Updated News From Kaup

ಪಲಿಮಾರು : ಅವಿರತ ಪ್ರಯತ್ನದಿಂದ ಮಾತ್ರ ಸಾಧನೆಯ ಮೆಟ್ಟಿಲನ್ನು ಹತ್ತಲು ಸಾಧ್ಯ - ಪ್ರಸಾದ್ ಪಲಿಮಾರು

Posted On: 29-12-2023 09:39PM

ಪಲಿಮಾರು : ಸೂರ್ಯನಂತೆ ನಿನ್ನನ್ನು ನೀನು ಸುಟ್ಟರೆ ಮಾತ್ರ ಪ್ರಕಾಶಮಾನವಾಗಿ ಜಗತ್ತಿಗೆ ಬೆಳಕನ್ನು ನೀಡಲು ಸಾಧ್ಯ. ಜಗತ್ತಿನ ಯಾವುದೇ ಕ್ರೀಡಾಪಟುಗಳು ಒಂದು ದಿನದಲ್ಲಿ ಯಶಸ್ವಿ ಆಗಲಿಲ್ಲ. ಅವಿರತ ಪ್ರಯತ್ನದಿಂದ ಮಾತ್ರ ಸಾಧನೆಯ ಮೆಟ್ಟಿಲನ್ನು ಹತ್ತಲು ಸಾಧ್ಯ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರು ಹೇಳಿದರು. ಅವರು ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಲಿಮಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸೌಮ್ಯಲತ ಶೆಟ್ಟಿ ಅವರು ಧ್ವಜಾರೋಹಣಗೈದರು. ಉಪಾಧ್ಯಕ್ಷರಾದ ರಾಯೇಶ್ವರ ಪೈ ಕ್ರೀಡಾಳುಗಳ ಗೌರವ ರಕ್ಷೆ ಸ್ವೀಕರಿಸಿದರು.

ಪಲಿಮಾರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಗಾಯತ್ರಿ ಡಿ.ಪ್ರಭು, ನವೀನ್ ಚಂದ್ರ ಸುವರ್ಣ, ಸದಸ್ಯ ಪ್ರವೀಣ್ ಕುಮಾರ್ ಅಡ್ವೆ, ಸುಜಾತಾ, ರಶ್ಮಿ, ಯೋಗೀಶ್ ಸುವರ್ಣ, ಹೊಯ್ಗೆ ಪ್ರೆಂಡ್ಸ್ ಹೊಯ್ಗೆ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಕುಮಾರ್, ದಾನಿಗಳಾದ ಜೋಸೆಫ್ ಡಿಸೋಜ ಮತ್ತು ಮೇರಿಲಿನ್ ಡಿಸೋಜ ಯು.ಎಸ್.ಎ., ರವೀಂದ್ರ ಪ್ರಭು ಪಲಿಮಾರು, ಸಂಸ್ಥೆಯ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಉಪಸ್ಥಿತರಿದ್ದರು.

ಪ್ರೌಢಶಾಲಾ ಹಿರಿಯ ಸಹಶಿಕ್ಷಕಿ ಸುನಿತಾ ಸ್ವಾಗತಿಸಿದರು. ಶಿಕ್ಷಕರಾದ ಪಿಲಾರು ಸುಧಾಕರ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮುಸ್ಲಿಂ ಮಹಿಳೆಯರ ಅವಹೇಳನ - ಡಾ| ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು : ರಮೀಜ್ ಹುಸೇನ್

Posted On: 29-12-2023 09:24PM

ಪಡುಬಿದ್ರಿ : ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಳಿಕೆ ನೀಡಿ, ಮಹಿಳೆಯರ ಮನಸ್ಸಿಗೆ ನೋವು ಉಂಟು ಮಾಡಿದ ವಿಕೃತ ಮನಸ್ಸಿನ ಡಾ| ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಸರಕಾರಕ್ಕೆ ಮನವಿ ಮಾಡಿರುತ್ತಾರೆ.

