೀಯ ಉದ್ಯಮಿಗಳಾದ ದಿನೇಶ್ ಪ್ರಭು, ಸಂಸ್ಥೆಯ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಯೋಗೀಶ್ ಸುವರ್ಣ, ಹಳೆ ವಿದ್ಯಾರ್ಥಿಗಳಾದ ಪ್ರವೀಣ್, ಪ್ರಸಾದ್, ರಾಯೇಶ್ವರ್ ಪೈ ಹಾಗೂ ಪ್ರಾಂಶುಪಾಲರು ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದರು. ಹಿರಿಯ ಸಹಶಿಕ್ಷಕರಾದ ಸುನೀತಾ ಸ್ವಾಗತಿಸಿ, ಪಿಲಾರು ಸುಧಾಕರ್ ಶೆಣೈ ರಸಪ್ರಶ್ನೆ ಹಾಗೂ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಆಂಗ್ಲಭಾಷಾ ಶಿಕ್ಷಕರಾದ ಕೆ. ಶಿವಾನಂದ ವಂದಿಸಿದರು.

ಉಚ್ಚಿಲ : ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಉಚ್ಚಿಲ ಶಾಖೆಗೆ ಅಮೇರಿಕಾದ ಅಧ್ಯಯನ ತಂಡದ ನಿಯೋಗ ಭೇಟಿ

Posted On: 06-01-2024 08:29PM

ಉಚ್ಚಿಲ : ಅಮೇರಿಕಾದ ಗ್ರಾಮೀಣ ಭಾಗದ ಮಹಿಳಾ ಸಬಲೀಕರಣದ ಉದ್ದೇಶದಿಂದ ಕಳೆದ 11 ವರ್ಷಗಳಿಂದ ಅಲ್ಲಿನ ಅಧ್ಯಯನಶೀಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದು ಇಲ್ಲಿನ ಮಹಿಳಾ ಸಬಲೀಕರಣದ ಚಿತ್ರಣವನ್ನು ಅವರಿಗೆ ಮನದಟ್ಟು ಮಾಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಅಮೇರಿಕಾದ ಪೆನೊಸೋಲೋನಿಯಾ ವಿಶ್ವವಿದ್ಯಾನಿಲಯದ ಪ್ರೊ. ಡಾ. ಫಮೀದಾ ಹ್ಯಾಂಡಿ ಹೇಳಿದ್ದಾರೆ. ಅವರು ಅಮೇರಿಕಾದ ವಿದ್ಯಾರ್ಥಿಗಳ ನಿಯೋಗದೊಂದಿಗೆ ಇಲ್ಲಿನ ಸಹಕಾರಿ ಸೊಸೈಟಿಗಳ ಸ್ವಸಹಾಯ ಸಂಘಗಳ ಅಧ್ಯಯನಕ್ಕಾಗಿ ಶನಿವಾರ ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಉಚ್ಚಿಲ ಶಾಖೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಜತೆ ಮಾತನಾಡಿದರು.

ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಪ್ರೊ.ಫಮೀದಾ ಹ್ಯಾಂಡಿಯವರನ್ನು ಸನ್ಮಾನಿಸಿ ಗೌರವಿಸಿದರು. ತದನಂತರ ಅಮೆರಿಕಾ ತಂಡದ ಸದಸ್ಯರು ವಿಚಾರ ವಿನಿಮಯ ನಡೆಸಿದರು.

ಈ ಸಂದರ್ಭ ನವೋದಯ ಸ್ವಸಹಾಯ ಸಂಘಗಳ ಅಧಿಕಾರಿ ಹರಿನಾಥ್, ಬೆಳಪು ಸಂಘದ ನಿರ್ದೇಶಕರಾದ ದ್ಯುಮಣಿ ಭಟ್, ಪಾಂಡು ಶೆಟ್ಟಿ, ಪಾಂಡು ಶೇರಿಗಾರ್, ಮೀನಾ ಪೂಜಾರ್ತಿ, ಶೋಭಾ ಭಟ್, ಸುಗುಣಾ ಅಂಚನ್, ಸಂಘದ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ, ವಿವಿಧ ಶಾಖಾ ಪ್ರಬಂಧಕರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ - ನಮಾಮಿ ರಾಮ ಭಜಕಮ್ ; ಕರಸೇವಕರಿಗೆ ಗೌರವಾರ್ಪಣೆ

Posted On: 06-01-2024 07:32PM

ಕಟಪಾಡಿ : ನಮಾಮಿ ರಾಮ ಭಜಕಮ್ ಕಾರ್ಯಕ್ರಮದಡಿ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ, ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ವತಿಯಿಂದ ಕಾಪು ತಾಲೂಕಿನ ಅಯೋಧ್ಯೆ ರಾಮ ಮಂದಿರದ ಕರಸೇವೆಯಲ್ಲಿ ಭಾಗಿಯಾದ ಕರಸೇವಕರನ್ನು ಗೌರವಿಸಿದರು.

ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರು ನಾರಾಯಣ ಕಾಮತ್, ಕೋಡುಗುಡ್ಡೆ, ಶ್ರೀಧರ ಶೆಟ್ಟಿ ಕೋಡು, ಸುಂದರ ಪ್ರಭು ಶಿರ್ವ , ಶ್ರೀಪತಿ ಕಾಮತ್ ಶಿರ್ವ, ದಿನೇಶ್ ಪಾಟ್ಕರ್ ಮಟ್ಟಾರು, ರಮೇಶ್ ಪ್ರಭು ಬೆಳಂಜಾಲೆಗೆ ತೆರಳಿ ಕರಸೇವಕರಿಗೆ ಅಭಿವಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲೆ ಅಧ್ಯಕ್ಷೆ ವೀಣಾ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಸಂಘದ ಅಧ್ಯಕ್ಷ ಜಯಪ್ರಕಾಶ್ ಪ್ರಭು, ಸಂಘದ ಸ್ವಯಂ ಸೇವಕ ಸುಬ್ರಹ್ಮಣ್ಯ ವಾಗ್ಳೆ, ಶಿರ್ವ ವ್ಯವಸಾಯಿಕ ಸೇವಾ ಸಹಕಾರಿ ನಿ. ಉಪಾಧ್ಯಕ್ಷೆ ವಾರಿಜ ಪೂಜಾರಿ, ವಿಶ್ವ ಹಿಂದೂ ಪರಿಷದ್ ಮಟ್ಟಾರು ಅಧ್ಯಕ್ಷ ಜಗದೀಶ ಆಚಾರ್ಯ, ಕಾರ್ಯದರ್ಶಿ ಶಿವಪ್ರಸಾದ್ ನಾಯ್ಕ, ಮಾತೃ ಶಕ್ತಿ ಕಾಪು ತಾಲೂಕು ಸಹ ಪ್ರಮುಖ್ ಉಷಾ ಪಾಟ್ಕರ್, ಮಾತೃ ಶಕ್ತಿ ಮಟ್ಟಾರು ಪ್ರಮುಖ್ ಸುಮತಿ ಸಾಲ್ಯಾನ್, ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ, ವಿಜಯ ಕುಂದರ್ ಕಿದಿಯೂರು, ಮಮತ ರಾವ್, ಸತೀಶ್ ದೇವಾಡಿಗ ಕಾಪು, ನಿಲೇಶ್ ಕಿದಿಯೂರು, ಗೋಪಾಲ ಆಚಾರ್ಯ ಮಟ್ಟಾರು, ಗಿರಿಧರ ಪ್ರಭು, ಶ್ರೀಕಾಂತ ಆಚಾರ್ಯ ಉಪಸ್ಥಿತರಿದ್ದರು.