ಪದೇ ಪದೇ ಇಂತಹ ಉದ್ರೇಕ ಹೇಳಿಕೆ ನೀಡಿ ಸಮಾಜವನ್ನು ಒಡೆಯುವ ಕೆಲಸವನ್ನು ‌ನಿರಂತರ ವಾಗಿ ಮಾಡುತಿದ್ದು, ಭಾರತ ದೇಶದಲ್ಲಿ ಸೌಹಾರ್ದತೆಯಲ್ಲಿ ಬದುಕುತ್ತಿರುವ ನಾಗರಿಕ ಸಮಾಜದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದ್ವೇಷ ಸಾಧಿಸುವ ಹಾಗು ರಾಜ್ಯದ ಜನಗಳ ಸೌಹಾರ್ದ ಬದುಕಿಗೆ ಧಕ್ಕೆ ತರುವ ಇಂತಹ ಘಟನೆಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಪ್ರಭಾಕರ್ ಭಟ್ ರ ಹೇಳಿಕೆ ಇಡೀ ಮಹಿಳಾ ಸಮುದಾಯದಕ್ಕೆ ಅವಮಾನಿಸುವಂತಾಗಿದ್ದು ಇದನ್ನು ಧರ್ಮ, ಜಾತಿ ಭೇದ ಮರೆತು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ ಕೃೆಗೊಂಡಿದ್ದು ಪ್ರಭಾಕರ ಭಟ್ಟರ ಮೇಲೆ ಕಠಿಣ ಕಾನೂನು ಕ್ರಮ ಕೆೃಗೊಳ್ಳಬೇಕು ಮತ್ತು ಕೋರ್ಟ್ ಆತನಿಗೆ ನೀಡಿದ ಮಧ್ಯಂತರ ಜಾಮೀನು ರದ್ದುಪಡಿಸಿ ಆದಷ್ಟು ಬೇಗ ಬಂಧಿಸಬೇಕು.

ಸುಪ್ರೀಮ್ ಕೋರ್ಟ್ ಇಂತಹ ಕೋಮುದ್ವೇಷ ಹೇಳಿಕೆ ನೀಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಸರಕಾರಕ್ಕೆ ಆದೇಶಿಸಿದೆ. ಆದ್ದರಿಂದ ‌ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಸಮಾಜಘಾತುಕರನ್ನು ಹತ್ತಿಕ್ಕಲು ಈ ಕೂಡಲೇ ಕ್ರಮ ಜರಗಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವ ವ್ಯಕ್ತಿಗಳನ್ನು ಹತ್ತಿಕ್ಕಲು ಸಾಧ್ಯ ಮತ್ತು ಇತರರಿಗೆ ಪಾಠವಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಪು : ಕಿಡ್ನಿ ಮರುಜೋಡಣೆ ಶಸ್ತ್ರ ಚಿಕಿತ್ಸೆ ನಡೆಸಲು ಧನಸಹಾಯ ನೀಡಿ ಆಗೋಣ ಸಹಕಾರಿ

Posted On: 28-12-2023 08:25PM

ಕಾಪು : ಸೂರ್ಯನಗರ ಕಳತೂರ್ ಪಯ್ಯಾರ್ ಸಮೀಪದ ಜಾಮಿಯಾ ಮಸೀದಿಗೆ ಒಳಪಟ್ಟಂತಹ ಪರೀಧಾ ಎಂಬ ತಾಯಿಯ ಮಗನಾದ ಇಮ್ತಿಯಾಜ್ ಎಂಬ ಸಹೋದರನ ಎರಡೂ ಕಿಡ್ನಿ ವೈಫಲ್ಯಗೊಂಡು ವೈದ್ಯರ ಸಲಹೆಯಂತೆ ಹೊಸ ಕಿಡ್ನಿ ಜೋಡಿಸಿದರೆ ಮಾತ್ರ ಬದುಕುಳಿಯಲು ಸಾಧ್ಯ ಎಂದಾಗ ದಿಕ್ಕೇ ತೋಚದ ಕುಟುಂಬದಲ್ಲಿ ಅವರ ಕಿಡ್ನಿ ಮರುಜೋಡಣೆಗಾಗಿ ತನ್ನ ಸ್ವಂತ ತಂಗಿ ಒಂದು ಕಿಡ್ನಿಯನ್ನು ದಾನ ಮಾಡುತ್ತಿದ್ದಾರೆ.