ಪಲಿಮಾರು : ಪ್ರೌಢ ಶಾಲೆ, ಕಾಲೇಜು ವಿಭಾಗದ ವಾರ್ಷಿಕೋತ್ಸವ ; ಪ್ರತಿಭಾ ಪುರಸ್ಕಾರ

Posted On: 06-01-2024 05:16PM

ಪಲಿಮಾರು : ಮಕ್ಕಳಲ್ಲಿರುವ ಅದ್ಭುತ ಶಕ್ತಿಯನ್ನು ಹೊರತರುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಣದ ಮೂಲಕ ಸಂಸ್ಕೃತಿಯ ಅರಿವು ಮೂಡುತ್ತದೆ. ಸಂಸ್ಕಾರದ ಕೊರತೆಯಿಂದ ಕ್ರೌರ್ಯ ಬೆಳೆಯುತ್ತದೆ. ಈಗ ಮಾರ್ಕ್ ಮತ್ತು ರ‍್ಯಾಂಕ್‌ನ ಕಡೆಗೆ ಹೋಗುತ್ತಿದ್ದೇವೆ. ವಿದ್ಯಾರ್ಥಿಗಳನ್ನು ಸದಾ ಜಾಗೃತ ಮನಸ್ಸಿನಲ್ಲಿಡುವ ಕಾರ್ಯ ನಡೆಯಬೇಕು. ಶಿಕ್ಷಣ ಮತ್ತು ಪರಿಸರ ದಿಂದ ಬದುಕುವ ಕಲೆಯ ಜಾಗೃತಿಯಾಗುತ್ತದೆ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನುಡಿದರು. ಅವರು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ : ಈ ಸಂದರ್ಭದಲ್ಲಿ ಶಾಲಾ ಹಳೆವಿದ್ಯಾರ್ಥಿಗಳು, ದಾನಿಗಳಾದ ಎಬಿಸಿಡಿ ಮತ್ತು ಇ ಟ್ರಸ್ಟ್ ಇನ್ನಾ ಇದರ ಅಧ್ಯಕ್ಷರಾದ ಇನ್ನಾ ಚಂದ್ರಕಾಂತ್ ರಾವ್ ಮತ್ತು ಹಳೆವಿದ್ಯಾರ್ಥಿ, ಬೆಂಗಳೂರಿನ ಉದ್ಯಮಿಗಳು, ಆದಿತ್ಯ ಟ್ರಾವೆಲ್ಸ್ ಸಂಸ್ಥೆಯ ಮುಖ್ಯಸ್ಥರಾದ ಗೋಕುಲ್ ಪಲಿಮಾರು, ಬಹುಮುಖ ಪ್ರತಿಭಾ ಸಂಪನ್ನೆ ಹಳೆ ವಿದ್ಯಾರ್ಥಿನಿ ಕು.ಸಯ್ಯಮಿ ಮತ್ತು ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಹಾಗೂ ಕನ್ನಡದಲ್ಲಿ ೧೦೦ ಅಂಕ ಗಳಿಸಿದ ಕು.ಸುಮಯ್ಯ ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹಳೆವಿದ್ಯಾರ್ಥಿನಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷರಾದ ರಾಯೇಶ್ವರ ಪೈ, ನಿಕಟಪೂರ್ವ ಗ್ರಾ,ಪಂ. ಅಧ್ಯಕ್ಷೆ ಗಾಯತ್ರಿ ಡಿ.ಪ್ರಭು, ಸದಸ್ಯರುಗಳಾದ ಪ್ರವೀಣ್ ಕುಮಾರ್, ರಶ್ಮಿ ಪೂಜಾರಿ, ಸುಜಾತಾ, ಹಳೆವಿದ್ಯಾರ್ಥಿ, ಉದ್ಯಮಿ ರವೀಂದ್ರ ಪ್ರಭು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶೋಭಾ, ವಿದ್ಯಾರ್ಥಿ ನಾಯಕರುಗಳಾದ ಅನನ್ಯಾ, ಯಶಸ್ ವೇದಿಕೆಯಲ್ಲಿದ್ದರು.

ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಸನ್ಮಾನಿತರನ್ನು ಪರಿಚಯಿಸಿ, ಸ್ವಾಗತಿಸಿದರು. ಪ್ರಾಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಸುನೀತಾ ವರದಿ ಓದಿದರು. ಶಿಕ್ಷಕರಾದ ಪಿ.ಸುಧಾಕರ ಶೆಣೈ, ದೈಹಿಕ ಶಿಕ್ಷಣ ಶಿಕ್ಷಕಿ ಅಮೃತಾ, ಶಿಕ್ಷಕರಾದ ಶಿವಾನಂದ್, ನಿಶಾ ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಜ್ಯೋತಿ ನಿರೂಪಿಸಿದರು. ಶಿಕ್ಷಕರಾದ ಪ್ರಸನ್ನ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಿರ್ವ : ಪಾಂಬೂರಿನ ಮಾನಸ ವಸತಿ ಶಾಲೆಯಲ್ಲಿ 69ನೇ ಹುಟ್ಟು ಹಬ್ಬ ಆಚರಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

Posted On: 05-01-2024 07:46PM

ಶಿರ್ವ : ಪ್ರೀತಿ ನೀಡುವ ಮೂಲಕ ವಿಶೇಷ ಮಕ್ಕಳನ್ನು ಸಮಾಜದ ಇತರರಂತೆ ಕಾಣಲು ಸಾಧ್ಯ. ಇಂತಹ ಮಕ್ಕಳೊಂದಿಗೆ ಹುಟ್ಟು ಹಬ್ಬದ ಆಚರಣೆ ಅವಿಸ್ಮರಣೀಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಕಾಪು ಬ್ಲಾಕ್ ಕಾಂಗ್ರೆಸ್ ಮಾನಸ ವಸತಿ ಶಾಲೆ ಪಾಂಬೂರಿನಲ್ಲಿ ಆಯೋಜಿಸಿದ್ದ ತಮ್ಮ 69ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ಸಂದರ್ಭ ವಿಶೇಷ ಮಕ್ಕಳಿಗಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಮಾನಸ ಸಂಸ್ಥೆಯ ಪ್ರಮುಖರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಶಿವಾಜಿ ಸುವರ್ಣ ಶಿರ್ವ, ಅಶೋಕ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಿಲ : ವೇ.ಮೂ. ರಾಘವೇಂದ್ರ ಉಪಾಧ್ಯಾಯ ದಂಪತಿಗಳ ಷಷ್ಠ್ಯಬ್ಧಪೂರ್ತಿ ಸಮಾರಂಭ