ಅಂದಾಜು ಮೊತ್ತ 20 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ. ಇಮ್ತಿಯಾಜ್‌ಗೆ ಚಿಕ್ಕ ವಯಸ್ಸಿನ ಸಣ್ಣ ಎರಡು ಹೆಣ್ಣು ಮಕ್ಕಳು ಇದ್ದು ಮೆಕಾನಿಕ್ ದುಡಿಮೆಯ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಒಂದು ಚಲ ಇತ್ತು. ಆದರೆ ಸೃಷ್ಟಿಕರ್ತನ ವಿಧಿ ಬೇರೆ ಆಗಿತ್ತು.

ಮನೆಗೆ ಆಧಾರಸ್ತಂಭವಾಗಿದ್ದ ಸಹೋದರನ ಪರಿಸ್ಥಿತಿಯಿಂದ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಈ ಕುಟುಂಬಕ್ಕೆ ತಮ್ಮ ಕೈಲಾದ ಸಹಾಯ ಮಾಡಿ ಸಹಕರಿಸಿ ಹಾಗೂ ಆದಷ್ಟು ಶೇರ್ ಮಾಡಿ ಸಹಕರಿಸಿ.

ಡಿಸೆಂಬರ್ 30 - 31 : ಬಿರುವೆ‌ರ್ ಕಾಪು ಸೇವಾ ಸಮಿತಿ ಕಾಪು - ಬಿರುವೆರ್ ಕಾಪು ಟ್ರೋಫಿ 2023

Posted On: 28-12-2023 12:31PM

ಕಾಪು : ಬಿರುವೆರ್ ಕಾಪು ಸೇವಾ ಸಮಿತಿಯ ಆಶ್ರಯದಲ್ಲಿ ಬಿಲ್ಲವ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಡಿಸೆಂಬರ್ 30 ಮತ್ತು 31ರಂದು ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಬಿಲ್ಲವ ಸಮಾಜ ಬಾಂಧವರಿಗೆ ಡಿಸೆಂಬರ್ 30-31 ರಂದು ಲೀಗ್ ಕಮ್ ನಾಕೌಟ್ ಮಾದರಿಯ 90 ಗಜಗಳ ಕ್ರಿಕೆಟ್ ಪಂದ್ಯಾಕೂಟವು ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್ ತಿಳಿಸಿದರು. ಅವರು ಗುರುವಾರ ಕಾಪು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ‌ನೀಡಿದರು.

ಈಗಾಗಲೇ ಬಿಡ್ಡಿಂಗ್ ಕಾರ್ಯ ನಡೆದಿದ್ದು ಹತ್ತು ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಕ್ಕೆ ರೂ.88,888 ಮತ್ತು ಬಿರುವೆರ್ ಕಾಪು ಟ್ರೋಫಿ, ದ್ವಿತೀಯ ಬಹುಮಾನ ರೂ.55,555 ಮತ್ತು ಬಿರುವೆರ್ ಕಾಪು ಟ್ರೋಫಿ ಸಿಗಲಿದೆ. ಉತ್ತಮದಾಂಡಿಗ, ಉತ್ತಮ ಎಸೆತಗಾರ, ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು ಎಂದರು.

ಶನಿವಾರ ಬೆಳಗ್ಗೆ 10:30 ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀರ್ವಚನ ಮಾಡಲಿದ್ದಾರೆ.

ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಸೇರಿದಂತೆ ಸಮಾಜದ ವಿವಿಧ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆದಿತ್ಯವಾರ ಸಂಜೆ ಗಂಟೆ 5:30 ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸುಜನ್ ಎಲ್ ಸುವರ್ಣ ಕುತ್ಯಾರ್,ವರುಣ್ ಬಿ ಕೋಟ್ಯಾನ್, ರವಿರಾಜ್ ಶಂಕರಪುರ, ಮಾಧವ ಪೂಜಾರಿ, ಯೋಗೀಶ್ ಪೂಜಾರಿ, ಯಾದವ ಪೂಜಾರಿ ಉಪಸ್ಥಿತರಿದ್ದರು

ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ

Posted On: 25-12-2023 06:38PM

ಕರ್ನಾಟಕದ ರಾಜ್ಯದ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಿದ್ದಾರೆ.

ಇದೇ ವೇಳೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕನಾಗಿ ಅರವಿಂದ್‌ ಬೆಲ್ಲದ್‌ ಅವರನ್ನು ನೇಮಕ ಮಾಡಲಾಗಿದೆ. ವಿಧಾನಸಭೆಯ ಮುಖ್ಯ ಸಚೇತಕರಾಗಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ನೇಮಕವಾದರೆ, ವಿಧಾನಪರಿಷತ್​ನ ಮುಖ್ಯ ಸಚೇತಕರಾಗಿ ಎನ್.ರವಿಕುಮಾರ್ ಅವರನ್ನು ನೇಮಿಸಲಾಗಿದೆ. ವಿಧಾನಪರಿಷತ್ ವಿಪಕ್ಷ ಉಪ ನಾಯಕನಾಗಿ ಸುನೀಲ್ ವಲ್ಯಾಪುರೆ ಅವರನ್ನು ನೇಮಕ ಮಾಡಿದ್ದಾರೆ.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ವಿಧಾನಪರಿಷತ್ ವಿಪಕ್ಷ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಜೆಸಿಐ ಉಡುಪಿ ಸಿಟಿ : 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ಹರಿಣಾಕ್ಷಿ ಕರ್ಕೇರ ಆಯ್ಕೆ

Posted On: 25-12-2023 06:25PM

ಉಡುಪಿ : ವಲಯದ ಅತ್ಯಂತ ಪ್ರತಿಷ್ಠಿತ ಘಟಕವಾಗಿರುವ ಜೆಸಿಐ ಉಡುಪಿ ಸಿಟಿ ಇದರ 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ಹರಿಣಾಕ್ಷಿ ಕರ್ಕೇರ ಇವರು ಆಯ್ಕೆಯಾಗಿದ್ದಾರೆ.

ನೂತನ ಕಾರ್ಯದರ್ಶಿಯಾಗಿ ಸಂಧ್ಯಾ ವಿ ಕುಂದರ್, ಮಹಿಳಾ ಜೆಸಿ ಪ್ರತಿನಿಧಿಯಾಗಿ ನಯನ ಉದಯ ನಾಯ್ಕ್, ಯುವ ಜೇಸಿ ವಿಭಾಗದ ಪ್ರತಿನಿಧಿಯಾಗಿ ತನುಷ್ ಪ್ರಕಾಶ್ ದೇವಾಡಿಗ, ಉಪಾಧ್ಯಕ್ಷರುಗಳಾಗಿ ಶರತ್ ಶರತ್ ಕುಮಾರ್, ನಿಶಾ ಪ್ರಕಾಶ್ ದೇವಾಡಿಗ, ದಿಶಾ, ಸವಿತಾ ಲಕ್ಷ್ಮಣ್, ಅವಿನಾಶ್ ಕೆ. ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಬ್ರಿ ತಾಲೂಕು ಕುಲಾಲ ಸಂಘದ ಪ್ರಥಮ ವರ್ಷದ ಕ್ರೀಡಾಕೂಟ ಸಂಪನ್ನ

Posted On: 25-12-2023 06:20PM

ಹೆಬ್ರಿ : ಕುಲಾಲ ಸಂಘ ಹೆಬ್ರಿ ತಾಲೂಕು ಇದರ ವತಿಯಿಂದ ಪ್ರಥಮ ವರ್ಷದ ಕ್ರೀಡಾಕೂಟವು ಆದಿತ್ಯವಾರ ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಜರಗಿತು.