Posted On: 05-01-2024 06:29PM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಮತ್ತು ಸುಗುಣ ಉಪಾಧ್ಯಾಯರ ಷಷ್ಠ್ಯಬ್ಧ ಪೂರ್ತಿ ಮತ್ತು ಮೊಗವೀರ ಮುಂದಾಳು ನಾಡೋಜ ಜಿ ಶಂಕರ್ ಸೇರಿದಂತೆ ವಿವಿಧ ಸಾಧಕರಿಗೆ ಸಹಕಾರ ರತ್ನ ಬಿರುದನ್ನು ನೀಡುವ ಕಾರ್ಯಕ್ರಮ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದಲ್ಲಿ ಜರಗಿತು.

ಇದರ ಪ್ರಯುಕ್ತ ಶ್ರೀ ದೇವರಿಗೆ ನವಕ ಕಲಶ, ಧಾರ್ಮಿಕ ಉಪನ್ಯಾಸ, ಮಹಾರಂಗಪೂಜೆ, ಉತ್ಸವ ಬಲಿ, ಯಜುರ್ವೇದಿಯ ಬೋಧಾಯನ ಶಾಂತಿ ಸಂಗ್ರಹ ಪುಸ್ತಕ ಬಿಡುಗಡೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು.

ಸಾಧಕರಿಗೆ ಪ್ರಶಸ್ತಿ : ಈ ಸಂದರ್ಭ ಅದಮಾರು ಹಿರಿಯ ಸ್ವಾಮೀಜಿ ಶ್ರೀ ವಿಶ್ವ ಪ್ರಸನ್ನ ಮತ್ತು ಪೇಜಾವರ ಶ್ರೀ ವಿಶ್ವ ಪ್ರಿಯರು ಬೆಳಪು ಡಾl ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಸಮಾಜ ರತ್ನ, ಡಾl ಗಂಗಾಧರ್ ಅವರಿಗೆ ವೈದ್ಯ ರತ್ನ, ಪಾಂಗಳ ನಾಗೇಶ್ ರಾವ್ ಅವರಿಗೆ ನಳ ಪಾಕಜ್ಞ, ಬೈಲೂರು ಮುರಳೀಧರ ತಂತ್ರಿ ಅವರಿಗೆ ಜ್ಯೋತಿ ಮಾರ್ತಾಂಡ, ಕುಕ್ಕಿ ಕಟ್ಟಿ ರಾಘವೇಂದ್ರ ತಂತ್ರಿ ಅವರಿಗೆ ತಂತ್ರ ರತ್ನ, ಇರುವತ್ತೂರು ವಾಸುದೇವ ಭಟ್ ಅವರಿಗೆ ಮಂತ್ರ ಮಾರ್ತಾಂಡ, ಬಪ್ಪನಾಡು ನಾಗೇಶ್ ಅವರಿಗೆ ಸ್ವರ ಮಾರ್ತಾಂಡ, ನಂದಳಿಕೆ ವಿಠ್ಠಲ್ ಭಟ್ ಅವರಿಗೆ ಪುರೋಹಿತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅದಾನಿ ಸಂಸ್ಥೆಯ ಮುಖ್ಯಸ್ಥ ಕಿಶೋರ್ ಆಳ್ವ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ವಾಸುದೇವ ಸಾಲಿಯಾನ್, ಉದಯಕುಮಾರ್ ಶೆಟ್ಟಿ ಯುವ ಮೆರಿಡಿಯನ್ ಕುಂದಾಪುರ, ಜಯಶೀಲ ಶೆಟ್ಟಿ ಕುಂದಾಪುರ, ಆನಂದ ಸಿ ಕುಂದರ್, ವೆಂಕಟ್ರಮಣ ಅಸ್ರಣ್ಣ, ಶ್ರೀಪತಿ ಭಟ್ ಶಾಂತ ಎಲೆಕ್ಟ್ರಿಕಲ್ಸ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.