ಹೆಬ್ರಿಯ ಉದ್ಯಮಿ ಬನಶಂಕರಿ ವರ್ಕ್ಸ್ ನ ಮಾಲಕರಾದ ಐತು ಕುಲಾಲ್ ಕನ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಇವರ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯಮಟ್ಟದ ಕ್ರಿಕೆಟ್ ಪ್ರತಿಭೆ ಮಡಮಕ್ಕಿ ಸೃಜನ ಕುಲಾಲ್, ಸಂಘದ ಗೌರವಾಧ್ಯಕ್ಷರಾದ ಬೇಳಂಜೆ ಭೋಜ ಕುಲಾಲ್, ಉಪಾಧ್ಯಕ್ಷರಾದ ಚಾರ ಅಣ್ಣಪ್ಪ ಕುಲಾಲ್, ಹೆಬ್ರಿ ಶ್ರೀರಾಮ್ ಜುವೆಲರ್ಸ್ ಮಾಲಕರಾದ ಕೆ ನಾರಾಯಣ ಕುಲಾಲ್, ಶಿವಪುರ ಸಂಘದ ಅಧ್ಯಕ್ಷರಾದ ಉದಯ ಕುಲಾಲ್ , ಶಿವಪುರ ಶಾಲೆಯ ಮುಖ್ಯ ಶಿಕ್ಷಕಿ ಗುಲಾಬಿ ಕುಲಾಲ್, ಸುಮಿತ್ರ ಕುಲಾಲ್ ಬೆಪ್ಡಿ, ಕಾರ್ಯದರ್ಶಿ ಭಾಸ್ಕರ್ ಕುಲಾಲ್, ಕ್ರೀಡಾ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಮಡಮಕ್ಕಿ, ಪ್ರಸನ್ನ ಕುಲಾಲ್ ವರಂಗ, ರಾಜು ಕುಲಾಲ್ ಮುದ್ರಾಡಿ, ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣೇಶ್ ಕುಲಾಲ್ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಬೆಳಂಜೆ ಜಯರಾಮ್ ಕುಲಾಲ್ ವಂದಿಸಿದರು.

ಶಂಕರಪುರ ಶ್ರೀ ಸಾಯಿ ಈಶ್ವರ್ ಗುರೂಜಿಗೆ ಅಯೋಧ್ಯೆಗೆ ಆಹ್ವಾನ

Posted On: 25-12-2023 11:26AM

ಶಂಕರಪುರ : ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ, ಉಡುಪಿ ಜಿಲ್ಲೆಯ ಶಂಕರಪುರ ಶ್ರೀ ದ್ವಾರಕಮಾಯಿ ಮಠದ ಶ್ರೀ ಸಾಯಿ ಈಶ್ವ‌ರ್ ಗುರೂಜಿ ಅವರನ್ನು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಶ್ರೀರಾಮ ಬಿಂಬ ಪ್ರಾಣ ಪ್ರತಿಷ್ಠೆಯ ಸಂದರ್ಭ ಉಪಸ್ಥಿತರಿರುವಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿ ಅಧಿಕೃತವಾಗಿ ಆಹ್ವಾನಿಸಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಮಂಗಳೂರು : 12 ಗಂಟೆಗಳ ಕಾಲ ನಿರಂತರ ಹಾಡು - 5 ಗಾಯಕರ ಹೆಸರು ಅಂತರರಾಷ್ಟ್ರೀಯ ಸಾಧಕರ ಪಟ್ಟಿಯಲ್ಲಿ ದಾಖಲು

Posted On: 25-12-2023 11:18AM

ಮಂಗಳೂರು : ಇಲ್ಲಿನ ಪುರಭವನದಲ್ಲಿ ಜರಗಿದ ಮನಃಶಾಂತಿಗಾಗಿ ಹಾಡು ಕಾರ್ಯಕ್ರಮದಲ್ಲಿ ಸುಮಾರು 12 ಗಂಟೆಗಳ ಕಾಲ ನಿರಂತರವಾಗಿ ಹಾಡಿದ 5 ಗಾಯಕರ ಹೆಸರು ಅಂತರರಾಷ್ಟ್ರೀಯ ಸಾಧಕರ ಪಟ್ಟಿಯಲ್ಲಿ ದಾಖಲಾಗಿದೆ.

2023 ರ ನವೆಂಬರ್ 5 ರಂದು ಬೆಳಿಗ್ಗೆ 9 ರಿಂದ ರಾತ್ರಿ 9 ರ ತನಕ ಗಂಗಾಧರ ಗಾಂಧಿ, ರಾಣಿ ಪುಷ್ಪಲತಾ ದೇವಿ, ವರ್ಷ ಕರ್ಕೇರಾ, ಶ್ರೀ ರಕ್ಷ ಸರ್ಪಂಗಳ ಮತ್ತು ನೇತ್ರಾಖುಶಿ 12 ಗಂಟೆಗಳ ಕಾಲ ನಿರಂತರ ಗಾಯನ ಮಾಡಿರುತ್ತಾರೆ.

ಮುಲ್ಕಿ ಸೀಮೆ ಅರಸು ಕಂಬಳ - ಅರಸು ಪ್ರಶಸ್ತಿ ಪ್ರದಾನ

Posted On: 25-12-2023 10:37AM

ಮುಲ್ಕಿ: ಚಾರಿಟೆಬಲ್ ಟ್ರಸ್ಟ್ ಹಾಗೂ ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಮುಲ್ಕಿ ಸೀಮೆ ಅರಸು ಕಂಬಳದ ಅಂಗವಾಗಿ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಪಡು ಪಣಂಬೂರು ಮುಲ್ಕಿ ಅರಮನೆಯ ಕಾಂತಾಬಾರೆ ಬೂದಾಬಾರೆ ಧರ್ಮಚಾವಡಿಯಲ್ಲಿ ನಡೆಯಿತು.

ಸನ್ಮಾನ : ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಕಂಬಳ ಕ್ಷೇತ್ರದಲ್ಲಿನ ಸಾಧನೆಗೆ ದಿ. ಪಯ್ಯೊಟ್ಟು ಸದಾಶಿವ ಸಾಲ್ಯಾನ್ (ಮರಣೋತ್ತರ), ಸಾಮಾಜಿಕ ಕ್ಷೇತ್ರದಲ್ಲಿ ಉತ್ರುಂಜೆ ಭುಜಂಗ ಎಂ. ಶೆಟ್ಟಿ, ತುಳು- ಸಾಂಸ್ಕೃತಿಕ ಕ್ಷೇತ್ರದಲ್ಲಿ ನವೀನ್ ಶೆಟ್ಟಿ ಎಡ್ಮೆಮಾ‌ರ್, ಕೃಷಿ ಕ್ಷೇತ್ರದ ಸಾಧಕ ಗಂಗಾಧರ ದೇವಾಡಿಗ, ಕ್ರೀಡಾ ಕ್ಷೇತ್ರದಲ್ಲಿ ಸುಷ್ಮಾ ತಾರಾನಾಥ್‌, ವೈದ್ಯಕೀಯ ಕ್ಷೇತ್ರದಲ್ಲಿ ಹಳೆಯಂಗಡಿಯ ಡಾ.ಗುರುಪ್ರಸಾದ್ ನಾವಡರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ವಹಿಸಿದ್ದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೈಸೂರಿನ ಡಾ. ಉಮೇಶ್, ಕ್ಯಾ. ಬ್ರಿಜೇಶ್ ಚೌಟ, ಗೋಕುಲ್ ದಾಸ್ ಪೈ, ಚಿತ್ತರಂಜನ್ ಬೋಳಾರ, ದಿವಾಕರ ಕದ್ರಿ, ವಿವೇಕ್ ಆಳ್ವ ಮೂಡುಬಿದಿರೆ, ರಂಜಿತ್ ಕೋಟ್ಯಾನ್, ಟ್ರಸ್ಟ್‌ ನ ಗೌತಮ್ ಜೈನ್ ಮುಲ್ಕಿ ಅರಮನೆ, ಮೋಹನ್ ದಾಸ್ ಸುರತ್ಕಲ್, ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು, ಪ್ರಿಯ ದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾರ್ಡ್ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್‌ ಅಮೀನ್ ಸಂಕಮಾರ್ ನಿರೂಪಿಸಿದರು.