ಜ. 6,8,10 : ನಮಾಮಿ ರಾಮ ಭಜಕಮ್ - ಕರಸೇವಕರ ಮನೆಗೆ ಭೇಟಿ ನೀಡಿ ಅಭಿನಂದನಾ ಕಾರ್ಯಕ್ರಮ

Posted On: 05-01-2024 06:13PM

ಶಂಕರಪುರ : ನಮಾಮಿ ರಾಮ ಭಜಕಮ್ ಕಾರ್ಯಕ್ರಮದಡಿ ಕರ್ನಾಟಕ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲೇಬೇಕು ಎಂಬ ಸಂಕಲ್ಪವನ್ನು ಮಾಡಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಮಾಡಿದ ಉಡುಪಿ ಜಿಲ್ಲೆಯ ಕರಸೇವಕರ ಮನೆ-ಮನೆಗೆ ಜನವರಿ 6,8,10 ರಂದು ಭೇಟಿ ನೀಡಿ ಅಭಿನಂದನೆ ನೀಡಲಿದ್ದಾರೆ ಎಂದು ಮಠದ ಪ್ರಕಟನೆ ತಿಳಿಸಿದೆ.

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇಗುಲಕ್ಕೆ ಬಾಲಿವುಡ್ ಚಿತ್ರನಟಿ ಪೂಜಾ ಹೆಗ್ಡೆ ಭೇಟಿ

Posted On: 05-01-2024 11:39AM

ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇಗುಲಕ್ಕೆ ಬಾಲಿವುಡ್ ಚಲನಚಿತ್ರ ನಟಿ ಪೂಜಾ ಹೆಗ್ಡೆ ಭೇಟಿ ನೀಡಿದರು.

ದೇವಳದ ವತಿಯಿಂದ ಶ್ರೀ ಮಹಾಲಕ್ಷ್ಮಿಯ ಪ್ರಸಾದ ನೀಡಿ ನಟಿಯನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಹಾಲಕ್ಷ್ಮಿ ದೇಗುಲದ ಅರ್ಚಕ ರಾದ ರಾಘವೇಂದ್ರ ಉಪಾಧ್ಯಾಯ, ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ, ಸಿಬ್ಬಂದಿ ವರ್ಗ, ಭಕ್ತಾದಿಗಳು ಉಪಸ್ಥಿತರಿದ್ದರು.

ಕಾಪು : ಎ.ಐ.ಸಿ.ಸಿ ದೆಹಲಿ ಅಲ್ಪಸಂಖ್ಯಾತ ಘಟಕದಿಂದ ಫಾರೂಕ್ ಚಂದ್ರನಗರರಿಗೆ ಸನ್ಮಾನ

Posted On: 04-01-2024 06:29PM

ಕಾಪು : ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಸ್ತುವಾರಿಯವರಾದ ಜೀನಲ್ ಗಾಲರಿಂದ ಯೂತ್ ಐಕಾನ್ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಫಾರೂಕ್ ಚಂದ್ರನಗರರನ್ನು ಸನ್ಮಾನಿಸಿದರು.

ಸನ್ಮಾನಿಸಿ ಮಾತನಾಡಿದ ಅವರು ಫಾರೂಕ್ ಚಂದ್ರನಗರ ಯೂತ್ ಐಕಾನ್ ಪ್ರಶಸ್ತಿ ಪಡೆದು ಯುವಕರಿಗೆ ರಾಜಕೀಯ ಹಾಗೂ ಸಾಮಾಜಿಕವಾಗಿ ರೋಲ್ ಮಾಡೆಲ್ ಆಗಿದ್ದಾರೆ ಮುಂದಕ್ಕೂ ಇವರಿಂದ ಸಮಾಜಕ್ಕೆ ಇನ್ನಷ್ಟು ಒಳ್ಳೆದಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಕೆ ಅಬ್ದುಲ್ ಜಬ್ಬಾರ್, ಕಾರ್ಯದರ್ಶಿ ಹಸನ್ ಶೇಕ್ ಮಣಿಪುರ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷರಾದ ಇಸ್ಮಾಯಿಲ್ ಅತ್ರಾಡಿ, ಕೆ.ಪಿ.ಸಿ.ಸಿ ವಕ್ತಾರರಾದ ಇರ್ಷಾದ್ ಅಹ್ಮದ್ ಬೆಂಗಳೂರು, ಮತ್ತಿತರರು ಉಪಸ್ಥಿತರಿದ್ದರು.